ಶುಕ್ರವಾರ, ಜುಲೈ 31, 2009

ದಿನಕ್ಕೊಂದು ಕವನ: (೧೧) ಜ್ಞಾನೋದಯ

ದೇಶ ಸುತ್ತಿ ಬಂದವನನ್ನು ಕೇಳಿದೆ
ವಿಶೇಷವೇನೆಂದು
ತಾನು ಕ್ಷೇಮ ಎಂದ
ದೇಶ ಸುತ್ತುವ ಆಸೆ ಬಿಟ್ಟೆ
ಕೋಶ ಓದಿದವನನ್ನು ಕೇಳಿದೆ
ವಿಶೇಷವೇನೆಂದು
ತಾನು ಶೂನ್ಯ ಎಂದ
ಕೋಶ ಓದುವ ಬಯಕೆ ತೊರೆದೆ

ಕಾಸು ಮಾಡಿದವನನ್ನು ಕೇಳಿದೆ
ಹೇಗಿದ್ದೀಯೆ ಎಂದು
ಯೋಚಿಸಿ ಹೇಳುವೆ ಎಂದ
ಕಾಸಿನ ಯೋಚನೆ ಬಿಟ್ಟೆ
ಮೋಸ ಮಾಡುವವನನ್ನು ಕೇಳಿದೆ
ಹೇಗಿದ್ದೀಯೆ ಎಂದು
ಕಾಸು ಮಾಡುತ್ತಿರುವೆ ಎಂದ
ಮೋಸದ ಯೋಜನೆ ತೊರೆದೆ

ಸಂಸಾರಿಯನ್ನು ಕೇಳಿದೆ
ಬಾಳು ಹೇಗುಂಟೆಂದು
ಬಾಳು ಏಕುಂಟೆಂದ
ಬಾಳಿನ ಭರವಸೆ ಬಿಟ್ಟೆ
ಸನ್ಯಾಸಿಯನ್ನು ಕೇಳಿದೆ
ಬಾಳು ಹೇಗುಂಟೆಂದು
ಬಾಳಲೇನುಂಟೆಂದ
ಬಾಳಲಿ ಭರವಸೆ ತೊರೆದೆ

ಕೇಳುವುದನ್ನು ಕೈಬಿಟ್ಟೆ
ಹೇಳಿದ್ದನ್ನು
ಕೇಳುವುದನ್ನೂ ತೊರೆದೆ
ನನಗೀಗ
ಜ್ಞಾನೋದಯವಾಗಿದೆ

ಗುರುವಾರ, ಜುಲೈ 30, 2009

ದಿನಕ್ಕೊಂದು ಕವನ: (೧೦) ಜಗಧರ್ಮ

ಸೂರ್ಯನ ಉದಯಾಸ್ತಗಳ
ದಿಕ್ಕು-ದೆಸೆ, ಹೊತ್ತು-ಗೊತ್ತು
ಎಲ್ಲರಿಗೂ ಗೊತ್ತು; ಅದೇ
ಚಂದ್ರನ ಬಗ್ಗೆ ಹೇಳಿ ನೋಡುವಾ!

ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತೇವೆ ನಾವು
ಅವ ನಮ್ಮ ಬಾಸು. ಅದೇ
ಚಂದ್ರ ನಮಗೆ ಪ್ರದಕ್ಷಿಣೆ ಹಾಕುತ್ತಾನೆ
ಅವ ನಮ್ಮ ಗುಲಾಮ. ಅದೇ
ಪಾಯಿಂಟು! ಗುಲಾಮನ ಚಲನವಲನ
ಯಾರಿಗೆ ಬೇಕು!

ಸೂರ್ಯನ ಬಿಸಿಲು-ಧಗೆ
ಬೇಡ ನಮಗೆ
ಚಂದ್ರನ ತಂಪು-ಬೆಳಕು
ಬೇಕು.
ಆಟಕ್ಕುಂಟು ಚಂದ್ರ
ಲೆಕ್ಕಕ್ಕಿಲ್ಲ.
ಗುಲಾಮರ ಹಣೆಬರಹ ಇಷ್ಟೆ!

ಸೂರ್ಯ
ಹುಟ್ಟುತ್ತಾನೆ ಪ್ರತಿನಿತ್ಯ
ಇಡಿಇಡಿಯಾಗಿ,
ಸರಿಸುಮಾರು
ಅದೇ ಹೊತ್ತಿಗೆ,
ಅದೇ ದಿಕ್ಕಿನಲ್ಲಿ.
ಮುಳುಗುವುದೂ ಹಾಗೇ.
ಅದೇ, ಚಂದ್ರ?

ಎಂದೇ
ಅವ ಬಾಸು
ಇವ ಗುಲಾಮ!
ಜಗದಾಚೆಗೂ
ಅನ್ವಯ
ನಮ್ಮ
ಜಗಧರ್ಮ!

ಬುಧವಾರ, ಜುಲೈ 29, 2009

ದಿನಕ್ಕೊಂದು ಕವನ: (೯) ನಿಶ್ಚಯ

ಅಲ್ಲಿದ್ದ ಸೂರ್ಯ
ಆಗಲೇ ಎಲ್ಲಿ ಹೋದ?!

ಇಲ್ಲಿತ್ತು ಮರ
ಈಗ ಇಲ್ಲ

ಮರವೇನು, ಗಿರಿ-ಕಂದರ
ಪರ್ವತ-ಸಾಗರ
ಕ್ರಿಮಿ-ಕೀಟ, ಹುಲಿ-ಹಾವು
ನಾನು-ನೀವು ಎಲ್ಲ
ಇಗೋ ಉಂಟು
ಅಗೋ ಇಲ್ಲ

ಕಾಲನೆದುರು
ಯಾವುದೂ ಸಲ್ಲ

ಯುಗಯುಗವುರುಳಿ
ಯುಗಾದಿ ಅಂತ್ಯಗಳಾಗಿ
ವಿಧಿಯಂತೆ
ಬಂದು ಹೋಗುವುದೆಲ್ಲ;
ಗಟ್ಟಿ ಉಳಿವುದೊಂದೇ,
ಕಾಲ

ಎಂದೇ,
ಕಾಲದ
ಕಾಲಿನಡಿ
ಇದ್ದು-ಬಿಡುವುದೆ
ಮಾರ್ಗ
ಎತ್ತದೆ ತಲೆ
ಎತ್ತದೆ
ಬೇರೇನೂ
ಸೊಲ್ಲ

ಮಂಗಳವಾರ, ಜುಲೈ 28, 2009

ದಿನಕ್ಕೊಂದು ಕವನ: (೮) ನನ್ನ ಜೀವನದಲ್ಲಿ

(ತಾಯಿಯವರ ತೀವ್ರ ಅಸೌಖ್ಯದಿಂದಾಗಿ ’ದಿನಕ್ಕೊಂದು ಕವನ’ ಮಾಲೆಯನ್ನು ಮಧ್ಯೆಯೇ ತುಂಡರಿಸಬೇಕಾಯಿತು. ಅದಕ್ಕಾಗಿ ಕ್ಷಮೆ ಇರಲಿ. ಮತ್ತೀಗ ಮಾಲೆಯನ್ನು ಕೂಡಿಸಿ ಹೂ ಪೋಣಿಸುತ್ತಿದ್ದೇನೆ.)

ನನ್ನ ಜೀವನದಲ್ಲಿ
-----------------

ನನ್ನ ಜೀವನದಲ್ಲಿ
ಕಾಡುಮೇಡುಗಳಿಲ್ಲ
ಹಸಿರಿಲ್ಲ
ಕ್ರೂರಮೃಗಗಳ
ಉಸಿರೂ ಇಲ್ಲ
ಟಾರು ರಸ್ತೆಗಳಿಲ್ಲ
ವ್ಯವಸ್ಥೆಯಿಲ್ಲ
ಕಾರು-ಬಾರುಗಳ
ಅವಸ್ಥೆಯೂ ಇಲ್ಲ

ನನ್ನ ಜೀವನದಲ್ಲಿ
ಮರಗಿಡಗಳಿಲ್ಲ
ನೆರಳಿಲ್ಲ
ಇರುಳ ದೆವ್ವಗಳ
ಕೊರಳೂ ಇಲ್ಲ
ಮಹಲು ಸೌಧಗಳಿಲ್ಲ
ಸೂರಿಲ್ಲ
ಸೋರುವಿಕೆಗಳ
ದೂರೂ ಇಲ್ಲ

ನನ್ನ ಜೀವನದಲ್ಲಿ
ಗುಹೆ ಗಹ್ವರಗಳಿಲ್ಲ
ತಂಪಿಲ್ಲ
ಗುರುಗುಡುವ ಪಂಜಗಳ
ಕೆಂಪೂ ಇಲ್ಲ
ಕೋಟೆ ಕೊತ್ತಲಗಳಿಲ್ಲ
ಭದ್ರತೆಯಿಲ್ಲ
ಈಟಿ ಕತ್ತಿಗಳ
ಛಿದ್ರತೆಯೂ ಇಲ್ಲ

ನನ್ನ ಜೀವನದಲ್ಲಿ
ಎಲ್ಲ ಬಯಲು;
ಇಲ್ಲಗಳ
ಹರಹಿನಲಿ
ಇರುವಿಕೆಯು
ಬಯಲು

ಶುಕ್ರವಾರ, ಜುಲೈ 3, 2009

ದಿನಕ್ಕೊಂದು ಕವನ: (೭) ಕಾವಲಿರಲಿ

ಕಾವಲಿರಲಿ ಮತಿಗೆ
ವಿವೇಕದ ಕಾವಲಿರಲಿ ಇರಲಿ
ಕಾವಲಿರಲಿ ಕೃತಿಗೆ
ಎಚ್ಚರದ ಕಾವಲಿರಲಿ ಇರಲಿ

ಕಾವಲಿರಲಿ ಉನ್ನತಿಗೆ
ವಿನಯದ ಕಾವಲಿರಲಿ ಇರಲಿ
ಕಾವಲಿರಲಿ ಕ್ಷತಿಗೆ
ಸಾಂತ್ವನದ ಕಾವಲಿರಲಿ ಇರಲಿ

ಕಾವಲಿರಲಿ ಸ್ನೇಹಕ್ಕೆ
ಶಿಷ್ಟತೆಯ ಕಾವಲಿರಲಿ ಇರಲಿ
ಕಾವಲಿರಲಿ ಪ್ರೇಮಕ್ಕೆ
ಕರ್ತವ್ಯದ ಕಾವಲಿರಲಿ ಇರಲಿ

ಕಾವಲಿರಲಿ ಮೋದಕ್ಕೆ
ಶಿಸ್ತಿನ ಕಾವಲಿರಲಿ ಇರಲಿ
ಕಾವಲಿರಲಿ ವಿನೋದಕ್ಕೆ
ಸಭ್ಯತೆಯ ಕಾವಲಿರಲಿ ಇರಲಿ

ಕಾವಲಿರಲಿ ನಡೆಗೆ
ಸಂಸ್ಕೃತಿಯ ಕಾವಲಿರಲಿ ಇರಲಿ
ಕಾವಲಿರಲಿ ನುಡಿಗೆ
ನಯದ ಕಾವಲಿರಲಿ ಇರಲಿ

ಕಾವಲಿರಲಿ ಜೀವಕ್ಕೆ
ದೈವದ ಕಾವಲಿರಲಿ ಇರಲಿ
ಕಾಯುತಿರಲಿ ಸಾವಿನ ಮನೆ ಬಳಿ
ಧನ್ಯತೆ ಕಾಯುತಿರಲಿ ಇರಲಿ

(ತಾಯಿಯವರ ಅಸೌಖ್ಯದಿಂದಾಗಿ ಉಳಿದ ಕವನಗಳನ್ನು ಕೆಲ ದಿನಗಳ ನಂತರ ಪ್ರಕಟಿಸುತ್ತೇನೆ.)

ಗುರುವಾರ, ಜುಲೈ 2, 2009

ದಿನಕ್ಕೊಂದು ಕವನ: (೬) ಕೋಲೆಬಸವ

ಒಂದು ಮುಂಜಾನೆ
ಕೋಲೆಬಸವ
ನನ್ನೊಳಗೆ ಕಾಲಿಟ್ಟ.

ಭಾವನೆಗಳನ್ನು,
ಪುಟಿದೇಳುತ್ತಿದ್ದ
ಕಾಮನೆಗಳನ್ನು,
ತುಟಿಗೇರುತ್ತಿದ್ದ
ಮಾತುಗಳನ್ನು
ಮೆಟ್ಟಿ
ಕೂತುಬಿಟ್ಟ.

ಹೌದಾ ಬಸವಾ? ಹೌದು
ಅಲ್ಲವಾ ಬಸವಾ? ಅಲ್ಲ
ನನ್ನನ್ನೂ ಮಾಡಿಬಿಟ್ಟ.

ಮೂಗುದಾಣ ಹಾಕಿಸಿಕೊಂಡೆ.
ಅದನ್ನು ಹಿಡಿದೆಳೆದವರ
ಆಣತಿಗೆ,
ಅವರೂದುವ ವಾದ್ಯಕ್ಕೆ,
ಕಂಡವರ ಮೋಜಿಗೆ
ತಲೆದೂಗಿದರಾಯ್ತು
ಜೀವನ ಸುಗಮ.

ಜೀವನದ ಮಾರ್ಗ ಮಾತ್ರ
ಅವರು ಹೋದಂತೆ;
ಅವರು ಎಳೆದಂತೆ;
ಅವರು ಕಂಡಂತೆ.

ನನ್ನ
ಕಣ್ಣಿಗೂ ಬಟ್ಟೆ!
ಅಯ್ಯೋ!
ನಾನೂ
ಕೋಲೆಬಸವನಾಗಿಬಿಟ್ಟೆ!

ಬುಧವಾರ, ಜುಲೈ 1, 2009

ದಿನಕ್ಕೊಂದು ಕವನ: (೫) ಬಾಳು

ರಾಗವಿಲ್ಲದ ಬಾಳು
ಜಾಳು.
ರಾಗ ಬೇಕು
ಎದೆಯಲ್ಲಿ
ಅನು
ರಾಗ ಬೇಕು
ಮುದಿ ಮನ
ಚಿಗು
ರಾಗಬೇಕು

ಲಯವಿಲ್ಲದ ಬಾಳು
ಗೋಳು.
ಲಯ ಬೇಕು
ಕನಸು ನನಸಲ್ಲಿ
ಲಯ ಆಗಬೇಕು
ಮನಸು ದೇವಾ
ಲಯವಾಗಬೇಕು
ಅನಿಸುವಿಕೆಯೆಲ್ಲ
ಲಯಬದ್ಧವಾಗಿರಬೇಕು

ತಾಳವಿಲ್ಲದ ಬಾಳು
ಹಾಳು.
ತಾಳ ಬೇಕು
ಕಷ್ಟ-ಸುಖಗಳ
ತಾಳಬೇಕು
ಕೆಚ್ಚು ಮೈ
ತಾಳಬೇಕು
ಹೆಚ್ಚಿಗೂ ಕಡಿಮೆಗೂ
ತಾಳ ಬೇಕು

ರಾಗ ತಾಳ ಲಯ
ಗಳಿರುವ
ಗೀತೆ
ಬಾಳು
ಬಾಳ
ಬೇಕು