ಗುರುವಾರ, ಏಪ್ರಿಲ್ 30, 2009

ಗುಳಿಗೆಪ್ಪ ತಂದ ಸುದ್ದಿಗಳು

ಪಾದರಕ್ಷೆ ಪರವಾಗಿ ಮೊಕದ್ದಮೆ!
-------------------------
ರಾಜಕಾರಣಿಗಳತ್ತ ಎಸೆಯುವ ಮೂಲಕ ಪಾದರಕ್ಷೆಗಳಿಗೆ ಅವಮಾನ ಎಸಗಲಾಗುತ್ತಿದೆಯೆಂದು ಬೆಂಗಳೂರಿನ ವಕೀಲರೊಬ್ಬರು ಕೋರ್ಟಿನ ಮೊರೆಹೊಕ್ಕಿದ್ದಾರೆ! ಚುನಾವಣೆ ವೇಳೆ ದೇಶದ ನಾನಾ ಕಡೆಗಳಲ್ಲಿ ರಾಜಕಾರಣಿಗಳತ್ತ ಶೂ ಹಾಗೂ ಚಪ್ಪಲಿಗಳನ್ನು ಎಸೆದವರೆಲ್ಲರ ವಿರುದ್ಧ ಸದರಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ (ಪಾದರಕ್ಷೆ ಪರವಾಗಿ) ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪಾದರಕ್ಷೆಗಳಿಗೆ ಅವಮಾನವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯವು ಕೇಸ್ ದಾಖಲಿಸಿಕೊಂಡು ಚಪ್ಪಲಿ-ಶೂ ಎಸೆದವರಿಗೆಲ್ಲ ಶೂಕಾಸ್ ನೋಟೀಸ್ ಜಾರಿಮಾಡಿದೆ.

***

ರಾಹುಲ್‌ಗೆ ಇಂದಿರಾ ಪ್ರಶಸ್ತಿ
----------------------
ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಯನ್ನು ರಾಹುಲ್ ಗಾಂಧಿಗೆ ನೀಡಲಾಗುವುದು. ಚುನಾವಣಾ ವೇಳೆ ರಾಹುಲ್ ಗಾಂಧಿಯು ವಿಮಾನ, ಹೆಲಿಕಾಪ್ಟರ್ ಮತ್ತು ಕಾರಿನಲ್ಲಿ ದೇಶದ ಕೆಲವು ಸ್ಥಳಗಳಿಗೆ ಭೇಟಿಕೊಟ್ಟು, ಬಡಬಗ್ಗರೊಡನೆ ಕ್ಯಾಮೆರಾಗಳಿಗೆ ಪೋಸು ಕೊಟ್ಟು, ಯುವಕ-ಯುವತಿಯರ ’ಕೈ’ಕುಲುಕಿ, ವೇದಿಕೆಯಿಂದ ಭಾವಾವೇಶಭರಿತ ಭಾಷಣ ಮಾಡಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಕೊಡಲಾಗುವುದು. ಈ ಬಗ್ಗೆ ಪ್ರಕಟಣೆ ಹೊರಬೀಳುತ್ತಲೇ ರಾಹುಲ್‌ನನ್ನು ಮುತ್ತಿಕೊಂಡ ಪತ್ರಕರ್ತೆಯರೊಡನೆ ಮಾತನಾಡುತ್ತ ರಾಹುಲ್, ’ಈ ಪ್ರಶಸ್ತಿಗೆ ನನಗಿಂತ ನನ್ನ ಅಕ್ಕ ಹೆಚ್ಚು ಅರ್ಹಳು. ಗೀತೋಪದೇಶೋಪದೇಶದ ಮೂಲಕ ರಾಷ್ಟ್ರಾದ್ಯಂತ ಭಾವೈಕ್ಯತೆಯ ಮಿಂಚಿನ ಸಂಚಾರ ಉಂಟುಮಾಡಿದ್ದಾಳೆ ಆಕೆ’, ಎಂದಿದ್ದಾರೆ.
ರಾಹುಲ್‌ನ ಈ ವಿನಯಪೂರ್ಣ ಮಾತಿಗಾಗಿ ಆತನಿಗೆ ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನೂ ಕೊಡತಕ್ಕದ್ದೆಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

***

ವರುಣ್‌ಗೆ ಶೌರ್ಯ ಪ್ರಶಸ್ತಿ
---------------------
ಕೈ ಕತ್ತರಿಸುತ್ತೇನೆಂದು ಹೇಳುವ ಮೂಲಕ ಅಪ್ರತಿಮ ಶೌರ್ಯ ಮೆರೆದಿದ್ದಕ್ಕಾಗಿ ವರುಣ್ ಗಾಂಧಿಗೆ ಈ ಸಲದ ’ಮಹಾಕಮಲಚಕ್ರ’ ಶೌರ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆದರೆ, ತಾನು ಹೇಳಿದ್ದು ನಿಜವಾದ ಕೈಗಳ ಬಗ್ಗೆ ಅಲ್ಲ, ಕಾಂಗ್ರೆಸ್‌ನ ’ಕೈ’ ಚಿಹ್ನೆಯ ಬಗ್ಗೆ, ಎಂದು ಸ್ಪಷ್ಟನೆ ನೀಡಿ ವರುಣ್ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

***

ಕೋಟಿ ರಾಮು ಹೊಸ ಚಿತ್ರ
---------------------
’ಕಿರಣ್ ಬೇಡಿ’ ಚಿತ್ರದ ಮೂಲಕ ಪತ್ನಿ ಮಾಲಾಶ್ರೀಗೆ ಬೆಳ್ಳಿ ತೆರೆಮೇಲೆ ಮರುಹುಟ್ಟು ನೀಡಿರುವ ನಿರ್ಮಾಪಕ ಕೋಟಿ ರಾಮು ಅವರು ತಮ್ಮ ಮುಂದಿನ ಚಿತ್ರಕ್ಕಾಗಲೇ ನಾಮಕರಣ ಮಾಡಿದ್ದಾರೆ. "ಅತ್ತೆಗಿಂತ ಒಂದು ’ಕೈ’ ಮಿಗಿಲಾದ ಸೊಸೆ" ಎಂಬ ಇಷ್ಟುದ್ದದ ಹೆಸರು ಹೊತ್ತು ನಿರ್ಮಾಣವಾಗಲಿರುವ ಆ ಚಿತ್ರದ ವಿಶೇಷವೆಂದರೆ ಅದರಲ್ಲಿ ಅತ್ತೆಯ ಪಾತ್ರವೇ ಇಲ್ಲ! ಇಂದಿರಾಗಾಂಧಿಯನ್ನು ಹೋಲುವ ಭಾವಚಿತ್ರಗಳಿಂದಲೇ ಅತ್ತೆಯ ಪಾತ್ರವನ್ನು ಬಿಂಬಿಸಲಾಗುವುದು. ಸೊಸೆಯ ಪಾತ್ರದ ಮೂಲಕ ಸಂಸದೆ ತೇಜಸ್ವಿನಿ ಗೌಡ ಅವರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
’ಕಿರಣ್ ಬೇಡಿ’ ಯಶಸ್ಸಿನಿಂದ ಸ್ಫೂರ್ತಿಹೊಂದಿ ನೀವಿನ್ನು ’ಸಾಂಗ್ಲಿಯಾನಾ ಭಾಗ-೪’ ತೆಗೆಯುವಿರಾ ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ರಾಮು ಕೆರಳಿ ಕೆಂಡಾಮಂಡಲ ಆದರೆಂದು ವರದಿಯಾಗಿದೆ.

***

ನಟರಾಜನಾದ ಶಂಕರ
------------------
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರು ಭರತನಾಟ್ಯ ಪ್ರವೀಣರು ಎಂಬ ಸ್ವಾರಸ್ಯಕರ ಸಂಗತಿ ಬಯಲಾಗಿದೆ. ಚುನಾವಣೆ ವೇಳೆ ಪತ್ರಿಕಾಗೋಷ್ಠಿಗಳಲ್ಲಿ ಅವರ ಹಾವಭಾವ ಕಂಡು ಅನುಮಾನಗೊಂಡ ಪತ್ರಕರ್ತನೊಬ್ಬ ವಿದ್ಯಾಶಂಕರ್ ಅವರನ್ನು ವಿಚಾರಿಸಿದಾಗ ಅವರೇ ಈ ಸಂಗತಿಯನ್ನು ಹೊರಗೆಡಹಿದ್ದಾರೆ. ಹೈಸ್ಕೂಲ್ ದಿನಗಳಿಂದಲೂ ತಾನು ಭರತನಾಟ್ಯ ಅಭ್ಯಾಸ ಮಾಡಿದುದಾಗಿಯೂ, ವಿದ್ಯಾಭ್ಯಾಸ, ಐಎಎಸ್ ತಯಾರಿ ಮತ್ತು ಉನ್ನತ ಅಧಿಕಾರಿಯಾಗಿ ಆಡಳಿತ ನಿರ್ವಹಣೆ ಈ ಒತ್ತಡಗಳ ದೆಸೆಯಿಂದಾಗಿ ತನಗೆ ನೃತ್ಯ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿಲ್ಲವೆಂದೂ, ಇಷ್ಟು ವರ್ಷ ತಾನು ಅದುಮಿಟ್ಟುಕೊಂಡ ಆ ಅಭಿಲಾಷೆಯು ಈಗ ಪತ್ರಿಕಾಗೋಷ್ಠಿಗಳಲ್ಲಿ ಆಂಗಿಕ ಅಭಿನಯ ಮತ್ತು ಹಾವಭಾವಗಳ ಮೂಲಕ ಪ್ರಕಟಗೊಳ್ಳುತ್ತಿದೆಯೆಂದೂ ವಿದ್ಯಾಶಂಕರ್ ಅವರು ಹೇಳಿದ್ದಾರೆ.
ನೌಕರಿಯಿಂದ ನಿವೃತ್ತಿ ಹೊಂದಿದ ನಂತರ ತಾವು ಭರತನಾಟ್ಯ ಶಾಲೆಯೊಂದನ್ನು ತೆರೆಯಲಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

***

’ಕಿಸ್ಬಾಯಿ ರೋಗ’ ಮಾಯ!
----------------------
’ಹಂದಿ ರೋಗ’ಕ್ಕಿಂತ ವ್ಯಾಪಕವಾಗಿ ದೇಶಾದ್ಯಂತ ಹರಡಿದ್ದ ’ಕಿಸ್ಬಾಯಿ ರೋಗ’ವು ಈಗ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆಯೆಂದು ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ರೋಗವು ಪುಢಾರಿಗಳಿಗೆ ಮಾತ್ರ ತಗುಲಿತ್ತು.
’ಈ ರೋಗಪೀಡಿತರು ಸದಾಕಾಲ ಬಾಯಿ ಕಿಸಿದುಕೊಂಡೇ ಇರುತ್ತಾರೆ, ಮತದಾನ ಮುಗಿದ ತಕ್ಷಣ ಅವರ ಈ ಕಾಯಿಲೆಯು ತಂತಾನೇ ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತದೆ’, ಎಂಬ ಭಾವೈಮಂಡಳಿಯ ಹೇಳಿಕೆಯನುಸಾರ ಇದೀಗ ಮತದಾನ ಮುಗಿದ ಕ್ಷೇತ್ರಗಳಲ್ಲಿ ಈ ರೋಗವು ಹೇಳಹೆಸರಿಲ್ಲದಂತೆ ಮಾಯವಾಗಿದೆ!
ದೇಶದಲ್ಲಿ ಎಲ್ಲೋ ಕೆಲವರಿಗೆ ಮಾತ್ರ ಕಿಸ್ಬಾಯಿ ರೋಗವು ಸದಾಕಾಲ ಇರುತ್ತದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಸದಾನಂದ ಗೌಡರು ಅಂಥವರಲ್ಲೊಬ್ಬರು. ರೋಗಿಗಳಿಗೆ ಈ ಕಾಯಿಲೆಯಿಂದ ಏನೂ ನಷ್ಟವಿಲ್ಲ, ಬದಲಾಗಿ ಲಾಭವಾಗುವ ಸಾಧ್ಯತೆ ಇದೆ! ಆದರೆ, ಕಿಸ್ಬಾಯಿ ರೋಗಿಗಳ ಎದುರಿರುವವರು ಮಾತ್ರ ಮೋಸವೆಂಬ ಹಾನಿಗೊಳಗಾಗುವ ಸಂಭವವಿದೆ ಎಂದು ವೈದ್ಯಕೀಯ ಮಂಡಳಿಯು ಎಚ್ಚರಿಸಿದೆ.

***

ಗೌಡರ ಮುದ್ದೆ
-----------
ಹಿಂದಿ ಭಾಷೆಯ ಅಜ್ಞಾನದಿಂದಾಗಿ ದೇವೇಗೌಡರು ಮುಜುಗರಕ್ಕೊಳಗಾದ ಪ್ರಕರಣ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ತೃತೀಯ ರಂಗದ ಚುನವಣಾ ಪ್ರಚಾರಕ್ಕಾಗಿ ಈಚೆಗೆ ಯು.ಪಿ.ಗೆ ಹೋಗಿದ್ದ ಗೌಡರು ಅಲ್ಲಿನ ಗ್ರಾಮವೊಂದರ ಸಭೆಯಲ್ಲಿ ಭಾಗವಹಿಸಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷನು ತನ್ನ ಭಾಷಣದಲ್ಲಿ, ’ಹಮಾರೇ ಸಾಮ್ನೆ ಅತ್ಯಂತ್ ಪ್ರಮುಖ್ ಮುದ್ದೆ ಹೈ..’ ಎಂದಾಕ್ಷಣ ದೇವೇಗೌಡರು, ’ಹೌದಾ? ಎಲ್ಲದೆ, ತತ್ತಾ’, ಎಂದು ಕೈಚಾಚಿದರೆಂದು ವರದಿಯಾಗಿದೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಆ ಹಳ್ಳಿಗನು ಒಂದು ಕ್ಷಣ ಏನೂ ತೋಚದೇ ಸುಮ್ಮನೆ ನಿಂತುಬಿಟ್ಟ. ಕೂಡಲೇ ಮಧ್ಯಪ್ರವೇಶಿಸಿದ ವೈ.ಎಸ್.ವಿ.ದತ್ತ ಉಭಯರಿಗೂ ಅರ್ಥ ವಿವರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಭೆಯ ನಂತರ ತಮ್ಮತಮ್ಮೊಳಗೇ ದೇವೇಗೌಡರನ್ನು ಗೇಲಿಮಾಡಿ ಮಾತಾಡಿಕೊಳ್ಳುತ್ತಿದ್ದ ಪತ್ರಕರ್ತರತ್ತ ಧಾವಿಸಿದ ದತ್ತ, ’ಹಿಂದಿ ಭಾಷಿಕರಾದ ನೀವೇನು ಬಹುಭಾಷಾಪಂಡಿತರೇ? ಗೌಡ ಅನ್ನುವ ಬದಲು ನಿಮ್ಮಲ್ಲನೇಕರು ಘೋಡಾ ಅನ್ನುತ್ತೀರಲ್ಲ!’ ಎಂದು ದಬಾಯಿಸಿ ಪತ್ರಕರ್ತರ ಬಾಯಿಮುಚ್ಚಿಸಿದ್ದಾಗಿ ವರದಿಯಾಗಿದೆ.

ಶಂಕರ ರಾಮಾನುಜ ’ಸಹಜನ್ಮ’ಯೋಗ!

ಶಂಕರ ಜಯಂತಿ ಮತ್ತು ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಎರಡೂ ಒಂದೇ ದಿನ.

ಭಗವದ್ದರ್ಶನದ ತಪದಲ್ಲಿ ಭಿನ್ನ ಮಾರ್ಗಗಳನ್ನು ಅವಲಂಬಿಸಿದ ಆಚಾರ್ಯದ್ವಯರ ಜನ್ಮದಿನವು ಒಂದಾಗಿ ಬಂದಿರುವುದು ಪ್ರಕೃತಿಯು ನಮಗೆ ಒಂದುಗೂಡಿ ನಡೆಯುವಂತೆ ನೀಡಿರುವ ಸಂದೇಶವೆಂದೇ ಭಾವಿಸಬಹುದು.

ಮಾರ್ಗಗಳು ಭಿನ್ನವಾಗಿದ್ದಾಗ್ಗ್ಯೂ ಶಂಕರ ಮತ್ತು ರಾಮಾನುಜರ (ಹಾಗೂ ಮಧ್ವಾಚಾರ್ಯರ) ಗುರಿ ಒಂದೇ ಆಗಿತ್ತೆನ್ನುವುದನ್ನು ನಾವು ಗಮನಿಸಬೇಕು. ಇಹ-ಪರಗಳ ಅರ್ಥಶೋಧ ಮತ್ತು ಜೀವನದ ಸತ್ಯಶೋಧ ಇದೇ ಇವರ ಜೀವನದ ಗುರಿಯಾಗಿತ್ತು. ಈ ಅತ್ಯುಚ್ಚ ಗುರಿಯನ್ನು ಸಾಧಿಸಿದ ಪರಮಾರ್ಥ ಸಾಧಕರು ಈ ಮಹನೀಯರು.

ಶಂಕರರ ಅದ್ವೈತ, ರಾಮಾನುಜರ ವಿಶಿಷ್ಟಾದ್ವೈತ ಹಾಗೂ ಮಧ್ವರ ದ್ವೈತ ಸಿದ್ಧಾಂತಗಳು ಭಿನ್ನ ಮಾರ್ಗಗಳಲ್ಲಿ ಸಾಗಿದರೂ ಈ ದಾರ್ಶನಿಕರು ಕಂಡ ಪರಮ ಸತ್ಯವು ಒಂದೇ ಆಗಿರುವುದು ಗಮನಾರ್ಹ.

’ಬೃಹ್ಮಂ ಸತ್ಯಂ ಜಗನಿಥ್ಯಾ ಜೀವೋ ಬ್ರಹ್ಮಸ್ಯ ನಾಪರಃ’
(ಅರ್ಥ: ಬ್ರಹ್ಮವು ಸತ್ಯ, ಜಗತ್ತು ಮಿಥ್ಯೆ, ಜೀವಾತ್ಮವು ಬ್ರಹ್ಮವೇ ಹೊರತು ಬೇರಲ್ಲ) ಎಂದ ಶಂಕರರ ದೃಷ್ಟಿ,

’ಮತ್ತ ಏವ ಸರ್ವ ವೇದಾನಾಂ ಸಾರಭೂತಂ ಅರ್ಥಂ ಶ್ರುಣು’ (ಶ್ರೀ ಗೀತಾ ಭಾಷ್ಯ) ಎನ್ನುವ ಮೂಲಕ,
’ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ, ಕ್ಷರಃ ಸರ್ವಾಣಿ ಭೂತಾನಿ ಕೂಟಸ್ತೋಕ್ಷರ ಉಚ್ಯತೇ’ (ಭಗವದ್ಗೀತೆ) (ಅರ್ಥ: ನಶ್ವರ, ಶಾಶ್ವತ ಇವೆರಡು ಈ ಲೋಕದಲ್ಲಿ ಪುರುಷರೂಪಗಳು; ಎಲ್ಲ ದೇಹಗಳೂ ನಶ್ವರ, ಜೀವಾತ್ಮ ಶಾಶ್ವತ) ಎಂದ ಶ್ರೀಕೃಷ್ಣನ ಮಾತನ್ನು ಸಮರ್ಥಿಸಿದ ರಾಮಾನುಜರ ದೃಷ್ಟಿ

ಮತ್ತು, ’ಜೀವೇಶ್ವರ ಭಿದಾ ಚೈವ ಜಡೇಶ್ವರ ಭಿದಾ ತಥಾ....’ ಎಂದು ಜೀವ-ಈಶ್ವರ, ಜಡ-ಈಶ್ವರ ಮುಂತಾಗಿ ಪ್ರಪಂಚದ ಭೇದಪಂಚಕವನ್ನು ಸಾರಿದ ’ಪರಮಶ್ರುತಿ’ಯ ಪ್ರತಿಪಾದಕ ಮಧ್ವರ ದೃಷ್ಟಿ ಎಲ್ಲವೂ ಜೀವ-ಜೀವನದ ಸತ್ಯಾರ್ಥಶೋಧದೆಡೆಗೇ ಹರಿದಿದ್ದವು.

’ಸತ್ಯಂ ವದ, ಧರ್ಮಂ ಚರ’ (ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು) ಎಂಬ ಸಕಲ ವೇದೋಪನಿಷದ್ಸಾರವನ್ನೇ ಈ ಮೂವರು ಪರಮಾಚಾರ್ಯರೂ ಜಗತ್ತಿಗೆ ಬೋಧಿಸಿದರು.
ಇವರ ಬೋಧನೆಯಂತೆ ನಾವಿಂದು ಸತ್ಯ-ಧರ್ಮದ ಮಾರ್ಗದಲ್ಲಿ ನಡೆಯಬೇಕಾಗಿದೆ. ಅದಕ್ಕಾಗಿ ನಮ್ಮೊಳಗಿನ ಭೇದಭಾವವನ್ನು ತೊರೆಯಬೇಕಾಗಿದೆ.

’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್‌ಸಾಕ್ಷಿಣೀ
ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ’ (ಮನೀಷಾಪಂಚಕ)
ಅಂದರೆ, ’ಎಚ್ಚರ, ಕನಸು, ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ, ಯಾವ ಚಿತ್‌ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ, ಆ ಚಿತ್‌ಸ್ವರೂಪವೇ ನಾನು, ನೋಟದ ವಸ್ತು ನಾನಲ್ಲ’, ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿಯು ಜನ್ಮತಃ ಚಂಡಾಲನಿರಲಿ, ಬ್ರಾಹ್ಮಣನಿರಲಿ, ನನ್ನ ಭಾವನೆಯಲ್ಲಿ ಅವನೇ ನನ್ನ ಗುರು, ಎಂದ ಆದಿಶಂಕರರ ಮಾತಿನಂತೆ ನಾವಿಂದು ಸತ್ ಚಿತ್ ಸ್ವರೂಪರಾಗಿ ಬಾಳಬೇಕಾಗಿದೆ.

’ನಿಯಮ, ಬದ್ಧತೆ, ಏಕರೂಪ (ಒಂದೇ ಗುಣ) ಹೊಂದಿರುವವನು, ಹಾಗೂ, ತಾನು ದೈವಾಂಶಸಂಭೂತ (ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು) ಎಂಬುದನ್ನರಿತು ಅದರಂತೆ ಮುನ್ನಡೆಯುವವನು ಅವನೇ ಶ್ರೇಷ್ಠನು’ ಎಂಬ ಆದಿಶಂಕರರ ನುಡಿಗನುಗುಣವಾಗಿ ನಮ್ಮನ್ನು ನಾವಿಂದು ರೂಪಿಸಿಕೊಳ್ಳಬೇಕಾಗಿದೆ.

ಈ ಆಚಾರ್ಯತ್ರಯರ ತತ್ತ್ವಸಾರವನ್ನರಿತು ಅದರನುಸಾರ ಜೀವನವನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ನಮಗೆ ಇಂದಿನ ವಿಷಮ ಸಾಮಾಜಿಕ ಸನ್ನಿವೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಇದೆ.

ಆಚಾರ್ಯತ್ರಯರು ಹೇಳಿರುವ ಶ್ರೇಷ್ಠಗುಣಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳೋಣ, ಶ್ರೇಷ್ಠರೂ ಸುಖಿಗಳೂ, ಮತ್ತು ತನ್ಮೂಲಕ, ಜೀವನಸಾರ್ಥಕ್ಯ ಹೊಂದಿದ ಜೀವಾತ್ಮರೂ ನಾವಾಗೋಣ.

ರಾಜ್‌ಕುಮಾರ್ ಎಂಬ ಕವಿತೆ

ಅಣ್ಣಾ,
ನಿನ್ನ ’ಅಭಿಮಾನಿ ದೇವರು’ಗಳಲ್ಲಿ
ಒಬ್ಬನಾಗಿರುವ ಈ ಹುಲುಮಾನವ
ನ ಪಾಲಿಗೆ ನೀನು
ಕಲಾದೇವತೆ,
ಸತ್ತ್ವ ಮತ್ತು ಸೌಂದರ್ಯಭರಿತ
ಕವಿತೆ.

ಇದು ಸತ್ಯ.
ನೀನೆನ್ನ ಬಾಳಿನಲಿ
ನಾ ಕಂಡ ಒಂದು
ಸತ್ಯ.
ಬಾಳಿಗೊಂದರ್ಥ ಕೊಡಬಲ್ಲ,
ಬಾಳು ಸಾರ್ಥಕಗೊಳಿಸಬಲ್ಲ
ವಿಷಯ-ವಿಶೇಷಗಳಲ್ಲೊಂದಾಗಿ
ಬೆಳಗುತ್ತಿರುವೆ ನೀ
ನನ್ನ ಬಾಳಿನಲಿ
ನಿತ್ಯ.

ನಟನೆಯೆಂಬುದೆ ನಿಜ,
ನಿಜವೆಂಬುದೇ ನಟನೆ,
ದಿಟವೆಂಬುದದು ಭಾವ
ಮತ್ತು ಭಾವುಕತೆ.
ನಟಿಸುವುದು ದೈವಕೃಪೆ,
ಘಟಿಸುವುದು ದೈವೇಚ್ಛೆ
ಎಂಬ ಭಾವದ ನಿನ್ನ
ಬಾಳೊಂದು ಕವಿತೆ.

ಹಾಡಿದೆ ನೀನು,
ಹಾಡಾದೆ.
ಕುಣಿದೆ, ಮನಗಳ
ಕುಣಿಸಿದೆ.
ದಣಿದೆ, ಮನಗಳ
ತಣಿಸಿದೆ.
ಕಾಡಿನ ಪಾಲಾದೆ,
ನಾಡಿನ ಮುತ್ತಾದೆ,
ನನ್ನ ಮುತ್ತುರಾಜಾ,
ಅನ್ಯಾದೃಶ ಕಲೆಯಿಂದ,
ಅಧ್ಯಾತ್ಮದ ಹೊಳಪಿಂದ,
ಸಮರ್ಪಣಭಾವದಿಂದ
ನಮ್ಮ ಹೃದಯದೊಂದು
ಅಮೂಲ್ಯ ಸೊತ್ತಾದೆ.

ಅಣ್ಣಾ,
ನೀನು
ಅರ್ಥಗರ್ಭಿತ ಕವಿತೆ.
ನಿನ್ನಿಂದ
ನಾನು
ಬಾಳ ಕಾವ್ಯವ ಕಲಿತೆ.

ಎಷ್ಟೊಂದು ಪ್ರಧಾನಿಗಳು!

ಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ.

’ಮನಮೋಹಕ’ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್ ಸಿಂಗರೇ ಮುಂದುವರಿಯಲಿ ಎಂದು ಸೋನಿಯಾ ಹೇಳುತ್ತಿದ್ದಾರೆ.

’ರಾಹುಕಾಲ’ ಕಳೆದಿದೆ, ರಾಹುಲ್ ಗಾಂಧಿಗೆ ಇನ್ನು ಪ್ರಧಾನಿ ಪಟ್ಟ ಕಟ್ಟಬಹುದು ಎಂದು ಸ್ವಯಂ ಎಂಎಂ ಸಿಂಗರೇ ಸಂಗೀತ ಹಾಡುತ್ತಿದ್ದಾರೆ.

’ಮೂಕರ್ಜಿ’ ನನ್ನದೂ ಇದೆ ಪ್ರಧಾನಿ ಪಟ್ಟಕ್ಕೆ, ಎಂದು ಪ್ರಣವ್ ಮುಖರ್ಜಿ ಪ್ರಣವನಾದಗೈಯುತ್ತಿದ್ದಾರೆ.

’ಪ್ರಕಾಶ’ ನನ್ನದೇನು ಕಮ್ಮಿಯೇ? ಪ್ರಧಾನಿ ಪಟ್ಟಕ್ಕೆ ನಾನೂ ಅಭ್ಯರ್ಥಿಯೇ ಎನ್ನುತ್ತಿದ್ದಾರೆ ಪ್ರಕಾಶ್ ಕಾರಟ್.
(ಹೌದೌದು, ನನ ಗಂಡ ೨೪ ಕ್ಯಾರಟ್ ಅಪ್ಪಟ ಚಿನ್ನ; ನನ್ನ ಪ್ರಕಾಶ ಪ್ರಕಾಶಮಾನ ವಜ್ರ ಅನ್ನುತ್ತಿದ್ದಾರೆ ಬೃಂದಾ ಕಾರಟ್.)

ರಾಂ ರಾಂ ’ಸೀತಾರಾಂ’, ಅಹಂ ಅಪಿ ಅರ್ಹಂ ಎಂದು ಸಿತಾರಂ ಬಾರಿಸತೊಡಗಿದ್ದಾರೆ ಚಾರ್ವಾಕ ಯೆಚೂರಿ ಸೀತಾರಾಂ.

’ಅಧ್ವಾನ’ದ ಮಾತಾಡಬೇಡಿ, ಇದು ರಾಮ ಮಂದಿರ, ನಾ ರಾಮಚಂದಿರ, ಅನ್ನುತ್ತಿದ್ದಾರೆ ಈಗಾಗಲೇ ಪಟ್ಟಾಭಿಷೇಕ ಆದಂತೆ ಕನಸು ಕಾಣುತ್ತಿರುವ ಅದ್ವಾನಿ.

’ಮೋಡೀ’ ಹಮಾರೀ, ಜಮೇಗಾ ಐಸೇ ಜಾನೀ, ಹಮ್ ತೋ ಹ್ಞೈ ಮುಖ್‌ಮಂತ್ರಿ, ಕಲ್ ಬನ್‌ತೇ ಹ್ಞೈ ಪರ್‌ಧಾನೀ, ಎಂದು ’ಔಲಾದ್’ ಫಿಲಂ ಸ್ಟೈಲ್‌ನಲ್ಲಿ ಒಳಗೊಳಗೇ ಹಾಡಿಕೊಳ್ಳುತ್ತಿದ್ದಾರೆ ನರೇಂದ್ರ ಮೋದಿ.
(ಜೋಡೀ ಹಮಾರೀ, ಕಹೇಗಾ ಐಸೇ ಜಾನೀ, ಎಂದು ’ಮೋಡಿ’ಯ (ಅಂತರಂಗದ) ಮಾತನ್ನು ಚಲಾವಣೆಗೆ ತರುತ್ತಿದ್ದಾರೆ ಶೌರಿ-ಜೇಟ್ಲಿ ಜೋಡಿ.)

’ಘರ್ ಘರ್ ಮೇ ಪಕಾತೇ ಹ್ಞೈ ಆಲೂ, ಸರ್‌ಕಾರ್ ಕೋ ಚಲಾತೇ ಹ್ಞೈ ಲಾಲೂ’, ಎನ್ನುತ್ತಿದ್ದಾರೆ ಲಾಲೂ ಪ್ರಸಾದ ತಿಂದ ಭಕ್ತರು.

’ರಾಮ್’ ಕಭೀ ನಹೀ ಕಿಯಾ ’ವಿಲಾಸ್’, ಅಬ್ ಪಿಎಂ ಬನೇಗಾ ರಾಮ್ ವಿಲಾಸ್, ಅನ್ನುತ್ತಿದ್ದಾರೆ ಪಾಸ್ವಾನ್.

’ಮುಲಾಂ’ನಂತೆ ’ಮುಲಾಯಂ’ ನಾನು, ಈ ಸಲ ಪ್ರಧಾನಿಯಾದೇನು ಎಂದು ಕನಸು ಕಾಣುತ್ತಿದ್ದಾರೆ ರಫ್ ಅಂಡ್ ಟಫ್ ಮುಲಾಯಂ ಸಿಂಗ್ ಯಾದವ್.

’ಚಂದ್ರ’ ಸೂರ್ಯುಡು ಸಾಕ್ಷಿ, ನೇನೇ ನೆಕ್ಸ್ಟ್ ಪ್ರಧಾನುಡು ಬಾಬೂ, ಅನ್ನುತ್ತಿದ್ದಾರೆ ಚಂದ್ರಬಾಬು ನಾಯ್ಡು.

’ಪವರ್’ಫುಲ್ ಕಣ್ರೀ ನಾನು, ಪ್ರಧಾನಿ ಆಗ್ದೇ ಏನು? ಎಂದು ಸೋಟೆ ತಿರುವಿ ಚಾಲೆಂಜ್ ಹಾಕುತ್ತಿದ್ದಾರೆ ಶರದ್ ಪವಾರ್.

ಸಿಕ್ಕರೆ ಚಾನ್ಸು ’ಜೈ’ ಅಂತೀನಿ, ಪುರಚ್ಚಿ ತಲೈವಿ ಸೈ ಅಂತೀನಿ, ಅನ್ತಿದ್ದಾರೆ ಜೈಲಲಿತಮ್ಮ. (ಕ್ಷಮಿಸಿ, ಅಮ್ಮ ಅಲ್ಲ, ಕುಮಾರಿ.)

ಎಲ್ಲಾ ’ಮಾಯ’ವೋ ಪ್ರಭುವೇ, ಎಲ್ಲಾ ಮಾಯವೋ; ಸಿಎಂ ಮಾಯವೋ ಪಿಎಂ ಮಾಯವೋ, ನಾ ಪೀಯೆಮ್ಮಾದ್ರೆ ದೇಶ್ವೇ ಮಾಯವೋ, ಎಂದು ಗುರಿ ತಪ್ಪದ ಮಗಳಂತೆ ಹಾಡುತ್ತಿದ್ದಾರೆ ಮಾಯಾವತಿ ಮೇ’ಢಂ’. (ಮಾಯಾವತಿ ಮೇ ದಂ ಕಿತ್‌ನಾ!)

ಪ್ರಧಾನಿ ಹುದ್ದೆಗೆ ಇಷ್ಟೆಲ್ಲ ಮಂದಿ ಕೂಗು ಹಾಕುತ್ತಿರುವಾಗ ನಮ್ಮ ದೇವೇಗೌಡರು ಮಾತ್ರ, ’ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ ನೆಮ್ಮದಿಗೆ ಭಂಗವಿಲ್ಲ, ಮುದ್ದೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನಾ ಅಳುಕದೆ ಮುಂದೇ ಸಾಗುವೆ’, ಎಂದು ಹಾಡುತ್ತ ಕೂಲಾಗಿ ಮನ್ನಡೆದಿದ್ದಾರೆ.
ನಾಳೆ ಅವರು, ’ದೇವರ ಆಟ ಬಲ್ಲವರಾರು, ಆತನ ಎದಿರು ನಿಲ್ಲುವರಾರು, ಕೇಳದೆ ಸುಖವ ತರುವ, ಹೇಳದೆ ಕುರ್ಚಿಯ ಕೊಡುವ’, ಎಂದು ದೇವರ ಕಡೆ ಕೈತೋರಿಸಿ ಪಿಎಂ ಕುರ್ಚಿಯ ಕಡೆ ನಡೆದರೂ ಆಶ್ಚರ್ಯವಿಲ್ಲ. ಗೌಡರ ಹೆಜ್ಜೆ ಬಲ್ಲವರಾರು? ೧೯೯೬ರ ಉದಾಹರಣೆ ನಮ್ಮೆದುರಿದೆಯಲ್ಲಾ!

’ಕಾರ್ಮಿಕ ದಿನ’ ಎಂಬ ಅಸಂಬದ್ಧ ಆಚರಣೆ!

ಮೇ ೧, ಕಾರ್ಮಿಕ ದಿನ.

ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ!

ನಮ್ಮ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ’ಕಾರ್ಮಿಕ ದಿನ’ದಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹುಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ! ಅದೇವೇಳೆ, ಸಂಘಟಿತ ವಲಯದ ಬಹುತೇಕ ಕಾರ್ಮಿಕರು ತಮ್ಮ ಎಂದೂ ಮುಗಿಯದ ಬೇಡಿಕೆಗಳನ್ನು ಪ್ರತಿಪಾದಿಸುತ್ತ ’ಕಾರ್ಮಿಕ ದಿನ’ವನ್ನು ’ಅಧಿಕೃತ ಕೆಲಸಗೇಡಿ ದಿನ’ವನ್ನಾಗಿ ಆಚರಿಸುತ್ತಿದ್ದಾರೆ!

ಕೇಂದ್ರ ಸರ್ಕಾರದ ಆಣತಿ ಮೇರೆಗೆ ನಮ್ಮ ಉದ್ಯೋಗದಾತರು ನಾಯಿಗಳಿಗೆ ಬಿಸ್ಕತ್ ಬಿಸಾಕುವಂತೆ ಮೇ ಒಂದನೇ ದಿನವನ್ನು ಸಂಘಟಿತ ಕಾರ್ಮಿಕರಿಗೆ ಬಿಸಾಕುತ್ತಾರೆ. ಕಾರ್ಮಿಕರು ರಜಾ ಎಂಬ ಆ ಬಿಸ್ಕತ್ ತಿಂದು, ಒಂದಷ್ಟು ಘೋಷಣೆ ಕೂಗಿ ಸುಮ್ಮನಾಗುತ್ತಾರೆ. ’ಕಾರ್ಮಿಕ ದಿನ’ವೆಂಬುದು ನಮ್ಮೀ ದೇಶದಲ್ಲಿ ಇದಕ್ಕಿಂತ ಹೆಚ್ಚೇನನ್ನೂ ಸಾಧಿಸಿಲ್ಲ.

ತೃಪ್ತಿಯ ಕೊರತೆ
-------------
’ನನಗೆ ಬರುತ್ತಿರುವ ಸಂಬಳ ಮತ್ತು ಭತ್ಯೆಗಳು ತೃಪ್ತಿಕರವಾಗಿವೆ; ಸೇವಾ ನಿಯಮಗಳೂ ಸೌಲಭ್ಯಗಳೂ ಉತ್ತಮವಾಗಿವೆ; ನಾನು ಅದೃಷ್ಟವಂತ’, ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಕಾರ್ಮಿಕರು ನಮ್ಮಲ್ಲಿ ಎಷ್ಟು ಮಂದಿ ಇದ್ದಾರೆ? ಅದೇ ವೇಳೆ, ’ನನ್ನ ಕೆಲಸಗಾರರೆಲ್ಲ ಚೆನ್ನಾಗಿ ದುಡಿಯುತ್ತಿದ್ದಾರೆ, ಹಾಗಾಗಿಯೇ ನಾನು ಪ್ರವರ್ಧನ ಹೊಂದಿದ್ದೇನೆ, ಅವರು ಇನ್ನೂ ಹೆಚ್ಚಿನ ಸಂಬಳ, ಸೌಲಭ್ಯಗಳಿಗೆ ಅರ್ಹರು’, ಎಂದು ಹೇಳುವ ಒಬ್ಬನಾದರೂ ಮಾಲೀಕ ನಮ್ಮಲ್ಲಿದ್ದಾನೆಯೇ? ಎಷ್ಟು ಕೊಟ್ಟರೂ ಸಾಲದೆನ್ನುವ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಸದಾ ಅತೃಪ್ತಿ ಹೊಂದಿರುವ ಸಂಘಟಿತ ಕಾರ್ಮಿಕರು ಒಂದು ಕಡೆ, ದುಡಿದು ಅರೆಜೀವವಾದರೂ ಎರಡು ಹೊತ್ತಿನ ಕೂಳು ಕಾಣದ ಅಸಂಘಟಿತ ಕಾರ್ಮಿಕರು ಇನ್ನೊಂದು ಕಡೆ, ಮತ್ತು ಈ ಎರಡೂ ಬಗೆಯ ಕಾರ್-ಮಿಕಗಳನ್ನು ತಮ್ಮ ಬಲೆಗೆ ಕೆಡವಿಕೊಂಡು ಇವರ ಹೆಸರಿನಲ್ಲಿ ಕಾಸು, ಕುರ್ಚಿ, ಕೀರ್ತಿ ಇತ್ಯಾದಿ ’ಭೋಗ’ಗಳನ್ನು ತಮ್ಮದಾಗಿಸಿಕೊಳ್ಳುವ-’ಕರ್ಮಯೋಗಿ’ ಮುಖವಾಡದ-ಕಾರ್ಮಿಕ ಧುರೀಣರು ಮತ್ತೊಂದು ಕಡೆ; ಇಂಥ ವಿಪರ್ಯಾಸ-ವೈಪರೀತ್ಯಗಳ ನಡುವೆ ಅದ್ಯಾವ ಕರ್ಮಕ್ಕೋ ನಾವು ’ಕಾರ್ಮಿಕ ದಿನ’ವನ್ನು ಆಚರಿಸುತ್ತಿದ್ದೇವೆ! ’ಈ ದಿನವು ಕಾರ್ಮಿಕರಿಗೆ ಗೌರವದ ಸಂಕೇತ’, ಎಂದು ಓಳು ಬಿಡುತ್ತಿದ್ದೇವೆ (ಕಪಟವಾಡುತ್ತಿದ್ದೇವೆ)!

ಕಾರ್ಮಿಕ ದಿನಾಚರಣೆಯ ಮೂಲ
--------------------
ಇಷ್ಟಕ್ಕೂ, ನಮ್ಮ ಈ ’ಕಾರ್ಮಿಕ ದಿನ’ವೆಂಬುದು ವಿದೇಶೀ ಬಳುವಳಿ.

೧೮೫೬ರ ಏಪ್ರಿಲ್ ೨೧ರಂದು ಆಸ್ಟ್ರೇಲಿಯಾದ ಮೆಲ್ಬರ್ನ್ ಪ್ರದೇಶದಲ್ಲಿ ಕಲ್ಲುಕುಟಿಗರು ಮತ್ತು ಕಟ್ಟಡ ಕಾರ್ಮಿಕರು ದಿನಂಪ್ರತಿ ಎಂಟು ಗಂಟೆಗಳ ದುಡಿಮೆ ಮಿತಿಗೆ ಆಗ್ರಹಿಸಿ ಮುಷ್ಕರ ನಡೆಸಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದು ಮುಂದೆ ವಿವಿಧೆಡೆಗಳಲ್ಲಿ ’ಮೇ ದಿನ’ದ ಆಚರಣೆಗೆ ಪರೋಕ್ಷವಾಗಿ ಸ್ಫೂರ್ತಿಯಾಯಿತು.

ಎಂಟು ಗಂಟೆಗಳ ದುಡಿಮೆ ಮಿತಿಗಾಗಿ ೧೮೮೬ರ ಮೇ ಒಂದರಂದು ಅಮೆರಿಕದ ಹಲವೆಡೆ ಕಾರ್ಮಿಕರ ರ್‍ಯಾಲಿಗಳು ನಡೆದವು. ಮೇ ಮೂರರಂದು ಚಿಕಾಗೋದಲ್ಲಿ ಬದಲಿ ಕೆಲಸಗಾರರು ಕೆಲಸಕ್ಕೆ ಹಾಜರಾಗಲೆತ್ನಿಸಿದಾಗ ಘರ್ಷಣೆ ಸಂಭವಿಸಿ ಪೋಲೀಸರ ಗುಂಡಿಗೆ ನಾಲ್ವರು ಕಾರ್ಮಿಕರು ಬಲಿಯಾದರು. ಮೇ ನಾಲ್ಕರಂದು ಅಲ್ಲಿನ ಹೇ ಮಾರ್ಕೆಟ್ ಚೌಕದಲ್ಲಿ ಕಾರ್ಮಿಕರ ರ್‍ಯಾಲಿ ನಡೆದಿದ್ದಾಗ ಬಾಂಬ್ ಎಸೆತಕ್ಕೆ ಓರ್ವ ಪೋಲೀಸ್ ಸಾವನ್ನಪ್ಪಿದನಲ್ಲದೆ ಅನಂತರ ನಡೆದ ಗುಂಡಿನ ಕಾಳಗದಲ್ಲಿ ಏಳು ಮಂದಿ ಪೋಲೀಸರು ಮತ್ತು ನಾಲ್ವರು ಕಾರ್ಮಿಕರು ಪ್ರಾಣ ಕಳೆದುಕೊಂಡರು. ಮುಂದಿನ ದಿನಗಳಲ್ಲಿ ಈ ಘಟನೆಯ ವಿಚಾರಣೆ ನಡೆದು ಏಳು ಮಂದಿ ದಂಗೆಕೋರರನ್ನು ಮರಣದಂಡನೆಗೆ ಗುರಿಪಡಿಸಲಾಯಿತು.

೧೮೯೦ರ ಮೇ ಒಂದರಂದು ಈ ಕಾರ್ಮಿಕ ಪ್ರತಿಭಟನೆಯು ಮರುಜೀವ ಪಡೆದಾಗ ಬೇರೆ ಕೆಲ ದೇಶಗಳ ಕಾರ್ಮಿಕ ಸಂಘಟನೆಗಳಿಗೂ ಇದನ್ನು ವಿಸ್ತರಿಸಲಾಯಿತು. ಹೀಗೆ ಇದಕ್ಕೆ ಅಂತರ ರಾಷ್ಟ್ರೀಯ ಕಾರ್ಮಿಕ ದಿನದ ರೂಪು ಕೊಡಲಾಯಿತು. ಇದರ ಹಿಂದೆ, ಹೇ ಮಾರ್ಕೆಟ್ ’ಹುತಾತ್ಮ’ರಿಗೆ ಗೌರವ ಸೂಚಿಸುವ ಉದ್ದೇಶ ಅಡಕವಾಗಿತ್ತು! ಇಂಥದೊಂದು ಹುನ್ನಾರಕ್ಕೆ ಭಾರತದ ಕಾರ್ಮಿಕ ಬಲಿಯಾಗಬೇಕೇ? ಹಾಗೊಂದು ವೇಳೆ ’ಕಾರ್ಮಿಕ ದಿನ’ ಆಚರಿಸಲೇಬೇಕೆಂದರೆ, ನಮ್ಮಲ್ಲಿ ಕಾರ್ಮಿಕ ಕ್ರಾಂತಿಗೇನು ಕೊರತೆಯೇ? ಏಪ್ರಿಲ್-ಮೇ ೧೮೬೨ರ ಮತ್ತು ೧೯೪೦-೪೬ರ ರೈಲ್ವೆ ಚಳವಳಿಗಳು, ೧೯೩೭ರಲ್ಲಿ ಜವಳಿ ಕಾರ್ಮಿಕರು ನಡೆಸಿದ ಐತಿಹಾಸಿಕ ಘೇರಾವೋ, ೧೯೪೦ರ ದಶಕದ ಅವರ ಚಳವಳಿಗಳು, ಫೆಬ್ರವರಿ ೧೯೪೬ರ ನೌಕಾ ದಂಗೆ, ೧೯೫೫ರ ಬಂದರು ಕಾರ್ಮಿಕರ ಚಳವಳಿ, ೧೮೮೧, ೯೦, ೯೫, ೯೬ರ ಸೆಣಬು ಕಾರ್ಖಾನೆ ಕಾರ್ಮಿಕರ ಮುಷ್ಕರಗಳು, ನವೆಂಬರ್ ೧೮, ೧೯೦೭ರ ಅಸನ್‌ಸೋಲ್ ರೈಲ್ವೆ ನೌಕರರ ಮುಷ್ಕರ, ಬ್ರಿಟಿಷ್ ಆಡಳಿತಗಾರರ ವಿರುದ್ಧ ಸರ್ಕಾರಿ ಮುದ್ರಣಾಲಯದ ಕೆಲಸಗಾರರು ೧೯೦೫ರಲ್ಲಿ ಒಂದು ತಿಂಗಳ ಕಾಲ ನಡೆಸಿ ಯಶಸ್ಸು ಸಾಧಿಸಿದ ಆ ಐತಿಹಾಸಿಕ ಮುಷ್ಕರ, ಹೀಗೆ ಅದೆಷ್ಟು ಉಲ್ಲೇಖಾರ್ಹ ಕಾರ್ಮಿಕ ಚಳವಳಿಗಳು ನಮ್ಮ ದೇಶದಲ್ಲಿ ಘಟಿಸಿಲ್ಲ? ಇವನ್ನೆಲ್ಲ ಬದಿಗೆ ತಳ್ಳಿ, ಆ ಅಮೆರಿಕನ್ನರನ್ನು ನೆನೆಯುವ ದಿನವನ್ನೇ ನಾವು ’ಕಾರ್ಮಿಕ ದಿನ’ವೆಂದು ಸ್ವೀಕರಿಸಿದ್ದೇವಲ್ಲಾ!

ಚೋದ್ಯವೆಂದರೆ, ಸ್ವಯಂ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳೇ ’ಕಾರ್ಮಿಕ ದಿನ’ವನ್ನು ಮೇ ಒಂದರಂದು ಆಚರಿಸದೆ ಬೇರೆ ದಿನಗಳಂದು ಆಚರಿಸುತ್ತವೆ! ಮೇ ಒಂದರ ಆಚರಣೆಗೆ ಇರುವ ’ಕಮ್ಯೂನಿಸ್ಟ್’ ಹಣೆಪಟ್ಟಿ ಆ ದೇಶಗಳಿಗೆ ಬೇಡವಂತೆ!

ಕಾರ್ಮಿಕ ದಿನವನ್ನು ನಮಗೆ ಬಳುವಳಿ ನೀಡಿದ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳೇ ಕಾರ್ಮಿಕ ದಿನವನ್ನು ಮೇ ಒಂದರಂದು ಆಚರಿಸುವುದಿಲ್ಲ; ಎಲ್ಲ ಐರೋಪ್ಯ ರಾಷ್ಟ್ರಗಳೂ ’ಕಾರ್ಮಿಕ ದಿನ’ವನ್ನು ತಮಗೆ ಬೇಕಾದಂತೆ ಅರ್ಥೈಸಿ, ತಮಗೆ ಬೇಕಾದ ದಿನ ಆಚರಿಸುತ್ತವೆ; ಆದರೆ ಭಾರತದಂಥ ಅಭಿವೃದ್ಧಿಶೀಲ ದೇಶ ಮೊದಲ್ಗೊಂಡು ’ಮೂರನೇ ವಿಶ್ವ’ದ ರಾಷ್ಟ್ರಗಳೆಲ್ಲ ಅಮೆರಿಕ-ಆಸ್ಟ್ರೇಲಿಯಾಗಳಲ್ಲಿ ಘಟಿಸಿದ ಎರಡು ವಿದ್ಯಮಾನಗಳನ್ನು ಪ್ರಸಾದವೆಂದು ಸ್ವೀಕರಿಸಿ ಸಂಬಂಧಿತ ದಿನವಾದ ಮೇ ಒಂದರಂದು ’ಕಾರ್ಮಿಕ ದಿನ’ವನ್ನು ಆಚರಿಸಬೇಕೆಂದು ಈ ಐರೋಪ್ಯ ರಾಷ್ಟ್ರಗಳು ಬಯಸುತ್ತವೆ! ಅದರಂತೆ ಭಾರತದಲ್ಲಿ ನಾವು ಆಚರಿಸುತ್ತಿದ್ದೇವೆ!

ಭಾರತದಲ್ಲಿ ಮೊಟ್ಟಮೊದಲ ’ಕಾರ್ಮಿಕ ದಿನ’ (ಮೇ ಡೇ) ನಡೆದದ್ದು ಮದ್ರಾಸ್(ಚೆನ್ನೈ)ನಲ್ಲಿ. ’ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್’ ಸಂಘಟನೆಯು ತನ್ನ ಧುರೀಣ ಸಿಂಗಾರವೇಲು ಚೆಟ್ಟಿಯಾರ್ ನೇತೃತ್ವದಲ್ಲಿ ೧೯೨೩ರ ಮೇ ಒಂದರಂದು ಮದ್ರಾಸ್‌ನ ಎರಡು ಬೀಚ್‌ಗಳಲ್ಲಿ ಸಭೆಗಳನ್ನು ಸಂಘಟಿಸಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಅಲ್ಲಿ ಕೆಂಪು ಧ್ವಜವನ್ನು ಬಳಸಲಾಯಿತು. ಇದೇ ತಮಿಳುನಾಡಿನಲ್ಲೇ ಜಯಲಲಿತಾ ೨೦೦೩ರಲ್ಲಿ ಮುಷ್ಕರ ನಿರತ ೧೭೬೦೦೦ ಸರ್ಕಾರಿ ನೌಕರರು ಹಾಗೂ ಶಿಕ್ಷಕರನ್ನು ವಜಾ ಮಾಡಿದ್ದು! (ಆಮೇಲೆ ಅವರನ್ನು ಕೆಲಸಕ್ಕೆ ವಾಪಸ್ ಸೇರಿಸಿಕೊಳ್ಳಲಾಯಿತೆನ್ನಿ.)


ಮೂಲಭೂತ ಪ್ರಶ್ನೆ
-------------
ಮೂಲಭೂತ ಪ್ರಶ್ನೆಯೆಂದರೆ, ’ಕಾರ್ಮಿಕ-ಮಾಲೀಕ ಸಂಬಂಧವು ಉಭಯರಿಗೂ ತೃಪ್ತಿದಾಯಕವಾಗಿಲ್ಲದಿರುವಾಗ ಕಾರ್ಮಿಕ ದಿನಾಚರಣೆಗೆ ಏನು ಅರ್ಥ?’ ನಮ್ಮ ದೇಶದಲ್ಲಿಂದು ನಾವು ಕಾಣುತ್ತಿರುವುದೇನನ್ನು? ಸದಾ ಅತೃಪ್ತರಾಗಿರುವ ಕಾರ್ಮಿಕರು, ಅವರ ಅತೃಪ್ತಿಗೆ ಗಾಳಿ ಹಾಕುತ್ತ ಅವರನ್ನು ಮುಷ್ಕರಕ್ಕೆ ಎಳೆಯುವ ಕಾರ್ಮಿಕ ಧುರೀಣರು, ಧುರೀಣರ ಕರೆಗಳಿಗೆ ಕುರಿಗಳಂತೆ ಕೊರಳು ಕೊಡುವ ಅದೇ ಕಾರ್ಮಿಕರು, ಮಾಲೀಕರೊಡನೆ ಒಳ ಒಪ್ಪಂದ ಮಾಡಿಕೊಳ್ಳುವ, ಇಲ್ಲವೇ, ಕಾರ್ಮಿಕರನ್ನು ತಮ್ಮ ಏಣಿಗೆ ಮೆಟ್ಟಿಲಾಗಿ ಬಳಸಿಕೊಳ್ಳುವ ಅದೇ ಧುರೀಣರು, ಮತ್ತು, ನೌಕರರನ್ನು ಸದಾ ಅತೃಪ್ತಿಯಲ್ಲಿಡುವುದು ತಮ್ಮ ಆಜನ್ಮಸಿದ್ಧ ಹಕ್ಕು ಎಂಬಂತಾಡುವ ಮಾಲೀಕರು, ಈ ವಿಷ ವರ್ತುಲವನ್ನಲ್ಲವೆ ನಾವಿಂದು ಈ ದೇಶದಲ್ಲಿ ಕಾಣುತ್ತಿರುವುದು? ನಾವಿಂದು ಕಾಣುತ್ತಿರುವುದು ಅಸಂಘಟಿತ ಕಾರ್ಮಿಕರ ಶೋಷಣೆಯನ್ನಲ್ಲವೆ? ಕಾರ್ಮಿಕರ ಅವ್ಯಾಹತ ಮುಷ್ಕರಗಳನ್ನಲ್ಲವೆ? ಪ್ರತಿ ದಿನವೂ ಪ್ರತಿ ಊರಿನಲ್ಲಿಯೂ ಪ್ರತಿಭಟನಾ ಮೆರವಣಿಗೆಯನ್ನಲ್ಲವೆ? ಕಾರ್ಮಿಕ ಇಲಾಖೆಯ ಕಳ್ಳಾಟಿಕೆ ಮತ್ತು ರಾಜಕಾರಣಿಗಳ ಸುಳ್ಳಾಡುವಿಕೆಗಳನ್ನಲ್ಲವೆ?

ಅನೂಚಾನವೆಂಬಂತೆ ಸಾಗಿಬಂದಿರುವ ಇಂಥ ವಿಷಮ ಪರಿಸ್ಥಿತಿಯಲ್ಲಿ ನಾವು ವರ್ಷದಲ್ಲೊಂದು ದಿನ ಕಾರ್ಮಿಕರಿಗೆ ಅವರ ಹೆಸರಿನಲ್ಲಿ ರಜೆ ನೀಡಿಬಿಟ್ಟರೆ ಏನು ಸಾಧಿಸಿದಂತಾಯಿತು? ಇದುವರೆಗೆ ಸಾಧಿಸಿದ್ದಾದರೂ ಏನು? ಹೀಗಿರುವಾಗ ನಾವಿಂದು ಆಚರಿಸುತ್ತಿರುವ ’ಕಾರ್ಮಿಕ ದಿನ’ವು ಅಸಂಬದ್ಧವೆಂದು ಅನಿಸುವುದಿಲ್ಲವೆ?

ನಮ್ಮೀ ದೇಶದಲ್ಲಿ ’ಕಾರ್ಮಿಕ ದಿನ’ದ ಅರಿವೂ ಇಲ್ಲದೆ ಲಕ್ಷಾಂತರ ಹೋಟೆಲ್ ನೌಕರರು ಸುರಕ್ಷಿತವಲ್ಲದ ವಾತಾವರಣದಲ್ಲಿ ಅಹರ್ನಿಶಿ ದುಡಿದು ಹಣ್ಣಾಗುತ್ತಿರುವಾಗ, ಕೋಟ್ಯಂತರ ಗಾರ್ಮೆಂಟ್ ನೌಕರರು, ಕಟ್ಟಡ ಕಾರ್ಮಿಕರು, ಭಟ್ಟಿಗಳ ಕಾರ್ಮಿಕರು, ಆಟೋ ಗ್ಯಾರೇಜ್ ಮಕ್ಕಳು, ಹೀಗೆ ನಾನಾ ವಲಯಗಳ ಅಸಂಘಟಿತ ಕಾರ್ಮಿಕರು ಅನಾರೋಗ್ಯಕರ ಮತ್ತು ಅಭದ್ರ ವಾತಾವರಣದಲ್ಲಿ ದಿನವಿಡೀ ದುಡಿದೂ ಅರೆಹೊಟ್ಟೆ ಉಣ್ಣುವಾಗ ತಿಂಗಳಿಗೆ ಹತ್ತಾರು ಸಾವಿರದಿಂದ ಲಕ್ಷದವರೆಗೆ ಸಂಬಳ ಎಣಿಸುವ (ಗಿಂಬಳವಿದ್ದಲ್ಲಿ ಅದು ಬೇರೆ!) ಸಂಘಟಿತ ವಲಯದ ನೌಕರರು ’ಕಾರ್ಮಿಕ ದಿನ’ವೆಂದು ರಜಾದ ಮಜಾ ಅನುಭವಿಸುವುದು ಎಷ್ಟು ಸೂಕ್ತ? ಪುಸ್ತಕದ ಬದನೇಕಾಯಿಯಾಗಿರುವ ಈ ದೇಶದ ಕಾರ್ಮಿಕ ನಿಯಮಗಳು ಏನೇ ಹೇಳಲಿ, ಕಮ್ಯೂನಿಸ್ಟರ ಆದರ್ಶಗಳು ಏನೇ ಇರಲಿ, ಕೇವಲ ಸಂಘಟಿತ ಕಾರ್ಮಿಕರು ಮಾತ್ರ ಫಲಾನುಭವಿಗಳಾಗಿರುವ ನಮ್ಮ ಕಾರ್ಮಿಕ (ಅ)ವ್ಯವಸ್ಥೆಯಲ್ಲಿ ’ಕಾರ್ಮಿಕ ದಿನ’ದ ಆಚರಣೆಯು ಸಂಘಟಿತ ಕಾರ್ಮಿಕರ ’ಬಲ’ದ ಸಂಕೇತವಾಗಿ ಬಿಂಬಿತವಾಗುವುದರಿಂದಾಗಿ ಪರೋಕ್ಷವಾಗಿ ಅಸಂಘಟಿತ ಕಾರ್ಮಿಕರಿಗೆ ಅನ್ಯಾಯವೆಸಗಿದಂತಾಗುವುದಲ್ಲವೆ? ಇಷ್ಟಕ್ಕೂ, ’ಕಾರ್ಮಿಕ ದಿನ’ವೆಂಬುದು ನಮ್ಮೀ ದೇಶದಲ್ಲಿ ’ಕಮ್ಯೂನಿಸ್ಟ್ ಸಿದ್ಧಾಂತದ ಪ್ರತಿಪಾದನೆಯ ದಿನ’ದ ರೂಪು ಪಡೆದಿರುವುದಾಗಲೀ ಕಮ್ಯೂನಿಸ್ಟರ ರಾಜಕಾರಣದ ಸಾಧನವಾಗಿ ಬಳಕೆಯಾಗುತ್ತಿರುವುದಾಗಲೀ ಸರಿಯೇ? ಚೀನಾದಂಥ ಚೀನಾವೇ ಬಂಡವಾಳಶಾಹಿ ಮಾರ್ಗ ಹಿಡಿದು, ’ಕಾರ್ಮಿಕ ದಿನ’ವನ್ನು ಸಂಪ್ರದಾಯಮಾತ್ರವೆಂಬಂತೆ ಆಚರಿಸುತ್ತಿರುವಾಗ ಭಾರತಕ್ಕೆ ಈ ದಿನದ ಬಗ್ಗೆ ಅದೆಂಥ ಹುಮ್ಮಸ್ಸು!

ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಸಂಘಟಿತ ಕಾರ್ಮಿಕರ ಮೈಮುರಿ ದುಡಿಮೆ. (ಮಾತೆತ್ತಿದರೆ ನಾವು ಟೀಕಿಸುವ ಸಾಫ್ಟ್‌ವೇರ್ ನೌಕರರು ಮೈಮುರಿ ದುಡಿಮೆಗೆ ಉತ್ತಮ ಉದಾಹರಣೆಯಾಗಬಲ್ಲರು.) ಅದೇವೇಳೆ, ಅಸಂಘಟಿತ ಕಾರ್ಮಿಕರಿಗೆ ಅಗತ್ಯವಾಗಿರುವುದು ಆರೋಗ್ಯಕರ, ಸುರಕ್ಷಿತ ಹಾಗೂ ಶೋಷಣೆಮುಕ್ತ ಕೆಲಸದ ವಾತಾವರಣ, ನ್ಯಾಯಬದ್ಧ ಸಂಬಳ ಮತ್ತು ಉತ್ತಮ ಸೇವಾ ಸೌಲಭ್ಯ. ಜೊತೆಗೆ, ಸಂಘಟಿತ ಕಾರ್ಮಿಕರು ಬಯಸುವುದು ತಮ್ಮ ನಾಯಕರ ಪ್ರಾಮಾಣಿಕತೆ ಮತ್ತು ನಿಷ್ಕಾಮಕರ್ಮ ಭಾವ ಹಾಗೂ ಮಾಲೀಕರ ವಾತ್ಸಲ್ಯ. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಈ ಗುಣಾಂಶಗಳು ಒಡಮೂಡುವುದಿಲ್ಲವೋ ಅಲ್ಲಿಯವರೆಗೆ ಕಾರ್ಮಿಕ ದಿನಾಚರಣೆಯಿಲ್ಲಿ ಅರ್ಥಹೀನ. ಕಾರ್ಮಿಕ ದಿನಾಚರಣೆಯ ’ಬಲ’ದಿಂದಲಾದರೂ ಈ ಗುಣಾಂಶಗಳ ಒಡಮೂಡುವಿಕೆ ಸಾಧ್ಯವಾಗಿದೆಯೇ ಎಂದರೆ, ಊಹ್ಞೂ, ಸಾಧ್ಯವಾಗಿಲ್ಲ. ಹಾಗೆ ಸಾಧ್ಯವಾಗುವುದೂ ಇಲ್ಲ. ಏಕೆಂದರೆ, ಕಾರ್ಮಿಕ ದಿನಾಚರಣೆಯೆಂಬುದಿಲ್ಲಿ ’ಒಂದು ದಿನದ ರಜಾ-ಮಜಾ’ ಹೊರತು ಬೇರಿನ್ನೇನೂ ಆಗಿ ಉಳಿದಿಲ್ಲ.

ಪುನರರಿಕೆ

ಓದುಗ ಮಿತ್ರರ ಒತ್ತಾಯಕ್ಕೆ ತಲೆಬಾಗಿ ಗುಳಿಗೆಯಂಗಡಿಯನ್ನು ಮತ್ತೆ ತೆರೆಯಲಿದ್ದೇನೆ.
ಈ ಮೊದಲಿನಂತೆ ಹಾಸ್ಯ ಮಾತ್ರವಲ್ಲ, ಗಂಭೀರವಾಗಿಯೂ ಕೊರೆಯಲಿದ್ದೇನೆ.
ನಿತ್ಯವೂ ಎಂಬ ನಿಯಮವಿಲ್ಲ, ಅನಿಯಮಿತವಾಗಿ ಬರೆಯಲಿದ್ದೇನೆ.
ನಿಮ್ಮ ಪ್ರತಿಕ್ರಿಯೆಯ ಪ್ರೀತಿಯನ್ನು ಹೃತ್ಪೂರ್ವಕ ಮೆರೆಯಲಿದ್ದೇನೆ.

ಶನಿವಾರ, ಏಪ್ರಿಲ್ 4, 2009

ಆಹಾ! ಹಾಸ್ಯವೇ! (ವಿದಾಯಲೇಖ)

ಮೂರ್ಖರ ದಿನ ಆಚರಣೆಯಲ್ಲಿ ನಾವು ಹಾಸ್ಯಕ್ಕೂ ಮೂರ್ಖತನಕ್ಕೂ ಸಂಬಂಧ ಕಲ್ಪಿಸುತ್ತೇವೆ! ಹೀಗೆ ಸಂಬಂಧ ಕಲ್ಪಿಸುವುದೇ ಒಂದು ರೀತಿಯಲ್ಲಿ ಮೂರ್ಖತನ!
ಹಾಸ್ಯವೆಂಬುದು ಜಾಣರಿಂದ, ಜಾಣರಿಗಾಗಿ ಇರುವ ಜಾಣತನ. ’ಮೂರ್ಖರ ದಿನದಂದು ಯಾರನ್ನಾದರೂಮೂರ್ಖರನ್ನಾಗಿಸಲು ನಾವು ಜಾಣತನವನ್ನೇನೋ ಉಪಯೋಗಿಸಬೇಕು, ಸರಿಯೇ, ಆದರೆ ಜಾಣತನವುಮೋಸ’ವೇ ಹೊರತುಹಾಸ್ಯವಲ್ಲ. ಹಲವು ಸಲ ಅದು ಅಪಹಾಸ್ಯ!
ಮೂರ್ಖರ ದಿನ ಆಸುಪಾಸಿನಲ್ಲಿ ಮಾಧ್ಯಮಗಳಲ್ಲಿಹಾಸ್ಯ ಭರ್ಜರಿ ಬೆಳೆ. ಆದರೆ ಅವು ಬಹುತೇಕ ನಿರುಪಯುಕ್ತ ಕಳೆ. ಕೆಲವು ಕೊಳೆ. ಮತ್ತೆ ಕೆಲವಂತೂ ಹಾಸ್ಯದ ಕೊಲೆ! ಕನ್ನಡದ ಮಟ್ಟಿಗೆ ಹೇಳುವುದಾದರೆ, ಮಾಧ್ಯಮಗಳಲ್ಲಿಮೂರ್ಖರ ದಿನ ಸಂದರ್ಭದಲ್ಲಿ ಮಾತ್ರವಲ್ಲ, ಉಳಿದಂತೆಯೂ ಬೆಳಕು ಕಾಣುವ ತಥಾಕಥಿತ ಹಾಸ್ಯದ ಬೆಳೆಯಲ್ಲಿ ನಿರುಪಯುಕ್ತ ಕಳೆ ಮತ್ತು ಹಾಸ್ಯದ ಕೊಲೆಯೇ ಜಾಸ್ತಿ!
ಹಾಸ್ಯಪ್ರಜ್ಞೆಯನ್ನಾಗಲೀ ವಿಡಂಬನಾ ಚಾತುರ್ಯವನ್ನಾಗಲೀ ಹೊಂದಿರದವರು ಸೃಷ್ಟಿಸಿದ ಬೈರಿಗೆಗಳಿಂದ ಓದುಗ/ಕೇಳುಗ/ನೋಡುಗ ಕೊರೆಸಿಕೊಳ್ಳುವುದು, ನಗೆಹನಿಗಳನ್ನು ಹಿಗ್ಗಿಸಿನಗೆಬರಹವೆಂದು ಪ್ರತಿಪಾದಿಸುವವರ ಅಂಥ ಬರಹಗಳನ್ನು ಓದುವ ಶಿಕ್ಷೆ ಅನುಭವಿಸುವುದು, ಚುಟುಕು/ಚೂರು/ತಟುಕು ಜೋಕು, ಎಸ್.ಎಂ.ಎಸ್.ಗಳಿಗೇ ತೃಪ್ತಿಪಟ್ಟುಕೊಳ್ಳುವುದು, ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗುವ ಆಂಗಿಕ ಚೇಷ್ಟೆಗಳನ್ನು ಹಾಸ್ಯಾಭಿನಯವೆಂದು ಸ್ವೀಕರಿಸಬೇಕಾದ ಅನಿವಾರ್ಯಕ್ಕೀಡಾಗುವುದು ಮತ್ತು (ಅಪ)ಹಾಸ್ಯghostಇಗಳನ್ನು ಹಾಸ್ಯದ ಉತ್ತುಂಗ ಶಿಖರವೆಂದು ಒತ್ತಾಯಪೂರ್ವಕವೆಂಬಂತೆ ಭಾವಿಸಿ, ನೂರೊಂದನೇ ಸಲ ಕೇಳುತ್ತಿರುವ ಜೋಕಿಗೇ ನಕ್ಕುನಲಿದಾಡುವುದು, ಬಹುತೇಕ ಇವೇ ಕನ್ನಡದಲ್ಲಿಂದು ಓದುಗ/ಕೇಳುಗ/ನೋಡುಗನಿಗಿರುವ ಆಯ್ಕೆಗಳಾಗಿವೆ!
ಜೋಕು, ಶ್ಲೇಷೆ, ಅಂಗಚೇಷ್ಟೆ ಇವುಗಳನ್ನು ಮೀರಿದ ಹಾಸ್ಯವಿದೆ, ಹಾಸ್ಯವು ಕೇವಲ ತೆಳು ಪದರವಲ್ಲ, ಆಳ-ವಿಸ್ತಾರ ಹೊಂದಿರುವ ರಸಘಟ್ಟಿ, ವಿಡಂಬನೆಯೆಂಬುದು ಹಾಸ್ಯದ ಒಂದು ತೇಜೋಮಯ ಮುಖ ಎಂಬ ಸತ್ಯದ ಅರಿವಿನಿಂದಲೇ ಇಂದಿನ ಯುವ ಪೀಳಿಗೆಯನ್ನು ವಂಚಿಸುವ ಕೆಲಸವನ್ನು ನಮ್ಮ ಬಹಳಷ್ಟು ಮಾಧ್ಯಮಸಂಸ್ಥೆಗಳಿಂದು ಅರಿತೋ ಅರಿಯದೆಯೋ ಮಾಡುತ್ತಿವೆ. ಅಂಥ ಮಾಧ್ಯಮಸಂಸ್ಥೆಗಳು ಹಾಸ್ಯದ ವಿಷಯದಲ್ಲಿ ತೀರಾ ಲಘು ಧೋರಣೆ ಹೊಂದಿರುವುದಂತೂ ಸತ್ಯ. ಯುಕ್ತ ಧೋರಣೆಯ ಮಾತಿರಲಿ, ಕೆಲವು ಪತ್ರಿಕೆಗಳಿಗಂತೂ ಹಾಸ್ಯ ಸಾಹಿತ್ಯವೇ ಅಸ್ಪೃಶ್ಯ! ಕನ್ನಡದ ದೃಶ್ಯಮಾಧ್ಯಮದ ಹಾಸ್ಯಾಸ್ಪದ ಹಾಸ್ಯ ಕಾರ್ಯಕ್ರಮಗಳ ಬಗೆಗಂತೂ ಚರ್ಚಿಸದಿರುವುದೇ ಒಳ್ಳೆಯದು. ಏಕೆಂದರೆ, ಅವು ನೋಡುಗರನ್ನು ಎಷ್ಟು ಬ್ರೈನ್-ವಾಶ್ ಮಾಡಿಟ್ಟುಬಿಟ್ಟಿವೆಯೆಂದರೆ, ಅವುಗಳ ಬಗೆಗಿನ ಸಾರ್ವಜನಿಕ ಚರ್ಚೆಯು ದಿಕ್ಕು ತಪ್ಪುವ ಸಾಧ್ಯತೆಯೇ ಹೆಚ್ಚು!
ಹಾಸ್ಯಲೇಖಕನಾಗಿ ನಾಲ್ಕು ದಶಕಗಳಿಂದ ಸಾಹಿತ್ಯಕೃಷಿ ಮಾಡುತ್ತಿರುವ ನನಗೆ, ಹಾಸ್ಯದ ಬಗ್ಗೆ ಇಂದು ಬಹುತೇಕರು ಹೊಂದಿರುವ ಪರಿಕಲ್ಪನೆಯನ್ನು ಗಮನಿಸಿದಾಗ ತೀವ್ರ ನಿರಾಶೆಯಾಗುತ್ತದೆ. ಜೊತೆಗೆ, ಇಂದಿನ ಧಾವಂತದ ಜೀವನ, ಅನ್ಯಾಸಕ್ತಿ, ತತ್ಫಲವಾದದಿಢೀರ್ ಹಾಗೂ ಷಾರ್ಟ್ಹಾಸ್ಯದ ಒಲವುಇವುಗಳಿಂದಾಗಿ ಬಹುತೇಕರಲ್ಲಿ ಹಾಸ್ಯಸಾಹಿತ್ಯದ ಆಳಕ್ಕಿಳಿಯುವ, ಇಳಿದು ಅರಿತು ಅನುಭವಿಸಿ ಆನಂದಿಸುವ ಪ್ರಯತ್ನ ಮತ್ತು ಪ್ರವೃತ್ತಿಗಳೇ ಇಲ್ಲವಾಗಿರುವುದು ನನಗೆ ಬೇಸರ ಉಂಟುಮಾಡುತ್ತದೆ. ಸಲದಮೂರ್ಖರ ದಿನ ಆಸುಪಾಸಿನಲ್ಲಿ ಕೆಲ ಮಾಧ್ಯಮಸಂಸ್ಥೆಗಳ ಕೊಡುಗೆ ಗಮನಿಸಿ ನನಗೆ ಅತೀವ ಬೇಸರವಾಗಿದೆ.
ಹೀಗಿರುವಾಗ ನಾನೂ ಇದೇ ಪ್ರವಾಹದಲ್ಲಿ ಕೊಚ್ಚಿಹೋಗಬಾರದೆಂಬ ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ನಾನು ಬ್ಲಾಗ್ ಓದುಗರಾದ ತಮ್ಮಲ್ಲಿ ಮಾರ್ಚ್೨೬ರಂದುಅರಿಕೆಯೊಂದರ ಮೂಲಕ ಸೂಚ್ಯವಾಗಿ ನನ್ನ ಮನದ ನೋವನ್ನು ಅರುಹಿ, ಹಾಸ್ಯವಿಡಂಬನೆಗೆಂದೇ ಪ್ರಾರಂಭಿಸಿದ್ದ ಬ್ಲಾಗ್ ಬರವಣಿಗೆಯನ್ನು ಸ್ಥಗಿತಗೊಳಿಸಿದೆ. ಆದರೆ, ಬ್ಲಾಗ್ನಲ್ಲಿ ಅದುವರೆಗಿನ ನನ್ನ ಪ್ರತಿದಿನದ ಬರವಣಿಗೆಯನ್ನೂ ಆಯಾ ದಿನವೇ ತಪ್ಪದೇ ಓದಿ ಮುಗಿಸಿದ್ದ ಅನೇಕರು ಆ ನಂತರವೂ ಇಂದಿನವರೆಗೂ ಪ್ರತಿದಿನ ಬ್ಲಾಗ್ಗೆ ಭೇಟಿ ನೀಡುತ್ತಿದ್ದಾರೆ!
ಅವರೆಲ್ಲರ ಕ್ಷಮೆ ಕೋರುತ್ತ, ಮನ್ನಿಸಿರೆಂದು ಇತರ ಓದುಗರನ್ನೂ ಕೇಳಿಕೊಳ್ಳುತ್ತ ಗುಳಿಗೆಯಂಗಡಿಯನ್ನು ಪರ್ಮನೆಂಟಾಗಿ ಮುಚ್ಚುತ್ತಿದ್ದೇನೆ. ಕೊನೆಯ ಕೊಡುಗೆಯಾಗಿ ಜನಶೇವಕರ ಕಥೆಯೊಂದನ್ನು ಸೆಪರೇಟಾಗಿ ಕೆಳಗೆ ನೀಡಿದ್ದೇನೆ. ತೀರಾ ಲಘು ಬರಹ ಅದು.
ನಮಸ್ಕಾರ.

ರಾಜಕಾರಣಿಗಳೆಂಬ ಜನಶೇವಕರ ಕಥೆ

ಭಾರತದ ರಾಜಕಾರಣಿಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠರು. ರೂಢಿಯೊಳಗುತ್ತಮರು.
’ದಾಸನಂತಾಗುವೆನು ಧರೆಯೊಳಗೆ ನಾನು’, ಎಂಬ ದಾಸವಾಣಿಯಂತೆ ನಡೆಯುವವರು ಇವರು.
ಚುನಾವಣೆ ಎದುರಿರುವಾಗ ಇವರು ನಮ್ಮ ಮನೆಬಾಗಿಲಿಗೆ ಬಂದು ನಮ್ಮ ದಾಸಾನುದಾಸರಂತೆ ಕೈಮುಗಿದು, ಹಲ್ಲು ಕಿರಿದು, ಎಲ್ಲ ಸುಖ-ಕಷ್ಟ ವಿಚಾರಿಸಿ, ’ಇಲ್ಲಿರುವುದು ಸುಮ್ಮನೆ, ಅಲ್ಲಿ ಡೆಲ್ಲಿಯಲ್ಲಿರುವುದು ಪಾರ್ಲಿಮೆಂಟ್ ಎಂಬ ನಮ್ಮನೆ’, ಎಂದು ನುಡಿದು, ಪೆಪ್ಪರಮಿಂಟ್ ತಿಂದವರಂತೆ ಜೊಲ್ಲು ಸುರಿಸುತ್ತ ಮುಂದಿನ ಮನೆಬಾಗಿಲಿಗೆ ಬಿಜಯಂಗೈಯುವವರು.
’ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ವೋಟರ್ ಪ್ರಭುವೆ’, ಎನ್ನುವ ಇವರ ಆ ವಿನಯ, ಎನ್ನ ಸ್ವಾಮೀ, ರೊಂಬ ಅದ್ಭುತಂ!
ಮತದಾರನ ಮನೆಯೇನಾದರೂ ಒಳಗಿನಿಂದ ಬೋಲ್ಟಿಸಲ್ಪಟ್ಟಿದ್ದರೆ ಆಗ ಈ ಜನಸೇವಕರು, ’ಪೂಜಿಸಲೆಂದೇ ಹೂನಗೆ ತಂದೆ, ದರುಶನ ಕೋರಿ ನಾ ನಿಂದೆ, ತೆರೆಯೋ ಬಾಗಿಲನು’, ಎಂದು ಗಾರ್ದಭರಾಗದಲ್ಲಿ ಹಾಡಿ ಬಾಗಿಲು ತೆರೆಸಿ, ಪಾಂಪ್ಲೆಟ್ ನೀಡಿ, "ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಾವಿವತ್ತು ನಿಮ್ಮ ಕಾಲು ಹಿಡೀಲಿಕ್ಕೆ ಬಂದಿದ್ದೀವಿ, ನಮಗೇ ವೋಟ್ ಹಾಕಿ", ಎಂದು ಮುವ್ವತ್ತೆರಡೂ ಹಲ್ಲುಗಳನ್ನು (ಸದಾನಂದಗೌಡರಂತೆ) ಪ್ರದರ್ಶಿಸುತ್ತಾರೆ. ಇವರ ಈ ವಿನಯ ಅಂಥಿಂಥದೇ? ಚಾಲಾ ಗೊಪ್ಪದಿ!
’ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ’, ಎಂದು ಈ ದೈವಭಕ್ತಶಿಖಾಮಣಿಗಳು ಚುನಾವಣೆಯ ಸಂದರ್ಭದಲ್ಲಿ ಕಂಡಕಂಡ ದೇವರುದಿಂಡಿರಿಗೆಲ್ಲ ಮೊರೆಹೊಗುವ ಪರಿಯನ್ನೆಂತು ಬಣ್ಣಿಸಲಿ!
’ಕಂಡುಕಂಡು ನೀ ಎನ್ನ ಕೈಬಿಡುವರೇ ಪ್ರಭುವೆ, ಉಂಡು ಮಲಗದೆ ಅಂದು ಮತ ನೀಡು ಒಡೆಯಾ’, ಎಂದು ಮತದಾರನನ್ನು ಇವರು ಬೇಡಿಕೊಳ್ಳುವ ಪರಿಯೂ ಅನನ್ಯ!
ನಮ್ಮೀ ರಾಜಕಾರಣಿಗಳು ಅತ್ಯಂತ ಪ್ರಾಮಾಣಿಕರು. ಸತ್ಯಸಂಧರು. ಸಿದ್ಧಾಂತಬದ್ಧರು. ನಿಷ್ಪೃಹರು. ಅತಿ ವಿಧೇಯರು. ಮತ್ತು ಜಾತ್ಯತೀತರು.
ಇವರ ಚುನಾವಣಾ ಭಾಷಣಗಳೇ ನನ್ನ ಈ ಮಾತಿಗೆ ಸಾಕ್ಷಿ.
ವಿರೋಧಿಗಳ ಟೀಕೆಯೇ ತುಂಬಿರುವ ತಮ್ಮ ಭಾಷಣದಲ್ಲಿ ಇವರು, ಒಂದುವೇಳೆ ತಾವು ಆರಿಸಿಬಂದರೆ ತಮ್ಮ ಕ್ಷೇತ್ರಕ್ಕೆ ಏನೇನು ಕೆಲಸಕಾರ್ಯಗಳನ್ನು ಮಾಡಲಿದ್ದೇವೆಂಬುದನ್ನು ಎಂದಿಗೂ ತಿಳಿಸುವುದಿಲ್ಲ. ಏಕೆಂದರೆ, ಆರಿಸಿಬಂದಮೇಲೆ ಇವರು ಕ್ಷೇತ್ರಕ್ಕಾಗಿ ಯಾವ ಕೆಲಸವನ್ನೂ ಮಾಡುವವರಲ್ಲ. ಅಂದಮೇಲೆ ಇವರದು ಅತ್ಯಂತ ಪ್ರಾಮಾಣಿಕ ಭಾಷಣವಲ್ಲವೆ?
ಪ್ರತಿಯೊಂದು ಪಕ್ಷದವರೂ ತಮ್ಮ ವಿರೋಧಿಗಳ ಭ್ರಷ್ಟಾಚಾರವನ್ನೂ ಅನಾಚಾರವನ್ನೂ ಚುನಾವಣಾ ಭಾಷಣದಲ್ಲಿ ಬಣ್ಣಿಸುತ್ತಾರಷ್ಟೆ. ನಾವು ಎಲ್ಲರ ಭಾಷಣಗಳನ್ನೂ ಹಂಡ್ರೆಡ್ ಪರ್ಸೆಂಟ್ ನಂಬುತ್ತೇವೆ. ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆಂಬುದು ಇವರ ಹಾವ-ಭಾವ, ಉದ್ರೇಕ-ಉನ್ಮಾದ, ಕೋಪ-ತಾಪ ಮತ್ತು ಇವರು (ಭಾಷಣಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ) ಪ್ರದರ್ಶಿಸುವ ಕಾಗದ-ಪತ್ರ-ಪತ್ರಿಕೆಗಳು ಇವುಗಳಿಂದ ಗೊತ್ತಾಗುತ್ತದೆ.
ನಮ್ಮೀ ರಾಜಕಾರಣಿಗಳು ಸಿದ್ಧಾಂತಬದ್ಧರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸುವುದು, ಯೇನಕೇನ ಪ್ರಕಾರೇಣ ಗೆಲ್ಲುವುದು ಮತ್ತು ಗೆದ್ದಮೇಲೆ ಮಂತ್ರಿಗಿರಿ/ನಿಗಮ/ಮಂಡಳಿ ಯಾವುದಾದರೊಂದು ಕುರ್ಚಿಯಲ್ಲಿ ರಾರಾಜಿಸುವುದು ಈ ತ್ರಿವಿಧ (ಸ್ವಯಂ)ದಾಸೋಹವೇ ತಮ್ಮ ರಾಜಕೀಯ ಜೀವನದ ಪರಮಗುರಿಯೆಂಬುದು ಇವರ ಸಿದ್ಧಾಂತ. ಈ ಸಿದ್ಧಾಂತಪಾಲನೆಗಾಗಿಯೇ ಇವರು ದಿನಕ್ಕೆರಡುಬಾರಿ ಪಕ್ಷಾಂತರ ಮಾಡುವುದು. ಸಿದ್ಧಾಂತಪಾಲನೆಗಾಗಿ ಎಂಥ ಕಡುಕಷ್ಟ, ಪಾಪ!
ಇನ್ನು, ಇವರ ನಿಷ್ಪೃಹ ಮನೋಭಾವನ್ನು ನಾನೆಂತು ಬಣ್ಣಿಸಲಿ! ಅದೆಷ್ಟು ನಿಷ್ಪೃಹರಾಗಿ, ಅರ್ಥಾತ್ ನಿಃಸ್ವಾರ್ಥದಿಂದ ಇವರು ಜನಸೇವೆ ಮಾಡುತ್ತಾರೆಂದರೆ, ಯಾವ ವಿಶೇಷ ಆಸ್ತಿಪಾಸ್ತಿಗಳನ್ನೂ ಇವರು ಗಳಿಸಿರುವುದಿಲ್ಲ. ಇವರ ಪೈಕಿ ಎಷ್ಟೋ ಮಂದಿಗೆ ಮನೆಯೂ ಇರುವುದಿಲ್ಲ, ವಾಹನವೂ ಇರುವುದಿಲ್ಲ! ಏನೋ, ಇವರ ಹೆಂಡತಿ ಟೈಲರಿಂಗ್ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ. ಗಂಡಂದಿರನ್ನು ಈ ಹೆಂಡತಿಯರೇ ಸಾಕುತ್ತಾರೆ.
ಇನ್ನು, ಈ ಜನಸೇವಕರ ವಿಧೇಯತೆಯೆಂದರೆ ಅಂಥಿಂಥದೇ? ಹೈಕಮಾಂಡು ತನ್ನ ಕಾಲಲ್ಲಿ ತೋರಿಸಿದ್ದನ್ನು ಇವರು ’ಕೈ’ಯಲ್ಲಿ ಎತ್ತಿಕೊಂಡು ತಲೆಯಮೇಲೆ ಇಟ್ಟುಕೊಳ್ಳುತ್ತಾರೆ! ಇಂಥ ವಿಧೇಯತೆಯು ವಿಶ್ವದ ಇನ್ನಾವ ರಾಷ್ಟ್ರದ ರಾಜಕಾರಣಿಗಳಲ್ಲೂ ಇಲ್ಲ ಬಿಡಿ.
ವಯಸ್ಸು ೭೬ರ ದೇವೇಗೌಡರಾಗಿರಲಿ, ೮೨ರ ಅಡ್ವಾಣಿಯಾಗಿರಲಿ, ೮೩ರ ಬಾಳ್ ಠಾಕ್ರೆ ಆಗಿರಲಿ, ೮೫ರ ಕರುಣಾನಿಧಿ ಆಗಿರಲಿ, ೯೫ರ ಜ್ಯೋತಿ ಬಸು ಆಗಿರಲಿ, ಸೋನಿಯಾ, ರಾಹುಲ್,....ಕೊನೆಗೆ ಎಂಟು ವರ್ಷದ ರೈಹನ್ ವಡ್ರಾ ಅಥವಾ ಆರು ವರ್ಷದ ಮಿರಯಾ ವಡ್ರಾನೇ ಆಗಿರಲಿ, ಹೈಕಮಾಂಡ್ ಎಂದರೆ ಹೈಯೇ. ಪಕ್ಷದ ಎಲ್ಲರೂ ಆ ಹೈಕಮಾಂಡ್‌ನಡಿ ಲೋ! ವೆರಿ ಲೋ!! ವೆರಿ ವೆರಿ ಲೋ!!! ಎಂಥ ವಿಧೇಯತೆ!
ನಮ್ಮೀ ರಾಜಕಾರಣಿಗಳ ಜಾತ್ಯತೀತ ಮನೋಭಾವವಂತೂ ಇಡೀ ವಿಶ್ವಕ್ಕೇ ಮಾದರಿ! ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಎಂಬ ಭೇದಭಾವವಿಲ್ಲದೆ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಮತೀಯರ ದೇಗುಲ-ಪ್ರಾರ್ಥನಾಸ್ಥಳಗಳಿಗೂ (ಆಯಾ ಉಡುಪುಗಳಲ್ಲಿ) ಭೇಟಿಯಿತ್ತು, ಕೈಮುಗಿದು-ಅಡ್ಡಬಿದ್ದು ಕೃತಾರ್ಥರಾಗುವ ಇವರ ಮತಾತೀತ ಭಕ್ತಿಭಾವವಾಗಲೀ, ಎಲ್ಲ ಜಾತಿ-ಮತಗಳವರ ಮನೆಬಾಗಿಲಿಗೂ ಹೋಗಿ ಹಲ್ಕಿರಿದು ಮತ ಅಂಗಲಾಚುವ ಇವರ ಜಾತ್ಯತೀತ ಮನೋಭಾವವಾಗಲೀ ವರ್ಣನಾತೀತ!
’ಹನುಮನ ಮತವೇ ಹರಿಮತವೋ. ಹರಿಯ ಮತವೆ ಹನುಮನ ಮತವೊ’, ಎಂಬ ದಾಸವಾಣಿಯೊಲ್ ಇವರು, ’ಪ್ರಜೆಗಳ ಮತವೇ ನಮ್ಮ್ ಹಿತವೋ. ನಮ್ಮ ಮತದಾಟ ಪ್ಲಾನ್‌ಯುತವೊ’, ಎಂದು ಮಸಾಲ್ದೋಸವಾಣಿಯಂ ಹರಿಬಿಡುವರು.
ಚುನಾವಣೆಯಾದಮೇಲೆ, ’ನೀನ್ಯಾಕೋ ನಿನ್ನ ಹಂಗ್ಯಾಕೋ’, ಅನ್ನುವ (ಪುರಂದರದಾಸಸಮಾನ) ಧುರಂಧರರಿವರು!
ಇವರಲ್ಲಿ ಕೆಲವರು ’ಧರ್ಮವೆ ಜಯವೆಂಬ ದಿವ್ಯಮಂತ್ರ’ವನ್ನು ಜಪಿಸಿದರೆ, ಉಳಿದವರು ’ಜಯವೆ ಧರ್ಮವೆಂಬ ದಿವ್ಯಮಂತ್ರ’ವನ್ನು ಜಪಿಸುವವರು.
’ಮಣ್ಣಿಂದ ಕಾಯ ಮಣ್ಣಿಂದ’, ಎನ್ನುತ್ತ, ಮಣ್ಣನ್ನು ಗಳಿಸಲೆಂದೇ ಎಲೆಕ್ಷನ್ನಿಗೆ ನಿಲ್ಲುವ ’ಮಣ್ಣಿನ ಮಕ್ಕಳು’ ಇವರು.
’ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಲ್ಲ’, ಎಂಬ ದಾಸವಾಣಿಯ ಮರ್ಮವನ್ನರಿತೇ ಇವರು ಆದಷ್ಟು ಬೇಗನೆ ’ಅಷ್ಟೈಶ್ವರ್ಯಭಾಗ್ಯ’ಶಾಲಿಗಳಾಗಿ ಆ ಭಾಗ್ಯವನ್ನು ಸ್ಥಿರವಾಗಿ ಸ್ವಿಸ್ ಬ್ಯಾಂಕಿನಲ್ಲಿಡಲು ಹೊರಟವರು.
’ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ’, ಎಂಬಂತಾಗಬಾರದೆಂದು ಇವರು ನರ-ಹರಿ ಕೊಡುವುದನ್ನೆಲ್ಲ ಉಣ್ಣುತ್ತ ಕೂರುವವರು.
’ಊಟಕ್ಕೆ ಬಂದೆವು ನಾವು, ನಿಮ್ಮ ಆಟಪಾಠವ ಬಿಟ್ಟು ನಮಗೆ ನೀಡ್ರಯ್ಯಾ’, ಎಂದು ಕೇಳಿ ನೀಡಿಸಿಕೊಂಡು ಉಣ್ಣುವವರು.
ಇಂಥ ಪ್ರಾಮಾಣಿಕ, ಸತ್ಯಸಂಧ, ಸಿದ್ಧಾಂತಬದ್ಧ, ನಿಷ್ಪೃಹ, ದೈವಭಕ್ತ, ಅತಿ ವಿಧೇಯ ಮತ್ತು ಜಾತ್ಯತೀತ ರಾಜಕಾರಣಿಗಳನ್ನು ಹೊಂದಿರುವ ಭಾರತೀಯರಾದ ನಾವೇ ಧನ್ಯರು!
ಇಂಥ ಶ್ರೇಷ್ಠರೂ ರೂಢಿಯೊಳಗುತ್ತಮರೂ ಆದ ರಾಜಕಾರಣಿಗಳ ಬಗ್ಗೆ, ಇವರನ್ನು ಆರಿಸಿ ಕಳಿಸುವ ಮತದಾರ ಬಾಂಧವರ ಬಗ್ಗೆ ಮತ್ತು ಇವರ ಅದ್ಭುತ ಆಳ್ವಿಕೆಗೆ ಒಳಪಟ್ಟಿರುವ ಈ ನಾಡಿನ ಬಗ್ಗೆ ಬರೆಯಲು ಇನ್ನು ನನ್ನಲ್ಲಿ ಪದಗಳೇ ಇಲ್ಲ!
ಲೇಖನಸನ್ಯಾಸ ಸ್ವೀಕರಿಸಿ ಕಾಡಿಗೆ ಹೋಗಿ ಕಂದಮೂಲ ತಿಂದುಕೊಂಡಿರುವುದೇ ನನಗಿನ್ನು ಸೂಕ್ತವೆನ್ನಿಸುತ್ತದೆ.
ಅಂತೆಯೇ ಮಾಡುತ್ತೇನೆ.