ಗುರುವಾರ, ಏಪ್ರಿಲ್ 30, 2009

’ಕಾರ್ಮಿಕ ದಿನ’ ಎಂಬ ಅಸಂಬದ್ಧ ಆಚರಣೆ!

ಮೇ ೧, ಕಾರ್ಮಿಕ ದಿನ.

ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ!

ನಮ್ಮ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ’ಕಾರ್ಮಿಕ ದಿನ’ದಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹುಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ! ಅದೇವೇಳೆ, ಸಂಘಟಿತ ವಲಯದ ಬಹುತೇಕ ಕಾರ್ಮಿಕರು ತಮ್ಮ ಎಂದೂ ಮುಗಿಯದ ಬೇಡಿಕೆಗಳನ್ನು ಪ್ರತಿಪಾದಿಸುತ್ತ ’ಕಾರ್ಮಿಕ ದಿನ’ವನ್ನು ’ಅಧಿಕೃತ ಕೆಲಸಗೇಡಿ ದಿನ’ವನ್ನಾಗಿ ಆಚರಿಸುತ್ತಿದ್ದಾರೆ!

ಕೇಂದ್ರ ಸರ್ಕಾರದ ಆಣತಿ ಮೇರೆಗೆ ನಮ್ಮ ಉದ್ಯೋಗದಾತರು ನಾಯಿಗಳಿಗೆ ಬಿಸ್ಕತ್ ಬಿಸಾಕುವಂತೆ ಮೇ ಒಂದನೇ ದಿನವನ್ನು ಸಂಘಟಿತ ಕಾರ್ಮಿಕರಿಗೆ ಬಿಸಾಕುತ್ತಾರೆ. ಕಾರ್ಮಿಕರು ರಜಾ ಎಂಬ ಆ ಬಿಸ್ಕತ್ ತಿಂದು, ಒಂದಷ್ಟು ಘೋಷಣೆ ಕೂಗಿ ಸುಮ್ಮನಾಗುತ್ತಾರೆ. ’ಕಾರ್ಮಿಕ ದಿನ’ವೆಂಬುದು ನಮ್ಮೀ ದೇಶದಲ್ಲಿ ಇದಕ್ಕಿಂತ ಹೆಚ್ಚೇನನ್ನೂ ಸಾಧಿಸಿಲ್ಲ.

ತೃಪ್ತಿಯ ಕೊರತೆ
-------------
’ನನಗೆ ಬರುತ್ತಿರುವ ಸಂಬಳ ಮತ್ತು ಭತ್ಯೆಗಳು ತೃಪ್ತಿಕರವಾಗಿವೆ; ಸೇವಾ ನಿಯಮಗಳೂ ಸೌಲಭ್ಯಗಳೂ ಉತ್ತಮವಾಗಿವೆ; ನಾನು ಅದೃಷ್ಟವಂತ’, ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಕಾರ್ಮಿಕರು ನಮ್ಮಲ್ಲಿ ಎಷ್ಟು ಮಂದಿ ಇದ್ದಾರೆ? ಅದೇ ವೇಳೆ, ’ನನ್ನ ಕೆಲಸಗಾರರೆಲ್ಲ ಚೆನ್ನಾಗಿ ದುಡಿಯುತ್ತಿದ್ದಾರೆ, ಹಾಗಾಗಿಯೇ ನಾನು ಪ್ರವರ್ಧನ ಹೊಂದಿದ್ದೇನೆ, ಅವರು ಇನ್ನೂ ಹೆಚ್ಚಿನ ಸಂಬಳ, ಸೌಲಭ್ಯಗಳಿಗೆ ಅರ್ಹರು’, ಎಂದು ಹೇಳುವ ಒಬ್ಬನಾದರೂ ಮಾಲೀಕ ನಮ್ಮಲ್ಲಿದ್ದಾನೆಯೇ? ಎಷ್ಟು ಕೊಟ್ಟರೂ ಸಾಲದೆನ್ನುವ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಸದಾ ಅತೃಪ್ತಿ ಹೊಂದಿರುವ ಸಂಘಟಿತ ಕಾರ್ಮಿಕರು ಒಂದು ಕಡೆ, ದುಡಿದು ಅರೆಜೀವವಾದರೂ ಎರಡು ಹೊತ್ತಿನ ಕೂಳು ಕಾಣದ ಅಸಂಘಟಿತ ಕಾರ್ಮಿಕರು ಇನ್ನೊಂದು ಕಡೆ, ಮತ್ತು ಈ ಎರಡೂ ಬಗೆಯ ಕಾರ್-ಮಿಕಗಳನ್ನು ತಮ್ಮ ಬಲೆಗೆ ಕೆಡವಿಕೊಂಡು ಇವರ ಹೆಸರಿನಲ್ಲಿ ಕಾಸು, ಕುರ್ಚಿ, ಕೀರ್ತಿ ಇತ್ಯಾದಿ ’ಭೋಗ’ಗಳನ್ನು ತಮ್ಮದಾಗಿಸಿಕೊಳ್ಳುವ-’ಕರ್ಮಯೋಗಿ’ ಮುಖವಾಡದ-ಕಾರ್ಮಿಕ ಧುರೀಣರು ಮತ್ತೊಂದು ಕಡೆ; ಇಂಥ ವಿಪರ್ಯಾಸ-ವೈಪರೀತ್ಯಗಳ ನಡುವೆ ಅದ್ಯಾವ ಕರ್ಮಕ್ಕೋ ನಾವು ’ಕಾರ್ಮಿಕ ದಿನ’ವನ್ನು ಆಚರಿಸುತ್ತಿದ್ದೇವೆ! ’ಈ ದಿನವು ಕಾರ್ಮಿಕರಿಗೆ ಗೌರವದ ಸಂಕೇತ’, ಎಂದು ಓಳು ಬಿಡುತ್ತಿದ್ದೇವೆ (ಕಪಟವಾಡುತ್ತಿದ್ದೇವೆ)!

ಕಾರ್ಮಿಕ ದಿನಾಚರಣೆಯ ಮೂಲ
--------------------
ಇಷ್ಟಕ್ಕೂ, ನಮ್ಮ ಈ ’ಕಾರ್ಮಿಕ ದಿನ’ವೆಂಬುದು ವಿದೇಶೀ ಬಳುವಳಿ.

೧೮೫೬ರ ಏಪ್ರಿಲ್ ೨೧ರಂದು ಆಸ್ಟ್ರೇಲಿಯಾದ ಮೆಲ್ಬರ್ನ್ ಪ್ರದೇಶದಲ್ಲಿ ಕಲ್ಲುಕುಟಿಗರು ಮತ್ತು ಕಟ್ಟಡ ಕಾರ್ಮಿಕರು ದಿನಂಪ್ರತಿ ಎಂಟು ಗಂಟೆಗಳ ದುಡಿಮೆ ಮಿತಿಗೆ ಆಗ್ರಹಿಸಿ ಮುಷ್ಕರ ನಡೆಸಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದು ಮುಂದೆ ವಿವಿಧೆಡೆಗಳಲ್ಲಿ ’ಮೇ ದಿನ’ದ ಆಚರಣೆಗೆ ಪರೋಕ್ಷವಾಗಿ ಸ್ಫೂರ್ತಿಯಾಯಿತು.

ಎಂಟು ಗಂಟೆಗಳ ದುಡಿಮೆ ಮಿತಿಗಾಗಿ ೧೮೮೬ರ ಮೇ ಒಂದರಂದು ಅಮೆರಿಕದ ಹಲವೆಡೆ ಕಾರ್ಮಿಕರ ರ್‍ಯಾಲಿಗಳು ನಡೆದವು. ಮೇ ಮೂರರಂದು ಚಿಕಾಗೋದಲ್ಲಿ ಬದಲಿ ಕೆಲಸಗಾರರು ಕೆಲಸಕ್ಕೆ ಹಾಜರಾಗಲೆತ್ನಿಸಿದಾಗ ಘರ್ಷಣೆ ಸಂಭವಿಸಿ ಪೋಲೀಸರ ಗುಂಡಿಗೆ ನಾಲ್ವರು ಕಾರ್ಮಿಕರು ಬಲಿಯಾದರು. ಮೇ ನಾಲ್ಕರಂದು ಅಲ್ಲಿನ ಹೇ ಮಾರ್ಕೆಟ್ ಚೌಕದಲ್ಲಿ ಕಾರ್ಮಿಕರ ರ್‍ಯಾಲಿ ನಡೆದಿದ್ದಾಗ ಬಾಂಬ್ ಎಸೆತಕ್ಕೆ ಓರ್ವ ಪೋಲೀಸ್ ಸಾವನ್ನಪ್ಪಿದನಲ್ಲದೆ ಅನಂತರ ನಡೆದ ಗುಂಡಿನ ಕಾಳಗದಲ್ಲಿ ಏಳು ಮಂದಿ ಪೋಲೀಸರು ಮತ್ತು ನಾಲ್ವರು ಕಾರ್ಮಿಕರು ಪ್ರಾಣ ಕಳೆದುಕೊಂಡರು. ಮುಂದಿನ ದಿನಗಳಲ್ಲಿ ಈ ಘಟನೆಯ ವಿಚಾರಣೆ ನಡೆದು ಏಳು ಮಂದಿ ದಂಗೆಕೋರರನ್ನು ಮರಣದಂಡನೆಗೆ ಗುರಿಪಡಿಸಲಾಯಿತು.

೧೮೯೦ರ ಮೇ ಒಂದರಂದು ಈ ಕಾರ್ಮಿಕ ಪ್ರತಿಭಟನೆಯು ಮರುಜೀವ ಪಡೆದಾಗ ಬೇರೆ ಕೆಲ ದೇಶಗಳ ಕಾರ್ಮಿಕ ಸಂಘಟನೆಗಳಿಗೂ ಇದನ್ನು ವಿಸ್ತರಿಸಲಾಯಿತು. ಹೀಗೆ ಇದಕ್ಕೆ ಅಂತರ ರಾಷ್ಟ್ರೀಯ ಕಾರ್ಮಿಕ ದಿನದ ರೂಪು ಕೊಡಲಾಯಿತು. ಇದರ ಹಿಂದೆ, ಹೇ ಮಾರ್ಕೆಟ್ ’ಹುತಾತ್ಮ’ರಿಗೆ ಗೌರವ ಸೂಚಿಸುವ ಉದ್ದೇಶ ಅಡಕವಾಗಿತ್ತು! ಇಂಥದೊಂದು ಹುನ್ನಾರಕ್ಕೆ ಭಾರತದ ಕಾರ್ಮಿಕ ಬಲಿಯಾಗಬೇಕೇ? ಹಾಗೊಂದು ವೇಳೆ ’ಕಾರ್ಮಿಕ ದಿನ’ ಆಚರಿಸಲೇಬೇಕೆಂದರೆ, ನಮ್ಮಲ್ಲಿ ಕಾರ್ಮಿಕ ಕ್ರಾಂತಿಗೇನು ಕೊರತೆಯೇ? ಏಪ್ರಿಲ್-ಮೇ ೧೮೬೨ರ ಮತ್ತು ೧೯೪೦-೪೬ರ ರೈಲ್ವೆ ಚಳವಳಿಗಳು, ೧೯೩೭ರಲ್ಲಿ ಜವಳಿ ಕಾರ್ಮಿಕರು ನಡೆಸಿದ ಐತಿಹಾಸಿಕ ಘೇರಾವೋ, ೧೯೪೦ರ ದಶಕದ ಅವರ ಚಳವಳಿಗಳು, ಫೆಬ್ರವರಿ ೧೯೪೬ರ ನೌಕಾ ದಂಗೆ, ೧೯೫೫ರ ಬಂದರು ಕಾರ್ಮಿಕರ ಚಳವಳಿ, ೧೮೮೧, ೯೦, ೯೫, ೯೬ರ ಸೆಣಬು ಕಾರ್ಖಾನೆ ಕಾರ್ಮಿಕರ ಮುಷ್ಕರಗಳು, ನವೆಂಬರ್ ೧೮, ೧೯೦೭ರ ಅಸನ್‌ಸೋಲ್ ರೈಲ್ವೆ ನೌಕರರ ಮುಷ್ಕರ, ಬ್ರಿಟಿಷ್ ಆಡಳಿತಗಾರರ ವಿರುದ್ಧ ಸರ್ಕಾರಿ ಮುದ್ರಣಾಲಯದ ಕೆಲಸಗಾರರು ೧೯೦೫ರಲ್ಲಿ ಒಂದು ತಿಂಗಳ ಕಾಲ ನಡೆಸಿ ಯಶಸ್ಸು ಸಾಧಿಸಿದ ಆ ಐತಿಹಾಸಿಕ ಮುಷ್ಕರ, ಹೀಗೆ ಅದೆಷ್ಟು ಉಲ್ಲೇಖಾರ್ಹ ಕಾರ್ಮಿಕ ಚಳವಳಿಗಳು ನಮ್ಮ ದೇಶದಲ್ಲಿ ಘಟಿಸಿಲ್ಲ? ಇವನ್ನೆಲ್ಲ ಬದಿಗೆ ತಳ್ಳಿ, ಆ ಅಮೆರಿಕನ್ನರನ್ನು ನೆನೆಯುವ ದಿನವನ್ನೇ ನಾವು ’ಕಾರ್ಮಿಕ ದಿನ’ವೆಂದು ಸ್ವೀಕರಿಸಿದ್ದೇವಲ್ಲಾ!

ಚೋದ್ಯವೆಂದರೆ, ಸ್ವಯಂ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳೇ ’ಕಾರ್ಮಿಕ ದಿನ’ವನ್ನು ಮೇ ಒಂದರಂದು ಆಚರಿಸದೆ ಬೇರೆ ದಿನಗಳಂದು ಆಚರಿಸುತ್ತವೆ! ಮೇ ಒಂದರ ಆಚರಣೆಗೆ ಇರುವ ’ಕಮ್ಯೂನಿಸ್ಟ್’ ಹಣೆಪಟ್ಟಿ ಆ ದೇಶಗಳಿಗೆ ಬೇಡವಂತೆ!

ಕಾರ್ಮಿಕ ದಿನವನ್ನು ನಮಗೆ ಬಳುವಳಿ ನೀಡಿದ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳೇ ಕಾರ್ಮಿಕ ದಿನವನ್ನು ಮೇ ಒಂದರಂದು ಆಚರಿಸುವುದಿಲ್ಲ; ಎಲ್ಲ ಐರೋಪ್ಯ ರಾಷ್ಟ್ರಗಳೂ ’ಕಾರ್ಮಿಕ ದಿನ’ವನ್ನು ತಮಗೆ ಬೇಕಾದಂತೆ ಅರ್ಥೈಸಿ, ತಮಗೆ ಬೇಕಾದ ದಿನ ಆಚರಿಸುತ್ತವೆ; ಆದರೆ ಭಾರತದಂಥ ಅಭಿವೃದ್ಧಿಶೀಲ ದೇಶ ಮೊದಲ್ಗೊಂಡು ’ಮೂರನೇ ವಿಶ್ವ’ದ ರಾಷ್ಟ್ರಗಳೆಲ್ಲ ಅಮೆರಿಕ-ಆಸ್ಟ್ರೇಲಿಯಾಗಳಲ್ಲಿ ಘಟಿಸಿದ ಎರಡು ವಿದ್ಯಮಾನಗಳನ್ನು ಪ್ರಸಾದವೆಂದು ಸ್ವೀಕರಿಸಿ ಸಂಬಂಧಿತ ದಿನವಾದ ಮೇ ಒಂದರಂದು ’ಕಾರ್ಮಿಕ ದಿನ’ವನ್ನು ಆಚರಿಸಬೇಕೆಂದು ಈ ಐರೋಪ್ಯ ರಾಷ್ಟ್ರಗಳು ಬಯಸುತ್ತವೆ! ಅದರಂತೆ ಭಾರತದಲ್ಲಿ ನಾವು ಆಚರಿಸುತ್ತಿದ್ದೇವೆ!

ಭಾರತದಲ್ಲಿ ಮೊಟ್ಟಮೊದಲ ’ಕಾರ್ಮಿಕ ದಿನ’ (ಮೇ ಡೇ) ನಡೆದದ್ದು ಮದ್ರಾಸ್(ಚೆನ್ನೈ)ನಲ್ಲಿ. ’ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್’ ಸಂಘಟನೆಯು ತನ್ನ ಧುರೀಣ ಸಿಂಗಾರವೇಲು ಚೆಟ್ಟಿಯಾರ್ ನೇತೃತ್ವದಲ್ಲಿ ೧೯೨೩ರ ಮೇ ಒಂದರಂದು ಮದ್ರಾಸ್‌ನ ಎರಡು ಬೀಚ್‌ಗಳಲ್ಲಿ ಸಭೆಗಳನ್ನು ಸಂಘಟಿಸಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಅಲ್ಲಿ ಕೆಂಪು ಧ್ವಜವನ್ನು ಬಳಸಲಾಯಿತು. ಇದೇ ತಮಿಳುನಾಡಿನಲ್ಲೇ ಜಯಲಲಿತಾ ೨೦೦೩ರಲ್ಲಿ ಮುಷ್ಕರ ನಿರತ ೧೭೬೦೦೦ ಸರ್ಕಾರಿ ನೌಕರರು ಹಾಗೂ ಶಿಕ್ಷಕರನ್ನು ವಜಾ ಮಾಡಿದ್ದು! (ಆಮೇಲೆ ಅವರನ್ನು ಕೆಲಸಕ್ಕೆ ವಾಪಸ್ ಸೇರಿಸಿಕೊಳ್ಳಲಾಯಿತೆನ್ನಿ.)


ಮೂಲಭೂತ ಪ್ರಶ್ನೆ
-------------
ಮೂಲಭೂತ ಪ್ರಶ್ನೆಯೆಂದರೆ, ’ಕಾರ್ಮಿಕ-ಮಾಲೀಕ ಸಂಬಂಧವು ಉಭಯರಿಗೂ ತೃಪ್ತಿದಾಯಕವಾಗಿಲ್ಲದಿರುವಾಗ ಕಾರ್ಮಿಕ ದಿನಾಚರಣೆಗೆ ಏನು ಅರ್ಥ?’ ನಮ್ಮ ದೇಶದಲ್ಲಿಂದು ನಾವು ಕಾಣುತ್ತಿರುವುದೇನನ್ನು? ಸದಾ ಅತೃಪ್ತರಾಗಿರುವ ಕಾರ್ಮಿಕರು, ಅವರ ಅತೃಪ್ತಿಗೆ ಗಾಳಿ ಹಾಕುತ್ತ ಅವರನ್ನು ಮುಷ್ಕರಕ್ಕೆ ಎಳೆಯುವ ಕಾರ್ಮಿಕ ಧುರೀಣರು, ಧುರೀಣರ ಕರೆಗಳಿಗೆ ಕುರಿಗಳಂತೆ ಕೊರಳು ಕೊಡುವ ಅದೇ ಕಾರ್ಮಿಕರು, ಮಾಲೀಕರೊಡನೆ ಒಳ ಒಪ್ಪಂದ ಮಾಡಿಕೊಳ್ಳುವ, ಇಲ್ಲವೇ, ಕಾರ್ಮಿಕರನ್ನು ತಮ್ಮ ಏಣಿಗೆ ಮೆಟ್ಟಿಲಾಗಿ ಬಳಸಿಕೊಳ್ಳುವ ಅದೇ ಧುರೀಣರು, ಮತ್ತು, ನೌಕರರನ್ನು ಸದಾ ಅತೃಪ್ತಿಯಲ್ಲಿಡುವುದು ತಮ್ಮ ಆಜನ್ಮಸಿದ್ಧ ಹಕ್ಕು ಎಂಬಂತಾಡುವ ಮಾಲೀಕರು, ಈ ವಿಷ ವರ್ತುಲವನ್ನಲ್ಲವೆ ನಾವಿಂದು ಈ ದೇಶದಲ್ಲಿ ಕಾಣುತ್ತಿರುವುದು? ನಾವಿಂದು ಕಾಣುತ್ತಿರುವುದು ಅಸಂಘಟಿತ ಕಾರ್ಮಿಕರ ಶೋಷಣೆಯನ್ನಲ್ಲವೆ? ಕಾರ್ಮಿಕರ ಅವ್ಯಾಹತ ಮುಷ್ಕರಗಳನ್ನಲ್ಲವೆ? ಪ್ರತಿ ದಿನವೂ ಪ್ರತಿ ಊರಿನಲ್ಲಿಯೂ ಪ್ರತಿಭಟನಾ ಮೆರವಣಿಗೆಯನ್ನಲ್ಲವೆ? ಕಾರ್ಮಿಕ ಇಲಾಖೆಯ ಕಳ್ಳಾಟಿಕೆ ಮತ್ತು ರಾಜಕಾರಣಿಗಳ ಸುಳ್ಳಾಡುವಿಕೆಗಳನ್ನಲ್ಲವೆ?

ಅನೂಚಾನವೆಂಬಂತೆ ಸಾಗಿಬಂದಿರುವ ಇಂಥ ವಿಷಮ ಪರಿಸ್ಥಿತಿಯಲ್ಲಿ ನಾವು ವರ್ಷದಲ್ಲೊಂದು ದಿನ ಕಾರ್ಮಿಕರಿಗೆ ಅವರ ಹೆಸರಿನಲ್ಲಿ ರಜೆ ನೀಡಿಬಿಟ್ಟರೆ ಏನು ಸಾಧಿಸಿದಂತಾಯಿತು? ಇದುವರೆಗೆ ಸಾಧಿಸಿದ್ದಾದರೂ ಏನು? ಹೀಗಿರುವಾಗ ನಾವಿಂದು ಆಚರಿಸುತ್ತಿರುವ ’ಕಾರ್ಮಿಕ ದಿನ’ವು ಅಸಂಬದ್ಧವೆಂದು ಅನಿಸುವುದಿಲ್ಲವೆ?

ನಮ್ಮೀ ದೇಶದಲ್ಲಿ ’ಕಾರ್ಮಿಕ ದಿನ’ದ ಅರಿವೂ ಇಲ್ಲದೆ ಲಕ್ಷಾಂತರ ಹೋಟೆಲ್ ನೌಕರರು ಸುರಕ್ಷಿತವಲ್ಲದ ವಾತಾವರಣದಲ್ಲಿ ಅಹರ್ನಿಶಿ ದುಡಿದು ಹಣ್ಣಾಗುತ್ತಿರುವಾಗ, ಕೋಟ್ಯಂತರ ಗಾರ್ಮೆಂಟ್ ನೌಕರರು, ಕಟ್ಟಡ ಕಾರ್ಮಿಕರು, ಭಟ್ಟಿಗಳ ಕಾರ್ಮಿಕರು, ಆಟೋ ಗ್ಯಾರೇಜ್ ಮಕ್ಕಳು, ಹೀಗೆ ನಾನಾ ವಲಯಗಳ ಅಸಂಘಟಿತ ಕಾರ್ಮಿಕರು ಅನಾರೋಗ್ಯಕರ ಮತ್ತು ಅಭದ್ರ ವಾತಾವರಣದಲ್ಲಿ ದಿನವಿಡೀ ದುಡಿದೂ ಅರೆಹೊಟ್ಟೆ ಉಣ್ಣುವಾಗ ತಿಂಗಳಿಗೆ ಹತ್ತಾರು ಸಾವಿರದಿಂದ ಲಕ್ಷದವರೆಗೆ ಸಂಬಳ ಎಣಿಸುವ (ಗಿಂಬಳವಿದ್ದಲ್ಲಿ ಅದು ಬೇರೆ!) ಸಂಘಟಿತ ವಲಯದ ನೌಕರರು ’ಕಾರ್ಮಿಕ ದಿನ’ವೆಂದು ರಜಾದ ಮಜಾ ಅನುಭವಿಸುವುದು ಎಷ್ಟು ಸೂಕ್ತ? ಪುಸ್ತಕದ ಬದನೇಕಾಯಿಯಾಗಿರುವ ಈ ದೇಶದ ಕಾರ್ಮಿಕ ನಿಯಮಗಳು ಏನೇ ಹೇಳಲಿ, ಕಮ್ಯೂನಿಸ್ಟರ ಆದರ್ಶಗಳು ಏನೇ ಇರಲಿ, ಕೇವಲ ಸಂಘಟಿತ ಕಾರ್ಮಿಕರು ಮಾತ್ರ ಫಲಾನುಭವಿಗಳಾಗಿರುವ ನಮ್ಮ ಕಾರ್ಮಿಕ (ಅ)ವ್ಯವಸ್ಥೆಯಲ್ಲಿ ’ಕಾರ್ಮಿಕ ದಿನ’ದ ಆಚರಣೆಯು ಸಂಘಟಿತ ಕಾರ್ಮಿಕರ ’ಬಲ’ದ ಸಂಕೇತವಾಗಿ ಬಿಂಬಿತವಾಗುವುದರಿಂದಾಗಿ ಪರೋಕ್ಷವಾಗಿ ಅಸಂಘಟಿತ ಕಾರ್ಮಿಕರಿಗೆ ಅನ್ಯಾಯವೆಸಗಿದಂತಾಗುವುದಲ್ಲವೆ? ಇಷ್ಟಕ್ಕೂ, ’ಕಾರ್ಮಿಕ ದಿನ’ವೆಂಬುದು ನಮ್ಮೀ ದೇಶದಲ್ಲಿ ’ಕಮ್ಯೂನಿಸ್ಟ್ ಸಿದ್ಧಾಂತದ ಪ್ರತಿಪಾದನೆಯ ದಿನ’ದ ರೂಪು ಪಡೆದಿರುವುದಾಗಲೀ ಕಮ್ಯೂನಿಸ್ಟರ ರಾಜಕಾರಣದ ಸಾಧನವಾಗಿ ಬಳಕೆಯಾಗುತ್ತಿರುವುದಾಗಲೀ ಸರಿಯೇ? ಚೀನಾದಂಥ ಚೀನಾವೇ ಬಂಡವಾಳಶಾಹಿ ಮಾರ್ಗ ಹಿಡಿದು, ’ಕಾರ್ಮಿಕ ದಿನ’ವನ್ನು ಸಂಪ್ರದಾಯಮಾತ್ರವೆಂಬಂತೆ ಆಚರಿಸುತ್ತಿರುವಾಗ ಭಾರತಕ್ಕೆ ಈ ದಿನದ ಬಗ್ಗೆ ಅದೆಂಥ ಹುಮ್ಮಸ್ಸು!

ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಸಂಘಟಿತ ಕಾರ್ಮಿಕರ ಮೈಮುರಿ ದುಡಿಮೆ. (ಮಾತೆತ್ತಿದರೆ ನಾವು ಟೀಕಿಸುವ ಸಾಫ್ಟ್‌ವೇರ್ ನೌಕರರು ಮೈಮುರಿ ದುಡಿಮೆಗೆ ಉತ್ತಮ ಉದಾಹರಣೆಯಾಗಬಲ್ಲರು.) ಅದೇವೇಳೆ, ಅಸಂಘಟಿತ ಕಾರ್ಮಿಕರಿಗೆ ಅಗತ್ಯವಾಗಿರುವುದು ಆರೋಗ್ಯಕರ, ಸುರಕ್ಷಿತ ಹಾಗೂ ಶೋಷಣೆಮುಕ್ತ ಕೆಲಸದ ವಾತಾವರಣ, ನ್ಯಾಯಬದ್ಧ ಸಂಬಳ ಮತ್ತು ಉತ್ತಮ ಸೇವಾ ಸೌಲಭ್ಯ. ಜೊತೆಗೆ, ಸಂಘಟಿತ ಕಾರ್ಮಿಕರು ಬಯಸುವುದು ತಮ್ಮ ನಾಯಕರ ಪ್ರಾಮಾಣಿಕತೆ ಮತ್ತು ನಿಷ್ಕಾಮಕರ್ಮ ಭಾವ ಹಾಗೂ ಮಾಲೀಕರ ವಾತ್ಸಲ್ಯ. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಈ ಗುಣಾಂಶಗಳು ಒಡಮೂಡುವುದಿಲ್ಲವೋ ಅಲ್ಲಿಯವರೆಗೆ ಕಾರ್ಮಿಕ ದಿನಾಚರಣೆಯಿಲ್ಲಿ ಅರ್ಥಹೀನ. ಕಾರ್ಮಿಕ ದಿನಾಚರಣೆಯ ’ಬಲ’ದಿಂದಲಾದರೂ ಈ ಗುಣಾಂಶಗಳ ಒಡಮೂಡುವಿಕೆ ಸಾಧ್ಯವಾಗಿದೆಯೇ ಎಂದರೆ, ಊಹ್ಞೂ, ಸಾಧ್ಯವಾಗಿಲ್ಲ. ಹಾಗೆ ಸಾಧ್ಯವಾಗುವುದೂ ಇಲ್ಲ. ಏಕೆಂದರೆ, ಕಾರ್ಮಿಕ ದಿನಾಚರಣೆಯೆಂಬುದಿಲ್ಲಿ ’ಒಂದು ದಿನದ ರಜಾ-ಮಜಾ’ ಹೊರತು ಬೇರಿನ್ನೇನೂ ಆಗಿ ಉಳಿದಿಲ್ಲ.

1 ಕಾಮೆಂಟ್‌: