ಬುಧವಾರ, ಅಕ್ಟೋಬರ್ 21, 2009

ಪಾದದೆಚ್ಚರ - ಪದದೆಚ್ಚರ (ಲೇಖನ)

(ಈ ಬ್ಲಾಗ್‌ನ ಕೊನೆಯ ಕಾಣಿಕೆಯಾಗಿ ಈ ದಿನ ನಾಲ್ಕು ಬರಹಗಳನ್ನು ಪ್ರಕಟಿಸಿದ್ದೇನೆ. ಪುರಸತ್ತಿನಲ್ಲಿ ನಾಲ್ಕನ್ನೂ ಓದಿ. ನನಗೆ ಅಪ್ಪಣೆ ನೀಡಿ. ನಮಸ್ಕಾರ.)

ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ ಹಾಯಿಸದೆ ನೇರ ಎದುರುಗಡೆ ನೋಡುತ್ತಲೇ ನಡೆಯುವುದು ಪದ್ಧತಿಯಾಗಿತ್ತು. ಕೆಳಗೆ ನೋಡಲು ತಲೆತಗ್ಗಿಸುವುದು ರಾಜನ ಘನತೆಗೆ ಕುಂದೆಂದು ಭಾವಿಸಲಾಗುತ್ತಿತ್ತು. ಆಸ್ಥಾನದಲ್ಲಿ ನೆರೆದ ಪ್ರಜೆಗಳೆದುರು ರಾಜನೆಲ್ಲಾದರೂ ಅವನತಮುಖಿಯಾಗುವುದೇ?

ಹಾಗೆ ರಾಜನು ನೇರ ನೋಡುತ್ತ ನಡೆಯುತ್ತಿದ್ದಾಗ, ಅವನ ಕಾಲಿನ ಬುಡದಲ್ಲಿ ಮೆಟ್ಟಿಲು ಎದುರಾಯಿತೆಂದರೆ ಆಗ ಪಕ್ಕದ ಆ ಸೇವಕ, ’ಪಾದದೆಚ್ಚರ’, ಎಂದೊಮ್ಮೆ ಧ್ವನಿ ಹೊರಡಿಸಿ ದೊರೆಯನ್ನು ಎಚ್ಚರಿಸುತ್ತಿದ್ದ. ಆಗ ದೊರೆಯು ಕೆಳಗೆ ನೋಡದೆಯೇ ಕಾಲಿನಿಂದಲೇ ನೆಲ ಸವರುತ್ತ ಮೆಟ್ಟಿಲನ್ನು ಗುರುತಿಸಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡುತ್ತಿದ್ದ. ಇದು ಪಾದದೆಚ್ಚರ.

ಈಚೆಗೆ ಕವಿಗೋಷ್ಠಿಯೊಂದರಲ್ಲಿ ಉದ್ಘಾಟನಾ ಭಾಷಣ ಮಾಡುತ್ತ ಕವಿ ನಿಸಾರ್ ಅಹಮದ್ ಅವರು ಬಾಯಿತಪ್ಪಿ, ’ವೈವಿಧ್ಯತೆ’ ಎಂಬ ತಪ್ಪು ಪದಪ್ರಯೋಗ ಮಾಡಿದರು. ಆದರೆ, ತತ್‌ಕ್ಷಣವೇ, ’ವೈವಿಧ್ಯ’, ಎಂದು ತಾವೇ ಅದನ್ನು ತಿದ್ದುವ ಎಚ್ಚರ ಮೆರೆದರು. ಇದು ಪದದೆಚ್ಚರ. ನನ್ನ ಈ ಬರಹದ ವಸ್ತು.

’ವೈವಿಧ್ಯತೆ’ ಎಂಬ ತಪ್ಪು ಪದಪ್ರಯೋಗವನ್ನು ಬಹುತೇಕ ಎಲ್ಲರೂ ಮಾಡುತ್ತೇವೆ. ಸಾಹಿತಿಗಳೂ ಹೊರತಲ್ಲ. ’ವೈವಿಧ್ಯ, ಕಾಠಿಣ್ಯ, ಪಾವಿತ್ರ್ಯ, ಅನುಕೂಲ’ ಮುಂತಾದ ನಾಮಪದಗಳನ್ನು ವಿರೂಪಗೊಳಿಸಿ ’ವೈವಿಧ್ಯತೆ, ಕಠಿಣತೆ, ಪವಿತ್ರತೆ, ಅನುಕೂಲತೆ’ ಎಂಬ ತಪ್ಪು ಪದಗಳನ್ನು ಸೃಷ್ಟಿಸಿರುವ ನಾವು ’ಉಪಯುಕ್ತ, ಸಾಂದರ್ಭಿಕ, ಖಿನ್ನ’ ಮೊದಲಾದ ಗುಣವಾಚಕಗಳನ್ನು ’ಉಪಯುಕ್ತತೆ, ಸಾಂದರ್ಭಿಕತೆ, ಖಿನ್ನತೆ’ ಮೊದಲಾಗಿ ತಪ್ಪು ರೀತಿಯಲ್ಲಿ ನಾಮವಾಚಕ ಮಾಡಿ ಬಳಸುತ್ತೇವೆ. ಮೇಲೆ ಉಲ್ಲೇಖಿಸಿರುವ ಕವಿಗೋಷ್ಠಿಯಲ್ಲಿಯೇ, ಜನಪ್ರಿಯ ಕವಿಯೋರ್ವರು ತಮ್ಮ ಕವನದಲ್ಲಿ ’ತಲ್ಲೀನತೆ’ ತೋರಿದರೆ ಕವಯಿತ್ರಿಯೋರ್ವರು ’ಸಹೃದಯತೆ’ ಮೆರೆದರು!

ನಾಮವಾಚಕ ಮತ್ತು ಗುಣವಾಚಕಗಳಿಗೆ ’ತೆ’ ಅಕ್ಷರ ಬೆಸೆದು ನಾಮಪದ ಮಾಡಿಕೊಂಡು ಬಳಸುವ ಪರಿಪಾಠ ಕನ್ನಡದಲ್ಲಿ ಎಷ್ಟು ತೀವ್ರವಾಗಿ ಮತ್ತು ವ್ಯಾಪಕವಾಗಿ ಬೆಳೆದುಬಂದಿದೆಯೆಂದರೆ, ’ತೆ’(ಪೆ) ಹಚ್ಚಿದ ಇಂಥ ಶಬ್ದಗಳೆಲ್ಲವನ್ನೂ ನಿಘಂಟಿಗೆ ಸೇರಿಸಿಬಿಡುವುದೇ ಉತ್ತಮವೇನೋ ಅನ್ನಿಸುತ್ತಿದೆ!

ಏಕೀ 'ಕರಣ'?
--------------
’ಕರಣ’ ಎಂದರೆ ’ಕೆಲಸ’ ಎಂದರ್ಥವಷ್ಟೆ. ’ಮಾಡುವುದು’ ಎಂಬ ಅರ್ಥವನ್ನೂ ಆರೋಪಿಸೋಣ. ’ಏಕೀಕರಣ’ ಎಂಬ ಶಬ್ದವನ್ನು ಒಪ್ಪೋಣ. ಏಕೆಂದರೆ ಆ ಶಬ್ದವು ಕನ್ನಡ ನಿಘಂಟಿಗೆ ಪ್ರವೇಶ ಪಡೆದಿದೆ. ’ಸಮೀಕರಿಸು’ ಎಂಬ ಕ್ರಿಯಾಪದವನ್ನು ’ಸಮೀಕರಣ’ ಎಂದು ನಾಮವಾಚಕ ಮಾಡಿ ಬಳಸುವುದನ್ನೂ ಸಹಿಸಿಕೊಳ್ಳೋಣ. ಆದರೆ, ’ಸಮಾಜೀಕರಣ, ಉನ್ನತೀಕರಣ, ರಾಜಕೀಕರಣ(!), ವೈಭವೀಕರಣ, ಕನ್ನಡೀಕರಣ’ ಹೀಗೆ ಕಂಡಕಂಡ ಶಬ್ದಗಳಿಗೆಲ್ಲ ’ಕರಣ’ ಹಚ್ಚಿ ಕುಲಗೆಡಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವೆ? ಜಿ.ವೆಂಕಟಸುಬ್ಬಯ್ಯ ಅವರು ಸಮಾರಂಭವೊಂದರಲ್ಲಿ ಈ ’ಕ-ರಣ’ವನ್ನು ಎತ್ತಿ ಆಡಿ ಬೇಸರಪಟ್ಟಿದ್ದನ್ನು ನಾನು ಕೇಳಿದ್ದೇನೆ.

’ರಾಧಳಿಗೆ, ಗಂಗಳಿಗೆ, ಶುಭಳಿಗೆ, ಶ್ವೇತಳಿಗೆ’ ಎಂಬ ಪದಪ್ರಯೋಗಗಳಿಂದು ಸಾಮಾನ್ಯವಾಗಿಬಿಟ್ಟಿವೆ. ಕಥೆ-ಕಾದಂಬರಿ ಬರೆಯುವವರೂ ಈ ತಪ್ಪು ಪ್ರಯೋಗವನ್ನು ಒಪ್ಪವಾಗಿ ಮಾಡುತ್ತಿದ್ದಾರೆ! ’ರಾಧಾ’ ಅಥವಾ ’ರಾಧೆ’ ಎಂಬುದು ಸರಿಯಾದ ರೂಪ ಎಂಬುದು ಎಷ್ಟೋ ಲೇಖಕರಿಗೇ ಗೊತ್ತಿಲ್ಲ. ಹೆಣ್ಣುಮಕ್ಕಳ ಹೆಸರುಗಳನ್ನು ಹೀಗೆ ವಿರೂಪಗೊಳಿಸುವವರಮೇಲೆ ಶಿವರಾಮ ಕಾರಂತರಿಗೆ ಅಗಾಧ ಸಿಟ್ಟಿತ್ತು.

ಪದಗಳನ್ನು ನಮಗೆ ಬೇಕಾದಂತೆ ಮಾರ್ಪಡಿಸಿಕೊಂಡು ಬಳಸುತ್ತಿರುವ ’ಅನುಕೂಲಸಿಂಧು’ವಿನ ಉದಾಹರಣೆಗಳು ಈ ಎಲ್ಲ ಅಪಶಬ್ದಗಳು. ಪದಶುದ್ಧಿಗೆ ಇಲ್ಲಿ ಬೆಲೆಯಿಲ್ಲದಿರುವುದೇ ಬೇಸರದ ಸಂಗತಿ. ಇಷ್ಟೇ ಬೇಸರದ ಇನ್ನೊಂದು ಸಂಗತಿಯೆಂದರೆ, ಇಂಗ್ಲಿಷ್ ನುಡಿಗಟ್ಟನ್ನು ಯಥಾಕ್ರಮದಲ್ಲಿ ಕನ್ನಡಕ್ಕೆ ಅನುವಾದಿಸಿ ನುಡಿಯುವ (ಅ)ಕ್ರಮ. ’ಗವರ್ನ್‌ಮೆಂಟ್ ಗರ್ಲ್ಸ್ ಹೈಸ್ಕೂಲ್’ಅನ್ನು ಅದೇ ಕ್ರಮದಲ್ಲಿ ನಾವು ’ಸರ್ಕಾರಿ ಬಾಲಕಿಯರ ಪ್ರೌಢಶಾಲೆ’ ಮಾಡುತ್ತೇವೆ! ಅದು ’ಬಾಲಕಿಯರ ಸರ್ಕಾರಿ ಪ್ರೌಢಶಾಲೆ’ ಆಗಬೇಕೆಂಬುದು ನಮ್ಮ ಅರಿವಿಗೇ ಬರುವುದಿಲ್ಲ. ’ಸರ್ಕಾರಿ ಬಾಲಕಿಯರು, ಖಾಸಗಿ ಬಾಲಕಿಯರು’ ಎಂದೇನಾದರೂ ಇದ್ದಾರೆಯೆ? ಪದಕ್ರಮದ ಎಚ್ಚರವಿಲ್ಲದಿರುವುದರಿಂದ ಇಂಥ ’ಚೋದ್ಯಸಂಭವ’ ಆಗುತ್ತದೆ. ಬೆಂಗಳೂರಿನಲ್ಲಿ ನಡೆದ (’ಮನೆಯಂಗಳದಲ್ಲಿ ಮಾತುಕತೆ’) ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಬಂದಿದ್ದ ’ಜಿ.ವೆಂ.’ ಅವರು ಈ ಬಗ್ಗೆ ಆಕ್ಷೇಪವೆತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂಗ್ಲಿಷ್‌ನಿಂದ ಕನ್ನಡಕ್ಕೆ ಯಥಾಕ್ರಮದಲ್ಲಿ ಅನುವಾದಿಸಿದಾಗ ಉಂಟಾಗುವ ಇಂಥ ಚೋದ್ಯಕ್ಕೆ ನಮ್ಮ ಜಾಹಿರಾತುಗಳು (’ಜಾಹೀರಾತು’ ಅಲ್ಲ) ಉತ್ತಮ ಉದಾಹರಣೆಗಳು:

’ಬೇಕು ಒಂದು ಚೆಂಡು ಆಡಲು?’
(’ವಾಂಟ್ ಎ ಬಾಲ್ ಟು ಪ್ಲೇ?’)

’ಬೇಡಿ ಚಿಂತೆ ಹೇಗೆ ಹೊಂದುವುದು ಒಂದು ಮನೆ.’
(’ಡೋಂಟ್ ವರಿ ಹೌ ಟು ಓನ್ ಎ ಹೌಸ್.’)

’ಹೊಳಪಿಗಾಗಿ ನಿಮ್ಮ ಹಲ್ಲುಗಳ.’
(’ಫಾರ್ ದ ಷೈನ್ ಆಫ್ ಯುವರ್ ಟೀತ್.’)

’ಪದಕ್ರಮದೆಚ್ಚರ’ ಒತ್ತಟ್ಟಿಗಿರಲಿ, ಸರಿಯಾಗಿ ಕನ್ನಡ ಭಾಷಾಜ್ಞಾನವೂ ಇಲ್ಲದಿರುವವರು ನಿಘಂಟನ್ನು ಕೈಯಲ್ಲಿ ಹಿಡಿದು ಅನುವಾದಿಸಿದಾಗ ಆಗುವ ಅಪಲಾಪಗಳು ಇವು.

ಅಪಶಬ್ದ
--------
ಇನ್ನು ಅಪಶಬ್ದಗಳ ಅಟಾಟೋಪವೋ, ಕನ್ನಡದಲ್ಲಿ ಭರ್ಜರಿಯಾಗಿದೆ!

’ಆಮರಣಾಂತ, ಆಜೀವ ಸದಸ್ಯ, ಆಯೋಗ, ಅಭಿಧಾನ, ವಿಧ್ಯುಕ್ತ, ಕೋಟ್ಯಧೀಶ, ಜನಾರ್ದನ, ಪ್ರಶಸ್ತಿ ಪ್ರದಾನ, ಪ್ರಸಾಧನ, ಉಪಾಹಾರ, ಶ್ರುತಿ, ಚಿಹ್ನೆ,’ ಈ ಶಬ್ದಗಳನ್ನು ಕ್ರಮವಾಗಿ ’ಅಮರಣಾಂತ, ಅಜೀವ ಸದಸ್ಯ, ಅಯೋಗ, ಅಭಿದಾನ, ವಿದ್ಯುಕ್ತ, ಕೋಟ್ಯಾಧೀಶ, ಜನಾರ್ಧನ, ಪ್ರಶಸ್ತಿ ಪ್ರಧಾನ, ಪ್ರಸಾದನ, ಉಪಹಾರ, ಶೃತಿ, ಚಿನ್ಹೆ,’ ಎಂದು ಬರೆಯುವ ಕನ್ನಡ’ಬ್ರಮ್ಹ’ರನ್ನು ನಾವು ಎಲ್ಲೆಂದರಲ್ಲಿ ಕಾಣಬಲ್ಲೆವು! ’ಟೆಲಿವಿಷನ್ ವಾರ್ತೆ’ಯ ಕಚೇರಿಗಳಲ್ಲಂತೂ ಇಂಥ ಬ್ರಹ್ಮರೇ ತುಂಬಿಕೊಂಡಿದ್ದಾರೆ!

ಪದದೆಚ್ಚರ ಮಾಯವಾದ ಪರಿಣಾಮ ಈಚೆಗೆ ವಿಧಾನಸಭೆಯಲ್ಲಿ ಸಚಿವರೋರ್ವರು ’ಮಧುಮೇಹ’ ಎನ್ನುವ ಬದಲು ’ಮಧುಮೋಹ’ ಎಂದರು! ಇನ್ನೋರ್ವ ’ಮಂತ್ರಿಮುಖ್ಯ’ರು ’ಮಾನವಸಂಪನ್ಮೂಲ’ವನ್ನು ’ಮಾನವಜಲಸಂಪನ್ಮೂಲ’ ಮಾಡಿಬಿಟ್ಟಿದ್ದರು! ಪವಾಡಪುರುಷರು!

ಎಚ್ಚರ ತಪ್ಪುವುದು ತಪ್ಪಲ್ಲ. ಎಳ್ಚತ್ತು ತಿದ್ದಿಕೊಳ್ಳದಿದ್ದರೆ ಅದು ತಪ್ಪು. ತಿದ್ದಿಕೊಳ್ಳುವುದು ಸುಲಭದ ಮಾತಲ್ಲವೆಂಬುದನ್ನು ನಾನು ಒಪ್ಪುತ್ತೇನೆ. ಸಂಸ್ಕೃತದಿಂದ ಇಂಗ್ಲಿಷಿನವರೆಗೆ ಹಲವು ಭಾಷೆಗಳ ಸೇವನೆಯಿಂದಾಗಿ ಮತ್ತು ’ಬಳಕೆಗಾರ’ರ ಅನುಕೂಲಕ್ಕಾಗಿ ಕನ್ನಡದಲ್ಲಿ ಎಷ್ಟೋ ಅಶುದ್ಧ ಪದಗಳು ಬೇರು ಭದ್ರ ಮಾಡಿಕೊಂಡುಬಿಟ್ಟಿವೆ. ಇರಲಿ. ಆದರೆ, ತೀರಾ ಅಸಹ್ಯ ರೀತಿಯಲ್ಲಿ ನಾವು ಪದದೆಚ್ಚರ ತಪ್ಪಬಾರದಲ್ಲಾ! ಆಲಿಸುವವರಿಗೆ ನಮ್ಮ ಅಪಶಬ್ದಗಳು ಕರ್ಣಕಠೋರವೆನಿಸಬಾರದಲ್ಲಾ!

12 ಕಾಮೆಂಟ್‌ಗಳು:

 1. ಆನ೦ದ ಸರ್ ,
  ಬರಹವನ್ನು ಓದಿದ ಮೇಲೆ ನನಗೆ ಗೊತ್ತಾದದ್ದು ನಾವು ಎಷ್ಟು ತಪ್ಪು ಪದ ಪ್ರಯೂಗ ಮಾಡುತ್ತಾ ಇದ್ದೇವೆ ಎ೦ದು .
  " ’ವೈವಿಧ್ಯತೆ, ಕಠಿಣತೆ, ಪವಿತ್ರತೆ, ಅನುಕೂಲತೆ’ " ಈ ಶಬ್ದಗಳನ್ನು ನಾನು ಉಪಯೋಗಿಸಿದ್ದೇನೆ .ಆದರೆ ಅದು ತಪ್ಪು ಪ್ರಯೋಗ ಎ೦ದು ಇಗಲೇ ನನಗೆ ಗೊತ್ತಾದದ್ದು .
  ಇನ್ನು ಅದಷ್ಟು ಜಾಗ್ರತೆ ವಹಿಸುತ್ತೇನೆ .

  ಪ್ರತ್ಯುತ್ತರಅಳಿಸಿ
 2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 3. ಇಂಗ್ಲಿಷ್ ಭಾಷೆ ಬೆಳೆದ ಪರಿ ಗಮನಿಸಿದರೆ ಒಂದು ಕಾಲಕ್ಕೆ ಅತ್ಯಂತ ಹಾಸ್ಯಾಸ್ಪದ ಎಂದೇ ಪರಿಗಣಿತವಾಗಿದ್ದ ನೂರಾರು ಪದಗಳು ಇಂದು ಹೊಸ ಅರ್ಥವ್ಯಾಪ್ತಿ ಪಡೆದುಕೊಂಡು ಪದಕೋಶ ಪ್ರವೇಶಮಾಡಿರುವುದು ಭಾಷೆಯೊಂದು ನದಿಯಂತೆ ಹರಿಯುತ್ತಾ, ಸಿಕ್ಕಿದ್ದೆಲ್ಲವನ್ನೂ ಅರಗಿಸಿಕೊಳ್ಳುತ್ತಾ ಸಾಗುವುದರ ಪ್ರತಿಮೆಯಾಗುತ್ತದೆ. ಬಹುಶಃ ನೀವೇ ಹೇಳಿದಂತೆ ಅವೆಲ್ಲವೂ ಒಂದಲ್ಲಾ ಒಂದು ದಿನ - ಸ್ಲ್ಯಾಂಗ್ ಎನ್ನುವ ವಿಶೇಷಣದೊಂದಿಗೆ ಕನ್ನಡದ ಸ್ಲ್ಯಾಂಗ್ ಎನಿಸಿಕೊಳ್ಳುವ ದಿನಗಳು ದೂರವಿಲ್ಲ. ಭಾಷೆಯ ಸ್ವಚ್ಛ ಪ್ರಯೋಗಕ್ಕೆ ಸಂಸ್ಕೃತದ ಛಾಯೆ ಇರುವುದು ಅವಶ್ಯ ಅನ್ನಿಸಿದೆ. ಸಂಸ್ಕೃತ ಕಲಿತವರಲ್ಲಿ ಈ ರೀತಿಯ ಅಪಪ್ರಯೋಗಗಳು ಕಡಿಮೆ. ಆ ದೃಷ್ಟಿಯಿಂದಲಾದರೂ ಒಂದಷ್ಟು ಬೇಸಿಕ್ ಸಂಸ್ಕೃತ ಕಲಿಯುವ ಸಾಹಸ ಮಾಡಬೇಕಾಗಿದೆ. ವಿಶ್ವವಿದ್ಯಾಲಯದಷ್ಟೇನೂ ಬೇಡ ಸರ್.
  ಅಂದಹಾಗೆ, ಖತಿಗೊಂಡವರಂತೆ ಯಾಕೆ ಕೊನೆಯ ಸಲ ಎನ್ನುತ್ತಿರುವಿರಿ. ಕಲಿಕೆ ಮುಗಿಯುವುದೇ ನಮ್ಮ ಕೊನೆಯ ಯಾತ್ರೆಯೊಂದಿಗೆ. ಹಾಗಿರುವಾಗ ನಮ್ಮ ಕೈಗೆ ದಕ್ಕಿದ್ದನ್ನು, ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಇರುವ ಅವಕಾಶ ಇದು ಎಂದು ಭಾವಿಸಬಾರದೇ? ಬಿಡುವಾದಾಗಲೋ, ಬೋರಾದಾಗಲೋ, ಯಾರಿಗಾದರೂ ಬೈಯಲಾದರೋ (ನನ್ನನ್ನೇ ಬೈದರೂ ಪರವಾಗಿಲ್ಲ!) ಇಲ್ಲ ಅಜ್ಜನ ಪ್ರೀತಿಯ ಜವಾಬ್ದಾರಿ ಮುಂದಿನ ಪೀಳಿಗೆಯವರನ್ನು ನೆಟ್ ಬಳಿ ಕರೆತರುವುದೆಂಬ ಕರ್ತವ್ಯದ ಕರೆಗೆ ಓಗೊಡಲೋ ನಿಮ್ಮಿಷ್ಟ ಬಂದಾಗ ಒಂದಷ್ಟು ಗೀಚಿ ಬಿಡಿ. ಗಿಚಿ ಅಥವಾ ಬಿಡಿ. ಓದುಗರು ಖಂಡಿತಾ ಇದ್ದಾರೆ! ನಿಮಗೆ ದೇವರು ಕೊಟ್ಟಿರುವ ಈ ಅಪರೂಪದ ವರವನ್ನು ಮುಚ್ಚಿಟ್ಟುಕೊಳ್ಳುವುದರಿಂದ ನಿಮಗೇನಂತಹ ಸಂತೋಷ ಸಿಕ್ಕುತ್ತೋ! ಲಿಪ್ ಸಿಂಪತಿ ಅಥವಾ ಸೆಲ್ಫ್ ಪಿಟಿ ಎರಡೂ ಬೇಡ ಸರ್. ಅವೆಲ್ಲಾ ಸವಕಲಾಗಿ ಬಹಳ ಕಾಲವಾಗಿದೆ. ಈಗೇನಿದ್ದರೂ ಅಂತರಜಾಲದಲ್ಲೊಂದಷ್ಟು ಹಾಯಾಗಿ ಹಾಡಿಕೊಂಡಿರುವ ದಿನಗಳಿವು. ಸಂಜೆ ಹರಟೆ ಕಟ್ಟೆಯಲ್ಲಿ, ಪೆನ್ಷನ್ ಪಾರ್ಟಿಗಳ ಡೆನ್ ಗಳಲ್ಲಿ ಸಾವು ಯಾವಾಗ ಬರುತ್ತೋ ಎಂದು ಕಾಯುತ್ತಿರುವ ವೃದ್ಧ ಜೀವಗಳನ್ನು ನೋಡಿದಾಗ, ಥತ್! ಇದೆಂತಹ ವೇಸ್ಟ್ ಬಾಡಿಗಳೆನಿಸಿಬಿಡಿತ್ತದೆ. ಬೇಜಾರಾದರೆ ಓದುವ, ಬರೆಯುವ, ಅಂತರಜಾಲದಲ್ಲಿ ಜಾಲಾಡಿ ಹೊಸದೇನನ್ನಾದರೂ ಕೇಳುವ, ನೋಡುವ, ಗೀಚುವ ಹವ್ಯಾಸವಿದ್ದರೆ ಉತ್ಸಾಹ ಸದಾ ಚಿಮ್ಮುತ್ತದೆ. ದಯಮಾಡಿ ನನ್ನ ಬೇದ್ರೆ ಫೌಂಡೇಶನ್ ಬ್ಲಾಗ್ ನಲ್ಲಿ ಇತ್ತೀಚೆಗೆ ಪ್ರಕಟಿಸಿರುವ ಕೆಲವು ವೀಡಿಯೋಗಳನ್ನು ನೋಡಿ. ರಾಂಡಿಪಾಶ್ ನ ಲಾಸ್ಟ್ ಲೆಕ್ಚರ್ ಒಮ್ಮೆ ಓದಿ ನೋಡಿ. ಅದರ ವಿವರವಾದ ಪ್ರತಿ ಕಳಿಸಿದ್ದೇನೆ ಮೇಲ್ ನಲ್ಲಿ. ಅನ್ಯಥಾ ತಿಳಿಯದೇ ನಿಮ್ಮ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ಆ ಭಗವಂತನಿಗೆ ಒಪ್ಪಿಸಿ, ಅವನು ಕೊಟ್ಟಿರುವ ಸೌಲಭ್ಯಗಳನ್ನು ಬಳಸಿ ಜನರಿಗೆ ಒಳಿತು ಮಾಡಲು ಬರವಣಿಗೆ ಮುಂದುವರೆಸಿ. ಗುಡ್ ಲಕ್!
  ಬೇದ್ರೆ ಮಂಜುನಾಥ

  ಪ್ರತ್ಯುತ್ತರಅಳಿಸಿ
 4. ಸಲ್ಲಾಪದ ಸುನಾಥರೂ ಇದರ ಬಗ್ಗೆ ಇತ್ತೀಚಿಗಷ್ಟೇ ಬರೆದಿದ್ದಾರೆ:

  http://sallaap.blogspot.com/2009/10/blog-post_14.html

  ನಿಮ್ಮ ಬರಹವನ್ನು ಕೂಡ ಪತ್ರಿಕೆಗಳಿಗೆ ಟಿವಿಯವರಿಗೆ ಓದಲು ಖಂಡಿತ ಕೊಡಬೇಕು.

  ಪ್ರತ್ಯುತ್ತರಅಳಿಸಿ
 5. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 6. ಯಾಕೆ ಸಾರ್ ಕೊನೆ ಬರಹ ಎಂದಿದ್ದೀರಿ? ನಿಮ್ಮ ಏಳು ಬಾಗಿಲುಗಳ ಬರಹ ವಾರ ಪತ್ರಿಕೆಯಲ್ಲೇ ಓದಿದೆ..... ಇಲ್ಲಿ ನಾನು ನಿನ್ನೆಯೇ ಪ್ರತಿಕ್ರಿಯೆ ಬರೆದಿದ್ದೆ, ಆದರೆ ಅದೆಲ್ಲೊ ಕಳೆದು ಹೋಗಿದೆ !! ಇಷ್ಟೊಂದು ಜನ ಓದುಗರಿರುವಾಗ, ಯಾಕೆ ಸಾರ್ ಬರೆಯದಿರುವ ನಿರ್ಧಾರ? ನಿಮ್ಮ ಮುಂದಿನ ಬರಹಕ್ಕಾಗಿ ಕಾಯುತ್ತಿರುತ್ತೇವೆ.....
  ಶ್ಯಾಮಲ

  ಪ್ರತ್ಯುತ್ತರಅಳಿಸಿ
 7. ಈ ಪಟ್ಟಿಗೆ ಇನ್ನೊಂದು ಸೇರ್ಪಡೆ ಮಾಡಿದರೆ ಚೆನ್ನ ಹಿಂದಿ ಭಾಷೆಯ `ಅವಸರ್' ಶಬ್ಧ ಕನ್ನಡದಲ್ಲಿ `ಅವಸರ' ಎಂದು ಅನುವಾದ ಮಾಡಿದ್ದಾರಲ್ಲಾ ಸ್ವಾಮಿ ಒಂದು ಜಾಹೀರಾತಿನಲ್ಲಿ. ಆಟೋ ಲಿಪಿ (ಆಟೋಗಳ ಹಿಂದೆ ಮತ್ತು ಮುಂದೆ ಇರುವ ಕನ್ನಡ ಶಬ್ಧಗಳು) ಲಾರಿ ಲಿಪಿಗಳು, ಇಷ್ಟೇ ಯಾಕೆ ಸರ್ಕಾರೀ ನಾಮಫಲಕಗಳಲ್ಲೂ ಕನ್ನಡ ಭಾಷೆಯ ಸುಂದರ ಕೊಲೆಯನ್ನು ಕಾಣಬಹುದು. ಉದಾ: ಇಲಿ ಮಯಿಳೆಯರಿಗೆ ಮೂತ್ರ, ಇನ್ನೂ ಏನೇನೋ.. ಬಿಡಿ. ಇನ್ನು ಅರ್ಕಾವತ್ತು, ದೀರ್ಘ ಮುಂತಾದವುಗಳ ಪರಿಚಯವೇ ಸ್ವತ: ಕನ್ನಡಿಗರಿಗೇ ಇಲ್ಲ. ಓಹ್, ನವೆಂಬರ್ ಬಂತು. ಕನ್ನಡಿಗ ಎಚ್ಚರಗೊಳ್ಳುವ ಸಮಯ. ವರ್ಷಕ್ಕೊಂದಪ.

  ಜೈ ಕನ್ನಡಾಂಬೆ. ಬರ್ತೀನಿ. ಯಾರೋ ಕರೆಗಂಟೆ ಬಾರಿಸ್ತಿದ್ದಾರೆ. ಚಂದಾ ವಸೂಲಿಗಿರಬೇಕು.

  ಪ್ರತ್ಯುತ್ತರಅಳಿಸಿ
 8. ’ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ’ಗಾಗಿ ಅಬಿನ೦ದನೆಗಳು ಸರ್

  ಪ್ರತ್ಯುತ್ತರಅಳಿಸಿ