ಗುರುವಾರ, ಮಾರ್ಚ್ 26, 2009

ಅರಿಕೆ

ಆತ್ಮೀಯ ಮಿತ್ರರೆಲ್ಲರಿಗೂ ಯುಗಾದಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯ.

ನನ್ನನ್ನಿಂದು
ಪತ್ರಿಕೆಯೊಂದು
ಹಾಸ್ಯ,
ವಿಡಂಬನೆ
ಮತ್ತು
ಶ್ಲೇಷೆ
ಕೃಷಿಯ ಬಗ್ಗೆ
ಮರುಚಿಂತನಕ್ಕೆ
ಹಚ್ಚಿದೆ.
ಆದ್ದರಿಂದ
ನಾನಿಂದು
ಗುಳಿಗೆಯಂಗಡಿಯನ್ನು
ಮುಚ್ಚಿದೆ.

ನಿಮ್ಮ ಅಭಿಮಾನದಿಂದ
ನನ್ನ ಸಂತೋಷ
ಹೆಚ್ಚಿದೆ.
ಈ ಕೆಳಗಿನ
ನನ್ನ ಕವಿತೆ
ನನ್ನ ಮನವನ್ನು
ನಿಮ್ಮೆದುರು
ಬಿಚ್ಚಿದೆ.

ಪೊಡಮಡುವೆನೀ ಜಗಕೆ
-------------------
ಪೊಡಮಡುವೆನೀ ಜಗಕೆ ಬೆಡಗು ಬೀರುವ ಯುಗಕೆ
ಸಡಗರದ ಸೆಲೆಯಾದ ಜೀವಕುಲಕೆ
ಒಡವೆಯಂದದಿ ಮೆರೆವ ಪರಮ ಪುಣ್ಯೋದಯಕೆ
ನಡುಬಾಗಿ ನಮಿಪೆ ಪ್ರಭು, ನಿನ್ನಭಯಕೆ

ಬಂದೆನೆಂಬುದೆ ಇಲ್ಲಿ ಒಂದು ಸಾಕ್ಷಾತ್ಕಾರ
ಮುಂದೆ ಕಾಣುವ ನೋಟ ಬಲು ಸುಂದರ
ಇಂದು ನಾಳೆಗಳೆಂಬ ಚಂದ ಮುತ್ತಿನಹಾರ
ತಂದು ತೊಡಿಸಿದ ದೊರೆಯೆ, ನಾ ಋಣಿ ಚಿರ

ಭವದ ಸಾಗರವೆನ್ನುವರು ಈಸಲಂಜುವರು
ಅವತೀರ್ಣ ಸ್ಥಿತಿಗಾಗಿ ತವಕಿಸುವರು
ಭುವಿಯ ಭವ್ಯತೆಯಂದ ಏನು ಬಲ್ಲರು ಅವರು
ಸವಿಯಲೆಂದೇ ಬಂದೆ ನಾನಾದರೂ

ಪ್ರತಿ ಘಳಿಗೆಯೂ ಇಲ್ಲಿ ನನಗೆ ಅಮೃತಘಳಿಗೆ
ಪ್ರತಿ ವಸಂತವು ಪ್ರಭುವೆ ನಿನ್ನ ಒಸಗೆ
ಪ್ರತಿ ವಸ್ತುವೂ ಇಲ್ಲಿ ಇಹುದು ನನಗಾಗೇ
ಅತಿ ಭಾಗ್ಯವಂತ ನಾನ್ ಅಖಿಲ ಇಳೆಗೇ

ಎಲ್ಲಿ ನೋಡಿದರಲ್ಲಿ ನಿನ್ನ ಚೆಲುವೇ ಚೆಲುವು
ಬಲ್ಲಿದನೆ, ಈ ರಚನೆ ಅಸಮಾನವು
ಇಲ್ಲಿಯಲ್ಲದೆ ನನಗೆ ಇನ್ನಾವ ಸ್ವರ್ಗವೂ
ಇಲ್ಲವೈ, ಈ ಜಗವೆ ನನ್ನ ತಾವು

ಇಡು ಇಲ್ಲಿ ನನ್ನನು ಅದೆಷ್ಟು ದಿನವಾದರೂ
ಬಿಡು ಎನ್ನನೆನ್ನ ಪಾಡಿಗೆ, ಅಲ್ಲಿರು
ಕಡೆದಿನದವರೆಗೆ ಅನುಭವಿಸಿಯೇ ಈ ಊರು
ಬಿಡುವೆ ನಾ, ಸೇರುವೆನು ನಿನ್ನ ಊರು

ಎಲೆಕ್ಷನ್ ಕಾಲ

ಕಾಲ ಕೆಟ್ಟೋಯ್ತು!

ಸ್ಪರ್ಧಿಸ್ತೀನಿ ಅಂದೋರು ಸ್ಪರ್ಧಿಸೋಲ್ಲ! (ಕೃಷ್ಣಕೃಷ್ಣಾ!)
ಸ್ಪರ್ಧಿಸೋಲ್ಲ ಅಂದೋರು ಸ್ಪರ್ಧಿಸ್ತಾರೆ! (ರಾಘವೇಂದ್ರಾ!)
ಸತ್ಯಹರಿಶ್ಚಂದ್ರನ್ಹಾಗಾಡೋರು ಸುಳ್ಳು ಮತದಾರರನ್ನ ಸೃಷ್ಟಿಸ್ತಾರೆ! (ಜನಾರ್ದನಾ!)
ಪೊಳ್ಳು ಭರವಸೆ ನೀಡೋರು ಒಳ್ಳೆ ಹೀರೋ ಹಂಗಾಡ್ತಾರೆ! (ರಾಮ(ಶ್ರೀ)ರಾಮಾ!)
ನೀತಿ ಮಾತಾಡೋರು ಸಂಹಿತೆ ಉಲ್ಲಂಘಿಸ್ತಾರೆ! (ಯಡಿಯೂರೇಶ್ವರಾ!)
ಒಳಗೆ ಕುದಿಯುವವರು ಹೊರಗೆ ಹಲ್ಕಿರ್‍ಕೊಂಡಿರ್ತಾರೆ! (ಸದಾನಂದಾ!)
ಅಜ್ಜನ ವಯಸ್ಸಿನವರು ರಾಹುಲ್ ಅನ್ತಕ್ಕಂಥಾ ಹುಡುಗನಿಗೆ ಸಲಾಂ ಹೊಡೀತಾರೆ! (ಚೆನ್ನ-ಮಲ್ಲಿಕಾರ್ಜುನಾ!)
ಹುಲಿಯಂಗಾಡೋರು ಒಂದು ಯಃಕಶ್ಚಿತ್ ಹೆಣ್ಣಿಲಿಗೆ ಹೆದರ್ತಾರೆ! (ಶಿವಶಿವಾ!)
ಖಾಲಿ ಬುರುಡೆಯವರು ತುಂಬಿದವರಂಗೆ ತುಳು’ಕಾಡ್ತಾರೆ’! (ಉಗ್ರ-ನರಸಿಂಹಾ!)
ಮಾಜಿ ಪ್ರಧಾನಿಗಳು ಸದಾಕಾಲ ’ಮುದ್ದೆ-ನಿದ್ದೆ-ಗೆದ್ದೆ’ ಜಪ ಮಾಡ್ತಾರೆ! (ದೇವದೇವಾ!)
ಹಾಲಿ ಹಾಲಧ್ಯಕ್ಷರು ಸಿಎಂ ಕುರ್ಚಿಯ ಕನಸು ಕಾಣ್ತಾರೆ! (ರೇವರೇವಾ!)
ಪ್ರತಿಭೆಯಿದ್ದವರು ಮನೇಲಿ ಕೂತು ಕೊರಗ್ತಾರೆ! (ಅಂಬಾ-ಭವಾನೀ!)
ಚಾಣಾಕ್ಷರು ರಾಜ-ಕುಮಾರ ಆಗ್ತಾರೆ! (ಕುಮಾರಾ-ಸ್ವಾಮೀ!)
ದತ್ತುಪುತ್ರರು ಕತ್ತು ಬಗ್ಗಿಸಿ ಕತ್ತೆಯಹಾಗೆ ದುಡೀತಾರೆ! (why? yes! we (are one ಅನ್ನುವ) ದತ್ತಾ!)
ಕನ್ನಡದ ಕಾಮಗಾರಿ ಗೊತ್ತಿಲ್ಲದೋರು ಬರಿದೆ ’ನಾಮಫಲಕ’ ಅಂತ ಬೊಬ್ಬೆಹೊಡೀತಾರೆ! (ಚಂದ್ರುಶೇಖರಾ!)
ಮತ್ತು
ತನ್ದು ತಾನ್ ನೋಡ್ಕೊಂಡು ’ಆನಂದ’ವಾಗಿರೋದ್ ಬಿಟ್ಟು ಹ’ರಾಮ’ಖೋರ್ ಸಾಸ್ತ್ರಿ ಎಲ್ಲಾರ್ಗೂ ಗುಳಿಗೆ ಗುಂಡಾಂತರ ಮಾಡ್ತಾನೆ! (ಆನಂದ(ಹ)ರಾಮ ರಾಮಾ!)

ಸ್ವರ್ಗ-ನರಕದ ಸುದ್ದಿ

ಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾ ಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. ಪತ್ರಕರ್ತರು ಖಾಲೀಹಾತ್ ಬರಬೇಕಿತ್ತು. ಪೆನ್ನು ಮತ್ತು ಹಾಳೆಗಳನ್ನು ಅಲ್ಲಿಯೇ ಒದಗಿಸುವ ವ್ಯವಸ್ಥೆಯಾಗಿತ್ತು. ದೃಶ್ಯಮಾಧ್ಯಮದವರೂ ಕೂಡ ಈ ನಿಯಮಕ್ಕೆ ಒಳಪಡಬೇಕಾಗಿತ್ತು. ಆ ಪೆನ್ನು-ಹಾಳೆಗಳೋ, ಭೂಲೋಕದಿಂದ ತರಿಸಿದವೇ ಆಗಿದ್ದವು!

ಸ್ವರ್ಗದ ಪತ್ರಿಕಾಗೋಷ್ಠಿಗೆ ಹೋಗಿಬರಲು ಪತ್ರಕರ್ತರ ನೂಕುನುಗ್ಗಲು. ನರಕಕ್ಕೆ ಹೋಗಿಬರಲು ಯಾರೂ ತಯಾರಿಲ್ಲ. ಕೊನೆಗೆ ಜ್ಯೂನಿಯರ್ ಪತ್ರಕರ್ತ-ಕರ್ತೆಯರನ್ನು ನರಕಕ್ಕೆ ಅಟ್ಟಲಾಯಿತು.

ನರಕದ ಪತ್ರಿಕಾಗೋಷ್ಠಿಯಲ್ಲಿ ಯಮನ ವಕ್ತಾರನು, ಭೂಲೋಕದ ರಾಜಕಾರಣಿಗಳಿಗಾಗಿಯೇ ಸ್ಥಾಪಿಸಲಾಗುವ ಸದರಿ ವಿಶೇಷ ಘಟಕದ ಬಗ್ಗೆ ಈ ರೀತಿ ವಿವರಿಸಿದನು:
’ರಾಜಕಾರಣಿಗಳು ತಾವು ಮಾಡಿದ ಪಾಪಗಳಿಗೆ ಭೂಲೋಕದಲ್ಲಿ ಯಾವುದೇ ಶಿಕ್ಷೆಯನ್ನು ಅನುಭವಿಸದೇ ಹಾಯಾಗಿ ಮಜಾಮಾಡಿಕೊಂಡಿದ್ದು ಕೊನೆಗೆ ನರಕಕ್ಕೆ ಬರುತ್ತರಾದ್ದರಿಂದ ನರಕದಲ್ಲಿ ಅವರಿಗೆ ನಾನಾ ಬಗೆಯ ಶಿಕ್ಷೆಗಳನ್ನು ಕೊಡುವ ಅವಶ್ಯಕತೆಯಿದೆ. ಭೂಲೋಕದಿಂದ ಬರುವ ರಾಜಕಾರಣಿಗಳ ಸಂಖ್ಯೆಯೂ ಬರಬರುತ್ತ ಏರತೊಡಗಿದೆ. ಆದ್ದರಿಂದ ಅವರಿಗಾಗಿಯೇ ವಿಶೇಷ ಘಟಕವನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಸಲದ ಭಾರತೀಯ ಯುಗಾದಿಯ ಮುನ್ನಾದಿನವಾದ ಅಮಾವಾಸ್ಯೆಯ ರಾತ್ರಿ ಹನ್ನೆರಡಕ್ಕೆ ಘಟಕದ ಉದ್ಘಾಟನೆ’, ಎಂದು ನರಕದ ವಕ್ತಾರನು ಪತ್ರಕರ್ತರಿಗೆ ವಿವರಿಸಿದನು.

’ಭೂಲೋಕದಲ್ಲಿ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಇಲ್ಲಿ ಯಾವ ರೀತಿಯ ಶಿಕ್ಷೆಗಳನ್ನು ಕೊಡುತ್ತೀರಿ?’ ಎಂದು ಇಂಗ್ಲಿಷ್ ದೃಶ್ಯಮಾಧ್ಯಮವೊಂದರ ಪ್ರತಿನಿಧಿ ಕೇಳಿದಳು. (ಅವಳ ಹೆಸರು ಬುರ್ಖಾ ದತ್.)

’ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಯಾವ ಶಿಕ್ಷೆಯನ್ನೂ ಇಲ್ಲಿ ನೀಡಲಾಗುವುದಿಲ್ಲ. ಏಕೆಂದರೆ ನೀತಿಸಂಹಿತೆ ಉಲ್ಲಂಘನೆಗಾಗಿ ಅವರೆಲ್ಲ ಭೂಲೋಕದಲ್ಲೇ ಚುನಾವಣಾ ಆಯೋಗದ ಕೈಲಿ ತಕ್ಕ ಶಿಕ್ಷೆ ಅನುಭವಿಸಿಯೇ ಬಂದಿರುತ್ತಾರೆ. ಆದ್ದರಿಂದ ಅದಕ್ಕಾಗಿ ಇಲ್ಲಿ ಪುನಃ ಶಿಕ್ಷೆ ಕೊಡುವ ಅಗತ್ಯವಿಲ್ಲ’, ಎಂದು ನರಕದ ವಕ್ತಾರನು ಉತ್ತರಿದನು.

ಅತ್ತ ಸ್ವರ್ಗದ ಪತ್ರಿಕಾಗೋಷ್ಠಿಯಲ್ಲಿ ಸ್ವರ್ಗದ ವಕ್ತಾರನು ಹೇಳಿದ್ದಿಷ್ಟು:
’ಈ ಸಲದ ಭಾರತೀಯ ಯುಗಾದಿಯ ಆರಂಭದ ಶುಭಗಳಿಗೆಯಾದ ರಾತ್ರಿ ಹನ್ನೆರಡು ಗಂಟೆ, ಒಂದು ಸೆಕೆಂಡಿಗೆ ನಮ್ಮ ವಿಶೇಷ ಘಟಕದ ಉದ್ಘಾಟನೆ. ತಮ್ಮ ನ್ಯಾಯಬದ್ಧ ಬೇಡಿಕೆಗಳನ್ನು ಹಿಡಿದುಕೊಂಡು ಸರ್ಕಾರಿ ಕಚೇರಿಗಳಿಗೆ ಅಥವಾ/ಮತ್ತು ರಾಜಕಾರಣಿಗಳ ಬಳಿಗೆ ಓಡಾಡಿ ಓಡಾಡಿ ಓಡಾಡಿ ಬೇಸತ್ತು ಸತ್ತು ಇಲ್ಲಿಗೆ ಬರುವ ಬಡಪಾಯಿಗಳಿಗೆ ವಿಶೇಷ ಸುಖ-ಸೌಲತ್ತುಗಳನ್ನು ನೀಡುವ ಮೂಲಕ ನ್ಯಾಯ ದೊರಕಿಸಿಕೊಡಲಿಕ್ಕಾಗಿ ಈ ಘಟಕದ ಸ್ಥಾಪನೆ.’

ಆಗ ವರದಾ ನಾಯಕ್ ಎಂಬ ಟಿವಿ ಪತ್ರಕರ್ತೆ ಬಾಲಕಿಯು ಈ ರೀತಿ ಪ್ರಶ್ನೆ ಕೇಳಿದಳು:
’ಮುಖ್ಯಮಂತ್ರಿಗಳ ಜನತಾದರ್ಶನದ ಬಲೆಗೆ ಬಿದ್ದು ಒದ್ದಾಡಿದ ಮಿಕಗಳಿಗೇನಾದರೂ ವಿಶೇಷ ಸುಖ-ಸೌಲತ್ತುಗಳಿವೆಯೆ?’

ವಕ್ತಾರನ ಉತ್ತರ:
’ಖಂಡಿತ ಖಂಡಿತ. ಇಲ್ಲದಿದ್ದರೆ ಹೇಗೆ?’

ಮೇಲಿನ ಎರಡೂ ಪತ್ರಿಕಾಗೋಷ್ಠಿಗಳಿಗೆ (ಊಹ್ಞೂಂ, ಒಂದು ಮೇಲಿನ ಮತ್ತು ಇನ್ನೊಂದು ಕೆಳಗಿನ ಪತ್ರಿಕಾಗೋಷ್ಠಿಗೆ) ಹೋಗಿಬಂದ ಪತ್ರಕರ್ತರನ್ನು ಗುಳಿಗೆಪ್ಪನವರು ವಿಚಾರಿಸಿದಾಗ ಒಂದು ಆಶ್ಚರ್ಯಕರ ಸಂಗತಿ ಹೊರಬಿತ್ತು!
ಸದಾಕಾಲ ಮೃಷ್ಟಾನ್ನಭೋಜನವನ್ನೇ ಉಂಡು ಉಂಡು ನಾಲಗೆ ಜಡ್ಡು ಹಿಡಿಸಿಕೊಂಡಿದ್ದ ಸ್ವರ್ಗದ ವ್ಯವಸ್ಥಾಪಕರು ಇದೇ ಅವಕಾಶವೆಂದು ಪತ್ರಿಕಾಗೋಷ್ಠಿಯಲ್ಲಿ ಸಖ್ಖತ್ ಖಾರದ ಅಡುಗೆ (ಅಂದರೆ ಎನ್.ವಿ. ಅಲ್ಲ) ಮಾಡಿಸಿದ್ದರಂತೆ! ’ಯಮ’ಖಾರವಂತೆ! ಅದೇವೇಳೆ ನರಕದಲ್ಲಿ, ಇದೇ ಚಾನ್ಸ್ ಎಂದು ಅಲ್ಲಿನ ವ್ಯವಸ್ಥಾಪಕರು ಬಗೆಬಗೆಯ ಭಕ್ಷ್ಯಭೋಜ್ಯಗಳ ಭೂರಿಭೋಜನದ ಏರ್ಪಾಟು ಮಾಡಿದ್ದರಂತೆ!

ಇನ್ನೊಂದು ವಿಷಯವೆಂದರೆ, ಬಹುಪಾಲು ನಟನಟಿಯರು, ಜನನಾಯಕರು, ರೂಪದರ್ಶಿಯರು ಇತ್ಯಾದಿಯವರೆಲ್ಲ ನರಕದಲ್ಲೇ ಇದ್ದರಂತೆ! ಪತ್ರಕರ್ತರಿಗೆ ಅವರನ್ನೆಲ್ಲ ಕಾಣುವ ಅವಕಾಶ ದೊರಕಿತಂತೆ. ಸ್ವರ್ಗದಲ್ಲೋ, ಅಪ್ಪಟ ಗಾಂಧಿವಾದಿಗಳು, ನಿಜಸನ್ಯಾಸಿಗಳು, ಮುಗ್ಧರು, ಭೂಲೋಕದಲ್ಲಿ ನಾನಾ ಬಗೆಯ ಶೋಷಣೆಗೊಳಗಾದವರು ಇಂಥವರೇ ತುಂಬಿದ್ದರಂತೆ.

ಸ್ವರ್ಗಕ್ಕೆ ಹೋಗಿಬಂದ ಪತ್ರಕರ್ತರೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ!

ಗುಳಿಗೆ ಬಗ್ಗೆ ಅಭಿಪ್ರಾಯಗಳು (ವಿವಿಧ ಮೂಲೆಗಳಿಂದ)

(ಗಣಕಯಂತ್ರ ಹೊಂದಿರದವರಿಗೂ ಹಾಳೆರೂಪದಲ್ಲಿ ಗುಳಿಗೆಯನ್ನಿತ್ತು ಅಥವಾ ಓದಿಹೇಳಿ ಅಭಿಪ್ರಾಯ ಸಂಗ್ರಹಿಸಲಾಗಿದೆ)

ಬ್ಯಾಂಗಲೋರ್ ಬಾಯ್ : ಒಂಥರಾ ಇದೆ, I can't understand; ಬಟ್ ಓಕೆ.’

ಮಂಡ್ಯ ಮರಿಗೌಡ್ರು : ಯೇ, ಅರ್ತಾಗಾಕಿಲ್ಲ ಬುಡು. ದಿನ್ವೂ ಪೇಪ್ರು ಗೀಪ್ರು ಓದ್ಕಂಡಿದ್ಯಾವಂತ್ರಿಗೆ ಇವೆಲ್ಲ. ಅಂಥವ್ರಿಗೆ ಇದು ಸಂದಾಕಿರಬೌದು.

ಡಾವಣಗೇರಿ ಡಬ್ಬೇಶಿ : ಎಲ್ಲೀ ಹಚ್ಚಿದಿ ತೆಗಿ, ಬರೇ ಕೊರ್‍ಯದೇ! ಈ ಗುಳಿಗ್ಯಾಗೆ ಏನಿರ್‍ತತಿ, ಏನಿಲ್ಲ ಅಂಬದ್ನೇ ಹೇಳಕ್ಬರಂಗಿಲ್ಲ! ಏಸ್ ಮಂದಿ ಇದ್ನ ಎಂಗೆ-ಎಸ್ಟ್ ತಗತಾರೆ ನೋಡ್ಬಕು.

ಧಾರವಾಡ ದೊಣ್ಣಿಪಾಟೀಲ : ಛಂದದನೋ ಇಲ್ಲೋ ಇಷ್ಟ್ ಲಗೂನ ಹ್ಯಾಂಗ್ ಹೇಳ್ಲಾಕ್ಕ್ ಆಗ್ತದ ಸಾಯೇಬ್ರ? ಇನ್ನೂ ಸ್ವಲ್ಪು ಟೈಂ ಕೊಡ್ರಲಾ.

ಬಳ್ಳಾರಿ ಬಿ.ಯರ್ರಿಸ್ವಾಮಿ : ಅದು ಬಂದು, ಚಾಲ ಟಫ್ ಇದ್ದದ. ನಮ್ ತೆಲಿವಿಗೆ ಅರ್ಥ ಆಗಂಗಿಲ್ಲ. ಆದ್ರೂ ಬೇಸ್ ಅದ ಬಿಡು.

ರೈಚೂರ್ ರೈತ : ಅದು ಬಂದ್ಕೇಸಿ ನಮಗ ಯಾನ್ ತಿಳೀತದ ದಣೀ? ನಮ್ಮ್ ದಗದ ಹೊಲಾ. ಅದ್ರ ವಿಸ್ಯ ಕೇಳು.

ಉಡುಪಿ ಉಪದ್ವ್ಯಾಪಾಚಾರ್ಯ : ಎಡ್ಡೆ ಉಂಡು ಮಾರಾಯ್ರೇ, ಲಾಯ್ಕುಂಟು. ಆದರೆ...ಒಮ್ಮೊಮ್ಮೆ.... ಸ್ವಲ್ಲ್‌ಲ್ಲ್‌ಪ...ಅಹ್ಹಹ್ಹ...ಅರ್ಥ ಆಂಡಾ?

ಕುಂದಾಪುರ ಖಾರಂತ : ಲಾಯ್ಕಿತ್ತಂಬ್ರಪ್ಪ. ಏನೋ, ನಾನ್ ಓದಿಲ್ಲೆ; ಜನ ಹೇಳಿದ್ದ್ ಕೇಂಡ್ರೆ ಒಳ್ಳೆದಿತ್ತನ್ಸುತ್ತ್. ಇನ್ನೂ ಲಾಯ್ಕಾತ್ತಂಬ್ರು, ಹೌದಾ?

ಬುಧವಾರ, ಮಾರ್ಚ್ 25, 2009

’ಕೈ’-’ಲಾಗ’-ದವರು

ಇವತ್ತಿನ ಪತ್ರಿಕೆಗಳನ್ನು ನೋಡಿದಿರಾ?
’ಕೈ’ ಲಾಗದ ಇಬ್ಬರು ವೃದ್ಧರು ಪರಸ್ಪರ ಅದೇನನ್ನೋ ಹೇಳಲು-ಕೇಳಲು ಒದ್ದಾಡುತ್ತಿರುವ ಫೋಟೋ ಗಮನಿಸಿದಿರಾ?

ಗಾಲಿ ಕುರ್ಚಿ ಬಿಟ್ಟು ಎದ್ದೇಳಲಾರದ ಅರ್ಜುನಸಿಂಗರು, ’ಕಿವಿ ಸ್ವಲ್ಪ ದೂರ’ (pun intended) ಇರುವ ಪ್ರಣವ ಮುಖರ್ಜಿಗೆ ಏನನ್ನೋ ಹೇಳಲು ತಮ್ಮ ಮುಖ ಮುಂದೆಚಾಚಿ ಒದ್ದಾಡುತ್ತಿರುವರು; ಅದನ್ನು ಕೇಳಿಸಿಕೊಳ್ಳಲು ಪ್ರಣವರು ತಮ್ಮ ಕಿವಿಗೆ ಕೈ ಅಡ್ಡ ಇಟ್ಟುಕೊಂಡು ಒದ್ದಾಡುತ್ತಿರುವರು!
ಹಿಂದೆ ಕುಳಿತ ನಮ್ಮ ಬಿ.ಕೆ.ಹರಿಪ್ರಸಾದರು ಇದನ್ನು ನೋಡಿ ಮುಖ ಎತ್ತಿ ನಗುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೊಂದು ಫೋಟೋ ಗಮನಿಸಿದಿರಾ?

ವಯಸ್ಸಾಗಿದ್ದರೂ ತಾನು ನಡೆದಾಡಬಲ್ಲೆ, ತನಗೆ ಚುನಾವಣಾ ಟಿಕೆಟ್ ಬೇಕು, ಎಂದು ಹೇಳಿ, ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿಯ ಮನೆಯವರೆಗೆ ಪಾದಯಾತ್ರೆಗೈದು ತೋರಿಸಲು ಬಿಹಾರಕ್ಕೆ ಬಂದಿಳಿದ ಜಾರ್ಜ್‌ ಫರ್ನಾಂಡಿಸರು ವಿಮಾನ ನಿಲ್ದಾಣದಲ್ಲಿ ದಿಗ್ವಿಜಯಸಿಂಗರ ನೆರವಿನಿಂದ ನಡೆಯುತ್ತಿರುವರು! ನಡೆದಾಡಲೂ ಕಷ್ಟಪಡುವ ಇವರು ತಾನು ಸುದೃಢವಾಗಿರುವೆನೆಂದು ತೋರಿಸಿಕೊಳ್ಳಲು ’ಲಾಗ’ಹಾಕುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೂ ಒಂದು ಫೋಟೋ ನೋಡಿದಿರಾ?

83ರ ಹರಯದ ’ಎವರ್ ಗ್ರೀನ್ ಹೀರೊ’ ದೇವಾನಂದ್ ’ಚಾರ್ಜ್‌‌ಶೀಟ್’ ಸಲ್ಲಿಸುತ್ತಿರುವ ಫೋಟೋ! ಅರ್ಥಾತ್ ತನ್ನ ಮುಂಬರುವ ಚಿತ್ರ ’ಚಾರ್ಜ್‌‌ಶೀಟ್’ ಬಗ್ಗೆ ಮಾತನಾಡುತ್ತಿರುವ ಫೋಟೋ.

ಕಾರುಬಾರು ನೋಡಿದರೆ ಪ್ರಣವ್, ದೇವಾನಂದ್ ಓಕೆ; ಅರ್ಜುನ್, ಜಾರ್ಜ್‌ (ಇನ್ನೂ) ಯಾಕೆ?
ವಾಜಪೇಯಿಯಹಾಗೆ ಡೀಸೆಂಟಾಗಿ ಮನೇರಿಲೋಕಾಗೋಲ್ವೆ?
ಈ ಅ(ರ್ಜುನ್)ಜಾ(ರ್ಜ್‌)ರಿಷ್ಟರ ಸಾಲಿಗೆ ಮಹಾ-ದ್ರಾವಿಡ ವೃದ್ಧ (ಕರುಣಾ)ನಿಧಿಯನ್ನೂ ಮತ್ತು ಮಹಾ-ರಾಷ್ಟ್ರೀಯ(ವಾದಿ) ಬಾಳ್ ಠಾಕ್ರೆಯನ್ನೂ ಸೇರಿಸಬಹುದಷ್ಟೆ.
(ನಡೆಯೋದು ನೋಡಿದರೆ, ’ರಾಮ)ರಾಮಾ!’ಈಶ್ವರ ಠಾಕೂರ್ ಏನು ಕಮ್ಮಿಯೇ?
ರಾಮೇಶ್ವರ ಠಾ’ಕೂರ’ರಿಗೆ ಕೂರಲೂ ಕಷ್ಟ, ಏಳಲೂ ಕಷ್ಟ!
ನಮ್ಮ ದೇವೇಗೌಡರೂ ರೇಸ್‌ನಲ್ಲಿದ್ದಾರಾದರೂ ಸಂಪೂರ್ಣ ಅರ್ಹತೆ ಇನ್ನೂ ಪಡೆದಿಲ್ಲ; ಪಡೆಯುವುದೂ ಬೇಡವೆಂಬುದು ನಮ್ಮ ಹಾರೈಕೆ. (ಏಕೆಂದರೆ, ಇದು ಓಡಲಾರದವರ-ಓಡಾಡಲಾರದವರ ರೇಸ್ ತಾನೆ.)
ರೇಸಿಗರ ಪಟ್ಟಿ ಇನ್ನೂ ಉದ್ದವಿದೆ.

ಹೇಸಿಗೆ ಹುಟ್ಟುವಷ್ಟು ಒದ್ದಾಟ ಮಾಡಿಕೊಂಡು ಅಧಿಕಾರದ ರೇಸಿಗೆ ಇಳಿಯುವ ಈ ’ಕೈ’-’ಲಾಗ’ದ ವಯೋವೃದ್ಧರನ್ನು ಕಂಡು ಅಯ್ಯೋ ಅನ್ನಬೇಕೆನ್ನಿಸುತ್ತದೆ. ಆದರೆ ನಾನು ಅನ್ನುವುದಿಲ್ಲ. ಏಕೆಂದರೆ, ಅಧಿಕಾರದ ಗದ್ದುಗೆ ಏರಿ(!) ಇವರು ಸುದ್ದಿಯಲ್ಲಿದ್ದುಕೊಂಡು ಆರಾಮಾಗಿ ನಿದ್ದೆಹೋಗುತ್ತಾರೆ; ಇಂಥವರ ಆಳ್ವಿಕೆಯಿಂದ ಅನುಭವಿಸುವುದು ಪ್ರಜೆಗಳಾದ ನಾವು.

ನಮ್ಮ ಬಗ್ಗೆಯೂ ಯಾರೂ ಅಯ್ಯೋ ಅನ್ನಬೇಕಾದ್ದಿಲ್ಲ. ಏಕೆಂದರೆ, ಇಂಥವರನ್ನು ಆರಿಸಿ ಕಳಿಸುವುದೇ/ಇಂಥವರ ಅಧಿಕಾರ ಚಲಾವಣೆಗೆ ಅನುವು ಮಾಡಿಕೊಡುವುದೇ ನಾವು ತಾನೆ?
ಆದ್ದರಿಂದ, ಮಾಡಿದ್ದುಣ್ಣೋ ಮಹರಾಯ!

ಓಯ್ ಬೆಂಗಳೂರ್!

ಬೆಂಗಳೂರಿನಲ್ಲೀಗ
ಎರಡು ಬಗೆಯ ಮಳೆ
ಬರುತ್ತಿದೆ.

ಒಂದು ಮಳೆ
ಮೋಡಗಳಿಂದ ಸುರಿಯುತ್ತಿದೆ;
ಇನ್ನೊಂದು ಮಳೆ
ಪುಢಾರಿಗಳ ಬಾಯಿಂದ ಹರಿಯುತ್ತಿದೆ!

ಮೊದಲೇ ಬೆಂಗಳೂರಿನಲ್ಲಿ
ಟ್ರಾಫಿಕ್ಕೋ ಟ್ರಾಫಿಕ್ಕು;
ಅದರ ಮಧ್ಯೆ ಈ
ಮಳೆಗಳ ಸೊಕ್ಕು!
office-goers ಎಲ್ರೂ
ಮನೇಲಿರೋದೇ ಲಾಯಕ್ಕು!

ನನಗೀಗ ನೆನಪಿಗೆ ಬರ್ತಾ ಇದೆ
ನನ್ನೊಂದು ಹಳೆ ಕವನ;
ಅದನ್ನಿಲ್ಲಿ ಕೊಟ್ಟಿದ್ದೇನೆ,
ಓದಿ ಆಗಿರಿ ಪಾವನ!

---o---

(ವರ್ಷಗಳ ಕೆಳಗೆ ಮಿತ್ರ (ದಿ.) ಜಿ.ಎಸ್.ಸದಾಶಿವ ಅವರು ಇಷ್ಟಪಟ್ಟು ಈ ಕವನವನ್ನು ’ಸುಧಾ ಯುಗಾದಿ ವಿಶೇಷಾಂಕ’ದಲ್ಲಿ ಪ್ರಕಟಿಸಿದ್ದರು. ಅನಂತರ ನನ್ನ ಕವನಸಂಕಲನ ’ಚಿತ್ತದಾಗಸ’ದಲ್ಲಿಯೂ ಇದು ಕಾಣಿಸಿಕೊಂಡಿತು. ಆದ್ದರಿಂದ, ಈಗಾಗಲೇ ಈ ಕವನವನ್ನು ಓದಿರುವವರು ಇದನ್ನು ಮತ್ತೆ ಓದಿ mental torture ಅನುಭವಿಸುವ ಅಗತ್ಯವಿಲ್ಲ.)

ಬೆಂಗಳೂರಲ್ಲಿ ರಸ್ತೆ ಪ್ರಯಾಣ ಹಾಗೂ ಆಫೀಸ್ ಡ್ಯೂಟಿ
-----------------------------------------

ಬೆಂಗಳೂರಿಗೆ ಬಂದ ಹೊಸತರಲ್ಲಿ
ಒಂದು ದಿನ,
ಆಫೀಸಿಗೆ ಹೋಗ್ತಿದ್ದಾಗ
ರಸ್ತೆ ದಾಟುವಾಗ ಚಪ್ಪಲಿ ಕಳಕೊಂಡೆ
ಸ್ಕೂಟರು ಅಡ್ಡಬಂದಿತ್ತು
ಚಪ್ಪಲಿ ಕಾಲುಜಾರಿತ್ತು
ಚಪ್ಪಲಿ ಬಿಟ್ಟು ನಾನು
ದೂರ ಉಳಕೊಂಡೆ

ಇನ್ನೊಂದು ದಿನ,
ಕಾರು ಅಡ್ಡಬಂದು
ಕಾಲೇ ಕಳೆದುಹೋಯ್ತು
ಕಾಲು ಹೋದರೇನು? ನಾನಿದ್ದೀನಲ್ಲ!
ಅಂದ್ಕೊಂಡು
ಆಫೀಸಿಗೆ ಹೋದೆ

ಮತ್ತೊಂದು ದಿನ,
ಬೀಟೀಯೆಸ್‌ನಲ್ಲಿ ಹೋಗ್ತಿದ್ದಾಗ
ನಂಗೆ ತಲೇನೇ ಇಲ್ಲ
ಅನ್ನೋ ವಿಷಯ ಗೊತ್ತಾಯ್ತು.
ಡ್ಯೂಟಿ ಮಾಡೋಕೆ ತಲೆ ಏಕೆ?
ತಲೆ ಚಿಂತೆ ಬಿಟ್ಟು
ಡ್ಯೂಟಿಗೆ ಹಾಜರಾದೆ

ಹೀಗೇ ಬರಬರ್ತಾ,
ಬೀಟೀಯೆಸ್ ಬಸ್ಸು ನಿಲ್ಲದಿದ್ದಾಗ,
ನಿಂತ ಬಸ್ಸನ್ನು ನಾನು
ಹತ್ತಲಾರದೇಹೋದಾಗ
ನಂಗೆ ಕೈಯೂ ಇಲ್ಲ
ಅಂತ ಗೊತ್ತಾಯ್ತು.
ಟ್ರಾಫಿಕ್ ಸಿಗ್ನಲ್ ನೋಡ್ತಾ ಹೋಗಿ
ಹುಡುಗಿಯೊಬ್ಬಳಿಗೆ ಢಿಕ್ಕಿಹೊಡೆದಾಗ
ನಂಗೆ ಕಣ್ಣಿಲ್ಲ
ಅನ್ನೋದೂ ತಿಳೀತು.
ಓಡ್ತಾಇರೋ ಬಸ್ಸಿಂದ ಹಾರಿ
ಗಿಜಿಗಿಜಿಗುಟ್ಟೋ ರಸ್ತೇಲಿ ತೂರಿ
ಓಡಿಹೋಗ್ತಿರೋ
ಎರಡನೇ ಬಸ್‌ ಏರೋಕೆ
ಎದೆ ಬೇಕು,
ನಂಗೆ ಅದೂ ಇಲ್ಲ
ಅನ್ನೋದೂ ಅರಿವಾಯ್ತು
ಕೊನೆಗೆ.

ಈಗ ನಾನು,
ಕೈ ಬಿಟ್ಟು, ಕಾಲು ಬಿಟ್ಟು,
ಎದೆ ಬಿಟ್ಟು, ತಲೆ ಬಿಟ್ಟು,...
ಎದ್ದಕೂಡಲೇ ಮನೆ ಬಿಟ್ಟು
ಆರಾಮಾಗಿ ಹೋಗ್ತೀನಿ
ಆಫೀಸಿಗೆ.
ನಿಶ್ಚಿಂತೆಯಿಂದ ಡ್ಯೂಟಿ ಮುಗಿಸಿ
ನಿಧಾನವಾಗಿ ಹಾದಿ ಸವೆಸಿ
ನಿದ್ರೆ ಹೊತ್ತಿಗೆ ಮನೆ ಸೇರ್ತೀನಿ
ಮೆತ್ತಗೆ.

ಟೈಂ ಕಿಲ್ಲರ್ (bullets ಅಲ್ಲ, pillets) ‍

-1-
ಹೆಸರು ಮಲ್ಲಿಕಾ
ಕೆಲಸ ಕಿಲ್ಲಿಕಾ
ಶಿಕ್ಷೆ ಗಲ್ಲ್, ಇಕಾ.

-2-
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ
ಮೂರು ರೂಪಾಯಿಗೆ ಕೆಜಿ ಅಕ್ಕಿ-ಗೋಧಿ!
ಕೊಟ್ಟರೆ ಒಂದು ಪಕ್ಷ ನಾಳೆ
ತಿಂದೋರಿಗೆ ಗ್ಯಾರಂಟಿ ವಾಂತಿ-ಭೇದಿ!

-3-
ಸೌತ್ ಆಫ್ರಿಕಾದಲ್ಲಿ ಐಪಿಎಲ್ ಕ್ರಿಕೆಟ್.
ಇಂಡಿಯಾದಲ್ಲಿ ಟೂರ್ನಿ kicked the ಬಕೆಟ್!
ಅಂದು ಆಫ್ರಿಕದಲ್ಲಿ
eradication of the apartheid.
ಇಂದು ಅಲ್ಲಿ
rehabilitation of the disabled!

-4-
’ಈ ಸಲದ ಚುನಾವಣೇಲಿ
ಮುಖವಾಡಗಳದ್ದೇ ಕಾರುಬಾರಂತೆ.’
’ಪ್ರತಿ ಸಲವೂ ನಡೀತಿರೋದು
ಅದೇ ಅಲ್ದೆ ಇನ್ನೇನಂತೆ?’

ವಿಕಾಸವಾದ

ಚಾರ್ಲ್ಸ್‌ ಡಾರ್ವಿನ್ ವಿದ್ಯಾರ್ಥಿಯಾಗಿದ್ದಾಗ
ಪುಸ್ತಕಗಳಿಗಿಂತ ಐಷಾರಾಮಿ ವಸ್ತುಗಳಿಗೇ
ಹೆಚ್ಚು ಹಣ ವ್ಯಯಿಸುತ್ತಿದ್ದ!

ಇದಪ್ಪಾ ನಿಜವಾದ
ವಿಕಾಸವಾದ!

ಮಂಗಳವಾರ, ಮಾರ್ಚ್ 24, 2009

ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗ

ಪ್ರಿಯಾಂಕಾ ಉವಾಚ :
ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಳ್ಳಲಿ.

ಶ್ರೀ ಗುಳಿಗೆಪ್ಪ ಉವಾಚ :
ವರುಣ್ ಗಾಂಧಿಯು ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರಂತೆಯೇ ನಡೆಯುತ್ತಿದ್ದಾನೆ.

’ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಎಂದ ಶ್ರೀಕೃಷ್ಣನ ಅಪರಾವತಾರವೇ ತಾನೆಂದು ತಿಳಿದುಕೊಂಡು (ಹಿಂದು)ಧರ್ಮಸಂಸ್ಥಾಪನೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದಾನೆ. (therefore ಆತನಿಗೆ ಉಘೇಉಘೇ!)

’ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚಾಪರಾನಪಿ’ (ಅಧ್ಯಾಯ ೧೬, ಶ್ಲೋಕ ೧೪), ಅರ್ಥಾತ್, ’ಆ ಶತ್ರುವು ನನ್ನಿಂದ ಕೊಲ್ಲಲ್ಪಟ್ಟಿದ್ದಾನೆ; ಇತರರನ್ನೂ ನಾನು ಕೊಲ್ಲುತ್ತೇನೆ’, ಎಂದು ಸಾರಿ ಮುನ್ನಡೆದಿದ್ದಾನೆ. (ಸ್ಸಾರಿ, ವಿವರಣೆ ಅಗತ್ಯ: ಕೊಲ್ಲಲ್ಪಟ್ಟಿದ್ದು ಇಲ್ಲಿ ದೇಹವಲ್ಲ, ಮನಸ್ಸು.)

’ಪಶ್ಯ ಮೇ ಪಾರ್ಥ, ರೂಪಾಣಿ ಶತಶೋಥ ಸಹಸ್ರಶಃ’ (೧೧, ೫), ಎಂದ ಶ್ರೀಕೃಷ್ಣನಂತೆ ಈತನೂ ತನ್ನ ನೂರಾರು-ಸಹಸ್ರಾರು ರೂಪಗಳನ್ನು ಒಂದೊಂದಾಗಿ ತೋರಿಸಲು ಶುರುಮಾಡಿದ್ದಾನೆ.

’ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ’ (೯, ೩೧), ಅರ್ಥಾತ್, ’(ದುರಾಚಾರಿಯೂ ನನ್ನನ್ನು ಭಜಿಸಿದರೆ) ಬೇಗನೆ ಆತ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ಹೊಂದುತ್ತಾನೆ’, ಎಂದ ಶ್ರೀಕೃಷ್ಣನಂತೆ ವರುಣ್ ಕೂಡ, ’..ನನ್ನ(ಮಾತ)ನ್ನು ಭಜಿಸಿದರೆ ನೀವು (ಹಿಂದು)ಧರ್ಮಾತ್ಮರಾಗುತ್ತೀರಿ ಮತ್ತು ಶಾಶ್ವತ ಪರಿಹಾರವನ್ನು/ಶಾಂತಿಯನ್ನು ಹೊಂದುತ್ತೀರಿ’, ಎಂದು ನಮಗೆಲ್ಲ ಉಪ-ದೇಶಿಸುತ್ತಿದ್ದಾನೆ.

ಇಂತಿರುವ ವರುಣ್ ಗಾಂಧಿಯು, ಈಗ ಇದೋ, ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರನುಸಾರ ನಡೆಯುವಂತೆ ಪ್ರಿಯಾಂಕಾಳಿಗೇ ಆಣ್-ಅತಿ ಮಾಡುತ್ತಿದ್ದಾನೆ!

ವರುಣ್ ಉವಾಚ :
’ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ....ತಸ್ಯ ಪ್ರಜ್ಞಾ ಪ್ರತಿಷ್ಠಿತಾ’ (೨, ೫೮), ’ಜನರು ಯಾವಾಗ ಚಾಯ್ ಕಪ್ಪನ್ನು ಸಂಹರಿಸುತ್ತಾರೋ, ಯಾನೇ, ಟೀಯನ್ನು ಒಳಗಿಳಿಸಿ ಕಪ್ ಖಾಲಿಮಾಡುತ್ತಾರೋ ಆಗ ಅವರು ಪ್ರತಿಷ್ಠಿತರು; ಓಹ್, ಕ್ಷಮಿಸಿ, ಗಾಡಿ ಹಳಿ ತಪ್ಪಿತು, ಆಮೆಯು ತನ್ನ ಕಾಲುಗಳನ್ನು ಎಲ್ಲ ದಿಕ್ಕುಗಳಿಂದಲೂ (ಚಿಪ್ಪಿನ) ಒಳಕ್ಕೆಳೆದುಕೊಳ್ಳುವಂತೆ, ಪ್ರಿಯಾಂಕಾ, ಯಾವಾಗ ನೀನು ಬಾಯಿ ಮುಚ್ಕೊಂಡು ಗಪ್‌ಚುಪ್ ಆಗುತ್ತೀಯೋ ಆಗ ನಿನ್ನ ಪ್ರಜ್ಞೆ ಪ್ರತಿಷ್ಠಿತ ಎಂದರ್ಥ, ಆದ್ದರಿಂದ ನೀನು ಅಂಥ ಸ್ಥಿತಪ್ರಜ್ಞಳಾಗು; ಮಾತಾಡ್ಬೇಡ ಸುಮ್ಕಿರು.’

ವರುಣನ ಈ ಮಾತು’ಗುಳಿಗೆ’ ಪ್ರಿಯಾಂಕಾ ಏನೆನ್ನುವಳು?
’ಯಾಕಾ ತಮ್ಮಾ, ಇಂಗಾಡ್ತಿ?!’ ಎನ್ನುವಳು.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗಃ

ದಶದಿಕ್ಕುಗಳಿಗೂ ವರುಣಪ್ರತಾಪ!

(ಚಿತ್ರ ಕೃಪೆ : telegraphindia.com)

ರೈತರಿಗೆ ಸಲಹೆ. ಕ್ಷಮಿಸಿ, ರೇಡಿಯೋ ಕೇಳಿ ಕೇಳಿ ಈ ನುಡಿಗಟ್ಟು ಬಂತು.
ರೈತರಿಗೆ ಸ್ಪಷ್ಟನೆ: ಈ ಕೆಳಗಿನ ಲೇಖನವು ಮಳೆ ಕುರಿತಾದದ್ದಲ್ಲ. ಮಳೆಗಾಗಿ ಹವಾಮಾನ ಇಲಾಖೆಯನ್ನು ಸಂಪರ್ಕಿಸಿ (ಮೋಸಹೋಗಿ).

ವರುಣ್ ಗಾಂಧಿಯ ಪ್ರತಾಪವು ಇಂದು ದಶದಿಕ್ಕುಗಳಿಗೂ ಹರಡಿದೆ. ಅಷ್ಟದಿಕ್ಪಾಲಕರಂತೂ ತಮ್ಮ ಪಟ್ಟಗಳನ್ನು ’ವಗಾಂ’ಗೆ ವರ್ಗಾಯಿಸಿ (ಒಗಾಯಿಸಿ) ರಿ-tired! ಈಗ ವರುಣ್ ಗಾಂಧಿಯೇ ಅಷ್ಟದಿಕ್ಕುಗಳೊಡೆಯ! ’ನಮೋನ್ನಮಃ ಜೀಯಾ!’
’ ಓಂ ಇಂದ್ರಾಯ ನಮಃ ಅಗ್ನಯೇ ನಮಃ ಯಮಾಯ ನಮಃ ನಿರುತಯೇ ನಮಃ ವರುಣಾಯ ನಮಃ ವಾಯವೇ ನಮಃ ಕುಬೇರಾಯ ನಮಃ ಈಶಾನ್ಯಾಯ ನಮಃ .’

ವರುಣ್ ಗಾಂಧಿ ಅಷ್ಟದಿಕ್ಕುಗಳೊಡೆಯ ಹೇಗೆ?

ಹೀಗೆ :
* ಹಿಂದುವಾದಿಗಳಿಗಾತ ಇಂದ್ರ.
* ನಿರ್ದಿಷ್ಟ ಕೋಮುಗಳೆರಡರ ಮಧ್ಯೆ ಆತ ಅಗ್ನಿ.
* ಕೋಮೊಂದರ ಪಾಲಿಗಾತ ಯಮ(ಪ್ರಾಯ).
(ಪ್ರಾಯ ಅಂಥದು, ಏನ್ಮಾಡೋದು ಹೇಳಿ.)
* ಹಿಂದುಸೇನೆಗಳ ದೃಷ್ಟಿಯಲ್ಲಾತ ದುರ್ಗಾಪತಿ ನಿರುತಿ.
* ವರುಣ...ಅದೇ ತಾನೇ ಆತ? (ಹಿಂದುವಾದಿಗಳಿಗೆ ಆತನ ಮಾತು ತಂಪಾದ ಮಳೆ.)
* ವಾಯು...ಹೌದು, ಪ್ರಸಕ್ತ ಚುನಾವಣಾ ರಾಜಕಾರಣದಲ್ಲಾತ ಜಂಝಾವಾತ! (’ರಾಂಗ್. ಜಂಝಾನಿಲ.’ ’ಓಕೆ.’)
* ಬಿಜೆಪಿ ಪಾಲಿಗೀಗ ಆತ ಮತಕುಬೇರ. (ಹಿಂದು ಮತ ಅಲ್ಲ, ವೋಟ್ ಎಂಬ ಮತ.)
ಮತ್ತು
* ’ಬಲ’ಗಡೆಯವರಿಗಾತ ಈಶ; ’ಎಡ’ಗಡೆಯವರಿಗಾತ ಅನ್ಯ; ಒಟ್ಟು ಈಶಾನ್ಯ.

ಇನ್ನು, ಮೇಲೂ ಕೆಳಗೂ ಆತನ ಪ್ರತಾಪವೇನು ಕಮ್ಮಿಯೇ?

ಕೈಯನ್ನು ಮೇಲಕ್ಕೆತ್ತಿ ಒಮ್ಮೆ ಗರ್ಜಿಸಿದನೆಂದರೆ ಆ-ಕಾಶವೇ ಅದುರಬೇಕು! ಇಷ್ಟಕ್ಕೂ ಆತನ ಪ್ರ-ತಾಪ-ಮಾನಗಳೆಲ್ಲ ಆಕಾಶಮಾರ್ಗವಾಗಿಯೇ ಅಲ್ಲವೆ ಎಲ್ಲರ ಮನೆಗಳ ಮೂರ್ಖಪೆಟ್ಟಿಗೆಯನ್ನು ಸೇರುವುದು?

ಓಕೇ. ಮೇಲಾಯಿತು; ಕೆಳಗೆ?

ಶ್! ಅಂಡರ್-ಗ್ರೌಂಡ್ ಎಕ್ಟಿವಿಟಿ/ಆಕ್ಟಿವಿಟಿ/ಯಾಕ್ಟಿವಿಟಿ/ಕಟಿಪಿಟಿ ಮಾಡುವ ಮೂಲ-ಭೂತ-ವಾದಿಗಳಿಗಷ್ಟೇ ಗೊತ್ತು ಈ ವಿಷಯ, pub-leak ಮಾಡುವಂತಿಲ್ಲ.

ಹೀಗೆ ದಶದಿಕ್ಕುಗಳಿಗೂ ವ್ಯಾಪಿಸಿರುವ ಪ್ರತಾಪಸಿಂಹ - ಕ್ಷಮಿಸಿ - ಪ್ರತಾಪಶಾಲಿ ವರುಣನಿಗೆ ಗುಳಿಗೆಪ್ಪನ ನಮೋನ್ನಮಃ.

ನ್ಯಾನೊ ಹನಿಗಳು

-೧-
ಅವನೊ, ಇವನೊ, ನೀನೊ, ನಾನೊ,
ಲಕ್ಷದ ಮೇಲಷ್ಟು ಕೊಟ್ರಾಯ್ತು, ನ್ಯಾನೊ!
ಅಡ್ವಾನ್ಸ್ ಕಟ್ಟೋದ್ ಬರೀ ಮೂರ್ಸಾವ್ರ
ಬೋರೇಗೌಡ್ನೂ ಇನ್ನ್ ಕಾರ್ ಸಾವ್ಕಾರ!

-೨-
(’ಗೇರ್ ಗೇರ್ ಮಂಗಣ್ಣ’ ಧಾಟಿಯಲ್ಲಿ)
ಕಾರ್ ಕಾ‍ರ್ ತಿಮ್ಮಣ್ಣ
ಚೀಪ್ ರೇಟಿಗ್ ನಿಂಗಣ್ಣ
ಗೇರ್ ಈಸೀ ನೋಡಣ್ಣ
ಕಾರ್-ಬಾರ್ ಮಾಡಣ್ಣ

-೩-
ಮುಂದೇನಾಗುತ್ತೆ
ನಮ್ಮ್ ರಸ್ತೆ ಕಥೆ?

ಗುಂಪುಗೂಡ್ತವೆ ಟಾಟಾ ಕಂಪ್ನಿ ನ್ಯಾನೊ ಕಾರು
ಸೊಂಪಾಗಿ ರಸ್ತೇಲವದ್ದೇ ಕಾರುಬಾರು
ತಂಪಾಗಿ ಕೂತಿರ್ತಾರೆ ಜಾಮ್‌ನಲ್ಲಿ ಎಲ್ರೂ!
ಕೆಂಪುಕಣ್ಣು ಮಾಡ್ಕೋತಾರೆ ಟ್ರಾಫಿಕ್ ಪೋಲೀಸ್ರು!

ಬಿಡುಗಡೆಗೆ ಮೊದಲೇ ಸಿನಿಮಾ ’ಹೌಸ್‌ಫುಲ್’!

ಆನೆ, ಇದ್ದರೂ ಬೆಲೆಬಾಳುತ್ತದೆ, ಸತ್ತರೂ ಬೆಲೆಬಾಳುತ್ತದೆ. ಗಜಸಮಾನ ವ್ಯಕ್ತಿ ಚಾರ್ಲಿ ಚಾಪ್ಲಿನ್ ವಿಷಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಅವನ ಭಾವಿ ಪ್ರತಿಮೆ ಎಂಥ ಅಮೂಲ್ಯವೆಂದು ಈಚೆಗಷ್ಟೇ ಸಾಬೀತಾಯಿತಷ್ಟೆ.

ಆ ಪ್ರತಿಮೆ ಎಲ್ಲೆಲ್ಲೋ ತಿರುಗಾಡಿ ಕೊನೆಗೀಗ ಬೆಂಗಳೂರು ಸಮೀಪದ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಬಂದುನಿಂತಿದೆ. ಅಲ್ಲೇ ಉಳಿಯುತ್ತದೋ ಅಲ್ಲಿಂದ ಮತ್ತೆ ಬೇರೆಡೆಗೆ ಎತ್ತಂಗಡಿಗೊಳಗಾಗುತ್ತದೋ ಗೊತ್ತಿಲ್ಲ. ಆದರೆ, ಈ ಭಾವಿ ಪ್ರತಿಮೆಯ ಸುತ್ತ ಜನರ ಪ್ರದಕ್ಷಿಣೆ-ಅಪ್ರದಕ್ಷಿಣೆಗಳು ಮಾತ್ರ ಭರ್ಜರಿಯಾಗಿ ನಡೆದವು. ಅಮೂಲ್ಯ ಪ್ರತಿಮೆಯ ಅಮೂಲ್ಯ ವಿಷಯವನ್ನು ಕೈಗೆತ್ತಿಕೊಂಡು ಅಮೂಲ್ಯ ವ್ಯಕ್ತಿಗಳು ಅಮೂಲ್ಯ ವಾದ-ವಿವಾದ ಇತ್ಯಾದಿ ನಡೆಸಿ ಸಮಾಜಕ್ಕೆ ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವು ಇಂತಿವೆ:
* ಉಪಮೆಯಿಲ್ಲದಂಥ ಈ ಪ್ರತಿಮಾ ವಿವಾದದಿಂದಾಗಿ ಜನರಲ್ಲಿ (ಧರ್ಮ)ಜಾಗೃತಿ ಉಂಟಾಯಿತು.
* ಹಿಂದು-ಕ್ರಿಶ್ಚಿಯನ್-ಜ್ಯೂ-ಮುಸ್ಲಿಂ ಮುಂತಾಗಿ ಅನುಪಮ ಧರ್ಮಜಿಜ್ಞಾಸೆ ನಡೆಯಿತು.
* ಸಾಹಿತಿ-ಕಲಾವಿದ-ರಂಗಕರ್ಮಿ-’ಬುದ್ಧಿಜೀವಿ’ಗಳನೇಕರಿಂದ ’ಸ್ವಾತಂತ್ರ್ಯ ಚಳವಳಿ’ ನಡೆಯಿತು.
* ಕಾಂಗ್ರೆಸ್-ಜೆಡಿಎಸ್-ಕಮ್ಯುನಿಸ್ಟ್ ಪಕ್ಷಗಳಿಂದ ಪ್ರಸಕ್ತ ಚುನಾವಣಾ ಸಂದರ್ಭದಲ್ಲಿ ಸದರಿ (ಭಾವಿ) ಪ್ರತಿಮೆಯ ನೆರಳಿನಲ್ಲಿ ’ಧರ್ಮ-ಕರ್ಮ-’ಮತ’-ವಿಚಾರ-ಸಮ್‌ಕಿ’ರಣ’ಕಹಳೆಗಳು’ ಮೊಳಗಿದವು.
* ನನ್ನೀ ಬರಹವೂ ಸೇರಿದಂತೆ ಪುಂಖಾನುಪುಂಖವಾಗಿ ಬರಹಗಳು ಧುಮ್ಮಿಕ್ಕಿದವು.
* ಆಂಗ್ಲ ದೃಶ್ಯಮಾಧ್ಯಮಗಳು ಕರ್ನಾಟಕದ ಈ ’ಜಗಘೋರ’ - ಕ್ಷಮಿಸಿ - ’ಜಗದೋದ್ಧಾರ’ಕಾರ್ಯವನ್ನು ಜಗಜ್ಜಾಹೀರು ಮಾಡಿ, ವೈಭವೀಕರಿಸಿ, ಜಗಿದುಗುಳಿ, ನಮಗೆ ಜಗ್ಗಿ ಪಬ್ಲಿಸಿಟಿ ನೀಡಿದವು.
* ’ಅಪ್ರತಿಮ ಪ್ರತಿಮಾಭಿಮಾನಿ’ ನಿರ್ಮಾಪಕ ಮಹಾಶಯನಂತೂ ತನ್ನ ಅನ್ಯೋದ್ದೇಶದ ರೊಟ್ಟಿಯು ಜಾರಿ ಪ್ರಚಾರದ ತುಪ್ಪದಲ್ಲಿ ಬಿದ್ದದ್ದನ್ನು ಕಂಡು ಒಳಗೊಳಗೇ ಹಿರಿಹಿರಿ ಹಿಗ್ಗಿದನು.

ಬಿಡುಗಡೆಗೆ ಮೊದಲೇ ಸಿನಿಮಾ ’ಹೌಸ್‌ಫುಲ್’!
ಬಿಡುಗಡೆಯಾದಮೇಲೆ?
ಖಾಲಿಖಾಲಿ!!

ಸೋಮವಾರ, ಮಾರ್ಚ್ 23, 2009

ಡೀಕೇಶಾಕೇಶಿ

ಡೀಕೇಶಿಯ
ಕೇಶ ಹಿಡಿದು
ತೇಜಸ್ವಿನಿ
ಮನಸ್ವಿ
ಜಗ್ಗತೊಡಗಿದಾಗ
ಡೀಕೆ,
’ನಾನಿನ್ನು
ನಿನ್ನ ಪಾಲಿಗೆ
ಕೇಡಿ
ಆಗಬೇಕಾದೀತು,
ಹುಷಾರ್!’
ಅಂದನಂತೆ
ಅನ್ನುವುದು
ಸುಳ್ಳು ಸುದ್ದಿ

ಕಾನೂನಿನ ಕತ್ತು

ಕಾನೂನು ರಚಿಸುವ ಜನಪ್ರತಿನಿಧಿಗಳಿಗೆ
ಕಾನೂನು ಗೊತ್ತು.
ಕಾನೂನು ರಕ್ಷಿಸುವ ಆರಕ್ಷಕರಿಗೆ
ಕಾನೂನು ಗೊತ್ತು.
ಕಾನೂನು ವಾದಿಸುವ ವಕೀಲರಿಗೆ
ಕಾನೂನು ಗೊತ್ತು.
ಆದರೆ, ಅಯ್ಯೋ!
ಇವರು ಮೂವರಿಂದಲೇ
ಇಂದಿನ ದಿನಗಳಲ್ಲಿ
ಕಾನೂನಿಗೆ ಕುತ್ತು!

ಐಪಿಎಲ್ಲೇ ಸತ್ಯ

ಎಲ್ಲಾದರು ಇರು ಎಂತಾದರು ಇರು
ಹೆಸರಿಗೆ ಮಾತ್ರ ’ಐಪಿಎಲ್’ ಆಗಿರು
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ

ಐಪಿಎಲ್ ಎಂಬ ಓ ಮುದ್ದಿನ ಕರು,
ಟಿವಿ ಪ್ರಸಾರವೊಂದಿದ್ದರೆ ನೀ ನಮಗೆ ಕಲ್ಪತರು

ನೀ ಮೆಟ್ಟುವ ನೆಲ ಅದೆ ಅನ್ಯರ ನೆಲ
ನೀ ಆಡುವ ಪಿಚ್ ಧನಲಕ್ಷ್ಮಿ
ನೀ ಮುಟ್ಟುವ ಬ್ಯಾಟ್ ಅದೆ ದುಡ್ಡಿನ ಗಂಟ್
ನೀ ಕುಡಿಯುವ ನೀರ್ ಬಿಸ್‌ಲೇರಿ

ಗಂಟನು ನೋಡುವ ನಿನ್ನಾ ಕಂಗಳು
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ //ಎಲ್ಲಾದರು ಇರು..//

ಹರಿಯುವ ಹಣದಾ ಹೊಳೆಗೆರಗುವ ಮನ
ಹಾಳಾಗಿಹ ಬುದ್ಧಿಗೆ ಕೊರಗದ ಮನ
ಬೆಳಗಾದರೆ ದುಡ್ಡಿಗೆ ಸಾಯುವ ಮನ
ಮಜ-ಮೋಜಿಗೆ ಹೊಂಪುಳಿ ಹೋಗುವ ಮನ

ಕಾಂಚಾಣಕೆ ಬಲಿಯಾಗುವ ಪೆಂಪಿಗೆ
ಹೆಸರಿನ ಇಂಪಿಗೆ ನೋಟಿನ ಸೊಂಪಿಗೆ
ನಾವುಗಳೆಲ್ಲರು ಹೊಗಳುವ ತಪ್ಪಿಗೆ
ರಸರೋಮಾಂಚನಗೊಳುವಾ ನಿನ್ನ್ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ

ಎಲ್ಲಾದರು ಇರು ಎಂತಾದರು ಇರು
ದೇಶದ ಮಾನ ಹರಾಜ್ ಹಾಕ್ತಾ ಇರು
ಐಪಿಎಲ್ಲೇ ಸತ್ಯ
ಐಶ್ವರ್ಯವೆ ನಿತ್ಯ
ಅನ್ಯರ ನೆಲವೇ ಪಥ್ಯ

(ದೇಶಾಭಿಮಾನ?
ಮಿಥ್ಯ!)

ಜೇಡ್ ಗೂಡಿ

ಜೇಡ್ ಗೂಡಿಗೆ ಮರಳಿದಳು
ಕೊನೆ ದಿನಗಳಲ್ಲಿ ನರಳಿದಳು
ಬಿಗ್ ಬ್ರದರ್ ಷೋನಲ್ಲಿ ಕೆರಳಿದಳು
ಕುಗ್ಗಿಹೋಗಿ ಕೊನೆಗೆ
ತೆರಳಿದಳು

ಭಾನುವಾರ, ಮಾರ್ಚ್ 22, 2009

ಲಾಲು ಕೀ ಜೈ!

ಲಾಲು-ಸೋನಿಯಾ ಈಗ ಎಣ್ಣೆ-ಸೀಗೇಕಾಯ್!
’ಕೈ’ಚಳಕದ ಪಕ್ಷಕ್ಕೇ ಕೊಟ್ಟ ನೋಡಿ ಕೈ!
ಅಂತಿಂಥೋನಲ್ಲ ಈ ಮುದಿ guy;
ಮೇವು ತಿನ್ನೋಕೂ ಸೈ, ಸಗ.. ತಿನ್ನಿಸೋಕೂ ಸೈ!

ಒಂದು ಓವರ್

-1-
ಹರಿದಾಸರ ಪದ: ’ಹರಿಭಜನೆಯ ಮಾಡಿರೋ..’
ಕಿರಿಕೆಟ್ಟಿಗರ ಪದ: ’ಹರಭಜನನ ಭಜಿಸಿರೋ..’

***

-2-
ಕಿವಿಗಳಿರುವುದು
ಕೇಳಲಿಕ್ಕೆ
ಮತ್ತು
ಸೋಲಲಿಕ್ಕೆ

***

-3-
ಹರಭಜನ್ ಕೈಯಲ್ಲಿ
ಕಿವಿ ಬಜ್ಜಿ!
ಸಚಿನ್ ಕೈಯಲ್ಲಿ
ಅದು ಚಿನ್
ದಿ!

***

-4-
ದೋನಿ ಸಾಗಿದೆ
ಮುಂದೆ ಹೋಗಿದೆ
ದೂರ ತೀರವ ಸೇರಿದೆ
ಬೀಸುಗಾಳಿಗೆ
ಬೀಳುತೇಳುವ
ಬಿಳಿಯರ್ ಮೇಗಡೆ ಹಾದಿದೆ!

***

-5-
ದಡ್ಡ ತಿಪ್ಪೇಶಿ ಕೇಳ್ತಾನೆ,
’ದೋನಿಗೆ ಆಸ್ಕರ್ ಸಿಗುತ್ತಾ?’
ದೊಡ್ಡ ಮಟ್ಟದಲ್ಲೇ ಏರಿದೆ ಪಾಪ
ನೆತ್ತಿಗೆ ಆಸ್ಕರ್ ಪಿತ್ತ!
(ತಪ್ಪು ಮಾಧ್ಯಮಗಳದ್ದು,
ಗೊತ್ತಾ?)

***

-6-
ದೋನಿಯನ್ನು ಸೆಳೆಯಲು
ಆಪರೇಷನ್ ಕಮಲ
ನಡೆದರೆ
ಆಶ್ಚರ್ಯವಿಲ್ಲ

ಸಂಘ ಪರಿವಾರ

’ರಾಮಾ’ಯಣ ಆಯಿತು
ಮಹಾಭಾರತ(ದ ಸುದರ್ಶನಚಕ್ರ)
ಆಯಿತು
ಇನ್ನೀಗ
ಭಾಗವತ

..ಗೆ

ಹೋಳಿಗೆ
ಕಟ್ಟಿಗೆ
ಯುಗಾದಿಗೆ
ಹೋಳಿಗೆ

ಹೆಸರಿಲ್ಲದ ಒಂದು ಡಜನ್ ಮಿಣಿಮಿಣಿ ಮೈಕ್ರೌಮೈಕ್ರೌ ಕಥೆಗಳು (ಹೆಡ್ಡಿಂಗೇ ಇಷ್ಟುದ್ದ!)

-೧-
ಅಂದು ದೀಪಾವಳಿ ರಾತ್ರಿ. ಕೆಲ ದಿನಗಳ ಹಿಂದಷ್ಟೇ ಪಕ್ಕದಮನೆಗೆ ಬಾಡಿಗೆಗೆ ಬಂದಿದ್ದ ಮುದಿ ಸಂಸಾರದ ಹದಿ ಹರಯದ ಸದಸ್ಯೆಯಾದ ಆಕೆಯ ಮುಖವನ್ನು ಅವಳು ಹಚ್ಚಿದ ನಕ್ಷತ್ರಕಡ್ಡಿಯ ಬೆಳಕಿನಲ್ಲಿ ನಾನು ದಿಟ್ಟಿಸಿದಾಗ ಅವಳೂ ಓರೆಗಣ್ಣಿಂದ ನನ್ನನ್ನು ದಿಟ್ಟಿಸಿದಳು. ಮುಂದಿನ ಒಂದು ಗಂಟೆ ಇಬ್ಬರಿಗೂ ದೀಪಾವಳಿ.
ಇದು ಆರು ವರ್ಷಗಳ ಹಿಂದಿನ ಘಟನೆ. ಈಗ ನಾನು ಮನೆ ಹೊರಗಡೆ ನಾಲ್ಕು ವರ್ಷದ ಮಗರಾಯನ ಕೈಯಿಂದ ಪಟಾಕಿ ಹಚ್ಚಿಸುತ್ತಿದ್ದರೆ ಆಕೆ ಒಳಗೆ ಅಡುಗೆಮನೆಯಲ್ಲಿ ಬ್ಯುಸಿ.
ಆ ದೀಪಾವಳಿಯೇ ಚೆನ್ನಾಗಿತ್ತು.

***

-೨-
’ಮೊದಲ್ನೇ ದೀಪಾವಳಿಗೆ ಅಳಿಯ-ಮಗಳು ಬರೋವಾಗ್ಲೇ ಗ್ಯಾಸ್ ಮುಗೀಬೇಕೇ! ಅಂಗಡಿಯವ್ರು ಸಿಲಿಂಡರ್ ಕೊಡೋಕೆ ಇನ್ನೂ ನಾಕು ದಿನ ಆಗುತ್ತೆ ಅಂತಾರೆ. ಎಕ್ಸ್ಟ್ರಾ ಸಿಲಿಂಡರೂ ಇಲ್ಲ; ಪಕ್ಕದ್ಮನೇಲೂ ಸಿಗ್ಲಿಲ್ಲ. ಛೆ!’ ಅಂತ ಅಡುಗೆಮನೆಯೊಳಗಿಂದ ನನ್ನಾಕೆ ಹತ್ತನೇ ಸಲ ಗೊಣಗ್ತಿದ್ದಂತೆ ಅಳಿಯ-ಮಗಳು ಬಂದೇಬಿಟ್ರು. ಮತ್ತೆ ಹತ್ತು ನಿಮಿಷದಲ್ಲೇ ಸಿಲಿಂಡರ್ ಕೂಡ ಪ್ರತ್ಯಕ್ಷ!
ನನ್ನ ತಲೇಲಿ ಬ್ರೈನು, ಕೈಯಲ್ಲಿ ಸೆಲ್ ಫೋನು ಮತ್ತು ಪೋಲಿಸ್ ಅಧಿಕಾರಿ ಅಳೀಮಯ್ಯನ ’ಕೈಲಿ’ ಕಾನೂನು ಇರೋದು ಮತ್ತ್ಯಾತಕ್ಕೆ?

***

-೩-
ಮುಂಬಯಿಯಿಂದ ಹೊರಟ ಟ್ರೈನು ಬೆಂಗಳೂರು ತಲುಪುವಷ್ಟರಲ್ಲಿ ನನ್ನ ಮೂಡೇ ಔಟಾಗಿಹೋಗಿತ್ತು. ಸಂಜೆ ಆರಕ್ಕೆ ತಲುಪಬೇಕಾದ ಟ್ರೈನು ರಾತ್ರಿ ಎಂಟಕ್ಕೆ ತಲುಪಿದರೆ ಇನ್ನೇನಾಗುತ್ತೆ? ’ಪ್ರೇಮಾ ಮತ್ತು ಪುಟ್ಟಿ ಕಾದು ಕಾದು ಚಡಪಡಿಸ್ತಿರ್ತಾರೆ. ಹಾಳು ಟ್ರೈನು, ಹಾಳು ನೌಕರಿ’, ಅಂದುಕೊಳ್ತಾ ಮನೆಗೆ ಹೋದರೆ ಮನೆಗೆ ಬೀಗ!
ಅರ್ಧ ಗಂಟೆ ನಂತರ ಇಬ್ಬರೂ ಆಟೋದಲ್ಲಿ ಬಂದಿಳಿದರು. ’ಸ್ಸಾರೀರೀ. ಪುಟ್ಟಿ ಫ್ರೆಂಡಿನ ತಾಯಿ ಯಾವಾಗ್ಲೂ ಕರೀತಿದ್ದರು, ಮನೆಗೆ ಬನ್ನಿ, ಮನೆಗೆ ಬನ್ನಿ, ಅಂತ. ಅದಕ್ಕೇ ಹೋಗಿದ್ವಿ. ಮಾತಾಡ್ತಾ ಲೇಟಾಗ್ಬಿಟ್ತು. ಆರು ಗಂಟೆಯಿಂದ ಕಾಯ್ತಿದೀರೇನೋ ಅಲ್ವಾ?’ ಅನ್ನುತ್ತ ಪ್ರೇಮಾ ಕೀಲಿಕೈಯನ್ನು ನನ್ನೆಡೆ ಚಾಚಿದಳು.
ಟ್ರೈನ್ ಲೇಟ್ ಅನ್ನೋದನ್ನ ಮೊದಲೇ ಸ್ಟೇಷನ್‌ಗೆ ಫೋನ್ ಮಾಡಿ ತಿಳಿದುಕೊಂಡಿಲ್ಲ ಇವ್ಳು ಹಾಗಾದರೆ!

***

-೪-
ಬಾರಿಂದ ರಾತ್ರಿ ಹೊರಬಿದ್ದ ಆತ ತೂರಾಡುತ್ತ ತನ್ನ ಮನೆಯೆಂದು ಭಾವಿಸಿ ಬೇರೊಂದು ಮನೆಯನ್ನು ಹೊಕ್ಕ! ಹಾಲ್‌ನಲ್ಲಿ ಕೂತಿದ್ದ ಆ ಮನೆಯ ಯಜಮಾನನಿಗೆ, ’ಏಯ್! ಯಾರೋ ನೀನು, ನಮ್ಮನೇ ಒಳಗ್ಬಂದು ಯಾಕ್ ಕೂತಿದಿ?’ ಅಂತ ಗದರಿದ!
ಆ ಯಜಮಾನ ಮೆಲ್ಲಗೆ ಎದ್ದುನಿಂತು, ’ಸ್ಸಾರಿ ಮಿಸ್ಟರ್, ಪರಪಾಟಾಯ್ತು, ಸ್ಸಾರಿ’, ಅನ್ನುತ್ತ ತೂರಾಡಿಕೊಂಡು ಹೊರನಡೆದ!

***

-೫-
’ಕಳೆದ ವರ್ಷ ಇದೇ ಯುಗಾದಿ ದಿನ, ಅಮೆರಿಕಾದಲ್ಲಿರೋ ಮಗ-ಸೊಸೆ-ಮೊಮ್ಮಕ್ಕಳನ್ನು ನೆನೆಯುತ್ತಾ ಈ ಒಬ್ಬಂಟಿ ನಾನು ಪಾರ್ಕಿಗೆ ಬಂದು ಈ ಕಲ್ಲುಬೆಂಚಿನ ಇನ್ನೊಂದು ತುದೀಲಿ ಕೂರದೇ ಇದ್ದಿದ್ದರೆ, ನನ್ನಹಾಗೇ ಒಂಟಿಯಾಗಿ ನರಳುತ್ತಿದ್ದ ನೀವು ನನಗೆಲ್ಲಿ ದೊರೆಯುತ್ತಿದ್ದಿರಿ ನನ್ನ ದೊರೆ’, ಎಂದು ಆಕೆ ತನ್ನ ಪತಿಯ ಬೆಳ್ಳಿಗೂದಲಮೇಲೆ ಮೃದುವಾಗಿ ಕೈಯಾಡಿಸಿದರು.

***

-೬-
ಹುಟ್ಟುಹಬ್ಬದ ದಿನ ಐದು ಕ್ಯಾಂಡಲ್‌ ಆರಿಸಿ ಪುಟಾಣಿ ನಿತಿನ್ ತನ್ನ ಸ್ನೇಹಿತರ ಜೊತೆ ನಲಿದಾಡುತ್ತಿದ್ದಾಗ ಅವನ ಅಪ್ಪ-ಅಮ್ಮ ಐದು ವರ್ಷದ ಹಿಂದಿನ ಆ ದಿನದ ನೋವು-ಕಳವಳ-ಬಿಡುಗಡೆ-ಸಂಭ್ರಮಗಳನ್ನು ನೆನೆದು ಸುಖಿಸುತ್ತಿದ್ದರು.

***

-೭-
ಯುಗಾದಿ ದಿನ ಒಂದೇ ಒಬ್ಬಟ್ಟಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದ್ದಕ್ಕೆ ಡಯಾಬಿಟೀಸ್ ರಾಯರು ಜೋಲುಮೋರೆ ಹಾಕಿಕೊಂಡಿದ್ದರು. ಸ್ನೇಹಿತರೊಡನೆ ಸಂಜೆ ಕಟ್ಟೆಪುರಾಣ ಮುಗಿಸಿ ವಾಪಸಾದಾಗ ಅವರ ಮುಖ ಪ್ರಸನ್ನವಾಗಿತ್ತು. ’ನಾನೇ ವಾಸಿ’, ಅಂದುಕೊಳ್ಳುತ್ತಾ ಮನೆಯೊಳಗೆ ಕಾಲಿಟ್ಟರು.

***

-೮-
ಮೊದಲ ದೀಪಾವಳಿಗೆ ಅಮೆರಿಕದಿಂದ ಅಳಿಯ ಬರಲಿಲ್ಲ. ವೀಸಾ ಸಿಗಲಿಲ್ಲ.
ನಂತರದ ದೀಪಾವಳಿಗೂ ಬರಲಿಲ್ಲ. ಡೈವೋರ್ಸ್ ಸಿಕ್ಕಿತ್ತು.

***

-೯-
ಬೆಂಕಿ ನೋಡಿದಾಕ್ಷಣ ಗತವು ಕಣ್ಣೆದುರು ಬಂದಂತಾಗಿ ಆ ಭಿಕ್ಷುಕ ಮೂರ್ಛೆಹೋಗುತ್ತಾನೆ.

***

-೧೦-
ನನಗೆ ಊಟ ಬಂದಿರೋ ಈ ಅಲ್ಯುಮಿನಿಯಂ ತಟ್ಟೇಲೇ ನಾನೂ ಅಪ್ಪನಿಗೆ ಕೊನೆಗಾಲದಲ್ಲಿ ಊಟ ಕೊಡ್ತಿದ್ದದ್ದು.

***

-೧೧-
’ಢಂ’ ಅಂದಿದ್ದಷ್ಟೇ. ಅಲ್ಲಿಂದೀಚೆ
ಏನೂ ಕಾಣುತ್ತಿಲ್ಲ.

***

-೧೨-
’ಯ್ಯು..ಗಾ..ದಿ?....ವ್ವೊಗೆಲೇ!’
’ರೀ...ಇವತ್ತೂ...!’

ಶನಿವಾರ, ಮಾರ್ಚ್ 21, 2009

ಖೇಣಿ-ದೇಗೌ

ಖೇಣಿಗೆ
ಬೇಕು
ಸಂಸದ ಸ್ಥಾನ
ಭವಿಷ್ಯದ
ಏಣಿಗೆ
ಮೆಟ್ಟಿಲಾಗಿ
ಮತ್ತು
’ದೇಗೌ’ರನ್ನು
ಮೆಟ್ಟಲಿಕ್ಕಾಗಿ.

’ದೇಗೌ’ರಿಗೆ ಬೇಕು
ಸಂಸದ ಸ್ಥಾನ,
ಪ್ರಧಾನಿ ಪಟ್ಟ,
ಸಿಗುವುದಾದರೆ
ಮುಂದೆ
ರಾಷ್ಟ್ರಪತಿ ಹುದ್ದೆ
ಮತ್ತು
ಕಂಪಲ್ಸರಿ
ರಾಗಿಮುದ್ದೆ
ತಮ್ಮ
ಜೀವನದ ಗುರಿ
ಮುಟ್ಟಲಿಕ್ಕಾಗಿ.

’ಬ್ಯಾಟ್, ಮ್ಯಾನ್!’

(ಚಿತ್ರ ಕೃಪೆ : ’ಡಿ ಎನ್ ಎ’)

ನಾಸಾಪುಟದೊಳಗೆ
ನೊಣ ಹೊಕ್ಕಂತೆ
ಅಮೆರಿಕದ
’ನಾಸಾ’ ಕೇಂದ್ರದಲ್ಲಿ
’ಡಿಸ್ಕವರಿ’ ನೌಕೆಮೇಲೆ
ಒಂದು
ಬಾವಲಿ ಕೂತಿತಂತೆ!

ನೌಕೆಯನ್ನು ಅವುಚಿ ಹಿಡಕೊಂಡು
ನೌಕೆಯಡನೆ
ಅದೂ
ನಭಕ್ಕೇರಿತಂತೆ!

ಆಹಾ!
ಎಂಥ ಬಾಹು-ಬಲಿ

ಬಾವಲಿ!

ಖಂಡಿತ
ಕೊಡಬೇಕದಕ್ಕೆ
ಭರ್ಜರಿ ಬಿರುದು-
-ಬಾವಲಿ.

ಆದರೆ,
ಡಿಸ್ಕವರಿ
ಗೀಗ

ಬಾ
ವಲಿಯ
ದೇ
ವರಿ!

ಪುನರ್ಮಿಲನ : ಒಂದು ಹಾಡುಹರಟೆ : ಬಂಗಾರ-ಕುಮಾರ-ಮಧು-ಚಂದ್ರ-ಯಾನ

ಇದು ’ಬಂಕುಮ’ಚಂದ್ರರ ಕಥೆ.
ಒಂದಾನೊಂದು ಕಾಲದಲ್ಲಿ,
’ನಮ್ಮ ಸಂಸಾರ, ಆನಂದಸಾಗರ’, ಎನ್ನುತ್ತಾ ಚಂದಾಗಿ ಬಾಳುತ್ತಿದ್ದರು ’ಬಂ(ಗಾರಪ್ಪ) ಕು(ಮಾರ) ಮ(ಧು)’ಚಂದ್ರರು.
ಪಸಂದಾಗಿ ಆಳುತ್ತಿದ್ದರು.
ಅದೊಂದು ಕೆಟ್ಟ ಗಳಿಗೆಯಲ್ಲಿ ’ಬಂ-ಕು’ ಮಧ್ಯೆ ದ್ವೇಷ ಅಂಕುರಿಸಿತು.
’ಹೋದರೆಹೋಗು, ನನಗೇನು? ಕೋಪದಿ ತಾಪದಿ ಫಲವೇನು?’ ಎಂದು ಒಬ್ಬರಿಂದೊಬ್ಬರು ದೂರಾದರು.
’ಮಾತೊಂದ ಹೇಳುವೆನು, ಹತ್ತಿರ ಹತ್ತಿರ ಬಾ’, ಎಂದು ’ಬಂ’ ಪಿತನು ಕಿರಿ(ಕಿರಿ) ’ಮ’ಗನನ್ನು ಹತ್ತಿರಕ್ಕೆ ಸೆಳೆಯಲಾಗಿ ’ಬಂ-ಮ’
’ಜೊತೆಯಲಿ, ಜೊತೆಜೊತೆಯಲಿ’ ಸಾಗತೊಡಗಿದರು.
’ಮಧು’ಮಯ ಚಂದ್ರನ ’ಮಧು’ಮಯ ಹಾಸವೆ ಮೈತಳೆದಂತೆ ನೀ ಕಂಡೆ’, ಎಂದು ’ಬಂ’ಪಿತನು ಕಿರಿ(ಕಿರಿ) ’ಮ’ಗನನ್ನು ಹೊಗಳಿದರೆ
ಆ ’ಮ’ಗನು ’ಬಂ’ಪಿತನನ್ನು, ’ ಬಾಳಿನ ಹಿರಿಯಾ, ಎನ್ನಯ ಒಡೆಯಾ, ಕನ್ನಡ ಕುಲವರಾ ನೀ ’ಬಂ’ದೇ’, ಎಂದು ಹಾಡಿ ಹೊಗಳತೊಡಗಿದನು.
ಅತ್ತ, ಹಿರಿ(ಹಿರಿ ’ಹಿಗ್ಗಿ’ದ) ’ಕು’ಮಾರನೋ,
’ಮದನೋ ಮನ್ಮಥೋ ಮಾರಃ ಪ್ರದ್ಯುಮ್ನೋ ಮೀನಕೇತನಃ
ಕಂದರ್ಪೋ ದರ್ಪಕೋ ಅನಂಗಃ ಕಾಮಃ ಪಂಚಶರಸ್ಮರಃ’
ಎಂಬ ’ಮ-ದನ-ಕು-ಮಾರ-ಅಭಿಧಾನ ಲಕ್ಷಣ’ಗಳನ್ನೆಲ್ಲ ತನ್ನ ಪೂರ್ವವೃತ್ತಿಯ ’ನಟನಾಚಾತುರ್ಯ’ದಿಂದ ಬಳಸಿಕೊಂಡು ಜನನಾಯಕನಾಗಿಬಿಟ್ಟನು.
ಇತ್ತ ’ಬಂ’ಗಾರ ಹೊಳಪು ಕಳಕೊಳ್ಳತೊಡಗಿತು.
’ಮ’ಧುಚಂದ್ರಕ್ಕೆ ಅಮಾವಾಸ್ಯೆ ಆವರಿಸಿತು.
’ಅಮರಾ ’ಮಧು’ರಾ ಪ್ರೇಮಾ; ’ಮಧು’ರ’ಮಧು’ರವೀ ಮಂಜುಳಗಾನ’, ಎಂಬಿತ್ಯಾದಿಯಾಗಿ ಪ್ರವಹಿಸುತ್ತಿದ್ದ ’ಬಂ-ಮ’ಹಾನದಿಯೀಗ ನಿಂತ ನೀರಾಯಿತು.
ಜೊತೆಗೆ,
’ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ, ಕಪಟನಾಟಕ ಸೂತ್ರಧಾರಿ ನೀನೇ’, ಎಂದು (ಹಿರಿ)’ಕು’ಮಾರನು ’ಬಂ’ಪಿತನನ್ನು ಹೀಗಳೆಯುತ್ತಿರಲಾಗಿ, ನಾನಾ ವೇಷ ಧರಿಸಿ ಅದಾಗಲೇ ಸುಸ್ತಾಗಿದ್ದ ’ಬಂ’ಪಿತನಿಗೆ, ’ಮೋಸಹೋದೆನಲ್ಲಾ, ತಿಳಿಯದೆ ಮೋಸಹೋದೆನಲ್ಲಾ; ಕ್ಲೇಶನಾಶವನು ಮಾಡುವಂಥ ಈ ಶ್ರೀ’ಕು’ಮಾರನನು ಸ್ಮರಿಸದೆಯೇ’, ಅಂತ ಅನ್ನಿಸತೊಡಗಿತು.
ಜೊತೆಗೆ,
ಎಪ್ಪತ್ತೈದರಲ್ಲೂ ಇಪ್ಪತ್ತೈದರಂಥ ಅಧಿಕಾರದ ಆಸೆ ಬೇರೆ!
ಪರಿಣಾಮ, ’ಬಾ ಬೇಗ ಮನಮೋಹನಾ, ಸು’ಕುಮಾರಾ!’ ಎಂದು ’ಬಂ’ಪಿತನು ಹಾಡತೊಡಗಿದನು. (ಯಾವ ಮೋಹನ ಮುರಲಿ ಕರೆಯಿತೊ ಪಿತನ ಪಕ್ಕಕೆ ಸುತನನು!)

’ಹಿಡಕೋ, ಬಿಡಬೇಡಾ, ರಂಗನ ಪಾದ’, ಎಂಬ ಪದವು ’ಬಂ’ಪಿತನಿಗೆ, ’ಹಿಡಕೋ, ಬಿಡಬೇಡಾ, ಮಗನ ಪಾದ’, ಎಂದು ಭಾಸವಾಗಿ, ಆತ, ’ಒಂದಾಗಿ ಬಾಳುವಾ; ಒಲವಿಂದ ಆಳುವಾ. ಸಹಜೀವನ ಸವಿಜೇನಿನ ಸದನಾ’, ಎಂದು ಹಾಡುತ್ತ (ಹಿರಿ)’ಕು’ಮಾರನೆಡೆಗೆ (ಯಾರಿಗೂ ಗೊತ್ತಾಗದಂತೆ ತಂಪು ಕಣ್ಣಡಕದೊಳಗಿಂದ) ಕಣ್ಣು ಹಾಯಿಸಿದ.
ಜನರ ಕಣ್ಣೆದುರಿಗೆ ಆತ ’ಕುಮಾರ’ನಿಗೆ, ’ಮನೆಯೊಳಗಾಡೋ (ಕುಮಾರ್‌) ಗೋವಿಂದ, ನೆರೆ-ಮನೆಗಳಿಗೇಕೆ ಪೋಗುವೆಯೋ ಮುಕುಂದ: ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ’, ಎನ್ನುತ್ತಿದ್ದರೂ, ಪ್ರೈವೇಟಿನಲ್ಲಿ, ’ಯಾರು ಬಿಟ್ಟರು ’ಕೈ’ಯ ನೀ ಬಿಡದಿರು ಕಂಡ್ಯ’, ಎಂದು ಪ್ರಾರ್ಥಿಸತೊಡಗಿದ.
’ಹೂವ ತರುವರ ಮನೆಗೆ ಹುಲ್ಲು ತರುವ’ ’ಕು’ಮಾರನೋ, ’ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗಿ’, ಎಂದೆನ್ನುತ್ತ ಪುನಃ ಪಿತೃ-ಭ್ರಾತೃ-ಪಕ್ಷ-ಪಾತಿ ಆದ.

ಹೀಗೆ,
ಪುನರ್ಮಿಲನ ಆಯಿತು.
ಪುನಃ ಈಗ, ’ಬಂ-ಮ ಸಂಸಾರ, ಆನಂದಸಾಗರ.’

’ಮೂವರೂ ಒಟ್ಟಾಗಿ ಈಗ, ’ಬಂಗಾರ’ದೊಡವೆ ಬೇಕೇ, ಜನರೇ, ’ಬಂಗಾರ’ದೊಡವೆ ಬೇಕೇ?’ ಎಂದು ಮತದಾರ ಪ್ರಜೆಗಳನ್ನು ಕೇಳುತ್ತಿದ್ದಾರೆ.
’ನಾಡಿರುವುದು ನಮಗಾಗಿ’, ಎಂದು ಕ್ಲೈಮ್ ಮಾಡುತ್ತ ಈ (ತಾಪ)ತ್ರಯರು ಇದೀಗ ಮತ್ತೆ, ’ಒಂದಾಗಿ ಬಾಳುವಾ; ಒಲವಿಂದ (ಈ ನಾಡನ್ನು) ಆಳುವಾ’, ಎಂದು ಹಾ(ರಾ)ಡುತ್ತಿದ್ದಾರೆ.

ಆಳುವರೋ, ಅಳುವರೋ, ಚುನಾವಣೆಯ ಫಲಿತಾಂಶದ ದಿನ ಗೊತ್ತಾಗುತ್ತದೆ.

ನೀತಿ : ಪುರಂದರದಾಸರ ಪದಗಳ ಮತ್ತು ಕನ್ನಡದ ಹಳೆಯ ಚಿತ್ರಗೀತೆಗಳ ಸೂಕ್ತ ಬಳಕೆಯು ಸಂಸಾರಕ್ಕೆ ಹಿತಕರ; ಅಸೂಕ್ತ ಬಳಕೆಯು ಹಾನಿಕರ.

ಶುಕ್ರವಾರ, ಮಾರ್ಚ್ 20, 2009

ಶಾಸ್ತ್ರೀ ಗುಳಿಗೆಪ್ಪನವರ ಸಲ್ಲಾಪ

(ಗುಳಿಗೆಪ್ಪನವರಿಂದ ಆರಂಭ)
"ಪದ್ಯಂ ವದ್ಯಂ, ಗದ್ಯಂ ಹೃದ್ಯಂ."
"ನನ್ನದು ಪದ್ಯಮಲ್ತು, ಚುಟುಕಂ."
"ಚುಟುಕಂ, ತಟುಕಂ, ಇಲ್ಲಂ. ಎಲ್ಲಂ ಕವನಂ; ಯಾನೇ ಪದ್ಯಂ. ಇಂತೆಂಬರ್ ಕಿ.ರಂ."
"ಹಾಂ. ಓಕೇಂ. ಸದ್ಯಂ ಪದ್ಯಂ. ಷಾರ್ಟ್‌ಲೀ ಗದ್ಯಂ. ಷಾರ್ಟ್ ಷಾರ್ಟ್ ಗದ್ಯಂ. ಮಿನಿ ಮಿನಿ ಗದ್ಯಂ; ಮೈಕ್ರೊ ಮೈಕ್ರೊ ಗದ್ಯಂ."
"ಅದೇಂ? ಕಥೆಯೇಂ? ಹಾಸ್ಯವೇಂ? ಬರಿದೇ ವ್ಯಥೆಯೇಂ?"
"ಸ್ವಲ್ಪಿರು ದಣೀ, ತಿಳೀತತೆ."

(ಇತಿ, ಸಲ್ಲಾಪಂ ಸಮಾಪ್ತಂ.)

ನಿಂಬ್-ಹಾಳ್-ಕರ್

ನಿಂಬಾಳ್ಕರ್
ತಿಂಬಾಳ್ಕರ್?
ಸಂಪತ್ತು
ತುಂಬಾಳ್ಕರ್?

ಮುಂದೆ ಅವ್ರು
ಸಂಭಾಳ್ಕರ್?
ಅಥವಾ ಜೈಲಿನ
ಕಂಬ್ಯಾಳ್ಕರ್?

***

ನಿಂಬಾಳ್ಕರನಿಗೆ
ಕೊಲ್ಹಾಪುರದಲಿ
ಸಂಪತ್ತಿದೆಯಂತೆ;
ಮಹಾಲಕ್ಷ್ಮಿಯು
ಕೊಲ್ಹಾಪುರಿಯೇ
ಅಲ್ಲವೇ ಮತ್ತೆ!

***

ಬಂಧು ನಿಂಬಾಳ್ಕರ್
ಗೆ
ಮ.ರಾ. ಮು.ಮಂ.
ಅಶೋಕ್ ಚವ್ಹಾಣ್ ಹೇಳಿದ್ದು:
ಶೋಕ್ ಮತ್ ಕರ್;
ಶೋಕೀ ಕರ್;
ಲೋಕಾಯುಕ್ತ್ ಕೋ ನಹೀ ಹೈ
ಜ್ಯಾದಾ ಅಧಿಕಾರ್.

ಬಂಗಾರದ(ಂಥ) ಮಾತು

ಮದುವೆ ಸೀಸನ್ನಲ್ಲಿ
ಬಂಗಾರಕ್ಕೆ ಬೆಲೆ ಜಾಸ್ತಿ.
ಚುನಾವಣೆ ಸೀಸನ್ನಲ್ಲಿ
ಮತ್ತೆ ಗರಿಗೆದರಿದೆ ಹಗರಣ
’ಬಂಗಾರಪ್ಪನ ಅಕ್ರಮ ಆಸ್ತಿ’.

ಬಂಗಾರಕ್ಕೆ ಬಿಡಿ,
ಯಾವಾಗಲೂ ಬೆಲೆ ಜಾಸ್ತಿ;
ಚುನಾವಣೆ ನಂತರ
ಸದರಿ ಹಗರಣ ನಾಸ್ತಿ?!

ವರುಣೋದಯ ಗೀ-ತೆಗಳು

-೧-
ವರುಣನ ಅವಕೃಪೆಗೆ ತುತ್ತಾದರೆ
ರೈತ ಪಾಪರ್.
ಪಕ್ಷದ ಅವಕೃಪೆಗೆ ತುತ್ತಾದರೆ
ವರುಣ ಪಾಪ-ರ್.

***

-೨-
ಕೈ ಕತ್ತರಿಸಬೇಕೆಂದು
ನಾನಂದಿದ್ದು
ಆ ಪಕ್ಷದ ಚಿಹ್ನೆ ’ಕೈ’ಯನ್ನು
ಅಂದನಂತೆ
ವರುಣ್ ಗಾಂಧಿ.

’ಸರಿ,
ಮತಯಂತ್ರದಲ್ಲಿ
ಆ ಚಿಹ್ನೆಯ ಮುಂದೆ
ಕತ್ತರಿ
ಮಾರ್ಕ್‌
ಒತ್ತಿರಿ’
ಅಂದನಂತೆ
ರಾಹುಲ್ ಗಾಂಧಿ.

ಯಾರು ಚತುರರು ನಿಮಗೆ
ಈ ಈರ್ವರೊಳಗೆ?

(ಈ ಅಂಬೋಣಗಳು ಗುಳಿಗೆಪ್ಪನವರಿಗೆ ಮಾತ್ರ ತಲುಪಿದ ಎಕ್ಸ್ಕ್ಲೂಸಿವ್ ರಿಪೋರ್ಟ್. ಆದ್ದರಿಂದ ಈ ವರದಿ ’ಗುಳಿಗೆ’ಯಲ್ಲಿ ಮಾತ್ರ.) (ಇದು ಗುಳಿಗೆಯಲ್ಲಿ ಮಾತ್ರೆ! ಅರ್ಥವಾಗಬೇಕಾದರೆ ಇಂದಿನ ’.....’ ಪತ್ರಿಕೆ ನೋಡಿ.)

***

-೩-
’ತಲೆ ತೆಗಿ, ಕೈ ತೆಗಿ’, ಅಂದರೇನಂತೆ,
’ಸಾವಿನ ವ್ಯಾಪಾರಿ’, ಅಂದರೇನಂತೆ;
ಮನಗಳನ್ನೂ ಮಾನವನ್ನೂ ಕೊಂದರೇನಂತೆ,
ಜನನಾಯಕರಾಗಿ ಇವರೇ
ಲೋಕಸಭೆಯಲ್ಲಿ ಸೇರುವರು ಸಂತೆ!

ಅಂಬಿ-ಘಾ

’ಅಳೆದೂ ಹೊಯ್ದೂ’
’ಮೀನ ಮೇಷ’
ಉತ್ತಮ ಉದಾಹರಣೆ
ಅಂಬರೀಷ.

ಹೀಗೇ ಸುಮ್ಮನೆ

ಬಿಲ್ಡಿಂಗ್ ಮೇಲೆ ಬಾವುಟ
ಅಂಗಡಿ ಮೇಲೆ ಆರೋಪ
ವೇದಿಕೆಯಿಂದ ಪ್ರತಿಭಟನೆ
ಯಂತ್ರದ ಮೂಲಕ
ಈ ಚುಟುಕ ರಚನೆ.

ಅ(ನ)ರ್ಥಶಾಸ್ತ್ರ

ಪಾತಾಳಕ್ಕೆ ಹಣದುಬ್ಬರ;
ಆದರೆ,
ನಿಂತಿಲ್ಲ ಬೆಲೆಗಳ ಅಬ್ಬರ!
ಏನು ಅರ್ಥಶಾಸ್ತ್ರವೋ,
ಅರ್ಥವಾಗದೆ ಈ
ಶಾಸ್ತ್ರಿಯ ತಲೆಯಾಯ್ತು
ಗೊಬ್ಬರ!

ನಾಯಿ ಪಾಲಿಸಿ

ನಾಯಿ
ಚತುರ್ವೇದ;
ಕೊಲ್ಲಬೇಡಿ, ಪೂಜಿಸಿ.

ನಾಯಿ
ಚತುರ ಹೈದ;
ಕೊಲ್ಲಬೇಡಿ, ಪ್ರೀತಿಸಿ.

ನಾಯಿ
ನಿಷ್ಠಾವಂತ;
ಕೊಲ್ಲಬೇಡಿ, ಪಾಲಿಸಿ.

ಇದು ನಮ್ಮ
ಪಾಲಿಸಿ.

’ಕಚ್ಚುವುದಲ್ಲಾ ಅದು
ಮಕ್ಕಳನ್ನು!’

’ಕಚ್ಚಲಿ ಬಿಡಿ;
ಯಾರ ಮಕ್ಕಳನ್ನೋ ಕಚ್ಚಿದರೆ
ನಮಗೇನು?’

ಐಶ್ ವಿಷ್ಯ ಐಸಾ!

ಎರಡು ವರ್ಷಗಳ ಕೆಳಗೆ
ಐಶ್ ಎಂಬ
ಐಶ್ಕಾಂತದ ಸೆಳೆತಕ್ಕೆ ಸಿಕ್ಕು
ಅಭಿಷೇಕು
ಶೇಕು!

ಅಭಿಷೇಕಿನ
ಶಾಕಿಗೆ
ಕರಗಿ
ಐಸ್
ಪಾನಿ ಪಾನಿ!

ಏನ್ಮಾಡೋದು ಸ್ವಾಮೀ,
ಜವಾನಿ
ದಿವಾನಿ!

ಪರಿಣಾಮ
ಸುಖಾಂತ.
ಅಭಿ-
-ಶೇಕ್ ಸಾಹೇಬ ಆದ
ಐಶ್-ಕಾಂತ.

ಅಮಿತಾಭನಿಗೆ ಅಮಿತಾನಂದ;
ಜಯಾ ಮುಖದಲ್ಲಿ ಜಯ.
ಕೃಷ್ಣರಾಜ ರೈ ಖುಷಿಯೇ ಸೈ;
ವೃಂದಮ್ಮನೋರು?
ಕುಡಿದರು ಹಾಲುಖೀರು.

ಐಶ್-ಅಭಿ ಇಬ್ಬರೂ
ಕೋಟ್ಯಧಿಪತಿಗಳಾದ್ದರಿಂದ
ಇಬ್ಬರದ್ದೂ ಈಗ
ಐಶಾರಾಮಿ ಬದುಕು.

ಸಲ್ಮಾನ್, ವಿವೇಕ್ ಮಾತ್ರ
ಸಲ್ಲಲಿಲ್ಲ
ಯದಕೂ!

(ಯದಕೂ=ಯಾವುದಕ್ಕೂ. ದಾವಣಗೆರೆ ಭಾಷೆಯಲ್ಲಿ.)

ಗುರುವಾರ, ಮಾರ್ಚ್ 19, 2009

’ಜೈ’ಟ್ly

ಸುಧಾಂಶು ಬೆಳಕಲ್ಲಿ
ಅರುಣ ಮಂಕಾದನೇ?!
ಮಿತ್ತಲನ ಗತ್ತೆದುರು
ಜೈಟ್ಲಿ ಸುಮ್ಕಾದನೇ?!

ಪ್ರಕಾಶ(ಕ)ರ ಮಾತು

’ಅಗತ್ಯಬಿದ್ದರೆ ಪಡೀತೀವಿ
ಕಾಂಗ್ರೆಸ್ ಬೆಂಬಲ’,
ಅಂತಾರೆ ಕಾರಟ.
ಹೀಗೆ ಮಾತಾಡಿದರೆ
ಅವರಿಗೆ ಗ್ಯಾರಂಟಿ
ಕರಟ!

ಶನಿ

ಏಳು ವರ್ಷ
ಜೈಲು ಶಿಕ್ಷೆ
ತೆಲಗಿಗೆ.
ಅರ್ಧ
ಕಮ್ಮಿಯಾಯ್ತು
ಸಾಡೇಸಾತಿಗೆ!

ಸ್ವಗತ-ಸ್ವಾಗತ

ಬಂತೆನಗೆ
ಎಂಥ
ಗಳಿಗೆ!
ಆಗಾಗ
ಕಂತಿನಲಿ
ಕೊಡುವೆ
ಗುಳಿಗೆ!

ಸ್ವಾಗತವು ನಿಮಗೆ,
ನೀವ್
ಪೇಷಂಟು ಅಲ್ಲ;
ಪೇಷಂಟಾಗಿ ನುಂಗಿ
ಗುಳಿಗೆಗಳನೆಲ್ಲ.
ಶಕ್ತಿವರ್ಧಕವು ಇದು
ವಿಟಾಮಿನ್ ಗುಳಿಗೆ;
ಮುಕ್ತಿದಾಯಕ
ನಮ್ಮ
ಜನನಾಯಕರಿಗೆ!

ಒಂದನೆ-ವಂದನೆ

ಗಣಪಾ,
ನೀನಿದ್ದರೆ
ನಿನಗೆ
ವಂದನೆ
ಕಣಪಾ.

ಇದ್ದರೆ
ಸರಸೋತಿ
ಆ ತಾಯಿಗೂ
ಐತಿ
ಸಲಾಂ.

ಇನ್ನು,
ಬರೆಯುವೆ,
ಬರೆದೆ (ಬರಿದೆ)
ಕೊರೆಯುವೆ,
ಬಿನಾ ಕಾಗಜ್,
ಕಲಾಂ.