ಮಂಗಳವಾರ, ಜೂನ್ 30, 2009

ದಿನಕ್ಕೊಂದು ಕವನ: (೪) ಶಬ್ದ-ನಿಶ್ಶಬ್ದ

’ರಾಮ ಹರೇ, ಕೃಷ್ಣ ಹರೇ’ ಜಪ
’ಕುಹೂ, ಕುಹೂ’ ಆಲಾಪ
’ಜುಳು ಜುಳು’ ಮಂಜುಳ ನಾದ
ಮಗುವಿನ ನಗುವಿನ
’ಕಿಟಿ ಕಿಟಿ’ ಮೋದ
’ಹೊಡಿ! ಬಡಿ! ಗುದ್ದು!’
’ಢಂ! ಢಮಾರ್!’ ಸದ್ದು
’ಅಯ್ಯೋ! ಅಮ್ಮಾ!’ ಚೀತ್ಕಾರ
’ಯಾರು?! ಎಲ್ಲಿ?’ ಫೂತ್ಕಾರ

ಎಲ್ಲವೂ
ಶಬ್ದಗಳೇ.
ಆದರೆ,
ಎಷ್ಟೊಂದು ವ್ಯತ್ಯಾಸ!

ಜೀವನವೇ ಶಬ್ದ
ಸಾವು ನಿಶ್ಶಬ್ದ

ಒಮ್ಮೆ ಅದು ಸುಂದರ ಇದು ಭೀಕರ
ಇನ್ನೊಮ್ಮೆ
ಇದು ಸುಂದರ ಅದು ಭೀಕರ.
ಎಂಥ ವಿಪರ್ಯಾಸ!

ಅದಕ್ಕೇ ಇರಬೇಕು
ಶಬ್ದ-ನಿಶ್ಶಬ್ದಗಳಾಚೆಯ
ಶಾಂತಿಗಾಗಿ ಹಂಬಲಿಸುವುದು
ಪ್ರಾಜ್ಞರ
ಮಾನಸ.

ಸೋಮವಾರ, ಜೂನ್ 29, 2009

ದಿನಕ್ಕೊಂದು ಕವನ: (೩) ನನ್ನಹಾಗಲ್ಲ

ಅಲ್ಲಿ ಕಾಣುವ ನದಿಯು ನನ್ನಹಾಗಲ್ಲ
ಚಲಿಸುವುದು ಅನವರತ ಸಾಗರದ ಕಡೆಗೆ
ಅದರ ಪಕ್ಕದ ಗಿರಿಯು ನನ್ನಹಾಗಲ್ಲ
ಚಳಿಗಾಳಿ ಮಳೆ ಬಿಸಿಲು ಬಲು ಇಷ್ಟ ಅದಕೆ

ಅಲ್ಲಿ ನಿಂತಿಹ ಹರಿಣಿ ನನ್ನಹಾಗಲ್ಲ
ಕ್ರೂರಮೃಗಗಳ ನಡುವೆ ಬಾಳುವುದು ಸುಖದಿ
ಅದರ ಬದಿಯಿಹ ತರುವು ನನ್ನಹಾಗಲ್ಲ
ಉದುರಿದೆಲೆಗಳ ಮರೆತು ಚಿಗುರುವುದು ಮುದದಿ

ಅಲ್ಲಿ ಹಾರುವ ಹಕ್ಕಿ ನನ್ನಹಾಗಲ್ಲ
ಎಲ್ಲ ಬಂಧನ ಕಳಚಿ ಏರುವುದು ನಭಕೆ
ಅದರ ಮೇಲಿಹ ಮೋಡ ನನ್ನಹಾಗಲ್ಲ
ಧರೆಯ ದಾಹಕೆ ಕರಗಿ ಇಳಿಯುವುದು ಇಳೆಗೆ

ಆದರೆ,
ಎಲ್ಲ ಆಳುವ ನನ್ನ
ಆಳುಗಳು
ಅವೆಲ್ಲ!

ಆದರೂ
ನನ್ನ ಆಳುವುವು!
ಅವು
ನನ್ನಹಾಗಲ್ಲ

ಭಾನುವಾರ, ಜೂನ್ 28, 2009

ದಿನಕ್ಕೊಂದು ಕವನ: (೨) ಸಂದೇಶ

ಅದೇ ಬಾನು ಅದೇ ಭೂಮಿ
ಅದೇ ಸೂರ್ಯ ಚಂದ್ರಮ
ವರುಷ ಬೇರೆ ಹರುಷ ತೋರೆ
ಅದುವೆ ಮನದ ಸಂಭ್ರಮ
ಇದೇ ತೆರದಿ ಮುಗಿದುಹೋದ
ಯುಗಗಳೆನಿತೊ ಜಗದಲಿ?
ಮುಗಿಯದಾಸೆ ಎದೆಯೊಳಿರಲು
ಸೊಗಸು ಪ್ರತೀ-ಕ್ಷಣದಲಿ

ಆದುದಾಯ್ತು ಬೇವು ಎಲ್ಲ
ಆಗುವುದನು ನೋಡುವ
ಈಗಲಾದರೂನು ಬೆಲ್ಲ
ನೀಡು ಎಂದು ಬೇಡುವ
ಬಯಕೆಯು ಬೇರೂರಿರುವುದು
ಹೃದಯ ಹೃದಯದಲ್ಲಿಯೂ
ಚಿಗುರಿ ಹೂವ ಬಿಡುತಲಿಹುದು
ಪ್ರತಿ ವಸಂತದಲ್ಲಿಯೂ

ನೆಲವು ಅದೇ ಆದರೂನು
ಕಾಲ ಬದಲು ಅಲ್ಲವೆ?
ಚಿಗುರಿ ಹೂವ ಬಿಟ್ಟ ವೃಕ್ಷ
ಫಲವ ಕೊಡುವುದಿಲ್ಲವೆ?

ಕಾಲ ಬೇಕು ಕಾಯಬೇಕು
ಕಾಣಬೇಕು ಕನಸನು
ಬಾಳಬೇಕು
ತಾಳಬೇಕು
ಬೆಲ್ಲದೊಡನೆ
ಬೇವನೂ

ಶನಿವಾರ, ಜೂನ್ 27, 2009

ದಿನಕ್ಕೊಂದು ಕವನ: (೧) ಆಸೆ

ಭೂಮಿಯ ಹಸಿರನ್ನೆಲ್ಲ
ನೇಯ್ದು ಸೀರೆ ಮಾಡಿ
ನಿನಗೆ ಉಡಿಸಬೇಕೆಂಬ ಆಸೆ
ಭೂಗರ್ಭದ ಹೊನ್ನನ್ನೆಲ್ಲ
ಆಯ್ದು ಆಭರಣ ಮಾಡಿ
ನಿನಗೆ ತೊಡಿಸಬೇಕೆಂಬ ಆಸೆ
ನಕ್ಷತ್ರಗಳನ್ನೆಲ್ಲ ಪೋಣಿಸಿ
ನಿನಗೆ ಮುಡಿಸುವ ಆಸೆ
ಪೂರ್ಣಚಂದ್ರನನ್ನು ನಿನ್ನ ಕೈಗೆ
ಕನ್ನಡಿಯಾಗಿ ಕೊಡುವ ಆಸೆ
ಮೋಡಗಳಮೇಲೆ ನಿನ್ನನ್ನು
ಮೆರೆಸುವ ಆಸೆ
ನಿನ್ನ ಮೈ
ಮರೆಸುವ ಆಸೆ

ಬಳಿಕ,
ನಿನ್ನ ಅವಗುಂಠನವ
ಸರಿಸುವಾಸೆ
ನಿನ್ನ ನೊಸಲಿಗೆ ತಿಲಕ
ಇರಿಸುವಾಸೆ
ನಿನ್ನ ವರ್ಣನೆಯ ಮಳೆ
ಸುರಿಸುವಾಸೆ
ನಿನ್ನ ಸಂತಸದ ಹೊಳೆ
ಹರಿಸುವಾಸೆ
ಪದಗಳನ್ನಾರಿಸಿ ನಿನ್ನ
ಪಾದಕ್ಕೆ ಇಡುವಾಸೆ
ಪದ್ಯಗಳ ಹಾಡಿ ನಿನ್ನನು
ಮುದಗೊಳಿಸುವಾಸೆ
ಹದವಾಗಿ ನಿನ್ನನ್ನು
ರಮಿಸುವಾಸೆ
ಬದುಕಾಗಿ ನಿನ್ನನ್ನು
ವರಿಸುವಾಸೆ

ಹೀಗೆ,
ನಿನ್ನಮೇಲೆನ್ನ
ಗೆಲುವಿನಾಸೆ
ಎಲೆ!
ಕಾವ್ಯ
ಕನ್ನಿಕೆಯೆ!
ನನಗೆ
ನಿನ್ನೊಲವಿನ
ಆಸೆ

ಶುಕ್ರವಾರ, ಜೂನ್ 26, 2009

ಜಾತಿಭೂತ ತೊಲಗಲಿ

ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ.

’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್‌ಸಾಕ್ಷಿಣೀ
ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಂಡಾಲೋಽಸ್ತು ಸ ತು ದ್ವಿಜೋಽಸ್ತು ಗುರುರಿತ್ಯೇಷಾ ಮನೀಷಾ ಮಮ’.

’ಎಚ್ಚರ, ಕನಸು, ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ, ಯಾವ ಚಿತ್‌ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ, ಆ ಚಿತ್‌ಸ್ವರೂಪವೇ ನಾನು, ನೋಟದ ವಸ್ತು ನಾನಲ್ಲ’, ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿಯು ಜನ್ಮತಃ ಚಂಡಾಲನಿರಲಿ, ಬ್ರಾಹ್ಮಣನಿರಲಿ, ನನ್ನ ಭಾವನೆಯಲ್ಲಿ ಅವನೇ ನನ್ನ ಗುರು.

’ಮನೀಷಾಪಂಚಕ’ದಲ್ಲಿ ಆದಿಶಂಕರರು ಹೇಳಿರುವ ಮಾತಿದು.

’ಸದಾಕಾಲ ಒಂದು ನಿಯಮಕ್ಕೆ ಬದ್ಧನಾಗಿ ಸಾಗುವ ಮತ್ತು ತನ್ನಂತೆ ಸಕಲ ಜೀವಿಗಳಲ್ಲೂ ಮನದ ಬೆಳಕು ಉಂಟೆಂಬ ಅರಿವನ್ನು ಹೊಂದಿರುವ ಮನುಷ್ಯ, ಅವನು ಯಾವ ಜಾತಿಯವನೇ ಆಗಿರಲಿ, ಗುರುಸಮಾನ’, ಎಂಬ ವೇದಾಂತಸಾರವೇ ಆದಿಶಂಕರರ ಈ ಸ್ತೋತ್ರದಲ್ಲಿದೆ.

’ನಿಯಮ, ಬದ್ಧತೆ, ಏಕರೂಪ (ಒಂದೇ ಗುಣ, ಬಹುರೂಪಿ ಬಣ್ಣವಲ್ಲ, ಊಸರವಳ್ಳಿಯ ಗುಣವಲ್ಲ, ಎರಡು ನಾಲಗೆಯ ಹಾವಿನಂತಲ್ಲ, ಅವಕಾಶವಾದಿ ಬುದ್ಧಿಯಲ್ಲ, ನಮ್ಮ ಪುಢಾರಿಗಳಂತಲ್ಲ) ಹೊಂದಿರುವವನು ಹಾಗೂ ’ತಾನು ದೈವಾಂಶಸಂಭೂತ (ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು) ಮತ್ತು ಒಂದು ಇರುವೆಯೂ ತನ್ನಂತೆಯೇ ಸಮಾನಜೀವಿ’ ಎಂಬುದನ್ನು ಅರಿತು ಅದರಂತೆ ಮುನ್ನಡೆಯುವವನು ಗುರುಸ್ಥಾನಕ್ಕೆ ಅರ್ಹನೆಂದಾಗ ಜಾತಿಮಾತ್ರದಿಂದ ಯಾರೂ ಯಾವ ಅರ್ಹತೆಗೂ ಹಕ್ಕುದಾರರಾಗುವುದಿಲ್ಲ. ಮೇಲೆ ಹೇಳಿದಂಥ ಸದ್ಗುಣಗಳನ್ನುಳ್ಳವನೇ ಉತ್ತಮ ಜಾತಿಯವನು. ಅವನು ನರೋತ್ತಮ. ಗುಣಹೀನನೇ ಅಧಮ ಜಾತಿಯವನು. ನರಾಧಮ.

ಈ ಮಾತನ್ನೇ ಅನೇಕ ಸಾಧುಸಂತರು, ಕ್ರಾಂತಿಕಾರಿಗಳು, ಸಮಾಜಸುಧಾರಕರು ವಿವಿಧ ಬಗೆಗಳಲ್ಲಿ ಹೇಳಿದ್ದಾರೆ.

’ಕುಲಕುಲಕುಲವೆಂದು ಹೊಡೆದಾಡದಿರಿ..’ ಎಂದು ಕನಕದಾಸರು, ’ಕೊಲ್ಲುವನೇ ಮಾದಿಗ, ಹೊಲಸ ತಿಂಬುವನೇ ಹೊಲೆಯ, ಕುಲವೇನೋ, ಆವಂದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವ....ಶರಣರೇ ಕುಲಜರು’ ಎಂದು ಬಸವಣ್ಣನವರು, ’ಆವ ಕುಲವಾದರೇನು, ಆವನಾದರೇನು, ಆತ್ಮಭಾವವರಿತಮೇಲೆ,....ಹಸಿಕಬ್ಬು ಡೊಂಕಿರಲು ಅದರ ರಸ ಡೊಂಕೇನೋ?’ ಎಂದು ಪುರಂದರದಾಸರು, ’ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಜಾತಿ ವಿಜಾತಿಯೆನಬೇಡ, ದೇವನೊಲಿದಾತನೇ ಜಾತ’ ಎಂದು ಸರ್ವಜ್ಞ, ಇವರೆಲ್ಲ ಹೇಳಿರುವುದೂ ಇದೇ ಮಾತನ್ನೇ ಅಲ್ಲವೆ?

ಇವರೆಲ್ಲರಿಗಿಂತ ಹೆಚ್ಚು ಜ್ಞಾನಿಗಳೇನು ನಾವೆಲ್ಲ? ಅಲ್ಲ ತಾನೆ?

ಆದ್ದರಿಂದ, ನಾವೇ ಮಾಡಿಕೊಂಡಿರುವ ಜನ್ಮಜಾತಿ ಹಿಡಿದುಕೊಂಡು ಬಡಿದಾಡುವುದರಲ್ಲಿ ಅರ್ಥವಿಲ್ಲ. ’ಮಾನವಕುಲ ತಾನೊಂದೆ ವಲಂ’. (ವಲಂ=ದಿಟವಾಗಿ/ಅಲ್ಲವೆ?)

ವೇದೋಪನಿಷತ್ತುಗಳು ಇಹಪರಗಳ ಅರ್ಥಶೋಧ ಮಾಡಿವೆ ಮತ್ತು ಜೀವನವಿಧಾನ ಕುರಿತು ಹೇಳಿವೆ. ಇವು ಯಾವುದೇ ತಥಾಕಥಿತ ಜಾತಿಯ ಸೊತ್ತಲ್ಲ. ಒಟ್ಟು ಮಾನವಕುಲದ ಆಸ್ತಿ. ಅದೇವೇಳೆ, ಕಾಲಾಂತರದಲ್ಲಿ ಜೀವನವಿಧಾನವಾಗಲೀ ಶಾಸ್ತ್ರ-ಸಂಪ್ರದಾಯಾದಿ ಆಚರಣೆಗಳಾಗಲೀ ಬದಲಾವಣೆಗೆ ತೆರೆದುಕೊಳ್ಳಬೇಕಾದ್ದು ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದ ದೃಷ್ಟಿಯಿಂದ ಅತ್ಯಂತ ಅಪೇಕ್ಷಣೀಯ. ಒಂದು ವರ್ಗದ ಜನ, ’ವೇದ-ಶಾಸ್ತ್ರಗಳು ನಮ್ಮ ಏಕಸ್ವಾಮ್ಯದ ಹಕ್ಕು’, ಎಂದರೆ ಅದು ಒಪ್ಪುವಂಥ ಮಾತಲ್ಲ. ವೇದಗಳಿರುವುದೇ ಮನುಷ್ಯನಲ್ಲಿ ಸಾತ್ತ್ವಿಕ ಗುಣವನ್ನು ಬೇಳೆಸಲಿಕ್ಕಾಗಿ. ಸಾತ್ತ್ವಿಕ ಗುಣವು ಯಾವೊಂದು ಜಾತಿಯವನ ಸೊತ್ತೂ ಅಲ್ಲ. ಅದು ಸಕಲ ಮಾನವಕುಲದ ಸೊತ್ತು. ಒಂದಾನೊಂದು ಕಾಲದಲ್ಲಿ ಪ್ರಚಲಿತವಿದ್ದ ಸಾಮಾಜಿಕ ವ್ಯವಸ್ಥೆ ಇಂದೂ ಕೂಡ ಪ್ರಸ್ತುವಾಗಿರಬೇಕಾಗಿಲ್ಲ. ವ್ಯವಸ್ಥೆಯ ಬದಲಾವಣೆಗೆ ನಮ್ಮನ್ನು ಒಡ್ಡಿಕೊಂಡಾಗ, ಜೊತೆಗೆ ಸ್ವಾರ್ಥ-ಅಜ್ಞಾನ-ಮೌಢ್ಯಗಳನ್ನು ಕಿತ್ತೆಸೆದಾಗ ಮಾನವಕುಲದ ಸಾಮರಸ್ಯದ ಬಾಳ್ವೆ ಸಾಧ್ಯವಾಗುತ್ತದೆ. ಸಮಾಜದ ಬಾಳು ಹಸನಾಗುತ್ತದೆ, ಸಕಲರ ಜೀವನ ಸುಖಮಯವಾಗುತ್ತದೆ. ವೇದಗಳ ಹಾರೈಕೆಯೂ ಇದೇ ಆಗಿದೆ:

’ಆನೋ ಭದ್ರಾ ಕೃತವೋ ಯಂತು ವಿಶ್ವತಃ’
(ಅರಿವೆಂಬುದು ನಮಗೆ ಎಲ್ಲೆಡೆಯಿಂದಲೂ ಒದಗಿಬರಲಿ)

’ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ; ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಭಾಗ್ ಭವೇತ್’
(ಎಲ್ಲರೂ ಸುಖಿಗಳಾಗಿರಲಿ, ಎಲ್ಲರೂ ನಿರೋಗಿಗಳಾಗಿರಲಿ; ಎಲ್ಲರೂ ಶ್ರೇಯಸ್ಸನ್ನು ಕಾಣಲಿ, ಯಾರೂ ದುಃಖಿತರಾಗದಿರಲಿ)

’ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು’
(ಎಲ್ಲ ಜನರೂ ಸುಖಿಗಳಾಗಿರಲಿ, ಎಲ್ಲೆಡೆ ಸನ್ಮಂಗಳಕರ ಸ್ಥಿತಿ ನೆಲೆಸಿರಲಿ)

--೦--

ಪ್ರಿಯ ಬಂಧುಗಳೇ,

ಒಂದರಮೇಲೊಂದರಂತೆ ಬರೆದೇ ಬರೆದೆ ಗದ್ಯ
ಇನ್ನೀಗ ಬರೆಯುವೆನು ದಿನಕೊಂದು ಪದ್ಯ

ಅತಿ ಸರಳ ಕವನ ದಿನಕ್ಕೊಂದೊಂದು
ನಾಳೆಯಿಂದೀ ರೀತಿ ದಿನ ಇಪ್ಪತ್ತೊಂದು

ಗದ್ಯಗುಳಿಗೆಗೆ ಕೊಂಚ ಬಿಡುಗಡೆಯ ಕೊಟ್ಟು
ಪದ್ಯಗಳ ಕಡಲನ್ನು ಮಥಿಸೋಣ ಒಟ್ಟು

ಎಲ್ಲರ ಪ್ರತಿಕ್ರಿಯೆಯ ಓದಿ ಸುಖಿಸಿಹೆನು
ಎಲ್ಲರಿಗು ತಲೆಬಾಗಿ ಇದೋ ನಮಿಸುವೆನು

ಗುರುವಾರ, ಜೂನ್ 25, 2009

ಪಾಕ್ ಎಂಬ ಕಬ್ಬಿಣ ಕಾದಿದೆ; ಬಡಿದು ಹದಕ್ಕೆ ತರಲು ಇದು ಸಕಾಲ

ಸರಬ್‌ಜಿತ್ ಸಿಂಗ್‌ಗೆ ಪಾಕಿಸ್ತಾನವು ಗಲ್ಲು ಶಿಕ್ಷೆ ಖಾಯಂ ಮಾಡಿದೆ. ಆತ ತಪ್ಪಿತಸ್ಥನಲ್ಲವೆಂಬ ಅರಿವಿದ್ದೂ ಪಾಕಿಸ್ತಾನ ಈ ರೀತಿ ರಾಕ್ಷಸಿ ವರ್ತನೆಯ ಪುನರಾವರ್ತನೆ ಮಾಡುತ್ತಿದೆ. ಮುಂಬೈ ಬಾಂಬ್ ದಾಳಿ ವಿಷಯದಲ್ಲಿ ಪಾಕಿಸ್ತಾನಕ್ಕೆ ಎಳ್ಳಷ್ಟೂ ಪಶ್ಚಾತ್ತಾಪವಾಗಿಲ್ಲ.

ಭಾರತದ ವಿರುದ್ಧ ಪಾಕಿಸ್ತಾನವು ಮುಂಬಯಿಯಲ್ಲಿ ನಡೆಸಿದ ಆ ’ಮೂರು ದಿನದ ಅಧರ್ಮಯುದ್ಧ’ದಿಂದಾಗಿ ನೂರಾರು ಅಮಾಯಕ ಜೀವಗಳ ಹರಣವಾಯಿತಷ್ಟೇ ಹೊರತು ಪಾಕಿಸ್ತಾನವು ಅದರಿಂದ ಸಾಧಿಸಿದ್ದೇನಿಲ್ಲ. ಜಗತ್ತಿನ ವಿಶ್ವಾಸವನ್ನು ಅದೀಗ ಸಂಪೂರ್ಣವಾಗಿ ಕಳೆದುಕೊಂಡಿದೆ. ಆದರೆ, ಈ ಘಟನೆಯಿಂದ ಭಾರತವು ಕಲಿಯಬೇಕಾದ್ದು ಬಹಳಷ್ಟಿದೆ.

ಬ್ರಿಟಿಷರ ಬಳುವಳಿ
-----------------
ಬ್ರಿಟಿಷರು ಭಾರತವನ್ನು ಒಡೆದು ಹೊರಟುಹೋದರು. ನಂತರ ನಾವು ಮಾನಸಿಕವಾಗಿ ಒಂದಾಗುವ ಬದಲು ಇನ್ನಷ್ಟು ದೂರವಾಗತೊಡಗಿದೆವು. ಭಾರತ, ಪಾಕ್ ಎರಡೂ ದೇಶಗಳ ರಾಜಕಾರಣಿಗಳು ದ್ವೇಷದ ಬೆಂಕಿಯನ್ನು ಶಮನಗೊಳಿಸುವ ಬದಲು ಆ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳತೊಡಗಿದರು. ಪಾಕ್‌ನ ಮಿಲಿಟರಿ ಸರ್ವಾಧಿಕಾರಿಗಳಂತೂ ಭಾರತದ ಮಟ್ಟಿಗೆ ಮಾತ್ರವಲ್ಲ, ತಮ್ಮ ದೇಶದ ಪಾಲಿಗೂ ರಾಕ್ಷಸರೇ ಆದರು! ಇವೆಲ್ಲದರ ಪರಿಣಾಮ, ಸೌಹಾರ್ದಯುತವಾಗಿ ಬಗೆಹರಿಯಬಹುದಾಗಿದ್ದ ಕಾಶ್ಮೀರ ಸಮಸ್ಯೆಯು ಉಲ್ಬಣಗೊಂಡಿತು. ಪಾಕ್ ಪೋಷಿತ ಉಗ್ರರು ಹುಟ್ಟಿಕೊಂಡರು. ಕಾಶ್ಮೀರದ ಹೊರಗೂ ತಮ್ಮ ಕಬಂಧಬಾಹುಗಳನ್ನು ಚಾಚಿದ ಇವರು ಇಂದು ಇಡೀ ಭಾರತಕ್ಕೇ ಕಂಟಕಪ್ರಾಯರಾಗಿ ಬೆಳೆದುನಿಂತಿದ್ದಾರೆ.

ಭಾರತದಲ್ಲಿ ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆಯೆಂದು ಕೆಲವು ಅನ್ಯೋದ್ದೇಶಭರಿತ ಮಾಧ್ಯಮಗಳು ಸುಳ್ಳು ಚಿತ್ರಣ ನೀಡುತ್ತಿರುವುದರಿಂದಾಗಿ ಮತ್ತು ಬಾಬ್ರಿ ಮಸೀದಿಯ ಧ್ವಂಸದ ವಿಷಯವನ್ನೆತ್ತಿಕೊಂಡು ಈ ಮುಸ್ಲಿಂ ಉಗ್ರರನ್ನು ಭಾರತದ ವಿರುದ್ಧ ಇನ್ನಷ್ಟು ವ್ಯಗ್ರಗೊಳಿಸಲಾಯಿತು. ಇದೇ ವೇಳೆ, ಅಧಿಕಾರ, ತುಷ್ಟೀಕರಣ ಹಾಗೂ ರಾಜಕೀಯ ದ್ವೇಷಗಳೇ ಗುರಿಯಾಗಿರುವ ನಮ್ಮ ಆಡಳಿತ ಪಕ್ಷಗಳು ಕಾಲದಿಂದ ಕಾಲಕ್ಕೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸೂಕ್ತವಾಗಿ ಆತ್ಮಸಮರ್ಥನೆಯ ಕಾರ್ಯ ನಿರ್ವಹಿಸುವಲ್ಲಿ ವಿಫಲವಾದವು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಪಾಕಿಸ್ತಾನ ಹಾಗೂ ಪಾಕ್ ಪ್ರೇರಿತ ಉಗ್ರಗಾಮಿ ಸಂಘಟನೆಗಳು ನಮ್ಮ ಮೇಲೆ ಎಲ್ಲ ರೀತಿಯ ದುರಾಕ್ರಮಣವನ್ನೂ ತೀವ್ರಗೊಳಿಸಿದವು. ಅದೀಗ ಮುಂಬಯಿಯಲ್ಲಾದಂತೆ ಅಘೋಷಿತ ಯುದ್ಧದ ಹಂತಕ್ಕೆ ಬಂದು ನಿಂತಿದೆ!

ಯುದ್ಧವೋ ಮತ್ತೇನೋ ಮಾಡಿ ಪಾಕಿಸ್ತಾನವನ್ನು ಬಗ್ಗುಬಡಿದುಬಿಡಬೇಕೆನ್ನುವ ಕೆಲವರ ಆಶಯದ ಅನುಷ್ಠಾನ ಇಂದು ಅಷ್ಟು ಸುಲಭವಲ್ಲ. ಇಂದಿರಾಗಾಂಧಿ ಮತ್ತು ಲಾಲ್‌ಬಹಾದುರ್ ಶಾಸ್ತ್ರಿ ಇವರಿಬ್ಬರಿಗೆ ಆ ಅವಕಾಶ ಇತ್ತು. ಈಗ ಪಾಕಿಸ್ತಾನವೂ ನಮ್ಮಂತೆ ಅಣುಶಕ್ತಿ ಸನ್ನದ್ಧ ರಾಷ್ಟ್ರವಾಗಿರುವುದರಿಂದ ಅದನ್ನು ಬಗ್ಗುಬಡಿಯಲು ಹೊರಡುವ ಮೊದಲು ನಾವು ಎಲ್ಲ ಸಾಧಕ ಬಾಧಕಗಳನ್ನೂ ಯೋಚಿಸಬೇಕಾಗುತ್ತದೆ.

ಮಾಡಬೇಕಾದ್ದೇನು?
------------------
ಮೊಟ್ಟಮೊದಲು, ನಮ್ಮ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವವರೀಗ ಆಲಸ್ಯ ಮತ್ತು ಕಾಪಟ್ಯ ತೊರೆದು ಎಚ್ಚತ್ತುಕೊಳ್ಳಬೇಕಾಗಿದೆ. ಮೈಕೊಡವಿ ಎದ್ದೇಳಬೇಕಾಗಿದೆ. ಹಿಂದು-ಮುಸ್ಲಿಂ ವೋಟುಗಳಿಗಾಗಿ ದೇಶವನ್ನೇ ಬಲಿಕೊಡಲು ಹೇಸದಿರುವ ನಮ್ಮ ರಾಜಕಾರಣಿಗಳು ಇನ್ನಾದರೂ ಪ್ರಾಮಾಣಿಕತೆಯನ್ನು ತೋರಬೇಕು ಮತ್ತು ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯನ್ನು ಮೆರೆಯಬೇಕು. ಅಂಥ ಯೋಗ್ಯ ನೇತಾರರನ್ನೇ ಚುನಾಯಿಸುವ ತನ್ನ ಜವಾಬ್ದಾರಿಯನ್ನು ಮತದಾರ ತಪ್ಪದೇ ನಿರ್ವಹಿಸಬೇಕು.

’ಭಾರತದಲ್ಲಿ ಮುಸ್ಲಿಮರು ಹಿಂಸಿಸಲ್ಪಡುತ್ತಿದ್ದಾರೆ’ ಎಂಬ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವುದೂ ಮುಸ್ಲಿಂ ಉಗ್ರರ ಭೀಕರ ಸ್ವರೂಪಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿರುವುದರಿಂದ ಅಂಥ ಅಪಕಲ್ಪನೆಯನ್ನು ನಿವಾರಿಸುವ ಕೆಲಸವನ್ನು ನಮ್ಮ ಮಾಧ್ಯಮಗಳು ಮತ್ತು ವಿಚಾರಪರ ಗಣ್ಯರು ಹಾಗೂ ಸಂಘಟನೆಗಳು ಕೈಗೆತ್ತಿಕೊಳ್ಳಬೇಕು. ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ನಿಟ್ಟಿನಲ್ಲಿ ಸ್ಪಷ್ಟನೆಯ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು. ಜೊತೆಗೆ, ಕಾಶ್ಮೀರದಲ್ಲಿ ನಮ್ಮ ಸೈನಿಕರು ಇನ್ನೂ ಹೆಚ್ಚಿನ ಸಂಯಮ ಪ್ರದರ್ಶಿಸಬೇಕು. ರಾಜಕಾರಣಿಗಳು ಕಾಶ್ಮೀರದ ಜನತೆಗೆ ಉತ್ತಮ ಆಡಳಿತ ನೀಡಿ ಎಲ್ಲರ ವಿಶ್ವಾಸ ಗಳಿಸಬೇಕು.

ಇಷ್ಟಾಗುವಾಗ ನಾವು ಪಾಕಿಸ್ತಾನದೊಡನೆ ಮಾತುಕತೆಯನ್ನು ತೀವ್ರಗತಿಯಲ್ಲಿ ಮುನ್ನಡೆಸಬೇಕು. ಅದೇವೇಳೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸಿ, ಪಾಕ್ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಒತ್ತಡಗಳನ್ನು ಹೇರಿಸಬೇಕು. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನವೀಗ ಆರ್ಥಿಕವಾಗಿ ಜರ್ಜರಿತವಾಗಿದೆ. ಅಲ್ ಖೈದಾ ಹಾಗೂ ತಾಲಿಬಾನ್ ಉಗ್ರರು ಪಾಕ್‌ಗೂ ಕಂಟಕಪ್ರಾಯರಾಗಿದ್ದಾರೆ. ಪಾಕ್‌ಗೆ ನೆರವು ನೀಡುತ್ತಿರುವ ಅಮೆರಿಕದ ಆರ್ಥಿಕ ಪರಿಸ್ಥಿತಿಯೂ ಭದ್ರವಾಗಿಲ್ಲ. ಜೊತೆಗೆ, ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಯು ಅಮೆರಿಕವೂ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಗೊತ್ತಿರುವುದೇ ಆಗಿದೆ. ಈ ಸಂದರ್ಭದ ಉಪಯೋಗ ಪಡೆದುಕೊಂಡು ಭಾರತವು ಪಾಕಿಸ್ತಾನವನ್ನು ಹಾದಿಗೆ ತರಲು ಸಾಧ್ಯ. ಕೊನೆಗೆ ಅನಿವಾರ್ಯವಾದರೆ ಶಕ್ತಿಪ್ರಯೋಗ ಇದ್ದೇ ಇದೆ. ನಮ್ಮ ಶಕ್ತಿಯ ಮುಂದೆ ಪಾಕಿಸ್ತಾನದ ಶಕ್ತಿ ಏನೇನೂ ಅಲ್ಲ.

ಕಬ್ಬಿಣ ಕಾದಿದೆ. ಬಡಿದು ಹದಕ್ಕೆ ತರಲು ಇದು ಸುಸಮಯ. ಇದಕ್ಕಾಗಿ ನಮ್ಮ ಸರ್ಕಾರಕ್ಕೆ ಬೇಕಾಗಿರುವುದು ಪ್ರಾಮಾಣಿಕತೆ, ಸಕಾರಾತ್ಮಕ ಧೋರಣೆ ಮತ್ತು ಇಚ್ಛಾಶಕ್ತಿ. ಅತ್ತ ಸರಬ್‌ಜಿತ್‌ಗೆ ಗಲ್ಲು ಖಾಯಂ ಆದರೆ ಇತ್ತ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಹಿಂದೆಮುಂದೆ ನೋಡುತ್ತಿರುವ ನಮ್ಮ ಸರ್ಕಾರದಿಂದ, ಮುಂಬಯಿಯ ಘನಘೋರ ದುರಂತದ ನಂತರವೂ ಪಾಕ್ ವಿಷಯದಲ್ಲಿ ತಣ್ಣಗೆ ಕುಳಿತಿರುವ ನಮ್ಮ ಕೇಂದ್ರ ಸರ್ಕಾರದಿಂದ ಈ ಇತ್ಯಾತ್ಮಕ ಗುಣಗಳನ್ನು ನಾವು ನಿರೀಕ್ಷಿಸಬಹುದೇ?

ಬುಧವಾರ, ಜೂನ್ 24, 2009

ಶಾಸ್ತ್ರ, ಸಂಪ್ರದಾಯ

ಧರ್ಮಾಚರಣೆಯ ವಿಧಿಗಳಲ್ಲಿ ಕೆಲವನ್ನು ನಾವು ಶಾಸ್ತ್ರವೆಂದೂ ಕೆಲವನ್ನು ಸಂಪ್ರದಾಯವೆಂದೂ ವರ್ಗೀಕರಿಸಿದ್ದೇವೆ. ’ಶಾಸ್ತ್ರ, ಸಂಪ್ರದಾಯ’ ಹಾಗೆಂದರೇನು?

ಇಲ್ಲಿ ಪ್ರಸ್ತುತವಾಗುವ "ಆಚರಣಾ ರೂಪದ ಶಾಸ್ತ್ರ"ವು ಮತ, ನಿಯಮ, ನೀತಿ ಸಂಬಂಧಿಯಾದುದರಿಂದ ಇದು "ಧರ್ಮಶಾಸ್ತ್ರ". ವೇದೋಕ್ತ ಮಂತ್ರಕ್ರಿಯಾವಿಧಿಯ ವ್ಯಾಖ್ಯಾನ ಸಾಧನವೂ, ಧರ್ಮವಿಚಾರದ ಶೋಧವೂ ಆಗಿರುವ "ಪೂರ್ವಮೀಮಾಂಸೆ"ಯನ್ನು ಮತಧರ್ಮೀಯ ಹಾಗೂ ನ್ಯಾಯವಿಷಯಕ ವಿದ್ಯಮಾನ ಪ್ರಸ್ತುತಿಗಾಗಿ ಬಳಸಿಕೊಂಡಿರುವಂಥದು ಧರ್ಮಶಾಸ್ತ್ರ. ಎಂದೇ ಇದರಲ್ಲಿ ನಿತ್ಯವಿಧಿಗಳ ಹಾಗೂ ಚತುರ್ವರ್ಣ ಸಂಬಂಧೀ ಕರ್ತವ್ಯಗಳ ಕಟ್ಟಳೆಗಳನ್ನು ಸಾರುವ "ಆಚಾರ", ಅಸ್ತಿತ್ವದ ನಿಯಮವನ್ನೂ ದರ್ಮಸಂದೇಹದ ಪರಿಹಾರವನ್ನೂ ಸಾರುವ "ವ್ಯವಹಾರ" ಮತ್ತು ಧರ್ಮೋಲ್ಲಂಘನದ ಸಂದರ್ಭದಲ್ಲಿ ಕೈಕೊಳ್ಳಬೇಕಾದ ಪರಿಹಾರವನ್ನು ಹೇಳುವ "ಪ್ರಾಯಶ್ಚಿತ್ತ" ಇವು ಪ್ರಧಾನ ವಿಷಯಗಳು.

ಹೀಗೆ, ಶಾಸ್ತ್ರವೆಂಬುದು ನಮ್ಮ ಜೀವನೋದ್ದೇಶವನ್ನೂ ಜೀವನವನ್ನೂ ಅರ್ಥೈಸಿ ಜೀವನದ ವಿಧಿ-ವಿಧಾನಗಳನ್ನು ರೂಪಿಸುವ ಒಂದು ಪ್ರಜ್ಞೆಯಾದ್ದರಿಂದ, ಕಾಲ, ಪ್ರಕೃತಿ, ಪರಿಸರ, ಸಂಸ್ಕೃತಿ, ನಾಗರಿಕತೆ ಮತ್ತು ಜೀವನಕ್ರಮಗಳ ಮಾರ್ಪಾಟಿಗನುಗುಣವಾಗಿ ಶಾಸ್ತ್ರಾನುಸರಣವೂ ಮಾರ್ಪಾಟು ಹೊಂದುವುದು ತಪ್ಪೇನಲ್ಲ, ಮಾತ್ರವಲ್ಲ, ಅವಶ್ಯ ಕೂಡ. ಇಷ್ಟಕ್ಕೂ ಶಾಸ್ತ್ರವೆಂಬುದು ಮಾನವಪ್ರಣೀತ ವಿಜ್ಞಾನವೇ ಹೊರತು ದೈವಪ್ರಣೀತ ವಿಧಿಯಲ್ಲ.

"ಶಾಸ್ತ್ರತೋ ಗುರುತಶ್ಚೈವ ಸ್ವತಶ್ಚೇತಿ ತ್ರಿಸಿದ್ಧಯಃ,
ಸರ್ವತ್ರ ಪುರುಷಾರ್ಥಸ್ಯ ನ ದೈವಸ್ಯ ಕದಾಚನ"
ಎಂಬ ಯೋಗವಾಸಿಷ್ಠದ ನುಡಿಯಂತೆ, ಶಾಸ್ತ್ರವೆಂಬುದು, ಕಾರ್ಯಸಿದ್ಧಿಯ ವಿಧಗಳಲ್ಲೊಂದಾಗಿದ್ದು, ಪೌರುಷಕ್ಕೆ ಸೇರಿದುದೇ ಹೊರತು ಎಂದಿಗೂ ದೈವಕ್ಕೆ ಸೇರಿದುದಲ್ಲ.

ಸಂಪ್ರದಾಯ
------------
ಇನ್ನು, "ಸಂಪ್ರದಾಯ". ಇದು ಪರಂಪರಾಗತ ಪದ್ಧತಿಯಾದ್ದರಿಂದ, ಸಕಾರಣ ರೂಢಿಯಾದ್ದರಿಂದ ಶಾಸ್ತ್ರಪ್ರಭೇದಸಮಾನ. ದೀಕ್ಷಾಬದ್ಧವಾದುದು ಇದು. ವಿವಿಧ ಜನವರ್ಗದ ನಂಬಿಕೆ, ಮನೋಭಾವ, ವಿವಿಧ ಭೂಗುಣ, ಹವಾಗುಣ, ಆಹಾರ ಪದ್ಧತಿ, ಜೀವನಶೈಲಿ, ಇವುಗಳು ಸಂಪ್ರದಾಯಗಳ ವಿಭಿನ್ನ ರೂಪಗಳಿಗೆ ಕಾರಣ. ಇವುಗಳಿಗನುಗುಣವಾಗಿ, ಮತ್ತು, ಕಾಲಮಾನ, ನಾಗರಿಕತೆ, ಸಂಸ್ಕೃತಿ ಮತ್ತು ಜೀವನದೃಷ್ಟಿಗಳು ಮಾರ್ಪಾಟುಹೊಂದುತ್ತ ಸಾಗಿದಂತೆಲ್ಲ ಸಂಪ್ರದಾಯವೂ ತಕ್ಕ ಮಾರ್ಪಾಟಿಗೊಳಗಾಗುವುದು ಸ್ವಾಭಾವಿಕ ಮತ್ತು ಅಪೇಕ್ಷಣೀಯ ಕೂಡ. ಹಾಗಾಗಕೂಡದೆಂದರೆ ಆಗ ಅದು ಮೌಢ್ಯವಾಗುತ್ತದೆ. ಸಂಪ್ರದಾಯವು ಮೌಢ್ಯವಾದಲ್ಲಿ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ. ಇಂಥ ಅಪಾಯವನ್ನೇ ಇಂದು ನಾವು ಎಲ್ಲೆಲ್ಲೂ ಕಾಣುತ್ತಿದ್ದೇವಷ್ಟೆ. ಸಂಪ್ರದಾಯವು ಗೋತ್ರದಂತೆ ಜನ್ಮದಿಂದ ಬಂದದ್ದಲ್ಲ. ನಾವು ಮಾಡಿಕೊಂಡದ್ದು. ನಾವೇ ಬದಲಾಯಿಸಲೂಬಹುದು. ಸಂದರ್ಭಾನುಸಾರ ಬದಲಾಯಿಸಬೇಕು ಸಹ. ಏಕೆಂದರೆ, ಸಮಾಜಮುಖಿಯಾಗಿರಬೇಕಾದುದು ಸಂಪ್ರದಾಯದ ಉದ್ದೇಶ ಮತ್ತು ಮೂಲ ಗುಣ.

ಧರ್ಮ, ಶಾಸ್ತ್ರ, ಸಂಪ್ರದಾಯ, ಇವೆಲ್ಲವೂ ನಂಬಿಕೆಗೆ ಅಧೀನವಾಗಿರುವ ವಿಷಯಗಳು. ನಂಬಿಕೆಯು ನಮ್ಮ ವಿವೇಚನೆಗೆ ಮತ್ತು ನಿಯಂತ್ರಣಕ್ಕೆ ಒಳಪಟ್ಟ ವಿಷಯ.

ಮಂಗಳವಾರ, ಜೂನ್ 23, 2009

’ಸ್ಲಂಡಾಗ್..’: ನೋ ಆಸ್ಕರ್, ನೋ ಟೆಲ್ಲರ್!

ಇದೇ ಶನಿವಾರ (೨೭ರಂದು) ದೂರದರ್ಶನದ ಖಾಸಗಿ ಚಾನೆಲ್ಲೊಂದರಲ್ಲಿ ’ಸ್ಲಂಡಾಗ್ ಮಿಲಿಯನೇರ್’ ಆಂಗ್ಲ ಚಲನಚಿತ್ರವು ಪ್ರಸಾರಗೊಳ್ಳಲಿದೆ. ಕೋಟ್ಯಂತರ ಮಂದಿ ಚಿತ್ರವನ್ನು ವೀಕ್ಷಿಸಲಿದ್ದಾರೆ. ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳು ಬಂದಾಗ ಪತ್ರಿಕೆಯೊಂದರಲ್ಲಿ ನಾನು ಬರೆದಿದ್ದ ಲೇಖನವನ್ನು ಈ ಸಂದರ್ಭದಲ್ಲಿ ತಮ್ಮೆದುರು ಪ್ರಸ್ತುತಪಡಿಸುತ್ತಿದ್ದೇನೆ.
-೦-

’ಸ್ಲಂಡಾಗ್ ಮಿಲಿಯನೇರ್’ ಚಿತ್ರಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ದೊರೆತದ್ದರಲ್ಲಿ ಆಶ್ಚರ್ಯವೇನಿಲ್ಲ. ಈ ಎಂಟೂ ಪ್ರಶಸ್ತಿಗಳಿಗೂ ಚಿತ್ರವು ಅರ್ಹವೆಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಎ.ಆರ್.ರೆಹಮಾನ್‌ಗೆ, ನಮ್ಮ ಗುಲ್ಜರ್‌ಗೆ, ನಮ್ಮ ರಸೂಲ್ ಪೂಕುಟ್ಟಿಗೆ ಆಸ್ಕರ್ ಲಭಿಸಿದ್ದು ನಮಗೆ ನಿಜಕ್ಕೂ ಖುಷಿ ಸುದ್ದಿ.

ಕೊಳೆಗೇರಿಯ ಬಾಲಕನೊಬ್ಬ ತನ್ನ ಜೀವನಾನುಭವದ ನೆರವಿನಿಂದಲೇ ರಸಪ್ರಶ್ನೆ ಕಾರ್ಯಕ್ರಮವೊಂದರ ಎಲ್ಲ ಪ್ರಶ್ನೆಗಳಿಗೂ ಸರಿಯುತ್ತರ ನೀಡಿ ಎರಡು ಕೋಟಿ ರೂಪಾಯಿಗಳನ್ನು ಗೆಲ್ಲುವ, ಅಪ್ರತಿಮವೇನೂ ಅಲ್ಲದ ಮತ್ತು ಸಂಭಾವ್ಯವೂ ಅಲ್ಲದ ಕಥೆಯನ್ನು ಒಳಗೊಂಡಿರುವ ಈ ಚಿತ್ರದ ವಿಶೇಷವೆಂದರೆ ಕಥೆಯ ನಿರೂಪಣೆಯ ಶೈಲಿ.

ಚಾಯ್‌ವಾಲಾ ಹುಡುಗನೊಬ್ಬ ’ಕ್ಲಿಷ್ಟ’ ಪ್ರಶ್ನೆಗಳಿಗೂ ಲೀಲಾಜಾಲವಾಗಿ ಸರಿಯುತ್ತರಗಳನ್ನು ನೀಡುತ್ತಹೋದಾಗ ಆ ಬಾಲಕನನ್ನು ’ಫ್ರಾಡ್’ ಎಂದು ಭಾವಿಸಿ ವಿಚಾರಣೆಗಾಗಿ ಪೋಲೀಸ್ ವಶಕ್ಕೆ ನೀಡಲಾಗುತ್ತದೆ. ಪೋಲೀಸ್ ಒದೆಗಳ ಮಧ್ಯೆ, ಆ ಬಾಲಕನ ಜೀವನಾನುಭವವೆಂಬ ಸತ್ಯದ ಅನಾವರಣವಾಗತೊಡಗುತ್ತದೆ. ಈ ಅನಾವರಣಕ್ರಿಯೆಯಲ್ಲಿ, ಭಾರತದ ಕೊಳೆಗೇರಿಯಿಂದ ಮೊದಲ್ಗೊಂಡು ಸಕಲ ಕೊಳಕುಗಳೂ ತೆರೆಯಮೇಲೆ ಕಾಣಿಸಿಕೊಳ್ಳುತ್ತವೆ. ಈ ಕೊಳಕುಗಳನ್ನು ಚೆನ್ನಾಗಿ ಪೋಣಿಸಿ, ರಂಗು ನೀಡಿ, ಕಣ್ಣಿಗೆ ರಾಚುವಂತೆ ಪ್ರಸ್ತುತಪಡಿಸಿದಾಗ ಆಸ್ಕರ್ ಬರದಿದ್ದೀತೇ?

’ಕಲೆಯ ಪ್ರಕಾರಗಳಿಗಾಗಿ ಆಸ್ಕರ್ ಎಂಬ ಒಂದು ಪ್ರಶಸ್ತಿ’ ಎಂದಷ್ಟೇ ಆದಲ್ಲಿ ಎಲ್ಲರಂತೆ ನಾನೂ ಸ್ವಾಗತಿಸುತ್ತೇನೆ, ಹರ್ಷಿಸುತ್ತೇನೆ. ಭಾರತೀಯನೊಬ್ಬ ಬರೆದ ಭಾರತೀಯ ಶೈಲಿಯ ಕಥೆಯನ್ನು, ಭಾರತೀಯ ಚಲನಚಿತ್ರಪರಂಪರೆಯ ಹಲವು ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು, ಪಾಶ್ಚಾತ್ಯ ಶೈಲಿಯ ತಂತ್ರಗಾರಿಕೆ ಮತ್ತು ಚುರುಕಿನ ನಿರೂಪಣೆಗಳಿಂದ ಪ್ರಸ್ತುತಪಡಿಸಿದಾಗ ಸಹಜವಾಗಿಯೇ ಆ ಚಿತ್ರವು ಉಭಯ ಶೈಲಿಯ ಧನಾತ್ಮಕ ಗುಣಗಳ ಹದವರಿತ ಮಿಶ್ರಣವಾದ ಒಂದು ವಿಶಿಷ್ಟ ಚಿತ್ರವಾಗುತ್ತದೆ. ಈ ವೈಶಿಷ್ಟ್ಯದಿಂದಲೇ ’ಸ್ಲಂಡಾಗ್ ಮಿಲಿಯನೇರ್’ ಚಿತ್ರವು ಎಂಟು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ, ಇದರಲ್ಲಿ ಆಶ್ಚರ್ಯವೂ ಇಲ್ಲ, ಈ ಬಗ್ಗೆ ಅಪಸ್ವರವೂ ಸಲ್ಲ. ಆದರೆ, ’ಸ್ಲಂಡಾಗ್..’ನ ಆಸ್ಕರ್‌ನ ಅಬ್ಬರದಲ್ಲಿ ಭಾರತೀಯ ಚಲನಚಿತ್ರರಂಗದ ಅಪ್ರತಿಮ ಕಲಾವಂತಿಕೆಯಾಗಲೀ ಇದುವರೆಗಿನ ಸಾಧನೆಗಳಾಗಲೀ ಸಾಧಕರಾಗಲೀ ಜನಮಾನಸದಲ್ಲಿ ಮಂಕಾಗಬಾರದಷ್ಟೆ. ಮಾಧ್ಯಮಗಳಲ್ಲಿ ’ಸ್ಲಂಡಾಗ್..’ನ ಆಸ್ಕರ್ ಗಳಿಕೆಯ ವೈಭವೀಕರಣವು ಭಾರತದ ಯುವಪೀಳಿಗೆಯಲ್ಲಿ ಇಂಥದೊಂದು ಅಪಾಯವನ್ನು ಸೃಷ್ಟಿಸುತ್ತಿರುವುದು ಮಾತ್ರ ಕಳವಳದ ಸಂಗತಿ.

ಆಸ್ಕರ್‌ನ ಈ ವೈಭವೀಕರಣದಿಂದ ಮತ್ತು ಈ ಇಡೀ ಚಿತ್ರವನ್ನು ಭಾರತದ ಸಾಧನೆಯೆಂಬಂತೆ ಬಿಂಬಿಸಲಾಗುತ್ತಿರುವುದರಿಂದ ಒಂದು ರೀತಿಯಲ್ಲಿ ಭಾರತೀಯ ಚಲನಚಿತ್ರರಂಗಕ್ಕೆ ಅಪಚಾರವಾದಂತಲ್ಲವೆ? ನಮ್ಮ ಇದುವರೆಗಿನ ಸಾಧಕರ ಸಾಧನೆಗಳನ್ನು ಅಪಮೌಲ್ಯಗೊಳಿಸಿದಂತಾಗಲಿಲ್ಲವೆ? ಎ.ಆರ್.ರೆಹಮಾನ್‌ನ ಸಂಗೀತದಷ್ಟೇ ಅದ್ಭುತವಾಗಿ, ಆತನ ಗೀತೆಗಳಿಗಿಂತ ಸುಶ್ರಾವ್ಯವಾಗಿ ಸಂಗೀತ ನೀಡಿರುವ ಅದೆಷ್ಟು ದಿಗ್ಗಜಗಳು ನಮ್ಮ ದೇಶದಲ್ಲಿ ಆಗಿಹೋಗಿಲ್ಲ, ಇಂದಿಗೂ ಇಲ್ಲ?

ಮಾಧುರ್ಯದಲ್ಲಿ ನೌಷದ್, ಜಾನಪದ ಮಟ್ಟುಗಳ ಬಳಕೆಯಲ್ಲಿ ಎಸ್.ಡಿ.ಬರ್ಮನ್, ಪಾಶ್ಚಾತ್ಯ ಛಾಪು ಮೆರೆಸುವಲ್ಲಿ, ಬೆರೆಸುವಲ್ಲಿ ಆರ್.ಡಿ.ಬರ್ಮನ್, ಸಂಗೀತವನ್ನೂ ವಾದ್ಯಗಳನ್ನೂ ದುಡಿಸಿಕೊಳ್ಳುವಲ್ಲಿ ಇಳಯರಾಜಾ, ಗಾಯನದಲ್ಲಿ ರಫಿ, ಮುಕೇಶ್, ಕಿಶೋರ್, ಲತಾ, ಆಶಾ ಹೀಗೆ ಅದೆಷ್ಟೊಂದು ಉದಾಹರಣೆಗಳನ್ನು ನೀಡಬಹುದಲ್ಲವೆ? ಗುಲ್ಜಾರ್‌ರಷ್ಟೇ ಹಾಗೂ ಅವರಿಗಿಂತ ಉತ್ತಮವಾಗಿ ಗೀತರಚನೆ ಮಾಡಿರುವವರು ಅದೆಷ್ಟು ಮಂದಿ ನಮ್ಮಲ್ಲಿಲ್ಲ? ಕವಿ ಪ್ರದೀಪ್‌ರಿಂದ ಮೊದಲ್ಗೊಂಡು ಜಾವೇದ್ ಅಖ್ತರ್‌ವರೆಗೆ ಅದೆಷ್ಟು ರಚನಕಾರರ ಚಿತ್ರಗೀತೆಗಳು ಅದ್ಭುತವಾಗಿಲ್ಲ? ಕನ್ನಡ ಚಿತ್ರಸಂಗೀತ ಕ್ಷೇತ್ರದಲ್ಲಿ ಅದೆಷ್ಟು ಅದ್ಭುತ ಆಣಿಮುತ್ತುಗಳಿಲ್ಲ? ಇತರ ದಕ್ಷಿಣ ಭಾರತೀಯ ಭಾಷೆಗಳಲ್ಲೂ ಶ್ರೇಷ್ಠ ಚಿತ್ರಸಂಗೀತಕ್ಕೇನು ಕೊರತೆಯೇ? ಕನ್ನಡವೂ ಸೇರಿದಂತೆ ನಾನಾ ಭಾರತೀಯ ಭಾಷೆಗಳಲ್ಲಿ ರೆಹಮಾನ್-ಗುಲ್ಜಾರ್‌ರನ್ನು ಸರಿಗಟ್ಟುವ/ಮೀರುವ ಸಾಧನೆ ಮಾಡಿರುವವರು ಅದೆಷ್ಟು ಮಂದಿ ಇಲ್ಲ?

’ಸ್ಲಂಡಾಗ್..’ನ ’ಜೈ ಹೋ..’ ಗೀತೆ, ಮತ್ತು, ಹಿನ್ನೆಲೆ ಸಂಗೀತವೂ ಸೇರಿದಂತೆ ಒಟ್ಟು ಸಂಗೀತ ಇವು ಭಾರತೀಯ ಚಲನಚಿತ್ರರಂಗದ ಅತ್ಯುಚ್ಚ ಕೃತಿಗಳು ಎಂಬಂತೆ ನಮ್ಮ ಮಾಧ್ಯಮಗಳು ಬಿಂಬಿಸುತ್ತಿರುವುದು ಈ ವಿಭಾಗಗಳ ಇತರ ಭಾರತೀಯ ಸಾಧಕರಿಗೆ ಮತ್ತು ಅವರ ಕೃತಿಗಳಿಗೆ ಎಸಗಿದ ಅನ್ಯಾಯವಲ್ಲವೆ? ಪ್ರಸ್ತುತ ಆಸ್ಕರ್ ಹಂಗಾಮಾ ಬಗ್ಗೆ ಒಳಗೊಳಗೇ ನಮ್ಮ ನೌಷದ್ ಸಾಬ್, ಲತಾ ದೀದೀ, ಆಶಾ ದೀದೀ, ಜಾವೇದ್ ಸಾಬ್ ಇವರುಗಳಿಗೆ ಏನೆನ್ನಿಸುತ್ತಿರಬೇಡ?

’ನಾನು ಎಷ್ಟೋ ಇಂಥ ಉತ್ತಮ ಗೀತೆಗಳನ್ನು ಹಾಡಿದ್ದೇನೆ; ಆದರೆ ಅವಕ್ಕೆ ಸೂಕ್ತ ಮನ್ನಣೆ ಸಿಗಲಿಲ್ಲ’, ಎಂದು ಈಚೆಗಷ್ಟೇ ಆಶಾ ದೀದೀ ಮಾರ್ಮಿಕವಾಗಿ ನುಡಿದದ್ದನ್ನು ನಾವು ಗಮನಿಸಿದ್ದೇವಷ್ಟೆ. ಅದೆಲ್ಲ ಹೋಗಲಿ, ಇದೇ ರೆಹಮಾನ್ ಮತ್ತು ಗುಲ್ಜಾರ್‌ರ ಕೃತಿಗಳೇ ಬೇರೆ ಹಲವು ಚಿತ್ರಗಳಲ್ಲಿ ’ಸ್ಲಂಡಾಗ್..’ಗಿಂತಲೂ ಚೆನ್ನಾಗಿಲ್ಲವೆ?

’ಸ್ಲಂ’ನಲ್ಲೇನಿದೆ?
--------------
ಇಷ್ಟಕ್ಕೂ, ’ಸ್ಲಂಡಾಗ್ ಮಿಲಿಯನೇರ್’ ಚಿತ್ರ ಹೇಗಿದೆ, ಅದರಲ್ಲಿ ಏನೇನಿದೆ, ಒಂದು ಸ್ಥೂಲ ನೋಟ ಹರಿಸೋಣ.

ಚಿತ್ರ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲೇ ಮುಂಬೈನ ಧಾರಾವಿ ಕೊಳೆಗೇರಿಯನ್ನು ವಿವಿಧ ಕೋನಗಳಲ್ಲಿ ಕಣ್ಣಿಗೆ ರಾಚುವಂತೆ ತೋರಿಸಲಾಗುತ್ತದೆ. ಕಥೆಯ ನೆಪದಲ್ಲಿ ಅರ್ಧ ಗಂಟೆಯೊಳಗೆ ಆ ಕೊಳೆಗೇರಿಯ ಎಲ್ಲ ಕೊಳಕು ದೃಶ್ಯಗಳನ್ನೂ ಪ್ರೇಕ್ಷಕನೆದುರು ಬಿಚ್ಚಿಡಲಾಗುತ್ತದೆ. ಚಲನಚಿತ್ರದುದ್ದಕ್ಕೂ ಕೊಳೆಗೇರಿ ಮಾತ್ರವಲ್ಲ, ಕಳ್ಳತನ, ಭಿಕ್ಷಾಟನೆ, ಮೋಸ, ಹಿಂಸೆ, ಬಡತನ, ಅಜ್ಞಾನ, ವೇಶ್ಯಾವೃತ್ತಿ, ಶೋಷಣೆ, ವಿವಿಧ ಮಾಫಿಯಾ, ಕೊಲೆ.... ಇವೇ ವಿಜೃಂಭಿಸುತ್ತವೆ. ಈ ಚಿತ್ರವನ್ನು ನೋಡಿದ ಅಮಾಯಕ ವಿದೇಶೀಯರಿಗೆ ಹಾಗೂ ಮುಗ್ಧ ಎನ್ನಾರೈ ಎಳೆಮೆದುಳುಗಳಿಗೆ ’ಭಾರತ ಒಂದು ದುಷ್ಟ ಹಾಗೂ ದರಿದ್ರ ದೇಶ’ ಎಂಬ ಭಾವನೆ ಉಂಟಾದರೆ ಆಶ್ಚರ್ಯವಿಲ್ಲ.

ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಗೊತ್ತಾಗುವ ಇನ್ನೊಂದು ಅಂಶವೆಂದರೆ, ಮಕ್ಕಳನ್ನು ಹೊರತುಪಡಿಸಿ ಚಿತ್ರದಲ್ಲಿ ಬರುವ ಬಹುತೇಕ ಭಾರತೀಯ ಪಾತ್ರಗಳು ದುಷ್ಟ ಪಾತ್ರಗಳು! ಇದು ಭಾರತೀಯರ ಬಗ್ಗೆ ವಿದೇಶೀಯರಲ್ಲಿ ಎಂಥ ಕಲ್ಪನೆಯನ್ನು ಮೂಡಿಸುತ್ತದೆಂದು ಯೋಚಿಸಿದರೆ ಗಾಬರಿಯಾಗುತ್ತದೆ! ಚಿತ್ರದ ದೃಶ್ಯವೊಂದರಲ್ಲಿ, ಕಾರೊಂದರ ಬಿಡಿಭಾಗಗಳನ್ನು ಕೊಳೆಗೇರಿ ಮಕ್ಕಳು ಕಳವು ಮಾಡಿದಾಗ, ನಷ್ಟಕ್ಕೊಳಗಾದವರ ಪೈಕಿ ಭಾರತೀಯನು ’ಗೈಡ್’ ಬಾಲಕನಮೇಲೆ ಹಿಂಸಾಚಾರಕ್ಕಿಳಿದರೆ ಬಿಳಿ ತೊಗಲಿನ ವಿದೇಶೀ ದಂಪತಿಗಳು ಕರುಣೆ ಮೆರೆದು ಆ ಬಾಲಕನಿಗೆ ಕಾಸು ನೀಡುತ್ತಾರೆ! ಈ ದೃಶ್ಯವು ಜಗತ್ತಿಗೆ ನೀಡುವ ಸಂದೇಶವನ್ನು ಊಹಿಸಿರಿ. ಚಿತ್ರದ ನಿರ್ಮಾಪಕರ/ನಿರ್ದೇಶಕರ ಉದ್ದೇಶವನ್ನೂ ಊಹಿಸಿರಿ.

ಇನ್ನೊಂದು ದೃಶ್ಯ: ಪಾಯಿಖಾನೆಯಲ್ಲಿ ಕೂಡಿಹಾಕಲ್ಪಟ್ಟಿದ್ದ ಬಾಲಕನೋರ್ವ (ಅವನೇ ಹೀರೊ) ಅಮಿತಾಭ್ ಬಚ್ಚನ್‌ನನ್ನು ನೋಡಲು ಪಾಯಿಖಾನೆಯ ಮಲದ ಗುಂಡಿಯೊಳಗೆ ಇಳಿದು ಮುಳುಗಿ ಸಾಗಿ ಇನ್ನೊಂದು ದ್ವಾರದಿಂದ ಹೊರಕ್ಕೆ ಬಂದು, ಮಲಭರಿತ ದೇಹದೊಂದಿಗೇ ಜನಸಮೂಹವನ್ನು ಛೇದಿಸಿಕೊಂಡು ಮುನ್ನುಗ್ಗಿ ಅಮಿತಾಭ್‌ನ ಹಸ್ತಾಕ್ಷರ ಪಡೆಯುತ್ತಾನೆ! ಭಾರತದ ಯಾವ ಕೊಳೆಗೇರಿಯ ಮಕ್ಕಳೂ ಈ ಮಟ್ಟಕ್ಕೆ ’ಇಳಿದದ್ದನ್ನು’ ನಾನಂತೂ ನೋಡಿಲ್ಲ, ಓದಿಲ್ಲ, ಕೇಳಿಲ್ಲ. ಇಂಥ ದೃಶ್ಯಗಳನ್ನು ತೋರಿಸುವ ನಿರ್ಮಾಪಕ-ನಿರ್ದೇಶಕರ ಉದ್ದೇಶವನ್ನು ಲಘುವಾಗಿ ಪರಿಗಣಿಸಲಾದೀತೇ? ಭಾರತದ ಬಗ್ಗೆ ಪಾಶ್ಚಾತ್ಯರಿಗಿರುವ ಭಾವನೆ ಎಂಥದೆಂದು ನಮಗೆ ಗೊತ್ತಷ್ಟೆ.

ಇಷ್ಟಾಗಿ, ಈ ಚಿತ್ರವು ಭಾರತದ ಬಗ್ಗೆಯಾಗಲೀ ಭಾರತೀಯರ ಬಗ್ಗೆಯಾಗಲೀ, ಕನಿಷ್ಠಪಕ್ಷ ಕೊಳೆಗೇರಿ ನಿವಾಸಿಗಳ ಬಗ್ಗೆಯಾಗಲೀ ಏನಾದರೂ ಧನಾತ್ಮಕ ಸಂದೇಶ ಬೀರುತ್ತದೆಯೇ? ಊಹ್ಞೂಂ. ಎರಡು ಕೋಟಿ ರೂಪಾಯಿ ಗೆಲ್ಲುವ ಹುಡುಗ ತನ್ನ ಪ್ರತಿಭೆಯಿಂದಾಗಲೀ ಪರಿಶ್ರಮದಿಂದಾಗಲೀ ಗೆಲ್ಲುವುದಿಲ್ಲ, ಜೀವನದಲ್ಲಿ ತಾನು ಅಕಸ್ಮಾತ್ತಾಗಿ ಅನುಭವಿಸಿದ ಘಟನೆಗಳಿಗೆ ಸಂಬಂಧಿಸಿದ ರಸಪ್ರಶ್ನೆಗಳೇ ಅದೃಷ್ಟವಶಾತ್ ಎದುರಾಗಿದ್ದರಿಂದಾಗಿ ಆತ ಕರೋಡ್‌ಪತಿಯಾಗುತ್ತಾನೆ, ಅಷ್ಟೆ.

ರಸಪ್ರಶ್ನೆಯ ಕಥಾವಸ್ತು ಈ ಚಿತ್ರದಲ್ಲಿರುವುದು ಕೇವಲ ಕುತೂಹಲ ಹುಟ್ಟಿಸಲಿಕ್ಕಾಗಿ ಮತ್ತು ’ಭಾರತದ ಕೊಳೆಗೇರಿಯ ದರಿದ್ರ ಜೀವನವನ್ನೂ ಅದರಾಚೆಯ ದುಷ್ಟ ಜೀವನವನ್ನೂ’ ಇದುವೇ ಭಾರತ ಎಂದು ಜಗತ್ತಿಗೆ ಸಾರಿ ತೋರಿಸುವುದಕ್ಕಾಗಿ.

ಇಂಥ ಬ್ರಿಟಿಷ್ ಚಿತ್ರಕ್ಕೆ ಅಮೆರಿಕನ್ನರು ಆಸ್ಕರ್ ಕೊಟ್ಟರೆ ಅದು ನಿರೀಕ್ಷಿತವೇ. ಶತಮಾನಗಳಿಂದಲೂ ಅವರ ನಾಡಿಮಿಡಿತ ನಮಗೆ ಗೊತ್ತಿಲ್ಲವೆ? ಜೊತೆಗೆ, ಆಸ್ಕರ್ ನಿರ್ಧರಿಸುವಾಗ ಅವರು ಇಂಗ್ಲಿಷೇತರ ಚಿತ್ರಗಳಿಗಿಂತ ಇಂಗ್ಲಿಷ್ ಚಿತ್ರಗಳೆಡೆಗೇ ವಿಶೇಷ ಒಲವು ತೋರುವುದೂ ನಮಗೆ ಗೊತ್ತಲ್ಲವೆ? ಹೀಗಿದ್ದೂ, ಆಸ್ಕರ್ ಬಂತೆಂದಾಕ್ಷಣ ನಮ್ಮವೇ ಮಾಧ್ಯಮಗಳು ’ಸ್ಲಂಡಾಗ್ ಮಿಲಿಯನೇರ್’ ಚಿತ್ರವನ್ನು ಈ ಪಾಟಿ ಹಾಡಿ ಹೊಗಳುತ್ತಿವೆಯಲ್ಲಾ, ಇದಕ್ಕೇನೆನ್ನಬೇಕು? ದೇಶದ ಘನತೆ-ಗೌರವಗಳಿಗಿಂತ ಒಂದು ಚಲನಚಿತ್ರ ಹೆಚ್ಚೇ? ಈ ಮಾಧ್ಯಮಗಳಿಗೆ ನೋ ಆಸ್ಕರ್, ನೋ ಟೆಲ್ಲರ್!

ಕೊಳೆಗೇರಿ ನೋಡುವ ತವಕ!
---------------------------
’ಸ್ಲಂಡಾಗ್ ಮಿಲಿಯನೇರ್’ ಚಿತ್ರವು ಆಸ್ಕರ್ ಪ್ರಶಸ್ತಿಗಳನ್ನು ಕೊಳ್ಳೆಹೊಡೆದ ಮರುವಾರ ನಾನು ತಮಿಳುನಾಡಿನ ತಿರುವಣ್ಣಾಮಲೈನಿಂದ ೩೭ ಕಿ.ಮೀ. ದೂರದ ಜಿಂಜಿ ಎಂಬ ಐತಿಹಾಸಿಕ ಸ್ಥಳದಲ್ಲಿದ್ದೆ. ಅಲ್ಲಿ ಬೆಟ್ಟಗಳಮೇಲಿರುವ ರಾಜಗಿರಿ ಕೋಟೆ ಮತ್ತು ಕೃಷ್ಣಗಿರಿ ಕೋಟೆ ಎಂಬೆರಡು ಕೋಟೆಗಳನ್ನು ನೋಡಲು ಬೆಟ್ಟ ಹತ್ತುತ್ತಿದ್ದೆ. ಒಂದಷ್ಟು ಮಂದಿ ಬಿಳಿ ತೊಗಲಿನ ವಿದೇಶೀಯರೂ ಬೆಟ್ಟವೇರುತ್ತಿದ್ದರು. ಫ್ರೆಂಚರೇ ಬಹುಸಂಖ್ಯೆಯಲ್ಲಿದ್ದ ಅವರಲ್ಲಿ ಅಮೆರಿಕನ್ನರೂ ಮತ್ತು ಬ್ರಿಟಿಷರೂ ಇದ್ದರು. ಬಹುತೇಕ ಎಲ್ಲರ ಕೈಲೂ ಸ್ಥಿರಚಿತ್ರ ಕ್ಯಾಮೆರಾ/ವಿಡಿಯೊ ಕ್ಯಾಮೆರಾ ಇತ್ತು. ಕೋಟೆಕೊತ್ತಲಗಳಿಗಿಂತ ಹೆಚ್ಚಾಗಿ ಅವರೆಲ್ಲ ಸುತ್ತಮುತ್ತಲ ಭಿಕ್ಷುಕರನ್ನು, ಬೀದಿಮಕ್ಕಳನ್ನು, ರಸ್ತೆಬದಿಯಲ್ಲೋ ಗುಡಿಸಲ ಹೊರಗೋ ಸುಮ್ಮನೆ ಕುಳಿತಿದ್ದ ಬಡಜನರನ್ನು ತಮ್ಮ ಕ್ಯಾಮೆರಾಗಳಲ್ಲಿ ಚಿತ್ರೀಕರಿಸುತ್ತಿದ್ದರು! ಅವರೊಡನೆ ನಾನು ಮಾತಿಗಿಳಿದಾಗ ತಿಳಿದುಬಂದ ಆಘಾತಕಾರಿ ಸಂಗತಿಯೆಂದರೆ ಅವರ ಪೈಕಿ ಹಲವರು ಕೊಳೆಗೇರಿಯನ್ನು ನೋಡಿ ಚಿತ್ರೀಕರಿಸಲೆಂದೇ ಮರುದಿನ ಚೆನ್ನೈಗೆ ಹೋಗುವವರಿದ್ದರು! ’ಸ್ಲಂಡಾಗ್..’ ಚಿತ್ರ ನೋಡಿದ ನಂತರ ಅವರಿಗೆ ಈ ’ಬಯಕೆ’ ಉಂಟಾಯಿತಂತೆ! ಚೆನ್ನೈನಲ್ಲಿ ’ಅದ್ಭುತ ಕೊಳೆಗೇರಿ’ ತೋರಿಸುವುದಾಗಿ ಚೆನ್ನೈನ ಇವರ ಮಿತ್ರರ್‍ಯಾರೋ ಇವರಿಗೆ ಆಶ್ವಾಸನೆ ನೀಡಿದ್ದಾರಂತೆ! ತಮ್ಮ ದೇಶಕ್ಕೆ ಮರಳಿದಮೇಲೆ ಇವರು ಭಾರತದ ಕೊಳೆಗೇರಿ ದೃಶ್ಯಗಳನ್ನು ತಮ್ಮ ಬಂಧು-ಮಿತ್ರರಿಗೆ ತೋರಿಸುತ್ತಾರಂತೆ! ಜಿಂಜಿಯಲ್ಲಿ ತೆಗೆದ ಭಿಕ್ಷುಕರ ಮತ್ತು ಬಡಜನರ ಫೋಟೋಗಳ ಸ್ಲೈಡ್ ಷೋ ಮಾಡುತ್ತಾರಂತೆ!

ನನ್ನೆಡೆ ದಿಟ್ಟಿಸುತ್ತ, ’ನೀವು ಇನ್ನೂ ಉದ್ಧಾರ ಆಗಿಲ್ಲ ಅಲ್ವೆ, ಪಾಪ!’ ಎಂಬ ಉದ್ಗಾರ ಬೇರೆ, ಈ ಧೂರ್ತರಿಂದ! ಬೆಟ್ಟವೇರಿ ಮೊದಲೇ ಬೆವರಿದ್ದ ಇವರೊಡನೆ ವಾದಕ್ಕಿಳಿದ ನಾನು ಇನ್ನಷ್ಟು ಇವರ ಬೆವರಿಳಿಸಿದೆನಾದರೂ ಇವರ ’ಕೊಳೆಗೇರಿ ಕಾರ್ಯಕ್ರಮ’ದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ!

ಮರುದಿನ ನಾನು ತಿರುವಣ್ಣಾಮಲೈನಲ್ಲಿ ರಮಣ ಮಹರ್ಷಿಗಳ ಸ್ಕಂದಾಶ್ರಮ ಮತ್ತು ವಿರೂಪಾಕ್ಷ ಗುಹೆಗಳನ್ನು ಸಂದರ್ಶಿಸಲು ಬೆಟ್ಟವೇರುತ್ತಿದ್ದಾಗ ಸುತ್ತಮುತ್ತೆಲ್ಲ ವಿದೇಶೀಯರೇ ಕಂಡುಬಂದರು. ಬಹಳಷ್ಟು ಮಂದಿಯನ್ನು ನಾನು ಮಾತನಾಡಿಸಿದೆ. ಅವರೆಲ್ಲರೂ ’ಸ್ಲಂಡಾಗ್..’ ಚಿತ್ರವನ್ನು ನೋಡಿದ್ದರು, ಇಲ್ಲವೇ ಅದರ ಬಗ್ಗೆ ಸಾಕಷ್ಟು ಅರಿತಿದ್ದರು. ಆ ಚಿತ್ರವು ನೈಜ ಭಾರತವನ್ನು ಪ್ರತಿಬಿಂಬಿಸುತ್ತದೆಂಬುದು ಅವರ ಅಭಿಪ್ರಾಯವಾಗಿತ್ತು!! ಅರವಿಂದ ಅಡಿಗನ ’ವೈಟ್ ಟೈಗರ್’ ಕೃತಿಯನ್ನು ಅವರಲ್ಲಿ ಹಲವರು ಓದಿದ್ದರು. ’ಇಂಥ ನರಕದಲ್ಲಿ ನೀವು ಅದು ಹೇಗೆ ಜೀವಿಸುತ್ತೀರಿ?!’ ಎಂದು ಅವರು ನನ್ನನ್ನು ಪ್ರಶ್ನಿಸಿದರು!

’ನರಕ ನಮ್ಮ ದೇಶವಲ್ಲ, ನಿಮ್ಮ ಮನಸ್ಸು’, ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಲು ನಾನು ಸಾಕಷ್ಟು ಹೆಣಗಾಡಿದೆ. ಅವರಿಗೆ ಗುಣಾತ್ಮಕ ಭಾರತದ ಬಗ್ಗೆ ತಿಳಿವಳಿಕೆ ನೀಡುವಲ್ಲಿ ನಾನು ಸಾಕಷ್ಟು ಯಶಸ್ವಿಯೇನೋ ಆದೆ. ಆದರೆ, ಮುಂಬೈನ ಧಾರಾವಿಯ ’ಕೊಳಕನ್ನು’, ಮತ್ತು, ಅಲ್ಲಿ ಭಿಕ್ಷಾಟನೆಗೆ ಹಚ್ಚಲಿಕ್ಕಾಗಿ ಮಕ್ಕಳನ್ನು ಅಪಹರಿಸಿ ಅಂಗಾಂಗ ಊನಗೊಳಿಸುವ ಮಾಫಿಯಾವನ್ನು (’ಸ್ಲಂಡಾಗ್..’ ಚಿತ್ರದಲ್ಲಿ ಇದನ್ನು ತೋರಿಸಲಾಗಿದೆ) ನೋಡಲು (ಸವಿಯಲು!) ಹಾಗೂ ಚಿತ್ರೀಕರಿಸಿಕೊಳ್ಳಲು ಮುಂಬೈಗೆ ಹಾರಲಿರುವ ಅವರಲ್ಲಿನ ಕೆಲವರ ನಿರ್ಧಾರವನ್ನು ತಿದ್ದುವಲ್ಲಿ ನಾನು ವಿಫಲನಾದೆ! ’ಸ್ಲಂಡಾಗ್..’ ಮತ್ತು ’ವೈಟ್ ಟೈಗರ್’ಗಳು ಅವರ ಮನಸ್ಸಿನ ಮೇಲೆ ಅಂಥ ಭಾರೀ ಪರಿಣಾಮವನ್ನು ಉಂಟುಮಾಡಿದ್ದವು!

ಫ್ರೆಂಚರಾಗಿರಲೀ ಬ್ರಿಟಿಷರಾಗಿರಲೀ ಅಮೆರಿಕನ್ನರಾಗಿರಲೀ, ಅವರು ಜಿಂಜಿ ಕೋಟೆ ನೋಡಲು ಬಂದ ಇತಿಹಾಸಪ್ರಿಯರಾಗಿರಲೀ ರಮಣಾಶ್ರಮಕ್ಕೆ ಬಂದ ಅಧ್ಯಾತ್ಮಜಿಜ್ಞಾಸುಗಳಾಗಿರಲೀ, ಬಿಳಿದೊಗಲಿನ ಈ ವಿದೇಶೀಯರಿಗೆ ಭಾರತದ ಕೊಳೆಗೇರಿಯನ್ನು ನೋಡುವ ತವಕ! ಇಡೀ ಭಾರತವನ್ನೇ ಕೊಳೆಗೇರಿಯೆಂದು ತೀರ್ಮಾನಿಸಿಬಿಡುವ ತವಕ! ಪ್ರಪಂಚದ ಬಹುಪಾಲು ರಾಷ್ಟ್ರಗಳಿಗೆ ಹೋಲಿಸಿದಾಗ ಸ್ವರ್ಗಸಮಾನವೆನ್ನಿಸುವ ಈ ನಮ್ಮ ಭವ್ಯ ಭಾರತವನ್ನು ನರಕವೆಂದು ಕರೆಯುವ ಕುಹಕ!

ನನ್ನನ್ನೀಗ ಕಾಡುತ್ತಿರುವ ಪ್ರಶ್ನೆ: ’ಸ್ಲಂಡಾಗ್..’ ಚಿತ್ರವನ್ನು ಇನ್ನೂ ನಾವು (ಭಾರತೀಯರು) ತಲೆಮೇಲೆ ಹೊತ್ತುಕೊಂಡು ಕುಣಿಯುತ್ತಿರಬೇಕೇ?

ಸೋಮವಾರ, ಜೂನ್ 22, 2009

ಕ್ರಿಕೆಟ್ ಮತ್ತು ಭಾರತ

ಟ್ವೆಂಟಿ೨೦ ಕ್ರಿಕೆಟ್ ವಿಶ್ವಕಪ್ ಪಾಕಿಸ್ತಾನದ ಮಡಿಲು ಸೇರಿದೆ. ಕಳೆದ ಸಲ ಛಾಂಪಿಯನ್ ಆಗಿದ್ದ ಭಾರತವು ಈ ಸಲ ಸೂಪರ್ ಎಯ್ಟ್ ಹಂತದಲ್ಲೇ ಸೋತು ಮನೆಗೆ ಮರಳಿದೆ. ಆದರೆ ನಮ್ಮ ಕ್ರಿಕೆಟ್ ಆಟಗಾರರಿಗೆ ಜಾಹಿರಾತುಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬಂದೇಬರುತ್ತದೆ; ಜನಕೋಟಿಯ ಕ್ರಿಕೆಟ್ ಪ್ರೇಮವೂ ಅಬಾಧಿತವಾಗಿ ಮುಂದುವರಿಯುತ್ತದೆ. ಜಾಹಿರಾತಿಗಾಗಿ ಕ್ರಿಕೆಟ್ಟಿಗರಿಗೆ ಕೋಟಿಗಟ್ಟಲೆ ಕೊಟ್ಟ ಕಂಪೆನಿಗಳು ಆ ಹಣವನ್ನು ಕ್ರಿಕೆಟ್ ಪ್ರೇಮಿಗಳಿಂದ ಹಾಗೂ ಕ್ರಿಕೆಟ್ ಪ್ರೇಮಿಗಳಲ್ಲದವರಿಂದಲೂ ಬಡ್ಡಿ ಸಮೇತ ವಸೂಲು ಮಾಡುವ ಪ್ರಕ್ರಿಯೆಯೂ ಎಂದಿನಂತೆ ವ್ಯವಸ್ಥಿತವಾಗಿ ಸಾಗುತ್ತದೆ.

ಈಗ ಕೊಂಚ ಹಿಂದಕ್ಕೆ ಹೋಗೋಣ.
ಸೆಪ್ಟೆಂಬರ್ ೨೪, ೨೦೦೭. ಭಾರತ ಹುಚ್ಚೆದ್ದು ಕುಣಿಯಿತು!
ಸಹಜವೇ. ಪ್ರಪ್ರಥಮ ಟ್ವೆಂಟಿ೨೦ ಕ್ರಿಕೆಟ್ ವಿಶ್ವ ಕಪ್ಪನ್ನು ಭಾರತ ತನ್ನದಾಗಿಸಿಕೊಂಡ ದಿನ ಅದು. ಮೇಲಾಗಿ, ನಾವು ಜಯಿಸಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಮೇಲೆ! ಕುಣಿದಾಡದಿರಲು ಸಾಧ್ಯವೇ?

ಆ ಜಯವೇನೂ ಸಣ್ಣದಲ್ಲ. ತಿಂಗಳುಗಳ ಕೆಳಗಷ್ಟೇ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲೇ ಸೋಲುಂಡು ಮನೆಗೆ ವಾಪಸಾಗಿದ್ದವರು ನಾವು. (ಅಂತೆಯೇ ಪಾಕಿಸ್ತಾನ ಕೂಡಾ.) ರಾಹುಲ್, ಸಚಿನ್, ಸೌರವ್ ಕುಂಬ್ಳೆಯಂಥ ಅನುಭವಿಗಳನ್ನು ಕೈಬಿಟ್ಟು ಬಹುಪಾಲು ಅನನುಭವಿ ಹುಡುಗರನ್ನೇ ಹಾಕಿಕೊಂಡು ಟ್ವೆಂಟಿ೨೦ ಪಂದ್ಯಾವಳಿಗೆ ಹೋದವರು ನಾವು. ನಮ್ಮ ಟೀಮಿನಲ್ಲಿ ಕೆಲವರು ಕೇವಲ ಒಂದೇ ಒಂದು ಟ್ವೆಂಟಿ೨೦ ಪಂದ್ಯ ಆಡಿದ ಅನುಭವ ಹೊಂದಿದವರಾಗಿದ್ದರೆ ಕೆಲವರಿಗೆ ಇದೇ ಚೊಚ್ಚಲ ಟ್ವೆಂಟಿ೨೦ ಪಂದ್ಯ! ಇಂಥ ಟೀಮನ್ನು ಕೊಂಡೊಯ್ದ ನಮಗೆ ಫೈನಲ್ ತಲುಪುವ ವಿಶ್ವಾಸವೇ ಇರಲಿಲ್ಲ. ಮೇಲಾಗಿ, ಲೀಗ್ ಹಂತದಲ್ಲೇ ಪಾಕಿಸ್ತಾನವನ್ನು ಮಣಿಸಬೇಕಾಗಿತ್ತು. ಸೂಪರ್ ಎಯ್ಟ್‌ನಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಸವಾಲು. ಸೆಮಿಫೈನಲ್‌ನಲ್ಲಂತೂ ಅಜೇಯ ದೈತ್ಯ ಆಸ್ಟ್ರೇಲಿಯಾ ಎದುರಾಳಿ! ಅದೇ ಹೊಸದಾಗಿ ನಾಯಕನಾದವ ನಮ್ಮ ಮಹೇಂದ್ರಸಿಂಗ್ ದೋನಿ. ಆದಾಗ್ಗ್ಯೂ ಈ ಎಲ್ಲ ದೇಶಗಳನ್ನೂ ಸೋಲಿಸಿ ಫೈನಲ್ ತಲುಪಿಯೇಬಿಟ್ಟೆವು. ಫೈನಲ್‌ನಲ್ಲಿ "ಜಿದ್ದಿನ" ಪಾಕಿಸ್ತಾನವನ್ನು ರೋಮಾಂಚಕರ ರೀತಿಯಲ್ಲಿ ಮಣಿಸಿ ವಿಶ್ವಕಪ್ ಗೆದ್ದೇಬಿಟ್ಟೆವು. ಕುಣಿದಾಡದಿರಲು ಸಾಧ್ಯವೇ?

ಓವರಿನ ಆರೂ ಬಾಲ್‌ಗಳನ್ನೂ ಸಿಕ್ಸರ್ ಎತ್ತಿದ ಯುವರಾಜ(ಸಿಂಗ್)ನ ಆಟ ಮರೆಯಲು ಸಾಧ್ಯವೇ? ಭಾರತದ ಹೆಮ್ಮೆಗೆ ಎರಡು ಮಾತಿಲ್ಲ. ಸಂತೋಷಕ್ಕೆ ಪಾರವಿಲ್ಲ. ವಾರವಿಡೀ ದೇಶಾದ್ಯಂತ ವಿಜಯೋತ್ಸವ. ಬಡವ-ಬಲ್ಲಿದ ಭೇದವಿಲ್ಲದೆ, ಹಿರಿ-ಕಿರಿಯರೆನ್ನದೆ ಎಲ್ಲರೂ ಈ ವಿಜಯೋತ್ಸವದಲ್ಲಿ ಭಾಗಿಗಳು. ಇಡೀ ದೇಶ ಒಂದಾದ ಅಪೂರ್ವ ರಸಘಳಿಗೆ. ಭಾರತ ಪ್ರಕಾಶಿಸಿದ ಅಮೃತ ಘಳಿಗೆ. ಕ್ರೀಡೆಯೊಂದಕ್ಕೆ ಈ ಶಕ್ತಿಯಿರುವುದು ನಿಜಕ್ಕೂ ದೇಶದ ಆರೋಗ್ಯಕ್ಕೆ ಒಳ್ಳಿತು. ಕ್ರೀಡೆಯ ಉದ್ದೇಶವೇ ಹೃದಯಗಳನ್ನು ಅರಳಿಸುವುದು ಮತ್ತು ಬೆಸೆಯುವುದು. ಅಲ್ಲವೆ?

ಈಗ ಕೊಂಚ ವಿಷಯದ ಆಳಕ್ಕೆ ಹೋಗೋಣ. ಕ್ರೀಡೆಯು ಹೃದಯಗಳನ್ನು ಬೆಸೆಯಬೇಕು, ಬೆಸೆಯುತ್ತದೆ, ನಿಜ. ಆದರೆ ಈ ಮಾತು ಭಾರತ-ಪಾಕಿಸ್ತಾನ ನಡುವಣ ಪಂದ್ಯಗಳ ಮಟ್ಟಿಗೆ ನಿಜವಾಗಿದೆಯೇ? ಭಾರತ-ಪಾಕ್ ನಡುವಣ ಕ್ರಿಕೆಟ್ ಪಂದ್ಯವಾಗಲೀ ಹಾಕಿ ಪಂದ್ಯವಾಗಲೀ ಎರಡೂ ದೇಶಗಳ ಹೃದಯಗಳನ್ನು ಪರಸ್ಪರ ಬೆಸೆದಿದೆಯೇ? ಇಲ್ಲವೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹೃದಯ ಒಂದಾಗಿಸುವ ಬದಲು ಈ ಪಂದ್ಯಗಳು ಪರಸ್ಪರ ದ್ವೇಷವನ್ನು ಇನ್ನಷ್ಟು ಹೆಚ್ಚಿಸುತ್ತಿವೆಯೇನೋ ಎಂದು ಭಾಸವಾಗುತ್ತಿದೆ ಪಂದ್ಯ ನಡೆಯುವ ಸಂದರ್ಭದ ಆಗುಹೋಗುಗಳನ್ನು ನೋಡಿದಾಗ! ಪ್ರಥಮ ಟ್ವೆಂಟಿ೨೦ ವಿಶ್ವಕಪ್ ಸಂದರ್ಭದಲ್ಲಿ ಅಂದಿನ ಪಾಕ್ ಅಧ್ಯಕ್ಷ ಮುಷರಫ್ ತನ್ನ ಕ್ರಿಕೆಟ್ ತಂಡದ ನಾಯಕನಿಗೆ ಫೋನ್ ಮಾಡಿ ಭಾರತದ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕೆಂದು ತಾಕೀತುಮಾಡಿದುದು, ಸೋತಾಗ ಆಟಗಾರರು ಅತೀವ ಅವಹೇಳನಕ್ಕೆ ಗುರಿಯಾದುದು, ಪಾಕಿಸ್ತಾನ ಗೆದ್ದಾಗ ಭಾರತದಲ್ಲಿನ ಕೆಲವು ಮುಸ್ಲಿಮರು "ಪಾಕಿಸ್ತಾನ್ ಜಿಂದಾಬಾದ್" ಎಂದು ಜೈಕಾರ ಹಾಕುವುದು, ರೇಡಿಯೋಕ್ಕೆ-ಟಿ.ವಿ.ಗೆ ಹಾರ ಹಾಕುವುದು (!), ತಂತಮ್ಮ ದೇಶ ಸೋತಾಗ ಉಭಯರೂ ಪ್ರತಿಕೃತಿಗಳನ್ನು ಸುಡುವುದು, ಅಲ್ಲಲ್ಲಿ ಹಿಂದೂ-ಮುಸ್ಲಿಮರು ಪರಸ್ಪರ ಘರ್ಷಣೆಗಿಳಿಯುವುದು, ಇಂಥ ಹತ್ತು ಹಲವು ದ್ವೇಷದ ಕಿಚ್ಚನ್ನು ಉಭಯ ದೇಶಗಳೂ ಉರಿಸುವುದನ್ನು ನಾವು ಕಾಣುತ್ತಿದ್ದೇವೆ. ೨೦೦೭ರ ನಮ್ಮ ಟ್ವೆಂಟಿ೨೦ ವಿಜಯದ ಬಳಿಕವಂತೂ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ’ಯು ಟ್ಯೂಬ್’ನಲ್ಲಿ ಎಲ್ಲೆ ಮೀರಿದ ವಾಕ್ ಸಮರವನ್ನೇ ನಡೆಸಿದರು! ಇದರಲ್ಲಿ ಪಾಕಿಸ್ತಾನೀಯರ ದ್ವೇಷಪೂರಿತ ಆರ್ಭಟವೇ ಹೆಚ್ಚಾಗಿತ್ತು! ಇಂಥ ಬೆಳವಣಿಗೆಗಳಿಗೇನಾ ಆಟ ಇರುವುದು? ಉಭಯ ದೇಶಗಳ ಜನತೆ ಮತ್ತು ಮುಖ್ಯವಾಗಿ ಇಂಥ ಕಿಚ್ಚಿನ ಪ್ರೋತ್ಸಾಹಕರಾದ ಪುಢಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಾಕಿಸ್ತಾನಕ್ಕೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ.

ದೇಶದಮೇಲೆ ಪರಿಣಾಮ
-------------------------
ಇನ್ನು, ಕ್ರಿಕೆಟ್ ಕ್ರೀಡೆಯು ನಮ್ಮ ದೇಶದಮೇಲೆ ಎಂಥ ಪರಿಣಾಮ ಉಂಟುಮಾಡಿದೆಯೆಂಬುದನ್ನು ಒಂದಿಷ್ಟು ಯೋಚಿಸೋಣ. "ಹದಿಮೂರು (೧೧+೨) ಮಂದಿ ಆಡುವುದನ್ನು ಹದಿಮೂರು ಸಾವಿರ ಮಂದಿ ದಿನವಿಡೀ ಕೆಲಸ ಬಿಟ್ಟು ಕೂತು ನೋಡುವುದೇ ಕ್ರಿಕೆಟ್" ಎಂಬ ಚಾಟೂಕ್ತಿಯು ಜನಜನಿತವಷ್ಟೆ. ಇದೀಗ, ಟ್ವೆಂಟಿ೨೦ ಪಂದ್ಯಗಳಿಂದಾಗಿ ಒಪ್ಪೊತ್ತು ಕೂತು ನೋಡಿದರೆ ಸಾಕಾಗುತ್ತದೆ, ಆದರೆ, ಟೆಲಿವಿಷನ್ ಮಾಧ್ಯಮದಿಂದಾಗಿ, ಹದಿಮೂರು ಸಾವಿರ ಜನರ ಬದಲು ಹದಿಮೂರು ಕೋಟಿ ಜನ, ಇನ್ನೂ ಹೆಚ್ಚು ಜನ, ಕೆಲಸ ಬಿಟ್ಟು ಆಟ ನೋಡುವ ಪರಿಸ್ಥಿತಿ ಉಂಟಾಗಿದೆ! ಬೇರೆ ಆಟಗಳೂ ನೋಡುಗರ ಕಾಲಹರಣ ಮಾಡುತ್ತವಾದರೂ ಕ್ರಿಕೆಟ್ಟಿನಷ್ಟಲ್ಲ. ಆಟಗಳನ್ನು ನೋಡುವುದು ಜೀವನದ ಅವಶ್ಯಕ, ಆನಂದದಾಯಕ ಮತ್ತು ಅವಿಭಾಜ್ಯ ಅಂಗ ಹೌದಾದರೂ ಅದಕ್ಕೊಂದು ಮಿತಿ, ಲಕ್ಷ್ಮಣರೇಖೆ ಇರಬೇಕಷ್ಟೆ? ಈಚೀಚೆಗಂತೂ ಕ್ರಿಕೆಟ್ ಪಂದ್ಯಗಳ ಸಂಖ್ಯೆ ಹೆಚ್ಚಿ, ಜೊತೆಗೆ ಟಿವಿಯಲ್ಲಿ ಕ್ರಿಕೆಟ್‌ನದೇ ಪ್ರತ್ಯೇಕ ವಾಹಿನಿಗಳು ಪ್ರತ್ಯಕ್ಷವಾಗಿ ಈ ಲಕ್ಷ್ಮಣರೇಖೆ ಕನಸಿನ ಮಾತಾಗತೊಡಗಿದೆ. ಹೀಗೇ ಮುಂದುವರಿದರೆ ವಿದ್ಯಾರ್ಜನೆಯಲ್ಲಿರುವ ಮಕ್ಕಳ ಪಾಡೇನು? ಗಂಭೀರವಾಗಿ ಯೋಚಿಸಬೇಕಾಗಿರುವ ವಿಷಯವಿದು.

ಕ್ರಿಕೆಟ್ ಎಂಬ ಈ ದೈತ್ಯನು ನಮ್ಮ ದೇಶದ ಆರ್ಥಿಕ ರಂಗವನ್ನು ಹೇಗೆ ಆಡಿಸುತ್ತಾನೆಂಬುದನ್ನು ನೋಡೋಣ. ಒಂದು ಓವರ್‌ನಲ್ಲಿ ಆರು ಆರೋಟ(ಸಿಕ್ಸರ್)ಗಳನ್ನು ಗಳಿಸಿದ ಯುವರಾಜನಿಗೆ ಕ್ರಿಕೆಟ್ ಮಂಡಳಿಯಿಂದ ಒಂದು ಕೋಟಿ ರೂಪಾಯಿ ಬಹುಮಾನ ಮತ್ತು ಒಂದು ಸ್ಪೋರ್ಟ್ಸ್ ಕಾರು. ತಂಡಕ್ಕೆ ಮೂರು ಮಿಲಿಯನ್ ಡಾಲರ್ ಭಕ್ಷೀಸು. ಇದಿಷ್ಟೂ ಎಂದಿನ ಗೌರವಧನದ ಜೊತೆಗೆ ಹೆಚ್ಚುವರಿಯಾಗಿ! ಇಷ್ಟು ಹಣ ನಮ್ಮ ಕ್ರಿಕೆಟ್ ಮಂಡಳಿಗೆ ಎಲ್ಲಿಂದ ಬರುತ್ತದೆ? ಮುಖ್ಯವಾಗಿ ಟಿವಿ ಪ್ರಸಾರ ಹಕ್ಕು ಮಾರಾಟದಿಂದ ತಾನೆ? ಕೋಟ್ಯಂತರ ರೂಪಾಯಿ ಕೊಟ್ಟು ಪ್ರಸಾರದ ಹಕ್ಕು ಪಡೆದುಕೊಂಡ ಟಿವಿ ವಾಹಿನಿಗಳವರು ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಾರೆಂದಮೇಲೆ ಅವರಿಗೆ ವಿವಿಧ ಕಂಪೆನಿಗಳ ಜಾಹಿರಾತು ಹಣ ಇನ್ನೆಷ್ಟು ಹರಿದುಬರುತ್ತಿರಬೇಕು, ಯೋಚಿಸಿ. ಕ್ರಿಕೆಟ್ಟಿಗರಮೇಲೆ ಚೆಲ್ಲಿದ ಜಾಹಿರಾತು ಹಣವೂ ಸೇರಿದಂತೆ ಎಲ ಜಾಹಿರಾತು ಹಣವನ್ನೂ, ಮೇಲೆ ಲಾಭವನ್ನೂ ಕಂಪೆನಿಗಳು ಗ್ರಾಹಕನಿಂದ ತಾನೆ ವಸೂಲುಮಾಡುವುದು? ಅಂದಾಗ, ಪ್ರಜೆಗಳಾದ ನಮ್ಮ ಹಣವನ್ನು ಕ್ರಿಕೆಟ್‌ನ ಹೆಸರಲ್ಲಿ ಕಂಪೆನಿಗಳು ಅದೆಷ್ಟು ಭಾರಿಯಾಗಿ ಲೂಟಿಮಾಡುತ್ತಿವೆ, ಊಹಿಸಿ. ನಮ್ಮ ಅಪರಿಮಿತ ಕ್ರಿಕೆಟ್ ಹುಚ್ಚನ್ನಲ್ಲವೆ ಈ ಕಂಪೆನಿಗಳು ನಗದೀಕರಿಸಿಕೊಳ್ಳುತ್ತಿರುವುದು? ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಶ್ರೀಸಾಮಾನ್ಯನ ಜೀವನ ನಿರ್ವಹಣೆಯ ಗತಿಯೇನು, ಯೋಚಿಸಿ.

ಲೋಹಿಯಾ ನುಡಿ
-------------------
ಧೀಮಂತ ಸಮಾಜವಾದೀ ಚಿಂತಕ ರಾಮಮನೋಹರ ಲೋಹಿಯಾ ಒಂದೆಡೆ ಹೇಳಿದ್ದಾರೆ, "ಭಾರತದ ಅತಿ ದೊಡ್ಡ ಸಮಸ್ಯೆಯೆಂದರೆ ಲಕ್ಷಾಂತರ ಜನರಿಗೆ ಉದ್ಯೋಗಗಳನ್ನು ಒದಗಿಸುವುದು. ಆದ್ದರಿಂದ, ಸಣ್ಣ ಯಂತ್ರಗಳ ಬಳಕೆಯೇ (ಸಣ್ಣ ಕೈಗಾರಿಕೆಗಳೇ) (ಈ ಸಮಸ್ಯೆಗೆ) ಏಕೈಕ ಪರಿಹಾರ." ಆದರೆ ಈಗೇನಾಗಿದೆ? ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಜೊತೆಗೆ ನಮ್ಮ ದೇಶದಲ್ಲಿ ಕ್ರಿಕೆಟ್ ದೈತ್ಯನೂ ಸೇರಿ ದೇಶದ ಸಂಪತ್ತೆಲ್ಲ ಕೆಲವೇ ಬಲಾಢ್ಯ ಕಂಪೆನಿಗಳ (ಅದರಲ್ಲೂ ಬಹುರಾಷ್ಟ್ರೀಯ ಕಂಪೆನಿಗಳ) ಕೈಗೆ ಹೋಗಿ ಸೇರುವ ಸನ್ನಿವೇಶ ಸೃಷ್ಟಿಯಾಗಿದೆ. "ಭಾರತವು ರಷ್ಯಾದೊಡನೆಯಾಗಲೀ ಅಮೆರಿಕಾದೊಡನೆಯಾಗಲೀ ಕೈಜೋಡಿಸಬಾರದು", ಎಂದರು ಲೋಹಿಯಾ. ಆದರೆ ನಾವು ಮೊನ್ನೆ ಮೊನ್ನೆಯ ತನಕ ರಷ್ಯಾವನ್ನು ನಂಬಿ ಮೋಸಹೋದೆವು, ಇದೀಗ ಅಮೆರಿಕಾಕ್ಕೆ ರತ್ನಗಂಬಳಿ ಹಾಸಿ ನಮ್ಮನ್ನು ಒಪ್ಪಿಸಿಕೊಳ್ಳುತ್ತಿದ್ದೇವೆ! ಈ ಕ್ರಿಯೆಯಲ್ಲಿ ಅವಾಂಛಿತವಾಗಿ ಹಾಗೂ ಅಪ್ರತ್ಯಕ್ಷವಾಗಿಯಾದರೂ ಸಹ ಕ್ರಿಕೆಟ್‌ನ ಪಾತ್ರವೂ ಇರುವುದು ಆತಂಕದ ವಿಷಯವಲ್ಲವೆ? ಕ್ರಿಕೆಟ್ ಎಂಬ "ಸಮೂಹಸನ್ನಿ"ಗೊಳಗಾಗುತ್ತಿರುವ ಇಂದಿನ ಜನತೆ, ಅದರಲ್ಲೂ ಮಖ್ಯವಾಗಿ ಯುವ ಜನತೆ ಈ ತಥ್ಯವನ್ನು ಗಮನಿಸಬೇಕು.

ಕ್ರಿಕೆಟ್ ಬೇಕು, ನಿಜ. ನನಗೂ ಅದು (ನೋಡಲು) ಇಷ್ಟವಾದ ಆಟವೇ. ಆದರೆ, ಅತಿಯಾಗಬಾರದಷ್ಟೆ. "ಈಟ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್,............ಲಿವ್ ಕ್ರಿಕೆಟ್, ಡೈ (ಫಾರ್) ಕ್ರಿಕೆಟ್" ಆಗಬಾರದಷ್ಟೆ! ದೇಶದಲ್ಲಿ ಎಲ್ಲಿ ನೋಡಿದರೂ ಕ್ರಿಕೆಟ್. ಯಾರ ಬಾಯಲ್ಲಿ ನೋಡಿದರೂ ಕ್ರಿಕೆಟ್. ಯಾವಾಗ ನೋಡಿದರೂ ಕ್ರಿಕೆಟ್. ಒಂದೋ, ಅನವರತ ಆಡುವವರು, ಇಲ್ಲವೇ ಅನವರತ ನೋಡುವವರು. ಇದರಿಂದಾಗಿ ಅಂತಿಮವಾಗಿ ನಮ್ಮ ಸಮಯವೇ ಹಾಳು, ನಮ್ಮ ಚಟುವಟಿಕೆಯೇ ಹಾಳು, ನಮ್ಮ ಕಿಸೆಗೇ ಕತ್ತರಿ, ಮಾತ್ರವಲ್ಲ, ಇತರ ಕ್ರೀಡೆಗಳಿಗೂ ಕಂಟಕ! ಕ್ರಿಕೆಟ್ ಎಂಬ ಕಣ್ಣು ಕುಕ್ಕುವ ಬೆಳಕಿನಲ್ಲಿ ನಮಗೆ ಬೇರಾವ ಅದ್ಭುತ ಆಟವೂ ಗೋಚರಿಸುತ್ತಲೇಇಲ್ಲ! ಇತರ ಒಂದೆರಡು ಕ್ರೀಡೆ ಬಿಟ್ಟರೆ ಬೇರೆ ಕ್ರೀಡೆಗಳಿಗೆ ಹಾಗೂ ಕ್ರೀಡಾಳುಗಳಿಗೆ ಹಣವೂ ಇಲ್ಲ, ಪ್ರೋತ್ಸಾಹವೂ ಇಲ್ಲ. ಇಷ್ಟಾಗಿಯೂ ಹಾಕಿಯಲ್ಲಿ, ಚೆಸ್‌ನಲ್ಲಿ, ಬಿಲಿಯರ್ಡ್ಸ್‌ನಲ್ಲಿ, ಬ್ಯಾಡ್ಮಿಂಟನ್‌ನಲ್ಲಿ ಮಂತಾದ ಆಟಗಳಲ್ಲಿ ನಮ್ಮ ಕ್ರೀಡಾಳುಗಳು ವಿಶ್ವಮಟ್ಟದ ಸಾಧನೆ ಮಾಡಿದರೆ ಆ ಸಾಧನೆಗೆ ಸೂಕ್ತ ಪ್ರೋತ್ಸಾಹವೂ ಇಲ್ಲ, ತಕ್ಕ ಪ್ರಚಾರವೂ ಇಲ್ಲ.

ಹೀಗೊಂದು ಲೆಕ್ಕಾಚಾರ
------------------------
ಹೀಗೇ ಒಂದು ಲೆಕ್ಕಾಚಾರದತ್ತ ನಿಮ್ಮನ್ನು ಕೊಂಡೊಯ್ಯುತ್ತೇನೆ; ಮೈದಾನ ನುಂಗುವ ರಾಕ್ಷಸ ಗಾಲ್ಫ್ ಅನ್ನು ಬದಿಗಿಟ್ಟು ನೋಡಿದರೆ, ಹಾಕಿ, ಫುಟ್‌ಬಾಲ್ ಮುಂತಾದ ಆಟಗಳಿಗೆ ಕ್ರಿಕೆಟ್ ಮೈದಾನಕ್ಕಿಂತ ಚಿಕ್ಕ ಮೈದಾನ ಸಾಕು. ಏಕಕಾಲದಲ್ಲಿ ಕ್ರಿಕೆಟ್ ಆಟಗಾರರಿಗಿಂತ ಹೆಚ್ಚು ಆಟಗಾರರು ಆಡಬಹುದು. ಕ್ರಿಕೆಟ್‌ನಂತೆ ಇಡೀ ದಿನ ವ್ಯಯವಾಗದೆ ಒಂದೆರಡು ಗಂಟೆಗಳಲ್ಲಿ ಆಟ ಮುಗಿದುಹೋಗುತ್ತದೆ. ಈ ಮೂರು ಅನುಕೂಲಗಳಿಂದಾಗಿ, ಕ್ರಿಕೆಟ್ ಅಭ್ಯಾಸಿಗಳಿಗಿಂತ ಹೆಚ್ಚು ಸಂಖ್ಯೆಯ ಮಕ್ಕಳು-ವಿದ್ಯಾರ್ಥಿಗಳು-ಯುವಕರು ಆ ಒಂದು ಮೈದಾನದಲ್ಲಿ ಮತ್ತು ಅಷ್ಟೇ ವೇಳೆಯಲ್ಲಿ ಬೇರೆ ಆಟಗಳನ್ನು ಕಲಿಯಬಹುದು. ಶಾಲಾ ಕಾಲೇಜುಗಳ ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಶಿಕ್ಷಕರು ವಿವಿಧ ಆಟಗಳಲ್ಲಿ ತೊಡಗಿಸಬಹುದು. ನಲಿವು, ಆರೋಗ್ಯ ಮತ್ತು ಸಾಧನೆ ಈ ಮೂರೂ ವಿಷಯಗಳಲ್ಲೂ ಹೆಚ್ಚಿನ ಲಾಭವನ್ನು ಪಡೆಯಬಹುದು. ಆದರೀಗ ಏನಾಗಿದೆ? ಅದೇ ತಾನೇ ನಡೆಯಲು ಕಲಿಯುತ್ತಿರುವ ಎಳೆ ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೆ ಎಲ್ಲರೂ ಬರೀ ಕ್ರಿಕೆಟ್ ಆಡುವವರೇ! ಯಾವ ಮೈದಾನದಲ್ಲಿ ನೋಡಿದರೂ ಕ್ರಿಕೆಟ್ಟೇ!

ಕ್ರಿಕೆಟ್ ಬೇಕು. ಆದರೆ ಅದಕ್ಕೊಂದು ಮಿತಿಯಿರಬೇಕು. ಕ್ರಿಕೆಟ್ ಆಗಲೀ ಯಾವೊಂದು ಆಟವೇ ಆಗಲೀ ಇತರ ಕ್ರೀಡೆಗಳನ್ನು ನುಂಗಿ ತಾನೊಂದೇ ಮೆರೆಯಲೆತ್ನಿಸುವುದು, ಅದೂ ಭಾರತದಂಥ ಬೃಹತ್ ದೇಶದಲ್ಲಿ, ಸರಿಯಲ್ಲ.

ಕ್ರಿಕೆಟ್‌ಮೇಲಿನ ನಮ್ಮ ಈ ಅತಿ ವ್ಯಾಮೊಹವನ್ನೇ ಅಲ್ಲವೆ ಕಂಪೆನಿಗಳು ನಗದೀಕರಿಸಿಕೊಳ್ಳುತ್ತಿರುವುದು? ಅಭಿಮಾನಿಗಳಾದ ನಾವು ಹೆಚ್ಚಿನ ಸಂಖ್ಯೆಯಲ್ಲಿ ಇತರ ಆಟಗಳೆಡೆಗೂ ಗಮನ ಹರಿಸಿದೆವೆಂದರೆ ಆಗ ಇದೇ ಕಂಪೆನಿಗಳು ಆ ಆಟಗಳಮೇಲೆಯೂ ಜಾಹಿರಾತು, ಪ್ರಾಯೋಜಕತ್ವ ಮುಂತಾಗಿ ಹಣ ಹೂಡುತ್ತವಷ್ಟೆ. ಕನಿಷ್ಟಪಕ್ಷ, ನಮ್ಮ ಹಣವು ಇತರ ಆಟಗಳಿಗೂ ಒಂದಿಷ್ಟು ಹರಿದು ಆ ಆಟಗಳೂ ಹಾಗೂ ಆಟಗಾರರೂ ಪ್ರಗತಿ ಹೊಂದುವುದು ಸಂಭವ ತಾನೇ. ಬೇರೆ ಆಟಗಳನ್ನೂ ನಾವು ಆಪ್ತವಾಗಿಸಿಕೊಳ್ಳುವುದು ಅಸಂಭವವೇನಲ್ಲ. ಈ ನನ್ನ ಅಭಿಪ್ರಾಯದ ಸಮರ್ಥನೆಗೆ ಟೆನ್ನಿಸ್ ಕ್ಷೇತ್ರದಲ್ಲಿ ಸಾನಿಯಾ ಮಿರ್ಜಾ ಪ್ರವೇಶ ಮತ್ತು ಸಾಧನೆಯ ಉದಾಹರಣೆ ಸಾಕಲ್ಲವೆ? ಕ್ರಿಕೆಟ್ ಆಡೋಣ, ನೋಡೋಣ, ಗೆದ್ದಾಗ ಸಂಭ್ರಮಿಸೋಣ. ಅದಕ್ಕೊಂದು ಗರಿಷ್ಠ ಮಿತಿಯನ್ನು ಹಾಕಿ ಇತರ ಆಟಗಳಿಗೂ ಪ್ರೋತ್ಸಾಹ ನೀಡೋಣ; ನಮ್ಮ ಮಕ್ಕಳಿಗೆ ಎಳವೆಯಿಂದಲೇ ಇತರ ಆಟಗಳ ಬಗ್ಗೆಯೂ ಹೆಚ್ಚೆಚ್ಚು ಅರಿವು-ಆಸಕ್ತಿ ಹುಟ್ಟಿಸೋಣ. ಏನಂತೀರಿ?

ನಾನು ಕ್ರಿಕೆಟ್ ದ್ವೇಷಿಯೇನಲ್ಲ. ಬ್ಯಾಂಕ್ ಅಧಿಕಾರಿಯಾಗಿದ್ದ ನನ್ನ ಕೈಕೆಳಗೆ ಸುಮಾರು ಎರಡು ದಶಕಗಳ ಹಿಂದೆ ಸುನಿಲ್ ಜೋಶಿ ಕೆಲಸ ಮಾಡುತ್ತಿದ್ದ. ಮಧ್ಯಾಹ್ನಾನಂತರ ಕ್ರಿಕೆಟ್ ಆಟಕ್ಕಾಗಿ ಹೊರಹೋಗಲು ಆತನಿಗೆ ಅನುಮತಿ ನೀಡುವಲ್ಲಿ ಉನ್ನತಾಧಿಕಾರಿಯೊಬ್ಬರು ಮನಸ್ಸುಮಾಡದಿದ್ದಾಗ ನಾನು ಸುನಿಲ್ ಜೋಶಿಯ ಪರವಾಗಿ ಕಾರ್ಯೋನ್ಮುಖನಾಗಿದ್ದೆ. ನನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಒಬ್ಬ ಸಾಧನೆಯ ನಿಟ್ಟಿನಲ್ಲಿ ಹಣದ ಕೊರತೆಯಿಂದಾಗಿ ಪಾಡುಪಟ್ಟಿದ್ದನ್ನೂ ನಾನು ಗಮನಿಸಿದ್ದೇನೆ.

ಒಲಿಂಪಿಕ್ಸ್ ಸಾಧನೆ
---------------------
ಒಲಿಂಪಿಕ್ಸ್‌ನಲ್ಲಿ ನಮ್ಮ ಸಾಧನೆ ಶೂನ್ಯಕ್ಕೆ ಹತ್ತಿರ. ಒಲಿಂಪಿಕ್ಸ್ ಸಾಧನೆಯ ವಿಷಯದಲ್ಲಿ ನೆರೆರಾಷ್ಟ್ರ ಚೀನಾದ ಮುಂದೆ ನಾವು ಏನೇನೂ ಅಲ್ಲ. ಚೀನಾ ವಿರುದ್ಧ ಯುದ್ಧದ ಸಮಯದಲ್ಲಿ ನಾವು ಚೀನೀಯರನ್ನು ಜಿರಲೆ-ಕಪ್ಪೆ-ಹಾವು ತಿನ್ನುವವರೆಂದು ಹೀಯಾಳಿಸಿದೆವು. ಯುದ್ಧವನ್ನು ಸೋತೆವು. ಕ್ರೀಡಾ ತರಬೇತಿಗಾಗಿ ಮಕ್ಕಳನ್ನು ಹಿಂಸಿಸುವವರೆಂದು ಬೀಜಿಂಗ್ ಒಲಿಂಪಿಕ್ಸ್ ಸಂದರ್ಭದಲ್ಲಿ ಚೀನೀಯರನ್ನು ನಾವು ತೆಗಳಿದೆವು. ಅವರು ನೂರು ಪದಕಗಳನ್ನು ಗೆದ್ದರು, ನಾವು ಮೂರಕ್ಕೆ ತೃಪ್ತಿಪಟ್ಟುಕೊಂಡೆವು! ಇಷ್ಟಾದಮೇಲೂ ಅವರ ಕ್ರೀಡಾ ತರಬೇತಿ ಕಾಲದ ತಥಾಕಥಿತ ಬಾಲಶೋಷಣೆಯನ್ನು ಟೀಕಿಸುವುದನ್ನು ನಾವು ನಿಲ್ಲಿಸಲಿಲ್ಲ. ಎಳೆ ಕಂದಮ್ಮಗಳನ್ನು ಪ್ರತಿದಿನ ಬೇಬಿ ಸಿಟ್ಟಿಂಗ್ ಕೇಂದ್ರಗಳಿಗೆ ಅಟ್ಟಿ ತಂದೆತಾಯಂದಿರು ನೌಕರಿಗೆ ಬಿಜಯಂಗೈಯುವುದೂ ಒಂದು ರೀತಿಯ ಶಿಶುಹಿಂಸೆಯೇ ಎನ್ನುವುದನ್ನು ನಾವು ಮರೆತಂತಿದೆ!

ಕೆರೆ-ಕೊಳ್ಳ-ನದಿ-ಸರೋವರಗಳಲ್ಲಿ ಸ್ವಚ್ಛಂದ ಈಜುವ ನಮ್ಮ ಗ್ರಾಮೀಣ ಬಾಲಕ-ಬಾಲಕಿಯರಿಗೆ, ಹೊಟ್ಟೆಪಾಡಿಗಾಗಿ ಹಾದಿಬೀದಿಗಳಲ್ಲಿ ದೊಂಬರಾಟವಾಡುವ ಹುಡುಗ-ಹುಡುಗಿಯರಿಗೆ, ಬೆಟ್ಟ-ಗುಡ್ಡ-ಕಣಿವೆ-ಕಂದರಗಳಲ್ಲಿ ಜೀವಿಸುವ ಆದಿವಾಸಿಗಳಿಗೆ, ಇಂಥವರಿಗೆಲ್ಲ ಶಿಸ್ತುಬದ್ಧ ತರಬೇತು ನೀಡಿದರೆ ಒಲಿಂಪಿಕ್ಸ್ ಮೊದಲಾದ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ನಮ್ಮ ದೇಶವು ದಂಡಿಯಾಗಿ ಪದಕಗಳನ್ನು ಕೊಳ್ಳೆಹೊಡೆಯುವುದರಲ್ಲಿ ಸಂಶಯವಿಲ್ಲ. ಆದರೇನು ಮಾಡುವುದು, ನಮ್ಮನ್ನಿಂದು ಕ್ರಿಕೆಟ್ಟೊಂದೇ ಆಕ್ರಮಿಸಿಕೊಂಡಿಬಿಟ್ಟಿದೆ! ಕ್ರಿಕೆಟ್ಟಿನೆದುರು ನಮಗಿಂದು ಉಳಿದ ಕ್ರೀಡೆಗಳೆಲ್ಲ ಯಃಕಶ್ಚಿತ್ ಆಗಿ ಕಾಣತೊಡಗಿವೆ!

ಈ ಸಲದ ಟ್ವೆಂಟಿ೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಫ್ರೆಂಚ್ ಓಪನ್ ಟೆನ್ನಿಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ (ಚೆಕ್ ರಿಪಬ್ಲಿಕ್‌ನ ಲೂಕಾಸ್ ಡ್ಲೌಹಿ ಜೊತೆಗೂಡಿ) ಡಬಲ್ಸ್ ಪ್ರಶಸ್ತಿ ಗೆದ್ದದ್ದು ದೊಡ್ಡ ಸುದ್ದಿಯಾಗಲಿಲ್ಲ, ಆದರೆ ಅದೇ ದಿನ ಟ್ವೆಂಟಿ೨೦ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತವು ದುರ್ಬಲ ಬಾಂಗ್ಲಾದೇಶದ ವಿರುದ್ಧ ಆರಂಭಿಕ ಪಂದ್ಯವನ್ನು ಗೆದ್ದದ್ದು ನಮ್ಮ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯಿತು! ಕ್ರಿಕೆಟ್ ಫೈನಲ್‌ನ ದಿನವೇ ನಮ್ಮ ಸೈನಾ ನೆಹ್ವಾಲ್ ’ಇಂಡೋನೇಷ್ಯಾ ಸೂಪರ್ ಸೀರೀಸ್’ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದದ್ದು ಮಾಧ್ಯಮಗಳಿಗೆ ಕ್ರಿಕೆಟ್‌ನಷ್ಟು ದೊಡ್ಡ ಸುದ್ದಿಯಾಗಿ ಕಂಡಿಲ್ಲ, ಬಹುಪಾಲು ಪ್ರಜೆಗಳಿಗೆ ಸೈನಾ ಹೆಸರೇ ಗೊತ್ತಿಲ್ಲ! ಚೆಸ್‌ನಲ್ಲಿ ವಿಶ್ವ ಛಾಂಪಿಯನ್ ಆಗಿ ಮೆರೆದ ನಮ್ಮ ವಿಶ್ವನಾಥನ್ ಆನಂದ್ ಜನಪ್ರಿಯತೆಯು ನಮ್ಮೀ ದೇಶದಲ್ಲಿ ನಮ್ಮ ಕ್ರಿಕೆಟ್ಟಿಗರ ಜನಪ್ರಿಯತೆಯ ಮುಂದೆ ಏನೂ ಅಲ್ಲ! ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನ ವಿಶ್ವಶ್ರೇಷ್ಠ ಆಟಗಾರನಾಗಿರುವ ನಮ್ಮ ಬೆಂಗಳೂರಿನ ಹುಡುಗ ಪಂಕಜ್ ಅಡ್ವಾಣಿಯ ಹೆಸರಾಗಲೀ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟವಾಗಲೀ ವಿದ್ಯಾವಂತರಾದ ಅದೆಷ್ಟೋ ಕನ್ನಡಿಗರಿಗೆ ಗೊತ್ತೇ ಇಲ್ಲ! ಆದರೆ ಕ್ರಿಕೆಟ್ ಗೊತ್ತಿಲ್ಲದ ವಿದ್ಯಾವಂತರೇ ಇಲ್ಲ!

ನಮ್ಮ ಈ ಅತಿಯಾದ ಕ್ರಿಕೆಟ್ ವ್ಯಾಮೋಹವು ಇತರ ಕ್ರೀಡೆಗಳನ್ನು ಮಂಕಾಗಿಸಿದೆ; ಇತರ ಕ್ರೀಡಾಳುಗಳನ್ನು ಮೂಲೆಗುಂಪಾಗಿಸಿದೆ. ಹೋದಲ್ಲಿ-ಬಂದಲ್ಲಿ ನಮ್ಮ ಕ್ರಿಕೆಟ್ಟಿಗರಿಗೆ ರಾಜೋಪಚಾರ ಮತ್ತು ಹೇರಳ ಹಣ ದೊರೆಯುತ್ತಿದ್ದರೆ ಇತರ ಕ್ರೀಡಾಳುಗಳು ಪಂದ್ಯಗಳಲ್ಲಿ ಭಾಗವಹಿಸಲು ಸರ್ಕಾರದೆದುರು ಮತ್ತು ಪ್ರಾಯೋಜಕರೆದುರು ಭಿಕ್ಷಾಪಾತ್ರೆ ಹಿಡಿದು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ! ಕೆಲವೇ ದೇಶಗಳಲ್ಲಿ - ಮುಖ್ಯವಾಗಿ, ಬ್ರಿಟಿಷರು ಆಳಿದ ದೇಶಗಳಲ್ಲಿ - ಚಾಲ್ತಿಯಲ್ಲಿರುವ ಕ್ರಿಕೆಟ್‌ನಿಂದಾಗಿ, ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಅನೇಕ ಕ್ರೀಡೆಗಳು ಭಾರತದಲ್ಲಿಂದು ಅವಗಣನೆಗೆ ತುತ್ತಾಗಿವೆ.

ಈ ಅನ್ಯಾಯ ನಿವಾರಣೆಗೊಳ್ಳಬೇಕು. ಹಾಗಾಗಬೇಕಾದರೆ ಮೊದಲು ನಾವು ಅನ್ಯ ಕ್ರೀಡೆಗಳ ಬಗ್ಗೆಯೂ ಒಲವು ಬೆಳೆಸಿಕೊಳ್ಳುವ ಚಿಂತನ ಮಾಡಬೇಕು. ನಮ್ಮ ಮಕ್ಕಳು ನಡೆಯುವಂತಾಗುವ ಮೊದಲೇ ಅವುಗಳ ಕೈಗೆ ಕ್ರಿಕೆಟ್ ಬ್ಯಾಟು-ಬಾಲು ಕೊಡುವ ನಾವು ಇತರ ಆಟಗಳೆಡೆಗೂ ನಮ್ಮ ಮಕ್ಕಳ ಗಮನ ಹರಿಯುವಂತೆ ನೋಡಿಕೊಳ್ಳಬೇಕು. ಆಟವೆಂದರೆ ಕ್ರಿಕೆಟ್ಟೊಂದೇ ಅಲ್ಲ ಎಂಬುದನ್ನು ನಾವು ಅರಿಯಬೇಕು.

ಮೂರನೇ ಶಕ್ತಿಕೂಟ
--------------------
ಕೊನೆಯಲ್ಲಿ, ನನ್ನ ಹೃದಯದಾಳದ ಒಂದು ಹಾರೈಕೆ: ಭಾರತ-ಪಾಕಿಸ್ತಾನದ ಬಾಂಧವ್ಯ ಸುಧಾರಣೆಯು ತಕ್ಕಮಟ್ಟಿಗೆ ಕ್ರಿಕೆಟ್‌ನಿಂದ ಸಾಧ್ಯ. ಅದು ಸಾಧ್ಯವಾಗುವುದು ಗೆಲುವನ್ನು ಈಗಿನಂತೆ ಕೊಚ್ಚಿಕೊಂಡು ಎದುರಾಳಿಯನ್ನು ಚುಚ್ಚುವುದರಿಂದ ಅಲ್ಲ, ಸೋಲನ್ನು ಎತ್ತಿಕೊಂಡು ಕತ್ತಿ ಮಸೆಯುವುದರಿಂದ ಅಲ್ಲ. ಕ್ರಿಕೆಟ್‌ನ ಗೆಲುವು, ಸೋಲು ಎರಡನ್ನೂ ಎರಡೂ ದೇಶಗಳೂ ಸ್ನೇಹಪೂರ್ವಕವಾಗಿ ಸ್ವೀಕರಿಸಿ ಖುಷಿ-ಬೇಸರಗಳನ್ನು ಮನಃಪೂರ್ವಕವಾಗಿ ಹಂಚಿಕೊಳ್ಳುವುದರಿಂದ ಬಾಂಧವ್ಯ ಸುಧಾರಣೆ ಸಾಧ್ಯ. ಲೋಹಿಯಾ ಹೇಳಿದಂತೆ,"ಏಷಿಯಾ ಮತ್ತು ಆಫ್ರಿಕಾಗಳ ಸ್ವತಂತ್ರ ರಾಷ್ಟ್ರಗಳು ಒಟ್ಟಾಗಿ ಮೂರನೇ ಶಕ್ತಿಕೂಟವಾಗಬೇಕು." ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ಅಮೆರಿಕವೇ ಮೊದಲಾದ ಮುಂದುವರಿದ ರಾಷ್ಟ್ರಗಳು ಮೂರನೇ ಜಗತ್ತನ್ನು (ಹಿಂದುಳಿದ ಮತ್ತು ಅಭಿವೃದ್ಧಿಶೀಲ ದೇಶಗಳನ್ನು) ಸುಲಿಯುತ್ತಿರುವ ಈ ದಿನಗಳಲ್ಲಿ ಇಂಥದೊಂದು ಮೂರನೇ ಶಕ್ತಿಯ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚು ಇದೆ. ಭಾರತ-ಪಾಕಿಸ್ತಾನದ ಮಟ್ಟಿಗೆ ಕ್ರಿಕೆಟ್ ಆಟವು ಈ ಅವಶ್ಯಕತೆಯನ್ನು ಪೂರೈಸುವಲ್ಲಿ ಮಹತ್ತರ ಕೊಡುಗೆ ನೀಡಬಲ್ಲುದು, ನೀಡಲಿ. ಈ ನಿಟ್ಟಿನಲ್ಲಿ ಪಾಕಿಸ್ತಾನವು ಇತ್ಯಾತ್ಮಕ ಗುಣದ ಕೊರತೆ ಹೊಂದಿರುವುದರಿಂದ ಭಾರತಕ್ಕಿಂತ ಪಾಕ್‌ನ ಗುಣ ಪರಿವರ್ತನೆಯ ಅವಶ್ಯಕತೆ ಹೆಚ್ಚು ಇದೆ. ಪಾಕಿಸ್ತಾನವು ಭಾರತವನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ಕ್ರಿಕೆಟ್ ಮೂಲಕವೇ ಆ ಕಲಿಕೆ ಶುರುವಾಗಲಿ. ಇಲ್ಲಿನ ನಮ್ಮ ಮುಸ್ಲಿಂ ಬಾಂಧವರು ಅಂಥ ಕಲಿಕೆಯ ಬಗ್ಗೆ - ಸೂಕ್ತ ನಡಾವಳಿಗಳ ಮೂಲಕ ಮತ್ತು ಸೂಕ್ತ ಮಾಧ್ಯಮಗಳ ಮೂಲಕ - ಪಾಕಿಸ್ತಾನಕ್ಕೆ ಅರಿವುಂಟುಮಾಡಲಿ. ಮುಸ್ಲಿಮೇತರರು ಈ ವಿಷಯದಲ್ಲಿ ಸಹಕರಿಸಲಿ.

ಈ ಲೇಖನದಲ್ಲಿನ ನನ್ನ ಅಭಿಪ್ರಾಯಗಳಿಗೆ ಸಮರ್ಥನೆಯಾಗಿ ಕೆಲ ಮಾಹಿತಿಗಳನ್ನು ಈ ಕೆಳಗೆ ನೀಡಿದ್ದೇನೆ.

ಇವರ ಕಥೆ-ವ್ಯಥೆ ಓದಿ
----------------------
ಮಿಹಿರ್ ಸೆನ್:
ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಪ್ರಪ್ರಥಮ ಏಷಿಯನ್ ಈತ. ಎಲ್ಲ ಏಳು ಜಲಸಂಧಿಗಳನ್ನೂ ಒಂದೇ ವರ್ಷದಲ್ಲಿ ಈಜಿ ದಾಟಿದ ಸಾಹಸಿ. ಪದ್ಮಶ್ರೀ(೧೯೫೯) ಮತ್ತು ಪದ್ಮಭೂಷಣ(೧೯೬೭) ಪ್ರಶಸ್ತಿ ವಿಜೇತ. ಜೀವನಾಂತ್ಯದಲ್ಲಿ ಆಲ್ಜಿಮರ್ ಮತ್ತು ಪಾರ್ಕಿನ್‌ಸನ್ ಕಾಯಿಲೆಗಳಿಂದ ಬಳಲುತ್ತಿದ್ದ ಈತನ ನೆರವಿಗೆ ಸರ್ಕಾರವೂ ಸೇರಿದಂತೆ ಯಾರೂ ಬರಲಿಲ್ಲ. ಎಲ್ಲೋ ಕೆಲವರ ದಾನ, ಮತ್ತು, ಆಸ್ಪತ್ರೆ ಸೇರಿದಮೇಲೆ ಒಂದು ವರ್ಷ ಹೆಣ್ಣುಮಕ್ಕಳು (ಈತನಿಗೆ ನಾಲ್ವರು ಪುತ್ರಿಯರು) ಕಳಿಸುತ್ತಿದ್ದ ಸಣ್ಣ ಮೊತ್ತದ ಹಣ, ಇಷ್ಟರಿಂದಲೇ ದಿನ ದೂಡಬೇಕಾದ ಪರಿಸ್ಥಿತಿ ಈತನದಾಯಿತು. ಈ ನತದೃಷ್ಟ ಸಾಹಸಿ ಆಸ್ಪತ್ರೆಯಲ್ಲಿ ಅಜ್ಞಾತನ ಬಾಳು ಬಾಳಿ ಅಜ್ಞಾತನಂತೆ ತನ್ನ ೬೭ನೇ ವಯಸ್ಸಿನಲ್ಲಿ ಬ್ರಾಂಕಿಯಲ್ ನ್ಯುಮೋನಿಯಾ, ಹಾರ್ಟ್ ಅಟ್ಯಾಕ್ ಸಹಿತ ಕಾಯಿಲೆಗಳ ಭಾರದಿಂದ ಸಾಯುವಾಗ (ಜೂನ್ ೧೧, ೧೯೯೭) ಈತನ ಹಾಸಿಗೆಯ ಪಕ್ಕದಲ್ಲಿ ಯಾರೂ ಇರಲಿಲ್ಲ! ಜಗತ್ತಾಗಲೇ ಬಹುತೇಕ ಈತನನ್ನು ಮರೆತೇಬಿಟ್ಟಿತ್ತು!

ಜಿಯಾಉದ್ದೀನ್ ಖಾತಿಬ್:
ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸರ್ ಆಗಿರುವ ಈತನಿಗೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸರ್ಕಾರದ ಸಹಾಯವೂ ಇಲ್ಲ, ಖಾಸಗಿ ಪ್ರಾಯೋಜಕರೂ ಇಲ್ಲ. ಧನಸಹಾಯಕ್ಕಾಗಿ ಒದ್ದಾಡಿ ಒದ್ದಾಡಿ ಸುಸ್ತಾದವನೀತ. ಇವನನ್ನು ಸ್ಟಂಟ್ ಇನ್‌ಸ್ಟ್ರಕ್ಟರ್‌ನನ್ನಾಗಿ ನೇಮಿಸಿಕೊಂಡ ಬಾಲಿವುಡ್ ತಾರೆಯರಾದ ಜಾನ್ ಅಬ್ರಹಾಂ, ಬಿಪಾಷಾ ಬಸು ಮೊದಲಾದವರು ಕೂಡಾ ಈತನ ನೆರವಿಗೆ ಬರಲಿಲ್ಲ!

ನಿಶಾ ಮಿಲ್ಲೆಟ್:
ಅಂತಾರಾಷ್ಟ್ರೀಯ ಮಟ್ಟದ ಈಜು ಸೌಲಭ್ಯ ಸಿಗುತ್ತದೆಂದು ಸಂಸಾರ ಸಮೇತ ಕರ್ನಾಟಕಕ್ಕೆ ಬಂದು ನೆಲಸಿದ ಈಜುಗಾರ್ತಿ ಈಕೆ. ಈಜಿನಲ್ಲಿ ಈಕೆಯ ಸಾಧನೆ ಅಮೋಘ. ಇಂಫಾಲ್‌ನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಗೆದ್ದ ೨೮ ಬಂಗಾರದ ಪದಕಗಳಲ್ಲಿ ಅರ್ಧಪಾಲು ಈಕೆಯದೇ! ಈಕೆ ಗೆದ್ದ ಪದಕಗಳಿಗೆ, ಮುರಿದ ದಾಖಲೆಗಳಿಗೆ ಲೆಕ್ಕವಿಲ್ಲ. ದೊಡ್ಡ ಶಸ್ತ್ರಚಿಕಿತ್ಸೆಯೊಂದರ ನಂತರವೂ ಈಜಿ ದಾಖಲೆಗಳನ್ನು ಮುರಿದ ಸಾಹಸಿ ಈಕೆ! ಅರ್ಜುನ ಪ್ರಶಸ್ತಿ(೧೯೯೯) ವಿಜೇತೆ.

ಗೆದ್ದ ಪ್ರತಿ ಬಂಗಾರದ ಪದಕಕ್ಕೂ ೩೦೦೦೦ ರೂ. ಮತ್ತು ಮುರಿದ ಪ್ರತಿ ದಾಖಲೆಗೂ ೫೦೦೦೦ ರೂ. ಕೊಡುವ ಕರ್ನಾಟಕ ಸರ್ಕಾರದ ನೀತಿಯಿದ್ದ ಕಾಲದಲ್ಲಿ ಈಕೆ ಒಂಭತ್ತು ಬಂಗಾರದ ಪದಕ ಗಳಿಸಿ ಒಂಭತ್ತು ದಾಖಲೆ ಮುರಿದಾಗ ಈಕೆಗೆ ಸರ್ಕಾರ ಕೊಟ್ಟದ್ದು ಕೇವಲ ಒಂದೂವರೆ ಲಕ್ಷ ರೂಪಾಯಿ! ಸರ್ಕಾರದ "ಜಾಣ" ಲೆಕ್ಕಾಚಾರ ಅಂಥದು! ಸ್ವಂತ ಹಣದಲ್ಲೇ ಬಹುಪಾಲು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಹೋಗಿ ದೇಶಕ್ಕೆ ಪದಕಗಳನ್ನು ಬಾಚಿಕೊಟ್ಟ ಈಕೆ ವಿದೇಶದ ತರಬೇತಿಗೂ ಯಾರೂ ಪ್ರಾಯೋಜಕರು ಸಿಗದಾದಾಗ ಬೇಸತ್ತು ಇದೀಗ ವಿದ್ಯಾರ್ಥಿಗಳಿಗೆ ಈಜುವಿಕೆಯ ಕೋಚಿಂಗ್ ಮಾಡುತ್ತಿದ್ದಾರೆ.

ಇವು ಕೆಲವು ಉದಾಹರಣೆಗಳಷ್ಟೆ.

ಈ ಸಾಧಕರನ್ನೆಷ್ಟು ಬಲ್ಲಿರಿ?
---------------------------
ಫುಟ್‌ಬಾಲ್; ಫುಟ್‌ಬಾಲ್‌ನಲ್ಲಿ ಭಾರತದ ಸಾಧನೆ ಅಂಥದೇನಿಲ್ಲವೆನ್ನುತ್ತಿದ್ದಾಗ್ಗ್ಯೂ ನಮ್ಮವರು ೨೦೦೨ರಲ್ಲಿ ವಿಯೆಟ್ನಾಂನಲ್ಲಿ ಎಲ್‌ಜಿ ಕಪ್ ಮತ್ತು ೧೯೯೩, ೧೯೯೭, ೧೯೯೯ ಮತ್ತು ೨೦೦೫ರಲ್ಲಿ ಒಟ್ಟು ನಾಲ್ಕು ಸಲ ಸೌತ್ ಏಷಿಯನ್ ಫುಟ್‌ಬಾಲ್ ಫೆಡರೇಷನ್ ಕಪ್ ಗೆದ್ದಿದ್ದಾರೆ.

ಕಬಡ್ಡಿ: ಪ್ರಪಂಚದ ಶ್ರೇಷ್ಠ ಟೀಮ್ ನಮ್ಮದು. ಆದರೆ ಈ ಆಟ ಮತ್ತು ಆಟಗಾರರ ತಂಡ ಎರಡಕ್ಕೂ ಪ್ರಚಾರ, ಪ್ರೋತ್ಸಾಹ ಸಾಲದು.

ಹಾಕಿ; ೧೯೭೫ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್ ಗೆಲ್ಲುವುದರಿಂದ ಹಿಡಿದು ಹಾಕಿಯಲ್ಲಿ ನಮ್ಮವರ ಸಾಧನೆ ಅಸದಳ. ಆದರೆ, ಈ ವಿಶ್ವಕಪ್ ಗೆದ್ದ ನಾಯಕ ಅಜಿತ್‌ಪಾಲ್ ಸಿಂಗ್, ಅರ್ಜುನ್ ಪ್ರಶಸ್ತಿ ವಿಜೇತ ಗಗನ್ ಅಜಿತ್ ಸಿಂಗ್, ಅರ್ಜುನ್ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತ ಮೊಹಮ್ಮದ್ ಶಹೀದ್, ಖೇಲ್ ರತ್ನ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತ ಧನ್‌ರಾಜ್ ಪಿಳ್ಳೆ ಇವರ ಹೆಸರುಗಳನ್ನು ಅದೆಷ್ಟು ಜನರು ಬಲ್ಲರು? ಹಾಕಿ ದಂತಕಥೆ ಧ್ಯಾನ್‌ಚಂದ್ ಹೆಸರು ಅದೆಷ್ಟು ಜನರಿಗೆ ಗೊತ್ತು?

ಈಚಿನ ಇತರ ಕೆಲ ಪ್ರಮುಖ ಕ್ರೀಡಾಳುಗಳ ಹೆಸರುಗಳು ಇಂತಿವೆ:

ಬಿಲ್ಲುಗಾರಿಕೆ: ವಿಶ್ವ ದಾಖಲೆ ಮಾಡಿದ ಅರ್ಜುನ್ ಪ್ರಶಸ್ತಿ ವಿಜೇತ ಲಿಂಬಾರಾಮ್, ಅರ್ಜುನ್ ವಿಜೇತರಾದ ತರುಣ್‌ದೀಪ್ ರೈ ಮತ್ತು ಡೋಲಾ ಬ್ಯಾನರ್ಜಿ.

ಬ್ಯಾಡ್ಮಿಂಟನ್; ದಂತಕಥೆ ಪ್ರಕಾಶ್ ಪಡುಕೋಣೆ, ಸಮಾಜಹಿತದ ದೃಷ್ಟಿಯಿಂದ ಜಾಹಿರಾತಿನ ಆಫರ್ ಒಂದನ್ನು ನಿರಾಕರಿಸಿದ ಧೀಮಂತ ಪುಲ್ಲೆಲ ಗೋಪಿಚಂದ್, ಅರ್ಜುನ್ ಪ್ರಶಸ್ತಿ ವಿಜೇತೆ ಅಪರ್ಣಾ ಪೋಪಟ್ ಮತ್ತು ಪ್ರಸ್ತುತ ’ಇಂಡೋನೇಷ್ಯಾ ಸೂಪರ್ ಸೀರೀಸ್’ ಚಾಂಪಿಯನ್ ಸೈನಾ ನೆಹ್ವಾಲ್.

ಬಿಲಿಯರ್ಡ್ಸ್: ವಿಶ್ವ ಛಾಂಪಿಯನ್/ಸಾಧಕರಾದ ಮೈಕೇಲ್ ಫೆರೀರಾ, ಅಶೋಕ್ ಶಾಂಡಿಲ್ಯ, ಗೀತ್ ಸೇಥಿ ಮತ್ತು ನಮ್ಮ ಹೀರೋ ಪಂಕಜ್ ಆದ್ವಾನಿ.

ಬಾಕ್ಸಿಂಗ್: ಡಿಂಗ್‌ಕೋ ಸಿಂಗ್.

ಚೆಸ್: ದಂತಕಥೆಯಾಗಿರುವ ವಿಶ್ವನಾಥನ್ ಆನಂದ್ ಹಾಗೂ ಕೊನೇರು ಹಂಪಿ.

ಟೆನ್ನಿಸ್: ನಾನಾ ಪ್ರಮುಖ ಛಾಂಪಿಯನ್ ಪಟ್ಟಗಳನ್ನು ತಮ್ಮದಾಗಿಸಿಕೊಂಡ ರಾಮನಾಥನ್ ಕೃಷ್ಣನ್, ರಮೇಶ್ ಕೃಷ್ಣನ್, ವಿಜಯ್ ಅಮೃತರಾಜ್, ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ.

ಟೇಬಲ್ ಟೆನ್ನಿಸ್: ಚೇತನ್ ಬಬೂರ್, ಕಮಲೇಶ್ ಮೆಹ್ತಾ.

ಗಾಲ್ಫ್: ದಂತಕಥೆ ಮಿಲ್ಕಾ ಸಿಂಗ್‌ನ ಮಗ ಜೀವ್ ಮಿಲ್ಕಾ ಸಿಂಗ್.

ಷೂಟರ್‍ಸ್: ಒಲಿಂಪಿಕ್ ಹೀರೋ ರಾಜ್ಯವರ್ಧನ್ ಸಿಂಗ್ ರಾಥೋಡ್, ಅಭಿನವ್ ಭಿಂದ್ರಾ, ಅಂಜಲಿ ಭಾಗವತ್, ಜಸ್ಪಾಲ್ ರಾಣಾ, ೧೮ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಶ್ರೇಷ್ಠ ಕ್ರೀಡಾಳು ಪ್ರಶಸ್ತಿ ವಿಜೇತ ಸಮರೇಶ್ ಜಂಗ್.

ಅಥ್ಲೆಟಿಕ್ಸ್: ಅಂಜು ಬಾಬಿ ಜಾರ್ಜ್, ಪಿ.ಟಿ.ಉಷಾ, ಜ್ಯೋತಿರ್ಮಯಿ ಸಿಕ್ದರ್, ಟಿ.ಸಿ.ಯೋಹಾನನ್ ಮತ್ತು ದಂತಕಥೆ ಮಿಲ್ಕಾ ಸಿಂಗ್.

ಈಜು: ಖಜಾನ್ ಸಿಂಗ್, ಬೂಲಾ ಚೌಧರಿ.

ಇವರು ಕೆಲ ಪ್ರಮುಖರು ಅಷ್ಟೆ. ಕ್ರಿಕೆಟ್ಟನ್ನು ಜೀವಕ್ಕೆ ಸಮನಾಗಿ ಪ್ರೀತಿಸುವ ನಮ್ಮ ಅಭಿಮಾನಿಸಮೂಹದಲ್ಲಿ ಅದೆಷ್ಟು ಮಂದಿಗೆ ಈ ಕ್ರೀಡಾಳುಗಳ ಹೆಸರುಗಳು ಗೊತ್ತಿವೆ? ಇವರ ಪೈಕಿ ಕೇವಲ ಬೆರಳೆಣಿಕೆಯ ಕೆಲವರನ್ನುಳಿದು ಇತರರ್‍ಯಾರೂ, ತಮ್ಮ ಅಪ್ರತಿಮ ಸಾಧನೆಯ ಮಧ್ಯೆಯೂ, ಅಷ್ಟೇನೂ ಜನಪ್ರಿಯರೂ ಆಗಿಲ್ಲ, ಕಾಸೂ ಗಳಿಸಿಲ್ಲ. ಕ್ರಿಕೆಟ್ಟಿಗರಿಗೆ ಹೋಲಿಸಿದಾಗ ಇವರು ನತದೃಷ್ಟರೇ ಸರಿ. ಈ ಅಸಮಾನತೆಗೆ ಕಾರಣ ಕ್ರಿಕೆಟ್ ಹುಚ್ಚಿನ ನಾವು ಮತ್ತು ತಾರತಮ್ಯಭಾವದ ನಮ್ಮ ಸರ್ಕಾರಗಳೇ ಅಲ್ಲವೆ?

ಭಾನುವಾರ, ಜೂನ್ 21, 2009

ಅಪ್ಪ

ಇಂದು ಫಾದರ್ಸ್ ಡೇ. ಮೂಲತಃ ಇದು ಭಾರತದ ಆಚರಣೆಯಲ್ಲದಿದ್ದರೂ ವಿಶ್ವದ ಅನೇಕ ದೇಶಗಳಲ್ಲಿ ಬೇರೆಬೇರೆ ದಿನಗಳಂದು ಫಾದರ್ಸ್ ಡೇ ಆಚರಣೆಯಲ್ಲಿದ್ದು ಈ ವಾರ್ಷಿಕ ಆಚರಣೆಗೆ ಅಂತರರಾಷ್ಟ್ರೀಯ ಸ್ವರೂಪ ಬಂದಿರುವುದು ಸುಳ್ಳಲ್ಲ.

ನನ್ನ ತಂದೆ ಗತಿಸಿ ನಲವತ್ತು ವಸಂತಗಳಾಗಿವೆ. ತಂದೆಯ ನೆನಪುಗಳು ಮಾತ್ರ ಸದಾ ಹಸಿರಾಗಿ ನನ್ನೊಡನೆ ಸಾಗಿಬಂದಿವೆ. ಅರವತ್ತನ್ನು ಸಮೀಪಿಸುತ್ತಿರುವ ನಾನಿಂದು ಮೊಮ್ಮಕ್ಕಳ ಅಜ್ಜನಾಗಿದ್ದರೂ ತಂದೆಗೆ ಮಗನಾಗಿ ಬೆಳೆದ ನನ್ನ ಆ ಬಾಲ್ಯದ ಸ್ಮೃತಿಯು ಮನದಲ್ಲಿ-ಹೃದಯದಲ್ಲಿ ಸದಾ ಜಾಗೃತವಾಗಿದ್ದು ನನ್ನನ್ನು ಇಂದಿಗೂ ಮುನ್ನಡೆಸುತ್ತಿದೆ, ನನಗೆ ಖುಷಿ ನೀಡುತ್ತಿದೆ.

ತಂದೆಯೊಂದಿಗಿನ ನನ್ನ ಆ ದಿನಗಳನ್ನು ನೆನೆದು, ಜೊತೆಗೆ, ನಾನು ಗಮನಿಸಿದ ಇತರರ ಅನುಭವಗಳನ್ನು ಹದವಾಗಿ ಬೆರೆಸಿ ನಾನು ಬರೆದ ಒಂದು ಕವನ ಮತ್ತು ಒಂದಷ್ಟು ಹನಿಗವನಗಳು ಇದೋ ಇಲ್ಲಿವೆ.

(ಕವನ)

ಅಪ್ಪ
------

ಯಜಮಾನ
ಮನೆಗೆ, ಅಮ್ಮನಿಗೆ,
ತನ್ನನೇಕ ತಪ್ಪು
ಕಲ್ಪನೆಗಳಿಗೆ.

ಅದೇವೇಳೆ
ಅಡಿಯಾಳು
ಅಮ್ಮನ ದೃಢತೆಗೆ
ಮತ್ತು ತನ್ನಹಂಕಾರಕ್ಕೆ.

ಅಪ್ಪ
ನಮಗೊಂದು ಪ್ರಶ್ನೆ.
ಅನೇಕ ಉತ್ತರ.
ಆಯ್ಕೆ ನಮ್ಮದು
ನೆರವಿಗೆ ಅಮ್ಮ.

ಹಡೆದವನು
ಹೊಡೆದವನು
ಎಷ್ಟೋ ಸಲ
ಕಣ್ಣೀರು ಮಿಡಿದವನು
ನಮಗಾಗಿ
ಜೀವನವೆಲ್ಲ ದುಡಿದವನು
ಜೊತೆಗೊಂದಿಷ್ಟು
ಕುಡಿದವನು

ಕುಡಿದಾಗ ಹೊಡೆದಾಗ
ಹೊರಗಿನವನು
ಇದು ಮನಕ್ಕೆ. ಹೃದಯಕ್ಕೆ
ಒಳಗೇ ಇರುವವನು.

ಅವನವಸ್ಥೆಯೂ ಇದೇ
ಎಂದು ಅಮ್ಮನ ಅಂಬೋಣ.
ಅಮ್ಮನಷ್ಟು ಅರಿತವರ್‍ಯಾರಿದ್ದಾರೆ
ಅಪ್ಪನನ್ನು?
ಸ್ವಯಂ ಅಪ್ಪನೇ ಅರಿತಿಲ್ಲ
ಆದ್ದರಿಂದ
ಅಮ್ಮನ ಮಾತು ನಂಬೋಣ.

ಅಪ್ಪ
ನಮಗೆ ಪ್ರೀತಿ,
ಭಯ, ಗೌರವ, ತಿರಸ್ಕಾರ,
ಕೋಪ, ಕನಿಕರ.

ಹೊರಗಿನವರಿಗೋ,
ಅಪ್ಪನ ವ್ಯಕ್ತಿತ್ವ
ಪ್ರಖರ.
ಹೊರಗೆ ಹೇಗಿದ್ದರೇನಂತೆ
ಅಮ್ಮನ ಪ್ರಕಾರ
ಮನೆಯೊಳಗೆ
ಮನದೊಳಗೆ
ಅವ ವಾತ್ಸಲ್ಯಮಯಿ
ನಿಖರ.

--**--


(ಹನಿಗವನಗುಚ್ಛ)

ಅಪ್ಪಯ್ಯ
---------

ಅಪ್ಪಯ್ಯ ನೆನಪಾಗಿ
ಕಣ್ತುಂಬಿ
ಬಿದ್ದ ಹನಿಗಳಿವು;
ಪ್ರತಿಫಲಿಸಿದ
ಬಿಂಬಗಳು ಹಲವು

***

ಅಮ್ಮನ ಆರಯ್ಕೆ
ಅಪ್ಪನ ಪೂರೈಕೆ
ಮತ್ತು
ಉಭಯರ ಹಾರೈಕೆ
ಹೊಂದಿ ಬೆಳೆದ ಮಗನ
ಇಂದಿನ ಯಶದ
ಬಂಧುರ ಕ್ಷಣವನ್ನು
ಆನಂದಿಸುವ ಮೊದಲೇ
ನಂದಿಹೋಯಿತು ನನ್ನ
ತಂದೆಯ
ಜೀವಜ್ಯೋತಿ

***

ನಾನು ತಪ್ಪುಮಾಡಿದಾಗ
ಅಪ್ಪಯ್ಯ ಚಿವುಟುತ್ತಿದ್ದ
ನನ್ನ ತೊಡೆಭಾಗ
ಇನ್ನೂ ಕಾಣುತ್ತಿದೆ ಕೆಂಪಾಗಿ,
ನನ್ನನ್ನು ಹದಗೊಳಿಸಿದ
ಪೆಂಪಾಗಿ

***

ಅಪ್ಪಯ್ಯಾ,
ನಿನ್ನ
ಸಿಟ್ಟಿನಲ್ಲಿ ಪ್ರೀತಿಯಿತ್ತು;
ಶಿಕ್ಷೆಯಲ್ಲಿ ಶಿಕ್ಷಣವಿತ್ತು;
ಆಜ್ಞೆಯಲ್ಲಿ ವಾತ್ಸಲ್ಯವಿತ್ತು;
ಸಾಂತ್ವನದಲ್ಲಿ ನಿನ್ನ
ಕಣ್ಣೀರ ಹನಿಯಿತ್ತು.
ನನಗೆ ಈ ರೀತಿ
ಹೃದಯಾಮೃತವಿತ್ತು
ಮುನ್ನಡೆಸಿದ ನಿನ್ನ
ನೆನೆಯುವೆ ನಾನು
ಈ ತಂಪುಹೊತ್ತು

***

ಜಪ್ಪಯ್ಯ ಅಂದರೂ
ಹಿಡಿದ ಛಲ ಬಿಡದ ಸ್ವಭಾವದ
ಅಪ್ಪಯ್ಯ
ನಮಗೆ ಮಾರ್ಗದರ್ಶಿಯಾಗಿದ್ದೇ
ಹಾಗೆ

***

ಅಪ್ಪಯ್ಯ
ಕಷ್ಟಪಟ್ಟಿದ್ದೇ ಬಹಳ
ನಮಗೆ
ಕಷ್ಟ ಕೊಟ್ಟಿದ್ದೇ
ವಿರಳ

***

ಅಪ್ಪಯ್ಯಾ,
ಒಂದೊಂದು ಕಾಸು ದುಡಿಯಲೂ
ನೀನು ಪಟ್ಟ ಕಷ್ಟ
ಒಂದೊಂದು ರೂಪಾಯಿ ಖರ್ಚುಮಾಡುವಾಗಲೂ
ನನಗೆ ನೆನಪಾಗುತ್ತದೆ.
ಎಳವೆಯಲ್ಲೇ ನನಗೆ ನೀನು
ದುಡ್ಡಿನ ಬೆಲೆ ತಿಳಿಸಿದೆ

***

ಉದಯರಾಗ ಹಾಡಿ
ನಿತ್ಯ ನಮ್ಮನ್ನೆಬ್ಬಿಸುತ್ತಿದ್ದ ನೀನು
ಅದೊಂದು ಮುಂಜಾನೆ
ನಾವು ನಿದ್ದೆಯಲ್ಲಿದ್ದಾಗಲೇ
ಸದ್ದಿಲ್ಲದೆ ಹೊರಟುಹೋದೆ

***

ಅಪ್ಪಯ್ಯಾ,
ನಿನಗೆ ನಮನ.
ನಿನ್ನದು

ತನು-ಮನ-ಧನ.
ನಿನ್ನ ನೆನಪಾಗದ ದಿನ
ನಾನು
ನಿಧನ

***೦***

ಶನಿವಾರ, ಜೂನ್ 20, 2009

’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

ವಿನೋದ-ವಿಡಂಬನೆಯ ಗುಳಿಗೆಗಳನ್ನು ನೀಡಲೆಂದು ಆರಂಭಿಸಿರುವ ಈ ತಾಣದಲ್ಲಿ ಭಿನ್ನ ಬಗೆಯ ಬರಹವೊಂದನ್ನು ಪ್ರಸ್ತುತಪಡಿಸುತ್ತಿದ್ದೇನೆ. ಬೇಂದ್ರೆ ಕಾವ್ಯದ ವಿಟಮಿನ್ ಗುಳಿಗೆ ಎಂದುಕೊಂಡು ಇದನ್ನು ಓದಿ.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಓದುಗ ಮಿತ್ರ ಮಹೇಂದ್ರ ವಿಜಯಶೀಲ ಅವರು ಈಚೆಗೆ ಅಂತರ್ಜಾಲ ತಾಣವೊಂದರ ಮೂಲಕ ನನಗೆ ಈ ಕೆಳಗಿನಂತೆ ಸಂದೇಶ ಕಳಿಸಿದರು.

***

ಮಾನ್ಯ ಶಾಸ್ತ್ರಿ ಅವರಲ್ಲಿ ಒಂದು ವಿನಂತಿ.
ನಿಮ್ಮ ಜೀವನಚರಿತ್ರೆರೇಖೆ ಬಹಳ ವಿಶಿಷ್ಟವಾಗಿ ಮನದಟ್ಟುವುದು.
ನೀವು ವಿಶಾಲ ಭಾಷಾ ಪರಿಣತರು, ಕನ್ನಡ ಕೃಷಿಯಲ್ಲಿ ವಿದುಷಿಗಳು.
ನಿಮ್ಮ ಕನ್ನಡ ಕೃತಿಗಳು ಅಸಂಖ್ಯಾತ, ವಿವಿಧ ರೂಪ.
ಆದಕ್ಕಾಗಿ ನನ್ನ ಪ್ರಾರ್ಥನೆ:
ದಯವಿಟ್ಟು,
ದ.ರಾ.ಬೇಂದ್ರೆಯವರ ಪ್ರಸಿದ್ಧ ಕವನಗೀತೆ:
"ಹಕ್ಕಿ ಹಾರುತಿದೆ ನೋಡಿದಿರಾ?"
ಈ ಕವನದ ಭಾವಾರ್ಥವನ್ನು ವರ್ಣಿಸಿದರೆ ನಾನು ಅತ್ಯಂತ ಕೃತಜ್ಞನು.
ಈ ಕವನ ದಶಕಗಳೆರಡರ ಹಿಂದೆ ವಿಶ್ವವಿದ್ಯಾನಿಲಯದಲ್ಲಿ ಪಠ್ಯ ಪುಸ್ತಕ ಒಂದರಲ್ಲಿ ಓದಿದ್ದೆ.
ಆದರೆ ಅದರ ನಿಗಮ ರೂಪಾಲಂಕಾರಗಳ ಸುಪ್ತ ಭಾವನೆಗಳ ಒಳಾರ್ಥವನ್ನು ಇದುವರೆಗೆ ತಿಳಿದುಕೊಳ್ಳಲಾಗಲಿಲ್ಲ.
ಅದನ್ನು ನೀವು ಸಾಧ್ಯಗೊಳಿಸಿದರೆ ಸಾವಿರಾರು ಮಂದಿ ಬೇಂದ್ರೆಯವರ ಕಾವ್ಯಾಭ್ಯಾಸಿಗಳು ಮತ್ತು ಕನ್ನಡ ಪ್ರೇಮಿಗಳು ಕೃತಜ್ಞರಾಗುವರು.

***

ಈ ಸಂದೇಶಕ್ಕೆ ಉತ್ತರವಾಗಿ ನಾನು ಲೇಖನವೊಂದನ್ನು ಬರೆದು ಅವರಿಗೆ ಕಳಿಸಿದೆ. ವರಕವಿ ಬೇಂದ್ರೆಯವರ ಕಾವ್ಯದಲ್ಲಿ ಆಸಕ್ತಿಯುಳ್ಳ ಸಹೃದಯರ ಅವಗಾಹನೆಗಾಗಿ ನಾನು ಆ ಲೇಖನವನ್ನು ಇಲ್ಲಿ ಪ್ರಚುರಪಡಿಸುತ್ತಿದ್ದೇನೆ.

***

’ಹಕ್ಕಿ ಹಾರುತಿದೆ ನೋಡಿದಿರಾ?’: ವರಕವಿಯ ಶ್ರೇಷ್ಠ ರೂಪಕ
-----------------------------------------------------

ದ.ರಾ.ಬೇಂದ್ರೆಯವರು ಜೀವನವನ್ನು ಒಂದು ದೃಶ್ಯಕಾವ್ಯವಾಗಿ ಕಂಡವರು. ಜೀವನವನ್ನು ಸಾಕ್ಷಿಪ್ರಜ್ಞೆಯಿಂದ ಅವಲೋಕಿಸಿದ ಕವಿ ಅವರು. ಅವರ ಕಾವ್ಯದಲ್ಲಿ ಜೀವನದೃಷ್ಟಿ, ಸಾಕ್ಷಿಪ್ರಜ್ಞೆ ಮತ್ತು ಅನುಭಾವ ಇವು ಢಾಳವಾಗಿ ವಿಜೃಂಭಿಸುತ್ತವೆ.

ಜಗತ್ತನ್ನು, ಜೀವ-ಜೀವನಗಳನ್ನು, ಮಾತ್ರವಲ್ಲ, ಅಖಿಲ ಬ್ರಹ್ಮಾಂಡವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ’ಕಾಲ’ವನ್ನು ಹಕ್ಕಿಗೆ ಹೋಲಿಸಿ ವರಕವಿ ರಚಿಸಿರುವ ರೂಪಕ ’ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಕವಿತೆಗಳಲ್ಲೊಂದು. ಆ ಕವಿತೆಯ ಪೂರ್ಣಪಾಠ ಇಂತಿದೆ:

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? /೧/

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? /೨/

ನೀಲಮೇಘಮಂಡಲ-ಸಮ ಬಣ್ಣ!
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? /೩/

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? /೪/

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? /೫/

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳಿನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? /೬/

ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೋ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? /೭/

ಕಾಲದ ಗತಿಯನ್ನು ಮತ್ತು ಆಯಾಮವನ್ನು ಹಕ್ಕಿಯ ಹಾರಾಟಕ್ಕೆ ಹೋಲಿಸಿ ಕವಿಯಿಲ್ಲಿ ಹಕ್ಕಿಯ ರೂಪ(ಕ)ದಲ್ಲಿ ಕಾಲಕೋಶದಲ್ಲಿ ಪಯಣಿಸಿದ್ದಾರೆ. ಈ ಕವಿತೆಯನ್ನು ನಾನು ಅರ್ಥೈಸಿಕೊಂಡಿರುವುದು ಹೀಗೆ: (ನುಡಿಸಂಖ್ಯೆಯ ಕ್ರಮದಲ್ಲಿ ಬರೆದಿದ್ದೇನೆ):

೧. ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ಒಂದಷ್ಟು ಕಾಲ ಸಂದಿರುತ್ತದೆ. ಹೀಗೆಯೇ ದಿನರಾತ್ರಿಗಳು ಕಳೆಯುತ್ತವೆ. ಸುತ್ತಮುತ್ತ, ಮೇಲೆ-ಕೆಳಗೆ, ಹೀಗೆ ವಿಶ್ವವ್ಯಾಪಿಯೂ ಅನಂತವೂ ಆಗಿರುವ ಕಾಲವು (ಗಾವುದ ಗಾವುದ) ಮುಂದೆ ಸಾಗುತ್ತಿರುತ್ತದೆ. ಕಾಲದ ಹಕ್ಕಿ ಹಾರುತ್ತಿರುತ್ತದೆ.

೨. ಕರಿನರೆ ಅಂದರೆ ಸುಟ್ಟು ಕರಿಕಾದ ಬಿಳಿಗೂದಲು. ಗತಿಸಿಹೋದ ಕಾಲ. ಜೀವಿಗೆ ವೃದ್ಧಾಪ್ಯದ ಕಾಲ. ಕರಿನರೆ ಅಂದರೆ ವರ್ತಮಾನಕ್ಕೆ ಕತ್ತಲಾಗಿರುವ ಗತಕಾಲ. ಕಪ್ಪಾಗಿ ಕಾಡುವ ಗತಾನುಭವವೂ ಅದಾಗಿರಬಹುದು. ಅಂಥ ಕರಿನರೆ ಬಣ್ಣದ ಪುಚ್ಛವು ಕಾಲವೆಂಬ ಹಕ್ಕಿಯ ಹಿಂಬದಿಗಂಟಿಕೊಂಡಿದೆ. ವರ್ತಮಾನವೆಂಬ ಬಿಳಿಬಣ್ಣದ, ಹೊಳಪಿನ ಗರಿಯು ಕಾಲದ ಹಕ್ಕಿಯಲ್ಲಿ ಗರಿಗರಿಯಾಗಿ ಕಂಗೊಳಿಸುತ್ತಿದೆ! ವರ್ತಮಾನವಾದ್ದರಿಂದ ಅದು ಬೆಳಕಿನಲ್ಲಿದೆ. ಎಂದೇ ಬಿಳಿ-ಹೊಳೆ ಬಣ್ಣ. ವರ್ತಮಾನಕ್ಕೆ ’ಹೊಳೆ’ವ ಬಣ್ಣ. ವರ್ತಮಾನವು, ಹರಿಯುತ್ತಿರುವ (ಕಾಲದ) ಹೊಳೆಯೂ ಹೌದು. ಕಾಲದ ಹಕ್ಕಿಗೆ ಕೆಂಬಣ್ಣದ-ಹೊಂಬಣ್ಣದ ರೆಕ್ಕೆಗಳೆರಡು. ಕೆಂಬಣ್ಣ ಮತ್ತು ಹೊಂಬಣ್ಣಗಳು ಸಂಕೇತಿಸುವ ವಸ್ತು-ವಿಷಯ-ಭಾವಗಳೆಲ್ಲ ಇಲ್ಲಿ ಪ್ರಸ್ತುತ. ಇಂಥ ರೆಕ್ಕೆಪುಕ್ಕಗಳನ್ನೊಳಗೊಂಡ ಹಾರುವ ಹಕ್ಕಿ ’ಕಾಲ’.

೩. ಕಾಲದ ಹಕ್ಕಿಯ ಬಣ್ಣ ನೀಲಮೇಘಮಂಡಲಸದೃಶ. ನೀಲಿ ಅಂದರೆ ವೈಶಾಲ್ಯ. ನೀಲಮೇಘಮಂಡಲದಂತೆ ಸಮಬಣ್ಣವೂ ಹೌದು. ಕಾಲದ ದೃಷ್ಟಿ ತರತಮರಹಿತ. ಕಾಲದ ಹಕ್ಕಿಯು ನೀಲಮೇಘಮಂಡಲದಂತೆ ಅಗಾಧ-ವ್ಯಾಪಕ-ವಿಶಾಲ. ಎಷ್ಟೆಂದರೆ, ಆಕಾಶಕ್ಕೆ ರೆಕ್ಕೆಗಳು ಮೂಡಿ ಅಕಾಶವೇ ಹಾರುತ್ತ ಸಾಗಿದಂತೆ! ಕಾಲದ ಹಕ್ಕಿಯ ’ಹಾರಾಟ’ (ಶ್ಲೇಷೆ ಗಮನಿಸಿರಿ) ಅಂಥದು! ಅನಾದಿಯೆಂಬ ಮುಗಿಲಿಗೆ ಮೂಡಿದ ರೆಕ್ಕೆಗಳೊಡನೆ, ಅನಂತವೆಂಬ ನೀಲಮೇಘಮಂಡಲದಲ್ಲಿ, ದಿನ-ಮಾಸ-ವರ್ಷ....ಯುಗ....ಮನ್ವಂತರ....ಕಲ್ಪ....ಗಳೆಂಬ ನಕ್ಷತ್ರಗಳ ಮಾಲೆ ಧರಿಸಿ, ದಿನ-ರಾತ್ರಿಗಳೆಂಬ ಸೂರ್ಯ-ಚಂದ್ರರನ್ನು ಕಣ್ಣುಗಳಾಗಿ ಹೊಂದಿ, ನೋಡುತ್ತ, ತೋರುತ್ತ, ತೋರಿಸುತ್ತ ಕಾಲದ ಹಕ್ಕಿಯು ಹಾರುತ್ತಿದೆ.

೪. ಸಾಮ್ರಾಜ್ಯಗಳ ಭರ್ಜರಿ ತೆನೆಗಳನ್ನೆಲ್ಲ ಒಕ್ಕಿ, ಚಿಕ್ಕಪುಟ್ಟ ಮಂಡಲ-ಗಿಂಡಲಗಳ ಕೋಟೆಕೊತ್ತಲಗಳನ್ನೆಲ್ಲ ಮುಕ್ಕಿ, ಖಂಡ-ಖಂಡಗಳನ್ನೇ (ಒಂದೆಡೆ ಪ್ರಾಕೃತಿಕ ಬದಲಾವಣೆ-ಪ್ರಗತಿ-ವಿಜ್ಞಾನ; ಇನ್ನೊಂದೆಡೆ ಯುದ್ಧ-ಪ್ರಕೃತಿವಿಕೋಪ-ವಿನಾಶ ಈ ರೀತಿ) ತೇಲಿಸಿ-ಮುಳುಗಿಸಿ, ’ಸಾರ್ವಭೌಮ’ರೆಲ್ಲರ ನೆತ್ತಿಯ ಕುಕ್ಕಿ (ಇದೀಗ ಪ್ರಜಾಪ್ರಭುತ್ವದ ಬಯಲಲ್ಲಿ) ಕಾಲದ ಹಕ್ಕಿಯು ಹಾರುತ್ತಿದೆ.

೫. ಯುಗಯುಗಗಳ ಆಗುಹೋಗುಗಳನ್ನು ತಿಕ್ಕಿ-ತೀಡಿ, ಚರಿತ್ರೆಯನ್ನು ಹಿಂದೆಬಿಟ್ಟು (ಅಳಿಸಿ-ಒರಸಿ), ಮನ್ವಂತರಗಳ (ಅಂದರೆ ದೀರ್ಘ ಕಾಲಾವಧಿಯ) ಭಾಗ್ಯಕ್ಕೆ (ಅಂದರೆ ಪ್ರಗತಿಗೆ) ಹೇತುವಾಗಿ-ಸಾಕ್ಷಿಯಾಗಿ, ಮನ್ವಂತರಗಳ (ಅಂದರೆ ಪರಿವರ್ತನೆಯ ಸಮಯದ) ಭಾಗ್ಯಕ್ಕೆ (ಅಂದರೆ ಇತ್ಯಾತ್ಮಕ ಬದಲಾವಣೆಗಳಿಗೆ) ಹೇತುವಾಗಿ-ಸಾಕ್ಷಿಯಾಗಿ, ರೆಕ್ಕೆಯ ಬೀಸುತ್ತ (ಅಂದರೆ ಕಾಲಕ್ರಮದಲ್ಲಿ) ಚೇತನಗೊಳಿಸಿ (ಅಂದರೆ ಪ್ರಗತಿಯ ಕಸುವು ನೀಡಿ), ಹೊಸಗಾಲದ ಹಸುಮಕ್ಕಳ ಹರಸಿ (ಅಂದರೆ ಬದಲಾದ ಲೋಕಕ್ಕೆ ಕಣ್ಣುತೆರೆದ ಅಂದಂದಿನ ಜನರನ್ನು-ಜೀವಿಗಳನ್ನು ಮುನ್ನಡೆಸಿ ಮತ್ತು ಇಂದಿನ ಲೋಕಕ್ಕೆ ಕಣ್ಣುತೆರೆದಿರುವವರನ್ನು ಮುನ್ನಡೆಸುತ್ತ) ಕಾಲದ ಹಕ್ಕಿಯು ಹಾರುತ್ತಿದೆ (ಕಾಲ ಸಾಗುತ್ತಿದೆ).

೬. ಬೆಳ್ಳಿಯ, ಅಂದರೆ ಶುಕ್ರಗ್ರಹದ ವಾಯುಮಂಡಲವನ್ನು ಪ್ರವೇಶಿಸಿದ ನಾವು, ತಿಂಗಳಿನೂರಿನ, ಅಂದರೆ ತಿಂಗಳಬೆಳಕಿನ ಚಂದ್ರನ ’ತಂಪು’ನೆಲ ತುಳಿದ ನಾವು ಇದೀಗ ಮಂಗಳಗ್ರಹದ ಅಂಗಳವನ್ನೂ ತಲುಪಿದ್ದೇವೆ. ಕಾಲಾಂತರದಲ್ಲಿ ನಮ್ಮ ಸಾಧನೆಯಿದು.

೭. ಹೀಗೆ ನಾವು ದಿಕ್ಕುದಿಕ್ಕುಗಳೆಡೆ ನಮ್ಮ ಗಮನ ಹರಿಸಿದ್ದೇವೆ, ಗತಿಶೀಲರಾಗಿದ್ದೇವೆ. ವಿಶ್ವ(ದ)ರೂಪವನ್ನರಿಯಲೆತ್ನಿಸುತ್ತಿದ್ದೇವೆ. ’ಆಚೆಗೆ’, ಅರ್ಥಾತ್, ಅಧ್ಯಾತ್ಮದೆಡೆಗೂ ನಮ್ಮ ಗಮನವನ್ನು ಹರಿಯಬಿಟ್ಟಿದ್ದೇವೆ. ಈ ನಮ್ಮ ಗತಿಯು ಕಾಲಕ್ರಮದಲ್ಲಿ ಬ್ರಹ್ಮಾಂಡದ ರಹಸ್ಯವನ್ನು ಒಡೆಯುತ್ತದೆಯೇ ಅಥವಾ ಈ ವಿಶ್ವವನ್ನೇ ಹೋಳುಮಾಡುತ್ತದೆಯೇ ಬಲ್ಲವರು ಯಾರು? ಇಂಥ ಯಾವುದೋ ಘಟನೆಗೆ ಆ ಸೃಷ್ಟಿಕರ್ತ ಹಾಕಿರುವ ಹೊಂಚೇ ಇದೆಲ್ಲ? ಸೃಷ್ಟಿಕರ್ತನೋ, ಈ ವಿಶ್ವದ ಇನ್ನಾವುದೋ ಶಕ್ತಿಯೋ ಅಥವಾ ಎಲ್ಲ ತಂತಾನೆಯೋ? ಇದೆಲ್ಲ ಉದ್ದೇಶಿತವೋ ಅನುದ್ದೇಶಿತವೋ? ಯಾರು ಬಲ್ಲರು? ಈ ಗೂಢಗಳನ್ನೊಳಗೊಂಡಿರುವ ’ಕಾಲ’ವೆಂಬ ಹಕ್ಕಿಯು ಹಾರುತ್ತಿದೆ. ಕಾಲ ಸಾಗುತ್ತಿದೆ.

ನನ್ನ ಅರಿವಿಗೆ ಈ ಕವನ ದಕ್ಕಿದ್ದು ಇಷ್ಟು. ನನಗೆ ದಕ್ಕದಿರುವ ಹೊಳಹು ಈ ಕವನದಲ್ಲಿ ಇರುವುದು ಸರ್ವಥಾ ಸಾಧ್ಯ. ಬೇಂದ್ರೆಯವರ ಕಾವ್ಯದ ಮಹತ್ತು ಅಂಥದು.

***

ಮೇಲ್ಕಂಡ ನನ್ನ ಲೇಖನವನ್ನೋದಿ ವಿಜಯಶೀಲ ಅವರು ಭಾವಪೂರ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಪ್ರತಿಕ್ರಿಯೆಯಲ್ಲಿ ವಿಜಯಶೀಲರ ವಿನಯಶೀಲ ಗೋಚರಿಸುತ್ತದೆ, ಮಾತ್ರವಲ್ಲ, ಬೇಂದ್ರೆಯವರ ಬಗ್ಗೆ ಮತ್ತು ಬೇಂದ್ರೆಯವರ ಕಾವ್ಯದ ಬಗ್ಗೆ ಅತ್ಯಂತ ಸೂಕ್ತ ಹಾಗೂ ಸಮರ್ಥ ನುಡಿಗಳಲ್ಲಿ ವಿಜೃಂಭಿಸಿರುವ ’ಕಾಣ್ಕೆ’ (ಗ)ಮನ ಸೆಳೆಯುತ್ತದೆ. ಇಂಗ್ಲಿಷ್‌ನಲ್ಲಿರುವ ಆ ಪ್ರತಿಕ್ರಿಯೆ ಇಂತಿದೆ.

***

I do not find suitable words in store in me to paint,
All that I wish to express my gratitude from deep heart,
My gratefulness and sincere thanks to you I owe,
For your prompt reply that mesmerised me with love.
My heart interpreted it as a gorgeous reward,
I was stunned from unique pleasure, an award.
*
Although to you I am totally a stranger,
Knowing little of me and what sort of a lit*voyageur (*literature)
Your prompt reply I treated it as a treasure,
I was overwhelmed from fabulous pleasure.
It was highly gracious of your preciousness,
It displayed possession of great heartedness,
You are very kind and profoundly friendly.
I consider it all as highly valuable and fondly.
2.
I am delighted to read your review of “hakki hArutide nODidira?”
of our ‘mahAkavi dA.rA. bEMdre’ for me ‘bikki nODe kannaDa caMdira’!
I read his works very fondly especially his lovely BAvagItegaLu
They could as well unhesitant be titled as BAratagItegaLu
*
His unique composing quality of poems very pretty.
Often my notion felt his fingers were lead by a Deity.
He displayed affluent meanings of merit in metaphors,
undoubtedly a natural style of renowned philosophers.
*
Each content possessing great significance, plural,
In Kannada language in its versatility, supernatural,
In poetry depicted beauty of colourful corals under the ocean,
His compositions similar to that of musical fascination,
*
written for classical dances not easy to hold in photography,
with rhythms and ‘tALa’ to the fast movements in choreography.
His magical words-composition comparable to juggling
of Kannada ‘nuDigaLu’ creating figures scintillating, dazzling.
*
unique fascination arresting sensual eyes hypnotised gazes,
Rare to find such magical allures in other works and languages.
I steadfastly wondered of his geniality to disclose versatilities,
and endless gallery of Kannada nuDivaikari, in so many varieties.

~*~

I read twice with concentration your review of “hakki hArutide nODidira?”. I must confess, I am not sure, if I am capable to understand comprehensively, the wide ranged significance, as you appropriately described at the end, displaying your gentle modesty. I fear, I may not dare to transliterate it, a free translation, a paraphrase = BAvAnuvAda. It is not easy to reflect the same beauty, to reproduce the same sort of manifold and multiplex of ‘oLArtha’ portrayed in the original BAvagIte in multiple quality, the ‘vastu padArtha’!
*
My main idea to request you to describe the significance of the poem was to perform ‘BAvAnuvAda’. with all the elements described in the original work. It will be enormous. For such a high grade task one needs multiple ability and aptitudes. One must be an all-round talent, possessing profound knowledge in multitudes, of Languages and vocabulary, the literary artistic in writing poems, a philosopher’s mind to reproduce the original gist in transformation too with rhymes and rhythms.
*
I am telling this even though it is not my first endeavour in this field, free translation = ‘BAvAnuvAda’. Many a time I was quite successful. Sri. Vishvanath Hulikal and SrImati Dongre had appreciated a couple of my compositions. I had published 7 years ago one book: "gOete! jermaniya mahAkaviya kavana saMkalana mattu itarara kavanagaLu".
*
Your masterly ‘BAvArthavivarraNa’ I feel sincerely belongs to be presented to all the Kannada lovers as you conceived from the very first moment. In Sampada I have seen a couple of talented ‘kannaDa AbhimAnigaLu’ and they would find their pleasure in reading your article ‘BAvArthavivarraNa’. I realise now my ambition was quite a bit high up unreachable to be grabbed by my minimal literary ability.
*
Often not even simple words or speeches are not easy to be translated into other languages to reproduce the original significance. Some words cannot be translated into other words of another language. They require a long explanation. And to translate a whole composition of a great visionary philosopher in poetry would be a mountainous task. In this situation I leave my original idea to sway with the future, not easy to tell, ‘what will be, will be’.
*
Please be gracious to pardon me if any mistake has appeared unaware of my consciousness or otherwise. Please excuse me if I have strained your patience.
*
Everything has a cause. It is not out of self-assertion or naive pride or out of comfort to write in English. Now and then I knock at my limit to write in Kannada fluently due to my environment life almost in ‘aj~jAtavAsa’.

***

ಕಾವ್ಯಾರ್ಥಕ್ಕಾಗಿ ವಿಜಯಶೀಲ ಅವರು ನನ್ನಲ್ಲಿ ಮಾಡಿಕೊಂಡ ಕೋರಿಕೆ, ನನ್ನ ಲೇಖನರೂಪಿ ಉತ್ತರ, ಅದಕ್ಕೆ ವಿಜಯಶೀಲರ ಭಾವಪೂರ್ಣ ಪ್ರತಿಕ್ರಿಯೆ, ಇದೀಗ ಈ ಬರಹಗುಚ್ಛವನ್ನೋದುತ್ತಿರುವ ನಿಮ್ಮೊಡನೆ ನನ್ನೀ ಸಾಹಿತ್ಯಸಾಂಗತ್ಯ, ಇವನ್ನೆಲ್ಲ ಗಮನಿಸಿದಾಗ, ’ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್’, ಎಂಬ ’ಹಿತೋಪದೇಶ’ದ ನುಡಿ ನನಗೆ ನೆನಪಿಗೆ ಬರುತ್ತದೆ. ನಮ್ಮನ್ನು ನಾವು ಧೀಮಂತರೆಂದು ಗುರುತಿಸಿಕೊಳ್ಳುವುದರಲ್ಲಿ ತಪ್ಪೇನಿದೆ?

---೦---

ಶುಕ್ರವಾರ, ಜೂನ್ 19, 2009

ಕೃಷ್ಣಯ್ಯ ಶೆಟ್ಟರ ಕಥೆ!

ರಾಜ್ಯ ಸರ್ಕಾರದ ಮುಜರಾಯಿ ಖಾತೆ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟರಿಂದ ರಾಜೀನಾಮೆ ಪಡೆದು ’ಆಪರೇಷನ್ ಕಮಲಾಗತ’ ಸೋಮಣ್ಣನಿಗೆ ಸಚಿವ ಸಾನ ನೀಡಿ ಕೃಷ್ಣಯ್ಯ ಶೆಟ್ಟರನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಬೆಳವಣಿಗೆಯಲ್ಲಿ ನಾವು ಗಮನಿಸಬಹುದಾದ ಮೋಜಿನ ಅಂಶಗಳು ಇಂತಿವೆ:
* ಕೃಷ್ಣಯ್ಯ ಶೆಟ್ಟರು ದೇವಸ್ಥಾನದಿಂದ ಸೀದಾ ಒಳಚರಂಡಿಗೆ!
* ಹಿಂದೊಮ್ಮೆ ಗಂಗಾಜಲ ಸರಬರಾಜು ಮಾಡಿದ್ದ ಶೆಟ್ಟರಿಂದ ಇನ್ನುಮುಂದೆ ಬರಿ ನೀರು ಸರಬರಾಜು.
* ’ಆಪರೇಷನ್ ಕಮಲ’ದಲ್ಲಿ ಕಮಲ ಒಲಿದದ್ದು ಸೋಮಣ್ಣನಿಗೆ; ಆಪರೇಷನ್ ಆಗಿದ್ದು ಕೃಷ್ಣಯ್ಯ ಶೆಟ್ಟರಿಗೆ!
* ಕೃಷ್ಣಯ್ಯ ಶೆಟ್ಟರ ಮಂತ್ರಿಪದವಿ ಕೃಷ್ಣಾರ್ಪಣ!
* ಶೆಟ್ಟರು ಹಂಚಿದ್ದು ಲಡ್ಡು; ಅವರಿಗೆ ಸಿಕ್ಕಿದ್ದು ಚಿಪ್ಪು!
* ಶೆಟ್ಟರದು ರಾಜೀನಾಮೆ ಅಲ್ಲ, ರಾಜಿ ಮತ್ತು ನಾಮ!!!
* ಸಿಎಂ ಹೆಸರಲ್ಲಿ ಪೂಜೆ ಮಾಡಿಸಿದರೂ ಶೆಟ್ಟರಿಗೆ ಸಿಎಮ್ಮಿಂದ ಪೂಜೆ ತಪ್ಪಲಿಲ್ಲ!
* ’ಭೂಕೈಲಾಸ’ ಚಿತ್ರದ ಹಾಡು: ’ರಾಮನ ಅವತಾರಾ, ರಘುಕುಲ ಸೋಮನ ಅವತಾರ’.
’ಬೂಸಿಯ ಕೈವಾಡ’ (ವಿ)ಚಿತ್ರದ ಹಾಡು: ’ಸೋಮನ ಅವತಾರಾ, ವೈಶ್ಯಕುಲ ಕೃಷ್ಣಗೆ ಗ್ರಹಚಾರ’!
* ಉಡುಪಿಯಲ್ಲಿ ’ಕೃಷ್ಣಪೂಜೆ ವಿವಾದ’ ಆಯಿತು; ದೆಹಲಿಯಲ್ಲಿ ಎಸ್ಸೆಂ ಕೃಷ್ಣಗೆ ಅನಿರೀಕ್ಷಿತವಾಗಿ ಮಂತ್ರಿಪದವಿ ದೊರಕಿತು; ಬೆಂಗಳೂರಲ್ಲಿ ಕೃಷ್ಣಯ್ಯ ಶೆಟ್ಟರಿಗೆ ಮಂತ್ರಿಪದವಿ ಕೈತಪ್ಪಿಹೋಯಿತು.
ಎಲ್ಲ ಕೃಷ್ಣಲೀಲೆ!

ಗುರುವಾರ, ಜೂನ್ 18, 2009

ಒಬಾಮ ನೊಣ ಹೊಡೆದ

’ಶತ್ರುಸಂಹಾರನಿಪುಣ’ ಅಮೆರಿಕದ ಅಧ್ಯಕ್ಷರು ತಮ್ಮ ಶ್ವೇತಭವನದೊಳಗೇ ಶತ್ರುಸಂಹಾರಕಾರ್ಯ ಕೈಗೊಂಡಿದ್ದಾರೆ! ತಮ್ಮ ಕೈಮೇಲೆ ಕೂತ ಬಡಪಾಯಿ ನೊಣವೊಂದನ್ನು ಹೊಡೆದುರುಳಿಸಿದ್ದಾರೆ!

ಒಬಾಮ ನೊಣ ಹೊಡೆದರೂ ಅದು ಸುದ್ದಿ!
ಅಮೆರಿಕದ ಗತ್ತೇ ಅಂಥಾದ್ದು, ಬುದ್ಧೀ!
ಆರ್ಥಿಕ ಹಿಂಜರಿತದಿಂದ ಅಲ್ಲೀಗ
ನೊಣಹೊಡೆಯುವರ ಸಂಖ್ಯೆ ಹೆಚ್ಚುತಿದೆ ಬೇಗ!

(ದೇಶಗಳನ್ನೇ ನುಂಗಿ ನೊಣೆಯುವವರಿಗೆ
ನೊಣ ಹೊಡೆಯುವುದು ಯಾವ ಮಹಾ ಕೆಲಸ
ಅಂತೀರಾ?)

ದೋನಿ vs ಅಭಿಮಾನಿ

’ಟ್ವೆಂಟಿ20 ಸೋಲಿಗೆ ಗಾಯದ್ದೇ ಸಮಸ್ಯೆ’
ಅಭಿಮಾನಿಗಳ ಎದೆಗೂ ಗಾಯದ್ದೇ ಸಮಸ್ಯೆ!

’ಐಪಿಎಲ್ ಬಳಲಾಟ ಸೋಲಿಗೆ ಕಾರಣವಲ್ಲ’
ಅಭಿಮಾನಿಗಳ ತೊಳಲಾಟ ದಾರುಣವಾಗಿದೆಯಲ್ಲ!

’ಆಟಗಾರರಿಗೆ ವಿಶ್ರಾಂತಿ ಇರಲಿಲ್ಲ’
ಅಭಿಮಾನಿಗಳ ಮನಸ್ಸಿಗೆ ಶಾಂತಿ ಇಲ್ಲ!

’ಫಿಟ್ಟಾಗಿಲ್ಲದವರು ಆಟವಾಡಿದರು’
ಸಿಟ್ಟಾಗಿ ಅಭಿಮಾನಿಗಳು ಗಲಾಟೆಮಾಡಿದರು!

’ವೆಸ್ಟ್ ಇಂಡೀಸ್‌ನಲ್ಲಿ ನೋಡಿ, ಗೆಲುವಿನ ಓಟ’
’ಬೆಸ್ಟ್ ಲಕ್’ ಅನ್ನುತ್ತೆ ಅಭಿಮಾನಿ ಕೂಟ

ಬುಧವಾರ, ಜೂನ್ 17, 2009

ಟ್ವೆಂಟಿ20: ಪೋಸ್ಟ್ ಮಾರ್ಟಮ್

ಗಬ್ಬರ್ ಸಿಂಗ್ ಹೇಳ್ತಾನೆ ಷೋಲೆ ಫಿಲಂನಲ್ಲಿ,
’ತೀನೋ ಬಚ್ ಗಯೇ!’
ಆಡಿದ್ದು ಮೂರಾಟ ಸೂಪರ್ ಎಯ್ಟ್‌ನಲ್ಲಿ,
’ತೀನೋ ಹಾರ್ ಗಯೇ!’

ಗಬ್ಬರ್ ಸಿಂಗ್ ಕುದೀತಿದ್ದ,
ಅವನ ಬಂಟರು ಔಟ್!
ಮಹೇಂದ್ರ ಸಿಂಗ್ ಜಾರಿಬಿದ್ದ,
ಅವನ ಟೀಮೇ ಔಟ್!

ಪಾಕ್, ಶ್ರೀಲಂಕಾ ಪಾಸಾದವು,
ಭಾರತ ಮಾತ್ರ ಫೇಲಾಯ್ತು!
ಪುಟಗೋಸಿ ದೇಶಗಳು ಮೆರೆದವು,
ಮಹಾನ್ ಭಾರತ ಸೊರಗಿತು!

ಇದು ಈ ಸಲದ ಟ್ವೆಂಟಿ20 ಯಲ್ಲಿ
ಭವ್ಯ ಭಾರತದ ಕಥೆಯು ಮಗಾ.
ಐಪಿಎಲ್‌ನ ದುಡ್ಡಿನ ಮುಂದೆ
ದೇಶದ ಗೌರವ ಗೌಣ ಮಗಾ!

(ನನ್ನ ಹಿರಿಯ ಮಿತ್ರರೋರ್ವರ ಉವಾಚ ಈ ಕೆಳಗಿನದು)

ಆಂಟಿ ಆಂಟಿ ಟ್ವೆಂಟಿ ಟ್ವೆಂಟಿ
ಇಡೀ ಟೀಮು ಫೋರ್ ಟ್ವೆಂಟಿ
ಅಲ್ವೆಮತ್ತೆ ಹೇಳಿ ಆಂಟಿ
ಕೂತಿರ್ತೀರಾ ಟಿವಿಗೆ ಅಂಟಿ
ಧೋನಿ ಅನ್ನೋ ಶುದ್ಧಶುಂಠಿ
ತಗೋಬೇಕು ಟಿಕ್ ಟ್ವೆಂಟಿ!

-ತರ್ಲೆ ತಾಪತ್ರಯಪ್ಪ

ಸೋಮವಾರ, ಜೂನ್ 15, 2009

ಟ್ವೆಂಟಿ20 ಚರಮಗೀತೆ!

ಟ್ವೆಂಟಿ20 ಇಂದ ಭಾರತ ಹೊರಕ್ಕೆ
ದೋನಿಯ ದೋಣಿ ಸಾಗಲಿಲ್ಲ ದಡಕ್ಕೆ!

ಗೌತಮ್ ಗಂಭೀರೇನೋ ಗಂಭೀರ್‍ವಾಗೇ ಆಡ್ದ
ಸುರೇಶ್ ರೈನಾ ಮಾತ್ರ ಹುಡುಗಾಟವಾಡ್ದ!
ಸುರಿಸ್ಲಿಲ್ಲ ರನ್‌ಗಳ ರೈನನ್ನ ಆತ
ಎರಡು ರನ್ನಿಗೇ ಪಾಪ, ಹೊಡೆದ್ಬಿಟ್ಟ ಗೋತಾ!

ಜಡೇಜಾ ಜಡವಾದ; ಯುವರಾಜ ಅಡ್ಡಿಯಿಲ್ಲ
ದೋನಿ, ಪಠಾಣ್ ಅಂತೂ ಮಸ್ತ್ ಆಡಿದರಲ್ಲ!
ಆದರೂ ಕೊನೇಲವರು ಯಶಸ್ವಿಯಾಗ್ಲಿಲ್ಲ
ಸೈಡ್‌ಬಾಟಮ್ ಫ್ರಂಟಲ್ಲವರಾಟ ನಡೀಲಿಲ್ಲ!

ಟ್ವೆಂಟಿ20 ಕಪ್ಪಿನ ಚಾನ್ಸು ಝೀರೋ ಆಯ್ತಲ್ಲಾ!
ಜಾಹಿರಾತಿಗೆ ಕೊಟ್ಟರು ಗಮನ, ಕ್ರಿಕೆಟ್‌ಗೆ ಕೊಡಲಿಲ್ಲ!

ಬುಧವಾರ, ಜೂನ್ 3, 2009

ಎಂಥ ಮನುಷ್ಯರಿವರು?

* ಎಲ್.ಕೆ.ಅಡ್ವಾಣಿ ’ಉಕ್ಕಿನ ಮನುಷ್ಯ’.
* ಅರ್ಜುನ್ ಸಿಂಗ್ ’ತುಕ್ಕಿನ ಮನುಷ್ಯ’.
* ಬಾಳ್ ಠಾಕ್ರೆ ’ಸೊಕ್ಕಿನ ಮನುಷ್ಯ’.
* ಅಬ್ದುಲ್ ಕರೀಂ ತೆಲಗಿ ’ಠಕ್ಕಿನ ಮನುಷ್ಯ’.
* ರಾಮೇಶ್ವರ ಠಾಕುರ್ ’ಸುಕ್ಕಿನ ಮನುಷ್ಯ’.
* ರಾಹುಲ್ ಗಾಂಧಿ ’ಲುಕ್ಕಿನ ಮನುಷ್ಯ’.
* ಜನಾರ್ದನಸ್ವಾಮಿ ’ಲಕ್ಕಿನ ಮನುಷ್ಯ’.
* ಅರವಿಂದ ಅಡಿಗ ’ಬುಕ್ಕಿನ ಮನುಷ್ಯ’.
* ಮುಖೇಶ್ ಅಂಬಾನಿ ’ಚೆಕ್ಕಿನ ಮನುಷ್ಯ’.
* ಪುನೀತ್ ರಾಜ್‌ಕುಮಾರ್ ’ಕೊಕ್ಕಿನ ಮನುಷ್ಯ’.
* ಶ್ರೀಸಾಮಾನ್ಯ ’ಹಕ್ಕಿನ ಮನುಷ್ಯ’.
* ಯೆಂಡ್ಕುಡ್ಕ ರತ್ನ ’ಕಿಕ್ಕಿನ ಮನುಷ್ಯ’.
* ಕುಮಾರಸ್ವಾಮಿ ’ಬೆಕ್ಕಿನ ಮನುಷ್ಯ’.
(ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತೆ; ಕುಮಾರಣ್ಣ ಮುಖ ಮುಚ್ಚಿಕೊಂಡು ಸೋನಿಯಾ ಭೇಟಿಗೆ ಹೋಗ್ತಾರೆ.)
* ದೇವೇಗೌಡರು ’ಹುಕ್ಕಿನ ಮನುಷ್ಯ’.
(ಹುಕ್ ಅಂದರೆ ಕೊಕ್ಕೆ. ’ನೈಸ್’, ರಫ್, ಎಲ್ಲಾ ಯೋಜನೆಗಳಿಗೂ ಗೌಡರ ಕೊಕ್ಕೆ!)

ಸೋಮವಾರ, ಜೂನ್ 1, 2009

ಕೆಣಕು ನೋಟ!

* ಆರು ತಿಂಗಳು ಮಾತ್ರ ವಿಪಕ್ಷ ನಾಯಕನಾಗಿರಲು ಒಪ್ಪಿದ್ದಾರೆ ಆಡ್ವಾಣಿ.
- ಸಿದ್ರಾಮಯ್ಯ ಈ ಸುದ್ದಿ ಓದಬೇಕು!
***
* ಪ್ರತಿಪಕ್ಷದಲ್ಲಿ ಕೂರಲು ಮುಲಾಯಂ ಸಿದ್ಧ.
- ದ್ರಾಕ್ಷಿ ಹಿಡಿಯಲು ಹೋಗಿ ಹೊತಗೊಂಡು ಬಿದ್ದ!
***
* ಲಾಲೂ ಲೆಕ್ಕಾಚಾರ ಯಾಕೆ ತಲೆಕೆಳಗಾಯಿತು?
- ಮಾಜಿ ಮುಖ್ಯಮಂತ್ರಿಯಾದ ರಾಬ್ಡಿದೇವಿಯ ಮಾತು ಕೇಳಿರಬೇಕು!
***
* ಡಿಎಂಕೆ ಸಂಸದರಲ್ಲಿ ತನ್ನ ಬಂಧುಗಳೇ ಏಳು ಮಂದಿ ಇದ್ದಿದ್ದರೆ ಆಗ ಕರುಣಾನಿಧಿಯು ಮಂತ್ರಿ ಪದವಿ ಅರಸಿ ಬರುವ ಇತರ ಸಂಸದರಿಗೆ ಏನು ಹೇಳುತ್ತಿದ್ದರು?
- ’ಏಳೇಳು ಶರಧಿಯು ಏಕವಾಗಿದೆ ಕಂಡ್ಯ, ಏಕೆ ಬಂದೆಯೋ ಎಲೆ ಕೋತಿ!’
***
* ಲೋಕಸಭೆಯಲ್ಲಿನ್ನು ನಾಲ್ವರು ಗಾಂಧಿಗಳು.
- ಅಲ್ಲ. ಎರಡು ಜೋಡಿ.
***
* ದೆಹಲಿಯಲ್ಲಿ ಕುಮಾರಸ್ವಾಮಿ ಮಂತ್ರಿ ಪದವಿ ವಿಷಯ ಮಾತಾಡಿಲ್ಲವಂತೆ.
- ಹಾಗಾದರೆ ದೆಹಲಿಯಲ್ಲಿ ಅವರು ಮಾಡಿದ್ದು ಡ್ರಾಮ ವಾಸ್ತವ್ಯ!
***
* ಕುಮಾರನ ದೆಹಲಿ ಯಾತ್ರೆ ವಿಷಯ ದೇವೇಗೌಡ್ರಿಗೆ ಗೊತ್ತಿರಲೇ ಇಲ್ಲವಂತೆ!
- ತಾನು ಪ್ರಧಾನಿಯಾಗೋದೇ ಗೊತ್ತಿರ್‍ಲಿಲ್ಲ ಪಾಪ! (ಪ್ರಧಾನಿಯಾದಮೇಲೂ ಏನೂ ಗೊತ್ತಾಗ್ತಿರ್‍ಲಿಲ್ಲ, ಆ ಮಾತು ಬೇರೆ.)
***
* ’ಕುಮಾರಸ್ವಾಮಿ ತನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಿ’, ಎಂದು ಸದಾನಂದಗೌಡರು ವ್ಯಂಗ್ಯವಾಡಿದ್ದಾರೆ.
- ವೈಎಸ್‌ವಿ ದತ್ತನ್ನ ಕೇಳಿ ಈ ಮಾತಿಗೆ ಉತ್ತರ ಕೊಡ್ತಾರೆ ಕುಮಾರಸ್ವಾಮಿ ಸ್ವಲ್ಪ ಇರಿ.
***
* ಕಾಂಗ್ರೆಸ್ ಹಿನ್ನಡೆಯ ಕಾರಣ ಗುರುತಿಸಲು ರಾಜಶೇಖರನ್ ನೇತೃತ್ವದಲ್ಲಿ ಸಮಿತಿ.
- ಅಂತೂ ರಾಜಶೇಖರನ್‌ಗೆ ಒಂದು ಕೆಲಸ ಸಿಕ್ಕಿತು.
***
* ಯಡಿಯೂರಪ್ಪನವರು ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯಿದೆ.
- ’ವರ್ತೂರು ಪ್ರಕಾಶ್ ಅಭಿಮಾನಿಗಳ ಸಂಘ’ವು ಫ್ಲೆಕ್ಸ್‌ಗಳನ್ನು ಹಾಕಲು ಸ್ಥಳಗಳನ್ನು ಗುರುತಿಸತೊಡಗಿದೆ.
***
* ಪಾಪಿ ಪ್ರಭಾಕರನ್ ಹತ್ಯೆಯಾಗಿಹೋದ ಪಾಪ!
- ತಮಿಳುನಾಡಿನಲ್ಲಿ ಎಲೆಕ್ಷನ್ ರಿಸಲ್ಟ್ ಏರುಪೇರು ಮಾಡಿ ಸತ್ತ ಭೂಪ!
***
* ಕ್ರಿಕೆಟ್ ಹುಚ್ಚಿನ ಹುಡುಗರನ್ನು ಎಲೆಕ್ಷನ್ ರಿಸಲ್ಟ್ ಬಗ್ಗೆ ಕೇಳಿದರೆ ಏನಂತ ಉತ್ತರ ಕೊಡ್ತಾರೆ?
- ’ಇಟಲಿ ಗೆದ್ದಿತು, ಇಂಡಿಯಾ ಸೋತಿತು.’
ಎಷ್ಟು ಅರ್ಥಪೂರ್ಣ ಈ ಉತ್ತರ!
***
* ಕೋಡಿಮಠದ ಭವಿಷ್ಯವಾಣಿ ಪ್ರಕಾರ ನೂತನ ಕೇಂದ್ರ ಸರ್ಕಾರದ ಆಡಳಿತ ಕೇವಲ ಎರಡೇ ವರ್ಷ!
- ಅನಂತರ ಕೋಡಿಮಠದ ಆಡಳಿತ.
***
* ಸಿಂಗ್ ನಂತರ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯೆ?
- ಆಗಿದ್ದಾದರೆ ಆತ ಮುಂದಿನ ಪ್ರಧಾನಿಯೇ. ಸಿಂಗರಂತೆ ಮೇಡಂ ಹಿಂದಿನ ಪ್ರಧಾನಿ ಆಗುಳಿಯಲಾರ.
***
* ಕ್ರಿಕೆಟ್‌ನಲ್ಲಿ ಜೀವಮಾನದ ನಿಷೇಧ; ಆದರೆ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲಬಹುದೇ?!
- ಲೋಕಸಭೆಯು ಈ ದೇಶಕ್ಕೆ ಕ್ರಿಕೆಟ್‌ನಷ್ಟು ಮುಖ್ಯ ಅಲ್ಲವಲ್ಲಾ, ಆದ್ದರಿಂದ ಪರ್ಮಿಷನ್ ನೀಡಲಾಗಿದೆ.
***
* ಮೊಯ್ಲಿ ಒಂದುವೇಳೆ ಚುನಾವಣೆಯಲ್ಲಿ ಸೋತಿದ್ದರೆ?
- ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ರಚನೆ ಆರಂಭಿಸುತ್ತಿದ್ದರು!
***
* ಕೇಂದ್ರ ಮಂತ್ರಿಮಂಡಲದಲ್ಲಿ ಈ ಸಲ ರಾಜ್ಯದ ನಾಲ್ವರಿಗೆ ಸ್ಥಾನ. (ಜೈರಾಮ್ ರಮೇಶ್ ಸೇರಿ ಐದು.)
- ’ಕೈ’ಗಾರಿಕಾ ರಂಗದಲ್ಲಿ ಕರ್ನಾಟಕದ ಪ್ರಗತಿ!
***
* ಎಂಎಂ ಸಿಂಗ್ ಮತ್ತು ಎಸ್‌ಎಂ ಕೃಷ್ಣ ಇವರ ನಡುವೆ ಇರುವ ಹೋಲಿಕೆಗಳು:
- ಇಬ್ಬರೂ ಜನರಿಂದ ಚುನಾಯಿತರಾಗದೆಯೇ ಮಂತ್ರಿಪದವಿ ಗಿಟ್ಟಿಸಿದ ಅದೃಷ್ಟವಂತರು!
(ಮಂತ್ರಿಪದವಿ ಇಲ್ಲದೆಯೇ ಸೂಪರ್ ಪ್ರಧಾನಮಂತ್ರಿ ಸೋನಿಯಾ ಮೇಡಂ!)
- ಎಂಎಂ, ಎಸ್‌ಎಂ ಇಬ್ಬರೂ ಫಾರಿನ್ ಸ್ಟಡೀಡ್ ಮತ್ತು ಫಾರಿನ್ ಮೈಂಡೆಡ್!
(ಮೇಡಂ ಫಾರಿನ್ ಬ್ರ್ಯಾಂಡೆಡ್!)
- ಎಂಎಂ ಎಸ್‌ಎಂ ಇಬ್ಬರೂ ಮೇಡಮ್‌ನ ಆಜ್ಞಾನುವರ್ತಿಗಳು!
(ಆದ್ದರಿಂದಲೇ ಮೇಡಂ ಇವರನ್ನು ಮಂತ್ರಿ ಮಾಡಿದ್ದು! ಅದೂ ಕೂಡ ಫಾರಿನ್ ಮಂತ್ರಿ!)
***
* ಕಮಲನಾಥ್ ಅವರು ರಾಷ್ಟ್ರಪತಿ ಬೋಧಿಸುವ ಮೊದಲೇ ಪ್ರಮಾಣವಚನ ಆರಂಭಿಸಿದರು! ಸಹಿಮಾಡದೇ ವಾಪಸಾದರು! ಯಾಕೆ ಹೀಗೆಲ್ಲ?
- ’ಬಿಜೆಪಿ ಚಿಹ್ನೆಯ ಹೆಸರಿಟ್ಕೊಂಡಿದ್ದೀರಲ್ಲಾ’, ಅಂತ ಅದೇ ತಾನೇ ಯಾರೋ ಛೇಡಿಸಿದ್ದರು! ಹಾಗಾಗಿ ಮೈಂಡ್ ಆಫ್ ಆಗಿಬಿಟ್ಟಿತ್ತು!
***
* ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಯಾಗಿ ಧನಂಜಯಕುಮಾರ್ ನೇಮಕ.
- ರಣಾಂಗಣದ ಒಳಗೆ (ಲಾಲ್)ಕೃಷ್ಣ, ಹೊರಗೆ ಧನಂಜಯ!
***
* ರಾಷ್ಟ್ರ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ?
- ’ಅಲ್ಲ, ಲೋಬಾನದ ಹೊಗೆ’, ಅನ್ನುತ್ತಿದ್ದಾರೆ ವೆಂಕಯ್ಯ ನಾಯ್ಡು.
***
* ಚುನಾವಣೆಯಲ್ಲಿ ದುಡಿದದ್ದಕ್ಕೆ ಪ್ರತಿಫಲವಾಗಿ ಕೆಲವರಿಗೆ ಯಡಿಯೂರಪ್ಪ ನಿಗಮ-ಮಂಡಳಿ ಸ್ಥಾನ ಕೊಡಲಿದ್ದಾರೆ.
- ಕೋ-ಆಪರೇಷನ್ ಕಮಲ!
***
* ಯತ್ನಾಳ್‌ಗೆ ಬಿಜೆಪಿಯಿಂದ ಗೇಟ್‌ಪಾಸ್.
- ಆಪರೇಷನ್ ಕಪಾಲ(ಮೋಕ್ಷ)!
- ಯತ್ನಾಳ್ ಪಾಲಿಗಿದು ಆಪರೇಷನ್ ಕರಾಲ!
***
* ಪಾಕ್‌ಗೆ ಅಮೆರಿಕದ ನೆರವು ಮೂರುಪಟ್ಟು ಹೆಚ್ಚಳ.
- ಅಮೆರಿಕದ ಗುರಿ ಭಾರತ ಎಂಬುದು ಇದರಿಂದ ಇನ್ನೊಮ್ಮೆ ನಿಚ್ಚಳ.
***
* ಎಸ್.ಎಂ. ಕೃಷ್ಣ ಹೆಗಲಿಗೆ ವಿದೇಶಾಂಗ ಖಾತೆ.
- ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದ ’ವಿಶ್ವಾಮಿತ್ರ’ನಿಗೆ ಈಗ ವಿಶ್ವದೆದುರು ಭಾರತವನ್ನು ಸಿಂಗರಿಸುವ ಸದವಕಾಶ. ಫಲಿತಾಂಶ ಕಾದುನೋಡೋಣ.
***
* ಖಾತಾವಾರು ಮುನ್ನೋಟ:
- ಪ್ರಣಬ್ ಮುಖರ್ಜಿ ಇನ್ನು ಜೆಟ್ ಏರಿ ವಿದೇಶಗಳಿಗೆ ಹಾರುವುದನ್ನು ನಿಲ್ಲಿಸಿ ಬಜೆಟ್ ಮಂಡಿಸಬಹುದು.
- ಶರದ್ ಪವಾರ್ ಕ್ರಿಕೆಟ್ ವ್ಯವಸಾಯಕ್ಕೆ ಮರಳಬಹುದು.
- ಎ.ಕೆ.ಆಂಟನಿ ಎ.ಕೆ.೪೭ ಹಿಡಕೊಂಡು, ’ಏಕೆ ಹೀಗಾಡ್ತಿ?’ ಅಂತ ಪಾಕಿಸ್ತಾನವನ್ನು ಗದರಬಹುದು.
- ಚಿದಂಬರಂ ಗೃಹಖಾತೆಯ ಉಗ್ರದಮನವೈಫಲ್ಯದ ಚಿದಂಬರ ರಹಸ್ಯವನ್ನು ಅರಿಯಲೆತ್ನಿಸಬಹುದು.
- ಮಮತಾ ಬ್ಯಾನರ್ಜಿ ನ್ಯಾನೊ ಕಾರು ಬಿಟ್ಟು ಟ್ರೈನ್ ಏರಬಹುದು. ’ಅಷ್ಟು ಸಣ್ಣ ಕಾರು ಹೋದರೇನಾಯ್ತು, ಇಷ್ಟು ದೊಡ್ಡ ಟ್ರೈನನ್ನೇ ತಗೊಂಡ್ಬಂದಿದೀನಿ ನೋಡಿ’, ಅಂತ ಬಂಗಾಳಿ ಬಾಬುಗಳನ್ನು ಸಮಾಧಾನಪಡಿಸಬಹುದು.
- ಎಸ್.ಎಂ.ಕೃಷ್ಣ ಆರಾಮಾಗಿ ವಿದೇಶಯಾತ್ರೆ ಮಾಡಿಕೊಂಡಿರಬಹುದು. ಸಮುದ್ರ ದಾಟಿ ವಿದೇಶಯಾತ್ರೆ ಮಾಡಿಬಂದವರು (ಉಡುಪಿಯ) ಕೃಷ್ಣಪೂಜೆ ಮಾಡಬಾರದೆಂದಿದೆಯೇ ಹೊರತು ಕೃಷ್ಣನು ವಿದೇಶಯಾತ್ರೆ ಮಾಡಬಾರದೆಂದೇನಿಲ್ಲ. ವಿದೇಶಗಳಲ್ಲಿ ಇನ್ನೂ ಆಕರ್ಷಕ ಕೂದಲ ಕುಲಾವಿ (ವಿಗ್) ಸಿಕ್ಕೀತು. ಟ್ರೈ ಮಾಡಲಡ್ಡಿಯಿಲ್ಲ.
***
* ಮಂತ್ರಿಗಿರಿಯ ವಿಷಯವಾಗಿರಲಿ, ಕಾವೇರಿಯ ವಿಷಯವಾಗಿರಲಿ, ಡಿಎಂಕೆಯದು
- ’ದ್ರಾವಿಡ ಮುನ್ನೇತ್ರ ಕಾಳಗಂ’!
***
* ಹೆಂಗಸು ಪ್ರಧಾನಿ ಆಗ್ತಾರೆ ಅಂದಿದ್ದರು ಕೋಡಿಮಠದ ಸ್ವಾಮೀಜಿ!
- ಕರೆಕ್ಟ್ ಹೇಳಿದ್ದಾರೆ. ಹೆಂಗಸೇ ತಾನೆ ಪ್ರಧಾನಿ!
***
* ಇಲ್ಲೊಬ್ಬ, ’ಹುಚ್ಚುಖೋಡಿಮಠ’, ಅಂತಾನೆ!
- ಅಯ್ಯೋ, ಅವನಿಗೆ ಸುಮ್ಮನಿರೋಕೆ ಹೇಳಿ. ಇಲ್ಲದಿದ್ದರೆ ಸ್ವಾಮೀಜಿ ಅವನ ಭವಿಷ್ಯ ಹೇಳಿಬಿಡ್ತಾರೆ!
***
* ವಿರೋಧದ ನಡುವೆಯೂ ಗುಂಡ್ಯ ಯೋಜನೆಗೆ ಯಡಿಯೂರಪ್ಪನವರಿಂದ ಶಿಲಾನ್ಯಾಸ.
- ಪ್ರಚಾರದ ನಡುವೆಯೂ ಮಂಡ್ಯ ಯೋಜನೆಯಲ್ಲಿ ಅಂಬರೀಷ್‌ಗೆ ಸೋಲಿನ ಸಹವಾಸ!
***
* ರೆಡ್ಡಿ ಸೋದರರು ಯಡ್ಯೂರ್ ಸರ್ಕಾರ ಉರುಳಿಸಲೆತ್ನಿಸುತ್ತಿದ್ದಾರೆಯೆ?
- ಬುದ್ಧಿವಂತರು ತಾವು ಕುಳಿತ ರೆಂಬೆಯನ್ನೇ ಕಡಿಯಲೆತ್ನಿಸುತ್ತಾರೆಯೆ?
***
* ದಲಿತರು ಅಸಮರ್ಥರಲ್ಲ, ನಾನು ಭ್ರಷ್ಟಾಚಾರಿಯಲ್ಲ: ಸುಭಾಷ್ ಭರಣಿ
- ಪೂರ್ವಾರ್ಧವನ್ನು ಒಪ್ಪಲಾಗುವುದು
***
* ಈಶ್ವರಪ್ಪ, ನಾನು ಭಾಯಿ ಭಾಯಿ: ಯಡಿಯೂರಪ್ಪ
- ಭಾಯಿ ಭಾಯಿ ಅಲ್ಲ, ಬಾಯಿ ಬಾಯಿ: ತಿಪ್ಪೇಶಿ
***
* ಸಿಖ್ ಪಂಗಡಗಳ ಘರ್ಷಣೆ, ಪ್ರತಿಭಟನೆ, ಹಿಂಸೆ.
- ಅಪ್ರತಿಮ ರಾಷ್ಟ್ರಪ್ರೇಮಿ ಸಿಖ್ಖರೇ ಅಂತಃಕಲಹದ ಸುಳಿಗೆ ಸಿಕ್ಕರೇ?!
***
ಕಳೆದ ಸಲ ಲಾಸ್ಟು, ಈ ಸಲ ಫಸ್ಟು
’ಚಾರ್ಜರ್ಸ್’ ಎದುರು ’ಚಾಲೆಂಜ್’ ವೇಸ್ಟು
’ರಾಜಸ್ತಾನ್ ರಾಯಲ್ಸ್’ ಈಗ ’ರಾಜಸ್ತಾನ್ ಡೆಸರ್ಟು’
ಇದು ಕಣ್ರೀ ಈ ಸಲದ ಐಪಿಎಲ್ ರಿಸಲ್ಟು
***
ಬ್ಯಾಟಿಂಗ್‌ನಲ್ಲಿ ಕಚ್ಕೊಂಡ್ನಿಲ್ತಾನಂತೆ
ರಾಹುಲ್ ದ್ರಾವಿಡ್ ಎಂಬ ಗೋಡೆ.
ಐಪಿಎಲ್ ಫೈನಲ್‌ನಲ್ಲಿ ಮಾತ್ರ ಒಂಬತ್ತಕ್ಕೌಟಾಗಿ
’ವಿಜಯ’ಕ್ಕಾದ ಅಡ್ಡಗೋಡೆ!
***
* ಮಂತ್ರಿಪದವಿಗಾಗಿ ಕರುಣಾನಿಧಿಯ ಕುಟುಂಬದೊಳಗೆ ಜಟಾಪಟಿ ನಡೆಯುತ್ತಿದ್ದಾಗ ತಿಪ್ಪೇಶಿ ಈ ಕೆಳಗಿನ ದಾಸರಪದ ಗುನುಗುತ್ತಿದ್ದ:
ಯಾತರ ಕಟಿಪಿಟಿ, ಒಂದಿನ ಹೋಗತಿದಿ ಲಟಪಿಟಿ.

ಹದಿನೆಂಟು ಸೀಟ್ ಹೊಂದಿ, ಮಂತ್ರಿಗಿರಿ, ಒಂಬತ್ತು ನನಗೆಂದಿ;
ಏಳಕ್ಕೇ ಕಾಂಗ್ರೆಸ್ಸು ಕೈಚೆಲ್ಲಿಬಿಟ್ಟಾಗ ಅಳೆದು ಸುರಿದು ಅದರ ಕಾಲ್ಹಿಡಕೊಂಡಿ, ಯಾತರ ಕಟಿಪಿಟಿ...

ಸಂಸಾರ ಬಲು ಖೊಟ್ಟಿ, ಬಹುಪತ್ನೀವ್ರತನಾಗಿ ನೀ ಕೆಟ್ಟಿ;
ಅವರಾಸೆ ನಿನ್ನಾಸೆ ಪೂರೈಸೋ ಭರದಾಗ ನಿನ್ ಪದವಿ ಘನತೇನೇ ನೀ ಕಳೆದ್ಬಿಟ್ಟಿ, ಯಾತರ...
***
* ಈ ಪಾಟಿ ವಿನಾಶ ಮಾಡಿತಲ್ಲಾ ಚಂಡಮಾರುತ ’ಐಲಾ’!
- ಅದಕ್ಕೇನು ಐಲಾ?!
- ಐಪಿಎಲ್‌ನಲ್ಲಿ ’ಕತ್ರಿನಾ’, ಇಲ್ಲಿ ’ಐಲಾ’!
***
* ಮತ್ತಷ್ಟು ಮಂದಿ ಭ್ರಷ್ಟಾಚಾರಿಗಳನ್ನು ಲೋಕಾಯುಕ್ತರು ಹಿಡಿದಿದ್ದಾರೆ.
- ’ಏನು ಮಾಡಿದರೇನು ಚಟ ಹಿಂಗದು, ದಾನವಾದಿಗಳಿವರ್ಗೆ ಜೈಲಾಗದನಕ.’
***
* ಬೆಂಗಳೂರಿನಲ್ಲಿ ಒಳಚರಂಡಿ ಶುಚಿಗೊಳಿಸುವ ಯಂತ್ರವನ್ನು ಯಡಿಯೂರಪ್ಪನವರು ಬಾವುಟ ಬೀಸುವ ಮೂಲಕ ಉದ್ಘಾಟಿಸಿದರು.
- ಸ್ವಯಂ ಈಜುವ ಮೂಲಕ ಈಜುಕೊಳವನ್ನು ಉದ್ಘಾಟಿಸಿದ್ದ ಗುಂಡೂರಾವ್ ಆಗಿದ್ದಿದ್ದರೆ.....!
***
* ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಗೆ ಪ್ರಧಾನಿಯವರು ತುಂಬಾ ತಿಣುಕಾಟ ಅನುಭವಿಸಿದರು ಪಾಪ!
- ತಿಣುಕಾಟಕ್ಕೆ ಕಾರಣ ’ದುರ್ಬಲ ಪ್ರಧಾನಿಗೆ ಪ್ರಬಲರ ಕಾಟ’?
- ಅಥವಾ, ’ಪ್ರಬಲ ಪ್ರಧಾನಿ’ಯ ದುರ್ಬಲ ಆಟ?
***
* ’ಇನ್ನೊಂದು ವರ್ಷದೊಳಗೆ ಸಿಂಗ್ ಅನಾರೋಗ್ಯದಿಂದಾಗಿ ರಾಹುಲ್ ಪ್ರಧಾನಿಯಾಗ್ತಾರೆ’ ಅಂತ ಜ್ಯೋತಿಷಿಯೊಬ್ಬರು ಹೇಳಿದ್ದಾರೆ.
- ಇದನ್ನು ಹೇಳೋಕೆ ಜ್ಯೋತಿಷಿ ಬೇಕೇ?
***
* ರಾಜ್ಯ ಸರ್ಕಾರದ ವಾರ್ಷಿಕೋತ್ಸವಕ್ಕೆ ಬಿಬಿಎಂಪಿ ಹಣ ಖರ್ಚುಮಾಡಿದ್ದು ಅಕ್ರಮ: ಮಾಜಿ ಮೇಯರ್ ರಮೇಶ್
- ಅಕ್ರಮ-ಸಕ್ರಮ ಯೋಜನೆಯಡಿ ಆ ಖರ್ಚನ್ನು ಸಕ್ರಮಗೊಳಿಸಲಾಗುವುದು: ಸಚಿವ ಅಶೋಕ್
***
* ಇನ್ನೆರಡೂವರೆ ವರ್ಷದಲ್ಲಿ ಸಮರ್ಪಕ ಕುಡಿಯುವ ನೀರು ಮತ್ತು ಐದು ವರ್ಷದಲ್ಲಿ ಸಾಕಷ್ಟು ವಿದ್ಯುತ್ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.
- ಅದರರ್ಥ, ’ಇನ್ನೆರಡೂವರೆ ವರ್ಷ ನೀರು ಕೇಳ್ಬೇಡಿ; ಐದು ವರ್ಷ ಕರೆಂಟ್ ಕೇಳ್ಬೇಡಿ’!
***
* ಈಚೆಗೆ ಲೋಕಾಯುಕ್ತ ಬಲೆಗೆ ಬಿದ್ದ ಪೋಲೀಸ್ ಅಧಿಕಾರಿಗೆ ಇನ್ನೊಂದು ತಿಂಗಳಲ್ಲಿ ಪ್ರೊಮೋಷನ್ ಆಗುವುದಿತ್ತು.
- ಅಷ್ಟರಲ್ಲಿ ಲೋಕಾಯುಕ್ತರು ಮೋಷನ್ ಗುಳಿಗೆ ಕೊಟ್ಟುಬಿಟ್ಟರು!
***
* ’ಬಡವಾ ನೀ ಮಡಗಿದಂಗಿರು’ ಅಂತ ಗಾದೆ ಇದೆ. ಆದರೆ ಕರ್ನಾಟಕದ ಬಡವರು ಇನ್ನು ಮಡಗಿದಂಗಿರಬೇಕಾಗಿಲ್ಲ.
- ಜುಮ್ಮಂತ ತೀರ್ಥಯಾತ್ರೆ ಮಾಡಿಕೊಂಡಿರಬಹುದು! ಕೃಷ್ಣ(ಯ್ಯ)ನ ಕೃಪೆ!
***
* ಮಲ್ಲಿಕಾರ್ಜುನ ಖರ್ಗೆಗೆ ಕ್ಯಾಬಿನೆಟ್ ಯೋಗ.
- ’ನಚ್ಚುಗೆ ಮನ ನಿಮ್ಮಲ್ಲಿ. ಮೆಚ್ಚುಗೆ ಮನ ನಿಮ್ಮಲ್ಲಿ. ಕರಗುಗೆ ಮನ ನಿಮ್ಮಲ್ಲಿ. ಕೊರಗುಗೆ ಮನ ನಿಮ್ಮಲ್ಲಿ. ಎನ್ನ ಪಂಚೇಂದ್ರಿಯಗಳು ತಾಯೇ ನಿಮ್ಮ ಪದತಲದಲ್ಲಿ. ಪೊಡಮಡುವನೀ ಚೆನ್ನ-ಮಲ್ಲಿಕಾರ್ಜುನ ಖರ್ಗೆ’, ಎಂದದ್ದಕ್ಕೂ ಸಾರ್ಥಕವಾಯ್ತು!
- ಇದೇ ವೇಳೆ, ’ಹಸಿವಾದೊಡೆ ಮೃಷ್ಟಾನ್ನಗಳುಂಟು. ತೃಷೆಯಾದೊಡೆ ಪಾನೀಯಗಳುಂಟು. ಶಯನಕ್ಕೆ ತೂಲಿಕಾತಲ್ಪಗಳುಂಟು. ಎಸ್ಸೆಸ್ಸ್ ಮಲ್ಲಿಕಾರ್ಜುನಾ, ಮಂತ್ರಿಗಿರಿ ಮಾತ್ರ ನಿನಗಾಯ್ತು ಕನಸಿನ ಗಂಟು’, ಎಂದು ದಾವಣಗೆರೆ ಶಿವ(ಶಂಕರ)ಶರಣರಿಂದ ಕ್ಷೀಣ ದನಿಯೊಂದು ಹೊರಟಿದೆ!
- ಮುನಿಯಪ್ಪ ಮಾತ್ರ, ’ಸಹಾಯಕ ಖಾತೆಯೆಂದು ಮುನಿಯೆನು ನಾನು. ಕನಿಕರದಿಂದ ಕೊಟ್ಟವ್ರೆ. ತೃಪ್ತಿಪಟ್ಟೇನು’, ಎಂದು ಮುನಿಯ ಪೋಸು ಕೊಟ್ಟಿದ್ದಾರೆ!
- ಇನ್ನು, ಧರ್ಮಸಿಂಗ್! ಮೇಡಂ ಮನೆಬಾಗಿಲಲ್ಲಿ ನಿಂತು, ’ಧರುಮಾರೀ ತಾಯಿತಂದೆಮ್ಮಾ. ಓ ಶಿವನೇ ಭಗವಂತ, ’ಕೈ’ಕಾಲ್ ಮುಗಿತೀನಿ ಮಂತ್ರಿ ಮಾಡಮ್ಮಾ’, ಅಂತ ಬೇಡಿಕೊಂಡರೂ ಪ್ರಯೋಜನವಾಗದಿದ್ದಾಗ, ’ಧರಂ-ಕರಂ ಕೀ ಬಾತ್ ಹೈ; ಬ್ಯಾಡ್‌ಲಕ್ ಮೇರಾ ಸಾಥ್ ಹೈ. ಕ್ಯಾ ಕರೂ ರಾಮ್ ಮೈನೆ ಬುಡ್ಢಾ ಹೋಗಯಾ!’ ಎಂದು ಕಣ್ಣೊರೆಸಿಕೊಂಡಿದ್ದಾರೆ.
- ಮಂತ್ರಿಪದವಿ ಸಿಗದೆ ನಿರಾಶರಾದ ಕುಮಾರಸ್ವಾಮಿ ತಮ್ಮಷ್ಟಕ್ಕೇ ಹಾಡಿಕೊಳ್ಳುತ್ತಿದ್ದಾರೆ, ’ಏನಿದೀ ಗ್ರಹಚಾರವೋ! ಏನಿದೀ ವನವಾಸವೋ! ಏನು ಮಾಡಿದೆನೆಂದು ಈ ಗತಿ ಎನಗೆ ತಂದೆಯೊ ಪಶುಪತಿ!’
- ಕ್ಯಾಬಿನೆಟ್ ದರ್ಜೆ ಸಿಕ್ಕರೂ ಖರ್ಗೆ ಮುಖದಲ್ಲಿ ನಗೆ ಇಲ್ಲ! ಖರ್ಗೆ ನಗುಮೊಗ(ದ ಸೇವೆ) ಏನಿದ್ದರೂ ಹೈಕಮಾಂಡ್ ಮಾತಾಸುತರಿಗೆ ಮೀಸಲು!
***
* ಕೇಂದ್ರ ಮಂತ್ರಿಮಂಡಲದಲ್ಲಿರುವ ಅತಿ ದಡೂತಿ ವ್ಯಕ್ತಿ ಆಂಧ್ರಪ್ರದೇಶದ ಪನಬಾಕ ಲಕ್ಷ್ಮಿ.
- ’ಪನ’ ಅಂದರೆ ತೆಲುಗಿನಲ್ಲಿ ’ಹೊಟ್ಟೆ’ ಎಂದರ್ಥವಲ್ಲ.
***
* ಲಾಹೋರ್‌ನಲ್ಲಿ ಸೈತಾನರ ದಾಳಿ.
- ಭಸ್ಮಾಸುರನಿಗೀಗ ಸ್ವಯಂವಿನಾಶದ ಪಾಳಿ!
***
* ಉತ್ತರ ಕೊರಿಯಾದಿಂದ ಅಣ್ವಸ್ತ್ರ ಪರೀಕ್ಷೆ, ಕ್ಷಿಪಣಿ ಉಡಾವಣೆ.
- ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಅಣುಬಾಂಬು!
***
* ಖಾತೆ ಕತೆ:
- ಖರ್ಗೆಗೆ ಕಾರ್ಮಿಕ ಖಾತೆ ಸಿಕ್ಕಿದೆ. ಹೈಕಮಾಂಡ್‌ನ ನಿಷ್ಠಾವಂತ ಕಾರ್ಮಿಕನಿಗೆ ಕರೆಕ್ಟ್ ಖಾತೆಯೇ ಸಿಕ್ಕಿದೆ! ಇನ್ನೀಗ, ಮಿತ್ರ ಎಸ್.ಕೆ.ಕಾಂತಾ ಒಡನೆ ಎಂದಿನಂತೆ ’ಕಾಂತಾಸಮ್ಮಿತಿ’(’ಮಿತ್ರಸಮ್ಮಿತಿ’)ಯೋ ಅಥವಾ ಕಾರ್ಮಿಕ ಸಮಸ್ಯೆಗಳನ್ನು ಹಿಡಕೊಂಡು ಜಟಾಪಟಿಯೋ ನೋಡಬೇಕು.
- ಮೊಯ್ಲಿ ಕಾನೂನು ಸಚಿವರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಇವರಿಂದ ದೇಶಕ್ಕೆ ಕಾನೂನು ಸುಧಾರಣಾ ಯೋಗ ಇದೆಯೇ ನೋಡಬೇಕು. ಈಗಿರುವ ಹಳಸಲು ಕಾನೂನುಗಳೇ ಮುಂದುವರಿಯುವುದಾದರೆ ಆ ಹುದ್ದೆಗೆ ’ಮಹಾಕವಿ’ ಯಾಕೆ ಬೇಕು?
- ಮುನಿಯಪ್ಪ ರೈಲ್ವೆ ಮಂತ್ರಿ. ರಸ್ತೆಗೆ ಬಿದ್ದಿದ್ದರು, ಈಗ ಟ್ರೈನ್ ಹತ್ತಿಸಲಾಗಿದೆ! (’ಮುನಿಯಬೇಡಿ ಬಾಸ್, ಭೂಸಾರಿಗೆಯಿಂದ ರೈಲ್ವೆಗೆ ಬಂದ್ರಿ’, ಅಂದೆ ಅಷ್ಟೆ!) ಮುನಿ ಈಗ ರೈಲ್ವೆ ಮಂತ್ರಿ; ’ಕೋಲ್ಕತ್ತಾ-ಕೋಲಾರ ಮಮತಾಮುನಿ ಎಕ್ಸ್‌ಪ್ರೆಸ್’ ಸ್ಟಾರ್ಟ್ ಆಗ್ತದಂತ್ರೀ? (ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರೋ ರೂಟ್‌ಗಳು ಸ್ಟಾರ್ಟ್ ಆದ್ರೆ ಸಾಕು, ಸ್ವಾಗತಿಸ್ತೀವಿ ಮಂತ್ರೀ, ಬಾರಿಸಿ ಬಾಜಾಬಜಂತ್ರಿ!)
- ರಾಹುಲ್‌ನ ಯುವಮಿತ್ರರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ’ಗೆದ್ದಿದ್ದರೆ ನಾನೂ ಮಿನಿಸ್ಟರ್ ಆಗ್ತಿದ್ದೆ’ ಅಂತ ’ಯುವತೇಜ’ಮ್ಮ ’ಕೈಕೈ’ ಹಿಸುಕಿಕೊಳ್ಳುತ್ತಿದ್ದಾರಂತೆ! ಭ್ರಮೆಯ ಪರಾಕಾಷ್ಠೆ! ’ಬುದ್ಧಿವಂತರಿಗೆ ಮಾತ್ರ ಮಂತ್ರಿಪದವಿ ನೀಡಲಾಗಿದೆ’ ಎಂಬ ಪ್ರಧಾನಿಯ ಹೇಳಿಕೆಯನ್ನು ತೇಜಮ್ಮ ಪೇಪರಲ್ಲಿ ಓದಿಲ್ಲವೆನ್ನಿಸುತ್ತದೆ!
***
* ಮಂತ್ರಿಮಂಡಲ ’ಹೊಸ ಚಿಗುರು ಹಳೆ ಬೇರು’ ಅಂತೆ.
- ’ಹುಸಿ ಚಿಗುರು ಕೊಳೆ ಬೇರು’ ಆಗದಿದ್ದರೆ ಸಾಕು! ’ಹೊಸ ಒಗರು ಹಳೆ ಪೊಗರು’ ಕೂಡ ಆಗದಿರಲಿ.
***
* ನಿನ್ನೆ ಬೆಂಗಳೂರಿನಲ್ಲಿ ನಡೆದ ’ವಿಕಾಸ ಸಂಕಲ್ಪ ಉತ್ಸವ’ದ ಕೆಲವು ಕಾರ್ಯಕ್ರಮಗಳು ಇಂತಿದ್ದವು:
- ಮುಖ್ಯಮಂತ್ರಿಗಳ ’ಕಮಲವಿಕಾಸ ಸಂಕಲ್ಪ’ಕ್ಕೆ ’ಧನಾಧನ್’ ಸಾಥ್ ನೀಡಿದ ಬಳ್ಳಾರಿ ಗಣಿದಣಿಗಳಿಗೆ in absentia ಸನ್ಮಾನ ಮಾಡಲಾಯಿತು.
- ’ಪಂಚ್ ತಂತ್ರ’ ಪ್ರತಿಷ್ಠಾನದ ವತಿಯಿಂದ ಕಟ್ಟಾ-ಅಶೋಕ್ ಜೋಡಿಗೆ ’ಕಮಲಕ-ದಮಲಕ’ ಬಿರುದು ನೀಡಲಾಯಿತು.
- ಸಮಾರಂಭದ ಮುಖ್ಯ ಆಕರ್ಷಣೆಯಾಗಿ ಆಗಮಿಸಿದ್ದ ಶಿಲ್ಪಾಶೆಟ್ಟಿಯ ’ಅಮೃತಹಸ್ತ’ದಿಂದ ಶೋಭಾ ಮೇಡಮ್‌ಗೆ ’ಬಿಗ್ ಸಿಸ್ಟರ್’ ಬಿರುದು ಕೊಡಿಸಲಾಯಿತು.
- ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ತಮ್ಮ ಡಾಕ್ಟರೇಟನ್ನು ಸಜಿನೋವಾ ವಿಶ್ವವಿದ್ಯಾಲಯಕ್ಕೆ ವಾಪಸ್ ಮಾಡಿದರು. ಅದರ ಬದಲಿಗೆ ಅವರಿಗೆ ಸಂಸ್ಕೃತ ವಿವಿ ವತಿಯಿಂದ ’ಕಮಲಕೇಸರಿ’ ಬಿರುದು ಪ್ರದಾನ ಮಾಡಲಾಯಿತು. ಸದಾ ’ಆಪರೇಷನ್ ಕಮಲ’ದ ಧ್ಯಾನ ಮಾಡುವ ಸದಾನಂದಗೌಡರಿಗೆ ’ಕಮಲಕ್ಕೇ ಸರಿ’ ಬಿರುದು ನೀಡಲಾಯಿತು.
- ೩೬೫ ಶಾಲಾಮಕ್ಕಳು ಕಮಲದ ಆಕಾರದಲ್ಲಿ ನಿಂತು, ’ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು; ಬಳ್ಳಾರಿ ದಣಿಗೆ ಭಾಗ್ಯ ತಂದ ಗಣಿಯ ಬೀಡಿದು’ ಹಾಡನ್ನು ಹಾಡಿದರು. (ಸಂಗೀತ ಸಂಯೋಜನೆ ಮಾಡಿದ್ದು ಅನು ಮಲಿಕ್.)
- ಸಮಾರಂಭದ ಅತಿ ವಿಶೇಷ ಆಕರ್ಷಣೆ ಯಾವುದಾಗಿತ್ತು ಗೊತ್ತೆ? ’ಹುಟ್ಟಿದರೇ ಬಳ್ಳಾರಿಯಲ್ಲ್ ಹುಟ್ಟಬೇಕು; ಮುಟ್ಟಿದರೇ ಬಳ್ಳಾರಿ ಮಣ್ಣ್ ಮುಟ್ಟಬೇಕು’ ಹಾಡಿಗೆ ಶ್ರೀರಾಮುಲು ನೃತ್ಯ! ಎನ್‌ಟಿಆರ್ ಸ್ಟೈಲ್‌ನಲ್ಲಿ!
***
* ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ಪತ್ರಕರ್ತರು ದೇವೇಗೌಡರ ಅಭಿಪ್ರಾಯ ಕೇಳಿದರು.
- ದೇವೇಗೌಡರು ಏನೇನೋ ಇಷ್ಟುದ್ದ ಗೊಣಗಿದರು. ಯಾರಿಗೂ ಅರ್ಥವಾಗಲಿಲ್ಲ. ಇನ್ನೊಮ್ಮೆ ಕೇಳಲು ಅಂಜಿಕೆಯಾಗಿ ಪತ್ರಕರ್ತರು ಹಾಗೇ ವಾಪಸಾದರು!
***
* ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕರುಣಾನಿಧಿ ತಮ್ಮ ಪುತ್ರ ಸ್ಟಾಲ್-ಇನ್ ಅನ್ನು ಇನ್-ಸ್ಟಾಲ್ ಮಾಡಿದ್ದಾರೆ.
- ’ಅಕ್ಕರೆಯುಳ್ಳ ಅಳಗಿರಿ ರಂಗ’ನ ದೆಹಲಿಗೆ ಸಾಗಹಾಕಿ ’ಚಿಕ್ಕ ಧುರಂಧರ ಸ್ಟಾಲಿನ್ ಮಾಣಿ’ಗೆ ಉತ್ತರಾಧಿಕಾರದ ಸೌಟು ನೀಡಿದ್ದಾರೆ. ’ಎನ್ನ ಪಾಲಿಸೋ, ಕರುಣಾನಿಧಿ, ಪಲ್ಲಂಗಶಯನ ದಯಾವಾರಿಧಿ’, ಎಂದು ಸ್ಟಾಲಿನ್ ಮಾಣಿ ಇಷ್ಟು ಕಾಲ ಬೇಡಿಕೊಂಡದ್ದು ಸಾರ್ಥಕವಾಯ್ತು.
***
* ಭಾರತೀಯರಮೇಲೆ ಆಸ್ಟ್ರೇಲಿಯನ್ ಯುವಕರು ದೌರ್ಜನ್ಯ ಎಸಗುತ್ತಿದ್ದಾರೆ.
- ಬ್ರಿಟನ್‌ನಿಂದ ಗಡಿಪಾರಿಗೊಳಗಾಗಿ ಹೋದ ಅಪರಾಧಿಗಳ ಸಂತತಿ ತಾನೆ ಆ ಯುವಕರು!
***
* ಬಿಜೆಪಿ ಸರ್ಕಾರದ ಸಾಧನೆ ಪ್ರಶಂಸಿಸಿ ತಿಪ್ಪೇಶಿ ರಚಿಸಿರುವ ಕವನ (’ಜಯತು ಜಯ ವಿಠಲಾ’ ಧಾಟಿಯಲ್ಲಿ):

ಜಯತು ಜಯ ಕಮಲಾ, ನಿನ್ನ ಪಕ್ಷವು ಕಲ್ಪವೃಕ್ಷವು ಅದುವೆ ದೊಡ್ಡಾಲ!

ಆಪರೇಷನ್ ಕಮಲದ ಸೆಳೆತ, ಅನ್ಯರೆಲ್ಲರು ಬರುವರು ಇತ್ತ,
ಆಸೆಯ ತೋರ್‍ಸಯ್ಯ, ಪಕ್ಷಕೆ ಸೇರ್‍ಸಯ್ಯ,
ನೀ ಬಲೆ ಚೂಟಿಯಯ್ಯ, ’ಬೂಸಿಯ’ಯ್ಯ, ಸದಾನಂದಯ್ಯಾ!
***
* ಸರ್ಕಾರದ ’ವಿಕಾಸ ಸಂಕಲ್ಪ ಉತ್ಸವ’ಕ್ಕೆ ಎದಿರೇಟಾಗಿ ದೇವೇಗೌಡರು ತಾವೂ ಒಂದು ಉತ್ಸವ ಹಮ್ಮಿಕೊಂಡಿದ್ದಾರೆ.
- ’ಅವಕಾಶ ಸಂಕಲ್ಪ ಉತ್ಸವ’! ಆ ಉತ್ಸವಕ್ಕಾಗಿ ದತ್ತ ಅವರು ಗೀತೆಯೊಂದನ್ನು ರಚಿಸಿದ್ದಾರೆ:
- ’ಜೇನಿನ ಹೊಳೆಯೊ, ಹಾಲಿನ ಮಳೆಯೊ, ಮುದ್ದೆಯೊ, ನಂತರ ಸವಿನಿದ್ದೆಯೊ!’ ಇದು ಗೀತೆಯ ಪಲ್ಲವಿ. ನುಡಿಜೇನಿನ ಹೊಳೆ ಹರಿಸುವ ಕುಮಾರಸ್ವಾಮಿ, ನಂದಿನಿ ಹಾಲಿನ ಮಳೆ ಸುರಿಸುವ ರೇವಣ್ಣ ಮತ್ತು ಮುದ್ದೆ-ನಿದ್ದೆ ಯಜಮಾನರು ಮೂವರನ್ನೂ ’ಕಸ್ತೂರಿ’ ಕನ್ನಡದಲ್ಲಿ ಸ್ತುತಿಸಲಾಗಿದೆ. ಗೀತೆಯ ಚರಣದಲ್ಲಿ ಅನಿತಕ್ಕ-ಭವಾನಿಯಕ್ಕರನ್ನು ಈ ಕೆಳಗಿನಂತೆ ನೆನೆಯಲಾಗಿದೆ:
’ಕುಮಾರಸ್ವಾಮಿಯ ಸತಿ ಅನಿತಕ್ಕ,
ಭವಿ ರೇವಣ್ಣಗೆ ಭವಾನಿ ಪಕ್ಕ,
ದಾಸರು ಪತಿಗಳು ನಾಡಿಗೆ ನೀಡಿದ
ನಾಳಿನ ನಾಯಕಿಮಣಿಗಳು ತಕ್ಕಾ!’
***
* ನಾವೇನು ಕಮ್ಮಿ ಅಂತ ಆರ್‌ವಿಡಿ-ಡಿಕೆಶಿ ಕೂಡ ಉತ್ಸವದ ತಯಾರಿ ನಡೆಸಿದ್ದಾರೆ.
- ಇವರದು ’ಪ್ರಕಾಶರಹಿತೋತ್ಸವ’! ಈ ಉತ್ಸವದಲ್ಲಿ ಸಾಮೂಹಿಕವಾಗಿ ಹಾಡಲು ಎಂ.ಪಿ.ಪ್ರಕಾಶ್ ರಚಿಸಿರುವ ಗೀತೆ ಈ ಕೆಳಗಿನಂತೆ ಪ್ರಾರಂಭವಾಗುತ್ತದೆ:
’ಒಂದೇ ಒಂದೇ ಒಂದೇ, ಹೈಕಮಾಂಡು ಒಂದೇ.
ವಂದೇ ವಂದೇ ವಂದೇ, ಮೇಡಮ್ಮಿಗೆ ವಂದೇ’.
***
* ಆಸ್ಟ್ರೇಲಿಯಾದ ಗೌರವ ಡಾಕ್ಟರೇಟನ್ನು ಅಮಿತಾಭ್ ನಿರಾಕರಿಸಿದ್ದಾರೆ.
- ’ದೇಶ್‌ಪ್ರೇಮಿ’ ’ಮಹಾನ್’ ನಟ ದೇಶದ ಬಗ್ಗೆ ’ಅಭಿಮಾನ್’ ಮೆರೆಯುವ ಮೂಲಕ ’ಹಮ್ ಕಿಸೀಸೇ ಕಮ್ ನಹೀ’ ಎಂಬ ಸಂದೇಶವನ್ನು ಆಸ್ಟ್ರೇಲಿಯಾಕ್ಕೆ ರವಾನಿಸಿದ್ದಾರೆ!
***
* ಲೋಕಸಭೆಗೆ ಮಹಿಳಾ ಸ್ಪೀಕರ್.
- ’ನನ್ನ ಮನೆಗೂ ಮಹಿಳಾ ಸ್ಪೀಕರೇ. ಬರೀ ಸ್ಪೀಕರಲ್ಲ, ಲೌಡ್ ಸ್ಪೀಕರ್!’ ಅಂತಾನೆ ತಿಪ್ಪೇಶಿ!
***
* ಜಗಜೀವನರಾಮ್ ಮಗಳು ಲೋಕಸಭಾಧ್ಯಕ್ಷೆ.
- ಅಪ್ಪನ ಪ್ರಧಾನಿ ಪಟ್ಟದ ಬಯಕೆ ಈಡೇರಲಿಲ್ಲ; ಮಗಳಿಗೆ ಸ್ಪೀಕರ್ ಪಟ್ಟ ಬಯಸದೆಯೇ ಬಂತಲ್ಲ! ಇದುವೇ ಜಗ-ಜೀವನ-ರಾಮ್!
***
* ರಾಷ್ಟ್ರಪತಿ, ಸೂಪರ್ ಪ್ರಧಾನಿ, ಸ್ಪೀಕರ್ ಎಲ್ಲ ಮಹಿಳೆಯರೇ!
- ಪ್ರಧಾನಿಯೂ ಮಹಿಳೆಯೇ ಆಗಿಬಿಟ್ಟರೆ ಅಲ್ಲಿಗೆ ಪ್ರಮೀಳಾ ರಾಜ್ಯ ಸಂಪೂರ್ಣಂ! ಪ್ರಿಯಾಂಕಾ ಏನಂತಾರೆ?
***
* ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೇಸರೀಕರಣ: ವೈಎಸ್‌ವಿ ದತ್ತ
- ಜೆಡಿಎಸ್‌ನ ಇದುವರೆಗಿನ ಸಾಧನೆ? ರಾಜಕಾರಣ, ರಾಜಕಾರಣ ಮತ್ತು ರಾಜಕಾರಣ!
- ಕಾಂಗ್ರೆಸ್‌ನ ಸಾಧನೆ? ಉಗ್ರಪ್ಪನ ಅತ್ಯುಗ್ರ ಭಾಷಣ!
***
* ’ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡ್ತೀವಿ’, ಅಂತಾರೆ ಯಡಿಯೂರಪ್ಪ.
- ’ಅವರೆಲ್ಲಿ ಕೊಡ್ತಾರೆ, ಪರಮಾಧಿಕಾರಿಯೂ ಅವರೇ, ಸರ್ವಾಧಿಕಾರಿಯೂ ಅವರೇ’, ಅಂತಾರೆ ಈಶ್ವರಪ್ಪ!
***
* ರಾಜ್ಯ ಬಿಜೆಪಿಯಲ್ಲಿ ಒಡಕು?
- ಈಶ್ವರ(ಪ್ಪ), ಎದುರುಗಡೆ ಬಸವಣ್ಣ(ಗೌಡ), ಹಿಂದುಗಡೆ (ಗಣಿ) ಪ್ರಮಥ ಗಣ, ಇದೇ ನೋಡಿ ಕೆಡುಕು!
***
* ಪೋಲೀಸರು ಜನಸ್ನೇಹಿಗಳಾಗಬೇಕೆಂಬ ಉದ್ದೇಶದಿಂದ ರಾಜ್ಯ ಪೋಲೀಸ್ ಇಲಾಖೆಯು ಹಲವು ಜನಪರ ಯೋಜನೆಗಳನ್ನು ಘೋಷಿಸಿದೆ.
- ಪೋಲೀಸರ ’ಸಂಸ್ಕೃತಿ’ ಮತ್ತು ’ಸಂಸ್ಕೃತ’ ಸುಧಾರಿಸದೆ ಯಾವ ಜನಪರ ಯೋಜನೆಯಿಂದಲೂ ಏನೂ ಪ್ರಯೋಜನವಿಲ್ಲ.
***
* ’ಇಷ್ಟ ಇಲ್ಲಾಂದ್ರೆ ಎದ್ದುಹೋಗಿ’: ಪತ್ರಿಕಾಗೋಷ್ಠಿಯಲ್ಲಿ ನಟಿ ರಮ್ಯಾ ಸೊಕ್ಕಿನ ಮಾತು!
- ’ಥಿಯೇಟರ್‌ನಿಂದಲೂ ಎದ್ದುಹೋಗಬಹುದೇ?’: ಪ್ರೇಕ್ಷಕನ ಪ್ರಶ್ನೆ.
***
* ಹೆಸರು ರಮ್ಯ.
- ಅವತಾರ ರೌದ್ರ!
***
* ತಮ್ಮ ಬಡಾವಣೆಯಲ್ಲಿ ಬೀದಿನಾಯಿಗಳು ಹಿಂಡುಹಿಂಡಾಗಿ ಓಡಾಡುತ್ತಿರುತ್ತವೆಂದು ನಾಗರಿಕರೊಬ್ಬರು ದೂರಿದ್ದಾರೆ.
- ಅವರಿಗೆ ಗೊತ್ತಿಲ್ಲ ಅವುಗಳ ’ಜನ್ಮಜನ್ಮದಾ ಅನುಬಂಧ, ಹೃದಯ ಹೃದಯಗಳ ಪ್ರೇಮಾನುಬಂಧ’!
***
* ಮುಖ್ಯಮಂತ್ರಿಯಲ್ಲದ ’ಮುಖ್ಯಮಂತ್ರಿ’ ಚಂದ್ರು!
- ’ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಎಂಬ ’ಹಲ್ಲಿಲ್ಲದ ಹಾವು’!
***
* ಕೊನೆ ಹನಿ:
ಪಾಲಿಗೆ ಬಂದದ್ದು
ಪಂಚಾಮೃತ
ನಾಲಿಗೆ ಬಂಡೆದ್ದು
ಚಂಪಾಮೃತ!
(’ಚಂಪಾ’ ಗೊತ್ತಲ್ಲ?)
--೦--