* ಆರು ತಿಂಗಳು ಮಾತ್ರ ವಿಪಕ್ಷ ನಾಯಕನಾಗಿರಲು ಒಪ್ಪಿದ್ದಾರೆ ಆಡ್ವಾಣಿ.
- ಸಿದ್ರಾಮಯ್ಯ ಈ ಸುದ್ದಿ ಓದಬೇಕು!
***
* ಪ್ರತಿಪಕ್ಷದಲ್ಲಿ ಕೂರಲು ಮುಲಾಯಂ ಸಿದ್ಧ.
- ದ್ರಾಕ್ಷಿ ಹಿಡಿಯಲು ಹೋಗಿ ಹೊತಗೊಂಡು ಬಿದ್ದ!
***
* ಲಾಲೂ ಲೆಕ್ಕಾಚಾರ ಯಾಕೆ ತಲೆಕೆಳಗಾಯಿತು?
- ಮಾಜಿ ಮುಖ್ಯಮಂತ್ರಿಯಾದ ರಾಬ್ಡಿದೇವಿಯ ಮಾತು ಕೇಳಿರಬೇಕು!
***
* ಡಿಎಂಕೆ ಸಂಸದರಲ್ಲಿ ತನ್ನ ಬಂಧುಗಳೇ ಏಳು ಮಂದಿ ಇದ್ದಿದ್ದರೆ ಆಗ ಕರುಣಾನಿಧಿಯು ಮಂತ್ರಿ ಪದವಿ ಅರಸಿ ಬರುವ ಇತರ ಸಂಸದರಿಗೆ ಏನು ಹೇಳುತ್ತಿದ್ದರು?
- ’ಏಳೇಳು ಶರಧಿಯು ಏಕವಾಗಿದೆ ಕಂಡ್ಯ, ಏಕೆ ಬಂದೆಯೋ ಎಲೆ ಕೋತಿ!’
***
* ಲೋಕಸಭೆಯಲ್ಲಿನ್ನು ನಾಲ್ವರು ಗಾಂಧಿಗಳು.
- ಅಲ್ಲ. ಎರಡು ಜೋಡಿ.
***
* ದೆಹಲಿಯಲ್ಲಿ ಕುಮಾರಸ್ವಾಮಿ ಮಂತ್ರಿ ಪದವಿ ವಿಷಯ ಮಾತಾಡಿಲ್ಲವಂತೆ.
- ಹಾಗಾದರೆ ದೆಹಲಿಯಲ್ಲಿ ಅವರು ಮಾಡಿದ್ದು ಡ್ರಾಮ ವಾಸ್ತವ್ಯ!
***
* ಕುಮಾರನ ದೆಹಲಿ ಯಾತ್ರೆ ವಿಷಯ ದೇವೇಗೌಡ್ರಿಗೆ ಗೊತ್ತಿರಲೇ ಇಲ್ಲವಂತೆ!
- ತಾನು ಪ್ರಧಾನಿಯಾಗೋದೇ ಗೊತ್ತಿರ್‍ಲಿಲ್ಲ ಪಾಪ! (ಪ್ರಧಾನಿಯಾದಮೇಲೂ ಏನೂ ಗೊತ್ತಾಗ್ತಿರ್‍ಲಿಲ್ಲ, ಆ ಮಾತು ಬೇರೆ.)
***
* ’ಕುಮಾರಸ್ವಾಮಿ ತನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಿ’, ಎಂದು ಸದಾನಂದಗೌಡರು ವ್ಯಂಗ್ಯವಾಡಿದ್ದಾರೆ.
- ವೈಎಸ್‌ವಿ ದತ್ತನ್ನ ಕೇಳಿ ಈ ಮಾತಿಗೆ ಉತ್ತರ ಕೊಡ್ತಾರೆ ಕುಮಾರಸ್ವಾಮಿ ಸ್ವಲ್ಪ ಇರಿ.
***
* ಕಾಂಗ್ರೆಸ್ ಹಿನ್ನಡೆಯ ಕಾರಣ ಗುರುತಿಸಲು ರಾಜಶೇಖರನ್ ನೇತೃತ್ವದಲ್ಲಿ ಸಮಿತಿ.
- ಅಂತೂ ರಾಜಶೇಖರನ್‌ಗೆ ಒಂದು ಕೆಲಸ ಸಿಕ್ಕಿತು.
***
* ಯಡಿಯೂರಪ್ಪನವರು ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯಿದೆ.
- ’ವರ್ತೂರು ಪ್ರಕಾಶ್ ಅಭಿಮಾನಿಗಳ ಸಂಘ’ವು ಫ್ಲೆಕ್ಸ್‌ಗಳನ್ನು ಹಾಕಲು ಸ್ಥಳಗಳನ್ನು ಗುರುತಿಸತೊಡಗಿದೆ.
***
* ಪಾಪಿ ಪ್ರಭಾಕರನ್ ಹತ್ಯೆಯಾಗಿಹೋದ ಪಾಪ!
- ತಮಿಳುನಾಡಿನಲ್ಲಿ ಎಲೆಕ್ಷನ್ ರಿಸಲ್ಟ್ ಏರುಪೇರು ಮಾಡಿ ಸತ್ತ ಭೂಪ!
***
* ಕ್ರಿಕೆಟ್ ಹುಚ್ಚಿನ ಹುಡುಗರನ್ನು ಎಲೆಕ್ಷನ್ ರಿಸಲ್ಟ್ ಬಗ್ಗೆ ಕೇಳಿದರೆ ಏನಂತ ಉತ್ತರ ಕೊಡ್ತಾರೆ?
- ’ಇಟಲಿ ಗೆದ್ದಿತು, ಇಂಡಿಯಾ ಸೋತಿತು.’
ಎಷ್ಟು ಅರ್ಥಪೂರ್ಣ ಈ ಉತ್ತರ!
***
* ಕೋಡಿಮಠದ ಭವಿಷ್ಯವಾಣಿ ಪ್ರಕಾರ ನೂತನ ಕೇಂದ್ರ ಸರ್ಕಾರದ ಆಡಳಿತ ಕೇವಲ ಎರಡೇ ವರ್ಷ!
- ಅನಂತರ ಕೋಡಿಮಠದ ಆಡಳಿತ.
***
* ಸಿಂಗ್ ನಂತರ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯೆ?
- ಆಗಿದ್ದಾದರೆ ಆತ ಮುಂದಿನ ಪ್ರಧಾನಿಯೇ. ಸಿಂಗರಂತೆ ಮೇಡಂ ಹಿಂದಿನ ಪ್ರಧಾನಿ ಆಗುಳಿಯಲಾರ.
***
* ಕ್ರಿಕೆಟ್‌ನಲ್ಲಿ ಜೀವಮಾನದ ನಿಷೇಧ; ಆದರೆ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲಬಹುದೇ?!
- ಲೋಕಸಭೆಯು ಈ ದೇಶಕ್ಕೆ ಕ್ರಿಕೆಟ್‌ನಷ್ಟು ಮುಖ್ಯ ಅಲ್ಲವಲ್ಲಾ, ಆದ್ದರಿಂದ ಪರ್ಮಿಷನ್ ನೀಡಲಾಗಿದೆ.
***
* ಮೊಯ್ಲಿ ಒಂದುವೇಳೆ ಚುನಾವಣೆಯಲ್ಲಿ ಸೋತಿದ್ದರೆ?
- ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ರಚನೆ ಆರಂಭಿಸುತ್ತಿದ್ದರು!
***
* ಕೇಂದ್ರ ಮಂತ್ರಿಮಂಡಲದಲ್ಲಿ ಈ ಸಲ ರಾಜ್ಯದ ನಾಲ್ವರಿಗೆ ಸ್ಥಾನ. (ಜೈರಾಮ್ ರಮೇಶ್ ಸೇರಿ ಐದು.)
- ’ಕೈ’ಗಾರಿಕಾ ರಂಗದಲ್ಲಿ ಕರ್ನಾಟಕದ ಪ್ರಗತಿ!
***
* ಎಂಎಂ ಸಿಂಗ್ ಮತ್ತು ಎಸ್‌ಎಂ ಕೃಷ್ಣ ಇವರ ನಡುವೆ ಇರುವ ಹೋಲಿಕೆಗಳು:
- ಇಬ್ಬರೂ ಜನರಿಂದ ಚುನಾಯಿತರಾಗದೆಯೇ ಮಂತ್ರಿಪದವಿ ಗಿಟ್ಟಿಸಿದ ಅದೃಷ್ಟವಂತರು!
(ಮಂತ್ರಿಪದವಿ ಇಲ್ಲದೆಯೇ ಸೂಪರ್ ಪ್ರಧಾನಮಂತ್ರಿ ಸೋನಿಯಾ ಮೇಡಂ!)
- ಎಂಎಂ, ಎಸ್‌ಎಂ ಇಬ್ಬರೂ ಫಾರಿನ್ ಸ್ಟಡೀಡ್ ಮತ್ತು ಫಾರಿನ್ ಮೈಂಡೆಡ್!
(ಮೇಡಂ ಫಾರಿನ್ ಬ್ರ್ಯಾಂಡೆಡ್!)
- ಎಂಎಂ ಎಸ್‌ಎಂ ಇಬ್ಬರೂ ಮೇಡಮ್‌ನ ಆಜ್ಞಾನುವರ್ತಿಗಳು!
(ಆದ್ದರಿಂದಲೇ ಮೇಡಂ ಇವರನ್ನು ಮಂತ್ರಿ ಮಾಡಿದ್ದು! ಅದೂ ಕೂಡ ಫಾರಿನ್ ಮಂತ್ರಿ!)
***
* ಕಮಲನಾಥ್ ಅವರು ರಾಷ್ಟ್ರಪತಿ ಬೋಧಿಸುವ ಮೊದಲೇ ಪ್ರಮಾಣವಚನ ಆರಂಭಿಸಿದರು! ಸಹಿಮಾಡದೇ ವಾಪಸಾದರು! ಯಾಕೆ ಹೀಗೆಲ್ಲ?
- ’ಬಿಜೆಪಿ ಚಿಹ್ನೆಯ ಹೆಸರಿಟ್ಕೊಂಡಿದ್ದೀರಲ್ಲಾ’, ಅಂತ ಅದೇ ತಾನೇ ಯಾರೋ ಛೇಡಿಸಿದ್ದರು! ಹಾಗಾಗಿ ಮೈಂಡ್ ಆಫ್ ಆಗಿಬಿಟ್ಟಿತ್ತು!
***
* ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಯಾಗಿ ಧನಂಜಯಕುಮಾರ್ ನೇಮಕ.
- ರಣಾಂಗಣದ ಒಳಗೆ (ಲಾಲ್)ಕೃಷ್ಣ, ಹೊರಗೆ ಧನಂಜಯ!
***
* ರಾಷ್ಟ್ರ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ?
- ’ಅಲ್ಲ, ಲೋಬಾನದ ಹೊಗೆ’, ಅನ್ನುತ್ತಿದ್ದಾರೆ ವೆಂಕಯ್ಯ ನಾಯ್ಡು.
***
* ಚುನಾವಣೆಯಲ್ಲಿ ದುಡಿದದ್ದಕ್ಕೆ ಪ್ರತಿಫಲವಾಗಿ ಕೆಲವರಿಗೆ ಯಡಿಯೂರಪ್ಪ ನಿಗಮ-ಮಂಡಳಿ ಸ್ಥಾನ ಕೊಡಲಿದ್ದಾರೆ.
- ಕೋ-ಆಪರೇಷನ್ ಕಮಲ!
***
* ಯತ್ನಾಳ್‌ಗೆ ಬಿಜೆಪಿಯಿಂದ ಗೇಟ್‌ಪಾಸ್.
- ಆಪರೇಷನ್ ಕಪಾಲ(ಮೋಕ್ಷ)!
- ಯತ್ನಾಳ್ ಪಾಲಿಗಿದು ಆಪರೇಷನ್ ಕರಾಲ!
***
* ಪಾಕ್‌ಗೆ ಅಮೆರಿಕದ ನೆರವು ಮೂರುಪಟ್ಟು ಹೆಚ್ಚಳ.
- ಅಮೆರಿಕದ ಗುರಿ ಭಾರತ ಎಂಬುದು ಇದರಿಂದ ಇನ್ನೊಮ್ಮೆ ನಿಚ್ಚಳ.
***
* ಎಸ್.ಎಂ. ಕೃಷ್ಣ ಹೆಗಲಿಗೆ ವಿದೇಶಾಂಗ ಖಾತೆ.
- ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದ ’ವಿಶ್ವಾಮಿತ್ರ’ನಿಗೆ ಈಗ ವಿಶ್ವದೆದುರು ಭಾರತವನ್ನು ಸಿಂಗರಿಸುವ ಸದವಕಾಶ. ಫಲಿತಾಂಶ ಕಾದುನೋಡೋಣ.
***
* ಖಾತಾವಾರು ಮುನ್ನೋಟ:
- ಪ್ರಣಬ್ ಮುಖರ್ಜಿ ಇನ್ನು ಜೆಟ್ ಏರಿ ವಿದೇಶಗಳಿಗೆ ಹಾರುವುದನ್ನು ನಿಲ್ಲಿಸಿ ಬಜೆಟ್ ಮಂಡಿಸಬಹುದು.
- ಶರದ್ ಪವಾರ್ ಕ್ರಿಕೆಟ್ ವ್ಯವಸಾಯಕ್ಕೆ ಮರಳಬಹುದು.
- ಎ.ಕೆ.ಆಂಟನಿ ಎ.ಕೆ.೪೭ ಹಿಡಕೊಂಡು, ’ಏಕೆ ಹೀಗಾಡ್ತಿ?’ ಅಂತ ಪಾಕಿಸ್ತಾನವನ್ನು ಗದರಬಹುದು.
- ಚಿದಂಬರಂ ಗೃಹಖಾತೆಯ ಉಗ್ರದಮನವೈಫಲ್ಯದ ಚಿದಂಬರ ರಹಸ್ಯವನ್ನು ಅರಿಯಲೆತ್ನಿಸಬಹುದು.
- ಮಮತಾ ಬ್ಯಾನರ್ಜಿ ನ್ಯಾನೊ ಕಾರು ಬಿಟ್ಟು ಟ್ರೈನ್ ಏರಬಹುದು. ’ಅಷ್ಟು ಸಣ್ಣ ಕಾರು ಹೋದರೇನಾಯ್ತು, ಇಷ್ಟು ದೊಡ್ಡ ಟ್ರೈನನ್ನೇ ತಗೊಂಡ್ಬಂದಿದೀನಿ ನೋಡಿ’, ಅಂತ ಬಂಗಾಳಿ ಬಾಬುಗಳನ್ನು ಸಮಾಧಾನಪಡಿಸಬಹುದು.
- ಎಸ್.ಎಂ.ಕೃಷ್ಣ ಆರಾಮಾಗಿ ವಿದೇಶಯಾತ್ರೆ ಮಾಡಿಕೊಂಡಿರಬಹುದು. ಸಮುದ್ರ ದಾಟಿ ವಿದೇಶಯಾತ್ರೆ ಮಾಡಿಬಂದವರು (ಉಡುಪಿಯ) ಕೃಷ್ಣಪೂಜೆ ಮಾಡಬಾರದೆಂದಿದೆಯೇ ಹೊರತು ಕೃಷ್ಣನು ವಿದೇಶಯಾತ್ರೆ ಮಾಡಬಾರದೆಂದೇನಿಲ್ಲ. ವಿದೇಶಗಳಲ್ಲಿ ಇನ್ನೂ ಆಕರ್ಷಕ ಕೂದಲ ಕುಲಾವಿ (ವಿಗ್) ಸಿಕ್ಕೀತು. ಟ್ರೈ ಮಾಡಲಡ್ಡಿಯಿಲ್ಲ.
***
* ಮಂತ್ರಿಗಿರಿಯ ವಿಷಯವಾಗಿರಲಿ, ಕಾವೇರಿಯ ವಿಷಯವಾಗಿರಲಿ, ಡಿಎಂಕೆಯದು
- ’ದ್ರಾವಿಡ ಮುನ್ನೇತ್ರ ಕಾಳಗಂ’!
***
* ಹೆಂಗಸು ಪ್ರಧಾನಿ ಆಗ್ತಾರೆ ಅಂದಿದ್ದರು ಕೋಡಿಮಠದ ಸ್ವಾಮೀಜಿ!
- ಕರೆಕ್ಟ್ ಹೇಳಿದ್ದಾರೆ. ಹೆಂಗಸೇ ತಾನೆ ಪ್ರಧಾನಿ!
***
* ಇಲ್ಲೊಬ್ಬ, ’ಹುಚ್ಚುಖೋಡಿಮಠ’, ಅಂತಾನೆ!
- ಅಯ್ಯೋ, ಅವನಿಗೆ ಸುಮ್ಮನಿರೋಕೆ ಹೇಳಿ. ಇಲ್ಲದಿದ್ದರೆ ಸ್ವಾಮೀಜಿ ಅವನ ಭವಿಷ್ಯ ಹೇಳಿಬಿಡ್ತಾರೆ!
***
* ವಿರೋಧದ ನಡುವೆಯೂ ಗುಂಡ್ಯ ಯೋಜನೆಗೆ ಯಡಿಯೂರಪ್ಪನವರಿಂದ ಶಿಲಾನ್ಯಾಸ.
- ಪ್ರಚಾರದ ನಡುವೆಯೂ ಮಂಡ್ಯ ಯೋಜನೆಯಲ್ಲಿ ಅಂಬರೀಷ್‌ಗೆ ಸೋಲಿನ ಸಹವಾಸ!
***
* ರೆಡ್ಡಿ ಸೋದರರು ಯಡ್ಯೂರ್ ಸರ್ಕಾರ ಉರುಳಿಸಲೆತ್ನಿಸುತ್ತಿದ್ದಾರೆಯೆ?
- ಬುದ್ಧಿವಂತರು ತಾವು ಕುಳಿತ ರೆಂಬೆಯನ್ನೇ ಕಡಿಯಲೆತ್ನಿಸುತ್ತಾರೆಯೆ?
***
* ದಲಿತರು ಅಸಮರ್ಥರಲ್ಲ, ನಾನು ಭ್ರಷ್ಟಾಚಾರಿಯಲ್ಲ: ಸುಭಾಷ್ ಭರಣಿ
- ಪೂರ್ವಾರ್ಧವನ್ನು ಒಪ್ಪಲಾಗುವುದು
***
* ಈಶ್ವರಪ್ಪ, ನಾನು ಭಾಯಿ ಭಾಯಿ: ಯಡಿಯೂರಪ್ಪ
- ಭಾಯಿ ಭಾಯಿ ಅಲ್ಲ, ಬಾಯಿ ಬಾಯಿ: ತಿಪ್ಪೇಶಿ
***
* ಸಿಖ್ ಪಂಗಡಗಳ ಘರ್ಷಣೆ, ಪ್ರತಿಭಟನೆ, ಹಿಂಸೆ.
- ಅಪ್ರತಿಮ ರಾಷ್ಟ್ರಪ್ರೇಮಿ ಸಿಖ್ಖರೇ ಅಂತಃಕಲಹದ ಸುಳಿಗೆ ಸಿಕ್ಕರೇ?!
***
ಕಳೆದ ಸಲ ಲಾಸ್ಟು, ಈ ಸಲ ಫಸ್ಟು
’ಚಾರ್ಜರ್ಸ್’ ಎದುರು ’ಚಾಲೆಂಜ್’ ವೇಸ್ಟು
’ರಾಜಸ್ತಾನ್ ರಾಯಲ್ಸ್’ ಈಗ ’ರಾಜಸ್ತಾನ್ ಡೆಸರ್ಟು’
ಇದು ಕಣ್ರೀ ಈ ಸಲದ ಐಪಿಎಲ್ ರಿಸಲ್ಟು
***
ಬ್ಯಾಟಿಂಗ್‌ನಲ್ಲಿ ಕಚ್ಕೊಂಡ್ನಿಲ್ತಾನಂತೆ
ರಾಹುಲ್ ದ್ರಾವಿಡ್ ಎಂಬ ಗೋಡೆ.
ಐಪಿಎಲ್ ಫೈನಲ್‌ನಲ್ಲಿ ಮಾತ್ರ ಒಂಬತ್ತಕ್ಕೌಟಾಗಿ
’ವಿಜಯ’ಕ್ಕಾದ ಅಡ್ಡಗೋಡೆ!
***
* ಮಂತ್ರಿಪದವಿಗಾಗಿ ಕರುಣಾನಿಧಿಯ ಕುಟುಂಬದೊಳಗೆ ಜಟಾಪಟಿ ನಡೆಯುತ್ತಿದ್ದಾಗ ತಿಪ್ಪೇಶಿ ಈ ಕೆಳಗಿನ ದಾಸರಪದ ಗುನುಗುತ್ತಿದ್ದ:
ಯಾತರ ಕಟಿಪಿಟಿ, ಒಂದಿನ ಹೋಗತಿದಿ ಲಟಪಿಟಿ.
ಹದಿನೆಂಟು ಸೀಟ್ ಹೊಂದಿ, ಮಂತ್ರಿಗಿರಿ, ಒಂಬತ್ತು ನನಗೆಂದಿ;
ಏಳಕ್ಕೇ ಕಾಂಗ್ರೆಸ್ಸು ಕೈಚೆಲ್ಲಿಬಿಟ್ಟಾಗ ಅಳೆದು ಸುರಿದು ಅದರ ಕಾಲ್ಹಿಡಕೊಂಡಿ, ಯಾತರ ಕಟಿಪಿಟಿ...
ಸಂಸಾರ ಬಲು ಖೊಟ್ಟಿ, ಬಹುಪತ್ನೀವ್ರತನಾಗಿ ನೀ ಕೆಟ್ಟಿ;
ಅವರಾಸೆ ನಿನ್ನಾಸೆ ಪೂರೈಸೋ ಭರದಾಗ ನಿನ್ ಪದವಿ ಘನತೇನೇ ನೀ ಕಳೆದ್ಬಿಟ್ಟಿ, ಯಾತರ...
***
* ಈ ಪಾಟಿ ವಿನಾಶ ಮಾಡಿತಲ್ಲಾ ಚಂಡಮಾರುತ ’ಐಲಾ’!
- ಅದಕ್ಕೇನು ಐಲಾ?!
- ಐಪಿಎಲ್‌ನಲ್ಲಿ ’ಕತ್ರಿನಾ’, ಇಲ್ಲಿ ’ಐಲಾ’!
***
* ಮತ್ತಷ್ಟು ಮಂದಿ ಭ್ರಷ್ಟಾಚಾರಿಗಳನ್ನು ಲೋಕಾಯುಕ್ತರು ಹಿಡಿದಿದ್ದಾರೆ.
- ’ಏನು ಮಾಡಿದರೇನು ಚಟ ಹಿಂಗದು, ದಾನವಾದಿಗಳಿವರ್ಗೆ ಜೈಲಾಗದನಕ.’
***
* ಬೆಂಗಳೂರಿನಲ್ಲಿ ಒಳಚರಂಡಿ ಶುಚಿಗೊಳಿಸುವ ಯಂತ್ರವನ್ನು ಯಡಿಯೂರಪ್ಪನವರು ಬಾವುಟ ಬೀಸುವ ಮೂಲಕ ಉದ್ಘಾಟಿಸಿದರು.
- ಸ್ವಯಂ ಈಜುವ ಮೂಲಕ ಈಜುಕೊಳವನ್ನು ಉದ್ಘಾಟಿಸಿದ್ದ ಗುಂಡೂರಾವ್ ಆಗಿದ್ದಿದ್ದರೆ.....!
***
* ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಗೆ ಪ್ರಧಾನಿಯವರು ತುಂಬಾ ತಿಣುಕಾಟ ಅನುಭವಿಸಿದರು ಪಾಪ!
- ತಿಣುಕಾಟಕ್ಕೆ ಕಾರಣ ’ದುರ್ಬಲ ಪ್ರಧಾನಿಗೆ ಪ್ರಬಲರ ಕಾಟ’?
- ಅಥವಾ, ’ಪ್ರಬಲ ಪ್ರಧಾನಿ’ಯ ದುರ್ಬಲ ಆಟ?
***
* ’ಇನ್ನೊಂದು ವರ್ಷದೊಳಗೆ ಸಿಂಗ್ ಅನಾರೋಗ್ಯದಿಂದಾಗಿ ರಾಹುಲ್ ಪ್ರಧಾನಿಯಾಗ್ತಾರೆ’ ಅಂತ ಜ್ಯೋತಿಷಿಯೊಬ್ಬರು ಹೇಳಿದ್ದಾರೆ.
- ಇದನ್ನು ಹೇಳೋಕೆ ಜ್ಯೋತಿಷಿ ಬೇಕೇ?
***
* ರಾಜ್ಯ ಸರ್ಕಾರದ ವಾರ್ಷಿಕೋತ್ಸವಕ್ಕೆ ಬಿಬಿಎಂಪಿ ಹಣ ಖರ್ಚುಮಾಡಿದ್ದು ಅಕ್ರಮ: ಮಾಜಿ ಮೇಯರ್ ರಮೇಶ್
- ಅಕ್ರಮ-ಸಕ್ರಮ ಯೋಜನೆಯಡಿ ಆ ಖರ್ಚನ್ನು ಸಕ್ರಮಗೊಳಿಸಲಾಗುವುದು: ಸಚಿವ ಅಶೋಕ್
***
* ಇನ್ನೆರಡೂವರೆ ವರ್ಷದಲ್ಲಿ ಸಮರ್ಪಕ ಕುಡಿಯುವ ನೀರು ಮತ್ತು ಐದು ವರ್ಷದಲ್ಲಿ ಸಾಕಷ್ಟು ವಿದ್ಯುತ್ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.
- ಅದರರ್ಥ, ’ಇನ್ನೆರಡೂವರೆ ವರ್ಷ ನೀರು ಕೇಳ್ಬೇಡಿ; ಐದು ವರ್ಷ ಕರೆಂಟ್ ಕೇಳ್ಬೇಡಿ’!
***
* ಈಚೆಗೆ ಲೋಕಾಯುಕ್ತ ಬಲೆಗೆ ಬಿದ್ದ ಪೋಲೀಸ್ ಅಧಿಕಾರಿಗೆ ಇನ್ನೊಂದು ತಿಂಗಳಲ್ಲಿ ಪ್ರೊಮೋಷನ್ ಆಗುವುದಿತ್ತು.
- ಅಷ್ಟರಲ್ಲಿ ಲೋಕಾಯುಕ್ತರು ಮೋಷನ್ ಗುಳಿಗೆ ಕೊಟ್ಟುಬಿಟ್ಟರು!
***
* ’ಬಡವಾ ನೀ ಮಡಗಿದಂಗಿರು’ ಅಂತ ಗಾದೆ ಇದೆ. ಆದರೆ ಕರ್ನಾಟಕದ ಬಡವರು ಇನ್ನು ಮಡಗಿದಂಗಿರಬೇಕಾಗಿಲ್ಲ.
- ಜುಮ್ಮಂತ ತೀರ್ಥಯಾತ್ರೆ ಮಾಡಿಕೊಂಡಿರಬಹುದು! ಕೃಷ್ಣ(ಯ್ಯ)ನ ಕೃಪೆ!
***
* ಮಲ್ಲಿಕಾರ್ಜುನ ಖರ್ಗೆಗೆ ಕ್ಯಾಬಿನೆಟ್ ಯೋಗ.
- ’ನಚ್ಚುಗೆ ಮನ ನಿಮ್ಮಲ್ಲಿ. ಮೆಚ್ಚುಗೆ ಮನ ನಿಮ್ಮಲ್ಲಿ. ಕರಗುಗೆ ಮನ ನಿಮ್ಮಲ್ಲಿ. ಕೊರಗುಗೆ ಮನ ನಿಮ್ಮಲ್ಲಿ. ಎನ್ನ ಪಂಚೇಂದ್ರಿಯಗಳು ತಾಯೇ ನಿಮ್ಮ ಪದತಲದಲ್ಲಿ. ಪೊಡಮಡುವನೀ ಚೆನ್ನ-ಮಲ್ಲಿಕಾರ್ಜುನ ಖರ್ಗೆ’, ಎಂದದ್ದಕ್ಕೂ ಸಾರ್ಥಕವಾಯ್ತು!
- ಇದೇ ವೇಳೆ, ’ಹಸಿವಾದೊಡೆ ಮೃಷ್ಟಾನ್ನಗಳುಂಟು. ತೃಷೆಯಾದೊಡೆ ಪಾನೀಯಗಳುಂಟು. ಶಯನಕ್ಕೆ ತೂಲಿಕಾತಲ್ಪಗಳುಂಟು. ಎಸ್ಸೆಸ್ಸ್ ಮಲ್ಲಿಕಾರ್ಜುನಾ, ಮಂತ್ರಿಗಿರಿ ಮಾತ್ರ ನಿನಗಾಯ್ತು ಕನಸಿನ ಗಂಟು’, ಎಂದು ದಾವಣಗೆರೆ ಶಿವ(ಶಂಕರ)ಶರಣರಿಂದ ಕ್ಷೀಣ ದನಿಯೊಂದು ಹೊರಟಿದೆ!
- ಮುನಿಯಪ್ಪ ಮಾತ್ರ, ’ಸಹಾಯಕ ಖಾತೆಯೆಂದು ಮುನಿಯೆನು ನಾನು. ಕನಿಕರದಿಂದ ಕೊಟ್ಟವ್ರೆ. ತೃಪ್ತಿಪಟ್ಟೇನು’, ಎಂದು ಮುನಿಯ ಪೋಸು ಕೊಟ್ಟಿದ್ದಾರೆ!
- ಇನ್ನು, ಧರ್ಮಸಿಂಗ್! ಮೇಡಂ ಮನೆಬಾಗಿಲಲ್ಲಿ ನಿಂತು, ’ಧರುಮಾರೀ ತಾಯಿತಂದೆಮ್ಮಾ. ಓ ಶಿವನೇ ಭಗವಂತ, ’ಕೈ’ಕಾಲ್ ಮುಗಿತೀನಿ ಮಂತ್ರಿ ಮಾಡಮ್ಮಾ’, ಅಂತ ಬೇಡಿಕೊಂಡರೂ ಪ್ರಯೋಜನವಾಗದಿದ್ದಾಗ, ’ಧರಂ-ಕರಂ ಕೀ ಬಾತ್ ಹೈ; ಬ್ಯಾಡ್‌ಲಕ್ ಮೇರಾ ಸಾಥ್ ಹೈ. ಕ್ಯಾ ಕರೂ ರಾಮ್ ಮೈನೆ ಬುಡ್ಢಾ ಹೋಗಯಾ!’ ಎಂದು ಕಣ್ಣೊರೆಸಿಕೊಂಡಿದ್ದಾರೆ.
- ಮಂತ್ರಿಪದವಿ ಸಿಗದೆ ನಿರಾಶರಾದ ಕುಮಾರಸ್ವಾಮಿ ತಮ್ಮಷ್ಟಕ್ಕೇ ಹಾಡಿಕೊಳ್ಳುತ್ತಿದ್ದಾರೆ, ’ಏನಿದೀ ಗ್ರಹಚಾರವೋ! ಏನಿದೀ ವನವಾಸವೋ! ಏನು ಮಾಡಿದೆನೆಂದು ಈ ಗತಿ ಎನಗೆ ತಂದೆಯೊ ಪಶುಪತಿ!’
- ಕ್ಯಾಬಿನೆಟ್ ದರ್ಜೆ ಸಿಕ್ಕರೂ ಖರ್ಗೆ ಮುಖದಲ್ಲಿ ನಗೆ ಇಲ್ಲ! ಖರ್ಗೆ ನಗುಮೊಗ(ದ ಸೇವೆ) ಏನಿದ್ದರೂ ಹೈಕಮಾಂಡ್ ಮಾತಾಸುತರಿಗೆ ಮೀಸಲು!
***
* ಕೇಂದ್ರ ಮಂತ್ರಿಮಂಡಲದಲ್ಲಿರುವ ಅತಿ ದಡೂತಿ ವ್ಯಕ್ತಿ ಆಂಧ್ರಪ್ರದೇಶದ ಪನಬಾಕ ಲಕ್ಷ್ಮಿ.
- ’ಪನ’ ಅಂದರೆ ತೆಲುಗಿನಲ್ಲಿ ’ಹೊಟ್ಟೆ’ ಎಂದರ್ಥವಲ್ಲ.
***
* ಲಾಹೋರ್‌ನಲ್ಲಿ ಸೈತಾನರ ದಾಳಿ.
- ಭಸ್ಮಾಸುರನಿಗೀಗ ಸ್ವಯಂವಿನಾಶದ ಪಾಳಿ!
***
* ಉತ್ತರ ಕೊರಿಯಾದಿಂದ ಅಣ್ವಸ್ತ್ರ ಪರೀಕ್ಷೆ, ಕ್ಷಿಪಣಿ ಉಡಾವಣೆ.
- ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಅಣುಬಾಂಬು!
***
* ಖಾತೆ ಕತೆ:
- ಖರ್ಗೆಗೆ ಕಾರ್ಮಿಕ ಖಾತೆ ಸಿಕ್ಕಿದೆ. ಹೈಕಮಾಂಡ್‌ನ ನಿಷ್ಠಾವಂತ ಕಾರ್ಮಿಕನಿಗೆ ಕರೆಕ್ಟ್ ಖಾತೆಯೇ ಸಿಕ್ಕಿದೆ! ಇನ್ನೀಗ, ಮಿತ್ರ ಎಸ್.ಕೆ.ಕಾಂತಾ ಒಡನೆ ಎಂದಿನಂತೆ ’ಕಾಂತಾಸಮ್ಮಿತಿ’(’ಮಿತ್ರಸಮ್ಮಿತಿ’)ಯೋ ಅಥವಾ ಕಾರ್ಮಿಕ ಸಮಸ್ಯೆಗಳನ್ನು ಹಿಡಕೊಂಡು ಜಟಾಪಟಿಯೋ ನೋಡಬೇಕು.
- ಮೊಯ್ಲಿ ಕಾನೂನು ಸಚಿವರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಇವರಿಂದ ದೇಶಕ್ಕೆ ಕಾನೂನು ಸುಧಾರಣಾ ಯೋಗ ಇದೆಯೇ ನೋಡಬೇಕು. ಈಗಿರುವ ಹಳಸಲು ಕಾನೂನುಗಳೇ ಮುಂದುವರಿಯುವುದಾದರೆ ಆ ಹುದ್ದೆಗೆ ’ಮಹಾಕವಿ’ ಯಾಕೆ ಬೇಕು?
- ಮುನಿಯಪ್ಪ ರೈಲ್ವೆ ಮಂತ್ರಿ. ರಸ್ತೆಗೆ ಬಿದ್ದಿದ್ದರು, ಈಗ ಟ್ರೈನ್ ಹತ್ತಿಸಲಾಗಿದೆ! (’ಮುನಿಯಬೇಡಿ ಬಾಸ್, ಭೂಸಾರಿಗೆಯಿಂದ ರೈಲ್ವೆಗೆ ಬಂದ್ರಿ’, ಅಂದೆ ಅಷ್ಟೆ!) ಮುನಿ ಈಗ ರೈಲ್ವೆ ಮಂತ್ರಿ; ’ಕೋಲ್ಕತ್ತಾ-ಕೋಲಾರ ಮಮತಾಮುನಿ ಎಕ್ಸ್‌ಪ್ರೆಸ್’ ಸ್ಟಾರ್ಟ್ ಆಗ್ತದಂತ್ರೀ? (ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರೋ ರೂಟ್‌ಗಳು ಸ್ಟಾರ್ಟ್ ಆದ್ರೆ ಸಾಕು, ಸ್ವಾಗತಿಸ್ತೀವಿ ಮಂತ್ರೀ, ಬಾರಿಸಿ ಬಾಜಾಬಜಂತ್ರಿ!)
- ರಾಹುಲ್‌ನ ಯುವಮಿತ್ರರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ’ಗೆದ್ದಿದ್ದರೆ ನಾನೂ ಮಿನಿಸ್ಟರ್ ಆಗ್ತಿದ್ದೆ’ ಅಂತ ’ಯುವತೇಜ’ಮ್ಮ ’ಕೈಕೈ’ ಹಿಸುಕಿಕೊಳ್ಳುತ್ತಿದ್ದಾರಂತೆ! ಭ್ರಮೆಯ ಪರಾಕಾಷ್ಠೆ! ’ಬುದ್ಧಿವಂತರಿಗೆ ಮಾತ್ರ ಮಂತ್ರಿಪದವಿ ನೀಡಲಾಗಿದೆ’ ಎಂಬ ಪ್ರಧಾನಿಯ ಹೇಳಿಕೆಯನ್ನು ತೇಜಮ್ಮ ಪೇಪರಲ್ಲಿ ಓದಿಲ್ಲವೆನ್ನಿಸುತ್ತದೆ!
***
* ಮಂತ್ರಿಮಂಡಲ ’ಹೊಸ ಚಿಗುರು ಹಳೆ ಬೇರು’ ಅಂತೆ.
- ’ಹುಸಿ ಚಿಗುರು ಕೊಳೆ ಬೇರು’ ಆಗದಿದ್ದರೆ ಸಾಕು! ’ಹೊಸ ಒಗರು ಹಳೆ ಪೊಗರು’ ಕೂಡ ಆಗದಿರಲಿ.
***
* ನಿನ್ನೆ ಬೆಂಗಳೂರಿನಲ್ಲಿ ನಡೆದ ’ವಿಕಾಸ ಸಂಕಲ್ಪ ಉತ್ಸವ’ದ ಕೆಲವು ಕಾರ್ಯಕ್ರಮಗಳು ಇಂತಿದ್ದವು:
- ಮುಖ್ಯಮಂತ್ರಿಗಳ ’ಕಮಲವಿಕಾಸ ಸಂಕಲ್ಪ’ಕ್ಕೆ ’ಧನಾಧನ್’ ಸಾಥ್ ನೀಡಿದ ಬಳ್ಳಾರಿ ಗಣಿದಣಿಗಳಿಗೆ in absentia ಸನ್ಮಾನ ಮಾಡಲಾಯಿತು.
- ’ಪಂಚ್ ತಂತ್ರ’ ಪ್ರತಿಷ್ಠಾನದ ವತಿಯಿಂದ ಕಟ್ಟಾ-ಅಶೋಕ್ ಜೋಡಿಗೆ ’ಕಮಲಕ-ದಮಲಕ’ ಬಿರುದು ನೀಡಲಾಯಿತು.
- ಸಮಾರಂಭದ ಮುಖ್ಯ ಆಕರ್ಷಣೆಯಾಗಿ ಆಗಮಿಸಿದ್ದ ಶಿಲ್ಪಾಶೆಟ್ಟಿಯ ’ಅಮೃತಹಸ್ತ’ದಿಂದ ಶೋಭಾ ಮೇಡಮ್‌ಗೆ ’ಬಿಗ್ ಸಿಸ್ಟರ್’ ಬಿರುದು ಕೊಡಿಸಲಾಯಿತು.
- ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ತಮ್ಮ ಡಾಕ್ಟರೇಟನ್ನು ಸಜಿನೋವಾ ವಿಶ್ವವಿದ್ಯಾಲಯಕ್ಕೆ ವಾಪಸ್ ಮಾಡಿದರು. ಅದರ ಬದಲಿಗೆ ಅವರಿಗೆ ಸಂಸ್ಕೃತ ವಿವಿ ವತಿಯಿಂದ ’ಕಮಲಕೇಸರಿ’ ಬಿರುದು ಪ್ರದಾನ ಮಾಡಲಾಯಿತು. ಸದಾ ’ಆಪರೇಷನ್ ಕಮಲ’ದ ಧ್ಯಾನ ಮಾಡುವ ಸದಾನಂದಗೌಡರಿಗೆ ’ಕಮಲಕ್ಕೇ ಸರಿ’ ಬಿರುದು ನೀಡಲಾಯಿತು.
- ೩೬೫ ಶಾಲಾಮಕ್ಕಳು ಕಮಲದ ಆಕಾರದಲ್ಲಿ ನಿಂತು, ’ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು; ಬಳ್ಳಾರಿ ದಣಿಗೆ ಭಾಗ್ಯ ತಂದ ಗಣಿಯ ಬೀಡಿದು’ ಹಾಡನ್ನು ಹಾಡಿದರು. (ಸಂಗೀತ ಸಂಯೋಜನೆ ಮಾಡಿದ್ದು ಅನು ಮಲಿಕ್.)
- ಸಮಾರಂಭದ ಅತಿ ವಿಶೇಷ ಆಕರ್ಷಣೆ ಯಾವುದಾಗಿತ್ತು ಗೊತ್ತೆ? ’ಹುಟ್ಟಿದರೇ ಬಳ್ಳಾರಿಯಲ್ಲ್ ಹುಟ್ಟಬೇಕು; ಮುಟ್ಟಿದರೇ ಬಳ್ಳಾರಿ ಮಣ್ಣ್ ಮುಟ್ಟಬೇಕು’ ಹಾಡಿಗೆ ಶ್ರೀರಾಮುಲು ನೃತ್ಯ! ಎನ್‌ಟಿಆರ್ ಸ್ಟೈಲ್‌ನಲ್ಲಿ!
***
* ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ಪತ್ರಕರ್ತರು ದೇವೇಗೌಡರ ಅಭಿಪ್ರಾಯ ಕೇಳಿದರು.
- ದೇವೇಗೌಡರು ಏನೇನೋ ಇಷ್ಟುದ್ದ ಗೊಣಗಿದರು. ಯಾರಿಗೂ ಅರ್ಥವಾಗಲಿಲ್ಲ. ಇನ್ನೊಮ್ಮೆ ಕೇಳಲು ಅಂಜಿಕೆಯಾಗಿ ಪತ್ರಕರ್ತರು ಹಾಗೇ ವಾಪಸಾದರು!
***
* ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕರುಣಾನಿಧಿ ತಮ್ಮ ಪುತ್ರ ಸ್ಟಾಲ್-ಇನ್ ಅನ್ನು ಇನ್-ಸ್ಟಾಲ್ ಮಾಡಿದ್ದಾರೆ.
- ’ಅಕ್ಕರೆಯುಳ್ಳ ಅಳಗಿರಿ ರಂಗ’ನ ದೆಹಲಿಗೆ ಸಾಗಹಾಕಿ ’ಚಿಕ್ಕ ಧುರಂಧರ ಸ್ಟಾಲಿನ್ ಮಾಣಿ’ಗೆ ಉತ್ತರಾಧಿಕಾರದ ಸೌಟು ನೀಡಿದ್ದಾರೆ. ’ಎನ್ನ ಪಾಲಿಸೋ, ಕರುಣಾನಿಧಿ, ಪಲ್ಲಂಗಶಯನ ದಯಾವಾರಿಧಿ’, ಎಂದು ಸ್ಟಾಲಿನ್ ಮಾಣಿ ಇಷ್ಟು ಕಾಲ ಬೇಡಿಕೊಂಡದ್ದು ಸಾರ್ಥಕವಾಯ್ತು.
***
* ಭಾರತೀಯರಮೇಲೆ ಆಸ್ಟ್ರೇಲಿಯನ್ ಯುವಕರು ದೌರ್ಜನ್ಯ ಎಸಗುತ್ತಿದ್ದಾರೆ.
- ಬ್ರಿಟನ್‌ನಿಂದ ಗಡಿಪಾರಿಗೊಳಗಾಗಿ ಹೋದ ಅಪರಾಧಿಗಳ ಸಂತತಿ ತಾನೆ ಆ ಯುವಕರು!
***
* ಬಿಜೆಪಿ ಸರ್ಕಾರದ ಸಾಧನೆ ಪ್ರಶಂಸಿಸಿ ತಿಪ್ಪೇಶಿ ರಚಿಸಿರುವ ಕವನ (’ಜಯತು ಜಯ ವಿಠಲಾ’ ಧಾಟಿಯಲ್ಲಿ):
ಜಯತು ಜಯ ಕಮಲಾ, ನಿನ್ನ ಪಕ್ಷವು ಕಲ್ಪವೃಕ್ಷವು ಅದುವೆ ದೊಡ್ಡಾಲ!
ಆಪರೇಷನ್ ಕಮಲದ ಸೆಳೆತ, ಅನ್ಯರೆಲ್ಲರು ಬರುವರು ಇತ್ತ,
ಆಸೆಯ ತೋರ್‍ಸಯ್ಯ, ಪಕ್ಷಕೆ ಸೇರ್‍ಸಯ್ಯ,
ನೀ ಬಲೆ ಚೂಟಿಯಯ್ಯ, ’ಬೂಸಿಯ’ಯ್ಯ, ಸದಾನಂದಯ್ಯಾ!
***
* ಸರ್ಕಾರದ ’ವಿಕಾಸ ಸಂಕಲ್ಪ ಉತ್ಸವ’ಕ್ಕೆ ಎದಿರೇಟಾಗಿ ದೇವೇಗೌಡರು ತಾವೂ ಒಂದು ಉತ್ಸವ ಹಮ್ಮಿಕೊಂಡಿದ್ದಾರೆ.
- ’ಅವಕಾಶ ಸಂಕಲ್ಪ ಉತ್ಸವ’! ಆ ಉತ್ಸವಕ್ಕಾಗಿ ದತ್ತ ಅವರು ಗೀತೆಯೊಂದನ್ನು ರಚಿಸಿದ್ದಾರೆ:
- ’ಜೇನಿನ ಹೊಳೆಯೊ, ಹಾಲಿನ ಮಳೆಯೊ, ಮುದ್ದೆಯೊ, ನಂತರ ಸವಿನಿದ್ದೆಯೊ!’ ಇದು ಗೀತೆಯ ಪಲ್ಲವಿ. ನುಡಿಜೇನಿನ ಹೊಳೆ ಹರಿಸುವ ಕುಮಾರಸ್ವಾಮಿ, ನಂದಿನಿ ಹಾಲಿನ ಮಳೆ ಸುರಿಸುವ ರೇವಣ್ಣ ಮತ್ತು ಮುದ್ದೆ-ನಿದ್ದೆ ಯಜಮಾನರು ಮೂವರನ್ನೂ ’ಕಸ್ತೂರಿ’ ಕನ್ನಡದಲ್ಲಿ ಸ್ತುತಿಸಲಾಗಿದೆ. ಗೀತೆಯ ಚರಣದಲ್ಲಿ ಅನಿತಕ್ಕ-ಭವಾನಿಯಕ್ಕರನ್ನು ಈ ಕೆಳಗಿನಂತೆ ನೆನೆಯಲಾಗಿದೆ:
’ಕುಮಾರಸ್ವಾಮಿಯ ಸತಿ ಅನಿತಕ್ಕ,
ಭವಿ ರೇವಣ್ಣಗೆ ಭವಾನಿ ಪಕ್ಕ,
ದಾಸರು ಪತಿಗಳು ನಾಡಿಗೆ ನೀಡಿದ
ನಾಳಿನ ನಾಯಕಿಮಣಿಗಳು ತಕ್ಕಾ!’
***
* ನಾವೇನು ಕಮ್ಮಿ ಅಂತ ಆರ್‌ವಿಡಿ-ಡಿಕೆಶಿ ಕೂಡ ಉತ್ಸವದ ತಯಾರಿ ನಡೆಸಿದ್ದಾರೆ.
- ಇವರದು ’ಪ್ರಕಾಶರಹಿತೋತ್ಸವ’! ಈ ಉತ್ಸವದಲ್ಲಿ ಸಾಮೂಹಿಕವಾಗಿ ಹಾಡಲು ಎಂ.ಪಿ.ಪ್ರಕಾಶ್ ರಚಿಸಿರುವ ಗೀತೆ ಈ ಕೆಳಗಿನಂತೆ ಪ್ರಾರಂಭವಾಗುತ್ತದೆ:
’ಒಂದೇ ಒಂದೇ ಒಂದೇ, ಹೈಕಮಾಂಡು ಒಂದೇ.
ವಂದೇ ವಂದೇ ವಂದೇ, ಮೇಡಮ್ಮಿಗೆ ವಂದೇ’.
***
* ಆಸ್ಟ್ರೇಲಿಯಾದ ಗೌರವ ಡಾಕ್ಟರೇಟನ್ನು ಅಮಿತಾಭ್ ನಿರಾಕರಿಸಿದ್ದಾರೆ.
- ’ದೇಶ್‌ಪ್ರೇಮಿ’ ’ಮಹಾನ್’ ನಟ ದೇಶದ ಬಗ್ಗೆ ’ಅಭಿಮಾನ್’ ಮೆರೆಯುವ ಮೂಲಕ ’ಹಮ್ ಕಿಸೀಸೇ ಕಮ್ ನಹೀ’ ಎಂಬ ಸಂದೇಶವನ್ನು ಆಸ್ಟ್ರೇಲಿಯಾಕ್ಕೆ ರವಾನಿಸಿದ್ದಾರೆ!
***
* ಲೋಕಸಭೆಗೆ ಮಹಿಳಾ ಸ್ಪೀಕರ್.
- ’ನನ್ನ ಮನೆಗೂ ಮಹಿಳಾ ಸ್ಪೀಕರೇ. ಬರೀ ಸ್ಪೀಕರಲ್ಲ, ಲೌಡ್ ಸ್ಪೀಕರ್!’ ಅಂತಾನೆ ತಿಪ್ಪೇಶಿ!
***
* ಜಗಜೀವನರಾಮ್ ಮಗಳು ಲೋಕಸಭಾಧ್ಯಕ್ಷೆ.
- ಅಪ್ಪನ ಪ್ರಧಾನಿ ಪಟ್ಟದ ಬಯಕೆ ಈಡೇರಲಿಲ್ಲ; ಮಗಳಿಗೆ ಸ್ಪೀಕರ್ ಪಟ್ಟ ಬಯಸದೆಯೇ ಬಂತಲ್ಲ! ಇದುವೇ ಜಗ-ಜೀವನ-ರಾಮ್!
***
* ರಾಷ್ಟ್ರಪತಿ, ಸೂಪರ್ ಪ್ರಧಾನಿ, ಸ್ಪೀಕರ್ ಎಲ್ಲ ಮಹಿಳೆಯರೇ!
- ಪ್ರಧಾನಿಯೂ ಮಹಿಳೆಯೇ ಆಗಿಬಿಟ್ಟರೆ ಅಲ್ಲಿಗೆ ಪ್ರಮೀಳಾ ರಾಜ್ಯ ಸಂಪೂರ್ಣಂ! ಪ್ರಿಯಾಂಕಾ ಏನಂತಾರೆ?
***
* ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೇಸರೀಕರಣ: ವೈಎಸ್‌ವಿ ದತ್ತ
- ಜೆಡಿಎಸ್‌ನ ಇದುವರೆಗಿನ ಸಾಧನೆ? ರಾಜಕಾರಣ, ರಾಜಕಾರಣ ಮತ್ತು ರಾಜಕಾರಣ!
- ಕಾಂಗ್ರೆಸ್‌ನ ಸಾಧನೆ? ಉಗ್ರಪ್ಪನ ಅತ್ಯುಗ್ರ ಭಾಷಣ!
***
* ’ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡ್ತೀವಿ’, ಅಂತಾರೆ ಯಡಿಯೂರಪ್ಪ.
- ’ಅವರೆಲ್ಲಿ ಕೊಡ್ತಾರೆ, ಪರಮಾಧಿಕಾರಿಯೂ ಅವರೇ, ಸರ್ವಾಧಿಕಾರಿಯೂ ಅವರೇ’, ಅಂತಾರೆ ಈಶ್ವರಪ್ಪ!
***
* ರಾಜ್ಯ ಬಿಜೆಪಿಯಲ್ಲಿ ಒಡಕು?
- ಈಶ್ವರ(ಪ್ಪ), ಎದುರುಗಡೆ ಬಸವಣ್ಣ(ಗೌಡ), ಹಿಂದುಗಡೆ (ಗಣಿ) ಪ್ರಮಥ ಗಣ, ಇದೇ ನೋಡಿ ಕೆಡುಕು!
***
* ಪೋಲೀಸರು ಜನಸ್ನೇಹಿಗಳಾಗಬೇಕೆಂಬ ಉದ್ದೇಶದಿಂದ ರಾಜ್ಯ ಪೋಲೀಸ್ ಇಲಾಖೆಯು ಹಲವು ಜನಪರ ಯೋಜನೆಗಳನ್ನು ಘೋಷಿಸಿದೆ.
- ಪೋಲೀಸರ ’ಸಂಸ್ಕೃತಿ’ ಮತ್ತು ’ಸಂಸ್ಕೃತ’ ಸುಧಾರಿಸದೆ ಯಾವ ಜನಪರ ಯೋಜನೆಯಿಂದಲೂ ಏನೂ ಪ್ರಯೋಜನವಿಲ್ಲ.
***
* ’ಇಷ್ಟ ಇಲ್ಲಾಂದ್ರೆ ಎದ್ದುಹೋಗಿ’: ಪತ್ರಿಕಾಗೋಷ್ಠಿಯಲ್ಲಿ ನಟಿ ರಮ್ಯಾ ಸೊಕ್ಕಿನ ಮಾತು!
- ’ಥಿಯೇಟರ್‌ನಿಂದಲೂ ಎದ್ದುಹೋಗಬಹುದೇ?’: ಪ್ರೇಕ್ಷಕನ ಪ್ರಶ್ನೆ.
***
* ಹೆಸರು ರಮ್ಯ.
- ಅವತಾರ ರೌದ್ರ!
***
* ತಮ್ಮ ಬಡಾವಣೆಯಲ್ಲಿ ಬೀದಿನಾಯಿಗಳು ಹಿಂಡುಹಿಂಡಾಗಿ ಓಡಾಡುತ್ತಿರುತ್ತವೆಂದು ನಾಗರಿಕರೊಬ್ಬರು ದೂರಿದ್ದಾರೆ.
- ಅವರಿಗೆ ಗೊತ್ತಿಲ್ಲ ಅವುಗಳ ’ಜನ್ಮಜನ್ಮದಾ ಅನುಬಂಧ, ಹೃದಯ ಹೃದಯಗಳ ಪ್ರೇಮಾನುಬಂಧ’!
***
* ಮುಖ್ಯಮಂತ್ರಿಯಲ್ಲದ ’ಮುಖ್ಯಮಂತ್ರಿ’ ಚಂದ್ರು!
- ’ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಎಂಬ ’ಹಲ್ಲಿಲ್ಲದ ಹಾವು’!
***
* ಕೊನೆ ಹನಿ:
ಪಾಲಿಗೆ ಬಂದದ್ದು
ಪಂಚಾಮೃತ
ನಾಲಿಗೆ ಬಂಡೆದ್ದು
ಚಂಪಾಮೃತ!
(’ಚಂಪಾ’ ಗೊತ್ತಲ್ಲ?)
--೦--
ಸೋಮವಾರ, ಜೂನ್ 1, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಎಚ್. ಆನಂದರಾಮ ಶಾಸ್ತ್ರೀ ಸರ್,
ಪ್ರತ್ಯುತ್ತರಅಳಿಸಿಈ ಬಾರಿಯ ಗುಳಿಗೆಗಳು ಸಿಕ್ಕಾಪಟ್ಟೇ ಷ್ಟ್ರಾಂಗ್ ಆಗಿವೆ...ಕೆಲವಂತೂ ಸೂಪರ್...
ಪ್ರಭಾಕರನ್,ಮಹಿಳಾ ಸ್ಪೀಕರ್. ಕರುಣಾನಿಧಿ ಮಕ್ಕಳ ಕತೆ, ಇತ್ಯಾದಿಗಳು ಸಿಕ್ಕಾಪಟ್ಟೇ ಕಿಕ್ ಕೊಡುತ್ತವೆ. ಈ ಬಾರಿ ಗುಳಿಗೆಗಳನ್ನು ತಯಾರಿಸಲು ಪ್ರಪಂಚವನ್ನೇ ಸುತ್ತಿಬಂದಿದ್ದೀರಿ...
ಹೀಗೆ ಮುಂದುವರಿಯಲಿ...
ನಮಃಶಿವಾಯ.
ಪ್ರತ್ಯುತ್ತರಅಳಿಸಿsuper ... maLege oLLeya guLige koTTidIri. nanna SIta maayavaayitu. :-) :-)
ಪ್ರತ್ಯುತ್ತರಅಳಿಸಿಶಾಸ್ತ್ರಿಗಳೇ,
ಪ್ರತ್ಯುತ್ತರಅಳಿಸಿಈಸಲದ ಡೋಸೇಜ್ ಚೆನ್ನಾಗಿ ಕೆಲಸ ಮಾಡುತ್ತೆ. ಸುಮಾರು ದಿನ ಬಿಟ್ಟು ಗುಳಿಗೆ ಕೊಡುತ್ತಿರುವುದಕ್ಕೋ ಏನೋ ಸಿಕ್ಕಾಪಟ್ಟೆ ಗುಳಿಗೆ ಕೊಟ್ಟು ಸುಸ್ತು ಮಾಡಿ ಬಿಟ್ಟಿರಿ ಮಾರಾಯರೇ. ಒ೦ದೇ ದಿನ ಇಷ್ಟು ಗುಳಿಗೆ ನು೦ಗಿದ್ದಾಗಿದೆ, ಮು೦ದೇನಾಗುವುದೋ ಆ ದೇವನೇ ಬಲ್ಲ. ಬಹಳ ಚೆನ್ನಾದ ಗುಳಿಗೆಗಳು, ಶಬ್ದಗಳನ್ನು ಒಡೆದು ಹೊಸ ಅರ್ಥ ಹೊರಡಿಸುವ ನಿಮ್ಮ ಕಲೆ, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಸಾ೦ದರ್ಭಿಕವಾದ, ಅರ್ಥಪೂರ್ಣವಾದ., ಚಾಟೂಕ್ತಿಗಳನ್ನಿತ್ತು ಸ೦ತುಷ್ಟರನ್ನಾಗಿಸಿದ್ದೀರೀ. ಆನ೦ದರಾಮಾ ನಮೋನ್ನಮಃ.
Sugar-coated pills!
ಪ್ರತ್ಯುತ್ತರಅಳಿಸಿಹೌದು ರೂಪಾ ಅವರೆ, ಮಳೆಯು ಉಂಟುಮಾಡಿದ ಶೀತಕ್ಕೆ ಇದು ಬೇಜಾನ್ ಗುಳಿಗೆಯ ಮಳೆ! ಗಣೇಶನದು ಮುಂಗಾರು ಮಳೆ, ಇದು ಕೆಂಗಾರು ಮಳೆ!
ಪ್ರತ್ಯುತ್ತರಅಳಿಸಿಏನ್ ಚಂದ ವಿಶ್ಲೇಷಿಸಿದ್ದೀರಿ ಪರಾಂಜಪೆಯವರೆ, ಬಲು ಚಂದ ಬರೆದಿದ್ದೀರಿ. ನಾನು ಆಗಾಗ ಶ್ಲೇಷೆ punಡಿತ, ನೀವು ವಿಶ್ಲೇಷೆ* ಪಂಡಿತ!
(*ವಿಶ್ಲೇಷ ಅಲ್ಲ, ವಿಶ್ಲೇಷಣ.)
ಸುನಾಥ್ ಅವರೆ, ನಿಮ್ಮದು sugar-quoted words!
ಮೂವರು ಸನ್ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳು.