ಸೋಮವಾರ, ಜೂನ್ 29, 2009

ದಿನಕ್ಕೊಂದು ಕವನ: (೩) ನನ್ನಹಾಗಲ್ಲ

ಅಲ್ಲಿ ಕಾಣುವ ನದಿಯು ನನ್ನಹಾಗಲ್ಲ
ಚಲಿಸುವುದು ಅನವರತ ಸಾಗರದ ಕಡೆಗೆ
ಅದರ ಪಕ್ಕದ ಗಿರಿಯು ನನ್ನಹಾಗಲ್ಲ
ಚಳಿಗಾಳಿ ಮಳೆ ಬಿಸಿಲು ಬಲು ಇಷ್ಟ ಅದಕೆ

ಅಲ್ಲಿ ನಿಂತಿಹ ಹರಿಣಿ ನನ್ನಹಾಗಲ್ಲ
ಕ್ರೂರಮೃಗಗಳ ನಡುವೆ ಬಾಳುವುದು ಸುಖದಿ
ಅದರ ಬದಿಯಿಹ ತರುವು ನನ್ನಹಾಗಲ್ಲ
ಉದುರಿದೆಲೆಗಳ ಮರೆತು ಚಿಗುರುವುದು ಮುದದಿ

ಅಲ್ಲಿ ಹಾರುವ ಹಕ್ಕಿ ನನ್ನಹಾಗಲ್ಲ
ಎಲ್ಲ ಬಂಧನ ಕಳಚಿ ಏರುವುದು ನಭಕೆ
ಅದರ ಮೇಲಿಹ ಮೋಡ ನನ್ನಹಾಗಲ್ಲ
ಧರೆಯ ದಾಹಕೆ ಕರಗಿ ಇಳಿಯುವುದು ಇಳೆಗೆ

ಆದರೆ,
ಎಲ್ಲ ಆಳುವ ನನ್ನ
ಆಳುಗಳು
ಅವೆಲ್ಲ!

ಆದರೂ
ನನ್ನ ಆಳುವುವು!
ಅವು
ನನ್ನಹಾಗಲ್ಲ

4 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಸರ್....

    ತುಂಬಾ ಇಷ್ಟವಾಯಿತು..
    ಅನುಭವ, ಆಧ್ಯಾತ್ಮ ಸೇರಿದ ನುಡಿಗಳು ಬಲು ಹಿತವಾಗಿರುತ್ತದೆ...

    ಪ್ರತ್ಯುತ್ತರಅಳಿಸಿ
  3. ಮಿತ್ರದ್ವಯರೇ,
    ನಿಮ್ಮಿಬ್ಬರ ಅರ್ಥಪೂರ್ಣ ಪ್ರಶಂಸೆಯಿಂದ ನಾನು ಪುಳಕಿತನಾಗಿದ್ದೇನೆ, ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ