ಭಾನುವಾರ, ಜೂನ್ 21, 2009

ಅಪ್ಪ

ಇಂದು ಫಾದರ್ಸ್ ಡೇ. ಮೂಲತಃ ಇದು ಭಾರತದ ಆಚರಣೆಯಲ್ಲದಿದ್ದರೂ ವಿಶ್ವದ ಅನೇಕ ದೇಶಗಳಲ್ಲಿ ಬೇರೆಬೇರೆ ದಿನಗಳಂದು ಫಾದರ್ಸ್ ಡೇ ಆಚರಣೆಯಲ್ಲಿದ್ದು ಈ ವಾರ್ಷಿಕ ಆಚರಣೆಗೆ ಅಂತರರಾಷ್ಟ್ರೀಯ ಸ್ವರೂಪ ಬಂದಿರುವುದು ಸುಳ್ಳಲ್ಲ.

ನನ್ನ ತಂದೆ ಗತಿಸಿ ನಲವತ್ತು ವಸಂತಗಳಾಗಿವೆ. ತಂದೆಯ ನೆನಪುಗಳು ಮಾತ್ರ ಸದಾ ಹಸಿರಾಗಿ ನನ್ನೊಡನೆ ಸಾಗಿಬಂದಿವೆ. ಅರವತ್ತನ್ನು ಸಮೀಪಿಸುತ್ತಿರುವ ನಾನಿಂದು ಮೊಮ್ಮಕ್ಕಳ ಅಜ್ಜನಾಗಿದ್ದರೂ ತಂದೆಗೆ ಮಗನಾಗಿ ಬೆಳೆದ ನನ್ನ ಆ ಬಾಲ್ಯದ ಸ್ಮೃತಿಯು ಮನದಲ್ಲಿ-ಹೃದಯದಲ್ಲಿ ಸದಾ ಜಾಗೃತವಾಗಿದ್ದು ನನ್ನನ್ನು ಇಂದಿಗೂ ಮುನ್ನಡೆಸುತ್ತಿದೆ, ನನಗೆ ಖುಷಿ ನೀಡುತ್ತಿದೆ.

ತಂದೆಯೊಂದಿಗಿನ ನನ್ನ ಆ ದಿನಗಳನ್ನು ನೆನೆದು, ಜೊತೆಗೆ, ನಾನು ಗಮನಿಸಿದ ಇತರರ ಅನುಭವಗಳನ್ನು ಹದವಾಗಿ ಬೆರೆಸಿ ನಾನು ಬರೆದ ಒಂದು ಕವನ ಮತ್ತು ಒಂದಷ್ಟು ಹನಿಗವನಗಳು ಇದೋ ಇಲ್ಲಿವೆ.

(ಕವನ)

ಅಪ್ಪ
------

ಯಜಮಾನ
ಮನೆಗೆ, ಅಮ್ಮನಿಗೆ,
ತನ್ನನೇಕ ತಪ್ಪು
ಕಲ್ಪನೆಗಳಿಗೆ.

ಅದೇವೇಳೆ
ಅಡಿಯಾಳು
ಅಮ್ಮನ ದೃಢತೆಗೆ
ಮತ್ತು ತನ್ನಹಂಕಾರಕ್ಕೆ.

ಅಪ್ಪ
ನಮಗೊಂದು ಪ್ರಶ್ನೆ.
ಅನೇಕ ಉತ್ತರ.
ಆಯ್ಕೆ ನಮ್ಮದು
ನೆರವಿಗೆ ಅಮ್ಮ.

ಹಡೆದವನು
ಹೊಡೆದವನು
ಎಷ್ಟೋ ಸಲ
ಕಣ್ಣೀರು ಮಿಡಿದವನು
ನಮಗಾಗಿ
ಜೀವನವೆಲ್ಲ ದುಡಿದವನು
ಜೊತೆಗೊಂದಿಷ್ಟು
ಕುಡಿದವನು

ಕುಡಿದಾಗ ಹೊಡೆದಾಗ
ಹೊರಗಿನವನು
ಇದು ಮನಕ್ಕೆ. ಹೃದಯಕ್ಕೆ
ಒಳಗೇ ಇರುವವನು.

ಅವನವಸ್ಥೆಯೂ ಇದೇ
ಎಂದು ಅಮ್ಮನ ಅಂಬೋಣ.
ಅಮ್ಮನಷ್ಟು ಅರಿತವರ್‍ಯಾರಿದ್ದಾರೆ
ಅಪ್ಪನನ್ನು?
ಸ್ವಯಂ ಅಪ್ಪನೇ ಅರಿತಿಲ್ಲ
ಆದ್ದರಿಂದ
ಅಮ್ಮನ ಮಾತು ನಂಬೋಣ.

ಅಪ್ಪ
ನಮಗೆ ಪ್ರೀತಿ,
ಭಯ, ಗೌರವ, ತಿರಸ್ಕಾರ,
ಕೋಪ, ಕನಿಕರ.

ಹೊರಗಿನವರಿಗೋ,
ಅಪ್ಪನ ವ್ಯಕ್ತಿತ್ವ
ಪ್ರಖರ.
ಹೊರಗೆ ಹೇಗಿದ್ದರೇನಂತೆ
ಅಮ್ಮನ ಪ್ರಕಾರ
ಮನೆಯೊಳಗೆ
ಮನದೊಳಗೆ
ಅವ ವಾತ್ಸಲ್ಯಮಯಿ
ನಿಖರ.

--**--


(ಹನಿಗವನಗುಚ್ಛ)

ಅಪ್ಪಯ್ಯ
---------

ಅಪ್ಪಯ್ಯ ನೆನಪಾಗಿ
ಕಣ್ತುಂಬಿ
ಬಿದ್ದ ಹನಿಗಳಿವು;
ಪ್ರತಿಫಲಿಸಿದ
ಬಿಂಬಗಳು ಹಲವು

***

ಅಮ್ಮನ ಆರಯ್ಕೆ
ಅಪ್ಪನ ಪೂರೈಕೆ
ಮತ್ತು
ಉಭಯರ ಹಾರೈಕೆ
ಹೊಂದಿ ಬೆಳೆದ ಮಗನ
ಇಂದಿನ ಯಶದ
ಬಂಧುರ ಕ್ಷಣವನ್ನು
ಆನಂದಿಸುವ ಮೊದಲೇ
ನಂದಿಹೋಯಿತು ನನ್ನ
ತಂದೆಯ
ಜೀವಜ್ಯೋತಿ

***

ನಾನು ತಪ್ಪುಮಾಡಿದಾಗ
ಅಪ್ಪಯ್ಯ ಚಿವುಟುತ್ತಿದ್ದ
ನನ್ನ ತೊಡೆಭಾಗ
ಇನ್ನೂ ಕಾಣುತ್ತಿದೆ ಕೆಂಪಾಗಿ,
ನನ್ನನ್ನು ಹದಗೊಳಿಸಿದ
ಪೆಂಪಾಗಿ

***

ಅಪ್ಪಯ್ಯಾ,
ನಿನ್ನ
ಸಿಟ್ಟಿನಲ್ಲಿ ಪ್ರೀತಿಯಿತ್ತು;
ಶಿಕ್ಷೆಯಲ್ಲಿ ಶಿಕ್ಷಣವಿತ್ತು;
ಆಜ್ಞೆಯಲ್ಲಿ ವಾತ್ಸಲ್ಯವಿತ್ತು;
ಸಾಂತ್ವನದಲ್ಲಿ ನಿನ್ನ
ಕಣ್ಣೀರ ಹನಿಯಿತ್ತು.
ನನಗೆ ಈ ರೀತಿ
ಹೃದಯಾಮೃತವಿತ್ತು
ಮುನ್ನಡೆಸಿದ ನಿನ್ನ
ನೆನೆಯುವೆ ನಾನು
ಈ ತಂಪುಹೊತ್ತು

***

ಜಪ್ಪಯ್ಯ ಅಂದರೂ
ಹಿಡಿದ ಛಲ ಬಿಡದ ಸ್ವಭಾವದ
ಅಪ್ಪಯ್ಯ
ನಮಗೆ ಮಾರ್ಗದರ್ಶಿಯಾಗಿದ್ದೇ
ಹಾಗೆ

***

ಅಪ್ಪಯ್ಯ
ಕಷ್ಟಪಟ್ಟಿದ್ದೇ ಬಹಳ
ನಮಗೆ
ಕಷ್ಟ ಕೊಟ್ಟಿದ್ದೇ
ವಿರಳ

***

ಅಪ್ಪಯ್ಯಾ,
ಒಂದೊಂದು ಕಾಸು ದುಡಿಯಲೂ
ನೀನು ಪಟ್ಟ ಕಷ್ಟ
ಒಂದೊಂದು ರೂಪಾಯಿ ಖರ್ಚುಮಾಡುವಾಗಲೂ
ನನಗೆ ನೆನಪಾಗುತ್ತದೆ.
ಎಳವೆಯಲ್ಲೇ ನನಗೆ ನೀನು
ದುಡ್ಡಿನ ಬೆಲೆ ತಿಳಿಸಿದೆ

***

ಉದಯರಾಗ ಹಾಡಿ
ನಿತ್ಯ ನಮ್ಮನ್ನೆಬ್ಬಿಸುತ್ತಿದ್ದ ನೀನು
ಅದೊಂದು ಮುಂಜಾನೆ
ನಾವು ನಿದ್ದೆಯಲ್ಲಿದ್ದಾಗಲೇ
ಸದ್ದಿಲ್ಲದೆ ಹೊರಟುಹೋದೆ

***

ಅಪ್ಪಯ್ಯಾ,
ನಿನಗೆ ನಮನ.
ನಿನ್ನದು

ತನು-ಮನ-ಧನ.
ನಿನ್ನ ನೆನಪಾಗದ ದಿನ
ನಾನು
ನಿಧನ

***೦***

6 ಕಾಮೆಂಟ್‌ಗಳು:

  1. ಫಾದರ್ಸ್ ಡೇ ನೆಪದಲ್ಲಿ ಅಪ್ಪನ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.

    ಪ್ರತ್ಯುತ್ತರಅಳಿಸಿ
  2. ಸರ್,

    ಇದು ನಿಜಕ್ಕೂ ಒಂದು ಸೊಗಸಾದ ಕವನ...

    ಅಪ್ಪನ ಬಗೆಗೆ ನೀವು ಬರೆದ ಪ್ರತಿಯೊಂದು ಪದಗಳು ಮನತಟ್ಟುತ್ತವೇ...ನಮ್ಮ ಹಳೆಯ ನೆನಪುಗಳನ್ನು ಕೆದಕುತ್ತವೆ....

    ನಿಮ್ಮ ಗುಳಿಗೆ ಶೈಲಿಯ ವಿಡಂಬನೆ ಬಿಟ್ಟು ಬರೆದಿರುವ ಈ ಕವನಗಳು ಪ್ರತಿಯೊಬ್ಬರ ಅಪ್ಪನ ಚಿತ್ರಗಳನ್ನು ಮನದಲ್ಲಿಯೇ ಮೂಡಿಸುತ್ತವೆ...

    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  3. ella kavana guccha manataTTuva0tide. ta0deyannu ni0disuvavaru nimma kavanada gucchavannu noDi salvavaadaru ta0deya preeti arthavaadare nimma kavanada ashaya saarthaka .

    ಪ್ರತ್ಯುತ್ತರಅಳಿಸಿ
  4. ನನ್ನೀ ಸಾಲುಗಳನ್ನು ಮನಃಪೂರ್ವಕ ಮೆಚ್ಚಿ ನನ್ನ ಮನದುಂಬುವಂಥ ಪ್ರತಿಕ್ರಿಯೆ ನೀಡಿರುವ ಮೂವರು ಮಿತ್ರರಿಗೂ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ