ಶನಿವಾರ, ಜೂನ್ 20, 2009

’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

ವಿನೋದ-ವಿಡಂಬನೆಯ ಗುಳಿಗೆಗಳನ್ನು ನೀಡಲೆಂದು ಆರಂಭಿಸಿರುವ ಈ ತಾಣದಲ್ಲಿ ಭಿನ್ನ ಬಗೆಯ ಬರಹವೊಂದನ್ನು ಪ್ರಸ್ತುತಪಡಿಸುತ್ತಿದ್ದೇನೆ. ಬೇಂದ್ರೆ ಕಾವ್ಯದ ವಿಟಮಿನ್ ಗುಳಿಗೆ ಎಂದುಕೊಂಡು ಇದನ್ನು ಓದಿ.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಓದುಗ ಮಿತ್ರ ಮಹೇಂದ್ರ ವಿಜಯಶೀಲ ಅವರು ಈಚೆಗೆ ಅಂತರ್ಜಾಲ ತಾಣವೊಂದರ ಮೂಲಕ ನನಗೆ ಈ ಕೆಳಗಿನಂತೆ ಸಂದೇಶ ಕಳಿಸಿದರು.

***

ಮಾನ್ಯ ಶಾಸ್ತ್ರಿ ಅವರಲ್ಲಿ ಒಂದು ವಿನಂತಿ.
ನಿಮ್ಮ ಜೀವನಚರಿತ್ರೆರೇಖೆ ಬಹಳ ವಿಶಿಷ್ಟವಾಗಿ ಮನದಟ್ಟುವುದು.
ನೀವು ವಿಶಾಲ ಭಾಷಾ ಪರಿಣತರು, ಕನ್ನಡ ಕೃಷಿಯಲ್ಲಿ ವಿದುಷಿಗಳು.
ನಿಮ್ಮ ಕನ್ನಡ ಕೃತಿಗಳು ಅಸಂಖ್ಯಾತ, ವಿವಿಧ ರೂಪ.
ಆದಕ್ಕಾಗಿ ನನ್ನ ಪ್ರಾರ್ಥನೆ:
ದಯವಿಟ್ಟು,
ದ.ರಾ.ಬೇಂದ್ರೆಯವರ ಪ್ರಸಿದ್ಧ ಕವನಗೀತೆ:
"ಹಕ್ಕಿ ಹಾರುತಿದೆ ನೋಡಿದಿರಾ?"
ಈ ಕವನದ ಭಾವಾರ್ಥವನ್ನು ವರ್ಣಿಸಿದರೆ ನಾನು ಅತ್ಯಂತ ಕೃತಜ್ಞನು.
ಈ ಕವನ ದಶಕಗಳೆರಡರ ಹಿಂದೆ ವಿಶ್ವವಿದ್ಯಾನಿಲಯದಲ್ಲಿ ಪಠ್ಯ ಪುಸ್ತಕ ಒಂದರಲ್ಲಿ ಓದಿದ್ದೆ.
ಆದರೆ ಅದರ ನಿಗಮ ರೂಪಾಲಂಕಾರಗಳ ಸುಪ್ತ ಭಾವನೆಗಳ ಒಳಾರ್ಥವನ್ನು ಇದುವರೆಗೆ ತಿಳಿದುಕೊಳ್ಳಲಾಗಲಿಲ್ಲ.
ಅದನ್ನು ನೀವು ಸಾಧ್ಯಗೊಳಿಸಿದರೆ ಸಾವಿರಾರು ಮಂದಿ ಬೇಂದ್ರೆಯವರ ಕಾವ್ಯಾಭ್ಯಾಸಿಗಳು ಮತ್ತು ಕನ್ನಡ ಪ್ರೇಮಿಗಳು ಕೃತಜ್ಞರಾಗುವರು.

***

ಈ ಸಂದೇಶಕ್ಕೆ ಉತ್ತರವಾಗಿ ನಾನು ಲೇಖನವೊಂದನ್ನು ಬರೆದು ಅವರಿಗೆ ಕಳಿಸಿದೆ. ವರಕವಿ ಬೇಂದ್ರೆಯವರ ಕಾವ್ಯದಲ್ಲಿ ಆಸಕ್ತಿಯುಳ್ಳ ಸಹೃದಯರ ಅವಗಾಹನೆಗಾಗಿ ನಾನು ಆ ಲೇಖನವನ್ನು ಇಲ್ಲಿ ಪ್ರಚುರಪಡಿಸುತ್ತಿದ್ದೇನೆ.

***

’ಹಕ್ಕಿ ಹಾರುತಿದೆ ನೋಡಿದಿರಾ?’: ವರಕವಿಯ ಶ್ರೇಷ್ಠ ರೂಪಕ
-----------------------------------------------------

ದ.ರಾ.ಬೇಂದ್ರೆಯವರು ಜೀವನವನ್ನು ಒಂದು ದೃಶ್ಯಕಾವ್ಯವಾಗಿ ಕಂಡವರು. ಜೀವನವನ್ನು ಸಾಕ್ಷಿಪ್ರಜ್ಞೆಯಿಂದ ಅವಲೋಕಿಸಿದ ಕವಿ ಅವರು. ಅವರ ಕಾವ್ಯದಲ್ಲಿ ಜೀವನದೃಷ್ಟಿ, ಸಾಕ್ಷಿಪ್ರಜ್ಞೆ ಮತ್ತು ಅನುಭಾವ ಇವು ಢಾಳವಾಗಿ ವಿಜೃಂಭಿಸುತ್ತವೆ.

ಜಗತ್ತನ್ನು, ಜೀವ-ಜೀವನಗಳನ್ನು, ಮಾತ್ರವಲ್ಲ, ಅಖಿಲ ಬ್ರಹ್ಮಾಂಡವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ’ಕಾಲ’ವನ್ನು ಹಕ್ಕಿಗೆ ಹೋಲಿಸಿ ವರಕವಿ ರಚಿಸಿರುವ ರೂಪಕ ’ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಕವಿತೆಗಳಲ್ಲೊಂದು. ಆ ಕವಿತೆಯ ಪೂರ್ಣಪಾಠ ಇಂತಿದೆ:

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? /೧/

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? /೨/

ನೀಲಮೇಘಮಂಡಲ-ಸಮ ಬಣ್ಣ!
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? /೩/

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? /೪/

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? /೫/

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳಿನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? /೬/

ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೋ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? /೭/

ಕಾಲದ ಗತಿಯನ್ನು ಮತ್ತು ಆಯಾಮವನ್ನು ಹಕ್ಕಿಯ ಹಾರಾಟಕ್ಕೆ ಹೋಲಿಸಿ ಕವಿಯಿಲ್ಲಿ ಹಕ್ಕಿಯ ರೂಪ(ಕ)ದಲ್ಲಿ ಕಾಲಕೋಶದಲ್ಲಿ ಪಯಣಿಸಿದ್ದಾರೆ. ಈ ಕವಿತೆಯನ್ನು ನಾನು ಅರ್ಥೈಸಿಕೊಂಡಿರುವುದು ಹೀಗೆ: (ನುಡಿಸಂಖ್ಯೆಯ ಕ್ರಮದಲ್ಲಿ ಬರೆದಿದ್ದೇನೆ):

೧. ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ಒಂದಷ್ಟು ಕಾಲ ಸಂದಿರುತ್ತದೆ. ಹೀಗೆಯೇ ದಿನರಾತ್ರಿಗಳು ಕಳೆಯುತ್ತವೆ. ಸುತ್ತಮುತ್ತ, ಮೇಲೆ-ಕೆಳಗೆ, ಹೀಗೆ ವಿಶ್ವವ್ಯಾಪಿಯೂ ಅನಂತವೂ ಆಗಿರುವ ಕಾಲವು (ಗಾವುದ ಗಾವುದ) ಮುಂದೆ ಸಾಗುತ್ತಿರುತ್ತದೆ. ಕಾಲದ ಹಕ್ಕಿ ಹಾರುತ್ತಿರುತ್ತದೆ.

೨. ಕರಿನರೆ ಅಂದರೆ ಸುಟ್ಟು ಕರಿಕಾದ ಬಿಳಿಗೂದಲು. ಗತಿಸಿಹೋದ ಕಾಲ. ಜೀವಿಗೆ ವೃದ್ಧಾಪ್ಯದ ಕಾಲ. ಕರಿನರೆ ಅಂದರೆ ವರ್ತಮಾನಕ್ಕೆ ಕತ್ತಲಾಗಿರುವ ಗತಕಾಲ. ಕಪ್ಪಾಗಿ ಕಾಡುವ ಗತಾನುಭವವೂ ಅದಾಗಿರಬಹುದು. ಅಂಥ ಕರಿನರೆ ಬಣ್ಣದ ಪುಚ್ಛವು ಕಾಲವೆಂಬ ಹಕ್ಕಿಯ ಹಿಂಬದಿಗಂಟಿಕೊಂಡಿದೆ. ವರ್ತಮಾನವೆಂಬ ಬಿಳಿಬಣ್ಣದ, ಹೊಳಪಿನ ಗರಿಯು ಕಾಲದ ಹಕ್ಕಿಯಲ್ಲಿ ಗರಿಗರಿಯಾಗಿ ಕಂಗೊಳಿಸುತ್ತಿದೆ! ವರ್ತಮಾನವಾದ್ದರಿಂದ ಅದು ಬೆಳಕಿನಲ್ಲಿದೆ. ಎಂದೇ ಬಿಳಿ-ಹೊಳೆ ಬಣ್ಣ. ವರ್ತಮಾನಕ್ಕೆ ’ಹೊಳೆ’ವ ಬಣ್ಣ. ವರ್ತಮಾನವು, ಹರಿಯುತ್ತಿರುವ (ಕಾಲದ) ಹೊಳೆಯೂ ಹೌದು. ಕಾಲದ ಹಕ್ಕಿಗೆ ಕೆಂಬಣ್ಣದ-ಹೊಂಬಣ್ಣದ ರೆಕ್ಕೆಗಳೆರಡು. ಕೆಂಬಣ್ಣ ಮತ್ತು ಹೊಂಬಣ್ಣಗಳು ಸಂಕೇತಿಸುವ ವಸ್ತು-ವಿಷಯ-ಭಾವಗಳೆಲ್ಲ ಇಲ್ಲಿ ಪ್ರಸ್ತುತ. ಇಂಥ ರೆಕ್ಕೆಪುಕ್ಕಗಳನ್ನೊಳಗೊಂಡ ಹಾರುವ ಹಕ್ಕಿ ’ಕಾಲ’.

೩. ಕಾಲದ ಹಕ್ಕಿಯ ಬಣ್ಣ ನೀಲಮೇಘಮಂಡಲಸದೃಶ. ನೀಲಿ ಅಂದರೆ ವೈಶಾಲ್ಯ. ನೀಲಮೇಘಮಂಡಲದಂತೆ ಸಮಬಣ್ಣವೂ ಹೌದು. ಕಾಲದ ದೃಷ್ಟಿ ತರತಮರಹಿತ. ಕಾಲದ ಹಕ್ಕಿಯು ನೀಲಮೇಘಮಂಡಲದಂತೆ ಅಗಾಧ-ವ್ಯಾಪಕ-ವಿಶಾಲ. ಎಷ್ಟೆಂದರೆ, ಆಕಾಶಕ್ಕೆ ರೆಕ್ಕೆಗಳು ಮೂಡಿ ಅಕಾಶವೇ ಹಾರುತ್ತ ಸಾಗಿದಂತೆ! ಕಾಲದ ಹಕ್ಕಿಯ ’ಹಾರಾಟ’ (ಶ್ಲೇಷೆ ಗಮನಿಸಿರಿ) ಅಂಥದು! ಅನಾದಿಯೆಂಬ ಮುಗಿಲಿಗೆ ಮೂಡಿದ ರೆಕ್ಕೆಗಳೊಡನೆ, ಅನಂತವೆಂಬ ನೀಲಮೇಘಮಂಡಲದಲ್ಲಿ, ದಿನ-ಮಾಸ-ವರ್ಷ....ಯುಗ....ಮನ್ವಂತರ....ಕಲ್ಪ....ಗಳೆಂಬ ನಕ್ಷತ್ರಗಳ ಮಾಲೆ ಧರಿಸಿ, ದಿನ-ರಾತ್ರಿಗಳೆಂಬ ಸೂರ್ಯ-ಚಂದ್ರರನ್ನು ಕಣ್ಣುಗಳಾಗಿ ಹೊಂದಿ, ನೋಡುತ್ತ, ತೋರುತ್ತ, ತೋರಿಸುತ್ತ ಕಾಲದ ಹಕ್ಕಿಯು ಹಾರುತ್ತಿದೆ.

೪. ಸಾಮ್ರಾಜ್ಯಗಳ ಭರ್ಜರಿ ತೆನೆಗಳನ್ನೆಲ್ಲ ಒಕ್ಕಿ, ಚಿಕ್ಕಪುಟ್ಟ ಮಂಡಲ-ಗಿಂಡಲಗಳ ಕೋಟೆಕೊತ್ತಲಗಳನ್ನೆಲ್ಲ ಮುಕ್ಕಿ, ಖಂಡ-ಖಂಡಗಳನ್ನೇ (ಒಂದೆಡೆ ಪ್ರಾಕೃತಿಕ ಬದಲಾವಣೆ-ಪ್ರಗತಿ-ವಿಜ್ಞಾನ; ಇನ್ನೊಂದೆಡೆ ಯುದ್ಧ-ಪ್ರಕೃತಿವಿಕೋಪ-ವಿನಾಶ ಈ ರೀತಿ) ತೇಲಿಸಿ-ಮುಳುಗಿಸಿ, ’ಸಾರ್ವಭೌಮ’ರೆಲ್ಲರ ನೆತ್ತಿಯ ಕುಕ್ಕಿ (ಇದೀಗ ಪ್ರಜಾಪ್ರಭುತ್ವದ ಬಯಲಲ್ಲಿ) ಕಾಲದ ಹಕ್ಕಿಯು ಹಾರುತ್ತಿದೆ.

೫. ಯುಗಯುಗಗಳ ಆಗುಹೋಗುಗಳನ್ನು ತಿಕ್ಕಿ-ತೀಡಿ, ಚರಿತ್ರೆಯನ್ನು ಹಿಂದೆಬಿಟ್ಟು (ಅಳಿಸಿ-ಒರಸಿ), ಮನ್ವಂತರಗಳ (ಅಂದರೆ ದೀರ್ಘ ಕಾಲಾವಧಿಯ) ಭಾಗ್ಯಕ್ಕೆ (ಅಂದರೆ ಪ್ರಗತಿಗೆ) ಹೇತುವಾಗಿ-ಸಾಕ್ಷಿಯಾಗಿ, ಮನ್ವಂತರಗಳ (ಅಂದರೆ ಪರಿವರ್ತನೆಯ ಸಮಯದ) ಭಾಗ್ಯಕ್ಕೆ (ಅಂದರೆ ಇತ್ಯಾತ್ಮಕ ಬದಲಾವಣೆಗಳಿಗೆ) ಹೇತುವಾಗಿ-ಸಾಕ್ಷಿಯಾಗಿ, ರೆಕ್ಕೆಯ ಬೀಸುತ್ತ (ಅಂದರೆ ಕಾಲಕ್ರಮದಲ್ಲಿ) ಚೇತನಗೊಳಿಸಿ (ಅಂದರೆ ಪ್ರಗತಿಯ ಕಸುವು ನೀಡಿ), ಹೊಸಗಾಲದ ಹಸುಮಕ್ಕಳ ಹರಸಿ (ಅಂದರೆ ಬದಲಾದ ಲೋಕಕ್ಕೆ ಕಣ್ಣುತೆರೆದ ಅಂದಂದಿನ ಜನರನ್ನು-ಜೀವಿಗಳನ್ನು ಮುನ್ನಡೆಸಿ ಮತ್ತು ಇಂದಿನ ಲೋಕಕ್ಕೆ ಕಣ್ಣುತೆರೆದಿರುವವರನ್ನು ಮುನ್ನಡೆಸುತ್ತ) ಕಾಲದ ಹಕ್ಕಿಯು ಹಾರುತ್ತಿದೆ (ಕಾಲ ಸಾಗುತ್ತಿದೆ).

೬. ಬೆಳ್ಳಿಯ, ಅಂದರೆ ಶುಕ್ರಗ್ರಹದ ವಾಯುಮಂಡಲವನ್ನು ಪ್ರವೇಶಿಸಿದ ನಾವು, ತಿಂಗಳಿನೂರಿನ, ಅಂದರೆ ತಿಂಗಳಬೆಳಕಿನ ಚಂದ್ರನ ’ತಂಪು’ನೆಲ ತುಳಿದ ನಾವು ಇದೀಗ ಮಂಗಳಗ್ರಹದ ಅಂಗಳವನ್ನೂ ತಲುಪಿದ್ದೇವೆ. ಕಾಲಾಂತರದಲ್ಲಿ ನಮ್ಮ ಸಾಧನೆಯಿದು.

೭. ಹೀಗೆ ನಾವು ದಿಕ್ಕುದಿಕ್ಕುಗಳೆಡೆ ನಮ್ಮ ಗಮನ ಹರಿಸಿದ್ದೇವೆ, ಗತಿಶೀಲರಾಗಿದ್ದೇವೆ. ವಿಶ್ವ(ದ)ರೂಪವನ್ನರಿಯಲೆತ್ನಿಸುತ್ತಿದ್ದೇವೆ. ’ಆಚೆಗೆ’, ಅರ್ಥಾತ್, ಅಧ್ಯಾತ್ಮದೆಡೆಗೂ ನಮ್ಮ ಗಮನವನ್ನು ಹರಿಯಬಿಟ್ಟಿದ್ದೇವೆ. ಈ ನಮ್ಮ ಗತಿಯು ಕಾಲಕ್ರಮದಲ್ಲಿ ಬ್ರಹ್ಮಾಂಡದ ರಹಸ್ಯವನ್ನು ಒಡೆಯುತ್ತದೆಯೇ ಅಥವಾ ಈ ವಿಶ್ವವನ್ನೇ ಹೋಳುಮಾಡುತ್ತದೆಯೇ ಬಲ್ಲವರು ಯಾರು? ಇಂಥ ಯಾವುದೋ ಘಟನೆಗೆ ಆ ಸೃಷ್ಟಿಕರ್ತ ಹಾಕಿರುವ ಹೊಂಚೇ ಇದೆಲ್ಲ? ಸೃಷ್ಟಿಕರ್ತನೋ, ಈ ವಿಶ್ವದ ಇನ್ನಾವುದೋ ಶಕ್ತಿಯೋ ಅಥವಾ ಎಲ್ಲ ತಂತಾನೆಯೋ? ಇದೆಲ್ಲ ಉದ್ದೇಶಿತವೋ ಅನುದ್ದೇಶಿತವೋ? ಯಾರು ಬಲ್ಲರು? ಈ ಗೂಢಗಳನ್ನೊಳಗೊಂಡಿರುವ ’ಕಾಲ’ವೆಂಬ ಹಕ್ಕಿಯು ಹಾರುತ್ತಿದೆ. ಕಾಲ ಸಾಗುತ್ತಿದೆ.

ನನ್ನ ಅರಿವಿಗೆ ಈ ಕವನ ದಕ್ಕಿದ್ದು ಇಷ್ಟು. ನನಗೆ ದಕ್ಕದಿರುವ ಹೊಳಹು ಈ ಕವನದಲ್ಲಿ ಇರುವುದು ಸರ್ವಥಾ ಸಾಧ್ಯ. ಬೇಂದ್ರೆಯವರ ಕಾವ್ಯದ ಮಹತ್ತು ಅಂಥದು.

***

ಮೇಲ್ಕಂಡ ನನ್ನ ಲೇಖನವನ್ನೋದಿ ವಿಜಯಶೀಲ ಅವರು ಭಾವಪೂರ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಪ್ರತಿಕ್ರಿಯೆಯಲ್ಲಿ ವಿಜಯಶೀಲರ ವಿನಯಶೀಲ ಗೋಚರಿಸುತ್ತದೆ, ಮಾತ್ರವಲ್ಲ, ಬೇಂದ್ರೆಯವರ ಬಗ್ಗೆ ಮತ್ತು ಬೇಂದ್ರೆಯವರ ಕಾವ್ಯದ ಬಗ್ಗೆ ಅತ್ಯಂತ ಸೂಕ್ತ ಹಾಗೂ ಸಮರ್ಥ ನುಡಿಗಳಲ್ಲಿ ವಿಜೃಂಭಿಸಿರುವ ’ಕಾಣ್ಕೆ’ (ಗ)ಮನ ಸೆಳೆಯುತ್ತದೆ. ಇಂಗ್ಲಿಷ್‌ನಲ್ಲಿರುವ ಆ ಪ್ರತಿಕ್ರಿಯೆ ಇಂತಿದೆ.

***

I do not find suitable words in store in me to paint,
All that I wish to express my gratitude from deep heart,
My gratefulness and sincere thanks to you I owe,
For your prompt reply that mesmerised me with love.
My heart interpreted it as a gorgeous reward,
I was stunned from unique pleasure, an award.
*
Although to you I am totally a stranger,
Knowing little of me and what sort of a lit*voyageur (*literature)
Your prompt reply I treated it as a treasure,
I was overwhelmed from fabulous pleasure.
It was highly gracious of your preciousness,
It displayed possession of great heartedness,
You are very kind and profoundly friendly.
I consider it all as highly valuable and fondly.
2.
I am delighted to read your review of “hakki hArutide nODidira?”
of our ‘mahAkavi dA.rA. bEMdre’ for me ‘bikki nODe kannaDa caMdira’!
I read his works very fondly especially his lovely BAvagItegaLu
They could as well unhesitant be titled as BAratagItegaLu
*
His unique composing quality of poems very pretty.
Often my notion felt his fingers were lead by a Deity.
He displayed affluent meanings of merit in metaphors,
undoubtedly a natural style of renowned philosophers.
*
Each content possessing great significance, plural,
In Kannada language in its versatility, supernatural,
In poetry depicted beauty of colourful corals under the ocean,
His compositions similar to that of musical fascination,
*
written for classical dances not easy to hold in photography,
with rhythms and ‘tALa’ to the fast movements in choreography.
His magical words-composition comparable to juggling
of Kannada ‘nuDigaLu’ creating figures scintillating, dazzling.
*
unique fascination arresting sensual eyes hypnotised gazes,
Rare to find such magical allures in other works and languages.
I steadfastly wondered of his geniality to disclose versatilities,
and endless gallery of Kannada nuDivaikari, in so many varieties.

~*~

I read twice with concentration your review of “hakki hArutide nODidira?”. I must confess, I am not sure, if I am capable to understand comprehensively, the wide ranged significance, as you appropriately described at the end, displaying your gentle modesty. I fear, I may not dare to transliterate it, a free translation, a paraphrase = BAvAnuvAda. It is not easy to reflect the same beauty, to reproduce the same sort of manifold and multiplex of ‘oLArtha’ portrayed in the original BAvagIte in multiple quality, the ‘vastu padArtha’!
*
My main idea to request you to describe the significance of the poem was to perform ‘BAvAnuvAda’. with all the elements described in the original work. It will be enormous. For such a high grade task one needs multiple ability and aptitudes. One must be an all-round talent, possessing profound knowledge in multitudes, of Languages and vocabulary, the literary artistic in writing poems, a philosopher’s mind to reproduce the original gist in transformation too with rhymes and rhythms.
*
I am telling this even though it is not my first endeavour in this field, free translation = ‘BAvAnuvAda’. Many a time I was quite successful. Sri. Vishvanath Hulikal and SrImati Dongre had appreciated a couple of my compositions. I had published 7 years ago one book: "gOete! jermaniya mahAkaviya kavana saMkalana mattu itarara kavanagaLu".
*
Your masterly ‘BAvArthavivarraNa’ I feel sincerely belongs to be presented to all the Kannada lovers as you conceived from the very first moment. In Sampada I have seen a couple of talented ‘kannaDa AbhimAnigaLu’ and they would find their pleasure in reading your article ‘BAvArthavivarraNa’. I realise now my ambition was quite a bit high up unreachable to be grabbed by my minimal literary ability.
*
Often not even simple words or speeches are not easy to be translated into other languages to reproduce the original significance. Some words cannot be translated into other words of another language. They require a long explanation. And to translate a whole composition of a great visionary philosopher in poetry would be a mountainous task. In this situation I leave my original idea to sway with the future, not easy to tell, ‘what will be, will be’.
*
Please be gracious to pardon me if any mistake has appeared unaware of my consciousness or otherwise. Please excuse me if I have strained your patience.
*
Everything has a cause. It is not out of self-assertion or naive pride or out of comfort to write in English. Now and then I knock at my limit to write in Kannada fluently due to my environment life almost in ‘aj~jAtavAsa’.

***

ಕಾವ್ಯಾರ್ಥಕ್ಕಾಗಿ ವಿಜಯಶೀಲ ಅವರು ನನ್ನಲ್ಲಿ ಮಾಡಿಕೊಂಡ ಕೋರಿಕೆ, ನನ್ನ ಲೇಖನರೂಪಿ ಉತ್ತರ, ಅದಕ್ಕೆ ವಿಜಯಶೀಲರ ಭಾವಪೂರ್ಣ ಪ್ರತಿಕ್ರಿಯೆ, ಇದೀಗ ಈ ಬರಹಗುಚ್ಛವನ್ನೋದುತ್ತಿರುವ ನಿಮ್ಮೊಡನೆ ನನ್ನೀ ಸಾಹಿತ್ಯಸಾಂಗತ್ಯ, ಇವನ್ನೆಲ್ಲ ಗಮನಿಸಿದಾಗ, ’ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್’, ಎಂಬ ’ಹಿತೋಪದೇಶ’ದ ನುಡಿ ನನಗೆ ನೆನಪಿಗೆ ಬರುತ್ತದೆ. ನಮ್ಮನ್ನು ನಾವು ಧೀಮಂತರೆಂದು ಗುರುತಿಸಿಕೊಳ್ಳುವುದರಲ್ಲಿ ತಪ್ಪೇನಿದೆ?

---೦---

15 ಕಾಮೆಂಟ್‌ಗಳು:

  1. ಬೇ೦ದ್ರೆಯವರ ಕವನಕ್ಕೆ ನೀವು ನೀಡಿದ ಅರ್ಥವಿವರಣೆ ಮತ್ತು ಅದರಿ೦ದ ಪುಳಕಿತರಾಗಿ ಮಹೇ೦ದ್ರವಿಜಯಶೀಲರು ಬರೆದ ಉತ್ತರ ಎರಡೂ ಚೆನ್ನಾಗಿವೆ. ಮುಖ ಪರಿಚಯವಿಲ್ಲದ, ಯಾರೆ೦ದು ಅರಿಯದ ಮನುಜರ ನಡುವೆ ಅ೦ತರ್ಜಾಲವೆ೦ಬ ಮಾಯಾಜಾಲ ಹೇಗೆ ಸ೦ಬ೦ಧಗಳನ್ನು ಬೆಸೆಯುತ್ತದೆ ಅಲ್ಲವೇ ?

    ಪ್ರತ್ಯುತ್ತರಅಳಿಸಿ
  2. ಚೆನ್ನಾಗಿದೆ. ೪ನೆಯ ಸ್ಟಾಂಜಾವನ್ನು ಬೇಂದ್ರೆ ಕವಿಗೋಷ್ಠಿಯಲ್ಲಿ ಓದಿದಾಗ ರಾಜಸೇವಾಸಕ್ತ ಬಿಎಂಶ್ರೀಯವರು ಮೆಟ್ಟಿಬಿದ್ದರು ಅನ್ನುವುದು ದಾಖಲಾಗಿದೆ. ಬ್ರಿಟಿಷ್ ಆಳ್ವಿಕೆ, ಮಹಾರಾಜರ ಆಳ್ವಿಕೆ ಇದ್ದ ಕಾಲದಲ್ಲಿ ಬರೆದ ಈ ಕವನ ಅತ್ಯಂತ ಕ್ರಾಂತಿಕಾರಿಯಾಗಿಯೂ ಕಂಡಿತ್ತು. ಹೊಸಗಾಲದ ಹಸುಮಕ್ಕಳ ಹರಸಿ ಅನ್ನುವ ಮಾತು ಬರಲಿದ್ದ ಸ್ವತಂತ್ರ ಭಾರತದ ಚಿತ್ರವಾಗಿಯೂ ಈ ಕವನ ಬರೆದ ಕಾಲದಲ್ಲಿ ಕಂಡಿತ್ತು. ಹೀಗೆ ನೋಡಿದಾಗ ಕವಿತೆಗೆ ಚಾರಿತ್ರಿಕ/ರಾಜಕೀಯ ಅರ್ಥಗಳೂ ದೊರೆಯುತ್ತವೆ.
    ಓ.ಎಲ್.ಎನ್.

    ಪ್ರತ್ಯುತ್ತರಅಳಿಸಿ
  3. ಹೌದು ಪರಾಂಜಪೆ ಅವರೇ, ಈ ಮಾಯಾಜಾಲದಲ್ಲಿ ಬಂಧಿತನಾಗಿದ್ದೇನೆ! ಎಷ್ಟು ದಿನವೋ ಗೊತ್ತಿಲ್ಲ!

    ಪ್ರತ್ಯುತ್ತರಅಳಿಸಿ
  4. ಸನ್ಮಿತ್ರ ಓ.ಎಲ್.ನಾಗಭೂಷಣ ಸ್ವಾಮಿ ಅವರೇ, ನಿಮ್ಮಂಥ ಉತ್ತಮ ಸಾಹಿತಿ-ವಿಮರ್ಶಕ ಬಂಧುವಿನ ಪ್ರತಿಕ್ರಿಯೆ ಹೊಂದುವುದೆಂದರೆ ನನಗೆ ಬರಹ ಬರೆದಷ್ಟೇ ಖುಷಿ. ಭಾರಿ ಖುಷಿ. ನಿಮ್ಮ ಪೂರಕ ಮಾಹಿತಿಗಾಗಿ ಮತ್ತು ಕವನಲ್ಲಿ ನೀವು ಕಂಡೊಂದು ಹೊಳಹನ್ನು ತಿಳಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದ.
    ಅಂದಹಾಗೆ, ಈ ನನ್ನ ಲೇಖನ ನಾನು ಕ್ಯಾಷುವಲ್ ಆಗಿ ಗೀಚಿದ ಲೇಖನ. ಸರಳ ಅಭ್ಯಾಸಿಗಳ ಸಾಮಾನ್ಯ ಓದಿಗೆಂದು ಸಂಕ್ಷಿಪ್ತವಾಗಿ ಬರೆದದ್ದು. ನನಗೇ ಸಮಾಧಾನವಿಲ್ಲ.

    ಪ್ರತ್ಯುತ್ತರಅಳಿಸಿ
  5. ಮಾನ್ಯರೆ, ಒಳ್ಳೆಯ ಪ್ರಾಯೋಗಿಕ ವಿಮರ್ಶೆಗೆ ಉದಾಹರಣೆ ನೀಡಿದ್ದೀರಿ. ಬೇಂದ್ರೆಯವರ ಪದಲಾಸ್ಯವನ್ನು ಸರಳವಾಗಿ ಹಿಡಿದಿಡುವುದು ಕಷ್ಟ. ನಿಮ್ಮ ಪ್ರಯತ್ನ ಯಶಸ್ವಿಯಾಗಿದೆ. ವಿದ್ಯಾರ್ಥಿಗಳಿಗೆ ಅದರಲ್ಲೂ ಸಾಹಿತ್ಯಾಭ್ಯಾಸಿಗಳಿಗೆ ಮಾದರಿ ಅಭ್ಯಾಸ ಆಗುವಂತಿದೆ. ಅಭಿನಂದನೆಗಳು.
    ಕಾಲನ ಹಕ್ಕಿಯ ಹಾರಾಟವನ್ನು ಕಾಣುವ ಅಂತರ್ ದೃಷ್ಟಿ ಎಲ್ಲರಿಗೂ ಬರಲಿ.
    ಬೇದ್ರೆ ಮಂಜುನಾಥ

    ಪ್ರತ್ಯುತ್ತರಅಳಿಸಿ
  6. ಮಾನ್ಯರೆ,
    ಬಹುಶಃ ಈ ಆರನೇ ಸ್ಟ್ಯಾಂಜ ಮಂಗಳನ ಅಂಗಳದಲ್ಲಿ ಮಾನವ ಪಾದಾರ್ಪಣದ ಮುಂಗಾಣ್ಕೆ ಅನ್ನಿಸುತ್ತೆ.
    ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
    ತಿಂಗಳಿನೂರಿನ ನೀರನು ಹೀರಿ
    ಆಡಲು ಹಾಡಲು ತಾ ಹಾರಾಡಲು
    ಮಂಗಳಲೋಕದ ಅಂಗಳಕೇರಿ
    ಹಕ್ಕಿ ಹಾರುತಿದೆ ನೋಡಿದಿರಾ? /೬/

    ಪ್ರತ್ಯುತ್ತರಅಳಿಸಿ
  7. ಪ್ರಿಯ ಮಿತ್ರ ಮಂಜುನಾಥ ಅವರೇ, ಮೆಚ್ಚುಗೆಗಾಗಿ ಧನ್ಯವಾದ. ’ವಿದ್ಯಾರ್ಥಿಗಳಿಗೆ...ಮಾದರಿ ಅಭ್ಯಾಸ’ ಎಂದು ಸೂಕ್ತವಾಗಿ ವಿಮರ್ಶಿಸಿದ್ದೀರಿ. ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಅನುಭವವಿರುವವರು ನೀವು.
    ಕವನದ ಆರನೇ ನುಡಿಯ ನಿರ್ದಿಷ್ಟ ಭಾಗವು ಮಂಗಳಾಂಗಳಸ್ಪರ್ಶ ಕುರಿತಾದುದು ಹೌದು. ಅದೇ ವೇಳೆ, ಒಟ್ಟುನುಡಿಯ ಅಂತರಾರ್ಥ ಅದ್ಭುತ!

    ಪ್ರತ್ಯುತ್ತರಅಳಿಸಿ
  8. ನಮಸ್ಕಾರಗಳು,
    [ಚಿಕ್ಕವನಾದರು, ಕಮೆಂಟ್ ಮಾಡ್ತ ಇದ್ದೀನಿ]
    ಸರ್ ನಿಮ್ಮ ವಿವರಣೆ, ನನ್ನಂಥ ಸಾಮಾನ್ಯ ಓದುಗನ ವಿಚಾರಲಹರಿಗೆ ಇಂಧನವಿತ್ತು, ಒಂದು ಕ್ರಮದಲ್ಲಿ ಇನ್ನು ಹೆಚ್ಚು ಎತ್ತರದಲ್ಲಿ ಹಾರುತ ಬೇಂದ್ರೆಯವರ ಕವನವನ್ನು ಅರ್ಥ ಮಾಡಿಕೊಳ್ಳುವ ಕೆಲಸ ಮಾಡಿದೆ. ನಿಮಗೆ ವಂದನೆಗಳು.

    ಹಾಗೆಯೆ ನನಗೆ ಟಿ ಪಿ ಕೈಲಾಸಂರವra ಹಾಸ್ಯ ವಿಟಮಿನ್ ನೆನಪಾಯಿತು[ ನೆನಪಿರುವಷ್ಟು]

    ಟಿ ಪಿ ಕೆ : ನಿಮ್ಮ ಬೇಂದ್ರೆ ಗಮಕಿ ಆದ್ರೆ ನಾನು ದಮಕಿ ಕಣ್ರಿ, ಕಡಿಮೆಯಿಲ್ಲ ಅನ್ನುತ್ತ
    "ಹುಲಿಯೊಂದು ಹಾರುತಿದೆ ನೋಡಿದಿರ" ಅಂದ್ರಂತೆ.

    ಸುತ್ತಲಿನವರು: ಅದು ಹೇಗೆ ಸಾರ್, ಹುಲಿ ಹಾರಕ್ಕೆ.....

    ಟಿ ಪಿ ಕೆ: ತಾಳು ರಾಜಾ.
    "ಹುಲಿಯೊಂದು ಹಾರುತಿದೆ ನೋಡಿದಿರ"
    " ಮರಿ ಕುರಿಯೊಂದರ ಮೇಲೆ"....

    ಇದರಿಂದ[ ಟಿ ಪಿ ಕೆ ವಿಟಮಿನ್] ನಿಮ್ಮ ಈ ಬರಹವು, ವಿನೋದ-ವಿಡಂಬನೆ ಬರಹದ ಸಾಲಿಗೆ ಸೇರಿಬಿಟ್ಟಿತು.

    ಪ್ರತ್ಯುತ್ತರಅಳಿಸಿ
  9. ಕ್ಷಮಿಸಿ, ವಿಚಾರ-ಹಾಸ್ಯ-ಕಾವ್ಯ-ಮಂಥನ ಲೇಖನ

    ಪ್ರತ್ಯುತ್ತರಅಳಿಸಿ
  10. Your review of 'hakki haarutide' is very nice. I could never have understood the inner meanings of the poem even if I had gone over it a hundred times.

    One of my favourite poems in kannada is 'Yaaa ko kaane, rudra veene midiyutiruvudu' by Bendre. Perhaps its because there was an excellent rendition of this song that used to come on Doordarshan long ago. I used to remember it by-heart. Now I've forgotten most of it.

    'It is not out of self-assertion or naive pride or out of comfort to write in English. Now and then I knock at my limit to write in Kannada fluently due to my environment'

    I can relate to the above quoted lines. How well said.

    ಪ್ರತ್ಯುತ್ತರಅಳಿಸಿ
  11. ನನ್ನೀ ಕಾವ್ಯಾರ್ಥಚಿಂತನಕ್ಕೆ ಕಾವ್ಯವಿನೋದ ಮತ್ತು ಕಾವ್ಯಾಸಕ್ತಿಗಳ ಮೆರುಗು ನೀಡಿದ್ದಕ್ಕಾಗಿ ಶ್ರೀಕಾಂತ್ ಮತ್ತು ಮ್ಯಾನ್..(ಕೌಸ್ತುಭ) ಇಬ್ಬರಿಗೂ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  12. "ಸಲ್ಲಾಪ" ಬ್ಲಾಗಿನ ಸುನಾಥ ಈ ಕವಿತೆಯ ಬಗ್ಗೆ ಬರೆದಿದ್ದಾರೆ: http://sallaap.blogspot.com/2009/06/blog-post_24.html

    ಅವರಿಗೂ ನಿಮ್ಮ ಬರಹದ ಕೊಂಡಿ ಕೊಟ್ಟಿರುವೆ.

    ತುಂಬ ಚೆನ್ನಾಗಿ ಬರೆದಿದ್ದೀರಿ.

    ಕೇಶವ

    ಪ್ರತ್ಯುತ್ತರಅಳಿಸಿ