ಶುಕ್ರವಾರ, ಜೂನ್ 26, 2009

ಜಾತಿಭೂತ ತೊಲಗಲಿ

ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ.

’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್‌ಸಾಕ್ಷಿಣೀ
ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಂಡಾಲೋಽಸ್ತು ಸ ತು ದ್ವಿಜೋಽಸ್ತು ಗುರುರಿತ್ಯೇಷಾ ಮನೀಷಾ ಮಮ’.

’ಎಚ್ಚರ, ಕನಸು, ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ, ಯಾವ ಚಿತ್‌ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ, ಆ ಚಿತ್‌ಸ್ವರೂಪವೇ ನಾನು, ನೋಟದ ವಸ್ತು ನಾನಲ್ಲ’, ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿಯು ಜನ್ಮತಃ ಚಂಡಾಲನಿರಲಿ, ಬ್ರಾಹ್ಮಣನಿರಲಿ, ನನ್ನ ಭಾವನೆಯಲ್ಲಿ ಅವನೇ ನನ್ನ ಗುರು.

’ಮನೀಷಾಪಂಚಕ’ದಲ್ಲಿ ಆದಿಶಂಕರರು ಹೇಳಿರುವ ಮಾತಿದು.

’ಸದಾಕಾಲ ಒಂದು ನಿಯಮಕ್ಕೆ ಬದ್ಧನಾಗಿ ಸಾಗುವ ಮತ್ತು ತನ್ನಂತೆ ಸಕಲ ಜೀವಿಗಳಲ್ಲೂ ಮನದ ಬೆಳಕು ಉಂಟೆಂಬ ಅರಿವನ್ನು ಹೊಂದಿರುವ ಮನುಷ್ಯ, ಅವನು ಯಾವ ಜಾತಿಯವನೇ ಆಗಿರಲಿ, ಗುರುಸಮಾನ’, ಎಂಬ ವೇದಾಂತಸಾರವೇ ಆದಿಶಂಕರರ ಈ ಸ್ತೋತ್ರದಲ್ಲಿದೆ.

’ನಿಯಮ, ಬದ್ಧತೆ, ಏಕರೂಪ (ಒಂದೇ ಗುಣ, ಬಹುರೂಪಿ ಬಣ್ಣವಲ್ಲ, ಊಸರವಳ್ಳಿಯ ಗುಣವಲ್ಲ, ಎರಡು ನಾಲಗೆಯ ಹಾವಿನಂತಲ್ಲ, ಅವಕಾಶವಾದಿ ಬುದ್ಧಿಯಲ್ಲ, ನಮ್ಮ ಪುಢಾರಿಗಳಂತಲ್ಲ) ಹೊಂದಿರುವವನು ಹಾಗೂ ’ತಾನು ದೈವಾಂಶಸಂಭೂತ (ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು) ಮತ್ತು ಒಂದು ಇರುವೆಯೂ ತನ್ನಂತೆಯೇ ಸಮಾನಜೀವಿ’ ಎಂಬುದನ್ನು ಅರಿತು ಅದರಂತೆ ಮುನ್ನಡೆಯುವವನು ಗುರುಸ್ಥಾನಕ್ಕೆ ಅರ್ಹನೆಂದಾಗ ಜಾತಿಮಾತ್ರದಿಂದ ಯಾರೂ ಯಾವ ಅರ್ಹತೆಗೂ ಹಕ್ಕುದಾರರಾಗುವುದಿಲ್ಲ. ಮೇಲೆ ಹೇಳಿದಂಥ ಸದ್ಗುಣಗಳನ್ನುಳ್ಳವನೇ ಉತ್ತಮ ಜಾತಿಯವನು. ಅವನು ನರೋತ್ತಮ. ಗುಣಹೀನನೇ ಅಧಮ ಜಾತಿಯವನು. ನರಾಧಮ.

ಈ ಮಾತನ್ನೇ ಅನೇಕ ಸಾಧುಸಂತರು, ಕ್ರಾಂತಿಕಾರಿಗಳು, ಸಮಾಜಸುಧಾರಕರು ವಿವಿಧ ಬಗೆಗಳಲ್ಲಿ ಹೇಳಿದ್ದಾರೆ.

’ಕುಲಕುಲಕುಲವೆಂದು ಹೊಡೆದಾಡದಿರಿ..’ ಎಂದು ಕನಕದಾಸರು, ’ಕೊಲ್ಲುವನೇ ಮಾದಿಗ, ಹೊಲಸ ತಿಂಬುವನೇ ಹೊಲೆಯ, ಕುಲವೇನೋ, ಆವಂದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವ....ಶರಣರೇ ಕುಲಜರು’ ಎಂದು ಬಸವಣ್ಣನವರು, ’ಆವ ಕುಲವಾದರೇನು, ಆವನಾದರೇನು, ಆತ್ಮಭಾವವರಿತಮೇಲೆ,....ಹಸಿಕಬ್ಬು ಡೊಂಕಿರಲು ಅದರ ರಸ ಡೊಂಕೇನೋ?’ ಎಂದು ಪುರಂದರದಾಸರು, ’ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಜಾತಿ ವಿಜಾತಿಯೆನಬೇಡ, ದೇವನೊಲಿದಾತನೇ ಜಾತ’ ಎಂದು ಸರ್ವಜ್ಞ, ಇವರೆಲ್ಲ ಹೇಳಿರುವುದೂ ಇದೇ ಮಾತನ್ನೇ ಅಲ್ಲವೆ?

ಇವರೆಲ್ಲರಿಗಿಂತ ಹೆಚ್ಚು ಜ್ಞಾನಿಗಳೇನು ನಾವೆಲ್ಲ? ಅಲ್ಲ ತಾನೆ?

ಆದ್ದರಿಂದ, ನಾವೇ ಮಾಡಿಕೊಂಡಿರುವ ಜನ್ಮಜಾತಿ ಹಿಡಿದುಕೊಂಡು ಬಡಿದಾಡುವುದರಲ್ಲಿ ಅರ್ಥವಿಲ್ಲ. ’ಮಾನವಕುಲ ತಾನೊಂದೆ ವಲಂ’. (ವಲಂ=ದಿಟವಾಗಿ/ಅಲ್ಲವೆ?)

ವೇದೋಪನಿಷತ್ತುಗಳು ಇಹಪರಗಳ ಅರ್ಥಶೋಧ ಮಾಡಿವೆ ಮತ್ತು ಜೀವನವಿಧಾನ ಕುರಿತು ಹೇಳಿವೆ. ಇವು ಯಾವುದೇ ತಥಾಕಥಿತ ಜಾತಿಯ ಸೊತ್ತಲ್ಲ. ಒಟ್ಟು ಮಾನವಕುಲದ ಆಸ್ತಿ. ಅದೇವೇಳೆ, ಕಾಲಾಂತರದಲ್ಲಿ ಜೀವನವಿಧಾನವಾಗಲೀ ಶಾಸ್ತ್ರ-ಸಂಪ್ರದಾಯಾದಿ ಆಚರಣೆಗಳಾಗಲೀ ಬದಲಾವಣೆಗೆ ತೆರೆದುಕೊಳ್ಳಬೇಕಾದ್ದು ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದ ದೃಷ್ಟಿಯಿಂದ ಅತ್ಯಂತ ಅಪೇಕ್ಷಣೀಯ. ಒಂದು ವರ್ಗದ ಜನ, ’ವೇದ-ಶಾಸ್ತ್ರಗಳು ನಮ್ಮ ಏಕಸ್ವಾಮ್ಯದ ಹಕ್ಕು’, ಎಂದರೆ ಅದು ಒಪ್ಪುವಂಥ ಮಾತಲ್ಲ. ವೇದಗಳಿರುವುದೇ ಮನುಷ್ಯನಲ್ಲಿ ಸಾತ್ತ್ವಿಕ ಗುಣವನ್ನು ಬೇಳೆಸಲಿಕ್ಕಾಗಿ. ಸಾತ್ತ್ವಿಕ ಗುಣವು ಯಾವೊಂದು ಜಾತಿಯವನ ಸೊತ್ತೂ ಅಲ್ಲ. ಅದು ಸಕಲ ಮಾನವಕುಲದ ಸೊತ್ತು. ಒಂದಾನೊಂದು ಕಾಲದಲ್ಲಿ ಪ್ರಚಲಿತವಿದ್ದ ಸಾಮಾಜಿಕ ವ್ಯವಸ್ಥೆ ಇಂದೂ ಕೂಡ ಪ್ರಸ್ತುವಾಗಿರಬೇಕಾಗಿಲ್ಲ. ವ್ಯವಸ್ಥೆಯ ಬದಲಾವಣೆಗೆ ನಮ್ಮನ್ನು ಒಡ್ಡಿಕೊಂಡಾಗ, ಜೊತೆಗೆ ಸ್ವಾರ್ಥ-ಅಜ್ಞಾನ-ಮೌಢ್ಯಗಳನ್ನು ಕಿತ್ತೆಸೆದಾಗ ಮಾನವಕುಲದ ಸಾಮರಸ್ಯದ ಬಾಳ್ವೆ ಸಾಧ್ಯವಾಗುತ್ತದೆ. ಸಮಾಜದ ಬಾಳು ಹಸನಾಗುತ್ತದೆ, ಸಕಲರ ಜೀವನ ಸುಖಮಯವಾಗುತ್ತದೆ. ವೇದಗಳ ಹಾರೈಕೆಯೂ ಇದೇ ಆಗಿದೆ:

’ಆನೋ ಭದ್ರಾ ಕೃತವೋ ಯಂತು ವಿಶ್ವತಃ’
(ಅರಿವೆಂಬುದು ನಮಗೆ ಎಲ್ಲೆಡೆಯಿಂದಲೂ ಒದಗಿಬರಲಿ)

’ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ; ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಭಾಗ್ ಭವೇತ್’
(ಎಲ್ಲರೂ ಸುಖಿಗಳಾಗಿರಲಿ, ಎಲ್ಲರೂ ನಿರೋಗಿಗಳಾಗಿರಲಿ; ಎಲ್ಲರೂ ಶ್ರೇಯಸ್ಸನ್ನು ಕಾಣಲಿ, ಯಾರೂ ದುಃಖಿತರಾಗದಿರಲಿ)

’ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು’
(ಎಲ್ಲ ಜನರೂ ಸುಖಿಗಳಾಗಿರಲಿ, ಎಲ್ಲೆಡೆ ಸನ್ಮಂಗಳಕರ ಸ್ಥಿತಿ ನೆಲೆಸಿರಲಿ)

--೦--

ಪ್ರಿಯ ಬಂಧುಗಳೇ,

ಒಂದರಮೇಲೊಂದರಂತೆ ಬರೆದೇ ಬರೆದೆ ಗದ್ಯ
ಇನ್ನೀಗ ಬರೆಯುವೆನು ದಿನಕೊಂದು ಪದ್ಯ

ಅತಿ ಸರಳ ಕವನ ದಿನಕ್ಕೊಂದೊಂದು
ನಾಳೆಯಿಂದೀ ರೀತಿ ದಿನ ಇಪ್ಪತ್ತೊಂದು

ಗದ್ಯಗುಳಿಗೆಗೆ ಕೊಂಚ ಬಿಡುಗಡೆಯ ಕೊಟ್ಟು
ಪದ್ಯಗಳ ಕಡಲನ್ನು ಮಥಿಸೋಣ ಒಟ್ಟು

ಎಲ್ಲರ ಪ್ರತಿಕ್ರಿಯೆಯ ಓದಿ ಸುಖಿಸಿಹೆನು
ಎಲ್ಲರಿಗು ತಲೆಬಾಗಿ ಇದೋ ನಮಿಸುವೆನು

6 ಕಾಮೆಂಟ್‌ಗಳು:

  1. Dear Sir,
    Caste is a reality here. We cannot overcome it. Whatever our identities in the other parts of the world, we are recognised by our castes here.
    We are the sufferers of Intercaste Marriages. No body shows any sympathy to these couple during the times of emergency or child birth. No consoling during depressed times. It is only a lip sympathy which is better to utter than to practice. Sorry, it is my personal opinion.
    Bedre Manjunath

    ಪ್ರತ್ಯುತ್ತರಅಳಿಸಿ
  2. ವಾಸ್ತವವನ್ನು ಹೇಳಿದ್ದೀರಿ ಮಂಜುನಾಥ್. ನಾನೋ ಆದರ್ಶವಾದಿ! ಆದರ್ಶದ ಕನಸು ಕಾಣುತ್ತಿರುವವನೆನ್ನಬಹುದು. ಬಂದಾವೇ ಮುಂದೆ ಆ ಬಂಧುರ ದಿನಗಳು?

    ಪ್ರತ್ಯುತ್ತರಅಳಿಸಿ
  3. ಸರ್....

    ಸತ್ಯವನ್ನೇ ಬರೆದಿದ್ದೀರಿ...
    ಎಷ್ಟು ಶ್ರೀಮಂತವಾಗಿದೆ ನಮ್ಮ ಸಂಸ್ಕ್ರತಿ...!
    ಆದರೆ ನಾವು ದಾರಿ ತಪ್ಪಿದ್ದು ನಿಜ...
    ಕೇವಲ ಅರ್ಥವಿಲ್ಲ ಆಚರಣೆಗೆ ಒತ್ತುಕೊಟ್ಟು..
    ಮೂಲ ಭಾವವನ್ನು ಬಿಟ್ಟು ಬಿಟ್ಟುಬಿಟ್ಟಿದ್ದೇವೆ....

    ಮತ್ತೊಮ್ಮೆ ನಮ್ಮ ಸಂಸ್ಕ್ರತಿ ವೈಭವವನ್ನು ನೆನಪಿಸಿದ್ದೀರಿ...
    ಧನ್ಯವಾದಗಳು..

    ನಿಮ್ಮ ಪದ್ಯ ಗುಳಿಗೆ ಆಸ್ವಾದಿಸಲು ನಾವು ಉತ್ಸುಕರಾಗಿದ್ದೇವೆ....

    ಪ್ರತ್ಯುತ್ತರಅಳಿಸಿ
  4. ’ಇಟ್ಟಿಗೆ ಸಿಮೆಂಟು’ ಕೂಡಿಸುತ್ತ,
    ’ಸಿಮೆಂಟು ಮರಳಿನ ಮಧ್ಯೆ’ ಕೈಯಾಡಿಸುತ್ತ,
    ಗಟ್ಟಿ ನುಡಿಗಳ ಕಟ್ಟಡ ಕಟ್ಟುವ
    ಪ್ರಕಾಶ ಹೆಗ್ಗಡೆಯವರಿಗೆ
    ಧನ್ಯವಾದ.

    ಪ್ರತ್ಯುತ್ತರಅಳಿಸಿ