ಮಂಗಳವಾರ, ಮಾರ್ಚ್ 24, 2009

ದಶದಿಕ್ಕುಗಳಿಗೂ ವರುಣಪ್ರತಾಪ!

(ಚಿತ್ರ ಕೃಪೆ : telegraphindia.com)

ರೈತರಿಗೆ ಸಲಹೆ. ಕ್ಷಮಿಸಿ, ರೇಡಿಯೋ ಕೇಳಿ ಕೇಳಿ ಈ ನುಡಿಗಟ್ಟು ಬಂತು.
ರೈತರಿಗೆ ಸ್ಪಷ್ಟನೆ: ಈ ಕೆಳಗಿನ ಲೇಖನವು ಮಳೆ ಕುರಿತಾದದ್ದಲ್ಲ. ಮಳೆಗಾಗಿ ಹವಾಮಾನ ಇಲಾಖೆಯನ್ನು ಸಂಪರ್ಕಿಸಿ (ಮೋಸಹೋಗಿ).

ವರುಣ್ ಗಾಂಧಿಯ ಪ್ರತಾಪವು ಇಂದು ದಶದಿಕ್ಕುಗಳಿಗೂ ಹರಡಿದೆ. ಅಷ್ಟದಿಕ್ಪಾಲಕರಂತೂ ತಮ್ಮ ಪಟ್ಟಗಳನ್ನು ’ವಗಾಂ’ಗೆ ವರ್ಗಾಯಿಸಿ (ಒಗಾಯಿಸಿ) ರಿ-tired! ಈಗ ವರುಣ್ ಗಾಂಧಿಯೇ ಅಷ್ಟದಿಕ್ಕುಗಳೊಡೆಯ! ’ನಮೋನ್ನಮಃ ಜೀಯಾ!’
’ ಓಂ ಇಂದ್ರಾಯ ನಮಃ ಅಗ್ನಯೇ ನಮಃ ಯಮಾಯ ನಮಃ ನಿರುತಯೇ ನಮಃ ವರುಣಾಯ ನಮಃ ವಾಯವೇ ನಮಃ ಕುಬೇರಾಯ ನಮಃ ಈಶಾನ್ಯಾಯ ನಮಃ .’

ವರುಣ್ ಗಾಂಧಿ ಅಷ್ಟದಿಕ್ಕುಗಳೊಡೆಯ ಹೇಗೆ?

ಹೀಗೆ :
* ಹಿಂದುವಾದಿಗಳಿಗಾತ ಇಂದ್ರ.
* ನಿರ್ದಿಷ್ಟ ಕೋಮುಗಳೆರಡರ ಮಧ್ಯೆ ಆತ ಅಗ್ನಿ.
* ಕೋಮೊಂದರ ಪಾಲಿಗಾತ ಯಮ(ಪ್ರಾಯ).
(ಪ್ರಾಯ ಅಂಥದು, ಏನ್ಮಾಡೋದು ಹೇಳಿ.)
* ಹಿಂದುಸೇನೆಗಳ ದೃಷ್ಟಿಯಲ್ಲಾತ ದುರ್ಗಾಪತಿ ನಿರುತಿ.
* ವರುಣ...ಅದೇ ತಾನೇ ಆತ? (ಹಿಂದುವಾದಿಗಳಿಗೆ ಆತನ ಮಾತು ತಂಪಾದ ಮಳೆ.)
* ವಾಯು...ಹೌದು, ಪ್ರಸಕ್ತ ಚುನಾವಣಾ ರಾಜಕಾರಣದಲ್ಲಾತ ಜಂಝಾವಾತ! (’ರಾಂಗ್. ಜಂಝಾನಿಲ.’ ’ಓಕೆ.’)
* ಬಿಜೆಪಿ ಪಾಲಿಗೀಗ ಆತ ಮತಕುಬೇರ. (ಹಿಂದು ಮತ ಅಲ್ಲ, ವೋಟ್ ಎಂಬ ಮತ.)
ಮತ್ತು
* ’ಬಲ’ಗಡೆಯವರಿಗಾತ ಈಶ; ’ಎಡ’ಗಡೆಯವರಿಗಾತ ಅನ್ಯ; ಒಟ್ಟು ಈಶಾನ್ಯ.

ಇನ್ನು, ಮೇಲೂ ಕೆಳಗೂ ಆತನ ಪ್ರತಾಪವೇನು ಕಮ್ಮಿಯೇ?

ಕೈಯನ್ನು ಮೇಲಕ್ಕೆತ್ತಿ ಒಮ್ಮೆ ಗರ್ಜಿಸಿದನೆಂದರೆ ಆ-ಕಾಶವೇ ಅದುರಬೇಕು! ಇಷ್ಟಕ್ಕೂ ಆತನ ಪ್ರ-ತಾಪ-ಮಾನಗಳೆಲ್ಲ ಆಕಾಶಮಾರ್ಗವಾಗಿಯೇ ಅಲ್ಲವೆ ಎಲ್ಲರ ಮನೆಗಳ ಮೂರ್ಖಪೆಟ್ಟಿಗೆಯನ್ನು ಸೇರುವುದು?

ಓಕೇ. ಮೇಲಾಯಿತು; ಕೆಳಗೆ?

ಶ್! ಅಂಡರ್-ಗ್ರೌಂಡ್ ಎಕ್ಟಿವಿಟಿ/ಆಕ್ಟಿವಿಟಿ/ಯಾಕ್ಟಿವಿಟಿ/ಕಟಿಪಿಟಿ ಮಾಡುವ ಮೂಲ-ಭೂತ-ವಾದಿಗಳಿಗಷ್ಟೇ ಗೊತ್ತು ಈ ವಿಷಯ, pub-leak ಮಾಡುವಂತಿಲ್ಲ.

ಹೀಗೆ ದಶದಿಕ್ಕುಗಳಿಗೂ ವ್ಯಾಪಿಸಿರುವ ಪ್ರತಾಪಸಿಂಹ - ಕ್ಷಮಿಸಿ - ಪ್ರತಾಪಶಾಲಿ ವರುಣನಿಗೆ ಗುಳಿಗೆಪ್ಪನ ನಮೋನ್ನಮಃ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ