ಮಂಗಳವಾರ, ಮಾರ್ಚ್ 24, 2009

ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗ

ಪ್ರಿಯಾಂಕಾ ಉವಾಚ :
ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಳ್ಳಲಿ.

ಶ್ರೀ ಗುಳಿಗೆಪ್ಪ ಉವಾಚ :
ವರುಣ್ ಗಾಂಧಿಯು ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರಂತೆಯೇ ನಡೆಯುತ್ತಿದ್ದಾನೆ.

’ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಎಂದ ಶ್ರೀಕೃಷ್ಣನ ಅಪರಾವತಾರವೇ ತಾನೆಂದು ತಿಳಿದುಕೊಂಡು (ಹಿಂದು)ಧರ್ಮಸಂಸ್ಥಾಪನೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದಾನೆ. (therefore ಆತನಿಗೆ ಉಘೇಉಘೇ!)

’ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚಾಪರಾನಪಿ’ (ಅಧ್ಯಾಯ ೧೬, ಶ್ಲೋಕ ೧೪), ಅರ್ಥಾತ್, ’ಆ ಶತ್ರುವು ನನ್ನಿಂದ ಕೊಲ್ಲಲ್ಪಟ್ಟಿದ್ದಾನೆ; ಇತರರನ್ನೂ ನಾನು ಕೊಲ್ಲುತ್ತೇನೆ’, ಎಂದು ಸಾರಿ ಮುನ್ನಡೆದಿದ್ದಾನೆ. (ಸ್ಸಾರಿ, ವಿವರಣೆ ಅಗತ್ಯ: ಕೊಲ್ಲಲ್ಪಟ್ಟಿದ್ದು ಇಲ್ಲಿ ದೇಹವಲ್ಲ, ಮನಸ್ಸು.)

’ಪಶ್ಯ ಮೇ ಪಾರ್ಥ, ರೂಪಾಣಿ ಶತಶೋಥ ಸಹಸ್ರಶಃ’ (೧೧, ೫), ಎಂದ ಶ್ರೀಕೃಷ್ಣನಂತೆ ಈತನೂ ತನ್ನ ನೂರಾರು-ಸಹಸ್ರಾರು ರೂಪಗಳನ್ನು ಒಂದೊಂದಾಗಿ ತೋರಿಸಲು ಶುರುಮಾಡಿದ್ದಾನೆ.

’ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ’ (೯, ೩೧), ಅರ್ಥಾತ್, ’(ದುರಾಚಾರಿಯೂ ನನ್ನನ್ನು ಭಜಿಸಿದರೆ) ಬೇಗನೆ ಆತ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ಹೊಂದುತ್ತಾನೆ’, ಎಂದ ಶ್ರೀಕೃಷ್ಣನಂತೆ ವರುಣ್ ಕೂಡ, ’..ನನ್ನ(ಮಾತ)ನ್ನು ಭಜಿಸಿದರೆ ನೀವು (ಹಿಂದು)ಧರ್ಮಾತ್ಮರಾಗುತ್ತೀರಿ ಮತ್ತು ಶಾಶ್ವತ ಪರಿಹಾರವನ್ನು/ಶಾಂತಿಯನ್ನು ಹೊಂದುತ್ತೀರಿ’, ಎಂದು ನಮಗೆಲ್ಲ ಉಪ-ದೇಶಿಸುತ್ತಿದ್ದಾನೆ.

ಇಂತಿರುವ ವರುಣ್ ಗಾಂಧಿಯು, ಈಗ ಇದೋ, ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರನುಸಾರ ನಡೆಯುವಂತೆ ಪ್ರಿಯಾಂಕಾಳಿಗೇ ಆಣ್-ಅತಿ ಮಾಡುತ್ತಿದ್ದಾನೆ!

ವರುಣ್ ಉವಾಚ :
’ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ....ತಸ್ಯ ಪ್ರಜ್ಞಾ ಪ್ರತಿಷ್ಠಿತಾ’ (೨, ೫೮), ’ಜನರು ಯಾವಾಗ ಚಾಯ್ ಕಪ್ಪನ್ನು ಸಂಹರಿಸುತ್ತಾರೋ, ಯಾನೇ, ಟೀಯನ್ನು ಒಳಗಿಳಿಸಿ ಕಪ್ ಖಾಲಿಮಾಡುತ್ತಾರೋ ಆಗ ಅವರು ಪ್ರತಿಷ್ಠಿತರು; ಓಹ್, ಕ್ಷಮಿಸಿ, ಗಾಡಿ ಹಳಿ ತಪ್ಪಿತು, ಆಮೆಯು ತನ್ನ ಕಾಲುಗಳನ್ನು ಎಲ್ಲ ದಿಕ್ಕುಗಳಿಂದಲೂ (ಚಿಪ್ಪಿನ) ಒಳಕ್ಕೆಳೆದುಕೊಳ್ಳುವಂತೆ, ಪ್ರಿಯಾಂಕಾ, ಯಾವಾಗ ನೀನು ಬಾಯಿ ಮುಚ್ಕೊಂಡು ಗಪ್‌ಚುಪ್ ಆಗುತ್ತೀಯೋ ಆಗ ನಿನ್ನ ಪ್ರಜ್ಞೆ ಪ್ರತಿಷ್ಠಿತ ಎಂದರ್ಥ, ಆದ್ದರಿಂದ ನೀನು ಅಂಥ ಸ್ಥಿತಪ್ರಜ್ಞಳಾಗು; ಮಾತಾಡ್ಬೇಡ ಸುಮ್ಕಿರು.’

ವರುಣನ ಈ ಮಾತು’ಗುಳಿಗೆ’ ಪ್ರಿಯಾಂಕಾ ಏನೆನ್ನುವಳು?
’ಯಾಕಾ ತಮ್ಮಾ, ಇಂಗಾಡ್ತಿ?!’ ಎನ್ನುವಳು.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗಃ

2 ಕಾಮೆಂಟ್‌ಗಳು: