-೧-
ಅಂದು ದೀಪಾವಳಿ ರಾತ್ರಿ. ಕೆಲ ದಿನಗಳ ಹಿಂದಷ್ಟೇ ಪಕ್ಕದಮನೆಗೆ ಬಾಡಿಗೆಗೆ ಬಂದಿದ್ದ ಮುದಿ ಸಂಸಾರದ ಹದಿ ಹರಯದ ಸದಸ್ಯೆಯಾದ ಆಕೆಯ ಮುಖವನ್ನು ಅವಳು ಹಚ್ಚಿದ ನಕ್ಷತ್ರಕಡ್ಡಿಯ ಬೆಳಕಿನಲ್ಲಿ ನಾನು ದಿಟ್ಟಿಸಿದಾಗ ಅವಳೂ ಓರೆಗಣ್ಣಿಂದ ನನ್ನನ್ನು ದಿಟ್ಟಿಸಿದಳು. ಮುಂದಿನ ಒಂದು ಗಂಟೆ ಇಬ್ಬರಿಗೂ ದೀಪಾವಳಿ.
ಇದು ಆರು ವರ್ಷಗಳ ಹಿಂದಿನ ಘಟನೆ. ಈಗ ನಾನು ಮನೆ ಹೊರಗಡೆ ನಾಲ್ಕು ವರ್ಷದ ಮಗರಾಯನ ಕೈಯಿಂದ ಪಟಾಕಿ ಹಚ್ಚಿಸುತ್ತಿದ್ದರೆ ಆಕೆ ಒಳಗೆ ಅಡುಗೆಮನೆಯಲ್ಲಿ ಬ್ಯುಸಿ.
ಆ ದೀಪಾವಳಿಯೇ ಚೆನ್ನಾಗಿತ್ತು.
***
-೨-
’ಮೊದಲ್ನೇ ದೀಪಾವಳಿಗೆ ಅಳಿಯ-ಮಗಳು ಬರೋವಾಗ್ಲೇ ಗ್ಯಾಸ್ ಮುಗೀಬೇಕೇ! ಅಂಗಡಿಯವ್ರು ಸಿಲಿಂಡರ್ ಕೊಡೋಕೆ ಇನ್ನೂ ನಾಕು ದಿನ ಆಗುತ್ತೆ ಅಂತಾರೆ. ಎಕ್ಸ್ಟ್ರಾ ಸಿಲಿಂಡರೂ ಇಲ್ಲ; ಪಕ್ಕದ್ಮನೇಲೂ ಸಿಗ್ಲಿಲ್ಲ. ಛೆ!’ ಅಂತ ಅಡುಗೆಮನೆಯೊಳಗಿಂದ ನನ್ನಾಕೆ ಹತ್ತನೇ ಸಲ ಗೊಣಗ್ತಿದ್ದಂತೆ ಅಳಿಯ-ಮಗಳು ಬಂದೇಬಿಟ್ರು. ಮತ್ತೆ ಹತ್ತು ನಿಮಿಷದಲ್ಲೇ ಸಿಲಿಂಡರ್ ಕೂಡ ಪ್ರತ್ಯಕ್ಷ!
ನನ್ನ ತಲೇಲಿ ಬ್ರೈನು, ಕೈಯಲ್ಲಿ ಸೆಲ್ ಫೋನು ಮತ್ತು ಪೋಲಿಸ್ ಅಧಿಕಾರಿ ಅಳೀಮಯ್ಯನ ’ಕೈಲಿ’ ಕಾನೂನು ಇರೋದು ಮತ್ತ್ಯಾತಕ್ಕೆ?
***
-೩-
ಮುಂಬಯಿಯಿಂದ ಹೊರಟ ಟ್ರೈನು ಬೆಂಗಳೂರು ತಲುಪುವಷ್ಟರಲ್ಲಿ ನನ್ನ ಮೂಡೇ ಔಟಾಗಿಹೋಗಿತ್ತು. ಸಂಜೆ ಆರಕ್ಕೆ ತಲುಪಬೇಕಾದ ಟ್ರೈನು ರಾತ್ರಿ ಎಂಟಕ್ಕೆ ತಲುಪಿದರೆ ಇನ್ನೇನಾಗುತ್ತೆ? ’ಪ್ರೇಮಾ ಮತ್ತು ಪುಟ್ಟಿ ಕಾದು ಕಾದು ಚಡಪಡಿಸ್ತಿರ್ತಾರೆ. ಹಾಳು ಟ್ರೈನು, ಹಾಳು ನೌಕರಿ’, ಅಂದುಕೊಳ್ತಾ ಮನೆಗೆ ಹೋದರೆ ಮನೆಗೆ ಬೀಗ!
ಅರ್ಧ ಗಂಟೆ ನಂತರ ಇಬ್ಬರೂ ಆಟೋದಲ್ಲಿ ಬಂದಿಳಿದರು. ’ಸ್ಸಾರೀರೀ. ಪುಟ್ಟಿ ಫ್ರೆಂಡಿನ ತಾಯಿ ಯಾವಾಗ್ಲೂ ಕರೀತಿದ್ದರು, ಮನೆಗೆ ಬನ್ನಿ, ಮನೆಗೆ ಬನ್ನಿ, ಅಂತ. ಅದಕ್ಕೇ ಹೋಗಿದ್ವಿ. ಮಾತಾಡ್ತಾ ಲೇಟಾಗ್ಬಿಟ್ತು. ಆರು ಗಂಟೆಯಿಂದ ಕಾಯ್ತಿದೀರೇನೋ ಅಲ್ವಾ?’ ಅನ್ನುತ್ತ ಪ್ರೇಮಾ ಕೀಲಿಕೈಯನ್ನು ನನ್ನೆಡೆ ಚಾಚಿದಳು.
ಟ್ರೈನ್ ಲೇಟ್ ಅನ್ನೋದನ್ನ ಮೊದಲೇ ಸ್ಟೇಷನ್‌ಗೆ ಫೋನ್ ಮಾಡಿ ತಿಳಿದುಕೊಂಡಿಲ್ಲ ಇವ್ಳು ಹಾಗಾದರೆ!
***
-೪-
ಬಾರಿಂದ ರಾತ್ರಿ ಹೊರಬಿದ್ದ ಆತ ತೂರಾಡುತ್ತ ತನ್ನ ಮನೆಯೆಂದು ಭಾವಿಸಿ ಬೇರೊಂದು ಮನೆಯನ್ನು ಹೊಕ್ಕ! ಹಾಲ್‌ನಲ್ಲಿ ಕೂತಿದ್ದ ಆ ಮನೆಯ ಯಜಮಾನನಿಗೆ, ’ಏಯ್! ಯಾರೋ ನೀನು, ನಮ್ಮನೇ ಒಳಗ್ಬಂದು ಯಾಕ್ ಕೂತಿದಿ?’ ಅಂತ ಗದರಿದ!
ಆ ಯಜಮಾನ ಮೆಲ್ಲಗೆ ಎದ್ದುನಿಂತು, ’ಸ್ಸಾರಿ ಮಿಸ್ಟರ್, ಪರಪಾಟಾಯ್ತು, ಸ್ಸಾರಿ’, ಅನ್ನುತ್ತ ತೂರಾಡಿಕೊಂಡು ಹೊರನಡೆದ!
***
-೫-
’ಕಳೆದ ವರ್ಷ ಇದೇ ಯುಗಾದಿ ದಿನ, ಅಮೆರಿಕಾದಲ್ಲಿರೋ ಮಗ-ಸೊಸೆ-ಮೊಮ್ಮಕ್ಕಳನ್ನು ನೆನೆಯುತ್ತಾ ಈ ಒಬ್ಬಂಟಿ ನಾನು ಪಾರ್ಕಿಗೆ ಬಂದು ಈ ಕಲ್ಲುಬೆಂಚಿನ ಇನ್ನೊಂದು ತುದೀಲಿ ಕೂರದೇ ಇದ್ದಿದ್ದರೆ, ನನ್ನಹಾಗೇ ಒಂಟಿಯಾಗಿ ನರಳುತ್ತಿದ್ದ ನೀವು ನನಗೆಲ್ಲಿ ದೊರೆಯುತ್ತಿದ್ದಿರಿ ನನ್ನ ದೊರೆ’, ಎಂದು ಆಕೆ ತನ್ನ ಪತಿಯ ಬೆಳ್ಳಿಗೂದಲಮೇಲೆ ಮೃದುವಾಗಿ ಕೈಯಾಡಿಸಿದರು.
***
-೬-
ಹುಟ್ಟುಹಬ್ಬದ ದಿನ ಐದು ಕ್ಯಾಂಡಲ್ ಆರಿಸಿ ಪುಟಾಣಿ ನಿತಿನ್ ತನ್ನ ಸ್ನೇಹಿತರ ಜೊತೆ ನಲಿದಾಡುತ್ತಿದ್ದಾಗ ಅವನ ಅಪ್ಪ-ಅಮ್ಮ ಐದು ವರ್ಷದ ಹಿಂದಿನ ಆ ದಿನದ ನೋವು-ಕಳವಳ-ಬಿಡುಗಡೆ-ಸಂಭ್ರಮಗಳನ್ನು ನೆನೆದು ಸುಖಿಸುತ್ತಿದ್ದರು.
***
-೭-
ಯುಗಾದಿ ದಿನ ಒಂದೇ ಒಬ್ಬಟ್ಟಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದ್ದಕ್ಕೆ ಡಯಾಬಿಟೀಸ್ ರಾಯರು ಜೋಲುಮೋರೆ ಹಾಕಿಕೊಂಡಿದ್ದರು. ಸ್ನೇಹಿತರೊಡನೆ ಸಂಜೆ ಕಟ್ಟೆಪುರಾಣ ಮುಗಿಸಿ ವಾಪಸಾದಾಗ ಅವರ ಮುಖ ಪ್ರಸನ್ನವಾಗಿತ್ತು. ’ನಾನೇ ವಾಸಿ’, ಅಂದುಕೊಳ್ಳುತ್ತಾ ಮನೆಯೊಳಗೆ ಕಾಲಿಟ್ಟರು.
***
-೮-
ಮೊದಲ ದೀಪಾವಳಿಗೆ ಅಮೆರಿಕದಿಂದ ಅಳಿಯ ಬರಲಿಲ್ಲ. ವೀಸಾ ಸಿಗಲಿಲ್ಲ.
ನಂತರದ ದೀಪಾವಳಿಗೂ ಬರಲಿಲ್ಲ. ಡೈವೋರ್ಸ್ ಸಿಕ್ಕಿತ್ತು.
***
-೯-
ಬೆಂಕಿ ನೋಡಿದಾಕ್ಷಣ ಗತವು ಕಣ್ಣೆದುರು ಬಂದಂತಾಗಿ ಆ ಭಿಕ್ಷುಕ ಮೂರ್ಛೆಹೋಗುತ್ತಾನೆ.
***
-೧೦-
ನನಗೆ ಊಟ ಬಂದಿರೋ ಈ ಅಲ್ಯುಮಿನಿಯಂ ತಟ್ಟೇಲೇ ನಾನೂ ಅಪ್ಪನಿಗೆ ಕೊನೆಗಾಲದಲ್ಲಿ ಊಟ ಕೊಡ್ತಿದ್ದದ್ದು.
***
-೧೧-
’ಢಂ’ ಅಂದಿದ್ದಷ್ಟೇ. ಅಲ್ಲಿಂದೀಚೆ
ಏನೂ ಕಾಣುತ್ತಿಲ್ಲ.
***
-೧೨-
’ಯ್ಯು..ಗಾ..ದಿ?....ವ್ವೊಗೆಲೇ!’
’ರೀ...ಇವತ್ತೂ...!’
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Maava 1, 4 mattu 8ne kathe tumba chennagide. Nange 9 rinda 12 kathe arthagalilla
ಪ್ರತ್ಯುತ್ತರಅಳಿಸಿ* 1,4,8 - Thank you.
ಪ್ರತ್ಯುತ್ತರಅಳಿಸಿ* 9 to 12 - Think, you.