ಗುರುವಾರ, ಮಾರ್ಚ್ 26, 2009

ಅರಿಕೆ

ಆತ್ಮೀಯ ಮಿತ್ರರೆಲ್ಲರಿಗೂ ಯುಗಾದಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯ.

ನನ್ನನ್ನಿಂದು
ಪತ್ರಿಕೆಯೊಂದು
ಹಾಸ್ಯ,
ವಿಡಂಬನೆ
ಮತ್ತು
ಶ್ಲೇಷೆ
ಕೃಷಿಯ ಬಗ್ಗೆ
ಮರುಚಿಂತನಕ್ಕೆ
ಹಚ್ಚಿದೆ.
ಆದ್ದರಿಂದ
ನಾನಿಂದು
ಗುಳಿಗೆಯಂಗಡಿಯನ್ನು
ಮುಚ್ಚಿದೆ.

ನಿಮ್ಮ ಅಭಿಮಾನದಿಂದ
ನನ್ನ ಸಂತೋಷ
ಹೆಚ್ಚಿದೆ.
ಈ ಕೆಳಗಿನ
ನನ್ನ ಕವಿತೆ
ನನ್ನ ಮನವನ್ನು
ನಿಮ್ಮೆದುರು
ಬಿಚ್ಚಿದೆ.

ಪೊಡಮಡುವೆನೀ ಜಗಕೆ
-------------------
ಪೊಡಮಡುವೆನೀ ಜಗಕೆ ಬೆಡಗು ಬೀರುವ ಯುಗಕೆ
ಸಡಗರದ ಸೆಲೆಯಾದ ಜೀವಕುಲಕೆ
ಒಡವೆಯಂದದಿ ಮೆರೆವ ಪರಮ ಪುಣ್ಯೋದಯಕೆ
ನಡುಬಾಗಿ ನಮಿಪೆ ಪ್ರಭು, ನಿನ್ನಭಯಕೆ

ಬಂದೆನೆಂಬುದೆ ಇಲ್ಲಿ ಒಂದು ಸಾಕ್ಷಾತ್ಕಾರ
ಮುಂದೆ ಕಾಣುವ ನೋಟ ಬಲು ಸುಂದರ
ಇಂದು ನಾಳೆಗಳೆಂಬ ಚಂದ ಮುತ್ತಿನಹಾರ
ತಂದು ತೊಡಿಸಿದ ದೊರೆಯೆ, ನಾ ಋಣಿ ಚಿರ

ಭವದ ಸಾಗರವೆನ್ನುವರು ಈಸಲಂಜುವರು
ಅವತೀರ್ಣ ಸ್ಥಿತಿಗಾಗಿ ತವಕಿಸುವರು
ಭುವಿಯ ಭವ್ಯತೆಯಂದ ಏನು ಬಲ್ಲರು ಅವರು
ಸವಿಯಲೆಂದೇ ಬಂದೆ ನಾನಾದರೂ

ಪ್ರತಿ ಘಳಿಗೆಯೂ ಇಲ್ಲಿ ನನಗೆ ಅಮೃತಘಳಿಗೆ
ಪ್ರತಿ ವಸಂತವು ಪ್ರಭುವೆ ನಿನ್ನ ಒಸಗೆ
ಪ್ರತಿ ವಸ್ತುವೂ ಇಲ್ಲಿ ಇಹುದು ನನಗಾಗೇ
ಅತಿ ಭಾಗ್ಯವಂತ ನಾನ್ ಅಖಿಲ ಇಳೆಗೇ

ಎಲ್ಲಿ ನೋಡಿದರಲ್ಲಿ ನಿನ್ನ ಚೆಲುವೇ ಚೆಲುವು
ಬಲ್ಲಿದನೆ, ಈ ರಚನೆ ಅಸಮಾನವು
ಇಲ್ಲಿಯಲ್ಲದೆ ನನಗೆ ಇನ್ನಾವ ಸ್ವರ್ಗವೂ
ಇಲ್ಲವೈ, ಈ ಜಗವೆ ನನ್ನ ತಾವು

ಇಡು ಇಲ್ಲಿ ನನ್ನನು ಅದೆಷ್ಟು ದಿನವಾದರೂ
ಬಿಡು ಎನ್ನನೆನ್ನ ಪಾಡಿಗೆ, ಅಲ್ಲಿರು
ಕಡೆದಿನದವರೆಗೆ ಅನುಭವಿಸಿಯೇ ಈ ಊರು
ಬಿಡುವೆ ನಾ, ಸೇರುವೆನು ನಿನ್ನ ಊರು

13 ಕಾಮೆಂಟ್‌ಗಳು:

  1. ಪ್ರಭುವು ಹರಸಲಿ ನಿಮಗೆ ಶಾಸ್ತ್ರಿಗಳೆ, ನೋಡಿ
    ದಿನದಿನವು ಹೆಚ್ಚಲಿ ಗುಳಿಗೆಗಳ ಮೋಡಿ
    ಗುಳಿಗೆಗಳ ಉರುಳಿಸುತ ಬಹುಕಾಲ ಬಾಳಿ
    ಎಲ್ಲರೂ ಜೊತೆಯಾಗಿ ಹೋಗೋಣ, ತಾಳಿ!

    ಪ್ರತ್ಯುತ್ತರಅಳಿಸಿ
  2. ಹೆಸರು ಆ.ಶಾ.
    ಉಂಟುಮಾಡುವುದು ನಿರಾಶಾ.
    ಕ್ಷಮೆಯಿರಲಿ ಸುನಾಥಾ, ರಾಕೇಶಾ.

    ಪ್ರತ್ಯುತ್ತರಅಳಿಸಿ
  3. ಗುಳಿಗೆಯಿಲ್ಲದ ದಿನ ಬಿಕೋ ಎ೦ದೆನ್ನುತಿದೆ
    ಕೊಡಿ ಬೇಗ ಹೊಸಗುಳಿಗೆ ಬಿಡದೆ ಅನುದಿನವು
    ಕಾದಿಹೆನು ನಿಮ್ಮಯ ಗುಳಿಗೆಯ೦ಗಡಿಯಲ್ಲಿ
    ತಡಮಾಡದಿರಿ ಸ್ವಾಮಿ ಗುಳಿಗೇಶ್ವರಾ

    ಪ್ರತ್ಯುತ್ತರಅಳಿಸಿ
  4. ಅಂಗಡಿ ಮುಚ್ಚಿದ ಕಾರಣ ಅರಿಯಲು
    ನನ್ನ ’ಅರಿಕೆ’ಯನು between the lines ಓದಿರಿ.
    ನಿಮ್ಮೊಲುಮೆಗೆ ಎನ್ನ ಧನ್ಯವಾದ ಸ್ವೀಕರಿಸಿರಿ.

    ಪ್ರತ್ಯುತ್ತರಅಳಿಸಿ
  5. Hello Sir,
    I read u r many articles in papers.. Each article is punching and very funny.. to good.. very nice ....:-):-)

    ಪ್ರತ್ಯುತ್ತರಅಳಿಸಿ
  6. Sir please call me as roopa .. not madam :-):-)
    my age is not of u r experience in writing..
    :-):-)

    ಪ್ರತ್ಯುತ್ತರಅಳಿಸಿ
  7. ಗುಳಿಗೆಯ೦ಗಡಿ ಯಾವಾಗ ಓಪನ್ ಆಗುತ್ತೆ ಗುರುಗಳೇ ??

    ಪ್ರತ್ಯುತ್ತರಅಳಿಸಿ
  8. ಕನ್ನಡ ಹಾಸ್ಯಸಾಹಿತ್ಯಲೋಕದ ಪ್ರಸ್ತುತ ವಿಷಗಳಿಗೆ ಕಳೆದು (ಮತ್ತು ವಿಷಗಳಿಗೆ ರಾಸಾಯನಿಕ ಪರಿವರ್ತನೆಯ ಏಟು ಬಿದ್ದು) ಅಮೃತಗಳಿಗೆ ಆರಂಭವಾದಾಗ (ಮತ್ತು ಅಮೃತಗಳಿಗೆ ಬೆಲೆ ದೊರಕುವಂತಾದಾಗ), ಪ್ರಿಯ ಶಿಷ್ಯಾ.

    ಪ್ರತ್ಯುತ್ತರಅಳಿಸಿ
  9. ಬಹಳ ತಡವಾಗಿ ಬಂದಿದ್ದೇನೆ...
    ಕ್ಷಮೆ ಇರಲಿ...

    ಹೊಸವರ್ಷದ ಶುಭಾಶಯಗಳು...

    ನಿಮ್ಮ ಬ್ಲಾಗಿನಲ್ಲಿ ಇನ್ನಷ್ಟು ಸ್ಪೂರ್ತಿದಾಯಕ
    ಲೇಖನ, ಕವನ
    ಬರಲೆಂದು ಆಶಿಸುವೆ...

    ನಿಮ್ಮ ಚಂದದ ಶುಭಾಶಯಕ್ಕೆ
    ವಂದನೆಗಳು

    ಪ್ರತ್ಯುತ್ತರಅಳಿಸಿ