ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮೇ 13, 2009

ಆನಂದರಾಮನ್ ಸತ್ತ ಸುದ್ದಿ

’ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸಿ.ವಿ.ರಾಮನ್ ನಿಧನವಾರ್ತೆಯ ಹಿನ್ನೆಲೆಯಲ್ಲಿ ಈ ಕವನವು ಜೀವನದರ್ಥದ ಗಹನ-ಗಂಭೀರ ಮಂಥನ ನಡೆಸುತ್ತದೆ. ಆ ಮಂಥನದ ಬಗೆ ಅನನ್ಯ.

ದಶಕಗಳಿಂದ ನನ್ನನ್ನು ಕಾಡುತ್ತಿರುವ ಕವನ ಇದು. ಈ ಕವನದಲ್ಲಿ ನಾನು ಕಂಡ ಕಾಣ್ಕೆ ಜೀವನಪಥದಲ್ಲಿ ನನಗದೊಂದು ಜ್ಞಾನೋದಯ. ಕವನದ ಪೂರ್ಣಪಾಠ ಇಂತಿದೆ:

ರಾಮನ್ ಸತ್ತ ಸುದ್ದಿ
------------------
(ರಚನೆ: ಕೆ.ಎಸ್.ನಿಸಾರ್ ಅಹಮದ್)

ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ
ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ
ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ-
ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ
ದುಃಖವಾಯಿತು. ಮೈಲಿಗೆ
ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ;
ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ
ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ,
ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ-
ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ
ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತಿದ್ದ; ಅಪ್ರಚಲಿತ
ಹಳ್ಳಿಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತಿದ್ದ.

ಕಂಡೊಡನೆ, ’ಹ್ಯಾಂಗಿದೀರಿ’ ಅಂದ;
ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ
ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ,
ನೆರೆಯವರೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ
ಅಂದ-ಕೊರೆಯುತ್ತಲೇ ಇದ್ದ-ಹೂಂಗುಟ್ಟಿದೆ-
ಅವನ ಮಾತಿಗೆ ಮಂಜಿನೊಳಗಿನ ಸೂರ್‍ಯ ನನ್ನ ಪ್ರಜ್ಞೆ.
’ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು
ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ
ಅಶಿಕ್ಷಿತ ಅರಿವಿಗೆ?

ಆ ಕಡೆ ರಾಮನ್, ಈ ಕಡೆ ಹನುಮ;
ದಿನವಿಡೀ ಮೈ ಕೆಸರಿಸಿಕೊಂಡು, ನನ್ನಂಥವ ನೆನೆಯಲೂ
ನಿರಾಕರಿಸುವ ತಂಗಳುಂಡು, ರಾತ್ರಿ ಕಳ್ಳಭಟ್ಟಿಯ ಹೊಡೆದು-
ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನೆನ್ನೆಯ
ಪುನರಾವರ್ತನೆಯ ಏಕತಾನತೆಯಲ್ಲಿ-ಲೋಕ ಮರೆಯುವ
ಹನುಮನಿಗೆ ರಾಮನ್ ಹೋದರೆಷ್ಟೋ ರಸೆಲ್ ಹೋದರೂ ಅಷ್ಟೆ.
ಪತ್ರಿಕೆಯೋದುವುದಿಲ್ಲ; ನಾನು ಕವಿಯೆಂಬುದು ಗೊತ್ತಿಲ್ಲ:
ಹೊಟ್ಟೆಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ಥತೆ
ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುವ
ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
ಉದ್ಭವಿಸಿಲ್ಲ-ಆದರೂ ತೃಪ್ತ...
ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು,
ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಢಾರಿ-ಇಷ್ಟೇ ಜಗತ್ತು-ಆದರೂ ತೃಪ್ತ...

ನನ್ನಂತೆ ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಕಾಡುವುದಿಲ್ಲ-
ಹೆಂಡತಿಗೆ ಚೋಲಿ, ಹಿರಿ ಮಗನ ಶಾಲೆ
ಬೆಲ್ಲದ ಕಾಫಿಯ ಹಾಲೇಶಿಯ ಸಾಲ
ಹೊತ್ತು ಹೊತ್ತಿಗೆ ರುಚಿ ಗೌಣ ಅರಸಿಕ ಕೂಳು-ಚಿಂತೆಯಿಲ್ಲವೆಂದಲ್ಲ-ಆದರೂ ತೃಪ್ತ...

ಇದ ಮೆಚ್ಚಿ, ಕರುಬಿ, ಪೇಚಾಡಿ ನಡೆದಾಗ
ದೂರದಿಂದ, ಪ್ರಕೃತಿಯ ಅಗಾಧದಲ್ಲಿ ಹಿಮಾಚ್ಛಾದಿತ ಹನುಮ,
ಅವನ ಕೂದಲೆಳೆಯ ಕೂಗು-
ಅರ್ಥ ತೋರದ ಚುಕ್ಕೆ.

ಇಲ್ಲಿಂದ ನನಗೆ ವರ್ಗವಾಗುತ್ತೆ-ಒಂದು ದಿನ
ಹನುಮ ಸಾಯುತ್ತಾನೆ-ತಿಳಿಯುವುದಿಲ್ಲ.
ಇಲ್ಲಿನ ಹಳಬ ಅಲ್ಲಿ ಹೊಸಬನಾಗುತ್ತೇನೆ,
ಎಲ್ಲೋ ಹೇಗೋ ಸಾಯುತ್ತೇನೆ-ತಿಳಿಯುವುದಿಲ್ಲ.
ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು-ತಿಳಿಯುವುದಿಲ್ಲ.
ಈ ಪರಿಚಿತ ಆಕಾಶ, ತೆಂಗಿನ ಮರ, ಕಾಲುವೆ, ಗುಡ್ಡ, ಗುಡಿಸಲು-
ಇವು ಕೊಟ್ಟ ಧಾರಾಳ, ಅರ್ಥವಂತಿಕೆ, ಭಾವ ಸಂಚಾರ-ತಿಳಿಯುವುದಿಲ್ಲ.

ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ
ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು...

***

ಇನ್ನು, ’ಆನಂದರಾಮನ್ ಸತ್ತ ಸುದ್ದಿ’. ನಿಸಾರರ ಕವನವನ್ನು ಅನುಸರಿಸಿ-ಅನುಕರಿಸಿ ನಾನು ಬರೆದಿರುವ ಈ ಅಣಕ ಕವನದಲ್ಲಿ ಬರುವ (ಸತ್ತಿರುವ) ಆನಂದರಾಮನ್ ಒಬ್ಬ ಲೇಖಕ. ಎಲ್ಲರಂತೆ ಅವನೂ ಸತ್ತ. ಅವನ ಸುತ್ತಮುತ್ತ ಹರಿದಿರುವ ಸಾಲುಗಳನ್ನು -ಕವನದ ಸಾಲುಗಳನ್ನು- ಓದಿ ಆನಂದಿಸಿರಿ ಅಥವಾ ದುಃಖಿಸಿರಿ.

ನಿಸಾರರ ಕ್ಷಮೆ ಕೋರಿ ನಾನು ಬೆಳಕಿಗೆ ತಂದ ನನ್ನ ಈ ಅಣಕವನ (ಅಣಕ ಕವನ) ಕಳೆದ ವರ್ಷದ (ಏಪ್ರಿಲ್ ೨೦೦೮) ’ಸುಧಾ’ ಹಾಸ್ಯ ಸಂಚಿಕೆಯಲ್ಲಿ ಪ್ರಕಟವಾಗಿದೆ.

(ಓದುಗ ಮಿತ್ರರೇ,
ಪತ್ರಿಕಾ ಬರವಣಿಗೆ, ಸಮಾಜಸೇವೆ ಮುಂತಾಗಿ ಮೈತುಂಬ-ತಲೆತುಂಬ ಕೆಲಸಗಳನ್ನು ತುಂಬಿಕೊಂಡಿರುವ ನಾನು ’ಗುಳಿಗೆ’ ವಿತರಣೆಯನ್ನು ಅನಿರ್ದಿಷ್ಟ ಕಾಲದವರೆಗೆ ಸ್ಥಗಿತಗೊಳಿಸಬೇಕಾದುದು ಅನಿವಾರ್ಯವಾಗಿದೆ. ನಿಮ್ಮ ಗಮನ-ಮೆಚ್ಚುಗೆ-ವಿಮರ್ಶೆ-ಪ್ರೋತ್ಸಾಹ ನನಗೆ ಅತೀವ ಸಂತಸ ತಂದಿದೆ. ನಿಮಗೆಲ್ಲರಿಗೂ ನನ್ನ ತುಂಬುಹೃದಯದ ಧನ್ಯವಾದ. ಮುಂದೆಂದಾದರೂ ಇಲ್ಲಿ ಮತ್ತೆ ಭೇಟಿಯಾಗೋಣ. ನಮಸ್ಕಾರ.)

ಆನಂದರಾಮನ್ ಸತ್ತ ಸುದ್ದಿ
-------------------------
(ರಚನೆ: ಎಚ್.ಆನಂದರಾಮ ಶಾಸ್ತ್ರೀ)

ಆನಂದರಾಮನ್ ಸತ್ತ ದಿನ ಬೆಂಗಳೂರಿನಲ್ಲಿ
ದರಿದ್ರ ಥಂಡಿ; ಚಳಿಗಾಲದಲ್ಲೇ ಸಾಯುವುದೆ
ಈ ಬರಹಗಾರ, ಕೊರೆದದ್ದು ಸಾಲದೆ ಬದುಕಿದ್ದಾಗ
ಕೊರೆವ ಚಳಿಯಲ್ಲೇ ಸತ್ತು ಬೆಳಗಿನ ಹೊತ್ತು
ಹೊರಗೆ ಬರುವಂತಾಯ್ತಲ್ಲಾ ಈ ಚಳಿಗೆ
ಅವನ ಪಾರ್ಥಿವ ಶರೀರದ ಬಳಿಗೆ ಎಂದು
ದುಃಖವಾಯಿತು ಅವನ ಬಂಧು
-ಗಳಿಗೆ, ಪರಿಚಿತರಿಗೆ ಮತ್ತು ಸಹ
-ಬರಹಗಾರರ ಬಳಗಕ್ಕೆ.

ಪತ್ರಿಕೆಗಳಿಗೆ ಪತ್ರ ಬರೆಯುತ್ತ
ವಾಚಕರಿಗೆ ಕೀಚಕಪ್ರಾಯ ಆದಾತ,
ಕವಿಗೋಷ್ಠಿಗಳಲಿ ಭಯಂಕರ
ಕೊರೆದಾತ, ತಾನು ಬಲು ಆದರ್ಶ ವ್ಯಕ್ತಿ
ಎಂದು ಮೆರೆದಾತ, ಸಾಯಲಿ ಬಿಡು ಪೀಡೆ
ತೊಲಗಿತು ಎಂದರು ಬಹುತೇಕ ಎಲ್ಲ ಜನರು.

ಆದರೆ, ಅವನೊಬ್ಬ ಹನುಮ ಮಾತ್ರ,
ಹಳ್ಳಿ ಗಮಾರ, ಒಳ್ಳೆ ಕೆಲಸಗಾರ,
ಹಳ್ಳಿ ಪದದ ಅಶಾಸ್ತ್ರೀಯ ಮಟ್ಟನ್ನು
ಕುರುಕುವ ಹರಕಲು ಬಟ್ಟೆಯ
ಗಾಯನಶೂರ, ದಿವಂಗತ ಆನಂದರಾಮನ
ಅತೀವ ಪ್ರೀತಿಗೆ ಪಾತ್ರ; ಅವನಿಗೆ ಆನಂದರಾಮ
ಕವಿಯೆಂಬುದು ಗೊತ್ತಿಲ್ಲ, ಬರಹ
ಓದಿಲ್ಲ, ಅಸಲು ಓದಲಿಕ್ಕೇ ಬರೋಲ್ಲ,
ಆದರೂ ದುಃಖಿಸಿದ ಮನಸಾರೆ; ಕಾರಣವಿಲ್ಲದಿಲ್ಲ.

ಕೆಟ್ಟು ಪಟ್ಟಣ ಸೇರಿದ್ದಾಗ ಹನುಮ,
ಹಸಿವು, ಅಸ್ವಸ್ಥತೆಯ ಗೂಡಾಗಿದ್ದಾಗ,
ಆಸರೆ ನೀಡಿದ್ದು ಇದೇ ಆನಂದರಾಮ.
ಪ್ರೀತಿಸಿದ್ದು ಸಹ; ಕನ್ನಡ, ಗಡಿ, ನದಿ,
ಪದ್ಯ, ಪ್ರತಿಷ್ಠೆಗಳನ್ನು ಮೀರಿ.

ಖಡ್ಗಕ್ಕಿಂತ ಲೇಖನಿಗೆ ಬಲ ಹೆಚ್ಚಂತೆ, ಗೊತ್ತಿಲ್ಲ.
ಲೇಖನಿಗಿರದ ಬಲ ಪ್ರೀತಿಗೆ; ಎರಡು ಮಾತಿಲ್ಲ.

ಈ ಕಡೆ ಹನುಮ, ಆ ಕಡೆ ಆನಂದರಾಮ;
ಮಧ್ಯೆ ಅಗಾಧ ಬಂಧು-ಬಳಗ,
ಸ್ಹೇಹಿತರು, ಸಹ ಲೇಖಕರು, ’ಅಭಿಮಾನಿಗಳು’.
ಮಧ್ಯದಲ್ಲಿ ಕಳಚಿದ ಕೊಂಡಿ.

ನಿಧನವಾಗಿಹೋದ ಆನಂದರಾಮನ್
ಒಬ್ಬಂಟಿ. ಕಳವಳಗೊಂಡು ಕುಳಿತಿರುವ
ಹನುಮ ಸಹ ಒಬ್ಬಂಟಿ. ಅಗಾಧ
ಜನಸಾಗರ ಕರ್ಮಕ್ಕೆ.

--೦--

ಸೋಮವಾರ, ಮೇ 4, 2009

ನನಗೆ ಬೇಕಿಲ್ಲ (ಕವನ)

ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ
ಅರ್ಥಗರ್ಭಿತವಿರಲಿ ಎಷ್ಟೇ ಅದು
ಅರ್ಥೈಸುವೊತ್ತಡಕೆ ಮನ ಮುದುಡಲಲ್ಲ
ಕವಿತೆ ಓದುವುದು ನಾ ಮನ ಅರಳಲೆಂದು.

ಪ್ರೀತಿ ತೋರದ ಕೊಡುಗೆ ನನಗೆ ಬೇಕಿಲ್ಲ
ಧಾರಾಳವಾಗಿರಲಿ ಎಷ್ಟೇ ಅದು
ಪಡೆದು ಅಡಿಯಾಗುವುದು ನನಗಿಷ್ಟವಿಲ್ಲ
ಸರಳ ಪ್ರೇಮದ ಕೊಡುಗೆ ನಾನು ಬಯಸುವುದು.

ಪದವಿಗಂಟಿದ ಘನತೆ ನನಗೆ ಬೇಕಿಲ್ಲ
ಫಲಕಾರಿಯಾಗಿರಲಿ ಎಷ್ಟೇ ಅದು
ಪದವಿ ವ್ಯಕ್ತಿತ್ವವನು ಮರೆಮಾಡಲಲ್ಲ
ಬದಲಾಗಿ ಅದರಿಂದ ತಾ ಮೆರೆಯಲಿಹುದು.

ಶ್ರಮವು ಇಲ್ಲದ ಗಳಿಕೆ ನನಗೆ ಬೇಕಿಲ್ಲ
ಭರ್ಜರಿಯೆ ಆಗಿರಲಿ ಎಷ್ಟೇ ಅದು
ವಿಶ್ರಮಿಸಿ ಜಡವಾಗಿ ಕೊಳೆಯಲೆಂದಲ್ಲ
ದುಡಿದುಂಡು ತೃಪ್ತಿಹೊಂದಲು ನಾನಿರುವುದು.

ನಡತೆ ನೀಡದ ವಿದ್ಯೆ ನನಗೆ ಬೇಕಿಲ್ಲ
ಉನ್ನತವೆ ಆಗಿರಲಿ ಎಷ್ಟೇ ಅದು
ನಡತೆ ತಿಳಿಸದಮೇಲೆ ಅದಕೆ ಬೆಲೆಯಿಲ್ಲ
ಬೆಲೆಯುಳ್ಳ ವಿದ್ಯೆಯದು ನನಗೆ ಬೇಕಿಹುದು.

ಪರರಿಗಾಗದ ಬಾಳು ನನಗೆ ಬೇಕಿಲ್ಲ
ನನಗಾಗಿ ’ಸುಖ’ ಕೊಡಲಿ ಎಷ್ಟೇ ಅದು
ಪರರಿಗಾಗದ ಬಾಳು ಬಾಳುವೆಯೆ ಅಲ್ಲ
ಬಾಳಲ್ಲದಲ್ಲಿ ’ಸುಖ’ ಸುಖವು ಹೇಗಹುದು?

ಮುಪ್ಪಿಗಂಟಿಯೆ ಸಾವು ನನಗೆ ಬೇಕಿಲ್ಲ
ಆರಾಮವಾಗಿರಲಿ ಎಷ್ಟೇ ಅದು
ಬದುಕುವುದು ತಡವಾಗಿ ಸಾಯಲೆಂದಲ್ಲ
ಕೃತಕೃತ್ಯನಾಗಿ ದಿನಕೆದುರಾಗಲೆಂದು.

ಗುರುವಾರ, ಏಪ್ರಿಲ್ 30, 2009

ರಾಜ್‌ಕುಮಾರ್ ಎಂಬ ಕವಿತೆ

ಅಣ್ಣಾ,
ನಿನ್ನ ’ಅಭಿಮಾನಿ ದೇವರು’ಗಳಲ್ಲಿ
ಒಬ್ಬನಾಗಿರುವ ಈ ಹುಲುಮಾನವ
ನ ಪಾಲಿಗೆ ನೀನು
ಕಲಾದೇವತೆ,
ಸತ್ತ್ವ ಮತ್ತು ಸೌಂದರ್ಯಭರಿತ
ಕವಿತೆ.

ಇದು ಸತ್ಯ.
ನೀನೆನ್ನ ಬಾಳಿನಲಿ
ನಾ ಕಂಡ ಒಂದು
ಸತ್ಯ.
ಬಾಳಿಗೊಂದರ್ಥ ಕೊಡಬಲ್ಲ,
ಬಾಳು ಸಾರ್ಥಕಗೊಳಿಸಬಲ್ಲ
ವಿಷಯ-ವಿಶೇಷಗಳಲ್ಲೊಂದಾಗಿ
ಬೆಳಗುತ್ತಿರುವೆ ನೀ
ನನ್ನ ಬಾಳಿನಲಿ
ನಿತ್ಯ.

ನಟನೆಯೆಂಬುದೆ ನಿಜ,
ನಿಜವೆಂಬುದೇ ನಟನೆ,
ದಿಟವೆಂಬುದದು ಭಾವ
ಮತ್ತು ಭಾವುಕತೆ.
ನಟಿಸುವುದು ದೈವಕೃಪೆ,
ಘಟಿಸುವುದು ದೈವೇಚ್ಛೆ
ಎಂಬ ಭಾವದ ನಿನ್ನ
ಬಾಳೊಂದು ಕವಿತೆ.

ಹಾಡಿದೆ ನೀನು,
ಹಾಡಾದೆ.
ಕುಣಿದೆ, ಮನಗಳ
ಕುಣಿಸಿದೆ.
ದಣಿದೆ, ಮನಗಳ
ತಣಿಸಿದೆ.
ಕಾಡಿನ ಪಾಲಾದೆ,
ನಾಡಿನ ಮುತ್ತಾದೆ,
ನನ್ನ ಮುತ್ತುರಾಜಾ,
ಅನ್ಯಾದೃಶ ಕಲೆಯಿಂದ,
ಅಧ್ಯಾತ್ಮದ ಹೊಳಪಿಂದ,
ಸಮರ್ಪಣಭಾವದಿಂದ
ನಮ್ಮ ಹೃದಯದೊಂದು
ಅಮೂಲ್ಯ ಸೊತ್ತಾದೆ.

ಅಣ್ಣಾ,
ನೀನು
ಅರ್ಥಗರ್ಭಿತ ಕವಿತೆ.
ನಿನ್ನಿಂದ
ನಾನು
ಬಾಳ ಕಾವ್ಯವ ಕಲಿತೆ.

ಗುರುವಾರ, ಮಾರ್ಚ್ 26, 2009

ಅರಿಕೆ

ಆತ್ಮೀಯ ಮಿತ್ರರೆಲ್ಲರಿಗೂ ಯುಗಾದಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯ.

ನನ್ನನ್ನಿಂದು
ಪತ್ರಿಕೆಯೊಂದು
ಹಾಸ್ಯ,
ವಿಡಂಬನೆ
ಮತ್ತು
ಶ್ಲೇಷೆ
ಕೃಷಿಯ ಬಗ್ಗೆ
ಮರುಚಿಂತನಕ್ಕೆ
ಹಚ್ಚಿದೆ.
ಆದ್ದರಿಂದ
ನಾನಿಂದು
ಗುಳಿಗೆಯಂಗಡಿಯನ್ನು
ಮುಚ್ಚಿದೆ.

ನಿಮ್ಮ ಅಭಿಮಾನದಿಂದ
ನನ್ನ ಸಂತೋಷ
ಹೆಚ್ಚಿದೆ.
ಈ ಕೆಳಗಿನ
ನನ್ನ ಕವಿತೆ
ನನ್ನ ಮನವನ್ನು
ನಿಮ್ಮೆದುರು
ಬಿಚ್ಚಿದೆ.

ಪೊಡಮಡುವೆನೀ ಜಗಕೆ
-------------------
ಪೊಡಮಡುವೆನೀ ಜಗಕೆ ಬೆಡಗು ಬೀರುವ ಯುಗಕೆ
ಸಡಗರದ ಸೆಲೆಯಾದ ಜೀವಕುಲಕೆ
ಒಡವೆಯಂದದಿ ಮೆರೆವ ಪರಮ ಪುಣ್ಯೋದಯಕೆ
ನಡುಬಾಗಿ ನಮಿಪೆ ಪ್ರಭು, ನಿನ್ನಭಯಕೆ

ಬಂದೆನೆಂಬುದೆ ಇಲ್ಲಿ ಒಂದು ಸಾಕ್ಷಾತ್ಕಾರ
ಮುಂದೆ ಕಾಣುವ ನೋಟ ಬಲು ಸುಂದರ
ಇಂದು ನಾಳೆಗಳೆಂಬ ಚಂದ ಮುತ್ತಿನಹಾರ
ತಂದು ತೊಡಿಸಿದ ದೊರೆಯೆ, ನಾ ಋಣಿ ಚಿರ

ಭವದ ಸಾಗರವೆನ್ನುವರು ಈಸಲಂಜುವರು
ಅವತೀರ್ಣ ಸ್ಥಿತಿಗಾಗಿ ತವಕಿಸುವರು
ಭುವಿಯ ಭವ್ಯತೆಯಂದ ಏನು ಬಲ್ಲರು ಅವರು
ಸವಿಯಲೆಂದೇ ಬಂದೆ ನಾನಾದರೂ

ಪ್ರತಿ ಘಳಿಗೆಯೂ ಇಲ್ಲಿ ನನಗೆ ಅಮೃತಘಳಿಗೆ
ಪ್ರತಿ ವಸಂತವು ಪ್ರಭುವೆ ನಿನ್ನ ಒಸಗೆ
ಪ್ರತಿ ವಸ್ತುವೂ ಇಲ್ಲಿ ಇಹುದು ನನಗಾಗೇ
ಅತಿ ಭಾಗ್ಯವಂತ ನಾನ್ ಅಖಿಲ ಇಳೆಗೇ

ಎಲ್ಲಿ ನೋಡಿದರಲ್ಲಿ ನಿನ್ನ ಚೆಲುವೇ ಚೆಲುವು
ಬಲ್ಲಿದನೆ, ಈ ರಚನೆ ಅಸಮಾನವು
ಇಲ್ಲಿಯಲ್ಲದೆ ನನಗೆ ಇನ್ನಾವ ಸ್ವರ್ಗವೂ
ಇಲ್ಲವೈ, ಈ ಜಗವೆ ನನ್ನ ತಾವು

ಇಡು ಇಲ್ಲಿ ನನ್ನನು ಅದೆಷ್ಟು ದಿನವಾದರೂ
ಬಿಡು ಎನ್ನನೆನ್ನ ಪಾಡಿಗೆ, ಅಲ್ಲಿರು
ಕಡೆದಿನದವರೆಗೆ ಅನುಭವಿಸಿಯೇ ಈ ಊರು
ಬಿಡುವೆ ನಾ, ಸೇರುವೆನು ನಿನ್ನ ಊರು

ಬುಧವಾರ, ಮಾರ್ಚ್ 25, 2009

ಓಯ್ ಬೆಂಗಳೂರ್!

ಬೆಂಗಳೂರಿನಲ್ಲೀಗ
ಎರಡು ಬಗೆಯ ಮಳೆ
ಬರುತ್ತಿದೆ.

ಒಂದು ಮಳೆ
ಮೋಡಗಳಿಂದ ಸುರಿಯುತ್ತಿದೆ;
ಇನ್ನೊಂದು ಮಳೆ
ಪುಢಾರಿಗಳ ಬಾಯಿಂದ ಹರಿಯುತ್ತಿದೆ!

ಮೊದಲೇ ಬೆಂಗಳೂರಿನಲ್ಲಿ
ಟ್ರಾಫಿಕ್ಕೋ ಟ್ರಾಫಿಕ್ಕು;
ಅದರ ಮಧ್ಯೆ ಈ
ಮಳೆಗಳ ಸೊಕ್ಕು!
office-goers ಎಲ್ರೂ
ಮನೇಲಿರೋದೇ ಲಾಯಕ್ಕು!

ನನಗೀಗ ನೆನಪಿಗೆ ಬರ್ತಾ ಇದೆ
ನನ್ನೊಂದು ಹಳೆ ಕವನ;
ಅದನ್ನಿಲ್ಲಿ ಕೊಟ್ಟಿದ್ದೇನೆ,
ಓದಿ ಆಗಿರಿ ಪಾವನ!

---o---

(ವರ್ಷಗಳ ಕೆಳಗೆ ಮಿತ್ರ (ದಿ.) ಜಿ.ಎಸ್.ಸದಾಶಿವ ಅವರು ಇಷ್ಟಪಟ್ಟು ಈ ಕವನವನ್ನು ’ಸುಧಾ ಯುಗಾದಿ ವಿಶೇಷಾಂಕ’ದಲ್ಲಿ ಪ್ರಕಟಿಸಿದ್ದರು. ಅನಂತರ ನನ್ನ ಕವನಸಂಕಲನ ’ಚಿತ್ತದಾಗಸ’ದಲ್ಲಿಯೂ ಇದು ಕಾಣಿಸಿಕೊಂಡಿತು. ಆದ್ದರಿಂದ, ಈಗಾಗಲೇ ಈ ಕವನವನ್ನು ಓದಿರುವವರು ಇದನ್ನು ಮತ್ತೆ ಓದಿ mental torture ಅನುಭವಿಸುವ ಅಗತ್ಯವಿಲ್ಲ.)

ಬೆಂಗಳೂರಲ್ಲಿ ರಸ್ತೆ ಪ್ರಯಾಣ ಹಾಗೂ ಆಫೀಸ್ ಡ್ಯೂಟಿ
-----------------------------------------

ಬೆಂಗಳೂರಿಗೆ ಬಂದ ಹೊಸತರಲ್ಲಿ
ಒಂದು ದಿನ,
ಆಫೀಸಿಗೆ ಹೋಗ್ತಿದ್ದಾಗ
ರಸ್ತೆ ದಾಟುವಾಗ ಚಪ್ಪಲಿ ಕಳಕೊಂಡೆ
ಸ್ಕೂಟರು ಅಡ್ಡಬಂದಿತ್ತು
ಚಪ್ಪಲಿ ಕಾಲುಜಾರಿತ್ತು
ಚಪ್ಪಲಿ ಬಿಟ್ಟು ನಾನು
ದೂರ ಉಳಕೊಂಡೆ

ಇನ್ನೊಂದು ದಿನ,
ಕಾರು ಅಡ್ಡಬಂದು
ಕಾಲೇ ಕಳೆದುಹೋಯ್ತು
ಕಾಲು ಹೋದರೇನು? ನಾನಿದ್ದೀನಲ್ಲ!
ಅಂದ್ಕೊಂಡು
ಆಫೀಸಿಗೆ ಹೋದೆ

ಮತ್ತೊಂದು ದಿನ,
ಬೀಟೀಯೆಸ್‌ನಲ್ಲಿ ಹೋಗ್ತಿದ್ದಾಗ
ನಂಗೆ ತಲೇನೇ ಇಲ್ಲ
ಅನ್ನೋ ವಿಷಯ ಗೊತ್ತಾಯ್ತು.
ಡ್ಯೂಟಿ ಮಾಡೋಕೆ ತಲೆ ಏಕೆ?
ತಲೆ ಚಿಂತೆ ಬಿಟ್ಟು
ಡ್ಯೂಟಿಗೆ ಹಾಜರಾದೆ

ಹೀಗೇ ಬರಬರ್ತಾ,
ಬೀಟೀಯೆಸ್ ಬಸ್ಸು ನಿಲ್ಲದಿದ್ದಾಗ,
ನಿಂತ ಬಸ್ಸನ್ನು ನಾನು
ಹತ್ತಲಾರದೇಹೋದಾಗ
ನಂಗೆ ಕೈಯೂ ಇಲ್ಲ
ಅಂತ ಗೊತ್ತಾಯ್ತು.
ಟ್ರಾಫಿಕ್ ಸಿಗ್ನಲ್ ನೋಡ್ತಾ ಹೋಗಿ
ಹುಡುಗಿಯೊಬ್ಬಳಿಗೆ ಢಿಕ್ಕಿಹೊಡೆದಾಗ
ನಂಗೆ ಕಣ್ಣಿಲ್ಲ
ಅನ್ನೋದೂ ತಿಳೀತು.
ಓಡ್ತಾಇರೋ ಬಸ್ಸಿಂದ ಹಾರಿ
ಗಿಜಿಗಿಜಿಗುಟ್ಟೋ ರಸ್ತೇಲಿ ತೂರಿ
ಓಡಿಹೋಗ್ತಿರೋ
ಎರಡನೇ ಬಸ್‌ ಏರೋಕೆ
ಎದೆ ಬೇಕು,
ನಂಗೆ ಅದೂ ಇಲ್ಲ
ಅನ್ನೋದೂ ಅರಿವಾಯ್ತು
ಕೊನೆಗೆ.

ಈಗ ನಾನು,
ಕೈ ಬಿಟ್ಟು, ಕಾಲು ಬಿಟ್ಟು,
ಎದೆ ಬಿಟ್ಟು, ತಲೆ ಬಿಟ್ಟು,...
ಎದ್ದಕೂಡಲೇ ಮನೆ ಬಿಟ್ಟು
ಆರಾಮಾಗಿ ಹೋಗ್ತೀನಿ
ಆಫೀಸಿಗೆ.
ನಿಶ್ಚಿಂತೆಯಿಂದ ಡ್ಯೂಟಿ ಮುಗಿಸಿ
ನಿಧಾನವಾಗಿ ಹಾದಿ ಸವೆಸಿ
ನಿದ್ರೆ ಹೊತ್ತಿಗೆ ಮನೆ ಸೇರ್ತೀನಿ
ಮೆತ್ತಗೆ.