ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ
ಅರ್ಥಗರ್ಭಿತವಿರಲಿ ಎಷ್ಟೇ ಅದು
ಅರ್ಥೈಸುವೊತ್ತಡಕೆ ಮನ ಮುದುಡಲಲ್ಲ
ಕವಿತೆ ಓದುವುದು ನಾ ಮನ ಅರಳಲೆಂದು.
ಪ್ರೀತಿ ತೋರದ ಕೊಡುಗೆ ನನಗೆ ಬೇಕಿಲ್ಲ
ಧಾರಾಳವಾಗಿರಲಿ ಎಷ್ಟೇ ಅದು
ಪಡೆದು ಅಡಿಯಾಗುವುದು ನನಗಿಷ್ಟವಿಲ್ಲ
ಸರಳ ಪ್ರೇಮದ ಕೊಡುಗೆ ನಾನು ಬಯಸುವುದು.
ಪದವಿಗಂಟಿದ ಘನತೆ ನನಗೆ ಬೇಕಿಲ್ಲ
ಫಲಕಾರಿಯಾಗಿರಲಿ ಎಷ್ಟೇ ಅದು
ಪದವಿ ವ್ಯಕ್ತಿತ್ವವನು ಮರೆಮಾಡಲಲ್ಲ
ಬದಲಾಗಿ ಅದರಿಂದ ತಾ ಮೆರೆಯಲಿಹುದು.
ಶ್ರಮವು ಇಲ್ಲದ ಗಳಿಕೆ ನನಗೆ ಬೇಕಿಲ್ಲ
ಭರ್ಜರಿಯೆ ಆಗಿರಲಿ ಎಷ್ಟೇ ಅದು
ವಿಶ್ರಮಿಸಿ ಜಡವಾಗಿ ಕೊಳೆಯಲೆಂದಲ್ಲ
ದುಡಿದುಂಡು ತೃಪ್ತಿಹೊಂದಲು ನಾನಿರುವುದು.
ನಡತೆ ನೀಡದ ವಿದ್ಯೆ ನನಗೆ ಬೇಕಿಲ್ಲ
ಉನ್ನತವೆ ಆಗಿರಲಿ ಎಷ್ಟೇ ಅದು
ನಡತೆ ತಿಳಿಸದಮೇಲೆ ಅದಕೆ ಬೆಲೆಯಿಲ್ಲ
ಬೆಲೆಯುಳ್ಳ ವಿದ್ಯೆಯದು ನನಗೆ ಬೇಕಿಹುದು.
ಪರರಿಗಾಗದ ಬಾಳು ನನಗೆ ಬೇಕಿಲ್ಲ
ನನಗಾಗಿ ’ಸುಖ’ ಕೊಡಲಿ ಎಷ್ಟೇ ಅದು
ಪರರಿಗಾಗದ ಬಾಳು ಬಾಳುವೆಯೆ ಅಲ್ಲ
ಬಾಳಲ್ಲದಲ್ಲಿ ’ಸುಖ’ ಸುಖವು ಹೇಗಹುದು?
ಮುಪ್ಪಿಗಂಟಿಯೆ ಸಾವು ನನಗೆ ಬೇಕಿಲ್ಲ
ಆರಾಮವಾಗಿರಲಿ ಎಷ್ಟೇ ಅದು
ಬದುಕುವುದು ತಡವಾಗಿ ಸಾಯಲೆಂದಲ್ಲ
ಕೃತಕೃತ್ಯನಾಗಿ ದಿನಕೆದುರಾಗಲೆಂದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕವಿತೆಯ ಆ೦ತರ್ಯದಲ್ಲಿ ಅಡಗಿರುವ ಆಶಯ, ನೀತಿ ಮತ್ತು ಅರ್ಥ ಬಹಳ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಧನ್ಯವಾದ ಪರಾಂಜಪೆ ಅವರೇ.
ಪ್ರತ್ಯುತ್ತರಅಳಿಸಿಬರಿ ಗುಳಿಗೆ ಉರಳಸ್ತೀರಿ ಎಂದ್ಕೊಂಡಿದ್ದೆ!
ಪ್ರತ್ಯುತ್ತರಅಳಿಸಿಜೀವನದ ಟಾನಿಕ್ ಕೂಡ ನನ್ನ ಬಳಿ ಇದೆ!
ಪ್ರತ್ಯುತ್ತರಅಳಿಸಿ