ಶುಕ್ರವಾರ, ಮೇ 8, 2009

ಡಿ ವಿ ಜಿ ದೃಷ್ಟಿಯಲ್ಲಿ ಮಹಾಚುನಾವಣೆ

ದಾರ್ಶನಿಕ ಕವಿ ಡಿ ವಿ ಜಿ ಅವರು ಮಹಾಚುನಾವಣೆಯ ಬಗ್ಗೆ ಕೆಲವು ಸೊಗಸಾದ ಪದ್ಯಗಳನ್ನು ಬರೆದಿದ್ದಾರೆಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆ ಪದ್ಯಗಳನ್ನು ಓದಿದಾಗ ನಮಗೆ, ’ಡಿ ವಿ ಜಿ ಕಾಲಕ್ಕೂ ಇಂದಿಗೂ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ವ್ಯತ್ಯಾಸವೇನಿಲ್ಲ’, ಎಂಬ ಸತ್ಯದ ಅರಿವು ಉಂಟಾಗುತ್ತದೆ. ೧೯೬೫ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಎಂಥ ನಿಂತ ನೀರೆಂಬುದು ನಮಗೆ ವೇದ್ಯವಾಗುತ್ತದೆ!

ಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. ದಿನೇದಿನೇ ಕೊಳಕು ಹೆಚ್ಚಾಗುತ್ತಿದೆ ಅಷ್ಟೆ.

ಅಂದು ಡಿ ವಿ ಜಿ ಬರೆದ ಪದ್ಯಗಳು ಇಂದಿಗೂ ಹೇಗೆ ಪ್ರಸ್ತುತವೆನಿಸುತ್ತವೆಂಬುದನ್ನು ಕೆಲ ಉದಾಹರಣೆಗಳ ಮೂಲಕ ನೋಡೋಣ.

ಮಹಾಚುನಾವಣೆಯನ್ನು ಡಿ ವಿ ಜಿ ಅವರು ’ವರಣ ಪ್ರಸ್ತ’ ಎಂದು ಕರೆಯುತ್ತಾರೆ. ’(ಜನಪ್ರತಿನಿಧಿಗಳನ್ನು) ಆರಿಸುವ ಶುಭ ಸಮಾರಂಭ’ ಎಂದು ಇದರರ್ಥ. ’ವರಣ ಪ್ರಸ್ತ’ ಎಂಬ ಶೀರ್ಷಿಕೆಯ ಪದ್ಯದಲ್ಲಿ ಡಿ ವಿ ಜಿ ಹೇಳುತ್ತಾರೆ:

ಏನು ಜಾತ್ರೆಯದು? ಏನಾ ಪ್ರಸ್ತವೊ!
ವೋಟಿನ ಹಾರಾಟಾ,
ಮಗುವೇ, ವೋಟಿನ ಹಾರಾಟಾ.
ನಾನು ತಾನೆನುತ್ತಿರುವಾ ಪ್ರತಿನಿಧಿ
ಪೋಟಿಯ ಮೇಲಾಟಾ,
ಮಗುವೇ, ಮೇಲುಪೋಟಿಯಾಟಾ.

ಮುಂದುವರಿದು ಅವರು ಚುನಾವಣಾ ರ್‍ಯಾಲಿ(rally)ಗಳ ಬಗ್ಗೆ ಹೇಳುತ್ತಾರೆ:

ಶಿಕ್ಷಣವಂತರು ಲಕ್ಷಣವತಿಯರು
ಲಕ್ಷಮಂದಿ ಪರಿಷೇ,
ಮಗುವೇ, ಲಕ್ಷಾಂತರ ಪರಿಷೇ.
ಅಕ್ಷರವರಿಯದ ಕುಕ್ಷಿಯ ಮರೆಯದ
ಅಕ್ಷಯಜನ ಪರಿಷೇ,
ಮಗುವೇ, ಸಾಕ್ಷಾತ್ ಜನ ಪರಿಷೇ.

ಪದ್ಯದ ಕೊನೆಯಲ್ಲಿ ಡಿ ವಿ ಜಿ ಅವರು ಅಭ್ಯರ್ಥಿಗಳ ಕಾಪಟ್ಯವನ್ನು ಹೀಗೆ ಬಿಚ್ಚಿಡುತ್ತಾರೆ:

ದೇಶೋದ್ಧಾರಕ ಮೋಸನಿವಾರಕ
ವೇಷದ ನಾಟಕವೋ,
ಮಗುವೇ, ವೇಷದ ನಾಟಕವೋ.
ಆಶಾದಾಯಕ ಘೋಷಣಕಾರಕ
ಹಾಸ್ಯವಿಕಾರಕವೋ,
ಮಗುವೇ, ಹಾಸ್ಯವಿಕಾರಕವೋ.

ವಿವಿಧ ಪಕ್ಷಗಳವರು ಮತಯಾಚನೆ ಮಾಡುವ ಬಗೆಯನ್ನು ’ಜನಜನವರಿಗೆ’ ಎಂಬ ಪದ್ಯದಲ್ಲಿ ಡಿ ವಿ ಜಿ ಸೊಗಸಾಗಿ ಬಣ್ಣಿಸುತ್ತಾರೆ:

ದೇಶಸ್ವತಂತ್ರಕ್ಕೆ ಮೀಶೆಬಿಟ್ಟವ ನಾನು;
ಕೊಡಿರೆನಗೆ ಮತವ,
ಹಿಡಿಯಿರಿದೊ ಹಿತವ;
ಇಂತೆಂದು ಬಂದನಾ ಘನ ಕಾಂಗ್ರೆಸಿಗನು.
ಬೇಸಾಯಗಾರಂಗೆ ಬೆನ್ನುಮೂಳೆಯೊ ನಾನು;
ತನ್ನಿರಾ ಮತವ,
ಬನ್ನಿ, ಕೊಳಿ ಹಿತವ;
ಇಂತೆಂದು ಬಂದನಾ ಕಿಸುಕಿಸಾನವನು.
ಕೂಲಿಯಾಳ್ಗಲನೆಲ್ಲ ಮೇಲಕೆತ್ತುವೆ ನಾನು;
ಇತ್ತ ಕೊಡಿ ಮತವ,
ಎತ್ತಿಕೊಳಿ ಹಿತವ;
ಇಂತೆಂದು ಬಂದನಾ ಮಜ್ದೂರಿನವನು.
...........................
ಕೀಳು ಮೇಲೆಂಬರ್‍ಗೆ ಕಾಲಾಂತಕನು ನಾನು;
ನೀಡಿರಾ ಮತವ,
ನೋಡಿರೀ ಹಿತವ;
ಇಂತೆಂದು ಬಂದನಾ ಹರಿಜನೋದ್ಧರನು.
ಸಾಲಹೊರೆ ಹೊತ್ತರ್‍ಗೆ ಕೀಲುಕುದುರೆಯು ನಾನು;
ಚಾಚಿರಾ ಮತವ,
ಬಾಚಿಕೊಳಿ ಹಿತವ;
ಇಂತೆಂದು ಬಂದನಾ ಋಣವಿಮೋಚಕನು.
.............................
ಧರ್ಮದುದ್ಧಾರವೇ ಪೆರ್‍ಮೆಯೆಂಬನು ನಾನು;
ಮುಡುಪಿಡಿರಿ ಮತವ,
ಪಿಡಿಯಿರಿದೊ ಹಿತವ;
ಇಂತೆಂದು ಬಂದನಾ ಹಿಂದುಸಭೆಯವನು.

ಹೀಗೆ ಮುಂದುವರಿಯುತ್ತದೆ ’ಜನಜನವರಿಗೆ’ ಪದ್ಯ.

’ಅಂಗೈಯ ವೈಕುಂಠ’ ಎಂಬ ಪದ್ಯದಲ್ಲಿ ಡಿ ವಿ ಜಿ ಅವರು ಚುನಾವಣೆ ದಾಟಿ ಮುಂದಕ್ಕೆ ಹೋಗುತ್ತಾರೆ.
ಪೊಳ್ಳು ಆಶ್ವಾಸನೆಗಳನ್ನು ನೀಡಿ ಆಯ್ಕೆಯಾದ ಅಭ್ಯರ್ಥಿಯು ’ಹೆಮ್ಮಂತ್ರಿ’ಯಾಗಿ ಮೆರೆಯುತ್ತಾನೆ, ಆದರೆ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ. ’ರೋಸಿದ್ದ ಜನವೆಲ್ಲ ಕಡೆಗೂರ ಚೌಕದಲಿ’ ನೆರೆದು, ಔತಣದ ನೆಪದಲ್ಲಿ ಆ ಮಂತ್ರಿಯನ್ನು ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಮಂತ್ರಿ ಉತ್ತರಿಸುತ್ತಾನೆ:

ವೇಷ ತೊಟ್ಟೆನು ನಿಮ್ಮ ಮನಮೆಚ್ಚಿಗಾಗಿ,
ಭಾಷೆ ಕೊಟ್ಟೆನು ನಿಮ್ಮ ವರಪತ್ರಕಾಗಿ.
ಅದೇ ಬಾಯಲ್ಲಿ ಆತ ಮತ್ತೆ ಹೇಳುತ್ತಾನೆ:
ಈ ಸಾರಿ ನೀಮೆನ್ನನಾರಿಸಿರಿ, ನಾನು
ಮೂಸಲದ ಋಣಬಡ್ಡಿಯೆಲ್ಲ ತೀರಿಪೆನು.

ಮುಗ್ಧ ಮತದಾರರು ಅವನನ್ನು ಮತ್ತೆ ನಂಬುತ್ತಾರೆ!

ದೂರ್‍ವುದೇಕವನ ನಾಮ್? ಅವನ ಮನಸೊಳಿತು;
ಪೂರ್ವಕರ್ಮವು ನಮ್ಮದದರ ಫಲವಿನಿತು.

ಹೀಗೆಂದುಕೊಂಡು ಜನರು ಮತ್ತೆ ಮುಂದಿನ ಚುನಾವಣೆಯಲ್ಲೂ ಆತನನ್ನೇ ಆಯ್ಕೆಮಾಡುತ್ತಾರೆ! ಆತನದೋ, ಮತ್ತೆ ಅದೇ ಚಾಳಿ! ಇದನ್ನು ಕಂಡು ಕವಿ (ಡಿ ವಿ ಜಿ) ಉದ್ಗರಿಸುತ್ತಾರೆ:

ಕಲಿಯಿತೇಂ ಜನತೆಯಂಗೈಯ ವೈಕುಂಠದಿಂ
ರಾಜ್ಯಪಾಠವನು?
ತಿಳಿಯಿತೇಂ ಕಂಡ ಮುಂಗೈಯ ಕೈಲಾಸದಿಂ
ಭೋಜ್ಯದೂಟವನು?
ಮರೆವು ಕವಿಯಿತು ಜನವ ನಿಶಿನಿದ್ದೆಯೊಡನೆ;
ಕರಗಿತಾ ಕಹಿನೆನಪು ಬಿಸಿಮುದ್ದೆಯೊಡನೆ.

ಡಿ ವಿ ಜಿ ಅವರ ಈ ಮಾತು ಇಂದಿಗೂ ಅಷ್ಟೇ ಪ್ರಸ್ತುತವಲ್ಲವೆ? ’ಪಬ್ಲಿಕ್ ಮೆಮೊರಿ ಈಸ್ ಷಾರ್ಟ್’ ತಾನೆ? ಅದರ ದುರುಪಯೋಗವನ್ನೇ ಅಲ್ಲವೆ ನಮ್ಮ ಪುಢಾರಿಗಳು ಮಾಡಿಕೊಳ್ಳುತ್ತಿರುವುದು? ಇಂಥ ಪುಢಾರಿಯನ್ನು ’ಜನನಾಯಕ’ ಎಂಬ ಪದ್ಯದಲ್ಲಿ ಡಿ ವಿ ಜಿ ಅವರು ಸಖತ್ತಾಗಿ ಬೆಂಡೆತ್ತಿದ್ದಾರೆ. ಆ ಪದ್ಯದ ಪೂರ್ಣಪಾಠ ಇಂತಿದೆ:

ಎಲ್ಲಿಂದ ಬಂದೆಯೋ ಜನನಾಯಕಾ-ಎಂಥ
ಒಳ್ಳೆಯದ ತಂದೆಯೋ ಜನನಾಯಕ.
ಬೆಲ್ಲವನು ಕಿವಿಗೀವ ಜನನಾಯಕಾ ನೀನು
ಸುಳ್ಳಾಡದಿರು ಸಾಕು-ಜನನಾಯಕಾ.
ಗಗನದಿಂದಿಳಿದೆಯಾ ಮಘವಂತ ದೂತನೇ
ಮುಗಿಲಂತೆ ಗುಡುಗಾಡುತಿರುವೆಯೇಕೋ?
ಸೊಗವೀವ ಮಳೆಯ ನೀಂ ಕರೆಯಬಲ್ಲೆಯ ಬರಿ
ಹೊಗೆಯ ಮೋಡವೊ ನೀನು-ಜನನಾಯಕಾ.
ಪಾತಾಳದಿಂದೆದ್ದು ಬಂದಿಹೆಯ ನೀನು,
ಭೇತಾಳ ಮಾಯೆಗಳ ಮಾಡಲಿಹೆಯಾ?
ಮಾತಿನಿಂ ಮಾತೆಗೇನುದ್ಧಾರವೋ ನಿನ್ನ
ಬೂತಾಟಿಕೆಗಳೇಕೊ-ಜನನಾಯಕಾ.
ಕಡಲ ಮಧ್ಯದಿನೆದ್ದು ಬಂದಿರುವೆಯಾ ನೀನು,
ಕಡೆದು ನಮಗಮೃತವನು ತಂದಿರುವೆಯಾ?
ಪೊಡವಿಯಾಳ್ತನವೇನು ಬುಡುಬುಡುಕಿಯಾಟವೇ?
ದುಡಿತ ನೀನೇನರಿವೆ?-ಜನನಾಯಕಾ.
ನಾಗಲೋಕದಿನೆದ್ದು ಬಂದೆಯೇನೋ ಬರಿಯ
ಲಾಗಾಟ ಕೂಗಾಟ ನಿನ್ನ ಬದುಕು.
ನೇಗಿಲನು ಪಿಡಿದು ನೆಲನುಳಬಲ್ಲೆಯಾ ನೀನು
ನಾಗರ ಕಳಿಂಗನೋ-ಜನನಾಯಕಾ.
ಯಾವ ವಿದ್ಯೆಯ ಬಲ್ಲೆ? ಯಾವ ವ್ರತವ ಗೈದೆ?
ಜೀವನದ ಮರ್ಮವೇನರಿತವನೆ ನೀಂ?
ಸಾವಧಾನದ ತಪಸ್ಸಲ್ಲವೇನೋ ರಾಷ್ಟ್ರ-
ಸೇವೆಯ ಮಹಾಕಾರ್ಯ-ಜನನಾಯಕಾ.
ಗಾಂಧಿ ಗಾಂಧಿಯೆನುತ್ತಲಡಿಗಡಿಗೆ ಕೂಗುತಿಹೆ
ಗಾಂಧಿವೋಲನುದಿನದಿ ಬಾಳುತಿಹೆಯಾ?
ದಾಂಧಲೆಯ ಮಾಡಿ ನೀಂ ಪದವಿಗೇರುವನೆಂದು
ಸಂದೇಹವೋ ನಮಗೆ-ಜನನಾಯಕಾ.
ಗಾಳಿತಿತ್ತಿಯೊ ನೀನು ಜನನಾಯಕಾ-ಹಳಸು
ಕೂಳು ಬುತ್ತಿಯೊ ನೀನು ಜನನಾಯಕಾ.
ದಾಳದಾಟವೊ ನೀನು ಜನನಾಯಕಾ-ನಮ್ಮ
ಫಾಲಲಿಪಿಯೋ ನೀನು-ಜನನಾಯಕಾ.

ದಾರ್ಶನಿಕ ಕವಿ ಡಿ ವಿ ಜಿ ಅವರು ಈ ಪದ್ಯದ ಕೊನೆಯಲ್ಲಿ, ’ಇಂಥ ಜನನಾಯಕನನ್ನು ಹೊಂದಿರುವುದು ನಮ್ಮ ಹಣೆಬರಹ’ ಎಂಬ ತೀರ್ಮಾನಕ್ಕೆ ಬಂದಿರುವುದನ್ನು ನೋಡಿದರೆ ಅಂದಿನ ರಾಜಕಾರಣವೂ ಎಷ್ಟು ಹೊಲೆಗಟ್ಟಿತ್ತೆಂಬುದನ್ನು ನಾವು ಊಹಿಸಬಹುದು. ಡಿ ವಿ ಜಿ ಅವರ ಬೇಗುದಿಯೂ ಇಲ್ಲಿ ನಮ್ಮ ಕಣ್ಣಿಗೆ ಕಟ್ಟುತ್ತದೆ.

ಇನ್ನು, ಮಹಾಚುನಾವಣೆಯೆಂಬ ಈ ’ಜನವಂಚನೆ’ಯ ಬಗ್ಗೆ ಕವಿಯ ಕಲ್ಪನೆಯು ಎಂಥ ಉತ್ತುಂಗವನ್ನು ತಲುಪಿದೆಯೆಂದರೆ, ಪುಢಾರಿಗಳ ಬಾಯಲ್ಲಿ ಸಿಕ್ಕಿಬಿದ್ದ ಸರಸ್ವತಿಯು ಬಿಡುಗಡೆಗಾಗಿ ಬ್ರಹ್ಮನ ಮೊರೆಹೊಗುತ್ತಾಳೆ! ’ಸರಸ್ವತಿಯ ಪ್ರಾರ್ಥನೆ’ ಪದ್ಯದಲ್ಲಿ ಆ ದೇವಿಯು ಬ್ರಹ್ಮನನ್ನು ಈ ರೀತಿ ಪ್ರಾರ್ಥಿಸುತ್ತಾಳೆ:

ಬಿಡಿಸೆನ್ನ ರಾಜ್ಯಕರ ಹಿಡಿತದಿಂ ವಿಧಿಯೇ
ತೊದಲು ತುಟಿಗೆನ್ನ ಬಲಿಕೊಡಬೇಡ ಪತಿಯೇ.
ದೇಶದುದ್ಧಾರಕ್ಕೆ ಭಾಷಣವೆ ಪಥವಂತೆ,
ಘೋಷಣೆಯ ಲೋಕ ಸಂತೋಷ ನಿಧಿಯಂತೆ.
ಆಶೆಯಾಗಿಸೆ ಜನಕೆ ವೇಷ ತೊಡಿಸುವರೆನಗೆ
ವೇಶಿತನವನದೆಂತು ಸೈಸಲಹುದಜನೇ.
ಮಾತು ನೂಲನು ಜೇಡ ಬಲೆಯಾಗಿ ನೆಯ್ದು
ವೋಟು ನೊಣಗಳ ಪಿಡಿವ ಹೂಟವನು ಹೂಡಿ
ಊಟಕ್ಕೆ ಬಾಯ್ದೆರೆವ ಮಾಟಗಾರರಿಗೆ ನಾಂ
ಚೇಟಿಯಾಗುವೆನೆ? ಈ ಕೋಟಲೆಯ ಹರಿಸೈ.

ಕವಿಯ ಕಲ್ಪನೆಯಿಲ್ಲಿ ಅನ್ಯಾದೃಶವಲ್ಲವೆ?

ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಅಂದು ಆಡಿರುವ ನುಡಿಗಳು ಇಂದಿಗೂ ಪ್ರಸ್ತುತ.

ಡಿ ವಿ ಜಿ ಅವರ ’ಮಂಕುತಿಮ್ಮನ ಕಗ್ಗ’ ಅದೊಂದು ಲೋಕಸತ್ಯ; ಸಾರ್ವಕಾಲಿಕ ಸತ್ಯ. ಆದರೆ, ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಆಡಿರುವ ನುಡಿಗಳು ಸಾರ್ವಕಾಲಿಕ ಸತ್ಯ ಆಗದಿರಲಿ ಎಂಬುದು ನಮ್ಮ ನಿಮ್ಮೆಲ್ಲರ ಅಪೇಕ್ಷೆ. ಡಿ ವಿ ಜಿ ಅವರ ಅಪೇಕ್ಷೆಯೂ ಇದೇ ಆಗಿತ್ತಲ್ಲವೆ?

ಈ ಅಪೇಕ್ಷೆಯನ್ನು ನಿಜವಾಗಿಸುವ ಅವಕಾಶ, ಅರ್ಥಾತ್, ದುಷ್ಟ-ಭ್ರಷ್ಟ ಜನನಾಯಕರಿಗೆ ’ಗತಿ ಕಾಣಿಸುವ’ ಅವಕಾಶ ದೇಶಾದ್ಯಂತ ನಮಗೀಗ ಒದಗಿಬಂದಿದ್ದು, ಮತಪತ್ರಗಳ ಮೂಲಕ ನಾವು ಆ ಕೆಲಸವನ್ನು ಮಾಡಿದ್ದೇವೆಯೇ?
ಇದೇ ೧೬ರಂದು ಗೊತ್ತಾಗುತ್ತದೆ.

3 ಕಾಮೆಂಟ್‌ಗಳು:

  1. ಶಾಸ್ತ್ರಿಯವರೆ,
    ಡಿ.ವಿ.ಜಿ.ಯವರ ಮಂಕುತಿಮ್ಮನ ಬಗೆಗೆ ಮಾತ್ರ ತಿಳಿದಿದ್ದ ನಾನು, ಅವರ ಈ ಕವನಗಳನ್ನು ಓದಿ ದಂಗುಬಡಿದು ಹೋದೆನು. ನಮ್ಮ ವೋಟುಕಾರಣಿಗಳ ಬಗೆಗೆ ಆವಾಗಲೇ ಎಷ್ಟು ಚೆನ್ನಾಗಿ ತಿಳಿದು ಬರೆದಿದ್ದಾರಲ್ಲ ಡಿ.ವಿ.ಜಿ.!
    ವೋಟಿಗೆ ‘ವರಪತ್ರ’ ಎನ್ನುವ ಪದವನ್ನು ಅವರು ಬಳಸಿದ್ದು ಸಮರ್ಥ ವ್ಯಂಗ್ಯವಾಗಿದೆ.
    ಈ ಕವನಗಳನ್ನು ನಮಗೆ ತೋರಿಸಿದ ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಅಂದು ಇಂದು ಮುಂದು ಇದು ಎಂದೆಂದೂ ಇದು ಸರಿಯೇ ಏಕೆಂದರೆ ಅವರು ಬರೆದದ್ದು ಬರೀ ಪುಸ್ತಕ ನುಡಿಗಳಷ್ಟೇ ಅಲ್ಲಾ ಅದು ಒಂದು ದರ್ಶನ,ಅದು ಸಾರ್ವಕಾಲಿಕ ಸತ್ಯ....ತಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ