vote ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
vote ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮೇ 8, 2009

ಡಿ ವಿ ಜಿ ದೃಷ್ಟಿಯಲ್ಲಿ ಮಹಾಚುನಾವಣೆ

ದಾರ್ಶನಿಕ ಕವಿ ಡಿ ವಿ ಜಿ ಅವರು ಮಹಾಚುನಾವಣೆಯ ಬಗ್ಗೆ ಕೆಲವು ಸೊಗಸಾದ ಪದ್ಯಗಳನ್ನು ಬರೆದಿದ್ದಾರೆಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆ ಪದ್ಯಗಳನ್ನು ಓದಿದಾಗ ನಮಗೆ, ’ಡಿ ವಿ ಜಿ ಕಾಲಕ್ಕೂ ಇಂದಿಗೂ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ವ್ಯತ್ಯಾಸವೇನಿಲ್ಲ’, ಎಂಬ ಸತ್ಯದ ಅರಿವು ಉಂಟಾಗುತ್ತದೆ. ೧೯೬೫ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಎಂಥ ನಿಂತ ನೀರೆಂಬುದು ನಮಗೆ ವೇದ್ಯವಾಗುತ್ತದೆ!

ಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. ದಿನೇದಿನೇ ಕೊಳಕು ಹೆಚ್ಚಾಗುತ್ತಿದೆ ಅಷ್ಟೆ.

ಅಂದು ಡಿ ವಿ ಜಿ ಬರೆದ ಪದ್ಯಗಳು ಇಂದಿಗೂ ಹೇಗೆ ಪ್ರಸ್ತುತವೆನಿಸುತ್ತವೆಂಬುದನ್ನು ಕೆಲ ಉದಾಹರಣೆಗಳ ಮೂಲಕ ನೋಡೋಣ.

ಮಹಾಚುನಾವಣೆಯನ್ನು ಡಿ ವಿ ಜಿ ಅವರು ’ವರಣ ಪ್ರಸ್ತ’ ಎಂದು ಕರೆಯುತ್ತಾರೆ. ’(ಜನಪ್ರತಿನಿಧಿಗಳನ್ನು) ಆರಿಸುವ ಶುಭ ಸಮಾರಂಭ’ ಎಂದು ಇದರರ್ಥ. ’ವರಣ ಪ್ರಸ್ತ’ ಎಂಬ ಶೀರ್ಷಿಕೆಯ ಪದ್ಯದಲ್ಲಿ ಡಿ ವಿ ಜಿ ಹೇಳುತ್ತಾರೆ:

ಏನು ಜಾತ್ರೆಯದು? ಏನಾ ಪ್ರಸ್ತವೊ!
ವೋಟಿನ ಹಾರಾಟಾ,
ಮಗುವೇ, ವೋಟಿನ ಹಾರಾಟಾ.
ನಾನು ತಾನೆನುತ್ತಿರುವಾ ಪ್ರತಿನಿಧಿ
ಪೋಟಿಯ ಮೇಲಾಟಾ,
ಮಗುವೇ, ಮೇಲುಪೋಟಿಯಾಟಾ.

ಮುಂದುವರಿದು ಅವರು ಚುನಾವಣಾ ರ್‍ಯಾಲಿ(rally)ಗಳ ಬಗ್ಗೆ ಹೇಳುತ್ತಾರೆ:

ಶಿಕ್ಷಣವಂತರು ಲಕ್ಷಣವತಿಯರು
ಲಕ್ಷಮಂದಿ ಪರಿಷೇ,
ಮಗುವೇ, ಲಕ್ಷಾಂತರ ಪರಿಷೇ.
ಅಕ್ಷರವರಿಯದ ಕುಕ್ಷಿಯ ಮರೆಯದ
ಅಕ್ಷಯಜನ ಪರಿಷೇ,
ಮಗುವೇ, ಸಾಕ್ಷಾತ್ ಜನ ಪರಿಷೇ.

ಪದ್ಯದ ಕೊನೆಯಲ್ಲಿ ಡಿ ವಿ ಜಿ ಅವರು ಅಭ್ಯರ್ಥಿಗಳ ಕಾಪಟ್ಯವನ್ನು ಹೀಗೆ ಬಿಚ್ಚಿಡುತ್ತಾರೆ:

ದೇಶೋದ್ಧಾರಕ ಮೋಸನಿವಾರಕ
ವೇಷದ ನಾಟಕವೋ,
ಮಗುವೇ, ವೇಷದ ನಾಟಕವೋ.
ಆಶಾದಾಯಕ ಘೋಷಣಕಾರಕ
ಹಾಸ್ಯವಿಕಾರಕವೋ,
ಮಗುವೇ, ಹಾಸ್ಯವಿಕಾರಕವೋ.

ವಿವಿಧ ಪಕ್ಷಗಳವರು ಮತಯಾಚನೆ ಮಾಡುವ ಬಗೆಯನ್ನು ’ಜನಜನವರಿಗೆ’ ಎಂಬ ಪದ್ಯದಲ್ಲಿ ಡಿ ವಿ ಜಿ ಸೊಗಸಾಗಿ ಬಣ್ಣಿಸುತ್ತಾರೆ:

ದೇಶಸ್ವತಂತ್ರಕ್ಕೆ ಮೀಶೆಬಿಟ್ಟವ ನಾನು;
ಕೊಡಿರೆನಗೆ ಮತವ,
ಹಿಡಿಯಿರಿದೊ ಹಿತವ;
ಇಂತೆಂದು ಬಂದನಾ ಘನ ಕಾಂಗ್ರೆಸಿಗನು.
ಬೇಸಾಯಗಾರಂಗೆ ಬೆನ್ನುಮೂಳೆಯೊ ನಾನು;
ತನ್ನಿರಾ ಮತವ,
ಬನ್ನಿ, ಕೊಳಿ ಹಿತವ;
ಇಂತೆಂದು ಬಂದನಾ ಕಿಸುಕಿಸಾನವನು.
ಕೂಲಿಯಾಳ್ಗಲನೆಲ್ಲ ಮೇಲಕೆತ್ತುವೆ ನಾನು;
ಇತ್ತ ಕೊಡಿ ಮತವ,
ಎತ್ತಿಕೊಳಿ ಹಿತವ;
ಇಂತೆಂದು ಬಂದನಾ ಮಜ್ದೂರಿನವನು.
...........................
ಕೀಳು ಮೇಲೆಂಬರ್‍ಗೆ ಕಾಲಾಂತಕನು ನಾನು;
ನೀಡಿರಾ ಮತವ,
ನೋಡಿರೀ ಹಿತವ;
ಇಂತೆಂದು ಬಂದನಾ ಹರಿಜನೋದ್ಧರನು.
ಸಾಲಹೊರೆ ಹೊತ್ತರ್‍ಗೆ ಕೀಲುಕುದುರೆಯು ನಾನು;
ಚಾಚಿರಾ ಮತವ,
ಬಾಚಿಕೊಳಿ ಹಿತವ;
ಇಂತೆಂದು ಬಂದನಾ ಋಣವಿಮೋಚಕನು.
.............................
ಧರ್ಮದುದ್ಧಾರವೇ ಪೆರ್‍ಮೆಯೆಂಬನು ನಾನು;
ಮುಡುಪಿಡಿರಿ ಮತವ,
ಪಿಡಿಯಿರಿದೊ ಹಿತವ;
ಇಂತೆಂದು ಬಂದನಾ ಹಿಂದುಸಭೆಯವನು.

ಹೀಗೆ ಮುಂದುವರಿಯುತ್ತದೆ ’ಜನಜನವರಿಗೆ’ ಪದ್ಯ.

’ಅಂಗೈಯ ವೈಕುಂಠ’ ಎಂಬ ಪದ್ಯದಲ್ಲಿ ಡಿ ವಿ ಜಿ ಅವರು ಚುನಾವಣೆ ದಾಟಿ ಮುಂದಕ್ಕೆ ಹೋಗುತ್ತಾರೆ.
ಪೊಳ್ಳು ಆಶ್ವಾಸನೆಗಳನ್ನು ನೀಡಿ ಆಯ್ಕೆಯಾದ ಅಭ್ಯರ್ಥಿಯು ’ಹೆಮ್ಮಂತ್ರಿ’ಯಾಗಿ ಮೆರೆಯುತ್ತಾನೆ, ಆದರೆ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ. ’ರೋಸಿದ್ದ ಜನವೆಲ್ಲ ಕಡೆಗೂರ ಚೌಕದಲಿ’ ನೆರೆದು, ಔತಣದ ನೆಪದಲ್ಲಿ ಆ ಮಂತ್ರಿಯನ್ನು ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಮಂತ್ರಿ ಉತ್ತರಿಸುತ್ತಾನೆ:

ವೇಷ ತೊಟ್ಟೆನು ನಿಮ್ಮ ಮನಮೆಚ್ಚಿಗಾಗಿ,
ಭಾಷೆ ಕೊಟ್ಟೆನು ನಿಮ್ಮ ವರಪತ್ರಕಾಗಿ.
ಅದೇ ಬಾಯಲ್ಲಿ ಆತ ಮತ್ತೆ ಹೇಳುತ್ತಾನೆ:
ಈ ಸಾರಿ ನೀಮೆನ್ನನಾರಿಸಿರಿ, ನಾನು
ಮೂಸಲದ ಋಣಬಡ್ಡಿಯೆಲ್ಲ ತೀರಿಪೆನು.

ಮುಗ್ಧ ಮತದಾರರು ಅವನನ್ನು ಮತ್ತೆ ನಂಬುತ್ತಾರೆ!

ದೂರ್‍ವುದೇಕವನ ನಾಮ್? ಅವನ ಮನಸೊಳಿತು;
ಪೂರ್ವಕರ್ಮವು ನಮ್ಮದದರ ಫಲವಿನಿತು.

ಹೀಗೆಂದುಕೊಂಡು ಜನರು ಮತ್ತೆ ಮುಂದಿನ ಚುನಾವಣೆಯಲ್ಲೂ ಆತನನ್ನೇ ಆಯ್ಕೆಮಾಡುತ್ತಾರೆ! ಆತನದೋ, ಮತ್ತೆ ಅದೇ ಚಾಳಿ! ಇದನ್ನು ಕಂಡು ಕವಿ (ಡಿ ವಿ ಜಿ) ಉದ್ಗರಿಸುತ್ತಾರೆ:

ಕಲಿಯಿತೇಂ ಜನತೆಯಂಗೈಯ ವೈಕುಂಠದಿಂ
ರಾಜ್ಯಪಾಠವನು?
ತಿಳಿಯಿತೇಂ ಕಂಡ ಮುಂಗೈಯ ಕೈಲಾಸದಿಂ
ಭೋಜ್ಯದೂಟವನು?
ಮರೆವು ಕವಿಯಿತು ಜನವ ನಿಶಿನಿದ್ದೆಯೊಡನೆ;
ಕರಗಿತಾ ಕಹಿನೆನಪು ಬಿಸಿಮುದ್ದೆಯೊಡನೆ.

ಡಿ ವಿ ಜಿ ಅವರ ಈ ಮಾತು ಇಂದಿಗೂ ಅಷ್ಟೇ ಪ್ರಸ್ತುತವಲ್ಲವೆ? ’ಪಬ್ಲಿಕ್ ಮೆಮೊರಿ ಈಸ್ ಷಾರ್ಟ್’ ತಾನೆ? ಅದರ ದುರುಪಯೋಗವನ್ನೇ ಅಲ್ಲವೆ ನಮ್ಮ ಪುಢಾರಿಗಳು ಮಾಡಿಕೊಳ್ಳುತ್ತಿರುವುದು? ಇಂಥ ಪುಢಾರಿಯನ್ನು ’ಜನನಾಯಕ’ ಎಂಬ ಪದ್ಯದಲ್ಲಿ ಡಿ ವಿ ಜಿ ಅವರು ಸಖತ್ತಾಗಿ ಬೆಂಡೆತ್ತಿದ್ದಾರೆ. ಆ ಪದ್ಯದ ಪೂರ್ಣಪಾಠ ಇಂತಿದೆ:

ಎಲ್ಲಿಂದ ಬಂದೆಯೋ ಜನನಾಯಕಾ-ಎಂಥ
ಒಳ್ಳೆಯದ ತಂದೆಯೋ ಜನನಾಯಕ.
ಬೆಲ್ಲವನು ಕಿವಿಗೀವ ಜನನಾಯಕಾ ನೀನು
ಸುಳ್ಳಾಡದಿರು ಸಾಕು-ಜನನಾಯಕಾ.
ಗಗನದಿಂದಿಳಿದೆಯಾ ಮಘವಂತ ದೂತನೇ
ಮುಗಿಲಂತೆ ಗುಡುಗಾಡುತಿರುವೆಯೇಕೋ?
ಸೊಗವೀವ ಮಳೆಯ ನೀಂ ಕರೆಯಬಲ್ಲೆಯ ಬರಿ
ಹೊಗೆಯ ಮೋಡವೊ ನೀನು-ಜನನಾಯಕಾ.
ಪಾತಾಳದಿಂದೆದ್ದು ಬಂದಿಹೆಯ ನೀನು,
ಭೇತಾಳ ಮಾಯೆಗಳ ಮಾಡಲಿಹೆಯಾ?
ಮಾತಿನಿಂ ಮಾತೆಗೇನುದ್ಧಾರವೋ ನಿನ್ನ
ಬೂತಾಟಿಕೆಗಳೇಕೊ-ಜನನಾಯಕಾ.
ಕಡಲ ಮಧ್ಯದಿನೆದ್ದು ಬಂದಿರುವೆಯಾ ನೀನು,
ಕಡೆದು ನಮಗಮೃತವನು ತಂದಿರುವೆಯಾ?
ಪೊಡವಿಯಾಳ್ತನವೇನು ಬುಡುಬುಡುಕಿಯಾಟವೇ?
ದುಡಿತ ನೀನೇನರಿವೆ?-ಜನನಾಯಕಾ.
ನಾಗಲೋಕದಿನೆದ್ದು ಬಂದೆಯೇನೋ ಬರಿಯ
ಲಾಗಾಟ ಕೂಗಾಟ ನಿನ್ನ ಬದುಕು.
ನೇಗಿಲನು ಪಿಡಿದು ನೆಲನುಳಬಲ್ಲೆಯಾ ನೀನು
ನಾಗರ ಕಳಿಂಗನೋ-ಜನನಾಯಕಾ.
ಯಾವ ವಿದ್ಯೆಯ ಬಲ್ಲೆ? ಯಾವ ವ್ರತವ ಗೈದೆ?
ಜೀವನದ ಮರ್ಮವೇನರಿತವನೆ ನೀಂ?
ಸಾವಧಾನದ ತಪಸ್ಸಲ್ಲವೇನೋ ರಾಷ್ಟ್ರ-
ಸೇವೆಯ ಮಹಾಕಾರ್ಯ-ಜನನಾಯಕಾ.
ಗಾಂಧಿ ಗಾಂಧಿಯೆನುತ್ತಲಡಿಗಡಿಗೆ ಕೂಗುತಿಹೆ
ಗಾಂಧಿವೋಲನುದಿನದಿ ಬಾಳುತಿಹೆಯಾ?
ದಾಂಧಲೆಯ ಮಾಡಿ ನೀಂ ಪದವಿಗೇರುವನೆಂದು
ಸಂದೇಹವೋ ನಮಗೆ-ಜನನಾಯಕಾ.
ಗಾಳಿತಿತ್ತಿಯೊ ನೀನು ಜನನಾಯಕಾ-ಹಳಸು
ಕೂಳು ಬುತ್ತಿಯೊ ನೀನು ಜನನಾಯಕಾ.
ದಾಳದಾಟವೊ ನೀನು ಜನನಾಯಕಾ-ನಮ್ಮ
ಫಾಲಲಿಪಿಯೋ ನೀನು-ಜನನಾಯಕಾ.

ದಾರ್ಶನಿಕ ಕವಿ ಡಿ ವಿ ಜಿ ಅವರು ಈ ಪದ್ಯದ ಕೊನೆಯಲ್ಲಿ, ’ಇಂಥ ಜನನಾಯಕನನ್ನು ಹೊಂದಿರುವುದು ನಮ್ಮ ಹಣೆಬರಹ’ ಎಂಬ ತೀರ್ಮಾನಕ್ಕೆ ಬಂದಿರುವುದನ್ನು ನೋಡಿದರೆ ಅಂದಿನ ರಾಜಕಾರಣವೂ ಎಷ್ಟು ಹೊಲೆಗಟ್ಟಿತ್ತೆಂಬುದನ್ನು ನಾವು ಊಹಿಸಬಹುದು. ಡಿ ವಿ ಜಿ ಅವರ ಬೇಗುದಿಯೂ ಇಲ್ಲಿ ನಮ್ಮ ಕಣ್ಣಿಗೆ ಕಟ್ಟುತ್ತದೆ.

ಇನ್ನು, ಮಹಾಚುನಾವಣೆಯೆಂಬ ಈ ’ಜನವಂಚನೆ’ಯ ಬಗ್ಗೆ ಕವಿಯ ಕಲ್ಪನೆಯು ಎಂಥ ಉತ್ತುಂಗವನ್ನು ತಲುಪಿದೆಯೆಂದರೆ, ಪುಢಾರಿಗಳ ಬಾಯಲ್ಲಿ ಸಿಕ್ಕಿಬಿದ್ದ ಸರಸ್ವತಿಯು ಬಿಡುಗಡೆಗಾಗಿ ಬ್ರಹ್ಮನ ಮೊರೆಹೊಗುತ್ತಾಳೆ! ’ಸರಸ್ವತಿಯ ಪ್ರಾರ್ಥನೆ’ ಪದ್ಯದಲ್ಲಿ ಆ ದೇವಿಯು ಬ್ರಹ್ಮನನ್ನು ಈ ರೀತಿ ಪ್ರಾರ್ಥಿಸುತ್ತಾಳೆ:

ಬಿಡಿಸೆನ್ನ ರಾಜ್ಯಕರ ಹಿಡಿತದಿಂ ವಿಧಿಯೇ
ತೊದಲು ತುಟಿಗೆನ್ನ ಬಲಿಕೊಡಬೇಡ ಪತಿಯೇ.
ದೇಶದುದ್ಧಾರಕ್ಕೆ ಭಾಷಣವೆ ಪಥವಂತೆ,
ಘೋಷಣೆಯ ಲೋಕ ಸಂತೋಷ ನಿಧಿಯಂತೆ.
ಆಶೆಯಾಗಿಸೆ ಜನಕೆ ವೇಷ ತೊಡಿಸುವರೆನಗೆ
ವೇಶಿತನವನದೆಂತು ಸೈಸಲಹುದಜನೇ.
ಮಾತು ನೂಲನು ಜೇಡ ಬಲೆಯಾಗಿ ನೆಯ್ದು
ವೋಟು ನೊಣಗಳ ಪಿಡಿವ ಹೂಟವನು ಹೂಡಿ
ಊಟಕ್ಕೆ ಬಾಯ್ದೆರೆವ ಮಾಟಗಾರರಿಗೆ ನಾಂ
ಚೇಟಿಯಾಗುವೆನೆ? ಈ ಕೋಟಲೆಯ ಹರಿಸೈ.

ಕವಿಯ ಕಲ್ಪನೆಯಿಲ್ಲಿ ಅನ್ಯಾದೃಶವಲ್ಲವೆ?

ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಅಂದು ಆಡಿರುವ ನುಡಿಗಳು ಇಂದಿಗೂ ಪ್ರಸ್ತುತ.

ಡಿ ವಿ ಜಿ ಅವರ ’ಮಂಕುತಿಮ್ಮನ ಕಗ್ಗ’ ಅದೊಂದು ಲೋಕಸತ್ಯ; ಸಾರ್ವಕಾಲಿಕ ಸತ್ಯ. ಆದರೆ, ಮಹಾಚುನಾವಣೆಯ ಬಗ್ಗೆ ಡಿ ವಿ ಜಿ ಅವರು ಆಡಿರುವ ನುಡಿಗಳು ಸಾರ್ವಕಾಲಿಕ ಸತ್ಯ ಆಗದಿರಲಿ ಎಂಬುದು ನಮ್ಮ ನಿಮ್ಮೆಲ್ಲರ ಅಪೇಕ್ಷೆ. ಡಿ ವಿ ಜಿ ಅವರ ಅಪೇಕ್ಷೆಯೂ ಇದೇ ಆಗಿತ್ತಲ್ಲವೆ?

ಈ ಅಪೇಕ್ಷೆಯನ್ನು ನಿಜವಾಗಿಸುವ ಅವಕಾಶ, ಅರ್ಥಾತ್, ದುಷ್ಟ-ಭ್ರಷ್ಟ ಜನನಾಯಕರಿಗೆ ’ಗತಿ ಕಾಣಿಸುವ’ ಅವಕಾಶ ದೇಶಾದ್ಯಂತ ನಮಗೀಗ ಒದಗಿಬಂದಿದ್ದು, ಮತಪತ್ರಗಳ ಮೂಲಕ ನಾವು ಆ ಕೆಲಸವನ್ನು ಮಾಡಿದ್ದೇವೆಯೇ?
ಇದೇ ೧೬ರಂದು ಗೊತ್ತಾಗುತ್ತದೆ.

ಶನಿವಾರ, ಏಪ್ರಿಲ್ 4, 2009

ರಾಜಕಾರಣಿಗಳೆಂಬ ಜನಶೇವಕರ ಕಥೆ

ಭಾರತದ ರಾಜಕಾರಣಿಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠರು. ರೂಢಿಯೊಳಗುತ್ತಮರು.
’ದಾಸನಂತಾಗುವೆನು ಧರೆಯೊಳಗೆ ನಾನು’, ಎಂಬ ದಾಸವಾಣಿಯಂತೆ ನಡೆಯುವವರು ಇವರು.
ಚುನಾವಣೆ ಎದುರಿರುವಾಗ ಇವರು ನಮ್ಮ ಮನೆಬಾಗಿಲಿಗೆ ಬಂದು ನಮ್ಮ ದಾಸಾನುದಾಸರಂತೆ ಕೈಮುಗಿದು, ಹಲ್ಲು ಕಿರಿದು, ಎಲ್ಲ ಸುಖ-ಕಷ್ಟ ವಿಚಾರಿಸಿ, ’ಇಲ್ಲಿರುವುದು ಸುಮ್ಮನೆ, ಅಲ್ಲಿ ಡೆಲ್ಲಿಯಲ್ಲಿರುವುದು ಪಾರ್ಲಿಮೆಂಟ್ ಎಂಬ ನಮ್ಮನೆ’, ಎಂದು ನುಡಿದು, ಪೆಪ್ಪರಮಿಂಟ್ ತಿಂದವರಂತೆ ಜೊಲ್ಲು ಸುರಿಸುತ್ತ ಮುಂದಿನ ಮನೆಬಾಗಿಲಿಗೆ ಬಿಜಯಂಗೈಯುವವರು.
’ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ವೋಟರ್ ಪ್ರಭುವೆ’, ಎನ್ನುವ ಇವರ ಆ ವಿನಯ, ಎನ್ನ ಸ್ವಾಮೀ, ರೊಂಬ ಅದ್ಭುತಂ!
ಮತದಾರನ ಮನೆಯೇನಾದರೂ ಒಳಗಿನಿಂದ ಬೋಲ್ಟಿಸಲ್ಪಟ್ಟಿದ್ದರೆ ಆಗ ಈ ಜನಸೇವಕರು, ’ಪೂಜಿಸಲೆಂದೇ ಹೂನಗೆ ತಂದೆ, ದರುಶನ ಕೋರಿ ನಾ ನಿಂದೆ, ತೆರೆಯೋ ಬಾಗಿಲನು’, ಎಂದು ಗಾರ್ದಭರಾಗದಲ್ಲಿ ಹಾಡಿ ಬಾಗಿಲು ತೆರೆಸಿ, ಪಾಂಪ್ಲೆಟ್ ನೀಡಿ, "ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಾವಿವತ್ತು ನಿಮ್ಮ ಕಾಲು ಹಿಡೀಲಿಕ್ಕೆ ಬಂದಿದ್ದೀವಿ, ನಮಗೇ ವೋಟ್ ಹಾಕಿ", ಎಂದು ಮುವ್ವತ್ತೆರಡೂ ಹಲ್ಲುಗಳನ್ನು (ಸದಾನಂದಗೌಡರಂತೆ) ಪ್ರದರ್ಶಿಸುತ್ತಾರೆ. ಇವರ ಈ ವಿನಯ ಅಂಥಿಂಥದೇ? ಚಾಲಾ ಗೊಪ್ಪದಿ!
’ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ’, ಎಂದು ಈ ದೈವಭಕ್ತಶಿಖಾಮಣಿಗಳು ಚುನಾವಣೆಯ ಸಂದರ್ಭದಲ್ಲಿ ಕಂಡಕಂಡ ದೇವರುದಿಂಡಿರಿಗೆಲ್ಲ ಮೊರೆಹೊಗುವ ಪರಿಯನ್ನೆಂತು ಬಣ್ಣಿಸಲಿ!
’ಕಂಡುಕಂಡು ನೀ ಎನ್ನ ಕೈಬಿಡುವರೇ ಪ್ರಭುವೆ, ಉಂಡು ಮಲಗದೆ ಅಂದು ಮತ ನೀಡು ಒಡೆಯಾ’, ಎಂದು ಮತದಾರನನ್ನು ಇವರು ಬೇಡಿಕೊಳ್ಳುವ ಪರಿಯೂ ಅನನ್ಯ!
ನಮ್ಮೀ ರಾಜಕಾರಣಿಗಳು ಅತ್ಯಂತ ಪ್ರಾಮಾಣಿಕರು. ಸತ್ಯಸಂಧರು. ಸಿದ್ಧಾಂತಬದ್ಧರು. ನಿಷ್ಪೃಹರು. ಅತಿ ವಿಧೇಯರು. ಮತ್ತು ಜಾತ್ಯತೀತರು.
ಇವರ ಚುನಾವಣಾ ಭಾಷಣಗಳೇ ನನ್ನ ಈ ಮಾತಿಗೆ ಸಾಕ್ಷಿ.
ವಿರೋಧಿಗಳ ಟೀಕೆಯೇ ತುಂಬಿರುವ ತಮ್ಮ ಭಾಷಣದಲ್ಲಿ ಇವರು, ಒಂದುವೇಳೆ ತಾವು ಆರಿಸಿಬಂದರೆ ತಮ್ಮ ಕ್ಷೇತ್ರಕ್ಕೆ ಏನೇನು ಕೆಲಸಕಾರ್ಯಗಳನ್ನು ಮಾಡಲಿದ್ದೇವೆಂಬುದನ್ನು ಎಂದಿಗೂ ತಿಳಿಸುವುದಿಲ್ಲ. ಏಕೆಂದರೆ, ಆರಿಸಿಬಂದಮೇಲೆ ಇವರು ಕ್ಷೇತ್ರಕ್ಕಾಗಿ ಯಾವ ಕೆಲಸವನ್ನೂ ಮಾಡುವವರಲ್ಲ. ಅಂದಮೇಲೆ ಇವರದು ಅತ್ಯಂತ ಪ್ರಾಮಾಣಿಕ ಭಾಷಣವಲ್ಲವೆ?
ಪ್ರತಿಯೊಂದು ಪಕ್ಷದವರೂ ತಮ್ಮ ವಿರೋಧಿಗಳ ಭ್ರಷ್ಟಾಚಾರವನ್ನೂ ಅನಾಚಾರವನ್ನೂ ಚುನಾವಣಾ ಭಾಷಣದಲ್ಲಿ ಬಣ್ಣಿಸುತ್ತಾರಷ್ಟೆ. ನಾವು ಎಲ್ಲರ ಭಾಷಣಗಳನ್ನೂ ಹಂಡ್ರೆಡ್ ಪರ್ಸೆಂಟ್ ನಂಬುತ್ತೇವೆ. ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆಂಬುದು ಇವರ ಹಾವ-ಭಾವ, ಉದ್ರೇಕ-ಉನ್ಮಾದ, ಕೋಪ-ತಾಪ ಮತ್ತು ಇವರು (ಭಾಷಣಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ) ಪ್ರದರ್ಶಿಸುವ ಕಾಗದ-ಪತ್ರ-ಪತ್ರಿಕೆಗಳು ಇವುಗಳಿಂದ ಗೊತ್ತಾಗುತ್ತದೆ.
ನಮ್ಮೀ ರಾಜಕಾರಣಿಗಳು ಸಿದ್ಧಾಂತಬದ್ಧರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸುವುದು, ಯೇನಕೇನ ಪ್ರಕಾರೇಣ ಗೆಲ್ಲುವುದು ಮತ್ತು ಗೆದ್ದಮೇಲೆ ಮಂತ್ರಿಗಿರಿ/ನಿಗಮ/ಮಂಡಳಿ ಯಾವುದಾದರೊಂದು ಕುರ್ಚಿಯಲ್ಲಿ ರಾರಾಜಿಸುವುದು ಈ ತ್ರಿವಿಧ (ಸ್ವಯಂ)ದಾಸೋಹವೇ ತಮ್ಮ ರಾಜಕೀಯ ಜೀವನದ ಪರಮಗುರಿಯೆಂಬುದು ಇವರ ಸಿದ್ಧಾಂತ. ಈ ಸಿದ್ಧಾಂತಪಾಲನೆಗಾಗಿಯೇ ಇವರು ದಿನಕ್ಕೆರಡುಬಾರಿ ಪಕ್ಷಾಂತರ ಮಾಡುವುದು. ಸಿದ್ಧಾಂತಪಾಲನೆಗಾಗಿ ಎಂಥ ಕಡುಕಷ್ಟ, ಪಾಪ!
ಇನ್ನು, ಇವರ ನಿಷ್ಪೃಹ ಮನೋಭಾವನ್ನು ನಾನೆಂತು ಬಣ್ಣಿಸಲಿ! ಅದೆಷ್ಟು ನಿಷ್ಪೃಹರಾಗಿ, ಅರ್ಥಾತ್ ನಿಃಸ್ವಾರ್ಥದಿಂದ ಇವರು ಜನಸೇವೆ ಮಾಡುತ್ತಾರೆಂದರೆ, ಯಾವ ವಿಶೇಷ ಆಸ್ತಿಪಾಸ್ತಿಗಳನ್ನೂ ಇವರು ಗಳಿಸಿರುವುದಿಲ್ಲ. ಇವರ ಪೈಕಿ ಎಷ್ಟೋ ಮಂದಿಗೆ ಮನೆಯೂ ಇರುವುದಿಲ್ಲ, ವಾಹನವೂ ಇರುವುದಿಲ್ಲ! ಏನೋ, ಇವರ ಹೆಂಡತಿ ಟೈಲರಿಂಗ್ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ. ಗಂಡಂದಿರನ್ನು ಈ ಹೆಂಡತಿಯರೇ ಸಾಕುತ್ತಾರೆ.
ಇನ್ನು, ಈ ಜನಸೇವಕರ ವಿಧೇಯತೆಯೆಂದರೆ ಅಂಥಿಂಥದೇ? ಹೈಕಮಾಂಡು ತನ್ನ ಕಾಲಲ್ಲಿ ತೋರಿಸಿದ್ದನ್ನು ಇವರು ’ಕೈ’ಯಲ್ಲಿ ಎತ್ತಿಕೊಂಡು ತಲೆಯಮೇಲೆ ಇಟ್ಟುಕೊಳ್ಳುತ್ತಾರೆ! ಇಂಥ ವಿಧೇಯತೆಯು ವಿಶ್ವದ ಇನ್ನಾವ ರಾಷ್ಟ್ರದ ರಾಜಕಾರಣಿಗಳಲ್ಲೂ ಇಲ್ಲ ಬಿಡಿ.
ವಯಸ್ಸು ೭೬ರ ದೇವೇಗೌಡರಾಗಿರಲಿ, ೮೨ರ ಅಡ್ವಾಣಿಯಾಗಿರಲಿ, ೮೩ರ ಬಾಳ್ ಠಾಕ್ರೆ ಆಗಿರಲಿ, ೮೫ರ ಕರುಣಾನಿಧಿ ಆಗಿರಲಿ, ೯೫ರ ಜ್ಯೋತಿ ಬಸು ಆಗಿರಲಿ, ಸೋನಿಯಾ, ರಾಹುಲ್,....ಕೊನೆಗೆ ಎಂಟು ವರ್ಷದ ರೈಹನ್ ವಡ್ರಾ ಅಥವಾ ಆರು ವರ್ಷದ ಮಿರಯಾ ವಡ್ರಾನೇ ಆಗಿರಲಿ, ಹೈಕಮಾಂಡ್ ಎಂದರೆ ಹೈಯೇ. ಪಕ್ಷದ ಎಲ್ಲರೂ ಆ ಹೈಕಮಾಂಡ್‌ನಡಿ ಲೋ! ವೆರಿ ಲೋ!! ವೆರಿ ವೆರಿ ಲೋ!!! ಎಂಥ ವಿಧೇಯತೆ!
ನಮ್ಮೀ ರಾಜಕಾರಣಿಗಳ ಜಾತ್ಯತೀತ ಮನೋಭಾವವಂತೂ ಇಡೀ ವಿಶ್ವಕ್ಕೇ ಮಾದರಿ! ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಎಂಬ ಭೇದಭಾವವಿಲ್ಲದೆ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಮತೀಯರ ದೇಗುಲ-ಪ್ರಾರ್ಥನಾಸ್ಥಳಗಳಿಗೂ (ಆಯಾ ಉಡುಪುಗಳಲ್ಲಿ) ಭೇಟಿಯಿತ್ತು, ಕೈಮುಗಿದು-ಅಡ್ಡಬಿದ್ದು ಕೃತಾರ್ಥರಾಗುವ ಇವರ ಮತಾತೀತ ಭಕ್ತಿಭಾವವಾಗಲೀ, ಎಲ್ಲ ಜಾತಿ-ಮತಗಳವರ ಮನೆಬಾಗಿಲಿಗೂ ಹೋಗಿ ಹಲ್ಕಿರಿದು ಮತ ಅಂಗಲಾಚುವ ಇವರ ಜಾತ್ಯತೀತ ಮನೋಭಾವವಾಗಲೀ ವರ್ಣನಾತೀತ!
’ಹನುಮನ ಮತವೇ ಹರಿಮತವೋ. ಹರಿಯ ಮತವೆ ಹನುಮನ ಮತವೊ’, ಎಂಬ ದಾಸವಾಣಿಯೊಲ್ ಇವರು, ’ಪ್ರಜೆಗಳ ಮತವೇ ನಮ್ಮ್ ಹಿತವೋ. ನಮ್ಮ ಮತದಾಟ ಪ್ಲಾನ್‌ಯುತವೊ’, ಎಂದು ಮಸಾಲ್ದೋಸವಾಣಿಯಂ ಹರಿಬಿಡುವರು.
ಚುನಾವಣೆಯಾದಮೇಲೆ, ’ನೀನ್ಯಾಕೋ ನಿನ್ನ ಹಂಗ್ಯಾಕೋ’, ಅನ್ನುವ (ಪುರಂದರದಾಸಸಮಾನ) ಧುರಂಧರರಿವರು!
ಇವರಲ್ಲಿ ಕೆಲವರು ’ಧರ್ಮವೆ ಜಯವೆಂಬ ದಿವ್ಯಮಂತ್ರ’ವನ್ನು ಜಪಿಸಿದರೆ, ಉಳಿದವರು ’ಜಯವೆ ಧರ್ಮವೆಂಬ ದಿವ್ಯಮಂತ್ರ’ವನ್ನು ಜಪಿಸುವವರು.
’ಮಣ್ಣಿಂದ ಕಾಯ ಮಣ್ಣಿಂದ’, ಎನ್ನುತ್ತ, ಮಣ್ಣನ್ನು ಗಳಿಸಲೆಂದೇ ಎಲೆಕ್ಷನ್ನಿಗೆ ನಿಲ್ಲುವ ’ಮಣ್ಣಿನ ಮಕ್ಕಳು’ ಇವರು.
’ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಲ್ಲ’, ಎಂಬ ದಾಸವಾಣಿಯ ಮರ್ಮವನ್ನರಿತೇ ಇವರು ಆದಷ್ಟು ಬೇಗನೆ ’ಅಷ್ಟೈಶ್ವರ್ಯಭಾಗ್ಯ’ಶಾಲಿಗಳಾಗಿ ಆ ಭಾಗ್ಯವನ್ನು ಸ್ಥಿರವಾಗಿ ಸ್ವಿಸ್ ಬ್ಯಾಂಕಿನಲ್ಲಿಡಲು ಹೊರಟವರು.
’ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ’, ಎಂಬಂತಾಗಬಾರದೆಂದು ಇವರು ನರ-ಹರಿ ಕೊಡುವುದನ್ನೆಲ್ಲ ಉಣ್ಣುತ್ತ ಕೂರುವವರು.
’ಊಟಕ್ಕೆ ಬಂದೆವು ನಾವು, ನಿಮ್ಮ ಆಟಪಾಠವ ಬಿಟ್ಟು ನಮಗೆ ನೀಡ್ರಯ್ಯಾ’, ಎಂದು ಕೇಳಿ ನೀಡಿಸಿಕೊಂಡು ಉಣ್ಣುವವರು.
ಇಂಥ ಪ್ರಾಮಾಣಿಕ, ಸತ್ಯಸಂಧ, ಸಿದ್ಧಾಂತಬದ್ಧ, ನಿಷ್ಪೃಹ, ದೈವಭಕ್ತ, ಅತಿ ವಿಧೇಯ ಮತ್ತು ಜಾತ್ಯತೀತ ರಾಜಕಾರಣಿಗಳನ್ನು ಹೊಂದಿರುವ ಭಾರತೀಯರಾದ ನಾವೇ ಧನ್ಯರು!
ಇಂಥ ಶ್ರೇಷ್ಠರೂ ರೂಢಿಯೊಳಗುತ್ತಮರೂ ಆದ ರಾಜಕಾರಣಿಗಳ ಬಗ್ಗೆ, ಇವರನ್ನು ಆರಿಸಿ ಕಳಿಸುವ ಮತದಾರ ಬಾಂಧವರ ಬಗ್ಗೆ ಮತ್ತು ಇವರ ಅದ್ಭುತ ಆಳ್ವಿಕೆಗೆ ಒಳಪಟ್ಟಿರುವ ಈ ನಾಡಿನ ಬಗ್ಗೆ ಬರೆಯಲು ಇನ್ನು ನನ್ನಲ್ಲಿ ಪದಗಳೇ ಇಲ್ಲ!
ಲೇಖನಸನ್ಯಾಸ ಸ್ವೀಕರಿಸಿ ಕಾಡಿಗೆ ಹೋಗಿ ಕಂದಮೂಲ ತಿಂದುಕೊಂಡಿರುವುದೇ ನನಗಿನ್ನು ಸೂಕ್ತವೆನ್ನಿಸುತ್ತದೆ.
ಅಂತೆಯೇ ಮಾಡುತ್ತೇನೆ.

ಬುಧವಾರ, ಮಾರ್ಚ್ 25, 2009

’ಕೈ’-’ಲಾಗ’-ದವರು

ಇವತ್ತಿನ ಪತ್ರಿಕೆಗಳನ್ನು ನೋಡಿದಿರಾ?
’ಕೈ’ ಲಾಗದ ಇಬ್ಬರು ವೃದ್ಧರು ಪರಸ್ಪರ ಅದೇನನ್ನೋ ಹೇಳಲು-ಕೇಳಲು ಒದ್ದಾಡುತ್ತಿರುವ ಫೋಟೋ ಗಮನಿಸಿದಿರಾ?

ಗಾಲಿ ಕುರ್ಚಿ ಬಿಟ್ಟು ಎದ್ದೇಳಲಾರದ ಅರ್ಜುನಸಿಂಗರು, ’ಕಿವಿ ಸ್ವಲ್ಪ ದೂರ’ (pun intended) ಇರುವ ಪ್ರಣವ ಮುಖರ್ಜಿಗೆ ಏನನ್ನೋ ಹೇಳಲು ತಮ್ಮ ಮುಖ ಮುಂದೆಚಾಚಿ ಒದ್ದಾಡುತ್ತಿರುವರು; ಅದನ್ನು ಕೇಳಿಸಿಕೊಳ್ಳಲು ಪ್ರಣವರು ತಮ್ಮ ಕಿವಿಗೆ ಕೈ ಅಡ್ಡ ಇಟ್ಟುಕೊಂಡು ಒದ್ದಾಡುತ್ತಿರುವರು!
ಹಿಂದೆ ಕುಳಿತ ನಮ್ಮ ಬಿ.ಕೆ.ಹರಿಪ್ರಸಾದರು ಇದನ್ನು ನೋಡಿ ಮುಖ ಎತ್ತಿ ನಗುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೊಂದು ಫೋಟೋ ಗಮನಿಸಿದಿರಾ?

ವಯಸ್ಸಾಗಿದ್ದರೂ ತಾನು ನಡೆದಾಡಬಲ್ಲೆ, ತನಗೆ ಚುನಾವಣಾ ಟಿಕೆಟ್ ಬೇಕು, ಎಂದು ಹೇಳಿ, ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿಯ ಮನೆಯವರೆಗೆ ಪಾದಯಾತ್ರೆಗೈದು ತೋರಿಸಲು ಬಿಹಾರಕ್ಕೆ ಬಂದಿಳಿದ ಜಾರ್ಜ್‌ ಫರ್ನಾಂಡಿಸರು ವಿಮಾನ ನಿಲ್ದಾಣದಲ್ಲಿ ದಿಗ್ವಿಜಯಸಿಂಗರ ನೆರವಿನಿಂದ ನಡೆಯುತ್ತಿರುವರು! ನಡೆದಾಡಲೂ ಕಷ್ಟಪಡುವ ಇವರು ತಾನು ಸುದೃಢವಾಗಿರುವೆನೆಂದು ತೋರಿಸಿಕೊಳ್ಳಲು ’ಲಾಗ’ಹಾಕುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೂ ಒಂದು ಫೋಟೋ ನೋಡಿದಿರಾ?

83ರ ಹರಯದ ’ಎವರ್ ಗ್ರೀನ್ ಹೀರೊ’ ದೇವಾನಂದ್ ’ಚಾರ್ಜ್‌‌ಶೀಟ್’ ಸಲ್ಲಿಸುತ್ತಿರುವ ಫೋಟೋ! ಅರ್ಥಾತ್ ತನ್ನ ಮುಂಬರುವ ಚಿತ್ರ ’ಚಾರ್ಜ್‌‌ಶೀಟ್’ ಬಗ್ಗೆ ಮಾತನಾಡುತ್ತಿರುವ ಫೋಟೋ.

ಕಾರುಬಾರು ನೋಡಿದರೆ ಪ್ರಣವ್, ದೇವಾನಂದ್ ಓಕೆ; ಅರ್ಜುನ್, ಜಾರ್ಜ್‌ (ಇನ್ನೂ) ಯಾಕೆ?
ವಾಜಪೇಯಿಯಹಾಗೆ ಡೀಸೆಂಟಾಗಿ ಮನೇರಿಲೋಕಾಗೋಲ್ವೆ?
ಈ ಅ(ರ್ಜುನ್)ಜಾ(ರ್ಜ್‌)ರಿಷ್ಟರ ಸಾಲಿಗೆ ಮಹಾ-ದ್ರಾವಿಡ ವೃದ್ಧ (ಕರುಣಾ)ನಿಧಿಯನ್ನೂ ಮತ್ತು ಮಹಾ-ರಾಷ್ಟ್ರೀಯ(ವಾದಿ) ಬಾಳ್ ಠಾಕ್ರೆಯನ್ನೂ ಸೇರಿಸಬಹುದಷ್ಟೆ.
(ನಡೆಯೋದು ನೋಡಿದರೆ, ’ರಾಮ)ರಾಮಾ!’ಈಶ್ವರ ಠಾಕೂರ್ ಏನು ಕಮ್ಮಿಯೇ?
ರಾಮೇಶ್ವರ ಠಾ’ಕೂರ’ರಿಗೆ ಕೂರಲೂ ಕಷ್ಟ, ಏಳಲೂ ಕಷ್ಟ!
ನಮ್ಮ ದೇವೇಗೌಡರೂ ರೇಸ್‌ನಲ್ಲಿದ್ದಾರಾದರೂ ಸಂಪೂರ್ಣ ಅರ್ಹತೆ ಇನ್ನೂ ಪಡೆದಿಲ್ಲ; ಪಡೆಯುವುದೂ ಬೇಡವೆಂಬುದು ನಮ್ಮ ಹಾರೈಕೆ. (ಏಕೆಂದರೆ, ಇದು ಓಡಲಾರದವರ-ಓಡಾಡಲಾರದವರ ರೇಸ್ ತಾನೆ.)
ರೇಸಿಗರ ಪಟ್ಟಿ ಇನ್ನೂ ಉದ್ದವಿದೆ.

ಹೇಸಿಗೆ ಹುಟ್ಟುವಷ್ಟು ಒದ್ದಾಟ ಮಾಡಿಕೊಂಡು ಅಧಿಕಾರದ ರೇಸಿಗೆ ಇಳಿಯುವ ಈ ’ಕೈ’-’ಲಾಗ’ದ ವಯೋವೃದ್ಧರನ್ನು ಕಂಡು ಅಯ್ಯೋ ಅನ್ನಬೇಕೆನ್ನಿಸುತ್ತದೆ. ಆದರೆ ನಾನು ಅನ್ನುವುದಿಲ್ಲ. ಏಕೆಂದರೆ, ಅಧಿಕಾರದ ಗದ್ದುಗೆ ಏರಿ(!) ಇವರು ಸುದ್ದಿಯಲ್ಲಿದ್ದುಕೊಂಡು ಆರಾಮಾಗಿ ನಿದ್ದೆಹೋಗುತ್ತಾರೆ; ಇಂಥವರ ಆಳ್ವಿಕೆಯಿಂದ ಅನುಭವಿಸುವುದು ಪ್ರಜೆಗಳಾದ ನಾವು.

ನಮ್ಮ ಬಗ್ಗೆಯೂ ಯಾರೂ ಅಯ್ಯೋ ಅನ್ನಬೇಕಾದ್ದಿಲ್ಲ. ಏಕೆಂದರೆ, ಇಂಥವರನ್ನು ಆರಿಸಿ ಕಳಿಸುವುದೇ/ಇಂಥವರ ಅಧಿಕಾರ ಚಲಾವಣೆಗೆ ಅನುವು ಮಾಡಿಕೊಡುವುದೇ ನಾವು ತಾನೆ?
ಆದ್ದರಿಂದ, ಮಾಡಿದ್ದುಣ್ಣೋ ಮಹರಾಯ!

ಮಂಗಳವಾರ, ಮಾರ್ಚ್ 24, 2009

ಬಿಡುಗಡೆಗೆ ಮೊದಲೇ ಸಿನಿಮಾ ’ಹೌಸ್‌ಫುಲ್’!

ಆನೆ, ಇದ್ದರೂ ಬೆಲೆಬಾಳುತ್ತದೆ, ಸತ್ತರೂ ಬೆಲೆಬಾಳುತ್ತದೆ. ಗಜಸಮಾನ ವ್ಯಕ್ತಿ ಚಾರ್ಲಿ ಚಾಪ್ಲಿನ್ ವಿಷಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಅವನ ಭಾವಿ ಪ್ರತಿಮೆ ಎಂಥ ಅಮೂಲ್ಯವೆಂದು ಈಚೆಗಷ್ಟೇ ಸಾಬೀತಾಯಿತಷ್ಟೆ.

ಆ ಪ್ರತಿಮೆ ಎಲ್ಲೆಲ್ಲೋ ತಿರುಗಾಡಿ ಕೊನೆಗೀಗ ಬೆಂಗಳೂರು ಸಮೀಪದ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಬಂದುನಿಂತಿದೆ. ಅಲ್ಲೇ ಉಳಿಯುತ್ತದೋ ಅಲ್ಲಿಂದ ಮತ್ತೆ ಬೇರೆಡೆಗೆ ಎತ್ತಂಗಡಿಗೊಳಗಾಗುತ್ತದೋ ಗೊತ್ತಿಲ್ಲ. ಆದರೆ, ಈ ಭಾವಿ ಪ್ರತಿಮೆಯ ಸುತ್ತ ಜನರ ಪ್ರದಕ್ಷಿಣೆ-ಅಪ್ರದಕ್ಷಿಣೆಗಳು ಮಾತ್ರ ಭರ್ಜರಿಯಾಗಿ ನಡೆದವು. ಅಮೂಲ್ಯ ಪ್ರತಿಮೆಯ ಅಮೂಲ್ಯ ವಿಷಯವನ್ನು ಕೈಗೆತ್ತಿಕೊಂಡು ಅಮೂಲ್ಯ ವ್ಯಕ್ತಿಗಳು ಅಮೂಲ್ಯ ವಾದ-ವಿವಾದ ಇತ್ಯಾದಿ ನಡೆಸಿ ಸಮಾಜಕ್ಕೆ ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವು ಇಂತಿವೆ:
* ಉಪಮೆಯಿಲ್ಲದಂಥ ಈ ಪ್ರತಿಮಾ ವಿವಾದದಿಂದಾಗಿ ಜನರಲ್ಲಿ (ಧರ್ಮ)ಜಾಗೃತಿ ಉಂಟಾಯಿತು.
* ಹಿಂದು-ಕ್ರಿಶ್ಚಿಯನ್-ಜ್ಯೂ-ಮುಸ್ಲಿಂ ಮುಂತಾಗಿ ಅನುಪಮ ಧರ್ಮಜಿಜ್ಞಾಸೆ ನಡೆಯಿತು.
* ಸಾಹಿತಿ-ಕಲಾವಿದ-ರಂಗಕರ್ಮಿ-’ಬುದ್ಧಿಜೀವಿ’ಗಳನೇಕರಿಂದ ’ಸ್ವಾತಂತ್ರ್ಯ ಚಳವಳಿ’ ನಡೆಯಿತು.
* ಕಾಂಗ್ರೆಸ್-ಜೆಡಿಎಸ್-ಕಮ್ಯುನಿಸ್ಟ್ ಪಕ್ಷಗಳಿಂದ ಪ್ರಸಕ್ತ ಚುನಾವಣಾ ಸಂದರ್ಭದಲ್ಲಿ ಸದರಿ (ಭಾವಿ) ಪ್ರತಿಮೆಯ ನೆರಳಿನಲ್ಲಿ ’ಧರ್ಮ-ಕರ್ಮ-’ಮತ’-ವಿಚಾರ-ಸಮ್‌ಕಿ’ರಣ’ಕಹಳೆಗಳು’ ಮೊಳಗಿದವು.
* ನನ್ನೀ ಬರಹವೂ ಸೇರಿದಂತೆ ಪುಂಖಾನುಪುಂಖವಾಗಿ ಬರಹಗಳು ಧುಮ್ಮಿಕ್ಕಿದವು.
* ಆಂಗ್ಲ ದೃಶ್ಯಮಾಧ್ಯಮಗಳು ಕರ್ನಾಟಕದ ಈ ’ಜಗಘೋರ’ - ಕ್ಷಮಿಸಿ - ’ಜಗದೋದ್ಧಾರ’ಕಾರ್ಯವನ್ನು ಜಗಜ್ಜಾಹೀರು ಮಾಡಿ, ವೈಭವೀಕರಿಸಿ, ಜಗಿದುಗುಳಿ, ನಮಗೆ ಜಗ್ಗಿ ಪಬ್ಲಿಸಿಟಿ ನೀಡಿದವು.
* ’ಅಪ್ರತಿಮ ಪ್ರತಿಮಾಭಿಮಾನಿ’ ನಿರ್ಮಾಪಕ ಮಹಾಶಯನಂತೂ ತನ್ನ ಅನ್ಯೋದ್ದೇಶದ ರೊಟ್ಟಿಯು ಜಾರಿ ಪ್ರಚಾರದ ತುಪ್ಪದಲ್ಲಿ ಬಿದ್ದದ್ದನ್ನು ಕಂಡು ಒಳಗೊಳಗೇ ಹಿರಿಹಿರಿ ಹಿಗ್ಗಿದನು.

ಬಿಡುಗಡೆಗೆ ಮೊದಲೇ ಸಿನಿಮಾ ’ಹೌಸ್‌ಫುಲ್’!
ಬಿಡುಗಡೆಯಾದಮೇಲೆ?
ಖಾಲಿಖಾಲಿ!!