ಕೈ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೈ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಏಪ್ರಿಲ್ 4, 2009

ರಾಜಕಾರಣಿಗಳೆಂಬ ಜನಶೇವಕರ ಕಥೆ

ಭಾರತದ ರಾಜಕಾರಣಿಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠರು. ರೂಢಿಯೊಳಗುತ್ತಮರು.
’ದಾಸನಂತಾಗುವೆನು ಧರೆಯೊಳಗೆ ನಾನು’, ಎಂಬ ದಾಸವಾಣಿಯಂತೆ ನಡೆಯುವವರು ಇವರು.
ಚುನಾವಣೆ ಎದುರಿರುವಾಗ ಇವರು ನಮ್ಮ ಮನೆಬಾಗಿಲಿಗೆ ಬಂದು ನಮ್ಮ ದಾಸಾನುದಾಸರಂತೆ ಕೈಮುಗಿದು, ಹಲ್ಲು ಕಿರಿದು, ಎಲ್ಲ ಸುಖ-ಕಷ್ಟ ವಿಚಾರಿಸಿ, ’ಇಲ್ಲಿರುವುದು ಸುಮ್ಮನೆ, ಅಲ್ಲಿ ಡೆಲ್ಲಿಯಲ್ಲಿರುವುದು ಪಾರ್ಲಿಮೆಂಟ್ ಎಂಬ ನಮ್ಮನೆ’, ಎಂದು ನುಡಿದು, ಪೆಪ್ಪರಮಿಂಟ್ ತಿಂದವರಂತೆ ಜೊಲ್ಲು ಸುರಿಸುತ್ತ ಮುಂದಿನ ಮನೆಬಾಗಿಲಿಗೆ ಬಿಜಯಂಗೈಯುವವರು.
’ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ವೋಟರ್ ಪ್ರಭುವೆ’, ಎನ್ನುವ ಇವರ ಆ ವಿನಯ, ಎನ್ನ ಸ್ವಾಮೀ, ರೊಂಬ ಅದ್ಭುತಂ!
ಮತದಾರನ ಮನೆಯೇನಾದರೂ ಒಳಗಿನಿಂದ ಬೋಲ್ಟಿಸಲ್ಪಟ್ಟಿದ್ದರೆ ಆಗ ಈ ಜನಸೇವಕರು, ’ಪೂಜಿಸಲೆಂದೇ ಹೂನಗೆ ತಂದೆ, ದರುಶನ ಕೋರಿ ನಾ ನಿಂದೆ, ತೆರೆಯೋ ಬಾಗಿಲನು’, ಎಂದು ಗಾರ್ದಭರಾಗದಲ್ಲಿ ಹಾಡಿ ಬಾಗಿಲು ತೆರೆಸಿ, ಪಾಂಪ್ಲೆಟ್ ನೀಡಿ, "ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಾವಿವತ್ತು ನಿಮ್ಮ ಕಾಲು ಹಿಡೀಲಿಕ್ಕೆ ಬಂದಿದ್ದೀವಿ, ನಮಗೇ ವೋಟ್ ಹಾಕಿ", ಎಂದು ಮುವ್ವತ್ತೆರಡೂ ಹಲ್ಲುಗಳನ್ನು (ಸದಾನಂದಗೌಡರಂತೆ) ಪ್ರದರ್ಶಿಸುತ್ತಾರೆ. ಇವರ ಈ ವಿನಯ ಅಂಥಿಂಥದೇ? ಚಾಲಾ ಗೊಪ್ಪದಿ!
’ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ’, ಎಂದು ಈ ದೈವಭಕ್ತಶಿಖಾಮಣಿಗಳು ಚುನಾವಣೆಯ ಸಂದರ್ಭದಲ್ಲಿ ಕಂಡಕಂಡ ದೇವರುದಿಂಡಿರಿಗೆಲ್ಲ ಮೊರೆಹೊಗುವ ಪರಿಯನ್ನೆಂತು ಬಣ್ಣಿಸಲಿ!
’ಕಂಡುಕಂಡು ನೀ ಎನ್ನ ಕೈಬಿಡುವರೇ ಪ್ರಭುವೆ, ಉಂಡು ಮಲಗದೆ ಅಂದು ಮತ ನೀಡು ಒಡೆಯಾ’, ಎಂದು ಮತದಾರನನ್ನು ಇವರು ಬೇಡಿಕೊಳ್ಳುವ ಪರಿಯೂ ಅನನ್ಯ!
ನಮ್ಮೀ ರಾಜಕಾರಣಿಗಳು ಅತ್ಯಂತ ಪ್ರಾಮಾಣಿಕರು. ಸತ್ಯಸಂಧರು. ಸಿದ್ಧಾಂತಬದ್ಧರು. ನಿಷ್ಪೃಹರು. ಅತಿ ವಿಧೇಯರು. ಮತ್ತು ಜಾತ್ಯತೀತರು.
ಇವರ ಚುನಾವಣಾ ಭಾಷಣಗಳೇ ನನ್ನ ಈ ಮಾತಿಗೆ ಸಾಕ್ಷಿ.
ವಿರೋಧಿಗಳ ಟೀಕೆಯೇ ತುಂಬಿರುವ ತಮ್ಮ ಭಾಷಣದಲ್ಲಿ ಇವರು, ಒಂದುವೇಳೆ ತಾವು ಆರಿಸಿಬಂದರೆ ತಮ್ಮ ಕ್ಷೇತ್ರಕ್ಕೆ ಏನೇನು ಕೆಲಸಕಾರ್ಯಗಳನ್ನು ಮಾಡಲಿದ್ದೇವೆಂಬುದನ್ನು ಎಂದಿಗೂ ತಿಳಿಸುವುದಿಲ್ಲ. ಏಕೆಂದರೆ, ಆರಿಸಿಬಂದಮೇಲೆ ಇವರು ಕ್ಷೇತ್ರಕ್ಕಾಗಿ ಯಾವ ಕೆಲಸವನ್ನೂ ಮಾಡುವವರಲ್ಲ. ಅಂದಮೇಲೆ ಇವರದು ಅತ್ಯಂತ ಪ್ರಾಮಾಣಿಕ ಭಾಷಣವಲ್ಲವೆ?
ಪ್ರತಿಯೊಂದು ಪಕ್ಷದವರೂ ತಮ್ಮ ವಿರೋಧಿಗಳ ಭ್ರಷ್ಟಾಚಾರವನ್ನೂ ಅನಾಚಾರವನ್ನೂ ಚುನಾವಣಾ ಭಾಷಣದಲ್ಲಿ ಬಣ್ಣಿಸುತ್ತಾರಷ್ಟೆ. ನಾವು ಎಲ್ಲರ ಭಾಷಣಗಳನ್ನೂ ಹಂಡ್ರೆಡ್ ಪರ್ಸೆಂಟ್ ನಂಬುತ್ತೇವೆ. ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆಂಬುದು ಇವರ ಹಾವ-ಭಾವ, ಉದ್ರೇಕ-ಉನ್ಮಾದ, ಕೋಪ-ತಾಪ ಮತ್ತು ಇವರು (ಭಾಷಣಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ) ಪ್ರದರ್ಶಿಸುವ ಕಾಗದ-ಪತ್ರ-ಪತ್ರಿಕೆಗಳು ಇವುಗಳಿಂದ ಗೊತ್ತಾಗುತ್ತದೆ.
ನಮ್ಮೀ ರಾಜಕಾರಣಿಗಳು ಸಿದ್ಧಾಂತಬದ್ಧರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸುವುದು, ಯೇನಕೇನ ಪ್ರಕಾರೇಣ ಗೆಲ್ಲುವುದು ಮತ್ತು ಗೆದ್ದಮೇಲೆ ಮಂತ್ರಿಗಿರಿ/ನಿಗಮ/ಮಂಡಳಿ ಯಾವುದಾದರೊಂದು ಕುರ್ಚಿಯಲ್ಲಿ ರಾರಾಜಿಸುವುದು ಈ ತ್ರಿವಿಧ (ಸ್ವಯಂ)ದಾಸೋಹವೇ ತಮ್ಮ ರಾಜಕೀಯ ಜೀವನದ ಪರಮಗುರಿಯೆಂಬುದು ಇವರ ಸಿದ್ಧಾಂತ. ಈ ಸಿದ್ಧಾಂತಪಾಲನೆಗಾಗಿಯೇ ಇವರು ದಿನಕ್ಕೆರಡುಬಾರಿ ಪಕ್ಷಾಂತರ ಮಾಡುವುದು. ಸಿದ್ಧಾಂತಪಾಲನೆಗಾಗಿ ಎಂಥ ಕಡುಕಷ್ಟ, ಪಾಪ!
ಇನ್ನು, ಇವರ ನಿಷ್ಪೃಹ ಮನೋಭಾವನ್ನು ನಾನೆಂತು ಬಣ್ಣಿಸಲಿ! ಅದೆಷ್ಟು ನಿಷ್ಪೃಹರಾಗಿ, ಅರ್ಥಾತ್ ನಿಃಸ್ವಾರ್ಥದಿಂದ ಇವರು ಜನಸೇವೆ ಮಾಡುತ್ತಾರೆಂದರೆ, ಯಾವ ವಿಶೇಷ ಆಸ್ತಿಪಾಸ್ತಿಗಳನ್ನೂ ಇವರು ಗಳಿಸಿರುವುದಿಲ್ಲ. ಇವರ ಪೈಕಿ ಎಷ್ಟೋ ಮಂದಿಗೆ ಮನೆಯೂ ಇರುವುದಿಲ್ಲ, ವಾಹನವೂ ಇರುವುದಿಲ್ಲ! ಏನೋ, ಇವರ ಹೆಂಡತಿ ಟೈಲರಿಂಗ್ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ. ಗಂಡಂದಿರನ್ನು ಈ ಹೆಂಡತಿಯರೇ ಸಾಕುತ್ತಾರೆ.
ಇನ್ನು, ಈ ಜನಸೇವಕರ ವಿಧೇಯತೆಯೆಂದರೆ ಅಂಥಿಂಥದೇ? ಹೈಕಮಾಂಡು ತನ್ನ ಕಾಲಲ್ಲಿ ತೋರಿಸಿದ್ದನ್ನು ಇವರು ’ಕೈ’ಯಲ್ಲಿ ಎತ್ತಿಕೊಂಡು ತಲೆಯಮೇಲೆ ಇಟ್ಟುಕೊಳ್ಳುತ್ತಾರೆ! ಇಂಥ ವಿಧೇಯತೆಯು ವಿಶ್ವದ ಇನ್ನಾವ ರಾಷ್ಟ್ರದ ರಾಜಕಾರಣಿಗಳಲ್ಲೂ ಇಲ್ಲ ಬಿಡಿ.
ವಯಸ್ಸು ೭೬ರ ದೇವೇಗೌಡರಾಗಿರಲಿ, ೮೨ರ ಅಡ್ವಾಣಿಯಾಗಿರಲಿ, ೮೩ರ ಬಾಳ್ ಠಾಕ್ರೆ ಆಗಿರಲಿ, ೮೫ರ ಕರುಣಾನಿಧಿ ಆಗಿರಲಿ, ೯೫ರ ಜ್ಯೋತಿ ಬಸು ಆಗಿರಲಿ, ಸೋನಿಯಾ, ರಾಹುಲ್,....ಕೊನೆಗೆ ಎಂಟು ವರ್ಷದ ರೈಹನ್ ವಡ್ರಾ ಅಥವಾ ಆರು ವರ್ಷದ ಮಿರಯಾ ವಡ್ರಾನೇ ಆಗಿರಲಿ, ಹೈಕಮಾಂಡ್ ಎಂದರೆ ಹೈಯೇ. ಪಕ್ಷದ ಎಲ್ಲರೂ ಆ ಹೈಕಮಾಂಡ್‌ನಡಿ ಲೋ! ವೆರಿ ಲೋ!! ವೆರಿ ವೆರಿ ಲೋ!!! ಎಂಥ ವಿಧೇಯತೆ!
ನಮ್ಮೀ ರಾಜಕಾರಣಿಗಳ ಜಾತ್ಯತೀತ ಮನೋಭಾವವಂತೂ ಇಡೀ ವಿಶ್ವಕ್ಕೇ ಮಾದರಿ! ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಎಂಬ ಭೇದಭಾವವಿಲ್ಲದೆ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಮತೀಯರ ದೇಗುಲ-ಪ್ರಾರ್ಥನಾಸ್ಥಳಗಳಿಗೂ (ಆಯಾ ಉಡುಪುಗಳಲ್ಲಿ) ಭೇಟಿಯಿತ್ತು, ಕೈಮುಗಿದು-ಅಡ್ಡಬಿದ್ದು ಕೃತಾರ್ಥರಾಗುವ ಇವರ ಮತಾತೀತ ಭಕ್ತಿಭಾವವಾಗಲೀ, ಎಲ್ಲ ಜಾತಿ-ಮತಗಳವರ ಮನೆಬಾಗಿಲಿಗೂ ಹೋಗಿ ಹಲ್ಕಿರಿದು ಮತ ಅಂಗಲಾಚುವ ಇವರ ಜಾತ್ಯತೀತ ಮನೋಭಾವವಾಗಲೀ ವರ್ಣನಾತೀತ!
’ಹನುಮನ ಮತವೇ ಹರಿಮತವೋ. ಹರಿಯ ಮತವೆ ಹನುಮನ ಮತವೊ’, ಎಂಬ ದಾಸವಾಣಿಯೊಲ್ ಇವರು, ’ಪ್ರಜೆಗಳ ಮತವೇ ನಮ್ಮ್ ಹಿತವೋ. ನಮ್ಮ ಮತದಾಟ ಪ್ಲಾನ್‌ಯುತವೊ’, ಎಂದು ಮಸಾಲ್ದೋಸವಾಣಿಯಂ ಹರಿಬಿಡುವರು.
ಚುನಾವಣೆಯಾದಮೇಲೆ, ’ನೀನ್ಯಾಕೋ ನಿನ್ನ ಹಂಗ್ಯಾಕೋ’, ಅನ್ನುವ (ಪುರಂದರದಾಸಸಮಾನ) ಧುರಂಧರರಿವರು!
ಇವರಲ್ಲಿ ಕೆಲವರು ’ಧರ್ಮವೆ ಜಯವೆಂಬ ದಿವ್ಯಮಂತ್ರ’ವನ್ನು ಜಪಿಸಿದರೆ, ಉಳಿದವರು ’ಜಯವೆ ಧರ್ಮವೆಂಬ ದಿವ್ಯಮಂತ್ರ’ವನ್ನು ಜಪಿಸುವವರು.
’ಮಣ್ಣಿಂದ ಕಾಯ ಮಣ್ಣಿಂದ’, ಎನ್ನುತ್ತ, ಮಣ್ಣನ್ನು ಗಳಿಸಲೆಂದೇ ಎಲೆಕ್ಷನ್ನಿಗೆ ನಿಲ್ಲುವ ’ಮಣ್ಣಿನ ಮಕ್ಕಳು’ ಇವರು.
’ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಲ್ಲ’, ಎಂಬ ದಾಸವಾಣಿಯ ಮರ್ಮವನ್ನರಿತೇ ಇವರು ಆದಷ್ಟು ಬೇಗನೆ ’ಅಷ್ಟೈಶ್ವರ್ಯಭಾಗ್ಯ’ಶಾಲಿಗಳಾಗಿ ಆ ಭಾಗ್ಯವನ್ನು ಸ್ಥಿರವಾಗಿ ಸ್ವಿಸ್ ಬ್ಯಾಂಕಿನಲ್ಲಿಡಲು ಹೊರಟವರು.
’ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ’, ಎಂಬಂತಾಗಬಾರದೆಂದು ಇವರು ನರ-ಹರಿ ಕೊಡುವುದನ್ನೆಲ್ಲ ಉಣ್ಣುತ್ತ ಕೂರುವವರು.
’ಊಟಕ್ಕೆ ಬಂದೆವು ನಾವು, ನಿಮ್ಮ ಆಟಪಾಠವ ಬಿಟ್ಟು ನಮಗೆ ನೀಡ್ರಯ್ಯಾ’, ಎಂದು ಕೇಳಿ ನೀಡಿಸಿಕೊಂಡು ಉಣ್ಣುವವರು.
ಇಂಥ ಪ್ರಾಮಾಣಿಕ, ಸತ್ಯಸಂಧ, ಸಿದ್ಧಾಂತಬದ್ಧ, ನಿಷ್ಪೃಹ, ದೈವಭಕ್ತ, ಅತಿ ವಿಧೇಯ ಮತ್ತು ಜಾತ್ಯತೀತ ರಾಜಕಾರಣಿಗಳನ್ನು ಹೊಂದಿರುವ ಭಾರತೀಯರಾದ ನಾವೇ ಧನ್ಯರು!
ಇಂಥ ಶ್ರೇಷ್ಠರೂ ರೂಢಿಯೊಳಗುತ್ತಮರೂ ಆದ ರಾಜಕಾರಣಿಗಳ ಬಗ್ಗೆ, ಇವರನ್ನು ಆರಿಸಿ ಕಳಿಸುವ ಮತದಾರ ಬಾಂಧವರ ಬಗ್ಗೆ ಮತ್ತು ಇವರ ಅದ್ಭುತ ಆಳ್ವಿಕೆಗೆ ಒಳಪಟ್ಟಿರುವ ಈ ನಾಡಿನ ಬಗ್ಗೆ ಬರೆಯಲು ಇನ್ನು ನನ್ನಲ್ಲಿ ಪದಗಳೇ ಇಲ್ಲ!
ಲೇಖನಸನ್ಯಾಸ ಸ್ವೀಕರಿಸಿ ಕಾಡಿಗೆ ಹೋಗಿ ಕಂದಮೂಲ ತಿಂದುಕೊಂಡಿರುವುದೇ ನನಗಿನ್ನು ಸೂಕ್ತವೆನ್ನಿಸುತ್ತದೆ.
ಅಂತೆಯೇ ಮಾಡುತ್ತೇನೆ.

ಬುಧವಾರ, ಮಾರ್ಚ್ 25, 2009

’ಕೈ’-’ಲಾಗ’-ದವರು

ಇವತ್ತಿನ ಪತ್ರಿಕೆಗಳನ್ನು ನೋಡಿದಿರಾ?
’ಕೈ’ ಲಾಗದ ಇಬ್ಬರು ವೃದ್ಧರು ಪರಸ್ಪರ ಅದೇನನ್ನೋ ಹೇಳಲು-ಕೇಳಲು ಒದ್ದಾಡುತ್ತಿರುವ ಫೋಟೋ ಗಮನಿಸಿದಿರಾ?

ಗಾಲಿ ಕುರ್ಚಿ ಬಿಟ್ಟು ಎದ್ದೇಳಲಾರದ ಅರ್ಜುನಸಿಂಗರು, ’ಕಿವಿ ಸ್ವಲ್ಪ ದೂರ’ (pun intended) ಇರುವ ಪ್ರಣವ ಮುಖರ್ಜಿಗೆ ಏನನ್ನೋ ಹೇಳಲು ತಮ್ಮ ಮುಖ ಮುಂದೆಚಾಚಿ ಒದ್ದಾಡುತ್ತಿರುವರು; ಅದನ್ನು ಕೇಳಿಸಿಕೊಳ್ಳಲು ಪ್ರಣವರು ತಮ್ಮ ಕಿವಿಗೆ ಕೈ ಅಡ್ಡ ಇಟ್ಟುಕೊಂಡು ಒದ್ದಾಡುತ್ತಿರುವರು!
ಹಿಂದೆ ಕುಳಿತ ನಮ್ಮ ಬಿ.ಕೆ.ಹರಿಪ್ರಸಾದರು ಇದನ್ನು ನೋಡಿ ಮುಖ ಎತ್ತಿ ನಗುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೊಂದು ಫೋಟೋ ಗಮನಿಸಿದಿರಾ?

ವಯಸ್ಸಾಗಿದ್ದರೂ ತಾನು ನಡೆದಾಡಬಲ್ಲೆ, ತನಗೆ ಚುನಾವಣಾ ಟಿಕೆಟ್ ಬೇಕು, ಎಂದು ಹೇಳಿ, ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿಯ ಮನೆಯವರೆಗೆ ಪಾದಯಾತ್ರೆಗೈದು ತೋರಿಸಲು ಬಿಹಾರಕ್ಕೆ ಬಂದಿಳಿದ ಜಾರ್ಜ್‌ ಫರ್ನಾಂಡಿಸರು ವಿಮಾನ ನಿಲ್ದಾಣದಲ್ಲಿ ದಿಗ್ವಿಜಯಸಿಂಗರ ನೆರವಿನಿಂದ ನಡೆಯುತ್ತಿರುವರು! ನಡೆದಾಡಲೂ ಕಷ್ಟಪಡುವ ಇವರು ತಾನು ಸುದೃಢವಾಗಿರುವೆನೆಂದು ತೋರಿಸಿಕೊಳ್ಳಲು ’ಲಾಗ’ಹಾಕುತ್ತಿರುವರು!

ಇವತ್ತಿನ ಪತ್ರಿಕೆಗಳಲ್ಲೇ ಇನ್ನೂ ಒಂದು ಫೋಟೋ ನೋಡಿದಿರಾ?

83ರ ಹರಯದ ’ಎವರ್ ಗ್ರೀನ್ ಹೀರೊ’ ದೇವಾನಂದ್ ’ಚಾರ್ಜ್‌‌ಶೀಟ್’ ಸಲ್ಲಿಸುತ್ತಿರುವ ಫೋಟೋ! ಅರ್ಥಾತ್ ತನ್ನ ಮುಂಬರುವ ಚಿತ್ರ ’ಚಾರ್ಜ್‌‌ಶೀಟ್’ ಬಗ್ಗೆ ಮಾತನಾಡುತ್ತಿರುವ ಫೋಟೋ.

ಕಾರುಬಾರು ನೋಡಿದರೆ ಪ್ರಣವ್, ದೇವಾನಂದ್ ಓಕೆ; ಅರ್ಜುನ್, ಜಾರ್ಜ್‌ (ಇನ್ನೂ) ಯಾಕೆ?
ವಾಜಪೇಯಿಯಹಾಗೆ ಡೀಸೆಂಟಾಗಿ ಮನೇರಿಲೋಕಾಗೋಲ್ವೆ?
ಈ ಅ(ರ್ಜುನ್)ಜಾ(ರ್ಜ್‌)ರಿಷ್ಟರ ಸಾಲಿಗೆ ಮಹಾ-ದ್ರಾವಿಡ ವೃದ್ಧ (ಕರುಣಾ)ನಿಧಿಯನ್ನೂ ಮತ್ತು ಮಹಾ-ರಾಷ್ಟ್ರೀಯ(ವಾದಿ) ಬಾಳ್ ಠಾಕ್ರೆಯನ್ನೂ ಸೇರಿಸಬಹುದಷ್ಟೆ.
(ನಡೆಯೋದು ನೋಡಿದರೆ, ’ರಾಮ)ರಾಮಾ!’ಈಶ್ವರ ಠಾಕೂರ್ ಏನು ಕಮ್ಮಿಯೇ?
ರಾಮೇಶ್ವರ ಠಾ’ಕೂರ’ರಿಗೆ ಕೂರಲೂ ಕಷ್ಟ, ಏಳಲೂ ಕಷ್ಟ!
ನಮ್ಮ ದೇವೇಗೌಡರೂ ರೇಸ್‌ನಲ್ಲಿದ್ದಾರಾದರೂ ಸಂಪೂರ್ಣ ಅರ್ಹತೆ ಇನ್ನೂ ಪಡೆದಿಲ್ಲ; ಪಡೆಯುವುದೂ ಬೇಡವೆಂಬುದು ನಮ್ಮ ಹಾರೈಕೆ. (ಏಕೆಂದರೆ, ಇದು ಓಡಲಾರದವರ-ಓಡಾಡಲಾರದವರ ರೇಸ್ ತಾನೆ.)
ರೇಸಿಗರ ಪಟ್ಟಿ ಇನ್ನೂ ಉದ್ದವಿದೆ.

ಹೇಸಿಗೆ ಹುಟ್ಟುವಷ್ಟು ಒದ್ದಾಟ ಮಾಡಿಕೊಂಡು ಅಧಿಕಾರದ ರೇಸಿಗೆ ಇಳಿಯುವ ಈ ’ಕೈ’-’ಲಾಗ’ದ ವಯೋವೃದ್ಧರನ್ನು ಕಂಡು ಅಯ್ಯೋ ಅನ್ನಬೇಕೆನ್ನಿಸುತ್ತದೆ. ಆದರೆ ನಾನು ಅನ್ನುವುದಿಲ್ಲ. ಏಕೆಂದರೆ, ಅಧಿಕಾರದ ಗದ್ದುಗೆ ಏರಿ(!) ಇವರು ಸುದ್ದಿಯಲ್ಲಿದ್ದುಕೊಂಡು ಆರಾಮಾಗಿ ನಿದ್ದೆಹೋಗುತ್ತಾರೆ; ಇಂಥವರ ಆಳ್ವಿಕೆಯಿಂದ ಅನುಭವಿಸುವುದು ಪ್ರಜೆಗಳಾದ ನಾವು.

ನಮ್ಮ ಬಗ್ಗೆಯೂ ಯಾರೂ ಅಯ್ಯೋ ಅನ್ನಬೇಕಾದ್ದಿಲ್ಲ. ಏಕೆಂದರೆ, ಇಂಥವರನ್ನು ಆರಿಸಿ ಕಳಿಸುವುದೇ/ಇಂಥವರ ಅಧಿಕಾರ ಚಲಾವಣೆಗೆ ಅನುವು ಮಾಡಿಕೊಡುವುದೇ ನಾವು ತಾನೆ?
ಆದ್ದರಿಂದ, ಮಾಡಿದ್ದುಣ್ಣೋ ಮಹರಾಯ!

ಭಾನುವಾರ, ಮಾರ್ಚ್ 22, 2009

ಲಾಲು ಕೀ ಜೈ!

ಲಾಲು-ಸೋನಿಯಾ ಈಗ ಎಣ್ಣೆ-ಸೀಗೇಕಾಯ್!
’ಕೈ’ಚಳಕದ ಪಕ್ಷಕ್ಕೇ ಕೊಟ್ಟ ನೋಡಿ ಕೈ!
ಅಂತಿಂಥೋನಲ್ಲ ಈ ಮುದಿ guy;
ಮೇವು ತಿನ್ನೋಕೂ ಸೈ, ಸಗ.. ತಿನ್ನಿಸೋಕೂ ಸೈ!

ಶುಕ್ರವಾರ, ಮಾರ್ಚ್ 20, 2009

ವರುಣೋದಯ ಗೀ-ತೆಗಳು

-೧-
ವರುಣನ ಅವಕೃಪೆಗೆ ತುತ್ತಾದರೆ
ರೈತ ಪಾಪರ್.
ಪಕ್ಷದ ಅವಕೃಪೆಗೆ ತುತ್ತಾದರೆ
ವರುಣ ಪಾಪ-ರ್.

***

-೨-
ಕೈ ಕತ್ತರಿಸಬೇಕೆಂದು
ನಾನಂದಿದ್ದು
ಆ ಪಕ್ಷದ ಚಿಹ್ನೆ ’ಕೈ’ಯನ್ನು
ಅಂದನಂತೆ
ವರುಣ್ ಗಾಂಧಿ.

’ಸರಿ,
ಮತಯಂತ್ರದಲ್ಲಿ
ಆ ಚಿಹ್ನೆಯ ಮುಂದೆ
ಕತ್ತರಿ
ಮಾರ್ಕ್‌
ಒತ್ತಿರಿ’
ಅಂದನಂತೆ
ರಾಹುಲ್ ಗಾಂಧಿ.

ಯಾರು ಚತುರರು ನಿಮಗೆ
ಈ ಈರ್ವರೊಳಗೆ?

(ಈ ಅಂಬೋಣಗಳು ಗುಳಿಗೆಪ್ಪನವರಿಗೆ ಮಾತ್ರ ತಲುಪಿದ ಎಕ್ಸ್ಕ್ಲೂಸಿವ್ ರಿಪೋರ್ಟ್. ಆದ್ದರಿಂದ ಈ ವರದಿ ’ಗುಳಿಗೆ’ಯಲ್ಲಿ ಮಾತ್ರ.) (ಇದು ಗುಳಿಗೆಯಲ್ಲಿ ಮಾತ್ರೆ! ಅರ್ಥವಾಗಬೇಕಾದರೆ ಇಂದಿನ ’.....’ ಪತ್ರಿಕೆ ನೋಡಿ.)

***

-೩-
’ತಲೆ ತೆಗಿ, ಕೈ ತೆಗಿ’, ಅಂದರೇನಂತೆ,
’ಸಾವಿನ ವ್ಯಾಪಾರಿ’, ಅಂದರೇನಂತೆ;
ಮನಗಳನ್ನೂ ಮಾನವನ್ನೂ ಕೊಂದರೇನಂತೆ,
ಜನನಾಯಕರಾಗಿ ಇವರೇ
ಲೋಕಸಭೆಯಲ್ಲಿ ಸೇರುವರು ಸಂತೆ!