ಪಾದರಕ್ಷೆ ಪರವಾಗಿ ಮೊಕದ್ದಮೆ!
-------------------------
ರಾಜಕಾರಣಿಗಳತ್ತ ಎಸೆಯುವ ಮೂಲಕ ಪಾದರಕ್ಷೆಗಳಿಗೆ ಅವಮಾನ ಎಸಗಲಾಗುತ್ತಿದೆಯೆಂದು ಬೆಂಗಳೂರಿನ ವಕೀಲರೊಬ್ಬರು ಕೋರ್ಟಿನ ಮೊರೆಹೊಕ್ಕಿದ್ದಾರೆ! ಚುನಾವಣೆ ವೇಳೆ ದೇಶದ ನಾನಾ ಕಡೆಗಳಲ್ಲಿ ರಾಜಕಾರಣಿಗಳತ್ತ ಶೂ ಹಾಗೂ ಚಪ್ಪಲಿಗಳನ್ನು ಎಸೆದವರೆಲ್ಲರ ವಿರುದ್ಧ ಸದರಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ (ಪಾದರಕ್ಷೆ ಪರವಾಗಿ) ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪಾದರಕ್ಷೆಗಳಿಗೆ ಅವಮಾನವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯವು ಕೇಸ್ ದಾಖಲಿಸಿಕೊಂಡು ಚಪ್ಪಲಿ-ಶೂ ಎಸೆದವರಿಗೆಲ್ಲ ಶೂಕಾಸ್ ನೋಟೀಸ್ ಜಾರಿಮಾಡಿದೆ.
***
ರಾಹುಲ್‌ಗೆ ಇಂದಿರಾ ಪ್ರಶಸ್ತಿ
----------------------
ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಯನ್ನು ರಾಹುಲ್ ಗಾಂಧಿಗೆ ನೀಡಲಾಗುವುದು. ಚುನಾವಣಾ ವೇಳೆ ರಾಹುಲ್ ಗಾಂಧಿಯು ವಿಮಾನ, ಹೆಲಿಕಾಪ್ಟರ್ ಮತ್ತು ಕಾರಿನಲ್ಲಿ ದೇಶದ ಕೆಲವು ಸ್ಥಳಗಳಿಗೆ ಭೇಟಿಕೊಟ್ಟು, ಬಡಬಗ್ಗರೊಡನೆ ಕ್ಯಾಮೆರಾಗಳಿಗೆ ಪೋಸು ಕೊಟ್ಟು, ಯುವಕ-ಯುವತಿಯರ ’ಕೈ’ಕುಲುಕಿ, ವೇದಿಕೆಯಿಂದ ಭಾವಾವೇಶಭರಿತ ಭಾಷಣ ಮಾಡಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಕೊಡಲಾಗುವುದು. ಈ ಬಗ್ಗೆ ಪ್ರಕಟಣೆ ಹೊರಬೀಳುತ್ತಲೇ ರಾಹುಲ್‌ನನ್ನು ಮುತ್ತಿಕೊಂಡ ಪತ್ರಕರ್ತೆಯರೊಡನೆ ಮಾತನಾಡುತ್ತ ರಾಹುಲ್, ’ಈ ಪ್ರಶಸ್ತಿಗೆ ನನಗಿಂತ ನನ್ನ ಅಕ್ಕ ಹೆಚ್ಚು ಅರ್ಹಳು. ಗೀತೋಪದೇಶೋಪದೇಶದ ಮೂಲಕ ರಾಷ್ಟ್ರಾದ್ಯಂತ ಭಾವೈಕ್ಯತೆಯ ಮಿಂಚಿನ ಸಂಚಾರ ಉಂಟುಮಾಡಿದ್ದಾಳೆ ಆಕೆ’, ಎಂದಿದ್ದಾರೆ.
ರಾಹುಲ್‌ನ ಈ ವಿನಯಪೂರ್ಣ ಮಾತಿಗಾಗಿ ಆತನಿಗೆ ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನೂ ಕೊಡತಕ್ಕದ್ದೆಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
***
ವರುಣ್‌ಗೆ ಶೌರ್ಯ ಪ್ರಶಸ್ತಿ
---------------------
ಕೈ ಕತ್ತರಿಸುತ್ತೇನೆಂದು ಹೇಳುವ ಮೂಲಕ ಅಪ್ರತಿಮ ಶೌರ್ಯ ಮೆರೆದಿದ್ದಕ್ಕಾಗಿ ವರುಣ್ ಗಾಂಧಿಗೆ ಈ ಸಲದ ’ಮಹಾಕಮಲಚಕ್ರ’ ಶೌರ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆದರೆ, ತಾನು ಹೇಳಿದ್ದು ನಿಜವಾದ ಕೈಗಳ ಬಗ್ಗೆ ಅಲ್ಲ, ಕಾಂಗ್ರೆಸ್‌ನ ’ಕೈ’ ಚಿಹ್ನೆಯ ಬಗ್ಗೆ, ಎಂದು ಸ್ಪಷ್ಟನೆ ನೀಡಿ ವರುಣ್ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
***
ಕೋಟಿ ರಾಮು ಹೊಸ ಚಿತ್ರ
---------------------
’ಕಿರಣ್ ಬೇಡಿ’ ಚಿತ್ರದ ಮೂಲಕ ಪತ್ನಿ ಮಾಲಾಶ್ರೀಗೆ ಬೆಳ್ಳಿ ತೆರೆಮೇಲೆ ಮರುಹುಟ್ಟು ನೀಡಿರುವ ನಿರ್ಮಾಪಕ ಕೋಟಿ ರಾಮು ಅವರು ತಮ್ಮ ಮುಂದಿನ ಚಿತ್ರಕ್ಕಾಗಲೇ ನಾಮಕರಣ ಮಾಡಿದ್ದಾರೆ. "ಅತ್ತೆಗಿಂತ ಒಂದು ’ಕೈ’ ಮಿಗಿಲಾದ ಸೊಸೆ" ಎಂಬ ಇಷ್ಟುದ್ದದ ಹೆಸರು ಹೊತ್ತು ನಿರ್ಮಾಣವಾಗಲಿರುವ ಆ ಚಿತ್ರದ ವಿಶೇಷವೆಂದರೆ ಅದರಲ್ಲಿ ಅತ್ತೆಯ ಪಾತ್ರವೇ ಇಲ್ಲ! ಇಂದಿರಾಗಾಂಧಿಯನ್ನು ಹೋಲುವ ಭಾವಚಿತ್ರಗಳಿಂದಲೇ ಅತ್ತೆಯ ಪಾತ್ರವನ್ನು ಬಿಂಬಿಸಲಾಗುವುದು. ಸೊಸೆಯ ಪಾತ್ರದ ಮೂಲಕ ಸಂಸದೆ ತೇಜಸ್ವಿನಿ ಗೌಡ ಅವರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
’ಕಿರಣ್ ಬೇಡಿ’ ಯಶಸ್ಸಿನಿಂದ ಸ್ಫೂರ್ತಿಹೊಂದಿ ನೀವಿನ್ನು ’ಸಾಂಗ್ಲಿಯಾನಾ ಭಾಗ-೪’ ತೆಗೆಯುವಿರಾ ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ರಾಮು ಕೆರಳಿ ಕೆಂಡಾಮಂಡಲ ಆದರೆಂದು ವರದಿಯಾಗಿದೆ.
***
ನಟರಾಜನಾದ ಶಂಕರ
------------------
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರು ಭರತನಾಟ್ಯ ಪ್ರವೀಣರು ಎಂಬ ಸ್ವಾರಸ್ಯಕರ ಸಂಗತಿ ಬಯಲಾಗಿದೆ. ಚುನಾವಣೆ ವೇಳೆ ಪತ್ರಿಕಾಗೋಷ್ಠಿಗಳಲ್ಲಿ ಅವರ ಹಾವಭಾವ ಕಂಡು ಅನುಮಾನಗೊಂಡ ಪತ್ರಕರ್ತನೊಬ್ಬ ವಿದ್ಯಾಶಂಕರ್ ಅವರನ್ನು ವಿಚಾರಿಸಿದಾಗ ಅವರೇ ಈ ಸಂಗತಿಯನ್ನು ಹೊರಗೆಡಹಿದ್ದಾರೆ. ಹೈಸ್ಕೂಲ್ ದಿನಗಳಿಂದಲೂ ತಾನು ಭರತನಾಟ್ಯ ಅಭ್ಯಾಸ ಮಾಡಿದುದಾಗಿಯೂ, ವಿದ್ಯಾಭ್ಯಾಸ, ಐಎಎಸ್ ತಯಾರಿ ಮತ್ತು ಉನ್ನತ ಅಧಿಕಾರಿಯಾಗಿ ಆಡಳಿತ ನಿರ್ವಹಣೆ ಈ ಒತ್ತಡಗಳ ದೆಸೆಯಿಂದಾಗಿ ತನಗೆ ನೃತ್ಯ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿಲ್ಲವೆಂದೂ, ಇಷ್ಟು ವರ್ಷ ತಾನು ಅದುಮಿಟ್ಟುಕೊಂಡ ಆ ಅಭಿಲಾಷೆಯು ಈಗ ಪತ್ರಿಕಾಗೋಷ್ಠಿಗಳಲ್ಲಿ ಆಂಗಿಕ ಅಭಿನಯ ಮತ್ತು ಹಾವಭಾವಗಳ ಮೂಲಕ ಪ್ರಕಟಗೊಳ್ಳುತ್ತಿದೆಯೆಂದೂ ವಿದ್ಯಾಶಂಕರ್ ಅವರು ಹೇಳಿದ್ದಾರೆ.
ನೌಕರಿಯಿಂದ ನಿವೃತ್ತಿ ಹೊಂದಿದ ನಂತರ ತಾವು ಭರತನಾಟ್ಯ ಶಾಲೆಯೊಂದನ್ನು ತೆರೆಯಲಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
***
’ಕಿಸ್ಬಾಯಿ ರೋಗ’ ಮಾಯ!
----------------------
’ಹಂದಿ ರೋಗ’ಕ್ಕಿಂತ ವ್ಯಾಪಕವಾಗಿ ದೇಶಾದ್ಯಂತ ಹರಡಿದ್ದ ’ಕಿಸ್ಬಾಯಿ ರೋಗ’ವು ಈಗ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆಯೆಂದು ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ರೋಗವು ಪುಢಾರಿಗಳಿಗೆ ಮಾತ್ರ ತಗುಲಿತ್ತು.
’ಈ ರೋಗಪೀಡಿತರು ಸದಾಕಾಲ ಬಾಯಿ ಕಿಸಿದುಕೊಂಡೇ ಇರುತ್ತಾರೆ, ಮತದಾನ ಮುಗಿದ ತಕ್ಷಣ ಅವರ ಈ ಕಾಯಿಲೆಯು ತಂತಾನೇ ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತದೆ’, ಎಂಬ ಭಾವೈಮಂಡಳಿಯ ಹೇಳಿಕೆಯನುಸಾರ ಇದೀಗ ಮತದಾನ ಮುಗಿದ ಕ್ಷೇತ್ರಗಳಲ್ಲಿ ಈ ರೋಗವು ಹೇಳಹೆಸರಿಲ್ಲದಂತೆ ಮಾಯವಾಗಿದೆ!
ದೇಶದಲ್ಲಿ ಎಲ್ಲೋ ಕೆಲವರಿಗೆ ಮಾತ್ರ ಕಿಸ್ಬಾಯಿ ರೋಗವು ಸದಾಕಾಲ ಇರುತ್ತದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಸದಾನಂದ ಗೌಡರು ಅಂಥವರಲ್ಲೊಬ್ಬರು. ರೋಗಿಗಳಿಗೆ ಈ ಕಾಯಿಲೆಯಿಂದ ಏನೂ ನಷ್ಟವಿಲ್ಲ, ಬದಲಾಗಿ ಲಾಭವಾಗುವ ಸಾಧ್ಯತೆ ಇದೆ! ಆದರೆ, ಕಿಸ್ಬಾಯಿ ರೋಗಿಗಳ ಎದುರಿರುವವರು ಮಾತ್ರ ಮೋಸವೆಂಬ ಹಾನಿಗೊಳಗಾಗುವ ಸಂಭವವಿದೆ ಎಂದು ವೈದ್ಯಕೀಯ ಮಂಡಳಿಯು ಎಚ್ಚರಿಸಿದೆ.
***
ಗೌಡರ ಮುದ್ದೆ
-----------
ಹಿಂದಿ ಭಾಷೆಯ ಅಜ್ಞಾನದಿಂದಾಗಿ ದೇವೇಗೌಡರು ಮುಜುಗರಕ್ಕೊಳಗಾದ ಪ್ರಕರಣ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ತೃತೀಯ ರಂಗದ ಚುನವಣಾ ಪ್ರಚಾರಕ್ಕಾಗಿ ಈಚೆಗೆ ಯು.ಪಿ.ಗೆ ಹೋಗಿದ್ದ ಗೌಡರು ಅಲ್ಲಿನ ಗ್ರಾಮವೊಂದರ ಸಭೆಯಲ್ಲಿ ಭಾಗವಹಿಸಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷನು ತನ್ನ ಭಾಷಣದಲ್ಲಿ, ’ಹಮಾರೇ ಸಾಮ್ನೆ ಅತ್ಯಂತ್ ಪ್ರಮುಖ್ ಮುದ್ದೆ ಹೈ..’ ಎಂದಾಕ್ಷಣ ದೇವೇಗೌಡರು, ’ಹೌದಾ? ಎಲ್ಲದೆ, ತತ್ತಾ’, ಎಂದು ಕೈಚಾಚಿದರೆಂದು ವರದಿಯಾಗಿದೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಆ ಹಳ್ಳಿಗನು ಒಂದು ಕ್ಷಣ ಏನೂ ತೋಚದೇ ಸುಮ್ಮನೆ ನಿಂತುಬಿಟ್ಟ. ಕೂಡಲೇ ಮಧ್ಯಪ್ರವೇಶಿಸಿದ ವೈ.ಎಸ್.ವಿ.ದತ್ತ ಉಭಯರಿಗೂ ಅರ್ಥ ವಿವರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಭೆಯ ನಂತರ ತಮ್ಮತಮ್ಮೊಳಗೇ ದೇವೇಗೌಡರನ್ನು ಗೇಲಿಮಾಡಿ ಮಾತಾಡಿಕೊಳ್ಳುತ್ತಿದ್ದ ಪತ್ರಕರ್ತರತ್ತ ಧಾವಿಸಿದ ದತ್ತ, ’ಹಿಂದಿ ಭಾಷಿಕರಾದ ನೀವೇನು ಬಹುಭಾಷಾಪಂಡಿತರೇ? ಗೌಡ ಅನ್ನುವ ಬದಲು ನಿಮ್ಮಲ್ಲನೇಕರು ಘೋಡಾ ಅನ್ನುತ್ತೀರಲ್ಲ!’ ಎಂದು ದಬಾಯಿಸಿ ಪತ್ರಕರ್ತರ ಬಾಯಿಮುಚ್ಚಿಸಿದ್ದಾಗಿ ವರದಿಯಾಗಿದೆ.
ರಾಜಕಾರಣಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 30, 2009
’ಕಾರ್ಮಿಕ ದಿನ’ ಎಂಬ ಅಸಂಬದ್ಧ ಆಚರಣೆ!
ಮೇ ೧, ಕಾರ್ಮಿಕ ದಿನ.
ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ!
ನಮ್ಮ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ’ಕಾರ್ಮಿಕ ದಿನ’ದಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹುಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ! ಅದೇವೇಳೆ, ಸಂಘಟಿತ ವಲಯದ ಬಹುತೇಕ ಕಾರ್ಮಿಕರು ತಮ್ಮ ಎಂದೂ ಮುಗಿಯದ ಬೇಡಿಕೆಗಳನ್ನು ಪ್ರತಿಪಾದಿಸುತ್ತ ’ಕಾರ್ಮಿಕ ದಿನ’ವನ್ನು ’ಅಧಿಕೃತ ಕೆಲಸಗೇಡಿ ದಿನ’ವನ್ನಾಗಿ ಆಚರಿಸುತ್ತಿದ್ದಾರೆ!
ಕೇಂದ್ರ ಸರ್ಕಾರದ ಆಣತಿ ಮೇರೆಗೆ ನಮ್ಮ ಉದ್ಯೋಗದಾತರು ನಾಯಿಗಳಿಗೆ ಬಿಸ್ಕತ್ ಬಿಸಾಕುವಂತೆ ಮೇ ಒಂದನೇ ದಿನವನ್ನು ಸಂಘಟಿತ ಕಾರ್ಮಿಕರಿಗೆ ಬಿಸಾಕುತ್ತಾರೆ. ಕಾರ್ಮಿಕರು ರಜಾ ಎಂಬ ಆ ಬಿಸ್ಕತ್ ತಿಂದು, ಒಂದಷ್ಟು ಘೋಷಣೆ ಕೂಗಿ ಸುಮ್ಮನಾಗುತ್ತಾರೆ. ’ಕಾರ್ಮಿಕ ದಿನ’ವೆಂಬುದು ನಮ್ಮೀ ದೇಶದಲ್ಲಿ ಇದಕ್ಕಿಂತ ಹೆಚ್ಚೇನನ್ನೂ ಸಾಧಿಸಿಲ್ಲ.
ತೃಪ್ತಿಯ ಕೊರತೆ
-------------
’ನನಗೆ ಬರುತ್ತಿರುವ ಸಂಬಳ ಮತ್ತು ಭತ್ಯೆಗಳು ತೃಪ್ತಿಕರವಾಗಿವೆ; ಸೇವಾ ನಿಯಮಗಳೂ ಸೌಲಭ್ಯಗಳೂ ಉತ್ತಮವಾಗಿವೆ; ನಾನು ಅದೃಷ್ಟವಂತ’, ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಕಾರ್ಮಿಕರು ನಮ್ಮಲ್ಲಿ ಎಷ್ಟು ಮಂದಿ ಇದ್ದಾರೆ? ಅದೇ ವೇಳೆ, ’ನನ್ನ ಕೆಲಸಗಾರರೆಲ್ಲ ಚೆನ್ನಾಗಿ ದುಡಿಯುತ್ತಿದ್ದಾರೆ, ಹಾಗಾಗಿಯೇ ನಾನು ಪ್ರವರ್ಧನ ಹೊಂದಿದ್ದೇನೆ, ಅವರು ಇನ್ನೂ ಹೆಚ್ಚಿನ ಸಂಬಳ, ಸೌಲಭ್ಯಗಳಿಗೆ ಅರ್ಹರು’, ಎಂದು ಹೇಳುವ ಒಬ್ಬನಾದರೂ ಮಾಲೀಕ ನಮ್ಮಲ್ಲಿದ್ದಾನೆಯೇ? ಎಷ್ಟು ಕೊಟ್ಟರೂ ಸಾಲದೆನ್ನುವ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಸದಾ ಅತೃಪ್ತಿ ಹೊಂದಿರುವ ಸಂಘಟಿತ ಕಾರ್ಮಿಕರು ಒಂದು ಕಡೆ, ದುಡಿದು ಅರೆಜೀವವಾದರೂ ಎರಡು ಹೊತ್ತಿನ ಕೂಳು ಕಾಣದ ಅಸಂಘಟಿತ ಕಾರ್ಮಿಕರು ಇನ್ನೊಂದು ಕಡೆ, ಮತ್ತು ಈ ಎರಡೂ ಬಗೆಯ ಕಾರ್-ಮಿಕಗಳನ್ನು ತಮ್ಮ ಬಲೆಗೆ ಕೆಡವಿಕೊಂಡು ಇವರ ಹೆಸರಿನಲ್ಲಿ ಕಾಸು, ಕುರ್ಚಿ, ಕೀರ್ತಿ ಇತ್ಯಾದಿ ’ಭೋಗ’ಗಳನ್ನು ತಮ್ಮದಾಗಿಸಿಕೊಳ್ಳುವ-’ಕರ್ಮಯೋಗಿ’ ಮುಖವಾಡದ-ಕಾರ್ಮಿಕ ಧುರೀಣರು ಮತ್ತೊಂದು ಕಡೆ; ಇಂಥ ವಿಪರ್ಯಾಸ-ವೈಪರೀತ್ಯಗಳ ನಡುವೆ ಅದ್ಯಾವ ಕರ್ಮಕ್ಕೋ ನಾವು ’ಕಾರ್ಮಿಕ ದಿನ’ವನ್ನು ಆಚರಿಸುತ್ತಿದ್ದೇವೆ! ’ಈ ದಿನವು ಕಾರ್ಮಿಕರಿಗೆ ಗೌರವದ ಸಂಕೇತ’, ಎಂದು ಓಳು ಬಿಡುತ್ತಿದ್ದೇವೆ (ಕಪಟವಾಡುತ್ತಿದ್ದೇವೆ)!
ಕಾರ್ಮಿಕ ದಿನಾಚರಣೆಯ ಮೂಲ
--------------------
ಇಷ್ಟಕ್ಕೂ, ನಮ್ಮ ಈ ’ಕಾರ್ಮಿಕ ದಿನ’ವೆಂಬುದು ವಿದೇಶೀ ಬಳುವಳಿ.
೧೮೫೬ರ ಏಪ್ರಿಲ್ ೨೧ರಂದು ಆಸ್ಟ್ರೇಲಿಯಾದ ಮೆಲ್ಬರ್ನ್ ಪ್ರದೇಶದಲ್ಲಿ ಕಲ್ಲುಕುಟಿಗರು ಮತ್ತು ಕಟ್ಟಡ ಕಾರ್ಮಿಕರು ದಿನಂಪ್ರತಿ ಎಂಟು ಗಂಟೆಗಳ ದುಡಿಮೆ ಮಿತಿಗೆ ಆಗ್ರಹಿಸಿ ಮುಷ್ಕರ ನಡೆಸಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದು ಮುಂದೆ ವಿವಿಧೆಡೆಗಳಲ್ಲಿ ’ಮೇ ದಿನ’ದ ಆಚರಣೆಗೆ ಪರೋಕ್ಷವಾಗಿ ಸ್ಫೂರ್ತಿಯಾಯಿತು.
ಎಂಟು ಗಂಟೆಗಳ ದುಡಿಮೆ ಮಿತಿಗಾಗಿ ೧೮೮೬ರ ಮೇ ಒಂದರಂದು ಅಮೆರಿಕದ ಹಲವೆಡೆ ಕಾರ್ಮಿಕರ ರ್‍ಯಾಲಿಗಳು ನಡೆದವು. ಮೇ ಮೂರರಂದು ಚಿಕಾಗೋದಲ್ಲಿ ಬದಲಿ ಕೆಲಸಗಾರರು ಕೆಲಸಕ್ಕೆ ಹಾಜರಾಗಲೆತ್ನಿಸಿದಾಗ ಘರ್ಷಣೆ ಸಂಭವಿಸಿ ಪೋಲೀಸರ ಗುಂಡಿಗೆ ನಾಲ್ವರು ಕಾರ್ಮಿಕರು ಬಲಿಯಾದರು. ಮೇ ನಾಲ್ಕರಂದು ಅಲ್ಲಿನ ಹೇ ಮಾರ್ಕೆಟ್ ಚೌಕದಲ್ಲಿ ಕಾರ್ಮಿಕರ ರ್‍ಯಾಲಿ ನಡೆದಿದ್ದಾಗ ಬಾಂಬ್ ಎಸೆತಕ್ಕೆ ಓರ್ವ ಪೋಲೀಸ್ ಸಾವನ್ನಪ್ಪಿದನಲ್ಲದೆ ಅನಂತರ ನಡೆದ ಗುಂಡಿನ ಕಾಳಗದಲ್ಲಿ ಏಳು ಮಂದಿ ಪೋಲೀಸರು ಮತ್ತು ನಾಲ್ವರು ಕಾರ್ಮಿಕರು ಪ್ರಾಣ ಕಳೆದುಕೊಂಡರು. ಮುಂದಿನ ದಿನಗಳಲ್ಲಿ ಈ ಘಟನೆಯ ವಿಚಾರಣೆ ನಡೆದು ಏಳು ಮಂದಿ ದಂಗೆಕೋರರನ್ನು ಮರಣದಂಡನೆಗೆ ಗುರಿಪಡಿಸಲಾಯಿತು.
೧೮೯೦ರ ಮೇ ಒಂದರಂದು ಈ ಕಾರ್ಮಿಕ ಪ್ರತಿಭಟನೆಯು ಮರುಜೀವ ಪಡೆದಾಗ ಬೇರೆ ಕೆಲ ದೇಶಗಳ ಕಾರ್ಮಿಕ ಸಂಘಟನೆಗಳಿಗೂ ಇದನ್ನು ವಿಸ್ತರಿಸಲಾಯಿತು. ಹೀಗೆ ಇದಕ್ಕೆ ಅಂತರ ರಾಷ್ಟ್ರೀಯ ಕಾರ್ಮಿಕ ದಿನದ ರೂಪು ಕೊಡಲಾಯಿತು. ಇದರ ಹಿಂದೆ, ಹೇ ಮಾರ್ಕೆಟ್ ’ಹುತಾತ್ಮ’ರಿಗೆ ಗೌರವ ಸೂಚಿಸುವ ಉದ್ದೇಶ ಅಡಕವಾಗಿತ್ತು! ಇಂಥದೊಂದು ಹುನ್ನಾರಕ್ಕೆ ಭಾರತದ ಕಾರ್ಮಿಕ ಬಲಿಯಾಗಬೇಕೇ? ಹಾಗೊಂದು ವೇಳೆ ’ಕಾರ್ಮಿಕ ದಿನ’ ಆಚರಿಸಲೇಬೇಕೆಂದರೆ, ನಮ್ಮಲ್ಲಿ ಕಾರ್ಮಿಕ ಕ್ರಾಂತಿಗೇನು ಕೊರತೆಯೇ? ಏಪ್ರಿಲ್-ಮೇ ೧೮೬೨ರ ಮತ್ತು ೧೯೪೦-೪೬ರ ರೈಲ್ವೆ ಚಳವಳಿಗಳು, ೧೯೩೭ರಲ್ಲಿ ಜವಳಿ ಕಾರ್ಮಿಕರು ನಡೆಸಿದ ಐತಿಹಾಸಿಕ ಘೇರಾವೋ, ೧೯೪೦ರ ದಶಕದ ಅವರ ಚಳವಳಿಗಳು, ಫೆಬ್ರವರಿ ೧೯೪೬ರ ನೌಕಾ ದಂಗೆ, ೧೯೫೫ರ ಬಂದರು ಕಾರ್ಮಿಕರ ಚಳವಳಿ, ೧೮೮೧, ೯೦, ೯೫, ೯೬ರ ಸೆಣಬು ಕಾರ್ಖಾನೆ ಕಾರ್ಮಿಕರ ಮುಷ್ಕರಗಳು, ನವೆಂಬರ್ ೧೮, ೧೯೦೭ರ ಅಸನ್‌ಸೋಲ್ ರೈಲ್ವೆ ನೌಕರರ ಮುಷ್ಕರ, ಬ್ರಿಟಿಷ್ ಆಡಳಿತಗಾರರ ವಿರುದ್ಧ ಸರ್ಕಾರಿ ಮುದ್ರಣಾಲಯದ ಕೆಲಸಗಾರರು ೧೯೦೫ರಲ್ಲಿ ಒಂದು ತಿಂಗಳ ಕಾಲ ನಡೆಸಿ ಯಶಸ್ಸು ಸಾಧಿಸಿದ ಆ ಐತಿಹಾಸಿಕ ಮುಷ್ಕರ, ಹೀಗೆ ಅದೆಷ್ಟು ಉಲ್ಲೇಖಾರ್ಹ ಕಾರ್ಮಿಕ ಚಳವಳಿಗಳು ನಮ್ಮ ದೇಶದಲ್ಲಿ ಘಟಿಸಿಲ್ಲ? ಇವನ್ನೆಲ್ಲ ಬದಿಗೆ ತಳ್ಳಿ, ಆ ಅಮೆರಿಕನ್ನರನ್ನು ನೆನೆಯುವ ದಿನವನ್ನೇ ನಾವು ’ಕಾರ್ಮಿಕ ದಿನ’ವೆಂದು ಸ್ವೀಕರಿಸಿದ್ದೇವಲ್ಲಾ!
ಚೋದ್ಯವೆಂದರೆ, ಸ್ವಯಂ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳೇ ’ಕಾರ್ಮಿಕ ದಿನ’ವನ್ನು ಮೇ ಒಂದರಂದು ಆಚರಿಸದೆ ಬೇರೆ ದಿನಗಳಂದು ಆಚರಿಸುತ್ತವೆ! ಮೇ ಒಂದರ ಆಚರಣೆಗೆ ಇರುವ ’ಕಮ್ಯೂನಿಸ್ಟ್’ ಹಣೆಪಟ್ಟಿ ಆ ದೇಶಗಳಿಗೆ ಬೇಡವಂತೆ!
ಕಾರ್ಮಿಕ ದಿನವನ್ನು ನಮಗೆ ಬಳುವಳಿ ನೀಡಿದ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳೇ ಕಾರ್ಮಿಕ ದಿನವನ್ನು ಮೇ ಒಂದರಂದು ಆಚರಿಸುವುದಿಲ್ಲ; ಎಲ್ಲ ಐರೋಪ್ಯ ರಾಷ್ಟ್ರಗಳೂ ’ಕಾರ್ಮಿಕ ದಿನ’ವನ್ನು ತಮಗೆ ಬೇಕಾದಂತೆ ಅರ್ಥೈಸಿ, ತಮಗೆ ಬೇಕಾದ ದಿನ ಆಚರಿಸುತ್ತವೆ; ಆದರೆ ಭಾರತದಂಥ ಅಭಿವೃದ್ಧಿಶೀಲ ದೇಶ ಮೊದಲ್ಗೊಂಡು ’ಮೂರನೇ ವಿಶ್ವ’ದ ರಾಷ್ಟ್ರಗಳೆಲ್ಲ ಅಮೆರಿಕ-ಆಸ್ಟ್ರೇಲಿಯಾಗಳಲ್ಲಿ ಘಟಿಸಿದ ಎರಡು ವಿದ್ಯಮಾನಗಳನ್ನು ಪ್ರಸಾದವೆಂದು ಸ್ವೀಕರಿಸಿ ಸಂಬಂಧಿತ ದಿನವಾದ ಮೇ ಒಂದರಂದು ’ಕಾರ್ಮಿಕ ದಿನ’ವನ್ನು ಆಚರಿಸಬೇಕೆಂದು ಈ ಐರೋಪ್ಯ ರಾಷ್ಟ್ರಗಳು ಬಯಸುತ್ತವೆ! ಅದರಂತೆ ಭಾರತದಲ್ಲಿ ನಾವು ಆಚರಿಸುತ್ತಿದ್ದೇವೆ!
ಭಾರತದಲ್ಲಿ ಮೊಟ್ಟಮೊದಲ ’ಕಾರ್ಮಿಕ ದಿನ’ (ಮೇ ಡೇ) ನಡೆದದ್ದು ಮದ್ರಾಸ್(ಚೆನ್ನೈ)ನಲ್ಲಿ. ’ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್’ ಸಂಘಟನೆಯು ತನ್ನ ಧುರೀಣ ಸಿಂಗಾರವೇಲು ಚೆಟ್ಟಿಯಾರ್ ನೇತೃತ್ವದಲ್ಲಿ ೧೯೨೩ರ ಮೇ ಒಂದರಂದು ಮದ್ರಾಸ್‌ನ ಎರಡು ಬೀಚ್‌ಗಳಲ್ಲಿ ಸಭೆಗಳನ್ನು ಸಂಘಟಿಸಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಅಲ್ಲಿ ಕೆಂಪು ಧ್ವಜವನ್ನು ಬಳಸಲಾಯಿತು. ಇದೇ ತಮಿಳುನಾಡಿನಲ್ಲೇ ಜಯಲಲಿತಾ ೨೦೦೩ರಲ್ಲಿ ಮುಷ್ಕರ ನಿರತ ೧೭೬೦೦೦ ಸರ್ಕಾರಿ ನೌಕರರು ಹಾಗೂ ಶಿಕ್ಷಕರನ್ನು ವಜಾ ಮಾಡಿದ್ದು! (ಆಮೇಲೆ ಅವರನ್ನು ಕೆಲಸಕ್ಕೆ ವಾಪಸ್ ಸೇರಿಸಿಕೊಳ್ಳಲಾಯಿತೆನ್ನಿ.)
ಮೂಲಭೂತ ಪ್ರಶ್ನೆ
-------------
ಮೂಲಭೂತ ಪ್ರಶ್ನೆಯೆಂದರೆ, ’ಕಾರ್ಮಿಕ-ಮಾಲೀಕ ಸಂಬಂಧವು ಉಭಯರಿಗೂ ತೃಪ್ತಿದಾಯಕವಾಗಿಲ್ಲದಿರುವಾಗ ಕಾರ್ಮಿಕ ದಿನಾಚರಣೆಗೆ ಏನು ಅರ್ಥ?’ ನಮ್ಮ ದೇಶದಲ್ಲಿಂದು ನಾವು ಕಾಣುತ್ತಿರುವುದೇನನ್ನು? ಸದಾ ಅತೃಪ್ತರಾಗಿರುವ ಕಾರ್ಮಿಕರು, ಅವರ ಅತೃಪ್ತಿಗೆ ಗಾಳಿ ಹಾಕುತ್ತ ಅವರನ್ನು ಮುಷ್ಕರಕ್ಕೆ ಎಳೆಯುವ ಕಾರ್ಮಿಕ ಧುರೀಣರು, ಧುರೀಣರ ಕರೆಗಳಿಗೆ ಕುರಿಗಳಂತೆ ಕೊರಳು ಕೊಡುವ ಅದೇ ಕಾರ್ಮಿಕರು, ಮಾಲೀಕರೊಡನೆ ಒಳ ಒಪ್ಪಂದ ಮಾಡಿಕೊಳ್ಳುವ, ಇಲ್ಲವೇ, ಕಾರ್ಮಿಕರನ್ನು ತಮ್ಮ ಏಣಿಗೆ ಮೆಟ್ಟಿಲಾಗಿ ಬಳಸಿಕೊಳ್ಳುವ ಅದೇ ಧುರೀಣರು, ಮತ್ತು, ನೌಕರರನ್ನು ಸದಾ ಅತೃಪ್ತಿಯಲ್ಲಿಡುವುದು ತಮ್ಮ ಆಜನ್ಮಸಿದ್ಧ ಹಕ್ಕು ಎಂಬಂತಾಡುವ ಮಾಲೀಕರು, ಈ ವಿಷ ವರ್ತುಲವನ್ನಲ್ಲವೆ ನಾವಿಂದು ಈ ದೇಶದಲ್ಲಿ ಕಾಣುತ್ತಿರುವುದು? ನಾವಿಂದು ಕಾಣುತ್ತಿರುವುದು ಅಸಂಘಟಿತ ಕಾರ್ಮಿಕರ ಶೋಷಣೆಯನ್ನಲ್ಲವೆ? ಕಾರ್ಮಿಕರ ಅವ್ಯಾಹತ ಮುಷ್ಕರಗಳನ್ನಲ್ಲವೆ? ಪ್ರತಿ ದಿನವೂ ಪ್ರತಿ ಊರಿನಲ್ಲಿಯೂ ಪ್ರತಿಭಟನಾ ಮೆರವಣಿಗೆಯನ್ನಲ್ಲವೆ? ಕಾರ್ಮಿಕ ಇಲಾಖೆಯ ಕಳ್ಳಾಟಿಕೆ ಮತ್ತು ರಾಜಕಾರಣಿಗಳ ಸುಳ್ಳಾಡುವಿಕೆಗಳನ್ನಲ್ಲವೆ?
ಅನೂಚಾನವೆಂಬಂತೆ ಸಾಗಿಬಂದಿರುವ ಇಂಥ ವಿಷಮ ಪರಿಸ್ಥಿತಿಯಲ್ಲಿ ನಾವು ವರ್ಷದಲ್ಲೊಂದು ದಿನ ಕಾರ್ಮಿಕರಿಗೆ ಅವರ ಹೆಸರಿನಲ್ಲಿ ರಜೆ ನೀಡಿಬಿಟ್ಟರೆ ಏನು ಸಾಧಿಸಿದಂತಾಯಿತು? ಇದುವರೆಗೆ ಸಾಧಿಸಿದ್ದಾದರೂ ಏನು? ಹೀಗಿರುವಾಗ ನಾವಿಂದು ಆಚರಿಸುತ್ತಿರುವ ’ಕಾರ್ಮಿಕ ದಿನ’ವು ಅಸಂಬದ್ಧವೆಂದು ಅನಿಸುವುದಿಲ್ಲವೆ?
ನಮ್ಮೀ ದೇಶದಲ್ಲಿ ’ಕಾರ್ಮಿಕ ದಿನ’ದ ಅರಿವೂ ಇಲ್ಲದೆ ಲಕ್ಷಾಂತರ ಹೋಟೆಲ್ ನೌಕರರು ಸುರಕ್ಷಿತವಲ್ಲದ ವಾತಾವರಣದಲ್ಲಿ ಅಹರ್ನಿಶಿ ದುಡಿದು ಹಣ್ಣಾಗುತ್ತಿರುವಾಗ, ಕೋಟ್ಯಂತರ ಗಾರ್ಮೆಂಟ್ ನೌಕರರು, ಕಟ್ಟಡ ಕಾರ್ಮಿಕರು, ಭಟ್ಟಿಗಳ ಕಾರ್ಮಿಕರು, ಆಟೋ ಗ್ಯಾರೇಜ್ ಮಕ್ಕಳು, ಹೀಗೆ ನಾನಾ ವಲಯಗಳ ಅಸಂಘಟಿತ ಕಾರ್ಮಿಕರು ಅನಾರೋಗ್ಯಕರ ಮತ್ತು ಅಭದ್ರ ವಾತಾವರಣದಲ್ಲಿ ದಿನವಿಡೀ ದುಡಿದೂ ಅರೆಹೊಟ್ಟೆ ಉಣ್ಣುವಾಗ ತಿಂಗಳಿಗೆ ಹತ್ತಾರು ಸಾವಿರದಿಂದ ಲಕ್ಷದವರೆಗೆ ಸಂಬಳ ಎಣಿಸುವ (ಗಿಂಬಳವಿದ್ದಲ್ಲಿ ಅದು ಬೇರೆ!) ಸಂಘಟಿತ ವಲಯದ ನೌಕರರು ’ಕಾರ್ಮಿಕ ದಿನ’ವೆಂದು ರಜಾದ ಮಜಾ ಅನುಭವಿಸುವುದು ಎಷ್ಟು ಸೂಕ್ತ? ಪುಸ್ತಕದ ಬದನೇಕಾಯಿಯಾಗಿರುವ ಈ ದೇಶದ ಕಾರ್ಮಿಕ ನಿಯಮಗಳು ಏನೇ ಹೇಳಲಿ, ಕಮ್ಯೂನಿಸ್ಟರ ಆದರ್ಶಗಳು ಏನೇ ಇರಲಿ, ಕೇವಲ ಸಂಘಟಿತ ಕಾರ್ಮಿಕರು ಮಾತ್ರ ಫಲಾನುಭವಿಗಳಾಗಿರುವ ನಮ್ಮ ಕಾರ್ಮಿಕ (ಅ)ವ್ಯವಸ್ಥೆಯಲ್ಲಿ ’ಕಾರ್ಮಿಕ ದಿನ’ದ ಆಚರಣೆಯು ಸಂಘಟಿತ ಕಾರ್ಮಿಕರ ’ಬಲ’ದ ಸಂಕೇತವಾಗಿ ಬಿಂಬಿತವಾಗುವುದರಿಂದಾಗಿ ಪರೋಕ್ಷವಾಗಿ ಅಸಂಘಟಿತ ಕಾರ್ಮಿಕರಿಗೆ ಅನ್ಯಾಯವೆಸಗಿದಂತಾಗುವುದಲ್ಲವೆ? ಇಷ್ಟಕ್ಕೂ, ’ಕಾರ್ಮಿಕ ದಿನ’ವೆಂಬುದು ನಮ್ಮೀ ದೇಶದಲ್ಲಿ ’ಕಮ್ಯೂನಿಸ್ಟ್ ಸಿದ್ಧಾಂತದ ಪ್ರತಿಪಾದನೆಯ ದಿನ’ದ ರೂಪು ಪಡೆದಿರುವುದಾಗಲೀ ಕಮ್ಯೂನಿಸ್ಟರ ರಾಜಕಾರಣದ ಸಾಧನವಾಗಿ ಬಳಕೆಯಾಗುತ್ತಿರುವುದಾಗಲೀ ಸರಿಯೇ? ಚೀನಾದಂಥ ಚೀನಾವೇ ಬಂಡವಾಳಶಾಹಿ ಮಾರ್ಗ ಹಿಡಿದು, ’ಕಾರ್ಮಿಕ ದಿನ’ವನ್ನು ಸಂಪ್ರದಾಯಮಾತ್ರವೆಂಬಂತೆ ಆಚರಿಸುತ್ತಿರುವಾಗ ಭಾರತಕ್ಕೆ ಈ ದಿನದ ಬಗ್ಗೆ ಅದೆಂಥ ಹುಮ್ಮಸ್ಸು!
ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಸಂಘಟಿತ ಕಾರ್ಮಿಕರ ಮೈಮುರಿ ದುಡಿಮೆ. (ಮಾತೆತ್ತಿದರೆ ನಾವು ಟೀಕಿಸುವ ಸಾಫ್ಟ್‌ವೇರ್ ನೌಕರರು ಮೈಮುರಿ ದುಡಿಮೆಗೆ ಉತ್ತಮ ಉದಾಹರಣೆಯಾಗಬಲ್ಲರು.) ಅದೇವೇಳೆ, ಅಸಂಘಟಿತ ಕಾರ್ಮಿಕರಿಗೆ ಅಗತ್ಯವಾಗಿರುವುದು ಆರೋಗ್ಯಕರ, ಸುರಕ್ಷಿತ ಹಾಗೂ ಶೋಷಣೆಮುಕ್ತ ಕೆಲಸದ ವಾತಾವರಣ, ನ್ಯಾಯಬದ್ಧ ಸಂಬಳ ಮತ್ತು ಉತ್ತಮ ಸೇವಾ ಸೌಲಭ್ಯ. ಜೊತೆಗೆ, ಸಂಘಟಿತ ಕಾರ್ಮಿಕರು ಬಯಸುವುದು ತಮ್ಮ ನಾಯಕರ ಪ್ರಾಮಾಣಿಕತೆ ಮತ್ತು ನಿಷ್ಕಾಮಕರ್ಮ ಭಾವ ಹಾಗೂ ಮಾಲೀಕರ ವಾತ್ಸಲ್ಯ. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಈ ಗುಣಾಂಶಗಳು ಒಡಮೂಡುವುದಿಲ್ಲವೋ ಅಲ್ಲಿಯವರೆಗೆ ಕಾರ್ಮಿಕ ದಿನಾಚರಣೆಯಿಲ್ಲಿ ಅರ್ಥಹೀನ. ಕಾರ್ಮಿಕ ದಿನಾಚರಣೆಯ ’ಬಲ’ದಿಂದಲಾದರೂ ಈ ಗುಣಾಂಶಗಳ ಒಡಮೂಡುವಿಕೆ ಸಾಧ್ಯವಾಗಿದೆಯೇ ಎಂದರೆ, ಊಹ್ಞೂ, ಸಾಧ್ಯವಾಗಿಲ್ಲ. ಹಾಗೆ ಸಾಧ್ಯವಾಗುವುದೂ ಇಲ್ಲ. ಏಕೆಂದರೆ, ಕಾರ್ಮಿಕ ದಿನಾಚರಣೆಯೆಂಬುದಿಲ್ಲಿ ’ಒಂದು ದಿನದ ರಜಾ-ಮಜಾ’ ಹೊರತು ಬೇರಿನ್ನೇನೂ ಆಗಿ ಉಳಿದಿಲ್ಲ.

ಶನಿವಾರ, ಏಪ್ರಿಲ್ 4, 2009
ರಾಜಕಾರಣಿಗಳೆಂಬ ಜನಶೇವಕರ ಕಥೆ
ಭಾರತದ ರಾಜಕಾರಣಿಗಳು ವಿಶ್ವದಲ್ಲೇ ಅತ್ಯಂತ ಶ್ರೇಷ್ಠರು. ರೂಢಿಯೊಳಗುತ್ತಮರು.
’ದಾಸನಂತಾಗುವೆನು ಧರೆಯೊಳಗೆ ನಾನು’, ಎಂಬ ದಾಸವಾಣಿಯಂತೆ ನಡೆಯುವವರು ಇವರು.
ಚುನಾವಣೆ ಎದುರಿರುವಾಗ ಇವರು ನಮ್ಮ ಮನೆಬಾಗಿಲಿಗೆ ಬಂದು ನಮ್ಮ ದಾಸಾನುದಾಸರಂತೆ ಕೈಮುಗಿದು, ಹಲ್ಲು ಕಿರಿದು, ಎಲ್ಲ ಸುಖ-ಕಷ್ಟ ವಿಚಾರಿಸಿ, ’ಇಲ್ಲಿರುವುದು ಸುಮ್ಮನೆ, ಅಲ್ಲಿ ಡೆಲ್ಲಿಯಲ್ಲಿರುವುದು ಪಾರ್ಲಿಮೆಂಟ್ ಎಂಬ ನಮ್ಮನೆ’, ಎಂದು ನುಡಿದು, ಪೆಪ್ಪರಮಿಂಟ್ ತಿಂದವರಂತೆ ಜೊಲ್ಲು ಸುರಿಸುತ್ತ ಮುಂದಿನ ಮನೆಬಾಗಿಲಿಗೆ ಬಿಜಯಂಗೈಯುವವರು.
’ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ವೋಟರ್ ಪ್ರಭುವೆ’, ಎನ್ನುವ ಇವರ ಆ ವಿನಯ, ಎನ್ನ ಸ್ವಾಮೀ, ರೊಂಬ ಅದ್ಭುತಂ!
ಮತದಾರನ ಮನೆಯೇನಾದರೂ ಒಳಗಿನಿಂದ ಬೋಲ್ಟಿಸಲ್ಪಟ್ಟಿದ್ದರೆ ಆಗ ಈ ಜನಸೇವಕರು, ’ಪೂಜಿಸಲೆಂದೇ ಹೂನಗೆ ತಂದೆ, ದರುಶನ ಕೋರಿ ನಾ ನಿಂದೆ, ತೆರೆಯೋ ಬಾಗಿಲನು’, ಎಂದು ಗಾರ್ದಭರಾಗದಲ್ಲಿ ಹಾಡಿ ಬಾಗಿಲು ತೆರೆಸಿ, ಪಾಂಪ್ಲೆಟ್ ನೀಡಿ, "ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಾವಿವತ್ತು ನಿಮ್ಮ ಕಾಲು ಹಿಡೀಲಿಕ್ಕೆ ಬಂದಿದ್ದೀವಿ, ನಮಗೇ ವೋಟ್ ಹಾಕಿ", ಎಂದು ಮುವ್ವತ್ತೆರಡೂ ಹಲ್ಲುಗಳನ್ನು (ಸದಾನಂದಗೌಡರಂತೆ) ಪ್ರದರ್ಶಿಸುತ್ತಾರೆ. ಇವರ ಈ ವಿನಯ ಅಂಥಿಂಥದೇ? ಚಾಲಾ ಗೊಪ್ಪದಿ!
’ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ’, ಎಂದು ಈ ದೈವಭಕ್ತಶಿಖಾಮಣಿಗಳು ಚುನಾವಣೆಯ ಸಂದರ್ಭದಲ್ಲಿ ಕಂಡಕಂಡ ದೇವರುದಿಂಡಿರಿಗೆಲ್ಲ ಮೊರೆಹೊಗುವ ಪರಿಯನ್ನೆಂತು ಬಣ್ಣಿಸಲಿ!
’ಕಂಡುಕಂಡು ನೀ ಎನ್ನ ಕೈಬಿಡುವರೇ ಪ್ರಭುವೆ, ಉಂಡು ಮಲಗದೆ ಅಂದು ಮತ ನೀಡು ಒಡೆಯಾ’, ಎಂದು ಮತದಾರನನ್ನು ಇವರು ಬೇಡಿಕೊಳ್ಳುವ ಪರಿಯೂ ಅನನ್ಯ!
ನಮ್ಮೀ ರಾಜಕಾರಣಿಗಳು ಅತ್ಯಂತ ಪ್ರಾಮಾಣಿಕರು. ಸತ್ಯಸಂಧರು. ಸಿದ್ಧಾಂತಬದ್ಧರು. ನಿಷ್ಪೃಹರು. ಅತಿ ವಿಧೇಯರು. ಮತ್ತು ಜಾತ್ಯತೀತರು.
ಇವರ ಚುನಾವಣಾ ಭಾಷಣಗಳೇ ನನ್ನ ಈ ಮಾತಿಗೆ ಸಾಕ್ಷಿ.
ವಿರೋಧಿಗಳ ಟೀಕೆಯೇ ತುಂಬಿರುವ ತಮ್ಮ ಭಾಷಣದಲ್ಲಿ ಇವರು, ಒಂದುವೇಳೆ ತಾವು ಆರಿಸಿಬಂದರೆ ತಮ್ಮ ಕ್ಷೇತ್ರಕ್ಕೆ ಏನೇನು ಕೆಲಸಕಾರ್ಯಗಳನ್ನು ಮಾಡಲಿದ್ದೇವೆಂಬುದನ್ನು ಎಂದಿಗೂ ತಿಳಿಸುವುದಿಲ್ಲ. ಏಕೆಂದರೆ, ಆರಿಸಿಬಂದಮೇಲೆ ಇವರು ಕ್ಷೇತ್ರಕ್ಕಾಗಿ ಯಾವ ಕೆಲಸವನ್ನೂ ಮಾಡುವವರಲ್ಲ. ಅಂದಮೇಲೆ ಇವರದು ಅತ್ಯಂತ ಪ್ರಾಮಾಣಿಕ ಭಾಷಣವಲ್ಲವೆ?
ಪ್ರತಿಯೊಂದು ಪಕ್ಷದವರೂ ತಮ್ಮ ವಿರೋಧಿಗಳ ಭ್ರಷ್ಟಾಚಾರವನ್ನೂ ಅನಾಚಾರವನ್ನೂ ಚುನಾವಣಾ ಭಾಷಣದಲ್ಲಿ ಬಣ್ಣಿಸುತ್ತಾರಷ್ಟೆ. ನಾವು ಎಲ್ಲರ ಭಾಷಣಗಳನ್ನೂ ಹಂಡ್ರೆಡ್ ಪರ್ಸೆಂಟ್ ನಂಬುತ್ತೇವೆ. ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆಂಬುದು ಇವರ ಹಾವ-ಭಾವ, ಉದ್ರೇಕ-ಉನ್ಮಾದ, ಕೋಪ-ತಾಪ ಮತ್ತು ಇವರು (ಭಾಷಣಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ) ಪ್ರದರ್ಶಿಸುವ ಕಾಗದ-ಪತ್ರ-ಪತ್ರಿಕೆಗಳು ಇವುಗಳಿಂದ ಗೊತ್ತಾಗುತ್ತದೆ.
ನಮ್ಮೀ ರಾಜಕಾರಣಿಗಳು ಸಿದ್ಧಾಂತಬದ್ಧರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸುವುದು, ಯೇನಕೇನ ಪ್ರಕಾರೇಣ ಗೆಲ್ಲುವುದು ಮತ್ತು ಗೆದ್ದಮೇಲೆ ಮಂತ್ರಿಗಿರಿ/ನಿಗಮ/ಮಂಡಳಿ ಯಾವುದಾದರೊಂದು ಕುರ್ಚಿಯಲ್ಲಿ ರಾರಾಜಿಸುವುದು ಈ ತ್ರಿವಿಧ (ಸ್ವಯಂ)ದಾಸೋಹವೇ ತಮ್ಮ ರಾಜಕೀಯ ಜೀವನದ ಪರಮಗುರಿಯೆಂಬುದು ಇವರ ಸಿದ್ಧಾಂತ. ಈ ಸಿದ್ಧಾಂತಪಾಲನೆಗಾಗಿಯೇ ಇವರು ದಿನಕ್ಕೆರಡುಬಾರಿ ಪಕ್ಷಾಂತರ ಮಾಡುವುದು. ಸಿದ್ಧಾಂತಪಾಲನೆಗಾಗಿ ಎಂಥ ಕಡುಕಷ್ಟ, ಪಾಪ!
ಇನ್ನು, ಇವರ ನಿಷ್ಪೃಹ ಮನೋಭಾವನ್ನು ನಾನೆಂತು ಬಣ್ಣಿಸಲಿ! ಅದೆಷ್ಟು ನಿಷ್ಪೃಹರಾಗಿ, ಅರ್ಥಾತ್ ನಿಃಸ್ವಾರ್ಥದಿಂದ ಇವರು ಜನಸೇವೆ ಮಾಡುತ್ತಾರೆಂದರೆ, ಯಾವ ವಿಶೇಷ ಆಸ್ತಿಪಾಸ್ತಿಗಳನ್ನೂ ಇವರು ಗಳಿಸಿರುವುದಿಲ್ಲ. ಇವರ ಪೈಕಿ ಎಷ್ಟೋ ಮಂದಿಗೆ ಮನೆಯೂ ಇರುವುದಿಲ್ಲ, ವಾಹನವೂ ಇರುವುದಿಲ್ಲ! ಏನೋ, ಇವರ ಹೆಂಡತಿ ಟೈಲರಿಂಗ್ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ. ಗಂಡಂದಿರನ್ನು ಈ ಹೆಂಡತಿಯರೇ ಸಾಕುತ್ತಾರೆ.
ಇನ್ನು, ಈ ಜನಸೇವಕರ ವಿಧೇಯತೆಯೆಂದರೆ ಅಂಥಿಂಥದೇ? ಹೈಕಮಾಂಡು ತನ್ನ ಕಾಲಲ್ಲಿ ತೋರಿಸಿದ್ದನ್ನು ಇವರು ’ಕೈ’ಯಲ್ಲಿ ಎತ್ತಿಕೊಂಡು ತಲೆಯಮೇಲೆ ಇಟ್ಟುಕೊಳ್ಳುತ್ತಾರೆ! ಇಂಥ ವಿಧೇಯತೆಯು ವಿಶ್ವದ ಇನ್ನಾವ ರಾಷ್ಟ್ರದ ರಾಜಕಾರಣಿಗಳಲ್ಲೂ ಇಲ್ಲ ಬಿಡಿ.
ವಯಸ್ಸು ೭೬ರ ದೇವೇಗೌಡರಾಗಿರಲಿ, ೮೨ರ ಅಡ್ವಾಣಿಯಾಗಿರಲಿ, ೮೩ರ ಬಾಳ್ ಠಾಕ್ರೆ ಆಗಿರಲಿ, ೮೫ರ ಕರುಣಾನಿಧಿ ಆಗಿರಲಿ, ೯೫ರ ಜ್ಯೋತಿ ಬಸು ಆಗಿರಲಿ, ಸೋನಿಯಾ, ರಾಹುಲ್,....ಕೊನೆಗೆ ಎಂಟು ವರ್ಷದ ರೈಹನ್ ವಡ್ರಾ ಅಥವಾ ಆರು ವರ್ಷದ ಮಿರಯಾ ವಡ್ರಾನೇ ಆಗಿರಲಿ, ಹೈಕಮಾಂಡ್ ಎಂದರೆ ಹೈಯೇ. ಪಕ್ಷದ ಎಲ್ಲರೂ ಆ ಹೈಕಮಾಂಡ್‌ನಡಿ ಲೋ! ವೆರಿ ಲೋ!! ವೆರಿ ವೆರಿ ಲೋ!!! ಎಂಥ ವಿಧೇಯತೆ!
ನಮ್ಮೀ ರಾಜಕಾರಣಿಗಳ ಜಾತ್ಯತೀತ ಮನೋಭಾವವಂತೂ ಇಡೀ ವಿಶ್ವಕ್ಕೇ ಮಾದರಿ! ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಎಂಬ ಭೇದಭಾವವಿಲ್ಲದೆ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಮತೀಯರ ದೇಗುಲ-ಪ್ರಾರ್ಥನಾಸ್ಥಳಗಳಿಗೂ (ಆಯಾ ಉಡುಪುಗಳಲ್ಲಿ) ಭೇಟಿಯಿತ್ತು, ಕೈಮುಗಿದು-ಅಡ್ಡಬಿದ್ದು ಕೃತಾರ್ಥರಾಗುವ ಇವರ ಮತಾತೀತ ಭಕ್ತಿಭಾವವಾಗಲೀ, ಎಲ್ಲ ಜಾತಿ-ಮತಗಳವರ ಮನೆಬಾಗಿಲಿಗೂ ಹೋಗಿ ಹಲ್ಕಿರಿದು ಮತ ಅಂಗಲಾಚುವ ಇವರ ಜಾತ್ಯತೀತ ಮನೋಭಾವವಾಗಲೀ ವರ್ಣನಾತೀತ!
’ಹನುಮನ ಮತವೇ ಹರಿಮತವೋ. ಹರಿಯ ಮತವೆ ಹನುಮನ ಮತವೊ’, ಎಂಬ ದಾಸವಾಣಿಯೊಲ್ ಇವರು, ’ಪ್ರಜೆಗಳ ಮತವೇ ನಮ್ಮ್ ಹಿತವೋ. ನಮ್ಮ ಮತದಾಟ ಪ್ಲಾನ್‌ಯುತವೊ’, ಎಂದು ಮಸಾಲ್ದೋಸವಾಣಿಯಂ ಹರಿಬಿಡುವರು.
ಚುನಾವಣೆಯಾದಮೇಲೆ, ’ನೀನ್ಯಾಕೋ ನಿನ್ನ ಹಂಗ್ಯಾಕೋ’, ಅನ್ನುವ (ಪುರಂದರದಾಸಸಮಾನ) ಧುರಂಧರರಿವರು!
ಇವರಲ್ಲಿ ಕೆಲವರು ’ಧರ್ಮವೆ ಜಯವೆಂಬ ದಿವ್ಯಮಂತ್ರ’ವನ್ನು ಜಪಿಸಿದರೆ, ಉಳಿದವರು ’ಜಯವೆ ಧರ್ಮವೆಂಬ ದಿವ್ಯಮಂತ್ರ’ವನ್ನು ಜಪಿಸುವವರು.
’ಮಣ್ಣಿಂದ ಕಾಯ ಮಣ್ಣಿಂದ’, ಎನ್ನುತ್ತ, ಮಣ್ಣನ್ನು ಗಳಿಸಲೆಂದೇ ಎಲೆಕ್ಷನ್ನಿಗೆ ನಿಲ್ಲುವ ’ಮಣ್ಣಿನ ಮಕ್ಕಳು’ ಇವರು.
’ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಲ್ಲ’, ಎಂಬ ದಾಸವಾಣಿಯ ಮರ್ಮವನ್ನರಿತೇ ಇವರು ಆದಷ್ಟು ಬೇಗನೆ ’ಅಷ್ಟೈಶ್ವರ್ಯಭಾಗ್ಯ’ಶಾಲಿಗಳಾಗಿ ಆ ಭಾಗ್ಯವನ್ನು ಸ್ಥಿರವಾಗಿ ಸ್ವಿಸ್ ಬ್ಯಾಂಕಿನಲ್ಲಿಡಲು ಹೊರಟವರು.
’ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ’, ಎಂಬಂತಾಗಬಾರದೆಂದು ಇವರು ನರ-ಹರಿ ಕೊಡುವುದನ್ನೆಲ್ಲ ಉಣ್ಣುತ್ತ ಕೂರುವವರು.
’ಊಟಕ್ಕೆ ಬಂದೆವು ನಾವು, ನಿಮ್ಮ ಆಟಪಾಠವ ಬಿಟ್ಟು ನಮಗೆ ನೀಡ್ರಯ್ಯಾ’, ಎಂದು ಕೇಳಿ ನೀಡಿಸಿಕೊಂಡು ಉಣ್ಣುವವರು.
ಇಂಥ ಪ್ರಾಮಾಣಿಕ, ಸತ್ಯಸಂಧ, ಸಿದ್ಧಾಂತಬದ್ಧ, ನಿಷ್ಪೃಹ, ದೈವಭಕ್ತ, ಅತಿ ವಿಧೇಯ ಮತ್ತು ಜಾತ್ಯತೀತ ರಾಜಕಾರಣಿಗಳನ್ನು ಹೊಂದಿರುವ ಭಾರತೀಯರಾದ ನಾವೇ ಧನ್ಯರು!
ಇಂಥ ಶ್ರೇಷ್ಠರೂ ರೂಢಿಯೊಳಗುತ್ತಮರೂ ಆದ ರಾಜಕಾರಣಿಗಳ ಬಗ್ಗೆ, ಇವರನ್ನು ಆರಿಸಿ ಕಳಿಸುವ ಮತದಾರ ಬಾಂಧವರ ಬಗ್ಗೆ ಮತ್ತು ಇವರ ಅದ್ಭುತ ಆಳ್ವಿಕೆಗೆ ಒಳಪಟ್ಟಿರುವ ಈ ನಾಡಿನ ಬಗ್ಗೆ ಬರೆಯಲು ಇನ್ನು ನನ್ನಲ್ಲಿ ಪದಗಳೇ ಇಲ್ಲ!
ಲೇಖನಸನ್ಯಾಸ ಸ್ವೀಕರಿಸಿ ಕಾಡಿಗೆ ಹೋಗಿ ಕಂದಮೂಲ ತಿಂದುಕೊಂಡಿರುವುದೇ ನನಗಿನ್ನು ಸೂಕ್ತವೆನ್ನಿಸುತ್ತದೆ.
ಅಂತೆಯೇ ಮಾಡುತ್ತೇನೆ.

ಗುರುವಾರ, ಮಾರ್ಚ್ 26, 2009
ಸ್ವರ್ಗ-ನರಕದ ಸುದ್ದಿ
ಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾ ಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. ಪತ್ರಕರ್ತರು ಖಾಲೀಹಾತ್ ಬರಬೇಕಿತ್ತು. ಪೆನ್ನು ಮತ್ತು ಹಾಳೆಗಳನ್ನು ಅಲ್ಲಿಯೇ ಒದಗಿಸುವ ವ್ಯವಸ್ಥೆಯಾಗಿತ್ತು. ದೃಶ್ಯಮಾಧ್ಯಮದವರೂ ಕೂಡ ಈ ನಿಯಮಕ್ಕೆ ಒಳಪಡಬೇಕಾಗಿತ್ತು. ಆ ಪೆನ್ನು-ಹಾಳೆಗಳೋ, ಭೂಲೋಕದಿಂದ ತರಿಸಿದವೇ ಆಗಿದ್ದವು!
ಸ್ವರ್ಗದ ಪತ್ರಿಕಾಗೋಷ್ಠಿಗೆ ಹೋಗಿಬರಲು ಪತ್ರಕರ್ತರ ನೂಕುನುಗ್ಗಲು. ನರಕಕ್ಕೆ ಹೋಗಿಬರಲು ಯಾರೂ ತಯಾರಿಲ್ಲ. ಕೊನೆಗೆ ಜ್ಯೂನಿಯರ್ ಪತ್ರಕರ್ತ-ಕರ್ತೆಯರನ್ನು ನರಕಕ್ಕೆ ಅಟ್ಟಲಾಯಿತು.
ನರಕದ ಪತ್ರಿಕಾಗೋಷ್ಠಿಯಲ್ಲಿ ಯಮನ ವಕ್ತಾರನು, ಭೂಲೋಕದ ರಾಜಕಾರಣಿಗಳಿಗಾಗಿಯೇ ಸ್ಥಾಪಿಸಲಾಗುವ ಸದರಿ ವಿಶೇಷ ಘಟಕದ ಬಗ್ಗೆ ಈ ರೀತಿ ವಿವರಿಸಿದನು:
’ರಾಜಕಾರಣಿಗಳು ತಾವು ಮಾಡಿದ ಪಾಪಗಳಿಗೆ ಭೂಲೋಕದಲ್ಲಿ ಯಾವುದೇ ಶಿಕ್ಷೆಯನ್ನು ಅನುಭವಿಸದೇ ಹಾಯಾಗಿ ಮಜಾಮಾಡಿಕೊಂಡಿದ್ದು ಕೊನೆಗೆ ನರಕಕ್ಕೆ ಬರುತ್ತರಾದ್ದರಿಂದ ನರಕದಲ್ಲಿ ಅವರಿಗೆ ನಾನಾ ಬಗೆಯ ಶಿಕ್ಷೆಗಳನ್ನು ಕೊಡುವ ಅವಶ್ಯಕತೆಯಿದೆ. ಭೂಲೋಕದಿಂದ ಬರುವ ರಾಜಕಾರಣಿಗಳ ಸಂಖ್ಯೆಯೂ ಬರಬರುತ್ತ ಏರತೊಡಗಿದೆ. ಆದ್ದರಿಂದ ಅವರಿಗಾಗಿಯೇ ವಿಶೇಷ ಘಟಕವನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಸಲದ ಭಾರತೀಯ ಯುಗಾದಿಯ ಮುನ್ನಾದಿನವಾದ ಅಮಾವಾಸ್ಯೆಯ ರಾತ್ರಿ ಹನ್ನೆರಡಕ್ಕೆ ಘಟಕದ ಉದ್ಘಾಟನೆ’, ಎಂದು ನರಕದ ವಕ್ತಾರನು ಪತ್ರಕರ್ತರಿಗೆ ವಿವರಿಸಿದನು.
’ಭೂಲೋಕದಲ್ಲಿ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಇಲ್ಲಿ ಯಾವ ರೀತಿಯ ಶಿಕ್ಷೆಗಳನ್ನು ಕೊಡುತ್ತೀರಿ?’ ಎಂದು ಇಂಗ್ಲಿಷ್ ದೃಶ್ಯಮಾಧ್ಯಮವೊಂದರ ಪ್ರತಿನಿಧಿ ಕೇಳಿದಳು. (ಅವಳ ಹೆಸರು ಬುರ್ಖಾ ದತ್.)
’ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಯಾವ ಶಿಕ್ಷೆಯನ್ನೂ ಇಲ್ಲಿ ನೀಡಲಾಗುವುದಿಲ್ಲ. ಏಕೆಂದರೆ ನೀತಿಸಂಹಿತೆ ಉಲ್ಲಂಘನೆಗಾಗಿ ಅವರೆಲ್ಲ ಭೂಲೋಕದಲ್ಲೇ ಚುನಾವಣಾ ಆಯೋಗದ ಕೈಲಿ ತಕ್ಕ ಶಿಕ್ಷೆ ಅನುಭವಿಸಿಯೇ ಬಂದಿರುತ್ತಾರೆ. ಆದ್ದರಿಂದ ಅದಕ್ಕಾಗಿ ಇಲ್ಲಿ ಪುನಃ ಶಿಕ್ಷೆ ಕೊಡುವ ಅಗತ್ಯವಿಲ್ಲ’, ಎಂದು ನರಕದ ವಕ್ತಾರನು ಉತ್ತರಿದನು.
ಅತ್ತ ಸ್ವರ್ಗದ ಪತ್ರಿಕಾಗೋಷ್ಠಿಯಲ್ಲಿ ಸ್ವರ್ಗದ ವಕ್ತಾರನು ಹೇಳಿದ್ದಿಷ್ಟು:
’ಈ ಸಲದ ಭಾರತೀಯ ಯುಗಾದಿಯ ಆರಂಭದ ಶುಭಗಳಿಗೆಯಾದ ರಾತ್ರಿ ಹನ್ನೆರಡು ಗಂಟೆ, ಒಂದು ಸೆಕೆಂಡಿಗೆ ನಮ್ಮ ವಿಶೇಷ ಘಟಕದ ಉದ್ಘಾಟನೆ. ತಮ್ಮ ನ್ಯಾಯಬದ್ಧ ಬೇಡಿಕೆಗಳನ್ನು ಹಿಡಿದುಕೊಂಡು ಸರ್ಕಾರಿ ಕಚೇರಿಗಳಿಗೆ ಅಥವಾ/ಮತ್ತು ರಾಜಕಾರಣಿಗಳ ಬಳಿಗೆ ಓಡಾಡಿ ಓಡಾಡಿ ಓಡಾಡಿ ಬೇಸತ್ತು ಸತ್ತು ಇಲ್ಲಿಗೆ ಬರುವ ಬಡಪಾಯಿಗಳಿಗೆ ವಿಶೇಷ ಸುಖ-ಸೌಲತ್ತುಗಳನ್ನು ನೀಡುವ ಮೂಲಕ ನ್ಯಾಯ ದೊರಕಿಸಿಕೊಡಲಿಕ್ಕಾಗಿ ಈ ಘಟಕದ ಸ್ಥಾಪನೆ.’
ಆಗ ವರದಾ ನಾಯಕ್ ಎಂಬ ಟಿವಿ ಪತ್ರಕರ್ತೆ ಬಾಲಕಿಯು ಈ ರೀತಿ ಪ್ರಶ್ನೆ ಕೇಳಿದಳು:
’ಮುಖ್ಯಮಂತ್ರಿಗಳ ಜನತಾದರ್ಶನದ ಬಲೆಗೆ ಬಿದ್ದು ಒದ್ದಾಡಿದ ಮಿಕಗಳಿಗೇನಾದರೂ ವಿಶೇಷ ಸುಖ-ಸೌಲತ್ತುಗಳಿವೆಯೆ?’
ವಕ್ತಾರನ ಉತ್ತರ:
’ಖಂಡಿತ ಖಂಡಿತ. ಇಲ್ಲದಿದ್ದರೆ ಹೇಗೆ?’
ಮೇಲಿನ ಎರಡೂ ಪತ್ರಿಕಾಗೋಷ್ಠಿಗಳಿಗೆ (ಊಹ್ಞೂಂ, ಒಂದು ಮೇಲಿನ ಮತ್ತು ಇನ್ನೊಂದು ಕೆಳಗಿನ ಪತ್ರಿಕಾಗೋಷ್ಠಿಗೆ) ಹೋಗಿಬಂದ ಪತ್ರಕರ್ತರನ್ನು ಗುಳಿಗೆಪ್ಪನವರು ವಿಚಾರಿಸಿದಾಗ ಒಂದು ಆಶ್ಚರ್ಯಕರ ಸಂಗತಿ ಹೊರಬಿತ್ತು!
ಸದಾಕಾಲ ಮೃಷ್ಟಾನ್ನಭೋಜನವನ್ನೇ ಉಂಡು ಉಂಡು ನಾಲಗೆ ಜಡ್ಡು ಹಿಡಿಸಿಕೊಂಡಿದ್ದ ಸ್ವರ್ಗದ ವ್ಯವಸ್ಥಾಪಕರು ಇದೇ ಅವಕಾಶವೆಂದು ಪತ್ರಿಕಾಗೋಷ್ಠಿಯಲ್ಲಿ ಸಖ್ಖತ್ ಖಾರದ ಅಡುಗೆ (ಅಂದರೆ ಎನ್.ವಿ. ಅಲ್ಲ) ಮಾಡಿಸಿದ್ದರಂತೆ! ’ಯಮ’ಖಾರವಂತೆ! ಅದೇವೇಳೆ ನರಕದಲ್ಲಿ, ಇದೇ ಚಾನ್ಸ್ ಎಂದು ಅಲ್ಲಿನ ವ್ಯವಸ್ಥಾಪಕರು ಬಗೆಬಗೆಯ ಭಕ್ಷ್ಯಭೋಜ್ಯಗಳ ಭೂರಿಭೋಜನದ ಏರ್ಪಾಟು ಮಾಡಿದ್ದರಂತೆ!
ಇನ್ನೊಂದು ವಿಷಯವೆಂದರೆ, ಬಹುಪಾಲು ನಟನಟಿಯರು, ಜನನಾಯಕರು, ರೂಪದರ್ಶಿಯರು ಇತ್ಯಾದಿಯವರೆಲ್ಲ ನರಕದಲ್ಲೇ ಇದ್ದರಂತೆ! ಪತ್ರಕರ್ತರಿಗೆ ಅವರನ್ನೆಲ್ಲ ಕಾಣುವ ಅವಕಾಶ ದೊರಕಿತಂತೆ. ಸ್ವರ್ಗದಲ್ಲೋ, ಅಪ್ಪಟ ಗಾಂಧಿವಾದಿಗಳು, ನಿಜಸನ್ಯಾಸಿಗಳು, ಮುಗ್ಧರು, ಭೂಲೋಕದಲ್ಲಿ ನಾನಾ ಬಗೆಯ ಶೋಷಣೆಗೊಳಗಾದವರು ಇಂಥವರೇ ತುಂಬಿದ್ದರಂತೆ.
ಸ್ವರ್ಗಕ್ಕೆ ಹೋಗಿಬಂದ ಪತ್ರಕರ್ತರೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ!

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)