ಪಾದರಕ್ಷೆ ಪರವಾಗಿ ಮೊಕದ್ದಮೆ!
-------------------------
ರಾಜಕಾರಣಿಗಳತ್ತ ಎಸೆಯುವ ಮೂಲಕ ಪಾದರಕ್ಷೆಗಳಿಗೆ ಅವಮಾನ ಎಸಗಲಾಗುತ್ತಿದೆಯೆಂದು ಬೆಂಗಳೂರಿನ ವಕೀಲರೊಬ್ಬರು ಕೋರ್ಟಿನ ಮೊರೆಹೊಕ್ಕಿದ್ದಾರೆ! ಚುನಾವಣೆ ವೇಳೆ ದೇಶದ ನಾನಾ ಕಡೆಗಳಲ್ಲಿ ರಾಜಕಾರಣಿಗಳತ್ತ ಶೂ ಹಾಗೂ ಚಪ್ಪಲಿಗಳನ್ನು ಎಸೆದವರೆಲ್ಲರ ವಿರುದ್ಧ ಸದರಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ (ಪಾದರಕ್ಷೆ ಪರವಾಗಿ) ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪಾದರಕ್ಷೆಗಳಿಗೆ ಅವಮಾನವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯವು ಕೇಸ್ ದಾಖಲಿಸಿಕೊಂಡು ಚಪ್ಪಲಿ-ಶೂ ಎಸೆದವರಿಗೆಲ್ಲ ಶೂಕಾಸ್ ನೋಟೀಸ್ ಜಾರಿಮಾಡಿದೆ.
***
ರಾಹುಲ್‌ಗೆ ಇಂದಿರಾ ಪ್ರಶಸ್ತಿ
----------------------
ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಯನ್ನು ರಾಹುಲ್ ಗಾಂಧಿಗೆ ನೀಡಲಾಗುವುದು. ಚುನಾವಣಾ ವೇಳೆ ರಾಹುಲ್ ಗಾಂಧಿಯು ವಿಮಾನ, ಹೆಲಿಕಾಪ್ಟರ್ ಮತ್ತು ಕಾರಿನಲ್ಲಿ ದೇಶದ ಕೆಲವು ಸ್ಥಳಗಳಿಗೆ ಭೇಟಿಕೊಟ್ಟು, ಬಡಬಗ್ಗರೊಡನೆ ಕ್ಯಾಮೆರಾಗಳಿಗೆ ಪೋಸು ಕೊಟ್ಟು, ಯುವಕ-ಯುವತಿಯರ ’ಕೈ’ಕುಲುಕಿ, ವೇದಿಕೆಯಿಂದ ಭಾವಾವೇಶಭರಿತ ಭಾಷಣ ಮಾಡಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಕೊಡಲಾಗುವುದು. ಈ ಬಗ್ಗೆ ಪ್ರಕಟಣೆ ಹೊರಬೀಳುತ್ತಲೇ ರಾಹುಲ್‌ನನ್ನು ಮುತ್ತಿಕೊಂಡ ಪತ್ರಕರ್ತೆಯರೊಡನೆ ಮಾತನಾಡುತ್ತ ರಾಹುಲ್, ’ಈ ಪ್ರಶಸ್ತಿಗೆ ನನಗಿಂತ ನನ್ನ ಅಕ್ಕ ಹೆಚ್ಚು ಅರ್ಹಳು. ಗೀತೋಪದೇಶೋಪದೇಶದ ಮೂಲಕ ರಾಷ್ಟ್ರಾದ್ಯಂತ ಭಾವೈಕ್ಯತೆಯ ಮಿಂಚಿನ ಸಂಚಾರ ಉಂಟುಮಾಡಿದ್ದಾಳೆ ಆಕೆ’, ಎಂದಿದ್ದಾರೆ.
ರಾಹುಲ್‌ನ ಈ ವಿನಯಪೂರ್ಣ ಮಾತಿಗಾಗಿ ಆತನಿಗೆ ಈ ಸಲದ ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನೂ ಕೊಡತಕ್ಕದ್ದೆಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
***
ವರುಣ್‌ಗೆ ಶೌರ್ಯ ಪ್ರಶಸ್ತಿ
---------------------
ಕೈ ಕತ್ತರಿಸುತ್ತೇನೆಂದು ಹೇಳುವ ಮೂಲಕ ಅಪ್ರತಿಮ ಶೌರ್ಯ ಮೆರೆದಿದ್ದಕ್ಕಾಗಿ ವರುಣ್ ಗಾಂಧಿಗೆ ಈ ಸಲದ ’ಮಹಾಕಮಲಚಕ್ರ’ ಶೌರ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆದರೆ, ತಾನು ಹೇಳಿದ್ದು ನಿಜವಾದ ಕೈಗಳ ಬಗ್ಗೆ ಅಲ್ಲ, ಕಾಂಗ್ರೆಸ್‌ನ ’ಕೈ’ ಚಿಹ್ನೆಯ ಬಗ್ಗೆ, ಎಂದು ಸ್ಪಷ್ಟನೆ ನೀಡಿ ವರುಣ್ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
***
ಕೋಟಿ ರಾಮು ಹೊಸ ಚಿತ್ರ
---------------------
’ಕಿರಣ್ ಬೇಡಿ’ ಚಿತ್ರದ ಮೂಲಕ ಪತ್ನಿ ಮಾಲಾಶ್ರೀಗೆ ಬೆಳ್ಳಿ ತೆರೆಮೇಲೆ ಮರುಹುಟ್ಟು ನೀಡಿರುವ ನಿರ್ಮಾಪಕ ಕೋಟಿ ರಾಮು ಅವರು ತಮ್ಮ ಮುಂದಿನ ಚಿತ್ರಕ್ಕಾಗಲೇ ನಾಮಕರಣ ಮಾಡಿದ್ದಾರೆ. "ಅತ್ತೆಗಿಂತ ಒಂದು ’ಕೈ’ ಮಿಗಿಲಾದ ಸೊಸೆ" ಎಂಬ ಇಷ್ಟುದ್ದದ ಹೆಸರು ಹೊತ್ತು ನಿರ್ಮಾಣವಾಗಲಿರುವ ಆ ಚಿತ್ರದ ವಿಶೇಷವೆಂದರೆ ಅದರಲ್ಲಿ ಅತ್ತೆಯ ಪಾತ್ರವೇ ಇಲ್ಲ! ಇಂದಿರಾಗಾಂಧಿಯನ್ನು ಹೋಲುವ ಭಾವಚಿತ್ರಗಳಿಂದಲೇ ಅತ್ತೆಯ ಪಾತ್ರವನ್ನು ಬಿಂಬಿಸಲಾಗುವುದು. ಸೊಸೆಯ ಪಾತ್ರದ ಮೂಲಕ ಸಂಸದೆ ತೇಜಸ್ವಿನಿ ಗೌಡ ಅವರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
’ಕಿರಣ್ ಬೇಡಿ’ ಯಶಸ್ಸಿನಿಂದ ಸ್ಫೂರ್ತಿಹೊಂದಿ ನೀವಿನ್ನು ’ಸಾಂಗ್ಲಿಯಾನಾ ಭಾಗ-೪’ ತೆಗೆಯುವಿರಾ ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ರಾಮು ಕೆರಳಿ ಕೆಂಡಾಮಂಡಲ ಆದರೆಂದು ವರದಿಯಾಗಿದೆ.
***
ನಟರಾಜನಾದ ಶಂಕರ
------------------
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರು ಭರತನಾಟ್ಯ ಪ್ರವೀಣರು ಎಂಬ ಸ್ವಾರಸ್ಯಕರ ಸಂಗತಿ ಬಯಲಾಗಿದೆ. ಚುನಾವಣೆ ವೇಳೆ ಪತ್ರಿಕಾಗೋಷ್ಠಿಗಳಲ್ಲಿ ಅವರ ಹಾವಭಾವ ಕಂಡು ಅನುಮಾನಗೊಂಡ ಪತ್ರಕರ್ತನೊಬ್ಬ ವಿದ್ಯಾಶಂಕರ್ ಅವರನ್ನು ವಿಚಾರಿಸಿದಾಗ ಅವರೇ ಈ ಸಂಗತಿಯನ್ನು ಹೊರಗೆಡಹಿದ್ದಾರೆ. ಹೈಸ್ಕೂಲ್ ದಿನಗಳಿಂದಲೂ ತಾನು ಭರತನಾಟ್ಯ ಅಭ್ಯಾಸ ಮಾಡಿದುದಾಗಿಯೂ, ವಿದ್ಯಾಭ್ಯಾಸ, ಐಎಎಸ್ ತಯಾರಿ ಮತ್ತು ಉನ್ನತ ಅಧಿಕಾರಿಯಾಗಿ ಆಡಳಿತ ನಿರ್ವಹಣೆ ಈ ಒತ್ತಡಗಳ ದೆಸೆಯಿಂದಾಗಿ ತನಗೆ ನೃತ್ಯ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿಲ್ಲವೆಂದೂ, ಇಷ್ಟು ವರ್ಷ ತಾನು ಅದುಮಿಟ್ಟುಕೊಂಡ ಆ ಅಭಿಲಾಷೆಯು ಈಗ ಪತ್ರಿಕಾಗೋಷ್ಠಿಗಳಲ್ಲಿ ಆಂಗಿಕ ಅಭಿನಯ ಮತ್ತು ಹಾವಭಾವಗಳ ಮೂಲಕ ಪ್ರಕಟಗೊಳ್ಳುತ್ತಿದೆಯೆಂದೂ ವಿದ್ಯಾಶಂಕರ್ ಅವರು ಹೇಳಿದ್ದಾರೆ.
ನೌಕರಿಯಿಂದ ನಿವೃತ್ತಿ ಹೊಂದಿದ ನಂತರ ತಾವು ಭರತನಾಟ್ಯ ಶಾಲೆಯೊಂದನ್ನು ತೆರೆಯಲಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
***
’ಕಿಸ್ಬಾಯಿ ರೋಗ’ ಮಾಯ!
----------------------
’ಹಂದಿ ರೋಗ’ಕ್ಕಿಂತ ವ್ಯಾಪಕವಾಗಿ ದೇಶಾದ್ಯಂತ ಹರಡಿದ್ದ ’ಕಿಸ್ಬಾಯಿ ರೋಗ’ವು ಈಗ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆಯೆಂದು ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ರೋಗವು ಪುಢಾರಿಗಳಿಗೆ ಮಾತ್ರ ತಗುಲಿತ್ತು.
’ಈ ರೋಗಪೀಡಿತರು ಸದಾಕಾಲ ಬಾಯಿ ಕಿಸಿದುಕೊಂಡೇ ಇರುತ್ತಾರೆ, ಮತದಾನ ಮುಗಿದ ತಕ್ಷಣ ಅವರ ಈ ಕಾಯಿಲೆಯು ತಂತಾನೇ ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತದೆ’, ಎಂಬ ಭಾವೈಮಂಡಳಿಯ ಹೇಳಿಕೆಯನುಸಾರ ಇದೀಗ ಮತದಾನ ಮುಗಿದ ಕ್ಷೇತ್ರಗಳಲ್ಲಿ ಈ ರೋಗವು ಹೇಳಹೆಸರಿಲ್ಲದಂತೆ ಮಾಯವಾಗಿದೆ!
ದೇಶದಲ್ಲಿ ಎಲ್ಲೋ ಕೆಲವರಿಗೆ ಮಾತ್ರ ಕಿಸ್ಬಾಯಿ ರೋಗವು ಸದಾಕಾಲ ಇರುತ್ತದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಸದಾನಂದ ಗೌಡರು ಅಂಥವರಲ್ಲೊಬ್ಬರು. ರೋಗಿಗಳಿಗೆ ಈ ಕಾಯಿಲೆಯಿಂದ ಏನೂ ನಷ್ಟವಿಲ್ಲ, ಬದಲಾಗಿ ಲಾಭವಾಗುವ ಸಾಧ್ಯತೆ ಇದೆ! ಆದರೆ, ಕಿಸ್ಬಾಯಿ ರೋಗಿಗಳ ಎದುರಿರುವವರು ಮಾತ್ರ ಮೋಸವೆಂಬ ಹಾನಿಗೊಳಗಾಗುವ ಸಂಭವವಿದೆ ಎಂದು ವೈದ್ಯಕೀಯ ಮಂಡಳಿಯು ಎಚ್ಚರಿಸಿದೆ.
***
ಗೌಡರ ಮುದ್ದೆ
-----------
ಹಿಂದಿ ಭಾಷೆಯ ಅಜ್ಞಾನದಿಂದಾಗಿ ದೇವೇಗೌಡರು ಮುಜುಗರಕ್ಕೊಳಗಾದ ಪ್ರಕರಣ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ತೃತೀಯ ರಂಗದ ಚುನವಣಾ ಪ್ರಚಾರಕ್ಕಾಗಿ ಈಚೆಗೆ ಯು.ಪಿ.ಗೆ ಹೋಗಿದ್ದ ಗೌಡರು ಅಲ್ಲಿನ ಗ್ರಾಮವೊಂದರ ಸಭೆಯಲ್ಲಿ ಭಾಗವಹಿಸಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷನು ತನ್ನ ಭಾಷಣದಲ್ಲಿ, ’ಹಮಾರೇ ಸಾಮ್ನೆ ಅತ್ಯಂತ್ ಪ್ರಮುಖ್ ಮುದ್ದೆ ಹೈ..’ ಎಂದಾಕ್ಷಣ ದೇವೇಗೌಡರು, ’ಹೌದಾ? ಎಲ್ಲದೆ, ತತ್ತಾ’, ಎಂದು ಕೈಚಾಚಿದರೆಂದು ವರದಿಯಾಗಿದೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಆ ಹಳ್ಳಿಗನು ಒಂದು ಕ್ಷಣ ಏನೂ ತೋಚದೇ ಸುಮ್ಮನೆ ನಿಂತುಬಿಟ್ಟ. ಕೂಡಲೇ ಮಧ್ಯಪ್ರವೇಶಿಸಿದ ವೈ.ಎಸ್.ವಿ.ದತ್ತ ಉಭಯರಿಗೂ ಅರ್ಥ ವಿವರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಭೆಯ ನಂತರ ತಮ್ಮತಮ್ಮೊಳಗೇ ದೇವೇಗೌಡರನ್ನು ಗೇಲಿಮಾಡಿ ಮಾತಾಡಿಕೊಳ್ಳುತ್ತಿದ್ದ ಪತ್ರಕರ್ತರತ್ತ ಧಾವಿಸಿದ ದತ್ತ, ’ಹಿಂದಿ ಭಾಷಿಕರಾದ ನೀವೇನು ಬಹುಭಾಷಾಪಂಡಿತರೇ? ಗೌಡ ಅನ್ನುವ ಬದಲು ನಿಮ್ಮಲ್ಲನೇಕರು ಘೋಡಾ ಅನ್ನುತ್ತೀರಲ್ಲ!’ ಎಂದು ದಬಾಯಿಸಿ ಪತ್ರಕರ್ತರ ಬಾಯಿಮುಚ್ಚಿಸಿದ್ದಾಗಿ ವರದಿಯಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ನಿಮ್ಮ ಪುನರಾಗಮನ ಬಹಳ ಖುಷಿ ಕೊಟ್ಟಿದೆ. ಗುಳಿಗೆಗಳು ತು೦ಬಾ ಚೆನ್ನಾಗಿವೆ. ಆದರೆ ಒ೦ದೇ ದಿನ ಆರು ಗುಳಿಗೆ ಕೊಟ್ಟಿದ್ದಿರಲ್ಲ ವೈದ್ಯರೇ, ಎಲ್ಲ ಒ೦ದೇ ದಿನ ನು೦ಗಿದರೆ ಹೇಗೆ ? ರೋಗ ಬೇಗ ವಾಸಿಯಾದೀತೆ ?
ಪ್ರತ್ಯುತ್ತರಅಳಿಸಿಪರಾಂಜಪೆಯವರೇ,
ಪ್ರತ್ಯುತ್ತರಅಳಿಸಿಹೌದಲ್ವೆ!
ಡಬ್ಬಾ ಡಾಕ್ಟ್ರು!
‘ಘೋಡಾ’ರಿಗೆ ಭಾರೀ ಮುದ್ದೆ ತಿನಿಸಿ ಬಿಟ್ಟೀರೆಪಾ!
ಪ್ರತ್ಯುತ್ತರಅಳಿಸಿ’ರಾಗಿ ಮುದ್ದೆ ಗೊತ್ತು, ಭಾರೀ ಮುದ್ದೆ ಏನದು, ಒಂದ್ ತತ್ತಾ’, ಅಂದಾರಪೋ ಗೌಡ್ರು!
ಪ್ರತ್ಯುತ್ತರಅಳಿಸಿ