’ಮೂರ್ಖರ ದಿನ’ದ ಆಚರಣೆಯಲ್ಲಿ ನಾವು ಹಾಸ್ಯಕ್ಕೂ ಮೂರ್ಖತನಕ್ಕೂ ಸಂಬಂಧ ಕಲ್ಪಿಸುತ್ತೇವೆ! ಹೀಗೆ ಸಂಬಂಧ ಕಲ್ಪಿಸುವುದೇ ಒಂದು ರೀತಿಯಲ್ಲಿ ಮೂರ್ಖತನ!
ಹಾಸ್ಯವೆಂಬುದು ಜಾಣರಿಂದ, ಜಾಣರಿಗಾಗಿ ಇರುವ ಜಾಣತನ. ’ಮೂರ್ಖರ ದಿನ’ದಂದು ಯಾರನ್ನಾದರೂ ’ಮೂರ್ಖ’ರನ್ನಾಗಿಸಲು ನಾವು ಜಾಣತನವನ್ನೇನೋ ಉಪಯೋಗಿಸಬೇಕು, ಸರಿಯೇ, ಆದರೆ ಆ ಜಾಣತನವು ’ಮೋಸ’ವೇ ಹೊರತು ’ಹಾಸ್ಯ’ವಲ್ಲ. ಹಲವು ಸಲ ಅದು ಅಪಹಾಸ್ಯ!
’ಮೂರ್ಖರ ದಿನ’ದ ಆಸುಪಾಸಿನಲ್ಲಿ ಮಾಧ್ಯಮಗಳಲ್ಲಿ ’ಹಾಸ್ಯ’ದ ಭರ್ಜರಿ ಬೆಳೆ. ಆದರೆ ಅವು ಬಹುತೇಕ ನಿರುಪಯುಕ್ತ ಕಳೆ. ಕೆಲವು ಕೊಳೆ. ಮತ್ತೆ ಕೆಲವಂತೂ ಹಾಸ್ಯದ ಕೊಲೆ! ಕನ್ನಡದ ಮಟ್ಟಿಗೆ ಹೇಳುವುದಾದರೆ, ಮಾಧ್ಯಮಗಳಲ್ಲಿ ’ಮೂರ್ಖರ ದಿನ’ದ ಸಂದರ್ಭದಲ್ಲಿ ಮಾತ್ರವಲ್ಲ, ಉಳಿದಂತೆಯೂ ಬೆಳಕು ಕಾಣುವ ತಥಾಕಥಿತ ಹಾಸ್ಯದ ಬೆಳೆಯಲ್ಲಿ ನಿರುಪಯುಕ್ತ ಕಳೆ ಮತ್ತು ಹಾಸ್ಯದ ಕೊಲೆಯೇ ಜಾಸ್ತಿ!
ಹಾಸ್ಯಪ್ರಜ್ಞೆಯನ್ನಾಗಲೀ ವಿಡಂಬನಾ ಚಾತುರ್ಯವನ್ನಾಗಲೀ ಹೊಂದಿರದವರು ಸೃಷ್ಟಿಸಿದ ಬೈರಿಗೆಗಳಿಂದ ಓದುಗ/ಕೇಳುಗ/ನೋಡುಗ ಕೊರೆಸಿಕೊಳ್ಳುವುದು, ನಗೆಹನಿಗಳನ್ನು ಹಿಗ್ಗಿಸಿ ’ನಗೆಬರಹ’ವೆಂದು ಪ್ರತಿಪಾದಿಸುವವರ ಅಂಥ ಬರಹಗಳನ್ನು ಓದುವ ಶಿಕ್ಷೆ ಅನುಭವಿಸುವುದು, ಚುಟುಕು/ಚೂರು/ತಟುಕು ಜೋಕು, ಎಸ್.ಎಂ.ಎಸ್.ಗಳಿಗೇ ತೃಪ್ತಿಪಟ್ಟುಕೊಳ್ಳುವುದು, ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗುವ ಆಂಗಿಕ ಚೇಷ್ಟೆಗಳನ್ನು ಹಾಸ್ಯಾಭಿನಯವೆಂದು ಸ್ವೀಕರಿಸಬೇಕಾದ ಅನಿವಾರ್ಯಕ್ಕೀಡಾಗುವುದು ಮತ್ತು (ಅಪ)ಹಾಸ್ಯghostಇಗಳನ್ನು ಹಾಸ್ಯದ ಉತ್ತುಂಗ ಶಿಖರವೆಂದು ಒತ್ತಾಯಪೂರ್ವಕವೆಂಬಂತೆ ಭಾವಿಸಿ, ನೂರೊಂದನೇ ಸಲ ಕೇಳುತ್ತಿರುವ ಜೋಕಿಗೇ ನಕ್ಕುನಲಿದಾಡುವುದು, ಬಹುತೇಕ ಇವೇ ಕನ್ನಡದಲ್ಲಿಂದು ಓದುಗ/ಕೇಳುಗ/ನೋಡುಗನಿಗಿರುವ ಆಯ್ಕೆಗಳಾಗಿವೆ!
ಜೋಕು, ಶ್ಲೇಷೆ, ಅಂಗಚೇಷ್ಟೆ ಇವುಗಳನ್ನು ಮೀರಿದ ಹಾಸ್ಯವಿದೆ, ಹಾಸ್ಯವು ಕೇವಲ ತೆಳು ಪದರವಲ್ಲ, ಆಳ-ವಿಸ್ತಾರ ಹೊಂದಿರುವ ರಸಘಟ್ಟಿ, ವಿಡಂಬನೆಯೆಂಬುದು ಹಾಸ್ಯದ ಒಂದು ತೇಜೋಮಯ ಮುಖ ಎಂಬ ಸತ್ಯದ ಅರಿವಿನಿಂದಲೇ ಇಂದಿನ ಯುವ ಪೀಳಿಗೆಯನ್ನು ವಂಚಿಸುವ ಕೆಲಸವನ್ನು ನಮ್ಮ ಬಹಳಷ್ಟು ಮಾಧ್ಯಮಸಂಸ್ಥೆಗಳಿಂದು ಅರಿತೋ ಅರಿಯದೆಯೋ ಮಾಡುತ್ತಿವೆ. ಅಂಥ ಮಾಧ್ಯಮಸಂಸ್ಥೆಗಳು ಹಾಸ್ಯದ ವಿಷಯದಲ್ಲಿ ತೀರಾ ಲಘು ಧೋರಣೆ ಹೊಂದಿರುವುದಂತೂ ಸತ್ಯ. ಯುಕ್ತ ಧೋರಣೆಯ ಮಾತಿರಲಿ, ಕೆಲವು ಪತ್ರಿಕೆಗಳಿಗಂತೂ ಹಾಸ್ಯ ಸಾಹಿತ್ಯವೇ ಅಸ್ಪೃಶ್ಯ! ಕನ್ನಡದ ದೃಶ್ಯಮಾಧ್ಯಮದ ಹಾಸ್ಯಾಸ್ಪದ ಹಾಸ್ಯ ಕಾರ್ಯಕ್ರಮಗಳ ಬಗೆಗಂತೂ ಚರ್ಚಿಸದಿರುವುದೇ ಒಳ್ಳೆಯದು. ಏಕೆಂದರೆ, ಅವು ನೋಡುಗರನ್ನು ಎಷ್ಟು ಬ್ರೈನ್-ವಾಶ್ ಮಾಡಿಟ್ಟುಬಿಟ್ಟಿವೆಯೆಂದರೆ, ಅವುಗಳ ಬಗೆಗಿನ ಸಾರ್ವಜನಿಕ ಚರ್ಚೆಯು ದಿಕ್ಕು ತಪ್ಪುವ ಸಾಧ್ಯತೆಯೇ ಹೆಚ್ಚು!
ಹಾಸ್ಯಲೇಖಕನಾಗಿ ನಾಲ್ಕು ದಶಕಗಳಿಂದ ಸಾಹಿತ್ಯಕೃಷಿ ಮಾಡುತ್ತಿರುವ ನನಗೆ, ಹಾಸ್ಯದ ಬಗ್ಗೆ ಇಂದು ಬಹುತೇಕರು ಹೊಂದಿರುವ ಪರಿಕಲ್ಪನೆಯನ್ನು ಗಮನಿಸಿದಾಗ ತೀವ್ರ ನಿರಾಶೆಯಾಗುತ್ತದೆ. ಜೊತೆಗೆ, ಇಂದಿನ ಧಾವಂತದ ಜೀವನ, ಅನ್ಯಾಸಕ್ತಿ, ತತ್ಫಲವಾದ ’ದಿಢೀರ್ ಹಾಗೂ ಷಾರ್ಟ್ ಹಾಸ್ಯದ ಒಲವು’ ಇವುಗಳಿಂದಾಗಿ ಬಹುತೇಕರಲ್ಲಿ ಹಾಸ್ಯಸಾಹಿತ್ಯದ ಆಳಕ್ಕಿಳಿಯುವ, ಇಳಿದು ಅರಿತು ಅನುಭವಿಸಿ ಆನಂದಿಸುವ ಪ್ರಯತ್ನ ಮತ್ತು ಪ್ರವೃತ್ತಿಗಳೇ ಇಲ್ಲವಾಗಿರುವುದು ನನಗೆ ಬೇಸರ ಉಂಟುಮಾಡುತ್ತದೆ. ಈ ಸಲದ ’ಮೂರ್ಖರ ದಿನ’ದ ಆಸುಪಾಸಿನಲ್ಲಿ ಕೆಲ ಮಾಧ್ಯಮಸಂಸ್ಥೆಗಳ ಕೊಡುಗೆ ಗಮನಿಸಿ ನನಗೆ ಅತೀವ ಬೇಸರವಾಗಿದೆ.
ಹೀಗಿರುವಾಗ ನಾನೂ ಇದೇ ಪ್ರವಾಹದಲ್ಲಿ ಕೊಚ್ಚಿಹೋಗಬಾರದೆಂಬ ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ನಾನು ಈ ಬ್ಲಾಗ್ ಓದುಗರಾದ ತಮ್ಮಲ್ಲಿ ಮಾರ್ಚ್ ೨೬ರಂದು ’ಅರಿಕೆ’ಯೊಂದರ ಮೂಲಕ ಸೂಚ್ಯವಾಗಿ ನನ್ನ ಮನದ ನೋವನ್ನು ಅರುಹಿ, ಹಾಸ್ಯವಿಡಂಬನೆಗೆಂದೇ ಪ್ರಾರಂಭಿಸಿದ್ದ ಈ ಬ್ಲಾಗ್‌ನ ಬರವಣಿಗೆಯನ್ನು ಸ್ಥಗಿತಗೊಳಿಸಿದೆ. ಆದರೆ, ಈ ಬ್ಲಾಗ್‌ನಲ್ಲಿ ಅದುವರೆಗಿನ ನನ್ನ ಪ್ರತಿದಿನದ ಬರವಣಿಗೆಯನ್ನೂ ಆಯಾ ದಿನವೇ ತಪ್ಪದೇ ಓದಿ ಮುಗಿಸಿದ್ದ ಅನೇಕರು ಆ ನಂತರವೂ ಇಂದಿನವರೆಗೂ ಪ್ರತಿದಿನ ಈ ಬ್ಲಾಗ್‌ಗೆ ಭೇಟಿ ನೀಡುತ್ತಿದ್ದಾರೆ!
ಅವರೆಲ್ಲರ ಕ್ಷಮೆ ಕೋರುತ್ತ, ಮನ್ನಿಸಿರೆಂದು ಇತರ ಓದುಗರನ್ನೂ ಕೇಳಿಕೊಳ್ಳುತ್ತ ಈ ಗುಳಿಗೆಯಂಗಡಿಯನ್ನು ಪರ್ಮನೆಂಟಾಗಿ ಮುಚ್ಚುತ್ತಿದ್ದೇನೆ. ಕೊನೆಯ ಕೊಡುಗೆಯಾಗಿ ಜನಶೇವಕರ ಕಥೆಯೊಂದನ್ನು ಸೆಪರೇಟಾಗಿ ಈ ಕೆಳಗೆ ನೀಡಿದ್ದೇನೆ. ತೀರಾ ಲಘು ಬರಹ ಅದು.
ನಮಸ್ಕಾರ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Nanage Vishaya purti gotilla, adre melu notakke anisoddu, sari illa anta nillisidare nasta namage bereyavaru aramavagi kettaddanna maadutta hoguttare.
ಪ್ರತ್ಯುತ್ತರಅಳಿಸಿಶಾಸ್ತ್ರೀಜೀ,
ಪ್ರತ್ಯುತ್ತರಅಳಿಸಿನಾನು ನಿಮ್ಮ ಬ್ಲಾಗಿನ ಖಾಯ೦ ಓದುಗ. ನಿಮ್ಮ ಎಲ್ಲಾ ಚುಟುಕುಗಳನ್ನು ಓದಿ ಖುಷಿಪಟ್ಟವನು. ಆದರೆ ನೀವೀಗ ಗುಳಿಗೆ ಅ೦ಗಡಿ ಯನ್ನು ಪರ್ಮನೆ೦ಟಾಗಿ ಮುಚ್ಚುವ ತೀರ್ಮಾನ ತೆಗೆದುಕೊ೦ಡಿದ್ದು ತಿಳಿದು ತು೦ಬಾನೆ ಬೇಸರ ಆಯ್ತು. ನಿಮ್ಮ ತೀರ್ಮಾನ ವನ್ನು ಪುನರ್ ವಿಮರ್ಶೆಗೆ ಒಳಪಡಿಸಿ ಮತ್ತೆ ಗುಳಿಗೆಯ೦ಗಡಿಯನ್ನು ಚಾಲೂ ಮಾಡಿ ಎ೦ದು ನನ್ನ ಪ್ರೀತಿಯ ಒತ್ತಾಯ.
ಆನಂದರಾಮರೆ,
ಪ್ರತ್ಯುತ್ತರಅಳಿಸಿನಮ್ಮ ಆನಂದಕ್ಕೆ ಏಕೆ ರಾಮರಾಮ ಹೇಳುತ್ತಿದ್ದೀರಿ?
ನೀವು ಹೇಳುವಂತೆ ಹಾಸ್ಯ ಈಗ ಅಪಹಾಸ್ಯವಾಗಿದ್ದರೂ ಸಹ, ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಶ್ರೇಷ್ಠ ರೂಪದಲ್ಲಿ ಪ್ರಕಟವೂ ಆಗಿದೆಯಲ್ಲವೆ?
ತಾವೇ ಗುಳಿಗೆ ಕೊಡುವದನ್ನು ನಿಲ್ಲಿಸಿಬಿಟ್ಟರೆ, ನಾವು ಯಾವ ವೈದ್ಯರಲ್ಲಿ ಹೋಗಬೇಕು?