ಪುಢಾರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪುಢಾರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮಾರ್ಚ್ 26, 2009

ಸ್ವರ್ಗ-ನರಕದ ಸುದ್ದಿ

ಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾ ಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. ಪತ್ರಕರ್ತರು ಖಾಲೀಹಾತ್ ಬರಬೇಕಿತ್ತು. ಪೆನ್ನು ಮತ್ತು ಹಾಳೆಗಳನ್ನು ಅಲ್ಲಿಯೇ ಒದಗಿಸುವ ವ್ಯವಸ್ಥೆಯಾಗಿತ್ತು. ದೃಶ್ಯಮಾಧ್ಯಮದವರೂ ಕೂಡ ಈ ನಿಯಮಕ್ಕೆ ಒಳಪಡಬೇಕಾಗಿತ್ತು. ಆ ಪೆನ್ನು-ಹಾಳೆಗಳೋ, ಭೂಲೋಕದಿಂದ ತರಿಸಿದವೇ ಆಗಿದ್ದವು!

ಸ್ವರ್ಗದ ಪತ್ರಿಕಾಗೋಷ್ಠಿಗೆ ಹೋಗಿಬರಲು ಪತ್ರಕರ್ತರ ನೂಕುನುಗ್ಗಲು. ನರಕಕ್ಕೆ ಹೋಗಿಬರಲು ಯಾರೂ ತಯಾರಿಲ್ಲ. ಕೊನೆಗೆ ಜ್ಯೂನಿಯರ್ ಪತ್ರಕರ್ತ-ಕರ್ತೆಯರನ್ನು ನರಕಕ್ಕೆ ಅಟ್ಟಲಾಯಿತು.

ನರಕದ ಪತ್ರಿಕಾಗೋಷ್ಠಿಯಲ್ಲಿ ಯಮನ ವಕ್ತಾರನು, ಭೂಲೋಕದ ರಾಜಕಾರಣಿಗಳಿಗಾಗಿಯೇ ಸ್ಥಾಪಿಸಲಾಗುವ ಸದರಿ ವಿಶೇಷ ಘಟಕದ ಬಗ್ಗೆ ಈ ರೀತಿ ವಿವರಿಸಿದನು:
’ರಾಜಕಾರಣಿಗಳು ತಾವು ಮಾಡಿದ ಪಾಪಗಳಿಗೆ ಭೂಲೋಕದಲ್ಲಿ ಯಾವುದೇ ಶಿಕ್ಷೆಯನ್ನು ಅನುಭವಿಸದೇ ಹಾಯಾಗಿ ಮಜಾಮಾಡಿಕೊಂಡಿದ್ದು ಕೊನೆಗೆ ನರಕಕ್ಕೆ ಬರುತ್ತರಾದ್ದರಿಂದ ನರಕದಲ್ಲಿ ಅವರಿಗೆ ನಾನಾ ಬಗೆಯ ಶಿಕ್ಷೆಗಳನ್ನು ಕೊಡುವ ಅವಶ್ಯಕತೆಯಿದೆ. ಭೂಲೋಕದಿಂದ ಬರುವ ರಾಜಕಾರಣಿಗಳ ಸಂಖ್ಯೆಯೂ ಬರಬರುತ್ತ ಏರತೊಡಗಿದೆ. ಆದ್ದರಿಂದ ಅವರಿಗಾಗಿಯೇ ವಿಶೇಷ ಘಟಕವನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಸಲದ ಭಾರತೀಯ ಯುಗಾದಿಯ ಮುನ್ನಾದಿನವಾದ ಅಮಾವಾಸ್ಯೆಯ ರಾತ್ರಿ ಹನ್ನೆರಡಕ್ಕೆ ಘಟಕದ ಉದ್ಘಾಟನೆ’, ಎಂದು ನರಕದ ವಕ್ತಾರನು ಪತ್ರಕರ್ತರಿಗೆ ವಿವರಿಸಿದನು.

’ಭೂಲೋಕದಲ್ಲಿ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಇಲ್ಲಿ ಯಾವ ರೀತಿಯ ಶಿಕ್ಷೆಗಳನ್ನು ಕೊಡುತ್ತೀರಿ?’ ಎಂದು ಇಂಗ್ಲಿಷ್ ದೃಶ್ಯಮಾಧ್ಯಮವೊಂದರ ಪ್ರತಿನಿಧಿ ಕೇಳಿದಳು. (ಅವಳ ಹೆಸರು ಬುರ್ಖಾ ದತ್.)

’ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದವರಿಗೆ ಯಾವ ಶಿಕ್ಷೆಯನ್ನೂ ಇಲ್ಲಿ ನೀಡಲಾಗುವುದಿಲ್ಲ. ಏಕೆಂದರೆ ನೀತಿಸಂಹಿತೆ ಉಲ್ಲಂಘನೆಗಾಗಿ ಅವರೆಲ್ಲ ಭೂಲೋಕದಲ್ಲೇ ಚುನಾವಣಾ ಆಯೋಗದ ಕೈಲಿ ತಕ್ಕ ಶಿಕ್ಷೆ ಅನುಭವಿಸಿಯೇ ಬಂದಿರುತ್ತಾರೆ. ಆದ್ದರಿಂದ ಅದಕ್ಕಾಗಿ ಇಲ್ಲಿ ಪುನಃ ಶಿಕ್ಷೆ ಕೊಡುವ ಅಗತ್ಯವಿಲ್ಲ’, ಎಂದು ನರಕದ ವಕ್ತಾರನು ಉತ್ತರಿದನು.

ಅತ್ತ ಸ್ವರ್ಗದ ಪತ್ರಿಕಾಗೋಷ್ಠಿಯಲ್ಲಿ ಸ್ವರ್ಗದ ವಕ್ತಾರನು ಹೇಳಿದ್ದಿಷ್ಟು:
’ಈ ಸಲದ ಭಾರತೀಯ ಯುಗಾದಿಯ ಆರಂಭದ ಶುಭಗಳಿಗೆಯಾದ ರಾತ್ರಿ ಹನ್ನೆರಡು ಗಂಟೆ, ಒಂದು ಸೆಕೆಂಡಿಗೆ ನಮ್ಮ ವಿಶೇಷ ಘಟಕದ ಉದ್ಘಾಟನೆ. ತಮ್ಮ ನ್ಯಾಯಬದ್ಧ ಬೇಡಿಕೆಗಳನ್ನು ಹಿಡಿದುಕೊಂಡು ಸರ್ಕಾರಿ ಕಚೇರಿಗಳಿಗೆ ಅಥವಾ/ಮತ್ತು ರಾಜಕಾರಣಿಗಳ ಬಳಿಗೆ ಓಡಾಡಿ ಓಡಾಡಿ ಓಡಾಡಿ ಬೇಸತ್ತು ಸತ್ತು ಇಲ್ಲಿಗೆ ಬರುವ ಬಡಪಾಯಿಗಳಿಗೆ ವಿಶೇಷ ಸುಖ-ಸೌಲತ್ತುಗಳನ್ನು ನೀಡುವ ಮೂಲಕ ನ್ಯಾಯ ದೊರಕಿಸಿಕೊಡಲಿಕ್ಕಾಗಿ ಈ ಘಟಕದ ಸ್ಥಾಪನೆ.’

ಆಗ ವರದಾ ನಾಯಕ್ ಎಂಬ ಟಿವಿ ಪತ್ರಕರ್ತೆ ಬಾಲಕಿಯು ಈ ರೀತಿ ಪ್ರಶ್ನೆ ಕೇಳಿದಳು:
’ಮುಖ್ಯಮಂತ್ರಿಗಳ ಜನತಾದರ್ಶನದ ಬಲೆಗೆ ಬಿದ್ದು ಒದ್ದಾಡಿದ ಮಿಕಗಳಿಗೇನಾದರೂ ವಿಶೇಷ ಸುಖ-ಸೌಲತ್ತುಗಳಿವೆಯೆ?’

ವಕ್ತಾರನ ಉತ್ತರ:
’ಖಂಡಿತ ಖಂಡಿತ. ಇಲ್ಲದಿದ್ದರೆ ಹೇಗೆ?’

ಮೇಲಿನ ಎರಡೂ ಪತ್ರಿಕಾಗೋಷ್ಠಿಗಳಿಗೆ (ಊಹ್ಞೂಂ, ಒಂದು ಮೇಲಿನ ಮತ್ತು ಇನ್ನೊಂದು ಕೆಳಗಿನ ಪತ್ರಿಕಾಗೋಷ್ಠಿಗೆ) ಹೋಗಿಬಂದ ಪತ್ರಕರ್ತರನ್ನು ಗುಳಿಗೆಪ್ಪನವರು ವಿಚಾರಿಸಿದಾಗ ಒಂದು ಆಶ್ಚರ್ಯಕರ ಸಂಗತಿ ಹೊರಬಿತ್ತು!
ಸದಾಕಾಲ ಮೃಷ್ಟಾನ್ನಭೋಜನವನ್ನೇ ಉಂಡು ಉಂಡು ನಾಲಗೆ ಜಡ್ಡು ಹಿಡಿಸಿಕೊಂಡಿದ್ದ ಸ್ವರ್ಗದ ವ್ಯವಸ್ಥಾಪಕರು ಇದೇ ಅವಕಾಶವೆಂದು ಪತ್ರಿಕಾಗೋಷ್ಠಿಯಲ್ಲಿ ಸಖ್ಖತ್ ಖಾರದ ಅಡುಗೆ (ಅಂದರೆ ಎನ್.ವಿ. ಅಲ್ಲ) ಮಾಡಿಸಿದ್ದರಂತೆ! ’ಯಮ’ಖಾರವಂತೆ! ಅದೇವೇಳೆ ನರಕದಲ್ಲಿ, ಇದೇ ಚಾನ್ಸ್ ಎಂದು ಅಲ್ಲಿನ ವ್ಯವಸ್ಥಾಪಕರು ಬಗೆಬಗೆಯ ಭಕ್ಷ್ಯಭೋಜ್ಯಗಳ ಭೂರಿಭೋಜನದ ಏರ್ಪಾಟು ಮಾಡಿದ್ದರಂತೆ!

ಇನ್ನೊಂದು ವಿಷಯವೆಂದರೆ, ಬಹುಪಾಲು ನಟನಟಿಯರು, ಜನನಾಯಕರು, ರೂಪದರ್ಶಿಯರು ಇತ್ಯಾದಿಯವರೆಲ್ಲ ನರಕದಲ್ಲೇ ಇದ್ದರಂತೆ! ಪತ್ರಕರ್ತರಿಗೆ ಅವರನ್ನೆಲ್ಲ ಕಾಣುವ ಅವಕಾಶ ದೊರಕಿತಂತೆ. ಸ್ವರ್ಗದಲ್ಲೋ, ಅಪ್ಪಟ ಗಾಂಧಿವಾದಿಗಳು, ನಿಜಸನ್ಯಾಸಿಗಳು, ಮುಗ್ಧರು, ಭೂಲೋಕದಲ್ಲಿ ನಾನಾ ಬಗೆಯ ಶೋಷಣೆಗೊಳಗಾದವರು ಇಂಥವರೇ ತುಂಬಿದ್ದರಂತೆ.

ಸ್ವರ್ಗಕ್ಕೆ ಹೋಗಿಬಂದ ಪತ್ರಕರ್ತರೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ!

ಬುಧವಾರ, ಮಾರ್ಚ್ 25, 2009

ಓಯ್ ಬೆಂಗಳೂರ್!

ಬೆಂಗಳೂರಿನಲ್ಲೀಗ
ಎರಡು ಬಗೆಯ ಮಳೆ
ಬರುತ್ತಿದೆ.

ಒಂದು ಮಳೆ
ಮೋಡಗಳಿಂದ ಸುರಿಯುತ್ತಿದೆ;
ಇನ್ನೊಂದು ಮಳೆ
ಪುಢಾರಿಗಳ ಬಾಯಿಂದ ಹರಿಯುತ್ತಿದೆ!

ಮೊದಲೇ ಬೆಂಗಳೂರಿನಲ್ಲಿ
ಟ್ರಾಫಿಕ್ಕೋ ಟ್ರಾಫಿಕ್ಕು;
ಅದರ ಮಧ್ಯೆ ಈ
ಮಳೆಗಳ ಸೊಕ್ಕು!
office-goers ಎಲ್ರೂ
ಮನೇಲಿರೋದೇ ಲಾಯಕ್ಕು!

ನನಗೀಗ ನೆನಪಿಗೆ ಬರ್ತಾ ಇದೆ
ನನ್ನೊಂದು ಹಳೆ ಕವನ;
ಅದನ್ನಿಲ್ಲಿ ಕೊಟ್ಟಿದ್ದೇನೆ,
ಓದಿ ಆಗಿರಿ ಪಾವನ!

---o---

(ವರ್ಷಗಳ ಕೆಳಗೆ ಮಿತ್ರ (ದಿ.) ಜಿ.ಎಸ್.ಸದಾಶಿವ ಅವರು ಇಷ್ಟಪಟ್ಟು ಈ ಕವನವನ್ನು ’ಸುಧಾ ಯುಗಾದಿ ವಿಶೇಷಾಂಕ’ದಲ್ಲಿ ಪ್ರಕಟಿಸಿದ್ದರು. ಅನಂತರ ನನ್ನ ಕವನಸಂಕಲನ ’ಚಿತ್ತದಾಗಸ’ದಲ್ಲಿಯೂ ಇದು ಕಾಣಿಸಿಕೊಂಡಿತು. ಆದ್ದರಿಂದ, ಈಗಾಗಲೇ ಈ ಕವನವನ್ನು ಓದಿರುವವರು ಇದನ್ನು ಮತ್ತೆ ಓದಿ mental torture ಅನುಭವಿಸುವ ಅಗತ್ಯವಿಲ್ಲ.)

ಬೆಂಗಳೂರಲ್ಲಿ ರಸ್ತೆ ಪ್ರಯಾಣ ಹಾಗೂ ಆಫೀಸ್ ಡ್ಯೂಟಿ
-----------------------------------------

ಬೆಂಗಳೂರಿಗೆ ಬಂದ ಹೊಸತರಲ್ಲಿ
ಒಂದು ದಿನ,
ಆಫೀಸಿಗೆ ಹೋಗ್ತಿದ್ದಾಗ
ರಸ್ತೆ ದಾಟುವಾಗ ಚಪ್ಪಲಿ ಕಳಕೊಂಡೆ
ಸ್ಕೂಟರು ಅಡ್ಡಬಂದಿತ್ತು
ಚಪ್ಪಲಿ ಕಾಲುಜಾರಿತ್ತು
ಚಪ್ಪಲಿ ಬಿಟ್ಟು ನಾನು
ದೂರ ಉಳಕೊಂಡೆ

ಇನ್ನೊಂದು ದಿನ,
ಕಾರು ಅಡ್ಡಬಂದು
ಕಾಲೇ ಕಳೆದುಹೋಯ್ತು
ಕಾಲು ಹೋದರೇನು? ನಾನಿದ್ದೀನಲ್ಲ!
ಅಂದ್ಕೊಂಡು
ಆಫೀಸಿಗೆ ಹೋದೆ

ಮತ್ತೊಂದು ದಿನ,
ಬೀಟೀಯೆಸ್‌ನಲ್ಲಿ ಹೋಗ್ತಿದ್ದಾಗ
ನಂಗೆ ತಲೇನೇ ಇಲ್ಲ
ಅನ್ನೋ ವಿಷಯ ಗೊತ್ತಾಯ್ತು.
ಡ್ಯೂಟಿ ಮಾಡೋಕೆ ತಲೆ ಏಕೆ?
ತಲೆ ಚಿಂತೆ ಬಿಟ್ಟು
ಡ್ಯೂಟಿಗೆ ಹಾಜರಾದೆ

ಹೀಗೇ ಬರಬರ್ತಾ,
ಬೀಟೀಯೆಸ್ ಬಸ್ಸು ನಿಲ್ಲದಿದ್ದಾಗ,
ನಿಂತ ಬಸ್ಸನ್ನು ನಾನು
ಹತ್ತಲಾರದೇಹೋದಾಗ
ನಂಗೆ ಕೈಯೂ ಇಲ್ಲ
ಅಂತ ಗೊತ್ತಾಯ್ತು.
ಟ್ರಾಫಿಕ್ ಸಿಗ್ನಲ್ ನೋಡ್ತಾ ಹೋಗಿ
ಹುಡುಗಿಯೊಬ್ಬಳಿಗೆ ಢಿಕ್ಕಿಹೊಡೆದಾಗ
ನಂಗೆ ಕಣ್ಣಿಲ್ಲ
ಅನ್ನೋದೂ ತಿಳೀತು.
ಓಡ್ತಾಇರೋ ಬಸ್ಸಿಂದ ಹಾರಿ
ಗಿಜಿಗಿಜಿಗುಟ್ಟೋ ರಸ್ತೇಲಿ ತೂರಿ
ಓಡಿಹೋಗ್ತಿರೋ
ಎರಡನೇ ಬಸ್‌ ಏರೋಕೆ
ಎದೆ ಬೇಕು,
ನಂಗೆ ಅದೂ ಇಲ್ಲ
ಅನ್ನೋದೂ ಅರಿವಾಯ್ತು
ಕೊನೆಗೆ.

ಈಗ ನಾನು,
ಕೈ ಬಿಟ್ಟು, ಕಾಲು ಬಿಟ್ಟು,
ಎದೆ ಬಿಟ್ಟು, ತಲೆ ಬಿಟ್ಟು,...
ಎದ್ದಕೂಡಲೇ ಮನೆ ಬಿಟ್ಟು
ಆರಾಮಾಗಿ ಹೋಗ್ತೀನಿ
ಆಫೀಸಿಗೆ.
ನಿಶ್ಚಿಂತೆಯಿಂದ ಡ್ಯೂಟಿ ಮುಗಿಸಿ
ನಿಧಾನವಾಗಿ ಹಾದಿ ಸವೆಸಿ
ನಿದ್ರೆ ಹೊತ್ತಿಗೆ ಮನೆ ಸೇರ್ತೀನಿ
ಮೆತ್ತಗೆ.

ಸೋಮವಾರ, ಮಾರ್ಚ್ 23, 2009

ಕಾನೂನಿನ ಕತ್ತು

ಕಾನೂನು ರಚಿಸುವ ಜನಪ್ರತಿನಿಧಿಗಳಿಗೆ
ಕಾನೂನು ಗೊತ್ತು.
ಕಾನೂನು ರಕ್ಷಿಸುವ ಆರಕ್ಷಕರಿಗೆ
ಕಾನೂನು ಗೊತ್ತು.
ಕಾನೂನು ವಾದಿಸುವ ವಕೀಲರಿಗೆ
ಕಾನೂನು ಗೊತ್ತು.
ಆದರೆ, ಅಯ್ಯೋ!
ಇವರು ಮೂವರಿಂದಲೇ
ಇಂದಿನ ದಿನಗಳಲ್ಲಿ
ಕಾನೂನಿಗೆ ಕುತ್ತು!