ಬುಧವಾರ, ಅಕ್ಟೋಬರ್ 21, 2009

ಸಾವಿನ ಮನೆಯ ಕದ ತಟ್ಟಿ ಬಂದೆ, ಏಳು ಸಲ! (ಸತ್ಯ ಘಟನೆ)

ವೈಕುಂಠಕ್ಕೆ ಏಳು ಬಾಗಿಲುಗಳಿವೆ ಎನ್ನುತ್ತಾರೆ. ಗೊತ್ತಿಲ್ಲ. ನಾನಿನ್ನೂ ಅಲ್ಲಿಗೆ ಹೋಗಿಲ್ಲ. ಅಜ್ಜಿಕಥೆಗಳಲ್ಲಿ ರಾಜ ಏಳು ಸುತ್ತಿನ ಕೋಟೆಯೊಳಗೆ ಇರುತ್ತಿದ್ದ. ರಾಜಕುಮಾರ ಏಳು ಸಮುದ್ರ ದಾಟಿ ಹೋಗಿ ತನ್ನ ಪ್ರಿಯತಮೆಯನ್ನು ರಾಕ್ಷಸನ ಕೈಯಿಂದ ಬಿಡಿಸಿಕೊಂಡು ಬರುತ್ತಿದ್ದ. ಅಜ್ಜಿ ಹೇಳಿದ್ದಾದ್ದರಿಂದ ನಂಬಬೇಕಷ್ಟೇ ಹೊರತು ಆ ಘಟನೆಯನ್ನು ಅಜ್ಜಿಯೂ ನೋಡಿಲ್ಲ, ನಾನೂ ನೋಡಿಲ್ಲ. ಆದರೆ ಏಳು ಸಲ ನಾನು ಸಾವಿನ ಮನೆ ಬಾಗಿಲನ್ನು ತಟ್ಟಿ ವಾಪಸ್ ಬಂದದ್ದಂತೂ ಸತ್ಯ. ನಾನು ಅನುಭವಿಸಿದ ಈ ಜೀವನದ ಪರಮ ಸತ್ಯ ಆ ಏಳು ಅನುಭವಗಳು. ನಾನು ತಟ್ಟಿದ ಅವು ಏಳೂ ಬೇರೆ ಬೇರೆ ಬಾಗಿಲುಗಳು. ಆ ಏಳು ಬಾಗಿಲುಗಳ ಸತ್ಯಕಥೆ ಇಲ್ಲಿದೆ.

ಬಾಗಿಲು-ಒಂದು
----------------
ಅರವತ್ತರ ದಶಕ. ನಾನಾಗ ಪ್ರೌಢಶಾಲಾ ವಿದ್ಯಾರ್ಥಿ. ಐದು ವರ್ಷ ವಯಸ್ಸಿನ ತಮ್ಮನನ್ನು ಸೈಕಲ್‌ಮೇಲೆ ಮುಂಭಾಗದಲ್ಲಿ ಕೂರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದೆ. ನನ್ನ ತಂದೆಯವರು ಉಪಯೋಗಿಸುತ್ತಿದ್ದ ಬ್ರಿಟಿಷರ ಕಾಲದ ಎತ್ತರದ ಬೈಸಿಕಲ್ ಅದು. ಪೆಡಲ್‌ಗಳು ನನ್ನ ಕಾಲಿಗೆ ಎಟುಕುತ್ತಿರಲಿಲ್ಲ. ಪೆಡಲ್ ತುಳಿಯಲು ಸರ್ಕಸ್ ಮಾಡುತ್ತಿದ್ದೆ.

ನನ್ನೂರು ದಾವಣಗೆರೆಯ ಚೌಕಿಪೇಟೆಯ ನಮ್ಮ ಮನೆಯೆದುರಿನ ರಸ್ತೆಯಲ್ಲಿ ಹೀಗೆ ನಾನು ಡಬಲ್ ರೈಡಿಂಗ್ ಹೋಗುತ್ತಿದ್ದಾಗ ಎದುರಿನಿಂದ ಲಾರಿಯೊಂದು ವೇಗವಾಗಿ ಬಂತು. ನಾನೇನೋ ರಸ್ತೆಯ ಸಂಪೂರ್ಣ ಎಡಭಾಗದಲ್ಲೇ ಇದ್ದೆ. ಆದರೆ ನನ್ನೆದುರು ಬಲಭಾಗದಲ್ಲಿ ಬಕ್ಕೇಶ್ವರ ಸ್ವಾಮಿಯ ತೇರು ಅರ್ಧರಸ್ತೆಯನ್ನಾಕ್ರಮಿಸಿ ನಿಂತಿತ್ತಾದ್ದರಿಂದ ಆ ಲಾರಿಯು ತೀರಾ ಬಲಭಾಗಕ್ಕೆ ಬಂದು ನನ್ನೆದುರಿಗೇ ಧಾವಿಸತೊಡಗಿತು! ವೇಗವನ್ನು ಕಡಿಮೆ ಮಾಡದೆ ನನ್ನೆದುರು ಧಾವಿಸಿದ ಲಾರಿಯಿಂದ ಪಾರಾಗಲು ಸೈಕಲ್ಲನ್ನು ಇನ್ನಷ್ಟು ಎಡಬದಿಗೆ ಕೊಂಡೊಯ್ದೆ. ಹಾಗೆ ಕೊಂಡೊಯ್ಯುವಾಗ ರಸ್ತೆಗಿಂತ ತಗ್ಗಿನಲ್ಲಿದ್ದ ಕಚ್ಚಾ ಫುಟ್‌ಪಾತ್‌ಗೆ ಸೈಕಲ್ ಜಾರಿ ಧಡಕ್ಕನೆ ರಸ್ತೆಗೆ ಬಿದ್ದೆ! ನನ್ನೊಡನೆ ನನ್ನ ತಮ್ಮನೂ ಬಿದ್ದ. ನಮ್ಮ ಮೇಲೆ ಇನ್ನೇನು ಆ ಲಾರಿ ಹರಿಯಿತು ಎನ್ನುವಷ್ಟರಲ್ಲಿ ನಾನು ತಮ್ಮನನ್ನು ಉಳಿಸುವ ಯತ್ನದಲ್ಲಿ ಅವನನ್ನು ಎಡಬದಿಗೆ ತಳ್ಳಿದೆ. ಹಾಗೆ ತಳ್ಳುವಾಗ ನನ್ನ ಕಾಲು ಸೈಕಲ್‌ನ ಕಂಬಿಗಳ ಮಧ್ಯೆ ಸಿಕ್ಕಿಕೊಂಡು ತಿರುಚಿಕೊಂಡಿತು! ಆದರೆ, ಇಬ್ಬರೂ ಎಡಬದಿಗೆ ಚರಂಡಿಯ ಸಮೀಪ ಬಿದ್ದದ್ದರಿಂದಾಗಿ ಲಾರಿಯ ಚಕ್ರಗಳಿಂದ ಕೂದಲೆಳೆಯ ಅಂತರದಲ್ಲಿ ಪಾರಾದೆವು!

ಮೂಳೆ ಮುರಿದ ಎಡಗಾಲಿಡೀ ಬ್ಯಾಂಡೇಜ್ ಸುತ್ತಿಸಿಕೊಂಡು ನಾನು ಮೂರು ತಿಂಗಳು ಮಲಗಬೇಕಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿದ್ದಾಗ ಬ್ಯಾಂಡೇಜ್‌ನೊಳಗೆ ತಿಗಣೆಗಳು ಸೇರಿಕೊಂಡು ಮುಂದಿನ ಮೂರು ತಿಂಗಳೂ ನಾನು ಅನುಭವಿಸಿದ ತಿಗಣೆಕಾಟ ಬಲು ಘೋರ! ಅದೇ ವೇಳೆ ನಡೆದ ನನ್ನ ಅಕ್ಕನ ಮದುವೆಯಲ್ಲಿ ನಾನು ಟೆಂಪೊರರಿ ಅಂಗವಿಕಲನಾಗಿ ಭಾಗವಹಿಸಬೇಕಾಯಿತು! ಅಪಘಾತದಲ್ಲಿ ಅಂದು ಕೇವಲ ತರಚಿದ ಗಾಯಗಳನ್ನಷ್ಟೇ ಹೊಂದಿ ಪಾರಾದ ನನ್ನ ತಮ್ಮ ಇಂದು ಜಿಲ್ಲಾ ನ್ಯಾಯಾಧೀಶ.

ಬಾಗಿಲು-ಎರಡು
----------------
೧೯೭೧ನೆಯ ಇಸವಿ. ರಾಘವೇಂದ್ರ ಗುರುಗಳು ವೃಂದಾವನಸ್ಥರಾಗಿ ೩೦೦ ವರ್ಷಗಳು ಪೂರೈಸಿದ ಸಂದರ್ಭ. ಎಂದೇ ಆ ವರ್ಷದ ಆರಾಧನೆಗೆ ವಿಶೇಷ ಮಹತ್ತ್ವ. ಗುರುಗಳ ಆರಾಧನೆಗೆ ಮಂತ್ರಾಲಯದಲ್ಲಿ ಹಾಜರಿರಲು ನಾನು ದಾವಣಗೆರೆಯಿಂದ ಬಸ್ಸಿನಲ್ಲಿ ಹೊರಟೆ. ಬಳ್ಳಾರಿಯಲ್ಲಿ ಬಸ್ಸು ಬದಲಿಸಿದೆ. ಬಳ್ಳಾರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆ ಬೀಳುತ್ತಿತ್ತು. ಬಳ್ಳಾರಿಯಿಂದ ಕೆಲವು ಕಿಲೋಮೀಟರ್ ದೂರ ಹೋಗಿ ಒಂದು ಕಡೆ ಬಸ್ಸು ನಿಂತುಬಿಟ್ಟಿತು. ಏಕೆಂದು ನೋಡಿದರೆ, ಎದುರಿಗೆ ಒಡ್ಡಿನಮೇಲೆ ಉಕ್ಕಿ ಹರಿಯುತ್ತಿದ್ದ ಹಳ್ಳ! ನೀರಿನ ರಭಸ ಕಂಡರೆ ಭಯವಾಗುತ್ತಿತ್ತು! ಅಪಾಯವನ್ನು ಊಹಿಸಿಯೇ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸಿದ್ದ. ಒಂದಷ್ಟು ಹೊತ್ತು ಕಾದೆವು. ಪ್ರವಾಹ ಇಳಿಯುವ ಲಕ್ಷಣ ಕಾಣಲಿಲ್ಲ. ಬಸ್ಸಿನಲ್ಲಿದ್ದ ಕೆಲವರು ಬಸ್ಸನ್ನು ಚಲಿಸಿಕೊಂಡು ಹೋಗುವಂತೆ ಚಾಲಕನನ್ನು ಹುರಿದುಂಬಿಸಿದರು. ಚಾಲಕನಿಗೂ ಅದೇ ಯೋಚನೆ ಬಂದಿತ್ತೇನೋ ಬಸ್ಸನ್ನು ನೀರಿಗಿಳಿಸಿದ. ನೀರಿನಲ್ಲಿ ಅರ್ಧ ದಾರಿ ಕ್ರಮಿಸಿದ ಬಸ್ಸು ಈಗ ಮುಂದಕ್ಕೆ ಹೋಗುವ ಬದಲು ನೀರಿನ ಪ್ರವಾಹದೊಡನೆ ಪಕ್ಕಕ್ಕೆ ಜಾರತೊಡಗಿತು! ನಿಧಾನವಾಗಿ ವಾಲತೊಡಗಿತು! ಬಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಚಾಲಕ ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಆತ ಕೈಚೆಲ್ಲಿ ಕುಳಿತ. ಇಂಚಿಂಚಾಗಿ ಬಸ್ಸು ನೀರಿನೊಳಗೆ ಮುಳುಗತೊಡಗಿತು! ಜೊತೆಗೆ ಪ್ರವಾಹದೊಡನೆ ಅಡ್ಡಡ್ಡ ಸಾಗತೊಡಗಿತು! ನಾವಿನ್ನು ನೀರಿನಲ್ಲಿ ಮುಳುಗಿಯೋ ಕೊಚ್ಚಿಕೊಂಡೋ ಹೋಗುವುದು ಗ್ಯಾರಂಟಿ ಅನ್ನಿಸಿತು ನಮಗೆಲ್ಲ!

ಮುಂದೇನು ಮಾಡುವುದೆಂದು ಎಲ್ಲರೂ ಯೋಚಿಸುತ್ತಿರುವಂತೆಯೇ, ನಾವು ಬಿಟ್ಟುಬಂದಿದ್ದ ದಡದಲ್ಲಿ ಒಂದು ಲಾರಿ ಬಂದು ನಿಂತಿತು. ನಮ್ಮ ಬಸ್ಸಿನ ಅವಸ್ಥೆಯನ್ನು ಕಂಡ ಆ ಲಾರಿಯ ಚಾಲಕ ಮತ್ತು ಕ್ಲೀನರ್ ಕೂಡಲೇ ಜಾಗೃತರಾದರು. ಲಾರಿಯ ಲೋಡಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದರು. ಹಗ್ಗದ ಒಂದು ತುದಿಯನ್ನು ಲಾರಿಯ ಮುಂಭಾಗಕ್ಕೆ ಕಟ್ಟಿ ಇನ್ನೊಂದು ತುದಿಯನ್ನು ನಮ್ಮ ಬಸ್ಸಿನತ್ತ ಎಸೆದರು. ಆ ತುದಿಯನ್ನು ನಾವು ನಮ್ಮ ಬಸ್ಸಿಗೆ ಕಟ್ಟಿದೆವು. ಒಬ್ಬೊಬ್ಬರಾಗಿ ಕೈಯಿಂದ ಆ ಹಗ್ಗಕ್ಕೆ ಜೋತುಬಿದ್ದು ಕೈಯಿಂದಲೇ ದೇಕಿಕೊಂಡು ದಡ ತಲುಪುವಲ್ಲಿ ಯಶಸ್ವಿಯಾದೆವು. ಎಲ್ಲರ ಜೀವವೂ ಉಳಿಯಿತು.

ಬಾಗಿಲು-ಮೂರು
----------------
೧೯೮೪ನೆಯ ಇಸವಿ. ತಮಿಳುನಾಡಿನ ನಾಗಪಟ್ಣಂ, ಕಡ್ಡಲೂರ್ ಪ್ರದೇಶದಲ್ಲಿ ಸಂಸಾರಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಇದ್ದಕ್ಕಿದ್ದಂತೆ ಭಾರೀ ಗಾಳಿ. ಬಿರುಗಾಳಿ ಎನ್ನುವಂಥ ಗಾಳಿ. ಜೊತೆಗೆ ಮಳೆ. ಭಾರೀ ಮಳೆ. ಅನತಿ ದೂರದಲ್ಲಿ ಕಾಣುತ್ತಿದ್ದ ಸಮುದ್ರ ನಮ್ಮತ್ತಲೇ ನುಗ್ಗಿಬರುತ್ತಿದೆಯೇನೋ ಎಂಬಂಥ ಅನುಭವ! ಮಳೆ-ಗಾಳಿಗೆ ನಮ್ಮ ಕಾರು ಹೊಯ್ದಾಡತೊಡಗಿತು! ಹಗಲಾಗಿದ್ದಾಗ್ಗ್ಯೂ ಮುಂದಿನದೇನೂ ಕಾಣದಂತ ಜಡಿಮಳೆ. ಕಾರು ಚಾಲಕನಿಗೋ ಎಲ್ಲಿಲ್ಲದ ಧೈರ್ಯ, ಹುಮ್ಮಸ್ಸು! ಇಂಥ ಮಳೆ-ಬಿರುಗಾಳಿಯಲ್ಲೇ ಒಂದಿಡೀ ಒಪ್ಪೊತ್ತು ಕಾರನ್ನು ಹೊಯ್ದಾಡಿಸಿಕೊಂಡು ಸಾಗಿದ! ಕೊನೆಗೂ ಸುರಕ್ಷಿತ ತಾಣ ತಲುಪಿದೆವು.

ಮರುದಿನದ ಪತ್ರಿಕೆಗಳನ್ನು ನೋಡಿದಾಗ ನಮಗೆ ತಿಳಿದದ್ದು, ನಾವು ಹಿಂದಿನ ದಿನ ಚಂಡಮಾರುತದ ಮಧ್ಯೆ ಸಿಲುಕಿದ್ದೆವು! ನಮ್ಮ ಹಿಂದುಮುಂದಿನ ಎಷ್ಟೋ ವಾಹನಗಳು ಚಂಡಮಾರುತಕ್ಕೆ ಬಲಿಯಾಗಿದ್ದವೆಂಬುದು ನಮಗೆ ಪತ್ರಿಕೆಯಿಂದಲೇ ಗೊತ್ತಾದದ್ದು! ನಾವು ಮಾತ್ರ ಸುರಕ್ಷಿತವಾಗಿ ಪಾರಾಗಿದ್ದೆವು!

ಬಾಗಿಲು-ನಾಲ್ಕು
----------------
೧೯೮೯ನೆಯ ಇಸವಿ ಮೇ ತಿಂಗಳು. ಸಂಸಾರಸಮೇತನಾಗಿ ಬೆಂಗಳೂರಿನಿಂದ ಕಾರಿನಲ್ಲಿ ಯಾತ್ರೆ ಹೊರಟೆ. ಪಂಢರಪುರ ಪೂರೈಸಿಕೊಂಡು ಕೊಲ್ಲಾಪುರದ ಕಡೆಗೆ ಹೊರಟಿದ್ದೆವು. ಕಾರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಲಾ ಪಟ್ಟಣದ ಹೊರವಲಯದಲ್ಲಿ ಚಲಿಸುತ್ತಿತ್ತು. ಕಿರಿದಾದ ರಸ್ತೆ. ಅಲ್ಲಲ್ಲಿ ಮನೆಗಳು. ಕಾರಿನ ವೇಗ ೬೦ ಕಿಲೋಮೀಟರ್ ಇತ್ತು. ವೇಗವನ್ನು ತಗ್ಗಿಸುವಂತೆ ನಾನು ಚಾಲಕನಿಗೆ ಹೇಳುತ್ತಿರುವಾಗಲೇ ಎಡಪಕ್ಕದ ಗುಡಿಸಲೊಂದರಿಂದ ಇದ್ದಕ್ಕಿದ್ದಂತೆ ನಾಲ್ಕು ವರ್ಷದ ಮಗುವೊಂದು ರಸ್ತೆಗೆ ಓಡಿಬಂತು! ಮಗುವಿನ ಹಿಂದೆ ಅದನ್ನು ಹಿಡಿಯಲು ಅದರ ಅಮ್ಮ ಧಾವಿಸಿದಳು! ಅಚಾನಕ್ಕಾಗಿ ಕಾರಿಗೆ ಅಡ್ಡಬಂದು ಓಡುತ್ತಿದ್ದ ಅವರನ್ನು ಉಳಿಸಲು ನಮ್ಮ ಚಾಲಕನು ಕಾರಿಗೆ ಬ್ರೇಕ್ ಹಾಕುವುದರ ಜೊತೆಗೆ ಸರಕ್ಕನೆ ಕಾರನ್ನು ರಸ್ತೆಯ ಸಂಪೂರ್ಣ ಎಡಬದಿಗೆ ತಿರುಗಿಸಿದ. ’ಧಡ್’ ಎಂದು ಭಾರೀ ಶಬ್ದದೊಂದಿಗೆ ಕಾರು ರಸ್ತೆಬದಿಯ ಪೂಲ್ ಒಂದರ ಅಡ್ಡಗಟ್ಟೆಗೆ ಢಿಕ್ಕಿಹೊಡೆಯಿತು!

ಮುಂದಿನ ಅರ್ಧ ಗಂಟೆಯಲ್ಲಿ ಚಾಲಕ ಹೊರತಾಗಿ ನಾವೆಲ್ಲರೂ ಸಂಗೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಮಲಗಿದ್ದೆವು! ಒಬ್ಬರಿಗೆ ಕೈಮುರಿದಿತ್ತು, ಇನ್ನೊಬ್ಬರ ಕಾಲು ಮುರಿದಿತ್ತು, ಮತ್ತೊಬ್ಬರಿಗೆ ಸೊಂಟಕ್ಕೆ ಪೆಟ್ಟಾಗಿತ್ತು, ನನ್ನಾಕೆಯ ಮುಖ ಹರಿದಿತ್ತು! ಚಾಲಕನ ಪಕ್ಕದಲ್ಲಿ ಕುಳಿತಿದ್ದ ನನ್ನ ನೇರಕ್ಕೇ ಅಡ್ಡಗಟ್ಟೆಯು ಢಿಕ್ಕಿಹೊಡೆದದ್ದರಿಂದಾಗಿ ನನ್ನ ಒಂದು ಕಣ್ಣು ಅಪ್ಪಚ್ಚಿಯಾಗಿತ್ತಲ್ಲದೆ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು! ಕಾರಿನ ಚಾಲಕ ಮಾತ್ರ ಯಾವುದೇ ಪೆಟ್ಟಿಲ್ಲದೆ ಪಾರಾಗಿದ್ದ!

ಎಲ್ಲರಿಗೂ ಆದ ತೀವ್ರಸ್ವರೂಪದ ಪೆಟ್ಟನ್ನು, ಮುಖ್ಯವಾಗಿ ನನ್ನ ತಲೆ ಮತ್ತು ಕಣ್ಣಿಗೆ ಆದ ಗಂಭೀರ ಸ್ವರೂಪದ ಪೆಟ್ಟನ್ನು ಮತ್ತು ಅದರಿಂದಾಗಿ ಎದುರಾಗಿರುವ ಪ್ರಾಣಾಪಾಯವನ್ನು ಗಮನಿಸಿ ನಮ್ಮನ್ನು ಕೂಡಲೇ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಮಗೆಲ್ಲರಿಗೂ ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯಿತು. ನನ್ನ ತಲೆ ಮತ್ತು ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಕೆಲದಿನಗಳಿದ್ದ ನಾವು ಅನಂತರ ನನ್ನೂರು ದಾವಣಗೆರೆಗೆ ಬಂದು ಬಾಪೂಜಿ ಆಸ್ಪತ್ರೆಗೆ ದಾಖಲಾದೆವು. ಎರಡು ಶಸ್ತ್ರಚಿಕಿತ್ಸೆ ಹಾಗೂ ಮೂರು ಆಸ್ಪತ್ರೆಗಳ ಬಳಿಕ ನಾನು ಸಜೀವವಾಗಿ ಸಂಸಾರಸಮೇತ ಬೆಂಗಳೂರಿಗೆ ಹಿಂತಿರುಗಿದೆ.

ಬಾಗಿಲು-ಐದು
--------------
೧೯೯೭ರ ಮಳೆಗಾಲ. ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ನನಗೆ ಬಡ್ತಿ ದೊರೆತು ಗುಜರಾತ್‌ನ ಗಾಂಧಿಧಾಮ್ ಎಂಬಲ್ಲಿಗೆ ವರ್ಗವಾಯಿತು. ಗಂಟುಮೂಟೆ ಕಟ್ಟಿಕೊಂಡು ಹೊರಟೆ. ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ನಾನು ಬಂದಿಳಿದಾಗ ನಿಲ್ದಾಣವು ಜಲಾವೃತವಾಗಿತ್ತು! ಹೊರಗೆ ಹೋಗಿ ನೋಡಿದರೆ ರಸ್ತೆಗಳೂ ಜಲಾವೃತ! ಇಡೀ ಊರೇ ಜಲಾವೃತ! ಭಾರೀ ಮಳೆಯ ಪ್ರಭಾವ! ಅಹಮದಾಬಾದ್‌ನಿಂದ ಹೊರಡಬೇಕಾಗಿದ್ದ ಎಲ್ಲ ಟ್ರೈನ್ ಹಾಗೂ ಬಸ್‌ಗಳೂ ರದ್ದಾಗಿದ್ದವು. ಬೇರೆಡೆಯಿಂದ ಬಂದ ವಾಹನಗಳೂ ಎಲ್ಲೆಲ್ಲೋ ಸುರಕ್ಷಿತ ಸ್ಥಳಗಳಲ್ಲಿ ನಿಂತುಬಿಟ್ಟಿದ್ದವು. ರೈಲ್ವೆ ನಿಲ್ದಾಣದಿಂದ ಹೊರಗೆ ಹೋಗಲೂ ಸಾಧ್ಯವಾಗದಷ್ಟು ನೀರು! ಆ ದಿನವಿಡೀ ನಾನು ರೈಲ್ವೆ ನಿಲ್ದಾಣದಲ್ಲೇ ಕಳೆದೆ.

ಮರುದಿನ ಮಳೆ ಕೊಂಚ ಕಡಿಮೆಯಾಗಿ ಪ್ರವಾಹವು ಇಳಿಮುಖವಾದರೂ ಟ್ರೈನ್ ಸೇವೆ ಆರಂಭವಾಗಲಿಲ್ಲ. ಇನ್ನೂ ೬೮೦ ಕಿಲೋಮೀಟರ್ ಪ್ರಯಾಣಿಸಿ ನಾನು ಮರುದಿನ ಗಾಂಧಿಧಾಮ್‌ನಲ್ಲಿ ಡ್ಯೂಟಿಗೆ ಹಾಜರಾಗಬೇಕಿತ್ತು. ಬಸ್‌ನಲ್ಲಾದರೂ ಮುಂದುವರಿಯೋಣವೆಂದುಕೊಂಡು ನನ್ನ ಲಗೇಜ್‌ಗಳನ್ನು ತಲೆಯಮೇಲೆ ಹೊತ್ತುಕೊಂಡು ಸೊಂಟಮಟ್ಟದ ನೀರಿನೊಳಗಿಳಿದು ಬಸ್ ನಿಲ್ದಾಣದತ್ತ ಹೆಜ್ಜೆಹಾಕತೊಡಗಿದೆ. ನೂರು ಮೀಟರ್ ದೂರ ಹೋಗಿರಬೇಕು, ನೀರಿನಲ್ಲಿ ಅವಿತುಕೊಂಡಿದ್ದ ಆಳವಾದ ಮೋರಿಯೊಂದರೊಳಕ್ಕೆ ಬಿದ್ದುಬಿಟ್ಟೆ! ನನ್ನ ಮೇಲೆ ನನ್ನ ಲಗೇಜು! ನೀರಿನೊಳಗೆ ನನ್ನ ಉಸಿರು ಬಂದ್ ಆಗತೊಡಗಿತು! ನನಗೆ ಈಜು ಬಾರದು! ನನ್ನ ಕಥೆ ಇನ್ನು ಮುಗಿಯಿತು ಎಂದುಕೊಂಡೆ.

ಅಷ್ಟರಲ್ಲಿ ಒಂದೈದಾರು ಕೈಗಳು ಮೇಲಿನಿಂದ ನನ್ನನ್ನು ಜಗ್ಗಲಾರಂಭಿಸಿದವು! ಮುಂದಿನ ಅರ್ಧ ನಿಮಿಷದಲ್ಲಿ ನಾನು ಪುನಃ ರಸ್ತೆಯಮೇಲಿದ್ದೆ! ಯಾರೋ ಪುಣ್ಯಾತ್ಮರು ನನ್ನನ್ನು ಮೋರಿಯಿಂದ ಎತ್ತಿ ಕಾಪಾಡಿದ್ದರು! ನನ್ನ ಲಗೇಜನ್ನೂ ಮೋರಿಯಿಂದೆತ್ತಿ ನನಗೊಪ್ಪಿಸಿದರು.

ಛಲಬಿಡದ ತ್ರಿವಿಕ್ರಮನಂತೆ ನಾನು ಅದೇ ನೀರಿನಲ್ಲೇ ಮುಂದುವರಿದು ಬಸ್ ನಿಲ್ದಾಣ ತಲುಪಿದೆ! ಗಾಂಧಿಧಾಮ್ ಬಸ್‌ಗೆ ಮಾತ್ರ ನಿಲ್ದಾಣದಲ್ಲಿ ಮತ್ತೊಂದೊಪ್ಪೊತ್ತು ಕಾಯಬೇಕಾಯಿತು!

ಬಾಗಿಲು-ಆರು
--------------
೧೯೯೭ರ ಶ್ರಾವಣ ಮಾಸ. ಗುಜರಾತ್‌ನ ಗಾಂಧಿಧಾಮ್‌ಗೆ ಬಂದು ಹೆಚ್ಚು ದಿನಗಳಾಗಿರಲಿಲ್ಲ. ಅದೊಂದು ದಿನ ಬ್ಯಾಂಕ್‌ಗೆ ರಜೆ ಹಾಕಿ, ಜುನಾಗಢ್ ನಗರದಿಂದ ೬ ಕಿಲೋಮೀಟರ್ ದೂರದಲ್ಲಿರುವ ಪ್ರಸಿದ್ಧ ಗಿರ್‌ನಾರ್ ಪರ್ವತಕ್ಕೆ ಪ್ರವಾಸ ಹೊರಟೆ. ಜುನಾಗಢ್‌ನಲ್ಲಿರುವ ಅಶೋಕನ ಶಿಲಾಶಾಸನ ನೋಡಿಕೊಂಡು ಗಿರ್‌ನಾರ್ ಪರ್ವತಶ್ರೇಣಿಯತ್ತ ಹೆಜ್ಜೆಹಾಕಿದೆ.

ಪರ್ವತದಮೇಲಿರುವ ಅಂಬಾಜಿ ದೇವಾಲಯಕ್ಕೆ ಹೋಗಿಬರುವುದು ನನ್ನ ಗುರಿಯಾಗಿತ್ತು. ಮಂದಿರ ತಲುಪಲು ಹತ್ತು ಸಾವಿರ ಮೆಟ್ಟಿಲುಗಳನ್ನು ಹತ್ತಬೇಕಾಗಿತ್ತು. ಬೆಟ್ಟದ ಬುಡದ ದೂಕಾನೊಂದರಲ್ಲಿ ಚಾಯ್ ಕುಡಿದು ಬೆಟ್ಟ ಹತ್ತತೊಡಗಿದೆ.

ದಟ್ಟವಾದ ಕಾನನ, ಸುತ್ತಲೂ ಕಾಣುವ ಪರ್ವತಶ್ರೇಣಿ, ಬೆಟ್ಟಗಳೊಡನೆ ಚಕ್ಕಂದವಾಡುವ ಮೋಡಗಳು, ಇತಿಹಾಸ ಪ್ರಸಿದ್ಧ ನೇಮಿನಾಥ ಮಂದಿರದಿಂದ ಮೊದಲ್ಗೊಂಡು ದಾರಿಯುದ್ದಕ್ಕೂ ಅನೇಕ ಜೈನಮಂದಿರಗಳು, ಭೀಮಕುಂಡ, ಸತ್‌ಪುಡಾ, ಗೋಮುಖಿ ಗಂಗಾ, ಪಥರ್ ಚಾಟಿ, ಭೈರವ್ ಜಪ್, ಭರತ್‌ವನ್, ಶೇಷ್‌ವನ್, ಹನುಮಾನ್ ಧಾರಾ ಮುಂತಾದ ಹಿಂದು ಪವಿತ್ರ ಸನ್ನಿಧಾನಗಳು ಇವುಗಳನ್ನೆಲ್ಲ ನೋಡುತ್ತ ನಡೆದ ನನಗೆ ಆಯಾಸವಾಗಲೀ ಸಮಯ ಹೋದದ್ದಾಗಲೀ ಗೊತ್ತೇ ಆಗಲಿಲ್ಲ. ಬೆಳಗ್ಗೆ ಜುನಾಗಢ್ ಬಿಟ್ಟ ನಾನು ಪರ್ವತದ ತುದಿಯ ಅಂಬಾಜಿ ಮಂದಿರ ತಲುಪಿದಾಗ ಅಪರಾಹ್ನವಾಗಿತ್ತು. ಅಂಬಾಜಿ (ಅಂಬೆ ಮಾತೆ) ದರ್ಶನ ಮಾಡಿ ಪರ್ವತ ಇಳಿಯತೊಡಗಿದೆ.

ಕತ್ತಲಾಗುವುದರೊಳಗೆ ಪೂರ್ತಿ ಪರ್ವತ ಇಳಿಯಲು ಸಾಧ್ಯವೇ ಎಂದು ಯೋಚಿಸುತ್ತ ಸರಸರನೆ ಹೆಜ್ಜೆಹಾಕತೊಡಗಿದೆ. ಕರಿಮೋಡಗಳು ಬೇರೆ ಕವಿಯತೊಡಗಿದ್ದವು. ಸಾವಿರ ಮೆಟ್ಟಿಲು ಕೆಳಗಿಳಿದಿರಬಹುದು, ಮಳೆ ಶುರುವಾಯಿತು. ಭಾರೀ ಮಳೆ! ಜೊತೆಗೆ, ಜೋರಿನ ಗಾಳಿಯಿಂದಾಗಿ ಹೊಗೆಯಂತೆ ಹಾರಾಡುವ ತುಂತುರು ನೀರಿನ ದಟ್ಟಣೆ! ಎದುರಿನ ದೃಶ್ಯವೇನೂ ಕಾಣದಾಯಿತು! ಹಿಂದೆ-ಮುಂದೆ ಯಾರೊಬ್ಬರೂ ಇಲ್ಲ! ಇನ್ನೂ ೯೦೦೦ ಮೆಟ್ಟಿಲು ಇಳಿಯಬೇಕು! ಸುತ್ತಲೂ ಕಾಡು! ಕಣ್ಣೆದುರಿನ ಮಳೆಯ ತೆರೆಯಿಂದಾಗಿ ದಿಕ್ಕು ತಪ್ಪುವ ಸಾಧ್ಯತೆ! ಕತ್ತಲು ಕವಿಯುವ ಅಪಾಯ ಬೇರೆ!

ಹುಚ್ಚು ಧೈರ್ಯದಿಂದ ಮುಂದುವರಿದೆ. ಚಳಿಗೆ ಇಡೀ ದೇಹ ಕಂಪಿಸತೊಡಗಿತು. ಮಳೆಬಿದ್ದ ನೆಲದಲ್ಲಿ ಕಾಲುಗಳು ಜಾರತೊಡಗಿದವು. ಕೆಲವೆಡೆ ಜಾರಿಬಿದ್ದರೆ ಪ್ರಪಾತ! ಇಷ್ಟು ಸಾಲದೆಂಬಂತೆ, ಹೆಜ್ಜೆಹೆಜ್ಜೆಗೆ, ಮಳೆಯಿಂದಾಗಿ ಅದೇತಾನೆ ನಿರ್ಮಿತವಾಗಿ ತಲೆಮೇಲೆ ಬೀಳುತ್ತಿರುವ ಮಿನಿ ಜಲಪಾತದಂಥ ಜಲಧಾರೆಗಳು! ಆ ಜಲಪಾತಗಳಿಗೆ ತಲೆಯೊಡ್ಡಿಯೇ ಮುಂದೆ ಸಾಗಬೇಕು; ಪಕ್ಕಕ್ಕೆ ಸರಿಯಲು ಸ್ಥಳವಿಲ್ಲ. ಒಂದು ವೇಳೆ ಸ್ಥಳವಿದ್ದರೂ, ಆ ಕಡೆ ಹೋದರೆ ಬೆಟ್ಟದಿಂದ ಕೆಳಗೆ ಜಾರಿಬೀಳುವ ಅಪಾಯ!

ನಾನು ಮನೆ ತಲುಪುವುದಿಲ್ಲವೆಂಬುದು ಖಾತ್ರಿಯಾಯಿತು! ಹಣೆಯಲ್ಲಿ ಬರೆದಂತೆ ಆಗಲಿ; ಪ್ರಕೃತಿಯ ಈ ರುದ್ರರಮಣೀಯ ರೂಪದ ಆಸ್ವಾದನೆಯ ಅನುಭವ ಆಗುತ್ತಿದೆಯಲ್ಲಾ, ನನ್ನ ಜೀವನ ಸಾರ್ಥಕ ಅಂದುಕೊಳ್ಳುತ್ತ, ಪ್ರಕೃತಿರಸಾಸ್ವಾದ ಮಾಡುತ್ತ ಖುಷಿಯಿಂದಲೇ ಮುಂದುವರಿದೆ. ಗಾಳಿಯ ಆರ್ಭಟದ ಮಧ್ಯೆ ಮಳೆನೀರಿನ ಧೂಮಚಾಪೆ ಆಚೀಚೆ ಸರಿದಾಗಲೊಮ್ಮೊಮ್ಮೆ ಸುತ್ತಲಿನ ಕಾಡು ಮತ್ತು ದೂರದ ಪರ್ವತಶ್ರೇಣಿ ಗೋಚರಿಸಿ ಎದೆ ಝಲ್ಲೆನ್ನುತ್ತಿತ್ತು! ಅಂಥ ಘೋರ ವಾತಾವರಣದಲ್ಲಿ ನಾನೊಬ್ಬನೇ ಪಿಶಾಚಿಯಂತೆ ಹೆಜ್ಜೆಹಾಕುತ್ತಿದ್ದೆ!

ಚಳಿಯಿಂದ ನನ್ನ ಕೈಕಾಲುಗಳು ಮರಗಟ್ಟತೊಡಗಿದವು. ಕ್ರಮೇಣ ಅವು ಮರದ ಕೊರಡಿನಂತಾಗಿಬಿಟ್ಟವು! ಬಾಯಿಯೋ, ಮುಚ್ಚಲೂ ಸಾಧ್ಯವಾಗುತ್ತಿಲ್ಲ, ತೆರೆಯಲೂ ಸಾಧ್ಯವಾಗುತ್ತಿಲ್ಲ, ಇದ್ದ ಸ್ಥಿತಿಯಲ್ಲೇ ನಿಶ್ಚಲ! ಚಳಿಯಿಂದ ದೇಹ ನಡುಗಿ ಎತ್ತೆತ್ತಲೋ ಚಿಮ್ಮುತ್ತಿತ್ತು! ಇಂಥ ಸ್ಥಿತಿಯಲ್ಲೂ ನಾನು ಪ್ರಕೃತಿಯೊಡನೆ ಒಂದಾಗಿ ಸಾಗುವ ಆ ಅನುಭವವನ್ನು ಮನಸಾರೆ ಸವಿಯುತ್ತ ಮುಂದುವರಿದಿದ್ದಂದಾಗಿ ನನಗೆ ಯಾವ ಭಯವೂ ಆಗಲಿಲ್ಲ. ಮನೆ ತಲುಪುವ ವಿಶ್ವಾಸವನ್ನು ಮಾತ್ರ ನಾನು ಖಂಡಿತ ಹೊಂದಿರಲಿಲ್ಲ.

ಹೀಗೇ ಬಹಳ ಹೊತ್ತು ಪರ್ವತಾವರೋಹಣ ಮಾಡಿದಮೇಲೆ ದೂರದಲ್ಲೊಂದು ಚಾ ದುಕಾನು ಕಾಣಿಸಿತು. ಪರ್ವತದ ಬಹುತೇಕ ಕೆಳಭಾಗದಲ್ಲಿದ್ದ ದುಕಾನು ಅದು. ಅಲ್ಲಿಗೆ ಧಾವಿಸಿದೆ. ಪುಣ್ಯಾತ್ಮ ನನಗಾಗಿ ಸ್ಟವ್ ಹಚ್ಚಿ ಒಂದಷ್ಟು ಟೀ ಕುದಿಸಿ ಕೊಟ್ಟ. ಕುದಿಬಿಸಿ ಟೀಯನ್ನೇ ಗಟಗಟನೆ ಕುಡಿದೆ. ಕೈಕಾಲಿನ ಬೆರಳುಗಳು ಕೊಂಚ ಮಿಸುಕಾಡಿದವು. ಸಜೀವವಾಗಿ ಮನೆ ಸೇರುತ್ತೇನೆಂಬ ನಂಬಿಕೆ ಬಂತು. ಚಾ ಕುಡಿದು ಅಲ್ಲಿಂದ ಹೊರಹೊರಟಾಗ ಪೂರ್ಣ ಕತ್ತಲಾಗಿತ್ತು. ಉಳಿದ ಕೆಲವೇ ಮೆಟ್ಟಲುಗಳನ್ನಿಳಿದು ಪರ್ವತ ತಲಕ್ಕೆ ಬಂದು ತಲುಪಿದೆ.

ಈ ರೋಮಾಂಚಕಾರಿ ಅನುಭವದಿಂದ ನಿಜಕ್ಕೂ ಆ ದಿನ ನನಗೆ ಎಷ್ಟು ಖುಷಿಯಾಗಿತ್ತೆಂದರೆ, ಪರ್ವತ ಇಳಿದ ನಾನು, ನಿಲ್ಲಲೂ ಸಾಧ್ಯವಿಲ್ಲದಂಥ ನಿತ್ರಾಣಾವಸ್ಥೆಯಲ್ಲಿಯೇ ಆರು ಕಿಲೋಮೀಟರ್ ನಡೆದು ಜುನಾಗಢ್ ನಗರಕ್ಕೆ ಬಂದು, ಕೃಷ್ಣಜನ್ಮಾಷ್ಟಮಿ ನಿಮಿತ್ತ ರಸ್ತೆಯಲ್ಲಿ ಸಾಗಿದ್ದ ಬೃಹತ್ ಮೆರವಣಿಗೆಯನ್ನು ಎರಡು ಗಂಟೆ ಕಾಲ ನಿಂತು ನೋಡಿ, ಊಟಮಾಡಿ ಬಸ್ ನಿಲ್ದಾಣಕ್ಕೆ ವಾಪಸಾಗಿ, ಬೆಳಗಿನ ಜಾವದವರೆಗೆ ಕಾದು, ಬಸ್ ಹಿಡಿದು ಗಾಂಧಿಧಾಮ್ ತಲುಪಿ, ನೇರ ಬ್ಯಾಂಕಿಗೆ ಧಾವಿಸಿ ಡ್ಯೂಟಿಗೆ ಹಾಜರಾದೆ! ಗಿರ್‌ನಾರ್ ಪರ್ವತದಲ್ಲಿ ಪ್ರಾಣತ್ಯಾಗ ನಿಶ್ಚಿತ ಎಂದುಕೊಂಡಿದ್ದವನಿಗೆ ಪ್ರಾಣ ಉಳಿದ ಖುಷಿಯೂ ಕಸುವು ನೀಡಿರಬಹುದು.

ಬಾಗಿಲು-ಏಳು
--------------
೨೦೦೫ರ ಜನವರಿ. ೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿತನಾಗಿ ಬೀದರ ನಗರಕ್ಕೆ ಹೋಗಿದ್ದ ನಾನು ಸಮ್ಮೇಳನ ಮುಗಿಸಿಕೊಂಡು ವಾಪಸ್ ಬೆಂಗಳೂರಿನ ಟ್ರೈನ್ ಹತ್ತಿದೆ. ಮೂರು ದಿನ ಸಾಹಿತ್ಯರಸದೌತಣ ಸವಿದದ್ದರ ಜೊತೆಗೆ ಉದ್ಘಾಟನೆಯ ದಿನ ವೇದಿಕೆಯಲ್ಲಿ ಮಿಂಚಿದ ಖುಷಿ ನನಗೆ ಎಷ್ಟಿತ್ತೆಂದರೆ ಸಮ್ಮೇಳನದಲ್ಲಿ ನನ್ನ ನಾಲ್ಕೂವರೆ ಸಾವಿರ ರೂಪಾಯಿ ಹಣ ಕಳುವಾದ ಬೇಸರವೂ ಆ ಖುಷಿಯೆದುರು ನಗಣ್ಯವಾಗಿಬಿಟ್ಟಿತ್ತು! ಖುಷಿಯಾಗಿ ಟ್ರೈನ್ ಹತ್ತಿದವನಿಗೆ ಇದ್ದಕ್ಕಿದ್ದಂತೆ ಘೋರ ಹೊಟ್ಟೆನೋವು! ಜೀವಸಹಿತ ಬೆಂಗಳೂರು ತಲುಪುತ್ತೇನೋ ಇಲ್ಲವೋ ಎನ್ನುವಷ್ಟು ಹೊಟ್ಟೆನೋವು! ಹೇಗೋ ಸುಧಾರಿಸಿಕೊಂಡು ಬೆಂಗಳೂರು ತಲುಪಿದೆ.

ಮನೆ ತಲುಪಿದವನೇ ಸ್ನಾನ ಮಾಡಿ ನನ್ನ ಕೋಣೆಯೊಳಗೆ ಮಲಗಿಬಿಟ್ಟೆ. ನನ್ನ ಬಾಡಿದ ಮುಖ ಗಮನಿಸಿದ ನನ್ನ ೧೮ ವರ್ಷದ ಕಿರಿಮಗ ಆರೋಗ್ಯ ವಿಚಾರಿಸಿದ. ಹೊಟ್ಟೆನೋವೆಂದಾಕ್ಷಣ ಸನಿಹದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕೂಡಲೇ ದಾಖಲಾಗುವಂತೆ ಒತ್ತಾಯಿಸತೊಡಗಿದ. ನನ್ನ ಹಿರಿಮಗ ಮತ್ತು ನನ್ನಾಕೆಯೂ ದನಿಗೂಡಿಸಿದರು. ಆದರೆ ನಾನು ಸುತರಾಂ ಒಪ್ಪಲಿಲ್ಲ. ಬೀದರದಲ್ಲಿ ಆಹಾರದೋಷ ಉಂಟಾಗಿರಬಹುದು, ತಾನಾಗಿಯೇ ಗುಣವಾಗುತ್ತದೆ ಎಂದು ಹೇಳಿ ಅವರನ್ನು ಸುಮ್ಮನಾಗಿಸಲೆತ್ನಿಸಿದೆ. ಕಿರಿಮಗ ಮಾತ್ರ ಸುಮ್ಮನಾಗಲಿಲ್ಲ. ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ಒಂದೇಸವನೆ ಹೇಳತೊಡಗಿದ. ನಾನು ಒಪ್ಪದಿದ್ದಾಗ ಮನೆಯ ಉಪ್ಪರಿಗೆ ಮೆಟ್ಟಿಲಮೇಲೆ ಹೋಗಿ ಕುಳಿತು ಅಳತೊಡಗಿದ. ಆಹಾರ ನಿರಾಕರಿಸಿದ. ತತ್‌ಕ್ಷಣ ನಾನು ಆಸ್ಪತ್ರೆಗೆ ದಾಖಲಾದರೇನೇ ತಾನು ಆಹಾರ ಮುಟ್ಟುವುದಾಗಿ ಹಠಹಿಡಿದ.

ಅವನ ಹಠಕ್ಕೆ ಸೋತು ನಾನು ಆ ಕೂಡಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾದೆ. ಚಕಚಕನೆ ಪರೀಕ್ಷೆಗಳು ನಡೆದವು. ಪಿತ್ತಕೋಶದ ತುಂಬ ಕುಳಿಗಳಾಗಿದ್ದುದು ಪರೀಕ್ಷೆಯಿಂದ ಗೊತ್ತಾಯಿತು! ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಪಿತ್ತಕೋಶವನ್ನೇ ತೆಗೆದುಹಾಕಲಾಯಿತು! ವಿಳಂಬ ಮಾಡಿದ್ದರೆ ಜೀವಗಂಡಾಂತರವಿತ್ತೆಂದು ಸರ್ಜನ್ ಹೇಳಿದರು!

ಇಷ್ಟು ಕುಳಿಗಳಿಂದ ಕೂಡಿದ ಪಿತ್ತಕೋಶವನ್ನು ತನ್ನ ಸುದೀರ್ಘ ಸೇವಾವಧಿಯಲ್ಲಿ ತಾನು ನೋಡಿಯೇ ಇಲ್ಲವೆಂದೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠಮಾಡುವಾಗ ತೋರಿಸಲು ಆ ಪಿತ್ತಕೋಶವನ್ನು ತಾವೇ ಇಟ್ಟುಕೊಳ್ಳುವುದಾಗಿಯೂ ನಂತರ ಆ ಸರ್ಜನ್ ನನಗೆ ತಿಳಿಸಿದರು!

ಏಳು ಜನ್ಮ
-----------
ಹೀಗೆ, ಒಂದಲ್ಲ, ಎರಡಲ್ಲ, ಏಳು ಸಲ ನಾನು ಸಾವಿನ ಮನೆ ಬಾಗಿಲನ್ನು ತಟ್ಟಿ ವಾಪಸು ಬಂದಿದ್ದೇನೆ!

ನನ್ನ ಹಣೆಯಲ್ಲಿ ಬದುಕು ಬರೆದಿತ್ತು. ಹಾಗಾಗಿ ಏಳು ಸಲವೂ ಬದುಕಿ ಉಳಿದೆ. ಬರೆದ ಬರಹವನ್ನು ತಪ್ಪಿಸಲು ಹರಿ ಹರ ವಿರಿಂಚರಿಗೂ ಸಾಧ್ಯವಿಲ್ಲ.

ಈಚೆಗೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ನೂರಾರು ಮಂದಿ ಜಲಸಮಾಧಿ ಹೊಂದಿದ್ದನ್ನು ಟಿವಿಯಲ್ಲಿ ನೋಡಿದಾಗ ನನಗೆ ಈ ’ಏಳು (ಪುನರ್)ಜನ್ಮ’ದ ಘಟನೆಗಳು ಕಣ್ಮುಂದೆ ಸುಳಿದವು. ಏಳರಲ್ಲಿ ನಾಲ್ಕು ಘಟನೆಗಳು ಜಲಸಮಾಧಿಯಾಗಹೊರಟಿದ್ದ ಘಟನೆಗಳೇ ತಾನೆ!

2 ಕಾಮೆಂಟ್‌ಗಳು:

  1. ಸರ್, ನೀವು ಬಹಳ ಗಟ್ಟಿಗರಿದ್ದೀರಿ ಅನ್ನಲೇಬೇಕು.
    ವಿಧಿ ನಿಯಮದ ಮುಂದೆ ನಮ್ಮದು ಏನೇನೂ ನಡೆಯುವುದಿಲ್ಲ ಅನ್ನುವುದು ಇದಕ್ಕೇ ಅನ್ನಬೇಕು.
    ರೋಚಕವಾಗಿತ್ತು ನಿಮ್ಮ ಘಟನೆಗಳು!

    ಪ್ರತ್ಯುತ್ತರಅಳಿಸಿ
  2. ಆನ೦ದ ಸರ್,
    ಅಬ್ಬಾ !! ಭಯಕ೦ರ ಅನುಭವ !!. ಮೈ ಜುಮಂ ಅನ್ನಿಸುತ್ತಾ ಇದೆ. . " ನನ್ನ ಹಣೆಯಲ್ಲಿ ಬದುಕು ಬರೆದಿತ್ತು. ಹಾಗಾಗಿ ಏಳು ಸಲವೂ ಬದುಕಿ ಉಳಿದೆ" ಈ ಮಾತನ್ನು ನಾನು ಒಪ್ಪುತ್ತೇನೆ ಸರ್,
    ಸರ್ ಎಲ್ಲರ ಜೀವನದಲ್ಲಿ ಸಾವಿನ ದವಡೆಯಿ೦ದ ಬದುಕಿ ಬ೦ದ ಅನುಭವ ಒ೦ದಾದರು ಇರುತ್ತದೆ .ಆದರೆ ನಿಮಗೆ ೭ ಸಲ ಎ೦ದರೆ ಆ ಅನುಭವವನ್ನು ಸವಿಯ ಬೇಕೇ ?ಅಥವಾ ಹಾಗೆ ಆದದ್ದಕ್ಕೆ ವಿದಿಯನ್ನು ಬಯ್ಯ ಬೇಕೇ ? ಗೊತ್ತಾಗುತ್ತಾ ಇಲ್ಲ !!!

    ಪ್ರತ್ಯುತ್ತರಅಳಿಸಿ