ಬೆಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೆಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮೇ 12, 2009

ನೀವು ಕೇಳದಿರಿ - 10

* ಮತ ಎಣಿಕೆಯ ದಿನವಾದ ಇದೇ ದಿನಾಂಕ 16 ಹಿಂದು ತಿಥಿ ಪ್ರಕಾರ ’ಶ್ರೀರಾಮ ಪಟ್ಟಾಭಿಷೇಕ’ದ ದಿನ.

- ಅದಕ್ಕೇ ಅಡ್ವಾಣಿ, ’history repeats’, ಅಂತ ಕನಸು ಕಾಣುತ್ತಿದ್ದಾರೆ!

+++

* ವರುಣ್ ಗಾಂಧಿ ಪ್ರಧಾನಿಯಾದರೆ ದೇಶದಲ್ಲಿ ಕುಟುಂಬಯೋಜನೆ ಕಡ್ಡಾಯವಂತೆ?

- ಹೌದು. ರಾಹುಲ್ ಗಾಂಧಿ ಪ್ರಧಾನಿಯಾದರೆ (ಸ್ವ)ಕುಟುಂಬ ಕಲ್ಯಾಣ ಕಡ್ಡಾಯ.
ಮನಮೋಹನ್ ಸಿಂಗ್ ಪ್ರಧಾನಿಯಾದರೆ ಅವರಿಗೆ ಈ ದೇಶಕ್ಕಿಂತ ಸೋನಿಯಾ ಮೇಡಂ ಆದೇಶ ಕಡ್ಡಾಯ.
ಅಡ್ವಾಣಿ ಪ್ರಧಾನಿಯಾದರೆ ದೇಶಾದ್ಯಂತ ಪ್ರತಿನಿತ್ಯ ರಾಮ(ಮಂದಿರ)ಭಜನೆ ಕಡ್ಡಾಯ.
ಮೋದಿ ಪ್ರಧಾನಿಯಾದರೆ ದೇಶದ ಎಲ್ಲೆಡೆ (ಮಾತಿನ) ಮೋಡಿ ಪ್ರದರ್ಶನ ಕಡ್ಡಾಯ.
ಲಾಲೂ ಪ್ರಧಾನಿಯಾದರೆ ಭ್ರಷ್ಟಾಚಾರ ಕಡ್ಡಾಯ.
ಪಾಸ್ವಾನ್ ಪ್ರಧಾನಿಯಾದರೆ ಬಿಹಾರಿಗಳಿಗೆ ರೈಲ್ವೆ ಫ್ರೀ ಪಾಸ್ ಕಡ್ಡಾಯ.
ಮಾಯಾವತಿ ಪ್ರಧಾನಿಯಾದರೆ ದೇಶಾದ್ಯಂತ ತನ್ನ ಬರ್ತ್‌ಡೇ (with gifts) ಕಡ್ಡಾಯ. (ಕಜ್ಜಾಯ.)
ಮುಲಾಯಂ ಪ್ರಧಾನಿಯಾದರೆ ಗೂಂಡಾಗಿರಿ ಕಡ್ಡಾಯ.
ಪವಾರ್ ಪ್ರಧಾನಿಯಾದರೆ ಮಗಳು ಸುಪ್ರಿಯಾಗೆ ಮಂತ್ರಿಗಿರಿ ಕಡ್ಡಾಯ.
ಕರಟ್ ಪ್ರಧಾನಿಯಾದರೆ ಜನರ ಕೈಗೆ ಕರಟ ಕಡ್ಡಾಯ.
ದೇವೇಗೌಡರು ಪ್ರಧಾನಿಯಾದರೆ ದೇಶಾದ್ಯಂತ ರಾಗಿಮುದ್ದೆ ಊಟ ಕಡ್ಡಾಯ.

+++

* ’ಪ್ರಜಾರಾಜ್ಯಂ’ ಪಕ್ಷ ಹೀನಾಯವಾಗಿ ಸೋತರೆ?

- ಆಗ ಪಕ್ಷದ ಹೆಸರನ್ನು ’ವಜಾರಾಜ್ಯಂ’ ಎಂದು ಬದಲಾಯಿಸಲಾಗುವುದು.

+++

* ಕ್ರಿಕೆಟ್‌ನಲ್ಲಿ ಜೀವಮಾನದ ನಿಷೇಧ; ಆದರೆ ಲೋಕಸಭೆಗೆ ಸ್ಪರ್ಧಿಸಬಹುದೇ?!

- ಲೋಕಸಭೆಯು ಈ ದೇಶಕ್ಕೆ ಕ್ರಿಕೆಟ್‌ನಷ್ಟು ಮುಖ್ಯ ಅಲ್ಲವಲ್ಲಾ, ಆದ್ದರಿಂದ ಸ್ಪರ್ಧಿಸಬಹುದು.

+++

* ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯ ನಿಜವಾಗುತ್ತೆಯೆ?

- ಒಂದು ಪ್ರಶ್ನೆಗೆ ಸ್ವಾಮೀಜಿ ರೂ.3000 ತಗೋತಾರೆ. ನನಗೆ ರೂ.6000 ಕೊಡಿ, ಉತ್ತರ ಹೇಳ್ತೀನಿ.

+++

* ’ಅಡ್ವಾಣಿಗೆ ಪ್ರಧಾನಿಯಾಗುವ ಯೋಗ ಇಲ್ಲ’, ಅಂತಾರೆ ಕೋಡಿಮಠದ ಸ್ವಾಮೀಜಿ!

- ಆ ಸ್ವಾಮೀಜಿಯನ್ನು ಭೆಟ್ಟಿಯಾಗಿ ಆಶೀರ್ವಾದ ಪಡೆದರೆ ಯೋಗ ಒದಗಿಬರಬಹುದು.

+++

* ಕೋಡಿಮಠದ ಭವಿಷ್ಯವಾಣಿ ಪ್ರಕಾರ ನೂತನ ಕೇಂದ್ರ ಸರ್ಕಾರದ ಆಡಳಿತ ಕೇವಲ ಎರಡೇ ವರ್ಷ!

- ಅನಂತರ ಕೋಡಿಮಠದ ಆಡಳಿತ.

+++

* ಇಲ್ಲೊಬ್ಬ, ’ಹುಚ್ಚುಖೋಡಿಮಠ’, ಅಂತಾನೆ!

- ಅಯ್ಯೋ, ಅವನಿಗೆ ಸುಮ್ಮನಿರೋಕೆ ಹೇಳಿ. ಇಲ್ಲದಿದ್ದರೆ ಸ್ವಾಮೀಜಿ ಅವನ ಭವಿಷ್ಯ ಹೇಳಿಬಿಡ್ತಾರೆ!

+++

* ’ಸಂಸ್ಕೃತದಿಂದ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ’, ಅಂದಿದ್ದಾರೆ ಪೇಜಾವರ ಶ್ರೀಗಳು.

- ಮಠದ ಸಂಸ್ಕೃತವೋ, ಪೋಲೀಸ್ ಇಲಾಖೆಯ ಸಂಸ್ಕೃತವೋ ಗೊತ್ತಾಗಲಿಲ್ಲ.

+++

* ’ಉದ್ಯಾನ ನಗರಿ’ ಬೆಂಗಳೂರಿನ ಮರಗಳೆಲ್ಲ ಹೋದರೆ ಗತಿ?

- ಚಿಂತೆ ಬೇಡ, ಆಗ ಬೆಂಗಳೂರು ಆಗುತ್ತೆ ’ಅಮರಾವತಿ’!

+++

* ವನವಾಸಕ್ಕೆ ಹೋಗ್ತೀರಂತೆ?

- ಪತ್ರಿಕಾಗೋಷ್ಠೀಲಿ ನಾನು ಈ ಮಾತನ್ನು off the record ಹೇಳಿದ್ದು. ಆದ್ದರಿಂದ ನಾನು ಈ ಮಾತನ್ನು ಹೇಳಿಯೇ ಇಲ್ಲ.

+++

* ’ನೀವು ಕೇಳದಿರಿ’ಗೆ ಹತ್ತು.

- ಎಲೆ ಮುದುರೆತ್ತು.

--0--

ಗುರುವಾರ, ಮೇ 7, 2009

ನೀವು ಕೇಳದಿರಿ - 5

* ಶ್ರುತಿ-ಮಹೇಂದರ್ ವಿರಸವಂತೆ?

- ಹೌದು. ಶ್ರುತಿಯ ಸರಸ ಸಂಗೀತದಲ್ಲಿ ಈಗ ವಿರಸದ ಅಪಶ್ರುತಿ ಮೂಡಿದೆ. ನಿನ್ನೆವರೆಗೂ ಇಂದ್ರ-ಚಂದ್ರ-ಮಹೇಂದ್ರ; ಈಗ, ’ಆ ಮಹೇಂದ್ರ ಯಾವ ಮಹಾ ಇಂದ್ರ?’

+++

* ಐಪಿಎಲ್ ಮ್ಯಾಚ್ ನೋಡೋಕೆ ಸ್ಟೇಡಿಯಂನಲ್ಲಿ ಜನರೇ ಇಲ್ಲವಂತೆ!

- ಮ್ಯಾಚ್ ಇಲ್ಲಿ ಅಲ್ಲ, ಆದ್ದರಿಂದ ಜನ ಅಲ್ಲಿ ಇಲ್ಲ.
(ಲಲಿತ್ ಮೋದಿಯೇ ಕಾರಣ ಬಲ್ಲ. ಆತನ ಸೊಕ್ಕಿನ ಫಲವೇ ಎಲ್ಲ!)

+++

* ಒಬಾಮಾ ನಿರ್ಧಾರದಿಂದ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಗತಿ ಏನು ಗುರುವೇ?

- ’ವಿದ್ಯುನ್ಮಾನ ನಗರ’ ಇದುವರೆಗೆ ’ವಿದ್ಯುನ್ಮಾದ ನಗರ’ ಆಗಿತ್ತು, ಇನ್ನುಮೇಲೆ ಅದು ’ವಿದ್ಯುನ್‌ಮೌನ ನಗರ’!

+++

* ನೇಪಾಳದಲ್ಲಿ ಮುಂದೇನಾಗಬಹುದು?

- ಇದುವರೆಗೆ ಪ್ರಚಂಡನ ಸರ್ಕಾರ ಇತ್ತು, ಇನ್ನು ಪ್ರಚಂಡ ಸರ್ಕಾರ ಬರಲಿದೆ!

+++

* ಚಲನಚಿತ್ರ ನಟಿಯರ ಬಗ್ಗೆ ಮಾತಾಡುವಾಗ ಯಾವಾಗಲೂ ಏಕವಚನವನ್ನೇ ಬಳಸುತ್ತೇವಲ್ಲಾ, ಯಾಕೆ?

- ಯಾಕೆಂದರೆ, ಅವರಿಗೆ ಎಂದಿಗೂ ವಯಸ್ಸಾಗೋದೇ ಇಲ್ವಲ್ಲಾ, ಅದಕ್ಕೆ.

+++

* ಇವತ್ತು ಲಾಲೂ ಕ್ಷೇತ್ರದಲ್ಲಿ ಮತದಾನ. ಲಾಲೂ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

- "ತುಮ್‌ಕೋ ಇಂಡ್ಯನ್ ರೈಲ್ವೆ ಕಾ ಫ್ರೀ ಪಾಸ್ ಸ್ಯಾಂಕ್ಷನ್."

+++

* ಮುಂದಿನ ಪ್ರಧಾನಿ ಯಾರಾಗಬಹುದು ಗುರುವೆ?

- ಗಂಡಸು ಅಥವಾ ಹೆಂಗಸು ಆಗಬಹುದು.

--೦--

ಗುರುವಾರ, ಮಾರ್ಚ್ 26, 2009

ಗುಳಿಗೆ ಬಗ್ಗೆ ಅಭಿಪ್ರಾಯಗಳು (ವಿವಿಧ ಮೂಲೆಗಳಿಂದ)

(ಗಣಕಯಂತ್ರ ಹೊಂದಿರದವರಿಗೂ ಹಾಳೆರೂಪದಲ್ಲಿ ಗುಳಿಗೆಯನ್ನಿತ್ತು ಅಥವಾ ಓದಿಹೇಳಿ ಅಭಿಪ್ರಾಯ ಸಂಗ್ರಹಿಸಲಾಗಿದೆ)

ಬ್ಯಾಂಗಲೋರ್ ಬಾಯ್ : ಒಂಥರಾ ಇದೆ, I can't understand; ಬಟ್ ಓಕೆ.’

ಮಂಡ್ಯ ಮರಿಗೌಡ್ರು : ಯೇ, ಅರ್ತಾಗಾಕಿಲ್ಲ ಬುಡು. ದಿನ್ವೂ ಪೇಪ್ರು ಗೀಪ್ರು ಓದ್ಕಂಡಿದ್ಯಾವಂತ್ರಿಗೆ ಇವೆಲ್ಲ. ಅಂಥವ್ರಿಗೆ ಇದು ಸಂದಾಕಿರಬೌದು.

ಡಾವಣಗೇರಿ ಡಬ್ಬೇಶಿ : ಎಲ್ಲೀ ಹಚ್ಚಿದಿ ತೆಗಿ, ಬರೇ ಕೊರ್‍ಯದೇ! ಈ ಗುಳಿಗ್ಯಾಗೆ ಏನಿರ್‍ತತಿ, ಏನಿಲ್ಲ ಅಂಬದ್ನೇ ಹೇಳಕ್ಬರಂಗಿಲ್ಲ! ಏಸ್ ಮಂದಿ ಇದ್ನ ಎಂಗೆ-ಎಸ್ಟ್ ತಗತಾರೆ ನೋಡ್ಬಕು.

ಧಾರವಾಡ ದೊಣ್ಣಿಪಾಟೀಲ : ಛಂದದನೋ ಇಲ್ಲೋ ಇಷ್ಟ್ ಲಗೂನ ಹ್ಯಾಂಗ್ ಹೇಳ್ಲಾಕ್ಕ್ ಆಗ್ತದ ಸಾಯೇಬ್ರ? ಇನ್ನೂ ಸ್ವಲ್ಪು ಟೈಂ ಕೊಡ್ರಲಾ.

ಬಳ್ಳಾರಿ ಬಿ.ಯರ್ರಿಸ್ವಾಮಿ : ಅದು ಬಂದು, ಚಾಲ ಟಫ್ ಇದ್ದದ. ನಮ್ ತೆಲಿವಿಗೆ ಅರ್ಥ ಆಗಂಗಿಲ್ಲ. ಆದ್ರೂ ಬೇಸ್ ಅದ ಬಿಡು.

ರೈಚೂರ್ ರೈತ : ಅದು ಬಂದ್ಕೇಸಿ ನಮಗ ಯಾನ್ ತಿಳೀತದ ದಣೀ? ನಮ್ಮ್ ದಗದ ಹೊಲಾ. ಅದ್ರ ವಿಸ್ಯ ಕೇಳು.

ಉಡುಪಿ ಉಪದ್ವ್ಯಾಪಾಚಾರ್ಯ : ಎಡ್ಡೆ ಉಂಡು ಮಾರಾಯ್ರೇ, ಲಾಯ್ಕುಂಟು. ಆದರೆ...ಒಮ್ಮೊಮ್ಮೆ.... ಸ್ವಲ್ಲ್‌ಲ್ಲ್‌ಪ...ಅಹ್ಹಹ್ಹ...ಅರ್ಥ ಆಂಡಾ?

ಕುಂದಾಪುರ ಖಾರಂತ : ಲಾಯ್ಕಿತ್ತಂಬ್ರಪ್ಪ. ಏನೋ, ನಾನ್ ಓದಿಲ್ಲೆ; ಜನ ಹೇಳಿದ್ದ್ ಕೇಂಡ್ರೆ ಒಳ್ಳೆದಿತ್ತನ್ಸುತ್ತ್. ಇನ್ನೂ ಲಾಯ್ಕಾತ್ತಂಬ್ರು, ಹೌದಾ?

ಬುಧವಾರ, ಮಾರ್ಚ್ 25, 2009

ಓಯ್ ಬೆಂಗಳೂರ್!

ಬೆಂಗಳೂರಿನಲ್ಲೀಗ
ಎರಡು ಬಗೆಯ ಮಳೆ
ಬರುತ್ತಿದೆ.

ಒಂದು ಮಳೆ
ಮೋಡಗಳಿಂದ ಸುರಿಯುತ್ತಿದೆ;
ಇನ್ನೊಂದು ಮಳೆ
ಪುಢಾರಿಗಳ ಬಾಯಿಂದ ಹರಿಯುತ್ತಿದೆ!

ಮೊದಲೇ ಬೆಂಗಳೂರಿನಲ್ಲಿ
ಟ್ರಾಫಿಕ್ಕೋ ಟ್ರಾಫಿಕ್ಕು;
ಅದರ ಮಧ್ಯೆ ಈ
ಮಳೆಗಳ ಸೊಕ್ಕು!
office-goers ಎಲ್ರೂ
ಮನೇಲಿರೋದೇ ಲಾಯಕ್ಕು!

ನನಗೀಗ ನೆನಪಿಗೆ ಬರ್ತಾ ಇದೆ
ನನ್ನೊಂದು ಹಳೆ ಕವನ;
ಅದನ್ನಿಲ್ಲಿ ಕೊಟ್ಟಿದ್ದೇನೆ,
ಓದಿ ಆಗಿರಿ ಪಾವನ!

---o---

(ವರ್ಷಗಳ ಕೆಳಗೆ ಮಿತ್ರ (ದಿ.) ಜಿ.ಎಸ್.ಸದಾಶಿವ ಅವರು ಇಷ್ಟಪಟ್ಟು ಈ ಕವನವನ್ನು ’ಸುಧಾ ಯುಗಾದಿ ವಿಶೇಷಾಂಕ’ದಲ್ಲಿ ಪ್ರಕಟಿಸಿದ್ದರು. ಅನಂತರ ನನ್ನ ಕವನಸಂಕಲನ ’ಚಿತ್ತದಾಗಸ’ದಲ್ಲಿಯೂ ಇದು ಕಾಣಿಸಿಕೊಂಡಿತು. ಆದ್ದರಿಂದ, ಈಗಾಗಲೇ ಈ ಕವನವನ್ನು ಓದಿರುವವರು ಇದನ್ನು ಮತ್ತೆ ಓದಿ mental torture ಅನುಭವಿಸುವ ಅಗತ್ಯವಿಲ್ಲ.)

ಬೆಂಗಳೂರಲ್ಲಿ ರಸ್ತೆ ಪ್ರಯಾಣ ಹಾಗೂ ಆಫೀಸ್ ಡ್ಯೂಟಿ
-----------------------------------------

ಬೆಂಗಳೂರಿಗೆ ಬಂದ ಹೊಸತರಲ್ಲಿ
ಒಂದು ದಿನ,
ಆಫೀಸಿಗೆ ಹೋಗ್ತಿದ್ದಾಗ
ರಸ್ತೆ ದಾಟುವಾಗ ಚಪ್ಪಲಿ ಕಳಕೊಂಡೆ
ಸ್ಕೂಟರು ಅಡ್ಡಬಂದಿತ್ತು
ಚಪ್ಪಲಿ ಕಾಲುಜಾರಿತ್ತು
ಚಪ್ಪಲಿ ಬಿಟ್ಟು ನಾನು
ದೂರ ಉಳಕೊಂಡೆ

ಇನ್ನೊಂದು ದಿನ,
ಕಾರು ಅಡ್ಡಬಂದು
ಕಾಲೇ ಕಳೆದುಹೋಯ್ತು
ಕಾಲು ಹೋದರೇನು? ನಾನಿದ್ದೀನಲ್ಲ!
ಅಂದ್ಕೊಂಡು
ಆಫೀಸಿಗೆ ಹೋದೆ

ಮತ್ತೊಂದು ದಿನ,
ಬೀಟೀಯೆಸ್‌ನಲ್ಲಿ ಹೋಗ್ತಿದ್ದಾಗ
ನಂಗೆ ತಲೇನೇ ಇಲ್ಲ
ಅನ್ನೋ ವಿಷಯ ಗೊತ್ತಾಯ್ತು.
ಡ್ಯೂಟಿ ಮಾಡೋಕೆ ತಲೆ ಏಕೆ?
ತಲೆ ಚಿಂತೆ ಬಿಟ್ಟು
ಡ್ಯೂಟಿಗೆ ಹಾಜರಾದೆ

ಹೀಗೇ ಬರಬರ್ತಾ,
ಬೀಟೀಯೆಸ್ ಬಸ್ಸು ನಿಲ್ಲದಿದ್ದಾಗ,
ನಿಂತ ಬಸ್ಸನ್ನು ನಾನು
ಹತ್ತಲಾರದೇಹೋದಾಗ
ನಂಗೆ ಕೈಯೂ ಇಲ್ಲ
ಅಂತ ಗೊತ್ತಾಯ್ತು.
ಟ್ರಾಫಿಕ್ ಸಿಗ್ನಲ್ ನೋಡ್ತಾ ಹೋಗಿ
ಹುಡುಗಿಯೊಬ್ಬಳಿಗೆ ಢಿಕ್ಕಿಹೊಡೆದಾಗ
ನಂಗೆ ಕಣ್ಣಿಲ್ಲ
ಅನ್ನೋದೂ ತಿಳೀತು.
ಓಡ್ತಾಇರೋ ಬಸ್ಸಿಂದ ಹಾರಿ
ಗಿಜಿಗಿಜಿಗುಟ್ಟೋ ರಸ್ತೇಲಿ ತೂರಿ
ಓಡಿಹೋಗ್ತಿರೋ
ಎರಡನೇ ಬಸ್‌ ಏರೋಕೆ
ಎದೆ ಬೇಕು,
ನಂಗೆ ಅದೂ ಇಲ್ಲ
ಅನ್ನೋದೂ ಅರಿವಾಯ್ತು
ಕೊನೆಗೆ.

ಈಗ ನಾನು,
ಕೈ ಬಿಟ್ಟು, ಕಾಲು ಬಿಟ್ಟು,
ಎದೆ ಬಿಟ್ಟು, ತಲೆ ಬಿಟ್ಟು,...
ಎದ್ದಕೂಡಲೇ ಮನೆ ಬಿಟ್ಟು
ಆರಾಮಾಗಿ ಹೋಗ್ತೀನಿ
ಆಫೀಸಿಗೆ.
ನಿಶ್ಚಿಂತೆಯಿಂದ ಡ್ಯೂಟಿ ಮುಗಿಸಿ
ನಿಧಾನವಾಗಿ ಹಾದಿ ಸವೆಸಿ
ನಿದ್ರೆ ಹೊತ್ತಿಗೆ ಮನೆ ಸೇರ್ತೀನಿ
ಮೆತ್ತಗೆ.