ipl ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ipl ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮೇ 7, 2009

ನೀವು ಕೇಳದಿರಿ - 5

* ಶ್ರುತಿ-ಮಹೇಂದರ್ ವಿರಸವಂತೆ?

- ಹೌದು. ಶ್ರುತಿಯ ಸರಸ ಸಂಗೀತದಲ್ಲಿ ಈಗ ವಿರಸದ ಅಪಶ್ರುತಿ ಮೂಡಿದೆ. ನಿನ್ನೆವರೆಗೂ ಇಂದ್ರ-ಚಂದ್ರ-ಮಹೇಂದ್ರ; ಈಗ, ’ಆ ಮಹೇಂದ್ರ ಯಾವ ಮಹಾ ಇಂದ್ರ?’

+++

* ಐಪಿಎಲ್ ಮ್ಯಾಚ್ ನೋಡೋಕೆ ಸ್ಟೇಡಿಯಂನಲ್ಲಿ ಜನರೇ ಇಲ್ಲವಂತೆ!

- ಮ್ಯಾಚ್ ಇಲ್ಲಿ ಅಲ್ಲ, ಆದ್ದರಿಂದ ಜನ ಅಲ್ಲಿ ಇಲ್ಲ.
(ಲಲಿತ್ ಮೋದಿಯೇ ಕಾರಣ ಬಲ್ಲ. ಆತನ ಸೊಕ್ಕಿನ ಫಲವೇ ಎಲ್ಲ!)

+++

* ಒಬಾಮಾ ನಿರ್ಧಾರದಿಂದ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಗತಿ ಏನು ಗುರುವೇ?

- ’ವಿದ್ಯುನ್ಮಾನ ನಗರ’ ಇದುವರೆಗೆ ’ವಿದ್ಯುನ್ಮಾದ ನಗರ’ ಆಗಿತ್ತು, ಇನ್ನುಮೇಲೆ ಅದು ’ವಿದ್ಯುನ್‌ಮೌನ ನಗರ’!

+++

* ನೇಪಾಳದಲ್ಲಿ ಮುಂದೇನಾಗಬಹುದು?

- ಇದುವರೆಗೆ ಪ್ರಚಂಡನ ಸರ್ಕಾರ ಇತ್ತು, ಇನ್ನು ಪ್ರಚಂಡ ಸರ್ಕಾರ ಬರಲಿದೆ!

+++

* ಚಲನಚಿತ್ರ ನಟಿಯರ ಬಗ್ಗೆ ಮಾತಾಡುವಾಗ ಯಾವಾಗಲೂ ಏಕವಚನವನ್ನೇ ಬಳಸುತ್ತೇವಲ್ಲಾ, ಯಾಕೆ?

- ಯಾಕೆಂದರೆ, ಅವರಿಗೆ ಎಂದಿಗೂ ವಯಸ್ಸಾಗೋದೇ ಇಲ್ವಲ್ಲಾ, ಅದಕ್ಕೆ.

+++

* ಇವತ್ತು ಲಾಲೂ ಕ್ಷೇತ್ರದಲ್ಲಿ ಮತದಾನ. ಲಾಲೂ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

- "ತುಮ್‌ಕೋ ಇಂಡ್ಯನ್ ರೈಲ್ವೆ ಕಾ ಫ್ರೀ ಪಾಸ್ ಸ್ಯಾಂಕ್ಷನ್."

+++

* ಮುಂದಿನ ಪ್ರಧಾನಿ ಯಾರಾಗಬಹುದು ಗುರುವೆ?

- ಗಂಡಸು ಅಥವಾ ಹೆಂಗಸು ಆಗಬಹುದು.

--೦--

ಸೋಮವಾರ, ಮಾರ್ಚ್ 23, 2009

ಐಪಿಎಲ್ಲೇ ಸತ್ಯ

ಎಲ್ಲಾದರು ಇರು ಎಂತಾದರು ಇರು
ಹೆಸರಿಗೆ ಮಾತ್ರ ’ಐಪಿಎಲ್’ ಆಗಿರು
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ

ಐಪಿಎಲ್ ಎಂಬ ಓ ಮುದ್ದಿನ ಕರು,
ಟಿವಿ ಪ್ರಸಾರವೊಂದಿದ್ದರೆ ನೀ ನಮಗೆ ಕಲ್ಪತರು

ನೀ ಮೆಟ್ಟುವ ನೆಲ ಅದೆ ಅನ್ಯರ ನೆಲ
ನೀ ಆಡುವ ಪಿಚ್ ಧನಲಕ್ಷ್ಮಿ
ನೀ ಮುಟ್ಟುವ ಬ್ಯಾಟ್ ಅದೆ ದುಡ್ಡಿನ ಗಂಟ್
ನೀ ಕುಡಿಯುವ ನೀರ್ ಬಿಸ್‌ಲೇರಿ

ಗಂಟನು ನೋಡುವ ನಿನ್ನಾ ಕಂಗಳು
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ //ಎಲ್ಲಾದರು ಇರು..//

ಹರಿಯುವ ಹಣದಾ ಹೊಳೆಗೆರಗುವ ಮನ
ಹಾಳಾಗಿಹ ಬುದ್ಧಿಗೆ ಕೊರಗದ ಮನ
ಬೆಳಗಾದರೆ ದುಡ್ಡಿಗೆ ಸಾಯುವ ಮನ
ಮಜ-ಮೋಜಿಗೆ ಹೊಂಪುಳಿ ಹೋಗುವ ಮನ

ಕಾಂಚಾಣಕೆ ಬಲಿಯಾಗುವ ಪೆಂಪಿಗೆ
ಹೆಸರಿನ ಇಂಪಿಗೆ ನೋಟಿನ ಸೊಂಪಿಗೆ
ನಾವುಗಳೆಲ್ಲರು ಹೊಗಳುವ ತಪ್ಪಿಗೆ
ರಸರೋಮಾಂಚನಗೊಳುವಾ ನಿನ್ನ್ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ

ಎಲ್ಲಾದರು ಇರು ಎಂತಾದರು ಇರು
ದೇಶದ ಮಾನ ಹರಾಜ್ ಹಾಕ್ತಾ ಇರು
ಐಪಿಎಲ್ಲೇ ಸತ್ಯ
ಐಶ್ವರ್ಯವೆ ನಿತ್ಯ
ಅನ್ಯರ ನೆಲವೇ ಪಥ್ಯ

(ದೇಶಾಭಿಮಾನ?
ಮಿಥ್ಯ!)