* ಶ್ರುತಿ-ಮಹೇಂದರ್ ವಿರಸವಂತೆ?
- ಹೌದು. ಶ್ರುತಿಯ ಸರಸ ಸಂಗೀತದಲ್ಲಿ ಈಗ ವಿರಸದ ಅಪಶ್ರುತಿ ಮೂಡಿದೆ. ನಿನ್ನೆವರೆಗೂ ಇಂದ್ರ-ಚಂದ್ರ-ಮಹೇಂದ್ರ; ಈಗ, ’ಆ ಮಹೇಂದ್ರ ಯಾವ ಮಹಾ ಇಂದ್ರ?’
+++
* ಐಪಿಎಲ್ ಮ್ಯಾಚ್ ನೋಡೋಕೆ ಸ್ಟೇಡಿಯಂನಲ್ಲಿ ಜನರೇ ಇಲ್ಲವಂತೆ!
- ಮ್ಯಾಚ್ ಇಲ್ಲಿ ಅಲ್ಲ, ಆದ್ದರಿಂದ ಜನ ಅಲ್ಲಿ ಇಲ್ಲ.
(ಲಲಿತ್ ಮೋದಿಯೇ ಕಾರಣ ಬಲ್ಲ. ಆತನ ಸೊಕ್ಕಿನ ಫಲವೇ ಎಲ್ಲ!)
+++
* ಒಬಾಮಾ ನಿರ್ಧಾರದಿಂದ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನ ಗತಿ ಏನು ಗುರುವೇ?
- ’ವಿದ್ಯುನ್ಮಾನ ನಗರ’ ಇದುವರೆಗೆ ’ವಿದ್ಯುನ್ಮಾದ ನಗರ’ ಆಗಿತ್ತು, ಇನ್ನುಮೇಲೆ ಅದು ’ವಿದ್ಯುನ್‌ಮೌನ ನಗರ’!
+++
* ನೇಪಾಳದಲ್ಲಿ ಮುಂದೇನಾಗಬಹುದು?
- ಇದುವರೆಗೆ ಪ್ರಚಂಡನ ಸರ್ಕಾರ ಇತ್ತು, ಇನ್ನು ಪ್ರಚಂಡ ಸರ್ಕಾರ ಬರಲಿದೆ!
+++
* ಚಲನಚಿತ್ರ ನಟಿಯರ ಬಗ್ಗೆ ಮಾತಾಡುವಾಗ ಯಾವಾಗಲೂ ಏಕವಚನವನ್ನೇ ಬಳಸುತ್ತೇವಲ್ಲಾ, ಯಾಕೆ?
- ಯಾಕೆಂದರೆ, ಅವರಿಗೆ ಎಂದಿಗೂ ವಯಸ್ಸಾಗೋದೇ ಇಲ್ವಲ್ಲಾ, ಅದಕ್ಕೆ.
+++
* ಇವತ್ತು ಲಾಲೂ ಕ್ಷೇತ್ರದಲ್ಲಿ ಮತದಾನ. ಲಾಲೂ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.
- "ತುಮ್‌ಕೋ ಇಂಡ್ಯನ್ ರೈಲ್ವೆ ಕಾ ಫ್ರೀ ಪಾಸ್ ಸ್ಯಾಂಕ್ಷನ್."
+++
* ಮುಂದಿನ ಪ್ರಧಾನಿ ಯಾರಾಗಬಹುದು ಗುರುವೆ?
- ಗಂಡಸು ಅಥವಾ ಹೆಂಗಸು ಆಗಬಹುದು.
--೦--
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಶಾಸ್ತ್ರಿಯವರೆ,
ಪ್ರತ್ಯುತ್ತರಅಳಿಸಿಅಭಿನಂದನೆಗಳು.
ಯಾತಕ್ಕಂತೀರಾ?
ಯಾವ ಗಳಿಗೆಯಲ್ಲಿ ದ್ವಾರಕೀಶ ಅನ್ನುವ ನಟ ಕಾವೇರಿ ಎನ್ನುವ ಹುಡುಗಿಗೆ "ಶೃತಿ" ಎಂದು ತಪ್ಪು ನಾಮಕರಣ ಮಾಡಿದನೊ, ಅವತ್ತಿನಿಂದ ಶ್ರುತಿ ಎನ್ನುವ ಪದ ಮಾಯವಾಗಿ ಬಿಟ್ಟಿದೆ. ಬರೀ ಹೆಸರಷ್ಟೇ ಅಲ್ಲ, ಶ್ರುತಿ ಮತ್ತೂ ಸ್ಮೃತಿ ಸಹ
ಈಗ ಶೃತಿ ಮತ್ತೂ ಸ್ಮೃತಿ ಆಗಿಬಿಟ್ಟಿವೆ.
ರಾಯಚೂರಿನಲ್ಲಿ (?) ಒಮ್ಮೆ ಬನ್ನಂಜೆ ಗೋವಿಂದಾಚಾರ್ಯರ ಒಂದು ಸಮಾರಂಭದಲ್ಲಿ ಹಿಂದುಗಡೆ ಹಾಕಿದ ತೆರೆಯ ಮೇಲೆ "..ಶೃತಿ...." ಎಂದು ಬರೆಯಲಾಗಿತ್ತು.
ನೀವೀಗ ಸರಿಯಾದ ಪದ ಬಳಸಿದ್ದನ್ನು ನೋಡಿ ನನಗೆ ಆನಂದವಾಗಿದೆ, ಆನಂದರಾಮಜೀ!
ವಾರಪತ್ರಿಕೆಯೊಂದರಲ್ಲಿ ’ಶೃತಿ ಮೀರಿದ ಪ್ರೀತಿ’ ಎಂಬ ಶೀರ್ಷಿಕೆಯೊಂದಿಗೆ ಧಾರಾವಾಹಿ ಕಾದಂಬರಿಯೊಂದು ಪ್ರಕಟವಾಗುತ್ತಿದ್ದುದನ್ನು ಗಮನಿಸಿದ ನಾನು ಆ ಪತ್ರಿಕೆಯ ಸಂಪಾದಕರಿಗೆ ಪತ್ರ ಬರೆದು ಆ ಅಪ’ಶೃತಿ’ಯನ್ನು ’ಶ್ರುತಿ’ಬದ್ಧವಾಗಿಸಿದ್ದೇನೆ.
ಪ್ರತ್ಯುತ್ತರಅಳಿಸಿಕೆ.ಎಸ್.ನಿಸಾರ್ ಅಹಮದ್ ಅವರು ಪದದೆಚ್ಚರ ಮೆರೆದ ಸಂದರ್ಭವೊದರಿಂದ ಪ್ರೇರಣೆ ಹೊಂದಿ ನಾನು ಬಹಳ ಹಿಂದೆಯೇ ’ಪದದೆಚ್ಚರ’ ಎಂಬ ಲೇಖನ ಸಿದ್ಧಪಡಿಸಿಟ್ಟುಕೊಂಡಿದ್ದೇನೆ. ಯಾವುದಾದರೂ ಪತ್ರಿಕೆಗೆ ಕಳಿಸುವ ಯೋಚನೆಯಿದೆ.
ಜನಾರ್ಧನನು ಉಪಹಾರ ಸೇವಿಸುತ್ತಿರುವುದನ್ನು ನೋಡಿದರಂತೂ ನನಗೆ ವಿಪರೀತ ಸಿಟ್ಟು ಬರುತ್ತದೆ.
ಪದಶುದ್ಧಿಯ ಬಗ್ಗೆ ನಿಮಗಿರುವ ಕಳಕಳಿಯನ್ನು ನಾನು ಮೆಚ್ಚಿದೆ.