ugadi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ugadi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮಾರ್ಚ್ 26, 2009

ಅರಿಕೆ

ಆತ್ಮೀಯ ಮಿತ್ರರೆಲ್ಲರಿಗೂ ಯುಗಾದಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯ.

ನನ್ನನ್ನಿಂದು
ಪತ್ರಿಕೆಯೊಂದು
ಹಾಸ್ಯ,
ವಿಡಂಬನೆ
ಮತ್ತು
ಶ್ಲೇಷೆ
ಕೃಷಿಯ ಬಗ್ಗೆ
ಮರುಚಿಂತನಕ್ಕೆ
ಹಚ್ಚಿದೆ.
ಆದ್ದರಿಂದ
ನಾನಿಂದು
ಗುಳಿಗೆಯಂಗಡಿಯನ್ನು
ಮುಚ್ಚಿದೆ.

ನಿಮ್ಮ ಅಭಿಮಾನದಿಂದ
ನನ್ನ ಸಂತೋಷ
ಹೆಚ್ಚಿದೆ.
ಈ ಕೆಳಗಿನ
ನನ್ನ ಕವಿತೆ
ನನ್ನ ಮನವನ್ನು
ನಿಮ್ಮೆದುರು
ಬಿಚ್ಚಿದೆ.

ಪೊಡಮಡುವೆನೀ ಜಗಕೆ
-------------------
ಪೊಡಮಡುವೆನೀ ಜಗಕೆ ಬೆಡಗು ಬೀರುವ ಯುಗಕೆ
ಸಡಗರದ ಸೆಲೆಯಾದ ಜೀವಕುಲಕೆ
ಒಡವೆಯಂದದಿ ಮೆರೆವ ಪರಮ ಪುಣ್ಯೋದಯಕೆ
ನಡುಬಾಗಿ ನಮಿಪೆ ಪ್ರಭು, ನಿನ್ನಭಯಕೆ

ಬಂದೆನೆಂಬುದೆ ಇಲ್ಲಿ ಒಂದು ಸಾಕ್ಷಾತ್ಕಾರ
ಮುಂದೆ ಕಾಣುವ ನೋಟ ಬಲು ಸುಂದರ
ಇಂದು ನಾಳೆಗಳೆಂಬ ಚಂದ ಮುತ್ತಿನಹಾರ
ತಂದು ತೊಡಿಸಿದ ದೊರೆಯೆ, ನಾ ಋಣಿ ಚಿರ

ಭವದ ಸಾಗರವೆನ್ನುವರು ಈಸಲಂಜುವರು
ಅವತೀರ್ಣ ಸ್ಥಿತಿಗಾಗಿ ತವಕಿಸುವರು
ಭುವಿಯ ಭವ್ಯತೆಯಂದ ಏನು ಬಲ್ಲರು ಅವರು
ಸವಿಯಲೆಂದೇ ಬಂದೆ ನಾನಾದರೂ

ಪ್ರತಿ ಘಳಿಗೆಯೂ ಇಲ್ಲಿ ನನಗೆ ಅಮೃತಘಳಿಗೆ
ಪ್ರತಿ ವಸಂತವು ಪ್ರಭುವೆ ನಿನ್ನ ಒಸಗೆ
ಪ್ರತಿ ವಸ್ತುವೂ ಇಲ್ಲಿ ಇಹುದು ನನಗಾಗೇ
ಅತಿ ಭಾಗ್ಯವಂತ ನಾನ್ ಅಖಿಲ ಇಳೆಗೇ

ಎಲ್ಲಿ ನೋಡಿದರಲ್ಲಿ ನಿನ್ನ ಚೆಲುವೇ ಚೆಲುವು
ಬಲ್ಲಿದನೆ, ಈ ರಚನೆ ಅಸಮಾನವು
ಇಲ್ಲಿಯಲ್ಲದೆ ನನಗೆ ಇನ್ನಾವ ಸ್ವರ್ಗವೂ
ಇಲ್ಲವೈ, ಈ ಜಗವೆ ನನ್ನ ತಾವು

ಇಡು ಇಲ್ಲಿ ನನ್ನನು ಅದೆಷ್ಟು ದಿನವಾದರೂ
ಬಿಡು ಎನ್ನನೆನ್ನ ಪಾಡಿಗೆ, ಅಲ್ಲಿರು
ಕಡೆದಿನದವರೆಗೆ ಅನುಭವಿಸಿಯೇ ಈ ಊರು
ಬಿಡುವೆ ನಾ, ಸೇರುವೆನು ನಿನ್ನ ಊರು

ಬುಧವಾರ, ಮಾರ್ಚ್ 25, 2009

ಓಯ್ ಬೆಂಗಳೂರ್!

ಬೆಂಗಳೂರಿನಲ್ಲೀಗ
ಎರಡು ಬಗೆಯ ಮಳೆ
ಬರುತ್ತಿದೆ.

ಒಂದು ಮಳೆ
ಮೋಡಗಳಿಂದ ಸುರಿಯುತ್ತಿದೆ;
ಇನ್ನೊಂದು ಮಳೆ
ಪುಢಾರಿಗಳ ಬಾಯಿಂದ ಹರಿಯುತ್ತಿದೆ!

ಮೊದಲೇ ಬೆಂಗಳೂರಿನಲ್ಲಿ
ಟ್ರಾಫಿಕ್ಕೋ ಟ್ರಾಫಿಕ್ಕು;
ಅದರ ಮಧ್ಯೆ ಈ
ಮಳೆಗಳ ಸೊಕ್ಕು!
office-goers ಎಲ್ರೂ
ಮನೇಲಿರೋದೇ ಲಾಯಕ್ಕು!

ನನಗೀಗ ನೆನಪಿಗೆ ಬರ್ತಾ ಇದೆ
ನನ್ನೊಂದು ಹಳೆ ಕವನ;
ಅದನ್ನಿಲ್ಲಿ ಕೊಟ್ಟಿದ್ದೇನೆ,
ಓದಿ ಆಗಿರಿ ಪಾವನ!

---o---

(ವರ್ಷಗಳ ಕೆಳಗೆ ಮಿತ್ರ (ದಿ.) ಜಿ.ಎಸ್.ಸದಾಶಿವ ಅವರು ಇಷ್ಟಪಟ್ಟು ಈ ಕವನವನ್ನು ’ಸುಧಾ ಯುಗಾದಿ ವಿಶೇಷಾಂಕ’ದಲ್ಲಿ ಪ್ರಕಟಿಸಿದ್ದರು. ಅನಂತರ ನನ್ನ ಕವನಸಂಕಲನ ’ಚಿತ್ತದಾಗಸ’ದಲ್ಲಿಯೂ ಇದು ಕಾಣಿಸಿಕೊಂಡಿತು. ಆದ್ದರಿಂದ, ಈಗಾಗಲೇ ಈ ಕವನವನ್ನು ಓದಿರುವವರು ಇದನ್ನು ಮತ್ತೆ ಓದಿ mental torture ಅನುಭವಿಸುವ ಅಗತ್ಯವಿಲ್ಲ.)

ಬೆಂಗಳೂರಲ್ಲಿ ರಸ್ತೆ ಪ್ರಯಾಣ ಹಾಗೂ ಆಫೀಸ್ ಡ್ಯೂಟಿ
-----------------------------------------

ಬೆಂಗಳೂರಿಗೆ ಬಂದ ಹೊಸತರಲ್ಲಿ
ಒಂದು ದಿನ,
ಆಫೀಸಿಗೆ ಹೋಗ್ತಿದ್ದಾಗ
ರಸ್ತೆ ದಾಟುವಾಗ ಚಪ್ಪಲಿ ಕಳಕೊಂಡೆ
ಸ್ಕೂಟರು ಅಡ್ಡಬಂದಿತ್ತು
ಚಪ್ಪಲಿ ಕಾಲುಜಾರಿತ್ತು
ಚಪ್ಪಲಿ ಬಿಟ್ಟು ನಾನು
ದೂರ ಉಳಕೊಂಡೆ

ಇನ್ನೊಂದು ದಿನ,
ಕಾರು ಅಡ್ಡಬಂದು
ಕಾಲೇ ಕಳೆದುಹೋಯ್ತು
ಕಾಲು ಹೋದರೇನು? ನಾನಿದ್ದೀನಲ್ಲ!
ಅಂದ್ಕೊಂಡು
ಆಫೀಸಿಗೆ ಹೋದೆ

ಮತ್ತೊಂದು ದಿನ,
ಬೀಟೀಯೆಸ್‌ನಲ್ಲಿ ಹೋಗ್ತಿದ್ದಾಗ
ನಂಗೆ ತಲೇನೇ ಇಲ್ಲ
ಅನ್ನೋ ವಿಷಯ ಗೊತ್ತಾಯ್ತು.
ಡ್ಯೂಟಿ ಮಾಡೋಕೆ ತಲೆ ಏಕೆ?
ತಲೆ ಚಿಂತೆ ಬಿಟ್ಟು
ಡ್ಯೂಟಿಗೆ ಹಾಜರಾದೆ

ಹೀಗೇ ಬರಬರ್ತಾ,
ಬೀಟೀಯೆಸ್ ಬಸ್ಸು ನಿಲ್ಲದಿದ್ದಾಗ,
ನಿಂತ ಬಸ್ಸನ್ನು ನಾನು
ಹತ್ತಲಾರದೇಹೋದಾಗ
ನಂಗೆ ಕೈಯೂ ಇಲ್ಲ
ಅಂತ ಗೊತ್ತಾಯ್ತು.
ಟ್ರಾಫಿಕ್ ಸಿಗ್ನಲ್ ನೋಡ್ತಾ ಹೋಗಿ
ಹುಡುಗಿಯೊಬ್ಬಳಿಗೆ ಢಿಕ್ಕಿಹೊಡೆದಾಗ
ನಂಗೆ ಕಣ್ಣಿಲ್ಲ
ಅನ್ನೋದೂ ತಿಳೀತು.
ಓಡ್ತಾಇರೋ ಬಸ್ಸಿಂದ ಹಾರಿ
ಗಿಜಿಗಿಜಿಗುಟ್ಟೋ ರಸ್ತೇಲಿ ತೂರಿ
ಓಡಿಹೋಗ್ತಿರೋ
ಎರಡನೇ ಬಸ್‌ ಏರೋಕೆ
ಎದೆ ಬೇಕು,
ನಂಗೆ ಅದೂ ಇಲ್ಲ
ಅನ್ನೋದೂ ಅರಿವಾಯ್ತು
ಕೊನೆಗೆ.

ಈಗ ನಾನು,
ಕೈ ಬಿಟ್ಟು, ಕಾಲು ಬಿಟ್ಟು,
ಎದೆ ಬಿಟ್ಟು, ತಲೆ ಬಿಟ್ಟು,...
ಎದ್ದಕೂಡಲೇ ಮನೆ ಬಿಟ್ಟು
ಆರಾಮಾಗಿ ಹೋಗ್ತೀನಿ
ಆಫೀಸಿಗೆ.
ನಿಶ್ಚಿಂತೆಯಿಂದ ಡ್ಯೂಟಿ ಮುಗಿಸಿ
ನಿಧಾನವಾಗಿ ಹಾದಿ ಸವೆಸಿ
ನಿದ್ರೆ ಹೊತ್ತಿಗೆ ಮನೆ ಸೇರ್ತೀನಿ
ಮೆತ್ತಗೆ.

ಭಾನುವಾರ, ಮಾರ್ಚ್ 22, 2009

..ಗೆ

ಹೋಳಿಗೆ
ಕಟ್ಟಿಗೆ
ಯುಗಾದಿಗೆ
ಹೋಳಿಗೆ

ಹೆಸರಿಲ್ಲದ ಒಂದು ಡಜನ್ ಮಿಣಿಮಿಣಿ ಮೈಕ್ರೌಮೈಕ್ರೌ ಕಥೆಗಳು (ಹೆಡ್ಡಿಂಗೇ ಇಷ್ಟುದ್ದ!)

-೧-
ಅಂದು ದೀಪಾವಳಿ ರಾತ್ರಿ. ಕೆಲ ದಿನಗಳ ಹಿಂದಷ್ಟೇ ಪಕ್ಕದಮನೆಗೆ ಬಾಡಿಗೆಗೆ ಬಂದಿದ್ದ ಮುದಿ ಸಂಸಾರದ ಹದಿ ಹರಯದ ಸದಸ್ಯೆಯಾದ ಆಕೆಯ ಮುಖವನ್ನು ಅವಳು ಹಚ್ಚಿದ ನಕ್ಷತ್ರಕಡ್ಡಿಯ ಬೆಳಕಿನಲ್ಲಿ ನಾನು ದಿಟ್ಟಿಸಿದಾಗ ಅವಳೂ ಓರೆಗಣ್ಣಿಂದ ನನ್ನನ್ನು ದಿಟ್ಟಿಸಿದಳು. ಮುಂದಿನ ಒಂದು ಗಂಟೆ ಇಬ್ಬರಿಗೂ ದೀಪಾವಳಿ.
ಇದು ಆರು ವರ್ಷಗಳ ಹಿಂದಿನ ಘಟನೆ. ಈಗ ನಾನು ಮನೆ ಹೊರಗಡೆ ನಾಲ್ಕು ವರ್ಷದ ಮಗರಾಯನ ಕೈಯಿಂದ ಪಟಾಕಿ ಹಚ್ಚಿಸುತ್ತಿದ್ದರೆ ಆಕೆ ಒಳಗೆ ಅಡುಗೆಮನೆಯಲ್ಲಿ ಬ್ಯುಸಿ.
ಆ ದೀಪಾವಳಿಯೇ ಚೆನ್ನಾಗಿತ್ತು.

***

-೨-
’ಮೊದಲ್ನೇ ದೀಪಾವಳಿಗೆ ಅಳಿಯ-ಮಗಳು ಬರೋವಾಗ್ಲೇ ಗ್ಯಾಸ್ ಮುಗೀಬೇಕೇ! ಅಂಗಡಿಯವ್ರು ಸಿಲಿಂಡರ್ ಕೊಡೋಕೆ ಇನ್ನೂ ನಾಕು ದಿನ ಆಗುತ್ತೆ ಅಂತಾರೆ. ಎಕ್ಸ್ಟ್ರಾ ಸಿಲಿಂಡರೂ ಇಲ್ಲ; ಪಕ್ಕದ್ಮನೇಲೂ ಸಿಗ್ಲಿಲ್ಲ. ಛೆ!’ ಅಂತ ಅಡುಗೆಮನೆಯೊಳಗಿಂದ ನನ್ನಾಕೆ ಹತ್ತನೇ ಸಲ ಗೊಣಗ್ತಿದ್ದಂತೆ ಅಳಿಯ-ಮಗಳು ಬಂದೇಬಿಟ್ರು. ಮತ್ತೆ ಹತ್ತು ನಿಮಿಷದಲ್ಲೇ ಸಿಲಿಂಡರ್ ಕೂಡ ಪ್ರತ್ಯಕ್ಷ!
ನನ್ನ ತಲೇಲಿ ಬ್ರೈನು, ಕೈಯಲ್ಲಿ ಸೆಲ್ ಫೋನು ಮತ್ತು ಪೋಲಿಸ್ ಅಧಿಕಾರಿ ಅಳೀಮಯ್ಯನ ’ಕೈಲಿ’ ಕಾನೂನು ಇರೋದು ಮತ್ತ್ಯಾತಕ್ಕೆ?

***

-೩-
ಮುಂಬಯಿಯಿಂದ ಹೊರಟ ಟ್ರೈನು ಬೆಂಗಳೂರು ತಲುಪುವಷ್ಟರಲ್ಲಿ ನನ್ನ ಮೂಡೇ ಔಟಾಗಿಹೋಗಿತ್ತು. ಸಂಜೆ ಆರಕ್ಕೆ ತಲುಪಬೇಕಾದ ಟ್ರೈನು ರಾತ್ರಿ ಎಂಟಕ್ಕೆ ತಲುಪಿದರೆ ಇನ್ನೇನಾಗುತ್ತೆ? ’ಪ್ರೇಮಾ ಮತ್ತು ಪುಟ್ಟಿ ಕಾದು ಕಾದು ಚಡಪಡಿಸ್ತಿರ್ತಾರೆ. ಹಾಳು ಟ್ರೈನು, ಹಾಳು ನೌಕರಿ’, ಅಂದುಕೊಳ್ತಾ ಮನೆಗೆ ಹೋದರೆ ಮನೆಗೆ ಬೀಗ!
ಅರ್ಧ ಗಂಟೆ ನಂತರ ಇಬ್ಬರೂ ಆಟೋದಲ್ಲಿ ಬಂದಿಳಿದರು. ’ಸ್ಸಾರೀರೀ. ಪುಟ್ಟಿ ಫ್ರೆಂಡಿನ ತಾಯಿ ಯಾವಾಗ್ಲೂ ಕರೀತಿದ್ದರು, ಮನೆಗೆ ಬನ್ನಿ, ಮನೆಗೆ ಬನ್ನಿ, ಅಂತ. ಅದಕ್ಕೇ ಹೋಗಿದ್ವಿ. ಮಾತಾಡ್ತಾ ಲೇಟಾಗ್ಬಿಟ್ತು. ಆರು ಗಂಟೆಯಿಂದ ಕಾಯ್ತಿದೀರೇನೋ ಅಲ್ವಾ?’ ಅನ್ನುತ್ತ ಪ್ರೇಮಾ ಕೀಲಿಕೈಯನ್ನು ನನ್ನೆಡೆ ಚಾಚಿದಳು.
ಟ್ರೈನ್ ಲೇಟ್ ಅನ್ನೋದನ್ನ ಮೊದಲೇ ಸ್ಟೇಷನ್‌ಗೆ ಫೋನ್ ಮಾಡಿ ತಿಳಿದುಕೊಂಡಿಲ್ಲ ಇವ್ಳು ಹಾಗಾದರೆ!

***

-೪-
ಬಾರಿಂದ ರಾತ್ರಿ ಹೊರಬಿದ್ದ ಆತ ತೂರಾಡುತ್ತ ತನ್ನ ಮನೆಯೆಂದು ಭಾವಿಸಿ ಬೇರೊಂದು ಮನೆಯನ್ನು ಹೊಕ್ಕ! ಹಾಲ್‌ನಲ್ಲಿ ಕೂತಿದ್ದ ಆ ಮನೆಯ ಯಜಮಾನನಿಗೆ, ’ಏಯ್! ಯಾರೋ ನೀನು, ನಮ್ಮನೇ ಒಳಗ್ಬಂದು ಯಾಕ್ ಕೂತಿದಿ?’ ಅಂತ ಗದರಿದ!
ಆ ಯಜಮಾನ ಮೆಲ್ಲಗೆ ಎದ್ದುನಿಂತು, ’ಸ್ಸಾರಿ ಮಿಸ್ಟರ್, ಪರಪಾಟಾಯ್ತು, ಸ್ಸಾರಿ’, ಅನ್ನುತ್ತ ತೂರಾಡಿಕೊಂಡು ಹೊರನಡೆದ!

***

-೫-
’ಕಳೆದ ವರ್ಷ ಇದೇ ಯುಗಾದಿ ದಿನ, ಅಮೆರಿಕಾದಲ್ಲಿರೋ ಮಗ-ಸೊಸೆ-ಮೊಮ್ಮಕ್ಕಳನ್ನು ನೆನೆಯುತ್ತಾ ಈ ಒಬ್ಬಂಟಿ ನಾನು ಪಾರ್ಕಿಗೆ ಬಂದು ಈ ಕಲ್ಲುಬೆಂಚಿನ ಇನ್ನೊಂದು ತುದೀಲಿ ಕೂರದೇ ಇದ್ದಿದ್ದರೆ, ನನ್ನಹಾಗೇ ಒಂಟಿಯಾಗಿ ನರಳುತ್ತಿದ್ದ ನೀವು ನನಗೆಲ್ಲಿ ದೊರೆಯುತ್ತಿದ್ದಿರಿ ನನ್ನ ದೊರೆ’, ಎಂದು ಆಕೆ ತನ್ನ ಪತಿಯ ಬೆಳ್ಳಿಗೂದಲಮೇಲೆ ಮೃದುವಾಗಿ ಕೈಯಾಡಿಸಿದರು.

***

-೬-
ಹುಟ್ಟುಹಬ್ಬದ ದಿನ ಐದು ಕ್ಯಾಂಡಲ್‌ ಆರಿಸಿ ಪುಟಾಣಿ ನಿತಿನ್ ತನ್ನ ಸ್ನೇಹಿತರ ಜೊತೆ ನಲಿದಾಡುತ್ತಿದ್ದಾಗ ಅವನ ಅಪ್ಪ-ಅಮ್ಮ ಐದು ವರ್ಷದ ಹಿಂದಿನ ಆ ದಿನದ ನೋವು-ಕಳವಳ-ಬಿಡುಗಡೆ-ಸಂಭ್ರಮಗಳನ್ನು ನೆನೆದು ಸುಖಿಸುತ್ತಿದ್ದರು.

***

-೭-
ಯುಗಾದಿ ದಿನ ಒಂದೇ ಒಬ್ಬಟ್ಟಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದ್ದಕ್ಕೆ ಡಯಾಬಿಟೀಸ್ ರಾಯರು ಜೋಲುಮೋರೆ ಹಾಕಿಕೊಂಡಿದ್ದರು. ಸ್ನೇಹಿತರೊಡನೆ ಸಂಜೆ ಕಟ್ಟೆಪುರಾಣ ಮುಗಿಸಿ ವಾಪಸಾದಾಗ ಅವರ ಮುಖ ಪ್ರಸನ್ನವಾಗಿತ್ತು. ’ನಾನೇ ವಾಸಿ’, ಅಂದುಕೊಳ್ಳುತ್ತಾ ಮನೆಯೊಳಗೆ ಕಾಲಿಟ್ಟರು.

***

-೮-
ಮೊದಲ ದೀಪಾವಳಿಗೆ ಅಮೆರಿಕದಿಂದ ಅಳಿಯ ಬರಲಿಲ್ಲ. ವೀಸಾ ಸಿಗಲಿಲ್ಲ.
ನಂತರದ ದೀಪಾವಳಿಗೂ ಬರಲಿಲ್ಲ. ಡೈವೋರ್ಸ್ ಸಿಕ್ಕಿತ್ತು.

***

-೯-
ಬೆಂಕಿ ನೋಡಿದಾಕ್ಷಣ ಗತವು ಕಣ್ಣೆದುರು ಬಂದಂತಾಗಿ ಆ ಭಿಕ್ಷುಕ ಮೂರ್ಛೆಹೋಗುತ್ತಾನೆ.

***

-೧೦-
ನನಗೆ ಊಟ ಬಂದಿರೋ ಈ ಅಲ್ಯುಮಿನಿಯಂ ತಟ್ಟೇಲೇ ನಾನೂ ಅಪ್ಪನಿಗೆ ಕೊನೆಗಾಲದಲ್ಲಿ ಊಟ ಕೊಡ್ತಿದ್ದದ್ದು.

***

-೧೧-
’ಢಂ’ ಅಂದಿದ್ದಷ್ಟೇ. ಅಲ್ಲಿಂದೀಚೆ
ಏನೂ ಕಾಣುತ್ತಿಲ್ಲ.

***

-೧೨-
’ಯ್ಯು..ಗಾ..ದಿ?....ವ್ವೊಗೆಲೇ!’
’ರೀ...ಇವತ್ತೂ...!’