ಆನೆ, ಇದ್ದರೂ ಬೆಲೆಬಾಳುತ್ತದೆ, ಸತ್ತರೂ ಬೆಲೆಬಾಳುತ್ತದೆ. ಗಜಸಮಾನ ವ್ಯಕ್ತಿ ಚಾರ್ಲಿ ಚಾಪ್ಲಿನ್ ವಿಷಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಅವನ ಭಾವಿ ಪ್ರತಿಮೆ ಎಂಥ ಅಮೂಲ್ಯವೆಂದು ಈಚೆಗಷ್ಟೇ ಸಾಬೀತಾಯಿತಷ್ಟೆ.
ಆ ಪ್ರತಿಮೆ ಎಲ್ಲೆಲ್ಲೋ ತಿರುಗಾಡಿ ಕೊನೆಗೀಗ ಬೆಂಗಳೂರು ಸಮೀಪದ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಬಂದುನಿಂತಿದೆ. ಅಲ್ಲೇ ಉಳಿಯುತ್ತದೋ ಅಲ್ಲಿಂದ ಮತ್ತೆ ಬೇರೆಡೆಗೆ ಎತ್ತಂಗಡಿಗೊಳಗಾಗುತ್ತದೋ ಗೊತ್ತಿಲ್ಲ. ಆದರೆ, ಈ ಭಾವಿ ಪ್ರತಿಮೆಯ ಸುತ್ತ ಜನರ ಪ್ರದಕ್ಷಿಣೆ-ಅಪ್ರದಕ್ಷಿಣೆಗಳು ಮಾತ್ರ ಭರ್ಜರಿಯಾಗಿ ನಡೆದವು. ಅಮೂಲ್ಯ ಪ್ರತಿಮೆಯ ಅಮೂಲ್ಯ ವಿಷಯವನ್ನು ಕೈಗೆತ್ತಿಕೊಂಡು ಅಮೂಲ್ಯ ವ್ಯಕ್ತಿಗಳು ಅಮೂಲ್ಯ ವಾದ-ವಿವಾದ ಇತ್ಯಾದಿ ನಡೆಸಿ ಸಮಾಜಕ್ಕೆ ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವು ಇಂತಿವೆ:
* ಉಪಮೆಯಿಲ್ಲದಂಥ ಈ ಪ್ರತಿಮಾ ವಿವಾದದಿಂದಾಗಿ ಜನರಲ್ಲಿ (ಧರ್ಮ)ಜಾಗೃತಿ ಉಂಟಾಯಿತು.
* ಹಿಂದು-ಕ್ರಿಶ್ಚಿಯನ್-ಜ್ಯೂ-ಮುಸ್ಲಿಂ ಮುಂತಾಗಿ ಅನುಪಮ ಧರ್ಮಜಿಜ್ಞಾಸೆ ನಡೆಯಿತು.
* ಸಾಹಿತಿ-ಕಲಾವಿದ-ರಂಗಕರ್ಮಿ-’ಬುದ್ಧಿಜೀವಿ’ಗಳನೇಕರಿಂದ ’ಸ್ವಾತಂತ್ರ್ಯ ಚಳವಳಿ’ ನಡೆಯಿತು.
* ಕಾಂಗ್ರೆಸ್-ಜೆಡಿಎಸ್-ಕಮ್ಯುನಿಸ್ಟ್ ಪಕ್ಷಗಳಿಂದ ಪ್ರಸಕ್ತ ಚುನಾವಣಾ ಸಂದರ್ಭದಲ್ಲಿ ಸದರಿ (ಭಾವಿ) ಪ್ರತಿಮೆಯ ನೆರಳಿನಲ್ಲಿ ’ಧರ್ಮ-ಕರ್ಮ-’ಮತ’-ವಿಚಾರ-ಸಮ್‌ಕಿ’ರಣ’ಕಹಳೆಗಳು’ ಮೊಳಗಿದವು.
* ನನ್ನೀ ಬರಹವೂ ಸೇರಿದಂತೆ ಪುಂಖಾನುಪುಂಖವಾಗಿ ಬರಹಗಳು ಧುಮ್ಮಿಕ್ಕಿದವು.
* ಆಂಗ್ಲ ದೃಶ್ಯಮಾಧ್ಯಮಗಳು ಕರ್ನಾಟಕದ ಈ ’ಜಗಘೋರ’ - ಕ್ಷಮಿಸಿ - ’ಜಗದೋದ್ಧಾರ’ಕಾರ್ಯವನ್ನು ಜಗಜ್ಜಾಹೀರು ಮಾಡಿ, ವೈಭವೀಕರಿಸಿ, ಜಗಿದುಗುಳಿ, ನಮಗೆ ಜಗ್ಗಿ ಪಬ್ಲಿಸಿಟಿ ನೀಡಿದವು.
* ’ಅಪ್ರತಿಮ ಪ್ರತಿಮಾಭಿಮಾನಿ’ ನಿರ್ಮಾಪಕ ಮಹಾಶಯನಂತೂ ತನ್ನ ಅನ್ಯೋದ್ದೇಶದ ರೊಟ್ಟಿಯು ಜಾರಿ ಪ್ರಚಾರದ ತುಪ್ಪದಲ್ಲಿ ಬಿದ್ದದ್ದನ್ನು ಕಂಡು ಒಳಗೊಳಗೇ ಹಿರಿಹಿರಿ ಹಿಗ್ಗಿದನು.
ಬಿಡುಗಡೆಗೆ ಮೊದಲೇ ಸಿನಿಮಾ ’ಹೌಸ್‌ಫುಲ್’!
ಬಿಡುಗಡೆಯಾದಮೇಲೆ?
ಖಾಲಿಖಾಲಿ!!
ಮಂಗಳವಾರ, ಮಾರ್ಚ್ 24, 2009
ಬಿಡುಗಡೆಗೆ ಮೊದಲೇ ಸಿನಿಮಾ ’ಹೌಸ್‌ಫುಲ್’!
ಲೇಬಲ್ಗಳು:
ಚಾರ್ಲಿ ಚಾಪ್ಲಿನ್,
ಧರ್ಮ,
ಪ್ರತಿಮೆ,
ಮತ,
ಹಿಂದು,
charlie chaplin,
hindu,
houseful,
vote
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ