ಸೋಮವಾರ, ಸೆಪ್ಟೆಂಬರ್ 7, 2009

ಸಂದಿಂಟಿ/ಸ್ಯಾಮುಯೆಲ್ ರೆಡ್ಡಿ ಸುತ್ತಲಿನ ಸತ್ಯಗಳು

ನಾಲ್ಕೈದು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಸುಸ್ತಾದೆವು! ತನ್ನ ಮಾಲೀಕರಿಗೆ ತೊಂದರೆ ಕೊಟ್ಟ ರೆಡ್ಡಿಯವರನ್ನು ಅವರು ಬದುಕಿದ್ದಾಗ ತರಾವರಿಯಾಗಿ ಟೀಕಿಸುತ್ತಿದ್ದ ಟಿವಿ ವಾಹಿನಿಯೊಂದು ರೆಡ್ಡಿಯವರು ಸತ್ತಕೂಡಲೇ ಸುಗುಣಸಂಪನ್ನ ನಾಯಕನನ್ನಾಗಿ ಬಿಂಬಿಸತೊಡಗಿತು!

ಆದರೆ ಸತ್ಯವನ್ನೆಂದಿಗೂ ಮರೆಯಲು ಸಾಧ್ಯವಿಲ್ಲ. ಕ್ರಿಶ್ಚಿಯನ್ ಮತಾನುಯಾಯಿಯಾಗಿದ್ದ ರೆಡ್ಡಿಯವರು ಕ್ರಿಶ್ಚಿಯನ್ ಧರ್ಮದ ಪ್ರಚಾರ ಮತ್ತು ಆ ಧರ್ಮಕ್ಕೆ ಹಿಂದೂಗಳ ಮತಾಂತರ ಈ ಕಾರ್ಯಗಳಿಗೆ ಕುಮ್ಮಕ್ಕು ಕೊಡುತ್ತಿದ್ದುದು ಯಾರೂ ಅಲ್ಲಗಳೆಯಲಾಗದ ಸತ್ಯ. ಅನಿಲ್ ಕುಮಾರ್ ಎಂಬ ಬ್ರಾಹ್ಮಣ ಯುವಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ರೆಡ್ಡಿಯವರ ಮಗಳು ಶರ್ಮಿಳಾರನ್ನು ಮದುವೆಯಾದದ್ದು ಮತ್ತು ಪಾದ್ರಿಯಾಗಿ ಆತ ಧರ್ಮಪ್ರಚಾರ ಮಾಡುತ್ತಿದ್ದಾಗ ಮುಖ್ಯಮಂತ್ರಿ ರೆಡ್ಡಿಯವರ ಸರ್ಕಾರ ಆತನ ಬೆನ್ನಿಗಿದ್ದದ್ದು ಇವೂ ಜನರ ಅರಿವಿಗೆ ಬಂದಿರುವ ಸತ್ಯ. ತಿರುಪತಿಯ ’ಮತಾಂತರ ಘೊಟಾಲೆ’ಯಂತೂ ಎಲ್ಲರಿಗೂ ಗೊತ್ತಿರುವ ವಿಷಯ.

ಇಷ್ಟಾಗಿಯೂ, ತಮ್ಮ ನಾಯಕ ಕ್ರಿಶ್ಚಿಯನ್ ಮತಾನುಯಾಯಿ ಎಂಬುದನ್ನು ರೆಡ್ಡಿ ಬಂಟರು ಮತ್ತು ಅಭಿಮಾನಿಗಳು ಕೆಲವರು ಒಪ್ಪುತ್ತಿರಲಿಲ್ಲ. ’ಯೆಡುಗೂರಿ ಸ್ಯಾಮುಯೆಲ್ ರಾಜಶೇಖರ ರೆಡ್ಡಿ’ ಎಂಬ ಪ್ರಚಲಿತ ನಾಮದ ಬದಲು ’ಯೆಡುಗೂರಿ ಸಂದಿಂಟಿ ರಾಜಶೇಖರ ರೆಡ್ಡಿ’ ಎಂಬ ಪೂರ್ವನಾಮವನ್ನೇ ಆ ಬಂಟರು ಮತ್ತು ಅಭಿಮಾನಿಗಳು ಸಮರ್ಥಿಸುತ್ತಿದ್ದರು. ರೆಡ್ಡಿಗಾರು ಕೂಡ ನಡೆ-ನುಡಿ-ಉಡುಗೆ-ತೊಡುಗೆಗಳಲ್ಲಿ ಅತಿ ಜಾಣ್ಮೆಯಿಂದ ವರ್ತಿಸುತ್ತಿದ್ದರು! ’ರೆಡ್ಡಿ’ ಎಂಬ ಉಪನಾಮವನ್ನು ಉಳಿಸಿಕೊಳ್ಳುವ ಮೂಲಕ ಹಿಂದೂಗಳ ಕೃಪೆಯಲ್ಲಿಯೂ ಚ್ಯುತಿಯಾಗದಂತೆ ನೋಡಿಕೊಂಡರು. ಈ ರೀತಿ ಅದೆಷ್ಟೋ ಮುಗ್ಧ ಹಿಂದೂಗಳಿಗೆ ಮಕ್ಮಲ್ ಟೋಪಿ ಇಟ್ಟರು!

ರಾಜಶೇಖರ ರೆಡ್ಡಿಯವರ ಧರ್ಮಾಚರಣೆಯ ನಿಜಸಂಗತಿಯೀಗ ಅವರ ಸಾವಿನಲ್ಲಿ ದೃಢೀಕೃತವಾಗಿದೆ. ಕ್ರಿಶ್ಚಿಯನ್ ಧರ್ಮದನುಸಾರ ಅವರ ಅಂತ್ಯಕ್ರಿಯೆ ನೆರವೇರಿದೆ. ಅವರ ತಂದೆ ರಾಜಾರೆಡ್ಡಿಯವರು ಬ್ರಿಟಿಷ್ ಆಡಳಿತದ ಕಾಲದಲ್ಲಿ ಬ್ರಿಟಿಷ್ ಸೈನ್ಯದಲ್ಲಿದ್ದವರಾಗಿದ್ದು ಆಗಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರೆಂಬುದು ನಿರಾಕರಿಸಲಾಗದ ಸತ್ಯವಾಗಿ ಹೊರಹೊಮ್ಮಿದೆ.

ಇಂಥ ರಾಜಶೇಖರ ರೆಡ್ಡಿಗಾರು ತಾನು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ’ತಿರುಪತಿ ತಿರುಮಲ ದೇವಸ್ಥಾನಮ್ಸ್’ (’ಟಿಟಿಡಿ’) ಬೋರ್ಡ್‌ನ ಅಧ್ಯಕ್ಷನನ್ನಾಗಿ ನೇಮಿಸಿದ್ದು ಯಾರನ್ನು ಗೊತ್ತೆ? ತನ್ನ ಮಲತಮ್ಮ ಕರುಣಾಕರ ರೆಡ್ಡಿಯನ್ನು! ಹಿಂದೂ ದೇವಾಲಯದ ಮಂಡಳಿಗೆ ಕ್ರಿಶ್ಚಿಯನ್ ಅಧ್ಯಕ್ಷ! ತಿರುಪತಿಯಲ್ಲಿ ಮತಾಂತರ ಕಾರ್ಯದ ಮುನ್ನಡೆಗೆ ಇನ್ನೇನು ಬೇಕು?

ಈ ಕರುಣಾಕರ ರೆಡ್ಡಿ ಓರ್ವ ಪಕ್ಕಾ ಕಾಂಗ್ರೆಸ್ ಪುಢಾರಿ! ಮೊದಲು ಈತ ’ವೈಎಸ್‌ಆರ್ ಯುವಸೇನಾ’ದ ಅಧ್ಯಕ್ಷನಾಗಿದ್ದ! (ಟಿಟಿಡಿಯ ಅಧ್ಯಕ್ಷಸ್ಥಾನ ಅಲಂಕರಿಸಿದ್ದವನಾದ್ದರಿಂದ ಈತನನ್ನು ಇನ್ನು ಬಹುವಚನದಲ್ಲಿ ಸಂಬೋಧಿಸೋಣ!) ಟಿಟಿಡಿಯಂಥ ಬೃಹತ್ ಧಾರ್ಮಿಕ ಮಂಡಳಿಯ ಅಧ್ಯಕ್ಷರಾಗಿದ್ದುಕೊಂಡು ಕರುಣಾಕರ ರೆಡ್ಡಿಯವರು ತನ್ನೊಡೆಯ ರಾಜಶೇಖರ ರೆಡ್ಡಿಯನ್ನು ರಾಜಕೀಯವಾಗಿ ಸಮರ್ಥಿಸುವ ಮತ್ತು ಹಾಡಿ ಹೊಗಳುವ ಕೆಲಸವನ್ನು ಅವ್ಯಾಹತವಾಗಿ ಮಾಡಿಕೊಂಡು ನಡೆದರು! ರಾಜಶೇಖರ ರೆಡ್ಡಿಯನ್ನು ಸ್ತುತಿಸುವುದರಲ್ಲಿ ಕಾಲಂಶದಷ್ಟೂ ಈ ಕರುಣಾಕರ ರೆಡ್ಡಿ ತಿರುಪತಿ ತಿಮ್ಮಪ್ಪನನ್ನು ಸ್ತುತಿಸಲಿಲ್ಲ! ವಿಶ್ವದಲ್ಲೇ ಅತಿ ಹೆಚ್ಚು ಆದಾಯವಿರುವ ಮತ್ತು ಅತಿ ಹೆಚ್ಚು ಭಕ್ತರು ಸಂದರ್ಶಿಸುವ ವೆಂಕಟೇಶ್ವರ ದೇವಾಲಯವೂ ಸೇರಿದಂತೆ ಹನ್ನೆರಡು ದೇವಾಲಯಗಳ ಮತ್ತು ಅವುಗಳ ಉಪ ದೇಗುಲಗಳ ಆಡಳಿತಾಧಿಕಾರ ಹೊಂದಿರುವ ಟಿಟಿಡಿ ಬೋರ್ಡ್‌ನ ಮುಖ್ಯಸ್ಥರಾಗಿದ್ದ ಕರುಣಾಕರ ರೆಡ್ಡಿಗಾರು ರಾಜಕಾರಣರಹಿತರೂ ಧರ್ಮಶ್ರದ್ಧಾಳುವೂ ಆಗಿರುವ ಬದಲು ಓರ್ವ ಕಾಂಗ್ರೆಸ್ ಪುಢಾರಿಯಾಗಿಯೇ ಮುಂದುವರಿದರಲ್ಲದೆ ಯಾವ ಅಳುಕೂ ಇಲ್ಲದೆ ರಾಜಶೇಖರ ರೆಡ್ಡಿಯವರ ಭಟ್ಟಂಗಿಯ ಕೆಲಸ ನಿರ್ವಹಿಸಿದರು! ದೇವರ ವಿಷಯದಲ್ಲಾಗಲೀ ಧರ್ಮದ ವಿಷಯದಲ್ಲಾಗಲೀ ಕರುಣಾಕರ ರೆಡ್ಡಿಯವರಿಂದ ಜನತೆಯು ನ್ಯಾಯಯುತ ನಡೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಅವರ ಚಟುವಟಿಕೆಗಳು ರಾಜಕಾರಣಮಯವಾಗಿದ್ದವು. ಮತಾಂತರದ ಬಗ್ಗೆ ಎದ್ದಿದ್ದ ಜನಾಕ್ಷೇಪವನ್ನು ಹತ್ತಿಕ್ಕಿ, ಜನರನ್ನು ದಿಕ್ಕು ತಪ್ಪಿಸಿ (ಅಂಥ ಅನೇಕ ತೋರಿಕೆಯ ಕೆಲಸಗಳು ಟಿಟಿಡಿಯ ವತಿಯಿಂದ ಆಗ ನಡೆದವು), ಒಳಗಿಂದೊಳಗೇ ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟುಕೊಂಡಿರುವುದೇ ಉಭಯ ರೆಡ್ಡಿಗಳ ಉದ್ದೇಶವೆಂದು ಜನರಿಗೆ ಅನುಮಾನ ಬರುವಂತಾಯಿತು. ಇಷ್ಟಕ್ಕೂ, ಟಿಟಿಡಿಯ ಅಧ್ಯಕ್ಷ ಪದವಿಯನ್ನಲಂಕರಿಸಲು ಕ್ರಿಶ್ಚಿಯನ್ ವೈಎಸ್‌ಆರ್ ಮಲತಮ್ಮ ಹಾಗೂ ’ವೈಎಸ್‌ಆರ್ (ಭಟ್ಟಂಗಿಗಳ) ಯುವಸೇನಾ’ದ ಅಧ್ಯಕ್ಷನ ಹೊರತು ಬೇರಾವ ಯೋಗ್ಯ ವ್ಯಕ್ತಿಯೂ ಇಡೀ ಆಂಧ್ರಪ್ರದೇಶದಲ್ಲಿ, ಇಡೀ ಭಾರತ ದೇಶದಲ್ಲಿ ಇರಲಿಲ್ಲವೆ?

ಪ್ರತ್ಯಕ್ಷ ಕಂಡದ್ದು
----------------
ಟಿಟಿಡಿಯ ಅಧ್ಯಕ್ಷರಾದಮೇಲೂ ಕರುಣಾಕರ ರೆಡ್ಡಿಗಾರು ವೈಎಸ್‌ಆರ್‌ನ ಬಂಟನ ಕಾರ್ಯವನ್ನು (ಇನ್ನೂ ಹೆಚ್ಚಿನ ಜೋಷ್‌ನಿಂದ) ಮುಂದುವರಿಸಿಕೊಂಡುಹೋಗುತ್ತಿದ್ದ ಬಗ್ಗೆ ನಾನು ಸಾಕಷ್ಟು ಕೇಳಿದ್ದೆ-ಓದಿದ್ದೆ ಮತ್ತು ಅವರಿವರಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೆ. ಆದರೆ ಸ್ವಯಂ ಪ್ರತ್ಯಕ್ಷ ಕಾಣದೆ ಈ ಬಗ್ಗೆ ಬಾಯ್ತೆರೆಯಬಾರದೆಂದು ನಿರ್ಧರಿಸಿ ಸುಮ್ಮನಿದ್ದೆ. ಪ್ರತ್ಯಕ್ಷ ಕಾಣುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಂಥದೊಂದು ಅವಕಾಶ ೨೦೦೮ರ ಜೂನ್ ೧೨ರಂದು ನನಗೆ ದೊರೆತೇಬಿಟ್ಟಿತು. ಆ ದಿನ ಆಂಧ್ರಪ್ರದೇಶದ ಕುಪ್ಪಂನಲ್ಲಿ (ಅದು ಚಂದ್ರಬಾಬು ನಾಯ್ಡು ವಿಧಾನಸಭೆಗೆ ಆಯ್ಕೆಗೊಂಡ ಕ್ಷೇತ್ರ) ರಾಜಕೀಯ ಸಮಾರಂಭವೊಂದಕ್ಕೆ ಟಿಟಿಡಿ ರೆಡ್ಡಿಗಾರು ಆಗಮಿಸುವರೆಂದು ನನಗೆ ಸುದ್ದಿ ಬಂದು ಮುಟ್ಟಿತಲ್ಲದೆ ಆ ಭಾವಿ ಸಮಾರಂಭದ ವಿವರಗಳೂ ದೊರೆತವು. ನಾನು ಕುಪ್ಪಂಗೆ ಧಾವಿಸಿದೆ.

ಕುಪ್ಪಂ ಅನ್ನು ಒಳಗೊಂಡಿರುವ ಚಿತ್ತೂರು ಜಿಲ್ಲೆಯ ಯುವ ಕಾಂಗ್ರೆಸ್‌ನ ಅಧ್ಯಕ್ಷನ ’ಪಾದಯಾತ್ರೆ’ಯ ಮುಕ್ತಾಯ ಸಮಾರಂಭ ಅದು. ಊರಿಡೀ ಕಾಂಗ್ರೆಸ್ ಬ್ಯಾನರ್‌ಗಳು, ಬಂಟಿಂಗ್‌ಗಳು, ಧ್ವಜಗಳು ಮತ್ತು ಅಸಂಖ್ಯಾತ ಫ್ಲೆಕ್ಸ್‌ಗಳು. ಎಲ್ಲವೂ ಸೋನಿಯಾಮಯ, ರಾಹುಲ್‌ಮಯ. ಜೊತೆಗೆ, ಅಂದಿನ ಸಮಾರಂಭದ ಮುಖ್ಯ ಅತಿಥಿಯಾದ ಟಿಟಿಡಿ ಚೇರ್‌ಮನ್ನರ ಭಾವಚಿತ್ರ ಮತ್ತು ಹೆಸರು. ಪ್ರತಿಯೊಂದು ಫ್ಲೆಕ್ಸ್ ಮತ್ತು ಬ್ಯಾನರ್‌ನಲ್ಲೂ ಟಿಟಿಡಿ ಚೇರ್‌ಮನ್ ಕರುಣಾಕರ ರೆಡ್ಡಿಗೆ ಭರ್ಜರಿ ಸ್ವಾಗತ ಬರಹ. ಆಕರ್ಷಕ ಕರಪತ್ರಗಳಲ್ಲಿ ಕಾಂಗ್ರೆಸ್‌ನ ’ಸಾಧನೆ’ಗಳ ಗುಣಗಾನ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನೂ ಸೇರಿದಂತೆ ಒಂದು ಹಿಂಡು ಕಾಂಗ್ರೆಸ್ ಪುಢಾರಿಗಳ ಮಧ್ಯೆ ರಾರಾಜಿಸುತ್ತಿದ್ದ ಟಿಟಿಡಿ ಅಧ್ಯಕ್ಷರನ್ನು ಸಮಾರಂಭದ ಸ್ಥಳಕ್ಕೆ ಊರ ಹೊರಗಿನಿಂದಲೇ ಮೆರವಣಿಗೆಯಲ್ಲಿ ಕರೆತರಲಾಯಿತು. ವಾದ್ಯ ಮತ್ತು ಪಟಾಕಿಗಳ ಸಂಭ್ರಮವೋ ಸಂಭ್ರಮ. ಮೆರವಣಿಗೆಯಿಂದಾಗಿ ರಸ್ತೆಗಳ ವಾಹನ ಸಂಚಾರದ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಊರೊಳಗೆ ಬಸ್ ನಿಲ್ದಾಣದೆದುರು ಜನನಿಬಿಡ ರಸ್ತೆಯನ್ನು ಸಂಪೂರ್ಣ ಆಕ್ರಮಿಸಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಮಾರಂಭ. ವೇದಿಕೆಯ ಮೇಲೂ ಕೆಳಗೂ ಕಾಂಗ್ರೆಸ್ ಪುಢಾರಿಗಳದೇ ಸಾಮ್ರಾಜ್ಯ.

ಸಭೆಯ ಮುಖ್ಯ ಕಾರ್ಯಕ್ರಮವೇ ಮುಖ್ಯ ಅತಿಥಿಯ ಭಾಷಣ. ಮುಖ್ಯ ಅತಿಥಿ ಟಿಟಿಡಿ ಅಧ್ಯಕ್ಷರು ಭಾಷಣ ಆರಂಭಿಸಿದರು. ರಾಜಶೇಖರ ರೆಡ್ಡಿಯನ್ನೂ ಕಾಂಗ್ರೆಸ್ಸನ್ನೂ ಹೊಗಳಲು ಶುರುವಿಟ್ಟುಕೊಂಡರು! ಇನ್ನಿಲ್ಲದಂತೆ ಹೊಗಳತೊಡಗಿದರು. ಜೊತೆಗೆ ಚಂದ್ರಬಾಬು ನಾಯ್ಡುವನ್ನು ತೆಗಳಲಾರಂಭಿಸಿದರು! ಇನ್ನಿಲ್ಲದಂತೆ ತೆಗಳತೊಡಗಿದರು. ’ಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಿರಿ, ಚಂದ್ರಬಾಬು ನಾಯ್ಡುವನ್ನು ಸೋಲಿಸಿರಿ, ಸದಾಕಾಲವೂ ಕಾಂಗ್ರೆಸ್ಸನ್ನೇ ಅಧಿಕಾರಕ್ಕೆ ತರುತ್ತಿರಿ, ರಾಜಶೇಖರ ರೆಡ್ಡಿಯನ್ನೇ ನಾಯಕನೆಂದು ಸ್ವೀಕರಿಸುತ್ತಿರಿ’, ಎಂದು ತಿರುಪತಿ ತಿರುಮಲ ದೇವಸ್ಥಾನ ಬೋರ್ಡ್‌ನ ಅಧ್ಯಕ್ಷ ಮಹಾಶಯರು ಪುನಃ ಪುನಃ ಹೇಳತೊಡಗಿದರು! ಇದಿಷ್ಟು ಬಿಟ್ಟು ಭಾಷಣದಲ್ಲಿ ಅವರು ಬೇರೇನನ್ನೂ ಹೇಳಲಿಲ್ಲ! ದೇವರ ಬಗ್ಗೆಯೂ ಹೇಳಲಿಲ್ಲ, ಧರ್ಮದ ಬಗ್ಗೆಯೂ ಹೇಳಲಿಲ್ಲ, ಶ್ರೀನಿವಾಸನ ಬಗ್ಗೆಯೂ ಇಲ್ಲ, ಪದ್ಮಾವತಿಯ ಬಗ್ಗೆಯೂ ಇಲ್ಲ! ಒಂದು ಹಂತದಲ್ಲಿ ಕರುಣಾಕರ ರೆಡ್ಡಿಯ ಈ ನಡೆಯಿಂದ ಬೇಸತ್ತ ಸಭಾಸದನೋರ್ವ ಆಕ್ಷೇಪವೆತ್ತಿದ. ಅವನಿಗೆ ’ಧರ್ಮದರ್ಶಿ’ ರೆಡ್ಡಿಗಾರು ಕೆಂಗಣ್ಣು ಬಿಟ್ಟು ಗದರಿದರು! ಕೂಡಲೇ ಪೋಲೀಸರು ಅವನನ್ನು ಹೊರಕ್ಕೆ ಎಳೆದೊಯ್ದರು! ಭಾಷಣಾನಂತರ ಟಿಟಿಡಿ ಪ್ರಭುವಿನಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಲು ಹೊದೆಸಿ ಸನ್ಮಾನ! ಕೊನೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ. ಇದು ನಾನು ಪ್ರತ್ಯಕ್ಷ ಕಂಡ ಸಮಾರಂಭ.

ನಂತರದ ದಿನಗಳಲ್ಲಿ ಕರುಣಾಕರ ರೆಡ್ಡಿಯವರನ್ನು ಟಿಟಿಡಿ ಅಧ್ಯಕ್ಷ ಪದವಿಯಿಂದ ಕೆಳಗಿಳಿಸಬೇಕಾಗಿ ಬಂತು. ಕೆಳಗಿಳಿಸಲಾಯಿತು. ಇದೀಗ ರಾಜಶೇಖರ ರೆಡ್ಡಿಯವರು ಈ ಲೋಕದಿಂದಲೇ ನಿರ್ಗಮಿಸಿದ್ದಾರೆ. ಆದರೆ ಇವರ ಸುತ್ತಲಿನ ಸತ್ಯಗಳು ಮಾತ್ರ ಪ್ರಜ್ಞಾವಂತರನ್ನು ಕಾಡುತ್ತಿರುತ್ತವೆ. ಊಳಿಗಮಾನ್ಯ ಪದ್ಧತಿಯ ಲಾಭ ಪಡೆದು, ಹಿಂಸೆ-ಬೆದರಿಕೆಗಳ ಅಸ್ತ್ರ ಬಳಸಿ ಮೇಲೆಬಂದು, ನಂತರ ರಾಜಶೇಖರ ರೆಡ್ಡಿಯವರು ಬಡವರ ಬಂಧು ಆದರಾದರೂ ಅದಕ್ಕಾಗಿ ಸರ್ಕಾರದ ಬೊಕ್ಕಸವನ್ನು ಬಹುತೇಕ ಖಾಲಿಮಾಡಿ ಹೋಗಿದ್ದಾರೆ! ಪುತ್ರನನ್ನು ರಾಜಕಾರಣಕ್ಕೆ ತಂದು, ಸಂಸದನನ್ನಾಗಿಸಿ, ಅನನುಭವಿಯಾದ ಆತನೀಗ ಮುಖ್ಯಮಂತ್ರಿಯ ಗಾದಿಮೇಲೆ ಕಣ್ಣುಹಾಕಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಮುಗ್ಧ ಬಡಜನರು ಪಾಪ, ತಮ್ಮ ’ರಕ್ಷಕ’ ಸತ್ತನೆಂದು ನೂರಾರರ ಸಂಖ್ಯೆಯಲ್ಲಿ ತಾವೂ ವೈಎಸ್‌ಆರ್ ಅವರನ್ನು ಹಿಂಬಾಲಿಸಿ ನಡೆದಿದ್ದಾರೆ! ರಾಜಶೇಖರ ರೆಡ್ಡಿಗಾರು ಬಳ್ಳಾರಿ ಗಣಿದಣಿಗಳ ಜೊತೆ ’ಕೈ’ಜೋಡಿಸಿ, ಉಭಯರೂ ಒಟ್ಟಾಗಿ ಕರ್ನಾಟಕವನ್ನು ಕಿತ್ತು ತಿಂದ ಧೂರ್ತಕಾರ್ಯವಂತೂ ಸಹಿಸಲಸಾಧ್ಯ. ಸತ್ಯವು ಮರೆಮಾಚಲ್ಪಟ್ಟು ಮತ್ತೇನೋ ವಿಜೃಂಭಿಸತೊಡಗಿದಾಗ ಅದನ್ನು ಗಮನಿಸುವ ಮನಸ್ಸಿಗೆ ಬೇಸರವಾಗುತ್ತದೆ.

23 ಕಾಮೆಂಟ್‌ಗಳು:

  1. ನಿಮ್ಮ ಮಾತು ನೂರಕ್ಕೆ ನೂರು ನಿಜ. ಆದರೆ ನಮ್ಮ ಜನ, ಟಿವಿ ವಾಹಿನಿಗಳು, ಪತ್ರಿಕೆಗಳು ಮೃತ YSR ಗೆ ಕೊಡುತ್ತಿರುವ coverage ನೋಡಿದರೆ ಕಾಲಗರ್ಭದಲ್ಲಿ ಹುದುಗಿರುವ ಸತ್ಯ ಮರೆಮಾಚಲ್ಪಡುತ್ತಿದೆ ಎ೦ದೆನಿಸದೆ ಇರದು. ಉತ್ತಮ ಬರಹ.

    ಪ್ರತ್ಯುತ್ತರಅಳಿಸಿ
  2. ಜಾತಿ-ಮತ ನಿರಪೇಕ್ಷ ನಾಯಕರು ಇಲ್ಲದಿದ್ದರು, ಇರುವಷ್ಟು ಪ್ರಶಾಂತತೆಯನ್ನು ಉಳಿಸಿ ನಡೆಸುವವರು ಬೇಕು.
    ಕೆಲ ನಾಯಕರದ್ದು ಅತಿಯಾದ ಸ್ವಮತ ಪ್ರ್‍ಏಮ, ಕೆಲವರದ್ದು ಸ್ವಾರ್ಥ ಪ್ರೇಮ, ನಡುವೆ ನಮ್ಮ ಕಥೆ ರಾಮ ರಾಮ.

    ಪ್ರತ್ಯುತ್ತರಅಳಿಸಿ
  3. ಪೂರಕ ಪ್ರತಿಕ್ರಿಯೆ ನೀಡಿರುವ ಮಿತ್ರದ್ವಯರಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ನಮಸ್ಕಾರ,
    ಬಹಳ ವಿಷಯಗಳನ್ನು ಚೆನ್ನಾಗಿ ವಿವರಿಸಿದ್ದೀರಿ. ನಾನೂ ಓದಿ ಮತ್ತೊಂದಷ್ಟು ಜನಕ್ಕೆ ಫಾರ್ವಾಡ್ ಮಾಡಿದೆ

    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  5. What a U turn! Our people will not remember all these things. Only the TIME will decide the future of such frauds. Nice article.
    Bedre Manjunath

    ಪ್ರತ್ಯುತ್ತರಅಳಿಸಿ
  6. ಆನ೦ದ ಸರ್,
    ಒಳ್ಳೆಯ ಬರಹ . ವೈ.ಎಸ್.ರಾಜಶೇಖರ ರೆಡ್ಡಿಯವರ ಸಾವಿನ ಸುದ್ದಿ ಕೇಳಿದ ಕೊಡಲೇ ನನ್ನ ಬಾಯಿ೦ದ ಹೊರಟ ಶಬ್ದ ತಿರುಪತಿ ತಿಮ್ಮಪ್ಪನಿಗೇ ಮೋಸ ಮಾಡಿದವರು ಈ ರೀತಿಯ ಅ೦ತ್ಯ ಕಾಣುತ್ತಾರೆ . ಪಾಪದ ಕೊಡ ತು೦ಬಿತು .
    ಇದಕ್ಕಿ೦ತ ಜಾಸ್ತಿ ಹೇಳಲು ಪದಗಳೇ ಇಲ್ಲ .ಸಕಾಲಿಕ ಬರಹ
    ವ೦ದನೆಗಳು

    ಪ್ರತ್ಯುತ್ತರಅಳಿಸಿ
  7. really an eye opening article sir!

    good one, andhrada jantae idana ondusarti kandita odabeku avagaladru avarige satya yenu anta gotagute

    ಪ್ರತ್ಯುತ್ತರಅಳಿಸಿ
  8. ವಾಯಸ (ವಾಯೆಸ್ಸಾರ್‌) ಬದುಕಿದ್ದಾಗಲೇ ಇವನ್ನೆಲ್ಲಾ ಈಚೆ ಬರುವಂತೆ ಮಾಡಿದ್ದಿದ್ದರೆ ಮಜಾ ಸಿಗುತ್ತಿತ್ತು...

    ಪ್ರತ್ಯುತ್ತರಅಳಿಸಿ
  9. ವೈಎಸ್ ಆರ್ ಸಾವಿನ ಸುದ್ದಿಯನ್ನು ಮೀಡಿಯಾಗಳು ಅದರಲ್ಲೂ ಎಲೆಕ್ಟ್ರಾನಿಕ್ ಮೀಡೀಯಾಗಳು ಅತಿರೇಕ ಸುದ್ದಿಯನ್ನಾಗಿಸಿದ್ದು ಸುಳ್ಳಲ್ಲ. ಈ ಮೀಡೀಯಾಗಳಿಗೆ ತಾವು ಮಾಡುತ್ತಿರುವುದು ಮಾತ್ರ ಸತ್ಯ ಎಂಬ ಭ್ರಮೆ! ಅದೇ ಸುದ್ದಿಗಳನ್ನು ಹಾಕಿಕೊಂಡು ಮತ್ತೊಮ್ಮೆ ಅವರು ನೋಡಲಿ, ಆಗ ತಿಳಿಯುತ್ತದೆ ತಾವೆಂತ ಭ್ರಮೆಯಲ್ಲಿದ್ದೆವು ಎಂಬುದು. ಈ ರೀತಿಯ ಅತಿರೇಕವೇ ಆಂಧ್ರದಾದ್ಯಂತ ಜನ ಸಮೂಹ ಸನ್ನಿಗೆ ಒಳಗಾಗಿ ನೂರಾರು ಜನ ಪ್ರಾಣ ಬಿಡುವಂತಾಯಿತು. ಅವರ ಕುಂಟುಂಬಗಳು ಬೀದಿಪಾಲಗುವಂತಾಯಿತು. ಆದರೆ ಹೀಗೆ ಸತ್ತ ಸುದ್ದಿಗಳ ಬಗ್ಗೆಯೂ ಕೆಲವು ಅನುಮಾನಗಳೇಳುವುದು ಮಾತ್ರ ಸುಳ್ಳಲ್ಲ.

    ಪ್ರತ್ಯುತ್ತರಅಳಿಸಿ
  10. ತುಂಬಾ ಚೆನ್ನಾಗಿ ಬರೆದಿದ್ದೀರಾ ತುಂಬ ತುಂಬಾನೇ ಇಷ್ಟವಾಯಿತು. ಇತ್ತ ನಮ್ಮ ಕರ್ನಾಟಕ ಸರ್ಕಾರ ಈ ಪುಣ್ಯಾತ್ಮ ಸತ್ತಾಗ ಯಾಕೆ ರಜೆ ಘೋಷಿಸಿದ್ದು ಅಂತ ನನಗಂತೂ ಅರ್ಥವಾಗುತ್ತಿಲ್ಲ......

    ಪ್ರತ್ಯುತ್ತರಅಳಿಸಿ
  11. ಸಖತ್ತಾಗಿ, ಮಹತ್ತಾಗಿ ಸ್ಪಂದಿಸಿರುವ ಮಿತ್ರರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
    ಅಂದು ಕುಪ್ಪಂನಿಂದ ವಾಪಸಾದ ದಿನವೇ ನಾನು ವಿವರವಾದ ಲೇಖನ ಬರೆದು ಸತ್ಯದ ಅನಾವರಣ ಮಾಡಿದ್ದು ಆ ಲೇಖನ ಮರುವಾರವೇ ಪ್ರಸಿದ್ಧ ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ತದನಂತರವಷ್ಟೇ ಕರುಣಾಕರ ರೆಡ್ಡಿಯವರನ್ನು ಟಿಟಿಡಿ ಕುರ್ಚಿಯಿಂದ ಕೆಳಗಿಳಿಸಿದ್ದು.

    ಪ್ರತ್ಯುತ್ತರಅಳಿಸಿ
  12. ಗೋಮುಖವ್ಯಾಘ್ರವೊಂದರ ಅಂತ್ಯವಾಗಿದೆ ನಿಜ. ಆದರೆ ಅದೆಷ್ಟೋ ಇಂತಹ ದ್ವಿಮುಖರು ದೇಶದ ತುಂಬೆಲ್ಲಾ ತುಂಬಿದ್ದಾರೆ. ನಮ್ಮನಾಳುತ್ತಿದ್ದಾರೆ. ನಾವೆಲ್ಲ ಅವರ ಮುಂದೆ ಬರಿಯ ಕುರಿ ಮಂದೆ ಅಷ್ಟೇ. ಮಾಹಿತಿಪೂರ್ಣ ಲೇಖನ.

    ಪ್ರತ್ಯುತ್ತರಅಳಿಸಿ
  13. ಹೌದು ತೇಜಸ್ವಿನಿ ಅವರೇ, ನಿಮ್ಮ ಮಾತು ಅಕ್ಷರಶಃ ಸತ್ಯ.
    ಕುರಿಗಳೇ ಈಗ ಹುಲಿಗಳಾಗಬೇಕಾಗಿದೆ!
    ಪ್ರತಿಕ್ರಿಯೆಗಾಗಿ ಧನ್ಯವಾದ.

    ಪ್ರತ್ಯುತ್ತರಅಳಿಸಿ
  14. ನಲ್ಮೆಯ ಆನಂದರಾಮ ಸರ್,
    ಆಯಪ್ಪಾ ಕಾಣೆಯಾಗಿದ್ದಾನೆ ಅಂತ ಗೊತ್ತಾದಾಗ ನಾನು ಹೇಳಿದ ಮೊದಲ ಮಾತೇ ಅವ್ನು ವಾಪಾಸ್ ಬರಲ್ಲ , ಬರ ಬಾರದು ಅಂತ.

    ಒಳ್ಳೇ ಬರ್ದೀರ . ಕರುಣಾಕರ ಬಗ್ಗೆ ಸ್ವಲ್ಪ ಕಡಿಮೆ ಮಾಡಿ ,ಇನ್ನು ಆಯಪ್ಪನ ಬಗ್ಗೆನೇ ಹೆಚ್ಚು ಬರಿ ಬೇಕಿತ್ತು.

    ಪ್ರತ್ಯುತ್ತರಅಳಿಸಿ
  15. ಅಧಿಕಾರದ ದುರ್ಬಳಕೆಯ ಮೂಲಕ ನಡೆದ ಮತಾಂತರದ ಬಗ್ಗೆ ಹಾಗೂ ದೇವರ ಸ್ಥಾನಕ್ಕೆ ಅಪಚಾರ ನಡೆದ ಬಗ್ಗೆ ಒತ್ತು ಕೊಟ್ಟದ್ದರಿಂದ ಕರುಣಾಕರನ ಬಗ್ಗೆ ಹೆಚ್ಚು ಬರೆಯಬೇಕಾಯಿತು. ನಿಮ್ಮ ಸಲಹೆ ಸೂಕ್ತವಾದುದು. ಧನ್ಯವಾದ ಲೋಹಿತ್ ಅವರೇ.

    ಪ್ರತ್ಯುತ್ತರಅಳಿಸಿ
  16. OLLEYA MAAHITI NEEDIDDIRI, YSR BAGGE ASTAGI GOTTIRALILLA. NAVELLA ELECTRONIC MEDIA GALU HELIDDANNE SATYA ENDU TILIDUKONDIDDEVU. DHANYAVADAGALU. VIJYA HUGAR, HAVERI

    ಪ್ರತ್ಯುತ್ತರಅಳಿಸಿ
  17. Sir, I really feel proud about Ur thoughts & views. I would like to add some more points still needs ur attention like

    1. When YSR is supporting(directly and/or Indirectly) conversion in AP through his own people that time WHERE WERE SO CALLED (DONGI) SCULLERS? WAT THEY DOING?

    2. With YSR FOUR others also died. Y media not shown report on them? y there is no information about them ? who they are ? what about there family? y no one given impartens to them? do they thing they are not human beings ?

    3. in Both the points violation of HUMAN RIGHTS are visible to common man , How come HUMAN RIGHTS COMMISSION CAN ACT LIKE BLIND???? that to When one responsible elected govt. and responsible MEDIA is violating HUMAN RIGHTS.

    4. plzz give us the statistical report on

    NO of church and Population of Christians in AP before and after YSR lead as CM

    plz in ur next POST i expect your views on this points and more
    urs Siddu

    ಪ್ರತ್ಯುತ್ತರಅಳಿಸಿ
  18. ಚಿಂತನಾರ್ಹ ಆಕ್ಷೇಪಗಳನ್ನೆತ್ತಿದ್ದೀರಿ ಸಿದ್ದು ಅವರೇ.
    ಮುಂದಿನ ಬರಹಗಳಲ್ಲಿ ಇನ್ನಷ್ಟು ಮಾಹಿತಿಗಳನ್ನು ಕೊಡುತ್ತೇನೆ.
    ಧನ್ಯವಾದ.

    ಪ್ರತ್ಯುತ್ತರಅಳಿಸಿ