ಸೋಮವಾರ, ಸೆಪ್ಟೆಂಬರ್ 28, 2009

ಜಂಬೂಸವಾರಿ, ಪಂಜಿನ ಕವಾಯಿತು: ಇನ್ನಷ್ಟು ಕೆದಕಾಟ!

’ಜಂಬೂಸವಾರಿ ಸ್ಪೆಷಲ್!’ ಟಿಪ್ಪಣಿ ಓದಿ ಹಿರಿಯ ಪತ್ರಕರ್ತ-ಅಂಕಣಕಾರ ಮಿತ್ರರೊಬ್ಬರು ವ್ಯಕ್ತಪಡಿಸಿದ ಪ್ರತಿಕ್ರಿಯೆಯನ್ನೂ ಮತ್ತು ಅದಕ್ಕೆ ನನ್ನ ಮರುತ್ತರವನ್ನೂ ನಿಮ್ಮ ಓದಿನ ಸ್ವಾರಸ್ಯಕ್ಕಾಗಿ ಈ ಕೆಳಗೆ ನೀಡಿದ್ದೇನೆ:

ಪತ್ರಕರ್ತ ಮಿತ್ರರ ಪ್ರತಿಕ್ರಿಯೆ
----------------------------
ನಿಮಗೆ ಕಂಡಿರಬಹುದಾದ ಇನ್ನೂ ಕೆಲವು ಇಲ್ಲಿವೆ:
ತಾಬ್ಲೋ ಎಂದರೆ ಬರೀ ದೇವರ ಗುಡಿ ಗೋಪುರ ಗಳದ್ದೇ ಸಾಲು ಸಾಲು. ಬಿ ಜೆ ಪಿ ವಿಶೇಷವೇ?
ವೀಕ್ಷಕ ವಿವರಣೆಯಲ್ಲಿ ಕಂತೆ ಕಂತೆ 'ತಕ್ಕಂತ' ಗಳು. 'ಬೆಟ್ಟದ ಮೇಲೆ ಇರತಕ್ಕಂತ ಅರಮನೆ ಕೂಡ ನಮಗೆ ಇಲ್ಲಿಂದಲೇ ಕಾಣ ತಕ್ಕಂತದಿದ್ದರೂ ತೋಪುಗಳಿಂದ ಹೊಮ್ಮಿರತಕ್ಕಂತ ಹೊಗೆ ಅರಮನೆ ಮುಚ್ಚಿ ಹೋಗಿರತಕ್ಕಂತ ಒಂದು ವಿದ್ಯಮಾನ.... ' ರೇಜಿಗೆ ಹುಟ್ಟಿಸುತ್ತಿತ್ತು.
ರಸ್ತೆಯುದ್ದಕ್ಕೂ ಯದ್ವಾ ತದ್ವಾ ಓಡಾಡುವ ಜನ ಜಂಗುಳಿ. ಅದರತ್ತ ಕಣ್ಣೆತ್ತಿ ನೋಡದೆ ನೋಡದೆ ಆಕಳಿಸುತ್ತಾ ನಿತ್ತ ಸಮವಸ್ತ್ರದ ಸಿಬ್ಬಂದಿ.
ತುಸುವೂ ಪೂರ್ವ ಸಿದ್ಧತೆ ಮಾಡದೆ ಪೆದ್ದು ಪೆದ್ದಾಗಿ ನಮಗೆ ಕಾಣುವುದನ್ನೇ ತೊದಲುತ್ತ ಹೇಳಿದ ಕಮೆಂಟರಿ.
ಇನ್ನೊಂದು ತಮಾಷೆ ಗಮನಿಸಿದಿರಾ? ಅಂಬಾರಿಯ ತೂಕ 750 ಕಿಲೊ ಅನ್ತಿದ್ದಾರಲ್ಲ, ಅದು ಆ ಆನೆಯನ್ನೂ ಸೇರಿಸಿ ಹೇಳ್ತಿದಾರೆ ಅಂತ ಕಾಣುತ್ತಿದೆ. ಬಲರಾಮನ ಬೆನ್ನಿನ ಮೇಲೆ ಅಂಥ ತೂಕ್ಕದ್ದು ಏನಿದೆ? ಒಂದಷ್ಟು ಹತ್ತಿ ಮೆತ್ತೆ, ಕವೆಗೋಲು, ಸಣಕಲು ಕಂಬಗಳ ಅಂಬಾರಿ . ಆ ಗಾತ್ರದ ಅಂಬಾರಿಯನ್ನು ಅತ್ಯಂತ ತೂಕದ್ದೆನಿಸಿದ ಸೀಸ ಲೋಹದಿಂದ ಮಾಡಿದ್ದರೂ 70 ಕೇಜಿ ತೂಗಬಹುದೇನೊ. ಇವರಿಗೆ 750 ಹೇಳಿದವರು ಯಾರು? ಅದನ್ನು ಯಾವ ಕ್ರೇನ್ ಮೂಲಕ ಎತ್ತಿ ಆನೆಯ ಮೇಲಿಡುವ ಸಂಪ್ರದಾಯ?

ನನ್ನ ಮರುತ್ತರ
---------------
ಹೌದು, ನನ್ನ ಗಮನಕ್ಕೆ ಬಂದಿವೆ ಇವೆಲ್ಲವೂ.
ಮತ್ತು, ’ಸ್ತಬ್ಧಚಿತ್ರಣ’, ’ಗತ ಇತಿಹಾಸ’ ಇಂಥ ಮೂರ್ಖ ಪದಪ್ರಯೋಗಗಳೂ!
ಪಂಜಿನ ಕವಾಯಿತಿನಲ್ಲಂತೂ ದೂರದರ್ಶನದ ನಿರೂಪಕದ್ವಯರ ಆಂಗ್ಲಭಾಷಾ ಪ್ರೇಮ ಮತ್ತು ತಾನು ದ್ವಿಭಾಷಾಪಂಡಿತನೆಂದು ಶಂಕರ್ ಪ್ರಕಾಶ್ ತೋರಿಸಿಕೊಳ್ಳುತ್ತಿದ್ದ ಬಗೆ ಇವು ಹೇಸಿಗೆ ಹುಟ್ಟಿಸುವಂತಿದ್ದವು!
’ತಕ್ಕಂತ’ಗಳಂತೂ ಅಸಹನೀಯ! (ಛಕ್ಕಂತ ತಲೆಗೇನೂ ಹೊಳೆಯದಿದ್ದಾಗ ’ತಕ್ಕಂತ’?)
ವಾಕ್ಯಕ್ಕೆರಡು ಸಲ ಖರ್ಗೆ ಸಾಹೇಬರು ’ಅಂತಕ್ಕಂಥಾ’ ಅಂತಕ್ಕಂಥ ಮಾತುಗಳು ನನಗೆ ನೆನಪಿಗೆ ಬಂದವು!
ಯಡಿಯೂರಪ್ಪನವರಂತೂ ಬನ್ನಿಮಂಟಪದಲ್ಲಿ ಪಂಜಿನ ಬೆಂಕಿಯಲ್ಲಿ ’JAI JAWAN JAI KISAN' 'JAI VIGYAN' ಅಕ್ಷರ ತೋರಿಸುವ ಮೂಲಕ ಈ ಮೂರೂ ರಂಗಗಳಿಗೂ ಅನುಪಮ ಕೊಡುಗೆ ನೀಡಿ ಕೃತಾರ್ಥರಾದರು!
ವಾರ್ತಾ ಇಲಾಖೆಯ ವತಿಯಿಂದ ಲೇಸರ್ ಚಿತ್ರಸಹಿತ ತಮ್ಮ ಪ್ರಶಂಸೆ ಮಾಡಿಸಿಕೊಂಡು ಬೀಗಿದರು!
’ಉಳುವಾ ಯೋಗಿಯ ನೋಡಲ್ಲಿ’ ಎಂದು ಒಂದಷ್ಟು ಜನರನ್ನು ಕುಣಿಸುವ ಮೂಲಕ ರೈತನಿಗೆ ಭಾರೀ ಉಪಕಾರ ಮಾಡಿದರು!
ಆದರೆ ರೈತನೀಗ ’ಅಳುವಾ ರೋಗಿ’ ಆಗಿದ್ದಾನೆ!
ಯಡಿಯೂರಪ್ಪನೋ, ’ಆಳುವಾ ಭೋಗಿ’ ಆಗಿದ್ದಾರೆ!
ಜೈ ಶ್ರೀರಾಮ್!
ಇನ್ನು ಅಂಬಾರಿಯ ತೂಕದ ವಿಷಯ. ಮಹಾರಾಜರದ್ದು ಅಂದಮೇಲೆ ಅದು ತೂಕದ್ದಿರಲೇಬೇಕು! ಏನಂತೀರಿ?
ಅಂದಹಾಗೆ, ಅಂಬಾರಿಯನ್ನು ಆನೆಯಮೇಲೆ ಇಬ್ಬರು ಆರಾಮಾಗಿ ಆಚೆ ಈಚೆ ಸರಿಸುತ್ತಿದ್ದರು! ಅವರು ಹರ್ಕ್ಯುಲಿಸ್ ಪುತ್ರರೇ ಇರಬೇಕು!

9 ಕಾಮೆಂಟ್‌ಗಳು:

  1. ಆನ೦ದ ಸರ್,
    ಹ ಹ ಹ !!!!!
    ನಗುವು ದೂ ಅಳುವುದೂ ನೀವೇ ಹೇಳಿ ?????

    ಪ್ರತ್ಯುತ್ತರಅಳಿಸಿ
  2. ಶಾಸ್ತ್ರಿಗಳೇ, ಇದು ಸೂಪರ್ ಗುಳಿಗೆ ಅಂತಕ್ಕಂಥಾ ಅಭಿಪ್ರಾಯ ನನ್ನದು

    ಪ್ರತ್ಯುತ್ತರಅಳಿಸಿ
  3. ಶಂಕರ್ ಪ್ರಕಾಶ್ ಕೆಪಿಎಲ್ ಇದ್ದಾಗ ಉದಯ ವಾರ್ತೆಯಲ್ಲಿ ಕಾಮೆಂಟರಿಗೆಂದು ಕಾಣಿಸಿಕೊಂಡಿದ್ದರು.. ಆಯೋಜಕರಿಗೆ ಇನ್ಯಾರೂ ಸಿಗಲಿಲ್ಲವೇ ಅಂತ ಮೊದಲ ದಿನವೇ ಅನಿಸಿತ್ತು..ಆದರೆ ವಿಜಯ್ ಭಾರದ್ವಾಜ್ ಕೊಂಚ ಮಟ್ಟಿಗೆ ಮರ್ಯಾದೆ ಉಳಿಸಿದ್ದರು.. :)

    ಪ್ರತ್ಯುತ್ತರಅಳಿಸಿ
  4. ಇದೇನಿದು ಇವತ್ತಿನ ಪೆಪರ್ ನಲ್ಲೂ ೭೫೦ ಕೇಜಿ ಅ೦ತ ಇದೆ...

    ಪ್ರತ್ಯುತ್ತರಅಳಿಸಿ
  5. ರೂಪಾ ಜೀ,
    ಎಲ್ಲ ಸೇರಿ ನಕ್ಕುಬಿಡೋಣ, ಒಂದು ವ್ಯಂಗ್ಯ ನಗೆ!
    ಪರಾಂಜಪೆ ಜೀ,
    ನಿಮ್ಮ ಮೆಚ್ಚುಗೆ ಅಂತಕ್ಕಂಥಾದ್ದು ನನ್ನ ಮನ ಮುಟ್ಟಿದೆ.
    ಶರ್ಮಾಜೀ,
    ಹೌದು. ನಾನೂ ಗಮನಿಸಿದ್ದೆ.
    ಬಾಲು ಜೀ,
    ಮಾಧ್ಯಮಗಳು ಎಷ್ಟು ನಿಖರವಾಗಿವೆ ನೋಡಿ! ’ಹುಲಿ ಬಂತು ಹುಲಿ’ ಕಥೆಯಂತಿವೆ ನಮ್ಮ ಮಾಧ್ಯಮಗಳು!

    ಪ್ರತ್ಯುತ್ತರಅಳಿಸಿ
  6. ಸರ್.... ತುಂಬಾ ನಿಗಾವಹಿಸಿ ನೋಡ್ತೀರಿ ಸಾರ್... ಎಷ್ಟು ಅಧ್ವಾನವಾಗಿದೆ... ಕನ್ನಡದಲ್ಲೇ ವಿವರಣೆ ಕೊಡಲು ಬರದವರನ್ನೂ ಯಾಕೆ ನೇರ ಪ್ರಸಾರಕ್ಕೆ ಕಳುಹಿಸುತ್ತಾರೋ ? ಅಬ್ಬ ಅಂತೂ ಇಂಥಹ ಅವಗಡಗಳ ಸಮೇತದ ಜಂಬೂಸವಾರಿ ಮುಗಿಯಿತು.

    ಶ್ಯಾಮಲ

    ಪ್ರತ್ಯುತ್ತರಅಳಿಸಿ
  7. ’ಅಂತರಂಗದಾ ಮೃದಂಗ ಅಂತು ತೋಂತನಾನ’ ಎಂದು ನಿಮ್ಮ ’ಅಂತರಂಗದ ಮಾತುಗಳು’ ಹೇಳುತ್ತಿವೆ ಶ್ಯಾಮಲ ಅವರೇ, ನಿಮಗೆ ಬ್ಲಾಗ್‌ಗೆ ಸ್ವಾಗತ ಮತ್ತು ಪ್ರತಿಕ್ರಿಯೆಗಾಗಿ ಧನ್ಯವಾದ.

    ಪ್ರತ್ಯುತ್ತರಅಳಿಸಿ
  8. ಆಳುವವರ ಮೂರ್ಖತನಕ್ಕೆ ಕನ್ನಡಿಯನ್ನು ಚೆನ್ನಾಗಿ ಹಿಡಿದಿದ್ದೀರಿ.

    ಪ್ರತ್ಯುತ್ತರಅಳಿಸಿ