ಟ್ವೆಂಟಿ೨೦ ಕ್ರಿಕೆಟ್ ವಿಶ್ವಕಪ್ ಪಾಕಿಸ್ತಾನದ ಮಡಿಲು ಸೇರಿದೆ. ಕಳೆದ ಸಲ ಛಾಂಪಿಯನ್ ಆಗಿದ್ದ ಭಾರತವು ಈ ಸಲ ಸೂಪರ್ ಎಯ್ಟ್ ಹಂತದಲ್ಲೇ ಸೋತು ಮನೆಗೆ ಮರಳಿದೆ. ಆದರೆ ನಮ್ಮ ಕ್ರಿಕೆಟ್ ಆಟಗಾರರಿಗೆ ಜಾಹಿರಾತುಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬಂದೇಬರುತ್ತದೆ; ಜನಕೋಟಿಯ ಕ್ರಿಕೆಟ್ ಪ್ರೇಮವೂ ಅಬಾಧಿತವಾಗಿ ಮುಂದುವರಿಯುತ್ತದೆ. ಜಾಹಿರಾತಿಗಾಗಿ ಕ್ರಿಕೆಟ್ಟಿಗರಿಗೆ ಕೋಟಿಗಟ್ಟಲೆ ಕೊಟ್ಟ ಕಂಪೆನಿಗಳು ಆ ಹಣವನ್ನು ಕ್ರಿಕೆಟ್ ಪ್ರೇಮಿಗಳಿಂದ ಹಾಗೂ ಕ್ರಿಕೆಟ್ ಪ್ರೇಮಿಗಳಲ್ಲದವರಿಂದಲೂ ಬಡ್ಡಿ ಸಮೇತ ವಸೂಲು ಮಾಡುವ ಪ್ರಕ್ರಿಯೆಯೂ ಎಂದಿನಂತೆ ವ್ಯವಸ್ಥಿತವಾಗಿ ಸಾಗುತ್ತದೆ.
ಈಗ ಕೊಂಚ ಹಿಂದಕ್ಕೆ ಹೋಗೋಣ.
ಸೆಪ್ಟೆಂಬರ್ ೨೪, ೨೦೦೭. ಭಾರತ ಹುಚ್ಚೆದ್ದು ಕುಣಿಯಿತು!
ಸಹಜವೇ. ಪ್ರಪ್ರಥಮ ಟ್ವೆಂಟಿ೨೦ ಕ್ರಿಕೆಟ್ ವಿಶ್ವ ಕಪ್ಪನ್ನು ಭಾರತ ತನ್ನದಾಗಿಸಿಕೊಂಡ ದಿನ ಅದು. ಮೇಲಾಗಿ, ನಾವು ಜಯಿಸಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಮೇಲೆ! ಕುಣಿದಾಡದಿರಲು ಸಾಧ್ಯವೇ?
ಆ ಜಯವೇನೂ ಸಣ್ಣದಲ್ಲ. ತಿಂಗಳುಗಳ ಕೆಳಗಷ್ಟೇ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲೇ ಸೋಲುಂಡು ಮನೆಗೆ ವಾಪಸಾಗಿದ್ದವರು ನಾವು. (ಅಂತೆಯೇ ಪಾಕಿಸ್ತಾನ ಕೂಡಾ.) ರಾಹುಲ್, ಸಚಿನ್, ಸೌರವ್ ಕುಂಬ್ಳೆಯಂಥ ಅನುಭವಿಗಳನ್ನು ಕೈಬಿಟ್ಟು ಬಹುಪಾಲು ಅನನುಭವಿ ಹುಡುಗರನ್ನೇ ಹಾಕಿಕೊಂಡು ಟ್ವೆಂಟಿ೨೦ ಪಂದ್ಯಾವಳಿಗೆ ಹೋದವರು ನಾವು. ನಮ್ಮ ಟೀಮಿನಲ್ಲಿ ಕೆಲವರು ಕೇವಲ ಒಂದೇ ಒಂದು ಟ್ವೆಂಟಿ೨೦ ಪಂದ್ಯ ಆಡಿದ ಅನುಭವ ಹೊಂದಿದವರಾಗಿದ್ದರೆ ಕೆಲವರಿಗೆ ಇದೇ ಚೊಚ್ಚಲ ಟ್ವೆಂಟಿ೨೦ ಪಂದ್ಯ! ಇಂಥ ಟೀಮನ್ನು ಕೊಂಡೊಯ್ದ ನಮಗೆ ಫೈನಲ್ ತಲುಪುವ ವಿಶ್ವಾಸವೇ ಇರಲಿಲ್ಲ. ಮೇಲಾಗಿ, ಲೀಗ್ ಹಂತದಲ್ಲೇ ಪಾಕಿಸ್ತಾನವನ್ನು ಮಣಿಸಬೇಕಾಗಿತ್ತು. ಸೂಪರ್ ಎಯ್ಟ್‌ನಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಸವಾಲು. ಸೆಮಿಫೈನಲ್‌ನಲ್ಲಂತೂ ಅಜೇಯ ದೈತ್ಯ ಆಸ್ಟ್ರೇಲಿಯಾ ಎದುರಾಳಿ! ಅದೇ ಹೊಸದಾಗಿ ನಾಯಕನಾದವ ನಮ್ಮ ಮಹೇಂದ್ರಸಿಂಗ್ ದೋನಿ. ಆದಾಗ್ಗ್ಯೂ ಈ ಎಲ್ಲ ದೇಶಗಳನ್ನೂ ಸೋಲಿಸಿ ಫೈನಲ್ ತಲುಪಿಯೇಬಿಟ್ಟೆವು. ಫೈನಲ್‌ನಲ್ಲಿ "ಜಿದ್ದಿನ" ಪಾಕಿಸ್ತಾನವನ್ನು ರೋಮಾಂಚಕರ ರೀತಿಯಲ್ಲಿ ಮಣಿಸಿ ವಿಶ್ವಕಪ್ ಗೆದ್ದೇಬಿಟ್ಟೆವು. ಕುಣಿದಾಡದಿರಲು ಸಾಧ್ಯವೇ?
ಓವರಿನ ಆರೂ ಬಾಲ್‌ಗಳನ್ನೂ ಸಿಕ್ಸರ್ ಎತ್ತಿದ ಯುವರಾಜ(ಸಿಂಗ್)ನ ಆಟ ಮರೆಯಲು ಸಾಧ್ಯವೇ? ಭಾರತದ ಹೆಮ್ಮೆಗೆ ಎರಡು ಮಾತಿಲ್ಲ. ಸಂತೋಷಕ್ಕೆ ಪಾರವಿಲ್ಲ. ವಾರವಿಡೀ ದೇಶಾದ್ಯಂತ ವಿಜಯೋತ್ಸವ. ಬಡವ-ಬಲ್ಲಿದ ಭೇದವಿಲ್ಲದೆ, ಹಿರಿ-ಕಿರಿಯರೆನ್ನದೆ ಎಲ್ಲರೂ ಈ ವಿಜಯೋತ್ಸವದಲ್ಲಿ ಭಾಗಿಗಳು. ಇಡೀ ದೇಶ ಒಂದಾದ ಅಪೂರ್ವ ರಸಘಳಿಗೆ. ಭಾರತ ಪ್ರಕಾಶಿಸಿದ ಅಮೃತ ಘಳಿಗೆ. ಕ್ರೀಡೆಯೊಂದಕ್ಕೆ ಈ ಶಕ್ತಿಯಿರುವುದು ನಿಜಕ್ಕೂ ದೇಶದ ಆರೋಗ್ಯಕ್ಕೆ ಒಳ್ಳಿತು. ಕ್ರೀಡೆಯ ಉದ್ದೇಶವೇ ಹೃದಯಗಳನ್ನು ಅರಳಿಸುವುದು ಮತ್ತು ಬೆಸೆಯುವುದು. ಅಲ್ಲವೆ?
ಈಗ ಕೊಂಚ ವಿಷಯದ ಆಳಕ್ಕೆ ಹೋಗೋಣ. ಕ್ರೀಡೆಯು ಹೃದಯಗಳನ್ನು ಬೆಸೆಯಬೇಕು, ಬೆಸೆಯುತ್ತದೆ, ನಿಜ. ಆದರೆ ಈ ಮಾತು ಭಾರತ-ಪಾಕಿಸ್ತಾನ ನಡುವಣ ಪಂದ್ಯಗಳ ಮಟ್ಟಿಗೆ ನಿಜವಾಗಿದೆಯೇ? ಭಾರತ-ಪಾಕ್ ನಡುವಣ ಕ್ರಿಕೆಟ್ ಪಂದ್ಯವಾಗಲೀ ಹಾಕಿ ಪಂದ್ಯವಾಗಲೀ ಎರಡೂ ದೇಶಗಳ ಹೃದಯಗಳನ್ನು ಪರಸ್ಪರ ಬೆಸೆದಿದೆಯೇ? ಇಲ್ಲವೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹೃದಯ ಒಂದಾಗಿಸುವ ಬದಲು ಈ ಪಂದ್ಯಗಳು ಪರಸ್ಪರ ದ್ವೇಷವನ್ನು ಇನ್ನಷ್ಟು ಹೆಚ್ಚಿಸುತ್ತಿವೆಯೇನೋ ಎಂದು ಭಾಸವಾಗುತ್ತಿದೆ ಪಂದ್ಯ ನಡೆಯುವ ಸಂದರ್ಭದ ಆಗುಹೋಗುಗಳನ್ನು ನೋಡಿದಾಗ! ಪ್ರಥಮ ಟ್ವೆಂಟಿ೨೦ ವಿಶ್ವಕಪ್ ಸಂದರ್ಭದಲ್ಲಿ ಅಂದಿನ ಪಾಕ್ ಅಧ್ಯಕ್ಷ ಮುಷರಫ್ ತನ್ನ ಕ್ರಿಕೆಟ್ ತಂಡದ ನಾಯಕನಿಗೆ ಫೋನ್ ಮಾಡಿ ಭಾರತದ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕೆಂದು ತಾಕೀತುಮಾಡಿದುದು, ಸೋತಾಗ ಆಟಗಾರರು ಅತೀವ ಅವಹೇಳನಕ್ಕೆ ಗುರಿಯಾದುದು, ಪಾಕಿಸ್ತಾನ ಗೆದ್ದಾಗ ಭಾರತದಲ್ಲಿನ ಕೆಲವು ಮುಸ್ಲಿಮರು "ಪಾಕಿಸ್ತಾನ್ ಜಿಂದಾಬಾದ್" ಎಂದು ಜೈಕಾರ ಹಾಕುವುದು, ರೇಡಿಯೋಕ್ಕೆ-ಟಿ.ವಿ.ಗೆ ಹಾರ ಹಾಕುವುದು (!), ತಂತಮ್ಮ ದೇಶ ಸೋತಾಗ ಉಭಯರೂ ಪ್ರತಿಕೃತಿಗಳನ್ನು ಸುಡುವುದು, ಅಲ್ಲಲ್ಲಿ ಹಿಂದೂ-ಮುಸ್ಲಿಮರು ಪರಸ್ಪರ ಘರ್ಷಣೆಗಿಳಿಯುವುದು, ಇಂಥ ಹತ್ತು ಹಲವು ದ್ವೇಷದ ಕಿಚ್ಚನ್ನು ಉಭಯ ದೇಶಗಳೂ ಉರಿಸುವುದನ್ನು ನಾವು ಕಾಣುತ್ತಿದ್ದೇವೆ. ೨೦೦೭ರ ನಮ್ಮ ಟ್ವೆಂಟಿ೨೦ ವಿಜಯದ ಬಳಿಕವಂತೂ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ’ಯು ಟ್ಯೂಬ್’ನಲ್ಲಿ ಎಲ್ಲೆ ಮೀರಿದ ವಾಕ್ ಸಮರವನ್ನೇ ನಡೆಸಿದರು! ಇದರಲ್ಲಿ ಪಾಕಿಸ್ತಾನೀಯರ ದ್ವೇಷಪೂರಿತ ಆರ್ಭಟವೇ ಹೆಚ್ಚಾಗಿತ್ತು! ಇಂಥ ಬೆಳವಣಿಗೆಗಳಿಗೇನಾ ಆಟ ಇರುವುದು? ಉಭಯ ದೇಶಗಳ ಜನತೆ ಮತ್ತು ಮುಖ್ಯವಾಗಿ ಇಂಥ ಕಿಚ್ಚಿನ ಪ್ರೋತ್ಸಾಹಕರಾದ ಪುಢಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಾಕಿಸ್ತಾನಕ್ಕೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ.
ದೇಶದಮೇಲೆ ಪರಿಣಾಮ
-------------------------
ಇನ್ನು, ಕ್ರಿಕೆಟ್ ಕ್ರೀಡೆಯು ನಮ್ಮ ದೇಶದಮೇಲೆ ಎಂಥ ಪರಿಣಾಮ ಉಂಟುಮಾಡಿದೆಯೆಂಬುದನ್ನು ಒಂದಿಷ್ಟು ಯೋಚಿಸೋಣ. "ಹದಿಮೂರು (೧೧+೨) ಮಂದಿ ಆಡುವುದನ್ನು ಹದಿಮೂರು ಸಾವಿರ ಮಂದಿ ದಿನವಿಡೀ ಕೆಲಸ ಬಿಟ್ಟು ಕೂತು ನೋಡುವುದೇ ಕ್ರಿಕೆಟ್" ಎಂಬ ಚಾಟೂಕ್ತಿಯು ಜನಜನಿತವಷ್ಟೆ. ಇದೀಗ, ಟ್ವೆಂಟಿ೨೦ ಪಂದ್ಯಗಳಿಂದಾಗಿ ಒಪ್ಪೊತ್ತು ಕೂತು ನೋಡಿದರೆ ಸಾಕಾಗುತ್ತದೆ, ಆದರೆ, ಟೆಲಿವಿಷನ್ ಮಾಧ್ಯಮದಿಂದಾಗಿ, ಹದಿಮೂರು ಸಾವಿರ ಜನರ ಬದಲು ಹದಿಮೂರು ಕೋಟಿ ಜನ, ಇನ್ನೂ ಹೆಚ್ಚು ಜನ, ಕೆಲಸ ಬಿಟ್ಟು ಆಟ ನೋಡುವ ಪರಿಸ್ಥಿತಿ ಉಂಟಾಗಿದೆ! ಬೇರೆ ಆಟಗಳೂ ನೋಡುಗರ ಕಾಲಹರಣ ಮಾಡುತ್ತವಾದರೂ ಕ್ರಿಕೆಟ್ಟಿನಷ್ಟಲ್ಲ. ಆಟಗಳನ್ನು ನೋಡುವುದು ಜೀವನದ ಅವಶ್ಯಕ, ಆನಂದದಾಯಕ ಮತ್ತು ಅವಿಭಾಜ್ಯ ಅಂಗ ಹೌದಾದರೂ ಅದಕ್ಕೊಂದು ಮಿತಿ, ಲಕ್ಷ್ಮಣರೇಖೆ ಇರಬೇಕಷ್ಟೆ? ಈಚೀಚೆಗಂತೂ ಕ್ರಿಕೆಟ್ ಪಂದ್ಯಗಳ ಸಂಖ್ಯೆ ಹೆಚ್ಚಿ, ಜೊತೆಗೆ ಟಿವಿಯಲ್ಲಿ ಕ್ರಿಕೆಟ್‌ನದೇ ಪ್ರತ್ಯೇಕ ವಾಹಿನಿಗಳು ಪ್ರತ್ಯಕ್ಷವಾಗಿ ಈ ಲಕ್ಷ್ಮಣರೇಖೆ ಕನಸಿನ ಮಾತಾಗತೊಡಗಿದೆ. ಹೀಗೇ ಮುಂದುವರಿದರೆ ವಿದ್ಯಾರ್ಜನೆಯಲ್ಲಿರುವ ಮಕ್ಕಳ ಪಾಡೇನು? ಗಂಭೀರವಾಗಿ ಯೋಚಿಸಬೇಕಾಗಿರುವ ವಿಷಯವಿದು.
ಕ್ರಿಕೆಟ್ ಎಂಬ ಈ ದೈತ್ಯನು ನಮ್ಮ ದೇಶದ ಆರ್ಥಿಕ ರಂಗವನ್ನು ಹೇಗೆ ಆಡಿಸುತ್ತಾನೆಂಬುದನ್ನು ನೋಡೋಣ. ಒಂದು ಓವರ್‌ನಲ್ಲಿ ಆರು ಆರೋಟ(ಸಿಕ್ಸರ್)ಗಳನ್ನು ಗಳಿಸಿದ ಯುವರಾಜನಿಗೆ ಕ್ರಿಕೆಟ್ ಮಂಡಳಿಯಿಂದ ಒಂದು ಕೋಟಿ ರೂಪಾಯಿ ಬಹುಮಾನ ಮತ್ತು ಒಂದು ಸ್ಪೋರ್ಟ್ಸ್ ಕಾರು. ತಂಡಕ್ಕೆ ಮೂರು ಮಿಲಿಯನ್ ಡಾಲರ್ ಭಕ್ಷೀಸು. ಇದಿಷ್ಟೂ ಎಂದಿನ ಗೌರವಧನದ ಜೊತೆಗೆ ಹೆಚ್ಚುವರಿಯಾಗಿ! ಇಷ್ಟು ಹಣ ನಮ್ಮ ಕ್ರಿಕೆಟ್ ಮಂಡಳಿಗೆ ಎಲ್ಲಿಂದ ಬರುತ್ತದೆ? ಮುಖ್ಯವಾಗಿ ಟಿವಿ ಪ್ರಸಾರ ಹಕ್ಕು ಮಾರಾಟದಿಂದ ತಾನೆ? ಕೋಟ್ಯಂತರ ರೂಪಾಯಿ ಕೊಟ್ಟು ಪ್ರಸಾರದ ಹಕ್ಕು ಪಡೆದುಕೊಂಡ ಟಿವಿ ವಾಹಿನಿಗಳವರು ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಾರೆಂದಮೇಲೆ ಅವರಿಗೆ ವಿವಿಧ ಕಂಪೆನಿಗಳ ಜಾಹಿರಾತು ಹಣ ಇನ್ನೆಷ್ಟು ಹರಿದುಬರುತ್ತಿರಬೇಕು, ಯೋಚಿಸಿ. ಕ್ರಿಕೆಟ್ಟಿಗರಮೇಲೆ ಚೆಲ್ಲಿದ ಜಾಹಿರಾತು ಹಣವೂ ಸೇರಿದಂತೆ ಎಲ ಜಾಹಿರಾತು ಹಣವನ್ನೂ, ಮೇಲೆ ಲಾಭವನ್ನೂ ಕಂಪೆನಿಗಳು ಗ್ರಾಹಕನಿಂದ ತಾನೆ ವಸೂಲುಮಾಡುವುದು? ಅಂದಾಗ, ಪ್ರಜೆಗಳಾದ ನಮ್ಮ ಹಣವನ್ನು ಕ್ರಿಕೆಟ್‌ನ ಹೆಸರಲ್ಲಿ ಕಂಪೆನಿಗಳು ಅದೆಷ್ಟು ಭಾರಿಯಾಗಿ ಲೂಟಿಮಾಡುತ್ತಿವೆ, ಊಹಿಸಿ. ನಮ್ಮ ಅಪರಿಮಿತ ಕ್ರಿಕೆಟ್ ಹುಚ್ಚನ್ನಲ್ಲವೆ ಈ ಕಂಪೆನಿಗಳು ನಗದೀಕರಿಸಿಕೊಳ್ಳುತ್ತಿರುವುದು? ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಶ್ರೀಸಾಮಾನ್ಯನ ಜೀವನ ನಿರ್ವಹಣೆಯ ಗತಿಯೇನು, ಯೋಚಿಸಿ.
ಲೋಹಿಯಾ ನುಡಿ
-------------------
ಧೀಮಂತ ಸಮಾಜವಾದೀ ಚಿಂತಕ ರಾಮಮನೋಹರ ಲೋಹಿಯಾ ಒಂದೆಡೆ ಹೇಳಿದ್ದಾರೆ, "ಭಾರತದ ಅತಿ ದೊಡ್ಡ ಸಮಸ್ಯೆಯೆಂದರೆ ಲಕ್ಷಾಂತರ ಜನರಿಗೆ ಉದ್ಯೋಗಗಳನ್ನು ಒದಗಿಸುವುದು. ಆದ್ದರಿಂದ, ಸಣ್ಣ ಯಂತ್ರಗಳ ಬಳಕೆಯೇ (ಸಣ್ಣ ಕೈಗಾರಿಕೆಗಳೇ) (ಈ ಸಮಸ್ಯೆಗೆ) ಏಕೈಕ ಪರಿಹಾರ." ಆದರೆ ಈಗೇನಾಗಿದೆ? ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಜೊತೆಗೆ ನಮ್ಮ ದೇಶದಲ್ಲಿ ಕ್ರಿಕೆಟ್ ದೈತ್ಯನೂ ಸೇರಿ ದೇಶದ ಸಂಪತ್ತೆಲ್ಲ ಕೆಲವೇ ಬಲಾಢ್ಯ ಕಂಪೆನಿಗಳ (ಅದರಲ್ಲೂ ಬಹುರಾಷ್ಟ್ರೀಯ ಕಂಪೆನಿಗಳ) ಕೈಗೆ ಹೋಗಿ ಸೇರುವ ಸನ್ನಿವೇಶ ಸೃಷ್ಟಿಯಾಗಿದೆ. "ಭಾರತವು ರಷ್ಯಾದೊಡನೆಯಾಗಲೀ ಅಮೆರಿಕಾದೊಡನೆಯಾಗಲೀ ಕೈಜೋಡಿಸಬಾರದು", ಎಂದರು ಲೋಹಿಯಾ. ಆದರೆ ನಾವು ಮೊನ್ನೆ ಮೊನ್ನೆಯ ತನಕ ರಷ್ಯಾವನ್ನು ನಂಬಿ ಮೋಸಹೋದೆವು, ಇದೀಗ ಅಮೆರಿಕಾಕ್ಕೆ ರತ್ನಗಂಬಳಿ ಹಾಸಿ ನಮ್ಮನ್ನು ಒಪ್ಪಿಸಿಕೊಳ್ಳುತ್ತಿದ್ದೇವೆ! ಈ ಕ್ರಿಯೆಯಲ್ಲಿ ಅವಾಂಛಿತವಾಗಿ ಹಾಗೂ ಅಪ್ರತ್ಯಕ್ಷವಾಗಿಯಾದರೂ ಸಹ ಕ್ರಿಕೆಟ್‌ನ ಪಾತ್ರವೂ ಇರುವುದು ಆತಂಕದ ವಿಷಯವಲ್ಲವೆ? ಕ್ರಿಕೆಟ್ ಎಂಬ "ಸಮೂಹಸನ್ನಿ"ಗೊಳಗಾಗುತ್ತಿರುವ ಇಂದಿನ ಜನತೆ, ಅದರಲ್ಲೂ ಮಖ್ಯವಾಗಿ ಯುವ ಜನತೆ ಈ ತಥ್ಯವನ್ನು ಗಮನಿಸಬೇಕು.
ಕ್ರಿಕೆಟ್ ಬೇಕು, ನಿಜ. ನನಗೂ ಅದು (ನೋಡಲು) ಇಷ್ಟವಾದ ಆಟವೇ. ಆದರೆ, ಅತಿಯಾಗಬಾರದಷ್ಟೆ. "ಈಟ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್,............ಲಿವ್ ಕ್ರಿಕೆಟ್, ಡೈ (ಫಾರ್) ಕ್ರಿಕೆಟ್" ಆಗಬಾರದಷ್ಟೆ! ದೇಶದಲ್ಲಿ ಎಲ್ಲಿ ನೋಡಿದರೂ ಕ್ರಿಕೆಟ್. ಯಾರ ಬಾಯಲ್ಲಿ ನೋಡಿದರೂ ಕ್ರಿಕೆಟ್. ಯಾವಾಗ ನೋಡಿದರೂ ಕ್ರಿಕೆಟ್. ಒಂದೋ, ಅನವರತ ಆಡುವವರು, ಇಲ್ಲವೇ ಅನವರತ ನೋಡುವವರು. ಇದರಿಂದಾಗಿ ಅಂತಿಮವಾಗಿ ನಮ್ಮ ಸಮಯವೇ ಹಾಳು, ನಮ್ಮ ಚಟುವಟಿಕೆಯೇ ಹಾಳು, ನಮ್ಮ ಕಿಸೆಗೇ ಕತ್ತರಿ, ಮಾತ್ರವಲ್ಲ, ಇತರ ಕ್ರೀಡೆಗಳಿಗೂ ಕಂಟಕ! ಕ್ರಿಕೆಟ್ ಎಂಬ ಕಣ್ಣು ಕುಕ್ಕುವ ಬೆಳಕಿನಲ್ಲಿ ನಮಗೆ ಬೇರಾವ ಅದ್ಭುತ ಆಟವೂ ಗೋಚರಿಸುತ್ತಲೇಇಲ್ಲ! ಇತರ ಒಂದೆರಡು ಕ್ರೀಡೆ ಬಿಟ್ಟರೆ ಬೇರೆ ಕ್ರೀಡೆಗಳಿಗೆ ಹಾಗೂ ಕ್ರೀಡಾಳುಗಳಿಗೆ ಹಣವೂ ಇಲ್ಲ, ಪ್ರೋತ್ಸಾಹವೂ ಇಲ್ಲ. ಇಷ್ಟಾಗಿಯೂ ಹಾಕಿಯಲ್ಲಿ, ಚೆಸ್‌ನಲ್ಲಿ, ಬಿಲಿಯರ್ಡ್ಸ್‌ನಲ್ಲಿ, ಬ್ಯಾಡ್ಮಿಂಟನ್‌ನಲ್ಲಿ ಮಂತಾದ ಆಟಗಳಲ್ಲಿ ನಮ್ಮ ಕ್ರೀಡಾಳುಗಳು ವಿಶ್ವಮಟ್ಟದ ಸಾಧನೆ ಮಾಡಿದರೆ ಆ ಸಾಧನೆಗೆ ಸೂಕ್ತ ಪ್ರೋತ್ಸಾಹವೂ ಇಲ್ಲ, ತಕ್ಕ ಪ್ರಚಾರವೂ ಇಲ್ಲ.
ಹೀಗೊಂದು ಲೆಕ್ಕಾಚಾರ
------------------------
ಹೀಗೇ ಒಂದು ಲೆಕ್ಕಾಚಾರದತ್ತ ನಿಮ್ಮನ್ನು ಕೊಂಡೊಯ್ಯುತ್ತೇನೆ; ಮೈದಾನ ನುಂಗುವ ರಾಕ್ಷಸ ಗಾಲ್ಫ್ ಅನ್ನು ಬದಿಗಿಟ್ಟು ನೋಡಿದರೆ, ಹಾಕಿ, ಫುಟ್‌ಬಾಲ್ ಮುಂತಾದ ಆಟಗಳಿಗೆ ಕ್ರಿಕೆಟ್ ಮೈದಾನಕ್ಕಿಂತ ಚಿಕ್ಕ ಮೈದಾನ ಸಾಕು. ಏಕಕಾಲದಲ್ಲಿ ಕ್ರಿಕೆಟ್ ಆಟಗಾರರಿಗಿಂತ ಹೆಚ್ಚು ಆಟಗಾರರು ಆಡಬಹುದು. ಕ್ರಿಕೆಟ್‌ನಂತೆ ಇಡೀ ದಿನ ವ್ಯಯವಾಗದೆ ಒಂದೆರಡು ಗಂಟೆಗಳಲ್ಲಿ ಆಟ ಮುಗಿದುಹೋಗುತ್ತದೆ. ಈ ಮೂರು ಅನುಕೂಲಗಳಿಂದಾಗಿ, ಕ್ರಿಕೆಟ್ ಅಭ್ಯಾಸಿಗಳಿಗಿಂತ ಹೆಚ್ಚು ಸಂಖ್ಯೆಯ ಮಕ್ಕಳು-ವಿದ್ಯಾರ್ಥಿಗಳು-ಯುವಕರು ಆ ಒಂದು ಮೈದಾನದಲ್ಲಿ ಮತ್ತು ಅಷ್ಟೇ ವೇಳೆಯಲ್ಲಿ ಬೇರೆ ಆಟಗಳನ್ನು ಕಲಿಯಬಹುದು. ಶಾಲಾ ಕಾಲೇಜುಗಳ ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಶಿಕ್ಷಕರು ವಿವಿಧ ಆಟಗಳಲ್ಲಿ ತೊಡಗಿಸಬಹುದು. ನಲಿವು, ಆರೋಗ್ಯ ಮತ್ತು ಸಾಧನೆ ಈ ಮೂರೂ ವಿಷಯಗಳಲ್ಲೂ ಹೆಚ್ಚಿನ ಲಾಭವನ್ನು ಪಡೆಯಬಹುದು. ಆದರೀಗ ಏನಾಗಿದೆ? ಅದೇ ತಾನೇ ನಡೆಯಲು ಕಲಿಯುತ್ತಿರುವ ಎಳೆ ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೆ ಎಲ್ಲರೂ ಬರೀ ಕ್ರಿಕೆಟ್ ಆಡುವವರೇ! ಯಾವ ಮೈದಾನದಲ್ಲಿ ನೋಡಿದರೂ ಕ್ರಿಕೆಟ್ಟೇ!
ಕ್ರಿಕೆಟ್ ಬೇಕು. ಆದರೆ ಅದಕ್ಕೊಂದು ಮಿತಿಯಿರಬೇಕು. ಕ್ರಿಕೆಟ್ ಆಗಲೀ ಯಾವೊಂದು ಆಟವೇ ಆಗಲೀ ಇತರ ಕ್ರೀಡೆಗಳನ್ನು ನುಂಗಿ ತಾನೊಂದೇ ಮೆರೆಯಲೆತ್ನಿಸುವುದು, ಅದೂ ಭಾರತದಂಥ ಬೃಹತ್ ದೇಶದಲ್ಲಿ, ಸರಿಯಲ್ಲ.
ಕ್ರಿಕೆಟ್‌ಮೇಲಿನ ನಮ್ಮ ಈ ಅತಿ ವ್ಯಾಮೊಹವನ್ನೇ ಅಲ್ಲವೆ ಕಂಪೆನಿಗಳು ನಗದೀಕರಿಸಿಕೊಳ್ಳುತ್ತಿರುವುದು? ಅಭಿಮಾನಿಗಳಾದ ನಾವು ಹೆಚ್ಚಿನ ಸಂಖ್ಯೆಯಲ್ಲಿ ಇತರ ಆಟಗಳೆಡೆಗೂ ಗಮನ ಹರಿಸಿದೆವೆಂದರೆ ಆಗ ಇದೇ ಕಂಪೆನಿಗಳು ಆ ಆಟಗಳಮೇಲೆಯೂ ಜಾಹಿರಾತು, ಪ್ರಾಯೋಜಕತ್ವ ಮುಂತಾಗಿ ಹಣ ಹೂಡುತ್ತವಷ್ಟೆ. ಕನಿಷ್ಟಪಕ್ಷ, ನಮ್ಮ ಹಣವು ಇತರ ಆಟಗಳಿಗೂ ಒಂದಿಷ್ಟು ಹರಿದು ಆ ಆಟಗಳೂ ಹಾಗೂ ಆಟಗಾರರೂ ಪ್ರಗತಿ ಹೊಂದುವುದು ಸಂಭವ ತಾನೇ. ಬೇರೆ ಆಟಗಳನ್ನೂ ನಾವು ಆಪ್ತವಾಗಿಸಿಕೊಳ್ಳುವುದು ಅಸಂಭವವೇನಲ್ಲ. ಈ ನನ್ನ ಅಭಿಪ್ರಾಯದ ಸಮರ್ಥನೆಗೆ ಟೆನ್ನಿಸ್ ಕ್ಷೇತ್ರದಲ್ಲಿ ಸಾನಿಯಾ ಮಿರ್ಜಾ ಪ್ರವೇಶ ಮತ್ತು ಸಾಧನೆಯ ಉದಾಹರಣೆ ಸಾಕಲ್ಲವೆ? ಕ್ರಿಕೆಟ್ ಆಡೋಣ, ನೋಡೋಣ, ಗೆದ್ದಾಗ ಸಂಭ್ರಮಿಸೋಣ. ಅದಕ್ಕೊಂದು ಗರಿಷ್ಠ ಮಿತಿಯನ್ನು ಹಾಕಿ ಇತರ ಆಟಗಳಿಗೂ ಪ್ರೋತ್ಸಾಹ ನೀಡೋಣ; ನಮ್ಮ ಮಕ್ಕಳಿಗೆ ಎಳವೆಯಿಂದಲೇ ಇತರ ಆಟಗಳ ಬಗ್ಗೆಯೂ ಹೆಚ್ಚೆಚ್ಚು ಅರಿವು-ಆಸಕ್ತಿ ಹುಟ್ಟಿಸೋಣ. ಏನಂತೀರಿ?
ನಾನು ಕ್ರಿಕೆಟ್ ದ್ವೇಷಿಯೇನಲ್ಲ. ಬ್ಯಾಂಕ್ ಅಧಿಕಾರಿಯಾಗಿದ್ದ ನನ್ನ ಕೈಕೆಳಗೆ ಸುಮಾರು ಎರಡು ದಶಕಗಳ ಹಿಂದೆ ಸುನಿಲ್ ಜೋಶಿ ಕೆಲಸ ಮಾಡುತ್ತಿದ್ದ. ಮಧ್ಯಾಹ್ನಾನಂತರ ಕ್ರಿಕೆಟ್ ಆಟಕ್ಕಾಗಿ ಹೊರಹೋಗಲು ಆತನಿಗೆ ಅನುಮತಿ ನೀಡುವಲ್ಲಿ ಉನ್ನತಾಧಿಕಾರಿಯೊಬ್ಬರು ಮನಸ್ಸುಮಾಡದಿದ್ದಾಗ ನಾನು ಸುನಿಲ್ ಜೋಶಿಯ ಪರವಾಗಿ ಕಾರ್ಯೋನ್ಮುಖನಾಗಿದ್ದೆ. ನನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಒಬ್ಬ ಸಾಧನೆಯ ನಿಟ್ಟಿನಲ್ಲಿ ಹಣದ ಕೊರತೆಯಿಂದಾಗಿ ಪಾಡುಪಟ್ಟಿದ್ದನ್ನೂ ನಾನು ಗಮನಿಸಿದ್ದೇನೆ.
ಒಲಿಂಪಿಕ್ಸ್ ಸಾಧನೆ
---------------------
ಒಲಿಂಪಿಕ್ಸ್‌ನಲ್ಲಿ ನಮ್ಮ ಸಾಧನೆ ಶೂನ್ಯಕ್ಕೆ ಹತ್ತಿರ. ಒಲಿಂಪಿಕ್ಸ್ ಸಾಧನೆಯ ವಿಷಯದಲ್ಲಿ ನೆರೆರಾಷ್ಟ್ರ ಚೀನಾದ ಮುಂದೆ ನಾವು ಏನೇನೂ ಅಲ್ಲ. ಚೀನಾ ವಿರುದ್ಧ ಯುದ್ಧದ ಸಮಯದಲ್ಲಿ ನಾವು ಚೀನೀಯರನ್ನು ಜಿರಲೆ-ಕಪ್ಪೆ-ಹಾವು ತಿನ್ನುವವರೆಂದು ಹೀಯಾಳಿಸಿದೆವು. ಯುದ್ಧವನ್ನು ಸೋತೆವು. ಕ್ರೀಡಾ ತರಬೇತಿಗಾಗಿ ಮಕ್ಕಳನ್ನು ಹಿಂಸಿಸುವವರೆಂದು ಬೀಜಿಂಗ್ ಒಲಿಂಪಿಕ್ಸ್ ಸಂದರ್ಭದಲ್ಲಿ ಚೀನೀಯರನ್ನು ನಾವು ತೆಗಳಿದೆವು. ಅವರು ನೂರು ಪದಕಗಳನ್ನು ಗೆದ್ದರು, ನಾವು ಮೂರಕ್ಕೆ ತೃಪ್ತಿಪಟ್ಟುಕೊಂಡೆವು! ಇಷ್ಟಾದಮೇಲೂ ಅವರ ಕ್ರೀಡಾ ತರಬೇತಿ ಕಾಲದ ತಥಾಕಥಿತ ಬಾಲಶೋಷಣೆಯನ್ನು ಟೀಕಿಸುವುದನ್ನು ನಾವು ನಿಲ್ಲಿಸಲಿಲ್ಲ. ಎಳೆ ಕಂದಮ್ಮಗಳನ್ನು ಪ್ರತಿದಿನ ಬೇಬಿ ಸಿಟ್ಟಿಂಗ್ ಕೇಂದ್ರಗಳಿಗೆ ಅಟ್ಟಿ ತಂದೆತಾಯಂದಿರು ನೌಕರಿಗೆ ಬಿಜಯಂಗೈಯುವುದೂ ಒಂದು ರೀತಿಯ ಶಿಶುಹಿಂಸೆಯೇ ಎನ್ನುವುದನ್ನು ನಾವು ಮರೆತಂತಿದೆ!
ಕೆರೆ-ಕೊಳ್ಳ-ನದಿ-ಸರೋವರಗಳಲ್ಲಿ ಸ್ವಚ್ಛಂದ ಈಜುವ ನಮ್ಮ ಗ್ರಾಮೀಣ ಬಾಲಕ-ಬಾಲಕಿಯರಿಗೆ, ಹೊಟ್ಟೆಪಾಡಿಗಾಗಿ ಹಾದಿಬೀದಿಗಳಲ್ಲಿ ದೊಂಬರಾಟವಾಡುವ ಹುಡುಗ-ಹುಡುಗಿಯರಿಗೆ, ಬೆಟ್ಟ-ಗುಡ್ಡ-ಕಣಿವೆ-ಕಂದರಗಳಲ್ಲಿ ಜೀವಿಸುವ ಆದಿವಾಸಿಗಳಿಗೆ, ಇಂಥವರಿಗೆಲ್ಲ ಶಿಸ್ತುಬದ್ಧ ತರಬೇತು ನೀಡಿದರೆ ಒಲಿಂಪಿಕ್ಸ್ ಮೊದಲಾದ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ನಮ್ಮ ದೇಶವು ದಂಡಿಯಾಗಿ ಪದಕಗಳನ್ನು ಕೊಳ್ಳೆಹೊಡೆಯುವುದರಲ್ಲಿ ಸಂಶಯವಿಲ್ಲ. ಆದರೇನು ಮಾಡುವುದು, ನಮ್ಮನ್ನಿಂದು ಕ್ರಿಕೆಟ್ಟೊಂದೇ ಆಕ್ರಮಿಸಿಕೊಂಡಿಬಿಟ್ಟಿದೆ! ಕ್ರಿಕೆಟ್ಟಿನೆದುರು ನಮಗಿಂದು ಉಳಿದ ಕ್ರೀಡೆಗಳೆಲ್ಲ ಯಃಕಶ್ಚಿತ್ ಆಗಿ ಕಾಣತೊಡಗಿವೆ!
ಈ ಸಲದ ಟ್ವೆಂಟಿ೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಫ್ರೆಂಚ್ ಓಪನ್ ಟೆನ್ನಿಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ (ಚೆಕ್ ರಿಪಬ್ಲಿಕ್‌ನ ಲೂಕಾಸ್ ಡ್ಲೌಹಿ ಜೊತೆಗೂಡಿ) ಡಬಲ್ಸ್ ಪ್ರಶಸ್ತಿ ಗೆದ್ದದ್ದು ದೊಡ್ಡ ಸುದ್ದಿಯಾಗಲಿಲ್ಲ, ಆದರೆ ಅದೇ ದಿನ ಟ್ವೆಂಟಿ೨೦ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತವು ದುರ್ಬಲ ಬಾಂಗ್ಲಾದೇಶದ ವಿರುದ್ಧ ಆರಂಭಿಕ ಪಂದ್ಯವನ್ನು ಗೆದ್ದದ್ದು ನಮ್ಮ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯಿತು! ಕ್ರಿಕೆಟ್ ಫೈನಲ್‌ನ ದಿನವೇ ನಮ್ಮ ಸೈನಾ ನೆಹ್ವಾಲ್ ’ಇಂಡೋನೇಷ್ಯಾ ಸೂಪರ್ ಸೀರೀಸ್’ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದದ್ದು ಮಾಧ್ಯಮಗಳಿಗೆ ಕ್ರಿಕೆಟ್‌ನಷ್ಟು ದೊಡ್ಡ ಸುದ್ದಿಯಾಗಿ ಕಂಡಿಲ್ಲ, ಬಹುಪಾಲು ಪ್ರಜೆಗಳಿಗೆ ಸೈನಾ ಹೆಸರೇ ಗೊತ್ತಿಲ್ಲ! ಚೆಸ್‌ನಲ್ಲಿ ವಿಶ್ವ ಛಾಂಪಿಯನ್ ಆಗಿ ಮೆರೆದ ನಮ್ಮ ವಿಶ್ವನಾಥನ್ ಆನಂದ್ ಜನಪ್ರಿಯತೆಯು ನಮ್ಮೀ ದೇಶದಲ್ಲಿ ನಮ್ಮ ಕ್ರಿಕೆಟ್ಟಿಗರ ಜನಪ್ರಿಯತೆಯ ಮುಂದೆ ಏನೂ ಅಲ್ಲ! ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನ ವಿಶ್ವಶ್ರೇಷ್ಠ ಆಟಗಾರನಾಗಿರುವ ನಮ್ಮ ಬೆಂಗಳೂರಿನ ಹುಡುಗ ಪಂಕಜ್ ಅಡ್ವಾಣಿಯ ಹೆಸರಾಗಲೀ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟವಾಗಲೀ ವಿದ್ಯಾವಂತರಾದ ಅದೆಷ್ಟೋ ಕನ್ನಡಿಗರಿಗೆ ಗೊತ್ತೇ ಇಲ್ಲ! ಆದರೆ ಕ್ರಿಕೆಟ್ ಗೊತ್ತಿಲ್ಲದ ವಿದ್ಯಾವಂತರೇ ಇಲ್ಲ!
ನಮ್ಮ ಈ ಅತಿಯಾದ ಕ್ರಿಕೆಟ್ ವ್ಯಾಮೋಹವು ಇತರ ಕ್ರೀಡೆಗಳನ್ನು ಮಂಕಾಗಿಸಿದೆ; ಇತರ ಕ್ರೀಡಾಳುಗಳನ್ನು ಮೂಲೆಗುಂಪಾಗಿಸಿದೆ. ಹೋದಲ್ಲಿ-ಬಂದಲ್ಲಿ ನಮ್ಮ ಕ್ರಿಕೆಟ್ಟಿಗರಿಗೆ ರಾಜೋಪಚಾರ ಮತ್ತು ಹೇರಳ ಹಣ ದೊರೆಯುತ್ತಿದ್ದರೆ ಇತರ ಕ್ರೀಡಾಳುಗಳು ಪಂದ್ಯಗಳಲ್ಲಿ ಭಾಗವಹಿಸಲು ಸರ್ಕಾರದೆದುರು ಮತ್ತು ಪ್ರಾಯೋಜಕರೆದುರು ಭಿಕ್ಷಾಪಾತ್ರೆ ಹಿಡಿದು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ! ಕೆಲವೇ ದೇಶಗಳಲ್ಲಿ - ಮುಖ್ಯವಾಗಿ, ಬ್ರಿಟಿಷರು ಆಳಿದ ದೇಶಗಳಲ್ಲಿ - ಚಾಲ್ತಿಯಲ್ಲಿರುವ ಕ್ರಿಕೆಟ್‌ನಿಂದಾಗಿ, ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಅನೇಕ ಕ್ರೀಡೆಗಳು ಭಾರತದಲ್ಲಿಂದು ಅವಗಣನೆಗೆ ತುತ್ತಾಗಿವೆ.
ಈ ಅನ್ಯಾಯ ನಿವಾರಣೆಗೊಳ್ಳಬೇಕು. ಹಾಗಾಗಬೇಕಾದರೆ ಮೊದಲು ನಾವು ಅನ್ಯ ಕ್ರೀಡೆಗಳ ಬಗ್ಗೆಯೂ ಒಲವು ಬೆಳೆಸಿಕೊಳ್ಳುವ ಚಿಂತನ ಮಾಡಬೇಕು. ನಮ್ಮ ಮಕ್ಕಳು ನಡೆಯುವಂತಾಗುವ ಮೊದಲೇ ಅವುಗಳ ಕೈಗೆ ಕ್ರಿಕೆಟ್ ಬ್ಯಾಟು-ಬಾಲು ಕೊಡುವ ನಾವು ಇತರ ಆಟಗಳೆಡೆಗೂ ನಮ್ಮ ಮಕ್ಕಳ ಗಮನ ಹರಿಯುವಂತೆ ನೋಡಿಕೊಳ್ಳಬೇಕು. ಆಟವೆಂದರೆ ಕ್ರಿಕೆಟ್ಟೊಂದೇ ಅಲ್ಲ ಎಂಬುದನ್ನು ನಾವು ಅರಿಯಬೇಕು.
ಮೂರನೇ ಶಕ್ತಿಕೂಟ
--------------------
ಕೊನೆಯಲ್ಲಿ, ನನ್ನ ಹೃದಯದಾಳದ ಒಂದು ಹಾರೈಕೆ: ಭಾರತ-ಪಾಕಿಸ್ತಾನದ ಬಾಂಧವ್ಯ ಸುಧಾರಣೆಯು ತಕ್ಕಮಟ್ಟಿಗೆ ಕ್ರಿಕೆಟ್‌ನಿಂದ ಸಾಧ್ಯ. ಅದು ಸಾಧ್ಯವಾಗುವುದು ಗೆಲುವನ್ನು ಈಗಿನಂತೆ ಕೊಚ್ಚಿಕೊಂಡು ಎದುರಾಳಿಯನ್ನು ಚುಚ್ಚುವುದರಿಂದ ಅಲ್ಲ, ಸೋಲನ್ನು ಎತ್ತಿಕೊಂಡು ಕತ್ತಿ ಮಸೆಯುವುದರಿಂದ ಅಲ್ಲ. ಕ್ರಿಕೆಟ್‌ನ ಗೆಲುವು, ಸೋಲು ಎರಡನ್ನೂ ಎರಡೂ ದೇಶಗಳೂ ಸ್ನೇಹಪೂರ್ವಕವಾಗಿ ಸ್ವೀಕರಿಸಿ ಖುಷಿ-ಬೇಸರಗಳನ್ನು ಮನಃಪೂರ್ವಕವಾಗಿ ಹಂಚಿಕೊಳ್ಳುವುದರಿಂದ ಬಾಂಧವ್ಯ ಸುಧಾರಣೆ ಸಾಧ್ಯ. ಲೋಹಿಯಾ ಹೇಳಿದಂತೆ,"ಏಷಿಯಾ ಮತ್ತು ಆಫ್ರಿಕಾಗಳ ಸ್ವತಂತ್ರ ರಾಷ್ಟ್ರಗಳು ಒಟ್ಟಾಗಿ ಮೂರನೇ ಶಕ್ತಿಕೂಟವಾಗಬೇಕು." ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ಅಮೆರಿಕವೇ ಮೊದಲಾದ ಮುಂದುವರಿದ ರಾಷ್ಟ್ರಗಳು ಮೂರನೇ ಜಗತ್ತನ್ನು (ಹಿಂದುಳಿದ ಮತ್ತು ಅಭಿವೃದ್ಧಿಶೀಲ ದೇಶಗಳನ್ನು) ಸುಲಿಯುತ್ತಿರುವ ಈ ದಿನಗಳಲ್ಲಿ ಇಂಥದೊಂದು ಮೂರನೇ ಶಕ್ತಿಯ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚು ಇದೆ. ಭಾರತ-ಪಾಕಿಸ್ತಾನದ ಮಟ್ಟಿಗೆ ಕ್ರಿಕೆಟ್ ಆಟವು ಈ ಅವಶ್ಯಕತೆಯನ್ನು ಪೂರೈಸುವಲ್ಲಿ ಮಹತ್ತರ ಕೊಡುಗೆ ನೀಡಬಲ್ಲುದು, ನೀಡಲಿ. ಈ ನಿಟ್ಟಿನಲ್ಲಿ ಪಾಕಿಸ್ತಾನವು ಇತ್ಯಾತ್ಮಕ ಗುಣದ ಕೊರತೆ ಹೊಂದಿರುವುದರಿಂದ ಭಾರತಕ್ಕಿಂತ ಪಾಕ್‌ನ ಗುಣ ಪರಿವರ್ತನೆಯ ಅವಶ್ಯಕತೆ ಹೆಚ್ಚು ಇದೆ. ಪಾಕಿಸ್ತಾನವು ಭಾರತವನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ಕ್ರಿಕೆಟ್ ಮೂಲಕವೇ ಆ ಕಲಿಕೆ ಶುರುವಾಗಲಿ. ಇಲ್ಲಿನ ನಮ್ಮ ಮುಸ್ಲಿಂ ಬಾಂಧವರು ಅಂಥ ಕಲಿಕೆಯ ಬಗ್ಗೆ - ಸೂಕ್ತ ನಡಾವಳಿಗಳ ಮೂಲಕ ಮತ್ತು ಸೂಕ್ತ ಮಾಧ್ಯಮಗಳ ಮೂಲಕ - ಪಾಕಿಸ್ತಾನಕ್ಕೆ ಅರಿವುಂಟುಮಾಡಲಿ. ಮುಸ್ಲಿಮೇತರರು ಈ ವಿಷಯದಲ್ಲಿ ಸಹಕರಿಸಲಿ.
ಈ ಲೇಖನದಲ್ಲಿನ ನನ್ನ ಅಭಿಪ್ರಾಯಗಳಿಗೆ ಸಮರ್ಥನೆಯಾಗಿ ಕೆಲ ಮಾಹಿತಿಗಳನ್ನು ಈ ಕೆಳಗೆ ನೀಡಿದ್ದೇನೆ.
ಇವರ ಕಥೆ-ವ್ಯಥೆ ಓದಿ
----------------------
ಮಿಹಿರ್ ಸೆನ್:
ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಪ್ರಪ್ರಥಮ ಏಷಿಯನ್ ಈತ. ಎಲ್ಲ ಏಳು ಜಲಸಂಧಿಗಳನ್ನೂ ಒಂದೇ ವರ್ಷದಲ್ಲಿ ಈಜಿ ದಾಟಿದ ಸಾಹಸಿ. ಪದ್ಮಶ್ರೀ(೧೯೫೯) ಮತ್ತು ಪದ್ಮಭೂಷಣ(೧೯೬೭) ಪ್ರಶಸ್ತಿ ವಿಜೇತ. ಜೀವನಾಂತ್ಯದಲ್ಲಿ ಆಲ್ಜಿಮರ್ ಮತ್ತು ಪಾರ್ಕಿನ್‌ಸನ್ ಕಾಯಿಲೆಗಳಿಂದ ಬಳಲುತ್ತಿದ್ದ ಈತನ ನೆರವಿಗೆ ಸರ್ಕಾರವೂ ಸೇರಿದಂತೆ ಯಾರೂ ಬರಲಿಲ್ಲ. ಎಲ್ಲೋ ಕೆಲವರ ದಾನ, ಮತ್ತು, ಆಸ್ಪತ್ರೆ ಸೇರಿದಮೇಲೆ ಒಂದು ವರ್ಷ ಹೆಣ್ಣುಮಕ್ಕಳು (ಈತನಿಗೆ ನಾಲ್ವರು ಪುತ್ರಿಯರು) ಕಳಿಸುತ್ತಿದ್ದ ಸಣ್ಣ ಮೊತ್ತದ ಹಣ, ಇಷ್ಟರಿಂದಲೇ ದಿನ ದೂಡಬೇಕಾದ ಪರಿಸ್ಥಿತಿ ಈತನದಾಯಿತು. ಈ ನತದೃಷ್ಟ ಸಾಹಸಿ ಆಸ್ಪತ್ರೆಯಲ್ಲಿ ಅಜ್ಞಾತನ ಬಾಳು ಬಾಳಿ ಅಜ್ಞಾತನಂತೆ ತನ್ನ ೬೭ನೇ ವಯಸ್ಸಿನಲ್ಲಿ ಬ್ರಾಂಕಿಯಲ್ ನ್ಯುಮೋನಿಯಾ, ಹಾರ್ಟ್ ಅಟ್ಯಾಕ್ ಸಹಿತ ಕಾಯಿಲೆಗಳ ಭಾರದಿಂದ ಸಾಯುವಾಗ (ಜೂನ್ ೧೧, ೧೯೯೭) ಈತನ ಹಾಸಿಗೆಯ ಪಕ್ಕದಲ್ಲಿ ಯಾರೂ ಇರಲಿಲ್ಲ! ಜಗತ್ತಾಗಲೇ ಬಹುತೇಕ ಈತನನ್ನು ಮರೆತೇಬಿಟ್ಟಿತ್ತು!
ಜಿಯಾಉದ್ದೀನ್ ಖಾತಿಬ್:
ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸರ್ ಆಗಿರುವ ಈತನಿಗೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸರ್ಕಾರದ ಸಹಾಯವೂ ಇಲ್ಲ, ಖಾಸಗಿ ಪ್ರಾಯೋಜಕರೂ ಇಲ್ಲ. ಧನಸಹಾಯಕ್ಕಾಗಿ ಒದ್ದಾಡಿ ಒದ್ದಾಡಿ ಸುಸ್ತಾದವನೀತ. ಇವನನ್ನು ಸ್ಟಂಟ್ ಇನ್‌ಸ್ಟ್ರಕ್ಟರ್‌ನನ್ನಾಗಿ ನೇಮಿಸಿಕೊಂಡ ಬಾಲಿವುಡ್ ತಾರೆಯರಾದ ಜಾನ್ ಅಬ್ರಹಾಂ, ಬಿಪಾಷಾ ಬಸು ಮೊದಲಾದವರು ಕೂಡಾ ಈತನ ನೆರವಿಗೆ ಬರಲಿಲ್ಲ!
ನಿಶಾ ಮಿಲ್ಲೆಟ್:
ಅಂತಾರಾಷ್ಟ್ರೀಯ ಮಟ್ಟದ ಈಜು ಸೌಲಭ್ಯ ಸಿಗುತ್ತದೆಂದು ಸಂಸಾರ ಸಮೇತ ಕರ್ನಾಟಕಕ್ಕೆ ಬಂದು ನೆಲಸಿದ ಈಜುಗಾರ್ತಿ ಈಕೆ. ಈಜಿನಲ್ಲಿ ಈಕೆಯ ಸಾಧನೆ ಅಮೋಘ. ಇಂಫಾಲ್‌ನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಗೆದ್ದ ೨೮ ಬಂಗಾರದ ಪದಕಗಳಲ್ಲಿ ಅರ್ಧಪಾಲು ಈಕೆಯದೇ! ಈಕೆ ಗೆದ್ದ ಪದಕಗಳಿಗೆ, ಮುರಿದ ದಾಖಲೆಗಳಿಗೆ ಲೆಕ್ಕವಿಲ್ಲ. ದೊಡ್ಡ ಶಸ್ತ್ರಚಿಕಿತ್ಸೆಯೊಂದರ ನಂತರವೂ ಈಜಿ ದಾಖಲೆಗಳನ್ನು ಮುರಿದ ಸಾಹಸಿ ಈಕೆ! ಅರ್ಜುನ ಪ್ರಶಸ್ತಿ(೧೯೯೯) ವಿಜೇತೆ.
ಗೆದ್ದ ಪ್ರತಿ ಬಂಗಾರದ ಪದಕಕ್ಕೂ ೩೦೦೦೦ ರೂ. ಮತ್ತು ಮುರಿದ ಪ್ರತಿ ದಾಖಲೆಗೂ ೫೦೦೦೦ ರೂ. ಕೊಡುವ ಕರ್ನಾಟಕ ಸರ್ಕಾರದ ನೀತಿಯಿದ್ದ ಕಾಲದಲ್ಲಿ ಈಕೆ ಒಂಭತ್ತು ಬಂಗಾರದ ಪದಕ ಗಳಿಸಿ ಒಂಭತ್ತು ದಾಖಲೆ ಮುರಿದಾಗ ಈಕೆಗೆ ಸರ್ಕಾರ ಕೊಟ್ಟದ್ದು ಕೇವಲ ಒಂದೂವರೆ ಲಕ್ಷ ರೂಪಾಯಿ! ಸರ್ಕಾರದ "ಜಾಣ" ಲೆಕ್ಕಾಚಾರ ಅಂಥದು! ಸ್ವಂತ ಹಣದಲ್ಲೇ ಬಹುಪಾಲು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಹೋಗಿ ದೇಶಕ್ಕೆ ಪದಕಗಳನ್ನು ಬಾಚಿಕೊಟ್ಟ ಈಕೆ ವಿದೇಶದ ತರಬೇತಿಗೂ ಯಾರೂ ಪ್ರಾಯೋಜಕರು ಸಿಗದಾದಾಗ ಬೇಸತ್ತು ಇದೀಗ ವಿದ್ಯಾರ್ಥಿಗಳಿಗೆ ಈಜುವಿಕೆಯ ಕೋಚಿಂಗ್ ಮಾಡುತ್ತಿದ್ದಾರೆ.
ಇವು ಕೆಲವು ಉದಾಹರಣೆಗಳಷ್ಟೆ.
ಈ ಸಾಧಕರನ್ನೆಷ್ಟು ಬಲ್ಲಿರಿ?
---------------------------
ಫುಟ್‌ಬಾಲ್; ಫುಟ್‌ಬಾಲ್‌ನಲ್ಲಿ ಭಾರತದ ಸಾಧನೆ ಅಂಥದೇನಿಲ್ಲವೆನ್ನುತ್ತಿದ್ದಾಗ್ಗ್ಯೂ ನಮ್ಮವರು ೨೦೦೨ರಲ್ಲಿ ವಿಯೆಟ್ನಾಂನಲ್ಲಿ ಎಲ್‌ಜಿ ಕಪ್ ಮತ್ತು ೧೯೯೩, ೧೯೯೭, ೧೯೯೯ ಮತ್ತು ೨೦೦೫ರಲ್ಲಿ ಒಟ್ಟು ನಾಲ್ಕು ಸಲ ಸೌತ್ ಏಷಿಯನ್ ಫುಟ್‌ಬಾಲ್ ಫೆಡರೇಷನ್ ಕಪ್ ಗೆದ್ದಿದ್ದಾರೆ.
ಕಬಡ್ಡಿ: ಪ್ರಪಂಚದ ಶ್ರೇಷ್ಠ ಟೀಮ್ ನಮ್ಮದು. ಆದರೆ ಈ ಆಟ ಮತ್ತು ಆಟಗಾರರ ತಂಡ ಎರಡಕ್ಕೂ ಪ್ರಚಾರ, ಪ್ರೋತ್ಸಾಹ ಸಾಲದು.
ಹಾಕಿ; ೧೯೭೫ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್ ಗೆಲ್ಲುವುದರಿಂದ ಹಿಡಿದು ಹಾಕಿಯಲ್ಲಿ ನಮ್ಮವರ ಸಾಧನೆ ಅಸದಳ. ಆದರೆ, ಈ ವಿಶ್ವಕಪ್ ಗೆದ್ದ ನಾಯಕ ಅಜಿತ್‌ಪಾಲ್ ಸಿಂಗ್, ಅರ್ಜುನ್ ಪ್ರಶಸ್ತಿ ವಿಜೇತ ಗಗನ್ ಅಜಿತ್ ಸಿಂಗ್, ಅರ್ಜುನ್ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತ ಮೊಹಮ್ಮದ್ ಶಹೀದ್, ಖೇಲ್ ರತ್ನ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತ ಧನ್‌ರಾಜ್ ಪಿಳ್ಳೆ ಇವರ ಹೆಸರುಗಳನ್ನು ಅದೆಷ್ಟು ಜನರು ಬಲ್ಲರು? ಹಾಕಿ ದಂತಕಥೆ ಧ್ಯಾನ್‌ಚಂದ್ ಹೆಸರು ಅದೆಷ್ಟು ಜನರಿಗೆ ಗೊತ್ತು?
ಈಚಿನ ಇತರ ಕೆಲ ಪ್ರಮುಖ ಕ್ರೀಡಾಳುಗಳ ಹೆಸರುಗಳು ಇಂತಿವೆ:
ಬಿಲ್ಲುಗಾರಿಕೆ: ವಿಶ್ವ ದಾಖಲೆ ಮಾಡಿದ ಅರ್ಜುನ್ ಪ್ರಶಸ್ತಿ ವಿಜೇತ ಲಿಂಬಾರಾಮ್, ಅರ್ಜುನ್ ವಿಜೇತರಾದ ತರುಣ್‌ದೀಪ್ ರೈ ಮತ್ತು ಡೋಲಾ ಬ್ಯಾನರ್ಜಿ.
ಬ್ಯಾಡ್ಮಿಂಟನ್; ದಂತಕಥೆ ಪ್ರಕಾಶ್ ಪಡುಕೋಣೆ, ಸಮಾಜಹಿತದ ದೃಷ್ಟಿಯಿಂದ ಜಾಹಿರಾತಿನ ಆಫರ್ ಒಂದನ್ನು ನಿರಾಕರಿಸಿದ ಧೀಮಂತ ಪುಲ್ಲೆಲ ಗೋಪಿಚಂದ್, ಅರ್ಜುನ್ ಪ್ರಶಸ್ತಿ ವಿಜೇತೆ ಅಪರ್ಣಾ ಪೋಪಟ್ ಮತ್ತು ಪ್ರಸ್ತುತ ’ಇಂಡೋನೇಷ್ಯಾ ಸೂಪರ್ ಸೀರೀಸ್’ ಚಾಂಪಿಯನ್ ಸೈನಾ ನೆಹ್ವಾಲ್.
ಬಿಲಿಯರ್ಡ್ಸ್: ವಿಶ್ವ ಛಾಂಪಿಯನ್/ಸಾಧಕರಾದ ಮೈಕೇಲ್ ಫೆರೀರಾ, ಅಶೋಕ್ ಶಾಂಡಿಲ್ಯ, ಗೀತ್ ಸೇಥಿ ಮತ್ತು ನಮ್ಮ ಹೀರೋ ಪಂಕಜ್ ಆದ್ವಾನಿ.
ಬಾಕ್ಸಿಂಗ್: ಡಿಂಗ್‌ಕೋ ಸಿಂಗ್.
ಚೆಸ್: ದಂತಕಥೆಯಾಗಿರುವ ವಿಶ್ವನಾಥನ್ ಆನಂದ್ ಹಾಗೂ ಕೊನೇರು ಹಂಪಿ.
ಟೆನ್ನಿಸ್: ನಾನಾ ಪ್ರಮುಖ ಛಾಂಪಿಯನ್ ಪಟ್ಟಗಳನ್ನು ತಮ್ಮದಾಗಿಸಿಕೊಂಡ ರಾಮನಾಥನ್ ಕೃಷ್ಣನ್, ರಮೇಶ್ ಕೃಷ್ಣನ್, ವಿಜಯ್ ಅಮೃತರಾಜ್, ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ.
ಟೇಬಲ್ ಟೆನ್ನಿಸ್: ಚೇತನ್ ಬಬೂರ್, ಕಮಲೇಶ್ ಮೆಹ್ತಾ.
ಗಾಲ್ಫ್: ದಂತಕಥೆ ಮಿಲ್ಕಾ ಸಿಂಗ್‌ನ ಮಗ ಜೀವ್ ಮಿಲ್ಕಾ ಸಿಂಗ್.
ಷೂಟರ್‍ಸ್: ಒಲಿಂಪಿಕ್ ಹೀರೋ ರಾಜ್ಯವರ್ಧನ್ ಸಿಂಗ್ ರಾಥೋಡ್, ಅಭಿನವ್ ಭಿಂದ್ರಾ, ಅಂಜಲಿ ಭಾಗವತ್, ಜಸ್ಪಾಲ್ ರಾಣಾ, ೧೮ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಶ್ರೇಷ್ಠ ಕ್ರೀಡಾಳು ಪ್ರಶಸ್ತಿ ವಿಜೇತ ಸಮರೇಶ್ ಜಂಗ್.
ಅಥ್ಲೆಟಿಕ್ಸ್: ಅಂಜು ಬಾಬಿ ಜಾರ್ಜ್, ಪಿ.ಟಿ.ಉಷಾ, ಜ್ಯೋತಿರ್ಮಯಿ ಸಿಕ್ದರ್, ಟಿ.ಸಿ.ಯೋಹಾನನ್ ಮತ್ತು ದಂತಕಥೆ ಮಿಲ್ಕಾ ಸಿಂಗ್.
ಈಜು: ಖಜಾನ್ ಸಿಂಗ್, ಬೂಲಾ ಚೌಧರಿ.
ಇವರು ಕೆಲ ಪ್ರಮುಖರು ಅಷ್ಟೆ. ಕ್ರಿಕೆಟ್ಟನ್ನು ಜೀವಕ್ಕೆ ಸಮನಾಗಿ ಪ್ರೀತಿಸುವ ನಮ್ಮ ಅಭಿಮಾನಿಸಮೂಹದಲ್ಲಿ ಅದೆಷ್ಟು ಮಂದಿಗೆ ಈ ಕ್ರೀಡಾಳುಗಳ ಹೆಸರುಗಳು ಗೊತ್ತಿವೆ? ಇವರ ಪೈಕಿ ಕೇವಲ ಬೆರಳೆಣಿಕೆಯ ಕೆಲವರನ್ನುಳಿದು ಇತರರ್‍ಯಾರೂ, ತಮ್ಮ ಅಪ್ರತಿಮ ಸಾಧನೆಯ ಮಧ್ಯೆಯೂ, ಅಷ್ಟೇನೂ ಜನಪ್ರಿಯರೂ ಆಗಿಲ್ಲ, ಕಾಸೂ ಗಳಿಸಿಲ್ಲ. ಕ್ರಿಕೆಟ್ಟಿಗರಿಗೆ ಹೋಲಿಸಿದಾಗ ಇವರು ನತದೃಷ್ಟರೇ ಸರಿ. ಈ ಅಸಮಾನತೆಗೆ ಕಾರಣ ಕ್ರಿಕೆಟ್ ಹುಚ್ಚಿನ ನಾವು ಮತ್ತು ತಾರತಮ್ಯಭಾವದ ನಮ್ಮ ಸರ್ಕಾರಗಳೇ ಅಲ್ಲವೆ?
ಸೋಮವಾರ, ಜೂನ್ 22, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಶಾಸ್ತ್ರಿ ಗಳೇ ನೀವು ಹೇಳೋದು ಸರಿ, ಆದರೆ ಕ್ರಿಕೆಟ್ ಗೆ ಬಿಟ್ಟು ಬೇರೆ ಕ್ರೀಡೆ ಗಳಿಗೆ ಕೂಡ ಇತ್ತೀಚಿಗೆ ಪ್ರೋತ್ಸಾಹ ಸಿಗ್ತಾ ಇದೆ ಅಂತ ಭಾವಿಸುವೆ.
ಪ್ರತ್ಯುತ್ತರಅಳಿಸಿಲಿಯಾಂಡರ್ ಪೇಸ್ ಆಪರೇಷನ್ ಗೆ ಒಳಗಾಗಿದ್ದಾಗ ದೇಶವೇ ಅವನ ಬಗ್ಗೆ ಪ್ರಾರ್ಥನೆ ಮಾಡುತ್ತ ಇತ್ತು, ಸಾನಿಯಾ ಮತ್ತು ಸೋಮ ದೇವ್ ಅವರು ಗಳಿಗೆ ಒಳ್ಳೆಯ ಪ್ರಚಾರ ಸಿಕ್ಕಿದೆ ಅಲ್ವ?
ನಮ್ಮಲ್ಲಿ ಹಾಕಿ ಅನ್ನೋದೇ ಒಡೆದ ಮನೆ, ಆಟ ಗೊತ್ತಿಲ್ಲದೆ ಇರೋದು ಆಯಿಕೆ ಸಮಿತಿ ಯಾ ಮೆಂಬರ್ ಗಳು,
ನಮ್ಮಲ್ಲಿ ನಿಜಕ್ಕೂ ಶೋಚನೀಯ ಪರಿಸ್ಥಿತಿ ಇರೋದು athletics ಮತ್ತೆ ಬಾಕ್ಸಿಂಗ್ ಮುಂತಾದ ಕ್ರೀಡೆ ಗೆ. ಇನ್ನು ಚೆಸ್ ಬಗ್ಗೆ ಕೇಳೋದೇ ಬೇಡ, ಹಿಂದೆಲ್ಲ ವಿಶ್ವನಾಥ ಪ್ರಶಸ್ತಿ ಗೆದ್ದು ಇಂಡಿಯಾ ಬರುವಾಗ ಸ್ವಾಗತಿಸಲು ಒಬ್ಬರು ಇರುತ್ತಾ ಇರಲಿಲ್ಲ.
ನಮ್ಮನ್ನ ಚೀನಾ ಗೆ ಹೋಲಿಸೋದು ದಂಡ ಅನ್ಸುತ್ತೆ, ರಾಜಕೀಯ ಇಚ್ಚಾ ಶಕ್ತಿ ಇಲ್ಲದೆ ಹೋದಲ್ಲಿ, ಏನು ಮಾಡಲು ಸಾದ್ಯ ಇಲ್ಲ. ಇನ್ನು ಜನಕ್ಕೆ ಮನೋರಂಜನೆ ಮುಖ್ಯ, ತನ್ಮೂಲಕ ಸಮಯ ವ್ಯರ್ಥ ಮಾಡೋದು ಇಷ್ಟ. ಕ್ರಿಕೆಟ್ ಒಂದು ದಿನ ಪೂರ ತಿನ್ನುತ್ತೆ.. ಸೊ ಜನ ಅದನ್ನೇ ನೋಡ್ತಾರೆ ಅಲ್ವ?
ಲೇಖನ ಚೆನಂಗಿದೆ, ನಾವುಗಳು ಯೋಚಿಸೋ ಹಾಗೆ ಇದೆ. ಮೊನ್ನೆ ಬೇಂದ್ರೆ ಬಂಗ್ಗೆ ಬರೆದ್ರಿ, ನಿನ್ನೆ ಅಪ್ಪಂದಿರ ಬಗ್ಗೆ.. ಒಳ್ಳೆಯ ವಿಷ್ಯ ಗಳನ್ನೂ ಬರೀತಾ ಇದ್ದೀರಿ. :)
ಪೂರಕ ಮತ್ತು ವಿಶ್ಲೇಷಕ ಪ್ರತಿಕ್ರಿಯೆಗಾಗಿ ಹಾಗೂ ಮೆಚ್ಚುಗೆಗಾಗಿ ಧನ್ಯವಾದ ಬಾಲು ಅವರೇ.
ಪ್ರತ್ಯುತ್ತರಅಳಿಸಿlEKana kaNNu teresuva0te ide. tu0baa uttama lEKana. gopicha0d a0tavaru dEshada hita gamanisi jaahiraatannu niraakarisuttaare. Adare krikeT ATagaararige duDDe doDDappa. bErE EnU bEDappa.
ಪ್ರತ್ಯುತ್ತರಅಳಿಸಿಮನದಾಳದ ಪ್ರತಿಕ್ರಿಯೆಗಾಗಿ ಧನ್ಯವಾದ ರೂಪಾ ಅವರೇ.
ಪ್ರತ್ಯುತ್ತರಅಳಿಸಿಶಾಸ್ತ್ರಿಗಳೇ,
ಪ್ರತ್ಯುತ್ತರಅಳಿಸಿಬಿಜಾಪುರದ ಮಕ್ಕಳು National Cycling champions. ಅವರಿಗೆ ಬಡತನದಿಂದಾಗಿ ಒಂದು ರೇಸಿಂಗ್ ಸೈಕಲ್ ಕೊಳ್ಳೋಕೆ ಆಗ್ತಾ ಇಲ್ಲ. ನಮ್ಮ ಕ್ರಿಕೆಟಿಗರು ಎಂಟೋ ಹತ್ತೋ ರನ್ನು ಹೊಡೆದು ಕೋಟಿಗಟ್ಟಲೆ ಗಳಿಸುತ್ತಾರೆ. ಹೀಗಾಗಿ ಆಯ್ಕೆಯಲ್ಲಿಯೂ ಸಹ ಸಾಕಷ್ಟು ರಾಜಕೀಯ ಇದೆ.
Cricket should be banned.
First of all, I wouldn't even bother commenting on statements like cricket should be banned. I have neither the patience nor the inclination to convince such people. You might say nobody entrusted me with this responsibility in the first place. But by the virtue of having frittered away a considerable amount of my boyhood indulging in this seemingly squanderous activity, I take it upon myself to put in my two ruppes worth here. And even my two rupees is more valuable than such rash a comment, which has already used up so many sentences of mine.
ಪ್ರತ್ಯುತ್ತರಅಳಿಸಿBlaming indirectly a mere "passtime activity" (yes, in quotes)for the plight of a country seems too far fetched to me. If that be the case then we should really question our merit and propriety to exist as a nation. I think our people are smarter than that. Our educated youth does not have such impressionable minds to play into the hands of the evil Corporations, hand in glove with the BCCI, in their apparent bid to siphon off people's hard earned money into their coffers. What you are talking about is simply an offshoot of a capitalist economy. You might want to blame Manmohan singh for this as he was the one who was instrumental in opening the doors to our economy to the various MNCs in question. They chose cricket because of it's marketablity. And cricket earned it by making itself marketable, first through the performances of the teams of the eighties and then because of the business acumen of people who were at the helm of the affairs administration wise.
By trying to connect cricket with the current state of the nation, one is missing the real point. I'm not omniscient enough to pin point at the problem, but I can say with confidence that it's definitely not cricket. To draw a parallel would be to blame Raj Kumar for the riots his death caused rather than calling it what it was, a law and order situation. People spend a lot of time watching movies, listening to music, being idle. And they prefer movies to theatre (play). And movies are twice or thrice as long as plays are. So is the solution to curb people's interest in movies? or repackaging the theatre to keep pace with the changing times? Yes, cricket is one of the longest form of sports duration wise, but nobody is forcing anybody to watch it. People consciouly spen their money to come and watch it. And that doesn't mean it hampers the productivity. The whole country doesn't stop working on a match day. If people do come to watch a day-match they probably would've utilised a leave that was due. Even my company has TVs installed in our cafeteria. That doesn't mean, we'll let our deadlines be stretched because of the match. If at all, we spend half an hour in front of the T.V, we stretch in the evening by half an hour. And I would not go on about how other sports like football reach a bigger audience than cricket. I run the risk of sounding too repititive. I would only like to say that the Organizers of the next FIFA world cup are taking a leaf out of IPL's book and contemplating reducing the ticket prices like in IPL to make it affordable to more people.
And now coming to the point of cricket having encroached into the lengths and breadths of other sports. Like I mentioned earlier, cricket is where it is today because it was marketed well, and little to no interference from the government was entertained. How K P S Gill could have been the president of the IHF long enough for him to throw the sport to a point of no return is beyond me. Viren Rasquinha, a very promising player in the Indian line up was so disillusioned by the handling of Hockey's administration that he quit the sport altogether and pursued an MBA degree at ISB. And when people did acheive great feats in other sports they did get recognised. A country whose sense of patriotism is slightly misplaced, where acheivements of people from other country with only Indian origins to their credit are lauded so much or works of art that augment the western stereotypes about India and Indians win major awards and are lapped up by the Indian media, it is really unimaginable that an acheivement by our own compatriot would go unnoticed. When sania won her solitary WTA title in Hyderabad the country rejoiced with her and the nation watched her exploits live on television. I watched Sania's third round loss to Serena Williams in her maiden outing at a grand slam though I knew Serena was at the pink of her form and our lass had no chance against her. And Saina Nehwal's victory at the Indonesian open was over and above the T20 world cup finals and that's how it was in today's dailies as well. P Gopichand's victory at the All England Badminton championship coincided with one of India's greatest cricketing acheivements, where Harbhajan, Laxman and Dravid scripted India's greatest victory in a Test match. But In the newspapers ( at least the ones that was we subscibe to) gave Gopichand's victory more prominence than Harbhajan's hat-trick.
ಪ್ರತ್ಯುತ್ತರಅಳಿಸಿYou spoke about Yuvraj Singh getting as much money as he did for his exploits in the previous T 20 world cup. But, what you might also want to mention is the fact that Vijender Kumar Jitender Kumar and Akhil kumar were rewarded with 25 lakh rupees each even before they had won a medal. ( Only Vijender eventually won a medal).I know this wasn't the case before, but times are changing now. The first Rajiv Gandhi Khel Ratna award was bestowed upon a certain Vishwanathan Anand and not a bat wielding or a ball slinging virtuoso from another sporting discipline. I still rate Anand's acheivements in Chess much above what any cricketer has ever acheived (what with him having won multiple world championships and chess oscars and all), though finishing a close second to a certain illusionist called Dhyan Chand. And when Indian cricketers have crossed the line they have been reprimanded. A more saner member of the Gill community, M S Gill rightly admonished Dhoni and Harbhajan for not receiving their awards in person.
ne last comment before I turn in, it would be preposterous to use the fact that a certain sportsman from the fifties or sixties didn't get his due recognition for winning in a tournament as a means to criticize cricket simply because cricketers weren't rewarded back then for their acheivements either.
Cricket's boom started after India won two back to back world championships in 83 and 85.
Oh, and also, I'm only glad that I'm not in China and my country is as far from it's infuence as possible. I wouldn't want my freedom of speech, thought, right to a completely elected government, right to information taken away from me. Russia and Germany were the most prosperous countries during the rules of Stalin and Hitler respectively. We all know where that led these two countries to. I wouldn't want to be in a country that invests all it's time, energy and brains into trying to go one up on a particular nation just to prove a non existent point.
IF THERE IS EVEN AN OUNCE OF TRUTH OR SENSE IN WHAT I HAVE WRITTEN I STAND VINDICATED, ELSE I STAND CORRECTED. EITHER WAYS I WOULD REQUEST EVERYONE WHO HAS POSTED A COMMENT ON THIS ARTICLE TO READ THESE VIEWS OF MINE COMPLETELY
ಸುನಾಥ್, ಬಿಜಾಪುರದ ಮಕ್ಕಳ ಬಗ್ಗೆ ನೀವು ಹೇಳಿದ್ದು ನಿಜ. ವರ್ಷಗಳ ಕಾಲ ಆ ಜಿಲ್ಲೆಯಲ್ಲಿದ್ದು ಕಂಡಿದ್ದೇನೆ. ಪ್ರತಿಕ್ರಿಯೆಗಾಗಿ ಧನ್ಯವಾದ.
ಪ್ರತ್ಯುತ್ತರಅಳಿಸಿMan with no name, ಚರ್ಚಾರ್ಹ ಲೇಖನರೂಪಿ ಪ್ರತಿಕ್ರಿಯೆಗಾಗಿ ಧನ್ಯವಾದ.