ಮಂಗಳವಾರ, ಜೂನ್ 23, 2009

’ಸ್ಲಂಡಾಗ್..’: ನೋ ಆಸ್ಕರ್, ನೋ ಟೆಲ್ಲರ್!

ಇದೇ ಶನಿವಾರ (೨೭ರಂದು) ದೂರದರ್ಶನದ ಖಾಸಗಿ ಚಾನೆಲ್ಲೊಂದರಲ್ಲಿ ’ಸ್ಲಂಡಾಗ್ ಮಿಲಿಯನೇರ್’ ಆಂಗ್ಲ ಚಲನಚಿತ್ರವು ಪ್ರಸಾರಗೊಳ್ಳಲಿದೆ. ಕೋಟ್ಯಂತರ ಮಂದಿ ಚಿತ್ರವನ್ನು ವೀಕ್ಷಿಸಲಿದ್ದಾರೆ. ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳು ಬಂದಾಗ ಪತ್ರಿಕೆಯೊಂದರಲ್ಲಿ ನಾನು ಬರೆದಿದ್ದ ಲೇಖನವನ್ನು ಈ ಸಂದರ್ಭದಲ್ಲಿ ತಮ್ಮೆದುರು ಪ್ರಸ್ತುತಪಡಿಸುತ್ತಿದ್ದೇನೆ.
-೦-

’ಸ್ಲಂಡಾಗ್ ಮಿಲಿಯನೇರ್’ ಚಿತ್ರಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ದೊರೆತದ್ದರಲ್ಲಿ ಆಶ್ಚರ್ಯವೇನಿಲ್ಲ. ಈ ಎಂಟೂ ಪ್ರಶಸ್ತಿಗಳಿಗೂ ಚಿತ್ರವು ಅರ್ಹವೆಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಎ.ಆರ್.ರೆಹಮಾನ್‌ಗೆ, ನಮ್ಮ ಗುಲ್ಜರ್‌ಗೆ, ನಮ್ಮ ರಸೂಲ್ ಪೂಕುಟ್ಟಿಗೆ ಆಸ್ಕರ್ ಲಭಿಸಿದ್ದು ನಮಗೆ ನಿಜಕ್ಕೂ ಖುಷಿ ಸುದ್ದಿ.

ಕೊಳೆಗೇರಿಯ ಬಾಲಕನೊಬ್ಬ ತನ್ನ ಜೀವನಾನುಭವದ ನೆರವಿನಿಂದಲೇ ರಸಪ್ರಶ್ನೆ ಕಾರ್ಯಕ್ರಮವೊಂದರ ಎಲ್ಲ ಪ್ರಶ್ನೆಗಳಿಗೂ ಸರಿಯುತ್ತರ ನೀಡಿ ಎರಡು ಕೋಟಿ ರೂಪಾಯಿಗಳನ್ನು ಗೆಲ್ಲುವ, ಅಪ್ರತಿಮವೇನೂ ಅಲ್ಲದ ಮತ್ತು ಸಂಭಾವ್ಯವೂ ಅಲ್ಲದ ಕಥೆಯನ್ನು ಒಳಗೊಂಡಿರುವ ಈ ಚಿತ್ರದ ವಿಶೇಷವೆಂದರೆ ಕಥೆಯ ನಿರೂಪಣೆಯ ಶೈಲಿ.

ಚಾಯ್‌ವಾಲಾ ಹುಡುಗನೊಬ್ಬ ’ಕ್ಲಿಷ್ಟ’ ಪ್ರಶ್ನೆಗಳಿಗೂ ಲೀಲಾಜಾಲವಾಗಿ ಸರಿಯುತ್ತರಗಳನ್ನು ನೀಡುತ್ತಹೋದಾಗ ಆ ಬಾಲಕನನ್ನು ’ಫ್ರಾಡ್’ ಎಂದು ಭಾವಿಸಿ ವಿಚಾರಣೆಗಾಗಿ ಪೋಲೀಸ್ ವಶಕ್ಕೆ ನೀಡಲಾಗುತ್ತದೆ. ಪೋಲೀಸ್ ಒದೆಗಳ ಮಧ್ಯೆ, ಆ ಬಾಲಕನ ಜೀವನಾನುಭವವೆಂಬ ಸತ್ಯದ ಅನಾವರಣವಾಗತೊಡಗುತ್ತದೆ. ಈ ಅನಾವರಣಕ್ರಿಯೆಯಲ್ಲಿ, ಭಾರತದ ಕೊಳೆಗೇರಿಯಿಂದ ಮೊದಲ್ಗೊಂಡು ಸಕಲ ಕೊಳಕುಗಳೂ ತೆರೆಯಮೇಲೆ ಕಾಣಿಸಿಕೊಳ್ಳುತ್ತವೆ. ಈ ಕೊಳಕುಗಳನ್ನು ಚೆನ್ನಾಗಿ ಪೋಣಿಸಿ, ರಂಗು ನೀಡಿ, ಕಣ್ಣಿಗೆ ರಾಚುವಂತೆ ಪ್ರಸ್ತುತಪಡಿಸಿದಾಗ ಆಸ್ಕರ್ ಬರದಿದ್ದೀತೇ?

’ಕಲೆಯ ಪ್ರಕಾರಗಳಿಗಾಗಿ ಆಸ್ಕರ್ ಎಂಬ ಒಂದು ಪ್ರಶಸ್ತಿ’ ಎಂದಷ್ಟೇ ಆದಲ್ಲಿ ಎಲ್ಲರಂತೆ ನಾನೂ ಸ್ವಾಗತಿಸುತ್ತೇನೆ, ಹರ್ಷಿಸುತ್ತೇನೆ. ಭಾರತೀಯನೊಬ್ಬ ಬರೆದ ಭಾರತೀಯ ಶೈಲಿಯ ಕಥೆಯನ್ನು, ಭಾರತೀಯ ಚಲನಚಿತ್ರಪರಂಪರೆಯ ಹಲವು ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು, ಪಾಶ್ಚಾತ್ಯ ಶೈಲಿಯ ತಂತ್ರಗಾರಿಕೆ ಮತ್ತು ಚುರುಕಿನ ನಿರೂಪಣೆಗಳಿಂದ ಪ್ರಸ್ತುತಪಡಿಸಿದಾಗ ಸಹಜವಾಗಿಯೇ ಆ ಚಿತ್ರವು ಉಭಯ ಶೈಲಿಯ ಧನಾತ್ಮಕ ಗುಣಗಳ ಹದವರಿತ ಮಿಶ್ರಣವಾದ ಒಂದು ವಿಶಿಷ್ಟ ಚಿತ್ರವಾಗುತ್ತದೆ. ಈ ವೈಶಿಷ್ಟ್ಯದಿಂದಲೇ ’ಸ್ಲಂಡಾಗ್ ಮಿಲಿಯನೇರ್’ ಚಿತ್ರವು ಎಂಟು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ, ಇದರಲ್ಲಿ ಆಶ್ಚರ್ಯವೂ ಇಲ್ಲ, ಈ ಬಗ್ಗೆ ಅಪಸ್ವರವೂ ಸಲ್ಲ. ಆದರೆ, ’ಸ್ಲಂಡಾಗ್..’ನ ಆಸ್ಕರ್‌ನ ಅಬ್ಬರದಲ್ಲಿ ಭಾರತೀಯ ಚಲನಚಿತ್ರರಂಗದ ಅಪ್ರತಿಮ ಕಲಾವಂತಿಕೆಯಾಗಲೀ ಇದುವರೆಗಿನ ಸಾಧನೆಗಳಾಗಲೀ ಸಾಧಕರಾಗಲೀ ಜನಮಾನಸದಲ್ಲಿ ಮಂಕಾಗಬಾರದಷ್ಟೆ. ಮಾಧ್ಯಮಗಳಲ್ಲಿ ’ಸ್ಲಂಡಾಗ್..’ನ ಆಸ್ಕರ್ ಗಳಿಕೆಯ ವೈಭವೀಕರಣವು ಭಾರತದ ಯುವಪೀಳಿಗೆಯಲ್ಲಿ ಇಂಥದೊಂದು ಅಪಾಯವನ್ನು ಸೃಷ್ಟಿಸುತ್ತಿರುವುದು ಮಾತ್ರ ಕಳವಳದ ಸಂಗತಿ.

ಆಸ್ಕರ್‌ನ ಈ ವೈಭವೀಕರಣದಿಂದ ಮತ್ತು ಈ ಇಡೀ ಚಿತ್ರವನ್ನು ಭಾರತದ ಸಾಧನೆಯೆಂಬಂತೆ ಬಿಂಬಿಸಲಾಗುತ್ತಿರುವುದರಿಂದ ಒಂದು ರೀತಿಯಲ್ಲಿ ಭಾರತೀಯ ಚಲನಚಿತ್ರರಂಗಕ್ಕೆ ಅಪಚಾರವಾದಂತಲ್ಲವೆ? ನಮ್ಮ ಇದುವರೆಗಿನ ಸಾಧಕರ ಸಾಧನೆಗಳನ್ನು ಅಪಮೌಲ್ಯಗೊಳಿಸಿದಂತಾಗಲಿಲ್ಲವೆ? ಎ.ಆರ್.ರೆಹಮಾನ್‌ನ ಸಂಗೀತದಷ್ಟೇ ಅದ್ಭುತವಾಗಿ, ಆತನ ಗೀತೆಗಳಿಗಿಂತ ಸುಶ್ರಾವ್ಯವಾಗಿ ಸಂಗೀತ ನೀಡಿರುವ ಅದೆಷ್ಟು ದಿಗ್ಗಜಗಳು ನಮ್ಮ ದೇಶದಲ್ಲಿ ಆಗಿಹೋಗಿಲ್ಲ, ಇಂದಿಗೂ ಇಲ್ಲ?

ಮಾಧುರ್ಯದಲ್ಲಿ ನೌಷದ್, ಜಾನಪದ ಮಟ್ಟುಗಳ ಬಳಕೆಯಲ್ಲಿ ಎಸ್.ಡಿ.ಬರ್ಮನ್, ಪಾಶ್ಚಾತ್ಯ ಛಾಪು ಮೆರೆಸುವಲ್ಲಿ, ಬೆರೆಸುವಲ್ಲಿ ಆರ್.ಡಿ.ಬರ್ಮನ್, ಸಂಗೀತವನ್ನೂ ವಾದ್ಯಗಳನ್ನೂ ದುಡಿಸಿಕೊಳ್ಳುವಲ್ಲಿ ಇಳಯರಾಜಾ, ಗಾಯನದಲ್ಲಿ ರಫಿ, ಮುಕೇಶ್, ಕಿಶೋರ್, ಲತಾ, ಆಶಾ ಹೀಗೆ ಅದೆಷ್ಟೊಂದು ಉದಾಹರಣೆಗಳನ್ನು ನೀಡಬಹುದಲ್ಲವೆ? ಗುಲ್ಜಾರ್‌ರಷ್ಟೇ ಹಾಗೂ ಅವರಿಗಿಂತ ಉತ್ತಮವಾಗಿ ಗೀತರಚನೆ ಮಾಡಿರುವವರು ಅದೆಷ್ಟು ಮಂದಿ ನಮ್ಮಲ್ಲಿಲ್ಲ? ಕವಿ ಪ್ರದೀಪ್‌ರಿಂದ ಮೊದಲ್ಗೊಂಡು ಜಾವೇದ್ ಅಖ್ತರ್‌ವರೆಗೆ ಅದೆಷ್ಟು ರಚನಕಾರರ ಚಿತ್ರಗೀತೆಗಳು ಅದ್ಭುತವಾಗಿಲ್ಲ? ಕನ್ನಡ ಚಿತ್ರಸಂಗೀತ ಕ್ಷೇತ್ರದಲ್ಲಿ ಅದೆಷ್ಟು ಅದ್ಭುತ ಆಣಿಮುತ್ತುಗಳಿಲ್ಲ? ಇತರ ದಕ್ಷಿಣ ಭಾರತೀಯ ಭಾಷೆಗಳಲ್ಲೂ ಶ್ರೇಷ್ಠ ಚಿತ್ರಸಂಗೀತಕ್ಕೇನು ಕೊರತೆಯೇ? ಕನ್ನಡವೂ ಸೇರಿದಂತೆ ನಾನಾ ಭಾರತೀಯ ಭಾಷೆಗಳಲ್ಲಿ ರೆಹಮಾನ್-ಗುಲ್ಜಾರ್‌ರನ್ನು ಸರಿಗಟ್ಟುವ/ಮೀರುವ ಸಾಧನೆ ಮಾಡಿರುವವರು ಅದೆಷ್ಟು ಮಂದಿ ಇಲ್ಲ?

’ಸ್ಲಂಡಾಗ್..’ನ ’ಜೈ ಹೋ..’ ಗೀತೆ, ಮತ್ತು, ಹಿನ್ನೆಲೆ ಸಂಗೀತವೂ ಸೇರಿದಂತೆ ಒಟ್ಟು ಸಂಗೀತ ಇವು ಭಾರತೀಯ ಚಲನಚಿತ್ರರಂಗದ ಅತ್ಯುಚ್ಚ ಕೃತಿಗಳು ಎಂಬಂತೆ ನಮ್ಮ ಮಾಧ್ಯಮಗಳು ಬಿಂಬಿಸುತ್ತಿರುವುದು ಈ ವಿಭಾಗಗಳ ಇತರ ಭಾರತೀಯ ಸಾಧಕರಿಗೆ ಮತ್ತು ಅವರ ಕೃತಿಗಳಿಗೆ ಎಸಗಿದ ಅನ್ಯಾಯವಲ್ಲವೆ? ಪ್ರಸ್ತುತ ಆಸ್ಕರ್ ಹಂಗಾಮಾ ಬಗ್ಗೆ ಒಳಗೊಳಗೇ ನಮ್ಮ ನೌಷದ್ ಸಾಬ್, ಲತಾ ದೀದೀ, ಆಶಾ ದೀದೀ, ಜಾವೇದ್ ಸಾಬ್ ಇವರುಗಳಿಗೆ ಏನೆನ್ನಿಸುತ್ತಿರಬೇಡ?

’ನಾನು ಎಷ್ಟೋ ಇಂಥ ಉತ್ತಮ ಗೀತೆಗಳನ್ನು ಹಾಡಿದ್ದೇನೆ; ಆದರೆ ಅವಕ್ಕೆ ಸೂಕ್ತ ಮನ್ನಣೆ ಸಿಗಲಿಲ್ಲ’, ಎಂದು ಈಚೆಗಷ್ಟೇ ಆಶಾ ದೀದೀ ಮಾರ್ಮಿಕವಾಗಿ ನುಡಿದದ್ದನ್ನು ನಾವು ಗಮನಿಸಿದ್ದೇವಷ್ಟೆ. ಅದೆಲ್ಲ ಹೋಗಲಿ, ಇದೇ ರೆಹಮಾನ್ ಮತ್ತು ಗುಲ್ಜಾರ್‌ರ ಕೃತಿಗಳೇ ಬೇರೆ ಹಲವು ಚಿತ್ರಗಳಲ್ಲಿ ’ಸ್ಲಂಡಾಗ್..’ಗಿಂತಲೂ ಚೆನ್ನಾಗಿಲ್ಲವೆ?

’ಸ್ಲಂ’ನಲ್ಲೇನಿದೆ?
--------------
ಇಷ್ಟಕ್ಕೂ, ’ಸ್ಲಂಡಾಗ್ ಮಿಲಿಯನೇರ್’ ಚಿತ್ರ ಹೇಗಿದೆ, ಅದರಲ್ಲಿ ಏನೇನಿದೆ, ಒಂದು ಸ್ಥೂಲ ನೋಟ ಹರಿಸೋಣ.

ಚಿತ್ರ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲೇ ಮುಂಬೈನ ಧಾರಾವಿ ಕೊಳೆಗೇರಿಯನ್ನು ವಿವಿಧ ಕೋನಗಳಲ್ಲಿ ಕಣ್ಣಿಗೆ ರಾಚುವಂತೆ ತೋರಿಸಲಾಗುತ್ತದೆ. ಕಥೆಯ ನೆಪದಲ್ಲಿ ಅರ್ಧ ಗಂಟೆಯೊಳಗೆ ಆ ಕೊಳೆಗೇರಿಯ ಎಲ್ಲ ಕೊಳಕು ದೃಶ್ಯಗಳನ್ನೂ ಪ್ರೇಕ್ಷಕನೆದುರು ಬಿಚ್ಚಿಡಲಾಗುತ್ತದೆ. ಚಲನಚಿತ್ರದುದ್ದಕ್ಕೂ ಕೊಳೆಗೇರಿ ಮಾತ್ರವಲ್ಲ, ಕಳ್ಳತನ, ಭಿಕ್ಷಾಟನೆ, ಮೋಸ, ಹಿಂಸೆ, ಬಡತನ, ಅಜ್ಞಾನ, ವೇಶ್ಯಾವೃತ್ತಿ, ಶೋಷಣೆ, ವಿವಿಧ ಮಾಫಿಯಾ, ಕೊಲೆ.... ಇವೇ ವಿಜೃಂಭಿಸುತ್ತವೆ. ಈ ಚಿತ್ರವನ್ನು ನೋಡಿದ ಅಮಾಯಕ ವಿದೇಶೀಯರಿಗೆ ಹಾಗೂ ಮುಗ್ಧ ಎನ್ನಾರೈ ಎಳೆಮೆದುಳುಗಳಿಗೆ ’ಭಾರತ ಒಂದು ದುಷ್ಟ ಹಾಗೂ ದರಿದ್ರ ದೇಶ’ ಎಂಬ ಭಾವನೆ ಉಂಟಾದರೆ ಆಶ್ಚರ್ಯವಿಲ್ಲ.

ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಗೊತ್ತಾಗುವ ಇನ್ನೊಂದು ಅಂಶವೆಂದರೆ, ಮಕ್ಕಳನ್ನು ಹೊರತುಪಡಿಸಿ ಚಿತ್ರದಲ್ಲಿ ಬರುವ ಬಹುತೇಕ ಭಾರತೀಯ ಪಾತ್ರಗಳು ದುಷ್ಟ ಪಾತ್ರಗಳು! ಇದು ಭಾರತೀಯರ ಬಗ್ಗೆ ವಿದೇಶೀಯರಲ್ಲಿ ಎಂಥ ಕಲ್ಪನೆಯನ್ನು ಮೂಡಿಸುತ್ತದೆಂದು ಯೋಚಿಸಿದರೆ ಗಾಬರಿಯಾಗುತ್ತದೆ! ಚಿತ್ರದ ದೃಶ್ಯವೊಂದರಲ್ಲಿ, ಕಾರೊಂದರ ಬಿಡಿಭಾಗಗಳನ್ನು ಕೊಳೆಗೇರಿ ಮಕ್ಕಳು ಕಳವು ಮಾಡಿದಾಗ, ನಷ್ಟಕ್ಕೊಳಗಾದವರ ಪೈಕಿ ಭಾರತೀಯನು ’ಗೈಡ್’ ಬಾಲಕನಮೇಲೆ ಹಿಂಸಾಚಾರಕ್ಕಿಳಿದರೆ ಬಿಳಿ ತೊಗಲಿನ ವಿದೇಶೀ ದಂಪತಿಗಳು ಕರುಣೆ ಮೆರೆದು ಆ ಬಾಲಕನಿಗೆ ಕಾಸು ನೀಡುತ್ತಾರೆ! ಈ ದೃಶ್ಯವು ಜಗತ್ತಿಗೆ ನೀಡುವ ಸಂದೇಶವನ್ನು ಊಹಿಸಿರಿ. ಚಿತ್ರದ ನಿರ್ಮಾಪಕರ/ನಿರ್ದೇಶಕರ ಉದ್ದೇಶವನ್ನೂ ಊಹಿಸಿರಿ.

ಇನ್ನೊಂದು ದೃಶ್ಯ: ಪಾಯಿಖಾನೆಯಲ್ಲಿ ಕೂಡಿಹಾಕಲ್ಪಟ್ಟಿದ್ದ ಬಾಲಕನೋರ್ವ (ಅವನೇ ಹೀರೊ) ಅಮಿತಾಭ್ ಬಚ್ಚನ್‌ನನ್ನು ನೋಡಲು ಪಾಯಿಖಾನೆಯ ಮಲದ ಗುಂಡಿಯೊಳಗೆ ಇಳಿದು ಮುಳುಗಿ ಸಾಗಿ ಇನ್ನೊಂದು ದ್ವಾರದಿಂದ ಹೊರಕ್ಕೆ ಬಂದು, ಮಲಭರಿತ ದೇಹದೊಂದಿಗೇ ಜನಸಮೂಹವನ್ನು ಛೇದಿಸಿಕೊಂಡು ಮುನ್ನುಗ್ಗಿ ಅಮಿತಾಭ್‌ನ ಹಸ್ತಾಕ್ಷರ ಪಡೆಯುತ್ತಾನೆ! ಭಾರತದ ಯಾವ ಕೊಳೆಗೇರಿಯ ಮಕ್ಕಳೂ ಈ ಮಟ್ಟಕ್ಕೆ ’ಇಳಿದದ್ದನ್ನು’ ನಾನಂತೂ ನೋಡಿಲ್ಲ, ಓದಿಲ್ಲ, ಕೇಳಿಲ್ಲ. ಇಂಥ ದೃಶ್ಯಗಳನ್ನು ತೋರಿಸುವ ನಿರ್ಮಾಪಕ-ನಿರ್ದೇಶಕರ ಉದ್ದೇಶವನ್ನು ಲಘುವಾಗಿ ಪರಿಗಣಿಸಲಾದೀತೇ? ಭಾರತದ ಬಗ್ಗೆ ಪಾಶ್ಚಾತ್ಯರಿಗಿರುವ ಭಾವನೆ ಎಂಥದೆಂದು ನಮಗೆ ಗೊತ್ತಷ್ಟೆ.

ಇಷ್ಟಾಗಿ, ಈ ಚಿತ್ರವು ಭಾರತದ ಬಗ್ಗೆಯಾಗಲೀ ಭಾರತೀಯರ ಬಗ್ಗೆಯಾಗಲೀ, ಕನಿಷ್ಠಪಕ್ಷ ಕೊಳೆಗೇರಿ ನಿವಾಸಿಗಳ ಬಗ್ಗೆಯಾಗಲೀ ಏನಾದರೂ ಧನಾತ್ಮಕ ಸಂದೇಶ ಬೀರುತ್ತದೆಯೇ? ಊಹ್ಞೂಂ. ಎರಡು ಕೋಟಿ ರೂಪಾಯಿ ಗೆಲ್ಲುವ ಹುಡುಗ ತನ್ನ ಪ್ರತಿಭೆಯಿಂದಾಗಲೀ ಪರಿಶ್ರಮದಿಂದಾಗಲೀ ಗೆಲ್ಲುವುದಿಲ್ಲ, ಜೀವನದಲ್ಲಿ ತಾನು ಅಕಸ್ಮಾತ್ತಾಗಿ ಅನುಭವಿಸಿದ ಘಟನೆಗಳಿಗೆ ಸಂಬಂಧಿಸಿದ ರಸಪ್ರಶ್ನೆಗಳೇ ಅದೃಷ್ಟವಶಾತ್ ಎದುರಾಗಿದ್ದರಿಂದಾಗಿ ಆತ ಕರೋಡ್‌ಪತಿಯಾಗುತ್ತಾನೆ, ಅಷ್ಟೆ.

ರಸಪ್ರಶ್ನೆಯ ಕಥಾವಸ್ತು ಈ ಚಿತ್ರದಲ್ಲಿರುವುದು ಕೇವಲ ಕುತೂಹಲ ಹುಟ್ಟಿಸಲಿಕ್ಕಾಗಿ ಮತ್ತು ’ಭಾರತದ ಕೊಳೆಗೇರಿಯ ದರಿದ್ರ ಜೀವನವನ್ನೂ ಅದರಾಚೆಯ ದುಷ್ಟ ಜೀವನವನ್ನೂ’ ಇದುವೇ ಭಾರತ ಎಂದು ಜಗತ್ತಿಗೆ ಸಾರಿ ತೋರಿಸುವುದಕ್ಕಾಗಿ.

ಇಂಥ ಬ್ರಿಟಿಷ್ ಚಿತ್ರಕ್ಕೆ ಅಮೆರಿಕನ್ನರು ಆಸ್ಕರ್ ಕೊಟ್ಟರೆ ಅದು ನಿರೀಕ್ಷಿತವೇ. ಶತಮಾನಗಳಿಂದಲೂ ಅವರ ನಾಡಿಮಿಡಿತ ನಮಗೆ ಗೊತ್ತಿಲ್ಲವೆ? ಜೊತೆಗೆ, ಆಸ್ಕರ್ ನಿರ್ಧರಿಸುವಾಗ ಅವರು ಇಂಗ್ಲಿಷೇತರ ಚಿತ್ರಗಳಿಗಿಂತ ಇಂಗ್ಲಿಷ್ ಚಿತ್ರಗಳೆಡೆಗೇ ವಿಶೇಷ ಒಲವು ತೋರುವುದೂ ನಮಗೆ ಗೊತ್ತಲ್ಲವೆ? ಹೀಗಿದ್ದೂ, ಆಸ್ಕರ್ ಬಂತೆಂದಾಕ್ಷಣ ನಮ್ಮವೇ ಮಾಧ್ಯಮಗಳು ’ಸ್ಲಂಡಾಗ್ ಮಿಲಿಯನೇರ್’ ಚಿತ್ರವನ್ನು ಈ ಪಾಟಿ ಹಾಡಿ ಹೊಗಳುತ್ತಿವೆಯಲ್ಲಾ, ಇದಕ್ಕೇನೆನ್ನಬೇಕು? ದೇಶದ ಘನತೆ-ಗೌರವಗಳಿಗಿಂತ ಒಂದು ಚಲನಚಿತ್ರ ಹೆಚ್ಚೇ? ಈ ಮಾಧ್ಯಮಗಳಿಗೆ ನೋ ಆಸ್ಕರ್, ನೋ ಟೆಲ್ಲರ್!

ಕೊಳೆಗೇರಿ ನೋಡುವ ತವಕ!
---------------------------
’ಸ್ಲಂಡಾಗ್ ಮಿಲಿಯನೇರ್’ ಚಿತ್ರವು ಆಸ್ಕರ್ ಪ್ರಶಸ್ತಿಗಳನ್ನು ಕೊಳ್ಳೆಹೊಡೆದ ಮರುವಾರ ನಾನು ತಮಿಳುನಾಡಿನ ತಿರುವಣ್ಣಾಮಲೈನಿಂದ ೩೭ ಕಿ.ಮೀ. ದೂರದ ಜಿಂಜಿ ಎಂಬ ಐತಿಹಾಸಿಕ ಸ್ಥಳದಲ್ಲಿದ್ದೆ. ಅಲ್ಲಿ ಬೆಟ್ಟಗಳಮೇಲಿರುವ ರಾಜಗಿರಿ ಕೋಟೆ ಮತ್ತು ಕೃಷ್ಣಗಿರಿ ಕೋಟೆ ಎಂಬೆರಡು ಕೋಟೆಗಳನ್ನು ನೋಡಲು ಬೆಟ್ಟ ಹತ್ತುತ್ತಿದ್ದೆ. ಒಂದಷ್ಟು ಮಂದಿ ಬಿಳಿ ತೊಗಲಿನ ವಿದೇಶೀಯರೂ ಬೆಟ್ಟವೇರುತ್ತಿದ್ದರು. ಫ್ರೆಂಚರೇ ಬಹುಸಂಖ್ಯೆಯಲ್ಲಿದ್ದ ಅವರಲ್ಲಿ ಅಮೆರಿಕನ್ನರೂ ಮತ್ತು ಬ್ರಿಟಿಷರೂ ಇದ್ದರು. ಬಹುತೇಕ ಎಲ್ಲರ ಕೈಲೂ ಸ್ಥಿರಚಿತ್ರ ಕ್ಯಾಮೆರಾ/ವಿಡಿಯೊ ಕ್ಯಾಮೆರಾ ಇತ್ತು. ಕೋಟೆಕೊತ್ತಲಗಳಿಗಿಂತ ಹೆಚ್ಚಾಗಿ ಅವರೆಲ್ಲ ಸುತ್ತಮುತ್ತಲ ಭಿಕ್ಷುಕರನ್ನು, ಬೀದಿಮಕ್ಕಳನ್ನು, ರಸ್ತೆಬದಿಯಲ್ಲೋ ಗುಡಿಸಲ ಹೊರಗೋ ಸುಮ್ಮನೆ ಕುಳಿತಿದ್ದ ಬಡಜನರನ್ನು ತಮ್ಮ ಕ್ಯಾಮೆರಾಗಳಲ್ಲಿ ಚಿತ್ರೀಕರಿಸುತ್ತಿದ್ದರು! ಅವರೊಡನೆ ನಾನು ಮಾತಿಗಿಳಿದಾಗ ತಿಳಿದುಬಂದ ಆಘಾತಕಾರಿ ಸಂಗತಿಯೆಂದರೆ ಅವರ ಪೈಕಿ ಹಲವರು ಕೊಳೆಗೇರಿಯನ್ನು ನೋಡಿ ಚಿತ್ರೀಕರಿಸಲೆಂದೇ ಮರುದಿನ ಚೆನ್ನೈಗೆ ಹೋಗುವವರಿದ್ದರು! ’ಸ್ಲಂಡಾಗ್..’ ಚಿತ್ರ ನೋಡಿದ ನಂತರ ಅವರಿಗೆ ಈ ’ಬಯಕೆ’ ಉಂಟಾಯಿತಂತೆ! ಚೆನ್ನೈನಲ್ಲಿ ’ಅದ್ಭುತ ಕೊಳೆಗೇರಿ’ ತೋರಿಸುವುದಾಗಿ ಚೆನ್ನೈನ ಇವರ ಮಿತ್ರರ್‍ಯಾರೋ ಇವರಿಗೆ ಆಶ್ವಾಸನೆ ನೀಡಿದ್ದಾರಂತೆ! ತಮ್ಮ ದೇಶಕ್ಕೆ ಮರಳಿದಮೇಲೆ ಇವರು ಭಾರತದ ಕೊಳೆಗೇರಿ ದೃಶ್ಯಗಳನ್ನು ತಮ್ಮ ಬಂಧು-ಮಿತ್ರರಿಗೆ ತೋರಿಸುತ್ತಾರಂತೆ! ಜಿಂಜಿಯಲ್ಲಿ ತೆಗೆದ ಭಿಕ್ಷುಕರ ಮತ್ತು ಬಡಜನರ ಫೋಟೋಗಳ ಸ್ಲೈಡ್ ಷೋ ಮಾಡುತ್ತಾರಂತೆ!

ನನ್ನೆಡೆ ದಿಟ್ಟಿಸುತ್ತ, ’ನೀವು ಇನ್ನೂ ಉದ್ಧಾರ ಆಗಿಲ್ಲ ಅಲ್ವೆ, ಪಾಪ!’ ಎಂಬ ಉದ್ಗಾರ ಬೇರೆ, ಈ ಧೂರ್ತರಿಂದ! ಬೆಟ್ಟವೇರಿ ಮೊದಲೇ ಬೆವರಿದ್ದ ಇವರೊಡನೆ ವಾದಕ್ಕಿಳಿದ ನಾನು ಇನ್ನಷ್ಟು ಇವರ ಬೆವರಿಳಿಸಿದೆನಾದರೂ ಇವರ ’ಕೊಳೆಗೇರಿ ಕಾರ್ಯಕ್ರಮ’ದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ!

ಮರುದಿನ ನಾನು ತಿರುವಣ್ಣಾಮಲೈನಲ್ಲಿ ರಮಣ ಮಹರ್ಷಿಗಳ ಸ್ಕಂದಾಶ್ರಮ ಮತ್ತು ವಿರೂಪಾಕ್ಷ ಗುಹೆಗಳನ್ನು ಸಂದರ್ಶಿಸಲು ಬೆಟ್ಟವೇರುತ್ತಿದ್ದಾಗ ಸುತ್ತಮುತ್ತೆಲ್ಲ ವಿದೇಶೀಯರೇ ಕಂಡುಬಂದರು. ಬಹಳಷ್ಟು ಮಂದಿಯನ್ನು ನಾನು ಮಾತನಾಡಿಸಿದೆ. ಅವರೆಲ್ಲರೂ ’ಸ್ಲಂಡಾಗ್..’ ಚಿತ್ರವನ್ನು ನೋಡಿದ್ದರು, ಇಲ್ಲವೇ ಅದರ ಬಗ್ಗೆ ಸಾಕಷ್ಟು ಅರಿತಿದ್ದರು. ಆ ಚಿತ್ರವು ನೈಜ ಭಾರತವನ್ನು ಪ್ರತಿಬಿಂಬಿಸುತ್ತದೆಂಬುದು ಅವರ ಅಭಿಪ್ರಾಯವಾಗಿತ್ತು!! ಅರವಿಂದ ಅಡಿಗನ ’ವೈಟ್ ಟೈಗರ್’ ಕೃತಿಯನ್ನು ಅವರಲ್ಲಿ ಹಲವರು ಓದಿದ್ದರು. ’ಇಂಥ ನರಕದಲ್ಲಿ ನೀವು ಅದು ಹೇಗೆ ಜೀವಿಸುತ್ತೀರಿ?!’ ಎಂದು ಅವರು ನನ್ನನ್ನು ಪ್ರಶ್ನಿಸಿದರು!

’ನರಕ ನಮ್ಮ ದೇಶವಲ್ಲ, ನಿಮ್ಮ ಮನಸ್ಸು’, ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಲು ನಾನು ಸಾಕಷ್ಟು ಹೆಣಗಾಡಿದೆ. ಅವರಿಗೆ ಗುಣಾತ್ಮಕ ಭಾರತದ ಬಗ್ಗೆ ತಿಳಿವಳಿಕೆ ನೀಡುವಲ್ಲಿ ನಾನು ಸಾಕಷ್ಟು ಯಶಸ್ವಿಯೇನೋ ಆದೆ. ಆದರೆ, ಮುಂಬೈನ ಧಾರಾವಿಯ ’ಕೊಳಕನ್ನು’, ಮತ್ತು, ಅಲ್ಲಿ ಭಿಕ್ಷಾಟನೆಗೆ ಹಚ್ಚಲಿಕ್ಕಾಗಿ ಮಕ್ಕಳನ್ನು ಅಪಹರಿಸಿ ಅಂಗಾಂಗ ಊನಗೊಳಿಸುವ ಮಾಫಿಯಾವನ್ನು (’ಸ್ಲಂಡಾಗ್..’ ಚಿತ್ರದಲ್ಲಿ ಇದನ್ನು ತೋರಿಸಲಾಗಿದೆ) ನೋಡಲು (ಸವಿಯಲು!) ಹಾಗೂ ಚಿತ್ರೀಕರಿಸಿಕೊಳ್ಳಲು ಮುಂಬೈಗೆ ಹಾರಲಿರುವ ಅವರಲ್ಲಿನ ಕೆಲವರ ನಿರ್ಧಾರವನ್ನು ತಿದ್ದುವಲ್ಲಿ ನಾನು ವಿಫಲನಾದೆ! ’ಸ್ಲಂಡಾಗ್..’ ಮತ್ತು ’ವೈಟ್ ಟೈಗರ್’ಗಳು ಅವರ ಮನಸ್ಸಿನ ಮೇಲೆ ಅಂಥ ಭಾರೀ ಪರಿಣಾಮವನ್ನು ಉಂಟುಮಾಡಿದ್ದವು!

ಫ್ರೆಂಚರಾಗಿರಲೀ ಬ್ರಿಟಿಷರಾಗಿರಲೀ ಅಮೆರಿಕನ್ನರಾಗಿರಲೀ, ಅವರು ಜಿಂಜಿ ಕೋಟೆ ನೋಡಲು ಬಂದ ಇತಿಹಾಸಪ್ರಿಯರಾಗಿರಲೀ ರಮಣಾಶ್ರಮಕ್ಕೆ ಬಂದ ಅಧ್ಯಾತ್ಮಜಿಜ್ಞಾಸುಗಳಾಗಿರಲೀ, ಬಿಳಿದೊಗಲಿನ ಈ ವಿದೇಶೀಯರಿಗೆ ಭಾರತದ ಕೊಳೆಗೇರಿಯನ್ನು ನೋಡುವ ತವಕ! ಇಡೀ ಭಾರತವನ್ನೇ ಕೊಳೆಗೇರಿಯೆಂದು ತೀರ್ಮಾನಿಸಿಬಿಡುವ ತವಕ! ಪ್ರಪಂಚದ ಬಹುಪಾಲು ರಾಷ್ಟ್ರಗಳಿಗೆ ಹೋಲಿಸಿದಾಗ ಸ್ವರ್ಗಸಮಾನವೆನ್ನಿಸುವ ಈ ನಮ್ಮ ಭವ್ಯ ಭಾರತವನ್ನು ನರಕವೆಂದು ಕರೆಯುವ ಕುಹಕ!

ನನ್ನನ್ನೀಗ ಕಾಡುತ್ತಿರುವ ಪ್ರಶ್ನೆ: ’ಸ್ಲಂಡಾಗ್..’ ಚಿತ್ರವನ್ನು ಇನ್ನೂ ನಾವು (ಭಾರತೀಯರು) ತಲೆಮೇಲೆ ಹೊತ್ತುಕೊಂಡು ಕುಣಿಯುತ್ತಿರಬೇಕೇ?

10 ಕಾಮೆಂಟ್‌ಗಳು:

  1. slumdog ge oscar banthu, innobba mahanu bhava (aravinda adiga) bareda pustaka ke Booker banthu. adu ashte, bharathavannu baiyode uddesha!!!

    ನನ್ನನ್ನೀಗ ಕಾಡುತ್ತಿರುವ ಪ್ರಶ್ನೆ: ’ಸ್ಲಂಡಾಗ್..’ ಚಿತ್ರವನ್ನು ಇನ್ನೂ ನಾವು (ಭಾರತೀಯರು) ತಲೆಮೇಲೆ ಹೊತ್ತುಕೊಂಡು ಕುಣಿಯುತ್ತಿರಬೇಕೇ?
    prashne chennagide, namma anil kapur a nirdeshakara kaalige biddidda. namma hattira idakke uttara illa, nimma prashne ge hege uttara kottevu?

    ಪ್ರತ್ಯುತ್ತರಅಳಿಸಿ
  2. ಇವೆಲ್ಲಾ ಮಾರುಕಟ್ಟೆಯ ಗಿಮಿಕ್ ಸರ್. ಭಾರತೀಯರು ಮತ್ತು ವಿದೇಶೀಯರು ಭಾರತದ ಮಾನ ಹರಾಜುಹಾಕಲಿಕ್ಕೆ ಕಾಯುತ್ತಿರುವ ಈ ಸಂದರ್ಭದಲ್ಲಿ ಮತ್ತೊಬ್ಬ ಭಾರತೀಯನಲ್ಲದವರ ಇನ್ ಕ್ರೆಡಿಬಲ್ ಇಂಡಿಯಾ ಹೆಸರಿನಲ್ಲಿ 17 ತಾಸು ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುವ ಅದ್ಭುತವನ್ನು ಜಗತ್ತಿಗೆ ತೋರಿಸುತ್ತಿದ್ದಾನೆ. ಹೆಚ್ಚಿನ ಮಾಹಿತಿಗೆ ನನ್ನ ಬ್ಲಾಗ್ ನೋಡಿರಿ.
    ಬೇದ್ರೆ ಮಂಜುನಾಥ
    Slumdog Millionaire
    The Story of India by Michael Wood - A Serial in Six Parts
    Article in Vijaya Karnataka Daily Part 2
    01-02-2009
    The Story of India - Michael Wood

    http://www.pbs.org/thestoryofindia/
    Article in Vijaya Karnataka Daily Part 1
    25-01-2009

    The Story of India - Michael Wood
    http://in.youtube.com/watch?v=UpsGTR_ETg8
    http://bedrebrains.blogspot.com
    January 2009 postings

    ಪ್ರತ್ಯುತ್ತರಅಳಿಸಿ
  3. ಬಾಲು ಅವರೇ,
    ನಿಮ್ಮ ಕಳಕಳಿಭರಿತ ಪ್ರತಿಕ್ರಿಯೆಯು ಕಟು ವಾಸ್ತವವನ್ನು ಹೇಳುತ್ತಿದೆ.
    ಮಂಜುನಾಥ್ ಅವರೇ, ನಿಮ್ಮ ಮಾತು ಅಕ್ಷರಶಃ ಸತ್ಯ.
    ಅಂದಹಾಗೆ, ’The Story of India’ ಸಾಕ್ಷ್ಯಚಿತ್ರವನ್ನು ಸಂಪೂರ್ಣ ನೋಡಿದ್ದೇನೆ. ಪುಳಕಿತನಾಗಿದ್ದೇನೆ. (ಚಿತ್ರದ ಅಂತಿಮ ಭಾಗದಲ್ಲಿ, ಜಲಿಯನ್‌ವಾಲಾ ಬಾಗ್ ಹತ್ಯೆ ಮತ್ತು ದೇಶವಿಭಜನೆ ವಿಷಯ ಬಂದಾಗ, ವಿಷಣ್ಣನೂ ಆಗಿದ್ದೇನೆ.)

    ಪ್ರತ್ಯುತ್ತರಅಳಿಸಿ
  4. [ ಕಾಗುಣಿತ ದೋಷವನ್ನು ಕ್ಷಮಿಸಿಬಿಡಿ]

    ೧) ಸರ್ ನನ್ನ ಒಂದು ಅನುಭವವನ್ನು ನಿಮಗೆ ತಿಳಿಸುತ್ತೇನೆ, ಒಂದು ವರ್ಷದ ಕೆಳಗೆ ಕಚೇರಿ ಕೆಲಸದ ಮೇಲೆ ಸೌತ್ ಕೊರಿಯಾ ದೇಶಕ್ಕೆ ಹೋಗಿದ್ದಾಗ, ಅಲ್ಲಿನ ಸಹೋದ್ಯೋಗಿ ನನ್ನನ್ನು ಕೇಳಿದ ಪ್ರಶ್ನೆಯಿದು. "ನಿಮಗೆ ಭಾರತದಲ್ಲಿ ಕಚೇರಿ ಇದೆಯೆ, ಅದಕ್ಕೆ ಕಟ್ಟಡ ಇದೆಯೆ". ನನಗೆ ಎನು ಹೇಳಬೇಕೊ ತಿಳಿಯಲಿಲ್ಲ...
    ಅವನ ತಪ್ಪೇನಿಲ್ಲ, ಅಲ್ಲಿನ ಚಾನಲ್ಗಳಲ್ಲಿ, ನಮ್ಮ ದೇಶದಲ್ಲಿರುವ ಸ್ಲಮ್ ಗಳನ್ನು ಹಾಗು ಬಡತನವನ್ನು ಮಾತ್ರವೆ ತೋರಿಸುತ್ತಾರೆ.
    ನಂತರ ಹಾವಡಿಗರ ದೇಶವೆಂಬ ಬಿಂಬ, ಅಬ್ಬಬ್ಬಾ ಎಂದರೆ ಅವರಲ್ಲಿ ಕೆಲವರು ಗಾಂಧಿ ಹೆಸರು ಕೇಳಿರುವರು.

    ೨) ವೈಟ್ ಟೈಗರ್
    ಒಂದು ವಾರದ ಮಟ್ಟಿಗೆ ಭಾರತ ದೇಶವನ್ನು ಸುತ್ತಲು ಬಂದ ಒಬ್ಬ ಎನ್ ಆರ್ ಐ ತರುಣನಿಗೆ, ಅಕಸ್ಮಾತಾಗಿ ಮುಲ್ಕರಾಜ ಆನಂದರ ಕೂಲಿ ಪುಸ್ತಕವನ್ನು ಓದಲು ಕೊಟ್ಟು, ವಾರದ ತರುವಾಯು ಅವನಿಗೆ ಭಾರತದ ಸಮಸ್ಯೆಗಳ ಕುರಿತು ಒಂದು ಪ್ರಬಂಧ ಬರೆಯಲೇಳಿದರೆ, ಹೊರಬರುವ ರೂಪವೆ ವೈಟ್ ಟೈಗರ್.
    ಅರವಿಂದ ಅಡಿಗರು ಒಮರ, ಫಿರ್ದೋಸಿ, ಗಾಲಿಬ್ ರವರ ಹೆಸರನ್ನು ಪುಸ್ತಕದಲ್ಲಿ ಅಲ್ಲಲ್ಲಿ ಉಪಯೋಗಿಸಿರವರು( ಪಾತ್ರದ ಮೂಲಕ).
    ಹುಡುಗನ ಪಾತ್ರವು ಒಮರ, ಗಾಲಿಬರ ಪದ್ಯಗಳನ್ನು ಕಂಠ ಪಾಠ ಮಾಡಿರುತ್ತಾನೆ. ಆದರೆ ಪದ್ಯಗಳ ಪ್ರಭಾವ ಅರವಿಂದ ಅಡಿಗರ ಮೇಲಾಗಲಿ, ಆ ಹುಡುಗನ ಮೇಲಾಗಲಿ ಕಿಂಚಿತ್ತು ಬೀರಿದಂತಿಲ್ಲ.
    ಒಟ್ಟಿನಲ್ಲಿ ಒಬ್ಬರು ಭಾರತದ ಸಮಸ್ಯೆಗಳ ಕುರಿತು ಬರೆದರೆ, ಇನ್ನೊಬ್ಬರು ಭಾರತವೆ ಸಮಸ್ಯೆ ಎಂಬಂತೆ ಬರೆದಿರುವರು.
    ಒಬ್ಬರ ಪುಸ್ತಕ ಓದಿದರೆ ವಿಚಾರ ಸ್ಥಿತಿ ಉಂಟಾದರೆ, ಇನ್ನೊಬ್ಬರ ಪುಸ್ತಕ ವಿಕಾರ ಸ್ಥಿತಿ ಉಂಟು ಮಾಡುತ್ತದೆ.

    ಅಂದಿನ ಕಾಲದ ಹಿಂದಿಯ ಗುರುದತ್ ಆದಿಯಾಗಿ ಅನೇಕ ನಿರ್ದೇಶಕರು ಸಿನಿಮಾದಲ್ಲಿ ಸಮಸ್ಯೆ ಕುರಿತು ಚಿಂತನೆ ಮಾಡಿದರೆ, ಡ್ಯಾನಿ ಬಾಯ್ಲ ರವರು ಸಮಸ್ಯೆಯನ್ನೆ ಸಿನಮಾದ ಸರಕಾಗಿ ಬಂಡವಾಳವಾಗಿ ಉಪಯೋಗಿಸಿರುವುದು ವಿಷಾದನೀಯ.

    ೩) ಇಂದಿನ ಜಾಹಿರಾತುಗಳಲ್ಲಿ ನನಗೆ ಕಂಡುಬಂದ ಇನ್ನೊಂದು ಕೆಟ್ಟ ಸಂಗತಿ
    -> ಒಂದು ಇನ್-ಶ್ಯೂರೆನ್ಸ್ ಜಾಹಿರಾತು,
    ಪುಟ್ಟ ಮಗುವು ಚೆನ್ನಾಗಿ ಓದಿ, ಮುಂದೆ ಆಷ್ಟ್ರೋನಾಟ್ ಆಗಬೇಕೆಂಬ ಆಸೆ. ಹೀಗೆ ತನ್ನಾಸೆ ವ್ಯಕ್ತ ಪಡಿಸುತ್ತ, ಆ ಮಗುವು ತಟ್ಟನೆ ಹೇಳುತ್ತದೆ, ಅಪ್ಪಾ ಇದಕ್ಕೆ ತುಂಬಾ ಹಣ ಬೇಕಾಗಬಹುದಲ್ಲವೆಂದು, ಹೀಗೆ ಅದು ಮುಂದುವರೆಯುತ್ತದೆ...
    ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ, ಯಾವ ಪುಟ್ಟ ಮಗುವು ಹಣದ ಕುರಿತು ಯೋಚಿಸಿರುವದನ್ನು ನಾನು ಕಂಡಿಲ್ಲ, ಇದನ್ನು ನೋಡುವ ಮಗುವು(ಬಡವನ ಮಗು, ವಿಪರ್ಯಾಸವೆಂದರೆ ಇನ್-ಶ್ಯೂರೆನ್ಸ್ ಕಂಪನಿಯ ಗುರಿ ಬಡವರಲ್ಲ, ನಿಜ ಅಲ್ವೆ ಬಡವರ ಕೈಲಿ ಇನ್ ಶ್ಯೂರೆನ್ಸ್ ಹಣ ಕಟ್ಟುವದಕ್ಕಾಗುತ್ಯೆ ), ತನ್ನ ಆಸೆಯನ್ನೆ ಬಲಿಕೊಡಬಹುದು, ಅಥವಾ ಜೀವನದ ಗುರಿಯೆ ಹಣವೆಂದು ತಪ್ಪು ತಿಳಿಯಬಹುದು.
    ಅಕಸ್ಮಾತಾಗಿ ತಮ್ಮ ಬಾಲ್ಯದಲ್ಲಿ ಅಬ್ದುಲ್ ಕಲಾಂ ರವರು ಎನಾದರು ಇಂಥಹದನ್ನು ಕಂಡಿದ್ದರೆ, ನಮ್ಮ ದೇಶ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಕಳೆದು ಕೊಳ್ಳುತ್ತಿತ್ತು, ಸಂಶಯವೆ ಇಲ್ಲ. ಅದೃಷ್ಠ, ಆಗ ಅವರ ಮನೆಯಲ್ಲಿ ಟಿ ವಿ ಇರಲ್ಲಿಲ್ಲ, ಇನ್-ಶ್ಯೂರೆನ್ಸ್ ಕಂಪನಿಯು ಇರಲಿಲ್ಲ.

    ಎಲ್ಲವನ್ನು ವ್ಯಾಪಾರ ದೃಷ್ಟಿಯಲ್ಲಿ ನೋಡುವುದು ತಪ್ಪು ಅನ್ನಿಸುತ್ತೆ ಸರ್. ವ್ಯಾಪಾರ ದೃಷ್ಟಿಯಿದ್ದವನು ಯಾವಮಟ್ಟಕ್ಕಾಗಿಯಾದರು ಇಳಿಯಬಹುದೋ ಎನೋ.
    ಜಾಹಿರಾತುಗಳಲ್ಲಿ ಪುಟ್ಟಮಕ್ಕಳನ್ನು..., ಒಂದು ಗಾಡಿಯ ಟಯರ್ ಮಾರುವುದಕ್ಕು, ಒಂದು ಹೆಣ್ಣಿನ ಸಹಾಯಬೇಕು....ಆಸ್ಕರ್ ಪ್ರಶಸ್ತಿಗಾಗಿ ಭಾರತದ ಬಡತನವನ್ನು....

    ಪ್ರತ್ಯುತ್ತರಅಳಿಸಿ
  5. sar,
    vita0Da vaada maaDuvavaru nimma I lEKana odiyaadarU sudaarisiyaaru e0du aaSisuttEne.. nimma praSnege namma hattira uttara illa. naavu BaaratIyare haage emme charma bEga taaguvudilla.

    ಪ್ರತ್ಯುತ್ತರಅಳಿಸಿ
  6. ಶ್ರೀಕಾಂತ್ ಅವರೇ,
    ಕೊರಿಯಾ ಘಟನೆಯಂಥ ಹೇರಳ ಉದಾಹರಣೆಗಳಿವೆ. ನಮ್ಮವರೇ ಆದ ವಿತಂಡವಾದಿಗಳಲ್ಲಿ ಇದಕ್ಕೆ ಉತ್ತರವೂ ಇದೆ! ಮಿದುಳು ಚುರುಕು, ಆದರೆ ಪರಿಜ್ಞಾನ-ಚಿಂತನ-ಅನುಭವ ಇವುಗಳ ಕೊರತೆ! (ರೂಪಾ ಅವರ ಆಶಯ ಈಡೇರದು!)
    ನಿಮ್ಮ ದೃಷ್ಟಿಕೋನ ಅತ್ಯಂತ ಸಂಗತವಾಗಿದೆ, ಅಭಿಪ್ರಾಯ ಮನನಾರ್ಹವಾಗಿದೆ.
    ಧನ್ಯವಾದ.

    ಪ್ರತ್ಯುತ್ತರಅಳಿಸಿ
  7. Batha ಅವರೇ,
    ಮೆಚ್ಚುಗೆಗಾಗಿ ಧನ್ಯವಾದ.
    ರೂಪಾ ಅವರೇ,
    ಎಂದಿನಂತೆ ಕಳಕಳಿಭರಿತ ಪ್ರತಿಕ್ರಿಯೆ ನೀಡಿದ್ದೀರಿ. ಧನ್ಯವಾದ.

    ಪ್ರತ್ಯುತ್ತರಅಳಿಸಿ
  8. ನೋ ಆಸ್ಕರ್, ನೋ ಟೆಲ್ಲರ್ - ದಟ್ಸ್ ವ್ಹೈ ಲೂಟೆಡ್ ಲಾಟ್ ಆಫ್ ಕ್ಯಾಶ್!
    :-)

    ಪ್ರತ್ಯುತ್ತರಅಳಿಸಿ
  9. ಯೆಸ್ ಜೋಶೀಜೀ, ದಟ್ಸ್ ವ್ಹೈ ದ ಬ್ಯಾಂಕ್ ಮೆನೇಜರ್ ಈಸ್ ಕಂಪ್ಲೈನಿಂಗ್.
    :-)

    ಪ್ರತ್ಯುತ್ತರಅಳಿಸಿ