ಧರ್ಮಾಚರಣೆಯ ವಿಧಿಗಳಲ್ಲಿ ಕೆಲವನ್ನು ನಾವು ಶಾಸ್ತ್ರವೆಂದೂ ಕೆಲವನ್ನು ಸಂಪ್ರದಾಯವೆಂದೂ ವರ್ಗೀಕರಿಸಿದ್ದೇವೆ. ’ಶಾಸ್ತ್ರ, ಸಂಪ್ರದಾಯ’ ಹಾಗೆಂದರೇನು?
ಇಲ್ಲಿ ಪ್ರಸ್ತುತವಾಗುವ "ಆಚರಣಾ ರೂಪದ ಶಾಸ್ತ್ರ"ವು ಮತ, ನಿಯಮ, ನೀತಿ ಸಂಬಂಧಿಯಾದುದರಿಂದ ಇದು "ಧರ್ಮಶಾಸ್ತ್ರ". ವೇದೋಕ್ತ ಮಂತ್ರಕ್ರಿಯಾವಿಧಿಯ ವ್ಯಾಖ್ಯಾನ ಸಾಧನವೂ, ಧರ್ಮವಿಚಾರದ ಶೋಧವೂ ಆಗಿರುವ "ಪೂರ್ವಮೀಮಾಂಸೆ"ಯನ್ನು ಮತಧರ್ಮೀಯ ಹಾಗೂ ನ್ಯಾಯವಿಷಯಕ ವಿದ್ಯಮಾನ ಪ್ರಸ್ತುತಿಗಾಗಿ ಬಳಸಿಕೊಂಡಿರುವಂಥದು ಧರ್ಮಶಾಸ್ತ್ರ. ಎಂದೇ ಇದರಲ್ಲಿ ನಿತ್ಯವಿಧಿಗಳ ಹಾಗೂ ಚತುರ್ವರ್ಣ ಸಂಬಂಧೀ ಕರ್ತವ್ಯಗಳ ಕಟ್ಟಳೆಗಳನ್ನು ಸಾರುವ "ಆಚಾರ", ಅಸ್ತಿತ್ವದ ನಿಯಮವನ್ನೂ ದರ್ಮಸಂದೇಹದ ಪರಿಹಾರವನ್ನೂ ಸಾರುವ "ವ್ಯವಹಾರ" ಮತ್ತು ಧರ್ಮೋಲ್ಲಂಘನದ ಸಂದರ್ಭದಲ್ಲಿ ಕೈಕೊಳ್ಳಬೇಕಾದ ಪರಿಹಾರವನ್ನು ಹೇಳುವ "ಪ್ರಾಯಶ್ಚಿತ್ತ" ಇವು ಪ್ರಧಾನ ವಿಷಯಗಳು.
ಹೀಗೆ, ಶಾಸ್ತ್ರವೆಂಬುದು ನಮ್ಮ ಜೀವನೋದ್ದೇಶವನ್ನೂ ಜೀವನವನ್ನೂ ಅರ್ಥೈಸಿ ಜೀವನದ ವಿಧಿ-ವಿಧಾನಗಳನ್ನು ರೂಪಿಸುವ ಒಂದು ಪ್ರಜ್ಞೆಯಾದ್ದರಿಂದ, ಕಾಲ, ಪ್ರಕೃತಿ, ಪರಿಸರ, ಸಂಸ್ಕೃತಿ, ನಾಗರಿಕತೆ ಮತ್ತು ಜೀವನಕ್ರಮಗಳ ಮಾರ್ಪಾಟಿಗನುಗುಣವಾಗಿ ಶಾಸ್ತ್ರಾನುಸರಣವೂ ಮಾರ್ಪಾಟು ಹೊಂದುವುದು ತಪ್ಪೇನಲ್ಲ, ಮಾತ್ರವಲ್ಲ, ಅವಶ್ಯ ಕೂಡ. ಇಷ್ಟಕ್ಕೂ ಶಾಸ್ತ್ರವೆಂಬುದು ಮಾನವಪ್ರಣೀತ ವಿಜ್ಞಾನವೇ ಹೊರತು ದೈವಪ್ರಣೀತ ವಿಧಿಯಲ್ಲ.
"ಶಾಸ್ತ್ರತೋ ಗುರುತಶ್ಚೈವ ಸ್ವತಶ್ಚೇತಿ ತ್ರಿಸಿದ್ಧಯಃ,
ಸರ್ವತ್ರ ಪುರುಷಾರ್ಥಸ್ಯ ನ ದೈವಸ್ಯ ಕದಾಚನ"
ಎಂಬ ಯೋಗವಾಸಿಷ್ಠದ ನುಡಿಯಂತೆ, ಶಾಸ್ತ್ರವೆಂಬುದು, ಕಾರ್ಯಸಿದ್ಧಿಯ ವಿಧಗಳಲ್ಲೊಂದಾಗಿದ್ದು, ಪೌರುಷಕ್ಕೆ ಸೇರಿದುದೇ ಹೊರತು ಎಂದಿಗೂ ದೈವಕ್ಕೆ ಸೇರಿದುದಲ್ಲ.
ಸಂಪ್ರದಾಯ
------------
ಇನ್ನು, "ಸಂಪ್ರದಾಯ". ಇದು ಪರಂಪರಾಗತ ಪದ್ಧತಿಯಾದ್ದರಿಂದ, ಸಕಾರಣ ರೂಢಿಯಾದ್ದರಿಂದ ಶಾಸ್ತ್ರಪ್ರಭೇದಸಮಾನ. ದೀಕ್ಷಾಬದ್ಧವಾದುದು ಇದು. ವಿವಿಧ ಜನವರ್ಗದ ನಂಬಿಕೆ, ಮನೋಭಾವ, ವಿವಿಧ ಭೂಗುಣ, ಹವಾಗುಣ, ಆಹಾರ ಪದ್ಧತಿ, ಜೀವನಶೈಲಿ, ಇವುಗಳು ಸಂಪ್ರದಾಯಗಳ ವಿಭಿನ್ನ ರೂಪಗಳಿಗೆ ಕಾರಣ. ಇವುಗಳಿಗನುಗುಣವಾಗಿ, ಮತ್ತು, ಕಾಲಮಾನ, ನಾಗರಿಕತೆ, ಸಂಸ್ಕೃತಿ ಮತ್ತು ಜೀವನದೃಷ್ಟಿಗಳು ಮಾರ್ಪಾಟುಹೊಂದುತ್ತ ಸಾಗಿದಂತೆಲ್ಲ ಸಂಪ್ರದಾಯವೂ ತಕ್ಕ ಮಾರ್ಪಾಟಿಗೊಳಗಾಗುವುದು ಸ್ವಾಭಾವಿಕ ಮತ್ತು ಅಪೇಕ್ಷಣೀಯ ಕೂಡ. ಹಾಗಾಗಕೂಡದೆಂದರೆ ಆಗ ಅದು ಮೌಢ್ಯವಾಗುತ್ತದೆ. ಸಂಪ್ರದಾಯವು ಮೌಢ್ಯವಾದಲ್ಲಿ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ. ಇಂಥ ಅಪಾಯವನ್ನೇ ಇಂದು ನಾವು ಎಲ್ಲೆಲ್ಲೂ ಕಾಣುತ್ತಿದ್ದೇವಷ್ಟೆ. ಸಂಪ್ರದಾಯವು ಗೋತ್ರದಂತೆ ಜನ್ಮದಿಂದ ಬಂದದ್ದಲ್ಲ. ನಾವು ಮಾಡಿಕೊಂಡದ್ದು. ನಾವೇ ಬದಲಾಯಿಸಲೂಬಹುದು. ಸಂದರ್ಭಾನುಸಾರ ಬದಲಾಯಿಸಬೇಕು ಸಹ. ಏಕೆಂದರೆ, ಸಮಾಜಮುಖಿಯಾಗಿರಬೇಕಾದುದು ಸಂಪ್ರದಾಯದ ಉದ್ದೇಶ ಮತ್ತು ಮೂಲ ಗುಣ.
ಧರ್ಮ, ಶಾಸ್ತ್ರ, ಸಂಪ್ರದಾಯ, ಇವೆಲ್ಲವೂ ನಂಬಿಕೆಗೆ ಅಧೀನವಾಗಿರುವ ವಿಷಯಗಳು. ನಂಬಿಕೆಯು ನಮ್ಮ ವಿವೇಚನೆಗೆ ಮತ್ತು ನಿಯಂತ್ರಣಕ್ಕೆ ಒಳಪಟ್ಟ ವಿಷಯ.
ಬುಧವಾರ, ಜೂನ್ 24, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ನಮ್ಮಲ್ಲಿ ಉತ್ತರ ಭಾರತ ವನ್ನು ಪುಣ್ಯ ಭೂಮಿ ಎಂತಲೂ, ಧಕ್ಷಿಣ ಭಾರತವನ್ನು ಕರ್ಮ ಭೂಮಿ ಎಂತಲೂ, ಹಾಗು ಪಶ್ಚಾತ ವನ್ನು ಭೂಗ ಭೂಮಿ ಎಂತಲೂ ವಿಂಗಡಣೆ ಇದೆ ಅಂತ ಕೇಳಿರುವೆ. (ಭಾಗಷ್ಯ ಇದು ಪೂಜಾ ವಿದಾನ ಗಳಿಗೆ ಮಾತ್ರ ಎಂದು ಭಾವಿಸುವೆ, ಆದರೆ ಇಗಲು ಕಾಶಿ ಯಲ್ಲಿ ಸಾಯಬೇಕು ಅನ್ನುವುದು ಹಲವರ ಅಪೇಕ್ಷೆ. - ನನ್ನ ತಿಳುವಳಿಗೆ ತಪ್ಪಿದ್ದಲ್ಲಿ ತಿಳಿಸಿರಿ )
ಪ್ರತ್ಯುತ್ತರಅಳಿಸಿನನ್ನ ಪ್ರಶ್ನೆ ಎಂದರೆ ಧರ್ಮ ಶಾಸ್ತ್ರ ಅನ್ನುವುದು ಯಾವುದರಲ್ಲಿ ವಿವರಿಸ ಲಾಗಿದೆ? ವೇದ, ಪುರಾಣ ಅಥವಾ ಅದು ಒಬ್ಬರಿಂದ ಒಬ್ಬರಿಗೆ ಹರಿದು ಬಂದಿರುವ ಕೊಂಡಿಯೇ?
ನಿಮ್ಮ ವಿವರಣೆ ಚೆನ್ನಾಗಿದೆ.
ಮಾನ್ಯರೆ, ಒಂದು ಕಾಲಕ್ಕೆ ಸಾಮಾಜಿಕ ಆರೋಗ್ಯ ವೃದ್ಧಿಸಲು ಕಂಡುಕೊಂಡ ಆಚರಣೆಗಳು ಇಂದು ಕಂದಾಚಾರವಾಗಿರುವುದು ವಿಪರ್ಯಾಸ. ಆದರೂ ಮೂಲದಲ್ಲಿ ಪ್ರತಿಯೊಂದೂ ಉತ್ತಮ ವಿಚಾರವೇ ಆಗಿತ್ತು ಮತ್ತು ಈಗಲೂ ಅದು ಪ್ರಸ್ತುತವೇ. ಹಳದಿ ಕಣ್ಣಿನಿಂದ ನೋಡುವುದನ್ನು ಬಿಡುವವರಿಗೆ ಮಾತ್ರ ಎಟುಕುವಂಥದ್ದು. ವೈಜ್ಞಾನಿಕ ವಿವರಣೆಗೂ ದಕ್ಕುವಂಥದ್ದು. ಅಂತಹ ಒಂದ ಪ್ರಯತ್ನ ಪ್ರೊ. ಶ್ರೀಕಂಠ ಕುಮಾರಸ್ವಾಮಿಗಳದ್ದು. ವಿವರಗಳಿಗೆ ಈ ಸೈಟ್ ನೋಡಿರಿ.
ಪ್ರತ್ಯುತ್ತರಅಳಿಸಿValuable Books on Indian Tradition by Prof. Sreekanta Kumaraswamy - A Review by Bedre Manjunath
Here is a review published in http://thatskannada.oneindia.in/ by Dr Jivi Kulkarni, Mumbai.
http://thatskannada.oneindia.in/column/gv/2009/0620-scientist-veda-expert-rk-srikanthakumarswamy.html
ಸನಾತನ ವೇದಪಂಡಿತ ಆರ್.ಕೆ. ಶ್ರೀಕಂಠಕುಮಾರಸ್ವಾಮಿ
ಸನ್ಮಿತ್ರರಾದ ನಿಮ್ಮಿಬ್ಬರ ಶ್ರದ್ಧೆ ನನಗೆ ಸಂತಸ ತಂದಿದೆ.
ಪ್ರತ್ಯುತ್ತರಅಳಿಸಿಬಾಲು ಅವರೇ,
ಐದು ಸಾವಿರ ವರ್ಷಗಳಿಗಿಂತಲೂ ಹಿಂದಿನಿಂದ ಸಾಗಿಬಂದಿರುವ ಧರ್ಮ ನಮ್ಮ ಧರ್ಮ. ಕಾಲಕ್ಕೆ ತಕ್ಕಂತೆ ಮಾರ್ಪಾಟು ಹೊಂದುತ್ತ ಇದು ಬೆಳೆದು, ವೇದದ ಆರಂಭದ ಸನಾತನ ಧರ್ಮ ನಮ್ಮ ಹಿಂದೂ ಧರ್ಮ ಆಗಿದೆ. ಇದು ಮತ ಅಲ್ಲ. ಒಂದು ಜೀವನ ವಿಧಾನ. ವೇದೋಪನಿಷತ್ತುಗಳು ಈ ವಿಧಾನದ ವಿವರಣ ನೀಡುತ್ತವೆ, ಅರ್ಥೈಸುತ್ತವೆ. ಅದರನುಸಾರ ಶಾಸ್ತ್ರ-ಸಂಪ್ರದಾಯಗಳು ರೂಪುಗೊಂಡಿವೆ. ಕಾಲಕ್ಕೆ ತಕ್ಕಂತೆ ಧರ್ಮದ ವಿವರಗಳು ಹೇಗೆ ಮಾರ್ಪಟ್ಟವೋ ಅದೇ ರೀತಿ ಶಾಸ್ತ್ರ-ಸಂಪ್ರದಾಯಗಳೂ ಕಾಲಕ್ಕೆ ತಕ್ಕಂತೆ ಮಾರ್ಪಾಡಿಗೊಳಗಾಗಬೇಕಾದ್ದು ಅಪೇಕ್ಷಣೀಯ.
ಮಂಜುನಾಥ್ ಅವರೇ,
ಆರ್.ಕೆ.ಶ್ರೀಕಂಠಕುಮಾರಸ್ವಾಮಿಯವರು ಸನಾತನ ಧರ್ಮವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸುವ ಬಗೆ ನನಗೆ ತುಂಬ ಮೆಚ್ಚುಗೆಯಾಗುತ್ತದೆ.