ಬುಧವಾರ, ಸೆಪ್ಟೆಂಬರ್ 9, 2009

2012ರಲ್ಲಿ ಜಗತ್ತು ಸರ್ವನಾಶವೇ?

2009ರಿಂದ 2012ರವರೆಗಿನ ಅವಧಿಯಲ್ಲಿ ಪ್ರಳಯಾಂತಕಾರಿ ಘಟನೆಗಳು ನಡೆದು ಜಗತ್ತು ಸರ್ವನಾಶವಾಗುವುದೆಂದು ’ಕಾಲಜ್ಞಾನಿ’ ನಾಸ್ಟ್ರಡಾಮಸ್ ಹೇಳಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

ಪ್ರಳಯಾಂತಕಾರಿ ಘಟನೆಗಳು ಸಂಭವಿಸಿಯಾವು. ಪರಿಸರ ನಾಶ, ಜಾಗತಿಕ ತಾಪಮಾನದ ಹೆಚ್ಚಳ, ಹೊಸ ಹೊಸ ರೋಗಗಳು, ದೇಶಗಳ ಅಣ್ವಸ್ತ್ರ ದಾಹ, ಯುದ್ಧ ದಾಹ ಇವುಗಳನ್ನೆಲ್ಲ ಗಮನಿಸಿದರೆ ಸನಿಹದಲ್ಲೇ ಭಾರೀ ಕೇಡುಗಾಲ ಉಂಟೆಂಬ ಅನುಮಾನ ಬರದಿರದು. ಆದರೆ, ಜಗತ್ತೇ ಸರ್ವನಾಶವಾಗುತ್ತದೆಂಬ ನುಡಿ ಮಾತ್ರ ಉತ್ಪ್ರೇಕ್ಷೆಯೇ ಸರಿ.

ನಾಸ್ಟ್ರಡಾಮಸ್‌ನ ಒಗಟಿನಂಥ ಹೇಳಿಕೆಗಳನ್ನು ನಾನಾ ವಿಧಗಳಲ್ಲಿ ಅರ್ಥೈಸಬಹುದು. ಅವನ ಭವಿಷ್ಯವಾಣಿಯ ಯಾವುದೇ ಒಂದು ನಿರ್ದಿಷ್ಟ ಹೇಳಿಕೆಯನ್ನು ಹಲವು ಘಟನೆಗಳ ಸಮರ್ಥನೆಗಾಗಿ ಬಳಸಲು ಸಾಧ್ಯ. ಅವನ ಹೇಳಿಕೆಗಳಲ್ಲಿ ಕಾಣ್ಕೆಯ ಜೊತೆಗೆ ಜಾಣ್ಮೆಯೂ ಬೆರೆತಿದೆ. ಆದ್ದರಿಂದ ಅವನ ಹೇಳಿಕೆಗಳನ್ನು ’ಇದಮಿತ್ಥಂ’ ಎಂದು ಅರ್ಥೈಸುವುದು ಸರಿಯಲ್ಲ.

ಇದ್ದಕಿದ್ದಂತೆ ಸರ್ವನಾಶವಾಗುವಷ್ಟು ಈ ಜಗತ್ತು ಕ್ಷುಲ್ಲಕವಲ್ಲ. ಸೃಷ್ಟಿ, ಬೆಳವಣಿಗೆ, ಮಾರ್ಪಾಡು, ನಾಶ ಎಲ್ಲವೂ ನಿಧಾನಪ್ರಕ್ರಿಯೆಗಳು. ’ಶೀಘ್ರ ಸರ್ವನಾಶ’ದ ಭ್ರಮೆಗೆ ನಾವು ಬಲಿಯಾಗಬಾರದು.

ಹಾಗೆ ನೋಡಿದರೆ, ಕಳೆದ ವರ್ಷ ವಿಜ್ಞಾನಿಗಳು ಉಂಟುಮಾಡಲೆತ್ನಿಸಿದ್ದ ’ಭೂಗರ್ಭದೊಳಗಿನ ಮಹಾಸ್ಫೋಟ’ ಹೆಚ್ಚು ಅಪಾಯಕಾರಿಯಾಗುವ ಸಂಭವವಿತ್ತು. (ಅಂಥದೇನೂ ಅಪಾಯ ಎದುರಾಗದೆಯೂ ಇರಬಹುದಿತ್ತು. ವಿಜ್ಞಾನಿಗಳಿಗೇ ಈ ಬಗ್ಗೆ ನಿಖರ ಅರಿವಿಲ್ಲ. ಅವರಲ್ಲೇ ಭಿನ್ನಾಭಿಪ್ರಾಯಗಳಿವೆ.) ಭೂಗರ್ಭದೊಳಗೆ 7 ಟೆರಾಎಲೆಕ್ಟ್ರಾನ್‌ವೋಲ್ಟ್ಸ್ (7 ಟಿಇವಿ) ಶಕ್ತಿಯ ದೂಲಗಳ ಡಿಕ್ಕಿಯನ್ನು ವಿಜ್ಞಾನಿಗಳು ನಡೆಸಿದಾಗ ಕೃಷ್ಣರಂಧ್ರ ಸೃಷ್ಟಿಯಾಗಿ ಭೂಮಿಯು ಅದರೊಳಗೆ ಲೀನವಾಗಿಬಿಡುವ ಅಥವಾ ಸರಪಳಿ ಕ್ರಿಯೆಯಾಗಿ ಜ್ವಾಲಾಮುಖಿ ಸ್ಫೋಟ, ಭೂಕಂಪನ ಮೊದಲಾದವು ಸಂಭವಿಸುವ ಭಯವಿತ್ತು. ತಾಂತ್ರಿಕ ಕಾರಣಗಳಿಂದ ಆ ಪ್ರಯೋಗಕ್ಕೀಗ ಹಿನ್ನಡೆಯಾಗಿದೆ. ಅಷ್ಟರಮಟ್ಟಿಗೆ ಭೂಮಿಯೀಗ ಸುರಕ್ಷಿತವಾಗಿದೆ!

ಜೀವರಾಶಿ ಸಹಿತ ಬ್ರಹ್ಮಾಂಡದ ಸೃಷ್ಟಿಯನ್ನೇ ಮಾನವನಿಗೆ ’ಅನುಕೂಲಕರ’ವಾಗಿ ಮಾರ್ಪಡಿಸುವ ಯತ್ನ ಇಂದು ನಡೆಯುತ್ತಿದೆ. ಹಾಗೆ ಪ್ರಕೃತಿನಿಯಮಕ್ಕೆ ವಿರುದ್ಧವಾಗಿ ಸಾಗಿದಾಗ, ’ಸ್ಥಿತಿ’ಯನ್ನು ಅಂತರಗೊಳಿಸಲು ಹೊರಟಾಗ, ’ಲಯ’ ಸರ್ವಥಾ ಸಂಭಾವ್ಯ. ಆದರೆ, ’ಲಯ’ವೆಂಬುದು ದಿಢೀರನೆ ಘಟಿಸುವುದು ಅಸಾಧ್ಯ. ವಿಜ್ಞಾನದ ಸ್ಥಾಪಿತ ನಿಯಮಗಳು ಈ ಆತಂಕಕ್ಕೆ ಪುಷ್ಟಿ ನೀಡುವುದಿಲ್ಲ.

ದಶಕಗಳ ಕೆಳಗೆ, ಅಷ್ಟಗ್ರಹಕೂಟದಿಂದಾಗಿ ಭೂಮಿ ಪ್ರಳಯವಾಗಿಹೋಗುತ್ತದೆಂದು ನಂಬಿಸುವ ಯತ್ನ ನಡೆದಿತ್ತು. ಕೆಲವು ಮುಗ್ಧರು ಆ ಸಂದರ್ಭದಲ್ಲಿ ಮನೆಮಠ ಮಾರಿ ಸಂಪತ್ತನ್ನೆಲ್ಲ ದಾನಮಾಡಿ ದೇವರ ಭಜನೆಮಾಡುತ್ತ ಪ್ರಳಯವನ್ನು ಎದುರುನೋಡುತ್ತ ಕುಳಿತರು! ಪ್ರಳಯ ಘಟಿಸಲಿಲ್ಲ, ಮನೆಮಾರು ಕಳೆದುಕೊಂಡವರು ಮಂಗ ಆದರು ಅಷ್ಟೆ!

ಮತ್ತೊಮ್ಮೆ, ಕೆಲವೇ ವರ್ಷಗಳಲ್ಲೇ ಪ್ರಳಯ ಸಂಭವಿಸುತ್ತದೆಂದು ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದರಲ್ಲಿ ಮುಖಪುಟ ಲೇಖನ ಪ್ರಕಟವಾಯಿತು. ಅದನ್ನು ಸಕಾರಣ ಅಲ್ಲಗಳೆದು ಅದೇ ಪತ್ರಿಕೆಯಲ್ಲೇ ನಾನೂ ಲೇಖನ ಪ್ರಕಟಿಸಿದೆ. ಪ್ರಳಯವಾಗುವುದೆಂದು ಪತ್ರಿಕೆಯು ಸೂಚಿಸಿದ ವರ್ಷಗಳಲ್ಲಿ ನಾನು ಪತ್ರಿಕೆಯು ಹೇಳಿದ ಸ್ಥಳವಾದ ಗುಜರಾತ್ ಸಮುದ್ರತೀರಕ್ಕೇ ಹೋಗಿ ವಾಸವಾಗಿದ್ದೆ! ಅದಾಗಲೇ ಗುಜರಾತ್‌ನ ಆ ಭಾಗಗಳಿಗೂ ಈ ’ಭವಿಷ್ಯ’ದ ಸುದ್ದಿ ತಕ್ಕಮಟ್ಟಿಗೆ ತಲುಪಿಬಿಟ್ಟಿತ್ತು! ಪ್ರಳಯವೇನೂ ಆಗುವುದಿಲ್ಲವೆಂದೂ, ಚಂಡಮಾರುತ, ಪ್ರವಾಹ, ಭೂಕಂಪಗಳು ಸಂಭವಿಸಬಹುದೆಂದೂ ಅಲ್ಲಿನ ಜನರಿಗೆ ನಾನು ಕಾರಣಸಹಿತ ವಿವರಿಸಿದೆ. ಮುಂದೆ, ನಾನು ಹೇಳಿದಂತೆಯೇ ಘಟಿಸಿದ್ದು ಈಗ ಇತಿಹಾಸ.

ನಾನೇನೂ ಜ್ಯೋತಿಷಿಯಲ್ಲ. ಒಂದು ಸಿದ್ಧಾಂತಕ್ಕೆ ಹತ್ತು ಸುಳ್ಳು ಸೇರಿಸಿ ಹೇಳುವ ಜ್ಯೋತಿಷದಲ್ಲಿ ನನಗೆ ನಂಬಿಕೆಯಿಲ್ಲ. ಜ್ಯೋತಿಷದಲ್ಲಿ ಎಲ್ಲವನ್ನೂ ಮುಂಚಿತವಾಗಿ ಹೇಳಬಹುದು ಎಂಬ ಮಾತು ಶುದ್ಧ ಸುಳ್ಳು. ಅಂತೆಯೇ ಕಾರಣಿಕನುಡಿ, ಭವಿಷ್ಯನುಡಿ ಮೊದಲಾವು ಕೂಡ.

ವೈಜ್ಞಾನಿಕ ದೃಷ್ಟಿ, ವಿಚಾರಶೀಲ, ಸಾಮಾನ್ಯಜ್ಞಾನ ಮತ್ತು ತಕ್ಕಮಟ್ಟಿನ ವಿಜ್ಞಾನದರಿವು ನಮಗಿದ್ದರೆ ಜ್ಯೋತಿಷ-ಭವಿಷ್ಯನುಡಿಗಳು ನಮ್ಮನ್ನು ಅಧೀರರನ್ನಾಗಿಸವು.

ದೇವರು, ಸೃಷ್ಟಿಕರ್ತ, ಜಗನ್ನಿಯಾಮಕ ಎಂಬ ಭಾವನೆಗಳ ಆಸರೆಯಲ್ಲಿ, ನಂಬಿಕೆಯ ನೆರಳಿನಲ್ಲಿ ಇಂದು ಮಾನವ ಸಂಕುಲ ಜೀವಿಸುತ್ತಿದೆ. ಉದ್ದೇಶಿತವಾಗಿಯಾಗಲೀ ಅನಿದ್ದೇಶಿತವಾಗಿಯಾಗಲೀ ಈ ನಂಬಿಕೆಯನ್ನು ದೌರ್ಬಲ್ಯವನ್ನಾಗಿಸುವ ಯತ್ನ ತರವಲ್ಲ.

8 ಕಾಮೆಂಟ್‌ಗಳು:

  1. ಆನ೦ದ ಸಾರ್,
    ನಿಮ್ಮ ಮಾತಿಗೆ ನಾನು ಬೆ೦ಬಲ ನೀಡುತ್ತೇನೆ .ಎಲ್ಲರಿಗೂ ಶ್ರೀಸಾಮಾನ್ಯನೆ ಸಿಗುವುದು ಹೆದರಿಸಲು .

    ಪ್ರತ್ಯುತ್ತರಅಳಿಸಿ
  2. I personally don't think nostradamus's predictions are extraordinary or anything. If you make ten predictions each of which has only two outcomes, chances are that 5 of them will turn out right. Like someone calling a coin toss.

    Famous scientist Richard Feynman once talked about freaky coincidences that other people always talk about. He explained it with an example. Once when he was asleep, he dreamt that his mother called him on the phone. As soon as he woke up, the phone did ring and at the other end of the phone was his Aunt!. Hardly hair raising isn't it? But had it been his mother people would take notice of this incident as a work of the extra sensory perception and sixth sense and what not.
    The point is, after one dreams about his mother, chances of his mother calling him are as much as his aunt calling him. But one would only take notice if one's mother called.

    Similarly, Nostradamus's correct predictions only come to light. THough, I've myself not read a comprehensive list of all his predictions, I'm sure there are some that turned out not true, but people don't give them much importance.

    ಪ್ರತ್ಯುತ್ತರಅಳಿಸಿ
  3. ಅದ್ಭುತ ವಿಶ್ಲೇಷಣೆ, man (ಕೌಸ್ತುಭ)!
    ನಿಮ್ಮ ವಿಶ್ಲೇಷಣೆ ಮತ್ತು ಅಭಿಪ್ರಾಯ ಎರಡೂ ನಿಖರ ಹಾಗೂ ಸತ್ಯ.
    ನಾಸ್ಟ್ರಡಾಮಸ್‌ನ ಹೇಳಿಕೆಗಳು ಮಾತ್ರವಲ್ಲ, ನಾವು ’ಬುದ್ಧಿವಂತ’ರನೇಕರ ಹೇಳಿಕೆಗಳೂ, ’ಹಾಗೂ ಸರಿ ಹೀಗೂ ಸರಿ’ ಎನ್ನುವಂತಿರುತ್ತವೆ! ’ದಡ್ಡ’ರು ಮೋಸಹೋಗುತ್ತಾರೆ!
    ನಾಸ್ಟ್ರಡಾಮಸ್‌ನ ಹೇಳಿಕೆಗಳೆಲ್ಲವನ್ನೂ ಓದಿದ್ದೇನೆ. ’ಕಾಣ್ಕೆ’ (ದರ್ಶನ) ಇರಬಹುದು, ಆದರೆ ’ಜಾಣ್ಮೆ’ ಮೆರೆದಿದೆ!

    ಪ್ರತ್ಯುತ್ತರಅಳಿಸಿ
  4. ಅಕಸ್ಮಾತ್ ಸರ್ವನಾಶವಾದರೆ ಆಗಲಿ..ಅದನ್ನೂ ನೋಡಿಕೊಂಡೇ ಹೋಗುವಾ..ಏನಂತೀರಿ?

    ಪ್ರತ್ಯುತ್ತರಅಳಿಸಿ
  5. ವಾಹ್!
    ನನ್ನ ಮನದಂತರಾಳದ ಮಾತನ್ನೇ ಹೇಳಿದ್ದೀರಿ ಹೊಸಮನೆ ಅವರೇ!
    ’ಪ್ರಳಯ’ದ ಬಗ್ಗೆ ಓದುಗರಲ್ಲಿ ಹೆದರಿಕೆ ಹುಟ್ಟಿಸಿದ್ದ ಆ ವಾರಪತ್ರಿಕೆಗೆ ನಾನು ಬರೆದ ಲೇಖನದಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಇಡೀ ಜಗದೊಡನೆ ನಾವು ಪ್ರಳಯವನ್ನು ಅನುಭವಿಸುವುದು ನಮಗೊಂದು ಅಪೂರ್ವ, ಅದ್ಭುತ ಅವಕಾಶ ಎಂದೂ ಬರೆದಿದ್ದೆ! ಆ ಬರಹಕ್ಕೆ ನಾನು ಕೊಟ್ಟಿದ್ದ ಶೀರ್ಷಿಕೆಯೇ ’ವಿಶ್ವದಲ್ಲಿ ಒಂದಾಗೋಣ’.

    ಪ್ರತ್ಯುತ್ತರಅಳಿಸಿ
  6. ಆತ್ಮೀಯ ಆನಂದರಾಂ ಸರ್,

    ಚೆನ್ನಾಗಿ ವಿಶ್ಲೇಸಿಸಿದ್ದೀರಿ.

    ’ಭೂಗರ್ಭದೊಳಗಿನ ಮಹಾಸ್ಫೋಟ’ ಅನ್ನೋ ಪ್ರಯತ್ನ ಹಲವು ಆಲೋಚನೆಗಳಿಗೆ ಕನ್ನಡಿ.

    ಎಲ್ಲವನ್ನೂ ವೈಜ್ನಾನಿಕವಾಗಿ ತೂಗೋ ಜನಕ್ಕೆ ಇಂತದ್ದೊಂದು ಪ್ರಯೋಗ ರಸದೌತಣ ಆಗಿರಬೇಕು. ಮತ್ತೆ ಇನ್ನೂ ಕೆಲ್ವಬ್ರು
    ಆಚಾರವಾದಿಗಳಿಗೆ ಅವಿವೇಕದ ಪರಮಾವಧಿ ಅನ್ಸಿಸಿರ್ಬೋದು.
    ವಿವೇಕ ಜಾಸ್ತಿ ಆದಂಗೆಲ್ಲಾ, ನಾನು ಒಂದೇ ಕಾಲಲ್ಲಿ ನಡ್ದ್ದುತೋರಿಸ್ತೀನಿ ಅನ್ನೋವ್ರೂ ಇದ್ದಾರೆ.

    ನಿಮ್ಮ ಲೇಖನ ಕೆಲವು ಆತುರಗಾರ ಮನಸ್ಸುಳ್ಳವರಿಗೆ ಒಂದು ವಿವೇಕದ ಮಾತಾಗಲಿ ಅಂತ ನಾನು ಬಯಸ್ತೀನಿ.

    ಪ್ರತ್ಯುತ್ತರಅಳಿಸಿ
  7. ವಾಸ್ತವವನ್ನು ಹೇಳಿದ್ದೀರಿ ಲೋಹಿತ್ ಅವರೇ, ನಿಮ್ಮ ಸಾಮಾಜಿಕ ಕಾಳಜಿ ಪ್ರಶಂಸಾರ್ಹ.

    ಪ್ರತ್ಯುತ್ತರಅಳಿಸಿ