ಶನಿವಾರ, ಸೆಪ್ಟೆಂಬರ್ 26, 2009

ಚಂದ್ರನಲ್ಲಿ ನೀರು, ಮಹಾನವಮಿ ತೇರು!

ನಲವತ್ತು ವರ್ಷಗಳಿಂದ ನಾಸಾ
ನಡೆಸಿತ್ತು ಯತ್ನ ಅನವರತ
ಚಂದ್ರನಲ್ಲಿ ನೀರಿರುವುದನ್ನು
ಪತ್ತೆಹಚ್ಚಿದ್ದು ಭಾರತ!

***

ರಜನಿಗಾ ಚಂದ್ರ ಭೂಷಣಂ
ಚಂದ್ರನಿಗೆ ಜಲ ಭೂಷಣಂ
ಭಾರತದಿಂದ ಚಂದ್ರಜಲಾನ್ವೇಷಣಂ
ಅಮೆರಿಕದ್ದು ಬರೀ ಭಾಷಣಂ!

***

ಮಾತೆತ್ತಿದರೆ ಸಾಕು, ಅಮೆರಿಕಾ ಅಂತೀವಿ
ಮಹಾನ್ ಸಾಧನೆಗಂತ ಅಲ್ಲಿಗೆ ಓಡ್ತೀವಿ
ಚಂದ್ರನಲ್ಲಿ ನೀರು ಗುರುತಿಸಿದ್ದು
ಭಾರತ, ಸ್ವಾಮೀ.
ಕಣ್ಣಗಲಿಸಿ ನಮ್ಮತ್ತ ನೋಡ್ತಿದೆ
ಈಗ ಇಡೀ ಭೂಮಿ!

***

ಆ ಚಂದ್ರನಮೇಲಿನ
ಜಲದ ಪತ್ತೆ
ಆಚಂದ್ರಾರ್ಕ ಕೀರ್ತಿಯಲ್ಲವೆ
ನಮಗೆ ಮತ್ತೆ?

***

’ನಾನು ಮತ್ತು ಹಾವು ಕಚ್ಚಿ
ಅವನನ್ನು ಕೊಂದೆವು’
ಅಂದಿತಂತೆ ಇರುವೆ!
’ನಾನು ಮತ್ತು ಭಾರತ ಸೇರಿ
ಚಂದ್ರೋದಕ ಪತ್ತೆಮಾಡಿದೆವು’
ಅನ್ನುತ್ತಿದೆ ಅಮೆರಿಕ!

***

ಚಂದ್ರನಲ್ಲಿ ನೀರಿರುವುದು
ಆಶ್ಚರ್ಯವೇನಲ್ಲ
ಸೋಮಶೇಖರನ ಜಟೆಯಲ್ಲಿ
ಗಂಗೆಯೂ ಇರಲೇಬೇಕಲ್ಲಾ!

***

ಚಂದ್ರನ ಒಡಲಲ್ಲಿ ನೀರು
ಜೀವಜಲಪುಷ್ಪ!
ವಿಜ್ಞಾನಿ ಕಣ್ಣಲ್ಲಿ ನೀರು
ಆನಂದಬಾಷ್ಪ!

***

ಚಕೋರಂಗೆ ಚಂದ್ರಮನ
ಬೆಳಕಿನಾ ಚಿಂತೆ
ಇಸ್ರೋಗೆ ಚಂದ್ರಮನ
ಜಲನಿಧಿಯ ಚಿಂತೆ!

***

ಚಂದ್ರಮುಖೀ ಪ್ರಾಣಸಖೀ
ಚತುರೇ ನೀ ಕೇಳೇ;
ಇಂದು ಜಲಜಾತೆ ಜಲಜಾಕ್ಷಿಯು ನೀ
ಚಂದವ ತಾ ಹೇಳೇ!

***

ಚೌದವೀನ್ ಕಾ ಚಾಂದ್ ಹೋ
ಯಾ ಜಲ್ ಕೀ ಬೂಂದ್ ಹೋ
ಜೋ ಭೀ ಹೋ ತುಮ್ ಖುದಾ ಕೀ ಕಸಂ
ಲಾಜವಾಬ್ ಹೋ!

***

Honeymoon
ಅಲ್ಲ,
ಇನ್ನು
Watermoon!

***

ಚಂದಕ್ಕಿ ಮಾಮ, ಚಕ್ಕುಲಿ ಮಾಮ
ಚಕ್ಕುಲಿ ತಿಂದು ನೀರ್ ಕುಡಿ ಮಾಮ!

***

ಚಂದಿರನೇತಕೆ ಓಡುವನಮ್ಮ,
ಮೋಡವ ಹಿಡಿಯಲಿಕೇ?
ಮೋಡವ ಹಿಡಿದು ಮಳೆಯನು ಪಡೆದು
ನೀರನು ಕುಡಿಯಲಿಕೇ?

***

’ಚಂದ್ರನಲ್ಲಿ ನೀರು ಪತ್ತೆಯಾಗಿದೆ’
ಅಂದ, ಪತ್ನಿಗೆ ತಿಪ್ಪೇಶಿ.
’ನಲ್ಲೀಲಿನ್ನು ದಿನಾ ನೀರು ಬರುತ್ತಾ?’
ಕೇಳಿದಳು ಪತ್ನಿ ಮೀನಾಕ್ಷಿ!

***

ಚಂದ್ರನಲ್ಲಿ ಸಿಕ್ಕಿದೆ ನೀರು.
ರಿಯಲ್ ಎಸ್ಟೇಟ್ ಮಂದಿ ಲಗ್ಗೆಯಿಟ್ಟಾರು!
’ಟ್ವೆಂಟಿಫೋರ್ ಅವರ್ಸ್ ವಾಟರ್’ ಅಂತ
ಲೇಔಟ್ ಜಾಹಿರಾತು ಬರುತ್ತೆ,
ನೋಡ್ತಿರಿ ಪೇಪರು!

***

ನವರಾತ್ರಿಗೆ
ರಾಮಾಯಣ, ಮಹಾಭಾರತದ
ಪ್ರಸ್ಥಾನದ ಹೆಗ್ಗಳಿಕೆಯಿದೆ;
ಇನ್ನೀಗ, ಆಧುನಿಕ ಭಾರತದ
ಸಾಧನೆಯ ಅಗ್ಗಳಿಕೆಯೂ ಇದೆ!

***

ಅಜ್ಞಾತವಾಸ ಮುಗಿಸಿ ಅಂದು
ಮಹಾಭಾರತ ಯುದ್ಧಕ್ಕೆ ಪ್ರಸ್ಥಾನ.
ವಿಜ್ಞಾನಿಗಳು ಸಾಧಿಸಿ ಇಂದು
ಭಾರತ ದೇಶಕ್ಕೆ ಸನ್ಮಾನ.

***

ಚಂದ್ರನಲ್ಲಿ ನೀರು
ಮಹಾನವಮಿ ತೇರು!
ಹಬ್ಬ ಈ ಸಲ ಜೋರು
ಇಸ್ರೊ ಸಾಧನೆ ಮೇರು!

7 ಕಾಮೆಂಟ್‌ಗಳು:

  1. Wah! Wah! Kya Khoob!
    Nice Limerics on the Moon!
    Wonderful Sir.
    The video clip was also very nice. I have posted it on my bedrefoundation.blogspot.com
    Bedre Manjunath

    ಪ್ರತ್ಯುತ್ತರಅಳಿಸಿ
  2. ಸಾರ್,
    ಅಭಿನಂದನೆಗಳು.

    ಸೂಪರ್ರಾಗಿ ಬರ್ದಿದ್ದೀರ. ಚಂದ್ರನ ಮೇಲಿನ ನೀರು ಮೊದ್ಲೇ ಅಮೆರಿಕದವ್ರೆನಾದ್ರು ನೋಡಿದ್ರೆ ಇಷ್ಟೊತ್ತಿಗೆ ಆಗ್ಲೇ
    ಚಂದ್ರನ ಮೇಲಿನ ನೀರ್ನ ಒತ್ತೆ ಇಟ್ಕೊಂಡು ಸಾಲ ಕೊಡ್ತೀವಿ ಬರ್ರೀ ಅಂತ ಉಳಿದವರಿಗೆ ಹುಲ್ಲು ತಿನ್ನಿಸ್ತಿದ್ರು...

    ಒಟ್ಟಾರೆ ಜಗತ್ತಿನ ಉಳಿದೆಲ್ಲಾ ರಾಷ್ಟ್ರಗಳಿಗೆ ದೊಡ್ಡಣ್ಣ ಅಂತ ಅನ್ನಿಸ್ಕಲ್ಲಾಕೆ ಮಣ್ಣು ತಿನ್ನೋ ಕೆಲಸ ಮಾಡೋದ್ರಲ್ಲಿ ಅಮೆರಿಕದವರು ನಮ್ಮ ದೇಶದ ರಾಜಕಾರನಿಗಳನ್ನೂ ಮೀರಿ ನಿಲ್ತಾರೆ.

    ಪ್ರತ್ಯುತ್ತರಅಳಿಸಿ
  3. ತುಂಬಾ ಚೆನ್ನಾಗಿದೆ , ಸರ್. ಒಂದೊಂದೂ ನಗು ಹುಟ್ಟಿಸುವ ಗುಳಿಗೆಗಳು.

    ಪ್ರತ್ಯುತ್ತರಅಳಿಸಿ
  4. ಶಾಸ್ತ್ರಿಗಳೇ, ತು೦ಬಾ ಚೆನ್ನಾಗಿದೆ ಕವನಗುಚ್ಚ

    ಪ್ರತ್ಯುತ್ತರಅಳಿಸಿ
  5. ಮೀನಾಕ್ಷಿಯ ಯಕ್ಷ ಪ್ರಶ್ನೆ, ಸೂಪರ್ ಸರ್.
    ಅದೇ, ಅಲ್ಲಿ ಸಿಕ್ಕಿರುವ ನೀರು ಕೆರೆ,ಹೊಂಡಗಳಂತಲ್ಲ, ಅದು ಹೈಡ್ರಾಕ್ಸಿಲ್ ಕಣಗಳಂತೆ, ತಿಳಿದವರು ಸಮಜಾಯಿಷಿ ನೀಡಿದರು, ಆದ ಕಾರಣ ನಲ್ಲಿಯಲ್ಲಿ ಸದ್ಯಕ್ಕೆ ಗಾಳಿ ಬರ್ತಾಯಿದೆ, ಹೈಡ್ರೋಜನ್ ಗಾಳಿ, ಆಕ್ಸಿಜನ್ ಮಿಕ್ಸ್ ಮಾಡ್ಬೇಕಷ್ಟೆ.
    ಸರ್ ಅಂದ ಹಾಗೆ , ಎಲ್ಲದರಲ್ಲೂ ಮುಂಚೂಣಿಯಲ್ಲಿರುವ ಅಂದರೆ ಕೈ ಹಾಕುವ ವಿಜಯ ಮಲ್ಯರವರು, ಅದು ಬರೀ ನೀರಲ್ಲ, ಅದು ಬೀರು ಇರಬಹುದೇನೊ ಎಂದು ಪರೀಕ್ಷಿಸಲು ತಮ್ಮದೆ ಟೀಮ್ ರೆಡಿ ಮಾಡ್ತ ಇದ್ದಾರಂಥೆ.

    ಪ್ರತ್ಯುತ್ತರಅಳಿಸಿ
  6. ಸ್ಫೂರ್ತಿದಾಯಕ ಪ್ರತಿಕ್ರಿಯೆಗಳಿಗಾಗಿ ಸನ್ಮಿತ್ರ ಷಣ್ಮಿತ್ರರಿಗೆ (ಯಾನೇ ಆರೂ ಮಂದಿ ಸ್ನೇಹಿತರಿಗೆ) ಅನಂತ ಧನ್ಯವಾದಗಳು.
    (ಶ್ರೀಕಾಂತ್, ನನ್ನ ತಲೆಯೊಳಗೆ ಮಲ್ಯರ ಹುಳ ಬಿಟ್ಟಿರಿ! (ಒಡಲೊಳಗಲ್ಲ. ನಾನು teetotaller.) ಹುಳ ಹರಿಯತೊಡಗಿದೆ! ಇನ್ನು ಸ್ವಲ್ಪ ಹೊತ್ತಿಗೆಲ್ಲ ಇದೇ ಬ್ಲಾಗ್‌ನಲ್ಲೇ ಅದು ಕಾಣಿಸಿಕೊಳ್ಳುತ್ತದೆ, ನೋಡ್ತಾ ಇರಿ!)

    ಪ್ರತ್ಯುತ್ತರಅಳಿಸಿ