ಬುಧವಾರ, ಸೆಪ್ಟೆಂಬರ್ 16, 2009

ಬಣ್ಣವನ್ನು ಮಸಿ ನುಂಗದಿರಲಿ

ದೂರದರ್ಶನಮಾಧ್ಯಮದ ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಪೈಕಿ ಹಲವು ಧಾರಾವಾಹಿಗಳಲ್ಲಿ ಯಾವುದಾದರೊಂದು ಧರ್ಮದ ಅಥವಾ ಜಾತಿಯ ಹಣೆಪಟ್ಟಿಯೊಂದಿಗೆ ಅಬದ್ಧ ಪದ್ಧತಿ ಮತ್ತು ಮೌಢ್ಯದ ಆಚರಣೆಗಳನ್ನು ತೋರಿಸುವ ಮೂಲಕ ಆ ಧರ್ಮದ ಅಥವಾ ಜಾತಿಯ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡಲಾಗುತ್ತಿದೆಯೆಂಬ ಆಕ್ಷೇಪವು ಆಗಾಗ ಕೇಳಿಬರುತ್ತಿರುತ್ತದೆ.

ಅಬದ್ಧ ಪದ್ಧತಿ, ಮೌಢ್ಯ, ಕುಟಿಲ ಇವು ಎಲ್ಲ ಧರ್ಮಗಳಲ್ಲೂ ಎಲ್ಲ ಜಾತಿಗಳಲ್ಲೂ ಮತ್ತು ಬಹುತೇಕ ಎಲ್ಲ ಸಂಸಾರಗಳಲ್ಲೂ ಒಂದು ಪ್ರಮಾಣದಲ್ಲಿ ಇರುವಂಥವೇ. ಪುಸ್ತಕ, ನಾಟಕ, ಸಿನೆಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ಇವುಗಳನ್ನು ಖಂಡಿಸುವುದು ತಪ್ಪೇನಲ್ಲ. ಆದರೆ ಜನಾಕರ್ಷಣೆಯ ಉದ್ದೇಶದಿಂದ ಇವುಗಳನ್ನು ವೈಭವೀಕರಿಸುವುದು, ಉತ್ಪ್ರೇಕ್ಷಿಸುವುದು, ತಿರುಚುವುದು, ಅಸತ್ಯಗಳನ್ನು ಸೇರಿಸುವುದು, ಕಥಾಕುತೂಹಲದ ದೃಷ್ಟಿಯಿಂದ ಇಂಥ ಎಲ್ಲ ಅಪಸವ್ಯಗಳನ್ನೂ ಒಂದೇ ಚೌಕಟ್ಟಿನೊಳಗೆ ತುರುಕುವುದು ಮತ್ತು ಒಂದು ಜಾತಿವರ್ಗಕ್ಕೆ ಆರೋಪಿಸುವುದು ಸರಿಯಲ್ಲ. ಇದರಿಂದ ಸಮಾಜದಲ್ಲಿ ತಪ್ಪು ಕಲ್ಪನೆಗಳುಂಟಾಗುತ್ತವೆ.

ಅದೇವೇಳೆ, ಸಮಾಜವೂ ಕಥೆಯನ್ನು ಕೇವಲ ಕಥೆಯಾಗಿ ಪರಿಗಣಿಸದೆ ವಾಸ್ತವವೆಂದು ಪರಿಗಣಿಸುವ ಮತ್ತು ಕಲೆಯನ್ನು ಕಲೆಯಾಗಿ ನೋಡದೆ ಸತ್ಯಕಥನವೆಂದು ಭ್ರಮಿಸುವ ವಿಪರ್ಯಾಸವೂ ನಡೆಯುತ್ತಿರುವುದು ಚೋದ್ಯವೇ ಸರಿ!

ಇತ್ಯಾತ್ಮಕ ಗುಣಗಳನ್ನು ಹೊಂದಿದ್ದೂ ಒಂದು ಕಲಾಪ್ರಕಾರವು ಸಮಾಜದ ಒಂದು ವರ್ಗದ ಬೇಸರಕ್ಕೆ ಹೇತುವಾಗುತ್ತದೆಂದರೆ ಇದರಲ್ಲಿ ಕಲಾವಿದ ಮತ್ತು ಕಲಾರಸಿಕ ಇಬ್ಬರದೂ ದೋಷಗಳಿವೆ. ಜನಪ್ರಿಯತೆಗಾಗಿ ಅಬದ್ಧಗಳ ವೈಭವೀಕರಣ, ಉತ್ಪ್ರೇಕ್ಷೆ, ತಿರುಚುವಿಕೆ, ತುರುಕುವಿಕೆ ಮತ್ತು ಅಸತ್ಯಗಳ ಸೇರ್ಪಡೆ ಇವು ಸಾಹಿತಿ-ನಿರ್ದೇಶಕನ ತಪ್ಪಾದರೆ, ಒಂದು ಪುಸ್ತಕವನ್ನೋ ನಾಟಕವನ್ನೋ ಚಲನಚಿತ್ರವನ್ನೋ ಗಮನಿಸಿ, ’ಸಮಾಜ ಅಕ್ಷರಶಃ ಹೀಗೇ ಇದೆ’ ಎಂದು ಪರಿಭಾವಿಸುವುದು ಕಲಾರಸಿಕನ ದೋಷ. ಹೀಗೆಲ್ಲ ಅಪಸವ್ಯಗಳನ್ನು ಬಿಂಬಿಸಿದಾಗ ಸಮಾಜದ ಬಹುಭಾಗವು ಅದನ್ನು ಅಕ್ಷರಶಃ ವಾಸ್ತವವೆಂದು ನಂಬುವುದರಿಂದಾಗಿ (ಮತ್ತು ಹಲವೊಮ್ಮೆ, ಕೆಲವು ಆಷಾಢಭೂತಿಗಳು ಹಾಗೂ ತಥಾಕಥಿತ ಬುದ್ಧಿಜೀವಿಗಳು ತಾವು ನಂಬಿದಂತೆ ನಟಿಸಿ ಮುಗ್ಧರನ್ನು ದಾರಿತಪ್ಪಿಸುವುದರಿಂದಾಗಿ) ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆಯುಂಟಾಗುವ ಅಪಾಯ ಅಧಿಕ. ಸಂಬಂಧಿತ ಧರ್ಮ ಅಥವಾ ಜಾತಿಯು ವೃಥಾ ಗೇಲಿಗೀಡಾಗಲೂ ಇದು ಕಾರಣವಾಗುತ್ತದೆ.

ಆದ್ದರಿಂದ, ಸಾಹಿತ್ಯ ಮತ್ತು ಕಲೆಗಳ ಪ್ರಸಾರದ ಸಂದರ್ಭದಲ್ಲಿ, ಕಲಾಕೌಶಲ ಮತ್ತು ಸಮಾಜದ ಸ್ವಾಸ್ಥ್ಯ ಎರಡರ ಬಗ್ಗೆಯೂ ಗಮನ ಅಗತ್ಯ. ಇಲ್ಲದಿದ್ದರೆ, ಕಲೆಯೆಂಬ ಸೊಗಸಾದ ಬಣ್ಣವನ್ನು ಅನಾರೋಗ್ಯಕರ ಸಂದೇಶವೆಂಬ ಮಸಿಯು ನುಂಗಿಬಿಡುತ್ತದೆ!

7 ಕಾಮೆಂಟ್‌ಗಳು:

  1. ಎಲ್ಲವನ್ನೂ ಹಣದ ಲೆಕ್ಕಾಚಾರದಲ್ಲೇ ಅಳೆಯುವ ಇಂದಿನ ನಿರ್ದೇಶಕ, ನಿರ್ಮಾಪಕರಿಂದ ಬದ್ಧ ಧಾರಾವಾಹಿ ಅಥವಾ ಸಿನಿಮಾಗಳನ್ನು ನಿರೀಕ್ಷಿಸುವುದಾದರೂ ಹೇಗೆ? ವಾಸ್ತವಕ್ಕೆ ದೂರವಾದ ಕಥಾಹಂದರಗಳನ್ನು ಪೋಷಿಸುವುದು ಒಂದಾದರೆ; ಅಂಥವನ್ನೇ ನೋಡಿ ಆನಂದಿಸಿ, ಆ ಕಲಾವಿದರನ್ನೇ ದೇವರೆಂದು ಪೂಜಿಸುವ ಮತಿಹೀನ ಅಭಿಮಾನಿಗಳು ಇನ್ನೊಂದೆಡೆ... ಇಂತಹ ವೈರುಧ್ಯಗಳ ನಡುವೆ ಭರವಸೆಯ ಬಾಗಿಲು ತೆರೆಯುವುದೆಂದು?

    ಪ್ರತ್ಯುತ್ತರಅಳಿಸಿ
  2. ’ಮೌನದ ಮಾತು’ ಬ್ಲಾಗ್ ಒಡೆಯ ಶರ್ಮ ಅವರೇ, ತೂಕದ ಮಾತು ನಿಮ್ಮದು. ಧನ್ಯವಾದ.

    ಪ್ರತ್ಯುತ್ತರಅಳಿಸಿ
  3. ಶಾಸ್ತ್ರಿಗಳೇ,
    ಒಂದು ಸಮಾಜವನ್ನು ಟೀಕಿಸುವದೇ fashion ಆದಂತಹ ಈ ಕಾಲದಲ್ಲಿ, ಬಣ್ಣವನ್ನು ಮಸಿಯು ನುಂಗುವದರಲ್ಲಿ ಆಶ್ಚರ್ಯವಿಲ್ಲ!

    ಪ್ರತ್ಯುತ್ತರಅಳಿಸಿ
  4. ಹೌದು ಸುನಾಥ್ ಅವರೇ, ಸರಿಯಾಗಿ ಹೇಳಿದಿರಿ.
    ಈ fashionನ motion ಬಂದ್ ಆಗುವಂಥ strong ಗುಳಿಗೆಯ ಅವಶ್ಯಕತೆಯಿದೆ.

    ಪ್ರತ್ಯುತ್ತರಅಳಿಸಿ
  5. ಸರ್ ಸರಿಯಾಗಿ ಹೇಳಿದಿರಿ.
    ಇಂಥಾ ಐದಾರು ಧಾರವಾಹಿಗಳನ್ನು ದಿನಕ್ಕೆ ನೋಡುವ ಜನರ
    ಆಲೋಚನೆಗೆ ಮಸಿ ಹಾಗು ಬಣ್ಣದ ವ್ಯತ್ಯಾಸ ತಿಳಿಯುವುದೆ.
    ಹೋಗಲಿ ತಪ್ಪೋ ಸರಿಯೋ ಒಂದು ಸಂದೇಶವನ್ನು ನೀಡುವುದಿಲ್ಲ, ಅಲ್ಲೆ ಗಿರಕಿ ಹೊಡೆಯುತ್ತಿರುತ್ತವೆ.
    ಮಹಾನ್ ಕಾದಂಬರಿಕಾರರ/ನಾಟಕಕಾರರ ಕ್ರುತಿಗಳಲ್ಲಿ ಅಬ್ಬಬ್ಬಾ ಎಂದರೆ ೧೦-೧೨ ಪಾತ್ರಗಳು ಕಂಡುಬಂದರೆ, ಈ ಧಾರವಾಹಿಗಳಲ್ಲಿ ಹುಳುಗಳಂತೆ ಪಾತ್ರಗಳು ಹುಟ್ಟುತ್ತವೆ ಸಾಯುತ್ತವೆ. ಕಥೆ ಬರೆಯುವವರಿಗೆ, ಇದರ ನಿರ್ದೇಶಕರಿಗೆ ನನ್ನ ಅನಂತ ನಮಸ್ಕಾರಗಳು. ಷೇಕಸ್ಪಿಯರ್, ಟಾಲ್ಸಟಾಯ್ ಕೂಡ ನಮಸ್ಕರಿಸುತ್ತಿದ್ದರೊ ಎನೊ.
    ಕಥೆಗಾಗಿ ಪಾತ್ರಗಳೋ, ಪಾತ್ರಗಳಿಂದ ಕಥೆಯೋ, ಸಮಯವಿದೆಯೆಂದು ಪಾತ್ರಗಳ ಸೃಷ್ಠಿಯೋ.
    ಒಟ್ಟಿನಲ್ಲಿ ಸಕಾರಾತ್ಮಕಭಾವನೆಯನ್ನು ಬೆಳೆಸಲು ವಿಫಲವಾಗಿವೆ ಈ ಧಾರವಾಹಿಗಳು.

    ಪ್ರತ್ಯುತ್ತರಅಳಿಸಿ
  6. ಆತ್ಮೀಯ ಆನಂದರಾಂ ಸರ್,
    ನೀವೇಳ್ತಿರೋದು ನಿಜ.

    ಮೊದಲೆಲ್ಲ ನೋಡಿದ್ರೆ ದೂರದರ್ಶನ ಒಂದೇ ನೋಡಬೇಕಿತ್ತು. ಆಗ ಅಷ್ಟೇನೂ ಪೈಪೋಟಿಯೂ ಇರ್ಲಿಲ್ಲ. ಸಮಯ ಇತ್ತು. ರಾಮಾಯಣ, ಮಹಾಭಾರತ, ಚಂದ್ರಕಾಂತ ಇಂತಹ ಪೌರಾಣಿಕ ಧಾರಾವಾಹಿಗಳು ಬಿತ್ತರ ಆಗ್ತಿದ್ವು.

    ಈಗ ಹಳ್ಳಿ ಹಳ್ಳಿಗಳಿಗೂ ಬಿತ್ತರ ಹಾಗೋ ನೂರೆಂಟು ಚಾನೆಲ್ ನಲ್ಲಿ, ತಮ್ಮ ಚಾನೆಲ್ ನ ಆಕರ್ಷಣೆ ಉಳಿಸ್ಕೊಲ್ಲೋದೇ ಇವರ ದೊಡ್ಡ ಸಮಸ್ಯೆ ಆಗ್ಬಿಟ್ಟಿದೆ. ಪೈಪೋಟಿ ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ನಾವು ಏನಕ್ಕೆ ಪೈಪೋಟಿ ಮಾಡ್ತಿದೆವೇ ಅನ್ನೋ ಪರಿಜ್ಞಾನವೇ ಕಲ್ಕೊಂಡಿದಾರೆ. ಇಲ್ಲಿ ಎಲ್ಲವು ಹಣದಿಂದ ಅಳಿತಾರೆ.

    ವಿದೇಶಗಳಲ್ಲಿ ಬಿತ್ತರವಾಗೋ ಕಾರ್ಯಕ್ರಮಗಳನ್ನೇ ಇಲ್ಲಿಗೆ ತಂದು ಬಿತ್ತರ ಮಾಡ್ತಾರೆ. ವೇಗವಾಗಿ ಪ್ರಚಾರ ಗಿಟ್ಟಿಸ್ಕೊಲ್ಲೋದ್ರಲ್ಲೇ ಹೊಸತನ ಕಾಣ್ತಾರೆ. ಅದ್ರಲ್ಲಿ ನಮ್ಮ ನೆಲಕ್ಕೆ, ಜನಕ್ಕೆ, ಸಂಸ್ಕೃತಿಗೆ ಎಷ್ಟು ಒಪ್ಪುತ್ತೆ ಅನ್ನೋ ವಿಷ್ಯನ ನೋಡುಗರ ಪ್ರೌಡಿಮೆಗೆ ಬಿಟ್ಟು ಬಿಟ್ತಾರೆ.

    ಪ್ರತ್ಯುತ್ತರಅಳಿಸಿ
  7. ಮೂರ್ಖ(ರನ್ನಾಗಿಸುವ) ಪೆಟ್ಟಿಗೆಯ ವಿವಿಧ ಮುಖಗಳನ್ನು ಅನಾವರಣ ಮಾಡಿರುವ ಮಿತ್ರದ್ವಯರಾದ ಶ್ರೀಕಾಂತ್ ಮತ್ತು ಲೋಹಿತ್ ಇಬ್ಬರಿಗೂ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ