ಮಂಗಳವಾರ, ಸೆಪ್ಟೆಂಬರ್ 22, 2009

ಭ್ರಷ್ಟಾಚಾರ ನಿರ್ಮೂಲನ: ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ!

ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಇದೇ ದಿನಾಂಕ ೯ರಂದು ಬೆಂಗಳೂರಿನಲ್ಲಿ ನೀಡಿದ ’ನ್ಯಾಯಮೂರ್ತಿ ಎಸ್. ರಂಗರಾಜನ್ ಸ್ಮಾರಕ ದತ್ತಿ ಉಪನ್ಯಾಸ’ದ ಆಯ್ದ ಭಾಗವು ಇದೇ ದಿನಾಂಕ ೧೮ರ ’ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ’ಭ್ರಷ್ಟಾಚಾರ: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎಂಬ ತಲೆಬರಹದಡಿ ಪ್ರಕಟವಾಗಿದೆ.

ಕಳೆದೆರಡು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ನನ್ನ ಲೇಖನಗಳ ಪೈಕಿ ಆಯ್ದ ಕೆಲವನ್ನು ನಾನು ಮೇಲಿನ ಪ್ರಶ್ನೆಗೆ ಉತ್ತರವಾಗಿ ಇಲ್ಲಿ ಸಾದರಪಡಿಸಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಸುಖೀ ಸಮಾಜದ ನಿರ್ಮಾಣಕ್ಕೆ ಅದು ಮಾರ್ಗದರ್ಶಿಯಾಗಬಲ್ಲದೆಂಬ ಆಶಯ ನನ್ನದು.

-೦-

(ಸೆಪ್ಟೆಂಬರ್ ೨೦೦೮ರ ’ಪ್ರಜಾವಾಣಿ’ ’ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟಿತ ಬರಹ)

ಎರಡೂ ಬದಿಯ ಅನುಭವ
--------------------------

ನನ್ನ ಜೀವನದಲ್ಲಿ ಇದುವರೆಗೆ ನಾನು ಲಂಚ ಕೊಟ್ಟಿಲ್ಲ, ತೆಗೆದುಕೊಂಡಿಲ್ಲ. ಇದರಿಂದಾಗಿ ನಾನು ಜೀವನದಲ್ಲಿ ಏನನ್ನೂ ಕಳೆದುಕೊಂಡಿಲ್ಲ, ಬದಲಿಗೆ ಅಭಿಮಾನವನ್ನೂ ಆತ್ಮಸಂತೃಪ್ತಿಯನ್ನೂ ಗಳಿಸಿದ್ದೇನೆ. ಈ ಬಗ್ಗೆ ಹೇಳಬೇಕೆಂದರೆ ಅದೆಷ್ಟೋ ಘಟನೆಗಳಿವೆ. ಎರಡನ್ನು ಮಾತ್ರ ಇಲ್ಲಿ ಹೇಳುತ್ತೇನೆ.

೧೯೮೦ರ ದಶಕ. ಬೆಂಗಳೂರಿಗೆ ವರ್ಗವಾಗಿ ಬಂದ ನಾನು ಪಡಿತರ ಚೀಟಿಯ ವರ್ಗಾವಣೆಗಾಗಿ ಬೆಂಗಳೂರಿನ ಸಂಬಂಧಿತ ಇಲಾಖಾ ಕಚೇರಿಗೆ ಹೋದೆ. ವರ್ಗಾವಣೆ ದಾಖಲೆಗಳೆಲ್ಲ ಸರಿಯಾಗಿದ್ದರೂ ಅಲ್ಲಿ ನನ್ನನ್ನು ಸತಾಯಿಸಲು ಮೊದಲಿಟ್ಟರು. ಏಜೆಂಟೊಬ್ಬರ ಮೂಲಕ ೩೫ ರೂಪಾಯಿ ’ಖುಷಿ’ ಹಣದ ಡಿಮಾಂಡ್ ಬಂತು. ನಾನು ಒಪ್ಪಲಿಲ್ಲ. ನನ್ನ ಮನೆಗೆ ಇನ್‌ಸ್ಪೆಕ್ಷನ್‌ಗೆ ಬರುವುದಾಗಿ ತಿಳಿಸಲಾಯಿತು. ಅದೂ ಮುಗಿಯಿತು. ಆದರೂ ಪಡಿತರ ಚೀಟಿ ಸಿಗಲಿಲ್ಲ. ಮತ್ತೆ ನಾಲ್ಕು ತಿಂಗಳು ಓಡಾಡಿದೆ. ಪ್ರಯೋಜನವಾಗಲಿಲ್ಲ. ರೋಸಿಹೋದ ನಾನು ಕಚೇರಿಯ ಹೊರಗೆ ಒಂದು ಸಣ್ಣ ಗಲಾಟೆ ಮಾಡಿ ಬಂದೆ. ಅದಾದ ಎರಡೇ ದಿನದಲ್ಲಿ, ಪಡಿತರ ಚೀಟಿ ಕೊಂಡೊಯ್ಯಬಹುದೆಂಬ ಸೂಚನೆ ಬಂತು!

ಇನ್ನೊಂದು ಘಟನೆ ಭಿನ್ನರೀತಿಯದು. ಇದು ನಡೆದದ್ದು ಆಂಧ್ರಪ್ರದೇಶದ ಯೆಮ್ಮಿಗನೂರಿನಲ್ಲಿ. ಒಂದು ದಿನ ಬೆಳಗ್ಗೆ ನನ್ನ ಮನೆಗೆ ಯುವಕನೊಬ್ಬ ಬಂದ. ಮೂರು ದಿನಗಳ ಕೆಳಗಷ್ಟೇ ಈ ಯುವಕ ನಾನು ಮೇನೇಜರ್ ಆಗಿದ್ದ ಬ್ಯಾಂಕ್ ಶಾಖೆಗೆ ಬಂದು ಯಾವುದಾದರೂ ನೌಕರಿ ಕೊಡಿಸುವಂತೆ ಕೇಳಿಕೊಂಡಿದ್ದ. ಬ್ಯಾಂಕ್‌ನಲ್ಲಿ ತಾತ್ಕಾಲಿಕವಾಗಿ ಅಟೆಂಡರ್ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆಂದು ಇವನಿಗೆ ಯಾರೋ ಹೇಳಿದ್ದರಂತೆ. ನನ್ನ ಶಾಖೆಯಲ್ಲಿ ಅಂಥ ಅವಕಾಶವೇನೂ ಇಲ್ಲವೆಂದು ಈತನಿಗೆ ಹೇಳಿ ವಾಪಸು ಕಳಿಸಿದ್ದೆ.

ಈಗ ಮನೆಗೆ ಬಂದ ಈ ಯುವಕ ಮತ್ತೆ ಅದೇ ಬೇಡಿಕೆಯನ್ನಿಟ್ಟ. ಸಾಧ್ಯವಿಲ್ಲವೆಂದು ಆತನಿಗೆ ನಾನು ವಿವರಿಸುತ್ತಿದ್ದಂತೆಯೇ ಆತ ತನ್ನ ಪ್ಯಾಂಟ್ ಕಿಸೆಯೊಳಗಿಂದ ಹತ್ತರ ನೂರು ನೋಟುಗಳ ಒಂದು ಕಟ್ಟು ಹೊರತೆಗೆದು ಎರಡೂ ಕೈಗಳಿಂದ ಅತಿ ದೀನನಾಗಿ ನನಗೆ ಕೊಡಲು ಬಂದ. ಅದನ್ನು ನಿರಾಕರಿಸಿದ ನಾನು ಅವನಿಗೆ ತಿಳಿಹೇಳತೊಡಗಿದೆ. ಆದರೆ ನನ್ನ ಮಾತಿಗೆ ಗಮನ ಕೊಡದೆ ಆತ ತನ್ನ ಪ್ರಯತ್ನ ಮುಂದುವರಿಸಿದ. ಕೆಲವು ದಿನಗಳ ಅವಕಾಶ ಕೊಟ್ಟರೆ ಇನ್ನೊಂದು ಸಾವಿರ ರೂಪಾಯಿಯನ್ನು ಹೊಂದಿಸಿ ತರುತ್ತೇನೆಂದೂ ಹೇಳಿದ!

ನನ್ನನ್ನು ಅಪಾರ್ಥ ಮಾಡಿಕೊಂಡ ಆತನಮೇಲೆ ನನಗೆ ಎಲ್ಲಿಲ್ಲದ ಸಿಟ್ಟು ಬಂತು. ಅವನ ಕೈಯಿಂದ ನೋಟಿನ ಕಟ್ಟನ್ನು ಕಿತ್ತುಕೊಂಡು ಮನೆಯಿಂದ ಹೊರಗೆಸೆದೆ. ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಕೂಡಲೇ ಹೊರಕ್ಕೆ ಧಾವಿಸಿ ಆತ ನೋಟುಗಳನ್ನು ಬಾಚಿಕೊಳ್ಳತೊಡಗಿದ. ಜೊತೆಗೇ ಭೋರೆಂದು ಅಳತೊಡಗಿದ!

ನೋಟೆಲ್ಲವನ್ನೂ ಹೆಕ್ಕಿ ವಾಪಸು ಕಿಸೆಯೊಳಗಿಟ್ಟುಕೊಂಡಮೇಲೂ ಆತನ ಅಳು ನಿಲ್ಲಲಿಲ್ಲ. ಮನೆಯ ಹೊರಗೆ ಅಂಗಳದಲ್ಲಿ ನಿಂತು ಒಂದೇಸವನೆ ಅಳತೊಡಗಿದ. ಆ ಅಳುವಿನಲ್ಲಿ ಪಶ್ಚಾತ್ತಾಪದ ಜೊತೆಗೆ ತೀವ್ರ ಅಸಹಾಯಕತೆಯೂ ನನಗೆ ಗೋಚರವಾದ್ದರಿಂದ ಆತನನ್ನು ಒಳಗೆ ಕರೆದು ಆತನ ಪೂರ್ವಾಪರ ವಿಚಾರಿಸಿದೆ. ಕೃಷಿ ಕಾರ್ಮಿಕ ತಂದೆಯ ಅಕಾಲಮರಣದಿಂದಾಗಿ ಓದು ಮೊಟಕುಗೊಳಿಸಿ ಕೂಲಿ ಕೆಲಸಕ್ಕಿಳಿದಿದ್ದ ಆತನಿಗೆ ತಾಯಿ ಮತ್ತು ಮೂವರು ತಮ್ಮ-ತಂಗಿಯರ ಜವಾಬ್ದಾರಿ ನೋಡಿಕೊಳ್ಳಲಿಕ್ಕಾಗಿ ನೌಕರಿಯೊಂದರ ತೀವ್ರ ಅವಶ್ಯಕತೆ ಇತ್ತು! ತಾಯಿಯನ್ನು ದುಡಿಮೆಗೆ ಹಚ್ಚಲು ಆತನ ಮನಸ್ಸು ಒಪ್ಪುತ್ತಿರಲಿಲ್ಲ!

ಪರಿಚಿತರಲ್ಲಿ ಆತನಿಗೊಂದು ಕೆಲಸ ಕೊಡಿಸಿ ಓದಿನ ವ್ಯವಸ್ಥೆಯನ್ನೂ ಮಾಡಿದೆ. ಲಂಚ ಕೊಡಲು ಬರುವವರೆಲ್ಲಾ ಧೂರ್ತರಲ್ಲ ಎಂಬ ಸತ್ಯದ ಅರಿವು ಅಂದು ನನಗಾಗಿತ್ತು. ಜೊತೆಗೆ, ’ಭ್ರಷ್ಟಾಚಾರಮುಕ್ತ ವ್ಯವಸ್ಥೆಯಿದ್ದಿದ್ದರೆ ಈ ಯುವಕ ಹಣ ಹಿಡಿದು ಏಕೆ ಬರುತ್ತಿದ್ದ, ಬರಿಗೈಯಲ್ಲಿ ಬಂದು ನೇರವಾಗಿ ತನ್ನ ದುಃಖ ಹೇಳಿಕೊಳ್ಳುತ್ತಿದ್ದ’, ಎಂದೂ ಅನ್ನಿಸಿತು.

ಭ್ರಷ್ಟಾಚಾರಮುಕ್ತ ವ್ಯವಸ್ಥೆ ನಮ್ಮದಾಗಬೇಕೆಂದರೆ, ಲಂಚ ಕೊಡುವವರು ಮತ್ತು ಪಡೆಯುವವರು ಇಬ್ಬರೂ ಮನಸ್ಸು ಮಾಡಬೇಕು.

=====================================================================

(೩ ಜೂನ್ ೨೦೦೭ರ ’ಉದಯವಾಣಿ’ ’ಸಾಪ್ತಾಹಿಕ ಸಂಪದ’ದಲ್ಲಿ ಪ್ರಕಟಿತ ಬರಹ)

ಲಂಚ ಬೇಕೋ, ಕೊನೆಗಾಲದ ಜೀವನಸಂತೃಪ್ತಿ ಬೇಕೋ?
-------------------------------------------------------

ನನ್ನ ಮುವ್ವತ್ತು ವರ್ಷಗಳ ಬ್ಯಾಂಕಿಂಗ್ ವೃತ್ತಿಯಲ್ಲಿ ಮತ್ತು ಐವತ್ತಾರು ವರ್ಷಗಳ ಜೀವನದಲ್ಲಿ ಎಂದೂ ಲಂಚ ಕೊಟ್ಟಿಲ್ಲ, ತೆಗೆದುಕೊಂಡಿಲ್ಲ. ಅರ್ಧ ದೇಶ ತಿರುಗಾಡಿದ್ದೇನೆ, ನಾನಾ ರಾಜ್ಯಗಳಲ್ಲಿ ಜೀವಿಸಿದ್ದೇನೆ, ಲಂಚದ ಅನೇಕ ಸನ್ನಿವೇಶಗಳನ್ನು ದಿಟ್ಟವಾಗಿ ಎದುರಿಸಿದ್ದೇನೆ, ಎದುರಿಸಿ ಲಂಚವಿಲ್ಲದೆ ಕೆಲಸ ಮಾಡಿಸಿಕೊಳ್ಳುವಲ್ಲಿಯೂ ಮತ್ತು ಲಂಚದ ವಿರುದ್ಧ ಸೆಣಸಾಡುವಲ್ಲಿಯೂ ಯಶಸ್ವಿಯಾಗಿದ್ದೇನೆ.

ಸಮಯ, ಬುದ್ಧಿ, ದೇಹಾರೋಗ್ಯ ಮತ್ತು ಒಂದಷ್ಟು ಹಣ ವ್ಯಯವಾಗಿದೆ, ನಿಜ. ಕೆಲ ಕಷ್ಟ ನಷ್ಟಗಳೂ ಆಗಿವೆ. ಆದರೆ, ಈ ಹೊತ್ತು ಸಂತೃಪ್ತಿಯ ಜೀವನ ನನ್ನದಾಗಿದೆ; ಸಾರ್ಥಕ ಬಾಳು ನನ್ನದೆಂಬ ಅಭಿಮಾನ ನನಗಿದೆ. ಈ ಸಂತೋಷವು ಮಿಕ್ಕೆಲ್ಲ ಸಂತೋಷಗಳಿಗಿಂತಲೂ ಬಹಳ ದೊಡ್ಡದು. ಜೊತೆಗೆ, ಲಂಚವನ್ನು ತೆಗೆದುಕೊಳ್ಳದೇ ಮತ್ತು ಕೊಡದೇ ಇದ್ದುದರಿಂದ ನನಗೇನೂ ಹೊಟ್ಟೆಬಟ್ಟೆಗೆ ಕಡಿಮೆಯಾಗಲಿಲ್ಲ; ಆಯುಷ್ಯ ಕುಂದಲಿಲ್ಲ. ಉಪಭೋಗ ಕಡಿಮೆಯಾಗಿರಬಹುದು, ಆದರೆ, ಜೀವನಸಂತೃಪ್ತಿ ಮತ್ತು ಸಂತಸ ನನ್ನದಾಗಿದೆಯಲ್ಲಾ!

ನಾನೊಬ್ಬ ಶ್ರೀಸಾಮಾನ್ಯ. ನನಗೆ ಸಾಧ್ಯವಾದದ್ದು ಈ ನಾಡಿನ ಎಲ್ಲಾ ಜನರಿಗೂ ಖಂಡಿತ ಸಾಧ್ಯ. ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಬೇಕು, ಅಷ್ಟೆ. ’ಜೀವನದ ಅರ್ಥ’ ಮತ್ತು ’ಪರಮಾರ್ಥ’ ಇವುಗಳ ಚಿಂತನೆ ಉಂಟಾದಲ್ಲಿ ಮನಸ್ಸು ಸಿದ್ಧವಾಗುತ್ತದೆ. ಜೀವನವು ಕೊನೆಗಾಲದಲ್ಲಿ ಸಂತೃಪ್ತಿ ನೀಡಬೇಕೆಂದರೆ ನಾವು ಇಂದೇ ’ಜೀವನದ ಅರ್ಥ’ ಮತ್ತು ’ಪರಮಾರ್ಥ’ ಇವುಗಳ ಚಿಂತನೆ ಮಾಡಬೇಕಾದ್ದು ಅವಶ್ಯ. ಇಲ್ಲದಿದ್ದಲ್ಲಿ, ಕೊನೆಗಾಲದಲ್ಲಿ ಮನಸ್ಸು ವಿಹ್ವಲಗೊಳ್ಳುತ್ತದೆ; ಬಾಳು ವ್ಯರ್ಥವಾಯಿತೆಂಬ ಕಡು ಸಂಕಟ ಆವರಿಸುತ್ತದೆ.

ಇಷ್ಟಕ್ಕೂ, ಲಂಚ ನೀಡದಿರುವುದರಿಂದ ಹಾಗೂ ಪಡೆಯದಿರುವುದರಿಂದ ತತ್ಕಾಲಕ್ಕೆ ನಷ್ಟವೆಂದು ತೋರಿದರೂ ಕಾಲಾಂತರದಲ್ಲಿ ಮತ್ತು ದೀರ್ಘಕಾಲೀನವಾಗಿ ಏನೂ ನಷ್ಟವಿಲ್ಲ, ಮಾತ್ರವಲ್ಲ, ಲಾಭವೇ. ನನ್ನ ಶುದ್ಧ ನಡೆಯಿಂದ ನನ್ನ ಮಗ, ಮೊಮ್ಮಗ, ಮಾತ್ರವಲ್ಲ, ಕಾಲಾಂತರದಲ್ಲಿ ನಾನೂ ಲಾಭಾನುಭವಿಯೇ ಆಗುವುದು ನಿಶ್ಚಿತ. ಅಲ್ಲಿಯತನಕ ಸಹನೆ ಮತ್ತು ವಿಶ್ವಾಸ ಬೇಕು, ಅಷ್ಟೆ. ವ್ಯಕ್ತಿಯ ಮಟ್ಟಿಗಷ್ಟೇ ಅಲ್ಲ, ಸಮಾಜದ ಮಟ್ಟಿಗೂ ಈ ಮಾತು ಅನ್ವಯ.

ಈ ಸಂದರ್ಭದಲ್ಲಿ ನಾನು ಲೋಕಾಯುಕ್ತದ ಉಲ್ಲೇಖ ಮಾಡಬಯಸುತ್ತೇನೆ. ಲೋಕಾಯುಕ್ತಕ್ಕೆ ಹಲವು ಅಧಿಕಾರ ಮತ್ತು ಜವಾಬ್ದಾರಿಗಳಿವೆ. ಪ್ರಜೆಗಳಾದ ನಾವು ಆ ಬಗ್ಗೆ ತಿಳಿದುಕೊಂಡು ಲೋಕಾಯುಕ್ತವನ್ನು ಬಳಸಿಕೊಂಡು ನ್ಯಾಯ ದೊರಕಿಸಿಕೊಳ್ಳುವ ಮತ್ತು ಅನ್ಯಾಯವನ್ನು ಮಟ್ಟಹಾಕುವ ಕೆಲಸವನ್ನು ಮಾಡಬೇಕಾದ್ದು (ಸ್ವಪ್ರಯೋಜನದ ದೃಷ್ಟಿಯಿಂದಲೇ) ಅಪೇಕ್ಷಣೀಯ, ಮಾತ್ರವಲ್ಲ, ಸಾಮಾಜಿಕರಾದ ನಮ್ಮ ಆದ್ಯ ಕರ್ತವ್ಯ ಕೂಡ. ಈ ಸಮಾಜವು ನನಗಾಗಿ ಮತ್ತು ನನ್ನಿಂದಾಗಿ; (ನಾನೂ ಈ ಸಮಾಜದ್ದೇ ಒಂದು ಭಾಗ); ಅಲ್ಲವೆ?

ಭ್ರಷ್ಟಾಚಾರ ನಿರ್ಮೂಲನದ ನಿಟ್ಟಿನಲ್ಲಿ ಲೋಕಾಯುಕ್ತಕ್ಕೆ ಸ್ವಪ್ರೇರಣೆಯಿಂದ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನಾಗಲೀ ಕಾನೂನಿನ ಪರಮಾಧಿಕಾರವನ್ನಾಗಲೀ ಈ ನಮ್ಮ ಕಡುಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೊಟ್ಟಾರೆಯೇ? ’ಕೊಟ್ಟಂತಿರಬೇಕು, ಕೊಟ್ಟಿರಬಾರದು’; ’ಕೊಡುತ್ತೇವೆಂದು ಹೇಳುತ್ತಿರಬೇಕು, ಕೊಡಬಾರದು’. ಇಂಥ ’ಮಾಯಾಮಾರ್ಗ’ ನಮ್ಮ ಸರ್ಕಾರಗಳದ್ದು! ಪರಮಾಧಿಕಾರ ಕೊಡುವ ಪ್ರಾಮಾಣಿಕತೆ ನಮ್ಮ ಸರ್ಕಾರಗಳಿಗೆ ಸರ್ವಥಾ ಇಲ್ಲ. ಇಂಥ ಪ್ರಾಮಾಣಿಕತೆಯನ್ನೇನಾದರೂ ನಮ್ಮ ಸರ್ಕಾರಗಳು ತೋರಿಬಿಟ್ಟರೆ ಮರುದಿನದಿಂದ ಲೋಕಾಯುಕ್ತದ ಅಗತ್ಯವೇ ಇರುವುದಿಲ್ಲ!

ಇದೇನೇ ಇರಲಿ, ಪ್ರಜೆಗಳಾದ ನಾವೇ, ಮೇಲೆ ವಿವರಿಸಿರುವಂತೆ ನಮ್ಮ ಕೆಲಸ, ಅಲ್ಲ, ಕರ್ತವ್ಯ ಮಾಡೋಣ.

ಭ್ರಷ್ಟಾಚಾರಮುಕ್ತ ಸಮಾಜದ ಅವಶ್ಯಕತೆಯ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೈತಿಕ-ಆಧ್ಯಾತ್ಮಿಕ ನೆಲೆಯಲ್ಲಿ ಅರಿವು ಮೂಡಿಸುವ ನಮ್ಮ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಕಾರ್ಯ ಅತ್ಯಂತ ಉಪಯುಕ್ತವಾದುದು. ನನ್ನ ಮಿತಿಯಲ್ಲಿ ನಾನೂ ಸ್ವಯಂಪ್ರೇರಣೆಯಿಂದ ಈ ಕಾರ್ಯವನ್ನು ವರ್ಷಗಳಿಂದಲೂ ಮಾಡಿಕೊಂಡುಬಂದಿದ್ದೇನೆ. ನಾಳಿನ ಪರಿಶುದ್ಧ ಸಮಾಜವನ್ನು ಮತ್ತು ತತ್ಫಲವಾದ ಸುಖೀ ಸಮಾಜವನ್ನು ನಿರ್ಮಿಸುವ ಕಾರ್ಯವಿದು. ಪರಿಶುದ್ಧ ಹಾಗೂ ಸುಖೀ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತ್ತು ಉಪಲೋಕಾಯುಕ್ತ ಪತ್ರಿ ಬಸವನಗೌಡ ಇವರ ಪ್ರಯತ್ನಗಳು ನಿಜಕ್ಕೂ ಪ್ರಶಂಸಾರ್ಹ.

=====================================================================

(೨೪ ಅಕ್ಟೋಬರ್ ೨೦೦೮ರ ’ಉದಯವಾಣಿ’ಯಲ್ಲಿ ಪ್ರಕಟಿತ ಬರಹ)

ಗುಡ್ಡಕ್ಕೆ ಮಣ್ಣು ಹೊತ್ತಂತೆ!
-------------------------

ಈಚೆಗೆ ನಾನು ಮಧ್ಯ ಕರ್ನಾಟಕದ ನನ್ನ ಸ್ವಂತ ಊರಿಗೆ ಹೋಗಿದ್ದೆ. ನನ್ನ ಬಂಧುವಿನೊಡನೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ಆಗ ಎದುರಾದ ಹಿರಿಯ ಗಣ್ಯ ವ್ಯಕ್ತಿಯೊಬ್ಬರನ್ನು ನನ್ನ ಬಂಧು ನನಗೆ ಪರಿಚಯಿಸಿದರು. ಸೌಮ್ಯ ಕಳೆಯ ಆ ಹಿರಿಯರು ತುಂಬ ಗೌರವದಿಂದ ನನ್ನೊಡನೆ ಮಾತನಾಡಿದರು. ನನ್ನ ಬಂಧುವೂ ಆ ವ್ಯಕ್ತಿಗೆ ತುಂಬ ಗೌರವ ಕೊಟ್ಟು ಮಾತನಾಡಿಸಿದರು. ಅದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಒಂದಿಬ್ಬರು ಕೂಡ ನಿಂತು ಆ ಹಿರಿಯ ವ್ಯಕ್ತಿಗೆ ವಂದಿಸಿ ಮುನ್ನಡೆದರು. ಆ ವ್ಯಕ್ತಿ ಆಚೆ ಹೋದಮೇಲೆ ನನ್ನ ಬಂಧು ನನಗೆ ಹೇಳಿದರು, ’ಕೆಲ ತಿಂಗಳ ಕೆಳಗೆ ಇಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿತ್ತಲ್ಲಾ, ಭಾರೀ ತಿಮಿಂಗಿಲ, ಸಾರಿಗೆ ಇಲಾಖೆ ಅಧಿಕಾರಿ, ಇವರೇ. ಕೋಟಿಗಟ್ಟಲೆ ಮೊತ್ತದ ಅಕ್ರಮ ಆಸ್ತಿ ಪತ್ತೆಯಾದರೂ ಇವರ ಕೂದಲೂ ಕೊಂಕಿಲ್ಲ!’

ಇದು ನಮ್ಮ ವ್ಯವಸ್ಥೆ!

ಲೋಕಾಯುಕ್ತ ದಾಳಿಯನ್ನು ನಾವು ಟಿವಿಯಲ್ಲಿ ನೋಡಿ, ಪತ್ರಿಕೆಗಳಲ್ಲಿ ಓದಿ ಖುಷಿಪಡುತ್ತೇವೆ. ಆದರೆ ಭ್ರಷ್ಟ ಸರ್ಕಾರಗಳು ನಮ್ಮನ್ನು ವಂಚಿಸುತ್ತಲೇ ಇವೆ! ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡದಿರುವ ಮೂಲಕ ಸರ್ಕಾರಗಳು ಲೋಕಾಯುಕ್ತದ ಪರಿಶ್ರಮವೆಲ್ಲ ಗುಡ್ಡಕ್ಕೆ ಮಣ್ಣು ಹೊತ್ತಂತಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ!

=====================================================================

(೧೩ ಸೆಪ್ಟೆಂಬರ್ ೨೦೦೯ರ ’ಕರ್ಮವೀರ’ದಲ್ಲಿ ಪ್ರಕಟಿತ ಲೇಖನ)

ನಮಗೆ ಧಿಕ್ಕಾರವಿರಲಿ!
----------------------

ಭಾರೀ ಬಂಗಲೆ. ಅದರಲ್ಲಿ ವಾಸವಾಗಿರುವವರಿಗೆ ತಲೆಗೊಂದೊಂದರಂತೆ ಕಾರು, ಕಾಲಿಗೊಬ್ಬೊಬ್ಬ ಆಳು. ಆ ಬಂಗಲೆಯ ನಾಯಿಗೂ ರಾಜೋಪಚಾರ! ಷಾಪಿಂಗ್‌ಗೆ ಹೋದರೆ ಈ ಬಂಗ್ಲೆವಾಸಿಗಳಿಗೆ ರಾಜಾತಿಥ್ಯ! ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಗಳಾಗಿರುವ ಇವರು ಸಮಾಜದ ಗಣ್ಯ ವ್ಯಕ್ತಿಗಳು.

ಇವರ ವೃತ್ತಿ ದಲ್ಲಾಳಿ ಕೆಲಸ. ಯಾರೋ ಉತ್ಪಾದಿಸಿದ್ದನ್ನು ಇನ್ನಾರಿಗೋ ದಾಟಿಸಿ ಅದಕ್ಕಾಗಿ ಕಮಿಷನ್ ಬಾಚುವ ಮಧ್ಯವರ್ತಿ ಇವರು. ಅತ್ತ ಉತ್ಪಾದಕರನ್ನೂ ಇತ್ತ ಗ್ರಾಹಕರನ್ನೂ ಸುಲಿದು ತಾವು ಸಂಪತ್ತು ಕೂಡಿಹಾಕುತ್ತಿದ್ದಾರೆ. ಇವರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿಲ್ಲ. ವೃತ್ತಿ ತೆರಿಗೆ, ಮಾರಾಟ ತೆರಿಗೆ, ಆದಾಯ ತೆರಿಗೆ, ಸಂಪತ್ತು ತೆರಿಗೆ ಎಲ್ಲವನ್ನೂ ವಂಚಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಲಂಚ ಕೊಟ್ಟು ’ಅಡ್ಜಸ್ಟ್’ ಮಾಡುತ್ತಿದ್ದಾರೆ. ಇದೆಲ್ಲ ನಮಗೆ ಗೊತ್ತು.

ಆದರೂ ನಾವು ಇವರನ್ನು ದೊಡ್ಡಮನುಷ್ಯರೆಂದು ಪರಿಗಣಿಸಿ ವಿಶೇಷ ಮನ್ನಣೆ ನೀಡುತ್ತೇವೆ! ಇವರ ಮುಖ ಕಂಡರೆ ಹಲ್ಲುಕಿರಿಯುತ್ತೇವೆ! ಇವರ ನಾಯಿಯನ್ನೂ ಬೆರಗುಗಣ್ಣಿನಿಂದ ನೋಡುತ್ತೇವೆ!

*೦*

ಸರ್ಕಾರಿ ಕಚೇರಿ. ಹವಾನಿಯಂತ್ರಿತ ಕೊಠಡಿಯೊಳಗೆ ಉನ್ನತಾಧಿಕಾರಿ. ನಗರದ ಸಕಲ ಉಸ್ತುವಾರಿ ಆತನ ಹೊಣೆ. ಆತನನ್ನು ಕಾಣಬೇಕೆಂದರೆ ನಾವು ಕೊಠಡಿಯ ಹೊರಗೆ ಗಂಟೆಗಟ್ಟಲೆ ಕಾಯಬೇಕು. ಆತ ನಮ್ಮೊಡನೆ ಅರ್ಧ ನಿಮಿಷ ಮಾತಾಡಿದರೆ ಅದು ನಮ್ಮ ಸೌಭಾಗ್ಯ!

ಕೋಟಿಗಟ್ಟಲೆಯ ಆಸ್ತಿಯನ್ನು ಈ ಅಧಿಕಾರಿ ಮಾಡಿಕೊಂಡಿದ್ದಾನೆ. ಇವನ ಸಂಬಳ ಇವನ ಮನೆಯ ಬೆಕ್ಕು-ನಾಯಿ ಸಾಕಲಿಕ್ಕೂ ಸಾಲದು! (ಅಂಥ ರಾಜಭೋಗ ಅವುಗಳಿಗೆ!) ಇವನ ಆಸ್ತಿಸಂಚಯ, ಸಂಸಾರದ ಅಯ್ಯಾಷ್ ಎಲ್ಲ ನಡೆದಿರುವುದು ಗಿಂಬಳದ ಹಣದಿಂದ! ಅತ್ತ ಸರ್ಕಾರವು ಜನೋಪಯೋಗಿ ಯೋಜನೆಗಳಿಗೆ ಬಿಡುಗಡೆ ಮಾಡಿದ ಹಣವನ್ನೂ ಈತ ತಿನ್ನುತ್ತಾನೆ, ಇತ್ತ ಜನರಿಂದಲೂ ಎಂಜಲು ತಿನ್ನುತ್ತಾನೆ.

ಈತನ ಉಸ್ತುವಾರಿಯಲ್ಲಿ ನಗರವೆಲ್ಲ ಗಬ್ಬೆದ್ದುಹೋಗಿದೆ! ಎಲ್ಲಿ ನೋಡಿದರೂ ಕಸದ ರಾಶಿ! ಊರಿಡೀ ಕೊಳಚೆ ಗುಂಡಿ! ವಿಪರೀತ ಸೊಳ್ಳೆ! ರೋಗರುಜಿನ ಯಥೇಚ್ಛ! ಕೆರೆ, ಉದ್ಯಾನ, ಕೊನೆಗೆ ಪಾದಚಾರಿ ಮಾರ್ಗ ಕೂಡ ಭೂಗಳ್ಳರ ಮತ್ತು ಅತಿಕ್ರಮಣಕಾರರ ಪಾಲು! ಇವೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯಗಳೇ.

ಆದರೂ ನಾವು ಈ ಅಧಿಕಾರಿಗೆ ಸಲಾಂ ಹೊಡೆಯುತ್ತೇವೆ! ಈತನೆದುರು ಹಲ್ಲು ಗಿಂಜಿಕೊಂಡು ನಿಲ್ಲುತ್ತೇವೆ! (ಹಲವರು ದಕ್ಷಿಣೆಯನ್ನೂ ಸಲ್ಲಿಸುತ್ತೇವೆ!) ಈತನ ಮಕ್ಕಳು-ಮರಿಗಳಿಗೆ, ಕೊನೆಗೆ ಈತನ ಮನೆಯ ನಾಯಿಗೂ ಎಲ್ಲಿಲ್ಲದ ಗೌರವ ಕೊಡುತ್ತೇವೆ!

*೦*

ಆರಕ್ಷಕ ಠಾಣೆ. ಅಲ್ಲಿರಬೇಕಾದವರು ಆರಕ್ಷಕರು. ಆದರೆ ಅಲ್ಲಿರುವವರು ಆ ರಾಕ್ಷಸರು! ನಮ್ಮ ರಕ್ಷಣೆಗೆಂದು ಸಂಬಳ ಪಡೆಯುವ ಅವರು ನಮ್ಮ ದುಡಿಮೆಯನ್ನೂ ಭಕ್ಷಿಸಿ ನಮ್ಮನ್ನೇ ಅನ್ಯಾಯವಾಗಿ ಶಿಕ್ಷಿಸುತ್ತಾರೆ! ಅವರನ್ನು ಕಂಡರೆ ಸುಭದ್ರತೆಯ ಭಾವ ಹೊಂದಬೇಕಾದ ನಾವು ಅವರನ್ನು ಕಂಡರೆ ಹೆದರಿ ಸಾಯುತ್ತೇವೆ!

*೦*

ಇನ್ನು, ವಿಧಾನ ಸೌಧ. ನಮ್ಮ ಸೇವಕರು ಅಲ್ಲಿದ್ದಾರೆ. ನಮ್ಮ ಸೇವೆ ಮಾಡಲೆಂದೇ ಕೋಟಿಗಟ್ಟಲೆ ಹಣ ಖರ್ಚುಮಾಡಿಕೊಂಡು ಅಲ್ಲಿ ಹೋಗಿ ಕೂತಿದ್ದಾರೆ! ಎಂಥ ಮಹಾತ್ಮರು!

ಮೇಲೆ ಹೇಳಿದ ಎಲ್ಲ ಅನ್ಯಾಯಗಳಿಗೂ ಈ ಮಹಾತ್ಮರೇ ಕಾರಣರು! ಎಲ್ಲ ಅವ್ಯವಸ್ಥೆಗಳಿಗೂ ಇವರೇ ಮೂಲ! ಮೇಲಾಗಿ, ಎಲ್ಲರಿಗಿಂತ ದೊಡ್ಡ ನುಂಗಪ್ಪಗಳು ಇವರು! ಇಡೀ ನಾಡಿಗೇ ಇವರ ಗುಣ ಗೊತ್ತು. ಪಬ್ಲಿಕ್ಕಾಗಿಯೇ ನಾವು ಇವರ ಬಗ್ಗೆ ಆಡಿಕೊಳ್ಳುತ್ತೇವೆ.

ಆದಾಗ್ಗ್ಯೂ, ಎದುರು ಸಿಕ್ಕರೆಂದರೆ ಇವರು ನಮಗೆ ದೇವರ ಸಮಾನ! ದೇವರಿಗಿಂತ ಮಿಗಿಲು! ಬಗ್ಗಿ ಡೊಗ್ಗಿ ಸಲಾಮು ಹೊಡೆಯುತ್ತೇವೆ! ಇವರು ಕಾಲಲ್ಲಿ ತೋರಿಸಿದ್ದನ್ನು ನಾವು ತಲೆಯಮೇಲೆ ಇಟ್ಟುಕೊಳ್ಳುತ್ತೇವೆ!

*೦*

ಛಿ! ಎಂಥ ನರಸತ್ತವರು ನಾವು! ನಮಗೆ ಧಿಕ್ಕಾರವಿರಲಿ!

=====================================================================

(ಸೆಪ್ಟೆಂಬರ್ ೨೦೦೮ರ ’ಪ್ರಜಾವಾಣಿ’ ’ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟಿತ ಬರಹ)

ಅಂಡು ಸುಟ್ಟ ಬೆಕ್ಕು!
-------------------

ಸರ್ಕಾರಿ ಅಧಿಕಾರಿಗಳ ಕಾರ್ಯದಲ್ಲಿ ಜನಪ್ರತಿನಿಧಿಗಳು ಮೂಗುತೂರಿಸಬಾರದೆಂದು ವಾಚಕರೋರ್ವರು ಬರೆದ ಪತ್ರ ಓದಿದಾಗ ನನಗೆ ದಶಕಗಳ ಕೆಳಗಿನ ಘಟನೆಯೊಂದು ನೆನಪಿಗೆ ಬಂತು.

ನಾನಾಗ ಆಂಧ್ರಪ್ರದೇಶದ ಆದೋನಿಯಲ್ಲಿದ್ದೆ. ಅಲ್ಲಿಯ ಶಾಸಕರು ಒಂದು ದಿನ ಸ್ಥಳೀಯ ಆರಕ್ಷಕ ಠಾಣೆಗೆ ಹೋಗಿ, ಬಂಧನಕ್ಕೊಳಗಾದ ಆರೋಪಿಯೊಬ್ಬನನ್ನು ಬಿಟ್ಟುಬಿಡುವಂತೆ ಪೋಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ಹೇಳಿದರು. ಅದಕ್ಕಾತ ಸಕಲ ಗೌರವದೊಂದಿಗೆ ಉತ್ತರಿಸಿದ್ದು ಹೀಗೆ:

’ಅಯ್ಯಾ, ತಮಗೆ ಮಾತನಾಡಲು ಅಷ್ಟು ದೊಡ್ಡ ವಿಧಾನಸಭೆ ಇದೆ. ತಮ್ಮ ಮಾತನ್ನು ಆಲಿಸಲು ಮುಖ್ಯಮಂತ್ರಿ ಸಮೇತ ಇಡೀ ಮಂತ್ರಿಮಂಡಳವೇ ಅಲ್ಲಿರುತ್ತದೆ. ಅದೆಲ್ಲ ಬಿಟ್ಟು ಒಂದು ಚಿಕ್ಕ ಪೋಲೀಸ್ ಸ್ಟೇಷನ್‌ಗೆ, ಒಬ್ಬ ಯಃಕಶ್ಚಿತ್ ಸಬ್ ಇನ್‌ಸ್ಪೆಕ್ಟರ್ ಬಳಿ ಮಾತಾಡಲಿಕ್ಕೆ ಯಾಕೆ ಬಂದಿರಿ ಅಯ್ಯಾ, ಇದು ತಮ್ಮ ಘನತೆಗೆ ಕಮ್ಮಿ ಅಯ್ಯಾ, ದಯವಿಟ್ಟು ಇಲ್ಲಿಂದ ದಯಮಾಡಿಸಿ.’

ಆ ಶಾಸಕರು ಅಂಡು ಸುಟ್ಟ ಬೆಕ್ಕಿನ ಮುಖ ಮಾಡಿಕೊಂಡು ಅಲ್ಲಿಂದೆದ್ದು ಹೊರನಡೆದರು!

=====================================================================

(ಮೇ ೨೦೦೮ರ ’ಕರ್ಮವೀರ’ದಲ್ಲಿ ಪ್ರಕಟಿತ ಲೇಖನದ ಆಯ್ದ ಭಾಗ)

ಮತದಾರನೊಬ್ಬನ ಮನದಾಳದ ಮಾತು
---------------------------------------

ನಮ್ಮನ್ನಾಳುವ ಗೌರವಾನ್ವಿತ ನೇತಾರರೇ,

ಥೂ! ನಿಮ್ಮ ಜನ್ಮಕ್ಕಿಷ್ಟು......!
ಎಂಥ ಜನ್ಮರೀ ನಿಮ್ದು, ಸುಡುಗಾಡು ಜನ್ಮ!

ಹಣ, ಹಣ, ಹಣ, ನಿಮ್ಮ ಹೆಣ! ಏನು ತಗೊಂಡ್ಹೋಗ್ತೀರ್ರೀ ಹೋಗೋವಾಗ? ಇದ್ದಾಗಂತೂ ಮಾನ ಇಲ್ಲ, ಮರ್ಯಾದೆ ಇಲ್ಲ, ದೋಚಿದ ಸಂಪತ್ತು ಅನುಭವಿಸೋ ಯೋಗನಾದ್ರೂ ಇದೆಯಾ, ಅದೂ ಇಲ್ಲ, ಮುದಿಯಾಗೋವರೆಗೂ ಕೊಳಕು ರಾಜಕಾರಣದ ಟೆನ್ಷನ್ನು, ಮುದುಕರಾಗ್ತಲೇ ಕಿತ್ತು ತಿನ್ನೋ ಕಾಯಿಲೆಗಳು, ಒಂದು ವೇಳೆ ದೇಹಕ್ಕೆ ಅಂಥಾ ಏನೂ ಕಾಯಿಲೆ ಇಲ್ಲದಿದ್ದರೂ ಮನಸ್ಸು ಮಾತ್ರ ಚಕಣಾಚೂರಾಗಿ ನಿಮ್ಮ ತಲೆಗೂದಲನ್ನೇ ನೀವು ಕಿತ್ತುಕೋಬೇಕು, ಹಾಗಾಗದೇ ಇದ್ದರೆ ಕೇಳಿ. ವರ್ಷಗಟ್ಟಲೆ ಕೊಳೆತಿರುತ್ತಲ್ಲಾ ತಲೆ, ಕೊನೆಗಾಲದಲ್ಲಿ ಅದ್ಹೇಗೆ ಆರೋಗ್ಯಕರವಾಗಿರೋಕೆ ಸಾಧ್ಯ? ಭಾಳಾ ಮಂದಿ ನಿಮ್ಮಂಥೋರ್‍ನ ಬಲು ಹತ್ತಿರದಿಂದ ನೋಡಿದ್ದೀನ್ರೀ. ನಿಜಲಿಂಗಪ್ಪ, ಕಾಮರಾಜ್, ಹಳ್ಳಿಕೇರಿ ಗುದ್ಲೆಪ್ಪ, ಇಂಥ ಯೋಗ್ಯರಿಂದ ಮೊದಲ್ಗೊಂಡು ಇಂದಿನ ನಿಮ್ಮಂಥ ಅಯೋಗ್ಯರವರೆಗೆ ಅದೆಷ್ಟೋ ಮಂದಿ ರಾಜಕಾರಣಿಗಳನ್ನು ಬಲು ಹತ್ತಿರದಿಂದ ನೋಡಿ, ಒಡನಾಡಿ, ಹಲವರನ್ನು ಮೇಲಕ್ಕೆತ್ತಿ (ನಂತರ ಪರಿತಪಿಸಿ), ನಿಮ್ಮಂಥವರ ಆದಿ-ಅಂತ್ಯ ಎಲ್ಲಾ ಕಂಡು ತಿಳಕೊಂಡೇ ಹೇಳುತ್ತಿದ್ದೇನೆ, ನಿಮ್ಮ ಪೈಕಿ ಯೋಗ್ಯರಾಗಿರುವ ಎಲ್ಲೋ ಕೆಲವರನ್ನು ಹೊರತುಪಡಿಸಿದರೆ ಪಕ್ಕಾ ಅಯೋಗ್ಯರಾದ ನಿಮಗ್ಯಾರಿಗೂ ಸುಖ ಜೀವನವಿಲ್ಲ, ಸುಖ ಮರಣವಿಲ್ಲ. ಮಾಡಿದ್ದುಣ್ಣೋ ಮಹರಾಯ. ನೀವು ಮಾಡಿದ್ದೆಂದರೆ ಸಂಪತ್ತಲ್ಲ. ಅದು ನೀವು ದೋಚಿದ್ದು. ನೀವು ಮಾಡಿದ್ದು ಪಾಪ. ಅದನ್ನು ನೀವು ಉಣ್ಣಲೇಬೇಕು. ಮೇಲಾಗಿ, ಇದು ಕಲಿಕಾಲ; ಈ ಜನ್ಮದಲ್ಲಿ ಮಾಡಿದ್ದನ್ನು ಈ ಜನ್ಮದಲ್ಲೇ ಉಂಡುಬಿಡಬೇಕು. ನೀವು ಮಾಡಿದ ಪಾಪಕ್ಕೆ, ಪಾಪ, ನಿಮ್ಮ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಉಣ್ಣಬೇಕು! ಹಿರಿಯ ನಾಗರ ನಂಜು ಮರಿಯ ನಾಗರ ಪಾಲು, ತಂದೆ ಮಾಡಿದ ಪಾಪ ಮಗನ ಪಾಲು!

ಹೀಗಿದ್ದೂ ನಿಮ್ಮದೆಂಥಾ ಭಂಡ ಧೈರ್ಯಾರೀ, ದುಡ್ಡು, ದುಡ್ಡು ಅಂತ ಸಾಯ್ತೀರಿ! ಅಧಿಕಾರಕ್ಕೆ ಬರೋದಕ್ಕಾಗಿ ಮಾಡಬಾರದ್ದನ್ನೆಲ್ಲಾ ಮಾಡ್ತೀರಿ, ಅಧಿಕಾರಕ್ಕೆ ಬಂದ್ಮೇಲೆ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಬದಲು ಅವರನ್ನು ಜೊತೆಗೆ ಸೇರಿಸ್ಕೊಂಡು ನೀವು ಮಹಾಭ್ರಷ್ಟರಾಗ್ತೀರಿ. ನಿಮಗೆ ದೇಶ ಬೇಡ, ನಾಡು ಬೇಡ, ನುಡಿ ಬೇಡ, ಜನರ ಸುಖ ದುಃಖ ಬೇಡವೇ ಬೇಡ, ಬೇಕಾದ್ದು ಕುರ್ಚಿ, ಮತ್ತೆ ದುಡ್ಡು, ದುಡ್ಡು, ದುಡ್ಡು! ಈಪಾಟಿ ದುಡ್ಡು ಕೂಡಿಡೋ ನಿಮಗಿಂತ ಎರಡು ಹೊತ್ತು ಗಂಜಿ ತಿಂದು ಬದುಕೋ ಬಡವ ನೆಮ್ಮದಿಯಿಂದ ಇರ್‍ತಾನೆ ಗೊತ್ತೇನ್ರೀ. ಜೊತೆಗೆ ಅವ್ನು ತನ್ನ ಅಭಿಮಾನಾನೂ ಕಾಪಾಡಿಕೊಳ್ತಾನೆ. ನೀವೋ, ನಾಚಿಕೆ, ಮಾನ, ಮರ್ಯಾದೆ ಮೂರೂ ಬಿಟ್ಟೇ ತಾನೆ ರಾಜಕಾರಣದ ಫೀಲ್ಡಿಗೆ ಬರೋದು? ಆದರೆ, ಆದರಣೀಯ ರಾಜಕಾರಣಿಗಳೇ, ಮೂರೂ ಬಿಟ್ಟು ಬರೋದು ಅನಿವಾರ್ಯವೇನೂ ಅಲ್ಲವಷ್ಟೆ? ಆದಾಗ್ಗ್ಯೂ ನೀವು.......! ಥೂ!

ಮೂರೂ ಬಿಟ್ಟ ನಿಮಗಾದರೂ ಅದೆಂಥಾ ಅಧಿಕಾರದಾಸೇರೀ! ನಿಮ್ಮ ಮೇಲೆ ಜನರಿಗೆ ಗೌರವವೇ ಇಲ್ಲವೆಂದಮೇಲೆ ನಿಮಗೆ ಅಧಿಕಾರ ಅದ್ಯಾವ ಘನತೆಯನ್ನು ತಂದುಕೊಡುತ್ತೇರೀ, ನಿಮ್ಮ ಪಿಂಡ! ನಿಮ್ಮ ಕುರ್ಚಿಗೋ ಐಶ್ವರ್ಯಕ್ಕೋ ಹೆದರಿ ಯಾರಾದರೂ ನಿಮಗೆ ಸಲಾಂ ಹೊಡೆದರೆ, ತಮ್ಮ ಸ್ವಾರ್ಥಕ್ಕಾಗಿ ನಿಮ್ಮ ಕಾಲಿಗೆ ಬಿದ್ದರೆ, ನಿಮ್ಮದು ನಾಟಕ ಅಂತ ಗೊತ್ತಿದ್ದೇ ಅದಕ್ಕೆ ಕೃತ್ರಿಮ ನಗೆ ಬೀರಿದರೆ ಅದರಿಂದ ನಿಮಗೆ ಗೌರವ ದೊರೆತಂತೇನು? ಇದು ನಿಮಗೆ ಗೊತ್ತಿಲ್ಲವೇನು? ಗೊತ್ತಿದ್ದೂ ಅಧಿಕಾರಕ್ಕಾಗಿ ಒದ್ದಾಡ್ತೀರಲ್ರೀ, ನಿಮ್ಮ ತಲೇಲಿ ಏನಿದೆ? ಅಧಿಕಾರಕ್ಕಾಗಿ ’ಬಿ’ ಫಾರಂನಲ್ಲಿನ ಹೆಸರನ್ನೇ ಬದಲಾಯಿಸ್ತೀರೀ! (ಕೊನೆಗೆ ಇಂಗು ತಿಂದ ಮಂಗ ಆಗ್ತೀರಿ!)

ಅಧಿಕಾರಕ್ಕಾಗಿ ಏನೆಲ್ಲಾ ಮಾಡ್ತೀರಿ! ದಿನಕ್ಕೆರಡು ಪಕ್ಷ ಬದಲಾಯಿಸ್ತೀರಿ! ಇವತ್ತು ನೀವೇ ಬೈದವರ ಕಾಲನ್ನು ನಾಳೆ ಹೋಗಿ ಗಟ್ಟಿಯಾಗಿ ಹಿಡ್ಕೋತೀರಿ! ಮೊಮ್ಮಕ್ಕಳಿಗೆ ಟಿಕೆಟ್ ಕೊಡದಿದ್ದರೆ ಪಕ್ಷ ಬಿಡ್ತೀರಿ, ರಾಯಭಾರೀನೋ ರಾಜ್ಯಪಾಲನೋ ಮತ್ತೇನೋ ಒಂದು ಸುಡುಗಾಡು ಮಾಡ್ತೀನಿ ಅಂದಾಕ್ಷಣ ಮತ್ತೆ ಪಕ್ಷಕ್ಕೆ ಅಂಟಿಕೊಳ್ತೀರಿ! ಜನರು (ನಿಜದಲ್ಲಿ) ಒಂದಿಷ್ಟೂ ಗೌರವ ನೀಡದ ಆ ನಿಮ್ಮ ಅಧಿಕಾರ ಯಾವ ಖರ್ಮಕ್ಕೆ?

ಇಂಥಾ ನೀವು ಗಾಂಧೀಜಿಯ ಗುಣಗಾನ ಮಾಡ್ತೀರಿ! ಆ ಮುದ್ಕ ಏನಾದ್ರೂ ಬಂದ್ಗಿಂದ ಅಂತಂದ್ರೆ ಅಹಿಂಸೆ, ಅಸ್ತೇಯ ಎರಡೂ ಬಿಟ್ಟು ಯಾರ್‍ದಾದ್ರೂ ಲಾಳದ ಮೊಳೆ ಹೊಡೆದ ಹಳೇ ಚಡಾವು ತಗೊಂಬಂದು ಯಕ್ಕಾಮಕ್ಕಿ ಇಕ್ತಾನೆ ನಿಮಗೆ, ಹ್ಞಾ! ನೀವು ಮಾಡೋದೆಲ್ಲ ನಾಟ್ಕ, ಆಡೋದೆಲ್ಲ ಸುಳ್ಳು, ಬಿಡೋದೆಲ್ಲ ಬೊಗಳೆ ಅಂತ ಜನರಿಗೆ ಗೊತ್ತಿದೆ ಅನ್ನೋದು ನಿಮಗೆ ಗೊತ್ತಿದ್ದರೂ ಆ ಬುದ್ಧಿ ಮಾತ್ರ ಬಿಡೊಲ್ಲ ನೀವು! ನಿಮ್ಮನ್ನು ಹೊಗಳೋರು, ನಿಮಗೆ ಗೌರವ ಕೊಡೋರು, ಅಡ್ಡಬೀಳೋರು, ಜೈಕಾರ ಹಾಕೋರೆಲ್ಲ ತಮ್ಮ ಸ್ವಾರ್ಥಕ್ಕಾಗಿಯೋ ಅಥವಾ ಭಯದಿಂದಲೋ ಹಾಗೆ ಮಾಡ್ತಾರಂತ ನಿಮಗೆ ಗೊತ್ತಿದ್ದಾಗ್ಗ್ಯೂ ಅವರು ಹೊಗಳಿದಾಗ ಹಲ್ಲು ಕಿರೀತೀರಿ, ಜೈಕಾರ ಹಾಕಿದಾಗ ಬೀಗುತೀರಿ! ಒಂದ್ರೀತಿ ಭ್ರಾಮಕ ಜಗತ್ತಿನಲ್ಲಿ ಬದುಕ್ತಾ ಇದ್ದೀರಿ, ಮೈ ಪೂರ್ (ಇಂಪ್ಯೂರ್) ಪೊಲಿಟಿಷಿಯನ್ಸ್! ನಿಜ ಜಗತ್ತಿಗೆ ಬನ್ನಿ, (ಧೂರ್ತ) ಧುರೀಣರೇ.

ನಿಜ ಜಗತ್ತಿನ ಸುಖ ಕಷ್ಟ ಅರಿಯಿರಿ. ಜನರ ಜತೆ ಬೆರೆಯಿರಿ. ಜನರನ್ನು ಮರುಳುಗೊಳಿಸಿ, ಕೆರಳಿಸಿ, ಒಡೆದು ಆಳುವ ಬದಲು ಜನರ ಮನ ಗೆದ್ದು ಜನರನ್ನು ಒಂದುಗೂಡಿಸಿ ಅವರೊಡನೆ ಒಂದಾಗಿ ಆಡಳಿತ ನಡೆಸುವ ಗುಣ ರೂಪಿಸಿಕೊಳ್ಳಿ. ನಾಡಿಗಾಗಿ ನಿಃಸ್ವಾರ್ಥದಿಂದ ದುಡಿಯಲು ಸಾಧ್ಯವಾದರೆ ನೇತಾರರಾಗಿ ಆಡಳಿತದ ಚುಕ್ಕಾಣಿ ಹಿಡಿಯಿರಿ, ಇಲ್ಲದಿದ್ದರೆ ರಾಜಕಾರಣ ಬಿಟ್ಟು ಹೊರಗೆ ಬನ್ನಿರಿ. ಬದುಕಲಿಕ್ಕೇನು ಸಾವಿರ ಮಾರ್ಗಗಳು. ರಾಜಕಾರಣ ಇರುವುದು ನೀವು ಬದುಕಲಿಕ್ಕಲ್ಲ, ಪ್ರಜೆಗಳ ಬದುಕು ರೂಪಿಸಲಿಕ್ಕೆ.

ದಿ ಗ್ರೇಟ್ ಲೀಡರ್‌ಗಳೇ,
ಎಲ್ಲರಂತೆ ನೀವೂ ಮನುಷ್ಯರೇ. ನೀವೇನೂ ಮೇಲಿನಿಂದ ಇಳಿದು ಬಂದಿಲ್ಲ. ಮಾನವ ಜನ್ಮಕ್ಕೆ ಒಂದು ಅರ್ಥ ಇದೆ, ಒಂದು ಉದ್ದೇಶ ಇದೆ. ದೇವರು ನಿಗದಿಪಡಿಸಿರುವ ಅರ್ಥ-ಉದ್ದೇಶ ಅದು. ಅದಕ್ಕನುಗುಣವಾಗಿ ಬದುಕದಿದ್ದರೆ ದೇವರು ಮೆಚ್ಚಲಾರ. ದೇವರನ್ನು ಎದುರುಹಾಕಿಕೊಂಡು ಬಾಳಿದರೆ ಎಂದಾದರೂ ಸುಖವುಂಟೆ? ಹಾಗೆ ಬಾಳಿ ಜಯಿಸಲಾದರೂ ಸಾಧ್ಯವೆ? ನಿಮಗೆ ಹೇಗೂ ಕಾನೂನಿನ ಭಯವಿಲ್ಲ, ಏಕೆಂದರೆ ಕಾನೂನುಗಳ ಸೃಷ್ಟಿಕರ್ತರೂ ನೀವೇ, ಪಾಲನೆಯ ಉಸ್ತುವಾರಿಯೂ ನಿಮ್ಮದೇ; ಹಾಗಾಗಿ, ನಿಮಗೆ ಬೇಕಾದಂತೆ ಕಾನೂನು; ನೀವು ನಡಕೊಂಡದ್ದೇ ಕಾನೂನುಬದ್ಧ! ’ಕಾನೂನುಬಾಹಿರರು’ ನೀವು! ಆದರೆ, ದೇವರ ಭಯವಾದರೂ ಬೇಡವೆ? ಯೋಚಿಸಿರಿ. ಯೋಚಿಸಿ ನಿಮ್ಮನ್ನು ನೀವು ತಿದ್ದಿಕೊಳ್ಳಿ. ಆಗ, ಜೀವನದ ಕೊನೆಗಾಲದಲ್ಲಿ ನಿಮಗೆ ನೆಮ್ಮದಿಯಾದರೂ ಸಿಕ್ಕೀತು. ಇಲ್ಲದಿದ್ದಲ್ಲಿ ಕೊನೆಗಾಲದಲ್ಲಿ, ’ಅಯ್ಯೋ ನನ್ನ ಬಾಳೇ, ಹೀಗೇ ಮುಗಿದೋಗ್ತದಲ್ಲಾ’, ಅಂತ ಯಾರಿಗೂ ಹೇಳಲಾರದೆ ಮನಸ್ಸಿನೊಳಗೇ ಪರಿತಪಿಸೋ ಅವಸ್ಥೆ ನಿಮ್ಮದಾಗೋದು ಗ್ಯಾರಂಟಿ. ಹಾಗಾದಾಗ, ಅದುವರೆಗೂ ನೀವು ಸಂಪಾದಿಸಿದ ಸಂಪತ್ತು, ಹೆಸರು, ಮಾಡಿದ ಮೋಜು, ಎಲ್ಲಾ ವೇಸ್ಟಾ!

=====================================================================

(ಡಿಸೆಂಬರ್ ೨೦೦೮ರಲ್ಲಿ ಪತ್ರಿಕೆಯೊಂದರ ಪತ್ರ ವಿಭಾಗದಲ್ಲಿ ಪ್ರಕಟಿತ ಬರಹ)

ಕಲಾಂ ಅವರ ಧೀಮಂತಿಕೆಗೊಂದು ನಿದರ್ಶನ
--------------------------------------------

ಈಚೆಗಷ್ಟೇ ಬೆಂಗಳೂರಿಗೆ ಬಂದು ಶಾಸಕರಿಗೆ ಪಾಠ ಹೇಳಿ ಹೋದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಅದಕ್ಕೆ ಪೂರ್ವಭಾವಿಯಾಗಿ ಪ್ರಶ್ನಾವಳಿಯೊಂದನ್ನು ಶಾಸಕರಿಗೆಲ್ಲ ಕಳಿಸಿದ್ದರಷ್ಟೆ. ನಾನು ಶಾಸಕನಲ್ಲದಿದ್ದರೂ ಆ ಪ್ರಶ್ನಾವಳಿಯ ಎಲ್ಲ ಒಂಬತ್ತು ಪ್ರಶ್ನೆಗಳಿಗೂ ವಿಡಂಬನಾತ್ಮಕ ಉತ್ತರ ಬರೆದು ಕಲಾಂ ಅವರಿಗೆ ಮಿಂಚಂಚೆ (ಇಮೇಲ್) ಮೂಲಕ ರವಾನಿಸಿದ್ದೆ. ಅದನ್ನೋದಿದ ಕಲಾಂ ಅವರು ನನ್ನ ವಿಚಾರಲಹರಿಯ ಬಗ್ಗೆ ಆಸಕ್ತಿ ತಳೆದು ನನಗೆ ತಿರುಗಿ ಮಿಂಚಂಚೆ ಪತ್ರ ಬರೆದರು.

’ಹಲವು ಅಂಶಗಳನ್ನು ತಿಳಿಸುವ ತೊಂದರೆ ತೆಗೆದುಕೊಂಡಿದ್ದೀರಿ; ಅದಕ್ಕಾಗಿ ಧನ್ಯವಾದಗಳು’, ಎಂದು ಆತ್ಮೀಯ ಸಂಬೋಧನೆಯೊಂದಿಗೆ ಬರೆದ ಆ ಪತ್ರದಲ್ಲಿ ಕಲಾಂ ಅವರು, ’ನಮ್ಮ ಶಾಸಕರು ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲಂಥ ಕ್ಷೇತ್ರವೊಂದನ್ನು ತಿಳಿಸಿ’, ಎಂದು ನನಗೆ ಸೂಚಿಸಿದರು. ಅದರನುಸಾರ ನಾನು, ಕೃಷಿಗೆ ಉತ್ತೇಜನ ಮತ್ತು (ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ಮೂಲಕ) ಭ್ರಷ್ಟಾಚಾರ ನಿರ್ಮೂಲನ, ಈ ಎರಡು ಕ್ಷೇತ್ರಗಳನ್ನು ಸೂಚಿಸಿ ವಿವರವಾದ ಉತ್ತರ ಕಳಿಸಿದೆ.

ಅನಂತರದಲ್ಲಿ ಶಾಸಕರಿಗೆ ನೀಡಿದ ’ಪಾಠ’ದಲ್ಲಿ ಕಲಾಂ ಅವರು ಈ ಎರಡೂ ವಿಷಯಗಳ ಬಗ್ಗೆ ಒತ್ತು ನೀಡಿದ್ದನ್ನು ತಿಳಿದು ನನಗೆ ಅತೀವ ಸಂತಸವಾಯಿತು. ನನ್ನ ಪತ್ರವಲ್ಲದಿದ್ದರೂ ಕಲಾಂ ಅವರು ಈ ವಿಷಯಗಳ ಬಗ್ಗೆ ಶಾಸಕರಿಗೆ ಹೇಳಿಯೇ ಹೇಳುತ್ತಿದ್ದರು; ಕೃಷಿಯ ಬಗ್ಗೆ ಅವರ ಪ್ರಶ್ನಾವಳಿಯಲ್ಲೇ ಪ್ರಸ್ತಾಪವಿತ್ತಷ್ಟೆ; ನನ್ನ ಪತ್ರವೇನೂ ಮಹತ್ತಲ್ಲ. ಮಹತ್ತು ಯಾವುದೆಂದರೆ, ಮಾಜಿ ರಾಷ್ಟ್ರಪತಿಯೊಬ್ಬರ ವಿನಯ, ಸೌಜನ್ಯ, ಸರಳ ಸ್ವಭಾವ, ಸಮಾನತಾಭಾವ, ಸಮಾಜಹಿತಕ್ಕಾಗಿ ಅವರಲ್ಲಿರುವ ತುಡಿತ, ಕಾರ್ಯೋತ್ಸಾಹ, ತಾನೇ ಸರ್ವಜ್ಞನೆಂದುಕೊಳ್ಳದೆ ಇತರರ ಅಭಿಪ್ರಾಯಗಳನ್ನು ಕೋರುವ ನಿರಹಂಕಾರ, ವಿವೇಚಿಸುವ ವಿವೇಕ ಮತ್ತು ಸ್ವೀಕರಿಸುವ ವಿಶಾಲ ಮನೋಭಾವ, ಈ ಗುಣಗಳು ಮಹತ್ತ್ವದವು. ಇವು ಮನುಕುಲದ ಶ್ರೇಷ್ಠ ಗುಣಗಳು. ಈ ಗುಣಗಳಿಂದಾಗಿ ಕಲಾಂ ದೊಡ್ಡವರೆನಿಸಿಕೊಳ್ಳುತ್ತಾರೆ.

ರಾಷ್ಟ್ರಪತಿ ಹುದ್ದೆಯಿಂದಾಗಿ ಕಲಾಂ ಅವರಿಗೆ ದೊಡ್ಡಸ್ತಿಕೆ ಬರಲಿಲ್ಲ; ಕಲಾಂ ಅವರಿಂದಾಗಿ ರಾಷ್ಟ್ರಪತಿ ಹುದ್ದೆಯ ಘನತೆ ಹೆಚ್ಚಿತು.

=====================================================================

(ಡಿಸೆಂಬರ್ ೨೦೦೮ರ ’ಕರ್ಮವೀರ’ದಲ್ಲಿ ಪ್ರಕಟಿತ ಲೇಖನ)

ರಾಜಕಾರಣಿಗಳನ್ನೂ ಅಧಿಕಾರಿಗಳನ್ನೂ ದೂಷಿಸುತ್ತೇವೆ, ಆದರೆ ನಾವೆಂಥವರು?
---------------------------------------------------------------------------

* ೯೦ರ ದಶಕ. ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿದ್ದೆ. ಸರ್ಕಾರದ ಬೃಹತ್ ಯೋಜನೆಯೊಂದರ ಅನುಷ್ಠಾನದಿಂದಾಗಿ ಕೋಟಿಗಳ ವ್ಯವಹಾರ ನಾನಾ ಬ್ಯಾಂಕ್‌ಗಳ ಶಾಖೆಗಳಲ್ಲಿ ನಡೆದಿತ್ತು. ಸರ್ಕಾರದ ಉನ್ನತಾಧಿಕಾರಿಗಳು ಭರ್ಜರಿಯಾಗಿ ಕಬಳಿಸುತ್ತಿದ್ದರು. ಸಾಕ್ಷ್ಯಾಧಾರಗಳಿಲ್ಲದಿದ್ದರೂ ಇದು ಊರಿಗೆಲ್ಲ ಗೊತ್ತಿರುವ ಸಂಗತಿಯಾಗಿತ್ತು. ಇಂಥ ಸಂದರ್ಭದಲ್ಲಿ ನಾನು ಭ್ರಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ನಿರಾಕರಿಸಿದೆನಲ್ಲದೆ ಸರ್ಕಾರದ ಆಡಳಿತಾಂಗ ವ್ಯವಸ್ಥೆಯ ಭ್ರಷ್ಟತನವನ್ನು ಬಹಿರಂಗವಾಗಿ ವಿರೋಧಿಸಿದೆ. ಪರಿಣಾಮ, ಸರ್ಕಾರದ ಉನ್ನತಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾದೆ. ಸ್ಥಳೀಯ ಭ್ರಷ್ಟ ಪುಢಾರಿಯೊಬ್ಬ ನನ್ನನ್ನು ಮಗ್ಗುಲ ಮುಳ್ಳಿನಂತೆ ಕಾಣತೊಡಗಿದ. ಅತ್ಯಂತ ವಿಷಾದದ ಸಂಗತಿಯೆಂದರೆ, ಆ ಊರಿನ ಸಾರ್ವಜನಿಕರು ಯಾರೂ ನನ್ನ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಬದಲಾಗಿ, ಚುನಾವಣೆಯಲ್ಲಿ ಆ ಪುಢಾರಿಯನ್ನು ವಿಧಾನಸಭೆಗೆ ಆರಿಸಿ ಕಳಿಸಿದರು!

ಈ ಪ್ರಕರಣದಲ್ಲಿ, ನನ್ನ ಬ್ಯಾಂಕಿಗೆ ಆಗಬಹುದಾಗಿದ್ದ ಲಕ್ಷಾಂತರ ರೂಪಾಯಿ ನಷ್ಟವನ್ನು ಉಳಿಸುವಲ್ಲಿ ಮಾತ್ರ ನಾನು ಸಫಲನಾದೆ. ಭ್ರಷ್ಟರಿಗೆ ಬ್ಯಾಂಕ್ ಅನುಕೂಲಗಳನ್ನು ನೀಡದಿರುವ ಮೂಲಕ, ಅರ್ಥಾತ್ ಕಟ್ಟುಬಾಕಿಗೆ ಅವಕಾಶ ಮಾಡಿಕೊಡದಿರುವ ಮೂಲಕ, ಸಾರ್ವಜನಿಕರ ಹಣವು ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಪುಢಾರಿಗಳ ಪಾಲಾಗದಂತೆ ನೋಡಿಕೊಂಡ ತೃಪ್ತಿ ನನ್ನದಾಯಿತು.

* ೮೦ರ ದಶಕ. ಬೆಂಗಳೂರು. ಬೇರೊಂದು ಊರಿನಿಂದ ವರ್ಗವಾಗಿ ಬಂದ ನಾನು ಪಡಿತರ ಚೀಟಿಗಾಗಿ ಸಂಬಂಧಿತ ಸರ್ಕಾರಿ ಕಚೇರಿಗೆ ಹೋದಾಗ ಅಲ್ಲಿ ೩೫ ರೂಪಾಯಿಗಳ ಲಂಚಕ್ಕೆ ಬೇಡಿಕೆ ಬಂತು. ಕೊಡಲು ನಿರಾಕರಿಸಿದೆ. ತಿಂಗಳುಗಟ್ಟಲೆ ಓಡಾಡಿಸಿದರು. ಆದರೂ ನಾನು ಜಗ್ಗಲಿಲ್ಲ. ಸದರಿ ಕಚೇರಿಯೆದುರು ಒಂದು ದಿನ ಪಬ್ಲಿಕ್ಕಾಗಿ ಆ ಭ್ರಷ್ಟರ ಜನ್ಮ ಜಾಲಾಡತೊಡಗಿದೆ. ಸಾರ್ವಜನಿಕರೆಲ್ಲ ನನ್ನನ್ನು ಮೃಗಾಲಯದ ಪ್ರಾಣಿಯಂತೆ ನೋಡತೊಡಗಿದರಾಗಲೀ ಯಾರೂ ನನ್ನೊಡನೆ ದನಿಗೂಡಿಸಲಿಲ್ಲ!

ಆದರೆ, ಇದಾದ ಎರಡೇ ದಿನಗಳಲ್ಲಿ, ಪಡಿತರ ಚೀಟಿ ಕೊಂಡೊಯ್ಯಬಹುದೆಂಬ ಸೂಚನೆ ಬಂತು! ಆದರೆ ಅಷ್ಟರೊಳಗೆ ನನಗೆ ಆರು ತಿಂಗಳಿನ ಪಡಿತರ ನಷ್ಟವಾಗಿತ್ತು. ಮುಂದೆ, ಪಡಿತರ ಚೀಟಿಯ ಸೌಲಭ್ಯದ ಅರ್ಹತೆಯನ್ನು ನಾನು ದಾಟಿದ ತಕ್ಷಣ ಪಡಿತರ ಚೀಟಿಯನ್ನು ಇಲಾಖೆಗೆ ಹಿಂತಿರುಗಿಸಿದೆ. ನನ್ನ ನೆರೆಹೊರೆಯವರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಬಹುಪಾಲು ಬಂಧುಗಳೂ ಈ ವಿಷಯದಲ್ಲಿ ನನ್ನನ್ನು ದಡ್ಡನೆಂದು ಜರಿದರು!

* ಕೆಲ ತಿಂಗಳುಗಳ ಹಿಂದೆ. ಇದೇ ಬೆಂಗಳೂರು. ನಾಯಿಗಳ ಉಪಟಳದ ಬಗ್ಗೆ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯೊಂದು ನಡೆಯಿತು. ಅದರಲ್ಲಿ ನಾನು ಸಕ್ರಿಯ ಪಾತ್ರ ವಹಿಸಿದ್ದೆ. ಕಾರ್ಯಯೋಜನೆಯ ನಿರ್ಧಾರ ಮತ್ತು ಅನುಷ್ಠಾನಕ್ಕಾಗಿ ಮುಂದಿನ ಸಮಾಲೋಚನಾ ಸಭೆಯ ದಿನಾಂಕ ನಿಗದಿಯಾಯಿತು. ಆದರೆ ತದನಂತರದಲ್ಲಿ ಆ ಸಭೆಯನ್ನು ಮಹಾನಗರಪಾಲಿಕೆಯು ಕಾರಣಾಂತರದಿಂದ ಮುಂದೂಡಿತು. ಹಲವು ತಿಂಗಳುಗಳುರುಳಿದರೂ ಇನ್ನೂ ಮಹಾನಗರಪಾಲಿಕೆಯು ಸಭೆಯನ್ನು ಏರ್ಪಡಿಸಿಲ್ಲ. ನನ್ನ ವಿಚಾರಣೆಗಳು ಅರಣ್ಯರೋದನವಾಗಿವೆ. ವಿಷಾದದ ಸಂಗತಿಯೆಂದರೆ, ಬಹುತೇಕ ಸಂಘಸಂಸ್ಥೆಗಳವರೇ ಈಗ ಈ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ!

* ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ. ಬೆಂಗಳೂರಿನ ಒಂದು ’ವಿದ್ಯಾ’ವಂತ ಬಡಾವಣೆ. ವಿಳಾಸ ಬದಲಾದ ಮತದಾರರ ಗುರುತಿನ ಚೀಟಿಗಾಗಿ ಸರತಿಯಲ್ಲಿ ನಿಂತು ಫೋಟೋ ತೆಗಿಸಿಕೊಂಡೆ. ಚೀಟಿಗೆ ಹೊದಿಸುವ ಪ್ಲಾಸ್ಟಿಕ್ ಹಾಳೆ ಖಾಲಿಯಾಗಿದೆಯೆಂದು ಹೇಳಿ ಚೀಟಿಯನ್ನು ಮರುದಿನ ಮಹಾನಗರಪಾಲಿಕೆ ಕಚೇರಿಗೆ ಬಂದು ಪಡೆದುಕೊಳ್ಳುವಂತೆ ಅಲ್ಲಿದ್ದ ಸಿಬ್ಬಂದಿ ’ಆದೇಶಿಸಿದರು’. ಇನ್ನೊಮ್ಮೆ ಬರಲು ಹೇಳಿ ಎಲ್ಲರ ಸಮಯವನ್ನೂ ಪೋಲು ಮಾಡುವುದು ಉಚಿತವಲ್ಲವೆಂದೂ ಪ್ಲಾಸ್ಟಿಕ್ ಹಾಳೆಯನ್ನು ತರಿಸಿರೆಂದೂ ಸಿಬ್ಬಂದಿಯನ್ನು ಒತ್ತಾಯಿಸತೊಡಗಿದೆ. ಅಷ್ಟರಲ್ಲಿ ಅಲ್ಲಿದ್ದ ಸಾರ್ವಜನಿಕರೇ ನನ್ನಮೇಲೆ ಹರಿಹಾಯ್ದರು! ’ಹೋಗ್ಹೋಗ್ರೀ, ಪ್ಲಾಸ್ಟಿಕ್ ಇಲ್ಲ ಅಂತ ಅವ್ರು ಹೇಳ್ತಾ ಇಲ್ವಾ? ನಾಳೆ ಆಫೀಸ್‌ಗ್ಹೋಗಿ ತಗೊಳ್ಳಿ. ಸುಮ್ನೆ ಹೋಗಿ’, ಎಂದು ನನಗೇ ದಬಾಯಿಸತೊಡಗಿದರು! ಅಷ್ಟರಲ್ಲಾಗಲೇ ಪ್ಲಾಸ್ಟಿಕ್ ಹಾಳೆಗಾಗಿ ಅದೆಲ್ಲಿಗೋ ಫೋನ್ ಮಾಡಿ ಮಾತಾಡುತ್ತಿದ್ದ ಮಹಾನಗರಪಾಲಿಕೆ ನೌಕರನು ಜನರ ಈ ಮಾತು ಕೇಳಿದವನೇ ಮೊಬೈಲ್ ಕಟ್ ಮಾಡಿ ಕಿಸೆಯೊಳಗಿಟ್ಟುಕೊಂಡು ಸುಮ್ಮನೆ ಕುಳಿತುಬಿಟ್ಟ!

ಮರುದಿನದಿಂದ ನಾಲ್ಕು ದಿನ ಮಹಾನಗರಪಾಲಿಕೆಯ ಕಚೇರಿಗೆ ಓಡಾಡಿದರೂ ಚೀಟಿ ಸಿಗಲಿಲ್ಲ. ನನ್ನಂತೆ ಅನೇಕರು ಎಡತಾಕುತ್ತಿದ್ದರು. ಕೊನೆಗೆ ನನ್ನ ಒತ್ತಡ ಜೋರಾದಾಗ, ಜೊತೆಗೆ, ಬರಹಗಾರನಾದ ನಾನು ಪತ್ರಿಕೆಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿಯೇನೆಂಬ ಅನುಮಾನ ಸಂಬಂಧಿತ ಸಿಬ್ಬಂದಿಗೆ ಉಂಟಾದಾಗ ಗುರುತಿನ ಚೀಟಿ ನನ್ನ ಮನೆಬಾಗಿಲಿಗೇ ಬಂತು!

* ಈ ಚುನಾವಣೆಯ ಸಂದರ್ಭದಲ್ಲೇ, ಮತದಾನದ ಕರ್ತವ್ಯದ ಬಗ್ಗೆ ನಾನು ಬರೆದಿದ್ದ ಸುದೀರ್ಘ ಲೇಖನವೊಂದು ಜನಪ್ರಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅನೇಕ ಕಡೆಗಳಲ್ಲಿ ನಾನು ಸಾರ್ವಜನಿಕರನ್ನುದ್ದೇಶಿಸಿ ಮಾತಾಡಿಯೂ ಇದ್ದೆ. ಆದರೆ ಪರಿಣಾಮ ಮಾತ್ರ ಶೂನ್ಯ. ನನ್ನ ಬಡಾವಣೆಯೂ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಮತದಾನದ ಪ್ರಮಾಣ ಎಂದಿನಂತೆ ಶೇಕಡಾ ೪೫ರಿಂದ ೫೫ ಅಷ್ಟೆ! ವೋಟು ಹಾಕದೇ ಮನೆಯಲ್ಲೇ ಉಳಿದಿದ್ದ ವಿದ್ಯಾವಂತ ’ಗಣ್ಯ’ರೊಬ್ಬರನ್ನು ನಾನು ವಿಚಾರಿಸಿದಾಗ ಅವರ ಉತ್ತರ, ’ಇಷ್ಟು ಮಾತಾಡ್ತೀರಲ್ಲಾ, ನೀವು ವೋಟು ಹಾಕಿದ್ದೀರಾ?’ ಅವರಿಗೆ ನನ್ನ ಬೆರಳಿನ ಮಸಿ ಗುರುತನ್ನು ತೋರಿಸಿದೆ. ಅದಕ್ಕೆ ಅವರ ಮರುಪ್ರಶ್ನೆ, ’ನಿಮ್ಮ ಫ್ಯಾಮಿಲಿ ಮೆಂಬರ್‍ಸ್ ಎಲ್ರೂ ಹಾಕಿದ್ದಾರಾ?’ ’ಹೌದು, ಎಲ್ರೂ ಹಾಕಿದ್ದಾರೆ. ಬೇಕಾದರೆ ಮನೆಗೆ ಬಂದು ನೋಡಿ’, ಎಂದೆ. ಸುಮ್ಮನಾದರು. ಅವರ ಮನೆಯಲ್ಲಿ ಮೂರು ಮತಗಳಿದ್ದು ಯಾರೂ ಮತದಾನ ಮಾಡಿರಲಿಲ್ಲ!’

ಒಟ್ಟಾರೆ ಸಾರಾಂಶ ಇಷ್ಟೆ. ಪ್ರಜೆಗಳಾದ ನಾವು ಜಾಗೃತರಾಗಬೇಕಾಗಿದೆ; ಸೋಮಾರಿತನ ಬಿಟ್ಟು ಎದ್ದೇಳಬೇಕಾಗಿದೆ; ಸ್ವಾರ್ಥ ತೊರೆದು ಭ್ರಷ್ಟರ ವಿರುದ್ಧ ಸಂಘಟಿತರಾಗಿ ಹೋರಾಡಬೇಕಾಗಿದೆ; ಮೊದಲು ಸ್ವಯಂ ನಾವು ಭ್ರಷ್ಟತನದಿಂದ ದೂರಾಗಬೇಕಾಗಿದೆ.

ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡುವ ಮೂಲಕ ಇದ್ದುದರಲ್ಲಿಯೇ ಯೋಗ್ಯರನ್ನು (ಅಥವಾ ಕಡಿಮೆ ಅಯೋಗ್ಯರನ್ನು) ಆರಿಸಬೇಕಾಗಿದೆ. ತನ್ಮೂಲಕ ಆಡಳಿತಾಂಗದ ಭ್ರಷ್ಟತನ ಮತ್ತು ಸೋಮಾರಿತನವನ್ನು ಜನಪ್ರತಿನಿಧಿಗಳು ಪೋಷಿಸುವ ವಾತಾವರಣವನ್ನು ನಿವಾರಿಸುವತ್ತ ಹೆಜ್ಜೆಯಿರಿಸಬೇಕಾಗಿದೆ.

ಆಡಳಿತಾಂಗದ ಆಲಸ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ನಾನೂ ಸೇರಿದಂತೆ ಹಲವರು ನಡೆಸುತ್ತಿರುವ ಸಂಘಟಿತ ಹೋರಾಟಗಳ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪಾಲ್ಗೊಳ್ಳುವಿಕೆ ನೀರಸ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯು ವ್ಯಾಪಕವಾಗಬೇಕಾಗಿದೆ. ಪತ್ರಿಕೆಗಳ ಬರಹ/ಪತ್ರಗಳಿಗೆ ಸ್ಪಂದನ ಮತ್ತು ಹೋರಾಟಗಳಲ್ಲಿ ಪಾಲ್ಗೊಳ್ಳುವಿಕೆ ಇವು ಸಾರ್ವಜನಿಕರಿಂದ ಹೆಚ್ಚೆಚ್ಚು ವ್ಯಕ್ತವಾಗಬೇಕಾಗಿದೆ.

ಇಂದು ಸರ್ಕಾರವಾಗಲೀ ದೇಶವಾಗಲೀ ರಾಜಕಾರಣಿಗಳಿಗಿಂತ ಹೆಚ್ಚಾಗಿ ಅಧಿಕಾರಿಗಳ ಕೈಯಲ್ಲಿದೆ. ಆದರೆ ಆಡಳಿತಾಂಗವನ್ನು ಅಂಕೆಯಲ್ಲಿಟ್ಟುಕೊಳ್ಳುವಂಥ ಶಾಸಕಾಂಗದ ಆಯ್ಕೆ ಮತದಾರರ ಕೈಯಲ್ಲಿದೆ. ಜೊತೆಗೆ, ಆಡಳಿತಾಂಗವನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುವುದೂ ಸಾರ್ವಜನಿಕರಿಗೆ ಸಾಧ್ಯ. ಅಂಥದೊಂದು ಇಚ್ಛಾಶಕ್ತಿಯನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ’ಯಾರ ಚಿಂತೆ ನಮಗ್ಯಾಕೆ? ನಮ್ಮ ಚಿಂತೆ (ನಮ್ಮ ಸ್ವಾರ್ಥ) ನಮಗೆ ಸಾಕು’, ಎಂದುಕೊಂಡಿದ್ದರೆ ಯಾವುದೇ ಬದಲಾವಣೆ ಅಸಾಧ್ಯ. ಪರಿಣಾಮ, ಮುಂದಿನ ದಿನಗಳು ನಮ್ಮ ಮಕ್ಕಳು-ಮೊಮ್ಮಕ್ಕಳಿಗೇ ದುರ್ಭರ!

=====================================================================
ಎಚ್. ಆನಂದರಾಮ ಶಾಸ್ತ್ರೀ
=====================================================================

5 ಕಾಮೆಂಟ್‌ಗಳು:

  1. ಆನ೦ದ ಸರ್,
    ತು೦ಬಾ ತು೦ಬಾ ಒಳ್ಳೆಯ ಸಕಾಲಿಕ ಬರಹ . ಜನರೇ ಒಗ್ಗಟ್ಟಾದರೆ ಭ್ರಷ್ಟಾಚಾರ ಈ ದೇಶದಲ್ಲಿ ಇರುವುದಿಲ್ಲ ಎ೦ಬುದನ್ನು ನೀವು ನಿಮ್ಮ ಉದಾಹರಣೆಯ ಮೂಲಕ ಸೊಗಸಾಗಿ ಹೇಳಿದ್ದಿರಿ .
    ಹಾಗು ಜನರು ಮೊದಲು ಶ್ರೀಮ೦ತ ಎ೦ಬ ಕಾರಣ ದಿ೦ದ ಅವರನ್ನು ಒಲೈಸಲು ಹೋಗಬಾರದು ಅವರ ಹಣದ ಮೂಲ ನೋಡಿ ಆ ವ್ಯಕ್ತಿ ಒಳ್ಳೆಯ ಮಾರ್ಗ ದಿ೦ದ ಹಣ ಸ೦ಪಾದನೆ ಮಾಡಿದ್ದರೆ ಅವರನ್ನು ಗೌರವಿಸ ಬೇಕು . ಇಲ್ಲದಿದ್ದರೆ ಜನ ಅವರನ್ನು ಕಾಲ ಕಸಕ್ಕಿ೦ತ ಕಡೆಯಾಗಿ ಕಾಣ ಬೇಕು ಎ೦ದು ನೀವು ಸೊಗಸಾಗಿ ಹೇಳಿದ್ದಿರಿ ..

    ಪ್ರತ್ಯುತ್ತರಅಳಿಸಿ
  2. ಮೆಚ್ಚುಗೆಗಾಗಿ ತುಂಬಾ ತುಂಬಾ ಧನ್ಯವಾದಗಳು ರೂಪಾ ಅವರೇ.

    ಪ್ರತ್ಯುತ್ತರಅಳಿಸಿ
  3. ಶಾಸ್ತ್ರಿ ಗಳೇ , ನಿಮ್ಮ ದಿಟ್ಟ ನಿಲುವಿಗೆ, ಭ್ರಷ್ಟಾಚಾರದ ವಿರುದ್ಧದ ಪ್ರತ್ಯಕ್ಷ/ಪರೋಕ್ಷ ಹೋರಾಟಕ್ಕೆ ನಮೋನ್ನಮಃ

    ಪ್ರತ್ಯುತ್ತರಅಳಿಸಿ
  4. ಸರ್,
    "ಒಟ್ಟಾರೆ ಸಾರಾಂಶ ಇಷ್ಟೆ. ಪ್ರಜೆಗಳಾದ ನಾವು ಜಾಗೃತರಾಗಬೇಕಾಗಿದೆ; ಸೋಮಾರಿತನ ಬಿಟ್ಟು ಎದ್ದೇಳಬೇಕಾಗಿದೆ; ಸ್ವಾರ್ಥ ತೊರೆದು ಭ್ರಷ್ಟರ ವಿರುದ್ಧ ಸಂಘಟಿತರಾಗಿ ಹೋರಾಡಬೇಕಾಗಿದೆ; ಮೊದಲು ಸ್ವಯಂ ನಾವು ಭ್ರಷ್ಟತನದಿಂದ ದೂರಾಗಬೇಕಾಗಿದೆ."

    ಇದೇ ನೋಡೀ ಸಾರ್ ನಮಗೆ ಬೇಕಿರೋದು.

    ವೋಟು ಹಾಕಿ ಗೆಲ್ಸಿ ಕಳ್ಸಿದ್ರೆ ಸಾಕು, ಮುಂದಿನ ಎಲೆಕ್ಶನ್ ಬರೋವರ್ಗು ನಮ್ಮ ಕೆಲ್ಸಾ ಏನೂ ಇಲ್ಲ. ಸಮಾಜನ ಪೂರ್ತಿ ಜನಪ್ರತಿನಿಧಿಗಳೇ ನೋಡ್ಕೋ ಬೇಕು ಅಂತ ತಿಳಿದಿರೋ ಅನೇಕರಿಗೆ ನಿಮ್ಮಂತಹವರ ಸಂಪರ್ಕ ಸಿಕ್ಕರೂ ಸಾಕು ಜಾಗೃತ ರಾಗ್ತಾರೆ.

    ಜನಪ್ರತಿನಿಧಿಗಳಿಗೆ ಭ್ರಷ್ಟತೆ ಹುಟ್ಟಿನ್ದಾನೆ ಬಂದಿರಲ್ಲ,,, ಅಷ್ಟಕ್ಕೂ ದೇಶದಲ್ಲಿ ಎಲ್ಲರೂ ಕುಟುಂಬ ರಾಜಕಾರಣ ಮಾಡಕ್ಕಾಗಲ್ಲ.
    ಎಲ್ಲೋ ನೆಹರು, ದೌದ್ರು ಅಂತಹ ಕೆಲ್ವಂದು ಫ್ಯಾಮಿಲಿ ಮಾತ್ರ ಹಾಗೆ ಇರುತ್ತೆ.

    ಪ್ರತ್ಯುತ್ತರಅಳಿಸಿ
  5. ಪರಾಂಜಪೆ ಅವರೇ, ಲೋಹಿತ್ ಅವರೇ, ನಿಮ್ಮ ಪ್ರಶಂಸೆ ನನಗೆ ಪ್ರಶಸ್ತಿ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ