ಮಂಗಳವಾರ, ಸೆಪ್ಟೆಂಬರ್ 8, 2009

ಉಮಾಶ್ರೀ, ಪ್ರಕಾಶ್ ರೈ: ಸಾಧಕರೇ ಸೈ!

ಉತ್ತಮ ನಟ-ನಟಿ ಹೀಗೆ ಅಪ್ಪಟ ಕನ್ನಡಿಗರಿಬ್ಬರಿಗೆ ೨೦೦೭ನೇ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿರುವುದು ಕನ್ನಡಿಗರಾದ ನಮಗೆಲ್ಲ ಸಂತೋಷದ ವಿಷಯವಷ್ಟೇ ಅಲ್ಲ, ಹೆಮ್ಮೆಯ ವಿಷಯ ಕೂಡ. ಶಾರುಖ್ ಖಾನ್ ಮತ್ತು ಅಮೀರ್ ಖಾನ್ ದ್ವಯರ ’ಪ್ರಭಾ(ವ)ವಲಯ’ವನ್ನು ಮೀರಿ ನಮ್ಮ ಕರಾವಳಿ ಕನ್ನಡಿಗ ಪ್ರಕಾಶ್ ರೈ ತಮಿಳು ಚಿತ್ರ ’ಕಾಂಚೀವರಂ’ನಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದರೆ, ಅಭಿನಯದ ವಿಷಯದಲ್ಲಿ ಕೌಟುಂಬಿಕ ಹಿನ್ನೆಲೆಯನ್ನಾಗಲೀ ತರಬೇತಿಯನ್ನಾಗಲೀ ಹೊಂದಿರದ ಮತ್ತು ಯಾವ ಗಾಡ್‌ಫಾದರನ್ನೂ ಹೊಂದಿರದ ಉಮಾಶ್ರೀ ’ಗುಲಾಬಿ ಟಾಕೀಸು’ ಕನ್ನಡ ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇವರಿಬ್ಬರೂ ಚಲನಚಿತ್ರ ಮತ್ತು ನಾಟಕ ರಂಗಗಳಲ್ಲಿ ದಿಟ್ಟ ಹೆಜ್ಜೆಗಳನ್ನಿಡುತ್ತ ಸ್ವಯಂ ಪರಿಶ್ರಮದಿಂದ ಮೇಲೇರಿದವರು. ಆರಂಭದಿಂದಲೂ ನಾಯಕನಾಗಿ ನಾಯಕಿಯಾಗಿ ಮಿಂಚುತ್ತಬಂದವರಲ್ಲ. ದೊರೆತ ಪಾತ್ರಗಳನ್ನೇ ಅತ್ಯಂತ ಶ್ರದ್ಧೆಯಿಂದ ನಿಭಾಯಿಸುತ್ತ ಸಾಗಿದವರು. ಆದರೆ, ಒಡಲಲ್ಲಿ ಸದಾ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡಿದ್ದವರು! ಇವರ ಮಹತ್ವಾಕಾಂಕ್ಷೆಯೀಗ ಫಲ ಕೊಟ್ಟಿದೆ. ಆಕಾಂಕ್ಷೆಗನುಗುಣವಾಗಿ ಪರಿಶ್ರಮವನ್ನೂ ಅನವರತ ಕೈಗೊಳ್ಳುತ್ತ ಸಾಗಿಬಂದದ್ದರಿಂದಾಗಿ ಇಂದು ಇವರೀರ್ವರೂ ರಾಷ್ಟ್ರಮಟ್ಟದ ಈ ಖ್ಯಾತಿಗೆ ಪಾತ್ರರಾಗಿದ್ದಾರೆ. ಪ್ರತಿಭೆ ಮತ್ತು ಪರಿಶ್ರಮಗಳಿದ್ದರೆ ಅಂದುಕೊಂಡದ್ದನ್ನು ಸಾಧಿಸುವುದು ಅಸಾಧ್ಯವೇನಲ್ಲ ಎಂಬುದನ್ನು ಇವರಿಬ್ಬರೂ ಸಾಧಿಸಿ ತೋರಿಸಿದ್ದಾರೆ. ಪ್ರತಿಭೆ ಮತ್ತು ಪರಿಶ್ರಮಗಳ ಜೊತೆಗೆ ಸಹನೆ ಮತ್ತು ವಿನಯ ಇವೂ ಸಾಧನೆಯ ಹಾದಿ ಕ್ರಮಿಸಲು ಅವಶ್ಯ ಎಂಬುದೂ ಇವರಿಬ್ಬರ ಮಾರ್ಗಕ್ರಮಣವನ್ನು ಗಮನಿಸಿದಾಗ ಗೊತ್ತಾಗುತ್ತದೆ.

ಕನ್ನಡ ಚಲನಚಿತ್ರರಂಗವು ಪ್ರಕಾಶ್ ರೈ ಅವರ ಅಗಾಧ ಪ್ರತಿಭೆಯನ್ನು ಸರಿಯಾಗಿ ಗುರುತಿಸದೆ ಕೇವಲ ಸಣ್ಣಪುಟ್ಟ ಪಾತ್ರಗಳನ್ನಷ್ಟೇ ನೀಡುತ್ತಿದ್ದಾಗಲೂ ರೈ ಹತಾಶರಾಗಲಿಲ್ಲ. ಸಹನೆಯಿಂದ ಕಾದರು. ’ರಾಮಾಚಾರಿ’ ಚಿತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆಯುವ ಪಾತ್ರ ಸಿಕ್ಕಾಗ ಮತ್ತು ’ನಾಗಮಂಡಲ’ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಮಿಂಚಿದಾಗ ಗರ್ವಕ್ಕೂ ತುತ್ತಾಗಲಿಲ್ಲ. ಎಂದಿನ ವಿನಯ ಕಾಪಾಡಿಕೊಂಡು ಮುಂದುವರಿದರು. ತಮಿಳಿನಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಾಗ ರಾಜಗಾಂಭೀರ್ಯದಿಂದ ಒಳಹೊಕ್ಕು ಮುನ್ನಡೆದರು. ಇಂದು ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ, ಕನ್ನಡಿಗರಿಗೆ ಮಾತ್ರವಲ್ಲ, ತಮಿಳರಿಗೂ ಕೀರ್ತಿ ತಂದಿದ್ದಾರೆ.

೧೯೯೧ರಲ್ಲಿ ಬೆಂಗಳೂರಿನ ಗೀತಾಂಜಲಿ ಚಿತ್ರಮಂದಿರದಲ್ಲಿ ’ಅನುಕೂಲಕ್ಕೊಬ್ಬ ಗಂಡ’ ಚಿತ್ರ ಪ್ರದರ್ಶಿತವಾಗುತ್ತಿತ್ತು. ಆ ಚಿತ್ರದಲ್ಲಿ ಪ್ರಕಾಶ್ ರೈಗೆ ಒಂದು ಸಣ್ಣ ಪಾತ್ರ. ಆದರೆ ಪ್ರೇಕ್ಷಕ ನೆನಪಿಟ್ಟುಕೊಳ್ಳಬಹುದಾದ ಪಾತ್ರ. ಆ ಚಿತ್ರಕ್ಕೆ ಮತ್ತು ತನ್ನ ಪಾತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ತಿಳಿಯಲು ರೈ ಚಿತ್ರಮಂದಿರದ ಸನಿಹದಲ್ಲೇ ಇದ್ದ ತನ್ನ ಮನೆಯ ಹೊರಗೆ ಅನಾಮಧೇಯನಂತೆ ಆಸೆಕಂಗಳಿಂದ ನಿಂತಿರುತ್ತಿದ್ದುದನ್ನು ಮತ್ತು ಚಿತ್ರಮಂದಿರಕ್ಕೆ ಹೋಗಿಬಂದಿದ್ದನ್ನು ಅಲ್ಲೇ ತುಸು ದೂರದಲ್ಲಿ ಆಗ ವಾಸವಿದ್ದ ನಾನು ಪ್ರತ್ಯಕ್ಷ ಗಮನಿಸಿದ್ದೇನೆ. ರೈ ಅವರ ಅಂದಿನ ಆಕಾಂಕ್ಷೆ ಇಂದು ಈಡೇರಿದೆ; ಕನಸು ನನಸಾಗಿದೆ.

ಎಲ್ಲರಿಗೂ ಗೊತ್ತಿರುವಹಾಗೆ ಉಮಾಶ್ರೀ ತನ್ನ ಜೀವನದಲ್ಲಿ ಅತೀವ ಕಷ್ಟಗಳನ್ನೆದುರಿಸಿ ಮೇಲೆಬಂದವರು. ಇಡ್ಲಿ ಮಾರಿ ತನ್ನ ಇಬ್ಬರು ಮಕ್ಕಳನ್ನು ಪೋಷಿಸಿದ ತಾಯಿದೇವತೆ ಈಕೆ. ಎಂಥ ಪಾತ್ರಗಳನ್ನು ಕೊಟ್ಟರೂ ಕಲೆಯ ದೃಷ್ಟಿಯಿಂದ ಸ್ವೀಕರಿಸಿ ಅದ್ಭುತವಾಗಿ ಅಭಿನಯಿಸಿ ಸೈ ಎನ್ನಿಸಿಕೊಂಡವರು. ಪ್ರೇಕ್ಷಕನ ಗೇಲಿಗೆ ಜಗ್ಗದೆ ಬಗ್ಗದೆ ಮುನ್ನಡೆದವರು. ’ಒಡಲಾಳ’ ನಾಟಕದಲ್ಲಿ ತನ್ನ ಅಭಿನಯಸಾಮರ್ಥ್ಯ ಮೆರೆದು ಟೀಕಾಕಾರರ ಬಾಯಿಮುಚ್ಚಿಸಿದವರು. ಚಲನಚಿತ್ರದಲ್ಲಿ ಉತ್ತಮ ಅವಕಾಶಕ್ಕಾಗಿ ತಾಳ್ಮೆಯಿಂದ ಮತ್ತು ವಿನಯದಿಂದ ಕಾದವರು. ಅವರ ತಾಳ್ಮೆ ಈಗ ಫಲ ಕೊಟ್ಟಿದೆ. ಅವರಿಗೆ ’ಉತ್ತಮ ನಟಿ’ ಪ್ರಶಸ್ತಿ ನೀಡುವ ಮೂಲಕ ರಾಷ್ಟ್ರಮಟ್ಟದ ಕಲಾವಿದೆಯೆಂದು ಕೇಂದ್ರ ಸರ್ಕಾರವೇ ಅವರನ್ನೀಗ ಗೌರವಿಸಿದೆ.

ಉಮಾಶ್ರೀ ವಿನಯವನ್ನು ನಾನು ಕಣ್ಣಾರೆ ಕಂಡಿದ್ದೇನೆ. ೯೦ರ ದಶಕದ ಆರಂಭದಲ್ಲಿ ನಾನು ಬೆಂಗಳೂರಿನ ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್ ಮುಖ್ಯಶಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಉಮಾಶ್ರೀಯವರು ಚೆಕ್ ನಗದೀಕರಿಸಿಕೊಳ್ಳಲು ಆಗಾಗ ಅಲ್ಲಿಗೆ ಬರುತ್ತಿದ್ದರು. ತಾನು ಚಿತ್ರನಟಿಯೆಂಬ ಯಾವ ಗತ್ತನ್ನೂ ತೋರದೆ, ಎಲ್ಲ ಗ್ರಾಹಕರಂತೆಯೇ ಕೌಂಟರ್‌ನ ಹೊರಗೆ ನಿಂತು, ಚೆಕ್ ನೀಡಿ, ಹಣ ಸಂದಾಯವಾಗುವವರೆಗೂ ಅಲ್ಲಿದ್ದ ಯಾವುದಾದರೊಂದು ಕುರ್ಚಿಯಮೇಲೆ ಕೂತು ಕಾದಿದ್ದು, ಹಣ ಪಡೆದು ಧನ್ಯವಾದ ಹೇಳಿ ಹೋಗುತ್ತಿದ್ದರು. ಹಾಗೆ ಕೂತಿದ್ದಾಗ ಅವರನ್ನು ನಾನು ಮಾತನಾಡಿಸುತ್ತಿದ್ದೆ. ಅತ್ಯಂತ ವಿನಯ ಮತ್ತು ಗೌರವಗಳಿಂದ, ಹಸನ್ಮುಖಿಯಾಗಿ, ಹಿತಮಿತವಾಗಿ ಉತ್ತರಿಸುತ್ತಿದ್ದರು. ತನ್ನನ್ನು ಎಲ್ಲರೂ ಗಮನಿಸಬೇಕೆಂದು (ಅಥವಾ ಯಾರೂ ಗಮನಿಸಬಾರದೆಂದು) ಅವರೆಂದಿಗೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಂದುಹೋಗುತ್ತಿದ್ದರು. ಅವರಿಂದು ಇಡೀ ದೇಶವೇ ಗಮನಿಸುವಂಥ ಗೌರವವನ್ನು ತನ್ನದಾಗಿಸಿಕೊಂಡಿದ್ದಾರೆ.

(ಆಗ ಆ ಬ್ಯಾಂಕ್ ಶಾಖೆಗೆ ಗ್ರಾಹಕರಾಗಿ ಬರುತ್ತಿದ್ದ ಹಿರಿಯ ನಟ ಅಶ್ವತ್ಥ್, ನಿರ್ದೇಶಕ ಕೆ.ವಿ. ಜಯರಾಂ, ನಿರ್ಮಾಪಕ ಚಂದೂಲಾಲ್ ಜೈನ್, ರಂಗ ತಂತ್ರಜ್ಞ-ನಿರ್ದೇಶಕ ವಿ. ರಾಮಮೂರ್ತಿ, ಖ್ಯಾತ ಚಿತ್ರಕಲಾವಿದ ಎಂ.ಟಿ.ವಿ. ಆಚಾರ್ಯ, ಹಿಂದಿ ಚಿತ್ರನಟ ಮೆಹಮೂದ್ ಇವರೆಲ್ಲ ನನ್ನೊಡನೆ ಆತ್ಮೀಯವಾಗಿ ಮಾತನಾಡುತ್ತಿದ್ದುದು ನನಗೀಗ ಸವಿನೆನಪು.)

ಉಮಾಶ್ರೀ ಮತ್ತು ಪ್ರಕಾಶ್ ರೈ ತಮ್ಮ ಪ್ರತಿಭೆ ಏನೆಂಬುದನ್ನಿಂದು ಇಡೀ ದೇಶಕ್ಕೇ ಸಾರಿದ್ದಾರೆ. ನಮ್ಮೆಲ್ಲರ ಮೆಚ್ಚುಗೆ, ಹೆಮ್ಮೆ ಮತ್ತು ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ಚಲನಚಿತ್ರಗಳಲ್ಲಿ ಚಾಕೊಲೇಟ್ ಹೀರೊ-ಹೀರೊಯಿನ್‌ಗಳು ಎಷ್ಟೇ ಕುಣಿಯಲಿ, ರಾಷ್ಟ್ರಪ್ರಶಸ್ತಿಗಳು ಮಾತ್ರ ತಮ್ಮ ಸಾಧನೆಗೇ ದಕ್ಕುವಂಥವು ಎಂಬುದನ್ನು ಎಂ.ವಿ. ವಾಸುದೇವ ರಾವ್ (’ಚೋಮನ ದುಡಿ’), ಚಾರುಹಾಸನ್ (’ತಬರನ ಕಥೆ’), ಪ್ರಕಾಶ್ ರೈ (’ಕಾಂಚೀವರಂ’), ನಂದಿನಿ ಭಕ್ತವತ್ಸಲ (’ಕಾಡು’), ಜಯಮಲಾ (’ತಾಯಿ ಸಾಹೇಬ’), ತಾರಾ (’ಹಸೀನಾ’), ಉಮಾಶ್ರೀ (’ಗುಲಾಬಿ ಟಾಕೀಸು’) ಇವರುಗಳು ಸಾಧಿಸಿ ತೋರಿಸಿದ್ದಾರೆ.

7 ಕಾಮೆಂಟ್‌ಗಳು:

  1. ಆನ೦ದ ಸರ್,
    ಇಬ್ಬರು ಕನ್ನಡಿಗರಿಗೆ ಈ ಪ್ರಶಸ್ತಿ ದೊರಕಿರುವುದು ತು೦ಬಾ ಸ೦ತೊಷದ ವಿಷಯ . ಅದರೂ೦ದಿಗೆ ಅವರ ವಿನಯದ ಬಗ್ಗೆ ಹೇಳಿದ್ದು ಅವರ ವ್ಯಕ್ತಿತ್ವ ಕ್ಕೆ ಇನ್ನು೦ದು ಗರಿ ಮೂಡಿಸಿದ ಹಾಗೆ ಆಯಿತು ..
    ವ೦ದನೆಗಳು

    ಪ್ರತ್ಯುತ್ತರಅಳಿಸಿ
  2. ಆನ೦ದ ಸರ್,
    ಈಗ ಆ ಯುವಕನ ಸ್ಥಿತಿ ಹೇಗಿದೆ ?. ನೀವು ನ೦ತರದ ಬೆಳವಣಿಗೆಯನ್ನು ಹೇಳಲಿಲ್ಲ ?
    ವ೦ದನೆಗಳು

    ಪ್ರತ್ಯುತ್ತರಅಳಿಸಿ
  3. ಪ್ರತಿಕ್ರಿಯೆಗಾಗಿ ಮಿತ್ರದ್ವಯರಿಗೆ ಧನ್ಯವಾದಗಳು.
    ರೂಪಾ ಅವರೇ, ಆ ಯುವಕನ ಬಗ್ಗೆ ನಾನು ಮೈಸೂರು ಜಿಲ್ಲಾ ಪೊಲೀಸ್ ಎಸ್.ಪಿ.ಯವರಿಗೆ ವಿ-ಅಂಚೆ ಕಳಿಸಿದೆ. ಪ್ರಸಿದ್ಧ ದಿನಪತ್ರಿಕೆಯೊಂದು ತದನಂತರ ನನ್ನ ಪತ್ರ ಪ್ರಕಟಿಸಿತು. ಈ ಎಲ್ಲ ಪ್ರಯತ್ನಗಳ ಪರಿಣಾಮ ಆ ಯುವಕ ಈಗ ಪಾರಾಗಿರುತ್ತಾನೆಂದು ನನ್ನ ನಂಬಿಕೆ. ತಿಳಿದುಕೊಳ್ಳಲು ಯತ್ನಿಸುತ್ತಿದ್ದೇನೆ. ನಿಮ್ಮ ಕಾಳಜಿಯನ್ನು ನಾನು ಮೆಚ್ಚಿದೆ.

    ಪ್ರತ್ಯುತ್ತರಅಳಿಸಿ
  4. ಸರ್,
    ಈ ಇಬ್ಬರು ಕನ್ನಡಿಗರಿಗೆ ಪ್ರಶಸ್ತಿ ಬಂದಿರುವುದು ನಮಗೆಲ್ಲ ಹೆಮ್ಮೆ. ಈ ಸಂಧರ್ಭದಲ್ಲಿ ಏಕೋ ಸೌಂಧರ್ಯ ನೆನಪಾಗುತ್ತಾರೆ.

    ಪ್ರತ್ಯುತ್ತರಅಳಿಸಿ
  5. ಹೌದು ಡಿ.ಜಿ.ಎಂ. ಅವರೇ, ಬದುಕಿದ್ದರೆ ಅವರು ಖಂಡಿತ ಒಂದು ದಿನ ’ಉತ್ತಮ ನಟಿ’ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗುತ್ತಿದ್ದರು.

    ಪ್ರತ್ಯುತ್ತರಅಳಿಸಿ