ಬುಧವಾರ, ಸೆಪ್ಟೆಂಬರ್ 30, 2009

ಮೆಣಸಪ್ಪ ಚಟ್ಟು!

ಮಲೆನಾಡಿನ ಕಡೆ ಒಂದು ಗಾದೆ ಇದೆ. ’ಕಲ್ಲಪ್ಪ ಗುಂಡಪ್ಪರ ನಡುವೆ ಮೆಣಸಪ್ಪ ಚಟ್ಟು!’ ಅಂತ. ಕೆಳಗೆ ರುಬ್ಬುವ ಕಲ್ಲು, ಮೇಲೆ ರುಬ್ಬುಗುಂಡು, ಮಧ್ಯೆ ಸಿಕ್ಕಿಬಿದ್ದ ಮೆಣಸಿನಕಾಯಿಯ ಅವಸ್ಥೆ ಬಜ್ಜಿ! ಹಾಗಾಗಿದೆ ಸರ್ಕಾರ ಮತ್ತು ಸರ್ಕಾರಿ ವೈದ್ಯರ ಸಂಘರ್ಷದ ನಡುವೆ ಸಿಕ್ಕಿಬಿದ್ದಿರುವ ಬಡ ರೋಗಿಯ ಗತಿ!

ಶೇಕಡಾ ೨೦ಕ್ಕಿಂತ ಹೆಚ್ಚು ಸಂಬಳ ಏರಿಕೆ ಮಾಡೆನೆಂದು ಸರ್ಕಾರವು ಕಲ್ಲಿನಂತೆ ಗಟ್ಟಿಯಾಗಿ ಕುಳಿತಿದ್ದರೆ ವೈದ್ಯರು ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರ ಸಮಾನ ವೇತನವೇ ಬೇಕೆಂದು ಹಠಹಿಡಿದು ರಾಜೀನಾಮೆ ಒಗಾಯಿಸುವ ಮೂಲಕ ಗುಂಡಾಗಿ ಸರ್ಕಾರವನ್ನು ರುಬ್ಬುತ್ತಿದ್ದಾರೆ! ಕಲ್ಲು ಮತ್ತು ಗುಂಡಿನ ಮಧ್ಯೆ ಸಿಕ್ಕಿಬಿದ್ದು ರುಬ್ಬಿಸಿಕೊಳ್ಳುತ್ತಿರುವವನು ಮಾತ್ರ ಬಡ ರೋಗಿ!

ತಾರತಮ್ಯರಹಿತ ವೇತನ ಕೊಡಬೇಕೆಂಬ ಪ್ರಜ್ಞೆ ಸರ್ಕಾರಕ್ಕೂ ಇಲ್ಲ, ವೇತನವನ್ನು ಗುರಿಯಾಗಿಸಿಕೊಂಡು ಬಡ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡಬಾರದೆಂಬ ಕರ್ತವ್ಯಪ್ರಜ್ಞೆ ಸರ್ಕಾರಿ ವೈದ್ಯರಿಗೂ ಇಲ್ಲ! ಪರಿಣಾಮ ಬಡ ರೋಗಿಯ ಅವಸ್ಥೆಯನ್ನು ಕೇಳುವವರಿಲ್ಲ!

ವೈದ್ಯರು ಲಕ್ಷಗಟ್ಟಲೆ ಖರ್ಚುಮಾಡಿ ಡಿಗ್ರಿ ಸಂಪಾದಿಸಿರಬಹುದು, ಆದರೆ ಸರ್ಕಾರ ಕೂಡ ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಗೂ ಪ್ರಜೆಗಳ ತೆರಿಗೆ ಹಣವನ್ನು ಲಕ್ಷದ ಲೆಕ್ಕದಲ್ಲೇ ಖರ್ಚುಮಾಡಿರುತ್ತದೆಂಬುದನ್ನು ವೈದ್ಯರು ಮರೆಯಬಾರದು. ವೈದ್ಯಕೀಯ ವಿದ್ಯಾರ್ಥಿಗಳು ತೆತ್ತ ಕ್ಯಾಪಿಟೇಷನ್ ಶುಲ್ಕ ಖಾಸಗಿ ಮೆಡಿಕಲ್ ಕಾಲೇಜುಗಳ ಮಾಲೀಕರುಗಳ ಕಿಸೆ ಸೇರಿರುತ್ತದೆಯೇ ಹೊರತು ಸರ್ಕಾರಕ್ಕಾಗಲೀ ಜನರಿಗಾಗಲೀ ಸಂದಿರುವುದಿಲ್ಲ. ಮೇಲಾಗಿ, ಜನರ ಸೇವೆಗೆಂದು ಪ್ರಮಾಣಮಾಡಿ ಅವರು ವೈದ್ಯರಾಗಿರುತ್ತಾರೆ. ಹೀಗಿರುವಾಗ ಅವರು ಬಡ ರೋಗಿಗಳಿಗೆ ತೊಂದರೆಮಾಡುವುದು ಯಾವ ದೃಷ್ಟಿಯಿಂದಲೂ ತರವಲ್ಲ. ಅದೇ ವೇಳೆ, ಅವಶ್ಯ ಸೇವೆಯಾದ ವೈದ್ಯಕೀಯ ಸೌಲಭ್ಯವು ಪ್ರಜೆಗಳಗೆ ಯಾವ ಚ್ಯುತಿಯೂ ಇಲ್ಲದೆ ನಿರಂತರ ದೊರೆಯುತ್ತಿರುವಂತೆ ನೋಡಿಕೊಳ್ಳಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯ.

ಎರಡೂ ಕಡೆಯವರೂ ತಂತಮ್ಮ ಆಡಳಿತಾತ್ಮಕ ಮತ್ತು ನೈತಿಕ ಹೊಣೆಗಾರಿಕೆಯನ್ನರಿತು ಮುನ್ನಡೆದರೆ ಸಮಸ್ಯೆಯ ಪರಿಹಾರ ಕಷ್ಟವೇನಲ್ಲ. ಉಭಯರೂ ಒಂದೊಂದಿಷ್ಟು ಬಿಗಿ ಸಡಿಲಿಸಬೇಕು ಅಷ್ಟೆ. ಬಡ ರೋಗಿಯನ್ನು ಹಿಂಸಿಸುವ ರಾಕ್ಷಸಬುದ್ಧಿ ಮಾತ್ರ ಯಾವುದೇ ಕಾರಣಕ್ಕೂ ಸರಿಯಲ್ಲ.

8 ಕಾಮೆಂಟ್‌ಗಳು:

  1. ಶಾಸ್ತ್ರಿಗಳೇ ನಿಮ್ಮ ಕೈ ಬೆರಳುಗಳಿಗೆ
    ಇದೋ ಸಲಾಂ

    ಪ್ರತ್ಯುತ್ತರಅಳಿಸಿ
  2. ಸ್ವಾಗತ, ರಾಘವೇಂದ್ರ ಶರ್ಮಾಜೀ ಉರುಫ್ ’ಶ್ರೀಶಂ’.
    ನಾನೊಬ್ಬ ಅಲ್ಪಂ.
    ನಿಮ್ಮ ಅಭಿಮಾನ ಘನಂ.
    ನಿಮಗೆ ಪ್ರತಿಸಲಾಂ.

    ಪ್ರತ್ಯುತ್ತರಅಳಿಸಿ
  3. ಆನ೦ದ ಸರ್
    ಡಾಕ್ಟರಗಳಿಗೆ ತಾವು ಹಾಕಿದ ದುಡ್ಡು ೬ ತಿ೦ಗಳಲ್ಲಿ ಬಡ್ಡಿ ಸಮೇತ ಬ೦ದರೆ ಸಾಕು . ಯಾರು ಸತ್ತರೆ ಅವರಿಗೆ ಏನೂ ? ಅವರು ಹಾಗು ಅವರ ಕುಟು೦ಬ ಹೇಗೂ ಇಲ್ಲಿ ತಲೆ ಹಾಕಿ ಮಲಗುವುದಿಲ್ಲ .
    ಬರಿ ಜನರ ಕಣ್ಣಿಗೆ ಮಣ್ಣು ಹಾಕಲು ಸರ್ಕಾರಿ ಡಾಕ್ಟರ ಎ೦ದು ಬರುತ್ತಾರೆ .
    ಬರಹ ಸಕಾಲಿಕವಾಗಿ ಇದೆ.
    ವ೦ದನೆಗಳು

    ಪ್ರತ್ಯುತ್ತರಅಳಿಸಿ
  4. ಕತ್ತಿಯಲಗಿನಂಥ ಮಾತು!
    ಹೃತ್ಪೂರ್ವಕ ಧನ್ಯವಾದ ರೂಪಾ ಅವರೇ.

    ಪ್ರತ್ಯುತ್ತರಅಳಿಸಿ
  5. ಸಾರ್,

    ಹೀಗೆಯೇ ಬರೆಯುತ್ತಿರಿ.

    ನಿಮ್ಮ ಗುಳಿಗೆ ದಿನಕ್ಕೊಂದು ಬೇಕೇ ಬೇಕು ಅಂತ ಅನ್ನಿಸಲಿಕ್ಕೆ ಆಗಿದೆ.
    ಓವರ್ ಡೋಸ್ ಆದ್ರೆ ಏನೂ ಅಪಾಯ ಇಲ್ಲಾ ತಾನೇ?

    ಪ್ರತ್ಯುತ್ತರಅಳಿಸಿ
  6. sariyaada guligeyanne kottiddeeri. estadaru mana maryade iddavrige matra inthaha neetigalu artha agodu. yaru sarakara madidaru muru bitte madtare
    laxmi machina
    reporter
    belthangady

    ಪ್ರತ್ಯುತ್ತರಅಳಿಸಿ
  7. ಲೋಹಿತ್ ಅವರೇ,
    (ಸರ್ಕಾರಿ) ಡಾಕ್ಟರರಿಗೇ ಈಗ ಓವರ್ ಡೋಸ್ ಗುಳಿಗೆ ಕೊಡಬೇಕಾಗಿದೆ!:-)
    ಲಕ್ಷ್ಮೀ ಅವರೇ,
    ಬ್ಲಾಗ್‌ಗೆ ಸ್ವಾಗತ. ಸರ್ಕಾರಗಳ ಬಣ್ಣ ಬಯಲಿಗೆಳೆಯುವವರು ನೀವು. (ಅಂದರೆ, ವರದಿಗಾರರು.)
    ಪೂರಕ ಪ್ರತಿಕ್ರಿಯೆಗಾಗಿ ಧನ್ಯವಾದ.

    ಪ್ರತ್ಯುತ್ತರಅಳಿಸಿ