ಶುಕ್ರವಾರ, ಸೆಪ್ಟೆಂಬರ್ 4, 2009

ಈ ಯುವಕನ ಜೀವ ಉಳಿಸಿ

ಈ ಕೆಳಗಿನ ಪತ್ರವನ್ನು ನಾನು ಎರಡನೇ ತಾರೀಖು ಬುಧವಾರದಂದು (ರಾಜಶೇಖರ ರೆಡ್ಡಿಯವರ ಹೆಲಿಕಾಪ್ಟರ್ ಕಣ್ಮರೆಯಾದ ದಿನ) ಐದು ಪ್ರಸಿದ್ಧ ಕನ್ನಡ ದಿನಪತ್ರಿಕೆಗಳಿಗೆ ವಾಚಕರ ವಿಭಾಗದಲ್ಲಿ ಪ್ರಕಟಣೆಗಾಗಿ ವಿ-ಅಂಚೆ ಮೂಲಕ ಕಳಿಸಿದೆ. ಯಾವ ಪತ್ರಿಕೆಯೂ ಅದನ್ನಿನ್ನೂ ಪ್ರಕಟಿಸಿಲ್ಲ. ಪತ್ರದಲ್ಲಿ ಉಲ್ಲೇಖಿಸಿರುವ ವಿಷಯದ ಸ್ವರೂಪ ಮತ್ತು ತುರ್ತು ಇವುಗಳ ಕಾರಣದಿಂದಾಗಿ ಆ ನನ್ನ ಪತ್ರವನ್ನು ಯಥಾವತ್ತಾಗಿ ಈ ಕೆಳಗೆ ಪ್ರಚುರಪಡಿಸುತ್ತಿದ್ದೇನೆ.

ವಿಳಂಬ ಮಾಡದೆ ನನ್ನ ಪತ್ರವನ್ನು ಪ್ರಕಟಿಸುವ ಮೂಲಕ ಉಲ್ಲೇಖಿತ ಯುವಕನಿಗೆ ಪತ್ರಿಕೆಗಳು ನೆರವಾಗುತ್ತವೆಂಬ ನಂಬಿಕೆಯಿಂದ ಈ ಎರಡು ದಿನ ನಾನು ಕಾದೆ. ಪ್ರಯೋಜನವಾಗಲಿಲ್ಲ. ಇದೀಗ, ಈ ಬರಹ ಓದಿದವರಲ್ಲಿ ಯಾರಾದರೂ ಉಲ್ಲೇಖಿತ ಸ್ಥಳದ/ಜಿಲ್ಲೆಯ ಸಮೀಪ ಇರುವವರಾದಲ್ಲಿ ಉಲ್ಲೇಖಿತ ಯುವಕನ ಉಳಿವಿಗಾಗಿ ಅವರಿಂದ ಏನಾದರೂ ಪ್ರಯತ್ನ ನಡೆದೀತೆಂಬ ಆಶಯದಿಂದ ಈ ವಿಷಯವನ್ನು ’ಗುಳಿಗೆ’ ಓದುಗರಾದ ತಮ್ಮೆಲ್ಲರ ಗಮನಕ್ಕೆ ತರುತ್ತಿದ್ದೇನೆ. ಸಂಬಂಧಿತ ಜಿಲ್ಲಾಡಳಿತವನ್ನು ಸಂಪರ್ಕಿಸಲು ನಾನೂ ಯತ್ನಿಸುತ್ತಿದ್ದೇನೆ.

ಈ ಯುವಕನ ಜೀವ ಉಳಿಸಿ
---------------------------

ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿರುವ ಮುಡುಕುತೊರೆ ಬೆಟ್ಟ ಒಂದು ಪ್ರಸಿದ್ಧ ಯಾತ್ರಾಸ್ಥಳ. ಬೆಟ್ಟದ ಮೇಲ್ಗಡೆ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದ್ದರೆ ಬೆಟ್ಟದ ಬುಡದಲ್ಲಿ ಕಾವೇರಿ ಹರಿಯುತ್ತಿದ್ದಾಳೆ. ಕಾವೇರಿ ನದಿಯ ದಡದಲ್ಲಿ ಆಗಸ್ಟ್ ೩೦ರಂದು ಒಂದು ಘೋರ ದೃಶ್ಯವನ್ನು ಕಂಡು ಮನನೊಂದು ನಾನು ಈ ಪತ್ರ ಬರೆಯುತ್ತಿದ್ದೇನೆ.

ಇಪ್ಪತ್ತೈದರ ಆಸುಪಾಸಿನ ವಯಸ್ಸಿನ ಯುವಕನೊಬ್ಬನನ್ನು ನಗ್ನಗೊಳಿಸಿ, ಅವನ ಕೈಗಳನ್ನು ಮತ್ತು ಕಾಲುಗಳನ್ನು ಕೋಳಗಳಿಂದ ಬಂಧಿಸಿ, ನದಿಗೆ ತಾಗಿಕೊಂಡಿರುವ ಇಳಿಜಾರು ಬಂಡೆಯೊಂದರಮೇಲೆ ಯಾರೋ ಅವನನ್ನು ಎಸೆದು ಹೋಗಿದ್ದಾರೆ! ಆರೋಗ್ಯವಂತನಾಗಿರುವ ಅವನು ಎಲ್ಲರಂತೆ ಸಮಚಿತ್ತನಾಗಿ ಮಾತನಾಡುತ್ತಾನೆ. ಬಿರುಬಿಸಿಲಿಗೆ ಸುಡುತ್ತಿರುವ ಬಂಡೆಯಮೇಲೆ ಚೆಲ್ಲಿರುವ ತನ್ನ ದೇಹವನ್ನು ಅಲ್ಲಿಂದ ಕದಲಿಸಲಾರದೆ ಆತ ಒದ್ದಾಡುತ್ತಿದ್ದಾನೆ. ಹೊರಳಿದರೆ ಬಂಡೆಯಿಂದ ಜಾರಿ ನದಿಯಪಾಲಾಗುವ ಅಪಾಯ ಬೇರೆ! ತನ್ನ ಕೋಳಗಳನ್ನು ಬಿಡಿಸುವಂತೆ ಆತ ನನ್ನನ್ನು ಅಂಗಲಾಚಿದ. ದಪ್ಪ ಕಬ್ಬಿಣದ ಕೋಳಗಳು ಬಿಡಿಸಲಸಾಧ್ಯವಾಗಿವೆ.

ಪಕ್ಕದಲ್ಲೇ ಅಂಗಡಿ ಇಟ್ಟುಕೊಂಡಿರುವ ವೃದ್ಧೆಯೋರ್ವಳನ್ನು ನಾನು ಆ ಯುವಕನ ಬಗ್ಗೆ ವಿಚಾರಿಸಿದಾಗ ಆಕೆ, ’ಬಿದ್ದಿರ್‍ಲಿ ಬಿಡಿ, ನದಿಗೆ ಬರೋರ್‍ಗೆ ಹೊಡೀತೀನಿ ಅಂತವ್ನೆ’, ಎಂದು ಉತ್ತರಿಸಿದಳು. ಆತ ಹಾಗನ್ನಲು ಕಾರಣ, ಅವಶ್ಯವಾದರೆ ಆತನಿಗೆ ಚಿಕಿತ್ಸೆ ಮತ್ತು ಮುಖ್ಯವಾಗಿ ಆತನಿಗೆ ಬಂಧನದ ರಾಕ್ಷಸೀ ಶಿಕ್ಷೆಯಿಂದ ಈ ಕೂಡಲೇ ಮುಕ್ತಿ ಇವುಗಳ ಬಗ್ಗೆ ನಾನು ಆ ವೃದ್ಧೆಯ ಬಳಿ ಎಷ್ಟೇ ಪ್ರತಿಪಾದಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಆತನನ್ನು ಈ ರೀತಿ ಎಸೆದುಹೋಗಿರುವವರು ಯಾರು ಎಂಬುದನ್ನೂ ಆಕೆ ಹೇಳಲಿಲ್ಲ. ಆಕೆ ಮತ್ತು ಓರ್ವ ಭಿಕ್ಷುಕಿ ಹೊರತು ಅಲ್ಲಿ ಇನ್ನಾರೂ ಇರಲಿಲ್ಲ.

ಒಂದು ಪಕ್ಕದಲ್ಲಿ ದೈವಸನ್ನಿಧಿ, ಇನ್ನೊಂದು ಪಕ್ಕದಲ್ಲಿ ಕಾವೇರಿ ನದಿ, ಮಧ್ಯೆ ಈ ಯುವಕ ಇಂಥ ಅಮಾನುಷ ಶಿಕ್ಷೆಗೊಳಗಾಗಿ ಬಿದ್ದಿದ್ದಾನೆ. ಅವನ ಪಕ್ಕದಲ್ಲೇ ಆಗಾಗ ಶ್ರೀಮಂತ ಜನ ಬಂದು ನದಿಯಾಚೆಯ ತಲಕಾಡು ಜಲಧಾಮಕ್ಕೆ ಮೋಜುಮಾಡಲು ಬೋಟ್ ಹತ್ತಿ ಹೋಗುತ್ತಾರೆ! ಎಂಥ ವೈರುದ್ಧ್ಯಗಳು!

ಈ ಕೂಡಲೇ ಆ ಗ್ರಾಮದ ಅಥವಾ ತಾಲ್ಲೂಕಿನ ಅಥವಾ ಜಿಲ್ಲೆಯ ಆಡಳಿತವು ಆ ಯುವಕನನ್ನು ಬಂಧಮುಕ್ತಗೊಳಿಸಬೇಕು. ಅವನಿಗೆ ಅವಶ್ಯ ಚಿಕಿತ್ಸೆ ಕೊಡಿಸಿ ಮುಂದಿನ ಜೀವನದ ವ್ಯವಸ್ಥೆ ಮಾಡಬೇಕು. ಆಸುಪಾಸಿನ ಸೇವಾ ಸಂಘಟನೆಗಳು ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು. ಇಷ್ಟಾಗಿ, ನದಿಗೆ ಬರುವವರನ್ನು ಆತ ಬೆದರಿಸುವುದರ ಹಿಂದೆ ಎಚ್ಚರಿಕೆಯ ಅಂಶವೋ ಸಮಾನತೆಯ ಕೂಗೋ ಇರಬಹುದು, ಯಾರಿಗೆ ಗೊತ್ತು!

- ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

9 ಕಾಮೆಂಟ್‌ಗಳು:

  1. ನಿಮ್ಹಾನ್ಸ್ ಗೆ ಅಥವಾ ಪೋಲಿಸ್‍ನವರಿಗೆ ವಿಷಯ ತಿಳಿಸಿದ್ದೀರಾ? ಬಹುಶಃ ಪೋಲಿಸ್‍ಗೆ ತಿಳಿಸಿದರೆ ಉಪಯುಕ್ತ, ಅವರು ಮುಂದಿನ ಕ್ರಮ ಕೈಗೊಂಡಾರು ಅಂತ ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ
  2. ಹೌದು ಜಯಲಕ್ಷ್ಮಿ ಅವರೇ, ಮೈಸೂರು ಜಿಲ್ಲಾ ಎಸ್.ಪಿ. ಅವರಿಗೆ ಈಗ್ಗೆ ಸ್ವಲ್ಪ ಮೊದಲು ವಿ-ಅಂಚೆ ಮೂಲಕ ತಿಳಿಸಿದ್ದೇನೆ.

    ಪ್ರತ್ಯುತ್ತರಅಳಿಸಿ
  3. ಛೇ ತುಂಬಾ ಅಮಾನುಷ, ಕಲ್ಪಿಸಲೂ ಆಗದ್ದು. ನಿಮ್ಮ ಮಾನವೀಯತೆಯನ್ನು ಮೆಚ್ಚುವೆ. ಏನೂ ಮಾಡಲಾಗದ ಪರಿಸ್ಥಿತಿಯ ನೆನೆದು ಬೇಸರವಾಗುತ್ತಿದೆ.

    ಪ್ರತ್ಯುತ್ತರಅಳಿಸಿ
  4. yellaroo avaravara chintheyalli muLugiruvaaga neevu heLida aa hudugana bagge gamana harisalu purusotthellide? haNada chinte, nelada chinte, adhikaara padeyuva matthu padedha adhikaarava uLisikoLLuva chinte, padhaviya chinte, heNNina chinte, votina chinte, transfer chinte, ration chinte, bele yerike chinte, heege naanaa chintegaLalli janathe muLugi hogide Shastrigale. neevu heLida aa saamaanya hudugana bagge kaNNu haayisuvavaraaru?

    ಪ್ರತ್ಯುತ್ತರಅಳಿಸಿ
  5. ತೇಜಸ್ವಿನಿ ಹೆಗಡೆ ಅವರೇ, ನಿಮ್ಮ ಕಳಕಳಿ ಮೆಚ್ಚುವಂಥದು.
    r ಅವರೇ, ನಿಮ್ಮ ವಿಶ್ಲೇಷಣೆ ಅದ್ಭುತವಾಗಿದೆ!
    ನನ್ನ ಅನುಭವದಲ್ಲಿ ಇಂಥ (ಅ)ಮಾನವೀಯ ಮಹತ್ವದ ಘಟನೆಗಳು ಹೇರಳವಾಗಿವೆ. (ಹೇಳಿ ಕೇಳಿ ನಾನು ಸದಾಕಾಲ ಜನರೊಡನೆ ಬೆರೆತು ಸಾಗುವ ಅಲೆಮಾರಿ!) ಆದರೆ ಆ ಘಟನೆಗಳನ್ನು ದಾಖಲಿಸಲು ಪುರುಸೊತ್ತಿಲ್ಲವಾಗಿದೆ. ಬಿಡುವಾದಾಗ ಕೆಲ ಅನುಭವಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುತ್ತೇನೆ.

    ಪ್ರತ್ಯುತ್ತರಅಳಿಸಿ
  6. I forwarded your mail to my media friends. They informed the local authorities and the police. The outcome is yet tobe known. Thanks for the care. But, I didn't understand why the old woman was so sarcastic! Hope for the best.
    Bedre Manjunath

    ಪ್ರತ್ಯುತ್ತರಅಳಿಸಿ
  7. ಶ್ಲಾಘನಾರ್ಹ ಕೆಲಸ ಮಾಡಿದ್ದೀರಿ ಮಂಜುನಾಥ್ ಅವರೇ. ನಾನೂ ಮೈಸೂರು ಜಿಲ್ಲಾ ಎಸ್.ಪಿ.ಯವರ ಕ್ರಮದ ನಿರೀಕ್ಷೆಯಲ್ಲಿದ್ದೇನೆ.

    ಪ್ರತ್ಯುತ್ತರಅಳಿಸಿ
  8. ನಮ್ಮ ಮುಖ್ಯಮಂತ್ರಿಗಳ ಚೀನಾ ಪ್ರವಾಸ. ಜೊತೆಯಲ್ಲಿ ಮಗ ರಾಘವೇಂದ್ರ ಅವನು ಈಗಷ್ಟೇ ಸಂಸದನಾದವನು. ಆಗಲೇ ವಿದೇಶ ಯಾತ್ರೆ ಜನಸಾಮಾನ್ಯರ ತೆರಿಗೆಯ ಹಣದಲ್ಲಿ. ಈ ಯಾತ್ರೆ ಯಾವ ಪುರುಷಾರ್ಥಕ್ಕೆ. ನಮ್ಮ ರಾಜ್ಯದಲ್ಲಿ ಬರ, ಹಂದಿ ಖಾಯಿಲೆ, ರೈತರ ಸಮಸ್ಯೆ, ವಿದ್ಯುತ್ ಸಮಸ್ಯೆ, ಸುಧಾಕರ್ ಅವರಂಥ ಸಚಿವರ ಕುಕೃತ್ಯಗಳು, ತಾವು ಅಧಿಕಾರ ಸ್ವೀಕರಿಸಿದಾಗ ನುಡಿದದ್ದಕ್ಕೂ ಈಗ ನಡೆಯುತ್ತಿರುವುದಕ್ಕೂ ಸಂಬಂಧವೇ ಇಲ್ಲದಂತೆ ಯಡಿಯೂರಪ್ಪನವರ ವರ್ತನೆ,ಯಾವ ರೀತಿಯಲ್ಲೂ ಅಭಿವೃದ್ಧಿ ಕಾಣುತ್ತಿಲ್ಲವಲ್ಲ. ಕೆರೆಕುಂಟೆಗಳು ಖಾಲಿ ಇವೆ. ಅರ್ಕಾವತಿ ಪಾದಯಾತ್ರೆಯ ನಾಟಕ ಜೊತೆಗೆ ಅಶ್ವಥ್, ಸುಬ್ಬಣ್ಣ, ಕಿಕ್ಕೇರಿ, ಮುದ್ದುಕೃಷ್ಣರ ಸಂಗೀತ ಬೇರೆ. ನಿಜಕ್ಕೂ ಈ ಪಾದಯಾತ್ರೆಯ ಅಗತ್ಯವಿತ್ತೇ? ಅಧಿಕಾರದಲ್ಲಿ ಕುಳಿತಿರುವ ಬಿಜೆಪಿಗೆ ಅರ್ಕಾವತಿ ಉಳಿಸಲು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸಬಹುದಿತ್ತಲ್ಲಾ? ಪಾದಯಾತ್ರೆ ಬೇಕಿತ್ತೇ? ಅರ್ಕಾವತಿ ಹರಿಯುವ ದಾರಿಯುದ್ದಕ್ಕೂ ನಡೆಸಿದ ನೆಲಗಳ್ಳತನ ಮಾಡಿದವರ ಪಟ್ಟಿ ಸರ್ಕಾರಕ್ಕೆ ಗೊತ್ತಿತಿದೆಯಲ್ಲವೇ ಅವರಿಂದ ತೆರವು ಮಾಡಿಸಿ ನದಿಯ ಹರಿವಿಗೆ ದಾರಿ ಮಾಡಬಹುದಲ್ಲವೇ? ಇನ್ನು ತಿಪ್ಪಗೊಂಡನಹಳ್ಳಿ ಜಲಾಶಯದ ಆಸುಪಾಸಿನಲ್ಲಿನ ಅನೇಕ ಫ್ಲಾಟ್ಸ್, ಇತರ ಸಂಬಂಧಿ ಯೋಜನೆಗಳಿಗೆ ಲೈಸೆನ್ಸ್ ಕೊಟ್ಟವರಾರು? ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಈಗ ಅರ್ಕಾವತಿಗಾಗಿ ಮೊಸಳೆ ಕಣ್ಣೀರು ಯಾಕೆ? ಶಾಸ್ತ್ರಿಗಳೇ ಈ ಕುರಿತು ನಿಮ್ಮ ಗುಳಿಗೆ ಮೂಡಿಬರಲಿ. ಮತ್ತೊಂದು ವಿಷಯ - ರಾಜ್ಯದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ ಹೀಗಿರುವಾಗ ಸರ್ಕಾರ ಕೊಡುವ ವಾರ್ಷಿಕ ಗುಬ್ಷಿ ವೀರಣ್ಣ, ಶಿಶುನಾಳ ಷರೀಫ, ಜಕ್ಕಣ್ಣಾಚಾರಿ ಇತ್ಯಾದಿ ಪ್ರಶಸ್ತಿಗಳ ಹಣದ ಮೊತ್ತ ಬೃಹತ್ ಹೆಚ್ಚಳ ಸಮಂಜಸವೇ?

    ಪ್ರತ್ಯುತ್ತರಅಳಿಸಿ
  9. ಭಾರೀ ಭೋಜನ (ಭೂರಿ ಭೋಜನ) ತಯಾರಿಸಲು ಬೇಕಾದಷ್ಟು ಸಾಮಗ್ರಿ ನೀಡಿದ್ದೀರಿ! ನಿಮ್ಮ ವಿಶ್ವಾಸ ಮತ್ತು ಸಾಮಾಜಿಕ ಕಾಳಜಿ ದೊಡ್ಡದು. ನಿಮ್ಮ ಲಿಸ್ಟ್‌ಗೆ ಹಣಕೋಣದ ಕಥೆಯನ್ನೂ ಸೇರಿಸಬಹುದು. ಬಿಡುವಾದಾಗ ಖಂಡಿತ ಒಂದೊಂದಾಗಿ ಪದಾರ್ಥ ತಯಾರಿಸುತ್ತೇನೆ. (ನನಗೆ ಬಿಡುವಿನದೇ ಸಮಸ್ಯೆ!)
    ಧನ್ಯವಾದ r ಅವರೇ.

    ಪ್ರತ್ಯುತ್ತರಅಳಿಸಿ