ಬುಧವಾರ, ಅಕ್ಟೋಬರ್ 21, 2009

ಪಾದದೆಚ್ಚರ - ಪದದೆಚ್ಚರ (ಲೇಖನ)

(ಈ ಬ್ಲಾಗ್‌ನ ಕೊನೆಯ ಕಾಣಿಕೆಯಾಗಿ ಈ ದಿನ ನಾಲ್ಕು ಬರಹಗಳನ್ನು ಪ್ರಕಟಿಸಿದ್ದೇನೆ. ಪುರಸತ್ತಿನಲ್ಲಿ ನಾಲ್ಕನ್ನೂ ಓದಿ. ನನಗೆ ಅಪ್ಪಣೆ ನೀಡಿ. ನಮಸ್ಕಾರ.)

ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ ಹಾಯಿಸದೆ ನೇರ ಎದುರುಗಡೆ ನೋಡುತ್ತಲೇ ನಡೆಯುವುದು ಪದ್ಧತಿಯಾಗಿತ್ತು. ಕೆಳಗೆ ನೋಡಲು ತಲೆತಗ್ಗಿಸುವುದು ರಾಜನ ಘನತೆಗೆ ಕುಂದೆಂದು ಭಾವಿಸಲಾಗುತ್ತಿತ್ತು. ಆಸ್ಥಾನದಲ್ಲಿ ನೆರೆದ ಪ್ರಜೆಗಳೆದುರು ರಾಜನೆಲ್ಲಾದರೂ ಅವನತಮುಖಿಯಾಗುವುದೇ?

ಹಾಗೆ ರಾಜನು ನೇರ ನೋಡುತ್ತ ನಡೆಯುತ್ತಿದ್ದಾಗ, ಅವನ ಕಾಲಿನ ಬುಡದಲ್ಲಿ ಮೆಟ್ಟಿಲು ಎದುರಾಯಿತೆಂದರೆ ಆಗ ಪಕ್ಕದ ಆ ಸೇವಕ, ’ಪಾದದೆಚ್ಚರ’, ಎಂದೊಮ್ಮೆ ಧ್ವನಿ ಹೊರಡಿಸಿ ದೊರೆಯನ್ನು ಎಚ್ಚರಿಸುತ್ತಿದ್ದ. ಆಗ ದೊರೆಯು ಕೆಳಗೆ ನೋಡದೆಯೇ ಕಾಲಿನಿಂದಲೇ ನೆಲ ಸವರುತ್ತ ಮೆಟ್ಟಿಲನ್ನು ಗುರುತಿಸಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡುತ್ತಿದ್ದ. ಇದು ಪಾದದೆಚ್ಚರ.

ಈಚೆಗೆ ಕವಿಗೋಷ್ಠಿಯೊಂದರಲ್ಲಿ ಉದ್ಘಾಟನಾ ಭಾಷಣ ಮಾಡುತ್ತ ಕವಿ ನಿಸಾರ್ ಅಹಮದ್ ಅವರು ಬಾಯಿತಪ್ಪಿ, ’ವೈವಿಧ್ಯತೆ’ ಎಂಬ ತಪ್ಪು ಪದಪ್ರಯೋಗ ಮಾಡಿದರು. ಆದರೆ, ತತ್‌ಕ್ಷಣವೇ, ’ವೈವಿಧ್ಯ’, ಎಂದು ತಾವೇ ಅದನ್ನು ತಿದ್ದುವ ಎಚ್ಚರ ಮೆರೆದರು. ಇದು ಪದದೆಚ್ಚರ. ನನ್ನ ಈ ಬರಹದ ವಸ್ತು.

’ವೈವಿಧ್ಯತೆ’ ಎಂಬ ತಪ್ಪು ಪದಪ್ರಯೋಗವನ್ನು ಬಹುತೇಕ ಎಲ್ಲರೂ ಮಾಡುತ್ತೇವೆ. ಸಾಹಿತಿಗಳೂ ಹೊರತಲ್ಲ. ’ವೈವಿಧ್ಯ, ಕಾಠಿಣ್ಯ, ಪಾವಿತ್ರ್ಯ, ಅನುಕೂಲ’ ಮುಂತಾದ ನಾಮಪದಗಳನ್ನು ವಿರೂಪಗೊಳಿಸಿ ’ವೈವಿಧ್ಯತೆ, ಕಠಿಣತೆ, ಪವಿತ್ರತೆ, ಅನುಕೂಲತೆ’ ಎಂಬ ತಪ್ಪು ಪದಗಳನ್ನು ಸೃಷ್ಟಿಸಿರುವ ನಾವು ’ಉಪಯುಕ್ತ, ಸಾಂದರ್ಭಿಕ, ಖಿನ್ನ’ ಮೊದಲಾದ ಗುಣವಾಚಕಗಳನ್ನು ’ಉಪಯುಕ್ತತೆ, ಸಾಂದರ್ಭಿಕತೆ, ಖಿನ್ನತೆ’ ಮೊದಲಾಗಿ ತಪ್ಪು ರೀತಿಯಲ್ಲಿ ನಾಮವಾಚಕ ಮಾಡಿ ಬಳಸುತ್ತೇವೆ. ಮೇಲೆ ಉಲ್ಲೇಖಿಸಿರುವ ಕವಿಗೋಷ್ಠಿಯಲ್ಲಿಯೇ, ಜನಪ್ರಿಯ ಕವಿಯೋರ್ವರು ತಮ್ಮ ಕವನದಲ್ಲಿ ’ತಲ್ಲೀನತೆ’ ತೋರಿದರೆ ಕವಯಿತ್ರಿಯೋರ್ವರು ’ಸಹೃದಯತೆ’ ಮೆರೆದರು!

ನಾಮವಾಚಕ ಮತ್ತು ಗುಣವಾಚಕಗಳಿಗೆ ’ತೆ’ ಅಕ್ಷರ ಬೆಸೆದು ನಾಮಪದ ಮಾಡಿಕೊಂಡು ಬಳಸುವ ಪರಿಪಾಠ ಕನ್ನಡದಲ್ಲಿ ಎಷ್ಟು ತೀವ್ರವಾಗಿ ಮತ್ತು ವ್ಯಾಪಕವಾಗಿ ಬೆಳೆದುಬಂದಿದೆಯೆಂದರೆ, ’ತೆ’(ಪೆ) ಹಚ್ಚಿದ ಇಂಥ ಶಬ್ದಗಳೆಲ್ಲವನ್ನೂ ನಿಘಂಟಿಗೆ ಸೇರಿಸಿಬಿಡುವುದೇ ಉತ್ತಮವೇನೋ ಅನ್ನಿಸುತ್ತಿದೆ!

ಏಕೀ 'ಕರಣ'?
--------------
’ಕರಣ’ ಎಂದರೆ ’ಕೆಲಸ’ ಎಂದರ್ಥವಷ್ಟೆ. ’ಮಾಡುವುದು’ ಎಂಬ ಅರ್ಥವನ್ನೂ ಆರೋಪಿಸೋಣ. ’ಏಕೀಕರಣ’ ಎಂಬ ಶಬ್ದವನ್ನು ಒಪ್ಪೋಣ. ಏಕೆಂದರೆ ಆ ಶಬ್ದವು ಕನ್ನಡ ನಿಘಂಟಿಗೆ ಪ್ರವೇಶ ಪಡೆದಿದೆ. ’ಸಮೀಕರಿಸು’ ಎಂಬ ಕ್ರಿಯಾಪದವನ್ನು ’ಸಮೀಕರಣ’ ಎಂದು ನಾಮವಾಚಕ ಮಾಡಿ ಬಳಸುವುದನ್ನೂ ಸಹಿಸಿಕೊಳ್ಳೋಣ. ಆದರೆ, ’ಸಮಾಜೀಕರಣ, ಉನ್ನತೀಕರಣ, ರಾಜಕೀಕರಣ(!), ವೈಭವೀಕರಣ, ಕನ್ನಡೀಕರಣ’ ಹೀಗೆ ಕಂಡಕಂಡ ಶಬ್ದಗಳಿಗೆಲ್ಲ ’ಕರಣ’ ಹಚ್ಚಿ ಕುಲಗೆಡಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವೆ? ಜಿ.ವೆಂಕಟಸುಬ್ಬಯ್ಯ ಅವರು ಸಮಾರಂಭವೊಂದರಲ್ಲಿ ಈ ’ಕ-ರಣ’ವನ್ನು ಎತ್ತಿ ಆಡಿ ಬೇಸರಪಟ್ಟಿದ್ದನ್ನು ನಾನು ಕೇಳಿದ್ದೇನೆ.

’ರಾಧಳಿಗೆ, ಗಂಗಳಿಗೆ, ಶುಭಳಿಗೆ, ಶ್ವೇತಳಿಗೆ’ ಎಂಬ ಪದಪ್ರಯೋಗಗಳಿಂದು ಸಾಮಾನ್ಯವಾಗಿಬಿಟ್ಟಿವೆ. ಕಥೆ-ಕಾದಂಬರಿ ಬರೆಯುವವರೂ ಈ ತಪ್ಪು ಪ್ರಯೋಗವನ್ನು ಒಪ್ಪವಾಗಿ ಮಾಡುತ್ತಿದ್ದಾರೆ! ’ರಾಧಾ’ ಅಥವಾ ’ರಾಧೆ’ ಎಂಬುದು ಸರಿಯಾದ ರೂಪ ಎಂಬುದು ಎಷ್ಟೋ ಲೇಖಕರಿಗೇ ಗೊತ್ತಿಲ್ಲ. ಹೆಣ್ಣುಮಕ್ಕಳ ಹೆಸರುಗಳನ್ನು ಹೀಗೆ ವಿರೂಪಗೊಳಿಸುವವರಮೇಲೆ ಶಿವರಾಮ ಕಾರಂತರಿಗೆ ಅಗಾಧ ಸಿಟ್ಟಿತ್ತು.

ಪದಗಳನ್ನು ನಮಗೆ ಬೇಕಾದಂತೆ ಮಾರ್ಪಡಿಸಿಕೊಂಡು ಬಳಸುತ್ತಿರುವ ’ಅನುಕೂಲಸಿಂಧು’ವಿನ ಉದಾಹರಣೆಗಳು ಈ ಎಲ್ಲ ಅಪಶಬ್ದಗಳು. ಪದಶುದ್ಧಿಗೆ ಇಲ್ಲಿ ಬೆಲೆಯಿಲ್ಲದಿರುವುದೇ ಬೇಸರದ ಸಂಗತಿ. ಇಷ್ಟೇ ಬೇಸರದ ಇನ್ನೊಂದು ಸಂಗತಿಯೆಂದರೆ, ಇಂಗ್ಲಿಷ್ ನುಡಿಗಟ್ಟನ್ನು ಯಥಾಕ್ರಮದಲ್ಲಿ ಕನ್ನಡಕ್ಕೆ ಅನುವಾದಿಸಿ ನುಡಿಯುವ (ಅ)ಕ್ರಮ. ’ಗವರ್ನ್‌ಮೆಂಟ್ ಗರ್ಲ್ಸ್ ಹೈಸ್ಕೂಲ್’ಅನ್ನು ಅದೇ ಕ್ರಮದಲ್ಲಿ ನಾವು ’ಸರ್ಕಾರಿ ಬಾಲಕಿಯರ ಪ್ರೌಢಶಾಲೆ’ ಮಾಡುತ್ತೇವೆ! ಅದು ’ಬಾಲಕಿಯರ ಸರ್ಕಾರಿ ಪ್ರೌಢಶಾಲೆ’ ಆಗಬೇಕೆಂಬುದು ನಮ್ಮ ಅರಿವಿಗೇ ಬರುವುದಿಲ್ಲ. ’ಸರ್ಕಾರಿ ಬಾಲಕಿಯರು, ಖಾಸಗಿ ಬಾಲಕಿಯರು’ ಎಂದೇನಾದರೂ ಇದ್ದಾರೆಯೆ? ಪದಕ್ರಮದ ಎಚ್ಚರವಿಲ್ಲದಿರುವುದರಿಂದ ಇಂಥ ’ಚೋದ್ಯಸಂಭವ’ ಆಗುತ್ತದೆ. ಬೆಂಗಳೂರಿನಲ್ಲಿ ನಡೆದ (’ಮನೆಯಂಗಳದಲ್ಲಿ ಮಾತುಕತೆ’) ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಬಂದಿದ್ದ ’ಜಿ.ವೆಂ.’ ಅವರು ಈ ಬಗ್ಗೆ ಆಕ್ಷೇಪವೆತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂಗ್ಲಿಷ್‌ನಿಂದ ಕನ್ನಡಕ್ಕೆ ಯಥಾಕ್ರಮದಲ್ಲಿ ಅನುವಾದಿಸಿದಾಗ ಉಂಟಾಗುವ ಇಂಥ ಚೋದ್ಯಕ್ಕೆ ನಮ್ಮ ಜಾಹಿರಾತುಗಳು (’ಜಾಹೀರಾತು’ ಅಲ್ಲ) ಉತ್ತಮ ಉದಾಹರಣೆಗಳು:

’ಬೇಕು ಒಂದು ಚೆಂಡು ಆಡಲು?’
(’ವಾಂಟ್ ಎ ಬಾಲ್ ಟು ಪ್ಲೇ?’)

’ಬೇಡಿ ಚಿಂತೆ ಹೇಗೆ ಹೊಂದುವುದು ಒಂದು ಮನೆ.’
(’ಡೋಂಟ್ ವರಿ ಹೌ ಟು ಓನ್ ಎ ಹೌಸ್.’)

’ಹೊಳಪಿಗಾಗಿ ನಿಮ್ಮ ಹಲ್ಲುಗಳ.’
(’ಫಾರ್ ದ ಷೈನ್ ಆಫ್ ಯುವರ್ ಟೀತ್.’)

’ಪದಕ್ರಮದೆಚ್ಚರ’ ಒತ್ತಟ್ಟಿಗಿರಲಿ, ಸರಿಯಾಗಿ ಕನ್ನಡ ಭಾಷಾಜ್ಞಾನವೂ ಇಲ್ಲದಿರುವವರು ನಿಘಂಟನ್ನು ಕೈಯಲ್ಲಿ ಹಿಡಿದು ಅನುವಾದಿಸಿದಾಗ ಆಗುವ ಅಪಲಾಪಗಳು ಇವು.

ಅಪಶಬ್ದ
--------
ಇನ್ನು ಅಪಶಬ್ದಗಳ ಅಟಾಟೋಪವೋ, ಕನ್ನಡದಲ್ಲಿ ಭರ್ಜರಿಯಾಗಿದೆ!

’ಆಮರಣಾಂತ, ಆಜೀವ ಸದಸ್ಯ, ಆಯೋಗ, ಅಭಿಧಾನ, ವಿಧ್ಯುಕ್ತ, ಕೋಟ್ಯಧೀಶ, ಜನಾರ್ದನ, ಪ್ರಶಸ್ತಿ ಪ್ರದಾನ, ಪ್ರಸಾಧನ, ಉಪಾಹಾರ, ಶ್ರುತಿ, ಚಿಹ್ನೆ,’ ಈ ಶಬ್ದಗಳನ್ನು ಕ್ರಮವಾಗಿ ’ಅಮರಣಾಂತ, ಅಜೀವ ಸದಸ್ಯ, ಅಯೋಗ, ಅಭಿದಾನ, ವಿದ್ಯುಕ್ತ, ಕೋಟ್ಯಾಧೀಶ, ಜನಾರ್ಧನ, ಪ್ರಶಸ್ತಿ ಪ್ರಧಾನ, ಪ್ರಸಾದನ, ಉಪಹಾರ, ಶೃತಿ, ಚಿನ್ಹೆ,’ ಎಂದು ಬರೆಯುವ ಕನ್ನಡ’ಬ್ರಮ್ಹ’ರನ್ನು ನಾವು ಎಲ್ಲೆಂದರಲ್ಲಿ ಕಾಣಬಲ್ಲೆವು! ’ಟೆಲಿವಿಷನ್ ವಾರ್ತೆ’ಯ ಕಚೇರಿಗಳಲ್ಲಂತೂ ಇಂಥ ಬ್ರಹ್ಮರೇ ತುಂಬಿಕೊಂಡಿದ್ದಾರೆ!

ಪದದೆಚ್ಚರ ಮಾಯವಾದ ಪರಿಣಾಮ ಈಚೆಗೆ ವಿಧಾನಸಭೆಯಲ್ಲಿ ಸಚಿವರೋರ್ವರು ’ಮಧುಮೇಹ’ ಎನ್ನುವ ಬದಲು ’ಮಧುಮೋಹ’ ಎಂದರು! ಇನ್ನೋರ್ವ ’ಮಂತ್ರಿಮುಖ್ಯ’ರು ’ಮಾನವಸಂಪನ್ಮೂಲ’ವನ್ನು ’ಮಾನವಜಲಸಂಪನ್ಮೂಲ’ ಮಾಡಿಬಿಟ್ಟಿದ್ದರು! ಪವಾಡಪುರುಷರು!

ಎಚ್ಚರ ತಪ್ಪುವುದು ತಪ್ಪಲ್ಲ. ಎಳ್ಚತ್ತು ತಿದ್ದಿಕೊಳ್ಳದಿದ್ದರೆ ಅದು ತಪ್ಪು. ತಿದ್ದಿಕೊಳ್ಳುವುದು ಸುಲಭದ ಮಾತಲ್ಲವೆಂಬುದನ್ನು ನಾನು ಒಪ್ಪುತ್ತೇನೆ. ಸಂಸ್ಕೃತದಿಂದ ಇಂಗ್ಲಿಷಿನವರೆಗೆ ಹಲವು ಭಾಷೆಗಳ ಸೇವನೆಯಿಂದಾಗಿ ಮತ್ತು ’ಬಳಕೆಗಾರ’ರ ಅನುಕೂಲಕ್ಕಾಗಿ ಕನ್ನಡದಲ್ಲಿ ಎಷ್ಟೋ ಅಶುದ್ಧ ಪದಗಳು ಬೇರು ಭದ್ರ ಮಾಡಿಕೊಂಡುಬಿಟ್ಟಿವೆ. ಇರಲಿ. ಆದರೆ, ತೀರಾ ಅಸಹ್ಯ ರೀತಿಯಲ್ಲಿ ನಾವು ಪದದೆಚ್ಚರ ತಪ್ಪಬಾರದಲ್ಲಾ! ಆಲಿಸುವವರಿಗೆ ನಮ್ಮ ಅಪಶಬ್ದಗಳು ಕರ್ಣಕಠೋರವೆನಿಸಬಾರದಲ್ಲಾ!

ಬಜೆ ಗೋವಿಂದ (ಲಘುಬರಹ)

ಗೋವಿಂದನ ಉಚ್ಚಾರ ಬಲು ಸ್ಪಷ್ಟ.

ನುಡಿದರೆ ಸ್ಫಟಿಕದ ಶಲಾಕೆ.

ಹುಟ್ಟಿದ ಮಗುವಿಗೆ ತಾಯಿಯು ಸತತ ಹತ್ತು ದಿನ ಬಜೆ-ಬೆಣ್ಣೆ ತಿನ್ನಿಸಿದ್ದಳು. ಬಜೆಯನ್ನು ಬೆಣ್ಣೆಯಲ್ಲಿ ಎರಡು ಸುತ್ತು ತೇಯ್ದು ಮಗುವಿನ ಬಾಯಿಗಿಟ್ಟಳೆಂದರೆ ಮಗು ಬಾಯಿಚಪ್ಪರಿಸಿ ಮೆಲ್ಲುತ್ತಿತ್ತು. ಆಗ ಆ ತಾಯಿಗೆ ಆ ಆನಂದತುಂದಿಲ ಮಗುವಿನ ಮೆಲ್ಲುಸಿರೇ ಸವಿಗಾನ. ಅಂದು ತಿಂದ ಬಜೆ-ಬೆಣ್ಣೆಯ ಫಲವೇ ಗೋವಿಂದನ ಇಂದಿನ ನಾಲಗೆಯ ನಯ.

ಮಗುವಿಗೆ ಬೆಣ್ಣೆಯ ಸಹವಾಸ ಹತ್ತೇ ದಿನಕ್ಕೇ ಮುಗಿದರೂ ಬಜೆಯ ಸಾಂಗತ್ಯ ಮಾತ್ರ ಮುಂದುವರಿದಿತ್ತು. ಅಮ್ಮನ ಎದೆಹಾಲಿನಲ್ಲಿ ತೇಯ್ದ ಬಜೆಯ ಸೇವನೆ ಆಗತೊಡಗಿತು. ಮುಂದಿನ ದಿನಗಳಲ್ಲಿ ಇದೇ ಬಜೆಯ ಹಿರಿತನದಲ್ಲಿ ಸುತ್ತುಖಾರದ ಸೇವೆ ನಡೆಯಿತು. ಎರಡು ಸುತ್ತು ತೇಯ್ದ ಬಜೆಯ ಜೊತೆಗೆ ನಂಜು ನಿವಾರಣೆಗಾಗಿ ಅರಿಶಿನ ಕೊಂಬು, ಶೀತ-ಗಂಟಲುಕೆರೆತ ನಿವಾರಣೆಗಾಗಿ ಕಾಳುಮೆಣಸು, ಇನ್ನೂ ಹೆಚ್ಚಿನ ಶೀತ ನಿವಾರಣೆಗಾಗಿ ಹಿಪ್ಪಲಿ ಬೇರು, ರಕ್ತವೃದ್ಧಿಗಾಗಿ ಸುಗಂಧಿ-ಅಶ್ವಗಂಧಿ, ವಾಯುನಿವಾರಕವಾಗಿ ಶುಂಠಿ, ಹೊಟ್ಟೆನೋವು-ಹೊಟ್ಟೆಹುಳು ನಿವಾರಣೆಗಾಗಿ ಕಟುಕ್ರಾಣಿ, ತಂಪು ನೀಡಲು ಹಾಗೂ ಕಫ ನೀರೊಡೆಯಲು ಜ್ಯೇಷ್ಠಮಧು ಮತ್ತು ತಂಪಾಗಿ ನಿದ್ದೆಹತ್ತಲು ಜಾಕಾಯಿ ಇವುಗಳನ್ನೂ ಎರಡೆರಡು ಸುತ್ತು ತೇಯ್ದು ಪ್ರತಿ ಗುರುವಾರ ಮತ್ತು ಸೋಮವಾರ ಮಗುವಿಗೆ ನೆಕ್ಕಿಸಲಾಗುತ್ತಿತ್ತು. ಮಗು ಕಂಪಾಗಿ ನೆಕ್ಕಿ, ಇಂಪಾಗಿ ಒಂದು ಅಳು ಅತ್ತು, ಸೊಂಪಾಗಿ ನಿದ್ದೆಮಾಡುತ್ತಿತ್ತು. ಹೀಗೆ ಅದಕ್ಕೆ ಸುತ್ತುಖಾರದ ಸೇವೆಯು, ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಐದಲ್ಲ, ಆರಲ್ಲ, ಕ್ಷಮಿಸಿ, ಆರು ತಿಂಗಳು ನಡೆಯಿತು.

ಎಂದೇ ಈಗ ಎಮ್ಮ ಗೋವಿಂದಗೆ ಇಪ್ಪತ್ತಾರರ ಹರಯದಲ್ಲೂ ನಂಜಿಲ್ಲ, ಶೀತವಿಲ್ಲ, ವಾಯು ಉಪದ್ರವವಿಲ್ಲ, ಉಷ್ಣವಿಲ್ಲ, ಕಫವಿಲ್ಲ, ಹೊಟ್ಟೆಯಲ್ಲಿ ನೋವಿಲ್ಲ, ಹುಳುವಿಲ್ಲ, ಅಪ್ಪ ಕಟ್ಟಿಸಿರುವ ’ಸ್ಲೋಗನ್ ವಿಲ್ಲಾ’ ಹೆಸರಿನ ಬಂಗಲೆಯೊಳಗೆ ಬಂಬಾಟಾಗಿ ಜೀವಿಸಿಹನು. ಬಂಗಲೆಯ ಕಿಟಕಿಯಿಂದ ತೋಟದ ಬೋಗನ್‌ವಿಲ್ಲಾ ವೃಕ್ಷಗಳನ್ನು ಈಕ್ಷಿಸುತ್ತಾ ತಿಂದುಂಡು ತೂಕಡಿಸಿ ಹಾಗೇ ಸವಿನಿದ್ದೆಗೆ ಶರಣಾಗಿಬಿಡುವನು. ಡಿಗ್ರಿಯಿಲ್ಲಾ, ನೌಕ್ರಿಯಿಲ್ಲಾ, ಚಿಂತೆಯಿಲ್ಲಾ, ಬಜೆ-ಬೆಣ್ಣೆ-ಸುತ್ತುಖಾರಗಳ ದಯೆಯಿಂದ ಇಂದಿಗೂ ಸದಾಕಾಲ ಸೊಗಸಾದ ನಿದ್ದೆ!

ಒಂದೇ ಮಗುವಿಗೇ ಬಂದ್ ಮಾಡಿಸಿಕೊಂಡಿದ್ದ ’ಪಿತಾಶ್ರೀ ಆಫ್ ಗೋವಿಂದ’ ಅವರು ’ಒಂದು ಸಾಕು, ಒಂದೇಒಂದು ಸಾಕು’ ಎಂಬ ಸ್ಲೋಗನ್ ರಚಿಸಿ ಭಾರತ ಸರ್ಕಾರದ ಕುಟುಂಬಕಲ್ಯಾಣ ಇಲಾಖೆಯಿಂದ ಹದಿನೈದು ಲಕ್ಷ ರೂಪಾಯಿಗಳ(!) ರಾಷ್ಟ್ರೀಯ ಪುರಸ್ಕಾರ ಪಡೆದು ಆ ಹಣದಿಂದ (ಮೊದಲೇ ಇದ್ದ ಸೈಟಿನಲ್ಲಿ) ಬಂಗಲೆ ಕಟ್ಟಿಸಿ ಸದರಿ ಬಂಗಲೆಗೆ ’ಸ್ಲೋಗನ್ ವಿಲ್ಲಾ’ ಎಂಬ ಅನ್ವರ್ಥನಾಮವನ್ನಿಟ್ಟಿದ್ದರು. ಈ ಸ್ಲೋಗನ್ ವಿಲ್ಲಾದ ’ಸ್ಲೀಪಿಂಗ್ ಬ್ಯೂಟಿ’ಯಾಗಿ, ಊಹ್ಞೂ, ’ಹ್ಯಾಂಡ್‌ಸಮ್ ಚೂಟಿ’ ಆಗಿ ನಮ್ಮ್ ಗೋವಿಂದ ತನ್ನಪ್ಪನ ಆಸ್ತಿ ಕರಗಿಸುತ್ತಲಿದ್ದ ಸ್ಲೋ ಆಗಿ.

’ಮನೇಲಿ ಸುಮ್ನೆ ಕೂರಬೇಡ, ಅಲ್ಲಲ್ಲ, ಮಲಗಬೇಡ, ಏನಾದರೂ ಮಾಡು’, ಎಂದು ಅವನಪ್ಪ ನೂರಾಹನ್ನೊಂದನೇ ಸಲ ಹೇಳಿದಾಗ ಗೋವಿಂದ ಎಚ್ಚತ್ತ. ’ಶಬ್ದಸಂಶೋಧನೆ’ ಮಾಡಲು ಹೊರಟ!

ಶಬ್ದವೆಂದರೆ ಕೋಗಿಲೆ, ಕಾಗೆ, ಬಸ್ಸು, ಲಾರಿಗಳ ಶಬ್ದವಲ್ಲ, ಕನ್ನಡದ ಶಬ್ದ. ಪದ.

ಗೋವಿಂದ ಮಾಡಹೊರಟದ್ದು ಪದಜಿಜ್ಞಾಸೆ.

ಯಾವ ಪದ?

ಇನ್ಯಾವ ಪದ, ’ಬಜೆ’. ಬಾಲ್ಯಸಂಗಾತಿ ತಾನೆ ಎಷ್ಟೆಂದರೂ.

ಆರು ತಿಂಗಳ ಕಾಲ ನಾಲಗೆಯಮೇಲೆ ನಲಿದಾಡಿದ ವಸ್ತುವಲ್ಲವೆ!

ಮನೆಯಿಂದೆದ್ದು ಹೊರಟವನೇ ಗೋವಿಂದ ’ಬಜೆ’ ಶಬ್ದದ ಸಂಶೋಧನೆಯ ಮೊದಲ ಮೆಟ್ಟಿಲಾಗಿ ’ಮಿತ್ರಸಮಾಜ ಹೋಟೆಲ್’ನ ಮೆಟ್ಟಿಲೇರಿ ಒಳಹೊಕ್ಕು ಮೂರು ಪ್ಲೇಟ್ ಬಿಸಿಬಿಸಿ ಗೋಳಿಬಜೆ ಗೋವಿಂದಮಾಡಿ ಹೊರನಡೆದ.

ಹೊರನಡೆದವನ ಮಂಡೆಯಲ್ಲಿ ಸಂದೇಹವೊಂದು ಉದ್ಭವಿಸಿತು,
’ಈರುಳ್ಳಿ, ಹಸಿಮೆಣಸು ವಗೈರೆಗಳನ್ನು ಕಡಲೆಹಿಟ್ಟಿನಲ್ಲಿ ಕಲಸಿ ಕರಿದರೆ ಅದನ್ನು ’ಬಜ್ಜಿ’ ಎನ್ನುವರು. ಆದರೆ, ಮೈದಾಹಿಟ್ಟನ್ನು ಮೊಸರಿನಲ್ಲಿ ಕಲಸಿ ಕರಿದರೆ ಅದನ್ನು ’ಬಜೆ’ ಎಂದು ಕರೆಯುವರು. ಹೀಗೇಕೆ?’

ಈ ಸಂದೇಹ ಬಂದದ್ದೇ ತಡ, ತನ್ನ ’ಬಜೆ ಸಂಶೋಧನೆ’ಗೊಂದು ದಿಕ್ಕು ಸಿಕ್ಕಿತೆಂದು ಆನಂದತುಂದಿಲನಾದ ಗೋವಿಂದ ಪುನಃ ’ಮಿತ್ರಸಮಾಜ’ದೊಳಹೊಕ್ಕು ಕ್ಯಾಷಿಯರ್ ಬಳಿ ತನ್ನ ಸಂದೇಹ ಮಂಡಿಸಿದ.

’ರಷ್ ಉಂಡು. ಪೋಲೆ (ರಷ್ ಇದೆ. ಹೋಗಿ)’, ಅಂತ ತುಳುವಿನಲ್ಲಿ ಉತ್ತರ ಬಂತು. ಅಲ್ಲಿಂದ ಕಾಲ್ಕಿತ್ತ.

ಉಡುಪಿಯ ರಥಬೀದಿಯಲ್ಲೇ ಇದ್ದೂ ತಾನು ತನ್ನೀ ಸಂಶೋಧನೆಗೆ ಶ್ರೀಕೃಷ್ಣನ ಆಶೀರ್ವಾದ ಪಡೆಯದೇ ಮುಂದುವರಿಯುತ್ತಿದ್ದೆನಲ್ಲಾ, ತಾನೆಂಥ ಮೂರ್ಖ, ಎಂದುಕೊಳ್ಳುತ್ತ ಗೋವಿಂದ ಕೃಷ್ಣಮಠಕ್ಕೆ ಧಾವಿಸಿದ. ಅಷ್ಟರಲ್ಲಾಗಲೇ ಅವನ ತಲೆಯಲ್ಲಿ ಇನ್ನೊಂದು ಸಂದೇಹ ಭುಗಿಲೆದ್ದಿತ್ತು.

ಮಗುವಾಗಿದ್ದಾಗ ತನಗೆ ತನ್ನಮ್ಮ ತೇಯ್ದು ತಿನ್ನಿಸುತ್ತಿದ್ದ ಬೇರಿನ ಹೆಸರೂ ಬಜೆ, ಈಗ ತಾನು ತಿಂದ ಕರಿದ ತಿಂಡಿಯ ಹೆಸರೂ ಬಜೆ! ಇದು ಹೇಗೆ ಸಾಧ್ಯ?!

ಕೃಷ್ಣನಿಗೆ ನಮಸ್ಕರಿಸುತ್ತಿದ್ದಂತೆ ಗೋವಿಂದನ ತಲೆಯಲ್ಲಿ ಮೂರನೆಯ ಸಂದೇಹವೊಂದು ಹೆಡೆಯೆತ್ತಿತು. ಅದುವೇ ’ಕೃಷ್ಣ ಭಾಂಜಿ’!

ರಿಚರ್ಡ್ ಆಟಿನ್‌ಬರೋ ನಿರ್ದೇಶನದ ’ಗಾಂಧಿ’ ಚಲನಚಿತ್ರದಲ್ಲಿ ಗಾಂಧಿಯಾಗಿ ಅಭಿನಯಿಸಿದ ಬೆನ್ ಕಿಂಗ್‌ಸ್ಲೆಯ ಮೂಲ ಹೆಸರು ಕೃಷ್ಣ ಭಾಂಜಿ ಎಂದೂ ಮತ್ತು ಆತ ಮೂಲತಃ ಉತ್ತರಭಾರತದವನೆಂದೂ ಯಾವುದೋ ಸಿನಿಮಾಪತ್ರಿಕೆಯಲ್ಲಿ ಓದಿದ್ದು ಗೋವಿಂದನಿಗೆ ಫಕ್ಕನೆ ನೆನಪಿಗೆ ಬಂತು.

’ಬಜೆ, ಬಜ್ಜಿ, ಭಾಂಜಿ. ಪರಸ್ಪರ ಸಂಬಂಧವೇನಾದರೂ ಇದ್ದೀತೇ?’

ಹೀಗೊಂದು ಸಂದೇಹ ಬಂದದ್ದೇ ತಡ, ಭಾಂಜಿ ಶಬ್ದದ ಮೂಲ ಅರಿಯಲು ಗೋವಿಂದ ಉತ್ತರಭಾರತೀಯರೊಬ್ಬರ ಬಳಿ ಹೋಗಲು ನಿರ್ಧರಿಸಿದ.

ಉತ್ತರಭಾರತೀಯರು ಎಲ್ಲಿ ಸಿಗುತ್ತಾರೆ?

ಇನ್ನೆಲ್ಲಿ, ಮಣಿಪಾಲದಲ್ಲಿ.

’ಮಣ್ಪಾಲ್ ಮಣ್ಪಾಲ್, ಬಲ್ಲೆ ಬಲ್ಲೆ’ (ಮಣ್ಣುಪಾಲೂ ಅಲ್ಲ, ಪಂಜಾಬಿಯ ಬಲ್ಲೆಬಲ್ಲೆಯೂ ಅಲ್ಲ, ’ಮಣಿಪಾಲ ಮಣಿಪಾಲ, ಬನ್ನಿ ಬನ್ನಿ’ ಎಂದರ್ಥ) ಹೀಗೆ ಅರಚುತ್ತಿದ್ದ ಬಸ್ಸುಗಳಲ್ಲಿ ಒಂದನ್ನು ಏರಿ ಗೋವಿಂದ ಮಣಿಪಾಲದ ಏರಿ ಏರಿ ಮೆಡಿಕಲ್ ಕಾಲೇಜಿನ ಬಳಿ ಇಳಿದ. ಉತ್ತರಭಾರತದ ವಿದ್ಯಾರ್ಥಿಗಳು ಇಲ್ಲಿ ಲಭ್ಯ.

’ಮೂವೀ ಕಿತ್ನಾ ಬಜೇ ಯಾರ್?’ ಎಂಬ ಉದ್ಗಾರ ಕಿವಿಗೆ ಬಿದ್ದದ್ದೇ ಗೋವಿಂದ ರೋಮಾಂಚಿತನಾದ! ಇನ್ನೊಂದು ಬಜೆ!

ಆ ಉದ್ಗಾರ ಬಂದತ್ತ ಕಣ್ಣು ಹಾಯಿಸಿದ. ಮೆಡಿಕೋ ಓರ್ವನು ತನ್ನ ಸಹಪಾಠಿಗೆ ಕೇಳಿದ ಪ್ರಶ್ನೆ ಅದಾಗಿತ್ತು. ಆ ಮೆಡಿಕೋ ಬಳಿ ಹೋಗಿ ಗೋವಿಂದ ಪ್ರಶ್ನಿಸಿದ,
’ಕನ್ನಡದ ಬಜೆ ನಿಮಗೆ ಗೊತ್ತೆ?’

’ವಾಟ್?’ ಎಂದಿತು ಮೆಡಿಕೋ.

’ಕನಡಾ ಬಜೆ. ನೋಯಿಂಗ್?’

’ಕ್ಯಾ?’

’ಬಜೆ, ಬಜೆ.’

’ಬಜೇ? ಸಾಡೇ ಸಾತ್’, ವಾಚ್ ನೋಡಿಕೊಂಡು ಮೆಡಿಕೋ ಅರುಹಿತು.

’ನೈ. ಕನಡಾ ಬಜೆ ಹಿಂದಿ ಬಜೆ ಸಂಬಂದ್ ಹೈ?’ ಗೋವಿಂದ ಮತ್ತೆ ಪ್ರಶ್ನಿಸಿದ.

’ಕ್ಯಾ?’

’ಹೋಗ್ಲಿ, ಭಾಂಜಿ ಮಾಲುಂ?’

’ಹಾಂಜೀ. ವೋ ತೋ ಬಹೆನ್ ಕೀ ಬೇಟೀ ಹೋತೀ.’

’ಅದೂ ಬೇರೆ ಇದೆಯಾ? ಮತ್ತೆ ಕೃಷ್ಣ ಭಾಂಜಿ?’

’ಯೇ ಕ್ಯಾ ಬೋಲ್‌ರಹಾ ಹೈ ಯಾರ್?!’ ಎನ್ನುತ್ತ ಆ ಮೆಡಿಕೋ ತನ್ನ ಸಹಪಾಠಿಯ ಮುಖ ನೋಡಿದ.

ಆ ಸಹಪಾಠಿಯು ಗೋವಿಂದನಿಗೆ, ’ಚಲ್ ಚಲ್. ಆಗೇ ಚಲ್’, ಎಂದು ದಬಾಯಿಸಿಬಿಡೋದೇ?!

ಬೆಳಗ್ಗೆ ಏಳುತ್ತಲೇ ಅಪ್ಪನಿಂದ ಬೈಸಿಕೊಂಡು ಅದೇ ಅವಸ್ಥೆಯಲ್ಲೇ ಹೊರಗೆ ಬಂದಿದ್ದ ಗೋವಿಂದ ಆ ನಾರ್ತಿಯ ಕಣ್ಣಿಗೆ ಯಾರಂತೆ ಕಂಡನೋ!

ಗೋವಿಂದನೀಗ ಹತಾಶನಾದ. ಬಂದ ದಾರಿಗೆ ಸುಂಕವಿಲ್ಲದಿಲ್ಲ ಎಂದುಕೊಳ್ಳುತ್ತ ಬಸ್ಸನ್ನೇರಿ ಸುಂಕ ತೆತ್ತು ಮತ್ತೆ ಉಡುಪಿಗೆ ವಾಪಸಾದ.

ಮನೆಗೆ ಹೋಗಿ ತಿಂಡಿ ತಿಂದು ಹಲ್ಲುಜ್ಜಿ ಕಾಫಿ ಕುಡಿದು ಸ್ನಾನ ಮಾಡಿ ಜೊಂಪು ತೆಗೆದೆದ್ದು ಊಟ ಮಾಡಿ ಮಲಗಿ ಎದ್ದು ಸಂಜೆಗೆ ಸರಿಯಾಗಿ ಸ್ನೇಹಿತ ಪರಾಂಜಪೆಯ ಮನೆಗೆ ಬಿಜಯಂಗೈದ. ಪರಾಂಜಪೆ ಸಾಯಂಕಾಲದ ಜಪ ಮಾಡುತ್ತಿದ್ದ. ಅವನ ಜಪ ಮುಗಿಯುವವರೆಗೆ ಟೈಂಪಾಸ್ ಮಾಡಲೆಂದು ಗೋವಿಂದ ಅಲ್ಲಿ ಮೇಜಿನಮೇಲಿದ್ದ ಪುಸ್ತಕವೊಂದನ್ನು ಕೈಗೆತ್ತಿಕೊಂಡ. ಅದು ಕನ್ನಡ-ಕನ್ನಡ ನಿಘಂಟು!

ಗೋವಿಂದನ ಮಿದುಳು ಜಾಗೃತವಾಯಿತು. ಪುಟ ತಿರುವಿ ತಿರುವಿ, ಕಷ್ಟಪಟ್ಟು, ಕೊನೆಗೂ ’ಬಜೆ’ ಶಬ್ದವನ್ನು ಪತ್ತೆಹಚ್ಚಿದ. ಅರ್ಥದತ್ತ ಕಣ್ಣುಹಾಯಿಸಿದ.

’ಒಂದು ಜಾತಿಯ ಬೇರು; ಉಗ್ರ ಗಂಧ’ ಎಂಬ ಅರ್ಥವಿವರಣೆ ಅಲ್ಲಿತ್ತು.

ಗೋವಿಂದನ ಮಿದುಳಿನಲ್ಲಿ ಯೋಚನೆಗಳೀಗ ವಿದ್ಯುತ್‌ನಂತೆ ಪ್ರವಹಿಸತೊಡಗಿದವು.

’ಉಗ್ರ ಗಂಧ! ಇದೇನಿದು? ಬಜೆಯ ಬೇರು ಈ ಉಗ್ರ ಗಂಧದಲ್ಲಿರಬಹುದೇ? ಅಥವಾ ಉಗ್ರ ಗಂಧವೇ ಬಜೆಯ ಬೇರೇ? ಗಂಧ, ಸುಗಂಧ, ಉಡುಪಿ ಮಠದ ಗಂಧ, ಉಗ್ರ ಗಂಧ, ಬಜೆ, ಗೋಳಿ ಬಜೆ, ಗೋವಿಂದ, ಬಜೆ ಗೋವಿಂದ, ಭಜಗೋವಿಂದ....ಭಜನೆ....’

ಗೋವಿಂದ ಭಜನೆ ಮಾಡತೊಡಗಿದ.

***

ಗೋವಿಂದ ಭಜನೆ ಮಾಡುತ್ತಲೇ ಇದ್ದಾನೆ.

ಉಚ್ಚಾರ ಬಲು ಸ್ಪಷ್ಟ. ಸ್ಫಟಿಕದ ಶಲಾಕೆ.

ತಿಂದುಂಡು ತಿರುಗಾಡಿಕೊಂಡು ಬಜೆಯ ಭಜನೆ ಮಾಡುತ್ತ ಸಂಶೋಧನೆ ಮುಂದುವರಿಸಿದ್ದಾನೆ.

ಗೋವಿಂದನ ಪಿತಾಶ್ರೀಯವರು ಇನ್ನೊಂದು ಸ್ಲೋಗನ್ನನ್ನು ರೆಡಿಮಾಡಿಟ್ಟುಕೊಂಡು ಕುಟುಂಬಕಲ್ಯಾಣ ಇಲಾಖೆಯು ಇನ್ನೊಮ್ಮೆ ಸ್ಪರ್ಧೆ ಏರ್ಪಡಿಸುವುದನ್ನು ಎದುರುನೋಡುತ್ತಿದ್ದಾರೆ. ಅವರು ಈಗ ರೆಡಿಮಾಡಿಟ್ಟುಕೊಂಡಿರುವ ಸ್ಲೋಗನ್ನು:

’ಒಂದೂ ಬೇಡ, ಎಷ್ಟೂ ಬೇಡ, ಮಕ್ಕಳಿಲ್ಲದಿದ್ದರೇ ನೆಮ್ಮದಿ ನೋಡಾ.’

ಸರ್ವದೇವ ಪ್ರದಕ್ಷಿಣ ಯಾತ್ರೆಯ ಕಥೆ (ಹಾಸ್ಯ)

ಓಂ ಶ್ರೀ ಗಣೇಶಾಯ ನಮಃ.

ಗಣಪತಿಗೆ ವಂದಿಸಿಯೇ ಯಾವ ಕೆಲಸವನ್ನೇ ಆಗಲೀ ಪ್ರಾರಂಭ ಮಾಡಬೇಕು.

ವರ್ತುಲ ರಸ್ತೆ ಎಂದರೆ ರಿಂಗ್ ರೋಡ್. ’ವರ್ತುಲ’ ಸಂಸ್ಕೃತವಾದ್ದರಿಂದ ಅರ್ಥವಾಗುವುದು ಕಷ್ಟ. ’ದುಂಡನೆಯ’ ಅನ್ನಬಹುದು. ಆದರೆ ರಿಂಗೇ ಕಿವಿಯಲ್ಲಿ ಚೆನ್ನಾಗಿ ರಿಂಗಣಿಸುತ್ತದಾದ್ದರಿಂದ ರಿಂಗ್ ರೋಡೇ ಇರಲಿ.

ಹೊರ ವರ್ತುಲ ರಸ್ತೆ, ಕ್ಷಮಿಸಿ, ಔಟರ್ ರಿಂಗ್ ರೋಡು ಊರನ್ನು ಹೊರಗಿನಿಂದ ಒಂದು ಸುತ್ತು ಸುತ್ತುವರಿದಿರುತ್ತದೆ. ಊರೊಳಗಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಜಾಲಿ ರೈಡ್ ಸಾಹಸಿಗರಿಗೆ ಅನುಕೂಲವಾಗಲು ಈ ರೋಡನ್ನು ನಿರ್ಮಿಸಲಾಗಿರುತ್ತದೆ. ಬೆಂಗಳೂರಿನಲ್ಲಿ ಈ ರಸ್ತೆಯನ್ನು ನೋಡಿರುವವರಿಗೆ ನಾನು ಹೆಚ್ಚು ವಿವರಿಸುವ ಅಗತ್ಯವಿಲ್ಲ. ನೋಡಿರದವರಿಗೆ ಈಗ ನೀಡಿರುವ ವಿವರಣೆ ಸಾಕಾಗುತ್ತದೆ.

ಐಡಿಯಾ!
---------
ತಿಪ್ಪೇಶಿಗೆ ಒಂದು ಮುಂಜಾನೆ ಇದ್ದಕ್ಕಿದ್ದಂತೆ ಒಂದು ಅದ್ಭುತ ಐಡಿಯಾ ಹೊಳೆಯಿತು. ಹಿಂದಿನ ದಿನ ಅವನು ಪತ್ನೀಸಮೇತನಾಗಿ ಚಾಮರಾಜಪೇಟೆಗೆ ಹೋಗಿ, ’ಒಂದು ಕಣ್ಣು’ ಮಾತ್ರ ತೆರೆದ ಸಾಯಿಬಾಬಾನ ದರ್ಶನ ಮಾಡಿ ಬಂದದ್ದರ ಫಲವೇ ಆ ಐಡಿಯಾ. ಈ ಹಿಂದೆ ಹಾಲು ಕುಡಿದ ಗಣೇಶನ ದರ್ಶನ ಮಾಡಿದಾಗಲೂ ಮರು ಮುಂಜಾನೆ ಒಂದು ಅದ್ಭುತ ಐಡಿಯಾ ಹೊಳೆದು ಅದರನುಸಾರ ಒಂದು ಸೆಕೆಂಡ್ ಹ್ಯಾಂಡ್ ಬಸ್ ಗಾಡಿ ಆರಂಭಿಸಿ ಬೇಜಾನ್ ಕಾಸು ಮಾಡಿದ್ದ ಇದೇ ತಿಪ್ಪೇಶಿ. ಈಗ ಆ ಬಸ್ಸನ್ನು ಅವನು ಗುಜರಿಗೆ ಹಾಕಿ ಹೊಸ ಬಸ್ ಕೊಂಡು ರೂಟಿಗೆ ಬಿಟ್ಟು ಮೂರು ವರ್ಷವಾಯಿತು. ದುಡಿಮೆ ಪರವಾ ಇಲ್ಲ. ತಾನಿರುವ ಮಹಾನಗರದಿಂದ ಅಲ್ಲೇ ಸುತ್ತಮುತ್ತಲ ರಾಂಪುರ, ಸೋಂಪುರ, ಭೀಂಪುರ ಮೊದಲಾದ ಹತ್ತಿರದ ಸ್ಥಳಗಳಿಗಷ್ಟೇ ಅವನ ಬಸ್ ಸರ್ವಿಸ್. ನೆಮ್ಮದಿಯ ಜೀವನ ಅವನದು. ಆದರೆ ಇದೀಗ ಹೊಳೆದ ಅದ್ಭುತ ಐಡಿಯಾ ಅವನ ನೆಮ್ಮದಿ ಕೆಡಿಸಿಬಿಟ್ಟಿತು!

’ದೇವರಿಗೆ ಪ್ರದಕ್ಷಿಣೆ ಹಾಕಿದರೆ ಪುಣ್ಯ ತಾನೆ. ಈ ಮಹಾನಗರದ ರಿಂಗ್ ರೋಡಿನಲ್ಲಿ ತನ್ನ ಬಸ್ಸನ್ನು ’ಪ್ರದಕ್ಷಿಣೆ ಸರ್ವಿಸ್’ ಎಂಬ ಹೆಸರಿನೊಂದಿಗೆ (ಕ್ಲಾಕ್‌ವೈಸ್ ಆಗಿ) ಓಡಿಸಿದರೆ ಹೇಗೆ? ಒಂದು ಸುತ್ತು ಓಡಿಸಿದರೆ ಜನರನ್ನು ಮಹಾನಗರದ ಎಲ್ಲ ದೇವಾಲಯಗಳಿಗೂ ಒಂದು ಪ್ರದಕ್ಷಿಣೆ ಹಾಕಿಸಿದಂತಾಗುತ್ತದೆ. ಒಂದು ಸುತ್ತಿಗೆ ಇಷ್ಟು ಎಂದು ದರ ನಿಗದಿ ಮಾಡುವುದು. ಭಕ್ತಜನರು ಅದರನುಸಾರ ಎಷ್ಟು ಸುತ್ತು ಬೇಕಾದರೂ ಪ್ರದಕ್ಷಿಣೆ ಹಾಕಿ ಪುಣ್ಯ ಕಟ್ಟಿಕೊಳ್ಳಲಿ. ತನಗೆ ಸಖತ್ ಆದಾಯ!

ಈ ಐಡಿಯಾ ಹೊಳೆದದ್ದೇ ತಡ, ಐಡಿಯಾವನ್ನು ಅನುಷ್ಠಾನಕ್ಕೆ ತಂದೇಬಿಟ್ಟ ತಿಪ್ಪೇಶಿ. ’ಶ್ರೀ ತಿಪ್ಪೇಸ್ವಾಮಿ ಸರ್ವದೇವ ಪ್ರದಕ್ಷಿಣ ಯಾತ್ರೆ’ ಎಂದು ಆಕರ್ಷಕ ಹೆಸರಿಟ್ಟು ಅವನು ಪ್ರಾರಂಭಿಸಿದ ಈ ’ಯಾತ್ರಾ ಸ್ಪೆಷಲ್’ ಕೆಲವೇ ದಿನಗಳಲ್ಲಿ ನಗರಾದ್ಯಂತ ಮನೆಮಾತಾಯಿತು. ಅರವತ್ತು ರೂಪಾಯಿ ಕೊಟ್ಟು ಬಸ್ ಹತ್ತಿದರೆ ಸಾಕು, ಎರಡೇ ಗಂಟೆ ಅವಧಿಯಲ್ಲಿ ಅರವತ್ತೇಳು ಕಿಲೋಮೀಟರ್ ಸಂಚರಿಸಿ ಮಹಾನಗರದ ಎಲ್ಲ ದೇವಸ್ಥಾನಗಳಿಗೂ ಒಂದು ಪ್ರದಕ್ಷಿಣೆ ಹಾಕಬಹುದು! ಭರ್ಜರಿ ಪುಣ್ಯ ಸಂಪಾದನೆ! ಯಾರಿಗುಂಟು ಯಾರಿಗಿಲ್ಲ!

’ಮಹಾನಗರ ಸಾರಿಗೆ’ ಬಸ್ಸಿನಲ್ಲಿ ಮುವ್ವತ್ತೇ ರೂಪಾಯಿಗೆ ಇದೇ ರೀತಿ ಪ್ರದಕ್ಷಿಣೆ ಹಾಕಬಹುದಾದರೂ ನೂರಾಮುವ್ವತ್ಮೂರು ಸ್ಟಾಪ್‌ಗಳಲ್ಲಿ ನಿಂತು ಮುಂದುವರಿಯುವ ಆ ಬಸ್ಸಿನಲ್ಲಿ ನಾಲ್ಕೂವರೆ ಗಂಟೆ ಸಮಯವನ್ನು ಅದಾವ ದಡ್ಡ ವೇಸ್ಟ್ ಮಾಡಿಕೊಳ್ಳಲಿಚ್ಛಿಸುವನು? ತಿಪ್ಪೇಶಿಯದು ನಾನ್ ಸ್ಟಾಪ್ ಪ್ರದಕ್ಷಿಣ ಯಾತ್ರಾ ಸ್ಪೆಷಲ್. ಆಫೀಸಿಗೆ ಹೋಗುವವರು ಬೆಳಿಗ್ಗೆ ಎರಡು ಗಂಟೆ ಮುಂಚಿತವಾಗಿ ಮನೆ ಬಿಟ್ಟರೆ ಸಾಕು ತಿಪ್ಪೇಶಿಯ ಬಸ್ಸಿನಲ್ಲಿ ಸರ್ವದೇವ ಪ್ರದಕ್ಷಿಣೆ ಪೂರೈಸಿ ಆಫೀಸಿಗೆ ಹಾಜರಾಗಬಹುದು. ಆಫೀಸು ಮುಗಿಸಿಕೊಂಡು ಪ್ರದಕ್ಷಿಣೆ ಹಾಕುವವರು ಪ್ರದಕ್ಷಿಣೆ ಪೂರೈಸಿ ರಾತ್ರಿ ಊಟದ ವೇಳೆಗೆಲ್ಲಾ ಮನೆಯಲ್ಲಿರಬಹುದು.

’ಶ್ರೀ ತಿ.ಸ.ಪ್ರ. ಯಾತ್ರೆ’ಗೆ ನೂಕುನುಗ್ಗಲು ಶುರುವಾಯಿತು. ಅಡ್ವಾನ್ಸ್ ಬುಕಿಂಗ್, ಆನ್‌ಲೈನ್ ಬುಕಿಂಗ್ ಆರಂಭವಾದವು. ತಿಂಗಳೊಪ್ಪತ್ತಿನಲ್ಲೇ ತಿಪ್ಪೇಶಿಯು ಸ್ವಧನ, ಬ್ಯಾಂಕ್ ಋಣ ಸೇರಿಸಿ ಎರಡನೇ ಬಸ್ಸನ್ನು ರಿಂಗ್ ರೋಡಿಗಿಳಿಸಿದ. ತಿಪ್ಪೇಶಿಯ ಯಶಸ್ಸನ್ನು ಕಂಡು ನಿಧಾನವಾಗಿ ಬೇರೆ ವಾಹನ ಮಾಲೀಕರೂ ಇಂಥದೇ ಯಾತ್ರಾ ಸರ್ವಿಸ್ ಪ್ರಾರಂಭಿಸಿದರು. ಬಸ್ಸು, ಮಿನಿ ಬಸ್ಸು, ವ್ಯಾನು, ಟೆಂಪೋ, ಹೀಗೆ ಹತ್ತಾರು ವಾಹನಗಳು ಪ್ರದಕ್ಷಿಣ ಯಾತ್ರೆ ಆರಂಭಿಸಿ ಭಕ್ತಜನರಿಗೆ ಪುಣ್ಯ ನೀಡತೊಡಗಿದವು. ಬಾಷಾಮಿಯಾ ಕೂಡ ತನ್ನ ಹೇಸರಗುಟ್ಟ ಸರ್ವಿಸನ್ನು ನಿಲ್ಲಿಸಿ ’ರಾಗುವೀಂದ್ರ ಸಾಮಿ ಸರ್ವರ್ ದೇವರ್ ಪರ್ದಸ್ಕಿಣ ಪುಣ್ಣ ಯಾತ್ರಾ ಪೆಶಲ್’ ಟೂರ್ ಆರಂಭಿಸಿದನೆಂದಮೇಲೆ ಈ ಸರ್ವದೇವ ಪ್ರದಕ್ಷಿಣ ಯಾತ್ರೆಗಳಿಗೆ ಯಾಪಾಟಿ ಬಿಸಿನೆಸ್ಸು, ತಿಳೀರಿ!

ಹೊಸ ಹೊಸ ಯೋಜನೆ
------------------------
’ಪ್ರದಕ್ಷಿಣ ಸ್ಪೆಷಲ್’ ವಾಹನಗಳ ಸಂಖ್ಯೆ ಹಿಗ್ಗಾಮುಗ್ಗಿ ಏರತೊಡಗಿದಂತೆ ಕ್ರಮೇಣ ತಿಪ್ಪೇಶಿಯ ಬಿಸಿನೆಸ್ ಕೊಂಚ ಡಲ್ಲಾಗತೊಡಗಿತು. ಕೂಡಲೇ ತಿಪ್ಪೇಶಿ ಹುಷಾರಾದ. ಬಸ್ಸಿನಲ್ಲಿ ವಿವಿಧ ದೇವತೆಗಳ ಹಾಡು, ಭಜನೆ, ಸ್ತೋತ್ರ, ಮಂತ್ರಾದಿಗಳ ಕ್ಯಾಸೆಟ್ ಹಾಕತೊಡಗಿದ. ಬಸ್ಸು ಆಯಾ ದೇವಸ್ಥಾನದ ಸಮೀಪ ಅಥವಾ ದಿಕ್ಕಿಗೆ ಬಂದಾಗ ಆಯಾ ದೇವರ ಕ್ಯಾಸೆಟ್ ಹಾಕುತ್ತಿದ್ದ. ಉದಾಹರಣೆಗೆ ರಾಜರಾಜೇಶ್ವರಿ ದೇವಸ್ಥಾನದ ಕಮಾನಿನ ಬಳಿ ಬಂದಾಗ ರಾಜರಾಜೇಶ್ವರಿ ಸ್ತೋತ್ರ, ಬನಶಂಕರಿ ದೇವಸ್ಥಾನದ ಸಮೀಪ ಬಂದಾಗ ಅಮ್ಮನವರ ಹಾಡು, ’ದಾಳಿ ಆಂಜನೇಯ’ನ ಗುಡಿಯ ದಿಕ್ಕಿನತ್ತ ಬಸ್ಸು ಸಾಗಿದಾಗ ಮಾರುತಿರಾಯನ ಭಜನೆ ಕ್ಯಾಸೆಟ್ಟು, ಹೀಗೆ.

ಬೇರೆಯವರೂ ಇದನ್ನು ಅನುಕರಿಸತೊಡಗಿದಾಗ ತಿಪ್ಪೇಶಿ ತನ್ನ ಬಸ್ಸಿನಲ್ಲಿ ಕ್ಯಾಸೆಟ್ ಜೊತೆಗೆ ಪೂಜೆ, ಮಂಗಳಾರತಿ, ಪ್ರಸಾದ ಆರಂಭಿಸಿದ. ಇದೂ ಕಾಪಿಚಿಟ್ಟಿಗೀಡಾದಾಗ ಬಸ್ಸಿನೊಳಗೆ ಗೈಡನ್ನು ನೇಮಿಸಿದ. ಬಸ್ಸು ಚಲಿಸುತ್ತಿದ್ದಂತೆಯೇ ಸಮೀಪದ ದೇವಸ್ಥಾನಗಳ ಮಹಾತ್ಮೆಗಳನ್ನು ಆ ಗೈಡಮ್ಮ ಪ್ರಯಾಣಿಕರಿಗೆ, ಕ್ಷಮಿಸಿ, ಯಾತ್ರಾರ್ಥಿಗಳಿಗೆ ಬಸ್ಸಿನೊಳಗೇ ವಿವರಿಸುತ್ತಿದ್ದಳು. ಕೆಲವು ದೇವಸ್ಥಾನಗಳ ವಿಡಿಯೋಗಳನ್ನೂ ತಿಪ್ಪೇಶಿಯೇ ನಿರ್ಮಿಸಿ ಬಸ್ಸಿನಲ್ಲಿ ಯಾತ್ರಾರ್ಥಿಗಳಿಗೆ ಪ್ರದರ್ಶಿಸತೊಡಗಿದ. ವಿಡಿಯೋ, ಆಡಿಯೋ, ಪೂಜೆ, ಪ್ರಸಾದ, ಮಹಾತ್ಮೆ ವಿವರಣೆ, ಹೀಗೆ, ಎರಡು ಗಂಟೆ ಕಳೆದದ್ದೇ ಯಾತ್ರಾರ್ಥಿಗಳಿಗೆ ಗೊತ್ತಾಗುತ್ತಿರಲಿಲ್ಲ. ತನ್ನ ಪ್ರತಿಯೊಂದು ಯೋಜನೆಯೂ ಬೇರೆ ವಾಹನಗಳ ಮಾಲೀಕರಿಂದ ಕಾಪಿಚಿಟ್‌ಗೆ ಈಡಾಗುತ್ತಿದ್ದಂತೆ ತಿಪ್ಪೇಶಿಯ ಬಳಿ ಹೊಸದೊಂದು ಯೋಜನೆ ರೆಡಿಯಾಗಿರುತ್ತಿತ್ತು.

ಈ ಸರ್ವದೇವ ಪ್ರದಕ್ಷಿಣ ಯಾತ್ರಾ ಸರ್ವಿಸ್‌ಗಳು ಎಷ್ಟು ಜನಪ್ರಿಯವಾದುವೆಂದರೆ, ಸ್ವಂತ ವಾಹನ ಹೊಂದಿದ್ದವರೂ ಅದನ್ನು ಮನೆಯಲ್ಲಿ ಬಿಟ್ಟು ಈ ಸರ್ವಿಸ್‌ಗಳಲ್ಲಿ ಪ್ರದಕ್ಷಿಣೆ ಹಾಕತೊಡಗಿದರು. ಮಂತ್ರ-ಸ್ತೋತ್ರ ಶ್ರವಣ, ಮಹಾತ್ಮ್ಯಕಥಾಶ್ರವಣ, ವಿಡಿಯೋದೈವದರ್ಶನ, ಪೂಜೆ, ಪ್ರಸಾದ ಇತ್ಯಾದಿ ಪುಣ್ಯದಾಯಕ ಫೆಸಿಲಿಟಿಗಳು ಅವರ ಸ್ವಂತ ವಾಹನಗಳಲ್ಲೆಲ್ಲಿಂದ ಬರಬೇಕು?

ಪ್ರದಕ್ಷಿಣ ಯಾತ್ರಾ ಸರ್ವಿಸ್ ವಾಹನಗಳ ಸಂಖ್ಯೆ ಏರತೊಡಗಿತು. ಎಷ್ಟೇ ಏರಿದರೂ ತಿಪ್ಪೇಶಿಯೂ ಸೇರಿದಂತೆ ಎಲ್ಲ ಯಾತ್ರಾ ಸರ್ವಿಸ್ ಮಾಲೀಕರಿಗೂ ಹೌಸ್‌ಫುಲ್ ಆದಾಯಕ್ಕೇನೂ ಕೊರತೆಯಿಲ್ಲ. ದೇವರ ಮಹಿಮೆಯೇ ಅಂಥದು! ಈ ಮಾಲೀಕರೆಲ್ಲ ಸೇರಿ ಸಂಘ ಕಟ್ಟಿಕೊಂಡು, ಸಾರಿಗೆ ಅಧಿಕಾರಿಗಳನ್ನೂ, ಆರಕ್ಷಕರನ್ನೂ, ಮಹಾನಗರಪಾಲಿಕೆಯನ್ನೂ ಮತ್ತು ತೆರಿಗೆ ಅಧಿಕಾರಿಗಳನ್ನೂ ಚೆನ್ನಾಗಿ ನೋಡಿಕೊಳ್ಳತೊಡಗಿದರು. (ಅಷ್ಟಿಷ್ಟು ತೆರಿಗೆಯನ್ನೂ ಪಾವತಿಸುತ್ತಿದ್ದರೆನ್ನಿ.) ಕ್ರಮೇಣ ಯಾತ್ರೆಯ ದರವನ್ನು ಹೆಚ್ಚಿಸಲಾಯಿತು. ಜೊತೆಗೆ, ಭಾನುವಾರ ಮತ್ತು ಹಬ್ಬದ ದಿನಗಳಂದು ಡಬಲ್ ಚಾರ್ಜು. ಆದಾಗ್ಗ್ಯೂ ಯಾತ್ರಿಕರ ಸಂಖ್ಯೆ ಏರುತ್ತಲೇ ಹೋಯಿತು. ಪುಣ್ಯ ಯಾರಿಗೆ ಬೇಡ? ಆದರೆ, ಕ್ರಮೇಣ ರಿಂಗ್ ರೋಡಿನಲ್ಲಿ ಟ್ರಾಫಿಕ್ ಜಾಮುಗಳು ಹೆಚ್ಚತೊಡಗಿದವು. ಅದೂ ಏಕಮುಖ ಜಾಮ್. ಕ್ಲಾಕ್‌ವೈಸ್.

ಟ್ರಾಫಿಕ್ ಜಾಮ್ ಅತಿಯಾದಾಗ ನಗರಾಭಿವೃದ್ಧಿ ಮಂಡಳಿ ಎಚ್ಚತ್ತುಕೊಂಡಿತು. ವಿವಿಧ ಆಡಳಿತ ಇಲಾಖೆಗಳ ಮೀಟಿಂಗ್ ಕರೆಯಲಾಯಿತು. ಪ್ರದಕ್ಷಿಣ ಯಾತ್ರಾ ಸರ್ವಿಸ್ ಮಾಲೀಕರ ಸಂಘಕ್ಕೂ ಆಹ್ವಾನ ಇತ್ತೆಂದು ಬೇರೆ ಹೇಳಬೇಕಿಲ್ಲವಷ್ಟೆ.

ಹಲವು ಮೀಟಿಂಗ್‌ಗಳ ತರುವಾಯ ಟ್ರಾಫಿಕ್ ಸಮಸ್ಯೆಗೆ ಪರಿಹಾರೋಪಾಯವನ್ನು ಕಂಡುಹಿಡಿಯಲಾಯಿತು. ಅದೇನೆಂದರೆ, ಮಹಾನಗರದ ಇನ್ನಷ್ಟು ಹೊರಕ್ಕೆ ಇನ್ನೊಂದು ರಿಂಗ್ ರೋಡನ್ನು ನಿರ್ಮಿಸುವುದು. ಹೊರವಲಯ ವರ್ತುಲ ರಸ್ತೆ. ಪೆರಿಫೆರಲ್ ರಿಂಗ್ ರೋಡ್.

ಉಪಸಂಹಾರ
--------------
ಉದ್ದೇಶಿತ ’ಹೊರವಲಯ ವರ್ತುಲ ರಸ್ತೆ’ಯ ಒಳಸುತ್ತಿನಲ್ಲಿ ರಸ್ತೆಯ ಅಂಚಿಗೇ ವಿವಿಧ ದೇವಾಲಯಗಳನ್ನು ನಿರ್ಮಿಸಲು ಸರ್ವದೇವ ಪ್ರದಕ್ಷಿಣ ಯಾತ್ರಾ ಸರ್ವಿಸ್ ಮಾಲೀಕರ ಸಂಘವು ಈಗಾಗಲೇ ಭೂಮಿ ಖರೀದಿಯಲ್ಲಿ ತೊಡಗಿದೆ.

ಇದೇ ವೇಳೆ, ರಾಜ್ಯದ ಇತರ ಅನೇಕ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಯಿಂದ ಊರ ಹೊರಗೆ ರಿಂಗ್ ರೋಡುಗಳನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ. ದೇವರು ಕಣ್ಣು ತೆರೆದ ಬಿಡಿ.

ಸಾವಿನ ಮನೆಯ ಕದ ತಟ್ಟಿ ಬಂದೆ, ಏಳು ಸಲ! (ಸತ್ಯ ಘಟನೆ)

ವೈಕುಂಠಕ್ಕೆ ಏಳು ಬಾಗಿಲುಗಳಿವೆ ಎನ್ನುತ್ತಾರೆ. ಗೊತ್ತಿಲ್ಲ. ನಾನಿನ್ನೂ ಅಲ್ಲಿಗೆ ಹೋಗಿಲ್ಲ. ಅಜ್ಜಿಕಥೆಗಳಲ್ಲಿ ರಾಜ ಏಳು ಸುತ್ತಿನ ಕೋಟೆಯೊಳಗೆ ಇರುತ್ತಿದ್ದ. ರಾಜಕುಮಾರ ಏಳು ಸಮುದ್ರ ದಾಟಿ ಹೋಗಿ ತನ್ನ ಪ್ರಿಯತಮೆಯನ್ನು ರಾಕ್ಷಸನ ಕೈಯಿಂದ ಬಿಡಿಸಿಕೊಂಡು ಬರುತ್ತಿದ್ದ. ಅಜ್ಜಿ ಹೇಳಿದ್ದಾದ್ದರಿಂದ ನಂಬಬೇಕಷ್ಟೇ ಹೊರತು ಆ ಘಟನೆಯನ್ನು ಅಜ್ಜಿಯೂ ನೋಡಿಲ್ಲ, ನಾನೂ ನೋಡಿಲ್ಲ. ಆದರೆ ಏಳು ಸಲ ನಾನು ಸಾವಿನ ಮನೆ ಬಾಗಿಲನ್ನು ತಟ್ಟಿ ವಾಪಸ್ ಬಂದದ್ದಂತೂ ಸತ್ಯ. ನಾನು ಅನುಭವಿಸಿದ ಈ ಜೀವನದ ಪರಮ ಸತ್ಯ ಆ ಏಳು ಅನುಭವಗಳು. ನಾನು ತಟ್ಟಿದ ಅವು ಏಳೂ ಬೇರೆ ಬೇರೆ ಬಾಗಿಲುಗಳು. ಆ ಏಳು ಬಾಗಿಲುಗಳ ಸತ್ಯಕಥೆ ಇಲ್ಲಿದೆ.

ಬಾಗಿಲು-ಒಂದು
----------------
ಅರವತ್ತರ ದಶಕ. ನಾನಾಗ ಪ್ರೌಢಶಾಲಾ ವಿದ್ಯಾರ್ಥಿ. ಐದು ವರ್ಷ ವಯಸ್ಸಿನ ತಮ್ಮನನ್ನು ಸೈಕಲ್‌ಮೇಲೆ ಮುಂಭಾಗದಲ್ಲಿ ಕೂರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದೆ. ನನ್ನ ತಂದೆಯವರು ಉಪಯೋಗಿಸುತ್ತಿದ್ದ ಬ್ರಿಟಿಷರ ಕಾಲದ ಎತ್ತರದ ಬೈಸಿಕಲ್ ಅದು. ಪೆಡಲ್‌ಗಳು ನನ್ನ ಕಾಲಿಗೆ ಎಟುಕುತ್ತಿರಲಿಲ್ಲ. ಪೆಡಲ್ ತುಳಿಯಲು ಸರ್ಕಸ್ ಮಾಡುತ್ತಿದ್ದೆ.

ನನ್ನೂರು ದಾವಣಗೆರೆಯ ಚೌಕಿಪೇಟೆಯ ನಮ್ಮ ಮನೆಯೆದುರಿನ ರಸ್ತೆಯಲ್ಲಿ ಹೀಗೆ ನಾನು ಡಬಲ್ ರೈಡಿಂಗ್ ಹೋಗುತ್ತಿದ್ದಾಗ ಎದುರಿನಿಂದ ಲಾರಿಯೊಂದು ವೇಗವಾಗಿ ಬಂತು. ನಾನೇನೋ ರಸ್ತೆಯ ಸಂಪೂರ್ಣ ಎಡಭಾಗದಲ್ಲೇ ಇದ್ದೆ. ಆದರೆ ನನ್ನೆದುರು ಬಲಭಾಗದಲ್ಲಿ ಬಕ್ಕೇಶ್ವರ ಸ್ವಾಮಿಯ ತೇರು ಅರ್ಧರಸ್ತೆಯನ್ನಾಕ್ರಮಿಸಿ ನಿಂತಿತ್ತಾದ್ದರಿಂದ ಆ ಲಾರಿಯು ತೀರಾ ಬಲಭಾಗಕ್ಕೆ ಬಂದು ನನ್ನೆದುರಿಗೇ ಧಾವಿಸತೊಡಗಿತು! ವೇಗವನ್ನು ಕಡಿಮೆ ಮಾಡದೆ ನನ್ನೆದುರು ಧಾವಿಸಿದ ಲಾರಿಯಿಂದ ಪಾರಾಗಲು ಸೈಕಲ್ಲನ್ನು ಇನ್ನಷ್ಟು ಎಡಬದಿಗೆ ಕೊಂಡೊಯ್ದೆ. ಹಾಗೆ ಕೊಂಡೊಯ್ಯುವಾಗ ರಸ್ತೆಗಿಂತ ತಗ್ಗಿನಲ್ಲಿದ್ದ ಕಚ್ಚಾ ಫುಟ್‌ಪಾತ್‌ಗೆ ಸೈಕಲ್ ಜಾರಿ ಧಡಕ್ಕನೆ ರಸ್ತೆಗೆ ಬಿದ್ದೆ! ನನ್ನೊಡನೆ ನನ್ನ ತಮ್ಮನೂ ಬಿದ್ದ. ನಮ್ಮ ಮೇಲೆ ಇನ್ನೇನು ಆ ಲಾರಿ ಹರಿಯಿತು ಎನ್ನುವಷ್ಟರಲ್ಲಿ ನಾನು ತಮ್ಮನನ್ನು ಉಳಿಸುವ ಯತ್ನದಲ್ಲಿ ಅವನನ್ನು ಎಡಬದಿಗೆ ತಳ್ಳಿದೆ. ಹಾಗೆ ತಳ್ಳುವಾಗ ನನ್ನ ಕಾಲು ಸೈಕಲ್‌ನ ಕಂಬಿಗಳ ಮಧ್ಯೆ ಸಿಕ್ಕಿಕೊಂಡು ತಿರುಚಿಕೊಂಡಿತು! ಆದರೆ, ಇಬ್ಬರೂ ಎಡಬದಿಗೆ ಚರಂಡಿಯ ಸಮೀಪ ಬಿದ್ದದ್ದರಿಂದಾಗಿ ಲಾರಿಯ ಚಕ್ರಗಳಿಂದ ಕೂದಲೆಳೆಯ ಅಂತರದಲ್ಲಿ ಪಾರಾದೆವು!

ಮೂಳೆ ಮುರಿದ ಎಡಗಾಲಿಡೀ ಬ್ಯಾಂಡೇಜ್ ಸುತ್ತಿಸಿಕೊಂಡು ನಾನು ಮೂರು ತಿಂಗಳು ಮಲಗಬೇಕಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿದ್ದಾಗ ಬ್ಯಾಂಡೇಜ್‌ನೊಳಗೆ ತಿಗಣೆಗಳು ಸೇರಿಕೊಂಡು ಮುಂದಿನ ಮೂರು ತಿಂಗಳೂ ನಾನು ಅನುಭವಿಸಿದ ತಿಗಣೆಕಾಟ ಬಲು ಘೋರ! ಅದೇ ವೇಳೆ ನಡೆದ ನನ್ನ ಅಕ್ಕನ ಮದುವೆಯಲ್ಲಿ ನಾನು ಟೆಂಪೊರರಿ ಅಂಗವಿಕಲನಾಗಿ ಭಾಗವಹಿಸಬೇಕಾಯಿತು! ಅಪಘಾತದಲ್ಲಿ ಅಂದು ಕೇವಲ ತರಚಿದ ಗಾಯಗಳನ್ನಷ್ಟೇ ಹೊಂದಿ ಪಾರಾದ ನನ್ನ ತಮ್ಮ ಇಂದು ಜಿಲ್ಲಾ ನ್ಯಾಯಾಧೀಶ.

ಬಾಗಿಲು-ಎರಡು
----------------
೧೯೭೧ನೆಯ ಇಸವಿ. ರಾಘವೇಂದ್ರ ಗುರುಗಳು ವೃಂದಾವನಸ್ಥರಾಗಿ ೩೦೦ ವರ್ಷಗಳು ಪೂರೈಸಿದ ಸಂದರ್ಭ. ಎಂದೇ ಆ ವರ್ಷದ ಆರಾಧನೆಗೆ ವಿಶೇಷ ಮಹತ್ತ್ವ. ಗುರುಗಳ ಆರಾಧನೆಗೆ ಮಂತ್ರಾಲಯದಲ್ಲಿ ಹಾಜರಿರಲು ನಾನು ದಾವಣಗೆರೆಯಿಂದ ಬಸ್ಸಿನಲ್ಲಿ ಹೊರಟೆ. ಬಳ್ಳಾರಿಯಲ್ಲಿ ಬಸ್ಸು ಬದಲಿಸಿದೆ. ಬಳ್ಳಾರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆ ಬೀಳುತ್ತಿತ್ತು. ಬಳ್ಳಾರಿಯಿಂದ ಕೆಲವು ಕಿಲೋಮೀಟರ್ ದೂರ ಹೋಗಿ ಒಂದು ಕಡೆ ಬಸ್ಸು ನಿಂತುಬಿಟ್ಟಿತು. ಏಕೆಂದು ನೋಡಿದರೆ, ಎದುರಿಗೆ ಒಡ್ಡಿನಮೇಲೆ ಉಕ್ಕಿ ಹರಿಯುತ್ತಿದ್ದ ಹಳ್ಳ! ನೀರಿನ ರಭಸ ಕಂಡರೆ ಭಯವಾಗುತ್ತಿತ್ತು! ಅಪಾಯವನ್ನು ಊಹಿಸಿಯೇ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸಿದ್ದ. ಒಂದಷ್ಟು ಹೊತ್ತು ಕಾದೆವು. ಪ್ರವಾಹ ಇಳಿಯುವ ಲಕ್ಷಣ ಕಾಣಲಿಲ್ಲ. ಬಸ್ಸಿನಲ್ಲಿದ್ದ ಕೆಲವರು ಬಸ್ಸನ್ನು ಚಲಿಸಿಕೊಂಡು ಹೋಗುವಂತೆ ಚಾಲಕನನ್ನು ಹುರಿದುಂಬಿಸಿದರು. ಚಾಲಕನಿಗೂ ಅದೇ ಯೋಚನೆ ಬಂದಿತ್ತೇನೋ ಬಸ್ಸನ್ನು ನೀರಿಗಿಳಿಸಿದ. ನೀರಿನಲ್ಲಿ ಅರ್ಧ ದಾರಿ ಕ್ರಮಿಸಿದ ಬಸ್ಸು ಈಗ ಮುಂದಕ್ಕೆ ಹೋಗುವ ಬದಲು ನೀರಿನ ಪ್ರವಾಹದೊಡನೆ ಪಕ್ಕಕ್ಕೆ ಜಾರತೊಡಗಿತು! ನಿಧಾನವಾಗಿ ವಾಲತೊಡಗಿತು! ಬಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಚಾಲಕ ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಆತ ಕೈಚೆಲ್ಲಿ ಕುಳಿತ. ಇಂಚಿಂಚಾಗಿ ಬಸ್ಸು ನೀರಿನೊಳಗೆ ಮುಳುಗತೊಡಗಿತು! ಜೊತೆಗೆ ಪ್ರವಾಹದೊಡನೆ ಅಡ್ಡಡ್ಡ ಸಾಗತೊಡಗಿತು! ನಾವಿನ್ನು ನೀರಿನಲ್ಲಿ ಮುಳುಗಿಯೋ ಕೊಚ್ಚಿಕೊಂಡೋ ಹೋಗುವುದು ಗ್ಯಾರಂಟಿ ಅನ್ನಿಸಿತು ನಮಗೆಲ್ಲ!

ಮುಂದೇನು ಮಾಡುವುದೆಂದು ಎಲ್ಲರೂ ಯೋಚಿಸುತ್ತಿರುವಂತೆಯೇ, ನಾವು ಬಿಟ್ಟುಬಂದಿದ್ದ ದಡದಲ್ಲಿ ಒಂದು ಲಾರಿ ಬಂದು ನಿಂತಿತು. ನಮ್ಮ ಬಸ್ಸಿನ ಅವಸ್ಥೆಯನ್ನು ಕಂಡ ಆ ಲಾರಿಯ ಚಾಲಕ ಮತ್ತು ಕ್ಲೀನರ್ ಕೂಡಲೇ ಜಾಗೃತರಾದರು. ಲಾರಿಯ ಲೋಡಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದರು. ಹಗ್ಗದ ಒಂದು ತುದಿಯನ್ನು ಲಾರಿಯ ಮುಂಭಾಗಕ್ಕೆ ಕಟ್ಟಿ ಇನ್ನೊಂದು ತುದಿಯನ್ನು ನಮ್ಮ ಬಸ್ಸಿನತ್ತ ಎಸೆದರು. ಆ ತುದಿಯನ್ನು ನಾವು ನಮ್ಮ ಬಸ್ಸಿಗೆ ಕಟ್ಟಿದೆವು. ಒಬ್ಬೊಬ್ಬರಾಗಿ ಕೈಯಿಂದ ಆ ಹಗ್ಗಕ್ಕೆ ಜೋತುಬಿದ್ದು ಕೈಯಿಂದಲೇ ದೇಕಿಕೊಂಡು ದಡ ತಲುಪುವಲ್ಲಿ ಯಶಸ್ವಿಯಾದೆವು. ಎಲ್ಲರ ಜೀವವೂ ಉಳಿಯಿತು.

ಬಾಗಿಲು-ಮೂರು
----------------
೧೯೮೪ನೆಯ ಇಸವಿ. ತಮಿಳುನಾಡಿನ ನಾಗಪಟ್ಣಂ, ಕಡ್ಡಲೂರ್ ಪ್ರದೇಶದಲ್ಲಿ ಸಂಸಾರಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಇದ್ದಕ್ಕಿದ್ದಂತೆ ಭಾರೀ ಗಾಳಿ. ಬಿರುಗಾಳಿ ಎನ್ನುವಂಥ ಗಾಳಿ. ಜೊತೆಗೆ ಮಳೆ. ಭಾರೀ ಮಳೆ. ಅನತಿ ದೂರದಲ್ಲಿ ಕಾಣುತ್ತಿದ್ದ ಸಮುದ್ರ ನಮ್ಮತ್ತಲೇ ನುಗ್ಗಿಬರುತ್ತಿದೆಯೇನೋ ಎಂಬಂಥ ಅನುಭವ! ಮಳೆ-ಗಾಳಿಗೆ ನಮ್ಮ ಕಾರು ಹೊಯ್ದಾಡತೊಡಗಿತು! ಹಗಲಾಗಿದ್ದಾಗ್ಗ್ಯೂ ಮುಂದಿನದೇನೂ ಕಾಣದಂತ ಜಡಿಮಳೆ. ಕಾರು ಚಾಲಕನಿಗೋ ಎಲ್ಲಿಲ್ಲದ ಧೈರ್ಯ, ಹುಮ್ಮಸ್ಸು! ಇಂಥ ಮಳೆ-ಬಿರುಗಾಳಿಯಲ್ಲೇ ಒಂದಿಡೀ ಒಪ್ಪೊತ್ತು ಕಾರನ್ನು ಹೊಯ್ದಾಡಿಸಿಕೊಂಡು ಸಾಗಿದ! ಕೊನೆಗೂ ಸುರಕ್ಷಿತ ತಾಣ ತಲುಪಿದೆವು.

ಮರುದಿನದ ಪತ್ರಿಕೆಗಳನ್ನು ನೋಡಿದಾಗ ನಮಗೆ ತಿಳಿದದ್ದು, ನಾವು ಹಿಂದಿನ ದಿನ ಚಂಡಮಾರುತದ ಮಧ್ಯೆ ಸಿಲುಕಿದ್ದೆವು! ನಮ್ಮ ಹಿಂದುಮುಂದಿನ ಎಷ್ಟೋ ವಾಹನಗಳು ಚಂಡಮಾರುತಕ್ಕೆ ಬಲಿಯಾಗಿದ್ದವೆಂಬುದು ನಮಗೆ ಪತ್ರಿಕೆಯಿಂದಲೇ ಗೊತ್ತಾದದ್ದು! ನಾವು ಮಾತ್ರ ಸುರಕ್ಷಿತವಾಗಿ ಪಾರಾಗಿದ್ದೆವು!

ಬಾಗಿಲು-ನಾಲ್ಕು
----------------
೧೯೮೯ನೆಯ ಇಸವಿ ಮೇ ತಿಂಗಳು. ಸಂಸಾರಸಮೇತನಾಗಿ ಬೆಂಗಳೂರಿನಿಂದ ಕಾರಿನಲ್ಲಿ ಯಾತ್ರೆ ಹೊರಟೆ. ಪಂಢರಪುರ ಪೂರೈಸಿಕೊಂಡು ಕೊಲ್ಲಾಪುರದ ಕಡೆಗೆ ಹೊರಟಿದ್ದೆವು. ಕಾರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಲಾ ಪಟ್ಟಣದ ಹೊರವಲಯದಲ್ಲಿ ಚಲಿಸುತ್ತಿತ್ತು. ಕಿರಿದಾದ ರಸ್ತೆ. ಅಲ್ಲಲ್ಲಿ ಮನೆಗಳು. ಕಾರಿನ ವೇಗ ೬೦ ಕಿಲೋಮೀಟರ್ ಇತ್ತು. ವೇಗವನ್ನು ತಗ್ಗಿಸುವಂತೆ ನಾನು ಚಾಲಕನಿಗೆ ಹೇಳುತ್ತಿರುವಾಗಲೇ ಎಡಪಕ್ಕದ ಗುಡಿಸಲೊಂದರಿಂದ ಇದ್ದಕ್ಕಿದ್ದಂತೆ ನಾಲ್ಕು ವರ್ಷದ ಮಗುವೊಂದು ರಸ್ತೆಗೆ ಓಡಿಬಂತು! ಮಗುವಿನ ಹಿಂದೆ ಅದನ್ನು ಹಿಡಿಯಲು ಅದರ ಅಮ್ಮ ಧಾವಿಸಿದಳು! ಅಚಾನಕ್ಕಾಗಿ ಕಾರಿಗೆ ಅಡ್ಡಬಂದು ಓಡುತ್ತಿದ್ದ ಅವರನ್ನು ಉಳಿಸಲು ನಮ್ಮ ಚಾಲಕನು ಕಾರಿಗೆ ಬ್ರೇಕ್ ಹಾಕುವುದರ ಜೊತೆಗೆ ಸರಕ್ಕನೆ ಕಾರನ್ನು ರಸ್ತೆಯ ಸಂಪೂರ್ಣ ಎಡಬದಿಗೆ ತಿರುಗಿಸಿದ. ’ಧಡ್’ ಎಂದು ಭಾರೀ ಶಬ್ದದೊಂದಿಗೆ ಕಾರು ರಸ್ತೆಬದಿಯ ಪೂಲ್ ಒಂದರ ಅಡ್ಡಗಟ್ಟೆಗೆ ಢಿಕ್ಕಿಹೊಡೆಯಿತು!

ಮುಂದಿನ ಅರ್ಧ ಗಂಟೆಯಲ್ಲಿ ಚಾಲಕ ಹೊರತಾಗಿ ನಾವೆಲ್ಲರೂ ಸಂಗೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಮಲಗಿದ್ದೆವು! ಒಬ್ಬರಿಗೆ ಕೈಮುರಿದಿತ್ತು, ಇನ್ನೊಬ್ಬರ ಕಾಲು ಮುರಿದಿತ್ತು, ಮತ್ತೊಬ್ಬರಿಗೆ ಸೊಂಟಕ್ಕೆ ಪೆಟ್ಟಾಗಿತ್ತು, ನನ್ನಾಕೆಯ ಮುಖ ಹರಿದಿತ್ತು! ಚಾಲಕನ ಪಕ್ಕದಲ್ಲಿ ಕುಳಿತಿದ್ದ ನನ್ನ ನೇರಕ್ಕೇ ಅಡ್ಡಗಟ್ಟೆಯು ಢಿಕ್ಕಿಹೊಡೆದದ್ದರಿಂದಾಗಿ ನನ್ನ ಒಂದು ಕಣ್ಣು ಅಪ್ಪಚ್ಚಿಯಾಗಿತ್ತಲ್ಲದೆ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು! ಕಾರಿನ ಚಾಲಕ ಮಾತ್ರ ಯಾವುದೇ ಪೆಟ್ಟಿಲ್ಲದೆ ಪಾರಾಗಿದ್ದ!

ಎಲ್ಲರಿಗೂ ಆದ ತೀವ್ರಸ್ವರೂಪದ ಪೆಟ್ಟನ್ನು, ಮುಖ್ಯವಾಗಿ ನನ್ನ ತಲೆ ಮತ್ತು ಕಣ್ಣಿಗೆ ಆದ ಗಂಭೀರ ಸ್ವರೂಪದ ಪೆಟ್ಟನ್ನು ಮತ್ತು ಅದರಿಂದಾಗಿ ಎದುರಾಗಿರುವ ಪ್ರಾಣಾಪಾಯವನ್ನು ಗಮನಿಸಿ ನಮ್ಮನ್ನು ಕೂಡಲೇ ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಮಗೆಲ್ಲರಿಗೂ ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯಿತು. ನನ್ನ ತಲೆ ಮತ್ತು ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಕೆಲದಿನಗಳಿದ್ದ ನಾವು ಅನಂತರ ನನ್ನೂರು ದಾವಣಗೆರೆಗೆ ಬಂದು ಬಾಪೂಜಿ ಆಸ್ಪತ್ರೆಗೆ ದಾಖಲಾದೆವು. ಎರಡು ಶಸ್ತ್ರಚಿಕಿತ್ಸೆ ಹಾಗೂ ಮೂರು ಆಸ್ಪತ್ರೆಗಳ ಬಳಿಕ ನಾನು ಸಜೀವವಾಗಿ ಸಂಸಾರಸಮೇತ ಬೆಂಗಳೂರಿಗೆ ಹಿಂತಿರುಗಿದೆ.

ಬಾಗಿಲು-ಐದು
--------------
೧೯೯೭ರ ಮಳೆಗಾಲ. ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ನನಗೆ ಬಡ್ತಿ ದೊರೆತು ಗುಜರಾತ್‌ನ ಗಾಂಧಿಧಾಮ್ ಎಂಬಲ್ಲಿಗೆ ವರ್ಗವಾಯಿತು. ಗಂಟುಮೂಟೆ ಕಟ್ಟಿಕೊಂಡು ಹೊರಟೆ. ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ನಾನು ಬಂದಿಳಿದಾಗ ನಿಲ್ದಾಣವು ಜಲಾವೃತವಾಗಿತ್ತು! ಹೊರಗೆ ಹೋಗಿ ನೋಡಿದರೆ ರಸ್ತೆಗಳೂ ಜಲಾವೃತ! ಇಡೀ ಊರೇ ಜಲಾವೃತ! ಭಾರೀ ಮಳೆಯ ಪ್ರಭಾವ! ಅಹಮದಾಬಾದ್‌ನಿಂದ ಹೊರಡಬೇಕಾಗಿದ್ದ ಎಲ್ಲ ಟ್ರೈನ್ ಹಾಗೂ ಬಸ್‌ಗಳೂ ರದ್ದಾಗಿದ್ದವು. ಬೇರೆಡೆಯಿಂದ ಬಂದ ವಾಹನಗಳೂ ಎಲ್ಲೆಲ್ಲೋ ಸುರಕ್ಷಿತ ಸ್ಥಳಗಳಲ್ಲಿ ನಿಂತುಬಿಟ್ಟಿದ್ದವು. ರೈಲ್ವೆ ನಿಲ್ದಾಣದಿಂದ ಹೊರಗೆ ಹೋಗಲೂ ಸಾಧ್ಯವಾಗದಷ್ಟು ನೀರು! ಆ ದಿನವಿಡೀ ನಾನು ರೈಲ್ವೆ ನಿಲ್ದಾಣದಲ್ಲೇ ಕಳೆದೆ.

ಮರುದಿನ ಮಳೆ ಕೊಂಚ ಕಡಿಮೆಯಾಗಿ ಪ್ರವಾಹವು ಇಳಿಮುಖವಾದರೂ ಟ್ರೈನ್ ಸೇವೆ ಆರಂಭವಾಗಲಿಲ್ಲ. ಇನ್ನೂ ೬೮೦ ಕಿಲೋಮೀಟರ್ ಪ್ರಯಾಣಿಸಿ ನಾನು ಮರುದಿನ ಗಾಂಧಿಧಾಮ್‌ನಲ್ಲಿ ಡ್ಯೂಟಿಗೆ ಹಾಜರಾಗಬೇಕಿತ್ತು. ಬಸ್‌ನಲ್ಲಾದರೂ ಮುಂದುವರಿಯೋಣವೆಂದುಕೊಂಡು ನನ್ನ ಲಗೇಜ್‌ಗಳನ್ನು ತಲೆಯಮೇಲೆ ಹೊತ್ತುಕೊಂಡು ಸೊಂಟಮಟ್ಟದ ನೀರಿನೊಳಗಿಳಿದು ಬಸ್ ನಿಲ್ದಾಣದತ್ತ ಹೆಜ್ಜೆಹಾಕತೊಡಗಿದೆ. ನೂರು ಮೀಟರ್ ದೂರ ಹೋಗಿರಬೇಕು, ನೀರಿನಲ್ಲಿ ಅವಿತುಕೊಂಡಿದ್ದ ಆಳವಾದ ಮೋರಿಯೊಂದರೊಳಕ್ಕೆ ಬಿದ್ದುಬಿಟ್ಟೆ! ನನ್ನ ಮೇಲೆ ನನ್ನ ಲಗೇಜು! ನೀರಿನೊಳಗೆ ನನ್ನ ಉಸಿರು ಬಂದ್ ಆಗತೊಡಗಿತು! ನನಗೆ ಈಜು ಬಾರದು! ನನ್ನ ಕಥೆ ಇನ್ನು ಮುಗಿಯಿತು ಎಂದುಕೊಂಡೆ.

ಅಷ್ಟರಲ್ಲಿ ಒಂದೈದಾರು ಕೈಗಳು ಮೇಲಿನಿಂದ ನನ್ನನ್ನು ಜಗ್ಗಲಾರಂಭಿಸಿದವು! ಮುಂದಿನ ಅರ್ಧ ನಿಮಿಷದಲ್ಲಿ ನಾನು ಪುನಃ ರಸ್ತೆಯಮೇಲಿದ್ದೆ! ಯಾರೋ ಪುಣ್ಯಾತ್ಮರು ನನ್ನನ್ನು ಮೋರಿಯಿಂದ ಎತ್ತಿ ಕಾಪಾಡಿದ್ದರು! ನನ್ನ ಲಗೇಜನ್ನೂ ಮೋರಿಯಿಂದೆತ್ತಿ ನನಗೊಪ್ಪಿಸಿದರು.

ಛಲಬಿಡದ ತ್ರಿವಿಕ್ರಮನಂತೆ ನಾನು ಅದೇ ನೀರಿನಲ್ಲೇ ಮುಂದುವರಿದು ಬಸ್ ನಿಲ್ದಾಣ ತಲುಪಿದೆ! ಗಾಂಧಿಧಾಮ್ ಬಸ್‌ಗೆ ಮಾತ್ರ ನಿಲ್ದಾಣದಲ್ಲಿ ಮತ್ತೊಂದೊಪ್ಪೊತ್ತು ಕಾಯಬೇಕಾಯಿತು!

ಬಾಗಿಲು-ಆರು
--------------
೧೯೯೭ರ ಶ್ರಾವಣ ಮಾಸ. ಗುಜರಾತ್‌ನ ಗಾಂಧಿಧಾಮ್‌ಗೆ ಬಂದು ಹೆಚ್ಚು ದಿನಗಳಾಗಿರಲಿಲ್ಲ. ಅದೊಂದು ದಿನ ಬ್ಯಾಂಕ್‌ಗೆ ರಜೆ ಹಾಕಿ, ಜುನಾಗಢ್ ನಗರದಿಂದ ೬ ಕಿಲೋಮೀಟರ್ ದೂರದಲ್ಲಿರುವ ಪ್ರಸಿದ್ಧ ಗಿರ್‌ನಾರ್ ಪರ್ವತಕ್ಕೆ ಪ್ರವಾಸ ಹೊರಟೆ. ಜುನಾಗಢ್‌ನಲ್ಲಿರುವ ಅಶೋಕನ ಶಿಲಾಶಾಸನ ನೋಡಿಕೊಂಡು ಗಿರ್‌ನಾರ್ ಪರ್ವತಶ್ರೇಣಿಯತ್ತ ಹೆಜ್ಜೆಹಾಕಿದೆ.

ಪರ್ವತದಮೇಲಿರುವ ಅಂಬಾಜಿ ದೇವಾಲಯಕ್ಕೆ ಹೋಗಿಬರುವುದು ನನ್ನ ಗುರಿಯಾಗಿತ್ತು. ಮಂದಿರ ತಲುಪಲು ಹತ್ತು ಸಾವಿರ ಮೆಟ್ಟಿಲುಗಳನ್ನು ಹತ್ತಬೇಕಾಗಿತ್ತು. ಬೆಟ್ಟದ ಬುಡದ ದೂಕಾನೊಂದರಲ್ಲಿ ಚಾಯ್ ಕುಡಿದು ಬೆಟ್ಟ ಹತ್ತತೊಡಗಿದೆ.

ದಟ್ಟವಾದ ಕಾನನ, ಸುತ್ತಲೂ ಕಾಣುವ ಪರ್ವತಶ್ರೇಣಿ, ಬೆಟ್ಟಗಳೊಡನೆ ಚಕ್ಕಂದವಾಡುವ ಮೋಡಗಳು, ಇತಿಹಾಸ ಪ್ರಸಿದ್ಧ ನೇಮಿನಾಥ ಮಂದಿರದಿಂದ ಮೊದಲ್ಗೊಂಡು ದಾರಿಯುದ್ದಕ್ಕೂ ಅನೇಕ ಜೈನಮಂದಿರಗಳು, ಭೀಮಕುಂಡ, ಸತ್‌ಪುಡಾ, ಗೋಮುಖಿ ಗಂಗಾ, ಪಥರ್ ಚಾಟಿ, ಭೈರವ್ ಜಪ್, ಭರತ್‌ವನ್, ಶೇಷ್‌ವನ್, ಹನುಮಾನ್ ಧಾರಾ ಮುಂತಾದ ಹಿಂದು ಪವಿತ್ರ ಸನ್ನಿಧಾನಗಳು ಇವುಗಳನ್ನೆಲ್ಲ ನೋಡುತ್ತ ನಡೆದ ನನಗೆ ಆಯಾಸವಾಗಲೀ ಸಮಯ ಹೋದದ್ದಾಗಲೀ ಗೊತ್ತೇ ಆಗಲಿಲ್ಲ. ಬೆಳಗ್ಗೆ ಜುನಾಗಢ್ ಬಿಟ್ಟ ನಾನು ಪರ್ವತದ ತುದಿಯ ಅಂಬಾಜಿ ಮಂದಿರ ತಲುಪಿದಾಗ ಅಪರಾಹ್ನವಾಗಿತ್ತು. ಅಂಬಾಜಿ (ಅಂಬೆ ಮಾತೆ) ದರ್ಶನ ಮಾಡಿ ಪರ್ವತ ಇಳಿಯತೊಡಗಿದೆ.

ಕತ್ತಲಾಗುವುದರೊಳಗೆ ಪೂರ್ತಿ ಪರ್ವತ ಇಳಿಯಲು ಸಾಧ್ಯವೇ ಎಂದು ಯೋಚಿಸುತ್ತ ಸರಸರನೆ ಹೆಜ್ಜೆಹಾಕತೊಡಗಿದೆ. ಕರಿಮೋಡಗಳು ಬೇರೆ ಕವಿಯತೊಡಗಿದ್ದವು. ಸಾವಿರ ಮೆಟ್ಟಿಲು ಕೆಳಗಿಳಿದಿರಬಹುದು, ಮಳೆ ಶುರುವಾಯಿತು. ಭಾರೀ ಮಳೆ! ಜೊತೆಗೆ, ಜೋರಿನ ಗಾಳಿಯಿಂದಾಗಿ ಹೊಗೆಯಂತೆ ಹಾರಾಡುವ ತುಂತುರು ನೀರಿನ ದಟ್ಟಣೆ! ಎದುರಿನ ದೃಶ್ಯವೇನೂ ಕಾಣದಾಯಿತು! ಹಿಂದೆ-ಮುಂದೆ ಯಾರೊಬ್ಬರೂ ಇಲ್ಲ! ಇನ್ನೂ ೯೦೦೦ ಮೆಟ್ಟಿಲು ಇಳಿಯಬೇಕು! ಸುತ್ತಲೂ ಕಾಡು! ಕಣ್ಣೆದುರಿನ ಮಳೆಯ ತೆರೆಯಿಂದಾಗಿ ದಿಕ್ಕು ತಪ್ಪುವ ಸಾಧ್ಯತೆ! ಕತ್ತಲು ಕವಿಯುವ ಅಪಾಯ ಬೇರೆ!

ಹುಚ್ಚು ಧೈರ್ಯದಿಂದ ಮುಂದುವರಿದೆ. ಚಳಿಗೆ ಇಡೀ ದೇಹ ಕಂಪಿಸತೊಡಗಿತು. ಮಳೆಬಿದ್ದ ನೆಲದಲ್ಲಿ ಕಾಲುಗಳು ಜಾರತೊಡಗಿದವು. ಕೆಲವೆಡೆ ಜಾರಿಬಿದ್ದರೆ ಪ್ರಪಾತ! ಇಷ್ಟು ಸಾಲದೆಂಬಂತೆ, ಹೆಜ್ಜೆಹೆಜ್ಜೆಗೆ, ಮಳೆಯಿಂದಾಗಿ ಅದೇತಾನೆ ನಿರ್ಮಿತವಾಗಿ ತಲೆಮೇಲೆ ಬೀಳುತ್ತಿರುವ ಮಿನಿ ಜಲಪಾತದಂಥ ಜಲಧಾರೆಗಳು! ಆ ಜಲಪಾತಗಳಿಗೆ ತಲೆಯೊಡ್ಡಿಯೇ ಮುಂದೆ ಸಾಗಬೇಕು; ಪಕ್ಕಕ್ಕೆ ಸರಿಯಲು ಸ್ಥಳವಿಲ್ಲ. ಒಂದು ವೇಳೆ ಸ್ಥಳವಿದ್ದರೂ, ಆ ಕಡೆ ಹೋದರೆ ಬೆಟ್ಟದಿಂದ ಕೆಳಗೆ ಜಾರಿಬೀಳುವ ಅಪಾಯ!

ನಾನು ಮನೆ ತಲುಪುವುದಿಲ್ಲವೆಂಬುದು ಖಾತ್ರಿಯಾಯಿತು! ಹಣೆಯಲ್ಲಿ ಬರೆದಂತೆ ಆಗಲಿ; ಪ್ರಕೃತಿಯ ಈ ರುದ್ರರಮಣೀಯ ರೂಪದ ಆಸ್ವಾದನೆಯ ಅನುಭವ ಆಗುತ್ತಿದೆಯಲ್ಲಾ, ನನ್ನ ಜೀವನ ಸಾರ್ಥಕ ಅಂದುಕೊಳ್ಳುತ್ತ, ಪ್ರಕೃತಿರಸಾಸ್ವಾದ ಮಾಡುತ್ತ ಖುಷಿಯಿಂದಲೇ ಮುಂದುವರಿದೆ. ಗಾಳಿಯ ಆರ್ಭಟದ ಮಧ್ಯೆ ಮಳೆನೀರಿನ ಧೂಮಚಾಪೆ ಆಚೀಚೆ ಸರಿದಾಗಲೊಮ್ಮೊಮ್ಮೆ ಸುತ್ತಲಿನ ಕಾಡು ಮತ್ತು ದೂರದ ಪರ್ವತಶ್ರೇಣಿ ಗೋಚರಿಸಿ ಎದೆ ಝಲ್ಲೆನ್ನುತ್ತಿತ್ತು! ಅಂಥ ಘೋರ ವಾತಾವರಣದಲ್ಲಿ ನಾನೊಬ್ಬನೇ ಪಿಶಾಚಿಯಂತೆ ಹೆಜ್ಜೆಹಾಕುತ್ತಿದ್ದೆ!

ಚಳಿಯಿಂದ ನನ್ನ ಕೈಕಾಲುಗಳು ಮರಗಟ್ಟತೊಡಗಿದವು. ಕ್ರಮೇಣ ಅವು ಮರದ ಕೊರಡಿನಂತಾಗಿಬಿಟ್ಟವು! ಬಾಯಿಯೋ, ಮುಚ್ಚಲೂ ಸಾಧ್ಯವಾಗುತ್ತಿಲ್ಲ, ತೆರೆಯಲೂ ಸಾಧ್ಯವಾಗುತ್ತಿಲ್ಲ, ಇದ್ದ ಸ್ಥಿತಿಯಲ್ಲೇ ನಿಶ್ಚಲ! ಚಳಿಯಿಂದ ದೇಹ ನಡುಗಿ ಎತ್ತೆತ್ತಲೋ ಚಿಮ್ಮುತ್ತಿತ್ತು! ಇಂಥ ಸ್ಥಿತಿಯಲ್ಲೂ ನಾನು ಪ್ರಕೃತಿಯೊಡನೆ ಒಂದಾಗಿ ಸಾಗುವ ಆ ಅನುಭವವನ್ನು ಮನಸಾರೆ ಸವಿಯುತ್ತ ಮುಂದುವರಿದಿದ್ದಂದಾಗಿ ನನಗೆ ಯಾವ ಭಯವೂ ಆಗಲಿಲ್ಲ. ಮನೆ ತಲುಪುವ ವಿಶ್ವಾಸವನ್ನು ಮಾತ್ರ ನಾನು ಖಂಡಿತ ಹೊಂದಿರಲಿಲ್ಲ.

ಹೀಗೇ ಬಹಳ ಹೊತ್ತು ಪರ್ವತಾವರೋಹಣ ಮಾಡಿದಮೇಲೆ ದೂರದಲ್ಲೊಂದು ಚಾ ದುಕಾನು ಕಾಣಿಸಿತು. ಪರ್ವತದ ಬಹುತೇಕ ಕೆಳಭಾಗದಲ್ಲಿದ್ದ ದುಕಾನು ಅದು. ಅಲ್ಲಿಗೆ ಧಾವಿಸಿದೆ. ಪುಣ್ಯಾತ್ಮ ನನಗಾಗಿ ಸ್ಟವ್ ಹಚ್ಚಿ ಒಂದಷ್ಟು ಟೀ ಕುದಿಸಿ ಕೊಟ್ಟ. ಕುದಿಬಿಸಿ ಟೀಯನ್ನೇ ಗಟಗಟನೆ ಕುಡಿದೆ. ಕೈಕಾಲಿನ ಬೆರಳುಗಳು ಕೊಂಚ ಮಿಸುಕಾಡಿದವು. ಸಜೀವವಾಗಿ ಮನೆ ಸೇರುತ್ತೇನೆಂಬ ನಂಬಿಕೆ ಬಂತು. ಚಾ ಕುಡಿದು ಅಲ್ಲಿಂದ ಹೊರಹೊರಟಾಗ ಪೂರ್ಣ ಕತ್ತಲಾಗಿತ್ತು. ಉಳಿದ ಕೆಲವೇ ಮೆಟ್ಟಲುಗಳನ್ನಿಳಿದು ಪರ್ವತ ತಲಕ್ಕೆ ಬಂದು ತಲುಪಿದೆ.

ಈ ರೋಮಾಂಚಕಾರಿ ಅನುಭವದಿಂದ ನಿಜಕ್ಕೂ ಆ ದಿನ ನನಗೆ ಎಷ್ಟು ಖುಷಿಯಾಗಿತ್ತೆಂದರೆ, ಪರ್ವತ ಇಳಿದ ನಾನು, ನಿಲ್ಲಲೂ ಸಾಧ್ಯವಿಲ್ಲದಂಥ ನಿತ್ರಾಣಾವಸ್ಥೆಯಲ್ಲಿಯೇ ಆರು ಕಿಲೋಮೀಟರ್ ನಡೆದು ಜುನಾಗಢ್ ನಗರಕ್ಕೆ ಬಂದು, ಕೃಷ್ಣಜನ್ಮಾಷ್ಟಮಿ ನಿಮಿತ್ತ ರಸ್ತೆಯಲ್ಲಿ ಸಾಗಿದ್ದ ಬೃಹತ್ ಮೆರವಣಿಗೆಯನ್ನು ಎರಡು ಗಂಟೆ ಕಾಲ ನಿಂತು ನೋಡಿ, ಊಟಮಾಡಿ ಬಸ್ ನಿಲ್ದಾಣಕ್ಕೆ ವಾಪಸಾಗಿ, ಬೆಳಗಿನ ಜಾವದವರೆಗೆ ಕಾದು, ಬಸ್ ಹಿಡಿದು ಗಾಂಧಿಧಾಮ್ ತಲುಪಿ, ನೇರ ಬ್ಯಾಂಕಿಗೆ ಧಾವಿಸಿ ಡ್ಯೂಟಿಗೆ ಹಾಜರಾದೆ! ಗಿರ್‌ನಾರ್ ಪರ್ವತದಲ್ಲಿ ಪ್ರಾಣತ್ಯಾಗ ನಿಶ್ಚಿತ ಎಂದುಕೊಂಡಿದ್ದವನಿಗೆ ಪ್ರಾಣ ಉಳಿದ ಖುಷಿಯೂ ಕಸುವು ನೀಡಿರಬಹುದು.

ಬಾಗಿಲು-ಏಳು
--------------
೨೦೦೫ರ ಜನವರಿ. ೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿತನಾಗಿ ಬೀದರ ನಗರಕ್ಕೆ ಹೋಗಿದ್ದ ನಾನು ಸಮ್ಮೇಳನ ಮುಗಿಸಿಕೊಂಡು ವಾಪಸ್ ಬೆಂಗಳೂರಿನ ಟ್ರೈನ್ ಹತ್ತಿದೆ. ಮೂರು ದಿನ ಸಾಹಿತ್ಯರಸದೌತಣ ಸವಿದದ್ದರ ಜೊತೆಗೆ ಉದ್ಘಾಟನೆಯ ದಿನ ವೇದಿಕೆಯಲ್ಲಿ ಮಿಂಚಿದ ಖುಷಿ ನನಗೆ ಎಷ್ಟಿತ್ತೆಂದರೆ ಸಮ್ಮೇಳನದಲ್ಲಿ ನನ್ನ ನಾಲ್ಕೂವರೆ ಸಾವಿರ ರೂಪಾಯಿ ಹಣ ಕಳುವಾದ ಬೇಸರವೂ ಆ ಖುಷಿಯೆದುರು ನಗಣ್ಯವಾಗಿಬಿಟ್ಟಿತ್ತು! ಖುಷಿಯಾಗಿ ಟ್ರೈನ್ ಹತ್ತಿದವನಿಗೆ ಇದ್ದಕ್ಕಿದ್ದಂತೆ ಘೋರ ಹೊಟ್ಟೆನೋವು! ಜೀವಸಹಿತ ಬೆಂಗಳೂರು ತಲುಪುತ್ತೇನೋ ಇಲ್ಲವೋ ಎನ್ನುವಷ್ಟು ಹೊಟ್ಟೆನೋವು! ಹೇಗೋ ಸುಧಾರಿಸಿಕೊಂಡು ಬೆಂಗಳೂರು ತಲುಪಿದೆ.

ಮನೆ ತಲುಪಿದವನೇ ಸ್ನಾನ ಮಾಡಿ ನನ್ನ ಕೋಣೆಯೊಳಗೆ ಮಲಗಿಬಿಟ್ಟೆ. ನನ್ನ ಬಾಡಿದ ಮುಖ ಗಮನಿಸಿದ ನನ್ನ ೧೮ ವರ್ಷದ ಕಿರಿಮಗ ಆರೋಗ್ಯ ವಿಚಾರಿಸಿದ. ಹೊಟ್ಟೆನೋವೆಂದಾಕ್ಷಣ ಸನಿಹದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕೂಡಲೇ ದಾಖಲಾಗುವಂತೆ ಒತ್ತಾಯಿಸತೊಡಗಿದ. ನನ್ನ ಹಿರಿಮಗ ಮತ್ತು ನನ್ನಾಕೆಯೂ ದನಿಗೂಡಿಸಿದರು. ಆದರೆ ನಾನು ಸುತರಾಂ ಒಪ್ಪಲಿಲ್ಲ. ಬೀದರದಲ್ಲಿ ಆಹಾರದೋಷ ಉಂಟಾಗಿರಬಹುದು, ತಾನಾಗಿಯೇ ಗುಣವಾಗುತ್ತದೆ ಎಂದು ಹೇಳಿ ಅವರನ್ನು ಸುಮ್ಮನಾಗಿಸಲೆತ್ನಿಸಿದೆ. ಕಿರಿಮಗ ಮಾತ್ರ ಸುಮ್ಮನಾಗಲಿಲ್ಲ. ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ಒಂದೇಸವನೆ ಹೇಳತೊಡಗಿದ. ನಾನು ಒಪ್ಪದಿದ್ದಾಗ ಮನೆಯ ಉಪ್ಪರಿಗೆ ಮೆಟ್ಟಿಲಮೇಲೆ ಹೋಗಿ ಕುಳಿತು ಅಳತೊಡಗಿದ. ಆಹಾರ ನಿರಾಕರಿಸಿದ. ತತ್‌ಕ್ಷಣ ನಾನು ಆಸ್ಪತ್ರೆಗೆ ದಾಖಲಾದರೇನೇ ತಾನು ಆಹಾರ ಮುಟ್ಟುವುದಾಗಿ ಹಠಹಿಡಿದ.

ಅವನ ಹಠಕ್ಕೆ ಸೋತು ನಾನು ಆ ಕೂಡಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾದೆ. ಚಕಚಕನೆ ಪರೀಕ್ಷೆಗಳು ನಡೆದವು. ಪಿತ್ತಕೋಶದ ತುಂಬ ಕುಳಿಗಳಾಗಿದ್ದುದು ಪರೀಕ್ಷೆಯಿಂದ ಗೊತ್ತಾಯಿತು! ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಪಿತ್ತಕೋಶವನ್ನೇ ತೆಗೆದುಹಾಕಲಾಯಿತು! ವಿಳಂಬ ಮಾಡಿದ್ದರೆ ಜೀವಗಂಡಾಂತರವಿತ್ತೆಂದು ಸರ್ಜನ್ ಹೇಳಿದರು!

ಇಷ್ಟು ಕುಳಿಗಳಿಂದ ಕೂಡಿದ ಪಿತ್ತಕೋಶವನ್ನು ತನ್ನ ಸುದೀರ್ಘ ಸೇವಾವಧಿಯಲ್ಲಿ ತಾನು ನೋಡಿಯೇ ಇಲ್ಲವೆಂದೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠಮಾಡುವಾಗ ತೋರಿಸಲು ಆ ಪಿತ್ತಕೋಶವನ್ನು ತಾವೇ ಇಟ್ಟುಕೊಳ್ಳುವುದಾಗಿಯೂ ನಂತರ ಆ ಸರ್ಜನ್ ನನಗೆ ತಿಳಿಸಿದರು!

ಏಳು ಜನ್ಮ
-----------
ಹೀಗೆ, ಒಂದಲ್ಲ, ಎರಡಲ್ಲ, ಏಳು ಸಲ ನಾನು ಸಾವಿನ ಮನೆ ಬಾಗಿಲನ್ನು ತಟ್ಟಿ ವಾಪಸು ಬಂದಿದ್ದೇನೆ!

ನನ್ನ ಹಣೆಯಲ್ಲಿ ಬದುಕು ಬರೆದಿತ್ತು. ಹಾಗಾಗಿ ಏಳು ಸಲವೂ ಬದುಕಿ ಉಳಿದೆ. ಬರೆದ ಬರಹವನ್ನು ತಪ್ಪಿಸಲು ಹರಿ ಹರ ವಿರಿಂಚರಿಗೂ ಸಾಧ್ಯವಿಲ್ಲ.

ಈಚೆಗೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ನೂರಾರು ಮಂದಿ ಜಲಸಮಾಧಿ ಹೊಂದಿದ್ದನ್ನು ಟಿವಿಯಲ್ಲಿ ನೋಡಿದಾಗ ನನಗೆ ಈ ’ಏಳು (ಪುನರ್)ಜನ್ಮ’ದ ಘಟನೆಗಳು ಕಣ್ಮುಂದೆ ಸುಳಿದವು. ಏಳರಲ್ಲಿ ನಾಲ್ಕು ಘಟನೆಗಳು ಜಲಸಮಾಧಿಯಾಗಹೊರಟಿದ್ದ ಘಟನೆಗಳೇ ತಾನೆ!

ಗುರುವಾರ, ಅಕ್ಟೋಬರ್ 15, 2009

ಹವಾ-ಮಾನ

ಕಳೆಯದಿರೋಣ ಹವಾಮಾನದ ಮಾನ
ಉಳಿಸಿಕೊಳ್ಳೋಣ ಸುರಕ್ಷಿತ ಈ ತಾಣ
ಏರದಿರಲಿ ಉಷ್ಣತೆಯ ಪ್ರಮಾಣ
ಆರದಿರಲಿ ಜೀವಜಂತು ಪ್ರಾಣ

ಹರಿಯದಿರಲಿ ನೀರ್ಗಲ್ಗಳು ಕರಗಿ
ಮೊರೆಯದಿರಲಿ ಹೊಳೆ ನದಿಗಳು ಉಕ್ಕಿ
ಸಾಯದಿರಲಿ ಬಡಜೀವವು ಕೊರಗಿ
ಹಾಯದಿರಲಿ ಅತಿವೃಷ್ಟಿಯು ಸೊಕ್ಕಿ

ರಸ್ತೆ ತುಂಬ ಕಾರುಗಳದೆ ಕಾರುಬಾರು
ಮಸ್ತು ಅದೋ, ಇಂಗಾಲದ ಉಗುಳುವಿಕೆ
ಪರಿಣಾಮ, ವಾಯುಗುಣವೆ ಏರುಪೇರು
ಹರಿಯೇ, ಈ ದುರವಸ್ಥೆಯು ನಮಗೆ ಬೇಕೆ?

ಕಲ್ಲಿದ್ದಲು ಸುಟ್ಟು ನಮಗೆ ವಿದ್ಯುಚ್ಛಕ್ತಿ
ಅಲ್ಲಿ ಪರಿಸರಕ್ಕೆ ಇಂಗಾಲಾಮ್ಲ ಭುಕ್ತಿ
ಒಳ್ಳೆಯ ಪರ್ಯಾಯವದುವೆ ಸೂರ್ಯಶಕ್ತಿ
ಎಲ್ಲ ಗೊತ್ತಿದ್ದರೂ ನಮಗೆ ಇಲ್ಲ ಆಸಕ್ತಿ

ಹವಾಮಾನ ಬದಲಾವಣೆ ಪರಿಣಾಮವು ಘೋರ
ಹೆಚ್ಚುತಿರುವ ತಾಪಮಾನ ಭೂಮಿಗೇ ಅಪಾಯ
ಮಾನ್ಸೂನ್‌ಗಳು ಅಸ್ತವ್ಯಸ್ತ, ಬರ, ಮಹಾಪೂರ
ಕಡಲಬ್ಬರ, ಸುನಾಮಿಗಳು, ಸಡಿಲ ಇಳೆಯ ಪಾಯ

ಪರಿಸ್ಥಿತಿಯು ಕೈಮೀರುವ ಮುನ್ನವೆ ನಾವೆಲ್ಲ
ಜಾಗೃತರಾಗೋಣ ನಮ್ಮ ಜಗವನುಳಿಸಲು
ಹವಾಮಾನ ವೈಪರೀತ್ಯದುಪಶಮನಕೆ ಎಲ್ಲ
ಯತ್ನಿಸೋಣ ಈಗಿಂದಲೆ ಮಹಾಸಮರದೋಲು

(ಇಂದು ’ಬ್ಲಾಗ್ ಕಾರ್ಯಾಚರಣೆ ದಿನ’. ಈ ಸಲದ ವಿಷಯ ’ಹವಾಮಾನ ಬದಲಾವಣೆ’. ತನ್ನಿಮಿತ್ತ ಈ ಕವನ.)

ಶುಕ್ರವಾರ, ಅಕ್ಟೋಬರ್ 9, 2009

ಎಲ್ಲ ಮೂರಾಬಟ್ಟೆ!

(’ಕರ್ನಾಟಕ ರಾಜ್ಯೋತ್ಸವ’ ಸಮೀಪಿಸುತ್ತಿದೆ. ಸರ್ಕಾರಿ ಪ್ರಶಸ್ತಿಗಾಗಿ ’ಕನ್ನಡದ ಕಲಿ’ಗಳನೇಕರು ’ಕಂಡಕಂಡವರ ಕೈಕಾಲ್ ಹಿಡಿಯುವಾಟ’ ನಡೆಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕೂ ಸಿಕ್ಕಿಲ್ಲದಂತಾಗಿದೆ. ಊಹ್ಞೂ. ಸಿಕ್ಕುಸಿಕ್ಕಾಗಿದೆ! ಶಿಕ್ಷಣದಲ್ಲಿ ಕನ್ನಡ-ಇಂಗ್ಲಿಷ್‌ಗಳ ಜಟಾಪಟಿ ಮುಂದುವರಿದಿದೆ. ಇಂಥ ’ಸನ್ನಿ’ವೇಶದಲ್ಲಿ, ಇದೋ, ಒಂದು ಹಾಸ್ಯವಿಡಂಬನೆ.)

ದಯೆಯಿಟ್ಟು ಕ್ಷಮಿಸಿ.

ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಮೂರು ಘಟನೆಗಳತ್ತ ನಿಮ್ಮ ಚಿತ್ತ ಸೆಳೆಯುತ್ತ, ಮೂರಕ್ಕೂ ಸಂಬಂಧ ಕಲ್ಪಿಸಲೆತ್ನಿಸುತ್ತ, ನಿಮ್ಮ ಪಿತ್ತ ನೆತ್ತಿಗೇರುವಂತೆ ಮಾಡುತ್ತ ಮುಂದುವರಿಯಲಿದ್ದೇನೆ, ದಯೆಯಿಟ್ಟು ಕ್ಷಮಿಸಿ.

ಘಟನೆ ಒಂದು
--------------
ಸಂಸ್ಕೃತ ಪದವಿ ಪಡೆದ ಶಾಸ್ತ್ರಿಯಾದ್ದರಿಂದ ಎಂದಿನಂತೆ ನನ್ನನ್ನು ಸಂಸ್ಕೃತಿ ಸಂಬಂಧಿ ಸಮಾರಂಭವೊಂದಕ್ಕೆ ಎಳೆದುಕೊಂಡುಹೋಗಿ ವೇದಿಕೆಯಮೇಲೆ ಕುಳ್ಳಿರಿಸಲಾಯಿತು. ಸಂಸ್ಕೃತ ಪದವಿ ಪಡೆದ ಶಾಸ್ತ್ರಿಯಾದ್ದರಿಂದಲೇ ಏನೋ, ನಾನು ಆ ಸಮಾರಂಭದಲ್ಲಿ ವಿವಿಧ ಶಾಸ್ತ್ರಾಚರಣೆಗಳ ಬಗ್ಗೆ ಸಂಸ್ಕೃತಭೂಯಿಷ್ಟ ಕನ್ನಡದಲ್ಲಿ ಕೊರೆಯತೊಡಗಿದೆ. ಒಡನೆಯೇ ಸಭಾಸದರ ಸಣ್ಣ ಗುಂಪೊಂದು ಎದ್ದು ನನ್ನತ್ತ ’ಸಂಸ್ಕೃತ’ ಶಬ್ದಗಳ ಬಾಣಗಳನ್ನು ಬಿಡತೊಡಗಿತು!

’ಮುಚ್ಚಲೋ, ಮುಂ...!’ ಮುಂತಾಗಿ ಆಣಿಮುತ್ತುಗಳು ಉದುರತೊಡಗಿದವು! ಜೊತೆಗೆ ಘೋಷಣೆಗಳು:

’ಶಾಸ್ತ್ರ-ಗೀಸ್ತ್ರ ಡೌನ್ ಡೌನ್.’
’ಶಾಸ್ತ್ರಿ ಬುಡ್ಡಾ ಡೌನ್ ಡೌನ್.’
’ಸಮಸ್ಕ್ರುತ ಡೌನ್ ಡೌನ್.’
’ಬೇಡಾ, ಬೇಡಾ.’ ’ಸಮಸ್ಕ್ರುತ ವಿವಿ ಬೇಡಾ.’
’ಖನ್ನಢಾಂಬೆಗೆ,’ ’ಝಯವಾಗಲಿ.’
’ಖನ್ನಡ ರಕ್ಷಣ್ವೇದ್ಕೆಗೆ,’ ’ಝಯವಾಗಲಿ.’

(ಅ)ಭದ್ರತಾ ಕಾ’ರಣ’ದಿಂದಾಗಿ ಸಭೆ ಬರಖಾಸ್ತಾಯಿತು.

ಘಟನೆ ಎರಡು
--------------
ನಾನು ಒಂಥರಾ ರಾಜಕಾರಣಿ ಇದ್ದಂಗೆ. ಯಾವ ವಿಷಯದ ಮೇಲೆ ಬೇಕಾದ್ರೂ ಮಾತಾಡ್ತೀನಿ. ವಿಷಯವೇ ಇಲ್ದೆ ಇದ್ರೂ ಕನಿಷ್ಠ ಪಕ್ಷ ಅರ್ಧ ಗಂಟೆಯಾದ್ರೂ ಕೊರೀತೀನಿ. ಮಾತಾಡೋ ವಿಷಯದ ಬಗ್ಗೆ ನನಗೆ ತಿಳಿವಳಿಕೆ ಇರಬೇಕು ಅಂತೇನೂ ಇಲ್ಲ. ಏನೂ ಗೊತ್ತಿಲ್ದೆ ಇದ್ರೂ ಬಂಬಾಟಾಗಿ ಭಾಷ್ಣ ಬಿಗೀತೀನಿ. ಭಾಷ್ಣಕ್ಕೆ ಬೇಕಾಗಿಲ್ಲ ತಲೆ. ತಲೆಯಿಲ್ಲದವರಿಗೇ ವಿಶೇಷವಾಗಿ ಸಿದ್ಧಿಸುತ್ತೆ ಈ ಕಲೆ. ಇದು ನನ್ನ (ತಲೆಬುಡವಿಲ್ಲದ) ಖಚಿತ ಅಭಿಪ್ರಾಯ. ಇಂಥಾ ಕಲೆ ನನಗೆ ಸಿದ್ಧಿಸಿದೆ.

ಈ ಕಾರಣದಿಂದ್ಲೇ ನನ್ನನ್ನು ಬಾಳಾ ಕಡೆ ಭಾಷ್ಣಕ್ಕೆ ಕರೀತಾರೆ. ಬಾಳಾ ಮಂದಿ ಸಂಘಟಕ್ರಿಗೆ ನಾನು ಅದೇನೋ ಲಾಸ್ಟ್ ರೆಸಾರ್ಟ್ ಅಂತೆ. ಹಂಗಂದ್ರೇನೋ ನಂಗೊತ್ತಿಲ್ಲ. ನಂಗೊತ್ತಿರೋದು ಒಂದೇ ರೆಸಾರ್ಟು. ಕುತಂತ್ರ ಮಾಡ್ಬೇಕಾದಾಗೆಲ್ಲ ನಮ್ಮ ಪುಢಾರಿಗಳು ಹೋಗಿ ಕೂತ್ಕತಾರಲ್ಲ, ಆ ರೆಸಾರ್ಟು. ಅದೇ ಫಸ್ಟು, ಅದೇ ಲಾಸ್ಟು ನಂಗೊತ್ತಿರೋ ರೆಸಾರ್ಟು.

ಕಳೆದ ವಾರ ಒಂದ್ಕಡೆ ಭಾಷ್ಣಕ್ಕೆ ಕರೆದಿದ್ರು. ಹೋಗಿದ್ದೆ. ಅಲ್ಲಿ ನನ್ನನ್ನು ಸಭೆಗೆ ಪರಿಚಯ ಮಾಡಿಕೊಡ್ತಾ ಸಂಘಟಕ್ರು ಏನಂದ್ರು ಅಂದ್ರೆ, ’ಶಾಸ್ತ್ರೀಯವರ ಭಾಷಣಕ್ಕೆ ಇಲ್ಲಿಯತನಕ ಯಾವುದೂ ಸ್ಥಾನ, ಮಾನ ಇರಲಿಲ್ಲ; ಈಗ ಸರ್ಕಾರದ ದಯದಿಂದ ಸ್ಥಾನ, ಮಾನ ದೊರಕಿದೆ; ಇದು ನಮಗೆಲ್ಲಾ ಸಂತೋಷದ ವಿಷಯ’, ಅಂದ್ರು!

ಅಷ್ಟರಲ್ಲಿ ಯಾರೋ ಬಂದು ಅವರ ಕಿವಿಯಲ್ಲಿ, ’ಭಾಷ್ಣ ಅಲ್ಲ, ಭಾಷೆ’, ಅಂತ ಒದರಿ ಹೋದ್ರು.

’ಹಂಗಾ?’ ಅಂತ ಉದ್ಗಾರ ತೆಗೆದು ಸಂಘಟಕ್ರು ತಮ್ಮ ಮಾತನ್ನು ತಿದ್ದಿಕೊಂಡು ಮತ್ತೆ ಹೇಳಿದರು,
’ಶಾಸ್ತ್ರೀಯವರ ಭಾಷಣಕ್ಕಲ್ಲ, ಅವರ ಭಾಷೆಗೇನೇ ಇಲ್ಲೀತನಕ ಸ್ಥಾನ, ಮಾನ, ಏನೂ ಇರ್‍ಲಿಲ್ಲ; ಈಗ ಸರ್ಕಾರ ಎಲ್ಲಾ ದಯಪಾಲಿಸಿದೆ; ಅದಕ್ಕೆ ಸರ್ಕಾರಕ್ಕೆ ಹ್ರುತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.’

ಸದರಿ ಸಂಘಟಕರ ’ಶಾಸ್ತ್ರೀಯ ಸ್ಥಾನಮಾನದ ಜ್ಞಾನ’ದ ಕೊರತೆಯು ಈ ಶಾಸ್ತ್ರಿಯ ಸ್ಥಾನದ ಮಾನದ ಜೊತೆಗೆ ಶಾಸ್ತ್ರಿಯ ಮಾನವನ್ನೂ ಕಳೆದುಬಿಟ್ಟಿತು!

ಇನ್ನೊಂದ್ಕಡೆ ಭಾಷ್ಣಕ್ಕೆ ಹೋಗಿದ್ದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡಲು ಹೋರಾಡಿದಂಥ ಬಿಟ್ಬಂದಳ್ಳಿ ಯುವಕರನ್ನು ಗ್ರಾಂಪಂಚಾಯ್ತಿ ವತಿಯಿಂದ ಸನ್ಮಾನಿಸೋ ಸಮಾರಂಭ ಅದು. ನಾನೇ ’ಮುಕ್ಯ ಹತಿತಿ’. ಗ್ರಾಂಪಂಚಾಯ್ತಿ ಅಧ್ಯಕ್ಷರೇ ಸಮಾರಂಭದ ಅಧ್ಯಕ್ಷರು. ಸಮಾರಂಭ ಚೆನ್ನಾಗಿ ನಡೀತು. ಕೊನೇಲಿ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಹೇಳಿದ್ದು:

’ಕನ್ನಡಕ್ಕೆ ಹದೆಂತದೋ ಸಾಸ್ತ್ರಿ ಸ್ನಾನ, ಅಲ್ಲ, ಸ್ತಾನ ಬಂದದಂತೆ. ಬೋ ಸಂತೋಸ. ಅಂದ್ರೆ ಇನ್ಮ್ಯಾಕೆ ಸಾಸ್ತ್ರ ಎಲ್ಲಾವ ಕನ್ನಡ್ದಾಗೇ ಯೋಳ್ಬವುದು ಅಂದಂಗಾತು. ಶಾನೇ ಕುಶಿ ವಿಷ್ಯ. ಇಲ್ಲೀಗಂಟ ನಮ್ ಐನೋರು ಮದ್ವಿ ಇರ್‍ಲಿ ಮುಂಜ್ವಿ ಇರ್‍ಲಿ ಯೆಂತದೇ ಇರ್‍ಲಿ, ಬರೀ ಸಮುಕ್ರುತದಾಗೇ ಮಂತ್ರ ಯೋಳಿ ಸಾಸ್ತ್ರ ಮಾಡಿಸ್ತಿದ್ರು. ಒಂದೂ ನಮಗರ್ತ ಆಗಾಕಿಲ್ಲ ಯೇನಿಲ್ಲ. ಇನ್ಮ್ಯಾಕೆ ಯೆಲ್ಲಾ ಕನ್ನಡ್ದಾಗೇ ಮಾಡಿಸ್ಬವುದು ಅಂತಂದ್ರೆ ಬಾಳ ಬೇಸಾತ್ ಬುಡಿ. ಅಂದಂಗೆ, ಕೈನೋಡಿ, ಜಾತ್ಕ ನೋಡಿ, ಕವ್ಡೆ ಹಾಕಿ, ಗಿಣಿ ಬಾಯಿಂದ ಎತ್ಸಿ, ಹಿಂತಾ ಸಾಸ್ತ್ರ ಯೋಳದೆಲ್ಲ ಯೆಂಗೂವೆ ಕನ್ನಡ್ದಾಗೇ ನಡೀತಾ ಐತೆ, ಈಗ ಮದ್ವಿ ಮುಂಜ್ವಿ ಸಾಸ್ತ್ರಗ್ಳೂ ಕನ್ನಡ್ದಾಗೇ ಅಂತಂದ್ರೆ ಬಾಳ ಬೇಸಾತು.’

ಅಧ್ಯಕ್ಷರ ಈ ಮಾತುಗಳಿಗೆ ಭರ್ಜರಿ ಚಪ್ಪಾಳೆ ಬಿದ್ವು!

ಮತ್ತೊಂದು ಸಮಾರಂಭ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಹೋರಾಡಿದವರನ್ನು ರಾಜ್ಯಮಟ್ಟದಲ್ಲಿ ಸನ್ಮಾನಿಸೋ ಸಮಾರಂಭ. ’ಕರ್ನಾಟಕ ರಕ್ಷಣಾ ರಣ ವೀರ ಪಡೆ’ ಏರ್ಪಡಿಸಿದ್ದು. ಎಂದಿನಂತೆ ನಾನು ಮುಖ್ಯ ಅತಿಥಿ. ಈ ಸಮಾರಂಭದ ಅಧ್ಯಕ್ಷತೆ ಆ ಊರಿನ ಜಗತ್ಪ್ರಸಿದ್ಧ ಉದಯೋನ್ಮುಖ ಹಿರಿ ಕವಿ ಮಹಾಂತೇಶಜ್ಜಾ ಅವರದು. ಸ್ಥಳೀಯ ’ದರ್ಶನ(ವಿಲ್ಲದ) ಚಿಟ್ ಫಂಡ್ಸ್’ ಸಂಸ್ಥೆಯಿಂದ ’ಕನ್ನಡ ಕಾವ್ಯ ಸಿಂಧು’ ಬಿರುದಾಂಕಿತರಿವರು. ಇವರ ಭಾಷಣ ವಿಚಾರಪ್ರಚೋದಕವಾಗಿತ್ತು.

ಕ.ಕಾ.ಸಿಂಧು ಮಹಂತೇಶಜ್ಜಾ ಅವರು ಏನು ಹೇಳಿದರು ಅಂದ್ರೆ,
’ಕನ್ನಡ ಇನ್ನು ಶಾಸ್ತ್ರೀಯ ಭಾಷೆ. ಆದ್ದರಿಂದ ನಾವು ಇನ್ನು ಅದನ್ನು ಅಶಾಸ್ತ್ರೀಯ ರೂಪದಲ್ಲಿ ಬಳಸುವಂತಿಲ್ಲ. ಅಂದರೆ, ಪದಗಳನ್ನು ತಿರುಚುವುದಾಗಲೀ ಅಪಭ್ರಂಶ ಮಾಡುವುದಾಗಲೀ ಇಂಗ್ಲಿಷ್ ಮುಂತಾದ ಅನ್ಯ ಭಾಷೆಗಳನ್ನು ಮಧ್ಯೆ ಮಧ್ಯೆ ಬೆರೆಸುವುದಾಗಲೀ ಮಾಡುವಂತಿಲ್ಲ. ಶಾಸ್ತ್ರೀಯವಾದ ಕನ್ನಡವನ್ನೇ ಮಾತಾಡಬೇಕಾಗುತ್ತದೆ ಮತ್ತು ಶಾಸ್ತ್ರೀಯವಾಗಿಯೇ ಮಾತಾಡಬೇಕಾಗುತ್ತದೆ. ಆದರೆ, ಮುಖ್ಯ ಅತಿಥಿಗಳಾದ ಶಾಸ್ತ್ರೀಯವರೂ ಸೇರಿದಂತೆ ಇದುವರೆಗೂ ಮಾತನಾಡಿದವರಲ್ಲಿ ಯಾರೊಬ್ಬರೂ ಶಾಸ್ತ್ರೀಯವಾಗಿ ಮತ್ತು ಶಾಸ್ತ್ರೀಯ ಕನ್ನಡ ಮಾತನಾಡದೇ ಇದ್ದದ್ದು ಕನ್ನಡದ ದುರ್ದೈವ’, ಅಂದುಬಿಟ್ಟರು!

ನಿಜ ಹೇಳ್ತೀನೀ, ನನ್ನ ಭಾಷಣ(ಪ್ರ)ವೃತ್ತಿಯ ಅರ್ಧ ಶತಮಾನದಲ್ಲಿ ಇದುವರೆಗೂ ನನಗೆ ಇಂಥ ಘೋರ ಅವಮಾನ ಎಂದೆಂದೂ ಆಗಿರಲಿಲ್ಲ! ಇದು ನನಗಾದ ಪಕ್ಕಾ (ಅ)ಶಾಸ್ತ್ರೀಯ ಅವಮಾನವೇ ಸರಿ!

ಶಾಸ್ತ್ರೀಯ ಭಾಷೆ ಅಂದ್ರೆ ಏನು ಮತ್ತು ಆ ಭಾಷೇಲಿ ಶಾಸ್ತ್ರೀಯವಾಗಿ ಮಾತಾಡೋದು ಹೇಗೆ ಅಂತ ಮಹಂತೇಶಜ್ಜಾ ಅವರನ್ನು ಕೇಳೋಣ ಅಂದ್ಕೊಂಡ್ರೆ ಅವ್ರು ಅನಾರೋಗ್ಯದ ನಿಮಿತ್ತ ವಂದನಾರ್ಪಣೆಗೆ ಮುನ್ನವೇ ಎದ್ದು ಹೊರಟುಹೋಗಿಬಿಟ್ರು!

ಘಟನೆ ಮೂರು
--------------
’ಜೈ ಭುವನೇಶ್ವರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ’ಯ ಒಂದನೇ ತರಗತಿಗೆ ಮೊಮ್ಮಗನನ್ನು ಸೇರಿಸಲು ಅವನನ್ನು ಕರೆದುಕೊಂಡು, ಕ್ಷಮಿಸಿ, ಎಳೆದುಕೊಂಡು ಹೋದೆ. ’ಪ್ರಿನ್ಸಿಪಾಲ್’ ಎಂಬ (ಆಂಗ್ಲ)ಫಲಕ ಎದುರಿಟ್ಟುಕೊಂಡಿದ್ದ ಎಳೇ ಮುಖ್ಯೋಪಾಧ್ಯಾಯಿನಿಯು ನನ್ನೊಡನೆ ನಡೆಸಿದ ಸಂಭಾಷಣೆಯ ಮುಖ್ಯ ಭಾಗ:

’ದಿಸ್ ಈಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್.’
’ಮತ್ತೇ...ಕನ್ನಡ ಮಾಧ್ಯಮ ಶಾಲೆ ಅಂತ ಹೊರಗಡೆ ನಾಮಫಲಕ....!’
’ಓಹ್! ದಟ್ಸ್ ಫಾರ್ ಗೌರ್‍ಮೆಂಟ್ಸ್ ಐವಾಷ್! ರೆಕಾರ್ಡ್ಸ್ ಸೇಕ್ ಅವರ್‍ಸ್ ಈಸ್ ಕನಡಾ ಮೀಡಿಯಂ. ಬಟ್ ಪ್ರಾಕ್ಟಿಕಲೀ ವಿ ಟೀಚ್ ಇಂಗ್ಲಿಷ್ ಮೀಡಿಯಂ. ಅದರ್‌ವೈಸ್ ಪೇರೆಂಟ್ಸ್ ವೋಂಟ್ ಅಡ್ಮಿಟ್ ದೆಯ್ರ್ ಚಿಲ್ಡ್ರನ್ ಹಿಯರ್, ಯು ಸೀ!’
’ಬರ್ತೀನಿ, ನಮಸ್ಕಾರ.’
’ಸಿಟ್ ಸಿಟ್. ವಿ ಟೀಚ್ ಕನಡಾ ಒನ್ ಸಬ್ಜಕ್ಟ್. ಡೋಂಟ್ ವರಿ.’
’ಸಿಟ್ ಗಿಟ್ ಏನಿಲ್ಲ, ಶಾಂತವಾಗೇ ಹೊರಕ್ಕ್ಹೋಗ್ತೀನಿ ಮೇಡಮ್, ಯೂ ಇಂಗ್ಲಿಷ್ ಮೀಡ್ಯಮ್, ಮುಂದುವರಿ.’

ತರುವಾಯ ಮೊಮ್ಮಗನನ್ನು ಬೇರೆ ಶಾಲೆಗೆ ಸೇರಿಸಿದೆ.

ಸಮ್-ಬಂಧ
-------------
ಮೇಲಿನ ಮೂರೂ ಘಟನೆಗಳಿಗೂ ನಾನು ಕಲ್ಪಿಸಲೆತ್ನಿಸುವ ಪರಸ್ಪರ ಸಂಬಂಧ ಇಂತಿದೆ:

ನಮಗೆ ಸಂಸ್ಕೃತ ಬೇಡ, ಕನ್ನಡ ಸಾಕು.
ಕನ್ನಡದಲ್ಲಿನ ಸಂಸ್ಕೃತ? ಅದನ್ನೂ ಎತ್ತಿ ಆಚೆಗೆ ಬಿಸಾಕು!
ಆಮೇಲೆ ಉಳಿಯೋದು? ’ಸುಲಿದ ಬಾಳೆಯಕಾಯಿಯಂದದ ಪಳೆಗನ್ನಡಂ ತಾಂ.’ ಥಕಧಿಮಿ ಥೋಂ!

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕು.
ಸ್ಥಾನ ಬಂತು, ಮಾನ ಬರಲಿಲ್ಲ.
ಪರವಾ ಇಲ್ಲ. ಶಾಸ್ತ್ರೀಯ ಸ್ಥಾನಮಾನ ಅಂದರೆ ಏನಂತಲೇ ನಮಗೆ ಗೊತ್ತಿಲ್ಲ. ಅಂತೂ ಬೇಕು, ಸಿಕ್ಕಿತು. ’ಖನ್ನಡಕ್ಕೆ ಜಯವಾಗಲಿ.’ ಅಷ್ಟೇಯ.

ಕನ್ನಡಕ್ಕೆ ಜಯವಾಗಲಿ, ಶಿಕ್ಷಣ ಇಂಗ್ಲಿಷ್‌ಮಯವಾಗಲಿ!
ಹೌದು. ಅದು ಹಂಗೇಯ.

ಉಪಸಂಹಾರ
---------------
’ಸಂಸ್ಕೃತ ಬೇಡ, ಕನ್ನಡ.’
’ಕನ್ನಡ ಬೇಡ, ಇಂಗ್ಲಿಷ್.’
’ಇಂಗ್ಲಿಷ್ ಬೇಡ, ಕನ್ನಡ.’
’ಇದು ಎನ್ನಡ?’

ಹೀಗಾದರೆ,
ಮೂರೂ ಬಿಟ್ಟೆ, ಮಗನೇ, ನೀನು ಭಂಗಿ ನೆಟ್ಟೆ!
ಅರ್ಥಾತ್,
ಎಲ್ಲ ಮೂರಾಬಟ್ಟೆ!

ಗುರುವಾರ, ಅಕ್ಟೋಬರ್ 8, 2009

ನಮ್ಮ ಸುತ್ತಲ ದುಷ್ಟರು

೫ ಸೆಪ್ಟೆಂಬರ್ ೨೦೦೯. ಮುಖ್ಯಮಂತ್ರಿ ಯಡಿಯೂರಪ್ಪನವರು ಚೀನಾದ ಶಾಂಘೈನಲ್ಲಿ ಅಡ್ಡಾಡುತ್ತ ಕರ್ನಾಟಕಕ್ಕೆ ಚೀನೀ ಬಂಡವಾಳ ಆಕರ್ಷಿಸುವ ಪ್ರಯತ್ನ ನಡೆಸಿದ್ದರು. ಅದೇ ವೇಳೆ ಚೀನಾ ದೇಶದ ಸೈನಿಕರು ಭಾರತದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ರಿಮ್‌ಖಿಮ್ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಬಿಸ್ಕತ್ ಕವರ್ ಮತ್ತು ಸಿಗರೇಟ್‌ಗಳನ್ನು ಎಸೆದುಹೋಗಿದ್ದರು!

ಅದೇ ಸಮಯದಲ್ಲೇ ಲಡಾಕ್ ವಲಯದ ಮೌಂಟ್ ಗಯಾ ಸಮೀಪದಲ್ಲಿ ಒಂದೂವರೆ ಕಿಲೋಮೀಟರ್‌ನಷ್ಟು ಭಾರತದ ಗಡಿಯೊಳಗೆ ನುಸುಳಿ ಬಂದಿದ್ದ ಚೀನೀ ಸೈನಿಕರು ಅಲ್ಲಿನ ಕಲ್ಲುಬಂಡೆಗಳು ಮತ್ತು ಮರಗಳ ಮೇಲೆ ಕೆಂಪು ಪೇಂಟ್‌ನಿಂದ ’ಚೀನಾ’ ಎಂದು ಬರೆದುಹೋಗಿದ್ದರು!

ಭಾರತೀಯ ಸೇನಾಧಿಕಾರಿಗಳಿಗೆ ಚೀನಾದ ಈ ಅತಿಕ್ರಮಣದ ವಿಷಯ ತಿಳಿದೇ ಇರಲಿಲ್ಲ! ಸ್ಥಳೀಯರು ತಿಳಿಸಿದ ಬಳಿಕವಷ್ಟೇ ನಮ್ಮ ಸೇನಾಧಿಕಾರಿಗಳಿಗೆ ಈ ವಿಷಯ ಗೊತ್ತಾದದ್ದು!

ಇದಕ್ಕೆ ಒಂದು ವಾರ ಮೊದಲಷ್ಟೇ ಜಮ್ಮು ಮತ್ತು ಕಾಶ್ಮೀರದ ಚುಮರ್ ಪ್ರಾಂತ್ಯದಲ್ಲಿ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಚೀನಾದ ಹೆಲಿಕಾಪ್ಟರ್‌ಗಳು ಭಾರತದ ವಾಯುಪ್ರದೇಶದೊಳಕ್ಕೆ ಬಂದಿದ್ದವು!

ಇಷ್ಟೆಲ್ಲ ಆದಮೇಲೂ, ನಮ್ಮ ’ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್’ನ ಉನ್ನತಾಧಿಕಾರಿ ಸಂಜಯ್ ಸಿಂಘಾಲ್ ಅವರು ಸೆಪ್ಟೆಂಬರ್ ೧೩ರಂದು ಹೇಳಿಕೆಯೊಂದನ್ನು ನೀಡಿ, ಚೀನಾದಿಂದ ಅತಿಕ್ರಮಣ ಆಗಿಯೇ ಇಲ್ಲವೆಂದಿದ್ದಾರೆ! ಆದರೆ, ಅದೇ ದಿನ ನಮ್ಮ ಟಿವಿ ವಾರ್ತೆಗಳಲ್ಲಿ, ಚೀನೀ ಸೈನಿಕರು ಭಾರತದ ಪ್ರದೇಶದಲ್ಲಿ ಕಲ್ಲಿನಮೇಲೆ ’ಚೀನಾ’ ಎಂದು (ತಮ್ಮ ಲಿಪಿಯಲ್ಲಿ) ಬರೆದಿರುವ ಚಿತ್ರ ಪ್ರಸಾರವಾಗಿದೆ!

೧೯೬೨ರ ಯುದ್ಧ
----------------
೧೯೬೨ರಲ್ಲೂ ಹೀಗೇ ಆಯಿತು. ನಮ್ಮ ಸೈನ್ಯದ ಸನ್ನದ್ಧತೆಯನ್ನು ಪರೀಕ್ಷಿಸಲು ಚೀನಾ ನಮ್ಮ ಗಡಿಯೊಳಕ್ಕೆ ಆಗಾಗನುಗ್ಗಿಬರತೊಡಗಿತು. ’ಚೀನಾದ ವಿರುದ್ಧ ಯುದ್ಧದ ಸಾಧ್ಯತೆ ಸದ್ಯಕ್ಕಂತೂ ಇಲ್ಲ’ ಎಂದು ಆಗಸ್ಟ್ ತಿಂಗಳಲ್ಲಿ ನಮ್ಮ ಬ್ರಿಗೇಡಿಯರ್ ಡಿ.ಕೆ.ಪಲಿತ್ ಹೇಳಿದರು. ಆದರೆ ಅದಾಗಲೇ ಚೀನಾವು ಯುದ್ಧಕ್ಕೆ ಬೀಜಾಂಕುರ ಮಾಡಿ ಆಗಿತ್ತು! ಸೆಪ್ಟೆಂಬರ್‌ನಲ್ಲಿ ಯುದ್ಧವು ತೀವ್ರಗತಿಗೇರತೊಡಗಿದ್ದಾಗ ನಮ್ಮ ಮೇಜರ್ ಜನರಲ್ ಜೆ.ಎಸ್.ಧಿಲ್ಲಾನ್ ಅವರು, ’ಭಾರತದ ಸೈನ್ಯವು ಕೆಲವು ಸುತ್ತು ಗುಂಡು ಹಾರಿಸಿದರೆ ಸಾಕು, ಚೀನಾ ಸೈನಿಕರು ಓಡಿಹೋಗುತ್ತಾರೆ’, ಎಂದು ಹೇಳಿಕೆ ನೀಡಿದರು! ಆದರೆ ಆ ಯುದ್ಧವನ್ನು ಭಾರತ ಸೋತಿತು!

೧೯೫೪ರಲ್ಲಿ ಚೀನಾದೊಡನೆ ಮಾಡಿಕೊಂಡಿದ್ದ ’ಪಂಚಶೀಲ’ ಒಪ್ಪಂದವನ್ನು ನಂಬಿಕೊಂಡು, ’ಹಿಂದೀ-ಚೀನೀ ಭಾಯ್ ಭಾಯ್’, ಎನ್ನುತ್ತ ಕುಳಿತಿದ್ದ ನಮ್ಮ ಪ್ರಧಾನಿ ನೆಹರೂ ಅವರು ಅವಶ್ಯಕ ಪರಿಜ್ಞಾನ, ಮುಂದಾಲೋಚನೆ, ಪೂರ್ವಸಿದ್ಧತೆ ಮತ್ತು ದೃಢನಿರ್ಧಾರಗಳ ಕೊರತೆಯಿಂದಾಗಿ ಭಾರತದ ಸೋಲಿಗೆ ಮತ್ತು ಜಮ್ಮು-ಕಾಶ್ಮೀರದ ಭಾಗವಾಗಿದ್ದ ಅಕ್ಸಾಯ್ ಚಿನ್ ಪ್ರಾಂತ್ಯವು ಚೀನಾದ ತೆಕ್ಕೆಗೆ ಸೇರಲಿಕ್ಕೆ ಕಾರಣರಾದರು.

೧೯೬೨ರ ಭಾರತ-ಚೀನಾ ಯುದ್ಧದ ದಿನಗಳಲ್ಲಿ ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದ ನಾನು ಪಡಿತರ ಅಂಗಡಿಯಲ್ಲಿ ಸರತಿಯಲ್ಲಿ ನಿಂತು ಬಿದಿರಕ್ಕಿ ಮತ್ತು ಗೋವಿನ ಜೋಳ ಖರೀದಿಸಿ ತಂದು ಬಿದಿರಕ್ಕಿ ಅನ್ನ ಮತ್ತು ಗೋವಿನ ಜೋಳದ ರೊಟ್ಟಿ ತಿಂದದ್ದು ಹಾಗೂ ಪರಿಹಾರ ನಿಧಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕೊಟ್ಟದ್ದು ನನಗೆ ಚೆನ್ನಾಗಿ ನೆನಪಿದೆ.

ಪುನರಾವರ್ತನೆ
----------------
೧೯೬೨ರಂತೆಯೇ ಮತ್ತೊಂದು ಯುದ್ಧಕ್ಕೆ ಚೀನಾ ತನ್ನನ್ನಿಂದು ಅಣಿಮಾಡಿಕೊಳ್ಳುತ್ತಿದೆ. ಅದಕ್ಕೆ ಮುನ್ನುಡಿಯಾಗಿ ಭಾರತದ ಸನ್ನದ್ಧತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳುತ್ತಿದೆ. ಇಡೀ ಮಣಿಪುರ ಪ್ರಾಂತ್ಯವೇ ತನ್ನದೆಂದು ಹೇಳಿಕೊಳ್ಳುತ್ತಿರುವ ಧೂರ್ತ ಚೀನಾ ಮುಖ್ಯವಾಗಿ ತವಾಂಗ್ ಬೌದ್ಧಕ್ಷೇತ್ರದಮೇಲೆ ತನ್ನ ಕಣ್ಣಿರಿಸಿದೆ.

ನಾವಿಂದು ೧೯೬೨ರ ಸ್ಥಿತಿಗಿಂತ ಹೆಚ್ಚು ಶಕ್ತರಾಗಿರಬಹುದು. ಆದರೆ ಚೀನಾ ನಮಗಿಂತ ಹೆಚ್ಚು ಶಕ್ತವಾಗಿದೆಯೆನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮಗಿಂತ ಹೆಚ್ಚು ಸೈನ್ಯಬಲ ಮತ್ತು ಶಸ್ತ್ರಾಸ್ತ್ರಗಳನ್ನು ಚೀನಾ ಹೊಂದಿದೆ. ಮೇಲಾಗಿ, ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳ ಪರೋಕ್ಷ ಬೆಂಬಲ ಚೀನಾದ ಬೆನ್ನಿಗಿದೆ!

ಇದರ ಜೊತೆಗೆ, ಚೀನಾದೊಡನೆ ಬೃಹತ್ ವ್ಯವಹಾರ ಸಂಬಂಧ ಇಟ್ಟುಕೊಂಡಿರುವ ಅಮೆರಿಕವು ಇಂದು ತನಗೆ ಅಭಿವೃದ್ಧಿ ರಂಗದಲ್ಲಿ ಪ್ರತಿಸ್ಪರ್ಧಿಯಾಗಿರುವ ಭಾರತದ ಕುಸಿತವನ್ನು ಹಾರೈಸುತ್ತಿದೆ! ಆದ್ದರಿಂದ ಚೀನಾದ ಈ ಅತಿಕ್ರಮಣವನ್ನು ಭಾರತವು ಲಘುವಾಗಿ ಪರಿಗಣಿಸಬಾರದು. ಯುದ್ಧಕ್ಕೆ ನಾವು ಪೂರ್ಣ ಸನ್ನದ್ಧರಾಗಿರಬೇಕು. ಅದೇವೇಳೆ, ವಿಶ್ವಮಟ್ಟದಲ್ಲಿ ವಿವಿಧ ದೇಶಗಳ ಒಲವು ಗಳಿಸುವ ಸಲುವಾಗಿ ಅವಶ್ಯಕ ಲಾಬಿ ಕಾರ್ಯವನ್ನೂ ನಾವು ಕೈಕೊಳ್ಳಬೇಕು. ಯುದ್ಧ ಸಂಭವಿಸದಂತೆ ನೋಡಿಕೊಳ್ಳಲು ಕೂಡ ಇಂಥ ಲಾಬಿ ಅವಶ್ಯ.

ಸುತ್ತಲ ದುಷ್ಟರು
----------------
ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳು ತಮ್ಮದೇ ಆದ ಕಾರಣಗಳಿಂದಾಗಿ ಮತ್ತು ಅನುಮಾನ-ಭ್ರಮೆಯಿಂದಾಗಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿವೆ. ಪಾಕಿಸ್ತಾನವಂತೂ ಭಾರತವನ್ನು ಶತ್ರುವಾಗಿ ಪರಿಗಣಿಸಿ ಭಾರತದ ಅಧಃಪತನಕ್ಕಾಗಿ ತನ್ನ ಹುಟ್ಟಿನಿಂದಲೂ ಏನೆಲ್ಲ ಪ್ರಯತ್ನಗಳನ್ನು ನಡೆಸಿಕೊಂಡೇ ಬಂದಿದೆ. ಉಗ್ರರನ್ನು ಮತ್ತು ಖೋಟಾ ನೋಟುಗಳನ್ನು ಭಾರತದೊಳಕ್ಕೆ ಕಳಿಸಲು ಅದು ನೇಪಾಳವನ್ನು ಬಳಸಿಕೊಳ್ಳುತ್ತಿರುವುದು, ನೇಪಾಳದ ಮಾಜಿ ಮಂತ್ರಿಯೊಬ್ಬನ ಪುತ್ರನೇ ಈ ಜಾಲದ ಮುಖ್ಯಸ್ಥನಾಗಿರುವುದು ಮತ್ತು ನೇಪಾಳದ ’ದೊರೆಮಗ’ನ ನೆರವು ಈ ಜಾಲಕ್ಕೆ ಇರುವುದು ಈಗ ಗುಟ್ಟಿನ ಸಂಗತಿಯಾಗಿಯೇನೂ ಉಳಿದಿಲ್ಲ.

ನೇಪಾಳಕ್ಕೆ ಭಾರತವೆಂದರೆ ಭಯ ಮತ್ತು ಈರ್ಷ್ಯೆ. ಅಲ್ಲಿ ಮಾವೋವಾದಿಗಳ ಕೈ ಮೇಲಾದ ಬಳಿಕವಂತೂ ಭಾರತದ ವಿರುದ್ಧ ಒಂದು ರೀತಿಯ ಹಗೆತನ! ಪಶುಪತಿನಾಥ ದೇವಾಲಯದ ಭಾರತೀಯ ಅರ್ಚಕರಮೇಲೆ ನಡೆದ ದಾಳಿ ಈ ಹಗೆತನದ ಒಂದು ಸೂಚನೆ. ಇನ್ನು, ಮಾವೋವಾದಿಗಳೆಂದಮೇಲೆ ಚೀನಾ ಬಗ್ಗೆ ಒಲವಿರುವುದಂತೂ ಸರ್ವವೇದ್ಯ.

ಭಾರತದ ಬಗ್ಗೆ ಭಯ, ಈರ್ಷ್ಯೆ ಮತ್ತು ಹಗೆತನದ ವಿಷಯದಲ್ಲಿ ಬಾಂಗ್ಲಾದೇಶವೇನೂ ಭಿನ್ನವಲ್ಲ. ಭಾರತದೊಳಕ್ಕೆ ಮುಸ್ಲಿಂ ಉಗ್ರರ ನುಸುಳುವಿಕೆಗೆ ಬಾಂಗ್ಲಾದೇಶದ ನೆರವು ಮತ್ತು ಭಾರತಕ್ಕೆ ಬಾಂಗ್ಲಾದೇಶೀಯರ ಅಕ್ರಮ ವಲಸೆ ಇವಂತೂ ಸರ್ವವಿದಿತ.

ಈ ರೀತಿ, ಅಕ್ಕಪಕ್ಕದಲ್ಲಿ ಕಂಟಕಪ್ರಾಯರನ್ನಿಟ್ಟುಕೊಂಡಿರುವ ನಾವು ಚೀನಾದ ಅತಿಕ್ರಮಣದ ಗಾತ್ರವನ್ನು ಮತ್ತು ಪರಿಣಾಮವನ್ನು ಅಂದಾಜುಮಾಡುವಾಗ ಈ ಕಂಟಕಪ್ರಾಯರ ದುಷ್ಟತನವನ್ನೂ ಸೇರಿಸಿ ಅಳೆಯಬೇಕಾಗುತ್ತದೆ. ಜೊತೆಗೆ, ಅಮೆರಿಕದ ಕುಟಿಲತನವನ್ನೂ ಈ ಸಂದರ್ಭದಲ್ಲಿ ಮುಂದಾಲೋಚಿಸಬೇಕಾಗುತ್ತದೆ.

ಏಷ್ಯಾದ ಮತ್ತು ಕ್ರಮೇಣ ಇಡೀ ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾವು ತನಗೆ ಪ್ರತಿಸ್ಪರ್ಧಿಯಾಗಿರುವ ಭಾರತವನ್ನು ಬಗ್ಗುಬಡಿಯಲು ಹಾತೊರೆಯುತ್ತಿದೆ. ಅಮೆರಿಕವು ಭಾರತ-ಚೀನಾ ಯುದ್ಧಕ್ಕೆ ಒಳಗಿಂದೊಳಗೇ ಪ್ರೋತ್ಸಾಹ ಕೊಡುವ ಮೂಲಕ ಎರಡೂ ದೇಶಗಳನ್ನೂ ಅವನತಿಯ ಅಂಚಿಗೆ ತಳ್ಳಲು ಸ್ಕೆಚ್ ಹಾಕತೊಡಗಿದೆ. ಅಭಿವೃದ್ಧಿರಂಗದಲ್ಲಿ ತನಗೆ ತೀವ್ರ ಪೈಪೋಟಿ ನೀಡುತ್ತಿರುವ ಎರಡೂ ದೇಶಗಳನ್ನೂ ಒಂದೇ ಕಲ್ಲಿನಲ್ಲಿ ಹೊಡೆದುಹಾಕಲು ಅಮೆರಿಕಕ್ಕೆ ಇದು ಉತ್ತಮ ಅವಕಾಶ ತಾನೆ? ಈ ಅಪಾಯದ ಗಂಟೆ ಭಾರತದ ಮಿದುಳಿನಲ್ಲಿ ಸದಾ ಬಾರಿಸುತ್ತಿರಬೇಕು. ಭಾರತವು ಸದಾ ಜಾಗೃತವಾಗಿರಬೇಕು.

ದುರ್ಬಳಕೆ
-----------
ಭಯೋತ್ಪಾದನೆಯ ನಿಗ್ರಹಕ್ಕೆಂದು ಅಮೆರಿಕ ನೀಡುತ್ತಿರುವ ಆರ್ಥಿಕ ಮತ್ತು ಮಿಲಿಟರಿ ನೆರವುಗಳನ್ನು ಆರಂಭದಿಂದಲೂ ಪಾಕಿಸ್ತಾನವು ಭಾರತದ ವಿರುದ್ಧ ಬಳಸುತ್ತಿದೆ. (ಈ ವಿಷಯವನ್ನು ಈಚೆಗೆ ಪಾಕ್‌ನ ಮಾಜಿ ಅಧ್ಯಕ್ಷ ಮುಷರಫ್ ಅವರೇ ಒಪ್ಪಿಕೊಂಡಿದ್ದಾರೆ. ನಂತರ ಅವರು ತಮ್ಮ ಹೇಳಿಕೆಯನ್ನು ನಿರಾಕರಿಸುವ ನಾಟಕ ಆಡಿದ್ದು ಬೇರೆ ಮಾತು.) ಈ ದುರ್ಬಳಕೆಯ ಸಂಗತಿ ಗೊತ್ತಿದ್ದೂ ಅಮೆರಿಕವು ಪಾಕಿಸ್ತಾನಕ್ಕೆ ನೆರವು ಮುಂದುವರಿಸಿದೆ.

ಚೀನಾವು ಪಾಕ್‌ಗೆ ಲಾಗಾಯ್ತಿನಿಂದಲೂ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದೆ.

ಪಾಕಿಸ್ತಾನವು ಶ್ರೀಲಂಕಾಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದೆ.

ಈ ಎಲ್ಲ ಆಗುಹೋಗುಗಳನ್ನೂ ಭಾರತವು ಕ್ಷ-ಕಿರಣದ ಕಣ್ಣುಗಳಿಂದ ನೋಡಬೇಕಾದುದು ಭಾರತದ ರಕ್ಷಣೆಯ ದೃಷ್ಟಿಯಿಂದ ಇಂದು ಅನಿವಾರ್ಯ.

ಭಾರತಕ್ಕೆ ಚೀನಾದಿಂದ ಎದುರಾಗಲಿರುವ ಅಪಾಯದ ಬಗ್ಗೆ ಜಾರ್ಜ್ ಫರ್ನಾಂಡಿಸ್ ಅವರು ಭಾರತದ ರಕ್ಷಣಾ ಮಂತ್ರಿಯ ಕುರ್ಚಿಯಿಂದಲೇ ಎಚ್ಚರಿಸಿದ್ದರು. ಇದೀಗ ಆ ಅಪಾಯ ಸಮೀಪಿಸುತ್ತಿರುವಂತಿದೆ. ಭಾರತ ಎಚ್ಚತ್ತುಕೊಳ್ಳಬೇಕು.

ಯುದ್ಧ ಬೇಡ
-------------
ಯುದ್ಧ ಯಾರಿಗೂ ಒಳ್ಳೆಯದಲ್ಲ. ಯುದ್ಧದ ಪರಿಣಾಮ ಎಂದಿದ್ದರೂ ನಷ್ಟ ಮತ್ತು ನಾಶವೇ. ಆದ್ದರಿಂದ, ಸಂಭವನೀಯ ಯುದ್ಧವು ತಪ್ಪಬೇಕೆಂದರೆ ಭಾರತವು ತನ್ನ ಪರವಾಗಿ ವಿಶ್ವದ ಒಲವನ್ನು ಗಳಿಸಬೇಕಾದುದು ಅತ್ಯವಶ್ಯ. ಭಾರತದ ನಿಲುವಿಗೆ ವಿಶ್ವದ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸತೊಡಗಿದವೆಂದರೆ ಆಗ ಚೀನಾವು ಯುದ್ಧದ ಬಗ್ಗೆ ಮರುಚಿಂತನೆ ಮಾಡುತ್ತದೆ. ವಿವಿಧ ದೇಶಗಳ ಸಹಮತಕ್ಕಾಗಿ ಭಾರತವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಯತ್ನವನ್ನು ಮಾಡಬೇಕು ಮತ್ತು ವಿವಿಧ ದೇಶಗಳ ಬೆಂಬಲಕ್ಕಾಗಿ ಸೂಕ್ತ ಲಾಬಿ ನಡೆಸುವ ಯೋಜನೆ ಹಾಕಿಕೊಳ್ಳಬೇಕು.

ಇಷ್ಟಾಗಿಯೂ ಯುದ್ಧ ತಪ್ಪದು ಎಂದರೆ, ಜೈ! ನಾವು ಜಯಿಸಿಯೇ ಸೈ!

ಬುಧವಾರ, ಅಕ್ಟೋಬರ್ 7, 2009

ಬರಹಗಾರರನ್ನು ಚುಚ್ಚಬೇಡಿ

ಬರಹಗಾರರು ತಮ್ಮ ಬರಹಗಳಲ್ಲಿ ಮಾತ್ರ ಮಾನವೀಯತೆ, ಪ್ರೀತಿ, ಅಂತಃಕರಣ, ಕನಿಕರಗಳನ್ನು ತೋರಿ ಶಹಭಾಸ್‌ಗಿರಿ ಪಡೆಯುತ್ತಾರೆಯೇ ಹೊರತು ನಿಜಜೀವನದಲ್ಲಿ ಇದ್ಯಾವುದಕ್ಕೂ ಸ್ಪಂದಿಸದೆ ತೆಪ್ಪಗೆ ಕುಳಿತುಬಿಡುತ್ತಾರೆ ಎಂಬ ಗಂಭೀರವಾದ ಆರೋಪವನ್ನು ಜಾಲತಾಣವೊಂದರಲ್ಲಿ ಸಹೃದಯರೋರ್ವರು ಮಾಡಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹಸಂತ್ರಸ್ತರಿಗೆ ಅಗತ್ಯವಾಗಿರುವ ನೆರವಿನ ವಿಷಯದಲ್ಲಿ ಈ ರೀತಿ ಆರೋಪ ಮಾಡಿರುವ ಆ ಸಹೃದಯರ ಸಾಮಾಜಿಕ ಕಳಕಳಿ ಮೆಚ್ಚುವಂಥದು. ಆದರೆ ಆರೋಪ ಮಾತ್ರ ಒಪ್ಪುವಂಥದಲ್ಲ. ಬರಹಗಾರರು ತಮ್ಮ ವೈಯಕ್ತಿಕ ನೆಲೆಗಳಲ್ಲಿ ಅಥವಾ ಉದ್ಯೋಗದಾತರ ಮೂಲಕ ನೆರೆಹಾವಳಿ ಸಂತ್ರಸ್ತರಿಗೆ ನೆರವು ನೀಡಿಲ್ಲವೆಂದು ಹೇಗೆ ಹೇಳಲು ಸಾಧ್ಯ?

ನಿರ್ದಿಷ್ಟ ಜಾಲತಾಣದ ಮಖಾಂತರ ಬರಹಗಾರರಿಂದ ದೇಣಿಗೆ ಸಂಗ್ರಹಿಸುವಂತೆ ಆ ಸಹೃದಯರು ಸಲಹೆ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಆ ಜಾಲತಾಣದ ಸದಸ್ಯ ಬರಹಗಾರರಿಗೆ ಅವರು ಇರುಸುಮುರುಸುಂಟುಮಾಡಿದ್ದಾರೆಂದೇ ಹೇಳಬೇಕಾಗುತ್ತದೆ. ಏಕೆಂದರೆ, ಒಂದು ಉದ್ದೇಶಕ್ಕೆ ಒಂದಕ್ಕಿಂತ ಹೆಚ್ಚು ಕಡೆ ದೇಣಿಗೆ ನೀಡುವಷ್ಟು ಬಹುತೇಕ ಬರಹಗಾರರು ಶ್ರೀಮಂತರಾಗಿರುವುದಿಲ್ಲ. ಈಗಾಗಲೇ ಒಂದು ಕಡೆ ದೇಣಿಗೆ ನೀಡಿರುವ ಬರಹಗಾರರು ಸದರಿ ಸಹೃದಯರ ಆರೋಪದಿಂದ ಮುಕ್ತರಾಗಲು ತಮ್ಮ ದೇಣಿಗೆಯ ವಿವರವನ್ನು ಪ್ರಕಟಿಸಬೇಕೇ?!

ಇಷ್ಟಕ್ಕೂ, ’ಬರಹಗಾರರು ಬರಹಗಳಲ್ಲಷ್ಟೇ ಮಾನವೀಯತೆ ಇತ್ಯಾದಿ ತೋರುತ್ತಾರೆ, ಅಷ್ಟು ಮಾಡಿದರೆ ಸಾಲದು, ಅವರು ಫೀಲ್ಡಿಗೂ ಇಳಿಯಬೇಕು’, ಎಂದು ದೂರುವುದೇ ಯೋಗ್ಯವಲ್ಲ. ಬರಹಗಾರರು ಬರಹಗಳ ಮುಖಾಂತರ ಸಮಾಜಜಾಗೃತಿಯ ಕರ್ತವ್ಯವನ್ನು ಮಾಡಿದರೆ ಸಾಕು ಎಂಬುದು ನನ್ನ ಅಭಿಪ್ರಾಯ. ಅದೇನೂ ಸಣ್ಣ ಕರ್ತವ್ಯವಲ್ಲ. ಏಕೆಂದರೆ, ಬರಹಗಳು ಓದುಗರಲ್ಲಿ ಜಾಗೃತಿ ಹುಟ್ಟಿಸುತ್ತವೆ ಮತ್ತು ಕರ್ತವ್ಯೋನ್ಮುಖರಾಗಲು ಪ್ರೇರೇಪಿಸುತ್ತವೆ. ನನ್ನ ಬರಹದ ಎರಡು ಉದಾಹರಣೆಗಳನ್ನೇ ಕೊಡುತ್ತೇನೆ.

೧) ’ಈ ಸಲದ ದೀಪಾವಳಿಯಲ್ಲಿ ಪಟಾಕಿ ಸುಡದಿರಲು ನಿರ್ಧರಿಸಿ ಆ ಹಣವನ್ನು ನೆರೆಸಂತ್ರಸ್ತರ ಪರಿಹಾರನಿಧಿಗೆ ನೀಡೋಣ’, ಎಂದು ನಾನು ಇದೇ ದಿನಾಂಕ ಮೂರರಂದು, ಚರ್ಚಿತ ಜಾಲತಾಣ ಮತ್ತು ಈ ಬ್ಲಾಗೂ ಸೇರಿದಂತೆ ಹಲವು ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬರೆದದ್ದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನನ್ನ ವಿನಂತಿಗೆ ಓಗೊಡುವುದಾಗಿ ನನಗೆ ಅನೇಕರು ದೂರವಾಣಿ ಕರೆಮಾಡಿ ಹೇಳಿದ್ದಾರೆ.

೨) ’ಮರಣದಂಡನೆ ಅನಿವಾರ್ಯವೆ?’ ಎಂದು ಕೆಲ ಸಮಯದ ಹಿಂದೆ ’ಪ್ರಜಾವಾಣಿ’ ದಿನಪತ್ರಿಕೆಯು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ನಾನು ಬರೆದ ನಾಲ್ಕು ಸಾಲುಗಳ ಚುಟುಕವು ’ಪ್ರಜಾವಾಣಿ’ಯಲ್ಲಿ ಪ್ರಕಟವಾಯಿತು. ಆ ಚುಟುಕ ಹೀಗಿತ್ತು:

ಸಾವಿಗೆ ಸಾವೇ ಉತ್ತರವಾದರೆ
ಬದುಕಿಗೆ ಏನರ್ಥ?
ಬದುಕುವ ಬಗೆಯನು ಕಲಿಸದ ಶಿಕ್ಷಣ
ಶಿಕ್ಷೆಗಳವು ವ್ಯರ್ಥ.

ಈ ಚುಟುಕದಿಂದ ಪ್ರಭಾವಿತರಾದ ನ್ಯಾಯಾಧೀಶರೊಬ್ಬರು, ತಾನಿನ್ನು ಮರಣದಂಡನೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಈ ಚುಟುಕವನ್ನು ನೆನಪಿಸಿಕೊಂಡು ಶಿಕ್ಷೆಯ ಮರುಪರಿಶೀಲನೆ ಮಾಡುವುದಾಗಿಯೂ ಅಪರಾಧಿಗೆ ತಿದ್ದಿಕೊಳ್ಳುವ ಅವಕಾಶ ನೀಡುವುದು ಸಾಧ್ಯವಾದಲ್ಲಿ ಜೀವಾವಧಿ ಶಿಕ್ಷೆ ನೀಡುವ ಮೂಲಕ ಆತನ ಜೀವ ಉಳಿಸುವುದಾಗಿಯೂ ನನ್ನ ಬಳಿ ನುಡಿದರು.

ಓದುಗರ ಹೃದಯ ತಟ್ಟುವ ಬರಹಗಳು ಸಮಾಜದ ಒಳ್ಳಿತಿಗಾಗಿ ಸದಾ ಅವಶ್ಯ. ಅಂಥ ಬರಹಗಳನ್ನು ನೀಡುವ ಕೆಲಸ ಬರಹಗಾರನದು.

ಸಮಾಜದಲ್ಲಿ ಎಲ್ಲರೂ ಎಲ್ಲ ಕೆಲಸಗಳನ್ನೂ ಮಾಡುತ್ತೇವೆಂದರೆ ಯಾವ ಕೆಲಸವೂ ಸುಸೂತ್ರ ಆಗುವುದಿಲ್ಲ. ಯಾವುದೋ ಒಂದು ಯೋಜನೆ ಅಥವಾ ಚಳವಳಿ ಆಗಬೇಕೆಂದಿಟ್ಟುಕೊಳ್ಳಿ. ಬರಹಗಾರನೊಬ್ಬ, ಆ ಯೋಜನೆ ಅಥವಾ ಚಳವಳಿಯ ಕುರಿತು ತಾನು ಬರಹಗಳನ್ನೂ ಬರೆಯುತ್ತೇನೆ, ಯೋಜನೆಯ/ಚಳವಳಿಯ ರೂಪುರೇಷೆಗಳನ್ನೂ ತಯಾರಿಸುತ್ತೇನೆ, ಸಂಘಟನೆಯನ್ನೂ ಮಾಡುತ್ತೇನೆ, ದೇಣಿಗೆಯನ್ನೂ ನೀಡುತ್ತೇನೆ, ಅನುಷ್ಠಾನದಲ್ಲೂ ಭಾಗವಹಿಸುತ್ತೇನೆ, ಬೀದಿಗಿಳಿದು ಹೋರಾಟವನ್ನೂ ಮಾಡುತ್ತೇನೆ ಎಂದರೆ ಅದಷ್ಟೂ ಆತನಿಂದ ಸಾಧ್ಯವಾದೀತೆ? ಒಂದು ವೇಳೆ ಸಾಧ್ಯವಾದರೂ ಆ ಎಲ್ಲ ಕಾರ್ಯಗಳೂ ಗುಣಯುತವೂ ಸಮರ್ಥವೂ ಆಗಿರುತ್ತವೆಯೇ? ಬರಹಗಾರ ತನ್ನ ಬರಹಗಳಿಂದ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದರೆ ಸಾಕು, ಉಳಿದವರು ತಂತಮ್ಮ ಕೆಲಸ ಮಾಡಲಿ.

ಬರಹಗಾರನೂ ಜೀವನ ನಿರ್ವಹಣೆಗೆ ಒಂದು ವೃತ್ತಿ ಅಥವಾ ನೌಕರಿಯನ್ನು ಮಾಡುತ್ತಿದ್ದು ಇತರರಂತೆ ಆತನೂ ಅದಕ್ಕೆ ದಿನದ ಬಹುಪಾಲು ಸಮಯವನ್ನು ಮೀಸಲಿಡಬೇಕಲ್ಲವೆ? ಹಾಗಾಗಿ, ’ಬರಿದೆ ಬರೆಯುತ್ತೀರಿ, ಫೀಲ್ಡಿಗೆ ಯಾಕೆ ಇಳಿಯುವುದಿಲ್ಲ?’ ಎಂದು ಬರಹಗಾರರನ್ನು ದೂಷಿಸುವುದು ತರವಲ್ಲ. ’ಗೋಕಾಕ ಚಳವಳಿ’ಯಂಥ ಸಂದರ್ಭದಲ್ಲಿ ಬರಹಗಾರರು ಕಣಕ್ಕಿಳಿದ ಉದಾಹರಣೆ ನಮ್ಮೆದುರಿದೆ. ಹಾಗೆಂದು, ಬರೆಯುವವರೆಲ್ಲರೂ, ಬರೆದದ್ದೆಲ್ಲದರ ಬಗ್ಗೆಯೂ ಫೀಲ್ಡಿಗಿಳಿದು ಕಾರ್ಯೋನ್ಮುಖರಾಗಬೇಕು/ಹೋರಾಡಬೇಕು ಎಂದರೆ ಅವರು ತಮ್ಮ ವೃತ್ತಿ/ನೌಕರಿ ಮಾಡಿಕೊಂಡು, ಫೀಲ್ಡಿಗೂ ಇಳಿದು ಹೋರಾಡಿ, ಮತ್ತೆ ಬರೆಯುವುದು ಯಾವಾಗ? ಅಂತಹ ಅವಸರದ ಬರಹಗಳು ಅದಿನ್ನೆಷ್ಟು ಸತ್ತ್ವಯುತವಾಗಿದ್ದಾವು?

ಆದ್ದರಿಂದ, ಬರಹಗಾರರ ಬರಹಕ್ಕೆ ಪ್ರೋತ್ಸಾಹವಿರಲಿ, ಬರಹಗಾರರನ್ನು ಚುಚ್ಚುವುದು ಬೇಡ.

ಮಂಗಳವಾರ, ಅಕ್ಟೋಬರ್ 6, 2009

ಸೋನಿಯಾ ದೇಶ್!

ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ವೈ ಎಸ್ ರಾಜಶೇಖರ ರೆಡ್ಡಿಯ ಹೆಸರನ್ನು ಸೇರಿಸಿ ಮರುನಾಮಕರಣ ಮಾಡಲಾಗುತ್ತಿದೆ!

ಪ್ರಕಾಶಂ, ರಂಗಾರೆಡ್ಡಿ ಮತ್ತು ಪೊಟ್ಟಿ ಶ್ರೀರಾಮುಲು ಹೆಸರುಗಳಲ್ಲಿ ಈಗಾಗಲೇ ಮೂರು ಜಿಲ್ಲೆಗಳು ಆಂಧ್ರಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ.

ಬೀದಿಗೆ, ಊರಿಗೆ ಪುಢಾರಿಗಳ ಹೆಸರಿಡುವ ಚೋದ್ಯವಂತೂ ಲಗಾಯ್ತಿನಿಂದಲೂ ದೇಶದ ಎಲ್ಲೆಡೆ ನಡೆದೇ ಇದೆ. ತಮ್ಮ ಮತ್ತು ತಮಗೆ ಬೇಕಾದವರ ಹೆಸರಿಡುವ ನಿಟ್ಟಿನಲ್ಲಿ ಮೊಘಲರ ಮತ್ತು ಬ್ರಿಟಿಷರ ಕೊಡುಗೆಯೂ ದಂಡಿಯಾಗಿದೆ. ಇದೀಗ ಇನ್ನೊಂದಿಡೀ ಜಿಲ್ಲೆಗೆ ರಾಜಕಾರಣಿಯೊಬ್ಬನ ಹೆಸರು ಸೇರಿಸುವ ಧೂರ್ತತನ!

ಹೀಗೇ ಮುಂದುವರಿದರೆ ಮುಂದೆ ನಮ್ಮ ದೇಶವು ನೆಹರೂ ಪ್ರದೇಶ್, ಇಂದಿರಾ ಪ್ರದೇಶ್, ರಾಜೀವ್‌ಸ್ಥಾನ್, ರಾಹುಲ್‌ಸ್ಥಾನ್, ಪ್ರಿಯಾಂಕಾ ಪ್ರದೇಶ್ ಮುಂತಾದ ರಾಜ್ಯಗಳನ್ನೊಳಗೊಂಡ ’ಸೋನಿಯಾ ದೇಶ್’ ಎಂದು ಮರುನಾಮಕರಣಗೊಂಡರೆ ಆಶ್ಚರ್ಯವಿಲ್ಲ.

ಹೀಗೆ, ಇಂದು ಒಂದು ಜಿಲ್ಲೆಯ, ನಾಳೆ ಒಂದು ರಾಜ್ಯದ, ನಾಳಿದ್ದು ಈ ದೇಶದ ಹೆಸರನ್ನೇ ಕಿತ್ತುಹಾಕಿ ತಮಗೆ ಬೇಕಾದ ಪುಢಾರಿಯ ಹೆಸರನ್ನಿಡುವ ಅಧಿಕಾರ ಪ್ರಜಾಪ್ರಭುತ್ವ ದೇಶದ ಯಃಕಶ್ಚಿತ್ ರಾಜಕಾರಣಿಗಳಿಗಿದೆಯೆಂಬುದೇ ಒಂದು ದುರಂತ! ಇಂಥ ಅನೇಕ ಅಧಿಕಾರಗಳನ್ನವರು ಸಂವಿಧಾನ ಮತ್ತು ಕಾನೂನುಗಳ ಕರಾಮತ್ತಿನಿಂದ ತಮಗೆ ಕೊಟ್ಟುಕೊಂಡಿದ್ದಾರೆ. ಅವರ ಅಧಿಕಾರಗಳ ಪುನರ್ವಿಮರ್ಶೆ ಈಗ ಅತ್ಯಗತ್ಯ. ಇಲ್ಲದಿದ್ದರೆ ಮುಂದೊಂದು ದಿನ ಈ ನಮ್ಮ ರಾಜಕಾರಣಿಗಳು ವೋಟ್ ಬ್ಯಾಂಕ್, ತುಷ್ಟೀಕರಣ ಮತ್ತು ಅಧಿಕಾರಕ್ಕಾಗಿ ನಮ್ಮ ದೇಶದ ಪರಂಪರಾಗತ ಗುರುತುಗಳನ್ನೇ ಅಳಿಸಿಹಾಕಿಯಾರು!

ಶನಿವಾರ, ಅಕ್ಟೋಬರ್ 3, 2009

ಪರಿಹಾರ ಕಾರ್ಯಕ್ಕೆ ಕೈಜೋಡಿಸೋಣ

ರೋಂ ನಗರ ಉರಿಯುತ್ತಿದ್ದಾಗ ಚಕ್ರವರ್ತಿ ನೀರೊ ಪಿಟೀಲು ಬಾರಿಸುತ್ತಿದ್ದನಂತೆ! ಉತ್ತರ ಕರ್ನಾಟಕವು ನೀರಿನಲ್ಲಿ ಮುಳುಗುತ್ತಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ದಾಬಸ್‌ಪೇಟೆಯಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಿದ್ದರು! ನೀರು ಬಂದು ಜನರನ್ನು ಆಹುತಿ ತೆಗೆದುಕೊಳ್ಳುತ್ತಿದ್ದಾಗ ಯಡಿಯೂರಪ್ಪನವರು ’ಕ್ಷೀರ ಬಂಧು’ ಬಿರುದು ಸ್ವೀಕರಿಸುತ್ತಿದ್ದರು!

ಉತ್ತರ ಕರ್ನಾಟಕದ ಈ ಕುಂಭದ್ರೋಣ ಮಳೆ ತೀರಾ ಅನಿರೀಕ್ಷಿತವೇನಲ್ಲ. ವಾರದ ಮೊದಲಿಂದಲೂ ಹವಾಮಾನ ಇಲಾಖೆಯು ವಾಯುಭಾರ ಕುಸಿತದ ಬಗ್ಗೆ ಮತ್ತು ಸಂಭವನೀಯ ಅತಿವೃಷ್ಟಿಯ ಬಗ್ಗೆ ಎಚ್ಚರಿಸುತ್ತಲೇ ಇತ್ತು. ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರವು ನದಿಪಾತ್ರಗಳ ಮತ್ತು ತಗ್ಗು ಪ್ರದೇಶಗಳ ಜನರನ್ನು ಆರಂಭದಲ್ಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರೆ ಮತ್ತು ಮಾಧ್ಯಮಗಳ ವರದಿ ತಲುಪದ ಕುಗ್ರಾಮಗಳಲ್ಲಿ ಹಾಗೂ ಬಡ ಜನರ ವಾಸಸ್ಥಳಗಳಲ್ಲಿ ಡಂಗುರ ಸಾರಿಸಿ ಅತಿವೃಷ್ಟಿಯ ಬಗ್ಗೆ ಎಚ್ಚರಿಕೆ ಮತ್ತು ಅಗತ್ಯ ಸೂಚನೆಗಳನ್ನು ನೀಡಿದ್ದರೆ ಸಾವುನೋವಿನ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದಿತ್ತು. ಆದರೆ ಆ ಕೆಲಸವನ್ನು ಸರ್ಕಾರವು ಮಾಡಲಿಲ್ಲ.

ನಿಧಾನವಾಗಿಯಾದರೂ ಈಗ ಸರ್ಕಾರ ಎಚ್ಚತ್ತಿದೆ. ಸಮರೋಪಾದಿಯಲ್ಲಿ ಪರಿಹಾರಕಾರ್ಯಗಳನ್ನು ಕೈಗೊಂಡಿದೆ. ಪರಿಹಾರಕಾರ್ಯಗಳಿಗೆ ಸರ್ಕಾರದ ಜೊತೆ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರೂ ಕೈಜೋಡಿಸುವುದು ಈ ತುರ್ತು ಸನ್ನಿವೇಶದಲ್ಲಿ ಅತ್ಯಗತ್ಯ. ಇಂದಲ್ಲ ನಾಳೆ ಮಳೆ ನಿಂತು ಪ್ರವಾಹವೇನೋ ಇಳಿಯುತ್ತದೆ, ಆದರೆ, ಆಹಾರದ ಕೊರತೆ, ಕುಡಿಯುವ ನೀರಿನ ಕೊರತೆ, ವಸತಿ ಸಮಸ್ಯೆ, ಸಾಂಕ್ರಾಮಿಕ ರೋಗಗಳು, ಮುಂತಾದ ಪಿಡುಗುಗಳು ಪ್ರವಾಹ ಸಂತ್ರಸ್ತರನ್ನು ದೀರ್ಘಕಾಲ ಕಾಡತೊಡಗುತ್ತವೆ. ಈ ಪಿಡುಗುಗಳ ನಿವಾರಣೆಯ ದಿಸೆಯಲ್ಲಿ ಸರ್ಕಾರವು ಸುಯೋಜಿತವಾಗಿ ಮತ್ತು ಕ್ಷಿಪ್ರಗತಿಯಲ್ಲಿ ಕಾರ್ಯೋನ್ಮುಖವಾಗಬೇಕು. ವಿವಿಧ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರು ಸರ್ಕಾರಕ್ಕೆ ಸಹಾಯಹಸ್ತ ಚಾಚಬೇಕು. ಸಂಘಸಂಸ್ಥೆಗಳು ತಾವೂ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.

ಈ ಸಲದ ದೀಪಾವಳಿಯಲ್ಲಿ ನಾವೆಲ್ಲ ಪಟಾಕಿ ಸುಡದಿರಲು ನಿರ್ಧರಿಸೋಣ. ಆ ಹಣವನ್ನು ’ಮುಖ್ಯಮಂತ್ರಿಗಳ ಪರಿಹಾರ ನಿದಿ’ಗಾಗಲೀ ಯಾವುದಾದರೂ ವಿಶ್ವಸನೀಯ ’ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ’ಗಾಗಲೀ ನೀಡೋಣ. ನಮ್ಮ ಬಂಧುಗಳು ಅಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು, ರೋಗರುಜಿನಗಳಿಗೆ ತುತ್ತಾಗಿ, ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ, ಮಲಗಲು ಸೂರಿಲ್ಲದೆ ಸಂಕಟಪಡುತ್ತಿರುವಾಗ ನಾವಿಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಲು ಮನಸ್ಸಾದರೂ ಹೇಗೆ ಒಪ್ಪುತ್ತದೆ? ಅಲ್ಲವೆ?

ಶುಕ್ರವಾರ, ಅಕ್ಟೋಬರ್ 2, 2009

ಗಾಂಧೀಜಿ: ಚಳವಳಿ ಮೀರಿದ ಆದರ್ಶ ಪುರುಷ

ಗಾಂಧೀಜಿಯ ಬಗ್ಗೆ ನಾವು ಸಾಕಷ್ಟು ಓದಿದ್ದೇವೆ, ಭಾಷಣಗಳನ್ನು ಕೇಳಿದ್ದೇವೆ. ಗಾಂಧೀ ಸಾಹಿತ್ಯವೂ ಇಂದು ಕೈಗೆಟುಕುವ ದರಗಳಲ್ಲಿ ವಿವಿಧ ಭಾಷೆಗಳಲ್ಲಿ ದೇಶಾದ್ಯಂತ ಲಭ್ಯವಿದೆ. ತೆರೆದ ಪುಸ್ತಕದಂತಿದ್ದ ಗಾಂಧೀಜಿಯ ಜೀವನದ ಬಗ್ಗೆ ಹೊಸದಾಗಿ ಸಂಶೋಧಿಸಿ ಹೇಳಬೇಕಾದ್ದೇನೂ ಉಳಿದಿಲ್ಲ. ಗಾಂಧೀ ಪ್ರಣೀತ ತತ್ತ್ವಗಳ ಉಲ್ಲೇಖದ ನೆಪದಲ್ಲಿ ನಂನಮ್ಮ ಪಾಂಡಿತ್ಯ ಪ್ರದರ್ಶನವೂ ಇಂದು ಸಮಾಜಕ್ಕೆ ಬೇಕಾಗಿಲ್ಲ. ಸಮಾಜಕ್ಕೆ ಇಂದು ಅಗತ್ಯವಾಗಿರುವುದು ಗಾಂಧೀಜಿ ತೋರಿದ ಆದರ್ಶಗಳ ಪಾಲನೆ. ಗಾಂಧೀಜಿಯವರ ಜೀವನ, ಸಾಹಿತ್ಯ ಮತ್ತು ತತ್ತ್ವಗಳ ಅರಿವಿಲ್ಲದವರಿಗೆ, ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ, ಆ ಅರಿವು ಹುಟ್ಟಿಸಲು ವಿಪುಲ ಸಾಹಿತ್ಯ ಲಭ್ಯವಿದೆ. ಅವರು ಅರಿಯುವ ಮನಸ್ಸು ಮಾಡಬೇಕು ಅಷ್ಟೆ.

ಗಾಂಧಿ ಜಯಂತಿ ಬಂತೆಂದರೆ ನಮ್ಮ ರಾಜಕಾರಣಿಗಳು ಆಡುವ ನಾಟಕ ನೋಡಿ ಅಸಹ್ಯವಾಗುತ್ತದೆ! ಹಲವೊಮ್ಮೆ ಸಿಟ್ಟು ಉಕ್ಕಿಬರುತ್ತದೆ! ಪ್ರತಿ ದಿನ, ಪ್ರತಿ ಗಳಿಗೆ ಗಾಂಧೀ ತತ್ತ್ವದ ವಿರುದ್ಧ ಸಾಗುವ ಈ ರಾಜಕಾರಣಿಗಳು ಗಾಂಧಿ ಜಯಂತಿಯ ದಿನ ಅಪ್ಪಟ ಖಾದಿ ದಿರುಸು ಧರಿಸಿ, ಗಾಂಧಿಟೋಪಿ ತಲೆಗಿಟ್ಟುಕೊಂಡು, ಗಾಂಧೀಜಿ ಫೋಟೋಕ್ಕೆ ಹಾರ ಏರಿಸಿ, ಕ್ಯಾಮೆರಾಗಳ ಮುಂದೆ ಪೋಸು ಕೊಡುತ್ತಾರೆ! ಪರಮ ದುಷ್ಟರೂ ಕಡು ಭ್ರಷ್ಟರೂ ಆದ ಇವರು ಆ ದಿನ ಗಾಂಧೀಜಿಯ ಹೆಸರೆತ್ತಿಕೊಂಡು ನಮಗೆಲ್ಲ ಸತ್ಯ, ಅಹಿಂಸೆ, ಅಸ್ತೇಯ ಗುಣಗಳನ್ನು ಬೋಧಿಸುತ್ತಾರೆ! ತಮಗೇನೂ ಗೊತ್ತಿಲ್ಲದಿದ್ದರೂ ಮಹಾಪಂಡಿತರಂತೆ ಗಾಂಧೀಜಿಯ ಬಗ್ಗೆ ಬೂಸಾ ಬಿಡುತ್ತಾರೆ!

ಗಾಂಧೀಜಿ ಇಂದು ಈ ರಾಜಕಾರಣಿಗಳ ’ಕೈ’ಯಲ್ಲಿ ಜನರನ್ನು ಮರುಳು ಮಾಡುವ ಸಾಧನವಾಗಿದ್ದಾರೆ! ವ್ಯಾಪಾರಿಗಳಿಗೆ ಜಾಹಿರಾತಿನ ವಸ್ತುವಾಗಿದ್ದಾರೆ! ವಿದ್ಯಾರ್ಥಿ ಮತ್ತು ನೌಕರ ಸಮುದಾಯಕ್ಕೆ ವಾರ್ಷಿಕ ರಜಾದಿನದ ಹೇತುವಾಗಿದ್ದಾರೆ! ಗಾಂಧೀಜಿಯ ಬಗ್ಗೆ ಹೆಚ್ಚಿನ ಅರಿವಿಲ್ಲದ ಮತ್ತು ತಿಳಿದುಕೊಳ್ಳುವ ಅಪೇಕ್ಷೆಯೂ ಇಲ್ಲದ ಇಂದಿನ ’ಮಾಡರ್ನ್’ ಯುವ ಪೀಳಿಗೆಗೆ ಗಾಂಧೀಜಿ ಹಾಸ್ಯದ ವಸ್ತುವಾಗಿದ್ದಾರೆ! ಎಂ.ಜಿ.ರೋಡ್ ಆಗಿ ಅವರ ಬಾಯಲ್ಲಿ ಚಾಲ್ತಿಯಲ್ಲಿದ್ದಾರೆ!

ಯುಗಪುರುಷ ಗಾಂಧೀಜಿ ಗತಿಸಿ ಆರೇ ದಶಕಗಳಲ್ಲಿ ಎಂಥ ದುರಂತ!

ಗಾಂಧೀಜಿಯ ಅವತಾರ ಕೇವಲ ಸ್ವಾತಂತ್ರ್ಯ ಚಳವಳಿಯ ಮಟ್ಟಿಗಷ್ಟೇ ಪರಿಗಣನಾರ್ಹ ಎಂದು ನಾವು ಭಾವಿಸಿರುವುದರಿಂದಲ್ಲವೆ ಈ ದುರಂತ? ಸ್ವಾತಂತ್ರ್ಯ ಚಳವಳಿಯ ಸಾಧನೆಯನ್ನೂ ಮೀರಿದ ಆದರ್ಶ ಪುರುಷನೊಬ್ಬ ಗಾಂಧೀಜಿಯಲ್ಲಿದ್ದನೆಂಬುದನ್ನು ಮತ್ತು ಆ ಆದರ್ಶ ಇಂದಿಗೂ-ಎಂದೆಂದಿಗೂ ಅನುಸರಣೀಯವೆಂಬುದನ್ನು ನಾವೇಕೆ ಅರಿಯುತ್ತಿಲ್ಲ?

ಗಾಂಧಿ ಜಯಂತಿಯ ದಿನವಾದ ಇಂದು ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

ಗುರುವಾರ, ಅಕ್ಟೋಬರ್ 1, 2009

ಕೆಂಡಸಂಪಿಗೆಯ ಪರಿಮಳ ಇನ್ನಿಲ್ಲ!

’ಕೆಂಡಸಂಪಿಗೆ’ ಆನ್‌ಲೈನ್ ಪತ್ರಿಕೆ ಅಚಾನಕ್ಕಾಗಿ ತನ್ನ ಪ್ರಕಟಣೆ ನಿಲ್ಲಿಸಿದೆ!
ಇದೀಗಷ್ಟೇ ವಿಷಯ ತಿಳಿದು ಅದರ ಖಾಯಂ ಓದುಗನಾದ ನಾನು ಆಘಾತಕ್ಕೊಳಗಾಗಿದ್ದೇನೆ!
ತತ್‌ಕ್ಷಣ ನನಗನ್ನಿಸಿದ್ದು ಹೀಗೆ:

ಘಮಘಮ ಪರಿಮಳ
ಮಸ್ತಿಷ್ಕದ ನಾಸಿಕಕ್ಕೆ;
ಮಧುರಾನುಭವ
ಅದರ ಹೃದಯಕ್ಕೆ

ಕಡು ಸುವಾಸನೆಯ
ಕೆಂಡಸಂಪಿಗೆ
ಇನ್ನಿಲ್ಲ!
ನಡುನೀರಿನಲ್ಲಿ
ಮುಳುಗಿಹೋಯಿತಲ್ಲ!

ಮಿದುಳ ಕಣ್ಣಿಗೆ ಅದರಂದ
ಸೊಂಪಾಗಿತ್ತು,
ಸಂಪಿಗೆ
ಹದುಳ ತಪ್ಪಿ
ಹೊರಟುಹೋಯಿತೇ?

ಘ್ರಾಣಿಸಿದವರೆ ಎಲ್ಲ,
ಪೋಷಿಸಿದವರಿಲ್ಲ
ಎಂದೇ
ಮುದುಡಿತೇ?

ಏನೇ ಆದರೂ
ಇದು ಸಲ್ಲ
ಇದು ಸಲ್ಲ.

***

ಹೀಗೆ ಅಂತರ್ಜಾಲದ ನಿಧಿಯೊಂದು ಕಣ್ಮರೆಯಾಗುವುದು ಆತಂಕಕಾರಿ ಬೆಳವಣಿಗೆ.
ಪ್ರಿಯ ಮಿತ್ರರೇ,
ನೀವು ’ಕೆಂಡಸಂಪಿಗೆ’ಯ ಓದುಗರಾಗಿದ್ದಿರಾ? ಹೌದಾದರೆ ನಿಮಗೇನನ್ನಿಸುತ್ತಿದೆ?