ಮಂಗಳವಾರ, ಅಕ್ಟೋಬರ್ 6, 2009

ಸೋನಿಯಾ ದೇಶ್!

ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ವೈ ಎಸ್ ರಾಜಶೇಖರ ರೆಡ್ಡಿಯ ಹೆಸರನ್ನು ಸೇರಿಸಿ ಮರುನಾಮಕರಣ ಮಾಡಲಾಗುತ್ತಿದೆ!

ಪ್ರಕಾಶಂ, ರಂಗಾರೆಡ್ಡಿ ಮತ್ತು ಪೊಟ್ಟಿ ಶ್ರೀರಾಮುಲು ಹೆಸರುಗಳಲ್ಲಿ ಈಗಾಗಲೇ ಮೂರು ಜಿಲ್ಲೆಗಳು ಆಂಧ್ರಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ.

ಬೀದಿಗೆ, ಊರಿಗೆ ಪುಢಾರಿಗಳ ಹೆಸರಿಡುವ ಚೋದ್ಯವಂತೂ ಲಗಾಯ್ತಿನಿಂದಲೂ ದೇಶದ ಎಲ್ಲೆಡೆ ನಡೆದೇ ಇದೆ. ತಮ್ಮ ಮತ್ತು ತಮಗೆ ಬೇಕಾದವರ ಹೆಸರಿಡುವ ನಿಟ್ಟಿನಲ್ಲಿ ಮೊಘಲರ ಮತ್ತು ಬ್ರಿಟಿಷರ ಕೊಡುಗೆಯೂ ದಂಡಿಯಾಗಿದೆ. ಇದೀಗ ಇನ್ನೊಂದಿಡೀ ಜಿಲ್ಲೆಗೆ ರಾಜಕಾರಣಿಯೊಬ್ಬನ ಹೆಸರು ಸೇರಿಸುವ ಧೂರ್ತತನ!

ಹೀಗೇ ಮುಂದುವರಿದರೆ ಮುಂದೆ ನಮ್ಮ ದೇಶವು ನೆಹರೂ ಪ್ರದೇಶ್, ಇಂದಿರಾ ಪ್ರದೇಶ್, ರಾಜೀವ್‌ಸ್ಥಾನ್, ರಾಹುಲ್‌ಸ್ಥಾನ್, ಪ್ರಿಯಾಂಕಾ ಪ್ರದೇಶ್ ಮುಂತಾದ ರಾಜ್ಯಗಳನ್ನೊಳಗೊಂಡ ’ಸೋನಿಯಾ ದೇಶ್’ ಎಂದು ಮರುನಾಮಕರಣಗೊಂಡರೆ ಆಶ್ಚರ್ಯವಿಲ್ಲ.

ಹೀಗೆ, ಇಂದು ಒಂದು ಜಿಲ್ಲೆಯ, ನಾಳೆ ಒಂದು ರಾಜ್ಯದ, ನಾಳಿದ್ದು ಈ ದೇಶದ ಹೆಸರನ್ನೇ ಕಿತ್ತುಹಾಕಿ ತಮಗೆ ಬೇಕಾದ ಪುಢಾರಿಯ ಹೆಸರನ್ನಿಡುವ ಅಧಿಕಾರ ಪ್ರಜಾಪ್ರಭುತ್ವ ದೇಶದ ಯಃಕಶ್ಚಿತ್ ರಾಜಕಾರಣಿಗಳಿಗಿದೆಯೆಂಬುದೇ ಒಂದು ದುರಂತ! ಇಂಥ ಅನೇಕ ಅಧಿಕಾರಗಳನ್ನವರು ಸಂವಿಧಾನ ಮತ್ತು ಕಾನೂನುಗಳ ಕರಾಮತ್ತಿನಿಂದ ತಮಗೆ ಕೊಟ್ಟುಕೊಂಡಿದ್ದಾರೆ. ಅವರ ಅಧಿಕಾರಗಳ ಪುನರ್ವಿಮರ್ಶೆ ಈಗ ಅತ್ಯಗತ್ಯ. ಇಲ್ಲದಿದ್ದರೆ ಮುಂದೊಂದು ದಿನ ಈ ನಮ್ಮ ರಾಜಕಾರಣಿಗಳು ವೋಟ್ ಬ್ಯಾಂಕ್, ತುಷ್ಟೀಕರಣ ಮತ್ತು ಅಧಿಕಾರಕ್ಕಾಗಿ ನಮ್ಮ ದೇಶದ ಪರಂಪರಾಗತ ಗುರುತುಗಳನ್ನೇ ಅಳಿಸಿಹಾಕಿಯಾರು!

4 ಕಾಮೆಂಟ್‌ಗಳು:

  1. ಆನ೦ದ ಸರ್,
    ನಿಮ್ಮ ಕಳಕಳಿ ಸರಿ . ನಾನು ಒಪ್ಪುತ್ತೇನೆ .

    ಪ್ರತ್ಯುತ್ತರಅಳಿಸಿ
  2. ಹೌದು, ಇದೊಂದು ಅನಿಷ್ಟ ಪರ೦ಪರೆ. ಯಾವ ಯಾವ ರಾಜಕಾರಣಿಗಳು ಎಲ್ಲೆಲ್ಲಿ ಜನಪ್ರಿಯರೋ ಅಲ್ಲೆಲ್ಲ ಅವರ ಹೆಸರನ್ನು ಆಯಾ ನಗರ ಜಿಲ್ಲೆಗಳಿಗೆ ಇಡುವ ಪರಿಪಾಠ ಬಂದರೆ, ಹಾಸನವನ್ನು ದೇವೇಗೌಡ ಜಿಲ್ಲೆ ಅ೦ತ, ಹೊಸದಾಗಿ ರಚನೆಯಾಗಲು ಸಜ್ಜಾಗಿರುವ ಶಿಕಾರಿಪುರವನ್ನು ಯೆಡಿಯೂರಪ್ಪ ಜಿಲ್ಲೆ ಅ೦ತ, ರಾಮನಗರವನ್ನು ಕುಮಾರಸ್ವಾಮಿ ಜಿಲ್ಲೆ ಅ೦ತ ನಾಮಕರಣ ಮಾಡುವ ಸ್ಥಿತಿ ಮುಂದೆ ನಮ್ಮ ರಾಜ್ಯದಲ್ಲೂ ಬರಬಹುದೇನೋ ?

    ಪ್ರತ್ಯುತ್ತರಅಳಿಸಿ
  3. ಸಾರ್,

    ನಿನ್ನೆ ಒಂದೂ ಗುಳ್ಗೆ ಇರ್ಲಿಲ್ಲಾ, ಆಗಂತ ಇವತ್ತು ನಿರಾಸೆ ಆಗ್ಲಿಲ್ಲ. ಒಳ್ಳೇ ಗುಳ್ಗೆನೇ ಹಾಕಿದ್ದೀರ.
    ಪಡೆದು ಕೊಂಡು ಬಂದಂದು ಅನುಭವಿಸಲೇ ಬೇಕು. ಮುಂದಿನ ಪರೀಕ್ಷೆ (ಚುನಾವಣೆ) ಬರತಂಕ ನಮ್ದೇನಿದ್ರೂ ಬರೀ ಕೋಳಿ ಜಗ್ಳಾ ಅಷ್ಟೇ. ಪರೀಕ್ಷೆ ಬಂದಾಗ ಸುಮ್ನಿದ್ದು ಈಗ ಪಲಿತಾಂಶ ಬಂದಾಗ ಗೋಳಾಡಿದ್ರೆ?

    ಪ್ರತ್ಯುತ್ತರಅಳಿಸಿ
  4. ಸಕಾರಾತ್ಮಕ ಸ್ಪಂದನ ದಾಖಲಿಸಿದ ಮಿತ್ರತ್ರಯರಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ