ಬುಧವಾರ, ಅಕ್ಟೋಬರ್ 21, 2009

ಸರ್ವದೇವ ಪ್ರದಕ್ಷಿಣ ಯಾತ್ರೆಯ ಕಥೆ (ಹಾಸ್ಯ)

ಓಂ ಶ್ರೀ ಗಣೇಶಾಯ ನಮಃ.

ಗಣಪತಿಗೆ ವಂದಿಸಿಯೇ ಯಾವ ಕೆಲಸವನ್ನೇ ಆಗಲೀ ಪ್ರಾರಂಭ ಮಾಡಬೇಕು.

ವರ್ತುಲ ರಸ್ತೆ ಎಂದರೆ ರಿಂಗ್ ರೋಡ್. ’ವರ್ತುಲ’ ಸಂಸ್ಕೃತವಾದ್ದರಿಂದ ಅರ್ಥವಾಗುವುದು ಕಷ್ಟ. ’ದುಂಡನೆಯ’ ಅನ್ನಬಹುದು. ಆದರೆ ರಿಂಗೇ ಕಿವಿಯಲ್ಲಿ ಚೆನ್ನಾಗಿ ರಿಂಗಣಿಸುತ್ತದಾದ್ದರಿಂದ ರಿಂಗ್ ರೋಡೇ ಇರಲಿ.

ಹೊರ ವರ್ತುಲ ರಸ್ತೆ, ಕ್ಷಮಿಸಿ, ಔಟರ್ ರಿಂಗ್ ರೋಡು ಊರನ್ನು ಹೊರಗಿನಿಂದ ಒಂದು ಸುತ್ತು ಸುತ್ತುವರಿದಿರುತ್ತದೆ. ಊರೊಳಗಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಜಾಲಿ ರೈಡ್ ಸಾಹಸಿಗರಿಗೆ ಅನುಕೂಲವಾಗಲು ಈ ರೋಡನ್ನು ನಿರ್ಮಿಸಲಾಗಿರುತ್ತದೆ. ಬೆಂಗಳೂರಿನಲ್ಲಿ ಈ ರಸ್ತೆಯನ್ನು ನೋಡಿರುವವರಿಗೆ ನಾನು ಹೆಚ್ಚು ವಿವರಿಸುವ ಅಗತ್ಯವಿಲ್ಲ. ನೋಡಿರದವರಿಗೆ ಈಗ ನೀಡಿರುವ ವಿವರಣೆ ಸಾಕಾಗುತ್ತದೆ.

ಐಡಿಯಾ!
---------
ತಿಪ್ಪೇಶಿಗೆ ಒಂದು ಮುಂಜಾನೆ ಇದ್ದಕ್ಕಿದ್ದಂತೆ ಒಂದು ಅದ್ಭುತ ಐಡಿಯಾ ಹೊಳೆಯಿತು. ಹಿಂದಿನ ದಿನ ಅವನು ಪತ್ನೀಸಮೇತನಾಗಿ ಚಾಮರಾಜಪೇಟೆಗೆ ಹೋಗಿ, ’ಒಂದು ಕಣ್ಣು’ ಮಾತ್ರ ತೆರೆದ ಸಾಯಿಬಾಬಾನ ದರ್ಶನ ಮಾಡಿ ಬಂದದ್ದರ ಫಲವೇ ಆ ಐಡಿಯಾ. ಈ ಹಿಂದೆ ಹಾಲು ಕುಡಿದ ಗಣೇಶನ ದರ್ಶನ ಮಾಡಿದಾಗಲೂ ಮರು ಮುಂಜಾನೆ ಒಂದು ಅದ್ಭುತ ಐಡಿಯಾ ಹೊಳೆದು ಅದರನುಸಾರ ಒಂದು ಸೆಕೆಂಡ್ ಹ್ಯಾಂಡ್ ಬಸ್ ಗಾಡಿ ಆರಂಭಿಸಿ ಬೇಜಾನ್ ಕಾಸು ಮಾಡಿದ್ದ ಇದೇ ತಿಪ್ಪೇಶಿ. ಈಗ ಆ ಬಸ್ಸನ್ನು ಅವನು ಗುಜರಿಗೆ ಹಾಕಿ ಹೊಸ ಬಸ್ ಕೊಂಡು ರೂಟಿಗೆ ಬಿಟ್ಟು ಮೂರು ವರ್ಷವಾಯಿತು. ದುಡಿಮೆ ಪರವಾ ಇಲ್ಲ. ತಾನಿರುವ ಮಹಾನಗರದಿಂದ ಅಲ್ಲೇ ಸುತ್ತಮುತ್ತಲ ರಾಂಪುರ, ಸೋಂಪುರ, ಭೀಂಪುರ ಮೊದಲಾದ ಹತ್ತಿರದ ಸ್ಥಳಗಳಿಗಷ್ಟೇ ಅವನ ಬಸ್ ಸರ್ವಿಸ್. ನೆಮ್ಮದಿಯ ಜೀವನ ಅವನದು. ಆದರೆ ಇದೀಗ ಹೊಳೆದ ಅದ್ಭುತ ಐಡಿಯಾ ಅವನ ನೆಮ್ಮದಿ ಕೆಡಿಸಿಬಿಟ್ಟಿತು!

’ದೇವರಿಗೆ ಪ್ರದಕ್ಷಿಣೆ ಹಾಕಿದರೆ ಪುಣ್ಯ ತಾನೆ. ಈ ಮಹಾನಗರದ ರಿಂಗ್ ರೋಡಿನಲ್ಲಿ ತನ್ನ ಬಸ್ಸನ್ನು ’ಪ್ರದಕ್ಷಿಣೆ ಸರ್ವಿಸ್’ ಎಂಬ ಹೆಸರಿನೊಂದಿಗೆ (ಕ್ಲಾಕ್‌ವೈಸ್ ಆಗಿ) ಓಡಿಸಿದರೆ ಹೇಗೆ? ಒಂದು ಸುತ್ತು ಓಡಿಸಿದರೆ ಜನರನ್ನು ಮಹಾನಗರದ ಎಲ್ಲ ದೇವಾಲಯಗಳಿಗೂ ಒಂದು ಪ್ರದಕ್ಷಿಣೆ ಹಾಕಿಸಿದಂತಾಗುತ್ತದೆ. ಒಂದು ಸುತ್ತಿಗೆ ಇಷ್ಟು ಎಂದು ದರ ನಿಗದಿ ಮಾಡುವುದು. ಭಕ್ತಜನರು ಅದರನುಸಾರ ಎಷ್ಟು ಸುತ್ತು ಬೇಕಾದರೂ ಪ್ರದಕ್ಷಿಣೆ ಹಾಕಿ ಪುಣ್ಯ ಕಟ್ಟಿಕೊಳ್ಳಲಿ. ತನಗೆ ಸಖತ್ ಆದಾಯ!

ಈ ಐಡಿಯಾ ಹೊಳೆದದ್ದೇ ತಡ, ಐಡಿಯಾವನ್ನು ಅನುಷ್ಠಾನಕ್ಕೆ ತಂದೇಬಿಟ್ಟ ತಿಪ್ಪೇಶಿ. ’ಶ್ರೀ ತಿಪ್ಪೇಸ್ವಾಮಿ ಸರ್ವದೇವ ಪ್ರದಕ್ಷಿಣ ಯಾತ್ರೆ’ ಎಂದು ಆಕರ್ಷಕ ಹೆಸರಿಟ್ಟು ಅವನು ಪ್ರಾರಂಭಿಸಿದ ಈ ’ಯಾತ್ರಾ ಸ್ಪೆಷಲ್’ ಕೆಲವೇ ದಿನಗಳಲ್ಲಿ ನಗರಾದ್ಯಂತ ಮನೆಮಾತಾಯಿತು. ಅರವತ್ತು ರೂಪಾಯಿ ಕೊಟ್ಟು ಬಸ್ ಹತ್ತಿದರೆ ಸಾಕು, ಎರಡೇ ಗಂಟೆ ಅವಧಿಯಲ್ಲಿ ಅರವತ್ತೇಳು ಕಿಲೋಮೀಟರ್ ಸಂಚರಿಸಿ ಮಹಾನಗರದ ಎಲ್ಲ ದೇವಸ್ಥಾನಗಳಿಗೂ ಒಂದು ಪ್ರದಕ್ಷಿಣೆ ಹಾಕಬಹುದು! ಭರ್ಜರಿ ಪುಣ್ಯ ಸಂಪಾದನೆ! ಯಾರಿಗುಂಟು ಯಾರಿಗಿಲ್ಲ!

’ಮಹಾನಗರ ಸಾರಿಗೆ’ ಬಸ್ಸಿನಲ್ಲಿ ಮುವ್ವತ್ತೇ ರೂಪಾಯಿಗೆ ಇದೇ ರೀತಿ ಪ್ರದಕ್ಷಿಣೆ ಹಾಕಬಹುದಾದರೂ ನೂರಾಮುವ್ವತ್ಮೂರು ಸ್ಟಾಪ್‌ಗಳಲ್ಲಿ ನಿಂತು ಮುಂದುವರಿಯುವ ಆ ಬಸ್ಸಿನಲ್ಲಿ ನಾಲ್ಕೂವರೆ ಗಂಟೆ ಸಮಯವನ್ನು ಅದಾವ ದಡ್ಡ ವೇಸ್ಟ್ ಮಾಡಿಕೊಳ್ಳಲಿಚ್ಛಿಸುವನು? ತಿಪ್ಪೇಶಿಯದು ನಾನ್ ಸ್ಟಾಪ್ ಪ್ರದಕ್ಷಿಣ ಯಾತ್ರಾ ಸ್ಪೆಷಲ್. ಆಫೀಸಿಗೆ ಹೋಗುವವರು ಬೆಳಿಗ್ಗೆ ಎರಡು ಗಂಟೆ ಮುಂಚಿತವಾಗಿ ಮನೆ ಬಿಟ್ಟರೆ ಸಾಕು ತಿಪ್ಪೇಶಿಯ ಬಸ್ಸಿನಲ್ಲಿ ಸರ್ವದೇವ ಪ್ರದಕ್ಷಿಣೆ ಪೂರೈಸಿ ಆಫೀಸಿಗೆ ಹಾಜರಾಗಬಹುದು. ಆಫೀಸು ಮುಗಿಸಿಕೊಂಡು ಪ್ರದಕ್ಷಿಣೆ ಹಾಕುವವರು ಪ್ರದಕ್ಷಿಣೆ ಪೂರೈಸಿ ರಾತ್ರಿ ಊಟದ ವೇಳೆಗೆಲ್ಲಾ ಮನೆಯಲ್ಲಿರಬಹುದು.

’ಶ್ರೀ ತಿ.ಸ.ಪ್ರ. ಯಾತ್ರೆ’ಗೆ ನೂಕುನುಗ್ಗಲು ಶುರುವಾಯಿತು. ಅಡ್ವಾನ್ಸ್ ಬುಕಿಂಗ್, ಆನ್‌ಲೈನ್ ಬುಕಿಂಗ್ ಆರಂಭವಾದವು. ತಿಂಗಳೊಪ್ಪತ್ತಿನಲ್ಲೇ ತಿಪ್ಪೇಶಿಯು ಸ್ವಧನ, ಬ್ಯಾಂಕ್ ಋಣ ಸೇರಿಸಿ ಎರಡನೇ ಬಸ್ಸನ್ನು ರಿಂಗ್ ರೋಡಿಗಿಳಿಸಿದ. ತಿಪ್ಪೇಶಿಯ ಯಶಸ್ಸನ್ನು ಕಂಡು ನಿಧಾನವಾಗಿ ಬೇರೆ ವಾಹನ ಮಾಲೀಕರೂ ಇಂಥದೇ ಯಾತ್ರಾ ಸರ್ವಿಸ್ ಪ್ರಾರಂಭಿಸಿದರು. ಬಸ್ಸು, ಮಿನಿ ಬಸ್ಸು, ವ್ಯಾನು, ಟೆಂಪೋ, ಹೀಗೆ ಹತ್ತಾರು ವಾಹನಗಳು ಪ್ರದಕ್ಷಿಣ ಯಾತ್ರೆ ಆರಂಭಿಸಿ ಭಕ್ತಜನರಿಗೆ ಪುಣ್ಯ ನೀಡತೊಡಗಿದವು. ಬಾಷಾಮಿಯಾ ಕೂಡ ತನ್ನ ಹೇಸರಗುಟ್ಟ ಸರ್ವಿಸನ್ನು ನಿಲ್ಲಿಸಿ ’ರಾಗುವೀಂದ್ರ ಸಾಮಿ ಸರ್ವರ್ ದೇವರ್ ಪರ್ದಸ್ಕಿಣ ಪುಣ್ಣ ಯಾತ್ರಾ ಪೆಶಲ್’ ಟೂರ್ ಆರಂಭಿಸಿದನೆಂದಮೇಲೆ ಈ ಸರ್ವದೇವ ಪ್ರದಕ್ಷಿಣ ಯಾತ್ರೆಗಳಿಗೆ ಯಾಪಾಟಿ ಬಿಸಿನೆಸ್ಸು, ತಿಳೀರಿ!

ಹೊಸ ಹೊಸ ಯೋಜನೆ
------------------------
’ಪ್ರದಕ್ಷಿಣ ಸ್ಪೆಷಲ್’ ವಾಹನಗಳ ಸಂಖ್ಯೆ ಹಿಗ್ಗಾಮುಗ್ಗಿ ಏರತೊಡಗಿದಂತೆ ಕ್ರಮೇಣ ತಿಪ್ಪೇಶಿಯ ಬಿಸಿನೆಸ್ ಕೊಂಚ ಡಲ್ಲಾಗತೊಡಗಿತು. ಕೂಡಲೇ ತಿಪ್ಪೇಶಿ ಹುಷಾರಾದ. ಬಸ್ಸಿನಲ್ಲಿ ವಿವಿಧ ದೇವತೆಗಳ ಹಾಡು, ಭಜನೆ, ಸ್ತೋತ್ರ, ಮಂತ್ರಾದಿಗಳ ಕ್ಯಾಸೆಟ್ ಹಾಕತೊಡಗಿದ. ಬಸ್ಸು ಆಯಾ ದೇವಸ್ಥಾನದ ಸಮೀಪ ಅಥವಾ ದಿಕ್ಕಿಗೆ ಬಂದಾಗ ಆಯಾ ದೇವರ ಕ್ಯಾಸೆಟ್ ಹಾಕುತ್ತಿದ್ದ. ಉದಾಹರಣೆಗೆ ರಾಜರಾಜೇಶ್ವರಿ ದೇವಸ್ಥಾನದ ಕಮಾನಿನ ಬಳಿ ಬಂದಾಗ ರಾಜರಾಜೇಶ್ವರಿ ಸ್ತೋತ್ರ, ಬನಶಂಕರಿ ದೇವಸ್ಥಾನದ ಸಮೀಪ ಬಂದಾಗ ಅಮ್ಮನವರ ಹಾಡು, ’ದಾಳಿ ಆಂಜನೇಯ’ನ ಗುಡಿಯ ದಿಕ್ಕಿನತ್ತ ಬಸ್ಸು ಸಾಗಿದಾಗ ಮಾರುತಿರಾಯನ ಭಜನೆ ಕ್ಯಾಸೆಟ್ಟು, ಹೀಗೆ.

ಬೇರೆಯವರೂ ಇದನ್ನು ಅನುಕರಿಸತೊಡಗಿದಾಗ ತಿಪ್ಪೇಶಿ ತನ್ನ ಬಸ್ಸಿನಲ್ಲಿ ಕ್ಯಾಸೆಟ್ ಜೊತೆಗೆ ಪೂಜೆ, ಮಂಗಳಾರತಿ, ಪ್ರಸಾದ ಆರಂಭಿಸಿದ. ಇದೂ ಕಾಪಿಚಿಟ್ಟಿಗೀಡಾದಾಗ ಬಸ್ಸಿನೊಳಗೆ ಗೈಡನ್ನು ನೇಮಿಸಿದ. ಬಸ್ಸು ಚಲಿಸುತ್ತಿದ್ದಂತೆಯೇ ಸಮೀಪದ ದೇವಸ್ಥಾನಗಳ ಮಹಾತ್ಮೆಗಳನ್ನು ಆ ಗೈಡಮ್ಮ ಪ್ರಯಾಣಿಕರಿಗೆ, ಕ್ಷಮಿಸಿ, ಯಾತ್ರಾರ್ಥಿಗಳಿಗೆ ಬಸ್ಸಿನೊಳಗೇ ವಿವರಿಸುತ್ತಿದ್ದಳು. ಕೆಲವು ದೇವಸ್ಥಾನಗಳ ವಿಡಿಯೋಗಳನ್ನೂ ತಿಪ್ಪೇಶಿಯೇ ನಿರ್ಮಿಸಿ ಬಸ್ಸಿನಲ್ಲಿ ಯಾತ್ರಾರ್ಥಿಗಳಿಗೆ ಪ್ರದರ್ಶಿಸತೊಡಗಿದ. ವಿಡಿಯೋ, ಆಡಿಯೋ, ಪೂಜೆ, ಪ್ರಸಾದ, ಮಹಾತ್ಮೆ ವಿವರಣೆ, ಹೀಗೆ, ಎರಡು ಗಂಟೆ ಕಳೆದದ್ದೇ ಯಾತ್ರಾರ್ಥಿಗಳಿಗೆ ಗೊತ್ತಾಗುತ್ತಿರಲಿಲ್ಲ. ತನ್ನ ಪ್ರತಿಯೊಂದು ಯೋಜನೆಯೂ ಬೇರೆ ವಾಹನಗಳ ಮಾಲೀಕರಿಂದ ಕಾಪಿಚಿಟ್‌ಗೆ ಈಡಾಗುತ್ತಿದ್ದಂತೆ ತಿಪ್ಪೇಶಿಯ ಬಳಿ ಹೊಸದೊಂದು ಯೋಜನೆ ರೆಡಿಯಾಗಿರುತ್ತಿತ್ತು.

ಈ ಸರ್ವದೇವ ಪ್ರದಕ್ಷಿಣ ಯಾತ್ರಾ ಸರ್ವಿಸ್‌ಗಳು ಎಷ್ಟು ಜನಪ್ರಿಯವಾದುವೆಂದರೆ, ಸ್ವಂತ ವಾಹನ ಹೊಂದಿದ್ದವರೂ ಅದನ್ನು ಮನೆಯಲ್ಲಿ ಬಿಟ್ಟು ಈ ಸರ್ವಿಸ್‌ಗಳಲ್ಲಿ ಪ್ರದಕ್ಷಿಣೆ ಹಾಕತೊಡಗಿದರು. ಮಂತ್ರ-ಸ್ತೋತ್ರ ಶ್ರವಣ, ಮಹಾತ್ಮ್ಯಕಥಾಶ್ರವಣ, ವಿಡಿಯೋದೈವದರ್ಶನ, ಪೂಜೆ, ಪ್ರಸಾದ ಇತ್ಯಾದಿ ಪುಣ್ಯದಾಯಕ ಫೆಸಿಲಿಟಿಗಳು ಅವರ ಸ್ವಂತ ವಾಹನಗಳಲ್ಲೆಲ್ಲಿಂದ ಬರಬೇಕು?

ಪ್ರದಕ್ಷಿಣ ಯಾತ್ರಾ ಸರ್ವಿಸ್ ವಾಹನಗಳ ಸಂಖ್ಯೆ ಏರತೊಡಗಿತು. ಎಷ್ಟೇ ಏರಿದರೂ ತಿಪ್ಪೇಶಿಯೂ ಸೇರಿದಂತೆ ಎಲ್ಲ ಯಾತ್ರಾ ಸರ್ವಿಸ್ ಮಾಲೀಕರಿಗೂ ಹೌಸ್‌ಫುಲ್ ಆದಾಯಕ್ಕೇನೂ ಕೊರತೆಯಿಲ್ಲ. ದೇವರ ಮಹಿಮೆಯೇ ಅಂಥದು! ಈ ಮಾಲೀಕರೆಲ್ಲ ಸೇರಿ ಸಂಘ ಕಟ್ಟಿಕೊಂಡು, ಸಾರಿಗೆ ಅಧಿಕಾರಿಗಳನ್ನೂ, ಆರಕ್ಷಕರನ್ನೂ, ಮಹಾನಗರಪಾಲಿಕೆಯನ್ನೂ ಮತ್ತು ತೆರಿಗೆ ಅಧಿಕಾರಿಗಳನ್ನೂ ಚೆನ್ನಾಗಿ ನೋಡಿಕೊಳ್ಳತೊಡಗಿದರು. (ಅಷ್ಟಿಷ್ಟು ತೆರಿಗೆಯನ್ನೂ ಪಾವತಿಸುತ್ತಿದ್ದರೆನ್ನಿ.) ಕ್ರಮೇಣ ಯಾತ್ರೆಯ ದರವನ್ನು ಹೆಚ್ಚಿಸಲಾಯಿತು. ಜೊತೆಗೆ, ಭಾನುವಾರ ಮತ್ತು ಹಬ್ಬದ ದಿನಗಳಂದು ಡಬಲ್ ಚಾರ್ಜು. ಆದಾಗ್ಗ್ಯೂ ಯಾತ್ರಿಕರ ಸಂಖ್ಯೆ ಏರುತ್ತಲೇ ಹೋಯಿತು. ಪುಣ್ಯ ಯಾರಿಗೆ ಬೇಡ? ಆದರೆ, ಕ್ರಮೇಣ ರಿಂಗ್ ರೋಡಿನಲ್ಲಿ ಟ್ರಾಫಿಕ್ ಜಾಮುಗಳು ಹೆಚ್ಚತೊಡಗಿದವು. ಅದೂ ಏಕಮುಖ ಜಾಮ್. ಕ್ಲಾಕ್‌ವೈಸ್.

ಟ್ರಾಫಿಕ್ ಜಾಮ್ ಅತಿಯಾದಾಗ ನಗರಾಭಿವೃದ್ಧಿ ಮಂಡಳಿ ಎಚ್ಚತ್ತುಕೊಂಡಿತು. ವಿವಿಧ ಆಡಳಿತ ಇಲಾಖೆಗಳ ಮೀಟಿಂಗ್ ಕರೆಯಲಾಯಿತು. ಪ್ರದಕ್ಷಿಣ ಯಾತ್ರಾ ಸರ್ವಿಸ್ ಮಾಲೀಕರ ಸಂಘಕ್ಕೂ ಆಹ್ವಾನ ಇತ್ತೆಂದು ಬೇರೆ ಹೇಳಬೇಕಿಲ್ಲವಷ್ಟೆ.

ಹಲವು ಮೀಟಿಂಗ್‌ಗಳ ತರುವಾಯ ಟ್ರಾಫಿಕ್ ಸಮಸ್ಯೆಗೆ ಪರಿಹಾರೋಪಾಯವನ್ನು ಕಂಡುಹಿಡಿಯಲಾಯಿತು. ಅದೇನೆಂದರೆ, ಮಹಾನಗರದ ಇನ್ನಷ್ಟು ಹೊರಕ್ಕೆ ಇನ್ನೊಂದು ರಿಂಗ್ ರೋಡನ್ನು ನಿರ್ಮಿಸುವುದು. ಹೊರವಲಯ ವರ್ತುಲ ರಸ್ತೆ. ಪೆರಿಫೆರಲ್ ರಿಂಗ್ ರೋಡ್.

ಉಪಸಂಹಾರ
--------------
ಉದ್ದೇಶಿತ ’ಹೊರವಲಯ ವರ್ತುಲ ರಸ್ತೆ’ಯ ಒಳಸುತ್ತಿನಲ್ಲಿ ರಸ್ತೆಯ ಅಂಚಿಗೇ ವಿವಿಧ ದೇವಾಲಯಗಳನ್ನು ನಿರ್ಮಿಸಲು ಸರ್ವದೇವ ಪ್ರದಕ್ಷಿಣ ಯಾತ್ರಾ ಸರ್ವಿಸ್ ಮಾಲೀಕರ ಸಂಘವು ಈಗಾಗಲೇ ಭೂಮಿ ಖರೀದಿಯಲ್ಲಿ ತೊಡಗಿದೆ.

ಇದೇ ವೇಳೆ, ರಾಜ್ಯದ ಇತರ ಅನೇಕ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಯಿಂದ ಊರ ಹೊರಗೆ ರಿಂಗ್ ರೋಡುಗಳನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ. ದೇವರು ಕಣ್ಣು ತೆರೆದ ಬಿಡಿ.

1 ಕಾಮೆಂಟ್‌: