(’ಕರ್ನಾಟಕ ರಾಜ್ಯೋತ್ಸವ’ ಸಮೀಪಿಸುತ್ತಿದೆ. ಸರ್ಕಾರಿ ಪ್ರಶಸ್ತಿಗಾಗಿ ’ಕನ್ನಡದ ಕಲಿ’ಗಳನೇಕರು ’ಕಂಡಕಂಡವರ ಕೈಕಾಲ್ ಹಿಡಿಯುವಾಟ’ ನಡೆಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕೂ ಸಿಕ್ಕಿಲ್ಲದಂತಾಗಿದೆ. ಊಹ್ಞೂ. ಸಿಕ್ಕುಸಿಕ್ಕಾಗಿದೆ! ಶಿಕ್ಷಣದಲ್ಲಿ ಕನ್ನಡ-ಇಂಗ್ಲಿಷ್‌ಗಳ ಜಟಾಪಟಿ ಮುಂದುವರಿದಿದೆ. ಇಂಥ ’ಸನ್ನಿ’ವೇಶದಲ್ಲಿ, ಇದೋ, ಒಂದು ಹಾಸ್ಯವಿಡಂಬನೆ.)
ದಯೆಯಿಟ್ಟು ಕ್ಷಮಿಸಿ.
ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಮೂರು ಘಟನೆಗಳತ್ತ ನಿಮ್ಮ ಚಿತ್ತ ಸೆಳೆಯುತ್ತ, ಮೂರಕ್ಕೂ ಸಂಬಂಧ ಕಲ್ಪಿಸಲೆತ್ನಿಸುತ್ತ, ನಿಮ್ಮ ಪಿತ್ತ ನೆತ್ತಿಗೇರುವಂತೆ ಮಾಡುತ್ತ ಮುಂದುವರಿಯಲಿದ್ದೇನೆ, ದಯೆಯಿಟ್ಟು ಕ್ಷಮಿಸಿ.
ಘಟನೆ ಒಂದು
--------------
ಸಂಸ್ಕೃತ ಪದವಿ ಪಡೆದ ಶಾಸ್ತ್ರಿಯಾದ್ದರಿಂದ ಎಂದಿನಂತೆ ನನ್ನನ್ನು ಸಂಸ್ಕೃತಿ ಸಂಬಂಧಿ ಸಮಾರಂಭವೊಂದಕ್ಕೆ ಎಳೆದುಕೊಂಡುಹೋಗಿ ವೇದಿಕೆಯಮೇಲೆ ಕುಳ್ಳಿರಿಸಲಾಯಿತು. ಸಂಸ್ಕೃತ ಪದವಿ ಪಡೆದ ಶಾಸ್ತ್ರಿಯಾದ್ದರಿಂದಲೇ ಏನೋ, ನಾನು ಆ ಸಮಾರಂಭದಲ್ಲಿ ವಿವಿಧ ಶಾಸ್ತ್ರಾಚರಣೆಗಳ ಬಗ್ಗೆ ಸಂಸ್ಕೃತಭೂಯಿಷ್ಟ ಕನ್ನಡದಲ್ಲಿ ಕೊರೆಯತೊಡಗಿದೆ. ಒಡನೆಯೇ ಸಭಾಸದರ ಸಣ್ಣ ಗುಂಪೊಂದು ಎದ್ದು ನನ್ನತ್ತ ’ಸಂಸ್ಕೃತ’ ಶಬ್ದಗಳ ಬಾಣಗಳನ್ನು ಬಿಡತೊಡಗಿತು!
’ಮುಚ್ಚಲೋ, ಮುಂ...!’ ಮುಂತಾಗಿ ಆಣಿಮುತ್ತುಗಳು ಉದುರತೊಡಗಿದವು! ಜೊತೆಗೆ ಘೋಷಣೆಗಳು:
’ಶಾಸ್ತ್ರ-ಗೀಸ್ತ್ರ ಡೌನ್ ಡೌನ್.’
’ಶಾಸ್ತ್ರಿ ಬುಡ್ಡಾ ಡೌನ್ ಡೌನ್.’
’ಸಮಸ್ಕ್ರುತ ಡೌನ್ ಡೌನ್.’
’ಬೇಡಾ, ಬೇಡಾ.’ ’ಸಮಸ್ಕ್ರುತ ವಿವಿ ಬೇಡಾ.’
’ಖನ್ನಢಾಂಬೆಗೆ,’ ’ಝಯವಾಗಲಿ.’
’ಖನ್ನಡ ರಕ್ಷಣ್ವೇದ್ಕೆಗೆ,’ ’ಝಯವಾಗಲಿ.’
(ಅ)ಭದ್ರತಾ ಕಾ’ರಣ’ದಿಂದಾಗಿ ಸಭೆ ಬರಖಾಸ್ತಾಯಿತು.
ಘಟನೆ ಎರಡು
--------------
ನಾನು ಒಂಥರಾ ರಾಜಕಾರಣಿ ಇದ್ದಂಗೆ. ಯಾವ ವಿಷಯದ ಮೇಲೆ ಬೇಕಾದ್ರೂ ಮಾತಾಡ್ತೀನಿ. ವಿಷಯವೇ ಇಲ್ದೆ ಇದ್ರೂ ಕನಿಷ್ಠ ಪಕ್ಷ ಅರ್ಧ ಗಂಟೆಯಾದ್ರೂ ಕೊರೀತೀನಿ. ಮಾತಾಡೋ ವಿಷಯದ ಬಗ್ಗೆ ನನಗೆ ತಿಳಿವಳಿಕೆ ಇರಬೇಕು ಅಂತೇನೂ ಇಲ್ಲ. ಏನೂ ಗೊತ್ತಿಲ್ದೆ ಇದ್ರೂ ಬಂಬಾಟಾಗಿ ಭಾಷ್ಣ ಬಿಗೀತೀನಿ. ಭಾಷ್ಣಕ್ಕೆ ಬೇಕಾಗಿಲ್ಲ ತಲೆ. ತಲೆಯಿಲ್ಲದವರಿಗೇ ವಿಶೇಷವಾಗಿ ಸಿದ್ಧಿಸುತ್ತೆ ಈ ಕಲೆ. ಇದು ನನ್ನ (ತಲೆಬುಡವಿಲ್ಲದ) ಖಚಿತ ಅಭಿಪ್ರಾಯ. ಇಂಥಾ ಕಲೆ ನನಗೆ ಸಿದ್ಧಿಸಿದೆ.
ಈ ಕಾರಣದಿಂದ್ಲೇ ನನ್ನನ್ನು ಬಾಳಾ ಕಡೆ ಭಾಷ್ಣಕ್ಕೆ ಕರೀತಾರೆ. ಬಾಳಾ ಮಂದಿ ಸಂಘಟಕ್ರಿಗೆ ನಾನು ಅದೇನೋ ಲಾಸ್ಟ್ ರೆಸಾರ್ಟ್ ಅಂತೆ. ಹಂಗಂದ್ರೇನೋ ನಂಗೊತ್ತಿಲ್ಲ. ನಂಗೊತ್ತಿರೋದು ಒಂದೇ ರೆಸಾರ್ಟು. ಕುತಂತ್ರ ಮಾಡ್ಬೇಕಾದಾಗೆಲ್ಲ ನಮ್ಮ ಪುಢಾರಿಗಳು ಹೋಗಿ ಕೂತ್ಕತಾರಲ್ಲ, ಆ ರೆಸಾರ್ಟು. ಅದೇ ಫಸ್ಟು, ಅದೇ ಲಾಸ್ಟು ನಂಗೊತ್ತಿರೋ ರೆಸಾರ್ಟು.
ಕಳೆದ ವಾರ ಒಂದ್ಕಡೆ ಭಾಷ್ಣಕ್ಕೆ ಕರೆದಿದ್ರು. ಹೋಗಿದ್ದೆ. ಅಲ್ಲಿ ನನ್ನನ್ನು ಸಭೆಗೆ ಪರಿಚಯ ಮಾಡಿಕೊಡ್ತಾ ಸಂಘಟಕ್ರು ಏನಂದ್ರು ಅಂದ್ರೆ, ’ಶಾಸ್ತ್ರೀಯವರ ಭಾಷಣಕ್ಕೆ ಇಲ್ಲಿಯತನಕ ಯಾವುದೂ ಸ್ಥಾನ, ಮಾನ ಇರಲಿಲ್ಲ; ಈಗ ಸರ್ಕಾರದ ದಯದಿಂದ ಸ್ಥಾನ, ಮಾನ ದೊರಕಿದೆ; ಇದು ನಮಗೆಲ್ಲಾ ಸಂತೋಷದ ವಿಷಯ’, ಅಂದ್ರು!
ಅಷ್ಟರಲ್ಲಿ ಯಾರೋ ಬಂದು ಅವರ ಕಿವಿಯಲ್ಲಿ, ’ಭಾಷ್ಣ ಅಲ್ಲ, ಭಾಷೆ’, ಅಂತ ಒದರಿ ಹೋದ್ರು.
’ಹಂಗಾ?’ ಅಂತ ಉದ್ಗಾರ ತೆಗೆದು ಸಂಘಟಕ್ರು ತಮ್ಮ ಮಾತನ್ನು ತಿದ್ದಿಕೊಂಡು ಮತ್ತೆ ಹೇಳಿದರು,
’ಶಾಸ್ತ್ರೀಯವರ ಭಾಷಣಕ್ಕಲ್ಲ, ಅವರ ಭಾಷೆಗೇನೇ ಇಲ್ಲೀತನಕ ಸ್ಥಾನ, ಮಾನ, ಏನೂ ಇರ್‍ಲಿಲ್ಲ; ಈಗ ಸರ್ಕಾರ ಎಲ್ಲಾ ದಯಪಾಲಿಸಿದೆ; ಅದಕ್ಕೆ ಸರ್ಕಾರಕ್ಕೆ ಹ್ರುತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.’
ಸದರಿ ಸಂಘಟಕರ ’ಶಾಸ್ತ್ರೀಯ ಸ್ಥಾನಮಾನದ ಜ್ಞಾನ’ದ ಕೊರತೆಯು ಈ ಶಾಸ್ತ್ರಿಯ ಸ್ಥಾನದ ಮಾನದ ಜೊತೆಗೆ ಶಾಸ್ತ್ರಿಯ ಮಾನವನ್ನೂ ಕಳೆದುಬಿಟ್ಟಿತು!
ಇನ್ನೊಂದ್ಕಡೆ ಭಾಷ್ಣಕ್ಕೆ ಹೋಗಿದ್ದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡಲು ಹೋರಾಡಿದಂಥ ಬಿಟ್ಬಂದಳ್ಳಿ ಯುವಕರನ್ನು ಗ್ರಾಂಪಂಚಾಯ್ತಿ ವತಿಯಿಂದ ಸನ್ಮಾನಿಸೋ ಸಮಾರಂಭ ಅದು. ನಾನೇ ’ಮುಕ್ಯ ಹತಿತಿ’. ಗ್ರಾಂಪಂಚಾಯ್ತಿ ಅಧ್ಯಕ್ಷರೇ ಸಮಾರಂಭದ ಅಧ್ಯಕ್ಷರು. ಸಮಾರಂಭ ಚೆನ್ನಾಗಿ ನಡೀತು. ಕೊನೇಲಿ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಹೇಳಿದ್ದು:
’ಕನ್ನಡಕ್ಕೆ ಹದೆಂತದೋ ಸಾಸ್ತ್ರಿ ಸ್ನಾನ, ಅಲ್ಲ, ಸ್ತಾನ ಬಂದದಂತೆ. ಬೋ ಸಂತೋಸ. ಅಂದ್ರೆ ಇನ್ಮ್ಯಾಕೆ ಸಾಸ್ತ್ರ ಎಲ್ಲಾವ ಕನ್ನಡ್ದಾಗೇ ಯೋಳ್ಬವುದು ಅಂದಂಗಾತು. ಶಾನೇ ಕುಶಿ ವಿಷ್ಯ. ಇಲ್ಲೀಗಂಟ ನಮ್ ಐನೋರು ಮದ್ವಿ ಇರ್‍ಲಿ ಮುಂಜ್ವಿ ಇರ್‍ಲಿ ಯೆಂತದೇ ಇರ್‍ಲಿ, ಬರೀ ಸಮುಕ್ರುತದಾಗೇ ಮಂತ್ರ ಯೋಳಿ ಸಾಸ್ತ್ರ ಮಾಡಿಸ್ತಿದ್ರು. ಒಂದೂ ನಮಗರ್ತ ಆಗಾಕಿಲ್ಲ ಯೇನಿಲ್ಲ. ಇನ್ಮ್ಯಾಕೆ ಯೆಲ್ಲಾ ಕನ್ನಡ್ದಾಗೇ ಮಾಡಿಸ್ಬವುದು ಅಂತಂದ್ರೆ ಬಾಳ ಬೇಸಾತ್ ಬುಡಿ. ಅಂದಂಗೆ, ಕೈನೋಡಿ, ಜಾತ್ಕ ನೋಡಿ, ಕವ್ಡೆ ಹಾಕಿ, ಗಿಣಿ ಬಾಯಿಂದ ಎತ್ಸಿ, ಹಿಂತಾ ಸಾಸ್ತ್ರ ಯೋಳದೆಲ್ಲ ಯೆಂಗೂವೆ ಕನ್ನಡ್ದಾಗೇ ನಡೀತಾ ಐತೆ, ಈಗ ಮದ್ವಿ ಮುಂಜ್ವಿ ಸಾಸ್ತ್ರಗ್ಳೂ ಕನ್ನಡ್ದಾಗೇ ಅಂತಂದ್ರೆ ಬಾಳ ಬೇಸಾತು.’
ಅಧ್ಯಕ್ಷರ ಈ ಮಾತುಗಳಿಗೆ ಭರ್ಜರಿ ಚಪ್ಪಾಳೆ ಬಿದ್ವು!
ಮತ್ತೊಂದು ಸಮಾರಂಭ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಹೋರಾಡಿದವರನ್ನು ರಾಜ್ಯಮಟ್ಟದಲ್ಲಿ ಸನ್ಮಾನಿಸೋ ಸಮಾರಂಭ. ’ಕರ್ನಾಟಕ ರಕ್ಷಣಾ ರಣ ವೀರ ಪಡೆ’ ಏರ್ಪಡಿಸಿದ್ದು. ಎಂದಿನಂತೆ ನಾನು ಮುಖ್ಯ ಅತಿಥಿ. ಈ ಸಮಾರಂಭದ ಅಧ್ಯಕ್ಷತೆ ಆ ಊರಿನ ಜಗತ್ಪ್ರಸಿದ್ಧ ಉದಯೋನ್ಮುಖ ಹಿರಿ ಕವಿ ಮಹಾಂತೇಶಜ್ಜಾ ಅವರದು. ಸ್ಥಳೀಯ ’ದರ್ಶನ(ವಿಲ್ಲದ) ಚಿಟ್ ಫಂಡ್ಸ್’ ಸಂಸ್ಥೆಯಿಂದ ’ಕನ್ನಡ ಕಾವ್ಯ ಸಿಂಧು’ ಬಿರುದಾಂಕಿತರಿವರು. ಇವರ ಭಾಷಣ ವಿಚಾರಪ್ರಚೋದಕವಾಗಿತ್ತು.
ಕ.ಕಾ.ಸಿಂಧು ಮಹಂತೇಶಜ್ಜಾ ಅವರು ಏನು ಹೇಳಿದರು ಅಂದ್ರೆ,
’ಕನ್ನಡ ಇನ್ನು ಶಾಸ್ತ್ರೀಯ ಭಾಷೆ. ಆದ್ದರಿಂದ ನಾವು ಇನ್ನು ಅದನ್ನು ಅಶಾಸ್ತ್ರೀಯ ರೂಪದಲ್ಲಿ ಬಳಸುವಂತಿಲ್ಲ. ಅಂದರೆ, ಪದಗಳನ್ನು ತಿರುಚುವುದಾಗಲೀ ಅಪಭ್ರಂಶ ಮಾಡುವುದಾಗಲೀ ಇಂಗ್ಲಿಷ್ ಮುಂತಾದ ಅನ್ಯ ಭಾಷೆಗಳನ್ನು ಮಧ್ಯೆ ಮಧ್ಯೆ ಬೆರೆಸುವುದಾಗಲೀ ಮಾಡುವಂತಿಲ್ಲ. ಶಾಸ್ತ್ರೀಯವಾದ ಕನ್ನಡವನ್ನೇ ಮಾತಾಡಬೇಕಾಗುತ್ತದೆ ಮತ್ತು ಶಾಸ್ತ್ರೀಯವಾಗಿಯೇ ಮಾತಾಡಬೇಕಾಗುತ್ತದೆ. ಆದರೆ, ಮುಖ್ಯ ಅತಿಥಿಗಳಾದ ಶಾಸ್ತ್ರೀಯವರೂ ಸೇರಿದಂತೆ ಇದುವರೆಗೂ ಮಾತನಾಡಿದವರಲ್ಲಿ ಯಾರೊಬ್ಬರೂ ಶಾಸ್ತ್ರೀಯವಾಗಿ ಮತ್ತು ಶಾಸ್ತ್ರೀಯ ಕನ್ನಡ ಮಾತನಾಡದೇ ಇದ್ದದ್ದು ಕನ್ನಡದ ದುರ್ದೈವ’, ಅಂದುಬಿಟ್ಟರು!
ನಿಜ ಹೇಳ್ತೀನೀ, ನನ್ನ ಭಾಷಣ(ಪ್ರ)ವೃತ್ತಿಯ ಅರ್ಧ ಶತಮಾನದಲ್ಲಿ ಇದುವರೆಗೂ ನನಗೆ ಇಂಥ ಘೋರ ಅವಮಾನ ಎಂದೆಂದೂ ಆಗಿರಲಿಲ್ಲ! ಇದು ನನಗಾದ ಪಕ್ಕಾ (ಅ)ಶಾಸ್ತ್ರೀಯ ಅವಮಾನವೇ ಸರಿ!
ಶಾಸ್ತ್ರೀಯ ಭಾಷೆ ಅಂದ್ರೆ ಏನು ಮತ್ತು ಆ ಭಾಷೇಲಿ ಶಾಸ್ತ್ರೀಯವಾಗಿ ಮಾತಾಡೋದು ಹೇಗೆ ಅಂತ ಮಹಂತೇಶಜ್ಜಾ ಅವರನ್ನು ಕೇಳೋಣ ಅಂದ್ಕೊಂಡ್ರೆ ಅವ್ರು ಅನಾರೋಗ್ಯದ ನಿಮಿತ್ತ ವಂದನಾರ್ಪಣೆಗೆ ಮುನ್ನವೇ ಎದ್ದು ಹೊರಟುಹೋಗಿಬಿಟ್ರು!
ಘಟನೆ ಮೂರು
--------------
’ಜೈ ಭುವನೇಶ್ವರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ’ಯ ಒಂದನೇ ತರಗತಿಗೆ ಮೊಮ್ಮಗನನ್ನು ಸೇರಿಸಲು ಅವನನ್ನು ಕರೆದುಕೊಂಡು, ಕ್ಷಮಿಸಿ, ಎಳೆದುಕೊಂಡು ಹೋದೆ. ’ಪ್ರಿನ್ಸಿಪಾಲ್’ ಎಂಬ (ಆಂಗ್ಲ)ಫಲಕ ಎದುರಿಟ್ಟುಕೊಂಡಿದ್ದ ಎಳೇ ಮುಖ್ಯೋಪಾಧ್ಯಾಯಿನಿಯು ನನ್ನೊಡನೆ ನಡೆಸಿದ ಸಂಭಾಷಣೆಯ ಮುಖ್ಯ ಭಾಗ:
’ದಿಸ್ ಈಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್.’
’ಮತ್ತೇ...ಕನ್ನಡ ಮಾಧ್ಯಮ ಶಾಲೆ ಅಂತ ಹೊರಗಡೆ ನಾಮಫಲಕ....!’
’ಓಹ್! ದಟ್ಸ್ ಫಾರ್ ಗೌರ್‍ಮೆಂಟ್ಸ್ ಐವಾಷ್! ರೆಕಾರ್ಡ್ಸ್ ಸೇಕ್ ಅವರ್‍ಸ್ ಈಸ್ ಕನಡಾ ಮೀಡಿಯಂ. ಬಟ್ ಪ್ರಾಕ್ಟಿಕಲೀ ವಿ ಟೀಚ್ ಇಂಗ್ಲಿಷ್ ಮೀಡಿಯಂ. ಅದರ್‌ವೈಸ್ ಪೇರೆಂಟ್ಸ್ ವೋಂಟ್ ಅಡ್ಮಿಟ್ ದೆಯ್ರ್ ಚಿಲ್ಡ್ರನ್ ಹಿಯರ್, ಯು ಸೀ!’
’ಬರ್ತೀನಿ, ನಮಸ್ಕಾರ.’
’ಸಿಟ್ ಸಿಟ್. ವಿ ಟೀಚ್ ಕನಡಾ ಒನ್ ಸಬ್ಜಕ್ಟ್. ಡೋಂಟ್ ವರಿ.’
’ಸಿಟ್ ಗಿಟ್ ಏನಿಲ್ಲ, ಶಾಂತವಾಗೇ ಹೊರಕ್ಕ್ಹೋಗ್ತೀನಿ ಮೇಡಮ್, ಯೂ ಇಂಗ್ಲಿಷ್ ಮೀಡ್ಯಮ್, ಮುಂದುವರಿ.’
ತರುವಾಯ ಮೊಮ್ಮಗನನ್ನು ಬೇರೆ ಶಾಲೆಗೆ ಸೇರಿಸಿದೆ.
ಸಮ್-ಬಂಧ
-------------
ಮೇಲಿನ ಮೂರೂ ಘಟನೆಗಳಿಗೂ ನಾನು ಕಲ್ಪಿಸಲೆತ್ನಿಸುವ ಪರಸ್ಪರ ಸಂಬಂಧ ಇಂತಿದೆ:
ನಮಗೆ ಸಂಸ್ಕೃತ ಬೇಡ, ಕನ್ನಡ ಸಾಕು.
ಕನ್ನಡದಲ್ಲಿನ ಸಂಸ್ಕೃತ? ಅದನ್ನೂ ಎತ್ತಿ ಆಚೆಗೆ ಬಿಸಾಕು!
ಆಮೇಲೆ ಉಳಿಯೋದು? ’ಸುಲಿದ ಬಾಳೆಯಕಾಯಿಯಂದದ ಪಳೆಗನ್ನಡಂ ತಾಂ.’ ಥಕಧಿಮಿ ಥೋಂ!
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕು.
ಸ್ಥಾನ ಬಂತು, ಮಾನ ಬರಲಿಲ್ಲ.
ಪರವಾ ಇಲ್ಲ. ಶಾಸ್ತ್ರೀಯ ಸ್ಥಾನಮಾನ ಅಂದರೆ ಏನಂತಲೇ ನಮಗೆ ಗೊತ್ತಿಲ್ಲ. ಅಂತೂ ಬೇಕು, ಸಿಕ್ಕಿತು. ’ಖನ್ನಡಕ್ಕೆ ಜಯವಾಗಲಿ.’ ಅಷ್ಟೇಯ.
ಕನ್ನಡಕ್ಕೆ ಜಯವಾಗಲಿ, ಶಿಕ್ಷಣ ಇಂಗ್ಲಿಷ್‌ಮಯವಾಗಲಿ!
ಹೌದು. ಅದು ಹಂಗೇಯ.
ಉಪಸಂಹಾರ
---------------
’ಸಂಸ್ಕೃತ ಬೇಡ, ಕನ್ನಡ.’
’ಕನ್ನಡ ಬೇಡ, ಇಂಗ್ಲಿಷ್.’
’ಇಂಗ್ಲಿಷ್ ಬೇಡ, ಕನ್ನಡ.’
’ಇದು ಎನ್ನಡ?’
ಹೀಗಾದರೆ,
ಮೂರೂ ಬಿಟ್ಟೆ, ಮಗನೇ, ನೀನು ಭಂಗಿ ನೆಟ್ಟೆ!
ಅರ್ಥಾತ್,
ಎಲ್ಲ ಮೂರಾಬಟ್ಟೆ!
ಶುಕ್ರವಾರ, ಅಕ್ಟೋಬರ್ 9, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಆನಂದವಾಗಿ ಶಾಸ್ತ್ರೀಯ ಭಾಷೆಯನ್ನು ಅದರ (ಅ)ಶಾಸ್ತ್ರೀಯ ಬಳಕೆಯನ್ನೂ ಚೆಂದಾಗಿ ತಿಳಿಸಿದ್ದೀರಿ. ಕನ್ನಡದ ಅವಮಾನವನ್ನು ತಡೆಯಬೇಕೇ? ದಯಮಾಡಿ ಚಿಕ್ಕಮಕ್ಕಳಿಗೆ ಈಗ ತುರುಕುತ್ತಿರುವ ರ ಗ ಸ ದ ಅ ಎಂಬ ಅವೈಜ್ಞಾನಿಕ ವಿಧಾನವನವನು ಬಿಟ್ಟು ಧ್ವನಿಲಿಪಿ, ಧ್ವನಿ ಮಾಧ್ಯಮದ ಮೂಲಕ ಕನ್ನಡ ಕಲಿಸಲು ಹೋರಾಡಬೇಕಾಗಿದೆ. ದಯಮಾಡಿ ಒಂದನೇ ತರಗತಿಯ ಪುಸ್ತಕ ನೋಡಿ. ಲಗಡ, ಇನ, ಒಡತನ ಮೊದಲಾದ ಪದಗಳು ಹೇಗೆ ನುಸುಳಿವೆ ಅಂತ. ಇದಕ್ಕೆ ಸಂಬಂಧಿಸಿದ ಸುದೀರ್ಘ ಲೇಖನವನ್ನು ನಿಮಗೆ ಪ್ರತ್ಯೇಕ ಮಿಂಚಂಚೆಯಲ್ಲಿ ಕಳಿಸಿದ್ದೇನೆ. ಝೈ ಝೈ ಖನ್ನಢಾಂಭಿಕೆ! ಎಂಬ ಹುಧ್ಘಾರಕ್ಕೆ ನ್ಹನ್ನದ್ದೂ ಒಂದು ಝೈ ಇರಲಿ!
ಪ್ರತ್ಯುತ್ತರಅಳಿಸಿಬೇದ್ರೆ ಮಂಜುನಾಥ
ಆನ೦ದ ಸರ್,
ಪ್ರತ್ಯುತ್ತರಅಳಿಸಿವಸಿ ಗುಳಿಗೆ ಜೋರಾಗೈತೆ . ಭೂ ಪಸ೦ದ ಆಗಿ ಹೇಳಿರಿ . ಹಿ೦ಗೆ ಯಾವಾಗಲು ಹೇಳಿ ಮತ್ತೆ .
ಸರ್ ನಿಮ್ಮ ಬರಹದ ಪ್ರಭಾವ ಮೇಲಿನ ವಾಕ್ಯ . ಸರ್ ಎಲ್ಲರೂ ಮುಟ್ಟಿ ನೋಡುವಷ್ಟು ಚೆನ್ನಾಗಿ ಜಾಡಿಸಿದ್ದಿರಿ.
ಹೀಗೆ ಮು೦ದುವರಿಯಲಿ .
ತುಂಬ ಅರ್ಥಪೂರ್ಣ ಲೇಖನ.
ಪ್ರತ್ಯುತ್ತರಅಳಿಸಿಸಂಸ್ಕೃತದ್ವೇಷಿಗಳು ಇರುವವರೆಗೂ ’ಖನ್ನಡ’ವೂ ಉಳಿಯುವದೇ!
ಮಿತ್ರ ಮಂಜುನಾಥ್,
ಪ್ರತ್ಯುತ್ತರಅಳಿಸಿನಿಮ್ಮ ಆ ಸುದೀರ್ಘ ಲೇಖನ ಓದಿದೆ. ಎಳೆ ಮಕ್ಕಳ ಕಲಿಕೆಯ ಬಗೆಯಲ್ಲಿ ಜರೂರಾಗಿ ಮತ್ತು ತುರ್ತಾಗಿ ಆಗಬೇಕಾಗಿರುವ ಮೂಲಸ್ವರೂಪಾಂತರವನ್ನು ಚೆನ್ನಾಗಿ ಮನದಟ್ಟು ಮಾಡಿದ್ದೀರಿ. ನನ್ನ ಮಿತ್ರರು ಹಲವರಿಗೆ ಮತ್ತು ಆಡಳಿತಗಾರರು ಕೆಲವರಿಗೆ ಆ ಲೇಖನವನ್ನು ಕಳಿಸಿದ್ದೇನೆ.
ಅಮ್ಮಾ ರೂಪಾ,
ನನ್ನ ಬರಹದ ಪ್ರಭಾವದಿಂದ ನೀವೂ ಆಡುಮಾತಿನ ಲಾಲಿತ್ಯದತ್ತ ಲೇಖನಿ ಹರಿಸಿದಿರೆಂದಾಗ ನಾನೆಷ್ಟು ಧನ್ಯ!
ಮಿತ್ರ ಸುನಾಥ್,
ಒಂದು ಕಿರುವಾಕ್ಯದಲ್ಲೇ ಮಸ್ತ್ ಗುಳಿಗೆ ಕೊಟ್ಟಿದ್ದೀರಿ!
ಮೂವರು ಸನ್ಮಿತ್ರರಿಗೂ ಧನ್ಯವಾದಗಳು.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಗುಳಿಗೆ ಚೆನ್ನಾಗಿದೆ. ಖನ್ನಡಕ್ಕೆ ಜಯವಾಗಲಿ
ಪ್ರತ್ಯುತ್ತರಅಳಿಸಿಲೋಹಿತ್, ಪರಾಂಜಪೆ ಮಿತ್ರದ್ವಯರಿಗೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿExtremely funny. Enjoyed it immensely. Sorry I'm posting this in English. Kannadadallisaha post madabahudu aadare hogoloke padagalu ashtu saleesaagi sigtha illa. Sikkavellavu thumba formal padagalgiddu balasidalli naatakeeyavendenesuthade ashte
ಪ್ರತ್ಯುತ್ತರಅಳಿಸಿಧನ್ಯವಾದ man...ಕೌಸ್ತುಭ ಅವರೇ.
ಪ್ರತ್ಯುತ್ತರಅಳಿಸಿನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚಿದ್ದೇನೆ.
ಕನ್ನಡದಲ್ಲಿ ’ಪದ ಜಿಜ್ಞಾಸೆ’ ಚೆನ್ನಾಗಿಯೇ ಮಾಡಿದ್ದೀರಿ.