ಗುರುವಾರ, ಅಕ್ಟೋಬರ್ 8, 2009

ನಮ್ಮ ಸುತ್ತಲ ದುಷ್ಟರು

೫ ಸೆಪ್ಟೆಂಬರ್ ೨೦೦೯. ಮುಖ್ಯಮಂತ್ರಿ ಯಡಿಯೂರಪ್ಪನವರು ಚೀನಾದ ಶಾಂಘೈನಲ್ಲಿ ಅಡ್ಡಾಡುತ್ತ ಕರ್ನಾಟಕಕ್ಕೆ ಚೀನೀ ಬಂಡವಾಳ ಆಕರ್ಷಿಸುವ ಪ್ರಯತ್ನ ನಡೆಸಿದ್ದರು. ಅದೇ ವೇಳೆ ಚೀನಾ ದೇಶದ ಸೈನಿಕರು ಭಾರತದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ರಿಮ್‌ಖಿಮ್ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಬಿಸ್ಕತ್ ಕವರ್ ಮತ್ತು ಸಿಗರೇಟ್‌ಗಳನ್ನು ಎಸೆದುಹೋಗಿದ್ದರು!

ಅದೇ ಸಮಯದಲ್ಲೇ ಲಡಾಕ್ ವಲಯದ ಮೌಂಟ್ ಗಯಾ ಸಮೀಪದಲ್ಲಿ ಒಂದೂವರೆ ಕಿಲೋಮೀಟರ್‌ನಷ್ಟು ಭಾರತದ ಗಡಿಯೊಳಗೆ ನುಸುಳಿ ಬಂದಿದ್ದ ಚೀನೀ ಸೈನಿಕರು ಅಲ್ಲಿನ ಕಲ್ಲುಬಂಡೆಗಳು ಮತ್ತು ಮರಗಳ ಮೇಲೆ ಕೆಂಪು ಪೇಂಟ್‌ನಿಂದ ’ಚೀನಾ’ ಎಂದು ಬರೆದುಹೋಗಿದ್ದರು!

ಭಾರತೀಯ ಸೇನಾಧಿಕಾರಿಗಳಿಗೆ ಚೀನಾದ ಈ ಅತಿಕ್ರಮಣದ ವಿಷಯ ತಿಳಿದೇ ಇರಲಿಲ್ಲ! ಸ್ಥಳೀಯರು ತಿಳಿಸಿದ ಬಳಿಕವಷ್ಟೇ ನಮ್ಮ ಸೇನಾಧಿಕಾರಿಗಳಿಗೆ ಈ ವಿಷಯ ಗೊತ್ತಾದದ್ದು!

ಇದಕ್ಕೆ ಒಂದು ವಾರ ಮೊದಲಷ್ಟೇ ಜಮ್ಮು ಮತ್ತು ಕಾಶ್ಮೀರದ ಚುಮರ್ ಪ್ರಾಂತ್ಯದಲ್ಲಿ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಚೀನಾದ ಹೆಲಿಕಾಪ್ಟರ್‌ಗಳು ಭಾರತದ ವಾಯುಪ್ರದೇಶದೊಳಕ್ಕೆ ಬಂದಿದ್ದವು!

ಇಷ್ಟೆಲ್ಲ ಆದಮೇಲೂ, ನಮ್ಮ ’ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್’ನ ಉನ್ನತಾಧಿಕಾರಿ ಸಂಜಯ್ ಸಿಂಘಾಲ್ ಅವರು ಸೆಪ್ಟೆಂಬರ್ ೧೩ರಂದು ಹೇಳಿಕೆಯೊಂದನ್ನು ನೀಡಿ, ಚೀನಾದಿಂದ ಅತಿಕ್ರಮಣ ಆಗಿಯೇ ಇಲ್ಲವೆಂದಿದ್ದಾರೆ! ಆದರೆ, ಅದೇ ದಿನ ನಮ್ಮ ಟಿವಿ ವಾರ್ತೆಗಳಲ್ಲಿ, ಚೀನೀ ಸೈನಿಕರು ಭಾರತದ ಪ್ರದೇಶದಲ್ಲಿ ಕಲ್ಲಿನಮೇಲೆ ’ಚೀನಾ’ ಎಂದು (ತಮ್ಮ ಲಿಪಿಯಲ್ಲಿ) ಬರೆದಿರುವ ಚಿತ್ರ ಪ್ರಸಾರವಾಗಿದೆ!

೧೯೬೨ರ ಯುದ್ಧ
----------------
೧೯೬೨ರಲ್ಲೂ ಹೀಗೇ ಆಯಿತು. ನಮ್ಮ ಸೈನ್ಯದ ಸನ್ನದ್ಧತೆಯನ್ನು ಪರೀಕ್ಷಿಸಲು ಚೀನಾ ನಮ್ಮ ಗಡಿಯೊಳಕ್ಕೆ ಆಗಾಗನುಗ್ಗಿಬರತೊಡಗಿತು. ’ಚೀನಾದ ವಿರುದ್ಧ ಯುದ್ಧದ ಸಾಧ್ಯತೆ ಸದ್ಯಕ್ಕಂತೂ ಇಲ್ಲ’ ಎಂದು ಆಗಸ್ಟ್ ತಿಂಗಳಲ್ಲಿ ನಮ್ಮ ಬ್ರಿಗೇಡಿಯರ್ ಡಿ.ಕೆ.ಪಲಿತ್ ಹೇಳಿದರು. ಆದರೆ ಅದಾಗಲೇ ಚೀನಾವು ಯುದ್ಧಕ್ಕೆ ಬೀಜಾಂಕುರ ಮಾಡಿ ಆಗಿತ್ತು! ಸೆಪ್ಟೆಂಬರ್‌ನಲ್ಲಿ ಯುದ್ಧವು ತೀವ್ರಗತಿಗೇರತೊಡಗಿದ್ದಾಗ ನಮ್ಮ ಮೇಜರ್ ಜನರಲ್ ಜೆ.ಎಸ್.ಧಿಲ್ಲಾನ್ ಅವರು, ’ಭಾರತದ ಸೈನ್ಯವು ಕೆಲವು ಸುತ್ತು ಗುಂಡು ಹಾರಿಸಿದರೆ ಸಾಕು, ಚೀನಾ ಸೈನಿಕರು ಓಡಿಹೋಗುತ್ತಾರೆ’, ಎಂದು ಹೇಳಿಕೆ ನೀಡಿದರು! ಆದರೆ ಆ ಯುದ್ಧವನ್ನು ಭಾರತ ಸೋತಿತು!

೧೯೫೪ರಲ್ಲಿ ಚೀನಾದೊಡನೆ ಮಾಡಿಕೊಂಡಿದ್ದ ’ಪಂಚಶೀಲ’ ಒಪ್ಪಂದವನ್ನು ನಂಬಿಕೊಂಡು, ’ಹಿಂದೀ-ಚೀನೀ ಭಾಯ್ ಭಾಯ್’, ಎನ್ನುತ್ತ ಕುಳಿತಿದ್ದ ನಮ್ಮ ಪ್ರಧಾನಿ ನೆಹರೂ ಅವರು ಅವಶ್ಯಕ ಪರಿಜ್ಞಾನ, ಮುಂದಾಲೋಚನೆ, ಪೂರ್ವಸಿದ್ಧತೆ ಮತ್ತು ದೃಢನಿರ್ಧಾರಗಳ ಕೊರತೆಯಿಂದಾಗಿ ಭಾರತದ ಸೋಲಿಗೆ ಮತ್ತು ಜಮ್ಮು-ಕಾಶ್ಮೀರದ ಭಾಗವಾಗಿದ್ದ ಅಕ್ಸಾಯ್ ಚಿನ್ ಪ್ರಾಂತ್ಯವು ಚೀನಾದ ತೆಕ್ಕೆಗೆ ಸೇರಲಿಕ್ಕೆ ಕಾರಣರಾದರು.

೧೯೬೨ರ ಭಾರತ-ಚೀನಾ ಯುದ್ಧದ ದಿನಗಳಲ್ಲಿ ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದ ನಾನು ಪಡಿತರ ಅಂಗಡಿಯಲ್ಲಿ ಸರತಿಯಲ್ಲಿ ನಿಂತು ಬಿದಿರಕ್ಕಿ ಮತ್ತು ಗೋವಿನ ಜೋಳ ಖರೀದಿಸಿ ತಂದು ಬಿದಿರಕ್ಕಿ ಅನ್ನ ಮತ್ತು ಗೋವಿನ ಜೋಳದ ರೊಟ್ಟಿ ತಿಂದದ್ದು ಹಾಗೂ ಪರಿಹಾರ ನಿಧಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕೊಟ್ಟದ್ದು ನನಗೆ ಚೆನ್ನಾಗಿ ನೆನಪಿದೆ.

ಪುನರಾವರ್ತನೆ
----------------
೧೯೬೨ರಂತೆಯೇ ಮತ್ತೊಂದು ಯುದ್ಧಕ್ಕೆ ಚೀನಾ ತನ್ನನ್ನಿಂದು ಅಣಿಮಾಡಿಕೊಳ್ಳುತ್ತಿದೆ. ಅದಕ್ಕೆ ಮುನ್ನುಡಿಯಾಗಿ ಭಾರತದ ಸನ್ನದ್ಧತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳುತ್ತಿದೆ. ಇಡೀ ಮಣಿಪುರ ಪ್ರಾಂತ್ಯವೇ ತನ್ನದೆಂದು ಹೇಳಿಕೊಳ್ಳುತ್ತಿರುವ ಧೂರ್ತ ಚೀನಾ ಮುಖ್ಯವಾಗಿ ತವಾಂಗ್ ಬೌದ್ಧಕ್ಷೇತ್ರದಮೇಲೆ ತನ್ನ ಕಣ್ಣಿರಿಸಿದೆ.

ನಾವಿಂದು ೧೯೬೨ರ ಸ್ಥಿತಿಗಿಂತ ಹೆಚ್ಚು ಶಕ್ತರಾಗಿರಬಹುದು. ಆದರೆ ಚೀನಾ ನಮಗಿಂತ ಹೆಚ್ಚು ಶಕ್ತವಾಗಿದೆಯೆನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮಗಿಂತ ಹೆಚ್ಚು ಸೈನ್ಯಬಲ ಮತ್ತು ಶಸ್ತ್ರಾಸ್ತ್ರಗಳನ್ನು ಚೀನಾ ಹೊಂದಿದೆ. ಮೇಲಾಗಿ, ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳ ಪರೋಕ್ಷ ಬೆಂಬಲ ಚೀನಾದ ಬೆನ್ನಿಗಿದೆ!

ಇದರ ಜೊತೆಗೆ, ಚೀನಾದೊಡನೆ ಬೃಹತ್ ವ್ಯವಹಾರ ಸಂಬಂಧ ಇಟ್ಟುಕೊಂಡಿರುವ ಅಮೆರಿಕವು ಇಂದು ತನಗೆ ಅಭಿವೃದ್ಧಿ ರಂಗದಲ್ಲಿ ಪ್ರತಿಸ್ಪರ್ಧಿಯಾಗಿರುವ ಭಾರತದ ಕುಸಿತವನ್ನು ಹಾರೈಸುತ್ತಿದೆ! ಆದ್ದರಿಂದ ಚೀನಾದ ಈ ಅತಿಕ್ರಮಣವನ್ನು ಭಾರತವು ಲಘುವಾಗಿ ಪರಿಗಣಿಸಬಾರದು. ಯುದ್ಧಕ್ಕೆ ನಾವು ಪೂರ್ಣ ಸನ್ನದ್ಧರಾಗಿರಬೇಕು. ಅದೇವೇಳೆ, ವಿಶ್ವಮಟ್ಟದಲ್ಲಿ ವಿವಿಧ ದೇಶಗಳ ಒಲವು ಗಳಿಸುವ ಸಲುವಾಗಿ ಅವಶ್ಯಕ ಲಾಬಿ ಕಾರ್ಯವನ್ನೂ ನಾವು ಕೈಕೊಳ್ಳಬೇಕು. ಯುದ್ಧ ಸಂಭವಿಸದಂತೆ ನೋಡಿಕೊಳ್ಳಲು ಕೂಡ ಇಂಥ ಲಾಬಿ ಅವಶ್ಯ.

ಸುತ್ತಲ ದುಷ್ಟರು
----------------
ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳು ತಮ್ಮದೇ ಆದ ಕಾರಣಗಳಿಂದಾಗಿ ಮತ್ತು ಅನುಮಾನ-ಭ್ರಮೆಯಿಂದಾಗಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿವೆ. ಪಾಕಿಸ್ತಾನವಂತೂ ಭಾರತವನ್ನು ಶತ್ರುವಾಗಿ ಪರಿಗಣಿಸಿ ಭಾರತದ ಅಧಃಪತನಕ್ಕಾಗಿ ತನ್ನ ಹುಟ್ಟಿನಿಂದಲೂ ಏನೆಲ್ಲ ಪ್ರಯತ್ನಗಳನ್ನು ನಡೆಸಿಕೊಂಡೇ ಬಂದಿದೆ. ಉಗ್ರರನ್ನು ಮತ್ತು ಖೋಟಾ ನೋಟುಗಳನ್ನು ಭಾರತದೊಳಕ್ಕೆ ಕಳಿಸಲು ಅದು ನೇಪಾಳವನ್ನು ಬಳಸಿಕೊಳ್ಳುತ್ತಿರುವುದು, ನೇಪಾಳದ ಮಾಜಿ ಮಂತ್ರಿಯೊಬ್ಬನ ಪುತ್ರನೇ ಈ ಜಾಲದ ಮುಖ್ಯಸ್ಥನಾಗಿರುವುದು ಮತ್ತು ನೇಪಾಳದ ’ದೊರೆಮಗ’ನ ನೆರವು ಈ ಜಾಲಕ್ಕೆ ಇರುವುದು ಈಗ ಗುಟ್ಟಿನ ಸಂಗತಿಯಾಗಿಯೇನೂ ಉಳಿದಿಲ್ಲ.

ನೇಪಾಳಕ್ಕೆ ಭಾರತವೆಂದರೆ ಭಯ ಮತ್ತು ಈರ್ಷ್ಯೆ. ಅಲ್ಲಿ ಮಾವೋವಾದಿಗಳ ಕೈ ಮೇಲಾದ ಬಳಿಕವಂತೂ ಭಾರತದ ವಿರುದ್ಧ ಒಂದು ರೀತಿಯ ಹಗೆತನ! ಪಶುಪತಿನಾಥ ದೇವಾಲಯದ ಭಾರತೀಯ ಅರ್ಚಕರಮೇಲೆ ನಡೆದ ದಾಳಿ ಈ ಹಗೆತನದ ಒಂದು ಸೂಚನೆ. ಇನ್ನು, ಮಾವೋವಾದಿಗಳೆಂದಮೇಲೆ ಚೀನಾ ಬಗ್ಗೆ ಒಲವಿರುವುದಂತೂ ಸರ್ವವೇದ್ಯ.

ಭಾರತದ ಬಗ್ಗೆ ಭಯ, ಈರ್ಷ್ಯೆ ಮತ್ತು ಹಗೆತನದ ವಿಷಯದಲ್ಲಿ ಬಾಂಗ್ಲಾದೇಶವೇನೂ ಭಿನ್ನವಲ್ಲ. ಭಾರತದೊಳಕ್ಕೆ ಮುಸ್ಲಿಂ ಉಗ್ರರ ನುಸುಳುವಿಕೆಗೆ ಬಾಂಗ್ಲಾದೇಶದ ನೆರವು ಮತ್ತು ಭಾರತಕ್ಕೆ ಬಾಂಗ್ಲಾದೇಶೀಯರ ಅಕ್ರಮ ವಲಸೆ ಇವಂತೂ ಸರ್ವವಿದಿತ.

ಈ ರೀತಿ, ಅಕ್ಕಪಕ್ಕದಲ್ಲಿ ಕಂಟಕಪ್ರಾಯರನ್ನಿಟ್ಟುಕೊಂಡಿರುವ ನಾವು ಚೀನಾದ ಅತಿಕ್ರಮಣದ ಗಾತ್ರವನ್ನು ಮತ್ತು ಪರಿಣಾಮವನ್ನು ಅಂದಾಜುಮಾಡುವಾಗ ಈ ಕಂಟಕಪ್ರಾಯರ ದುಷ್ಟತನವನ್ನೂ ಸೇರಿಸಿ ಅಳೆಯಬೇಕಾಗುತ್ತದೆ. ಜೊತೆಗೆ, ಅಮೆರಿಕದ ಕುಟಿಲತನವನ್ನೂ ಈ ಸಂದರ್ಭದಲ್ಲಿ ಮುಂದಾಲೋಚಿಸಬೇಕಾಗುತ್ತದೆ.

ಏಷ್ಯಾದ ಮತ್ತು ಕ್ರಮೇಣ ಇಡೀ ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾವು ತನಗೆ ಪ್ರತಿಸ್ಪರ್ಧಿಯಾಗಿರುವ ಭಾರತವನ್ನು ಬಗ್ಗುಬಡಿಯಲು ಹಾತೊರೆಯುತ್ತಿದೆ. ಅಮೆರಿಕವು ಭಾರತ-ಚೀನಾ ಯುದ್ಧಕ್ಕೆ ಒಳಗಿಂದೊಳಗೇ ಪ್ರೋತ್ಸಾಹ ಕೊಡುವ ಮೂಲಕ ಎರಡೂ ದೇಶಗಳನ್ನೂ ಅವನತಿಯ ಅಂಚಿಗೆ ತಳ್ಳಲು ಸ್ಕೆಚ್ ಹಾಕತೊಡಗಿದೆ. ಅಭಿವೃದ್ಧಿರಂಗದಲ್ಲಿ ತನಗೆ ತೀವ್ರ ಪೈಪೋಟಿ ನೀಡುತ್ತಿರುವ ಎರಡೂ ದೇಶಗಳನ್ನೂ ಒಂದೇ ಕಲ್ಲಿನಲ್ಲಿ ಹೊಡೆದುಹಾಕಲು ಅಮೆರಿಕಕ್ಕೆ ಇದು ಉತ್ತಮ ಅವಕಾಶ ತಾನೆ? ಈ ಅಪಾಯದ ಗಂಟೆ ಭಾರತದ ಮಿದುಳಿನಲ್ಲಿ ಸದಾ ಬಾರಿಸುತ್ತಿರಬೇಕು. ಭಾರತವು ಸದಾ ಜಾಗೃತವಾಗಿರಬೇಕು.

ದುರ್ಬಳಕೆ
-----------
ಭಯೋತ್ಪಾದನೆಯ ನಿಗ್ರಹಕ್ಕೆಂದು ಅಮೆರಿಕ ನೀಡುತ್ತಿರುವ ಆರ್ಥಿಕ ಮತ್ತು ಮಿಲಿಟರಿ ನೆರವುಗಳನ್ನು ಆರಂಭದಿಂದಲೂ ಪಾಕಿಸ್ತಾನವು ಭಾರತದ ವಿರುದ್ಧ ಬಳಸುತ್ತಿದೆ. (ಈ ವಿಷಯವನ್ನು ಈಚೆಗೆ ಪಾಕ್‌ನ ಮಾಜಿ ಅಧ್ಯಕ್ಷ ಮುಷರಫ್ ಅವರೇ ಒಪ್ಪಿಕೊಂಡಿದ್ದಾರೆ. ನಂತರ ಅವರು ತಮ್ಮ ಹೇಳಿಕೆಯನ್ನು ನಿರಾಕರಿಸುವ ನಾಟಕ ಆಡಿದ್ದು ಬೇರೆ ಮಾತು.) ಈ ದುರ್ಬಳಕೆಯ ಸಂಗತಿ ಗೊತ್ತಿದ್ದೂ ಅಮೆರಿಕವು ಪಾಕಿಸ್ತಾನಕ್ಕೆ ನೆರವು ಮುಂದುವರಿಸಿದೆ.

ಚೀನಾವು ಪಾಕ್‌ಗೆ ಲಾಗಾಯ್ತಿನಿಂದಲೂ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದೆ.

ಪಾಕಿಸ್ತಾನವು ಶ್ರೀಲಂಕಾಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದೆ.

ಈ ಎಲ್ಲ ಆಗುಹೋಗುಗಳನ್ನೂ ಭಾರತವು ಕ್ಷ-ಕಿರಣದ ಕಣ್ಣುಗಳಿಂದ ನೋಡಬೇಕಾದುದು ಭಾರತದ ರಕ್ಷಣೆಯ ದೃಷ್ಟಿಯಿಂದ ಇಂದು ಅನಿವಾರ್ಯ.

ಭಾರತಕ್ಕೆ ಚೀನಾದಿಂದ ಎದುರಾಗಲಿರುವ ಅಪಾಯದ ಬಗ್ಗೆ ಜಾರ್ಜ್ ಫರ್ನಾಂಡಿಸ್ ಅವರು ಭಾರತದ ರಕ್ಷಣಾ ಮಂತ್ರಿಯ ಕುರ್ಚಿಯಿಂದಲೇ ಎಚ್ಚರಿಸಿದ್ದರು. ಇದೀಗ ಆ ಅಪಾಯ ಸಮೀಪಿಸುತ್ತಿರುವಂತಿದೆ. ಭಾರತ ಎಚ್ಚತ್ತುಕೊಳ್ಳಬೇಕು.

ಯುದ್ಧ ಬೇಡ
-------------
ಯುದ್ಧ ಯಾರಿಗೂ ಒಳ್ಳೆಯದಲ್ಲ. ಯುದ್ಧದ ಪರಿಣಾಮ ಎಂದಿದ್ದರೂ ನಷ್ಟ ಮತ್ತು ನಾಶವೇ. ಆದ್ದರಿಂದ, ಸಂಭವನೀಯ ಯುದ್ಧವು ತಪ್ಪಬೇಕೆಂದರೆ ಭಾರತವು ತನ್ನ ಪರವಾಗಿ ವಿಶ್ವದ ಒಲವನ್ನು ಗಳಿಸಬೇಕಾದುದು ಅತ್ಯವಶ್ಯ. ಭಾರತದ ನಿಲುವಿಗೆ ವಿಶ್ವದ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸತೊಡಗಿದವೆಂದರೆ ಆಗ ಚೀನಾವು ಯುದ್ಧದ ಬಗ್ಗೆ ಮರುಚಿಂತನೆ ಮಾಡುತ್ತದೆ. ವಿವಿಧ ದೇಶಗಳ ಸಹಮತಕ್ಕಾಗಿ ಭಾರತವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಯತ್ನವನ್ನು ಮಾಡಬೇಕು ಮತ್ತು ವಿವಿಧ ದೇಶಗಳ ಬೆಂಬಲಕ್ಕಾಗಿ ಸೂಕ್ತ ಲಾಬಿ ನಡೆಸುವ ಯೋಜನೆ ಹಾಕಿಕೊಳ್ಳಬೇಕು.

ಇಷ್ಟಾಗಿಯೂ ಯುದ್ಧ ತಪ್ಪದು ಎಂದರೆ, ಜೈ! ನಾವು ಜಯಿಸಿಯೇ ಸೈ!

6 ಕಾಮೆಂಟ್‌ಗಳು:

  1. ಚೀನ ಕ್ಕೆ ಸಮ್ಮ ಸುತ್ತಲ ಎಲ್ಲಾ ದೇಶಗಳು ಬೆ೦ಬಲ ನೀಡುತ್ತವೆ. ಅದಕ್ಕೆ ಇತ್ತೀಚಿನ ಸೆರ್ಪಡೆ ಶ್ರೀಲ೦ಕ!! ಅಲ್ಲಿ ತಮಿಳು ಉಗ್ರರನ್ನು ಮಟ್ಟ ಹಾಕಲು ತಾ೦ತ್ರಿಕ ನೆರವು ನೀಡಿದ್ದು ಇಗ ರಹಸ್ಯವಾಗೇನು ಉಳಿದಿಲ್ಲ್ಲ.

    ನಾವು ಭಾರತೀಯರು ಯಾವತ್ತು ನಮ್ಮ ನಮ್ಮಲ್ಲೆ ಗಲಾಟೆ ಮಾಡಿಕೋ೦ಡು ಸಮಯಹರಣ ಮಾಡುತ್ತೆವೆ. ಪಕ್ಕದ ಭೂತಾನ್ ಸೈನಿಕರ ಕೈಯಲ್ಲಿ ಇದೆ, ನೇಪಾಳ ತ್ರಿಶ೦ಕು ಆಗಿದೆ, ಇಲ್ಲಿ ದೆಹಲಿ ಜಾತಿ ರಾಜಕಾರಣ ಮಾಡಿಕೊ೦ಡು ನಿದ್ದೆ ಮಾಡುತ್ತಿದೆ.

    ಅಷ್ಟಕ್ಕೂ ನಮಗೆ ಬೇರೆ ದೇಶಗಳ ವಿಶ್ವಾಸಗಳಿಸುವುದು ಸುಲಭದ ಕೆಲಸ ಅಲ್ಲ, ನೆರೆಯ ಪಾಕಿಸ್ತಾನ ದುಷ್ಟರ ಸ೦ತೆ ಎನ್ನುವುದು ಎಲ್ಲರಿಗೂ ಗೊತ್ತು, ಆದರು ಅವರು ಅಮೆರಿಕಾ, ಚೀನ , ಐರೊಪ್ಯ ದೇಶಗಳ ಸಹಾಯ ಗಳಿಸಬಲ್ಲರು. ಇದು ೧೯೪೭ ರಿ೦ದಲೂ ನಡೆಯುತ್ತಾ ಇದೆ. ಅವರ ಪ್ರಜಾಪ್ರಭುತ್ವ ಹುಳ ಹಿಡಿದು ಹೋಗಿದ್ದರೂ, ವಿದೇಶಿ ನೆರವು ಪಡೆಯುವಲ್ಲಿ ಯಾವಗಲು ಮು೦ದು. ನಾವು ಬಹಳ ಹಿ೦ದು.

    ಚೀನಿ ಅಕ್ರಮಣದ ಬಗ್ಗೆ ಅರುಣ್ ಶೌರಿ ಯವರು ವರ್ಷದ ಹಿ೦ದೆಯೆ ತಿಳಿಸಿದ್ದರು, ಆದರೆ ಅದು ಬಿ ಜೆ ಪಿ ಯ ಚುನಾವಣಾ ತ೦ತ್ರ ಅ೦ತ ನಮ್ಮ ದೇಶಿ ಮಾದ್ಯಮ ಸುಮ್ಮನಾಗಿದ್ದವು.

    ಪ್ರತ್ಯುತ್ತರಅಳಿಸಿ
  2. ಬರಹ ಸಕಾಲಿಕ ಮತ್ತು ಮಾಹಿತಿಪೂರ್ಣವಾಗಿದೆ

    ಪ್ರತ್ಯುತ್ತರಅಳಿಸಿ
  3. ಬಾಲಸುಬ್ರಹ್ಮಣ್ಯ ಅವರೇ,
    ಮಾಹಿತಿಪೂರ್ಣವೂ ವಿಚಾರಯುತವೂ ಆಗಿರುವ ಪ್ರತಿಕ್ರಿಯೆಗಾಗಿ ಧನ್ಯವಾದ.
    ರೂಪಾ ಅವರೇ, ಪರಾಂಜಪೆ ಅವರೇ,
    ಮೆಚ್ಚುಗೆಗಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ಲೋದ್ಯಾಶಿ ಅವರೇ,
    ಪೂರಕ ಪ್ರತಿಕ್ರಿಯೆಗಾಗಿ ಧನ್ಯವಾದ.
    ಅಧಿಕಾರ ಇರುವವರಿಗೆ ಇದೆಲ್ಲ ಗೊತ್ತು, ಆದರೆ ಅವರ ಆಸಕ್ತಿಗಳೇ ಬೇರೆ. ಆ ಆಸಕ್ತಿಗಳ ಮಧ್ಯೆ ಅವರಿಗೆ ದೇಶದ ಬಗ್ಗೆ ಚಿಂತಿಸಲು ಪುರುಸೊತ್ತಿದೆಯೇ?! ಅವರಿಗೆ ಸುದೃಢ ದೇಶ ಬೇಕಾಗಿದೆಯೇ?! ಊಹ್ಞೂಂ.

    ಪ್ರತ್ಯುತ್ತರಅಳಿಸಿ