ಬುಧವಾರ, ಅಕ್ಟೋಬರ್ 21, 2009

ಬಜೆ ಗೋವಿಂದ (ಲಘುಬರಹ)

ಗೋವಿಂದನ ಉಚ್ಚಾರ ಬಲು ಸ್ಪಷ್ಟ.

ನುಡಿದರೆ ಸ್ಫಟಿಕದ ಶಲಾಕೆ.

ಹುಟ್ಟಿದ ಮಗುವಿಗೆ ತಾಯಿಯು ಸತತ ಹತ್ತು ದಿನ ಬಜೆ-ಬೆಣ್ಣೆ ತಿನ್ನಿಸಿದ್ದಳು. ಬಜೆಯನ್ನು ಬೆಣ್ಣೆಯಲ್ಲಿ ಎರಡು ಸುತ್ತು ತೇಯ್ದು ಮಗುವಿನ ಬಾಯಿಗಿಟ್ಟಳೆಂದರೆ ಮಗು ಬಾಯಿಚಪ್ಪರಿಸಿ ಮೆಲ್ಲುತ್ತಿತ್ತು. ಆಗ ಆ ತಾಯಿಗೆ ಆ ಆನಂದತುಂದಿಲ ಮಗುವಿನ ಮೆಲ್ಲುಸಿರೇ ಸವಿಗಾನ. ಅಂದು ತಿಂದ ಬಜೆ-ಬೆಣ್ಣೆಯ ಫಲವೇ ಗೋವಿಂದನ ಇಂದಿನ ನಾಲಗೆಯ ನಯ.

ಮಗುವಿಗೆ ಬೆಣ್ಣೆಯ ಸಹವಾಸ ಹತ್ತೇ ದಿನಕ್ಕೇ ಮುಗಿದರೂ ಬಜೆಯ ಸಾಂಗತ್ಯ ಮಾತ್ರ ಮುಂದುವರಿದಿತ್ತು. ಅಮ್ಮನ ಎದೆಹಾಲಿನಲ್ಲಿ ತೇಯ್ದ ಬಜೆಯ ಸೇವನೆ ಆಗತೊಡಗಿತು. ಮುಂದಿನ ದಿನಗಳಲ್ಲಿ ಇದೇ ಬಜೆಯ ಹಿರಿತನದಲ್ಲಿ ಸುತ್ತುಖಾರದ ಸೇವೆ ನಡೆಯಿತು. ಎರಡು ಸುತ್ತು ತೇಯ್ದ ಬಜೆಯ ಜೊತೆಗೆ ನಂಜು ನಿವಾರಣೆಗಾಗಿ ಅರಿಶಿನ ಕೊಂಬು, ಶೀತ-ಗಂಟಲುಕೆರೆತ ನಿವಾರಣೆಗಾಗಿ ಕಾಳುಮೆಣಸು, ಇನ್ನೂ ಹೆಚ್ಚಿನ ಶೀತ ನಿವಾರಣೆಗಾಗಿ ಹಿಪ್ಪಲಿ ಬೇರು, ರಕ್ತವೃದ್ಧಿಗಾಗಿ ಸುಗಂಧಿ-ಅಶ್ವಗಂಧಿ, ವಾಯುನಿವಾರಕವಾಗಿ ಶುಂಠಿ, ಹೊಟ್ಟೆನೋವು-ಹೊಟ್ಟೆಹುಳು ನಿವಾರಣೆಗಾಗಿ ಕಟುಕ್ರಾಣಿ, ತಂಪು ನೀಡಲು ಹಾಗೂ ಕಫ ನೀರೊಡೆಯಲು ಜ್ಯೇಷ್ಠಮಧು ಮತ್ತು ತಂಪಾಗಿ ನಿದ್ದೆಹತ್ತಲು ಜಾಕಾಯಿ ಇವುಗಳನ್ನೂ ಎರಡೆರಡು ಸುತ್ತು ತೇಯ್ದು ಪ್ರತಿ ಗುರುವಾರ ಮತ್ತು ಸೋಮವಾರ ಮಗುವಿಗೆ ನೆಕ್ಕಿಸಲಾಗುತ್ತಿತ್ತು. ಮಗು ಕಂಪಾಗಿ ನೆಕ್ಕಿ, ಇಂಪಾಗಿ ಒಂದು ಅಳು ಅತ್ತು, ಸೊಂಪಾಗಿ ನಿದ್ದೆಮಾಡುತ್ತಿತ್ತು. ಹೀಗೆ ಅದಕ್ಕೆ ಸುತ್ತುಖಾರದ ಸೇವೆಯು, ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಐದಲ್ಲ, ಆರಲ್ಲ, ಕ್ಷಮಿಸಿ, ಆರು ತಿಂಗಳು ನಡೆಯಿತು.

ಎಂದೇ ಈಗ ಎಮ್ಮ ಗೋವಿಂದಗೆ ಇಪ್ಪತ್ತಾರರ ಹರಯದಲ್ಲೂ ನಂಜಿಲ್ಲ, ಶೀತವಿಲ್ಲ, ವಾಯು ಉಪದ್ರವವಿಲ್ಲ, ಉಷ್ಣವಿಲ್ಲ, ಕಫವಿಲ್ಲ, ಹೊಟ್ಟೆಯಲ್ಲಿ ನೋವಿಲ್ಲ, ಹುಳುವಿಲ್ಲ, ಅಪ್ಪ ಕಟ್ಟಿಸಿರುವ ’ಸ್ಲೋಗನ್ ವಿಲ್ಲಾ’ ಹೆಸರಿನ ಬಂಗಲೆಯೊಳಗೆ ಬಂಬಾಟಾಗಿ ಜೀವಿಸಿಹನು. ಬಂಗಲೆಯ ಕಿಟಕಿಯಿಂದ ತೋಟದ ಬೋಗನ್‌ವಿಲ್ಲಾ ವೃಕ್ಷಗಳನ್ನು ಈಕ್ಷಿಸುತ್ತಾ ತಿಂದುಂಡು ತೂಕಡಿಸಿ ಹಾಗೇ ಸವಿನಿದ್ದೆಗೆ ಶರಣಾಗಿಬಿಡುವನು. ಡಿಗ್ರಿಯಿಲ್ಲಾ, ನೌಕ್ರಿಯಿಲ್ಲಾ, ಚಿಂತೆಯಿಲ್ಲಾ, ಬಜೆ-ಬೆಣ್ಣೆ-ಸುತ್ತುಖಾರಗಳ ದಯೆಯಿಂದ ಇಂದಿಗೂ ಸದಾಕಾಲ ಸೊಗಸಾದ ನಿದ್ದೆ!

ಒಂದೇ ಮಗುವಿಗೇ ಬಂದ್ ಮಾಡಿಸಿಕೊಂಡಿದ್ದ ’ಪಿತಾಶ್ರೀ ಆಫ್ ಗೋವಿಂದ’ ಅವರು ’ಒಂದು ಸಾಕು, ಒಂದೇಒಂದು ಸಾಕು’ ಎಂಬ ಸ್ಲೋಗನ್ ರಚಿಸಿ ಭಾರತ ಸರ್ಕಾರದ ಕುಟುಂಬಕಲ್ಯಾಣ ಇಲಾಖೆಯಿಂದ ಹದಿನೈದು ಲಕ್ಷ ರೂಪಾಯಿಗಳ(!) ರಾಷ್ಟ್ರೀಯ ಪುರಸ್ಕಾರ ಪಡೆದು ಆ ಹಣದಿಂದ (ಮೊದಲೇ ಇದ್ದ ಸೈಟಿನಲ್ಲಿ) ಬಂಗಲೆ ಕಟ್ಟಿಸಿ ಸದರಿ ಬಂಗಲೆಗೆ ’ಸ್ಲೋಗನ್ ವಿಲ್ಲಾ’ ಎಂಬ ಅನ್ವರ್ಥನಾಮವನ್ನಿಟ್ಟಿದ್ದರು. ಈ ಸ್ಲೋಗನ್ ವಿಲ್ಲಾದ ’ಸ್ಲೀಪಿಂಗ್ ಬ್ಯೂಟಿ’ಯಾಗಿ, ಊಹ್ಞೂ, ’ಹ್ಯಾಂಡ್‌ಸಮ್ ಚೂಟಿ’ ಆಗಿ ನಮ್ಮ್ ಗೋವಿಂದ ತನ್ನಪ್ಪನ ಆಸ್ತಿ ಕರಗಿಸುತ್ತಲಿದ್ದ ಸ್ಲೋ ಆಗಿ.

’ಮನೇಲಿ ಸುಮ್ನೆ ಕೂರಬೇಡ, ಅಲ್ಲಲ್ಲ, ಮಲಗಬೇಡ, ಏನಾದರೂ ಮಾಡು’, ಎಂದು ಅವನಪ್ಪ ನೂರಾಹನ್ನೊಂದನೇ ಸಲ ಹೇಳಿದಾಗ ಗೋವಿಂದ ಎಚ್ಚತ್ತ. ’ಶಬ್ದಸಂಶೋಧನೆ’ ಮಾಡಲು ಹೊರಟ!

ಶಬ್ದವೆಂದರೆ ಕೋಗಿಲೆ, ಕಾಗೆ, ಬಸ್ಸು, ಲಾರಿಗಳ ಶಬ್ದವಲ್ಲ, ಕನ್ನಡದ ಶಬ್ದ. ಪದ.

ಗೋವಿಂದ ಮಾಡಹೊರಟದ್ದು ಪದಜಿಜ್ಞಾಸೆ.

ಯಾವ ಪದ?

ಇನ್ಯಾವ ಪದ, ’ಬಜೆ’. ಬಾಲ್ಯಸಂಗಾತಿ ತಾನೆ ಎಷ್ಟೆಂದರೂ.

ಆರು ತಿಂಗಳ ಕಾಲ ನಾಲಗೆಯಮೇಲೆ ನಲಿದಾಡಿದ ವಸ್ತುವಲ್ಲವೆ!

ಮನೆಯಿಂದೆದ್ದು ಹೊರಟವನೇ ಗೋವಿಂದ ’ಬಜೆ’ ಶಬ್ದದ ಸಂಶೋಧನೆಯ ಮೊದಲ ಮೆಟ್ಟಿಲಾಗಿ ’ಮಿತ್ರಸಮಾಜ ಹೋಟೆಲ್’ನ ಮೆಟ್ಟಿಲೇರಿ ಒಳಹೊಕ್ಕು ಮೂರು ಪ್ಲೇಟ್ ಬಿಸಿಬಿಸಿ ಗೋಳಿಬಜೆ ಗೋವಿಂದಮಾಡಿ ಹೊರನಡೆದ.

ಹೊರನಡೆದವನ ಮಂಡೆಯಲ್ಲಿ ಸಂದೇಹವೊಂದು ಉದ್ಭವಿಸಿತು,
’ಈರುಳ್ಳಿ, ಹಸಿಮೆಣಸು ವಗೈರೆಗಳನ್ನು ಕಡಲೆಹಿಟ್ಟಿನಲ್ಲಿ ಕಲಸಿ ಕರಿದರೆ ಅದನ್ನು ’ಬಜ್ಜಿ’ ಎನ್ನುವರು. ಆದರೆ, ಮೈದಾಹಿಟ್ಟನ್ನು ಮೊಸರಿನಲ್ಲಿ ಕಲಸಿ ಕರಿದರೆ ಅದನ್ನು ’ಬಜೆ’ ಎಂದು ಕರೆಯುವರು. ಹೀಗೇಕೆ?’

ಈ ಸಂದೇಹ ಬಂದದ್ದೇ ತಡ, ತನ್ನ ’ಬಜೆ ಸಂಶೋಧನೆ’ಗೊಂದು ದಿಕ್ಕು ಸಿಕ್ಕಿತೆಂದು ಆನಂದತುಂದಿಲನಾದ ಗೋವಿಂದ ಪುನಃ ’ಮಿತ್ರಸಮಾಜ’ದೊಳಹೊಕ್ಕು ಕ್ಯಾಷಿಯರ್ ಬಳಿ ತನ್ನ ಸಂದೇಹ ಮಂಡಿಸಿದ.

’ರಷ್ ಉಂಡು. ಪೋಲೆ (ರಷ್ ಇದೆ. ಹೋಗಿ)’, ಅಂತ ತುಳುವಿನಲ್ಲಿ ಉತ್ತರ ಬಂತು. ಅಲ್ಲಿಂದ ಕಾಲ್ಕಿತ್ತ.

ಉಡುಪಿಯ ರಥಬೀದಿಯಲ್ಲೇ ಇದ್ದೂ ತಾನು ತನ್ನೀ ಸಂಶೋಧನೆಗೆ ಶ್ರೀಕೃಷ್ಣನ ಆಶೀರ್ವಾದ ಪಡೆಯದೇ ಮುಂದುವರಿಯುತ್ತಿದ್ದೆನಲ್ಲಾ, ತಾನೆಂಥ ಮೂರ್ಖ, ಎಂದುಕೊಳ್ಳುತ್ತ ಗೋವಿಂದ ಕೃಷ್ಣಮಠಕ್ಕೆ ಧಾವಿಸಿದ. ಅಷ್ಟರಲ್ಲಾಗಲೇ ಅವನ ತಲೆಯಲ್ಲಿ ಇನ್ನೊಂದು ಸಂದೇಹ ಭುಗಿಲೆದ್ದಿತ್ತು.

ಮಗುವಾಗಿದ್ದಾಗ ತನಗೆ ತನ್ನಮ್ಮ ತೇಯ್ದು ತಿನ್ನಿಸುತ್ತಿದ್ದ ಬೇರಿನ ಹೆಸರೂ ಬಜೆ, ಈಗ ತಾನು ತಿಂದ ಕರಿದ ತಿಂಡಿಯ ಹೆಸರೂ ಬಜೆ! ಇದು ಹೇಗೆ ಸಾಧ್ಯ?!

ಕೃಷ್ಣನಿಗೆ ನಮಸ್ಕರಿಸುತ್ತಿದ್ದಂತೆ ಗೋವಿಂದನ ತಲೆಯಲ್ಲಿ ಮೂರನೆಯ ಸಂದೇಹವೊಂದು ಹೆಡೆಯೆತ್ತಿತು. ಅದುವೇ ’ಕೃಷ್ಣ ಭಾಂಜಿ’!

ರಿಚರ್ಡ್ ಆಟಿನ್‌ಬರೋ ನಿರ್ದೇಶನದ ’ಗಾಂಧಿ’ ಚಲನಚಿತ್ರದಲ್ಲಿ ಗಾಂಧಿಯಾಗಿ ಅಭಿನಯಿಸಿದ ಬೆನ್ ಕಿಂಗ್‌ಸ್ಲೆಯ ಮೂಲ ಹೆಸರು ಕೃಷ್ಣ ಭಾಂಜಿ ಎಂದೂ ಮತ್ತು ಆತ ಮೂಲತಃ ಉತ್ತರಭಾರತದವನೆಂದೂ ಯಾವುದೋ ಸಿನಿಮಾಪತ್ರಿಕೆಯಲ್ಲಿ ಓದಿದ್ದು ಗೋವಿಂದನಿಗೆ ಫಕ್ಕನೆ ನೆನಪಿಗೆ ಬಂತು.

’ಬಜೆ, ಬಜ್ಜಿ, ಭಾಂಜಿ. ಪರಸ್ಪರ ಸಂಬಂಧವೇನಾದರೂ ಇದ್ದೀತೇ?’

ಹೀಗೊಂದು ಸಂದೇಹ ಬಂದದ್ದೇ ತಡ, ಭಾಂಜಿ ಶಬ್ದದ ಮೂಲ ಅರಿಯಲು ಗೋವಿಂದ ಉತ್ತರಭಾರತೀಯರೊಬ್ಬರ ಬಳಿ ಹೋಗಲು ನಿರ್ಧರಿಸಿದ.

ಉತ್ತರಭಾರತೀಯರು ಎಲ್ಲಿ ಸಿಗುತ್ತಾರೆ?

ಇನ್ನೆಲ್ಲಿ, ಮಣಿಪಾಲದಲ್ಲಿ.

’ಮಣ್ಪಾಲ್ ಮಣ್ಪಾಲ್, ಬಲ್ಲೆ ಬಲ್ಲೆ’ (ಮಣ್ಣುಪಾಲೂ ಅಲ್ಲ, ಪಂಜಾಬಿಯ ಬಲ್ಲೆಬಲ್ಲೆಯೂ ಅಲ್ಲ, ’ಮಣಿಪಾಲ ಮಣಿಪಾಲ, ಬನ್ನಿ ಬನ್ನಿ’ ಎಂದರ್ಥ) ಹೀಗೆ ಅರಚುತ್ತಿದ್ದ ಬಸ್ಸುಗಳಲ್ಲಿ ಒಂದನ್ನು ಏರಿ ಗೋವಿಂದ ಮಣಿಪಾಲದ ಏರಿ ಏರಿ ಮೆಡಿಕಲ್ ಕಾಲೇಜಿನ ಬಳಿ ಇಳಿದ. ಉತ್ತರಭಾರತದ ವಿದ್ಯಾರ್ಥಿಗಳು ಇಲ್ಲಿ ಲಭ್ಯ.

’ಮೂವೀ ಕಿತ್ನಾ ಬಜೇ ಯಾರ್?’ ಎಂಬ ಉದ್ಗಾರ ಕಿವಿಗೆ ಬಿದ್ದದ್ದೇ ಗೋವಿಂದ ರೋಮಾಂಚಿತನಾದ! ಇನ್ನೊಂದು ಬಜೆ!

ಆ ಉದ್ಗಾರ ಬಂದತ್ತ ಕಣ್ಣು ಹಾಯಿಸಿದ. ಮೆಡಿಕೋ ಓರ್ವನು ತನ್ನ ಸಹಪಾಠಿಗೆ ಕೇಳಿದ ಪ್ರಶ್ನೆ ಅದಾಗಿತ್ತು. ಆ ಮೆಡಿಕೋ ಬಳಿ ಹೋಗಿ ಗೋವಿಂದ ಪ್ರಶ್ನಿಸಿದ,
’ಕನ್ನಡದ ಬಜೆ ನಿಮಗೆ ಗೊತ್ತೆ?’

’ವಾಟ್?’ ಎಂದಿತು ಮೆಡಿಕೋ.

’ಕನಡಾ ಬಜೆ. ನೋಯಿಂಗ್?’

’ಕ್ಯಾ?’

’ಬಜೆ, ಬಜೆ.’

’ಬಜೇ? ಸಾಡೇ ಸಾತ್’, ವಾಚ್ ನೋಡಿಕೊಂಡು ಮೆಡಿಕೋ ಅರುಹಿತು.

’ನೈ. ಕನಡಾ ಬಜೆ ಹಿಂದಿ ಬಜೆ ಸಂಬಂದ್ ಹೈ?’ ಗೋವಿಂದ ಮತ್ತೆ ಪ್ರಶ್ನಿಸಿದ.

’ಕ್ಯಾ?’

’ಹೋಗ್ಲಿ, ಭಾಂಜಿ ಮಾಲುಂ?’

’ಹಾಂಜೀ. ವೋ ತೋ ಬಹೆನ್ ಕೀ ಬೇಟೀ ಹೋತೀ.’

’ಅದೂ ಬೇರೆ ಇದೆಯಾ? ಮತ್ತೆ ಕೃಷ್ಣ ಭಾಂಜಿ?’

’ಯೇ ಕ್ಯಾ ಬೋಲ್‌ರಹಾ ಹೈ ಯಾರ್?!’ ಎನ್ನುತ್ತ ಆ ಮೆಡಿಕೋ ತನ್ನ ಸಹಪಾಠಿಯ ಮುಖ ನೋಡಿದ.

ಆ ಸಹಪಾಠಿಯು ಗೋವಿಂದನಿಗೆ, ’ಚಲ್ ಚಲ್. ಆಗೇ ಚಲ್’, ಎಂದು ದಬಾಯಿಸಿಬಿಡೋದೇ?!

ಬೆಳಗ್ಗೆ ಏಳುತ್ತಲೇ ಅಪ್ಪನಿಂದ ಬೈಸಿಕೊಂಡು ಅದೇ ಅವಸ್ಥೆಯಲ್ಲೇ ಹೊರಗೆ ಬಂದಿದ್ದ ಗೋವಿಂದ ಆ ನಾರ್ತಿಯ ಕಣ್ಣಿಗೆ ಯಾರಂತೆ ಕಂಡನೋ!

ಗೋವಿಂದನೀಗ ಹತಾಶನಾದ. ಬಂದ ದಾರಿಗೆ ಸುಂಕವಿಲ್ಲದಿಲ್ಲ ಎಂದುಕೊಳ್ಳುತ್ತ ಬಸ್ಸನ್ನೇರಿ ಸುಂಕ ತೆತ್ತು ಮತ್ತೆ ಉಡುಪಿಗೆ ವಾಪಸಾದ.

ಮನೆಗೆ ಹೋಗಿ ತಿಂಡಿ ತಿಂದು ಹಲ್ಲುಜ್ಜಿ ಕಾಫಿ ಕುಡಿದು ಸ್ನಾನ ಮಾಡಿ ಜೊಂಪು ತೆಗೆದೆದ್ದು ಊಟ ಮಾಡಿ ಮಲಗಿ ಎದ್ದು ಸಂಜೆಗೆ ಸರಿಯಾಗಿ ಸ್ನೇಹಿತ ಪರಾಂಜಪೆಯ ಮನೆಗೆ ಬಿಜಯಂಗೈದ. ಪರಾಂಜಪೆ ಸಾಯಂಕಾಲದ ಜಪ ಮಾಡುತ್ತಿದ್ದ. ಅವನ ಜಪ ಮುಗಿಯುವವರೆಗೆ ಟೈಂಪಾಸ್ ಮಾಡಲೆಂದು ಗೋವಿಂದ ಅಲ್ಲಿ ಮೇಜಿನಮೇಲಿದ್ದ ಪುಸ್ತಕವೊಂದನ್ನು ಕೈಗೆತ್ತಿಕೊಂಡ. ಅದು ಕನ್ನಡ-ಕನ್ನಡ ನಿಘಂಟು!

ಗೋವಿಂದನ ಮಿದುಳು ಜಾಗೃತವಾಯಿತು. ಪುಟ ತಿರುವಿ ತಿರುವಿ, ಕಷ್ಟಪಟ್ಟು, ಕೊನೆಗೂ ’ಬಜೆ’ ಶಬ್ದವನ್ನು ಪತ್ತೆಹಚ್ಚಿದ. ಅರ್ಥದತ್ತ ಕಣ್ಣುಹಾಯಿಸಿದ.

’ಒಂದು ಜಾತಿಯ ಬೇರು; ಉಗ್ರ ಗಂಧ’ ಎಂಬ ಅರ್ಥವಿವರಣೆ ಅಲ್ಲಿತ್ತು.

ಗೋವಿಂದನ ಮಿದುಳಿನಲ್ಲಿ ಯೋಚನೆಗಳೀಗ ವಿದ್ಯುತ್‌ನಂತೆ ಪ್ರವಹಿಸತೊಡಗಿದವು.

’ಉಗ್ರ ಗಂಧ! ಇದೇನಿದು? ಬಜೆಯ ಬೇರು ಈ ಉಗ್ರ ಗಂಧದಲ್ಲಿರಬಹುದೇ? ಅಥವಾ ಉಗ್ರ ಗಂಧವೇ ಬಜೆಯ ಬೇರೇ? ಗಂಧ, ಸುಗಂಧ, ಉಡುಪಿ ಮಠದ ಗಂಧ, ಉಗ್ರ ಗಂಧ, ಬಜೆ, ಗೋಳಿ ಬಜೆ, ಗೋವಿಂದ, ಬಜೆ ಗೋವಿಂದ, ಭಜಗೋವಿಂದ....ಭಜನೆ....’

ಗೋವಿಂದ ಭಜನೆ ಮಾಡತೊಡಗಿದ.

***

ಗೋವಿಂದ ಭಜನೆ ಮಾಡುತ್ತಲೇ ಇದ್ದಾನೆ.

ಉಚ್ಚಾರ ಬಲು ಸ್ಪಷ್ಟ. ಸ್ಫಟಿಕದ ಶಲಾಕೆ.

ತಿಂದುಂಡು ತಿರುಗಾಡಿಕೊಂಡು ಬಜೆಯ ಭಜನೆ ಮಾಡುತ್ತ ಸಂಶೋಧನೆ ಮುಂದುವರಿಸಿದ್ದಾನೆ.

ಗೋವಿಂದನ ಪಿತಾಶ್ರೀಯವರು ಇನ್ನೊಂದು ಸ್ಲೋಗನ್ನನ್ನು ರೆಡಿಮಾಡಿಟ್ಟುಕೊಂಡು ಕುಟುಂಬಕಲ್ಯಾಣ ಇಲಾಖೆಯು ಇನ್ನೊಮ್ಮೆ ಸ್ಪರ್ಧೆ ಏರ್ಪಡಿಸುವುದನ್ನು ಎದುರುನೋಡುತ್ತಿದ್ದಾರೆ. ಅವರು ಈಗ ರೆಡಿಮಾಡಿಟ್ಟುಕೊಂಡಿರುವ ಸ್ಲೋಗನ್ನು:

’ಒಂದೂ ಬೇಡ, ಎಷ್ಟೂ ಬೇಡ, ಮಕ್ಕಳಿಲ್ಲದಿದ್ದರೇ ನೆಮ್ಮದಿ ನೋಡಾ.’

2 ಕಾಮೆಂಟ್‌ಗಳು:

  1. ಆನ೦ದ ಸರ್,
    ಸೊಗಸಾದ ಬರಹ . ತು೦ಬಾ ಖುಷಿ ಅನ್ನಿಸಿತು ಸರ್ ಓದಿ . ಸರ್ ಗೊವಿ೦ದನ ಅವಸ್ಥೆ ನೋಡಿ ಅವನ ತ೦ದೆ ಹತ್ತಿರದ ಮಣ್ಣ ಪಳ್ಳದಲ್ಲಿ ಬೀಳಲಿಲ್ಲ ಅಲ್ಲವೇ ?
    :-)

    ಪ್ರತ್ಯುತ್ತರಅಳಿಸಿ
  2. namaste sr,bajagoli & golibaje bagge kelavondu linkgalu http://thatskannada.oneindia.in/column/vichitranna/2005/240505bajagoli.html http://thatskannada.oneindia.in/column/vichitranna/2005/080605golibaje_resp.html namana bajagoli

    ಪ್ರತ್ಯುತ್ತರಅಳಿಸಿ