ಬರಹಗಾರರು ತಮ್ಮ ಬರಹಗಳಲ್ಲಿ ಮಾತ್ರ ಮಾನವೀಯತೆ, ಪ್ರೀತಿ, ಅಂತಃಕರಣ, ಕನಿಕರಗಳನ್ನು ತೋರಿ ಶಹಭಾಸ್‌ಗಿರಿ ಪಡೆಯುತ್ತಾರೆಯೇ ಹೊರತು ನಿಜಜೀವನದಲ್ಲಿ ಇದ್ಯಾವುದಕ್ಕೂ ಸ್ಪಂದಿಸದೆ ತೆಪ್ಪಗೆ ಕುಳಿತುಬಿಡುತ್ತಾರೆ ಎಂಬ ಗಂಭೀರವಾದ ಆರೋಪವನ್ನು ಜಾಲತಾಣವೊಂದರಲ್ಲಿ ಸಹೃದಯರೋರ್ವರು ಮಾಡಿದ್ದಾರೆ.
ಉತ್ತರ ಕರ್ನಾಟಕದ ಪ್ರವಾಹಸಂತ್ರಸ್ತರಿಗೆ ಅಗತ್ಯವಾಗಿರುವ ನೆರವಿನ ವಿಷಯದಲ್ಲಿ ಈ ರೀತಿ ಆರೋಪ ಮಾಡಿರುವ ಆ ಸಹೃದಯರ ಸಾಮಾಜಿಕ ಕಳಕಳಿ ಮೆಚ್ಚುವಂಥದು. ಆದರೆ ಆರೋಪ ಮಾತ್ರ ಒಪ್ಪುವಂಥದಲ್ಲ. ಬರಹಗಾರರು ತಮ್ಮ ವೈಯಕ್ತಿಕ ನೆಲೆಗಳಲ್ಲಿ ಅಥವಾ ಉದ್ಯೋಗದಾತರ ಮೂಲಕ ನೆರೆಹಾವಳಿ ಸಂತ್ರಸ್ತರಿಗೆ ನೆರವು ನೀಡಿಲ್ಲವೆಂದು ಹೇಗೆ ಹೇಳಲು ಸಾಧ್ಯ?
ನಿರ್ದಿಷ್ಟ ಜಾಲತಾಣದ ಮಖಾಂತರ ಬರಹಗಾರರಿಂದ ದೇಣಿಗೆ ಸಂಗ್ರಹಿಸುವಂತೆ ಆ ಸಹೃದಯರು ಸಲಹೆ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಆ ಜಾಲತಾಣದ ಸದಸ್ಯ ಬರಹಗಾರರಿಗೆ ಅವರು ಇರುಸುಮುರುಸುಂಟುಮಾಡಿದ್ದಾರೆಂದೇ ಹೇಳಬೇಕಾಗುತ್ತದೆ. ಏಕೆಂದರೆ, ಒಂದು ಉದ್ದೇಶಕ್ಕೆ ಒಂದಕ್ಕಿಂತ ಹೆಚ್ಚು ಕಡೆ ದೇಣಿಗೆ ನೀಡುವಷ್ಟು ಬಹುತೇಕ ಬರಹಗಾರರು ಶ್ರೀಮಂತರಾಗಿರುವುದಿಲ್ಲ. ಈಗಾಗಲೇ ಒಂದು ಕಡೆ ದೇಣಿಗೆ ನೀಡಿರುವ ಬರಹಗಾರರು ಸದರಿ ಸಹೃದಯರ ಆರೋಪದಿಂದ ಮುಕ್ತರಾಗಲು ತಮ್ಮ ದೇಣಿಗೆಯ ವಿವರವನ್ನು ಪ್ರಕಟಿಸಬೇಕೇ?!
ಇಷ್ಟಕ್ಕೂ, ’ಬರಹಗಾರರು ಬರಹಗಳಲ್ಲಷ್ಟೇ ಮಾನವೀಯತೆ ಇತ್ಯಾದಿ ತೋರುತ್ತಾರೆ, ಅಷ್ಟು ಮಾಡಿದರೆ ಸಾಲದು, ಅವರು ಫೀಲ್ಡಿಗೂ ಇಳಿಯಬೇಕು’, ಎಂದು ದೂರುವುದೇ ಯೋಗ್ಯವಲ್ಲ. ಬರಹಗಾರರು ಬರಹಗಳ ಮುಖಾಂತರ ಸಮಾಜಜಾಗೃತಿಯ ಕರ್ತವ್ಯವನ್ನು ಮಾಡಿದರೆ ಸಾಕು ಎಂಬುದು ನನ್ನ ಅಭಿಪ್ರಾಯ. ಅದೇನೂ ಸಣ್ಣ ಕರ್ತವ್ಯವಲ್ಲ. ಏಕೆಂದರೆ, ಬರಹಗಳು ಓದುಗರಲ್ಲಿ ಜಾಗೃತಿ ಹುಟ್ಟಿಸುತ್ತವೆ ಮತ್ತು ಕರ್ತವ್ಯೋನ್ಮುಖರಾಗಲು ಪ್ರೇರೇಪಿಸುತ್ತವೆ. ನನ್ನ ಬರಹದ ಎರಡು ಉದಾಹರಣೆಗಳನ್ನೇ ಕೊಡುತ್ತೇನೆ.
೧) ’ಈ ಸಲದ ದೀಪಾವಳಿಯಲ್ಲಿ ಪಟಾಕಿ ಸುಡದಿರಲು ನಿರ್ಧರಿಸಿ ಆ ಹಣವನ್ನು ನೆರೆಸಂತ್ರಸ್ತರ ಪರಿಹಾರನಿಧಿಗೆ ನೀಡೋಣ’, ಎಂದು ನಾನು ಇದೇ ದಿನಾಂಕ ಮೂರರಂದು, ಚರ್ಚಿತ ಜಾಲತಾಣ ಮತ್ತು ಈ ಬ್ಲಾಗೂ ಸೇರಿದಂತೆ ಹಲವು ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬರೆದದ್ದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನನ್ನ ವಿನಂತಿಗೆ ಓಗೊಡುವುದಾಗಿ ನನಗೆ ಅನೇಕರು ದೂರವಾಣಿ ಕರೆಮಾಡಿ ಹೇಳಿದ್ದಾರೆ.
೨) ’ಮರಣದಂಡನೆ ಅನಿವಾರ್ಯವೆ?’ ಎಂದು ಕೆಲ ಸಮಯದ ಹಿಂದೆ ’ಪ್ರಜಾವಾಣಿ’ ದಿನಪತ್ರಿಕೆಯು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ನಾನು ಬರೆದ ನಾಲ್ಕು ಸಾಲುಗಳ ಚುಟುಕವು ’ಪ್ರಜಾವಾಣಿ’ಯಲ್ಲಿ ಪ್ರಕಟವಾಯಿತು. ಆ ಚುಟುಕ ಹೀಗಿತ್ತು:
ಸಾವಿಗೆ ಸಾವೇ ಉತ್ತರವಾದರೆ
ಬದುಕಿಗೆ ಏನರ್ಥ?
ಬದುಕುವ ಬಗೆಯನು ಕಲಿಸದ ಶಿಕ್ಷಣ
ಶಿಕ್ಷೆಗಳವು ವ್ಯರ್ಥ.
ಈ ಚುಟುಕದಿಂದ ಪ್ರಭಾವಿತರಾದ ನ್ಯಾಯಾಧೀಶರೊಬ್ಬರು, ತಾನಿನ್ನು ಮರಣದಂಡನೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಈ ಚುಟುಕವನ್ನು ನೆನಪಿಸಿಕೊಂಡು ಶಿಕ್ಷೆಯ ಮರುಪರಿಶೀಲನೆ ಮಾಡುವುದಾಗಿಯೂ ಅಪರಾಧಿಗೆ ತಿದ್ದಿಕೊಳ್ಳುವ ಅವಕಾಶ ನೀಡುವುದು ಸಾಧ್ಯವಾದಲ್ಲಿ ಜೀವಾವಧಿ ಶಿಕ್ಷೆ ನೀಡುವ ಮೂಲಕ ಆತನ ಜೀವ ಉಳಿಸುವುದಾಗಿಯೂ ನನ್ನ ಬಳಿ ನುಡಿದರು.
ಓದುಗರ ಹೃದಯ ತಟ್ಟುವ ಬರಹಗಳು ಸಮಾಜದ ಒಳ್ಳಿತಿಗಾಗಿ ಸದಾ ಅವಶ್ಯ. ಅಂಥ ಬರಹಗಳನ್ನು ನೀಡುವ ಕೆಲಸ ಬರಹಗಾರನದು.
ಸಮಾಜದಲ್ಲಿ ಎಲ್ಲರೂ ಎಲ್ಲ ಕೆಲಸಗಳನ್ನೂ ಮಾಡುತ್ತೇವೆಂದರೆ ಯಾವ ಕೆಲಸವೂ ಸುಸೂತ್ರ ಆಗುವುದಿಲ್ಲ. ಯಾವುದೋ ಒಂದು ಯೋಜನೆ ಅಥವಾ ಚಳವಳಿ ಆಗಬೇಕೆಂದಿಟ್ಟುಕೊಳ್ಳಿ. ಬರಹಗಾರನೊಬ್ಬ, ಆ ಯೋಜನೆ ಅಥವಾ ಚಳವಳಿಯ ಕುರಿತು ತಾನು ಬರಹಗಳನ್ನೂ ಬರೆಯುತ್ತೇನೆ, ಯೋಜನೆಯ/ಚಳವಳಿಯ ರೂಪುರೇಷೆಗಳನ್ನೂ ತಯಾರಿಸುತ್ತೇನೆ, ಸಂಘಟನೆಯನ್ನೂ ಮಾಡುತ್ತೇನೆ, ದೇಣಿಗೆಯನ್ನೂ ನೀಡುತ್ತೇನೆ, ಅನುಷ್ಠಾನದಲ್ಲೂ ಭಾಗವಹಿಸುತ್ತೇನೆ, ಬೀದಿಗಿಳಿದು ಹೋರಾಟವನ್ನೂ ಮಾಡುತ್ತೇನೆ ಎಂದರೆ ಅದಷ್ಟೂ ಆತನಿಂದ ಸಾಧ್ಯವಾದೀತೆ? ಒಂದು ವೇಳೆ ಸಾಧ್ಯವಾದರೂ ಆ ಎಲ್ಲ ಕಾರ್ಯಗಳೂ ಗುಣಯುತವೂ ಸಮರ್ಥವೂ ಆಗಿರುತ್ತವೆಯೇ? ಬರಹಗಾರ ತನ್ನ ಬರಹಗಳಿಂದ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದರೆ ಸಾಕು, ಉಳಿದವರು ತಂತಮ್ಮ ಕೆಲಸ ಮಾಡಲಿ.
ಬರಹಗಾರನೂ ಜೀವನ ನಿರ್ವಹಣೆಗೆ ಒಂದು ವೃತ್ತಿ ಅಥವಾ ನೌಕರಿಯನ್ನು ಮಾಡುತ್ತಿದ್ದು ಇತರರಂತೆ ಆತನೂ ಅದಕ್ಕೆ ದಿನದ ಬಹುಪಾಲು ಸಮಯವನ್ನು ಮೀಸಲಿಡಬೇಕಲ್ಲವೆ? ಹಾಗಾಗಿ, ’ಬರಿದೆ ಬರೆಯುತ್ತೀರಿ, ಫೀಲ್ಡಿಗೆ ಯಾಕೆ ಇಳಿಯುವುದಿಲ್ಲ?’ ಎಂದು ಬರಹಗಾರರನ್ನು ದೂಷಿಸುವುದು ತರವಲ್ಲ. ’ಗೋಕಾಕ ಚಳವಳಿ’ಯಂಥ ಸಂದರ್ಭದಲ್ಲಿ ಬರಹಗಾರರು ಕಣಕ್ಕಿಳಿದ ಉದಾಹರಣೆ ನಮ್ಮೆದುರಿದೆ. ಹಾಗೆಂದು, ಬರೆಯುವವರೆಲ್ಲರೂ, ಬರೆದದ್ದೆಲ್ಲದರ ಬಗ್ಗೆಯೂ ಫೀಲ್ಡಿಗಿಳಿದು ಕಾರ್ಯೋನ್ಮುಖರಾಗಬೇಕು/ಹೋರಾಡಬೇಕು ಎಂದರೆ ಅವರು ತಮ್ಮ ವೃತ್ತಿ/ನೌಕರಿ ಮಾಡಿಕೊಂಡು, ಫೀಲ್ಡಿಗೂ ಇಳಿದು ಹೋರಾಡಿ, ಮತ್ತೆ ಬರೆಯುವುದು ಯಾವಾಗ? ಅಂತಹ ಅವಸರದ ಬರಹಗಳು ಅದಿನ್ನೆಷ್ಟು ಸತ್ತ್ವಯುತವಾಗಿದ್ದಾವು?
ಆದ್ದರಿಂದ, ಬರಹಗಾರರ ಬರಹಕ್ಕೆ ಪ್ರೋತ್ಸಾಹವಿರಲಿ, ಬರಹಗಾರರನ್ನು ಚುಚ್ಚುವುದು ಬೇಡ.
ಬುಧವಾರ, ಅಕ್ಟೋಬರ್ 7, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಆನ೦ದ ಸರ್,
ಪ್ರತ್ಯುತ್ತರಅಳಿಸಿನಿಮ್ಮ ಮಾತಿಗೆ ನನ್ನ ಸಹಮತವು ಇದೆ . .
[ sir u have covered all, but just to justify in a broader sense]
ಪ್ರತ್ಯುತ್ತರಅಳಿಸಿಸರ್ ಸರಿಯಾಗಿ ಹೇಳಿದಿರಿ. ನಾನು ಜನಗಳ ಹತ್ತಿರ ಈ ವಾದವನ್ನು ಮಂಡಿಸಿ ಸೋತಿದ್ದೇನೆ. ನನ್ನ ಸಮಜಾಯಿಷಿ
ಬಡತನವೆಂದರೆ ಬರಿ ಹಣದ ಬಡತನವಲ್ಲ, ಜ್ನಾನ ಬಡತನವೂ ಬಡತನವೆ. ಎರಡನೆಯ ಬಡತನ ಮೊದಲನೆಯದಕ್ಕಿಂತ ಸಮಾಜಕ್ಕೆ ಕೆಟ್ಟದ್ದು. ಮೊದಲನೆಯದು ತಾತ್ಕಾಲಿಕೆವೆನ್ನಬಹುದು. ಎರಡನೆಯದು ಶತಶತಮಾನಗಳವರೆಗು ಇರುವುದು.
ಉದಾಹರ್‍ಅಣೆಗೆ ವರ್ಣಾಶ್ರಮದ ತಪ್ಪು ಕಲ್ಪನೆ.
ತೀಕ್ಷ್ಣ/ದೂರ ದ್ರುಷ್ಠಿ ಎಲ್ಲರಲ್ಲು ಸಮಾನವಾಗಿ ಇರುವುದಿಲ್ಲ. ಲೇಖಕರಲ್ಲಿ, ಸಾಹಿತಿಗಳಲ್ಲಿ ಇದು ವಿಶೇಷವಾಗಿರುತ್ತದೆ. ಆದಕಾರಣ ಎರಡನೆಯ ರೀತಿಯ ಬಡತನವನ್ನು ನೀಗಿಸುವುದು ಸಾಹಿತಿಗಳ ಕೆಲಸ.
ಉದಾಹರಣೆಗೆ
೧) ಬೆಂಗಳೂರಿನ ಐ ಐ ಎಸ್ ಸಿ/ ಟಾಟ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಸ್ಫೂರ್ತಿ ವಿವೇಕಾನಂದರು.
ಪ್ರಯಾಣದ ಸಮಯದಲ್ಲಿ ಅದೆ ನೌಕೆಯಲ್ಲಿದ್ದ ಟಾಟಾರವರಿಗೆ ವಿವೇಕಾನಂದರು ನೀಡಿದ ಸಲಹೆ.
೨) ಕುವೆಂಪುರವರು ನನಗೆ ತಿಳಿದ ಹಾಗೆ ಬೀದಿ ಹೋರಾಟ ಮಾಡಿದ್ದು ಕಡಿಮೆ.
ಆದರೆ ಅವರ ಬರಹಗಳು ನಮ್ಮೆಲ್ಲರ ಮೇಲೆ ಮಾಡಿರುವ ಪರಿಣಾಮ ಅದ್ಭುತ, ವಿವರಿಸಬೇಕಿಲ್ಲ.
ಕೆಲವರು ಬುದ್ಧನನ್ನು ಬಯ್ಯುತ್ತಾರೆ, ತನ್ನ ಸ್ವಾರ್ಥಕ್ಕಾಗಿ ಆತ ಎಲ್ಲವನ್ನು ತೊರೆದ, ಅವನು ತನ್ನ ನಾಡಿನ ಜನರಿಗೆ ದ್ರೋಹ ಬಗೆದ, ಎಷ್ಟು ಹಾಸ್ಯಸ್ಪದವಿದು. ಒಬ್ಬ ಬುದ್ಧ ಸಮ್ರಾಟ್ ಅಶೋಕನಿಗೆ, ವಿವೇಕಾನಂದರಿಗೆ , ಗಾಂಧಿಗೆ ಸ್ಫೂರ್ತಿಯಾದ.
ಇನ್ನು ಬಹಳಷ್ಟು ಉದಾಹರಣೆಗಳನ್ನು ನೀಡಬಹುದು. ಸೇವೆ ಮಾಡುವ ರೀತಿ ಬೇರೆ ಅಷ್ಟೆ.
barahagaararige sphoorthiyagide nimma mathininda
ಪ್ರತ್ಯುತ್ತರಅಳಿಸಿlaxmi machina
reporter udayavani
Dear Sir,
ಪ್ರತ್ಯುತ್ತರಅಳಿಸಿDon't worry about such short lived comments. They are there to occupy the stage and pose as social workers. Let's do our duty and forget the rest. Let us not waste our energy to justify or deny what the others say. Whatever is right to us, let us do it and be satisfied.
Yours,
Bedre Manjunath
ರೂಪಾ ಅವರೇ,
ಪ್ರತ್ಯುತ್ತರಅಳಿಸಿಎಂದಿನಂತೆ ಮೆಚ್ಚಿ ಪ್ರೋತ್ಸಾಹಿಸಿದ್ದೀರಿ. ಧನ್ಯವಾದ.
ಲಕ್ಷ್ಮೀ ಅವರೇ,
ಬ್ಲಾಗ್‌ಗೆ ಸ್ವಾಗತ. ಇತ್ಯಾತ್ಮಕ ಪ್ರತಿಕ್ರಿಯೆಗಾಗಿ ಧನ್ಯವಾದ.
ಶ್ರೀಕಾಂತ್ ಅವರೇ,
ಪೂರಕ ಪ್ರತಿಕ್ರಿಯೆ ನೀಡಿ ನನ್ನ ವಾದವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದೀರಿ. ಧನ್ಯವಾದ.
ಮಂಜುನಾಥ್ ಅವರೇ,
ಅನುಭವಿ ಬರಹಗಾರರಾಗಿರುವ ನಿಮ್ಮ ಮಾತು ಅನುಷ್ಠಾನಯೋಗ್ಯವಾಗಿದೆ. ನಾನಿಲ್ಲಿ (ಮೇಲಿನ ಲೇಖನರೂಪದಲ್ಲಿ) ಕೊಟ್ಟದ್ದು ಒಂದು ಗುಳಿಗೆ ಅಷ್ಟೆ. ಸಾಕೆನ್ನಿಸುತ್ತೆ.