ಗುರುವಾರ, ಅಕ್ಟೋಬರ್ 15, 2009

ಹವಾ-ಮಾನ

ಕಳೆಯದಿರೋಣ ಹವಾಮಾನದ ಮಾನ
ಉಳಿಸಿಕೊಳ್ಳೋಣ ಸುರಕ್ಷಿತ ಈ ತಾಣ
ಏರದಿರಲಿ ಉಷ್ಣತೆಯ ಪ್ರಮಾಣ
ಆರದಿರಲಿ ಜೀವಜಂತು ಪ್ರಾಣ

ಹರಿಯದಿರಲಿ ನೀರ್ಗಲ್ಗಳು ಕರಗಿ
ಮೊರೆಯದಿರಲಿ ಹೊಳೆ ನದಿಗಳು ಉಕ್ಕಿ
ಸಾಯದಿರಲಿ ಬಡಜೀವವು ಕೊರಗಿ
ಹಾಯದಿರಲಿ ಅತಿವೃಷ್ಟಿಯು ಸೊಕ್ಕಿ

ರಸ್ತೆ ತುಂಬ ಕಾರುಗಳದೆ ಕಾರುಬಾರು
ಮಸ್ತು ಅದೋ, ಇಂಗಾಲದ ಉಗುಳುವಿಕೆ
ಪರಿಣಾಮ, ವಾಯುಗುಣವೆ ಏರುಪೇರು
ಹರಿಯೇ, ಈ ದುರವಸ್ಥೆಯು ನಮಗೆ ಬೇಕೆ?

ಕಲ್ಲಿದ್ದಲು ಸುಟ್ಟು ನಮಗೆ ವಿದ್ಯುಚ್ಛಕ್ತಿ
ಅಲ್ಲಿ ಪರಿಸರಕ್ಕೆ ಇಂಗಾಲಾಮ್ಲ ಭುಕ್ತಿ
ಒಳ್ಳೆಯ ಪರ್ಯಾಯವದುವೆ ಸೂರ್ಯಶಕ್ತಿ
ಎಲ್ಲ ಗೊತ್ತಿದ್ದರೂ ನಮಗೆ ಇಲ್ಲ ಆಸಕ್ತಿ

ಹವಾಮಾನ ಬದಲಾವಣೆ ಪರಿಣಾಮವು ಘೋರ
ಹೆಚ್ಚುತಿರುವ ತಾಪಮಾನ ಭೂಮಿಗೇ ಅಪಾಯ
ಮಾನ್ಸೂನ್‌ಗಳು ಅಸ್ತವ್ಯಸ್ತ, ಬರ, ಮಹಾಪೂರ
ಕಡಲಬ್ಬರ, ಸುನಾಮಿಗಳು, ಸಡಿಲ ಇಳೆಯ ಪಾಯ

ಪರಿಸ್ಥಿತಿಯು ಕೈಮೀರುವ ಮುನ್ನವೆ ನಾವೆಲ್ಲ
ಜಾಗೃತರಾಗೋಣ ನಮ್ಮ ಜಗವನುಳಿಸಲು
ಹವಾಮಾನ ವೈಪರೀತ್ಯದುಪಶಮನಕೆ ಎಲ್ಲ
ಯತ್ನಿಸೋಣ ಈಗಿಂದಲೆ ಮಹಾಸಮರದೋಲು

(ಇಂದು ’ಬ್ಲಾಗ್ ಕಾರ್ಯಾಚರಣೆ ದಿನ’. ಈ ಸಲದ ವಿಷಯ ’ಹವಾಮಾನ ಬದಲಾವಣೆ’. ತನ್ನಿಮಿತ್ತ ಈ ಕವನ.)

6 ಕಾಮೆಂಟ್‌ಗಳು:

  1. ಧನ್ಯವಾದ ಮಂಜುನಾಥ ಅವರೇ. ವಿಡಿಯೊ ಕ್ಲಿಪ್‌ಗಳನ್ನು ನೋಡಿದೆ. ವಿಚಾರಪ್ರಚೋದಕವಾಗಿವೆ.
    ಸ್ವಾಗತ ಮತ್ತು ಧನ್ಯವಾದ ಗೌತಮ್ ಹೆಗಡೆ ಅವರೇ.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ